
ವಚನಕಾರರು ಮತ್ತು ಕನ್ನಡ ಭಾಷೆ
ಮಾತು ಮಾನವನ ನಿಜವಾದ ಆಸ್ತಿ. ಈ ಮಾತು ಮಾನವನಿಗೆ ಯಾವಾಗ ಬಂತೆಂದು ಹೇಳುವುದು ಕಷ್ಟ. ಮೊದಲಿಗೆ ಮಾನವ ಮಾತಿಲ್ಲದೆ ತನ್ನ ಆಂಗಿಕ ಅಭಿನಯ, ಹಾವ ಭಾವಗಳ ಮೂಲಕವೇ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದ. ಕ್ರಮೇಣ ಆತ ಒಂದೊಂದೇ ಶಬ್ದಗಳನ್ನು ಆಡುತ್ತ, ಆ ಶಬ್ದಗಳನ್ನು ಜೋಡಿಸಿ ಮಾತನಾಡುವುದನ್ನು ರೂಢಿಸಿಕೊಂಡ. ಮಾತು ಅವನಿಗೆ ಒಂದು ವರವಾಯಿತು. ಮುಂದೆ ಅದೇ ಮಾತು ಭಾಷೆಯ ರೂಪ ತಳೆದಾಗ ಆ ಮಾತಿಗೆ ಮತ್ತಷ್ಟು ಮೌಲ್ಯ ಬರಲಾರಂಭಿಸಿತು. ಮಾತು ಮತ್ತು ಭಾಷೆ ಮಾನವ ಪ್ರಾಣಿಯನ್ನು ಇತರ ಪ್ರಾಣಿಗಳಿಗಿಂತ ಶ್ರೇಷ್ಠನನ್ನಾಗಿಸಿತು. ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಆದರೆ ಈ ಎರಡು ಸಾವಿರ ವರ್ಷಗಳಲ್ಲಿ ಭಾಷೆಯನ್ನು ತುಂಬಾ ಪರಿಣಾಮಕಾರಿಯಾಗಿ ಬಳಸಿದವರು 12ನೆಯ ಶತಮಾನದ ಬಸವಾದಿ ಶಿವಶರಣರು. ಅವರು ಭಾಷೆಯನ್ನು ಕೇವಲ ಭಾವನೆಗಳ ಅಭಿವ್ಯಕ್ತಿಯ ಸಂವಹನ ಮಾಧ್ಯಮವಾಗಿ ಮಾತ್ರವಲ್ಲದೆ ಅದನ್ನು ದೇವನೊಲಿಸುವ ಸಾಧನವನ್ನಾಗಿ ಮಾಡಿಕೊಂಡರು. ಭಾಷೆ ಅವರ ಸಂಸ್ಕೃತಿ, ಸಂಸ್ಕಾರಗಳ ಪ್ರತಿಬಿಂಬ ಆಗಿದ್ದು ವಚನಗಳ ಅಧ್ಯಯನದಿಂದ ವ್ಯಕ್ತವಾಗುವುದು.
ವಚನಕಾರರು ಭಾಷೆಯ ಮೂಲಕವೇ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿದರು. ಆರ್ಥಿಕ ಸುಧಾರಣೆಯ ಸಾಧನ ಮಾಡಿಕೊಂಡರು. ಆದರ್ಶ ಬದುಕಿನ ಬಂಡವಾಳವಾಗಿಸಿಕೊಂಡರು. ಬಹುಶಃ ಶರಣರಂತೆ ಭಾಷೆಯನ್ನು ಸರಳವಾಗಿ, ಅರ್ಥಪೂರ್ಣವಾಗಿ ದುಡಿಸಿಕೊಂಡ ಸಾಹಿತಿಗಳನ್ನಾಗಲಿ, ವಿದ್ವಾಂಸರನ್ನಾಗಲಿ, ರಾಜಕಾರಣಿಗಳನ್ನಾಗಲಿ, ಧರ್ಮಾಧಿಕಾರಿಗಳನ್ನಾಗಲಿ ಇಂದಿನ ದಿನಮಾನಗಳಲ್ಲೂ ಕಾಣುವುದು ದುರ್ಲಭ. ಕನ್ನಡ ಭಾಷೆಯ ಸೊಬಗು, ಸೊಗಡನ್ನು ಅರಿತು ಅದನ್ನು ಆದರ್ಶ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳುವಲ್ಲಿ ಭಕ್ತಿಭಂಡಾರಿ ಬಸವಣ್ಣನವರ ಕಾಣಿಕೆಯನ್ನು ಯಾರೂ ಮರೆಯುವಂತಿಲ್ಲ. `ಭಕ್ತಿ ಸುಭಾಷೆಯ ನುಡಿಯ ನುಡಿಯುವೆ, ನುಡಿದಂತೆ ನಡೆಯುವೆ, ನಡೆಯೊಳಗೆ ನುಡಿಯ ಪೂರೈಸುವೆ’ ಎನ್ನುವ ಬಸವಣ್ಣನವರ ವಚನ ಮಾತಿನ ಮೌಲ್ಯವನ್ನು ಎತ್ತಿಹಿಡಿಯುವಂತಿದೆ. ಮನುಷ್ಯ ಎಂಥ ಮಾತುಗಳನ್ನು ಆಡಬೇಕು ಮತ್ತು ಆ ಮಾತುಗಳು ಹೇಗಿರಬೇಕು ಎಂದು ಮನವರಿಕೆ ಮಾಡಿದ್ದಾರೆ. ಮಾತು ಮೌಲ್ಯಯುತವಾಗುವುದು ಅದು ಭಕ್ತಿಯನ್ನು ಹೊರಸೂಸುವಂತಿದ್ದಾಗ. ಅಷ್ಟಿದ್ದರೆ ಸಾಲದು. ಏನು ನುಡಿಯುತ್ತೇವೆಯೋ ಅದರಂತೆ ನಡೆಯಬೇಕು. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ `ನಡೆಯೊಳಗೆ ನುಡಿಯ ಪೂರೈಸುವೆ’ ಎನ್ನುವರು. ಅಂದರೆ ಮೊದಲು ಕ್ರಿಯೆ ನಂತರ ಮಾತು. ಹಾಗಾಗಿ ಶರಣರನ್ನು `ನಡೆ ನುಡಿ ಸಿದ್ಧಾಂತಿಗಳು’ ಎನ್ನುವರು.
ಮಾತು ಮುತ್ತಿನ ಹಾರದಂತೆ ಶೋಭಾಯಮಾನವಾಗಿರಬೇಕು, ಮಾಣಿಕ್ಯದ ದೀಪ್ತಿಯಂತೆ ಪ್ರಕಾಶಮಾನವಾಗಿರಬೇಕು, ಸ್ಫಟಿಕದ ಸಲಾಕೆಯಂತೆ ಪಾರದರ್ಶಕ ಮತ್ತು ನೇರವಾಗಿರಬೇಕು ಎನ್ನುವರು ಬಸವಣ್ಣನವರು. ಅಷ್ಟೇ ಅಲ್ಲದೆ ನುಡಿಯೊಳಗಾಗಿ ನಡೆಯಬೇಕು ಎನ್ನುವುದನ್ನು ಒತ್ತಿ ಹೇಳುವರು. ಇದು ಬಸವಣ್ಣನವರು ಕನ್ನಡ ಭಾಷೆಗೆ ತಂದುಕೊಟ್ಟ ಶಕ್ತಿ. ಹಾಗಾಗಿಯೇ ಎಲ್ಲ ಶರಣರೂ ಬಸವಣ್ಣನವರನ್ನು ಅತ್ಯಂತ ಗೌರವದಿಂದ ಸ್ತುತಿಸಿರುವರು. ಚೆನ್ನಬಸವಣ್ಣನವರ ಒಂದು ವಚನವನ್ನು ಇದಕ್ಕೆ ಸಾಕ್ಷಿಯಾಗಿ ನೋಡಬಹುದು.
`ಬಸವ’ ಎಂಬ ಮೂರಕ್ಷರ ಹೃದಯಕಮಲದಲ್ಲಿ ನೆಲೆಗೊಂಡಡೆ,
ಅಭೇದ್ಯ ಭೇದ್ಯವಾಯಿತ್ತು, ಅಸಾಧ್ಯ ಸಾಧ್ಯವಾಯಿತ್ತು.
ಇಂತು ಬಸವಣ್ಣನಿಂದ ಲೋಕಲೌಕಿಕದ ಕುಭಾಷೆಯ ಕಳೆದು,
ಲೋಕಾಚರಣೆಯನತಿಗಳೆದು ಭಕ್ತಿಭರವಪ್ಪುದು,
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನ ಕಾರುಣ್ಯದಿಂದ.
`ಬ ಸ ವ’ ಎನ್ನುವ ಮೂರಕ್ಷರ ಹೃದಯಕಮಲದಲ್ಲಿ ಅನುರಣಿಸುತ್ತಿದ್ದರೆ ಭೇದಿಸಲಾಗದ್ದನ್ನೂ ಭೇದಿಸಬಹುದು, ಸಾಧಿಸಲಾಗದ್ದನ್ನೂ ಸಾಧಿಸಬಹುದು ಎನ್ನುವ ವಿಶ್ವಾಸ ಅಂದಿನ ಎಲ್ಲ ಶರಣ ಶರಣೆಯರದಾಗಿತ್ತು. ಕಾರಣ ಅವರು ಜನರಾಡುವ ಭಾಷೆಯ ಒರಟುತನ, ಕೆಟ್ಟ ಪದಗಳ ಬಳಕೆಯನ್ನು ಕಳೆದು ಭಕ್ತಿ ಹೊರಹೊಮ್ಮುವಂತಹ ಮಾತುಗಳನ್ನು ಆಡಲು ಕಲಿಸಿದರು. ಇದೆಲ್ಲ ಆಗಿದ್ದು ಬಸವಣ್ಣನವರ ಕಾರುಣ್ಯದಿಂದ ಎನ್ನುವ ಮಾತಿನಲ್ಲಿ ಅತಿಶಯೋಕ್ತಿ ಇಲ್ಲ. ಶರಣರ ಯಾವುದೇ ವಚನ ತೆಗೆದುಕೊಂಡರೂ ಅಲ್ಲಿ ಆರ್ಥಿಕ, ನೈತಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ ಹೀಗೆ ಒಂದಿಲ್ಲೊಂದು ಮೌಲ್ಯಗಳಿರುವುದನ್ನು ಗುರುತಿಸಬಹುದು. ಈ ನೆಲೆಯಲ್ಲಿ ಸಕಳೇಶ ಮಾದರಸರ ಒಂದು ವಚನ ನೆನಪಾಗುವುದು.
ಕರ್ತನೊಬ್ಬನೆ ದೇವ, ಸತ್ಯವೇ ಸುಭಾಷೆ,
ಭೃತ್ಯಾಚಾರವೆ ಆಚಾರವಯ್ಯಾ.
ಮತ್ತೆ ದೇವರಿಲ್ಲ, ಮತ್ತೆ ಆಚಾರವಿಲ್ಲ,
ಮತ್ತೊಂದು ಸುಭಾಷೆಯೆಂಬುದಿಲ್ಲ.
ಮಹಂತ ಸಕಳೇಶ್ವರದೇವರನೊಲಿಸಿದ ಪುರಾತರ ಪಥವಿದು.
ಅವಿತಥವಿಲ್ಲದೆ ನಂಬುವುದು.
ಭಾಷೆಯ ಮೂಲಕ ಏಕದೇವ ನಿಷ್ಠೆಯನ್ನು ಪ್ರತಿಪಾದಿಸಿ ಅದನ್ನೇ ಆಚರಣೆಯಲ್ಲಿ ತಂದವರು ಶರಣರು. ಅವರಿಗೆ ಸತ್ಯವನ್ನು ಆಡುವುದೇ ಸುಭಾಷೆ. ಭೃತ್ಯಾಚಾರವೇ ಆಚಾರ. ಈ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ಮತ್ತೆ ದೇವರನ್ನು ಹುಡುಕಿಕೊಂಡು ಎಲ್ಲಿಗೂ ಅಲೆಯಬೇಕಾಗಿಲ್ಲ. ಇನ್ನಾವುದೋ ಆಚರಣೆಗಳ ಕೆಸರಿನಲ್ಲಿ ಸಿಲುಕಿಕೊಳ್ಳಬೇಕಾಗಿಲ್ಲ. ಶರಣರು ನಡೆದ ಸತ್ಪಥವಿದು. ಇದನ್ನೇ ನಂಬಿ ನಡೆಯಬೇಕು ಎನ್ನುವುದು ಎಲ್ಲ ಶರಣರ ಭಾಷೆಯಾಗಿತ್ತು. ಇಲ್ಲಿ ಅವರು `ಭಾಷೆ’ ಎನ್ನುವುದನ್ನು `ಪ್ರಮಾಣ’ ಎನ್ನುವ ಅರ್ಥದಲ್ಲೂ ಸ್ವೀಕರಿಸಿರುವುದು ಗಮನಾರ್ಹ. ಆಡುವ ಭಾಷೆ ಪ್ರಮಾಣವಾಗಬೇಕು ಎನ್ನುವ ಚಿಂತನೆ ಶರಣರದು. ಅದರಿಂದಾಗಿಯೇ ಅವರ ಮಾತು ಮಂತ್ರವಾಗಲು, ಜ್ಯೋತಿರ್ಲಿಂಗವಾಗಲು ಸಾಧ್ಯವಾಯಿತು. ಮಾತಿಗೆ ತಮ್ಮ ಬರವಣಿಗೆಯ ಮೂಲಕ ಚೈತನ್ಯ ತುಂಬಿದವರು ಶರಣರು. ಅವರಿಗೆ ಭಾಷೆ ಎನ್ನುವುದು ಕೇವಲ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುವ ಸಾಧನವಾಗದೆ ಆದರ್ಶ ಬದುಕಿನ ನೆಲೆಗಟ್ಟೂ ಆಗಿತ್ತು. ಅದಕ್ಕಾಗಿಯೇ ನುಲಿಯ ಚಂದಯ್ಯನವರು ಹೇಳುವುದನ್ನು ನೋಡಿ:
ನುಡಿದ ಮಾತಿಗೆ ತಡಬಡ ಬಂದಲ್ಲಿ
ನುಡಿದ ಭಾಷೆಗೆ ಭಂಗ ನೋಡಾ.
ಹಿಡಿದ ಕುಳಕ್ಕೆ ಹಾನಿ ಬಂದಲ್ಲಿ
ಒಡಲನಿರಿಸಿಕೊಂಬುವುದೆ ಭಂಗ ನೋಡಯ್ಯಾ.
ಇದು ಕಾರಣ ನಡೆ ನುಡಿ ಶುದ್ಧವಿಲ್ಲದಿದ್ದಡೆ
ಚಂದೇಶ್ವರಲಿಂಗವಾದಡೂ ತಪ್ಪನೊಳಕೊಳ್ಳ
ಕಾಣಾ ಮಡಿವಾಳಯ್ಯಾ.
ಇವತ್ತು ಆಡುವುದೊಂದು, ಮಾಡುವುದು ಮತ್ತೊಂದು. ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ. ಹೀಗಾದರೆ ಆಡುವ ಮಾತಿಗೆ ಕಲಂಕ ಎನ್ನುವರು ಚೆಂದಯ್ಯ. ಅವರು ನಡೆ ನುಡಿಯ ಶುದ್ಧಿಗೆ ವಿಶೇಷ ಮಹತ್ವ ನೀಡಿದವರು. ನಡೆ ನುಡಿ ಶುದ್ಧವಿಲ್ಲದಿದ್ದರೆ ದೇವರೇ ಆಗಿದ್ದರೂ ಅವನ ತಪ್ಪನ್ನು ಮನ್ನಿಸಲು ಸಾಧ್ಯವಿಲ್ಲ ಎನ್ನುವರು. ನೋಡಿ ಭಾಷೆಯ ಮೂಲಕ ಹೇಗೆ ಒಂದು ಸುಂದರ ಸಮಾಜವನ್ನು ಕಟ್ಟುವ ಸದಾಶಯ ಅವರದಾಗಿತ್ತು ಎನ್ನುವುದನ್ನು. ಗ್ರಾಮೀಣರು `ನಾಲಗೆ ಕುಲವನ್ನು ಹೇಳಿತ್ತು’, `ನಾಲಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು’ ಎನ್ನುವರು. ಅಂದರೆ ನಾಲಗೆಯ ಮೂಲಕ ಆಡುವ ಮಾತಿನಿಂದಲೇ ಒಬ್ಬನ ಯೋಗ್ಯತೆಯನ್ನು ಅಳೆಯುವ ಪರಂಪರೆ ನಮ್ಮಲ್ಲಿತ್ತು. ಮಾತೇ ಮುತ್ತು, ಮಾತೇ ಮೃತ್ತು, ಮಾತೇ ಶಿವನೊಲಿಸುವ ಸಾಧನ. ಮಾತಿನಿಂದಲೇ ನಗೆ, ಮಾತಿನಿಂದಲೇ ಹೊಗೆ. ಈ ನೆಲೆಯಲ್ಲಿ ಮಾತು ಮನುಷ್ಯತ್ವಕ್ಕೆ ವಿಶೇಷ ಮೆರಗು ತರುವಂತಿರಬೇಕು ಎನ್ನುವುದು ಎಲ್ಲ ಶರಣರ ಚಿಂತನೆಯಾಗಿತ್ತು. ಹಾಗಾಗಿ ಅವರ ಮಾತುಗಳು ವಚನಗಳಾಗಿ, ಪ್ರಮಾಣಗಳಾಗಿ ಇಂದಿಗೂ ಉಳಿದುಕೊಂಡು ಬಂದಿವೆ. `ವಚನ’ ಎಂದರೆ ಪ್ರಮಾಣ ಎಂದೂ ಅರ್ಥ. ಹಾಗಾಗಿ ವಚನಗಳು ಪ್ರಮಾಣಗಳಾಗಿ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನೂ ಹೆಚ್ಚಿಸಿವೆ. ಶರಣರು ಮಾತಿನ ಮೂಲಕವೇ ಎಂಥ ಬದುಕನ್ನು ಕಟ್ಟಿಕೊಂಡಿದ್ದರು ಎನ್ನುವುದಕ್ಕೆ ಆದಯ್ಯನವರ ಒಂದು ವಚನವನ್ನು ನೋಡಬಹುದು.
ಹಣ ಬಂಗಾರ ವಸ್ತ್ರ ಕಪ್ಪಡ
ಬಟ್ಟೆಯಲ್ಲಿ ನೆಟ್ಟನೆ ಬಿದ್ದಿರಲು
ಕಂಡು ಕಾತರಿಸಿ ಕೈಮುಟ್ಟಿ ಎತ್ತದ ಭಾಷೆ.
ಕೊಟ್ಟಡೆ ಮುಟ್ಟದ ಭಾಷೆ.
ಪರಧನ ಪರಸತಿಗೆ ಅಳುಪದ ಭಾಷೆ.
ಇಂತಿದಕಳುಪಿದೆನಾದಡೆ ಸೌರಾಷ್ಟ್ರ ಸೋಮೇಶ್ವರಾ
ನಿಮ್ಮಾಣೆ ನಿಮ್ಮ ಪ್ರಮಥರಾಣೆ.
ಇವತ್ತಿಗೂ ಜನರು ಹಲವು ಸಂದರ್ಭಗಳಲ್ಲಿ ಪ್ರಮಾಣ ಮಾಡುವರು. ಅವರು ಮಾಡುವ ಪ್ರಮಾಣ ನ್ಯಾಯಾಲಯದಲ್ಲಿ ವಕೀಲರು ಮಾಡಿಸುವ ಪ್ರಮಾಣದಂತೆ ಇರುವ ಸಾಧ್ಯತೆಗಳಿವೆ. ನ್ಯಾಯಾಲಯದಲ್ಲಿ ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ. ನಾನು ಹೇಳುವುದೆಲ್ಲ ಸತ್ಯ ಎಂದೇ ಪ್ರಮಾಣ ಮಾಡುವರು. ಅಲ್ಲಿಂದ ಮುಂದೆ ಹೇಳುವುದೆಲ್ಲ ಸತ್ಯದ ತಲೆಯ ಮೇಲೆ ಹೊಡೆಯುವಂತಹ ಸುಳ್ಳನ್ನೇ. ವಕೀಲರಿಗೆ ಸತ್ಯಕ್ಕಿಂತ ತಾವು ಈ ಪ್ರಕರಣದಲ್ಲಿ ಗೆಲವು ಸಾಧಿಸಬೇಕು ಎನ್ನುವುದು ಮುಖ್ಯ ಅಂಶವಾಗಿರುತ್ತದೆ. ಆದರೆ ಶರಣರು ಇಂಥ ಪ್ರಮಾಣ ಮಾಡಿದವರಲ್ಲ. ಆದಯ್ಯನವರು ಈ ವಚನದ ಮೂಲಕ ಮಾಡುವ ಪ್ರಮಾಣವನ್ನು ನೋಡಿ. ನಾನು ದಾರಿಯಲ್ಲಿ ನಡೆಯುವಾಗ ಅಲ್ಲಿ ಹಣವಾಗಲಿ, ಬಂಗಾರವಾಗಲಿ, ಬಟ್ಟೆಯಾಗಲಿ ಬಿದ್ದಿದ್ದರೆ ಅದನ್ನು ಮುಟ್ಟುವುದಿಲ್ಲ. ಕಾರಣ ನಾನು ಪರಧನ, ಪರಸ್ತ್ರೀಗೆ ಆಸೆಪಡುವುದಿಲ್ಲ್ಲ ಎನ್ನುವ ಪ್ರಮಾಣ ಮಾಡಿದ್ದೇನೆ. ಹೀಗಿರುವಾಗ ನಾನೇನಾದರೂ ನನ್ನದಲ್ಲದ ವಸ್ತು, ವಡವೆಗೆ ಆಸೆಪಟ್ಟು ಮುಟ್ಟಿದರೆ ಅಥವಾ ಯಾರಾದರೂ ಇಕೋ ಇಲ್ಲಿ ನಿಮ್ಮ ಒಡವೆ ಬಿದ್ದಿದೆ ಎಂದು ಎತ್ತಿ ಕೊಟ್ಟರೆ ನಾನದನ್ನು ಪಡೆಯುವುದಿಲ್ಲ ಎಂದು ಆಣೆ ಮಾಡುವರು. ಇದು ಶರಣರ ಬದುಕಿನ ವಿಧಾನ ಮತ್ತು ಆ ವಿಧಾನಕ್ಕನುಗುಣವಾಗಿ ಅವರು ಸಾಹಿತ್ಯದ ಬಳಕೆ ಮಾಡಿಕೊಂಡರು. ಅದರಿಂದಲೇ ವಚನ ಸಾಹಿತ್ಯ ಇಹ-ಪರದ ಅಭ್ಯುದಯಕ್ಕೆ ಸೋಪಾನವಾದದ್ದು.
ಸತ್ಯಕ್ಕ ಎನ್ನುವ ಶರಣೆ ಕೂಡ ಲಂಚವಂಚನಕ್ಕೆ ಆಸೆಪಡುವುದಿಲ್ಲ ಎಂದೇ ಭಾಷೆ ಸ್ವೀಕರಿಸುವಳು. ಅವಳದು ಬೀದಿಯಲ್ಲಿ ಕಸ ಗುಡಿಸುವ ಕಾಯಕ. ಹಾಗೆ ಕಸ ಗುಡಿಸುವಾಗ ಅಲ್ಲೇನಾದರೂ ಬಂಗಾರ, ವಸ್ತುಗಳು ಬಿದ್ದಿದ್ದರೆ ನಾನು ಕೈ ಮುಟ್ಟಿ ಎತ್ತಿದೆನಾದಡೆ ನಿಮ್ಮಾಣೆ ಎನ್ನುವಳು. ಏಕೆಂದರೆ ನನ್ನ ಹೊಟ್ಟೆ ತುಂಬಿಸಿಕೊಳ್ಳಲು ನನಗೆ ಈ ಕಸ ಗುಡಿಸುವ ಕಾಯಕ ಇದೆ. ಇದರಿಂದ ಬರುವ ಹಣದಿಂದಲೇ ನನ್ನ ಬದುಕು ನಡೆಯುವಾಗ ನಾನೇಕೆ ಭ್ರಷ್ಟಾಚಾರಕ್ಕೆ ಬಲಿಯಾಗಿ ಬದುಕನ್ನು ಕೊಳಕು ಮಾಡಿಕೊಳ್ಳಲಿ ಎನ್ನುವುದು ಆ ತಾಯಿಯ ಚಿಂತನೆ. ಇಂಥ ಚಿಂತನೆ ಇಂದು ನಮ್ಮ ನೇತಾರರಿಗೆ, ಸಾರ್ವಜನಿಕರಿಗೆ ಬಂದಿದ್ದರೆ ಭ್ರಷ್ಟಾಚಾರದ ಬೇರನ್ನು ಕಿತ್ತೆಸೆಯಬಹುದಿತ್ತು. ಆದರೆ ಇವತ್ತು ಬೆಣ್ಣೆಯಂಥ ಮಾತುಗಳ ಮೂಲಕವೇ ಭ್ರಷ್ಟಾಚಾರದ ಬೀಜ ಬಿತ್ತಿ, ಭ್ರಷ್ಟಾಚಾರದ ಬೆಳೆ ಬೆಳೆಯುವ ಜನರನ್ನು ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಹಿತ್ಯಕ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕಾಣುವಂತಾಗಿದೆ. ಇಂದು ನಮ್ಮ ಮಾತು, ಸಾಹಿತ್ಯ ಎಲ್ಲವೂ ಮೈಲಿಗೆಯಾಗುತ್ತಲಿವೆ. ಶರಣರು ಭಾಷೆಗೆ ಇದ್ದ ಮೈಲಿಗೆಯನ್ನು ತೊಡೆದು ಅದನ್ನು ಮಡಿಮಾಡಿದ್ದು ವಿಶೇಷ. ಅವರಿಗೆ ಗೊತ್ತಿತ್ತು; ಸಾಸಿವೆಯಷ್ಟು ಸುಖಕ್ಕೆ ಮರುಳಾದರೆ ಸಾಗರದಷ್ಟು ದುಃಖವನ್ನು ಅನುಭವಿಸಬೇಕಾಗುತ್ತದೆ ಎನ್ನುವ ಸತ್ಯ.
ಪ್ರಭುದೇವರು ಭಾಷೆಯನ್ನು ತುಂಬಾ ಪರಿಣಾಮಕಾರಿಯಾಗಿ ಬಳಸಿದ್ದು ಅವರ ವಚನಗಳಲ್ಲಿ ಕಂಡುಬರುತ್ತದೆ. ಲೋಕದ ಜನರು ಹೊನ್ನು, ಹೆಣ್ಣು, ಮಣ್ಣು ಮಾಯೆ ಎಂದರೆ ಪ್ರಭುದೇವರು ಅವು ಮಾಯೆ ಅಲ್ಲ; ಮನದ ಮುಂದಣ ಆಸೆಯೇ ಮಾಯೆ ಎನ್ನುವರು. ಮಾನವನ ನಿಜವಾದ ಆಸ್ತಿ ಹೊನ್ನು, ಹೆಣ್ಣು, ಮಣ್ಣಲ್ಲ; ಜ್ಞಾನವೇ ನಿಜವಾದ ಆಸ್ತಿ ಎಂದು ಎಲ್ಲ ಶರಣರು ಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ತಿಳಿದುಬರುವುದು. ಜ್ಞಾನ ಎಂದರೆ ಬುದ್ಧಿವಂತಿಕೆ ಅಲ್ಲ; ಅರಿವು, ವಿವೇಕ, ನಡೆ ನುಡಿ ಒಂದಾದ ಬದುಕು. ತಮ್ಮ ಭಾಷಾ ಪಾಂಡಿತ್ಯದ ಮೂಲಕ ದೊಡ್ಡವರೆನಿಸಿಕೊಂಡವರ ವರ್ತನೆಯನ್ನು ಪ್ರಭುದೇವರು ಎಷ್ಟು ಪರಿಣಾಮಕಾರಿಯಾಗಿ ಲೇವಡಿ ಮಾಡಿದ್ದಾರೆ ಎನ್ನುವುದನ್ನು ನೋಡಿ.
ಮುಸುರೆಯ ಮಡಕೆಯ ನೊಣ ಮುತ್ತಿಕೊಂಡಿಪ್ಪಂತೆ,
ಕಸವುಳ್ಳ ಹೊಲದಲ್ಲಿ ಪಶುಗಳು ನೆರೆದಿಪ್ಪಂತೆ,
ಅನ್ನ ಉದಕ ಹೊನ್ನು ವಸ್ತ್ರವುಳ್ಳ ದೊರೆಯ ಬಾಗಿಲಲ್ಲಿ
ಬಹುಭಾಷೆಯ ಹಿರಿಯರುಗಳು ನೆರೆದುಕೊಂಡಿಪ್ಪರು.
ಗುಹೇಶ್ವರಾ, ನಿಮ್ಮ ಶರಣರು ಆಶಾಪಾಶವಿರಹಿತರು.
ದುರಾಸೆಯ ದುರಾತ್ಮರನ್ನು ಅದರಲ್ಲೂ ಪಂಡಿತೋತ್ತಮರನ್ನು ಅವರು ಯಾವುದಕ್ಕೆ ಹೋಲಿಕೆ ಮಾಡಿದ್ದಾರೆ ನೋಡಿ. ಮುಸುರೆಯ ಬಾನಿಗೆ ಅನೇಕ ನೊಣಗಳು ಮುತ್ತಿಕೊಳ್ಳುವವು. ಮುಸುರೆಯ ಆಹಾರ, ನೀರು, ವಾಸನೆ ನೊಣಗಳಿಗೆ ಹೆಚ್ಚು ಪ್ರಿಯ. ಅದೇ ರೀತಿ ಹೊಲದಲ್ಲಿ ವಿಪರೀತ ಕಳೆ ಬೆಳೆದಿದ್ದರೆ ಅಲ್ಲಿಗೆ ಪಶುಗಳು ಹೋಗಿ ಮೇಯುವವು. ನೊಣ, ಪಶುಗಳಂತೆ ಬಹುಭಾಷೆಯ ಹಿರಿಯರು, ಪಂಡಿತರು ಸಹ ವರ್ತಿಸುವರು. ಅವರು ಮಾತಿನ ಮೂಲಕವೇ ಮನೆ ಕಟ್ಟುವ ಜಾಣರು. ಅಂಥವರು ಅನ್ನ, ವಸ್ತ್ರ, ವಸ್ತುಗಳನ್ನು ಧಾರಾಳವಾಗಿ ನೀಡುವ ದೊರೆಯ ಬಾಗಿಲಲ್ಲಿ ನೊಣ, ದನಗಳಂತೆ ಸೇರುವರು. ಆದರೆ ಶರಣರು ಹಾಗೆ ಇನ್ನೊಬ್ಬರ ಬಾಗಿಲಲ್ಲಿ ನಿಂತು ಅವರು ಕೊಡುವುದಕ್ಕಾಗಿ ಕಾಯುವ ಕುತ್ಸಿತ ಜೀವಿಗಳಲ್ಲ. ಏಕೆಂದರೆ ಅವರು ಕಾಯಕ ಪ್ರಜ್ಞೆಯುಳ್ಳವರು. ದುಡಿಮೆಯೇ ದೇವರೆಂದು ಭಾವಿಸಿದವರು. ತಮ್ಮ ದುಡಿಮೆಯ ಮೂಲಕವೇ ತಮಗೆ ಬೇಕಾದದ್ದನ್ನು ಪಡೆಯುವ ಸ್ವಾಭಿಮಾನಿಗಳು. ಹೀಗೆ ಶರಣರಿಗೂ ಇತರ ವ್ಯಕ್ತಿಗಳಿಗೂ ಇರುವ ವ್ಯತ್ಯಾಸವನ್ನು ಮನಮುಟ್ಟುವ ಹಾಗೆ ನಿರೂಪಿಸಿದ್ದಾರೆ. ಇಲ್ಲಿ ಅವರು ಭಾಷೆಯನ್ನು ಹೇಗೆ ದುಡಿಸಿಕೊಂಡಿದ್ದಾರೆ ಎನ್ನುವುದನ್ನು ತಿಳಿಯಬೇಕಾಗಿದೆ. ಶಿವಯೋಗಿ ಸಿದ್ಧರಾಮೇಶ್ವರರು ಭಾಷೆಯ ಮೂಲಕ ಅರಿವು ಮೂಡಿಸುವುದನ್ನು ನೋಡಿ:
ಯೋಗಿಗೆ ಕೋಪವೆ ಮಾಯೆ;
ರೋಗಿಗೆ ಅಪಥ್ಯವೆ ಮಾಯೆ;
ಜ್ಞಾನಿಗೆ ಮಿಥ್ಯವೆ ಮಾಯೆ;
ಅರಿವೆನೆಂಬವಂಗೆ ನಾನು ನೀನು ಎಂಬುದೆ ಮಾಯೆ;
ಕಪಿಲಸಿದ್ಧ ಮಲ್ಲಿಕಾರ್ಜುನಾ!
ಅಲ್ಲಮಪ್ರಭುದೇವರು `ಮನದ ಮುಂದಣ ಆಸೆಯೇ ಮಾಯೆ’ ಎಂದರೆ ಸಿದ್ಧರಾಮೇಶ್ವರರು ಯಾರಿಗೆ ಯಾವುದು ಮಾಯೆ ಎಂದು ಸ್ಪಷ್ಟಪಡಿಸುವರು. ಯೋಗಿಯಾದವ ಸದಾ ಶಾಂತಚಿತ್ತನಾಗಿ ಸಮಾಧಾನದಿಂದ ಇರಬೇಕು. ಅವನು ಸ್ತುತಿ-ನಿಂದೆಗಳಿಗೆ ಮಾನ್ಯತೆ ನೀಡದೆ ಅವೆರಡನ್ನೂ ಸಮಾಧಾನದಿಂದಲೇ ಸ್ವೀಕರಿಸಬೇಕು. ಆಗಲೇ ಅವನು ಯೋಗಿಯಾಗಲು ಸಾಧ್ಯ. ಅದನ್ನು ಬಿಟ್ಟು ಯಾರೋ ನಿಂದಿಸಿದರೆಂದು ಕೋಪೋದ್ರಿಕ್ತನಾಗಿ ಶಾಪ ಹಾಕುತ್ತೇನೆ, ನೋಡಿಕೊಳ್ಳುತ್ತೇನೆ ಎಂದು ಉಗ್ರಾವತಾರ ತಾಳಿದರೆ ಅವನೆಂತು ಯೋಗಿಯಾಗಬಲ್ಲ? ಆಗ ಅವನು ಮಾಯೆಗೆ ಸಿಲುಕಿದ ಸಾಮಾನ್ಯ ಮಾನವನಾಗುವನು. ರೋಗಿ ವೈದ್ಯ ಹೇಳಿದ ಔಷಧಿಯನ್ನು ತಪ್ಪದೆ ಸ್ವೀಕರಿಸಬೇಕು. ಯಾವುದನ್ನು ತಿನ್ನಬಾರದೆಂದು ಹೇಳಿರುತ್ತಾರೋ ಅದನ್ನು ಚಾಚೂ ತಪ್ಪದೆ ಪಾಲಿಸಬೇಕು. ಆಗ ಮಾತ್ರ ಅವನು ನಿರೋಗಿಯಾಗಲು ಸಾಧ್ಯ. ಅದನ್ನು ಬಿಟ್ಟು ನಾಲಗೆಯ ರುಚಿಗೆ ಬಲಿಯಾದರೆ ಅಂದರೆ ವೈದ್ಯರು ತಿನ್ನಬಾರದೆಂದು ಹೇಳಿದ್ದನ್ನೇ ತಿಂದರೆ, ಮಾಡಬಾರದು ಎಂದದ್ದನ್ನೇ ಮಾಡಿದರೆ ಅವನು ಮಾಯೆಗೆ ಒಳಗಾದಂತೆ. ಜ್ಞಾನಿಯಾದವ ಯಾವಾಗಲೂ ಸತ್ಯದ ದಾರಿಯಲ್ಲೇ ಸಾಗಬೇಕು. ಎಂಥ ಪ್ರಸಂಗ ಬಂದರೂ ಸತ್ಯವನ್ನು ಬಿಟ್ಟುಕೊಡಬಾರದು. ಆದರೆ ಆತ ಕ್ಷಣಕ್ಷಣಕ್ಕೂ ಗೋಸುಂಬೆಯಂತೆ ಬಣ್ಣ ಬದಲಾಯಿಸುತ್ತ ಸುಳ್ಳನ್ನೇ ಹೇಳುತ್ತಿದ್ದರೆ ಅದೇ ಅವನಿಗೆ ಮಾಯೆಯಾಗಿ ಕಾಡುವುದು. ಯಾರಲ್ಲಿ ನೈಜ ಅರಿವು ಅಳವಟ್ಟಿರುತ್ತದೋ ಅವರಿಗೆ ನಾನು ನೀನು ಎನ್ನುವ ತರತಮ ಭಾವನೆ ಇರುವುದಿಲ್ಲ. ಅವನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ತಾನು ಸಹ ಎಲ್ಲರೊಳಗೊಬ್ಬ ಎನ್ನುವ ವಿಶಾಲ ಮನೋಭಾವ ಸ್ಥಾಯಿಯಾಗಿರಬೇಕು. ಅದನ್ನು ಬಿಟ್ಟು ನಾನು, ನೀನು ಎನ್ನುವ ಅಹಂಭಾವ ಬೆಳೆಸಿಕೊಂಡರೆ ಅದೇ ಅವನಿಗೆ ಮಾಯೆ ಆಗುವುದು. ಹೀಗೆ ಹೇಳುವ ಮೂಲಕ ಸಿದ್ಧರಾಮೇಶ್ವರರು ಮಾಯೆಗೆ ಹೊಸ ಭಾಷ್ಯ ಬರೆದಿದ್ದಾರೆ.
ಸಾಮಾನ್ಯವಾಗಿ ಪ್ರಾಜ್ಞರು ವೇದ, ಶಾಸ್ತ್ರ, ಪುರಾಣಗಳನ್ನೇ ತಮ್ಮ ಮಾತುಗಳಿಗೆ ಸಾಕ್ಷಿಯಾಗಿ ಬಳಸುವರು. ಅಲ್ಲಿಯ ಘಟನೆಗಳನ್ನು ಹೇಳಿದಾಗಲೇ ಅವರು ಮಹಾನ್ ಪಂಡಿತರು, ಎಲ್ಲ ತಿಳಿದವರು ಎಂದು ಜನರು ಭಾವಿಸುತ್ತಾರೆ ಎನ್ನುವ ಭ್ರಮೆ. ಆದರೆ ಶರಣರು ಅಂಥ ಭ್ರಮೆಯಿಂದ ಹೊರಬಂದವರು. ಅವರಿಗೆ ವೇದ, ಶಾಸ್ತ್ರ, ಪುರಾಣಗಳು ಪ್ರಮಾಣವಲ್ಲ; ಪುರಾತನರ ನುಡಿಗಳೇ ಪ್ರಮಾಣ, ತಮ್ಮ ಅಂತಃಸಾಕ್ಷಿಯೇ ಪ್ರಮಾಣ. ಈ ನೆಲೆಯಲ್ಲಿ ಬೆಳಕು ನೀಡುವಂತಿದೆ ಮಹಾದೇವಿಯಕ್ಕನವರ ವಚನ:
ವೇದ ಶಾಸ್ತ್ರ ಆಗಮ ಪುರಾಣಗಳೆಲ್ಲವು
ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿಭೋ.
ಇವ ಕುಟ್ಟಲೇಕೆ ಕುಸುಕಲೇಕೆ?
ಅತ್ತಲಿತ್ತ ಹರಿವ ಮನದ ಶಿರವನರಿದಡೆ
ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನಾ.
ವೇದ, ಶಾಸ್ತ್ರ, ಆಗಮ, ಪುರಾಣಗಳಲ್ಲಿ ಬಂದದ್ದು ಮಾತ್ರ ಪ್ರಮಾಣ ಎನ್ನುವ ಜನರಿಗೆ ಅಕ್ಕ ಬಲವಾದ ಏಟು ಕೊಟ್ಟಿದ್ದಾಳೆ. ಅವು ಬತ್ತವನ್ನು ಕುಟ್ಟಿದಾಗ ಬರುವ ನುಚ್ಚು, ತೌಡು ಇದ್ದಂತೆ ಎಂದು ಮೂದಲಿಸುವಳು. ಅವುಗಳನ್ನು ಪ್ರಮಾಣವೆಂದು ಅಂಗೀಕರಿಸಿ ನುಚ್ಚು ತೌಡನ್ನೇಕೆ ಪಡೆಯಬೇಕು ಎಂದು ಪ್ರಶ್ನಿಸುತ್ತಲೇ ಮನಸ್ಸಿನ ಚಂಚಲತೆಯನ್ನು ನಿವಾರಿಸಿಕೊಳ್ಳುವುದೇ ನಿಜವಾದ ಪ್ರಮಾಣ ಎನ್ನುವಳು. `ಮನಸ್ಸಿದ್ದಲ್ಲಿ ಮಾರ್ಗ’ ಎನ್ನುವಂತೆ ಮನಸ್ಸು ಒಂದೆಡೆ ಸ್ಥಿರವಾಗಿ ನಿಂತರೆ ಏನು ಬೇಕಾದರೂ ಸಾಧಿಸಲು ಸಾಧ್ಯ. ಎಲ್ಲವೂ ಮಾನವನ ಅಂತರಂಗದಲ್ಲೇ ಇವೆ ಎನ್ನುವ ಸತ್ಯವನ್ನು ಮನಗಾಣಿಸಿ ಮನಸ್ಸಿನ ಹತೋಟಿಗೆ ಒತ್ತು ನೀಡಿದ್ದಾರೆ.
ಎಲ್ಲ ಶರಣ ಶರಣೆಯರು ಹೆಚ್ಚು ಒಲವು ತೊರಿದ್ದು ಅರಿವು ಮತ್ತು ಆಚಾರಕ್ಕೆ. ಆದರೆ ಎಷ್ಟೋ ಜನರು ಬಾಹ್ಯ ವೇಷಗಳಿಂದ ತಾವು ದೊಡ್ಡವರು ಎನ್ನುವಂತೆ ತೋರಿಸಿಕೊಳ್ಳುವ ಹುನ್ನಾರ ನಡೆಸುವುದುಂಟು. ಅಂಥ ಕಪಟಿಗಳನ್ನು ಕಟುವಾಗಿ ಟೀಕಿಸುವರು ಶರಣರು. ಅವರಲ್ಲಿ ಮಹಿಳೆಯರೇನೂ ಕಡಿಮೆ ಇಲ್ಲ. ಅಕ್ಕಮ್ಮನವರ ಒಂದು ವಚನವನ್ನೇ ನೋಡಬಹುದು.
ಬತ್ತಲೆ ಇದ್ದವರೆಲ್ಲ ಕತ್ತೆಯ ಮಕ್ಕಳು.
ತಲೆ ಬೋಳಿಸಿದವರೆಲ್ಲ ಮುಂಡೆಯ ಮಕ್ಕಳು.
ತಲೆ ಜಡೆಗಟ್ಟಿದವರೆಲ್ಲ ಹೊಲೆಯರ ಸಂತಾನ.
ಆವ ಪ್ರಕಾರವಾದಡೇನು ಅರಿವೆ ಮುಖ್ಯವಯ್ಯಾ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.
ವಿವಿಧ ಸಂಪ್ರದಾಯದ ಆಷಾಢಭೂತಿಗಳ ಬಣ್ಣವನ್ನು ಅಕ್ಕಮ್ಮನಂತೆ ಬಯಲು ಮಾಡುವ ಎದೆಗಾರಿಕೆ ಬರುವುದು ಕಷ್ಟಸಾಧ್ಯ. ಅಂತರಂಗದಲ್ಲಿ ಅರಿವು ಜಾಗೃತಗೊಳ್ಳದೆ ಬಾಹ್ಯ ವೇಷಗಳಿಂದ ಯಾರೂ ಶ್ರೇಷ್ಠರಾಗಲು ಸಾಧ್ಯವಿಲ್ಲ ಎನ್ನುವುದು ಅಕ್ಕಮ್ಮನ ಅಭಿಪ್ರಾಯ. ಕತ್ತೆ ಕೂಡ ಬಟ್ಟೆ ಧರಿಸದೆ ಬತ್ತಲೆ ಇರುತ್ತದೆ. ಹಾಗಂತ ಅದನ್ನು ಮುನಿ, ಸಂತ ಎನ್ನಲು ಸಾಧ್ಯವೇ? ಅದರಂತೆ ಕೆಲವರು ಮುನಿಶ್ರೇಷ್ಠರಾಗಬೇಕೆಂದು, ತಮಗೆ ದೇಹ ಮೋಹ ಇಲ್ಲವೆಂದು ಬಟ್ಟೆಗಳನ್ನು ಕಳಚಿ ಬತ್ತಲೆ ಆಗುವುದುಂಟು. ಆದರೆ ಕಾಮನೆಗಳು ಅವರನ್ನು ಕಾಡದೆ ಬಿಡವು. ಅಂಥವರನ್ನು ಅಂದರೆ ಮನೋನಿಗ್ರಹ ಇಲ್ಲದವರನ್ನು ಕತ್ತೆಯ ಮಕ್ಕಳೆಂದು ಲೇವಡಿ ಮಾಡಿದ್ದಾರೆ. ಮಠಾಧೀಶರು, ಸಂತರು ತಲೆ ಬೋಳಿಸುವುದುಂಟು. ಅವರು ತಲೆ ಬೋಳಿಸಿದ ಮಾತ್ರಕ್ಕೆ ಮಠಾಧೀಶರಾಗಲು, ಸಂತರಾಗಲು ಸಾಧ್ಯವಿಲ್ಲ. ಕಾರಣ ಅವರ ತಲೆ ಬೋಳಾಗಿರುತ್ತದೆಯೇ ಹೊರತು ಮನಸ್ಸೇನೂ ಬೋಳಾಗಿರುವುದಿಲ್ಲ. ಮನ ಬತ್ತಲೆ ಆಗಿರದೆ ಅದು ಅನೇಕ ವಿಷಯ ವಾಸನೆಗಳ ಹೊಂಡದಲ್ಲಿ ಮುಳುಗಿದ್ದರೆ ಅಂಥವರನ್ನು ಮುಂಡೆಯ ಮಕ್ಕಳೆಂದು ಹೀಯಾಳಿಸುವರು. ಕೆಲವರು ತಲೆ ಸ್ನಾನ ಮಾಡದೆ, ಕೂದಲಿನ ಸಿಕ್ಕು ಬಿಡಿಸಿಕೊಳ್ಳದೆ ಎಲ್ಲ ಕೂದಲೂ ಜಡೆಗಟ್ಟುವಂತೆ ಮಾಡಿಕೊಳ್ಳುವರು. ಹಾಗಂತ ಅವರನ್ನು ದೇವರ ಪ್ರತಿನಿಧಿಗಳೆನ್ನಲು ಸಾದ್ಯವಿಲ್ಲ. ಅವರನ್ನು ಹೊಲೆಯರ ಸಂತಾನ ಎಂದು ತುಚ್ಛೀಕರಿಸುವರು. ಇಲ್ಲಿ ಹೊಲೆಯ ಎನ್ನುವುದನ್ನು ಜಾತಿಗೆ ಸೀಮಿತಗೊಳಿಸಬಾರದು. ಸ್ವಚ್ಛತೆ ಕಾಯ್ದುಕೊಳ್ಳದಿರುವ ಕರ್ಮಿಗಳು ಎಂದು ತಿಳಿದರೆ ಸಾಕು. ನೀವು ಬಾಹ್ಯವಾಗಿ ಹೇಗೆ ಇರುತ್ತೀರಿ ಎನ್ನುವುದಕ್ಕಿಂತ ಅರಿವು ಮತ್ತು ಆಚಾರ ಒಂದಾಗಿರುವುದು ಮುಖ್ಯ ಎನ್ನುವರು ಅಕ್ಕಮ್ಮ.
ಶರಣರ ಅಥವಾ ಶರಣೆಯರ ಯಾವ ವಚನ ನೋಡಿದರೂ ಅಲ್ಲಿ ಕನ್ನಡ ಸಾಹಿತ್ಯದ ಸತ್ವ ಎದ್ದು ತೋರುವುದು. ಸಾಹಿತ್ಯ ಕೇವಲ ಸಾಹಿತ್ಯವಾಗಿ ಉಳಿಯದೆ ಅದು ಬದುಕಿನ ಉತ್ಕರ್ಷಕ್ಕೆ ಪೂರಕ ಅಂಶಗಳನ್ನು ಒದಗಿಸುವುದು. ಪ್ರಾಮಾಣಿಕ ಜೀವನದ ಅಗತ್ಯವನ್ನು ಒತ್ತಿ ಹೇಳುವುದು. ಕಾಯಕ ಶ್ರದ್ಧೆ, ದಾಸೋಹ ಪ್ರಜ್ಞೆ, ಏಕದೇವ ನಿಷ್ಠೆ, ಜಾತ್ಯತೀತ ಮನೋಭಾವ, ಸಕಲ ಜೀವಾತ್ಮರ ಒಳಿತು ಇಂಥ ಹತ್ತು ಹಲವು ಮೌಲ್ಯಗಳನ್ನು ಪ್ರತಿಪಾದಿಸುವವು. ಹೀಗಾಗಿ ವಚನಗಳು ಕನ್ನಡ ಭಾಷೆಗೆ ತೊಡಿಸಿದ ಕಿರೀಟ ಎನ್ನಬಹುದು. ಭಾಷೆ ಹೇಗೆ ಶುದ್ಧ ಬದುಕನ್ನು ಕಟ್ಟಿಕೊಡಲು ಸಾಧ್ಯ ಎನ್ನುವುದಕ್ಕೆ ವಚನ ಸಾಹಿತ್ಯವೇ ಸಾಕ್ಷಿ ನುಡಿಯುವುದು. ಅಂಥ ವಚನ ಸಾಹಿತ್ಯದ ಅರಿವು ಮಾಡಿಕೊಳ್ಳುವುದೆಂದರೆ ನಮ್ಮನ್ನೇ ನಾವು ಅರಿತಂತೆ. ಕನ್ನಡ ಭಾಷೆಯನ್ನು ಸಂರಕ್ಷಿಸಿದಂತೆ. ಇವತ್ತು ಮನೆಯಲ್ಲಿ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಹತ್ತಾರು ವಚನಗಳನ್ನಾದರೂ ಹೇಳಿಕೊಡುವ, ಅವುಗಳ ಅರ್ಥವನ್ನು ವಿವರಿಸುವ, ಅವುಗಳನ್ನು ಸಾಧ್ಯವಾದರೆ ಕಂಠಪಾಠ ಮಾಡಿಸಿ ಹಾಡಿಸುವ, ನೃತ್ಯ ಮಾಡಿಸುವ ಕಾರ್ಯದಲ್ಲಿ ಮಗ್ನರಾದರೆ ಅವರ ಬದುಕು ಸುಂದರವಾಗುವುದು ಮತ್ತು ಕನ್ನಡ ಭಾಷೆಯೂ ಉಳಿಯುವುದು.
Comments 11
Shankar
Dec 7, 2020Very effectively eloborated…..
Vijayashree S
Dec 9, 2020ವಿಶ್ವ ಸಾಹಿತ್ಯಕ್ಕೆ ಕನ್ನಡದ ಶ್ರೇಷ್ಠ ಕೊಡುಗೆ ವಚನ ಸಾಹಿತ್ಯ ಎನ್ನುವ ಮಾತು ನೆನಪಾಯಿತು.
Umashankara Bengaluru
Dec 9, 2020ಒಂಬತ್ತು ಶತಮಾನಗಳಷ್ಟು ಹಿಂದೆಯೇ ಕನ್ನಡವನ್ನು ಸಮೃದ್ಧವಾಗಿ, ಸೊಗಸಾಗಿ ಬಳಸಿಕೊಂಡ ಶರಣರ ಪ್ರತಿಭೆಗೆ ಅನಂತ ಶರಣು.
ಕರಿಬಸವಯ್ಯ ಜೇವರ್ಗಿ
Dec 16, 2020ನುಡಿದ ಮಾತಿಗೆ ತಡಬಡ ಬಂದಲ್ಲಿ
ನುಡಿದ ಭಾಷೆಗೆ ಭಂಗ ನೋಡಾ… ನುಲಿಯ ಚಂದಯ್ಯನವರ ವಚನ ಭಾಷೆಯ ಕುರಿತಾಗಿ ಹೊಸ ನೋಟಗಳನ್ನು ನೀಡುತ್ತದೆ. ಸುಂದರ ಲೇಖನ.
Vijaykumar bavikatti
Dec 16, 2020ಭಾಷೆ ಪ್ರಮಾಣವಾಗಬೇಕು. ಅದು ಕೇವಲ ವೇದಗಳಂತೆ ಶಬ್ದ ಪ್ರಮಾಣವಲ್ಲ, ಶಾಸ್ತ್ರ ಪ್ರಮಾಣವಲ್ಲ, ಅದು ಅನುಭವ ಪ್ರಮಾಣ. ಅವರ ಮಾತುಗಳು ಸಾರ್ವತ್ರಿಕ ಸತ್ಯವನ್ನು ತೋರುವ ಸೂಳ್ನುಡಿಗಳು
Mahadev Patel
Dec 16, 2020ಮಾತಿನ ಮೌಲ್ಯ ಎತ್ತಿ ಹಿಡಿಯುವ ಬಸವಣ್ಣನವರ ವಚನ -`ಭಕ್ತಿ ಸುಭಾಷೆಯ ನುಡಿಯ ನುಡಿಯುವೆ, ನುಡಿದಂತೆ ನಡೆಯುವೆ, ನಡೆಯೊಳಗೆ ನುಡಿಯ ಪೂರೈಸುವೆ’ ಕನ್ನಡ ತಾಯಿ ವಚನಗಳ ಕೇಳಿ ಕುಣಿದು ಕುಪ್ಪಳಿಸಿರಬೇಕು!!!
Jyothi Hulyal
Jan 4, 2021ಶರಣರ ಮಾತುಗಳ ಸೊಬಗು ಶತಶತಮಾನಗಳು ಕಳೆದರೂ ತಮ್ಮ ಕಂಡಪು ಸೂಸುತ್ತವೆ. ಒಂದೊಂದು ವಚನವೂ ಮಾಣಿಕ್ಯದ ದೀಪ್ತಿಯಂತಿವೆ.
ನವೀನ್
Jan 4, 2021ವಚನಕಾರರ ವಿಚಾರಶೀಲ ಮಾತುಗಳು ಕನ್ನಡಕ್ಕೆ ಶಕ್ತಿಯನ್ನೂ, ಅವರ ಮಧುರ ನುಡಿಗಳು ಕನ್ನಡಕ್ಕೆ ಕಂಪನ್ನೂ ನಿಸ್ಸಂದೇಹವಾಗಿ ನೀಡಿವೆ. ಶ್ರೀಗಳ ಲೇಖನ ಸೊಗಸಾಗಿದೆ.
ಲಲಿತಾ ಚಿಕ್ಕನಾಯ್ಕನಹಳ್ಳಿ
Jan 4, 2021ಬದುಕುವ ಕಲೆಯನ್ನು ಹೇಳಿಕೊಟ್ಟ ಶರಣರ ವಚನಗಳು ಎಲ್ಲಾ ಜಾತಿ, ಮತ,ಧರ್ಮದವರಿಗೆ ನೀತಿ ಸೂಚಕಗಳಿದ್ದಂತೆ. ಕನ್ನಡ ಭಾಷೆಯನ್ನು ತಮ್ಮ ಅನುಭಾವದ ಅಭಿವ್ಯಕ್ತಿಗೆ ದುಡಿಸಿಕೊಂಡು, ಬೆಳೆಸಿದ ಶರಣರಿಗೆ ನಮೋನಮಃ
Kalyani Gowda
Jan 4, 2021ಮನಸ್ಸು ಕಂಗೆಟ್ಟಾಗ ನನ್ನನ್ನು ಕೈಹಿಡಿದೆತ್ತಿದ್ದು ವಚನಗಳು. ಅವುಗಳಲ್ಲಿ ತಾಯಿಯ ಮಮತೆ ಇದೆ, ತಂದೆಯ ಮಾರ್ಗದರ್ಶನವಿದೆ, ಗುರುವಿನ ಬೋಧನೆಯಿದೆ. ವಚನಗಳು ಪ್ರತಿಯೊಂದು ಶಾಲೆಯ ಪ್ರಾರ್ಥನಾ ಗೀತೆಗಳಾಗಬೇಕೆಂಬುದು ನನ್ನ ಆಸೆ. ಒಬ್ಬ ಶಿಕ್ಷಕಿಯಾಗಿ ನಾನು ಮಕ್ಕಳಿಗೆ ಪಾಠ ಮಾಡುವಾಗ ವಚನಗಳನ್ನು ಸದಾ ಉಲ್ಲೇಖಿಸುತ್ತಿರುತ್ತೇನೆ.
Harsha m patil
Jan 4, 2021Thanks for sharing, this is a fantastic post. Really looking forward to read more. Great.