ವಚನಗಳಲ್ಲಿ ಖಗೋಳ ವಿಜ್ಞಾನ
ನಾವು ವಾಸಿಸುವ ಈ ಭೂಮಿ, ಗ್ರಹಗಳು, ನಕ್ಷತ್ರ ಮೊದಲಾದ ಎಲ್ಲ ಆಕಾಶ ಕಾಯಗಳು ಹೇಗೆ ಉಗಮವಾದವು ಎನ್ನುವ ಕುತೂಹಲದ ಪ್ರಶ್ನೆಗೆ ಶರಣರ ವಚನಗಳಲ್ಲಿ ಕೆಲವು ಆಶ್ಚರ್ಯಕರ ಮಾಹಿತಿಗಳು ಸಿಗುತ್ತವೆ. ಆಧುನಿಕ ಖಗೋಳ ವಿಜ್ಞಾನಿಗಳು ಗುರುತಿಸಿದ ಅಂಶಗಳಿಗೆ ಶರಣರ ವಿಚಾರಗಳು ತಾಳೆಯಾಗುತ್ತಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಖಗೋಳ ವಿಜ್ಞಾನಿಗಳ ಸಂಶೋಧನೆಯಲ್ಲಿ ಸೃಷ್ಟಿಯ ಉಗಮದ (ವಿಶ್ವದ ಹುಟ್ಟು) ಕುರಿತು ಇಲ್ಲಿಯವರೆಗೆ ನಡೆಸಿದ ಸಾಧನೆಯನ್ನು ಮೊದಲು ನೋಡೋಣ.
ರಾತ್ರಿಯ ಶುಭ್ರ ಆಕಾಶವನ್ನು ನೋಡಿದಾಗ ನಮ್ಮ ಕಣ್ಣಿಗೆ ಅಸಂಖ್ಯಾತ ಆಕಾಶಕಾಯಗಳು ಗೋಚರಿಸುತ್ತವೆ, ವಿಜ್ಞಾನಿಗಳ ಒಂದು ಅಂದಾಜಿನಂತೆ ನಮ್ಮ ಬರಿಗಣ್ಣಿಗೆ ಸುಮಾರು 6000 ನಕ್ಷತ್ರಗಳು ಕಾಣುತ್ತವೆ. ಆದರೆ ಆಕಾಶದಲ್ಲಿರುವುದು ಇಷ್ಟೇ ನಕ್ಷತ್ರಗಳಲ್ಲ, ಪ್ರಬಲ ದೂರದರ್ಶಕದ ಮೂಲಕ ನೋಡಿದಾಗ ಕಾಣುವ ನಕ್ಷತ್ರಗಳ ಸಂಖ್ಯೆ ಒಂದು ನೂರು ಕೋಟಿ ಕೋಟಿ ಕೋಟಿ (1ರ ನಂತರ 30 ಸೊನ್ನೆ). ಇಷ್ಟೊಂದು ವಿಶಾಲವಾಗಿ ಹರಡಿರುವ ನಕ್ಷತ್ರಗಳು ಆಗಸದಲ್ಲಿ ಗುಂಪು ಗುಂಪಾಗಿ ಚದುರಿಕೊಂಡಿವೆ.
ಸುಮಾರು 10 ಸಾವಿರ ಕೋಟಿ ನಕ್ಷತ್ರಗಳ ಒಂದು ಗುಂಪಿಗೆ ‘ಗ್ಯಾಲಾಕ್ಷಿ’ ಎಂದು ಕರೆಯುತ್ತಾರೆ. ಬ್ರಹ್ಮಾಂಡದಲ್ಲಿ ಒಂದು ಲಕ್ಷ ಕೋಟಿ ಕೋಟಿ ಗ್ಯಾಲಾಕ್ಷಿಗಳನ್ನು ಸದ್ಯಕ್ಕೆ ಗುರುತಿಸಿದ್ದಾರೆ. ನಮ್ಮ ಸೂರ್ಯನನ್ನು ಒಳಗೊಂಡ ಗ್ಯಾಲಾಕ್ಷಿಯ ಹೆಸರು ‘ಕ್ಷೀರಪಥ’ (milky way), ಇದನ್ನು 1785 ರಲ್ಲಿ ಜರ್ಮನಿಯ ವಿಲಿಯಮ್ ಹರ್ಸಲ್ ಎಂಬ ವಿಜ್ಞಾನಿಯು ಕಂಡುಹಿಡಿದರು. ಇದರಲ್ಲಿ ನಾಲ್ಕು ಬಿಲಿಯನ್ ನಕ್ಷತ್ರಗಳಿವೆ. ಇಷ್ಟೊಂದು ಕಲ್ಪನೆಗೂ ನಿಲುಕದ ವಿಶಾಲ ನಕ್ಷತ್ರ ಸಮೂಹಗಳು ಹೇಗೆ ಮತ್ತು ಎಂದು ಹುಟ್ಟಿದವು ಎಂಬುದನ್ನು ಅರಿತುಕೊಳ್ಳಲು ಮಾನವನು ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿದ್ದಾನೆ.
ಆಧುನಿಕ ವಿಜ್ಞಾನಿ ಎಡ್ವಿನ್ ಹಬಲ್ ಮೊಟ್ಟ ಮೊದಲಿಗೆ 1920 ರಲ್ಲಿ ಈ ವಿಶ್ವದ ಸೃಷ್ಟಿ ಸುಮಾರು 12 ರಿಂದ 20 ಬಿಲಿಯನ್ (ಅಥವಾ 1200-2000ಕೋಟಿ) ವರ್ಷಗಳ ಹಿಂದೆ ಪ್ರಾರಂಭವಾಗಿರಬೇಕೆಂದು ತರ್ಕಿಸಿದ್ದನು (ಹಬಲ್ಲನ ನಿಯಮ). ಆದರೆ ಇತ್ತೀಚಿನ ಸಂಶೋಧನೆಗಳು ನಮ್ಮ ವಿಶ್ವದ ವಿಕಾಸ ಸುಮಾರು 13.75 ಬಿಲಿಯನ್ ಅಥವಾ 1375 (ಶೇಕಡ 0.11 ರಷ್ಟು ಮಾತ್ರ ವ್ಯತ್ಯಾಸ ಇರಬಹುದು) ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಗಿರಬೇಕೆಂದು ತರ್ಕಿಸಿದ್ದಾರೆ. ಬಹಳಷ್ಟು ವಿಜ್ಞಾನಿಗಳು ಈ ತರ್ಕಕ್ಕೆ ಸಹಮತ ಹೊಂದಿದ್ದಾರೆ. ಆದ್ದರಿಂದ ಮಹಾಸ್ಫೋಟದ ಸಮಯದಿಂದ ಲೆಕ್ಕ ಹಾಕಿದರೆ ನಮ್ಮ ವಿಶ್ವದ ವಯಸ್ಸು ಸುಮಾರು 1375 ಕೋಟಿ ವರ್ಷ (ಕಾಸ್ಮಾಲಜಿ ಕಾಲ ಮಾಪನದಲ್ಲಿ) ಎಂದು ಹೇಳಬಹುದು.
ಖಗೋಳ ವಿಜ್ಞಾನಿಗಳ ಅನಿಸಿಕೆಯಂತೆ ಸುಮಾರು 13.75 ಬಿಲಿಯನ್ ವರ್ಷಗಳ ಹಿಂದೆ ಈ ಬ್ರಹ್ಮಾಂಡದಲ್ಲಿ ಏನೂ ಇರಲಿಲ್ಲ (ಬ್ರಹ್ಮಾಂಡವೇ ಅಸ್ತಿತ್ವದಲ್ಲಿರಲಿಲ್ಲ!) ಆಗ ಒಂದು ಚಿಕ್ಕ ಪರಮಾಣು ಹುಟ್ಟಿಕೊಂಡಿತು (ಬ್ರಹ್ಮಾಂಡದ ಉಗಮಕ್ಕೆ ಮೂಲವಾಗಿ). ಅದು ಎಲ್ಲಿಂದ ಬಂದಿತು, ಹೇಗೆ ಬಂದಿತು ಎಂಬುದು ಇನ್ನೂ ನಿಗೂಢವಾಗಿದೆ. ಅದನ್ನು ಆದಿ ಮೂಲ ಪರಮಾಣು (primitive atom) ಎಂದು ಕರೆದಿದ್ದಾರೆ. ಸುಮಾರು 1375 ಕೋಟಿ ವರ್ಷಗಳ ಹಿಂದೆ, ಒಂದು ಸೆಕೆಂಡಿನ ಅತ್ಯಂತ ಚಿಕ್ಕ ಛೇದಾಂಶದ ಎಂದರೆ 10ರ ಋಣ ಘಾತ-43 (10ರ ಘಾತ -43 = 10 -43) ಸೆಕೆಂಡ್ ಕಾಲದಲ್ಲಿ ವಿಶ್ವ ವಿಕಾಸ ಆರಂಭವಾಯಿತೆಂದು ಲೆಕ್ಕ ಹಾಕಿದ್ದಾರೆ. ಆ ಸೆಕೆಂಡಿನ ಕನಿಷ್ಟ ಛೇದಾಂಶಕ್ಕೆ (10 ಛೇದಾಂಶ -40 = 10 -40) ಹಬಲ್ನ ಸ್ಥಿರ ಸಂಖ್ಯೆ ಎಂದು ಕರೆದಿದ್ದಾರೆ. ಅದಕ್ಕಿಂತ ಹಿಂದಿನ (ಎಂದರೆ ಒಂದು ಸೆಕೆಂಡಿನ ಇನ್ನೂ ಸಣ್ಣ ವಿಭಾಗವನ್ನು) ಕಾಲವನ್ನು ಗುರುತಿಸಲು ಸಾಧ್ಯವಿಲ್ಲ ಎಂಬುದು ವಿಜ್ಞಾನಿ ಹಬಲ್ನ ಲೆಕ್ಕ. ಇಂದಿನ ಈ ವಿಶಾಲ ವಿಶ್ವ ಸೃಷ್ಟಿಗೆ ಮೊದಲು ಒಂದೇ ಒಂದು ಆ ಚಿಕ್ಕ ಕಣ ಕಾರಣವೆಂದು ವಿಜ್ಞಾನಿಗಳು ನಿರ್ಧರಿಸಿದ್ದಾರೆ, ಪರಮಾಣುವಿನಲ್ಲಿರುವ ಒಂದು ಫೋಟಾನಿನ ಸುಮಾರು ಕೋಟಿ-ಕೋಟಿ ಭಾಗಕ್ಕಿಂತಲೂ ಚಿಕ್ಕದಾದ ಎಲ್ಲದಕ್ಕೂ ಮೂಲವಾದ ಫೋಟಾನ್ (photon) ಕಣದಿಂದ ಈ ವಿಶ್ವ ಸೃಷ್ಟಿಯಾಯಿತು ಎಂಬುದು ಈಗ ಬಹಳಷ್ಟು ವಿಜ್ಞಾನಿಗಳ ತೀರ್ಮಾನ. ಊಹೆಗೆ ನಿಲುಕದಷ್ಟು ಆ ಚಿಕ್ಕ ಕಣ ಅಥವಾ ಕಿಡಿ (ಫೋಟಾನ್ – ಕ್ವಾರ್ಕ್ನ ಮೇಲಿನ ಎರಡು ಕಣಗಳಲ್ಲಿ ಒಂದು) ಒಳಗೇ ಶಾಖದಿಂದ ಉಬ್ಬಿ ತೂಕವನ್ನೂ ಗಳಿಸಿಕೊಳ್ಳುತ್ತಾ, ಒಂದು ಸೆಕೆಂಡಿನ 10 -40 ದಿಂದ 10 -38 ಕಾಲದಲ್ಲಿ ಸ್ವಲ್ಪ ಉಬ್ಬಿ ಆ ಛೇದಾಂಶ ಸೆಕೆಂಡಿನಲ್ಲಿ ಒಂದು ನೆಲ್ಲಿಕಾಯಿ ಅಥವಾ ಒಂದು ಲಿಂಬೆ ಹಣ್ಣಿನ ಗಾತ್ರದಷ್ಟು ದಪ್ಪವಾಯಿತು ಎಂದು ವಿಶ್ವ ವಿಕಾಸದ ಕೆಲವು ಗಣಿತಜ್ಞರ ಲೆಕ್ಕಾಚಾರ. ಆಗ ಅದರಿಂದ ಆಚೆ ಖಾಲಿ ಸ್ಥಳ ಆಥವಾ ಆಕಾಶ ಎಂಬುದು ಇರಲಿಲ್ಲ. ಸಮಯ ಎಂಬುದೂ ಇರಲಿಲ್ಲ. ಆಕಾಶ ಅಥವಾ ಸ್ಪೇಸ್ ಮತ್ತು ಸಮಯ ಅದರೊಳಗೇ ಇದ್ದು, ಅವೆರಡನ್ನೂ ಅದು ಉಂಟುಮಾಡಿಕೊಳ್ಳುತ್ತಿತ್ತು. ಆಗ ಅದು ಅಸಾಧಾರಣ ಊಹೆಗೂ ನಿಲುಕದ ತೂಕವನ್ನು ಹೊಂದಿ, 1000 ಬಿಲಿಯನ್ ಡಿಗ್ರಿ ಸೆಲ್ಸಿಯಸ್ಗೂ ಹೆಚ್ಚಿನ ಶಾಖದಿಂದ ಒಳಗೇ ಕುದಿಯುತ್ತಿತ್ತು. ಆಗ ಯಾವ ಕಣವೂ ಈಗಿನ ಸಹಜ ಸ್ಥಿತಿಯಲ್ಲಿರದೆ ಪ್ಲಾಸ್ಮಾ ಸ್ಥಿತಿಯಲ್ಲಿತ್ತು. 10 -40 ಸೆಕೆಂಡು ಎಂದರೆ ಒಂದು ಸೆಕೆಂಡನ್ನು 1ರ ಮುಂದೆ 40 ಸೊನ್ನೆಗಳಿರುವ ಅಂಕೆಯಿಂದ ಭಾಗಿಸಿದರೆ ಬರುವ ಕಾಲ, ಆದರೆ ಅದು ಊಹೆಗೆ ನಿಲುಕದ ಸಮಯ, ಕೇವಲ ಗಣಿತದ ಸಾಧಿತ ಸಂಖ್ಯೆ. ಆ ಆದಿ ಮೂಲ ಪರಮಾಣುವಿನ ಆಂತರಿಕ ಶಾಖದ ಹೆಚ್ಚಳದ ಪರಿಣಾಮವಾಗಿ ಉಬ್ಬುವಿಕೆ ಮುಂದುವರೆದು ಒಮ್ಮೆಲೇ ಸ್ಫೋಟ ಸಂಭವಿಸಿತು. ಇದನ್ನು ‘ಮಹಾಸ್ಫೋಟ’ Big Bang ಎಂದು ಕರೆಯುತ್ತಾರೆ.
ಸ್ಫೋಟ ಸಂಭವಿಸಿದುದರ ಪರಿಣಾಮವಾಗಿ ದ್ರವ್ಯವು ಎಲ್ಲೆಡೆ ಚದುರಿಹೋಯಿತು, ನಂತರ ದ್ರವ್ಯಗಳ ಮರು ಸಾಂದ್ರೀಕರಣ ಪ್ರಕ್ರಿಯೆ ಪ್ರಾರಂಭವಾಗಿ ಗ್ರಹ ನಕ್ಷತ್ರಗಳು ಜನ್ಮತಾಳಿದವು. ವಿವರವಾಗಿ ನೋಡುವುದಾದರೆ ಸೃಷ್ಠಿಯಾಗಿ ನಾಲ್ಕು ನಿಮಿಷಗಳ ನಂತರ ಪರಮಾಣು ಪ್ರಕ್ರಿಯೆ ಆರಂಭವಾಗಿ, ಪ್ರೋಟಾನುಗಳು (ಜಲಜನಕದ ಬೀಜ) ಮತ್ತು ಡಿಯಾಟರಿಯಮ್ ಬೀಜಗಳು ಹೀಲಿಯಮ್ (2 ಪ್ರೋಟಾನು ಮತ್ತು 2 ನ್ಯೂಟ್ರಾನ್ಗಳುಳ್ಳದ್ದು)ಗಳು ಬೆಳಕಿನ ಸೆಲೆಯೊಂದಿಗೆ (ನ್ಯೂಕ್ಲಿಯೋಸಿಂಥೆಸಿಸ್) ರಚನೆಯಾದವು. ಹೀಗೆ ಕೇವಲ ಸ್ವಲ್ಪ ಭಾಗ ಮಾತ್ರ ಹೀಲಿಯಮ್ ಆದವು, ಕಾರಣ ಸ್ಥಿರ ಪರಮಾಣು ರಚನೆಯಾಗಲು ಇನ್ನೂ ಅತಿಯಾದ ಶಾಖವಿತ್ತು. ನಂತರ ಶಾಖವು ಕಡಿಮೆಯಾದಂತೆ ಪರಮಾಣು ಕೇಂದ್ರ ಸಂಯೋಜನೆ (ನ್ಯೂಕ್ಲಿಯೋಸಿಂಥೆಸಿಸ್) ಆಗಿದ್ದರಿಂದ ನ್ಯೂಟ್ರಾನ್ಗಳು ಹೀಲಿಯಂನ ಕೇಂದ್ರದಲ್ಲಿ ಸೇರಿ ವಿದಳನಾ ಕ್ರಿಯೆ ನಡೆಯವುದು ನಿಂತಿತು.
ಜಲಜನಕ ಹೀಲಿಯಮ್ ಅಣುಗಳು ಜೊತೆ ಜೊತೆಯಾಗಿ ಇದ್ದವು. ಇಲೆಕ್ಟ್ರಾನುಗಳು ಋಣ ವಿದ್ಯುತ್ ಹೊಂದಿ ಸ್ವತಂತ್ರವಾಗಿ ಸಂಚರಿಸುತ್ತಿದ್ದವು. ಆಗ ವಸ್ತುವು ಪ್ಲಾಸ್ಮಾ ಸ್ಥಿತಿಯಲ್ಲಿತ್ತು (ನಮ್ಮ ನಕ್ಷತ್ರ ಸೂರ್ಯನ ಗರ್ಭದಲ್ಲಿರುವ ವಸ್ತು ಇದೇ ಪ್ಲಾಸ್ಮಾ ಸ್ಥಿತಿಯಲ್ಲಿದೆ). ವಿಶ್ವವು ವಿಸ್ತಾರವಾಗಿ ವಿಕಾಸವಾದಂತೆ ತಣ್ಣಗಾಗುತ್ತಾ 6000 ಡಿಗ್ರಿ ಸೆಲ್ಸಿಯಸ್ ತಲುಪಿತು. ಈ ಶಾಖದಲ್ಲಿ ಅಣುರಚನೆಯಾಗಿ ಪರಮಾಣು ಬೀಜಗಳು ಎಲೆಕ್ಟ್ರಾನುಗಳನ್ನು ಹಿಡಿದಿಟ್ಟುಕೊಳ್ಳಬಲ್ಲವಾದವು. ಜಲಜನಕ ಮತ್ತು ಹೀಲಿಯಮ್ ರಚನೆಯಾದಂತೆ ಶಾಖವು ಕಡಿಮೆಯಾಗತೊಡಗಿತು. ನಂತರ ತಟಸ್ಥ ಅಣುಗಳ ರಚನೆ ಅಧಿಕವಾಗಿ ಪ್ರೋಟಾನುಗಳು ತಡೆಯಿಲ್ಲದೆ ಸಂಚರಿಸುವಂತಾಗಿ ಇಡೀ ವಿಶ್ವವು ಮೊಟ್ಟ ಮೊದಲ ಬಾರಿಗೆ ಪಾರದರ್ಶಕವಾಯಿತು.
ವಿಶ್ವವು ವಿಸ್ತಾರವಾಗಿ ವಿಕಾಸವಾಗುವ ಈ ಪ್ರಕ್ರಿಯೆ ಮುಂದಿನ 3,00,000(ಮೂರು ಲಕ್ಷ) ವರ್ಷ ನಡೆಯಿತು. ವಿಶ್ವ ಉಬ್ಬುತ್ತಾ ವಿಶಾಲವಾಗುತ್ತಾ ತಣ್ಣಗಾಗುತ್ತಾ ಇಂದಿನ ಸೂರ್ಯನ ಮೇಲ್ಮೈ ಶಾಖಕ್ಕೆ (6000 ಡಿಗ್ರಿ ಸೆಲ್ಸಿಯಸ್) ಅಣುರಚನೆ ಸಾಧ್ಯವಾಯಿತು. ಪರಮಾಣು ಬೀಜಗಳು ಇಲೆಕ್ಟ್ರಾನುಗಳನ್ನು ಹಿಡಿದಿಟ್ಟುಕೊಳ್ಳಬಲ್ಲವಾದವು. ಜಲಜನಕ ಮತ್ತು ಹೀಲಿಯಮ್ ರಚನೆಯಾದಂತೆ ವಿಶ್ವದ ಸಾಂದ್ರತೆ ಮತ್ತು ಶಾಖ ಗಣನೀಯವಾಗಿ ಕಡಿಮೆಯಾಯಿತು. ರೇಡಿಯೇಶನ್ ನಿಂದ ವಿಶ್ವ ಮತ್ತಷ್ಟು ತಣ್ಣಗಾಗಿ, -270 ಡಿಗ್ರಿ ಸೆಂ.ವರೆಗೂ ಬಂದಿತು. ಅಂದು ಸ್ಫೋಟಗೊಂಡು ಹಿಗ್ಗುತ್ತಿರುವ ಈ ವಿಶ್ವದ ಹಿಗ್ಗುವಿಕೆ ಇನ್ನೂ ನಿಂತಿಲ್ಲ. ಅಗಾಧ ವೇಗದಲ್ಲಿ ಹಿಗ್ಗುತ್ತಲೇ ಇದೆ. ಇದಿಷ್ಟು ವಿಶ್ವದ ಉಗಮದ ಬಗ್ಗೆ ವಿಜ್ಞಾನಿಗಳು ಇದುವರೆಗೆ ಕಂಡುಕೊಂಡ ಅಂಶಗಳು. ಇವೆಲ್ಲ ಇತ್ತೀಚಿಗೆ ಅಂದರೆ ಸುಮಾರು 17ನೇ ಶತಮಾನದಿಂದೀಚೆಗೆ ಕಂಡುಕೊಂಡಿರುವ ಅಂಶಗಳು.
ನಮ್ಮ ಶರಣರು ಬಹುತೇಕ ಇವೇ ಅಂಶಗಳನ್ನು 12ನೇ ಶತಮಾನದಲ್ಲಿ ತಮ್ಮ ವಚನಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಆದರೆ ನಾವುಗಳು ವಚನಗಳನ್ನು ಕೇವಲ ಆಧ್ಯಾತ್ಮಿಕ ಹಾಗೂ ಸಾಮಾಜಿಕ ದೃಷ್ಟಿಕೋನದಿಂದ ನೋಡಿದುದರ ಪರಿಣಾಮವಾಗಿ ಅವರ ವೈಜ್ಞಾನಿಕ ಮತ್ತು ವೈಚಾರಿಕ ವಿಚಾರಗಳನ್ನು ಅರಿಯದೆ ಇರುವುದು ದುರಂತವೆ ಸರಿ. ವಚನಗಳಲ್ಲಿ ಅಡಗಿದ ವೈಜ್ಞಾನಿಕ ಅಂಶಗಳನ್ನು ಅರಿತುಕೊಂಡು ಜಗತ್ತಿಗೆ ವಚನಕಾರರ ಸಂಶೋಧನಾ ಮನೋಧರ್ಮವನ್ನು ಪರಿಚಯಿಸಬೇಕಾಗಿದೆ. ವಿಶ್ವದ ಉಗಮದ ಕುರಿತು ವಚನಗಳಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ನೋಡುವಾ.
ಅಲ್ಲಮಪ್ರಭುಗಳು ತಮ್ಮ ಅನೇಕ ವಚನಗಳಲ್ಲಿ ಸೃಷ್ಟಿಯ ಉಗಮದ ಕುರಿತು ಉಲ್ಲೇಖಿಸಿದ್ದಾರೆ.
ಏನೂ ಏನೂ ಇಲ್ಲದ ಬಯಲೊಳಗೊಂದು
ಬಗೆಗೊಳಗಾದ ಬಣ್ಣ ತಲೆದೋರಿತ್ತು.
ಆ ಬಣ್ಣವು ಆ ಬಯಲ ಶೃಂಗರಿಸಲು,
ಬಯಲು ಸ್ವರೂಪಗೊಂಡಿತ್ತು.
ಅಂತಪ್ಪ ಸ್ವರೂಪಿನ ಬೆಡಗು ತಾನೆ,
ನಮ್ಮ ಗುಹೇಶ್ವರಲಿಂಗದ ಪ್ರಥಮ ಬಿತ್ತಿ
ಈ ವಚನದಲ್ಲಿ ಬ್ರಹ್ಮಾಂಡದ ಪ್ರಾರಂಭದಲ್ಲಿ ಏನೂ ಇರಲಿಲ್ಲ, ಆದಿ ಮೂಲ ಪರಮಾಣು ಸಹ ಬಯಲಿನಲ್ಲಿ ಉದ್ಭವವಾದ ವಿಷಯವನ್ನು ಅರುಹುತ್ತಾ, ‘ಒಂದು ಬಗೆಯ ಬಣ್ಣ ತಲೆದೋರಿತ್ತು’ ಎನ್ನುವಲ್ಲಿ ಆದಿಮೂಲ ಪರಮಾಣುವಿನ ಉಗಮದ ಸುಳಿಹು ನೀಡಿದ್ದಾರೆ. ಮುಂದುವರೆದು ‘ಆ ಬಣ್ಣವು ಆ ಬಯಲ ಶೃಂಗರಿಸಲು’ ಎಂಬಲ್ಲಿ ಆದಿ ಮೂಲ ಪರಮಾಣುವಿನ ಅಂತರಂಗದಲ್ಲಿ ಶಾಖ ಹೆಚ್ಚಾಗಿ ಉಬ್ಬುತ್ತಾ, ಸೃಷ್ಟಿ ಸ್ವರೂಪಗೊಳ್ಳುವುದನ್ನು ಬೆಡಗು ಎಂದು ಬೆರಗಾಗಿದ್ದಾರೆ ಹಾಗೂ ಇದೇ ಗುಹೇಶ್ವರಲಿಂಗದ ಪ್ರಥಮ ಬಿತ್ತಿ ಎನ್ನುತ್ತಾ ಕಾಣುವ ಸೃಷ್ಟಿಯ ಪ್ರಾರಂಭ ಇಲ್ಲಿಂದ ಆಗಿದೆ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಆದಿ ಅನಾದಿ ಒಂದಾದಂದು,
ಚಂದ್ರಸೂರ್ಯರೊಂದಾದಂದು,
ಧರೆ ಆಕಾಶ ಒಂದಾದಂದು; ಗುಹೇಶ್ವರಲಿಂಗನು ನಿರಾಳನು.
ಈ ವಚನದಲ್ಲಿಯೂ ಸೃಷ್ಟಿಯ ರಚನೆಗೆ ಪೂರ್ವದಲ್ಲಿ ಗ್ರಹ ನಕ್ಷತ್ರಗಳೆಲ್ಲವೂ ಆದಿಮೂಲ ಪರಮಾಣುವಿನಲ್ಲಿ ಅಡಗಿದ್ದ ಸತ್ಯವನ್ನು ಹಿಡಿದಿಟ್ಟಿದ್ದಾರೆ.
ಆದಿ ಸ್ವಯಂಭುವಿಲ್ಲದ ಮುನ್ನ, ಸಂಗನಿಸ್ಸಂಗವಿಲ್ಲದ ಮುನ್ನ,
ನಕ್ಷತ್ರಗ್ರಹಂಗಳಿಲ್ಲದ ಮುನ್ನ, ಯೋಗ ಕರಣಂಗಳಿಲ್ಲದ ಮುನ್ನ,
ಖೇಚರ ಭೂಚರರಿಲ್ಲದ ಮುನ್ನ, ಆರಾರೂ ಇಲ್ಲದ ಮುನ್ನ,
ಆಕಾಶ ಮಾರುತರಿಲ್ಲದ ಮುನ್ನ, ಅಂಬುದಿs ಕಮಠರಿಲ್ಲದ ಮುನ್ನ_
ಹರಿಬ್ರಹ್ಮಾದಿಗಳಾರ ನಿಲವಿಲ್ಲದ ಮುನ್ನ
ಹಿಮಕರದಿನಕರ ಸುಳುಹಿಲ್ಲದ ಮುನ್ನ_
ಹಿಂದಿಲ್ಲ ಮುಂದಿಲ್ಲ ಒಂದೂ ಇಲ್ಲದ ಮುನ್ನ,
ಗುಹೇಶ್ವರನಿರ್ದ ತನ್ನ ತಾನರಿಯದಂತೆ
ಸೃಷ್ಟಿಯ ಉಗಮದ ಹಿನ್ನೋಟವನ್ನು ಈ ವಚನದಲ್ಲಿ ಅಲ್ಲಮರು ನಮ್ಮೆದುರಿಗೆ ತಂದಿಡುತ್ತ ಸ್ವಯಂಭು, ಸಂಗನಿಸ್ಸಂಗ, ಗ್ರಹನಕ್ಷತ್ರ, ಯೋಗ ಕರಣ, ಖೇಚರ, ಭೂಚರ, ಆಕಾಶ, ಮಾರುತ, ಅಂಬುಧಿ, ಕಮಠ ಇವರುಗಳೆಲ್ಲರ ಉಗಮಕ್ಕಿಂತಲೂ ಮುನ್ನ ಈ ಸೃಷ್ಟಿಯ ಆದಿಮೂಲ ಪರಮಾಣುವಿನ ರೂಪದಲ್ಲಿ ಗುಹೇಶ್ವರ ತನ್ನ ತಾನರಿಯದಂತೆ ಇದ್ದ ಎನ್ನುವಲ್ಲಿ ವಿಜ್ಞಾನಿಗಳ ನಂಬಿಕೆಯ ಸೃಷ್ಟಿಯ ಹುಟ್ಟು ಮತ್ತು ಬೆಳವಣಿಗೆಯ ಎಲ್ಲ ಹಂತಗಳನ್ನು ಈ ವಚನ ಒಳಗೊಂಡಿದೆ.
ಗೋಚರಿಸುವ ಸೃಷ್ಟಿಯ ಉಗಮದ ಕುರಿತು ರಚಿಸಿದ ವಚನಗಳನ್ನು ನಾವು ಪ್ರಮುಖವಾಗಿ ಅಲ್ಲಮಪ್ರಭುಗಳು, ಅಕ್ಕಮಹಾದೇವಿ, ಚೆನ್ನಬಸವಣ್ಣನವರು, ಸಿದ್ದರಾಮೇಶ್ವರರು, ಬಾಲಸಂಗಯ್ಯನವರು, ತೋಂಟದ ಸಿದ್ದಲಿಂಗೇಶ್ವರರ ವಚನಗಳಲ್ಲಿ ಕಾಣುತ್ತೇವೆ. ಸಿದ್ಧರಾಮೇಶ್ವರರು ತಮ್ಮ ಒಂದು ವಚನದಲ್ಲಿ ಈ ಸೃಷ್ಟಿ ಹೇಗಾಯಿತು ಎಂದು ತಿಳಿಸುತ್ತಾ-
ಈ ರಚನೆಯೆಂಬುದು
ಇಮ್ಮಡಿ ಮುಮ್ಮಡಿಯಿಂದಲ್ಲದೆ ಒಮ್ಮಡಿಯಿಂದಾಗದು.
ಆದಿಯಲ್ಲಿ ಬ್ರಹ್ಮ, ಅನಾದಿಯಲ್ಲಿ ಏನೆಂಬುದಿಲ್ಲ.
ಇತ್ತಲದು ಮಾಯಾಶಕ್ತಿಯಿಂ ಮಾಧವನ ಉತ್ಪತ್ತಿ;
ಮಾಧವನ ಉತ್ಪತ್ತಿಯಂ ಮೂಲೋಕ ನಿಮಿರಿತ್ತು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
ಈ ಸೃಷ್ಟಿಯು ಕೇವಲ ಒಂದೇ ದಿನದಲ್ಲಿ ಉದಯಿಸಿದೆ ಎಂದು ನಂಬುವ ಅನೇಕ ಧಾರ್ಮಿಕ ಗ್ರಂಥಗಳ ವಿಚಾರವನ್ನು ಸಿದ್ಧರಾಮೇಶ್ವರರು ತಳ್ಳಿಹಾಕುತ್ತ, ಇದು “ಇಮ್ಮಡಿ ಮುಮ್ಮಡಿಯಿಂದಲ್ಲದೆ ಒಮ್ಮಡಿಯಿಂದಾಗದು” ಎಂದಿದ್ದಾರೆ. ಈ ಸೃಷ್ಟಿಯು ಮಹಾಸ್ಫೋಟದ ಮೂಲಕ ಅನೇಕ ಹಂತಗಳನ್ನು ಕ್ರಮಿಸಿ ಈಗಿನ ಸ್ಥಿತಿ ತಲುಪಿದೆ, ಇದೂ ಕೂಡ ಒಂದು ಸ್ಥಿತಿಯಲ್ಲ, ಬದಲಾವಣೆ ಹೊಂದುತ್ತಲೇ ನಡೆದಿರುವ ಪ್ರಕ್ರಿಯೆ ಎಂಬ ವೈಜ್ಞಾನಿಕ ಸತ್ಯವನ್ನು ಸೂಚಿಸಿದ್ದಾರೆ.
ಈ ಆಗಸದಲ್ಲಿ ಹರಡಿಕೊಂಡಿರುವ ಈ ಎಲ್ಲ ಆಕಾಶಕಾಯಗಳು ಎಂದು ಹೇಗೆ ಯಾವ ಮೂಲದಿಂದ ಉದ್ಭವಿಸಿವೆ ಎಂಬ ಪ್ರಶ್ನೆಯ ಜಾಡನ್ನು ಹಿಡಿದು 12ನೇ ಶತಮಾನದಲ್ಲಿ ಆದಯ್ಯನವರು ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡಿರುವುದು ಅವರ ಈ ವಚನದಿಂದ ತಿಳಿದು ಬರುತ್ತದೆ.
ಎಂಬತ್ತುನಾಲ್ಕು ಲಕ್ಷ ಜೀವಜಂತುವಿನೊಳಗಿಪ್ಪ ಆತ್ಮನು
ಏಕಾತ್ಮನೊ, ಹಲವಾತ್ಮನೊ, ಬಲ್ಲಡೆ ನೀವು ಹೇಳಿರೆ?
ಅನಂತಕೋಟಿಬ್ರಹ್ಮಾಂಡದೊಳಗಿಪ್ಪ ಬ್ರಹ್ಮವು
ಏಕಬ್ರಹ್ಮವೊ, ಅನಂತಬ್ರಹ್ಮವೊ, ಬಲ್ಲಡೆ ನೀವು ಹೇಳಿರೆ?
ಬ್ರಹ್ಮಾಂಡವೊಂದು ತತ್ತಿ ಒಡೆದು, ಬಹಿರಾವರಣವಾದಲ್ಲಿ ಆ ಬ್ರಹ್ಮವು ಹೋಗಿ
ಮತ್ತೊಂದು ಬ್ರಹ್ಮಾಂಡದಲ್ಲಿ ಹೊಕ್ಕುದ ಕಂಡಡೆ,
ಕಂಡು ಬಲ್ಲವರು ನೀವು ಹೇಳಿರೆ.
ಗಂಧರ್ವಪಟ್ಟಣದಲ್ಲಿ ಹುಟ್ಟುವ ಬಹು ಬಣ್ಣವ ಬಲ್ಲರೆ ಬಲ್ಲ.
ಆಕಾಶಕ್ಕಡರಿದ ವಿಹಂಗನ ಮಾರ್ಗವ ಬಲ್ಲರೆ ಬಲ್ಲ.
ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜವ ಬಲ್ಲರೆ ಬಲ್ಲ.
ಆಕಾಶಕ್ಕಡರಿದ ವಿಹಂಗನ ಮಾರ್ಗವ ಬಲ್ಲರೆ ಬಲ್ಲ- ಎಂಬ ವಾಕ್ಯವನ್ನು ಗಮನಿಸಿ. ಆಗಸದಲ್ಲಿ ಹರಡಿದ ಆಕಾಶಕಾಯಗಳ ನೋಟವನ್ನು ವರ್ಣಿಸುವ ಮಾತಿದು. ಜೀವಿಗಳಲ್ಲಿ ಚೈತನ್ಯಾತ್ಮಕವಾಗಿ ಅಂದರೆ ದೇಹದ ಪ್ರತಿ ಅಣುವಿನ ಕೇಂದ್ರದ ಸುತ್ತ ಸುತ್ತುವ ಇಲೆಕ್ಟ್ರಾನ್ಗಳ ಸುತ್ತುವ ಶಕ್ತಿಯಾಗಿ(ಪರಮಾಣು ಶಕ್ತಿ) ಅಡಗಿದೆ ಎಂಬ ಸೂಕ್ಷ್ಮತೆಯನ್ನು ಅರಿತಿದ್ದರು. ಸಿದ್ದರಾಮೇಶ್ವರರು ತಮ್ಮ ಒಂದು ವಚನದಲ್ಲಿ ಅಣುವಿನೊಳಗೆ ಅಣುವಾಗಿಪ್ಪಿರಿ ಎಲೇ ದೇವಾ ಎಂದಿರುವರು. ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ಈ ಸೃಷ್ಟಿಯು ಯಾವಾಗ ಉದ್ಭವವಾಯಿತು ಎಂಬುದನ್ನು ವಿವರಿಸುತ್ತ-
ಮಹಾಕಾಲದಲ್ಲಿ ನಿಮ್ಮಿಂದ ನೀವೆ
ಸ್ವಯಂಭುವಾಗಿರ್ದಿರಯ್ಯಾ ಒಂದನಂತಕಾಲ
ಮಹವು ಮಹಾನಂದದಲುಕ್ಕಾಡಿ,
ಮತ್ತಲ್ಲಿಯೆ ಲೀಯವಾಗಿರ್ದುದು
ಒಂದನಂತಕೋಟಿ ವರುಷ
ಕೂಡಲಚೆನ್ನಸಂಗಮದೇವ ವಿಪರೀತಚಾರಿತ್ರ.
ಸೃಷ್ಟಿಯ ರಚನೆಯ ಕಾಲಮಾನ ಯಾವಾಗಿನಿಂದ ಆರಂಭವಾಯಿತು ಎಂಬ ಬಗ್ಗೆ ಇಂದಿನವರೆಗೂ ಯಾರಿಗೂ ನಿಖರವಾಗಿ ತಿಳಿದಿಲ್ಲ. ಉಗಮದ ಪೂರ್ವದಲ್ಲಿ ಒಂದನಂತಕಾಲ ಸ್ವಯಂಭು ಅಂದರೆ ತನ್ನಷ್ಟಕ್ಕೆ ತಾನೇ ಸುಮ್ಮನೆ ಇದ್ದಿತಂತೆ. ಆ ಒಂದು ಕ್ಷಣ ಆದಿ ಮೂಲ ಪರಮಾಣುವಿನಲ್ಲಿ ಅಡಗಿದ ಶಕ್ತಿ ಮೊದಲಾದವು ಕಾಲಗರ್ಭದಲ್ಲಿ ನಿಗೂಢ ಸ್ಥಿತಿಯಲ್ಲಿದ್ದು, ಚೈತನ್ಯವು ತನ್ನಲ್ಲಿಯೇ ಸ್ವಲ್ಪ ರೀತಿ ‘ಉಕ್ಕಾಡಿ’ (ಉಕ್ಕರಿಸು/ಉಕ್ಕುವುದು) ಸ್ಫೋಟಗೊಂಡಿತು ಎಂಬುದಾಗಿ ತಿಳಿಸಿದ್ದಾರೆ, ಒಂದು ಬಗೆಯ ಅಲುಗಾಡುವಿಕೆ (ವೈಬ್ರೇಷನ್)ಆಗಿ ಮತ್ತಲ್ಲಿಯೆ ಒಂದನಂತಕೋಟಿ ವರುಷ ಲೀಯವಾಗಿತ್ತು ಎನ್ನುವಲ್ಲಿ ಇಂದಿನ ವಿಜ್ಞಾನಿಗಳು ಬಿಲಿಯನ್ ವರ್ಷಗಳು ಎಂಬುದು ಚೆನ್ನಬಸವಣ್ಣನವರು ಅನಂತಕೋಟಿ ವರ್ಷ ಎಂದಿದ್ದಾರೆ. ಸೃಷ್ಟಿಯ ಉಗಮ ಅಣು ಸ್ಫೋಟದಿಂದಾಗಿದೆ ಎಂಬುದನ್ನು ಈ ವಚನದಲ್ಲಿ ಚೆನ್ನಬಸವಣ್ಣನವರು ಸ್ಪಷ್ಟಪಡಿಸಿದ್ದಾರೆ.
ಘಟ್ಟಿವಾಳಯ್ಯನವರು ಸಹ ಮಹಾಸ್ಫೋಟದ ಕುರಿತು ತಮ್ಮ ವಚನದಲ್ಲಿ ವಿವರಿಸಿದ್ದಾರೆ:
ಅವನಿ ಅಂಬರ ಉದಯಿಸದಂದು
ಒಂದು ತುಂಬಿದ ಕೊಡನ ಕಂಡೆ,
ಆ ಕೊಡನನೆತ್ತಿದವರಿಲ್ಲ, ಇಳುಹಿದವರಿಲ್ಲ,
ಆ ಕೊಡ ತುಳುಕಿದಲ್ಲಿ ಒಂದು ಬಿಂದು ಕೆಲಕ್ಕೆ ಸಿಡಿಯಿತ್ತ ಕಂಡೆ,
ಆ ಬಿಂದುವಿನಲ್ಲಿ ಅನಂತ ದೇವತಾಮೂರ್ತಿಗಳು ಹುಟ್ಟಿತ್ತ ಕಂಡೆ,
ಇದು ಕಾರಣ ಚಿಕ್ಕಯ್ಯಪ್ರಿಯ ಸಿದ್ಧಲಿಂಗನ
ಲೀಲಾಮೂಲವ ಕಂಡು ಇಲ್ಲ ಇಲ್ಲವೆನುತಿರ್ದೆನು.
ಇಲ್ಲಿ ಘಟ್ಟಿವಾಳಯ್ಯನವರು ಭೂಮಿ, ಆಕಾಶ ಹಾಗೂ ಸಕಲ ಆಕಾಶ ಕಾಯಗಳು ಹೇಗೆ ಉದಯಿಸಿದವು ಎಂಬುದನ್ನು ತುಂಬಾ ಮಾರ್ಮಿಕವಾದ ಉದಾಹರಣೆಯನ್ನು ನೀಡುತ್ತ ವಿವರಿಸಿದ್ದಾರೆ. ಒಂದು ಕೊಡದ ಉಪಮೇಯದ ಮೂಲಕ ಇಡೀ ಬ್ರಹ್ಮಾಂಡವು ಅದರಲ್ಲಿ ಅಡಗಿತ್ತು ಎಂಬ ಖಗೋಳ ವಿಜ್ಞಾನಿಗಳ ಭಾವವನ್ನೇ ತಿಳಿಸುತ್ತ, ಆ ಕೊಡವನ್ನು ಎತ್ತಿದವರಿಲ್ಲ ಇಳುಹಿದವರಿಲ್ಲ ಎನ್ನುವಲ್ಲಿ ಆದಿಮೂಲ ಪರಮಾಣು ಎಲ್ಲಿಂದ ಬಂದಿತು ಎಂಬುದು ಇಂದಿಗೂ ವಿಜ್ಞಾನಿಗಳಿಗೆ ಅರ್ಥವಾಗಿಲ್ಲ ಎಂಬ ಸತ್ಯವನ್ನೆ ಘಟ್ಟಿವಾಳಯ್ಯನವರು ತಿಳಿಸಿದ್ದಾರೆ. ಮುಂದುವರೆದು ಆ ಕೊಡ ತುಳುಕಿದಾಗ ಬಿಂದು ಸಿಡಿಯಿತ್ತು ಎಂಬುದು ಸ್ಪಷ್ಟವಾಗಿ ಮಹಾ ಸ್ಫೋಟದ ವಿಷಯವನ್ನೆ ಸೂಚಿಸುತ್ತದೆ. ಇದೇ ಭಾವವನ್ನು ನಾವು ಆದಯ್ಯನವರ ವಚನದಲ್ಲಿ ಕಾಣುತ್ತೇವೆ:
ಚಿದ್ಬ್ರಹ್ಮಾಂಡವೆಂಬ ಭಾಂಡದಲ್ಲಿ
ಅನಂತ ವಿಚಿತ್ರಭುವನಂಗಳಡಗಿಪ್ಪವಯ್ಯಾ.
‘ಆಲಯಃ ಸರ್ವಭೂತಾನಾಂ ಲಯನಾಲ್ಲಿಂಗಮುಚ್ಚ್ಯತೇ? ಎಂದುದಾಗಿ,
ಅನಂತಕೋಟಿ ಬ್ರಹ್ಮಾಂಡಗಳು
ನಿಮ್ಮ ರೋಮಕೂಪದೊಳಗೆ ಅಡಗಿಪ್ಪವೆಂದಡೆ
ಬ್ರಹ್ಮ ವಿಷ್ಣು ರುದ್ರ ಇವರೆಲ್ಲ ಒಂದು ಬ್ರಹ್ಮಾಂಡದೊಳಗಣ ಬಾಲಕರು. ಇವರೆತ್ತ
ಬಲ್ಲರೋ ಲಿಂಗದ ನಿಜವ!
ಅಪ್ರಮಾಣವಗೋಚರ ಮಹಾಂತ,
ನಿಮ್ಮ ನಿಜದೊಳಗನಾರು ಬಲ್ಲರಯ್ಯಾಸೌರಾಷ್ಟ್ರ ಸೋಮೇಶ್ವರಾ!
ಈ ವಚನದಲ್ಲಿ ಆದಯ್ಯನವರು ಸೃಷ್ಟಿಯ ಅಗಾಧತೆಯನ್ನು ವಿವರಿಸಿದ್ದಾರೆ, ‘ಚಿದ್ಬ್ರಹ್ಮಾಂಡವೆಂಬ ಭಾಂಡದಲ್ಲಿ ಅನಂತ ವಿಚಿತ್ರಭುವನಂಗಳಡಗಿಪ್ಪವಯಾ’ ಎನ್ನುವಲ್ಲಿ ಈ ಬ್ರಹ್ಮಾಂಡವು ಎಷ್ಟೊಂದು ವಿಶಾಲವಾಗಿ ಹರಡಿದೆ ಎಂದರೆ, ನಾವು ರಾತ್ರಿ ಶುಭ್ರವಾದ ಆಕಾಶವನ್ನು ನೋಡಿದಾಗ ನಮಗೆಲ್ಲ ಅಸಂಖ್ಯಾತ ನಕ್ಷತ್ರಗಳು ಗೋಚರಿಸುತ್ತವೆ ಪ್ರತಿಯೊಂದು ನಕ್ಷತ್ರವು ಸಹ ನಮ್ಮ ಸೂರ್ಯನಂತೆ ಗ್ರಹ, ಉಪಗ್ರಹಗಳನ್ನು ತನ್ನ ಸುತ್ತ ಸುತ್ತಿಸಿಕೊಳ್ಳುತ್ತ ತನ್ನದೆಯಾದ ನಕ್ಷತ್ರವ್ಯೂಹವನ್ನು ಹೊಂದಿರುತ್ತದೆ. (ನಮ್ಮ ಭೂಮಿಯನ್ನೊಳಗೊಂಡಂತೆ ಒಂಬತ್ತು ಗ್ರಹಗಳು, ಉಪಗ್ರಹಗಳು, ಮುಂತಾದ ಆಕಾಶಕಾಯಗಳನ್ನು ನಮ್ಮ ಸೂರ್ಯ ತನ್ನ ಮೈಸುತ್ತ ಸುತ್ತಿಸಿಕೊಂಡಿರುವ ಸಮೂಹ/ವ್ಯೂಹವನ್ನು ನಾವು ಸೌರ್ಯವ್ಯೂಹ ಎಂದು ಕರೆಯುತ್ತೇವೆ.)
ವಿಜ್ಞಾನಿಗಳ ಒಂದು ಅಂದಾಜಿನಂತೆ ಈ ಮೊದಲೇ ತಿಳಿಸಿದಂತೆ ನಮ್ಮ ಬರಿಗಣ್ಣಿಗೆ ಸುಮಾರು 6000 ನಕ್ಷತ್ರಗಳು ಕಾಣುತ್ತವೆ. ಆದರೆ ಆಕಾಶದಲ್ಲಿ ಇಷ್ಟೇ ನಕ್ಷತ್ರಗಳಿಲ್ಲ, ಪ್ರಬಲ ದೂರದರ್ಶಕದ ಮೂಲಕ ನೋಡಿದಾಗ ಕಾಣುವ ನಕ್ಷತ್ರಗಳು ಸಂಖ್ಯೆ ಒಂದು ನೂರು ಕೋಟಿ ಕೋಟಿ ಕೋಟಿ (1ರ ನಂತರ 30 ಸೊನ್ನೆ). ಇಷ್ಟೊಂದು ನಕ್ಷತ್ರಗಳ ಸುತ್ತ ಸುತ್ತುವ ಗ್ರಹಗಳಲ್ಲಿ ಭೂಮಿಯನ್ನು ಹೊಲುವ ಅನೇಕ ಗ್ರಹಗಳು ಈ ಬ್ರಹ್ಮಾಂಡದಲ್ಲಿ ಇರುವ ಸಾಧ್ಯತೆಗಳನ್ನು 20ನೇ ಶತಮಾನದ ಖ್ಯಾತ ಖಗೋಳವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ವ್ಯಕ್ತಪಡಿಸಿದ್ದಾರೆ. ಆದರೆ ಸುಮಾರು 900 ವರ್ಷಗಳ ಹಿಂದೆಯೇ ನಮ್ಮ ಆದಯ್ಯನವರು ‘ಚಿದ್ಬ್ರಹ್ಮಾಂಡವೆಂಬ ಭಾಂಡದಲ್ಲಿ ಅನಂತ ವಿಚಿತ್ರಭುವನಂಗಳಡಗಿಪ್ಪವಯ್ಯಾ’ ಎಂದಿರುವುದು ನಿಜವಾಗಿಯೂ ಸೋಜಿಗ. ಮೇಲಿನ ವಚನ ಆದಯ್ಯನವರ ಖಗೋಳ ಜ್ಞಾನವನ್ನು ತೋರಿಸುತ್ತದೆ. ಇಷ್ಟೊಂದು ವಿಶಾಲವಾಗಿರುವ ಈ ಬ್ರಹ್ಮಾಂಡದಲ್ಲಿ ನಮ್ಮ ಭೂಮಿ ಅತ್ಯಂತ ಚಿಕ್ಕ ಬಿಂದು. ಈ ಚಿಕ್ಕ ಭೂಮಿ ಮೇಲಿನ ಹುಲು ಮಾನವರ ನಂಬಿಕೆಯ ದೇವರುಗಳು (ಬ್ರಹ್ಮ ವಿಷ್ಣು ರುದ್ರ) ಈ ಒಂದು ಬ್ರಹ್ಮಾಂಡದೊಳಗಣ ಬಾಲಕರು ಎನ್ನುವಲ್ಲಿ ಊಹಾಪೋಹದ ಪುರಾಣ ಪುರುಷರ ಜಾಗವನ್ನು ಸೃಷ್ಟಿಯ ಎದಿರು ತೋರಿಸಲು ಯತ್ನಿಸಿದ್ದಾರೆ. ಮುಂದುವರೆದು ನಮ್ಮ ಅರಿವಿಗೆ ಸಾದ್ಯವಾಗಿರುವ ಇಡೀ ಬ್ರಹ್ಮಾಂಡವೇ ವಿಶ್ವದ ಆಗುವಿಕೆಯ ರೋಮ ಕೂಪದಲ್ಲಿ ಅಡಗಿದೆ ಎಂದು ವಿಶ್ವದ ಅಗಾಧತೆಯನ್ನು ನಮಗೆ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.
ವಿಶ್ವದ ಚಲನೆಯನ್ನೇ ಶರಣರು ಲಿಂಗವೆಂದಿದ್ದಾರೆ, ಆದಕಾರಣ ಲಿಂಗದ ನಿಜವನು ಯಾರೂ ಅರಿಯದ ಬಗ್ಗೆ ಮರುಗಿದ್ದಾರೆ. ಬಸವಣ್ಣನವರು ಸಹ ವಿಶ್ವದ ವಿಶಾಲತೆಯನ್ನು ಹೀಗೆ ವಿವರಿಸಿದ್ದಾರೆ.
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
“ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ…” ಎನ್ನುವಲ್ಲಿ ವಿಶ್ವದ ವಿಸ್ತಾರವನ್ನು ವಿವರಿಸಿದ್ದಾರೆ. ಜಗತ್ತಿನ ವಿಸ್ತಾರದ ಕುರಿತು ವಿಜ್ಞಾನಿಗಳು ಕಲೆಹಾಕಿರುವ ಮಾಹಿತಿಯ ಪ್ರಕಾರ ನಮ್ಮ ಭೂಮಿಯಿಂದ ಚಂದ್ರ ಸುಮಾರು 3,84,000 ಕಿ ಮೀ ದೂರದಲ್ಲಿದ್ದಾನೆ. ಸೂರ್ಯನು 18,88,00,000 ಕಿ ಮೀ ದೂರದಲ್ಲಿದ್ದಾನೆ, ನಮ್ಮ ಸೂರ್ಯನಿಗೆ ಸನಿಹವಿರುವ ನಕ್ಷತ್ರ ಪ್ರಾಕ್ಷಿಮಾಸೆಂಟಾರಿಯು ನಮ್ಮಿಂದ 4.2 ಜ್ಯೋತಿರ್ವರ್ಷ ದೂರದಲ್ಲಿದೆ. (ಒಂದು ಜ್ಯೋತಿರ್ವರ್ಷ= 10ಲಕ್ಷ ಕೋಟಿ ಕಿ ಮೀ) ಈ ವಿಶ್ವದಲ್ಲಿ ನಕ್ಷತ್ರಗಳು ಹಲವು ಸಾವಿರ ಲಕ್ಷಕೋಟಿ ಜ್ಯೋತಿರ್ವರ್ಷ ದೂರಗಳಲ್ಲಿ ಯಾದೃಚ್ಛಿಕವಾಗಿ ಹರಡಿಕೊಂಡಿವೆ. ಇದನ್ನೇ ಬಸವಣ್ಣನವರು ಮಿಗೆಯಗಲ ನಿಮ್ಮಗಲ ಎಂದಿರುವುದು. ಮುಂದುವರೆದು ವಿಶ್ವದ ಚಲನೆಯು ಅಗಮ್ಯ- ನಮ್ಮ ಬುದ್ದಿಯಾಚೆಗಿನ ವಿಸ್ತಾರ, ಅಗೋಚರ- ವಿಜ್ಞಾನಿಗಳು ಹೇಳುವಂತೆ ಇಂದು ನಮಗೆ ಗೋಚರಿಸುವ ವಿಶ್ವವು ಮೂಲ ವಿಶ್ವದ ಶೇಕಡಾ 4 ಭಾಗ ಮಾತ್ರ! ಅಂದರೆ ಉಳಿದ 96% ವಿಶ್ವವು ನಮಗೆ ಇನ್ನೂ ಅರುವಿಗೆ ಬಾರದೆ ಆಚೆ ಇದೆ. ಇದನ್ನೆ ಬಸವಣ್ಣನವರು ಅಗೋಚರ ಎಂದಿರುವುದು. ಅಪ್ರತಿಮ- ಈ ವಿಶ್ವಕ್ಕೆ ಪ್ರತಿರೂಪವಾಗಿ ಮತ್ತೊಂದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ, ಹಾಗಾಗಿ ಇದು ಅಪ್ರತಿಮವೆಂದಿದ್ದಾರೆ. ಇಷ್ಟೊಂದು ವಿಶಾಲ ಬ್ರಹ್ಮಾಂಡದ ಪ್ರತಿರೂಪವಾಗಿ ಇಷ್ಟಲಿಂಗವನ್ನು ಪರಿಗಣಿಸಿದ್ದಾರೆ.
-ರುದ್ರೇಶ ಗಂ. ಕಿತ್ತೂರ
Comments 9
Jahnavi Naik
Sep 10, 2020ಲೇಖನ ಕುತೂಹಲಕರವಾಗಿದೆ. ಖಗೋಳ ವಿಜ್ಞಾನ ಎಂಥವರ ಮನಸ್ಸನ್ನೂ ಕುತೂಹಲಕ್ಕೆ ಹಚ್ಚುತ್ತದೆ.
Shambhulingaiah
Sep 10, 2020ಶರಣರಿಗೆ ಸೃಷ್ಟಿಯ ಹುಟ್ಟು ಹೇಗೆ ಗೊತ್ತಾಯಿತು? ಬಿಗ್ ಬ್ಯಾಂಗ್ ಮಹಾಸ್ಫೋಟದ ಬಗೆಗೆ ಮಾತನಾಡಿದ್ದಾರೆಂದು ಹೇಳಲಾಗುವ ವಚನಗಳನ್ನು ಮತ್ತೊಮ್ಮೆ ಪರಿಶೀಲಿಸುವ ಅಗತ್ಯವಿದೆ. ಬಯಲು ಎಂದರೆ ಕಲ್ಪನೆಯೇ ಅಥವಾ ದೇವರೇ? ಶರಣರ ಬಯಲು ಯಾವುದು? ಬಯಲಿಗೂ ಸೃಷ್ಟಿಗೂ ಸಂಬಂಧವಿದೆಯಾ?… ದಯವಿಟ್ಟು ಉತ್ತರಿಸಬೇಕು.
Vijayashree S
Sep 13, 2020ಕತ್ತಲೆಯಲ್ಲಿ ನಕ್ಷತ್ರಗಳು ನೂರು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಇವೆಲ್ಲಾ ಎಲ್ಲಿವೆ? ಯಾಕಿವೆ? ಹೇಗಿವೆ… ಅಂತ. ಬೆಳಗಾದರೆ ಬದುಕಿನಲ್ಲಿ ಸಾವಿರ ಪ್ರಶ್ನೆಗಳು ಏಳುತ್ತವೆ. ಜೀವನೋಪಾಯ ಹೇಗೆ, ಸಂಬಂಧಗಳ ಹೊಂದಾಣಿಕೆ ಹೇಗೆ? ಅವ್ಯವಸ್ಥೆಯಲ್ಲಿ ಉಸಿರಾಡುವುದು ಹೇಗೆ??? ಪ್ರಶ್ನೆಗಳನ್ನು ಹೊತ್ತುಕೊಂಡ ಮನುಷ್ಯನಿಗೆ ವಚನಗಳು ಹಗಲೂ ಇರುಳೂ ಉತ್ತರ ಕೊಡುತ್ತವೆ.
Lingaraj Patil
Sep 13, 2020ಖಗೋಳ ವಿಜ್ಞಾನದಲ್ಲಿ ಶರಣರ ಗ್ರಹಿಕೆಗಳು ಅಚ್ಚರಿ ಮೂಡಿಸಿದವು.
Basappa Kalguti
Sep 15, 2020ವಿಶ್ವದ ವಿಸ್ತಾರವನ್ನು ವಚನಗಳ ಮೂಲಕ ತೆರೆದು ತೋರಿಸಿದ ಲೇಖನ ಚಿಂತನೆಗೆ ಹಚ್ಚುತ್ತದೆ. ವಿಜ್ಞಾನಿಗಳ ಉಲ್ಲೇಖಗಳನ್ನು ಬಳಸಿದ್ದರೆ ವೈಜ್ಞಾನಿಕ ಗುಣಧರ್ಮಕ್ಕೆ ಹೆಚ್ಚಿನ ಗಮನ ಕೊಟ್ಟಂತಾಗುತ್ತಿತ್ತು.
Sharada A.M
Sep 15, 2020ಶರಣರ ಬಯಲು, ಬೌದ್ಧರ ಶೂನ್ಯವಾದ ವಿಶ್ವದ ಅನಂತತೆಯನ್ನು ಹೇಳುತ್ತವೆ ಎಂದು ಕೇಳಿದ್ದೇನೆ. ಶರಣರ ಖಭೌತ ಜ್ಞಾನ ಆಶ್ಚರ್ಯ ಹುಟ್ಟಿಸುತ್ತದೆ.
Deveerappa Katagi
Sep 18, 2020ಶರಣರು ತಮ್ಮ ಅನುಭಾವದಲ್ಲಿ ಇಡೀ ಸೃಷ್ಟಿಯನ್ನು ಹೀಗೆ ಕಂಡದ್ದು ನಿಜಕ್ಕೂ ಆಶ್ಚರ್ಯ!! ಸೃಷ್ಟಿಯ ನಿರಂತತೆಯನ್ನು ತಮ್ಮ ಇಷ್ಟಲಿಂಗದಲ್ಲಿ ಕಂಡುಕೊಂಡರೇ? ಹೇಗೆ? ಎಂದೆಲ್ಲಾ ಕುತೂಹಲ ಹುಟ್ಟುತ್ತದೆ. ಸರ್, ವಚನಗಳಲ್ಲಿ ಖಗೋಳ ಜ್ಞಾನದ ಅನ್ವೇಷಣೆ ವೈಚಾರಿಕವಾಗಿದೆ.
Naveen JK
Sep 22, 2020ವೈಜ್ಞಾನಿಕ ಅಂಶಗಳನ್ನು ಶರಣರ ವಚನಗಳಿಂದ ಎತ್ತಿ ನೋಡುವುದರ ಹಿನ್ನೆಲೆ ಏನು? ಇದೆಲ್ಲಾ ಯಾವ ವೈಜ್ಞಾನಿಕ instrument ಗಳಿಲ್ಲದೆ ಹೇಗೆ ಪರಿಭಾವಿಸಿದರು ಎನ್ನುವ ಪ್ರಶ್ನೆ ಏಳುತ್ತದೆ. ಆಗ ಇದೆಲ್ಲಾ ಶಿವಯೋಗದ ಮಹಿಮೆ ಎನ್ನುತ್ತೀರಿ. ಇದೂ ಕೂಡ ಮತ್ತೊಂದು ರೀತಿಯಲ್ಲಿ ಮೌಢ್ಯಕ್ಕೆ ದಾರಿ ಮಾಡಿಕೊಡುವುದಿಲ್ಲವೇ?
Mahanthesh B.G
Sep 22, 2020ಖಗೋಳ ವಿದ್ಯಮಾನಗಳನ್ನು ಗ್ರಹಿಸುವಲ್ಲಿ ಭಾರತೀಯರು ವಿಶ್ವದ ಯಾವುದೇ ನಾಗರಿಕತೆಗಿಂತ ಹೆಚ್ಚು ನಿಖರವಾಗಿದ್ದರು. ವಿಶ್ವದ ಹುಟ್ಟು ಎಲ್ಲಾ ಮಾನವರ ಕುತೂಹಲದ ಸಂಗತಿ. ಶರಣರ ಗ್ರಹಿಕೆಗಳನ್ನು ವಚನಗಳಲ್ಲಿ ಗುರುತಿಸಿದ ಬಗೆ ವಿನೂತನವೆನಿಸಿತು. ಸ್ಟೀಫನ್ ಹಾಕಿಂಗ್ ಕೊನೆಯ ತನಕ ಈ ಇಡೀ ಸೃಷ್ಟಿಗೆ ಓರ್ವ ಸೃಷ್ಟಿಕರ್ತನಿದ್ದಾನೆಂದು ಒಪ್ಪುವುದೇ ಇಲ್ಲ. ಇದೆಲ್ಲ ತನ್ನಿಂದ ತಾನೇ ಆದದ್ದು. ಭೌತ ನಿಯಮಗಳು ಇದನ್ನು ಕರಾರುವಾಕ್ಕಾಗಿ ವಿವರಿಸುತ್ತದೆ ಎನ್ನುತ್ತಾರೆ.