ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
ಎಳೆಯನಾಗಿದ್ದಾಗಲೇ ಸಾಂಪ್ರದಾಯಿಕ ಆಚರಣೆಗಳನ್ನು ವಿರೋಧಿಸಿದ ಬಸವಣ್ಣನವರು ಹುಟ್ಟಿದ್ದು ಬ್ರಾಹ್ಮಣ ಕುಟುಂಬದಲ್ಲಿ. ತನ್ನ ಹುಟ್ಟಿನ ಧರ್ಮ ಬಿಟ್ಟು, ಕೂಡಲಸಂಗಮದಲ್ಲಿ ಅಧ್ಯಯನ ಮಾಡಿ ಮುಂದೆ ತಾವೇ ಲಿಂಗಾಯತವೆಂಬ ಹೊಸ ಧರ್ಮವನ್ನು ರೂಪಿಸಿ ತಮ್ಮ ಬದುಕನ್ನೇ ಆ ಧರ್ಮಕ್ಕೆ ಮುಡಿಪಾಗಿಟ್ಟರು. ಆಲ್ಬರ್ಟ್ ಐನ್‍ಸ್ಟೈನ್ ಹುಟ್ಟಿನಿಂದ ಯಹೂದಿ. ಎಳೆಯನಾಗಿದ್ದಾಗಲೇ ಯಹೂದಿ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಅಭ್ಯಾಸ ಮಾಡುತ್ತಿದ್ದ ಅವರು 12 ವರ್ಷದವರಾಗಿದ್ದಾಗ ತಮ್ಮ ಹಿಂದಿನ ಧರ್ಮಾಚರಣೆಗಳೆಲ್ಲವನ್ನು ಬದಿಗೊತ್ತಿ ವಿಜ್ಞಾನದ ಕಡೆ ತಿರುಗಿದರು. ಮುಂದೆ ಹೊಸ ಸಿದ್ಧಾಂತಗಳನ್ನು ಕಟ್ಟುತ್ತ ಜೀವನವಿಡೀ ತಮ್ಮನ್ನು ವಿಜ್ಞಾನ ಕ್ಷೇತ್ರಕ್ಕೆ ಅರ್ಪಿಸಿಕೊಂಡರು.
ಇಬ್ಬರೂ ಬಾಲ್ಯ ಪ್ರತಿಭೆಗಳೇ! ಆದ್ದರಿಂದಲೇ ಅವರು ತಮ್ಮ ಕಾಲದ ಧಾರ್ಮಿಕ ಆಚರಣೆಗಳನ್ನು ತಿರಸ್ಕರಿಸಿ ಹೊರಬಂದರು. ಐನ್‍ಸ್ಟೈನ್ ಬಾಲ್ಯದಲ್ಲಿ ದಡ್ಡನಾಗಿದ್ದ ಎಂಬ ಹೇಳಿಕೆಗಳಿವೆ. ಆದರೆ ಅದು ಅಷ್ಟು ನಿಜವಲ್ಲವೇನೋ ಎನಿಸುತ್ತದೆ. ಬಾಲಕ ಐನ್‍ಸ್ಟೈನ್ ತನ್ನದೇ ಯೋಚನೆಗಳಲ್ಲಿ ಮುಳುಗಿ ತರಗತಿಗಳಲ್ಲಿ ಅನ್ಯಮನಸ್ಕನಾಗಿರುತ್ತಿದ್ದ. ಆವನನ್ನು ಕಾಡುತ್ತಿದ್ದ ಪ್ರಶ್ನೆಗಳಿಗೆ ಗುರುಗಳಿಂದ ಉತ್ತರ ಸಿಗದೆ, ಪಠ್ಯಕ್ರಮಕ್ಕೆ ಸಂಬಂಧಪಟ್ಟ ಗುರುಗಳ ಪ್ರಶ್ನೆಗಳಿಗೆ ಅವನಿಂದ ಉತ್ತರ ಸಿಗದೆ ದಡ್ಡ ಎನಿಸಿದ್ದನೇನೋ! ಅವರೇ ಒಮ್ಮೆ ನಾನು ಕಾಲೇಜು ಪ್ರವೇಶಿಸುವವರೆಗೂ ಬುದ್ಧಿವಂತನಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಆಗಲೂ ಗುಂಪು ಶಿಕ್ಷಣ ಪದ್ಧತಿಯಲ್ಲೇ ಕಲಿಕೆ ನಡೆಯುತ್ತಿದ್ದರಿಂದ ಪ್ರತಿ ವಿದ್ಯಾರ್ಥಿಯೊಳಗೆ ಸುಪ್ತವಾಗಿರಬಹುದಾದ ಪ್ರತಿಭೆ ಅರಳಲು ಅವಕಾಶಗಳು ಸಿಗದೆ ಒಟ್ಟಾರೆ ಶಿಕ್ಷಣ ಒರಟುಕಲ್ಲುಗಳನ್ನು ನುಣುಪುಮಾಡುವ, ಹೊಳೆಯುತ್ತಿರುವ ವಜ್ರಗಳನ್ನು ಮಂಕಾಗಿಸುವ ಸರಾಸರಿ ಪದ್ಧತಿಯನ್ನು ಅನುಸರಿಸಿತ್ತು ಎನಿಸುತ್ತದೆ.
ಐನ್‍ಸ್ಟೈನ್ ಅಂತರ್ಮುಖಿ. ಜನರೊಡನೆ ಹೆಚ್ಚಾಗಿ ಬೆರೆಯದೆ ಏಕಾಂಗಿಯಾಗಿರಲು ಹೆಚ್ಚು ಬಯಸುತ್ತಿದ್ದರು. ವೈಜ್ಞಾನಿಕ ಚಿಂತನೆಗಳ ಉಪಾಸನೆಯಲ್ಲಿಯೇ ಇದ್ದ ಆತ ಏಕಾಂಗಿಯಾದರೂ ಒಂಟಿಯಾಗಿರಲಿಲ್ಲ. ಬಸವಣ್ಣ ಬಹಿರ್ಮುಖಿ. ಜಂಗಮ ಪ್ರೇಮಿ. ಎಲ್ಲರೊಡನೆ ಹೆಚ್ಚಾಗಿ ಬೆರೆಯುತ್ತಿದ್ದ ಅವರು ದೀನದಲಿತರೊಡನೆ ಸಮಾನವಾಗಿ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದರು. ಐನ್‍ಸ್ಟೈನ್ ಅಂತರ್ಮುಖಿಯಾದರೂ ಆತನ ಅಧ್ಯಯನ ಕ್ಷೇತ್ರ ಭೌತವಿಜ್ಞಾನವಾದ್ದರಿಂದ ಹೊರಗಣ ಪ್ರಪಂಚವನ್ನು ಅರಿಯುವುದರಲ್ಲಿ ಅವರಲ್ಲಿ ಅಪಾರವಾದ ಆಸಕ್ತಿ ಇತ್ತು. ಬಸವಣ್ಣ ಬಹಿರ್ಮುಖಿಯಾದರೂ ಅವರ ಕ್ಷೇತ್ರ ಧರ್ಮವಾದ್ದರಿಂದ ತನ್ನೊಳಗನ್ನು ಅರಿಯುವುದರಲ್ಲಿ ಹೆಚ್ಚು ಉತ್ಸುಕರಾಗಿದ್ದರು. ಇಬ್ಬರೂ ದಯಾಮಯಿಗಳೇ, ಇಬ್ಬರಲ್ಲೂ ವಿನಮ್ರತೆಯಿತ್ತು. ಅದ್ವಿತೀಯ ಸಾಧನೆಗೈದಿದ್ದರೂ ಕೀರ್ತಿ ಮತ್ತು ಹೊಗಳಿಕೆಗಳನ್ನು ಅವರು ಇಷ್ಟಪಡುತ್ತಿರಲಿಲ್ಲ. ಹೊಗಳಿ ಹೊಗಳಿ ಎನ್ನ ಹೊನ್ನ ಶೂಲಕ್ಕಿಕ್ಕಿದರಯ್ಯಾ ಎಂದು ಬಸವಣ್ಣ ನೊಂದುಕೊಂಡರೆ, ನನ್ನನ್ನು ಹೊಗಳಿದಾಗಲೆಲ್ಲ ನಾನು ಏಕೊ ಕುಬ್ಜನಾಗುತ್ತೇನೆ ಎಂದು ಐನ್‍ಸ್ಟೈನ್ ಚಿಂತಿಸುತ್ತಿದ್ದರು.
ಇಬ್ಬರೂ ಸರಳತೆಯನ್ನು ಇಷ್ಟಪಡುತ್ತಿದ್ದರು. ಯಾವುದಾದರೂ ಒಂದು ವಿಷಯವನ್ನು ಆರು ವರ್ಷದ ಮಗುವಿಗೆ ಹೇಳಲು ನೀವು ಅಸಮರ್ಥರಾದಿರಿ ಎಂದರೆ ಆ ವಿಷಯ ನಿಮಗೆ ಗೊತ್ತಿಲ್ಲ ಎಂದೇ ಅರ್ಥ ಎಂದು ಐನ್‍ಸ್ಟೈನ್ ನುಡಿದಿದ್ದಾರೆ ಎನ್ನುವ ಸಂಗತಿ ಎಷ್ಟು ನಿಜವೋ ಗೊತ್ತಿಲ್ಲ. ಆದರೆ ಐನ್‍ಸ್ಟೈನ್ ಯಾವ ವಿಷಯವೇ ಆಗಲಿ ಅದನ್ನು ಸರಳವಾಗಿ ಹೇಳಬೇಕು, ಆದರೆ ಅತೀ ಸರಳಗೊಳಿಸಬಾರದು ಎಂದಂತೂ ಹೇಳಿದ್ದರು. ಅತೀ ಸರಳಗೊಳಿಸಿದಾಗ ನಿರೂಪಣೆ ಅತಾರ್ಕಿಕವೂ ಅಪರಿಪೂರ್ಣವೂ ಆಗಬಹುದೆಂಬ ಅನುಮಾನ ಅವರಿಗಿತ್ತು. ಬಸವಣ್ಣನವರು ಶರಣ ಬಂಧುಗಳ ಜೊತೆ ಸೇರಿ ತಾವು ಕಂಡ ಅನುಭಾವಗಳನ್ನು ಸರಳ ಕನ್ನಡದಲ್ಲಿ ವಚನಗಳಾಗಿ ಕೊಟ್ಟಿದ್ದಾರೆ. ಸರಳ ಜನವಾಣಿಯಲ್ಲೇ ಅವರ ವಚನಗಳಿದ್ದರೂ ಅವುಗಳಲ್ಲಿನ ಅನುಭಾವದ ಸಾಂದ್ರ ದಟ್ಟವಾಗಿದೆ.
ಈ ಮಹಾಪುರುಷರಿಬ್ಬರ ಕಾಲಘಟ್ಟವನ್ನು ಸ್ವಲ್ಪ ಗಮನಿಸೋಣ. ಬಸವಣ್ಣನವರ ಕಾಲದಲ್ಲಿ ಸಮಾಜದ ಅನೇಕ ವರ್ಗಗಳ ಸ್ಥಿತಿ ಹೀನಾಯವಾಗಿತ್ತು. ಪಾಪ ಪ್ರಜ್ಞೆಗಳಿಂದ ಬಳಲಿ ಶೋಷಣೆಗೊಳಗಾಗಿದ್ದ ಅಂತ್ಯಜರು, ಮೂಢನಂಬಿಕೆಗಳ ಬಲೆಗೆ ಬಿದ್ದು ನರಳುತ್ತಿದ್ದ ಶ್ರಮಿಕರು, ಶೂದ್ರರು, ಅಸಮಾನತೆ ಅಧೀನತೆಗೆ ಒಳಗಾಗಿದ್ದರು. ಹೆಣ್ಣುಮಕ್ಕಳು ಮಾಯೆ, ಶೂದ್ರಳು ಎಂಬ ಕಳಂಕಗಳಿಗೆ ಸಿಕ್ಕಿ ಅಸಹನೀಯ ಬದುಕಿಗೆ ಒಳಗಾಗಿದ್ದರು. ಇವರೆಲ್ಲರನ್ನೂ ರಾಜಸತ್ತೆ, ಮತಸತ್ತೆ ಮತ್ತು ಪುರುಷಸತ್ತೆ ಎಂಬ ಮೂರು ವ್ಯವಸ್ಥೆಗಳ ಮೂಲಕ ಶ್ರೀಮಂತ ಮತನಿಷ್ಠ ವ್ಯಕ್ತಿ ಮತ್ತು ಸಮುದಾಯಗಳು ಶೋಷಣೆ ಮಾಡುತ್ತಿದ್ದವು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಹುಟ್ಟಿದವರು ಬಸವಣ್ಣ. ಕೂಡಲಸಂಗಮದಲ್ಲಿ ಬೆಳೆದದ್ದು, ಕಲ್ಯಾಣದಲ್ಲಿ ಬದುಕಿದ್ದು. ಕಲಬುರ್ಗಿಯವರ ಮಾತುಗಳಲ್ಲೇ ಹೇಳುವುದಾದರೆ, “ಬಸವಣ್ಣ ಬಾಗೇವಾಡಿಯಿಂದ ಸಂಗಮಕ್ಕೆ ಬಂದು ಗುರುವಿನ ಸಮ್ಮುಖದಲ್ಲಿ ಅಧ್ಯಯನದ ಮೂಲಕ ಅಂಗಗುಣದಿಂದ ಲಿಂಗಗುಣಿಯಾದ. ಅಲ್ಲಿಂದ ಕಲ್ಯಾಣಕ್ಕೆ ಬಂದು ಸಮಾಜದ ಹೀನ ಸ್ಥಿತಿಯನ್ನು ಗಮನಿಸಿ ಜಂಗಮಗುಣಿಯಾದ.” ಬಸವಣ್ಣನವರು ಸಕಲ ಜೀವಿಗಳ ಲೇಸ ಬಯಸುವ ಲಿಂಗಾಯತವೆಂಬ ಹೊಸ ಧರ್ಮವನ್ನು ಕಟ್ಟಿ ದೀನ ದಲಿತ ಅಂತ್ಯಜರೆನ್ನದೆ ಎಲ್ಲರನ್ನೂ ಬರಮಾಡಿಕೊಂಡರು. ನಮ್ಮ ಅಳತೆಗೆ ನಿಲುಕದ ದೈವವನ್ನು ಇಷ್ಟಲಿಂಗದ ರೂಪದಲ್ಲಿ ಪ್ರಾಥಮಿಕವಾಗಿ ಭಾವಿಸಿಕೊಳ್ಳುತ್ತ, ಬದುಕಿನ ನಿರ್ವಹಣೆಗಾಗಿ ಸತ್ಯ ಶುದ್ಧ ಕಾಯಕ ಒಂದನ್ನು ಹಿಡಿದು ಗಳಿಸುತ್ತ, ಗಳಿಸಿದ ಸ್ವಲ್ಪ ಭಾಗವನ್ನು ಸಮಾಜದ ಹಿತಕ್ಕಾಗಿ ದಾಸೋಹ ಮಾಡುವ ಮೂಲಕ ವ್ಯಕ್ತಿ ತನ್ನ ಜೀವನವನ್ನು ಸಾಗಿಸಬೇಕು ಎಂದು ಅರುಹಿದರು. ಎಲ್ಲ ಕಾಲಕ್ಕೂ ಎಲ್ಲ ಸಮಾಜಕ್ಕೂ ಶ್ರೇಷ್ಠವೆನಿಸುವ ಆಚಾರ ವಿಚಾರಗಳನ್ನು ನುಡಿದಂತೆ ನಡೆದು ಜಗತ್ತಿಗೆ ದಾರಿದೀಪವಾದರು.
ಐನ್‍ಸ್ಟೈನ್ ಕಾಲಘಟ್ಟದಲ್ಲಿಯೂ ಇಂತಹದೇ ಸನ್ನಿವೇಶವಿತ್ತು. 17ನೇ ಶತಮಾನಕ್ಕೆ ಹಿಂದೆಯೂ ವಿಜ್ಞಾನವೆಂಬುದಿತ್ತು. ಆದರೆ ಆ ಕಾಲದಲ್ಲಿ ಅದು ಮತಗಳ ಹಿಡಿತದಲ್ಲಿತ್ತು. ವಿಜ್ಞಾನದ ನಿಯಮಗಳೆಂದು ಮತಗಳು ಪ್ರಚುರಪಡಿಸುತ್ತಿದ್ದ ಹೇಳಿಕೆಗಳು ಸತ್ಯವೆಂದು ಎಲ್ಲರೂ ನಂಬಬೇಕಿತ್ತು. ಭೂಮಿ ಕೇಂದ್ರದಲ್ಲಿದ್ದು ಸೂರ್ಯ ಚಂದ್ರ ಗ್ರಹ ನಕ್ಷತ್ರಗಳೆಲ್ಲವೂ ಅದರ ಸುತ್ತ ಸುತ್ತುತ್ತವೆ, ಅವುಗಳಿಂದಾಚೆ ಸ್ವರ್ಗ ನರಕಗಳಿವೆ ಎಂದು ಟಾಲೆಮಿ ಹೇಳಿದ್ದ. ಇನ್ನೊಬ್ಬ ತತ್ವಜ್ಞಾನಿ ಅರಿಸ್ಟಾಟಲ್, ಒಟ್ಟಿಗೆ ಬಿಟ್ಟಾಗ ಭಾರವಾದ ವಸ್ತುಗಳು ಹಗುರವಾದ ವಸ್ತುಗಳಿಗಿಂತ ಬೇಗ ನೆಲವನ್ನು ತಲುಪುತ್ತವೆ ಎಂದು ನುಡಿದಿದ್ದ. ಟೆಲಿಸ್ಕೋಪನ್ನು ಸೃಜಿಸಿದ ಗೆಲಿಲಿಯೋ ಗೆಲಿಲಿ ಮುಂದೆ ಪ್ರತಿಯೊಂದು ಹೇಳಿಕೆಯೂ ಪ್ರಯೋಗಕ್ಕೆ ಒಳಪಡಬೇಕು ಎನ್ನುತ್ತ ವೈಜ್ಞಾನಿಕ ಮಾರ್ಗದ ಲಕ್ಷಣವೊಂದನ್ನು ತಿಳಿಸಿದ್ದ. ತನ್ನ ಹೇಳಿಕೆಗಳಿಗಾಗಿ ಆತ ಮತಸತ್ತೆಯಿಂದ ಸಂಕಷ್ಟವನ್ನೂ ಅನುಭವಿಸಿದ್ದ. ಗೆಲಿಲಿಯೋ ಕಾಲವಾದ ವರ್ಷದಲ್ಲಿಯೇ ಐಸಾಕ್ ನ್ಯೂಟನ್ ಜನಿಸಿದ್ದು. ವಿಜ್ಞಾನ ಕಣ್ಣು ಬಿಡುತ್ತಿದ್ದ ಆ ಕಾಲದಲ್ಲಿ ತನ್ನ ಚಲನ ಮತ್ತು ಗುರುತ್ವ ಸಿದ್ಧಾಂತಗಳ ಮೂಲಕ ಅನೇಕ ಘಟನೆಗಳ ರಹಸ್ಯಗಳನ್ನು ನ್ಯೂಟನ್ ಬಿಡಿಸಿದ. ಖಗೋಳದಲ್ಲಿನ ಚಲನೆಯೇ ಬೇರೆ, ಭೂಮಿಯ ಮೇಲಿನ ಚಲನೆಯೇ ಬೇರೆ ಎಂದುಕೊಂಡಿದ್ದ ನಂಬಿಕೆಯನ್ನು ದೂರಮಾಡಿ ಎಲ್ಲ ಚಲನೆಗಳನ್ನೂ ತನ್ನ ನಿಯಮಗಳಿಂದಲೇ ವಿವರಿಸಿದ. ಆತನ ಸಿದ್ಧಾಂತಗಳನ್ನು ಅನುಸರಿಸಿ ಕಟ್ಟಿದ ಕ್ಲಾಸಿಕಲ್/ ಅಭಿಜಾತ ಭೌತವಿಜ್ಞಾನ 17ನೇ ಶತಮಾನದಿಂದ 19ನೇ ಶತಮಾನದ ಮಧ್ಯದವರೆಗೂ ಅನಭಿಷಿಕ್ತವಾಗಿ ಮೆರೆಯಿತು. ಆ ಸಂದರ್ಭದಲ್ಲಿ ಕೆಲ್ವಿನ್ ಎಂಬುವ ಒಬ್ಬ ವಿಜ್ಞಾನಿ, “ಭೌತ ಪ್ರಪಂಚದ ಎಲ್ಲ ವಿದ್ಯಮಾನಗಳನ್ನು ನಿಖರವಾಗಿ ಅರ್ಥೈಸುವ ನಿಯಮಗಳನ್ನು ನಾವು ಕಂಡುಹಿಡಿದಾಯಿತು, ಇನ್ನು ಮುಂದೆ ಕಂಡುಹಿಡಿಯುವುದು ಏನೂ ಉಳಿದಿಲ್ಲ” ಎಂದು ಅಭಿಪ್ರಾಯಪಟ್ಟಿದ್ದುದು ಕ್ಲಾಸಿಕಲ್ ಭೌತವಿಜ್ಞಾನದ ಮಹತ್ವವನ್ನು ತಿಳಿಸುತ್ತದೆ.
ಆದರೆ ಈ ಹೆಗ್ಗಳಿಕೆ ಬಹಳ ಕಾಲ ಉಳಿಯದೆ ಸ್ವಲ್ಪದರಲ್ಲಿಯೇ ಮರೆಯಾಯಿತು. ಬೆಳಕಿನ ವೇಗ, ಕಪ್ಪು ಕಾಯವೊಂದರಿಂದ ಬರುವ ಬೆಳಕಿನ ಸ್ವರೂಪ, ಒಂದು ಲೋಹದ ತಟ್ಟೆಯಿಂದ ಎಲೆಕ್ಟ್ರಾನುಗಳನ್ನು ಹೊರದೂಡುವಲ್ಲಿ ಬೆಳಕಿನ ವರ್ತನೆ ಮತ್ತು ಜಲಜನಕದ ಪರಮಾಣು ವ್ಯವಸ್ಥೆ ಇಂಥವುಗಳನ್ನು ಕುರಿತು ನಡೆಸಿದ ಪ್ರಯೋಗಗಳಿಗೆ ಅಭಿಜಾತ ಸಿದ್ಧಾಂತ ಸಮರ್ಥ ವಿವರಣೆ ಕೊಡಲಿಲ್ಲ. ಇಂತಹ ಸಂದಿಗ್ಧ ಸ್ಥಿತಿ ತೋರ್ಪಟ್ಟಿದ್ದು 19ನೆ ಶತಮಾನದ ಅಂತ್ಯಭಾಗದಲ್ಲಿ. ಇಡೀ ಭೌತವಿಜ್ಞಾನದ ಜಗತ್ತು ಇವುಗಳಿಗೆ ಕಾರಣವನ್ನು ಹುಡುಕಲಾರದೆ ಕಂಗೆಟ್ಟಿತು. ಇಪ್ಪತ್ತನೆಯ ಶತಮಾನದ ಸೂರ್ಯೋದಯವಾಗುತ್ತಿದ್ದಂತೆ ಕ್ವಾಂಟಮ್ ಸಿದ್ಧಾಂತ ಮತ್ತು ವಿಶಿಷ್ಟ ಸಾಪೇಕ್ಷತಾ ಸಿದ್ಧಾಂತ ಎಂಬ ಎರಡು ಹೊಸ ಸಿದ್ಧಾಂತಗಳು ಹೊರಬಂದವು. ಕ್ವಾಂಟಮ್ ಸಿದ್ಧಾಂತವನ್ನು ಕಟ್ಟಿದವರು ಮ್ಯಾಕ್ಸ್ ಪ್ಲಾಂಕ್, ನೀಲ್ಸ್ ಬೋರ್, ಬಾರ್ನ್, ಸ್ಕ್ರಾಡಿಂಜರ್, ಹೈಸನ್ಬರ್ಗ್ ಮುಂತಾದ ಅನೇಕರು. ವಿಶಿಷ್ಟ ಸಾಪೇಕ್ಷತಾ ಸಿದ್ಧಾಂತವನ್ನು ಕಟ್ಟಿದ್ದು ಹಲವರಲ್ಲ, ಆಲ್ಬರ್ಟ್ ಐನ್‍ಸ್ಟೈನ್ ಒಬ್ಬರೇ. ಈ ಎರಡು ಸಿದ್ಧಾಂತಗಳು ಅಭಿಜಾತ ಸಿದ್ಧಾಂತವನ್ನು ಒಂದು ರೀತಿ ಮೂಲೆಗೆ ತಳ್ಳಿದವು. ಐನ್‍ಸ್ಟೈನ್ ಸಿದ್ಧಾಂತವಂತೂ ಆ ಕಾಲದಲ್ಲಿ ಪ್ರಚಲಿತವಿದ್ದ ಅನೇಕ ಮೂಲ ಪರಿಕಲ್ಪನೆಗಳನ್ನು ಅಮೂಲಾಗ್ರವಾಗಿ ಬದಲಾಯಿಸಿತು. ಸ್ವಲ್ಪ ಉತ್ಪ್ರೇಕ್ಷಿಸಿ ಉದಾಹರಿಸುವುದಾದರೆ ರೈಲ್ವೆ ನಿಲ್ದಾಣದಲ್ಲಿ ನಿಂತಹ ವ್ಯಕ್ತಿಯ ಕಾಲವೇ ಬೇರೆ, ರೈಲಿನೊಳಗೆ ಪ್ರಯಾಣಿಸುತ್ತಿರುವವನ ಕಾಲವೇ ಬೇರೆ. ಚಲಿಸುತ್ತಿದ್ದಾಗ ವ್ಯಕ್ತಿಯ ತೂಕ ಎಷ್ಟೋ ಅವನು ನಿಂತಾಗ ಆತನ ತೂಕ ಕಡಿಮೆ. ಚಲಿಸುವ ರೈಲಿನ ಉದ್ದ ನಿಂತಾಗ ಜಾಸ್ತಿ. ಇವೆಲ್ಲವೂ ನಮ್ಮ ಅನುಭವಕ್ಕೆ, ಸಾಮಾನ್ಯ ಜ್ಞಾನಕ್ಕೆ ವ್ಯತಿರಿಕ್ತವಾದಂತಹವು. ಇಂತಹ ಆಶ್ಚರ್ಯಕರ ನಿರ್ಣಯಗಳನ್ನು ಐನ್‍ಸ್ಟೈನ್ ಸಿದ್ಧಾಂತ ಹೊಂದಿದೆ. ಇಂತಹ ವಿಶಿಷ್ಟ ಸಿದ್ಧಾಂತವನ್ನು ಕೊಟ್ಟಂತಹ ವಿಜ್ಞಾನಿ ಮುಂದುವರೆದು ಮತ್ತೊಂದು ಸಿದ್ಧಾಂತವನ್ನು ಕೂಡ ತಾನೇ ಕೊಟ್ಟ. ಆ ಹೊಸ ಸಿದ್ಧಾಂತವನ್ನು ‘ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ’ ಎಂದು ಕರೆದರು. ಈ ಹೊಸ ಸಿದ್ಧಾಂತ ಆತನ ಮೊದಲನೆಯ ಸಿದ್ಧಾಂತದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿತು. ನ್ಯೂಟನ್ನನ ಗುರುತ್ವಾಕರ್ಷಣೆಯನ್ನು ಕೂಡ ಒಂದು ಹೊಸ ಭಾಷ್ಯದೊಂದಿಗೆ ಬರೆಯಿತು. ಏಕಾಂಗಿಯಾಗಿ ಕೊಟ್ಟ ಆತನ ಸಿದ್ಧಾಂತಗಳನ್ನು ಅರಿಯಲು ಇಡೀ ಭೌತ ಜಗತ್ತಿಗೆ ಸಾಕಷ್ಟು ಸಮಯವೇ ಹಿಡಿಯಿತು. ಐನ್‍ಸ್ಟೈನ್ ಕ್ವಾಂಟಮ್ ಸಿದ್ಧಾಂತದಲ್ಲೂ ತನ್ನ ಕೊಡುಗೆಯನ್ನು ನೀಡಿದ. ಆ ಕೊಡುಗೆ ಆತನಿಗೆ ನೊಬೆಲ್ ಪ್ರಶಸ್ತಿಯನ್ನೇ ತಂದುಕೊಟ್ಟಿತು ಎಂಬುದು ಅದರ ಮಹತ್ವವನ್ನು ಸಾರಿದೆ. ವಿಜ್ಞಾನ ಕ್ಷೇತ್ರ ಪಡೆದುಕೊಂಡ ಮೂರು ಹೊಸ ಸಿದ್ಧಾಂತಗಳಲ್ಲಿ ಎರಡನ್ನು ಏಕಾಂಗಿಯಾಗಿ ಕಟ್ಟಿ ಮೂರನೆಯದರಲ್ಲಿ ತಾನು ಕೂಡ ಭಾಗಿಯಾಗಿ ಐನ್‍ಸ್ಟೈನ್ ಒಬ್ಬ ಶ್ರೇಷ್ಠ ವಿಜ್ಞಾನಿ ಎನಿಸಿದರು. ಹೀಗೆ ಅವರ ಕಾಲಘಟ್ಟಗಳಲ್ಲಿ ತಲೆದೋರಿದ್ದ ಸಂಕಷ್ಟ ಪರಿಸ್ಥಿತಿಗಳಿಗೆ ಪರಿಹಾರ ರೂಪದಲ್ಲಿ ಹೊಸ ಮಾರ್ಗಗಳನ್ನು ಸೃಷ್ಟಿಸಿದ ಕೀರ್ತಿ ಇಬ್ಬರಿಗೂ ಸಲ್ಲುತ್ತದೆ.
ಬಸವಣ್ಣನವರು ಕಟ್ಟಿದ ಲಿಂಗಾಯತ ಧರ್ಮ ಜಾತಿ ಮತ ಕುಲವೆನ್ನದೆ ಎಲ್ಲರನ್ನೂ ತನ್ನ ಕಡೆಗೆ ಸೆಳೆಯಿತು. ವರ್ಗ ರಹಿತ ವರ್ಣರಹಿತ ಮತ್ತು ಸ್ತ್ರೀ ಸಮಾನತೆಯುಳ್ಳ ವಿಚಾರಗಳೆಲ್ಲ ಆಚಾರಗಳಾದವು. ಸತ್ಯ ಶುದ್ಧ ಕಾಯಕ ಮತ್ತು ದಾಸೋಹದಲ್ಲಿ ತೊಡಗಿಸಿಕೊಂಡು ಬಂದವರೆಲ್ಲ ಶರಣರಾದರು. ಬಸವಣ್ಣನವರು ಕಟ್ಟಿದ ಅನುಭವ ಮಂಟಪದಲ್ಲಿ ಎಲ್ಲ ಶರಣರ ಅನುಭಾವಗಳು ಎಲ್ಲರೆದುರು ಚಿಂತನ ಮಂಥನಕ್ಕೆ ಒಳಗಾಗಿ ವಚನಗಳಾದವು. ಶರಣರ ಆದರ್ಶ ನಡೆಗಳನ್ನು ಸಹಿಸದ ರಾಜ್ಯಸತ್ತೆ ಮತ್ತು ಮತಸತ್ತೆಗಳು ಘರ್ಷಣೆಗಿಳಿದು ಇಡೀ ಶರಣ ಸಂಕುಲವನ್ನು ಬಲಿ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದವು. ನೋಡು ನೋಡುತ್ತಿದ್ದಂತೆ ಲಿಂಗಾಯತ ಧರ್ಮಿಗಳ ಹರಣವಾಗತೊಡಗಿತು. ಇತಿಹಾಸದಲ್ಲಿ ನಡೆಯಬಾರದ ದುರಂತ ನಡೆದು ಹೋಯಿತು. ಬಸವಣ್ಣನವರ ಹೃದಯ ಮಮ್ಮಲ ಮರುಗಿತು.
ಐನ್‍ಸ್ಟೈನ್ ವಿಶಿಷ್ಟ ಸಾಪೇಕ್ಷತಾ ಸಿದ್ಧಾಂತದ ಮೂಲಕ ಪ್ರಪಂಚದಲ್ಲೇ ಅತ್ಯಂತ ಜನಜನಿತವಾಗಿರುವ E=mc2 ಎನ್ನುವ ನವ್ಯಾತಿನವ್ಯ ಸೂತ್ರವನ್ನು ಕೊಟ್ಟರು. ಇದರಿಂದ ವಿಧ್ವಂಸಕಾರಿಯಾದ ಪರಮಾಣು ಬಾಂಬ್ ತಯಾರಿಸಲು ಸಾಧ್ಯವಾಗಿ ಹಿರೋಶಿಮಾ ನಾಗಸಾಕಿ ಪಟ್ಟಣಗಳ ಮೇಲೆ ಅಮೇರಿಕಾ ಬಾಂಬ್ ಸಿಡಿಸಿ ಲಕ್ಷಾಂತರ ಜನರ ಸಾವಿಗೆ ಕಾರಣವಾಯಿತು. ತಾನು ಕಂಡ ಸತ್ಯ ಎಂತಹ ದಾರುಣ ಹಿಂಸೆಗೆ ಕಾರಣವಾಯಿತು ಎಂದು ಐನ್‍ಸ್ಟೈನ್ ಮಮ್ಮಲ ಮರುಗಿದರು. ಆ ನಂತರ ಐನ್‍ಸ್ಟೈನ್ ತನ್ನ ಜೀವನದುದ್ದಕ್ಕೂ ವಿಶ್ವಶಾಂತಿಗಾಗಿ ಶ್ರಮಿಸಿದರು. ಇಬ್ಬರು ಮಹಾತ್ಮರ ಜೀವಿತಕಾಲದಲ್ಲಿಯೇ ಎರಡು ದುರಂತಗಳು ನಡೆದು ಇಬ್ಬರನ್ನೂ ಇನ್ನಿಲ್ಲದಷ್ಟು ಘಾಸಿಗೊಳಿಸಿದವು.
ವ್ಯಕ್ತಿಗತವಾಗಿ ಇಬ್ಬರು ಮಹನೀಯರ ಬಗ್ಗೆ ಪ್ರಸ್ತಾಪಿಸಿದ ನಂತರ ಅವರು ಆರಿಸಿಕೊಂಡ ಮಾರ್ಗಗಳೆಡೆಗೆ ಸ್ವಲ್ಪ ಗಮನ ಹರಿಸೋಣ. ವಿಜ್ಞಾನವೆಂದರೆ ವೈಜ್ಞಾನಿಕ ದೃಷ್ಟಿಕೋನದಿಂದ ಅನ್ವೇಷಣೆಮಾಡಿ ಪಡೆದುಕೊಂಡ ವಿಶೇಷ ಜ್ಞಾನ. ಇಲ್ಲಿನ ಅನ್ವೇಷಣೆಯಿಂದ ಪಡೆದ ಸತ್ಯಗಳು ಸಂಶೋಧನೆಯೆನಿಸಿಕೊಳ್ಳುತ್ತವೆ. ಇಂತಹ ಸಂಶೋಧನೆಗಳನ್ನು ಮುಂದಿಟ್ಟುಕೊಂಡು ಸಮಂಜಸವಾದ ಊಹೆಗಳೊಡನೆ ಕಟ್ಟಿದ್ದನ್ನೇ ಸಿದ್ಧಾಂತವೆನ್ನುತ್ತಾರೆ. ವೈಜ್ಞಾನಿಕ ದೃಷ್ಟಿಕೋನ ಹಾಗೂ ಅದರಿಂದ ಕಟ್ಟಿದ ಸಿದ್ಧಾಂತ ಕೆಲವು ಮೂಲಭೂತ ನಿಯಮಗಳನ್ನು ಅನುಸರಿಸಬೇಕು.
• ವಸ್ತು ಅಥವಾ ವಿಷಯ ಹೇಗೆ ಕಂಡಿತೋ ಹಾಗೆಯೇ ನಿರೂಪಿಸಬೇಕು. ಇದನ್ನು ಯಥಾರ್ಥಜ್ಞಾನವೆನ್ನುತ್ತಾರೆ. ಇಲ್ಲಿ ಮಮಕಾರಕ್ಕೆ ಅವಕಾಶವಿಲ್ಲ.
• ಅನ್ವೇಷಣೆ ಪ್ರಯೋಗದ ಅಡಿಗಲ್ಲಿನ ಮೇಲೆ ಸಿಂಧುವಾಗಬೇಕು.
• ಅನ್ವೇಷಣೆಯಲ್ಲಿ ಕಂಡ ಸತ್ಯವನ್ನು ಹೇಳುವ ಧೈರ್ಯವಿರಬೇಕು.
• ಆ ಸತ್ಯವನ್ನು ಪ್ರಕಟಿಸುವಾಗ ಅದರ ವ್ಯಾಪ್ತಿ, ಮಿತಿ, ಸಾರ್ವತ್ರಿಕತೆ ಇವುಗಳನ್ನು ಪರಿಮಾಣಾತ್ಮಕವಾಗಿ ನಿರೂಪಿಸಬೇಕು. ಗಣಿತೋಕ್ತಿಗಳ ಮೂಲಕ ಹೀಗೆ ಮಾಡಲು ಸಾಧ್ಯ.
• ಯಾವ ಯಾವ ವ್ಯಾಪ್ತಿಯೊಳಗೆ ಹಳೆಯ ಸಿದ್ಧಾಂತಗಳು ಒಪ್ಪಿಗೆಯಾಗುತ್ತವೆಯೋ ಅಲ್ಲಿ ಹೊಸ ಸಿದ್ಧಾಂತವೂ ಒಪ್ಪಿಗೆಯಾಗಬೇಕು.
• ಹಿಂದಿನ ಸಿದ್ಧಾಂತಗಳ ವ್ಯಾಪ್ತಿಯನ್ನು ಮೀರಿದ ವಿಶಾಲ ವ್ಯಾಪ್ತಿಗೆ ಹೊಸ ಸಿದ್ಧಾಂತ ಅನ್ವಯವಾಗುತ್ತ ತನ್ನ ವ್ಯಾಪ್ತಿಯ ಗಡಿಯನ್ನೂ ತಿಳಿಸಬೇಕು.
ಈಗ ಬಸವಣ್ಣನವರು ರೂಪಿಸಿದ ಲಿಂಗಾಯತ ಧರ್ಮದ ಕೆಲವು ಆಶಯಗಳನ್ನು ಗಮನಿಸೋಣ.
• ಈ ಧರ್ಮದ ಹಾದಿಯಲ್ಲಿ ಸಾಗುವಾತನಿಗೆ ಸತ್ಯ ಶುದ್ಧ ಕಾಯಕ ಮತ್ತು ದಾಸೋಹದ ನಡೆಯಿರಬೇಕು. ನಿರಂತರವಾದ ಆ ನಡೆಯಲ್ಲಿ ಕಂಡುಕೊಂಡ ಅನುಭವ ಪಕ್ವವಾಗಿ ಅನುಭಾವವಾಗಬೇಕು. ಅನುಭಾವವೆಂದರೆ ಈ ರೀತಿ ನಡೆಯ ಮೂಲಕ ಕಂಡುಕೊಂಡ ಸಂಶೋಧನೆ. ಅಥವಾ ಸಂಶೋಧನೆ ಎಂದರೆ ವೈಜ್ಞಾನಿಕ ಮಾರ್ಗದ ಅನುಭಾವ ಎನ್ನಬಹುದೇನೋ.
• ಅನುಭಾವವು ಎಲ್ಲ ಶರಣರ ಸಮ್ಮುಖದಲ್ಲಿ ವೈಚಾರಿಕವಾಗಿ ಸಿಂಧುವಾದಾಗ ವಚನ ರೂಪ ಪಡೆದು ಮೌಲ್ಯ ಒಂದನ್ನು ಪ್ರತಿಪಾದಿಸುತ್ತದೆ.
• ಕಾಯಕ ದಾಸೋಹಗಳ ಮೂಲಕ ವ್ಯಷ್ಟಿ ಮತ್ತು ಸಮಷ್ಟಿಯ ಒಳಿತನ್ನು ಕಾಣಬೇಕು ಮತ್ತು ಬಯಸಬೇಕು. ಅಲ್ಲಿ ಮಮಕಾರವಿರಬಾರದು. ‘ಮಾಡಿದೆನೆನ್ನದಿರ ಲಿಂಗಕ್ಕೆ, ನೀಡಿದೆನೆನ್ನದಿರ ಜಂಗಮಕ್ಕೆ’ ಎಂಬ ಎಚ್ಚರಿಕೆ ಇರಬೇಕು.
• ತನ್ನ ಅನುಭಾವವನ್ನು ಯಾವ ಒತ್ತಡಕ್ಕೂ ಮಣಿಯದೆ ಧೈರ್ಯವಾಗಿ ಹೇಳುವಂತಿರಬೇಕು.
• ಕಾಯಕದ ವ್ಯಾಪ್ತಿ ಮಿತಿಗಳನ್ನು ಅರಿತಿರಬೇಕು. ಉದಾಹರಣೆಗಾಗಿ ನಾಳೆಗೆಂದು ಸಂಗ್ರಹಣೆ ಸಲ್ಲ.
• ಧರ್ಮದ ವ್ಯಾಪ್ತಿ ಹಿರಿದಾಗಬೇಕು. ಕೆಲವರಿಗಲ್ಲದೆ ಎಲ್ಲರಿಗೂ, ಸಕಲ ಜೀವಿಗಳಿಗೂ ಸಲ್ಲುವಂತಹದಾಗಬೇಕು.
• ಹಿಂದಿನ ಕೆಲವು ಮತಧರ್ಮಗಳು ಮಾನವ ಕಲ್ಪಿತ ದೇವರುಗಳನ್ನು ಸೃಷ್ಟಿಸಿದ್ದವು. ಅಂತಹದ್ದನ್ನೆಲ್ಲ ಬಿಟ್ಟು ಇಡೀ ವಿಶ್ವದ ಸಕಲ ಚರಾಚರಗಳಲ್ಲಿ ದೈವವನ್ನು ಮನಗಾಣಬೇಕು. ಸ್ಥಾವರಕೇಂದ್ರಗಳ ಮಿತಿಯಿಂದ ಹೊರಬಂದು ಜಂಗಮದಲ್ಲಿ ದೈವದ ಇರುವಿಕೆಯನ್ನು ಅರಿಯಬೇಕು. ಅದಕ್ಕಾಗಿ ಪ್ರಾಥಮಿಕವಾಗಿ ದೈವದ ಇರುವಿಕೆಯನ್ನು ಇಷ್ಟಲಿಂಗದ ಮೂಲಕ ಗ್ರಹಿಸಿಕೊಳ್ಳುತ್ತ ನಂತರ ಪ್ರಾಣಲಿಂಗ ಭಾವಲಿಂಗ ರೂಪಗಳಲ್ಲಿ ಆಗುವಿಕೆಯನ್ನು ಮನಗಾಣಬೇಕು.
ಮೇಲಿನ ಪಟ್ಟಿಯನ್ನು ಗಮನಿಸಿದರೆ ವಿಜ್ಞಾನದ ಪ್ರಮುಖ ಲಕ್ಷಣಗಳು ಲಿಂಗಾಯತ ಧರ್ಮದಲ್ಲಿವೆ ಎನಿಸುತ್ತದೆ. ಬಸವಣ್ಣನವರ ಲಿಂಗಾಯತ ಧರ್ಮದ ಈ ಲಕ್ಷಣಗಳಲ್ಲಿ ಪ್ರಮುಖವಾಗಿ ಗುರುತಿಸಬಹುದಾದ ಮುಖ್ಯ ಅಂಶಗಳೆಂದರೆ, ಇದು ಸಮಷ್ಟಿಯ ಹಿತಕ್ಕಾಗಿ ಇರುವ ಧರ್ಮ, ಇಲ್ಲಿ ಸಮಾನತೆಯಿದೆ, ಸ್ವಾತಂತ್ರ್ಯವಿದೆ, ಸಂಕುಚಿತವಲ್ಲದೆ ಮುಕ್ತವಾಗಿದೆ. ಇಲ್ಲಿ ವ್ಯಕ್ತಿ ಕಾಯಕ ನಿರತನಾಗಿ ಅದರಿಂದ ಬಂದ ಗಳಿಕೆಯಲ್ಲಿ ಅಂದಂದಿನ ಬದುಕನ್ನು ನಿರ್ವಹಿಸುತ್ತ ಉಳಿದದ್ದನ್ನು ಸಮಾಜಕ್ಕೆ ನೀಡಬೇಕು. ವಿಶ್ವದ ಸಕಲ ಚರಾಚರದಲ್ಲಿಯೂ ನಿಸರ್ಗ ಧರ್ಮವಿದೆಯೆಂದು ತಿಳಿಯುತ್ತ ತಾನೂ ಅದರ ಭಾಗವೆಂದು ಅರಿಯಬೇಕು.
ಇನ್ನು ಬಸವಣ್ಣ ಹಾಗೂ ಐನ್‍ಸ್ಟೈನ್ ಇಬ್ಬರೂ ದೇವರ ಬಗ್ಗೆ ತಳೆದಿದ್ದ ನಿಲುವುಗಳನ್ನು ಗಮನಿಸೋಣ. ವಿಶ್ವಸೃಷ್ಟಿಯ ವ್ಯಾಪ್ತಿ ಅಥವಾ ಅಗಾಧತೆಯಲ್ಲೇ ಬಸವಣ್ಣನವರು ದೈವವನ್ನು ಕಂಡುಕೊಂಡಿದ್ದಾರೆ. ‘ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ, ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀ ಚರಣ, ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ, ಅಗಮ್ಯ ಅಗೋಚರ, ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ, ಎನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯಾ’ ಎನ್ನುವ ವಚನದಲ್ಲಿ ದೇವರನ್ನು ಅಗಮ್ಯ ಅಗೋಚರ, ಅಪ್ರತಿಮ ಎನ್ನುತ್ತ ತಮ್ಮ ಅಳತೆಗೆ ದಕ್ಕದ ವಿಸ್ತಾರಕ್ಕೆ ವಿನಮ್ರತೆಯನ್ನು ತೋರಿ ಆ ಹಿರಿದನ್ನು, ಇಬ್ಬನಿಯ ಹನಿ ಪ್ರತಿಬಿಂಬಿಸುವಂತೆ, ಕಿರಿದಾದ ಲಿಂಗದ ಕುರುಹನ್ನು ಕೊಟ್ಟಿದ್ದಾರೆ. ಇನ್ನೊಂದು ವಚನದಲ್ಲಿ- ‘ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ, ಸಕಲ ವಿಸ್ತಾರದ ರೂಹು ನೀನೇ ದೇವಾ, ವಿಶ್ವತಶ್ಚಕ್ಷು ನೀನೇ ದೇವಾ, ವಿಶ್ವತೋ ಮುಖ ನೀನೇ ದೇವಾ, ವಿಶ್ವತೋ ಬಾಹು ನೀನೇ ದೇವಾ, ವಿಶ್ವತಃ ಪಾದ ನೀನೇ ದೇವಾ, ಕೂಡಲಸಂಗಮದೇವಾ’ ಎನ್ನುವಲ್ಲಿ ಇಡೀ ವಿಶ್ವದ ಸ್ವರೂಪವೇ ದೈವದ ಮೈ ತಳೆದು ಸಾಗುತ್ತಿದೆ. ಕ್ಷಣಕ್ಷಣಕ್ಕೂ ಬದಲಾಗುತ್ತಲೇ ಇರುವ ವಿಶ್ವದ ರಚನೆ ಮತ್ತು ಸ್ವರೂಪವನ್ನು, ಸಕಲ ಚರಾಚರದ ಆಗುಹೋಗುಗಳಿಗೆ ಆಧಾರವಾಗಿರುವ ವಿಶ್ವದ ನಿರಂತರ ಜಂಗಮತ್ವವೇ ದೇವರ ಕಾಯಕ- ದಾಸೋಹವೆಂತಲೂ ಗುರುತಿಸಿದ್ದಾರೇನೋ ಎನ್ನಿಸುತ್ತದೆ. ದೇವರೆಂದರೆ ಭಾವುಕರಾಗುವ ಬಸವಣ್ಣನವರು ತಂದೆ, ತಾಯಿ, ಬಂಧು-ಬಳಗ ಎಲ್ಲರಲ್ಲೂ ಆ ದೈವತ್ವವನ್ನು ಕಾಣುತ್ತಾರೆ, ತಾನು ಸತಿ ದೈವವೇ ಪತಿ ಎಂದು ಅನೇಕ ವಚನಗಳಲ್ಲಿ ಅದನ್ನು ಪ್ರತಿಬಿಂಬಿಸಿದ್ದಾರೆ. ತಮಗೆ ಕಂಡ ಆ ಸತ್ಯವನ್ನು ಎಲ್ಲರ ಬಳಿ ಕೊಂಡೊಯ್ಯುವ ಅದಮ್ಯ ಬಯಕೆ ಅವರದು. ಯಾರು ಹೇಗೆ ಗ್ರಹಿಸುತ್ತಾರೋ ಗ್ರಹಿಸಲಿ, ಸಹಜದ ಈ ಅರಿವನ್ನು ಜನರ ಬಳಿಗೆ ಅವರವರ ಗ್ರಹಿಕೆಗೆ ತಕ್ಕಂತೆ ಒಯ್ಯುವ ವಾಹನವಾಗುತ್ತೇನೆ ಎಂದಿದ್ದಾರೆ ಈ ವಚನದಲ್ಲಿ:
ಅಯ್ಯಾ, ನೀನು ನಿರಾಕಾರವಾಗಿರ್ದಲ್ಲಿ ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ.
ಅಯ್ಯಾ, ನೀನು ನಾಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿರ್ದೆ ಕಾಣಾ.
ಅಯ್ಯಾ, ನೀನು ಆಕಾರವಾಗಿರ್ದಲ್ಲಿ ನಾನು ವೃಷಭನೆಂಬ ವಾಹನವಾಗಿರ್ದೆ ಕಾಣಾ,
ಅಯ್ಯಾ, ನೀನೆನ್ನ ಭವವ ಕೊಂದಹೆನೆಂದು ಜಂಗಮಲಾಂಛನವಾಗಿ ಬಂದಡೆ
ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ ಕೂಡಲಸಂಗಮದೇವಾ.
ಹೀಗೆ ಸಕಲ ಚರಾಚರವನ್ನೊಳಗೊಂಡ ವಿಶ್ವರಚನೆಯ ನಿರಂತರತೆಯನ್ನು ದೈವವನ್ನಾಗಿ ಪರಿಭಾವಿಸುವ ಬಸವಣ್ಣನವರು ಸಕಲ ಜೀವಾತ್ಮರಿಗೆ ಲೇಸಬಯಸುವ ದಯೆಯೇ ಧರ್ಮದ ಮೂಲ ಎನ್ನುತ್ತಾರೆ. ಕಾಯಕ ದಾಸೋಹಗಳೆಂಬ ನಿಷ್ಠೆ, ಕಳಬೇಡ ಕೊಲಬೇಡ ಮುಂತಾದ ಸಪ್ತ ಶೀಲಗಳನ್ನೊಳಗೊಂಡ ಲಿಂಗಾಯತ ಧರ್ಮವನ್ನು ಅನುಸರಿಸುವುದರ ಮೂಲಕ ಆ ಧಾರ್ಮಿಕತೆಯನ್ನು ಕ್ರಿಯಾಶೀಲವಾಗಿ ತೋರುತ್ತ ಜಂಗಮಪ್ರಜ್ಞೆಯನ್ನು ಬೆಳೆಸಿಕೊಳ್ಳುವುದರ ಜೊತೆಗೆ ವ್ಯಕ್ತಿ ತನ್ನ ಬದುಕಿನ ಸಾರ್ಥಕತೆಯನ್ನೂ ಕಾಣಬಹುದೆಂಬುದು ಅವರ ಇಂಗಿವಾಗಿತ್ತು.
ದೇವರು ಮತ್ತು ಧರ್ಮದ ಬಗೆಗೆ ಐನ್‍ಸ್ಟೈನ್ ನಿಲುವನ್ನು ಇದಮಿತ್ತಂ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟ. ಅನೇಕ ಸಂದರ್ಭಗಳಲ್ಲಿ ಹೇಳಿರುವ ಅವರ ಹೇಳಿಕೆಗಳನ್ನು ಗಮನಿಸೋಣ.
• ನಾನೊಬ್ಬ ಧಾರ್ಮಿಕನಾದ ನಾಸ್ತಿಕ.
• ನಾನು ನಾಸ್ತಿಕನೂ ಅಲ್ಲ, ಸರ್ವ ಧರ್ಮದಲ್ಲಿ ನಂಬಿಕೆಯುಳ್ಳವನೂ ಅಲ್ಲ.
• ದೇವರ ಬಗ್ಗೆ ಹೌದು ಅಥವಾ ಇಲ್ಲ ಎಂದು ಸರಳವಾಗಿ ಹೇಳಲು ಬರುವುದಿಲ್ಲ.
• ನಮ್ಮ ಕೃತ್ಯಗಳೇ ಆ ದೈವದ ಉದ್ದೇಶಗಳನ್ನು ರೂಪಿಸುತ್ತವೆ. ನಮ್ಮ ದೌರ್ಬಲ್ಯಗಳ ಪ್ರತೀಕವಾಗಿ ದೈವವಿದೆ ಎನ್ನುವಂತಹ ವಿಚಾರಗಳನ್ನು ಕಲ್ಪಿಸಿಕೊಳ್ಳಲಾರೆ. ತಾನು ಸೃಷ್ಟಿಸಿದ ಮಕ್ಕಳನ್ನೇ ಅವರ ನಡತೆಗಳಿಗೆ ರಕ್ಷಿಸುವ ಶಿಕ್ಷಿಸುವ ದೇವರು ಉಂಟೆ?
• ನಾನು ಸ್ಪಿನೋಝಾ ಪ್ರತಿಪಾದಿಸುವ ದೇವರನ್ನು ನಂಬುತ್ತೇನೆ.
• ವಿಶ್ವದ ಅತ್ಯಂತ ಕ್ರಮಬದ್ಧ ರೀತಿಯ ರಚನೆ ಹಾಗೂ ವರ್ತನೆಗಳಲ್ಲಿ ದೇವರು ಅಭಿವ್ಯಕ್ತಗೊಂಡಿದ್ದಾನೆ. ಇದನ್ನು ಬಿಟ್ಟು ಮನುಷ್ಯರ ಕರ್ತವ್ಯಗಳಿಗೆ ಮತ್ತು ಬವಣೆಗಳಿಗೆ ಕಾಳಜಿ ವಹಿಸುವಂತ ದೇವರಿದ್ದಾನೆ ಎನ್ನುವುದರಲ್ಲಿ ನನಗೆ ನಂಬಿಕೆ ಇಲ್ಲ.
• ನಾನು ನಾಸ್ತಿಕನಾಗಲಾರೆ. ನಮ್ಮ ಮನಸ್ಸಿಗೊಂದು ಮಿತಿ ಇದೆ. ಆ ಮಿತಿಯಿಂದಾಗಿ ನಮ್ಮನ್ನು ಸೇರಿದಂತೆ ಇಡೀ ಸೃಷ್ಟಿಯನ್ನು ನಾವು ತಿಳಿಯಲಾರೆವು ಎನ್ನುವ ಭಾವನೆ ನನಗೆ ವಿನೀತನಾಗಿರುವುದನ್ನು ಕಲಿಸಿದೆ.
• ನಾನು ದೇವರ ಬಗ್ಗೆ ಅಜ್ಞಾತ. ಬದುಕನ್ನು ಉನ್ನತಗೊಳಿಸಿಕೊಳ್ಳಲು ಉತ್ತಮಗೊಳಿಸಿಕೊಳ್ಳಲು ನೈತಿಕ ಮೌಲ್ಯಗಳು ಅತ್ಯಂತ ಪ್ರಮುಖವಾದವೇ ಹೊರತು ಅದಕ್ಕಾಗಿ ರಕ್ಷಿಸುವ ಶಿಕ್ಷಿಸುವ ನಿಯಮಗಳನ್ನು ರೂಪಿಸುವಂತಹ ದೇವನೊಬ್ಬನು ಬೇಕಿಲ್ಲ ಎಂಬ ವಿವೇಕ ನನ್ನಲ್ಲಿ ಬೇರೂರಿದೆ.
• ದೇವರ ಬಗ್ಗೆ ನಮ್ಮ ಮನಸ್ಥಿತಿ ಬೃಹತ್ ಗ್ರಂಥಾಲಯದೊಳಗೆ ಹೊಕ್ಕಿದ ಮಗುವಿನ ಮನಸ್ಥಿತಿಯಂತೆ. ಅಲ್ಲಿಯ ಗೋಡೆಗಳಲ್ಲಿ ತುಂಬಿರುವ ಅನೇಕ ಭಾಷೆಯ ಗ್ರಂಥಗಳನ್ನು ನೋಡಿ ಆ ಮಗು ಯಾರೋ ಈ ಪುಸ್ತಕಗಳನ್ನು ಬರೆದಿರಬೇಕು ಅಂದುಕೊಳ್ಳುತ್ತದೆ. ಅವುಗಳಲ್ಲಿನ ಭಾಷೆ ತಿಳಿದಿಲ್ಲ.
ತನಗೆ ಗೊತ್ತಾಗದಿದ್ದರೂ ಆ ಪುಸ್ತಕಗಳ ಜೋಡಣೆಯಲ್ಲಿ ಏನೋ ಒಂದು ಕ್ರಮವಿದೆ, ಅದು ಹೀಗಿರಬಹುದು, ಇಲ್ಲ ಹಾಗಿರಬಹುದು ಎಂದು ಮಗು ಯೋಚಿಸಬಹುದೇನೋ. ಅಷ್ಟೇ. ನಾವು ಕೂಡ ಒಂದು ಅದ್ಭುತವಾದ ಜಗತ್ತನ್ನು ನೋಡುತ್ತಿದ್ದೇವೆ. ಆ ರಚನೆಯ ಹಿಂದೆ ನಿರ್ದಿಷ್ಟ ನಿಯಮಗಳಿವೆ. ಅವು ನಮಗೆ ಅಸ್ಪಷ್ಟವಾಗಷ್ಟೇ ಗೊತ್ತು. ಮಗುವಿನಂತೆ ಇತಿಮಿತಿಗಳಿಗೆ ಒಳಗಾದ ನಮ್ಮ ಮನಸ್ಸು ಈ ನಕ್ಷತ್ರ ಮಂಡಲಗಳನ್ನು ನಿಯಂತ್ರಿಸುತ್ತಿರುವ ರಹಸ್ಯಮಯವಾದ ಮೂಲಬಲವನ್ನು ಗ್ರಹಿಸಲು ಅಶಕ್ಯ. ಇಂತಹ ಪರಿಸ್ಥಿತಿಯಲ್ಲಿ, ಸಾಕಷ್ಟು ಜ್ಞಾನ ಹೊಂದಿರದ ನಾವು ಆ ಅದ್ಭುತದ ಇರವಿಗೆ ತೃಪ್ತಿ ಪಡೋಣ. ವ್ಯಷ್ಟಿ ಮತ್ತು ಸಮಷ್ಟಿಯ ಬದುಕಿನ ಸಮಸ್ಯೆಗಳು ನಮ್ಮವೇ. ಬದುಕಿನ ಏಳಿಗೆಗೆ ಅನಿವಾರ್ಯ ಅಂಶಗಳಾದ ನೈತಿಕ ಮೌಲ್ಯ ಮತ್ತು ಜವಾಬ್ದಾರಿಗಳೂ ನಮ್ಮವೇ ಎನ್ನುವ ಐನ್‍ಸ್ಟೈನ್ ಅವು ಯಾವುದೋ ಲೋಕದಿಂದ ಬಂದಂತಹ ವಿಧಿ ವಿಧಾನಗಳಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ವರ್ಗ ನರಕಗಳು ಬೇರಿಲ್ಲ ಕಾಣಿರೋ, ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ ಎಂದು ಬಸವಣ್ಣನವರು ಉದ್ಗಾರವೆತ್ತಿದುದನ್ನೇ ವಿಜ್ಞಾನಿ ಐನ್‍ಸ್ಟೈನ್ ಪ್ರತಿಬಿಂಬಿಸುವಂತೆ ಕಾಣುತ್ತದೆ.
ಮೇಲಿನ ಹೇಳಿಕೆಗಳು ಐನ್‍ಸ್ಟೈನ್‍ರ ಬದುಕಿನ ವಿವಿಧ ಕಾಲಘಟ್ಟಗಳಲ್ಲಿ ಬಂದಿರುವಂತೆ ಕಂಡರೂ ಅವುಗಳಲ್ಲಿ ಅವರ ಪ್ರಾಮಾಣಿಕತೆ ಮತ್ತು ಕಾಳಜಿಗಳು ಎದ್ದುಕಾಣುತ್ತವೆ. ಇವು ಅವರ ಬೆಳವಣಿಗೆಯನ್ನೂ ಸೂಚಿಸುತ್ತವೆ. ಶಿವರಾಮ ಕಾರಂತರು ನಾವು ಬೆಳೆದಂತೆ ನಮ್ಮ ದೇವರೂ ಬೆಳೆಯುತ್ತಾನೆ ಎಂದಿರುವುದನ್ನು ಇಲ್ಲಿ ಐನ್‍ಸ್ಟೈನ್‍ಗೂ ಅನ್ವಯಿಸಬಹುದು.
ತನ್ನ ಮೇಲಿನ ಎಲ್ಲ ಹೇಳಿಕೆಗಳಿಗೆ ಒಂದು ಸಾರಾಂಶವನ್ನು ನೀಡುವ ತೆರದಲ್ಲಿ ಐನ್‍ಸ್ಟೈನ್ ಮುಂದುವರಿದು ಅಗಾಧ ವಿಶ್ವದ ಅದ್ಭುತ ರಚನೆಯನ್ನಾಗಲೀ ಅದರ ಹಿಂದಿರುವ ನಿಯಮಗಳನ್ನಾಗಲೀ ನಾವು ಸಂಪೂರ್ಣ ಗ್ರಹಿಸಲು ಸಾಧ್ಯವಿಲ್ಲ. ನಮಗಿರುವ ಅತ್ಯಲ್ಪ ಬುದ್ಧಿ ಗ್ರಹಿಸುವುದೇ ಕಿಂಚಿತ್ ಮಾತ್ರ. ಇಂತಹ ಕಿಂಚಿತ್ತಿಗೇ ಇರುವ ಅದ್ಭುತ ವೈವಿಧ್ಯತೆ ನನ್ನಲ್ಲಿ ಗ್ರಹಿಸಲಾಗದ ಇಡೀ ವಿಶ್ವದಲ್ಲಿ ಅನನ್ಯ ಶಕ್ತಿಯಿದೆ ಎಂಬ ಗಂಭೀರ ಭಾವನಾತ್ಮಕ ಮನೋನಿಶ್ಚಯವನ್ನು ಉಂಟುಮಾಡಿದೆ. ಇದೇ ನನ್ನ ದೈವ ಕಲ್ಪನೆ ಎಂದಿದ್ದಾರೆ. ನನ್ನ ಇತಿಮಿತಿಯ ನೋಟಕ್ಕೆ ದಕ್ಕಿರುವ ಪ್ರಪಂಚದಲ್ಲಿ ಅಭಿವ್ಯಕ್ತಗೊಂಡಿರುವ ಅನಂತಸದೃಶವಾಗಿರುವ ಈ ಉನ್ನತ ಶಕ್ತಿಯನ್ನು ವಿನಮ್ರನಾಗಿ ಮೆಚ್ಚುತ್ತಿರುವುದೇ ನನ್ನ ಧಾರ್ಮಿಕತೆ ಎಂದು ನುಡಿದಿದ್ದಾರೆ. ಮುಂದುವರೆದು ವೈಜ್ಞಾನಿಕ ಅಧ್ಯಯನದ ಮೂಲಕ ಇಂಚಿಂಚು ಗ್ರಹಿಸುತ್ತ ಪ್ರಪಂಚದ ರಚನೆಯ ಸೊಗಸಾದ ವೈಚಾರಿಕತೆಯ ಬಗ್ಗೆ ಒಳನೋಟವನ್ನು ಪಡೆಯಬಹುದು ಎಂಬುದು ಐನ್‍ಸ್ಟೈನ್‍ರ ಆಶಯ. ನಮ್ಮ ದೃಷ್ಟಿಯನ್ನು ವಿಶಾಲಗೊಳಿಸುವ ಈ ವಿಶಿಷ್ಟ ಅನುಭವಸಾರವನ್ನೇ ಅವರು ವಿಶ್ವಧರ್ಮ (Cosmic Religion) ಎಂದು ಕರೆದಿದ್ದಾರೆ. ಸಾರ್ವಕಾಲಿಕ ಸತ್ಯತೋರುವ, ಮನುಷ್ಯನ ಸ್ವಾತಂತ್ರ್ಯ ಮತ್ತು ಜವಾಬ್ದಾರಿ ಎರಡಕ್ಕೂ ಧಕ್ಕೆ ತರದಿರುವ, ಸುಗಮ ಬದುಕಿಗೆ ದಾರಿ ತೋರುವ, ತಾರತಮ್ಯ ಮಾಡದಿರುವ, ಪ್ರೇರಣಾಶಕ್ತಿ ನೀಡುವಂತಹ ವಿಶ್ವಧರ್ಮ ಕೇವಲ ವಿಚಾರವಲ್ಲ, ಅದು ನಮ್ಮ ಅನುಭವವೂ ಆಗಬೇಕು. ಮನುಷ್ಯಕಲ್ಪಿತ ದೇವರು ಅದರಲ್ಲಿಲ್ಲ. ಲೌಕಿಕ ಆಸೆ ಆಮಿಷಗಳು ಕೇವಲ ಒಣಹೆಮ್ಮೆಯೆಂಬುದನ್ನು ಇಲ್ಲಿ ವ್ಯಕ್ತಿ ಅರಿಯುವುದಲ್ಲದೆ ಭೌತಿಕ ಪ್ರಕೃತಿಯಲ್ಲೂ ಭಾವನಾತ್ಮಕ ಪ್ರಪಂಚದಲ್ಲೂ ವ್ಯಕ್ತಗೊಳ್ಳುವ ಅದ್ಭುತ ಓರಣವನ್ನೂ ಅದರ ಉದಾತ್ತತೆಯನ್ನೂ ಅನುಭವಿಸುತ್ತಾನೆ. ಇಂತಹ ಅನುಭವಗಳಿಂದ ನಾವೂ ವಿಶ್ವದೊಡನೆ ಸಾಮರಸ್ಯದಿಂದ ಅನುರಣಿಸಲು ಅನುವಾಗುತ್ತದೆ ಎನ್ನುವುದು ಐನ್‍ಸ್ಟೈನ್‍ರ ನಿಲುವಾಗಿತ್ತು. ದೈವದ ಇರುವಿಕೆ ಮತ್ತು ಸ್ವರೂಪದ ಬಗ್ಗೆ ಹಾಗೂ ಧಾರ್ಮಿಕತೆಯ ಬಗ್ಗೆ ಬಸವಣ್ಣ ಮತ್ತು ಐನ್‍ಸ್ಟೈನ್‍ರ ನಿಲುವುಗಳಲ್ಲಿ ಸಮಾನ ಅಂಶಗಳಿವೆ. ಇದೂ ಕೂಡ ಒಂದು ಅದ್ಭುತ ಸಾಮ್ಯ.
ತಮ್ಮ ವಿಶ್ವಧರ್ಮದ ಬಗ್ಗೆ ಇನ್ನಷ್ಟು ವಿಸ್ತರಿಸುತ್ತ, ನಾವು ಎರಡು ರೀತಿಯಲ್ಲಿ ಬದುಕಬಹುದು- ನಾವು ಕಾಣುವ ಪ್ರತಿಯೊಂದೂ ಸಾಮಾನ್ಯವೆಂದು ಅಥವಾ ಪ್ರತಿಯೊಂದೂ ಪವಾಡವೆಂದು ಎನ್ನುವಲ್ಲಿ ಐನ್‍ಸ್ಟೈನ್ ಅದೆಷ್ಟು ಕುತೂಹಲಿಗಳಾಗಿದ್ದರು ಎನಿಸುತ್ತದೆ. ಜೀವನವೆಂದರೆ ಪವಿತ್ರ, ಅದೊಂದು ಸರ್ವೋಚ್ಚ ಮೌಲ್ಯ. ಅಂತೆಯೇ ಪ್ರತಿಯೊಬ್ಬರ ಜೀವನ ಉದಾತ್ತವೂ ಸುಂದರವೂ ಆಗಿರುವಂತೆ ಸಹಕರಿಸುವುದರಲ್ಲಿ ವ್ಯಕ್ತಿಯ ಜೀವನಕ್ಕೊಂದು ಅರ್ಥವಿದೆ. ಮಾನವ ಸಂಬಂಧಗಳಲ್ಲಿ ಸಾಮರಸ್ಯ ಮತ್ತು ಸೌಂದರ್ಯಗಳಿರುವಂತೆ ನಮ್ಮ ಬದುಕಿನ ನಡೆಯಿರಬೇಕು. ಪ್ರಾಣಿಗಳಿಗೆ ಮಾತ್ರವಲ್ಲದೆ ಮರಗಳು ಮತ್ತು ಸಸ್ಯಗಳಿಗೂ ಭಾವನೆಗಳಿವೆ. ಎಲ್ಲಾ ಜೀವಗಳನ್ನು ಗೌರವಿಸುವುದು ಮಾನವಕುಲದ ಕರ್ತವ್ಯವಾಗಿದೆ, ಈ ಪ್ರಪಂಚದಿಂದ ನಾವೆಷ್ಟು ಪಡೆದೆವೋ ಕನಿಷ್ಟ ಪಕ್ಷ ಅದಕ್ಕೆ ಸಮಾನವಾದಷ್ಟನ್ನಾದರೂ ಹಿಂತಿರುಗಿ ಕೊಡಬೇಕೆಂಬ ಬಾಧ್ಯತೆ ನಮಗಿರಬೇಕು ಎಂದಿದ್ದಾರೆ. ಧಾರ್ಮಿಕತೆಯನ್ನು ಐನ್‍ಸ್ಟೈನ್ ಹೆಚ್ಚಾಗಿ ಭಾವನಾತ್ಮಕ ನೆಲೆಗಟ್ಟಿನಲ್ಲಿ ವ್ಯಕ್ತಪಡಿಸಿದಂತೆ ಕಂಡರೂ ಸಮಾಜಕ್ಕೆ ನಾವು ಋಣಿಗಳಾಗಿದ್ದೇವೆ ಎನ್ನುವುದನ್ನು ಮರೆತಿಲ್ಲ. ಬಸವಣ್ಣನವರಾದರೋ ನೈತಿಕ, ಆರ್ಥಿಕ ಮತ್ತು ಸಾಮಾಜಿಕ ನೆಲೆಗಟ್ಟಿನಲ್ಲಿ ಧಾರ್ಮಿಕತೆಯನ್ನು ನೋಡುತ್ತ ನಮ್ಮ ಬದುಕು ಕಾಯಕನಿಷ್ಠೆ ಮತ್ತು ದಾಸೋಹಗಳಿಂದ ಕೂಡಿ ಜಂಗಮ ಸೇವೆ ಕ್ರಿಯಾಶೀಲವೂ ದಯಾಪೂರಿತವೂ ಆಗಿರಬೇಕೆಂದು ಬಯಸಿದ್ದಾರೆ.
ಬಸವಣ್ಣ ಮತ್ತು ಐನ್‍ಸ್ಟೈನ್‍ರ ವ್ಯಕ್ತಿತ್ವ ಮತ್ತು ಆದರ್ಶಗಳಿಂದ ನಾವು ಕಲಿಯಬಹುದಾದದ್ದು ಬಹಳಷ್ಟಿದೆ. ನಮ್ಮ ವ್ಯಕ್ತಿಗತವಾದ ಬದುಕಾಗಲೀ, ಸಮಷ್ಟಿಯ ಬದುಕಾಗಲೀ ಮೊಟ್ಟಮೊದಲು ಒಂದು ಮೂಲತತ್ವಕ್ಕೆ ಬದ್ಧವಾಗಿರಬೇಕು. ಅದೆಂದರೆ ವ್ಯಷ್ಟಿ ಮತ್ತು ಸಮಷ್ಟಿಗಳು ಇಡೀ ಸೃಷ್ಟಿಯ ಒಂದು ಭಾಗ. ಸೃಷ್ಟಿಯ ಕ್ರಮಬದ್ಧ ಜಂಗಮ ವ್ಯವಸ್ಥೆಯಲ್ಲಿ ನಮ್ಮ ವರ್ತನೆಗಳೂ ಸಾಮರಸ್ಯದಿಂದ ಅನುರಣನಗೊಳ್ಳಬೇಕು. ಸೃಷ್ಟಿಯ ಉಗಮಕ್ಕೆ ಇರುವಿಕೆಗೆ ಕಾರಣ ಉದ್ದೇಶಗಳು ಏನು ಎಂಬುದನ್ನು ನಿಸ್ಸಂದೇಹವಾಗಿ ಅರಿಯಲಾಗಿಲ್ಲ. ಅದನ್ನು ನಮ್ರತೆಯಿಂದ ಒಪ್ಪಿಕೊಳ್ಳುತ್ತ ಬಸವಣ್ಣ ಮತ್ತು ಐನ್‍ಸ್ಟೈನ್ ಇಬ್ಬರೂ ಸೇರಿದಂತೆ ಅನೇಕ ದಾರ್ಶನಿಕರು ವಿಶ್ವಾತ್ಮಕವಾದ ತತ್ವದಲ್ಲಿ ಸೃಷ್ಟಿಯ ಆಗುಹೋಗುಗಳು ನಡೆಯುತ್ತವೆ ಎಂದು ಮನಗಂಡಿದ್ದಾರೆ. ವಿಜ್ಞಾನವೂ ವಿಶ್ವದ ಬಗ್ಗೆ ನಿರಂತರ ಹುಡುಕಾಟದಲ್ಲಿ ತೊಡಗಿದೆ. ಇದುವರೆಗಿನ ವೈಜ್ಞಾನಿಕ ಸಂಶೋಧನೆಗಳೆಡೆಗೆ ಒಮ್ಮೆ ದೃಷ್ಟಿ ಬೀರಿದರೆ ಅನೇಕ ಸಂಗತಿಗಳನ್ನು ನಾವು ಕಂಡುಕೊಂಡಿದ್ದೇವೆ. ನಮ್ಮ ಸೂರ್ಯನೊಂದು ಸಾಮಾನ್ಯ ನಕ್ಷತ್ರ. ಇವನಿಗಿಂತ ನೂರಾರು ಪಟ್ಟು ವ್ಯಾಪ್ತಿಯಲ್ಲಿ ತೂಕದಲ್ಲಿ ಹೆಚ್ಚಿರುವ ನಕ್ಷತ್ರಗಳಿವೆ. ನಮ್ಮ ಸೂರ್ಯನಂತಹ ಕೋಟಿಗಟ್ಟಲೆ ನಕ್ಷತ್ರಗಳು ಗುಂಪುಗೂಡಿರುವುದೇ ನಮ್ಮ ಆಕಾಶಗಂಗೆ ಗ್ಯಾಲಾಕ್ಸಿ. ಇದಕ್ಕಿಂತಲೂ ಹೆಚ್ಚು ನಕ್ಷತ್ರಗಳುಳ್ಳ ಅದೆಷ್ಟೋ ಕೋಟಿ ಗ್ಯಾಲಾಕ್ಸಿಗಳೇ ಇವೆ ವಿಶ್ವದಲ್ಲಿ. ಸಾವಿರಾರು ಗ್ಯಾಲಾಕ್ಸಿಗಳೆಲ್ಲ ಒಟ್ಟುಗೂಡಿದ ಗ್ಯಾಲಾಕ್ಸಿಗಳೂ ಇವೆ. ಇಂತಹ ಅಗಾಧ ವಿಶ್ವದಲ್ಲಿ ಒಂದು ಸಾಧಾರಣ ಗ್ಯಾಲಾಕ್ಸಿಯ ಸಾಧಾರಣ ನಕ್ಷತ್ರದ ಸುತ್ತ ಸುತ್ತುತ್ತಿರುವ ಒಂದು ಸಾಧಾರಣ ಗ್ರಹದ ಮೇಲಿನ ಜೀವಿಗಳು ನಾವು. ನಮ್ಮ ಭೂಮಿಯ ವ್ಯಾಸ 12 ಸಾವಿರ ಕಿಲೋಮೀಟರ್. ಸೂರ್ಯನ ವ್ಯಾಪ್ತಿ 14 ಲಕ್ಷ ಕಿ.ಮೀ. ಸೌರವ್ಯೂಹದ ವ್ಯಾಪ್ತಿ 15000 ಕೋಟಿ ಕಿ.ಮೀ. ನಮ್ಮ ಸೂರ್ಯನಿರುವ ಆಕಾಶಗಂಗೆಯ ವ್ಯಾಪ್ತಿ 10000 ಕೋಟಿ ಕೋಟಿ ಕಿ.ಮೀ. ವಿಶ್ವದ ವ್ಯಾಪ್ತಿ 600 ಕೋಟಿ ಕೋಟಿ ಕೋಟಿ ಕಿ.ಮೀ! ಭೂಮಿಯೂ ಸೇರಿದಂತೆ ಆಕಾಶಕಾಯಗಳ ವೇಗದ ಬೆಲೆಯನ್ನು ಗಮನಿಸಿದರೆ, ನಮ್ಮ ಭೂಮಿ ಸೂರ್ಯನ ಸುತ್ತ ಗಂಟೆಗೆ 1 ಲಕ್ಷ ಕಿಲೋಮೀಟರ್ ವೇಗದಲ್ಲಿ ಸುತ್ತುತ್ತಿದೆ. ಸೂರ್ಯ ಆಕಾಶಗಂಗೆ ಗ್ಯಾಲಾಕ್ಸಿ ಸುತ್ತ ಗಂಟೆಗೆ 7 ಲಕ್ಷ ಕಿಲೋ ಮೀಟರ್ ದೂರ ಚಲಿಸುತ್ತಿದ್ದಾನೆ. ನಮ್ಮ ಆಕಾಶಗಂಗೆ ಗಂಟೆಗೆ 11 ಲಕ್ಷ ಕಿಲೋ ಮೀಟರ್ ವೇಗದಲ್ಲಿ ಆಂಡ್ರೊಮೇಡಾ ಗ್ಯಾಲಾಕ್ಸಿಯೆಡೆಗೆ ಧಾವಿಸುತ್ತಿದೆಯಂತೆ. ಕಾಲದ ದೃಷ್ಟಿಯಿಂದ ನೊಡಿದರೆ ವಿಶ್ವದ ಉಗಮವಾದದ್ದು 1400 ಕೋಟಿ ವರ್ಷಗಳ ಹಿಂದೆ. ಭೂಮಿ ಹುಟ್ಟಿದ್ದು 500 ಕೋಟಿ ವರ್ಷಗಳ ಹಿಂದೆ. ಮನುಷ್ಯ ಜನ್ಮ ತಾಳಿದ್ದು ಎರಡರಿಂದ ಮೂರು ಲಕ್ಷ ವರ್ಷಗಳ ಹಿಂದೆ. ಅಂದರೆ ಭೂಮಿ ಹುಟ್ಟಿ 499 ಕೋಟಿ ವರ್ಷಗಳು ಸಂದು ನಂತರ 97 ಲಕ್ಷವರ್ಷಗಳವರೆಗೂ ಮನುಷ್ಯ ಹುಟ್ಟಿರಲಿಲ್ಲ. ಭೂಮಿಯ ವಯಸ್ಸನ್ನು ಒಂದು ದಿನಕ್ಕೆ ತಾಳೆಹಾಕಿ ನೋಡಿದರೆ ಭೂಮಿ ಹುಟ್ಟಿದ್ದು ಮಧ್ಯರಾತ್ರಿ 12 ಗಂಟೆಗೆ, ಜೀವದ ಸುಳುಹು ಕಂಡದ್ದು ಮುಂಜಾನೆ 4 ಗಂಟೆಗೆ, ಏಕಜೀವಕೋಶದ ಆಲ್ಗೆಗಳು ಕಾಣಿಸಿಕೊಂಡದ್ದು ಮಧ್ಯಾಹ್ನ 2 ಗಂಟೆಗೆ, ಮರಗಿಡಗಳು ರಾತ್ರಿ 9.52ಕ್ಕೆ, ಸಸ್ತನಿಗಳು ರಾತ್ರಿ 11.39ಕ್ಕೆ, ಮನುಷ್ಯ ಜನಿಸಿದ್ದು ರಾತ್ರಿ 11 ಗಂಟೆ, 58 ನಿಮಿಷ, 43 ಸೆಕೆಂಡುಗಳಾದಾಗ! ಇಷ್ಟೆಲ್ಲ ಅದ್ಭುತ ವ್ಯಾಪ್ತಿ, ವೇಗ ಮತ್ತು ಕಾಲಘಟ್ಟಗಳನ್ನು ವಿಜ್ಞಾನ ತನ್ನ ಪ್ರಯೋಗಗಳಿಂದ ಪ್ರಮಾಣಿಸಿದೆ. ಹೀಗೆ ವಿಶ್ವದ ಅಗಾಧ ವ್ಯಾಪ್ತಿಯ ಎದುರು ಭೂಮಿ ಒಂದು ಬಿಂದು ಮಾತ್ರವಾಗಿದೆ. ಭೂಮಿಯೂ ಸೇರಿದಂತೆ ಇನ್ನಿತರ ಆಕಾಶಕಾಯಗಳು ನಮ್ಮ ಊಹೆಗೂ ನಿಲುಕದ ವೇಗಹೊಂದಿ ವಿಶ್ವದಲ್ಲಿ ಸಂಚರಿಸುತ್ತಿವೆ. 500 ಕೋಟಿ ವರ್ಷಗಳ ಹಿಂದೆ ಹುಟ್ಟಿದ ಈ ಭೂಮಿಯ ಮೇಲೆ ಇತ್ತೀಚೆಗಷ್ಟೇ ನಾವು ಹುಟ್ಟಿದ್ದೇವೆ.
ಇಂತಹ ವೈಜ್ಞಾನಿಕ ಸತ್ಯದ ಬೆಳಕಿನಲ್ಲಿ ನಮ್ಮ ಆಲೋಚನೆಗಳು ಹೇಗಿರಬೇಕು? ನಮ್ಮ ಅವಧಿ ಅದೆಷ್ಟೇ ನಗಣ್ಯವೆನಿಸಿದರೂ ಈ ವಿಶ್ವದ ಬಗ್ಗೆ ವೈಜ್ಞಾನಿಕವಾಗಿ ಬಹಳಷ್ಟನ್ನು ತಿಳಿದುಕೊಂಡಿರುವುದು ಒಂದು ವಿಸ್ಮಯದ ಸಂಗತಿಯಾದರೂ ತಿಳಿಯದಿರುವುದು ಪರ್ವತಗಾತ್ರದಲ್ಲಿದ್ದು ತಿಳಿದಿರುವುದು ಪರಮಾಣುಗಾತ್ರವಷ್ಟೇ ಎಂಬ ಅರಿವು ನಮಗಿರಬೇಕಲ್ಲವೆ? ಆಧಾರರಹಿತ ಕಲ್ಪನೆಗಳನ್ನೇ ಸತ್ಯಗಳೆಂದು ಜನಮಾನಸದಲ್ಲಿ ಬಿತ್ತುತ್ತ ಮೌಢ್ಯಗಳ ಬಲೆಯಲ್ಲಿ ಇತರರ ಜೊತೆ ನಾವೂ ಸಿಲುಕಿ ನರಳುತ್ತಿರುವುದಾದರೂ ಏಕೆ? ನಮ್ಮನ್ನು ಹೊರತಾಗಿ ಇನ್ನೆಲ್ಲ ಚರಾಚರಗಳಿಗೆ ವಿಶ್ವದ ಬಗೆಗಿನ ಅರಿವು ನಮ್ಮಷ್ಟಿಲ್ಲದಿದ್ದರೂ ಅವು ವಿಶ್ವದ ಕ್ರಮಬದ್ಧ ರಚನೆ ಮತ್ತು ವರ್ತನೆಗಳಿಗೆ ಅನುರೂಪವಾಗಿ ಸ್ಪಂದಿಸುತ್ತ ಸಮತೋಲನೆಯೆಡೆಗೆ ಸಾಗಿದ್ದರೂ ನಾವೇಕೆ ವ್ಯಷ್ಟಿ ಮತ್ತು ಸಮಷ್ಟಿಯ ಬದುಕನ್ನು ಒಟ್ಟಾರೆ ಅಸ್ತವ್ಯಸ್ತಗೊಳಿಸಿಕೊಂಡಿದ್ದೇವೆ, ಅತಂತ್ರಗೊಳಿಸಿಕೊಂಡಿದ್ದೇವೆ? ಸಸ್ಯವರ್ಗ ಪ್ರಾಣಿವರ್ಗಗಳಂತೆ ಸೃಷ್ಟಿಯ ಜಂಗಮತ್ವದೊಡನೆ ಸಹಚರಿಸದೆ ಆ ಸೃಷ್ಟಿಯನ್ನೇ ನಮ್ಮ ದುರ್ವರ್ತನೆಗಳ ಮೂಲಕ ಅತಿಕ್ರಮಣ ಮಾಡುತ್ತ ಸೃಷ್ಟಿಯನ್ನೂ ಅದರ ಜೊತೆಜೊತೆಗೆ ನಮ್ಮನ್ನೂ ನಾಶಗೊಳಿಸುವತ್ತ ನಾವೇಕೆ ಮುನ್ನುಗ್ಗುತ್ತಿದ್ದೇವೆ… ಒಂದು ವರದಿಯ ಪ್ರಕಾರ ನಾವಿರುವ ಪ್ರಪಂಚವನ್ನು 21 ಸಾರಿ ಧ್ವಂಸಗೊಳಿಸಬಲ್ಲ ಶಸ್ತ್ರಾಸ್ತ್ರಗಳನ್ನು ದಶಕಗಳ ಹಿಂದೆಯೇ ಶೇಖರಿಸಿಟ್ಟುಕೊಂಡಿದ್ದೇವೆ. ಈಗ ಇನ್ನೆಷ್ಟು ಹೆಚ್ಚು ಬಾರಿ ಧ್ವಂಸಮಾಡಲು ಅನುವಾಗಿದ್ದೇವೆಯೋ ಏನೋ ಗೊತ್ತಿಲ್ಲ. ವಸ್ತುಸ್ಥಿತಿ ಹೀಗಿದ್ದರೂ ಸಸ್ಯ ಮತ್ತು ಪ್ರಾಣಿ ವರ್ಗಗಳಿಗೆ ಇಲ್ಲದ ವಿವೇಕವೆಂಬ ಗುಣ ನಮ್ಮಲ್ಲಿದೆ ಎಂದು ಮನುಷ್ಯವರ್ಗ ತನ್ನನ್ನೇ ಅತ್ಯಂತ ಶ್ರೇಷ್ಠ ವರ್ಗವೆಂದು ಕರೆದುಕೊಂಡಿದೆ. ಹಿರಿಯ ವಿಮರ್ಶಕರಾದ ಡಾ. ಪ್ರಭುಶಂಕರ ಅವರು “ಮನುಷ್ಯ ಹೀಗೆ ಕರೆದುಕೊಳ್ಳುವುದಕ್ಕೆ ಮೊದಲು ಪ್ರಾಣಿ ಮತ್ತು ಸಸ್ಯವರ್ಗವನ್ನು ಕೇಳಿದ್ದನೆ?” ಎಂದು ವ್ಯಂಗ್ಯದಿಂದ ನುಡಿದಿದ್ದಾರೆ.
ಅತಿಯಾದಲ್ಲಿ ಅಮೃತವೂ ವಿಷವಾಗುತ್ತದೆ. ತನ್ನಂತೆ ಪರರ ಬಗೆಯದ ಸ್ವಾರ್ಥಪರ ದುರ್ನಡತೆ, ಸಂಪತ್ತನ್ನು ಕ್ರೋಢೀಕರಿಸಿಕೊಳ್ಳುವ ದುರಾಸೆ, ಅಧಿಕಾರದ ವ್ಯಾಮೋಹ, ಅನ್ಯಧರ್ಮ ಅಸಹಿಷ್ಣುತೆ ಇವೇ ಮುಂತಾದ ಅವಗುಣಗಳು ಮಿತಿಮೀರಿ ಪ್ರಕಟಗೊಳ್ಳುತ್ತ ಮನುಷ್ಯನ ಬುದ್ಧಿ ದಾರಿತಪ್ಪುವಂತೆ ಮಾಡಿವೆ. ಸನ್ನಡತೆಯ ದಾರಿ ಕಾಣದಂತೆ ಕಣ್ಣುಗಳಿಗೆ ಪೊರೆಯಾಗಿ ಆವರಿಸಿವೆ. ನಾವು ಇಲ್ಲಿ ಬಹುಕಾಲ ಉಳಿಯಲು ಬಂದವರಲ್ಲ. ಇರುವಷ್ಟು ದಿನ ಎಲ್ಲರ ಬದುಕು ನೆಮ್ಮದಿಯಿಂದಿರುವಂತೆ ನಾವೂ ಹೆಜ್ಜೆಯಿಡೋಣ ಎನ್ನುವ ಐನ್‍ಸ್ಟೈನ್ ವಾಣಿ ನಮ್ಮನ್ನು ಎಚ್ಚರಿಸಬೇಕು. ದಯವಿಲ್ಲದ ಧರ್ಮವಾವುದಯ್ಯಾ, ದಯವಿರಬೇಕು ಸಕಲ ಪ್ರಾಣಿಗಳಲ್ಲಿ ದಯವೇ ಧರ್ಮದ ಮೂಲವಯ್ಯಾ ಎನ್ನುವ ಬಸವವಾಣಿ ನಮ್ಮ ಅಂತಕರಣವನ್ನು ಮುಟ್ಟಿತಟ್ಟಬೇಕು.
ವಿಜ್ಞಾನ ತೋರಿರುವ ವಾಸ್ತವ ಸತ್ಯದೆದುರು ಧರ್ಮ ನಿರೀಕ್ಷಿಸುವ ತರತಮವಿಲ್ಲದ ಸರ್ವಹಿತದ ಸಮಪಾಲಿನ ಸಹಬಾಳ್ವೆಯ ಆದರ್ಶಗಳೆದುರು ನಮ್ಮ ಮಿತಿಯನ್ನು ಮನಗಂಡು ಕ್ರಿಯಾರೂಪದಲ್ಲಿ ಜರುಗುತ್ತಿರುವ ಈ ಸೃಷ್ಟಿಯ ಜಂಗಮತ್ವವನ್ನು ಕಂಡುಕೊಳ್ಳುತ್ತ, ಸ್ವಾನುಭವಗೊಳಿಸಿಕೊಳ್ಳುತ್ತ ಆ ಜಂಗಮತ್ವಕ್ಕೆ ಅನುರೂಪವಾಗಿ ನಾವು ಕೂಡ ವರ್ತಿಸಬೇಕು. ಅಂದರೆ ಸಹಜ ಸ್ಪಂದನೆ ನಮ್ಮದಾಗಬೇಕು. ಎಷ್ಟೋ ಸಾರಿ ನಾವು ಕೇವಲ ವೈಜ್ಞಾನಿಕ ತರ್ಕಕ್ಕೆ ಆತುಕೊಂಡು ಅದೇ ಸರಿಯಾದ ನಡೆ ಎಂದುಕೊಳ್ಳುತ್ತೇವೆ. ಅಂತಹ ನಡೆ ಅಪರಿಪೂರ್ಣವಷ್ಟೇ ಅಲ್ಲ, ಕೆಲವು ಸಲ ಅಪಾಯಕಾರಿಯೂ ಆಗಬಹುದು. ಏಕೆಂದರೆ ವಿಜ್ಞಾನದ ಹಾದಿಯಲ್ಲಿ ಸತ್ಯವಷ್ಟೇ ಮುಖ್ಯ. ಪ್ರಾಯೋಗಿಕ ಮತ್ತು ತಾರ್ಕಿಕ ನಿರ್ಣಯವೇ ಅಂತಿಮ. ಅಲ್ಲಿ ನಮ್ಮ ಮನಸ್ಸು ಕೆಲಸ ಮಾಡುತ್ತದೆಯೇ ಹೊರತು ಹೃದಯವಲ್ಲ. ಬದುಕಿನ ವಿಸ್ತಾರ ಹರವಿನಲ್ಲಿ ಹೃದಯಕ್ಕೂ ಪಾತ್ರವಿದೆ. ಮನಸ್ಸು ವಿಜ್ಞಾನವಾದರೆ ಹೃದಯ ಧರ್ಮ. ಸರಿ ತಪ್ಪು ಎನ್ನುವುದನ್ನು ತಾರ್ಕಿಕವಾಗಿ ಮನಸ್ಸು ನಿರ್ಧರಿಸಿದರೆ ಯಾವುದು ಒಳಿತು ಯಾವುದು ಕೆಡುಕು ಎಂಬುದನ್ನು ಹೃದಯ ಅರಿಯುತ್ತದೆ, ತಿಳಿಸುತ್ತದೆ. ಅದಕ್ಕೆಂದೇ ಗಾಂಧೀಜಿ – “ನಿನಗೆ ಯಾವ ಕೆಲಸವನ್ನಾದರೂ ಮಾಡಲೇ ಅಥವಾ ಬೇಡವೇ ಎಂದು ಸಂಶಯ ಬಂದರೆ, ನಾನೊಂದು ನಿನಗೆ ಸಲಹೆ ಕೊಡುತ್ತೇನೆ. ಆ ಕೆಲಸ ಮಾಡುವುದರಿಂದ ಅತ್ಯಂತ ನಿರ್ಗತಿಕನಾದವನಿಗೂ ಶ್ರೇಯಸ್ಸಾಗುತ್ತದೆ ಎಂದು ನಿನಗನ್ನಿಸಿದರೆ, ತಡಮಾಡದೆ ಮುಂದುವರಿ” ಎನ್ನುತ್ತಾರೆ.
ವಿಜ್ಞಾನವಿಲ್ಲದ ಧರ್ಮ ಕುರುಡು, ಧರ್ಮವಿಲ್ಲದ ವಿಜ್ಞಾನ ಕುಂಟು ಎಂದು ಐನ್‍ಸ್ಟೈನ್ ಹೇಳಿರುವಲ್ಲಿ ಎರಡರ ಸುಸಮ್ಮಿಳನದ ನಡತೆ ವ್ಯಕ್ತಿಗೂ ಜನಾಂಗಕ್ಕೂ ಶ್ರೇಯವೆನಿಸುತ್ತದೆ. ಸಕಲ ಜೀವಾತ್ಮರಿಗೆ ಲೇಸಬಯಸುವವನೇ ಕುಲಜನು ಎನ್ನುವ ಬಸವಣ್ಣನವರ ನುಡಿಯಲ್ಲಿ ನಮ್ಮ ಹಿರಿಮೆಯನ್ನು ಕಾಣುವ ಬಗೆಯಿದೆ. ಬಸವಣ್ಣ ಮತ್ತು ಐನ್‍ಸ್ಟೈನ್ ಧರ್ಮ ಮತ್ತು ವಿಜ್ಞಾನಕ್ಷೇತ್ರಗಳ ಪ್ರತಿನಿಧಿಗಳಾಗಿ ಈ ನೆಲದ ಮೇಲೆ ಬದುಕಿ ಬಾಳಿ ಸಾಧನೆಗೈದು ತಮ್ಮ ತಮ್ಮ ಅನನ್ಯ ಕಾಣ್ಕೆಗಳನ್ನು ನಮ್ಮ ಸಮಾಜಕ್ಕೆ ಧಾರೆಯೆರೆದಿದ್ದಾರೆ. ಸಂಕ್ಷಿಪ್ತಗೊಳಿಸಿ ಹೇಳಬಹುದಾದರೆ ಬಸವಣ್ಣನವರು ಒಬ್ಬ ಶ್ರೇಷ್ಠ ವೈಜ್ಞಾನಿಕ ಧರ್ಮಿ. ಆಲ್ಬರ್ಟ್ ಐನ್‍ಸ್ಟೈನ್ ಒಬ್ಬ ಶ್ರೇಷ್ಠ ಧಾರ್ಮಿಕ ವಿಜ್ಞಾನಿ. ಇಂತಹ ಮಹನೀಯರಿಬ್ಬರ ಸಾಧನೆಗಳು ಜನಮಾನಸದ ಏಳಿಗೆಗೆ ಕಾರಣವಾಗಿರುವುದಲ್ಲದೆ ಅವರ ಮುಕ್ತ ಮನಸ್ಸಿನ ಆಲೋಚನೆಗಳು ನಮ್ಮಲ್ಲಿ ದೇವರ ಬಗೆಯಾಗಲೀ ಬದುಕಿನ ಬಗೆಯಾಗಲೀ ಸಂಪ್ರದಾಯಕ್ಕೆ ಅಂಟಿಕೊಳ್ಳದೆ ಪೂರ್ವಾಗ್ರಹ ಪೀಡಿತರಾಗದೆ ಪ್ರಜ್ಞಾಪೂರ್ವಕವಾಗಿ ಮುಕ್ತವಾಗಿ ಆಲೋಚಿಸುವ, ಕ್ರಿಯಾತ್ಮಕವಾಗಿ ವರ್ತಿಸುವ ಮನಸ್ಥೈರ್ಯವನ್ನು ಬೆಳೆಸಿಕೊಳ್ಳುವಲ್ಲಿಯೂ ದಾರಿದೀಪಗಳಾಗಿವೆ.
Comments 16
Padmalaya
Jun 14, 2024ಚೆನ್ನಾಗಿದೆ ಸರ್….ಪ್ರಾಣಲಿಂಗ ಜಂಗಮರೂಪಿ, ಐನ್ ಸ್ಟೀನ್ ರವರ e=mc2 ಸೂತ್ರವನ್ನು ಜಂಗಮ ಅಥವಾ ಬಯಲು ಕಾನ್ಷೆಪ್ಟ್ಗಗಳಿಗೆ ಅನ್ವಯಿಸಿ ನೋಡಿ ಒಮ್ಮೆ ಪ್ರಯತ್ನಿಸಿ. ಪ್ರಾಣಲಿಂಗವು ಸಾಪೇಕ್ಷ ಸಿದ್ದ್ಧಾಂತಕ್ಕೆ ಹತ್ತಿರ ಸಂಬಂಧಿ.ಈ ವಿಶ್ವ ಸತ್ಯದ ಯತಾರ್ಥ ನಿರೂಪಣೆ ಕೂಡ ಆಗಿದೆ.ಪ್ರಾಣ ಲಿಂಗವನ್ನ ನಿಮ್ಮ ಮೆದುಳು ದೈವವೆಂದು ಅನುವಾದಿಸಿ ಕೊಳ್ಳುತ್ತಿದೆ.ಅದನ್ನ ಪಕ್ಕಕ್ಕಿಟ್ಟು ಸಾಪೇಕ್ಷ ಸಿದ್ದಾಂತವನ್ನಾಗಿ ನೋಡಿ ನಿಮ್ಮ ಐಡಿಯಾಲಜಿಗೆ ಬೇರೆ ದಿಕ್ಕು ಬರುತ್ತೆ.
ಕೆ ಎಸ್ ಮಲ್ಲೇಶ್
Jun 14, 2024ಪದ್ಮಾಲಯ ಸರ್, ನಿಮ್ಮ ಪ್ರತಿಕ್ರಿಯೆಗಳಿಗೆ ವಂದನೆಗಳು. ನಿಮ್ಮ ಸಲಹೆಗಳನ್ನು ಓದಬಲ್ಲೆ, ಆದರೆ ಅರ್ಥ ಮಾಡಿಕೊಳ್ಳಲು ಕಷ್ಟ. ನೀವೇ ಕಲಿಸಿಕೊಡಬೇಕು. ಇದು ನನ್ನ ಪ್ರಾಮಾಣಿಕ ಅನಿಸಿಕೆ.
ಇನ್ನು ನಿಮ್ಮ ಲೇಖನ ಅದೆಷ್ಟು ಸಮರ್ಥವಾಗಿ ಕಾಯಕದ ಮಹತ್ವದ ಬಗ್ಗೆ ಸಾಲು ಸಾಲಿನಲ್ಲೂ ತಿಳಿಸುತ್ತದೆ, ಎಚ್ಚರಿಸುತ್ತದೆ, ಕಲಿಸುತ್ತದೆ! ಓದುತ್ತಿದ್ದಂತೆಲ್ಲ ನನ್ನೊಳಗಿನ ಕೊರತೆ ಎದ್ದು ಎದುರು ನಿಂತಂತಾಯಿತು. ಸಮಾಜಮುಖಿಯಾಗುವಲ್ಲಿ ಕೇವಲ ವ್ಯಕ್ತಿಗತ ನೆಲೆಗಟ್ಟಿನೊಳಗಿದ್ದರಷ್ಟೇ ಸಾಲದು ಎನ್ನುವ ನಿಮ್ಮ ವಿಚಾರ ನನ್ನೊಳಗೊಮ್ಮೆ ನೋಡಿಕೊಳ್ಳುವಂತಾಯಿತು.
ಇತಿಹಾಸದಲ್ಲಿ ಧಾರ್ಮಿಕ ಮಾರ್ಗಗಳ ಮಗ್ಗಲುಗಳನ್ನು, ಅಬ್ಬಾ, ಅದೆಷ್ಟು ಯಥಾವತ್ತಾಗಿ ನಿರೂಪಿಸುತ್ತೀರಿ.
ನನಗೆ ನಿಮ್ಮ ವಾಕ್ಯಗಳಲ್ಲಿನ ವಿಶಿಷ್ಟ ಪದಗಳ ಸಂಯೋಜನೆ ಔಚಿತ್ಯಪೂರ್ಣವೆನಿಸಿ ಮನಸ್ಸನ್ನು ಸೂರೆಗೊಂಡದ್ದು ನಿಜ. ಅದಕ್ಕಿಂತಲೂ ಹೆಚ್ಚಾಗಿ ಆ ವಾಕ್ಯಗಳೇ ಚಾಟಿಯ ಹಗ್ಗವೆನಿಸಿ ಏಟುಕೊಟ್ಟದ್ದೂ ನಿಜ. ಅವು ನಿಜಗುರುವೊಬ್ಬ ಶಿಷ್ಯನ ತಪ್ಪಿಂಗೆ ಮುನಿದು ಕೊಟ್ಟವೇ ಹೊರತು ಪ್ರಾಣಕ್ಕಲ್ಲ. ಅವು ಮನಸ್ಸನ್ನು ಎಚ್ಚರಗೊಳಿಸುತ್ತವೆ. ಶಿಲೆ ಶಿಲ್ಪವಾಗುವ ಬಗೆಯಲ್ಲಿ.
ಮಂದಿಯ ಬಹುಭಾಗವೆಲ್ಲ ಹಿಡಿಯಬಾರದ ದಾರಿಹಿಡಿದು ಅಯೋಮಯ ಸ್ಥಿತಿಯೆಡೆಗೆ ಮುನ್ನುಗ್ಗುತ್ತಿರುವಾಗ ವ್ಯಕ್ತಿಯಾಗಿ ಹೇಗೆ ಮುಂದುವರೆಯಬೇಕು ಎನ್ನುವ ದೊಡ್ಡ ಪ್ರಶ್ನೆ ಕಾಡುತ್ತದೆ.
ಹೀಗಿದ್ದಾಗಲೂ ನನ್ನೊಳಗನ್ನೇ ಇನ್ನಷ್ಟು ಹಸನು ಮಾಡಿಕೊಳ್ಳಬೇಕು ಎನ್ನುವ ನಿಲುವು ಸರಿಯೆನ್ನಿಸಿದರೂ ಸಾತ್ವಿಕತೆ ಮೌನವಾದಷ್ಟೂ ಸಮಾಜದಲ್ಲಿ ವಿಷಮತೆ ವಿಜೃಂಭಿಸುತ್ತದೆ ಎನ್ನುವುದು ನೋವುತರುತ್ತದೆ
ರವಿಪ್ರಕಾಶ್ ಸವಣೂರ
Jun 16, 2024ಲೇಖನದ ಶೀರ್ಷಿಕೆಯೇ ಆಕರ್ಷಕವಾಗಿದೆ. ವಿಜ್ಞಾನಿಗಳಲ್ಲೇ ನನಗೆ ಐನಸ್ಟೈನ್ ಬಹಳ ಪ್ರೀಯ. ಅನುಭಾವಿಯ ಹಾಗೇ ಕಾಣುವ ಈ ವಿಜ್ಞಾನಿಯ ಮಾತುಗಳು ಸತ್ಯದಿಂದ ಕೂಡಿವೆ. ಬಸವಣ್ಣನವರೂ ಪ್ರಖರ ಚಿಂತಕ, ಸಮಾಜ ವಿಜ್ಞಾನಿ, ತತ್ವ ವಿಜ್ಞಾನಿ. ಇವರಿಬ್ಬರ ವ್ಯಕ್ತಿತ್ವಗಳು ಎಂದಿಗೂ ನಮಗೆ ಮಾರ್ಗದರ್ಶನ ನೀಡುವಂತಹುಗಳೇ ಆಗಿವೆ👌🏽👌🏽
ಬಸವ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ
Jun 17, 2024ಡಾ. ಮಲ್ಲೇಶರವರು Einstein, ಬಸವಣ್ಣನ ಸಮಾನ ಸದ್ಗುಣ, ಸತ್ ಕಾರ್ಯಕ್ರಮಗಳನ್ನು ಅತ್ಯುತ್ತಮವಾಗಿ ಗುರುತಿಸಿದ್ದಾರೆ… ಇಬ್ಬರ ವೈಚಾರಿಕತೆ ಮಾನವೀಯತೆ ಸಹೃದಯ ಭಾವಗಳ ಅಂತರಂಗ ಬಹಿರಂಗ ಚರ್ಚೆಗೆ ಒಳ ಪಡಿಸಿದ್ದಾರೆ…
ಅವರಿಗೆ ಧನ್ಯವಾದಗಳು ಕೃತಜ್ಞತೆಗಳು.
Shraddhananda swamiji, Vijayapura
Jun 20, 2024Basavanna Einstein article impressed me. Thanks.
ರಾಜೇಂದ್ರಕುಮಾರ್, ಬೀಳೂರು
Jun 21, 2024ವಿಜ್ಞಾನಿಗಳಲ್ಲೇ ವೈಜ್ಞಾನಿಕ ಮನೋಭಾವ ಮಾಯವಾಗುತ್ತಿರುವ ಇವತ್ತಿನ ಸಮಯದಲ್ಲಿ ಶರಣರು ತಮ್ಮ ವಿಚಾರಗಳಲ್ಲಿ ಎಷ್ಟೊಂದು ವೈಜ್ಞಾನಿಕವಾಗಿದ್ದರು ಎನ್ನುವುದು ಆಶ್ಚರ್ಯಕರ. ಬಸವಣ್ಣನವರ ಮಾತುಗಳನ್ನು ಕರ್ನಾಟಕವು ಹೋಗಲಿ, ಲಿಂಗಾಯತರೇ ಅರಿತುಕೊಂಡಿಲ್ಲ ಎನ್ನುವುದು ವಿಷಾದಕರ.
Dr. C.A. Somashekharappa
Jun 22, 2024I read Prof Mallesh’s paper.
It is exhaustive and quite interesting.
I get to develop a feeling in me that religion like any other forms of the kind are all human creations to serve societal purpose, and hence I call it Social Construction.
Religion, in simple terms, being a way of life it differes from group to group and time to time. To keep to old forms is difficult. Yet we struggle hard to adhere to such things.
Like the religion being social construct, Science too a social construct.
ಶ್ರೀಶೈಲ ಮಸೂತಿ, ಬೆಂಗಳೂರು
Jun 22, 2024personally talked with professor K S Mallesh about his writings of ” Basavanna and Einstein”
Shivakumar Raichur
Jun 25, 2024ಅಲ್ಲಿ ಜಪಾನಿನ ಮೇಲೆ ನಡೆದ ಮಾರಣಹೋಮ; ಇಲ್ಲಿ ಕಲ್ಯಾಣ ಕ್ರಾಂತಿಯಲ್ಲಿ ಶರಣರ ಕಗ್ಗೊಲೆ- ಮಾನವೀಯತೆಯ ವಿನಾಶಕ್ಕೆ ಸಾಕ್ಷಿಯಾದ ಇಬ್ಬರು ಮಹಾಪುರುಷರ ತೌಲನಿಕ ಅಧ್ಯಯನ ಕುತೂಹಲಕಾರಿಯಾಗಿದೆ. ಐನಸ್ಟೈನ್ ಮಾನವೀಯ ವಿಜ್ಞಾನಿ, ಇಂತಹವರ ಕೊಡುಗೆ ನಿಜಕ್ಕೂ ಅಪಾರ. ಬಸವಣ್ಣನವರ ವೈಜ್ಞಾನಿಕ ಮನೋಭಾವ ಇವತ್ತಿಗೂ ಅಚ್ಚರಿ ಮೂಡಿಸುತ್ತದೆ. ವಿಶ್ವಮಾನವರನ್ನು ಇನ್ನೂ ಅಧ್ಯಯನಕ್ಕೆ ಒಳಪಡಿಸುವ ಜರೂರನ್ನು ಲೇಖಕರು ಮುನ್ನುಡಿಯಾಗಿ ಬರೆದಿದ್ದಾರೆ ಎನ್ನಬಹುದೇ?
Jayaprakash S
Jun 25, 2024ಬಸವಣ್ಣನವರನ್ನು ಯಾರಿಗೂ ಹೋಲಿಸುವುದು ತರವಲ್ಲ. ವೈಯಕ್ತಿಕವಾಗಿ ನನಗೆ ನೀವು ಹೋಲಿಕೆ ಮಾಡಿದ ಇಬ್ಬರೂ ಮಹನೀಯರ ಬಗ್ಗೆ ಅಪಾರ ಗೌರವವಿದೆ. ಆದರೆ ಬಸವಣ್ಣನವರಂತಹ ಯುಗಪುರುಷರನ್ನು ಯಾಕೆ ಹೀಗೆ ಹೋಲಿಸಬೇಕೆನ್ನುವುದು ನನ್ನ ಪ್ರಶ್ನೆ.
MAllikarjuna R.P
Jun 27, 2024ವೈಜ್ಞಾನಿಕ ದೃಷ್ಟಿಕೋನ ಹಾಗೂ ಅದರಿಂದ ಕಟ್ಟಿದ ಸಿದ್ಧಾಂತ ಯಾವ ಮೂಲಭೂತ ನಿಯಮಗಳನ್ನು ಅನುಸರಿಸಬೇಕು ಎನ್ನುವ ಪಟ್ಟಿ ಹಾಗೂ ಬಸವಣ್ಣನವರು ರೂಪಿಸಿದ ಲಿಂಗಾಯತ ಧರ್ಮದ ಆಶಯಗಳ ಪಟ್ಟಿ ಚೆನ್ನಾಗಿದೆ. ಐನಸ್ಟೈನ್ ಹಾಗೂ ಬಸವಣ್ಣನವರು ಲೇಖನದಲ್ಲಿ ಸಮೀಕರಿಸಿಕೊಂಡು ದೂರದೂರವೇ ನಿಲ್ಲುತ್ತಾರೆ. ಇವರಿಬ್ಬರ ನಡುವೆ ಬಾಂಧವ್ಯ ಬೆಸೆಯುವಷ್ಟು ಇನ್ನಷ್ಟು ಆಪ್ತ ಸಂಗತಿಗಳನ್ನು ಸೇರಿಸಬಹುದಿತ್ತು.
ಕೆ ಎಸ್ ಮಲ್ಲೇಶ್
Jun 29, 2024ಸತ್ಯಂ ಶಿವಂ ಸುಂದರಂ ಈ ಮೂರು ಪದಗಳು ನಮ್ಮ ಬದುಕಿನಲ್ಲಿ ಅನುಸರಿಸಬಹುದಾದ ಮೂರು ದಾರಿಗಳ ಆತ್ಯಂತಿಕ ಗುರಿಯನ್ನು ಸೂಚಿಸುತ್ತವೆ. ವಿಜ್ಞಾನ ಮಾರ್ಗದ ಅಂತಿಮ ಗುರಿ ಸತ್ಯ, ಅಧ್ಯಾತ್ಮದ ಗುರಿ ಶಿವ ಮತ್ತು ಕಲೆಯ ಗುರಿ ಸೌಂದರ್ಯ. ದಾರಿಗಳು ಭಿನ್ನವೇ ಹೊರತು ಗುರಿಯೊಂದೇ. ಸತ್ಯಂ ಶಿವಂ ಸುಂದರಂ ಎನ್ನುವುದು ಕೇವಲ ಪದಗುಚ್ಛವಲ್ಲ. ಇರುವ ಒಂದೇ ಗುರಿಗೆ ಮೂರು ಹೆಸರುಗಳು ಅಷ್ಟೇ ಎನ್ನುವುದು ಒಂದು ತಿಳುವಳಿಕೆ. ಬಸವಣ್ಣ ಸಾಮಾಜಿಕ ಬದುಕಿನಲ್ಲೂ ಆಧ್ಯಾತ್ಮದ ಸಾಕ್ಷಾತ್ಕಾರವನ್ನು ಕಾಣಬಯಸಿದ ದಾರ್ಶನಿಕ. ಐನ್ ಸ್ಟೈನ್ ವಿಜ್ಞಾನ ಕ್ಷೇತ್ರದ ಹಾದಿಯಲ್ಲಿ ಧಾರ್ಮಿಕತೆಯನ್ನು ಅಳವಡಿಸಿಕೊಳ್ಳುವುದನ್ನು ತಿಳಿಸಿಕೊಟ್ಟ ಶ್ರೇಷ್ಟ ವಿಜ್ಞಾನಿ. ಇವರ ಬದುಕಿನ ದರ್ಶನದಿಂದ ನಾವು ಕಲಿಯಬಹುದಾದದ್ದು ಎಷ್ಟು ಏನು ಎನ್ನುವುದನ್ನು ನನ್ನ ಇತಿಮಿತಿಯೊಳಗೆ ಆಲೋಚಿಸಿ ಬರೆದಿದ್ದೇನೆ. ನನ್ನ ಲೇಖನದ ಕೆಲವು ಭಾಗ ನಿಮಗೆ ಇಷ್ಟವಾದುದಕ್ಕೆ ಸಂತಸವಿದೆ. ನಿಮ್ಮ ಕೊನೆಯ ವಾಕ್ಯಕ್ಕೆ ಇದು ನನ್ನ ಪ್ರತ್ಯುತ್ತರವೆಂದು ತಮ್ಮಲ್ಲಿ ಅರಿಕೆ
Veena Jayanagar
Jun 30, 2024ತಮ್ಮ ದೃಷ್ಟಿಯನ್ನು ವಿಶಾಲಗೊಳಿಸುವ ವಿಶಿಷ್ಟ ಅನುಭವಸಾರವನ್ನೇ ಐನಸ್ಟೈನ್ ಅವರು ವಿಶ್ವಧರ್ಮ (Cosmic Religion) ಎಂದು ಕರೆದಿರುವುದಕ್ಕೂ, ಸಕಲ ಜೀವಾತ್ಮರಿಗೆ ಲೇಸಿನ ಬಯಸುತ್ತಾ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಲಿಂಗಾಯತ ಧರ್ಮಕ್ಕೂ ಎಷ್ಟೊಂದು ಸಾಮ್ಯತೆ ಇದೆ! ಉತ್ತಮ ಪ್ರಯತ್ನಕ್ಕೆ ಲೇಖಕರು ಅಭಿನಂದನಾರ್ಹರು👏🏾
ಸತ್ಯಪ್ರಕಾಶ್ ರಬಕವಿ
Jun 30, 2024ಬಸವಣ್ಣನವರು ಒಬ್ಬ ಶ್ರೇಷ್ಠ ವೈಜ್ಞಾನಿಕ ಧರ್ಮಿ. ಆಲ್ಬರ್ಟ್ ಐನ್‍ಸ್ಟೈನ್ ಒಬ್ಬ ಶ್ರೇಷ್ಠ ಧಾರ್ಮಿಕ ವಿಜ್ಞಾನಿ. ಮೂಢನಂಬಿಕೆಗಳಲ್ಲಿ ಮುಳುಗಿರುವ ಲಿಂಗಾಯತರು ಬಸವಣ್ಣನವರನ್ನು ಹೀಗೆ ತೆರೆದ ಮನಸ್ಸಿನಿಂದ ನೋಡಬೇಕು.
Mallikarjuna R.P
Jun 30, 2024ನನ್ನ ಅಭಿಪ್ರಾಯಕ್ಕೆ ತಾವು ಕೊಟ್ಟ ಉತ್ತರಕ್ಕೆ ಧನ್ಯವಾದಗಳು. ಸತ್ಯಂ, ಶಿವಂ, ಸುಂದರಂ… ಹೋಲಿಕೆ ನಿಜಕ್ಕೂ ಸೊಗಸಾಗಿದೆ. ಎರಡು ಬೃಹತ್ ವಲಯಗಳ ದೈತ್ಯರನ್ನು ಒಂದು ವೇದಿಕೆಯಲ್ಲಿ ತಂದು ಮಾತನಾಡೋದು challenging ವಿಷಯವೇ. ಓದುಗನಾಗಿ ನನ್ನ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದೇನೆ, thank you sir
Sujatha Patil
Jul 3, 2024Very nice article and right to the point.