ವಚನಗಳಲ್ಲಿ ಜೀವವಿಜ್ಞಾನ
ನಮ್ಮೆದುರು ಅನೇಕ ರಹಸ್ಯಗಳನ್ನು ಬಿಚ್ಚಿಟ್ಟ ಆಧುನಿಕ ಜೀವವಿಜ್ಞಾನ ಮನುಷ್ಯನ ಇದುವರೆಗಿನ ಕೌತುಕದ ಫಲ.ವಿಜ್ಞಾನದ ವಿಕಾಸದಲ್ಲಿ ಇದರ ಬೆಳವಣಿಗೆಯ ಹೆಜ್ಜೆಗಳು ಸ್ಪಷ್ಟವಾಗಿವೆ. ಕಾಲಕಾಲಕ್ಕೆ ಮನುಷ್ಯನ ಪ್ರಯತ್ನಗಳ ಫಲವಾಗಿ ವಿಶ್ವದ ರಹಸ್ಯಗಳು ಜೀವಕೋಶದ ಉಗಮದಿಂದ ಹಿಡಿದು ಮನುಷ್ಯನ ಬೆಳವಣಿಗೆಯ ತನಕ ಒಂದೊಂದಾಗಿ ಬಿಚ್ಚಿ ತೋರಿಸಿವೆ. ಇವುಗಳಲ್ಲಿ ಭ್ರೂಣ ಬೆಳವಣಿಗೆ ಅತ್ಯಂತ ಮಹತ್ವದ್ದು. ತಾಯಿಯ ಗರ್ಭದಲ್ಲಿ ಜೀವ ಅಂಕುರಿಸಿ ನವ ಮಾಸದವರೆಗೆ ಹಂತಹಂತವಾಗಿ ವಿಕಾಸವಾಗುವ ಪರಿ ಅದ್ಭುತವಾದದ್ದು.
ಹನ್ನೆರಡನೇ ಶತಮಾನದಿಂದ 17ನೇ ಶತಮಾನದವರೆಗೆ ರಚಿತವಾದ ವಚನಗಳಲ್ಲಿ ನಾವು ಅನೇಕ ಆಧುನಿಕ ವೈಜ್ಞಾನಿಕ ಅಂಶಗಳನ್ನು ಗುರುತಿಸಬಹುದು. ಅಂದಿನ ಶರಣರು ಸಾಮಾಜಿಕ, ಆಧ್ಯಾತ್ಮಿಕ ಸುಧಾರಣೆಗೆ ಒತ್ತುನೀಡಿದ ಹಾಗೆ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಗಳತ್ತಲೂ ಹೆಚ್ಚಿನ ಒಲವನ್ನು ತೋರಿದ್ದರು ಎಂಬುದನ್ನು ಇವು ಸೂಚಿಸುತ್ತವೆ. ಅಲ್ಲಮಪ್ರಭುದೇವರು, ಬಾಲಸಂಗಯ್ಯ, ಚನ್ನಬಸವಣ್ಣ ಹಾಗೂ ಇನ್ನೂ ಇತರರ ವಚನಗಳಲ್ಲಿ ಪ್ರಮುಖವಾಗಿ ಖಗೋಳ ಹಾಗೂ ವೈದ್ಯಕೀಯ ವಿಜ್ಞಾನದ ಹಲವು ಅಂಶಗಳು ಕಾಣಸಿಗುತ್ತವೆ. ಅದರಲ್ಲೂ ಬಾಲಸಂಗಯ್ಯನವರ ವಚನಗಳಲ್ಲಿ ಪುರುಷ ಸ್ತ್ರೀಯರ ಸಂಯೋಗದಿಂದ ಗರ್ಭದಲ್ಲಿ ಬೆಳೆಯುವ ಭ್ರೂಣದ ಪ್ರತಿಯೊಂದು ಹಂತದ ವಿವರವನ್ನು ಅತ್ಯಂತ ಸವಿಸ್ತಾರದಲ್ಲಿ ಉಲ್ಲೇಖಿಸಲಾಗಿದೆ. ಜೋಸೆಫ್ ನೀಧಮ್ 1959ರಲ್ಲಿ ಬರೆದ ‘ಎ ಹಿಸ್ಟರಿ ಆಫ್ ಎಂಬ್ರಿಯಾಲಜಿ’ ಪುಸ್ತಕದಲ್ಲಿ ಭ್ರೂಣದ ಸುತ್ತಲಿನ ಪ್ರಯೋಗಗಳ ಕುರಿತು ದಾಖಲಿಸಿದ್ದಾರೆ. ಹದಿನೆಂಟನೆಯ ಶತಮಾನದ ತನಕವೂ ಈಗ ತಿಳಿದಿರುವ ಭ್ರೂಣದ ಬೆಳವಣಿಗೆಯ ನಿಖರತೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಾಲಸಂಗಯ್ಯನವರ ವಚನಗಳನ್ನು ಓದಿದಾಗ ಇಂದಿನ ವೈದ್ಯರು ನೀಡುವ ಸ್ಕ್ಯಾನಿಂಗ್ ರಿಪೋರ್ಟಿನ ಹಾಗೆ ಭ್ರೂಣದ ಮಾಹೆವಾರು ಬೆಳವಣಿಗೆಯ ವಿವರವನ್ನು ಕಣ್ಣಿಗೆ ಕಟ್ಟುವಂತೆ ತೋರಿಸುತ್ತವೆ. ಯಾವುದೇ ಅತ್ಯಾಧುನಿಕ ಸಲಕರಣೆಗಳಿಲ್ಲದ ಆ ದಿನಮಾನಗಳಲ್ಲಿ ಅವರು ಭ್ರೂಣದ ಆವಸ್ಥೆಗಳನ್ನು ಗುರುತಿಸಿದ ಬಗೆ ಅಚ್ಚರಿ ಮೂಡಿಸುತ್ತದೆ.
ಇನ್ನು ಆ ಶುಕ್ಲ ಸ್ತ್ರೀ ಪುರುಷರ ಸಂಯೋಗದಿಂದ
ಮಾರುತ ನೂಂಕಲು ಚೈತನ್ಯ ಬೀಜವು
ಆ ಶುಕ್ಲವು ಸ್ತ್ರೀಯ ಶೋಣಿತದಲ್ಲಿ ಬಿದ್ದು
ಏಕೀಭೂತವಾಯಿತ್ತು ನೋಡಾ ಅಪ್ರಮಾಣ ಕೂಡಲ ಸಂಗಮದೇವಾ.
ಇಲ್ಲಿ ‘ಮಾರುತ ನೂಕಲು’ ಎನ್ನುವುದು ವೀರ್ಯಾಣುವಿನ ವೇಗವನ್ನು ಸೂಚಿಸುತ್ತದೆ. ಹೀಗೆ ಭ್ರೂಣದ ಉಗಮವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿರುವುದನ್ನು ನಾವಿಲ್ಲಿ ಕಾಣುತ್ತೇವೆ. ವೀರ್ಯಾಣು ಹಾಗೂ ಅಂಡಾಣುವಿನ ಸಂಯೋಗದಿಂದ ಉಂಟಾದ ಗರ್ಭದ ನೋಟ ಹೇಗಿರುತ್ತದೆ ಎಂಬುದನ್ನು ಅತ್ಯಂತ ಸೂಕ್ತ ಉದಾಹರಣೆಯೊಂದಿಗೆ ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಬಾಲಸಂಗಯ್ಯನವರು ವಿವರಿಸಿರುವುದು ಅವರ ವೈದ್ಯಕೀಯ ಪ್ರಜ್ಞೆಗೆ ಸಾಕ್ಷಿಯಾಗಿದೆ.
ಏಕರಾತ್ರಿಗೆ ಹಾಲಿಗೆ ಹೆಪ್ಪ ಕೊಟ್ಟ ಹಾಗೆ ಕದಡಿಕೊಂಡಿಹುದು.
ಪಂಚರಾತ್ರಿಗೆ ಬುದ್ಬುಧಾಕಾರವಾಗಿಹುದು.
ದಶರಾತ್ರಿಗೆ ಶೋಣಿತವಾಗಿಹುದು.
ತ್ರಿಪಂಚರಾತ್ರಿಗೆ ಮಾಂಸ ಅಸ್ಥಿಯಾಗಿಹುದು.
ಚತುರ್ವಿಂಶತಿ ರಾತ್ರಿಗೆ ಪುನರ್ಮಾಂಸವಾಗಿ ಗರ್ಭಸ್ಥಾನದಲ್ಲಿ
ಕ್ರಮದಿಂದ ವರ್ತಿಸುತ್ತಿಹುದು ನೋಡಾ ಅಪ್ರಮಾಣ ಕೂಡಲ ಸಂಗಮದೇವಾ.
ಇಲ್ಲಿ ವಿವರಿಸಿರುವ ಪ್ರತಿ ಹಂತದ ಭ್ರೂಣದ ಬೆಳವಣಿಗೆಯನ್ನು ವೈದ್ಯಕೀಯ ಯಂತ್ರಗಳ ಸಹಾಯದಿಂದ ಆಧುನಿಕ ವೈದ್ಯರು ಗಮನಿಸುವಂತಿದೆ. ವೀರ್ಯಾಣು ಅಂಡಾಣುವಿನೊಂದಿಗೆ ಸಂಯೋಗವಾದ ಮೇಲೆ ಅಂದರೆ ಅಂಕುರದ ಮೊದಲ ದಿವಸ ಅದರ ಭೌತಿಕ ಸ್ಥಿತಿಯ ಬಗ್ಗೆ ವಿವರಿಸುತ್ತ ಅದು ಹಾಲಿಗೆ ಹೆಪ್ಪು ಹಾಕಿದಾಗ ಘನವು ಅಲ್ಲದ ದ್ರವವೂ ಅಲ್ಲದ ಸ್ಥಿತಿಯಲ್ಲಿರುವಂತೆ ಭ್ರೂಣವು ತೋರುತ್ತದೆ, ಮುಂದಿನ ಎರಡು- ಮೂರು ದಿನಗಳಲ್ಲಿ ಇದು ಗಟ್ಟಿಗೊಳ್ಳುತ್ತಾ, ಐದನೇ ರಾತ್ರಿಗೆ ಅದು ಕುಂಬಳಕಾಯಿಯ ಆಕಾರಕ್ಕೆ (ಗಾತ್ರಕ್ಕಲ್ಲ) ಬೆಳವಣಿಗೆ ಹೊಂದಿದ ಬಗ್ಗೆ ಹೇಳಿದ್ದಾರೆ. ಅಂದರೆ ಇದು ಝೈಗೋಟದ ಸ್ವರೂಪವನ್ನು ನಿಖರವಾಗಿ ಸೂಚಿಸುತ್ತದೆ. ಇಂದಿನ ಸ್ಕ್ಯಾನಿಂಗ್ ವರದಿಯ ಚಿತ್ರದೊಂದಿಗೆ ಇದನ್ನು ಹೋಲಿಕೆಮಾಡಿ ನೋಡಬಹುದು. ಮುಂದುವರೆದು ಹತ್ತನೆ ದಿನಕ್ಕೆ ಘನೀಕೃತವಾದ ಭ್ರೂಣವು ಅಸ್ತಿತ್ವಕ್ಕೆ ಬರುತ್ತದೆ ಎಂದಿದ್ದಾರೆ. ತ್ರಿಪಂಚರಾತ್ರಿಗೆ ಅಂದರೆ ಹದಿನೈದನೆಯ ದಿನಕ್ಕೆ ಮಾಂಸಖಂಡಗಳು ಹಾಗೂ ಅಸ್ಥಿ(ಎಲಬು)ಗಳ ಬೆಳವಣಿಗೆ ಕಾರ್ಯ ಪ್ರಾರಂಭವಾಗುತ್ತದೆ ಎಂದಿದ್ದಾರೆ. ಗರ್ಭಾಂಕುರವಾದ ಚತುರ್ವಿಂಶತಿ ಅಂದರೆ ಇಪ್ಪತ್ತುನಾಲ್ಕನೆ ದಿನಕ್ಕೆ ಮಾಂಸಖಂಡಗಳ ಬೆಳವಣಿಗೆಯೊಂದಿಗೆ ಗರ್ಭಶಿಶುವಿನ ಬೆಳವಣಿಗೆ ಕ್ರಮಬದ್ಧವಾಗುವುದು. ಈ ಎಲ್ಲ ವಿಚಾರಗಳು ಆಧುನಿಕ ವೈದ್ಯರು ಒಪ್ಪಿಕೊಳ್ಳುವ ರೀತಿಯಲ್ಲಿ ಬಾಲಸಂಗಯ್ಯನವರು 15ನೇ ಶತಮಾನದಲ್ಲಿ ಯಾವುದೇ ಸಾಧನ ಸಲಕರಣೆಗಳಿಲ್ಲದೆ ಇಷ್ಟೊಂದು ನಿಖರವಾಗಿ ಹೇಳಿರುವುದು ನಿಜಕ್ಕೂ ಅಚ್ಚರಿಯೇ ಸರಿ.
ಷಷ್ಠಿಮಾಸಕ್ಕೆ ಕಂಧರ ಉದರ ಪುಟ್ಟುವುದು.
ಸಪ್ತಮಾಸಕ್ಕೆ ಗುಹ್ಯ ಪಾದ ಪುಟ್ಟುವುದು.
ಅಷ್ಟಮಾಸಕ್ಕೆ ಸರ್ವಾಂಗಸಂಧಿ
ಪುಟ್ಟುವದು ಸಂಪೂರ್ಣವಹುದು.
ಅಪ್ರಮಾಣಕೂಡಲಸಂಗಮದೇವಾ.
ಗರ್ಭದಲ್ಲಿ ಬೆಳೆಯುವ ಭ್ರೂಣದ ಬೆಳವಣಿಗೆಯನ್ನು ತಿಂಗಳವಾರು ಅತ್ಯಂತ ಸವಿಸ್ತಾರವಾಗಿ ಬಾಲಸಂಗಯ್ಯನ ತಮ್ಮ ವಚನಗಳಲ್ಲಿ ವಿವರಿಸುತ್ತಾ ಹೋಗಿದ್ದಾರೆ. ಗರ್ಭ ಧರಿಸಿ ಆರು ತಿಂಗಳಾದ(ಷಷ್ಠಿಮಾಸಕ್ಕೆ) ಭ್ರೂಣದ ದೈಹಿಕ ಬೆಳವಣಿಗೆಯಲ್ಲಿ ಕಂಧರ (ಕೊರಳು) ಬೆಳವಣಿಗೆ ಹೊಂದುವುದರೊಂದಿಗೆ ಹೊಟ್ಟೆಯ ಭಾಗ ಬೆಳೆಯುತ್ತದೆ. “ಷಷ್ಠಿಮಾಸಕ್ಕೆ ಕಂಧರ ಉದರ ಪುಟ್ಟುವುದು.” ವೈದ್ಯರಪ್ರಕಾರ 4ರಿಂದ6 ತಿಂಗಳ ಅವಧಿಯಲ್ಲಿ ಭ್ರೂಣದ ಬೆಳವಣಿಗೆಯಲ್ಲಿ ಕೈಕಾಲುಗಳು ಬೆರಳುಗಳು ಕಣ್ಣಿನ ರೆಪ್ಪೆಗಳು ಉಗುರುಗಳು ಕೂದಲುಗಳು ಹಾಗೂ ಹಲ್ಲುಗಳು ಬೆಳೆಯಲು ಪ್ರಾರಂಭಿಸುತ್ತವೆ In the pregnancy months 4, 5, and 6 baby’s fingers and toes are well-defined. It’s eyelids, eyebrows, eyelashes, nails and hair are formed, and teeth and bones are becoming denser. ಬಾಲಸಂಗಯ್ಯನವರು ಗುರುತಿಸಿದಂತೆ ಏಳನೇ ತಿಂಗಳಿನಲ್ಲಿ ಭ್ರೂಣದ ಗುಹ್ಯ (ಜನನೇಂದ್ರಿಯ) ಮತ್ತು ಪಾದಗಳು ಬೆಳವಣಿಗೆ ಹೊಂದುತ್ತವೆ.
“ಸಪ್ತಮಾಸಕ್ಕೆ ಗುಹ್ಯ ಪಾದ ಪುಟ್ಟುವುದು” ವೈದ್ಯರ ಪ್ರಕಾರ ಈ ಅವಧಿಯಲ್ಲಿ At the end of the seventh month of pregnancy, fat begins to be deposited on baby. baby’s hearing is fully developed and he or she changes position frequently and responds to stimuli, including sound, pain, and light. ಪ್ರತಿಕ್ರಿಯೆ ವ್ಯಕ್ತಪಡಿಸುವ ಎಲ್ಲ ಅಂಗಗಳ ಬೆಳವಣಿಗೆ ಉಂಟಾಗಿ 8 ತಿಂಗಳಿಗೆ ಸಂಪೂರ್ಣವಾದ ಮಗುವಿನ ಚಿತ್ರಣ ಮೂಡುತ್ತದೆ. ಇದನ್ನು”ಅಷ್ಟಮಾಸಕ್ಕೆ ಸರ್ವಾಂಗಸಂಧಿ ಪುಟ್ಟುವದು ಸಂಪೂರ್ಣವಹುದು” ಎಂದಿದ್ದಾರೆ. ಯಾವುದೇ ಸಾಧನ-ಸಲಕರಣೆಗಳು ಇಲ್ಲದೆ ಗರ್ಭದಲ್ಲಿಯ ಭ್ರೂಣದ ಬೆಳವಣಿಗೆಯನ್ನು ಇಷ್ಟು ನಿಖರವಾಗಿ ಗುರುತಿಸಿರುವುದು ಸೋಜಿಗ.
ನವಮಾಸಕ್ಕೆ ಶ್ರೋತ್ರಾದಿಗಳೈದು, ಶಬ್ದಾದಿಗಳೈದು,
ಮಂಡಲಮೂರು, ಗುಣಮೂರು, ವ್ಯಾಧಿಮೂರು,
ಈಷಣಮೂರು, ನಾಡಿಹತ್ತು, ವಾಯುಹದಿನಾಲ್ಕು,
ಕ್ಲೇಷಂಗಳೈದು, ಧಾತುಗಳೇಳು, ಮದವೆಂಟು,
ಸುಖದುಃಖಂಗಳೆರಡು, ಎಪ್ಪತ್ತೆರಡುಸಾವಿರ ನಾಡಿಗಳು,
ಎಂಬತ್ತೆಂಟುಕೋಟಿ ರೋಮದ್ವಾರಂಗಳು,
ಎಂಬತ್ನಾಲ್ಕುನೂರುಸಾವಿರ ಸಂದುಗಳು,
ಇಪ್ಪತ್ತೊಂದುಸಾವಿರದಾರುನೂರು ಶ್ವಾಸಂಗಳು,
ಮೂವತ್ತೆರಡು ಲಕ್ಷಣಂಗಳು, ಐವತ್ತಾರಕ್ಷರಂಗಳು,
ಅರುವತ್ನಾಲ್ಕು ಕಲೆ, ಜ್ಞಾನಂಗಳು ಕೂಡಿ ಸುಜ್ಞಾನಸಂಪನ್ನನಾಗಿ
ಪೂರ್ವಜನ್ಮದಲ್ಲಿ ಎಂಬತ್ನಾಲ್ಕುನೂರುಸಾವಿರ
ಜನ್ಮದಲ್ಲಿ ಬಂದ ಜನ್ಮವ ವಿವೇಕಿಸುತ್ತಿಹುದು ನೋಡಾ ಅಪ್ರಮಾಣ ಕೂಡಲಸಂಗಮದೇವಾ.
ಒಂಭತ್ತನೆಯ ತಿಂಗಳಿಗೆ ಗರ್ಭದಲ್ಲಿಯ ಶಿಶುವಿನ ಸಂಪೂರ್ಣ ಬೆಳವಣಿಗೆಯ ವಿವರವನ್ನು ಈ ವಚನದಲ್ಲಿ ಬಾಲಸಂಗಯ್ಯನವರು ನೀಡಿದ್ದಾರೆ. ಶ್ರೋತ್ರಾದಿಗಳೈದು (ಪಂಚೇಂದ್ರಿಯಗಳಲ್ಲೊಂದಾದ ಕೇಳುವ ಸಾಮರ್ಥ್ಯದ ಅಂಗ ಕಿವಿಯ ಐದು ಭಾಗಗಳು), ಶಬ್ದಾದಿಗಳೈದು (ಶಬ್ದವನ್ನು ಉಂಟು ಮಾಡುವ ಗಂಟಲಿನ ಭಾಗದ ಧ್ವನಿಪೆಟ್ಟಿಗೆಗೆ ಸೇರಿರುವ ಐದು ಭಾಗಗಳು) ಮೂರು ಮಂಡಲ, ಗುಣ, ವ್ಯಾಧಿ, ಈಷಣ (ಆಶೆ) ಉಂಟುಮಾಡುವ ಅವಯವಗಳು ಬೆಳೆಯುತ್ತವೆ. ಜೊತೆಗೆ 10 ನಾಡಿಗಳು (ಇಡಾ, ಪಿಂಗಳಾ, ಸುಷುಮ್ನಾ, ಗಾಂಧಾರಿ, ಹಸ್ತಿಜಿಹ್ವಾ, ಪೂಷಾ, ಅಲಂಬು, ಲಕುಹಾ, ಪಯಸ್ವಿನಿ, ಶಂಖಿನಿ), 14 ವಾಯುಗಳು (ಪ್ರಾಣ, ಅಪಾನ, ಸಮಾನ, ಉದಾನ, ವ್ಯಾನ ಮುಂತಾದವುಗಳು) ಕ್ಲೇಷಂಗಳೈದು (ದುಃಖ ಪ್ರದರ್ಶಿಸುವ ಮನಸ್ಥಿತಿ), ಏಳು ಧಾತುಗಳು (ರಸ=ಜೊಲ್ಲು, ರುಧಿರ=ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ=ಮೂಳೆಯ ಒಳಗಿನ ಸಾರವತ್ತಾದ ಭಾಗ, ಶುಕ್ಲ=ರೇತಸ್ಸು) ಈ ರೀತಿಯಾಗಿ ಅಂಗದ ಆಂತರಿಕ ಮತ್ತು ಬಾಹ್ಯ ಅವಯವಗಳು ಬೆಳೆಯುವುದರೊಂದಿಗೆ ಶಿಶುವು ಗರ್ಭದಿಂದ ಹೊರಬರುತ್ತದೆ ಎಂಬ ವೈಜ್ಞಾನಿಕ ಸತ್ಯವನ್ನು ಇಲ್ಲಿ ವಿವರಿಸಿದ್ದಾರೆ. ಈ ವಚನದಲ್ಲಿ ಉಲ್ಲೇಖಿಸಿರುವ ಎಲ್ಲ ಅಂಶಗಳನ್ನು ಇಂದಿನ ವೈದ್ಯಲೋಕದ ತಿಳಿವಳಿಕೆಯೊಂದಿಗೆ ತಾಳೆ ಹಾಕಿದಾಗ ವಚನಕಾರರ ವೈಜ್ಞಾನಿಕ ಜ್ಞಾನ ಅಚ್ಚರಿ ಮೂಡಿಸುತ್ತದೆ.
ಗರ್ಭದಲ್ಲಿಯ ಶಿಶುವಿನ ಲಿಂಗ ನಿರ್ಧಾರಕ ಅಂಶವನ್ನು ಸಹ ಅವರು ಗುರ್ತಿಸುವಲ್ಲಿ ಸಫಲರಾಗಿದ್ದರು ಎಂಬುದಕ್ಕೆ ಅವರ ಮುಂದಿನ ವಚನಗಳೆ ಸಾಕ್ಷಿ.
ಆ ಚೈತನ್ಯಬೀಜ ಶುಕ್ಲಶೋಣಿತ ಬಲಿತು ಜೀವನಾಗಿ
ಭೂತಂಗಳ ಕೂಡಿಕೊಂಡು
ಕರ್ಮವಶದಿಂದ ಪಿಂಡವಹುದು.
ಈ ಪಂಚಾಕ್ಷರವ ನಿಟಿಲತಟದಲ್ಲಿ ಬರೆವನು.
ಆ ಚೈತನ್ಯಬೀಜ ಶುಕ್ಲಶೋಣಿತಂಗಳು ಬದ್ಧವಹುದು.
ಪುರುಷವೀರ್ಯ ಘನವಾದಡೆ ಗಂಡುಮಗ ಹುಟ್ಟುವನು.
ಸ್ತ್ರೀವೀರ್ಯ ಘನವಾದಡೆ ಹೆಣ್ಣು ಮಗು ಹುಟ್ಟುವಳು.
ಸಮವಾದಡೆ ನಪುಂಸಕ ಹುಟ್ಟುವದು.
ಮಾತಾಪಿತರ ಮಲತ್ರಯದಲ್ಲಿ ಪಿಂಡರೂಪವಹುದು.
ಇದಕ್ಕೆ ಶ್ರೀಮಹಾದೇವ ಉವಾಚ :
‘ರಕ್ತಾಧಿಕ್ಯಂ ಭವೇನ್ನಾರೀ ನರಶುಕ್ಲಾಧಿಕೇ ಸುತಂ |
ನಪುಂಸಕಂ ಸಮಂ ದ್ರವ್ಯೈಃ ತ್ರಿವಿಧಂ ಪಿಂಡರೂಪಕಂ ||
ಇಂತೆಂದುದಾಗಿ,ಅಪ್ರಮಾಣಕೂಡಲಸಂಗಮದೇವಾ
ಗರ್ಭದಲ್ಲಿ ಬೆಳೆದ ಭ್ರೂಣಕ್ಕೆ ಜೀವವು ಪ್ರವೇಶವಾದಾಗ ಅದು ಸಂಪೂರ್ಣ ಶಿಶುವಿನ ರೂಪ ತಾಳುತ್ತದೆ, ಮುಂದೆ ಅದು ಗಂಡು ಅಥವಾ ಹೆಣ್ಣು ಎಂದು ನಿರ್ಧರಿಸುವುದು ಯಾವ ಅಂಶ ಎಂಬುದನ್ನು ಬಾಲಸಂಗಯ್ಯನವರು ವಿವರಿಸುತ್ತಾ “ಪುರುಷ ವೀರ್ಯ ಘನವಾದಡೆ ಗಂಡುಮಗ ಹುಟ್ಟುವನು. ಸ್ತ್ರೀ ವೀರ್ಯ ಘನವಾದಡೆ ಹೆಣ್ಣು ಮಗು ಹುಟ್ಟುವಳು. ಸಮವಾದಡೆ ನಪುಂಸಕ ಹುಟ್ಟುವದು”- ಎಂಬುದು ವೈದ್ಯಕೀಯ ಪರಿಭಾಷೆಯಲ್ಲಿ ಹೇಳುವುದಾದರೆ ತಂದೆ (XY) ತಾಯಿ(XX)ಗಳ ವಂಶವಾಹಿನಿಯ ಸಂಯೋಗದಿಂದ ಶಿಶುವಿನ ಲಿಂಗ ನಿರ್ಧರಿಸಲಾಗುತ್ತದೆ, ಹೇಗೆಂದರೆ ತಂದೆಯ Y ಮತ್ತು ತಾಯಿಯ X Chromosomeಗಳ ಸಂಯೋಗವಾದರೆ ಗಂಡು(XY) ಮಗು, ಹಾಗೂ ತಂದೆಯ X ಮತ್ತು ತಾಯಿಯ X Chromosomeಗಳ ಸಂಯೋಗವಾದರೆ ಹೆಣ್ಣು(XX) ಮಗು ಜನಿಸುವುದು. ಈ ವಚನ ಕೇವಲ ಗಂಡು ಮತ್ತು ಹೆಣ್ಣಿನ ಲಿಂಗವನ್ನು ಗುರುತಿಸಿ ನಿಲ್ಲದೇ ತೃತೀಯ ಲಿಂಗಿಗಳ ಲಿಂಗನಿರ್ಧಾರಕದ ಅಂಶದ ಬಗ್ಗೆಯೂ ಮೊದಲಬಾರಿಗೆ ಯೋಚಿಸಿದೆ. ಇದರಿಂದ ವಚನಕಾರರು ವೈಜ್ಞಾನಿಕ ಚಿಂತಕರೂ ಆಗಿದ್ದರು, ಜೀವವಿಜ್ಞಾನದಲ್ಲಿ ವಿಶೇಷ ಆಸಕ್ತಿ ವಹಿಸಿದ್ದರು ಎಂಬುದು ಸ್ಪಷ್ಟವಾಗುತ್ತದೆ.