ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
ವಚನಗಳ ಅಂತರಾಳದಲ್ಲಿ ಕಾಣುವುದು ಸಾರ್ವತ್ರಿಕ ಸತ್ಯದ ಮುಖಗಳು. ಓದುಗರ ಪ್ರಜ್ಞೆಯ ಆಳಕ್ಕಿಳಿದು ಕೆಣಕುವ ಶಕ್ತಿ ಶರಣರ ಮಾತುಗಳಿಗಿದೆ. ಅಲ್ಲಿ ಕಾಣುವ ಮನೋವ್ಯಾಪಾರಗಳು ಎಲ್ಲರ ಎದೆಯಾಳದಲ್ಲೂ ನಡೆಯುವ ನಿತ್ಯ ಹೋರಾಟಗಳು. ಅಲ್ಲಿ ಗೋಚರಿಸುವ ವಿಚಾರಗಳು ಎಲ್ಲರ ಚಿತ್ತದಲ್ಲೂ ನಡೆಯಬೇಕಾದ ಹುಡುಕಾಟಗಳು. ಅಲ್ಲಿ ಅಂತರ್ಗತವಾದ ಹೊಳಹುಗಳು ಎಲ್ಲರ ಆಂತರ್ಯವನ್ನೂ ಬೆಳಗಬಲ್ಲ ಅರಿವಿನ ದೀವಿಗೆಗಳು. ವಚನಗಳ ವಿಶಾಲತೆಗೆ ತೆರೆದುಕೊಳ್ಳುತ್ತಾ ಹೋದಷ್ಟು ನಮ್ಮ ಅನುಭಾವದ ಒಡಲು ತುಂಬಿಕೊಳ್ಳುತ್ತಾ ಹೋಗುತ್ತದೆ. ಸಮಾಜದ ಎಲ್ಲ ಕುಲ, ವರ್ಣ, ಜಾತಿ, ವರ್ಗ, ಕಾಯಕಗಳಿಂದ ಬಂದು ಒಂದೆಡೆ ಕಲೆತ ಜನರಿಂದ ಇಂಥ ಅನುಭಾವ ಸಾಹಿತ್ಯ ಹುಟ್ಟಿದ್ದು ಹೇಗೆ? ಸನಾತನ ಪರಂಪರೆಯ ಕಟ್ಟು ಕಟ್ಟಳೆಗಳನ್ನೆಲ್ಲಾ ಮುರಿಯುವ ಮಹಾ ಬಲ ಶರಣರ ಮನಸ್ಸನ್ನು ಹೊಕ್ಕಿದ್ದಾದರೂ ಹೇಗೆ?
ಅದು ಅರಿವಿನ ಬಲ. ಅರಿವಿಗೆ ಕಾರಣವಾದ ಅಕ್ಷರ ಜ್ಞಾನದ ಬಲ. ಜ್ಞಾನಕ್ಕೆ ಅವಕಾಶ ಕೊಟ್ಟ ವಿಚಾರ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳ ಫಲ. ಕೇವಲ ಶುದ್ಧ ಜ್ಞಾನದಿಂದ ಮಾತ್ರ ಮನುಷ್ಯ ಮಾನಸಿಕವಾಗಿ ಸ್ವತಂತ್ರನಾಗಬಲ್ಲ. ಮುಕ್ತವಾಗಿ ಯೋಚಿಸಬಲ್ಲ. ಯಾವ ಹಿಂಜರಿಕೆಯಿಲ್ಲದೆ ತನ್ನ ಅನಿಸಿಕೆಗಳನ್ನು ಅಭಿವ್ಯಕ್ತಗೊಳಿಸಬಲ್ಲ.
ಮಾತುಗಳಿಗೆ, ವಿಚಾರಗಳಿಗೆ ಕಡಿವಾಣ ಹಾಕುವುದೆಂದರೆ ಜೀವನದ ಸ್ವಾಭಾವಿಕ ಚಲನೆಯನ್ನು, ಬದುಕಿನ ಉಲ್ಲಾಸವನ್ನು ಕೊಂದ ಹಾಗೆ. ಮಾನವ ಹಕ್ಕುಗಳ ಹಿನ್ನೆಲೆಯಲ್ಲಿ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಬಹುತೇಕ ರಾಷ್ಟ್ರಗಳು ತಮ್ಮ ಸಂವಿಧಾನದಲ್ಲಿ ನಮೂದಿಸಿದ್ದರೂ ಜಗತ್ತಿನಾದ್ಯಂತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಇಂದಿಗೂ ಹೋರಾಟಗಳು ನಡೆಯುತ್ತಿವೆ. ಪ್ರತಿಯೊಂದು ಬರಹಕ್ಕೂ, ಅಭಿವ್ಯಕ್ತಿಗೂ ರಾಜಸತ್ತೆಯ ಪರವಾನಗಿ ತೆಗೆದುಕೊಳ್ಳಬೇಕೆಂಬ ಸರ್ಕಾರದ ಕ್ರಮವನ್ನು ವಿರೋಧಿಸಿ ಖ್ಯಾತ ಕವಿ ಜಾನ್ ಮಿಲ್ಟನ್ ಇಂಗ್ಲೆಂಡಿನ ಸಂಸತ್ತಿಗೆ 17ನೇ ಶತಮಾನದಲ್ಲಿ ಏರಿಯೊಪೆಗೆಟಿಕಾ ಎಂಬ ಪ್ರಬಂಧವನ್ನು ಬರೆಯುತ್ತಾನೆ. ಆದರೆ ಭಾರತದಲ್ಲಿ 12ನೇ ಶತಮಾನದಲ್ಲೇ ಯಾವ ಹಕ್ಕೊತ್ತಾಯವಿಲ್ಲದೇ ರಾಜಸತ್ತೆಯ ಚೌಕಟ್ಟಿನಲ್ಲಿಯೇ ��ಂಥ ಹಕ್ಕುಗಳು ಜನಸಾಮಾನ್ಯರಿಗೆ ಸಿಕ್ಕಿದ್ದವು ಎನ್ನಲು ಎಲ್ಲಾ ಸಮುದಾಯದ ವಚನಕಾರರು ಬರೆದ ವಚನಗಳ ಪ್ರಮಾಣವೇ ಸಾಕ್ಷಿ.
ಡಾ.ಬಿ.ಆರ್. ಅಂಬೇಡ್ಕರ್ ಒಂದೆಡೆ ಹೇಳುತ್ತಾರೆ: “ಹಿಂದೂ ಧರ್ಮದಲ್ಲಿ ಯಾರಿಗೂ ವಾಕ್ ಸ್ವಾತಂತ್ರ್ಯ ಎಂಬುದೇ ಇಲ್ಲ. ಹಿಂದೂ ಆದವನು ತನ್ನ ಮಾತಿನ ಹಕ್ಕನ್ನು ವೇದಗಳ ಬುಡಕ್ಕೆ ಒಪ್ಪಿಸಿ ಬಿಡಬೇಕು. ಅದು ಹೇಳಿದಂತೆಯೇ ನಡೆದುಕೊಳ್ಳಬೇಕು. ವೇದಗಳಲ್ಲಿ ಇಲ್ಲದಿದ್ದರೆ ಸ್ಮೃತಿಗಳು, ಸ್ಮೃತಿಗಳಲ್ಲಿಲ್ಲವಾದರೆ ಆಚಾರ್ಯರು ನಡೆದ ಹೆಜ್ಜೆಗಳಲ್ಲಿಯೇ ನಡೆಯಬೇಕು. ಯಾವುದಕ್ಕೂ ಕಾರಣ ಮಾತ್ರ ಕೇಳುವಂತಿಲ್ಲ. ವೈಚಾರಿಕ ಸ್ವಾತಂತ್ರ್ಯವನ್ನು ನಿರೀಕ್ಷಿಸುವಂತೆಯೇ ಇಲ್ಲ.” ಇಪ್ಪತ್ತನೆಯ ಶತಮಾನದಲ್ಲಿನ ನಮ್ಮ ದೇಶದ ಪರಿಸ್ಥಿತಿಯ ಗ್ರಹಿಕೆ ಹೀಗಿದ್ದರೆ ಒಂಬೈನೂರು ವರ್ಷಗಳ ಹಿಂದಿನ ವಾತಾವರಣ ಹೇಗಿರಬೇಡ? ಅಂದು ಚಾತುರ್ವರ್ಣ ವ್ಯವಸ್ಥೆ ಸಮಾಜವನ್ನು ವಿಚ್ಛಿದ್ರಗೊಳಿಸಿತ್ತು. ಶೂದ್ರರು, ಅಸ್ಪೃಶ್ಯರು, ದೀನ-ದಲಿತರು, ಮಹಿಳೆಯರು ತಮ್ಮ ದನಿಯನ್ನೇ ಕಳೆದುಕೊಂಡಿದ್ದರು. ಬಾಯಿ ಬಿಡುವುದೆಂದರೆ ಅಪಾಯವನ್ನು ಆಹ್ವಾನಿಸಿದಂತೆ, ತಲೆ ಎತ್ತುವುದೆಂದರೆ ಕಠಿಣ ಶಿಕ್ಷೆಗಳನ್ನು ಮೈಮೇಲೆ ಎಳೆದುಕೊಂಡಂತೆ. ಅವರ ಮಾತುಗಳು ಗಂಟಲಲ್ಲೇ ಹೂತು, ಅಭಿಪ್ರಾಯಗಳು ಎದೆಯಲ್ಲಿ ಸಮಾಧಿಯಾಗಿದ್ದವು. ಪ್ರತಿಭಟಿಸುವ ಶಕ್ತಿಯೇ ಪಲಾಯನಗೈದಿತ್ತು. ಬಾಗಿ ನಡೆಯುತ್ತಿದ್ದ ಬೆನ್ನಿಗೆ ಸೆಟೆದು ನಿಲ್ಲುವ ಸಾಮರ್ಥ್ಯವೇ ಕಳೆದುಹೋಗಿತ್ತು. ದೇವರು, ಧರ್ಮದ ಹೆಸರಿನಲ್ಲಿ ಛಿದ್ರವಾಗಿದ್ದ ಅಂದಿನ ಸಮಾಜದಲ್ಲಿ ಕೋಳ ತೊಡದೇ ಮನುಷ್ಯ ಅಕ್ಷರಶಃ ಬಂಧಿಯಾಗಿದ್ದ.
ಮನುಷ್ಯನ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧರ್ಮದ ಆಚರಣೆಗಳು ಹೀಗೆ ಕಡಿವಾಣಗಳಾದದ್ದನ್ನು ಬಸವಣ್ಣನವರ ಸೂಕ್ಷ್ಮ ಮನಸ್ಸು ಎಲ್ಲೆಡೆ ಕಾಣುತ್ತಿತ್ತು. ಏನನ್ನು ಯೋಚಿಸಬೇಕು, ಏನನ್ನು ಯೋಚಿಸಬಾರದು ಎಂದು ನಿರ್ದೇಶಿಸುತ್ತಾ ಕಟ್ಟುಪಾಡು ಹಾಕುವ ಧರ್ಮಶಾಸ್ತ್ರಗಳ ಅಡಿಯಲ್ಲಿ ಸಿಕ್ಕಿಕೊಂಡ ಮನುಷ್ಯ, ಹೇಗೆ ಯೋಚಿಸಬೇಕೆಂಬ ಶಕ್ತಿಯನ್ನೇ ಕಳೆದುಕೊಂಡಿದ್ದ. ಧರ್ಮ, ಅದರ ಒಳಾರ್ಥಗಳು, ಸಿದ್ಧಾಂತಗಳು, ಮಂತ್ರವಿಧಿಗಳು ಕಠಿಣವೂ, ಅವೈಜ್ಞಾನಿಕವೂ ಆಗಿದ್ದವು. ಭಯದಲ್ಲಿ, ಅಂಧಾನುಕರಣೆಯಲ್ಲಿ ಮುಳುಗಿದ್ದ ಮನುಷ್ಯ ಸಹಜವಾಗಿ ಚಿಂತನೆ ನಡೆಸುವುದನ್ನೇ ಮರೆತು ಬಿಟ್ಟಿದ್ದ. ದಲಿತರು ಜಾತಿಪದ್ಧತಿಯ ದೌರ್ಜನ್ಯಕ್ಕೆ, ಮಹಿಳೆಯರು ಅವಮಾನಕ್ಕೆ ಮತ್ತು ಬಡವರು ತಮ್ಮ ದಾರಿದ್ರ್ಯಕ್ಕೆ ಒಗ್ಗಿ ಹೋಗಿದ್ದರು. ಅನಕ್ಷರತೆ ಹೆಚ್ಚಿದಂತೆಲ್ಲ ಮೌಢ್ಯವೂ ಹೆಚ್ಚಿ ಶೋಷಣೆಗೆ ಜನ ಸುಲಭವಾಗಿ ತುತ್ತಾಗುತ್ತಿದ್ದರು. ಆಗಿನ ವಿದ್ಯಾಕೇಂದ್ರಗಳಾಗಿದ್ದ ಅಗ್ರಹಾರ, ಬ್ರಹ್ಮಪುರಿಗಳಲ್ಲಿ ಶಿಕ್ಷಣದ ಸೌಲಭ್ಯ ಸಿಗುತ್ತಿದ್ದುದು ಕೆಲವೇ ವರ್ಗದವರಿಗೆ ಮಾತ್ರ. ಆದ್ದರಿಂದ ಬಸವಣ್ಣನವರು ಮೊದಲು ಜನಸಾಮಾನ್ಯರಿಗೆ ವಿದ್ಯೆಯ ಅವಕಾಶ ಕಲ್ಪಿಸಿದರು. ಎಲ್ಲಾ ವರ್ಗದ, ಜಾತಿಯ ಜನರಿಗೆ ಹಾಗೂ ಮಹಿಳೆಯರಿಗೆ ಇಲ್ಲಿ ಮುಕ್ತ ಪ್ರವೇಶವಿತ್ತು. ಬಹುಶಃ ಜಾಗತಿಕ ಇತಿಹಾಸದಲ್ಲೇ ಸಾಮೂಹಿಕ ಶಿಕ್ಷಣಕ್ಕೆ ಚಾಲನೆ ನೀಡಿದ್ದು 12 ನೇ ಶತಮಾನ. ಈ ಮುನ್ನ ವರ್ಣಾಶ್ರಮದ ವಿರುದ್ಧ ಜೈನರು, ಬೌದ್ಧರು ಸಿಡಿದೆದ್ದರೂ ಜನರಿಗೆ ಸಾರ್ವರ್ತಿಕ ಶಿಕ್ಷಣ ನೀಡಿ ಅವರನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಯಾವ ಕ್ರಮಗಳನ್ನೂ ಕೈಗೊಳ್ಳಲಿಲ್ಲ.
ಅಕ್ಷರಜ್ಞಾನ ಅರಿವಿನ ಜ್ಞಾನಕ್ಕೆ ಸೋಪಾನ. ಭಯದಲ್ಲಾಗಲಿ, ಸಿದ್ಧ ಯೋಚನೆಗಳಿಗೆ ಬದ್ಧವಾಗುವ ಮನಸ್ಥಿತಿಯಲ್ಲಾಗಲಿ, ಅಂಧಾನುಕರಣೆಯಲ್ಲಾಗಲಿ ಜ್ಞಾನ ಹುಟ್ಟಲಾರದು. ಹೀಗಾಗಿ ಮುಕ್ತ ವಾತಾವರಣದಲ್ಲಿ ಜ್ಞಾನ ಸಂಪಾದನೆಗೆ ಅವಕಾಶ ಕಲ್ಪಿಸಿಕೊಟ್ಟರು ಬಸವಣ್ಣನವರು. “ನಡೆಯ ಕಲಿಸಿದ ಬಸವ, ನುಡಿಯ ಕಲಿಸಿದ ಬಸವ, ಉಡಲು ಕಲಿಸಿದ ಬಸವ, ಉಣಲು ಕಲಿಸಿದ ಬಸವ…” ಎಂದು ಜನಪದ ಕವಿ ಬಸವಣ್ಣನವರನ್ನು ನೆನೆದುಕೊಳ್ಳುವುದನ್ನು ನೋಡಿದರೆ ಸರ್ವಾಂಗೀಣ ಸಂಸ್ಕಾರದ ವಿದ್ಯೆಯನ್ನು, ಕಾಯಕ ಕೇಂದ್ರಿತ ಶಿಕ್ಷಣವನ್ನು ಪಡೆಯುವ ಅವಕಾಶ ಅಲ್ಲಿತ್ತು. ಲಿಂಗಾಯತ ಪರಂಪರೆಯಲ್ಲಿ ಇಂದಿಗೂ ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಕಾಣುವ ಸಾಲೀಮಠ, ಓದಿಸುವ ಮಠ ಮತ್ತು ಗುರುಮಠಗಳು ಅಂದು ಬಸವಣ್ಣನವರು ಹುಟ್ಟು ಹಾಕಿದ ಸಾರ್ವರ್ತಿಕ ವಿದ್ಯಾಕೇಂದ್ರಗಳ ಪಳೆಯುಳಿಕೆಗಳು.
ದೂರದ ರಾಜ್ಯಗಳಿಂದ ಬಂದ ಕಾಶ್ಮೀರದ ಮೋಳಿಗೆ ಮಾರಯ್ಯ, ಪತ್ನಿ ಮಹಾದೇವಮ್ಮ, ಸೋದರಿ ಬೊಂತಾದೇವಿಯರಂಥ ಅರಸು ಪರಿವಾರದವರಿಗೂ, ಸೌರಾಷ್ಟ್ರದಿಂದ ಬಂದ ಆದಯ್ಯನಂತಹ ಆಸಕ್ತರಿಗೂ ಕನ್ನಡ ಕಲಿಯಲು ಸಾಧ್ಯವಾಗಿದ್ದು ಇಂಥ ಓದಿನ ಮನೆಗಳಿಂದಲೇ. ಹೀಗೆ ಶೋಷಿತರ ದನಿಗೆ ಉಸಿರಾಗಿ ಬಂದ ಬಸವಣ್ಣನವರು ರಾಜಸತ್ತೆಯ ಸಾಮ್ರಾಜ್ಯದಲ್ಲಿ ಪ್ರಜಾಸತ್ತೆಯ ಆಶಯಗಳನ್ನು ಜಾರಿಗೆ ತಂದಿದ್ದರು. “ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ” ಎಂಬುದು ಆ ಸಾಧನೆಯ ಫಲ. ಜನಪದ ಕವಿ ಇದನ್ನು ತುಂಬು ಹೃದಯದಿಂದ ನೆನೆದಿದ್ದಾನೆ: “ಸಾಧು ಸಾಧೆಲೆ ಬಸವ, ಓದು ಕಲಿಯಿತು ಜಗವು, ಹೋದಹೋದಲ್ಲಿ ಹೊಸ ಮಾತು ಕೇಳಿದವು, ಮೇದಿನಿಗೆ ಬಂತು ಹೊಸಬೆಳಕು.” ಅನೇಕ ಆಧುನಿಕ ಸಂಶೋಧಕರು ಬಸವಣ್ಣನವರನ್ನು ಶ್ರೇಷ್ಟ ಶಿಕ್ಷಣ ತಜ್ಞ ಎಂದು ಗುರುತಿಸಿದ್ದಾರೆ.
ವಿದ್ಯೆಯ ಕಣ್ಣು ಪಡೆದವರಿಗೆ ವೈಚಾರಿಕ ಸ್ವಾತಂತ್ರ್ಯ ಸಿಕ್ಕರೆ ಏನಾಗಬೇಡ? ಸ್ವಾತಂತ್ರ್ಯ ಎನ್ನುವುದು ಪ್ರಜ್ಞಾಪೂರ್ವಕ ಮಟ್ಟದಲ್ಲಿ ಮಾತ್ರವಲ್ಲದೆ ವ್ಯಕ್ತಿಯ ಆಳಕ್ಕೆ ಇಳಿಯಬೇಕಾಗುತ್ತದೆ. ಸ್ಥಾಪಿತ ಮಾದರಿಗಳು ಯಾರನ್ನೂ ಮುಕ್ತವಾಗಿ ಯೋಚಿಸಲು ಬಿಡಲಾರವು. ಬುದ್ಧ ಕೂಡ ಪ್ರಶ್ನಿಸುವುದನ್ನು ನಿಲ್ಲಿಸಬೇಡ ಎನ್ನುತ್ತಾನೆ. ಆಗಲೇ ಧರ್ಮ ನಿರಂತರ ಹರಿಯುವ ವಿಚಾರಧಾರೆಯಾಗುತ್ತದೆ. ವಿಚಾರ ಸ್ವಾತಂತ್ರ್ಯದ ವಾತಾವರಣ ಕಲ್ಯಾಣದಲ್ಲಿ ನಿರ್ಮಾಣವಾದದ್ದರಿಂದಲೇ ತಲೆತಲಾಂತರದಿಂದ ರಕ್ತದಲ್ಲಿ ಬೆರೆತು ಹೋಗಿದ್ದ ದೈನ್ಯತೆಯನ್ನು, ಕೀಳರಿಮೆಯನ್ನು ದಾಟಲು ಶರಣರಿಗೆ ಸಾಧ್ಯವಾಯಿತು. ಶಿಷ್ಟ ಪ್ರಜ್ಞೆಯ ಸಂಸ್ಕೃತಿ ಲೋಕಕ್ಕೂ ಶೂದ್ರ ವರ್ಗದ ಲೋಕಾನುಭವಗಳ ಅವಿದ್ಯಾವಂತ ಲೋಕಕ್ಕೂ ನಡುವೆ ಒಂದು ಅರ್ಥಪೂರ್ಣ ಸಂಬಂಧ ಕುದುರಿಕೊಂಡಿತು.
ಮುಕ್ತ ಚಿಂತನೆಗೆ ಅವಕಾಶ ಸಿಕ್ಕಾಗ ಮಾತ್ರ ಶ್ರೇಷ್ಠ ವಿಚಾರಗಳು ಜನ್ಮ ಪಡೆಯುತ್ತವೆ. ಈ ಜಾಗೃತಿಯ ಅಲೆಯಲ್ಲಿ ಅನೇಕರು ಮೈಕೊಡವಿ ನಿಂತರು. ಶಾಸ್ತ್ರ ಪ್ರಮಾಣಗಳನ್ನು ನಿರ್ಲಕ್ಷಿಸಿ, ನಿರಾಕರಿಸಿ ಸ್ವತಂತ್ರವಾಗಿ ಚಿಂತನೆ ನಡೆಸಿದರು. ಆಗಲೇ ಅನುಭಾವಜನ್ಯವಾದ ಒಳನೋಟಗಳು ಅವರಿಗೆ ದಕ್ಕಿದವು. ಇಂಥ ಬೃಹತ್ ಸಾರ್ವರ್ತಿಕ ಬದಲಾವಣೆ ಇತಿಹಾಸದ ಒಂದು ಅಪೂರ್ವ ಕ್ರಾಂತಿಕಾರಿ ಸನ್ನಿವೇಶ. ಅಕ್ಷರಜ್ಞಾನದೊಂದಿಗೆ ಅರಿವಿನ ರಹದಾರಿಯೂ ಸಿಕ್ಕಿತು. ಹೊಸ ವಿಚಾರಗಳು ಶರಣರ ಬದುಕನ್ನು ಪ್ರವೇಶಿಸುತ್ತಿದ್ದಂತೆ ಅವರ ಯೋಚನಾ ರೀತಿ, ಜೀವನ ನಡೆಸುವ ವಿಧಾನ, ಮಾತನಾಡುವ ಶೈಲಿ ಎಲ್ಲವೂ ಬದಲಾದವು. ಕ್ರಮೇಣ ಸಮಾಜದಲ್ಲಿ ನಿರ್ಭೀಡೆಯಿಂದ ಬದುಕುವ ಗಟ್ಟಿ ಜೀವಗಳಾದರು.
ಪ್ರತಿಯೊಬ್ಬರ ಅಭಿಪ್ರಾಯಕ್ಕೆ, ಮಾತಿಗೆ ಜಾಗ ಸಿಕ್ಕಾಗಲೇ ಸಮಾಜ ಚಲನಶೀಲವಾಗಿರುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಸ್ವಂತಿಕೆಯ ಹುಡುಕಾಟದ ಒಂದು ಪ್ರಧಾನ ಮಾರ್ಗ. ಅದು ತನ್ನತನದ ಹುಡುಕಾಟ. ಮುಕ್ತ ಚಿಂತನೆಗಳನ್ನು ಹೊಂದಿರುವ ಸಮಾಜದಲ್ಲಿ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ, ಗೌರವ. ಶರಣರ ಮಧ್ಯೆ ಅಂಥದೊಂದು ಮುಕ್ತ ವಾತಾವರಣವಿತ್ತು. ಯಾವ ಧರ್ಮಶಾಸ್ತ್ರಗಳನ್ನು ಓದುವುದಿರಲಿ, ವೇದ ಮಂತ್ರಗಳು ಕಿವಿಗೆ ಬಿದ್ದರೂ ಕಾದ ಸೀಸೆಯನ್ನು ಕಿವಿಯಲ್ಲಿ ಸುರಿಸಿಕೊಳ್ಳುವಂಥ ಭಯಾನಕ ಕ್ರೂರ ಶಿಕ್ಷೆಗೆ ಗುರಿಯಾಗುತ್ತಿದ್ದ ಜನ ಈಗ ಹೊಸ ಮಾನವ ಧರ್ಮದ ಹುಟ್ಟಿಗೆ ಕಾರಣರಾಗಿದ್ದರು. ಅವರು ಬರೆದದ್ದೆಲ್ಲ ಅವರ ಮಾತುಗಳೇ ಮಂತ್ರಗಳಾದವು!
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗವು ಮೆಚ್ಚಿ ಅಹುದಹುದೆನಬೇಕು.
ಮಾತು, ಅಭಿವ್ಯಕ್ತಿಗೆ ಬಸವಣ್ಣನವರು ಭಾಷ್ಯ ಬರೆಯುವುದು ಹೀಗೆ. ಅಭಿವ್ಯಕ್ತಿಯ ರೂಪುರೇಷೆಗಳನ್ನಿಲ್ಲಿ ಕಟೆದು ತೋರಿಸಿದಂತೆ ಭಾಸವಾಗುತ್ತದೆ. ಮಾಣಿಕ್ಯದ ದೀಪ್ತಿಯಂತೆ ವಿಚಾರಗಳ ಕಾಂತಿಯನ್ನು ಸೂಸಬಲ್ಲ ಮಾತುಗಳಿಗೆ ಸ್ಫಟಿಕದ ಸಲಾಖೆಯ ಖಾಚಿತ್ಯವಿರಬೇಕು. ಜಗದ ನ್ಯಾಯಾಧೀಶನಾದ ದೇವರ ತಲೆ ಕೂಡ ಅಂಥ ಮಾತಿಗೆ ತೂಗಬೇಕು. ಅಂದರೆ ಲಿಂಗ ಸ್ವರೂಪಿಯಾದ ಇಡೀ ಲೋಕದ ಮನಸ್ಸನ್ನು ಆ ಮಾತು ತಲುಪಿ, ಕೇಳುಗರ ಅಂತರಾತ್ಮವನ್ನು ಎಚ್ಚರಿಸುವ��ತಿರಬೇಕು. ಇದು ಅಭಿವ್ಯಕ್ತಿಯ ಆಳ, ಶಕ್ತಿ, ವಿಸ್ತಾರ. ಮೂಕರಾಗಿದ್ದ ಜನ ಹೊಸ ಎಚ್ಚರದಲ್ಲಿ ಮಾತಿಗಿಳಿದರು. ಅವರಲ್ಲಿದ್ದ ಸುಪ್ತ ಶಕ್ತಿ ಹೊಸ ವಿಚಾರಧಾರೆಯಲ್ಲಿ ಅರಳಿಕೊಂಡಿತು.
ತಾವು ಅನುಭವಿಸಿದ ನೋವು, ಅವಮಾನಗಳನ್ನು, ಪಟ್ಟ ಪಾಡುಗಳನ್ನು ಶರಣರು ತಮ್ಮ ವಚನಗಳಲ್ಲಿ ದಾಖಲಿಸಿದ್ದು ತೀರಾ ಕಡಿಮೆ. ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆ, ಸಾಧನೆಯ ಬಗ್ಗೆ ಹೇಳಿಕೊಂಡದ್ದು ಮತ್ತೂ ಕಡಿಮೆ. ಆಫ್ರಿಕಾದ ಮೊದಲ ನೊಬೆಲ್ ಪ್ರಶಸ್ತಿ ವಿಜೇತ ಲೇಖಕ ವೋಲೆ ಷೊಯೆಂಕಾ ಹೇಳುತ್ತಾರೆ: A tiger need not shout of its tigritude (ಅಂದರೆ ಹುಲಿ ತನ್ನ ಹುಲಿತನದ ಬಗ್ಗೆ ಚೀರಿಕೊಳ್ಳಬೇಕಿಲ್ಲ) ಶರಣರದು ಅಂಥ ನಿಲುವಾಗಿತ್ತು. ಅವರ ವಚನಗಳಲ್ಲಿ ವ್ಯಕ್ತವಾಗುವುದು ಸಮಾಜದ ಬಗೆಗಿನ ಕಾಳಜಿ ಮತ್ತು ಸಮಾನ ಸಂಸ್ಕೃತಿಯ ಮೇಲಿನ ನಂಬಿಕೆ.
ಮುಕ್ತ ಚಿಂತನೆಯ, ಮುಕ್ತ ಅಭಿವ್ಯಕ್ತಿಯ ಅವಕಾಶ ಸಿಕ್ಕಾಗ ಅವರಲ್ಲಿದ್ದ ಸಿಟ್ಟು, ಅಸಹಾಯಕತೆಗಳು ಸೇಡಿನ ಹಾದಿ ತುಳಿಯಲಿಲ್ಲ. ತಮ್ಮ ಆವಸ್ಥೆಗೆ ಕಾರಣರಾದವರ ವಿರುದ್ಧ ಬಂಡೆದ್ದು ಬೊಬ್ಬೆ ಹೊಡೆಯಲಿಲ್ಲ. ಹಳೆಯದನ್ನೆಲ್ಲ ಬೈಯುತ್ತಾ ಕೂರಲಿಲ್ಲ. ಕೊನೆಯ ಪಕ್ಷ ತಮ್ಮ ಬರವಣಿಗೆಯಲ್ಲಿಯೂ ಹೀನಾಮಾನವಾಗಿ ನಿಂದಿಸಿ ದ್ವೇಷ ಸಾಧಿಸಲಿಲ್ಲ. ಬಹುಶಃ ಹಾಗೆ ಮಾಡುವುದರಿಂದ ಯಾವ ಬದಲಾವಣೆಯೂ ಸಾಧ್ಯವಾಗುತ್ತಿರಲಿಲ್ಲ. ಅಪಾರ ಸಂಯಮದಲ್ಲಿ ಶರಣರ ವ್ಯಕ್ತಿತ್ವ ಅರಳಿಕೊಂಡಿತು. ಆದರೆ ತಮಗೆ ಸರಿ ಎನಿಸದ ವರ್ತನೆಗಳನ್ನು, ಆಚರಣೆಗಳನ್ನು ನಿರ್ಭೀಡೆಯಿಂದ, ಸ್ಪಷ್ಟ ಮಾತುಗಳಲ್ಲಿ ಅಲ್ಲಗಳೆದರು. ಸಮಾಜದಲ್ಲಿದ್ದ ಎಲ್ಲ ಬಗೆಯ ಅಸಮತೆಯನ್ನು, ತಮ್ಮ ಹೀನಸ್ಥಿತಿಗೆ ಕಾರಣವಾದ ವ್ಯವಸ್ಥೆಯನ್ನು, ವಿಚಾರ ರಹಿತ ಸಂಪ್ರದಾಯವನ್ನು ದಿಟ್ಟರಾಗಿ ಪ್ರಶ್ನಿಸಿದರು, ಮನಸ್ಸು ಒಪ್ಪದ್ದನ್ನು ನಿರಾಕರಿಸಿದರು. ತಮ್ಮ ಜೊತೆಗಾರರಲ್ಲಿ (ಲಿಂಗವಂತರಲ್ಲಿ) ಆಷಾಢಭೂತಿತನ ಕಂಡಾಗ ಸಿಡಿದು ಸರಿಪಡಿಸುತ್ತಾರೆ. ಅಡಿಗಡಿಗೂ ಅವರ ನಡೆ- ನುಡಿಗಳನ್ನು ಒರೆಗೆ ಹಚ್ಚುತ್ತಾರೆ. ಆ ಮೂಲಕ ತಮ್ಮ ಮಾರ್ಗವನ್ನು ಮತ್ತೂ ಸ್ಪಷ್ಟವಾಗಿಸುತ್ತಾ ನಡೆಯುತ್ತಾರೆ. “ಲಿಂಗದ ನಡೆಯಂತೆ ನಡೆವನಲ್ಲದೆ ಲೋಕದ ನಡೆಯಂತೆ ನಡೆವವನಲ್ಲ ನೋಡಾ ಶರಣ” ಎನ್ನುತ್ತಾರೆ ಷಣ್ಮುಖಸ್ವಾಮಿಗಳು.
ಶರಣರು ತಮ್ಮ ಚಿಂತನೆಗಳನ್ನು ಕಾಲಕಾಲಕ್ಕೆ ವಿಮರ್ಶೆಗೆ ಒಡ್ಡಿಕೊಳ್ಳುತ್ತಾ, ಪರಿಷ್ಕರಿಸುತ್ತಾ ನಡೆದರು. ಅನುಭವ ಮಂಟಪದಲ್ಲಿನ ಚರ್ಚೆಗಳು ಮತ್ತು ವಚನ ಸಾಹಿತ್ಯ ರಚನೆ ಅಭಿವ್ಯಕ್ತಿ ಸ್ವಾತಂತ್ರ್ಯದ ರಹದಾರಿಗಳಾಗಿದ್ದವು. ಆದರೆ ದ್ವೇಷ ಮತ್ತು ಆತ್ಮಸ್ತುತಿಗಳ ನಡುವೆ ಇಂದು ಹೊಯ್ದಾಡುತ್ತಿರುವ ನಮ್ಮ ಮನಸ್ಸು ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ. ನಮ್ಮ ಸೈದ್ಧಾಂತಿಕ ಚರ್ಚೆಗಳಾವುವೂ ಈಗ ಆರೋಗ್ಯಕರವಾಗಿ ಉಳಿದಿಲ್ಲ. ಸಂವಾದಗಳು ಸಮರದ ಕಹಳೆ ಊದುವಷ್ಟೇ ದ್ವೇಷದಿಂದ ಕುದಿಯುತ್ತವೆ. ನನಗೆ ತೀರಾ ಆಶ್ಚರ್ಯವೆನಿಸುವ ಸಂಗತಿ ಎಂದರೆ ನಮ್ಮನಮ್ಮಲ್ಲಿಯೇ ಒಬ್ಬರು ಇನ್ನೊಬ್ಬರ ನಂಬಿಕೆಗಳಿಗೆ ಸ್ವಲ್ಪ ವ್ಯತ್ಯಾಸವಾಗುವ ಹಾಗೆ ಮಾತನಾಡಿದರೂ ಮನಸ್ತಾಪಗಳು ಕಾಣಿಸಿಕೊಳ್ಳುತ್ತವೆ, ವೈರತ್ವ ಸಣ್ಣದಾಗಿ ಹೊತ್ತಿಕೊಳ್ಳುತ್ತದೆ. ದ್ವೇಷ ತುಂಬಿಕೊಳ್ಳುತ್ತದೆ. ಸಹನೆ, ಸಹಿಷ್ಣುತೆ ನಮ್ಮಲ್ಲಿ ಸತ್ತೇ ಹೋಗಿವೆ. ಅಂಥದರಲ್ಲಿ ಅಂದು ಜನಸಾಮಾನ್ಯರಾದ ಶರಣರು ಅದ್ಹೇಗೆ ತಮ್ಮ ಮನದ ಮಾತುಗಳನ್ನು ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ, ಯಾವ ಮುಲಾಜಿಗೂ ಬೀಳದೆ ದಿಟ್ಟರಾಗಿ ವ್ಯಕ್ತಪಡಿಸಿದರು? ಪ್ರೀತಿ-ವಿಶ್ವಾಸ-ಗೌರವಗಳ ನಡುವೆಯೂ ಪರಸ್ಪರರನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿದರು? ಅಷ್ಟೇ ಆಪ್ತವಾಗಿ ಭಕ್ತಿ ಸಂಬಂಧವನ್ನು ಕಾಪಾಡಿಕೊಂಡರು? ಶರಣರು ಹೇಗೆ ನಿರ್ಭೀಡೆಯಿಂದ ಬದುಕಿದರು ಎಂಬುದನ್ನು ಷಣ್ಮುಖಸ್ವಾಮಿಗಳ ಈ ವಚನದಲ್ಲಿ ಕಾಣಬಹುದು:
ಒಬ್ಬರು ನಡೆದಾಚರಣೆಯಲ್ಲಿ ನಡೆಯರು
ಒಬ್ಬರು ಹಿಡಿದ ಶೀಲವ ಹಿಡಿಯರು
ಒಬ್ಬರು ನುಡಿದ ಭಾಷೆಯ ನುಡಿಯರು
ಅದೇನು ಕಾರಣವೆಂದಡೆ, ತಮ್ಮ ಲಿಂಗ ಮಚ್ಚು ನುಡಿವರು.
ಇದು ಕಾರಣ ಅಖಂಡೇಶ್ವರಾ, ನಿಮ್ಮ ಶರಣರು ಪರಮಸ್ವತಂತ್ರಶೀಲರು.
ಸ್ವಂತಿಕೆಯಿಂದ ಬದುಕುವುದು ಹೇಗೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೆ ಇರಲಿಕ್ಕಿಲ್ಲ. ಅನುಭವ ಮಂಟಪದ ಮುಕ್ತ ಚರ್ಚೆಯ ವಾತಾವರಣ ಇತಿಹಾಸದಲ್ಲಿಯೇ ಒಂದು ಅಪೂರ್ವ ಮೈಲಿಗಲ್ಲು. ಸಂವಾದದಿಂದ ಮನಸ್ಸು ಪೂರ್ವಾಗ್ರಹಗಳಿಂದ ಮುಕ್ತವಾಗುತ್ತದೆ. ಭಿನ್ನಾಭಿಪ್ರಾಯಗಳು ವಿರೋಧಗಳನ್ನು ಸೃಷ್ಟಿಸಿ ಒಡಕುಗಳನ್ನು ಮೂಡಿಸುತ್ತವೆ ಎಂದೇನೂ ಇಲ್ಲ.
ಶರಣರು ತಮ್ಮ ವಿಚಾರದಲ್ಲಿಯೂ, ಜೀವನದಲ್ಲಿಯೂ, ಅಭಿವ್ಯಕ್ತಿಯಲ್ಲಿಯೂ ಬೆಂಕಿಯಂತೆ ಇದ್ದವರು. ತಮ್ಮನ್ನು ತಾವು ತಿದ್ದಿಕೊಳ್ಳಲು, ಸದ್ವರ್ತನೆಗಳನ್ನು ಸಮಾಜದಲ್ಲಿ ಬಿತ್ತಲು ತೀವ್ರವಾದ ಆಸ್ಥೆ ತೋರಿದರು. ಮೂಲಭೂತವಾದಿಗಳೊಂದಿಗೆ ವಿನಾಕಾರಣ ಸಂಘರ್ಷಕ್ಕಿಳಿಯದೆ ಪರ್ಯಾಯ ವ್ಯವಸ್ಥೆಯ ನಿರ್ಮಾಣಕ್ಕೆ ತೊಡಗಿಕೊಂಡರು. ಅವರ ಚಿಂತನೆಗಳ ಪ್ರಖರತೆ ಹಾಗಿತ್ತು. ಆಯ್ದುಕೊಂಡ ಹಾದಿಯ ಬಗ್ಗೆ ಸ್ಪಷ್ಟತೆ ಇತ್ತು. ಶೋಷಣೆಯ ಮೂಲಕ್ಕೆ ಕೈ ಹಾಕಿದ ಶರಣರು, ತಮ್ಮ ಪ್ರಖರ ಮತ್ತು ಪ್ರಾಮಾಣಿಕ ಚಿಂತನೆಗಳಿಂದ ಅವುಗಳ ಅಸ್ತಿತ್ವವನ್ನೇ ಪ್ರಶ್ನಿಸಿದರು. ಆ ಮೂಲಕ ಅವುಗಳನ್ನು ಮುಂದಿಟ್ಟುಕೊಂಡು ದಬ್ಬಾಳಿಕೆ ನಡೆಸುವವರನ್ನು ನಿಸ್ಸಹಾಯಕಗೊಳಿಸಿದರು. ಇದರಿಂದ ಮುಂಬರುವ ಜನಾಂಗದ ಆಲೋಚನಾ ಕ್ರಮವೇ ಬದಲಾಯಿತು. ಸ್ವಾಭಿಮಾನದ, ಘನತೆಯ, ಗೌರವದ, ಕೆಚ್ಚೆದೆಯ ಮಾರ್ಗ ತುಳಿದ ಶರಣರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗುರುತರವಾದ ಜವಾಬ್ದಾರಿಯಿಂದ ನಿರ್ವಹಿಸಿ ತೋರಿಸಿದ್ದು ಹೀಗೆ. ಆದ್ದರಿಂದ ವಚನಗಳಲ್ಲಿರುವ ವಿಚಾರಗಳು, ಕಳಕಳಿ ನಮ್ಮ ಮನಸ್ಸನ್ನು ಆಳವಾಗಿ ನಾಟುವವಲ್ಲದೆ, ತೀವ್ರ ಚಿಂತನೆಗೆ ಹಚ್ಚುತ್ತವೆ.