ಲಿಂಗಾಯತ ಸಂಘ-ಸಂಸ್ಥೆಗಳು (ಇತಿಹಾಸದ ಒಂದು ನೋಟ)
ಆಧುನಿಕತೆಯು ವ್ಯಕ್ತಿತ್ವ ಮತ್ತು ವೈಯಕ್ತಿಕ ಬೆಳವಣಿಗೆಗೆ ಹೇಗೆ ಮಹತ್ವವನ್ನು ನೀಡಿದೆಯೋ ಹಾಗೆಯೇ ಸಾಮೂಹಿಕ ಬೆಳವಣಿಗೆಗೆ ಇಂಬು ನೀಡಿದೆ. ಸಂಘ-ಸಂಸ್ಥೆಗಳ ಹುಟ್ಟು, ಬೆಳವಣಿಗೆ ಮತ್ತು ವಿಸ್ತಾರವೆ ಇದಕ್ಕೆ ಸಾಕ್ಷಿ. ಸಾಮೂಹಿಕ ಬೆಳವಣಿಗೆ ಎರಡು ರೀತಿಯಲ್ಲಿ ಆಗಿದೆ. ಒಂದು ಜಾತ್ಯಾತೀತತೆಯನ್ನು ಮೈಗೂಡಿಸಿಕೊಂಡು ಬೆಳೆದಿರುವ ಬಗೆಯಾದರೆ ಮತ್ತೊಂದು ಸಾಂಪ್ರದಾಯಿಕತೆಯನ್ನು ಒಳಗೊಂಡು ಸಾಮುದಾಯಿಕತೆಯನ್ನು ಬೆಳೆಸುವ ಬಗೆ. ಅಂದರೆ ಸಂಘ-ಸಂಸ್ಥೆಗಳು ಜಾತ್ಯಾತೀತವಾಗಿ ಎಲ್ಲರನ್ನು ಒಳಗೊಂಡು, ಸಮುದಾಯ/ಧರ್ಮ/ಜಾತಿ/ಪ್ರದೇಶಗಳನ್ನು ಮೀರುವ ಪ್ರಮೇಯವನ್ನು ಒಂದು ಕಡೆ ಪ್ರದರ್ಶಿಸಿದರೆ, ಮತ್ತೊಂದು ಕಡೆ ಸಾಮುದಾಯಿಕವಾಗಿ ಬೆಳೆದು ತನ್ನ ಸಮುದಾಯದ ಒಳಿತು-ಕೆಡಕುಗಳನ್ನು ಸಾಂಪ್ರದಾಯಿಕವಾಗಿ ನಿಭಾಯಿಸುವ ಪ್ರಮೇಯವನ್ನು ಒಳಗೊಂಡಿರುತ್ತದೆ. ಈ ಎರಡೂ ವರ್ಗಕ್ಕೆ ಸೇರಿದ ಲಿಂಗಾಯತ ಸಮುದಾಯದ ಸಂಘ-ಸಂಸ್ಥೆಗಳನ್ನು ಅಧ್ಯಯನ ಮಾಡುವುದೆ ಪ್ರಸ್ತುತ ಲೇಖನದ ಉದ್ದೇಶ. ಇದಕ್ಕಾಗಿ ನಾನು ಇಪ್ಪತ್ತನೇ ಶತಮಾನದ ಮೊದಲಾರ್ಧದಲ್ಲಿ ಲಿಂಗಾಯತ ಸಮುದಾಯವು ಹೇಗೆ ಮತ್ತು ಯಾಕೆ ತನ್ನಲ್ಲಿ ಸಂಘ-ಸಂಸ್ಥೆ/ಸಭೆಗಳನ್ನು ಬೆಳೆಸಿತು ಎಂದು ಚರ್ಚಿಸುತ್ತದೆ. ನಂತರದ ದಿನಗಳಲ್ಲಿ ಉದ್ಭವಗೊಂಡ ನೂರಾರು ಸಂಘ-ಸಂಸ್ಥೆಗಳಿಗೆ ನಾಂದಿಯನ್ನು ಹಾಡಿದ ಇವೆರಡರ ಚಾರಿತ್ರಿಕ ಮಹತ್ವವನ್ನು ಈ ಲೇಖನ ತೆರೆದಿಡುತ್ತದೆ.
ಆಧುನಿಕ ಜಗತ್ತಿನಲ್ಲಿ ವೃದ್ಧಿಯನ್ನು ಹೊಂದಬೇಕಾದರೆ ವೈಯಕ್ತಿಕ ಪ್ರಯತ್ನಗಳು ಮಾತ್ರ ಸಾಕಾಗುವುದಿಲ್ಲ, ಅದರ ಜೊತೆಗೆ ಸಾಮೂಹಿಕ/ಸಾಮುದಾಯಿಕ ಪ್ರಯತ್ನಗಳು ಅತ್ಯವಶ್ಯಕವೆಂದು ಅರಿತು ತನ್ನ ಪ್ರಗತಿಗಾಗಿ ಸಂಘ-ಸಂಸ್ಥೆ/ಸಭೆಗಳನ್ನು ಪ್ರಾರಂಭಿಸಿದ ಕೆಲವೇ ಕೆಲವು ಸಮುದಾಯಗಳಲ್ಲಿ ಲಿಂಗಾಯತ ಸಮುದಾಯವು ಒಂದು. ಇಪ್ಪತ್ತನೇ ಶತಮಾನದ ಮೊದಲಾರ್ಧದಲ್ಲಿ ಲಿಂಗಾಯತರ ಎರಡು ಪ್ರಮುಖ ಸಂಘಗಳನ್ನು ನಾವು ಗಮನಿಸಬಹುದು. ಮೊದಲನೆಯದು ಶ್ರೀ ವೀರಶೈವ ಮತ ಸಂವರ್ಧಿನಿ ಸಭಾ(1904). ಇದು ಮೈಸೂರು ಸಂಸ್ಥಾನದ ಮುಡುಕುತೊರೆ ಪ್ರದೇಶದಲ್ಲಿ ಲಿಂಗಾಯತ ವಿದ್ವಾಂಸರ (ಬಹುತೇಕ ಮಧ್ಯಮ ವರ್ಗ ಮತ್ತು ತಮ್ಮನ್ನು ತಾವು ವೀರಶೈವರೆಂದು ಕರೆದುಕೊಳ್ಳುತ್ತಿದ್ದ ಸಮೂಹ) ಪ್ರಯತ್ನಗಳಿಂದ ಹುಟ್ಟಿಕೊಂಡ ಸಂಘ. ಎರಡನೆಯದು ಫ.ಗು.ಹಳಕಟ್ಟಿಯವರಿಂದ 1920ರ ದಶಕದ ಉತ್ತರ ಕರ್ನಾಟಕದ ಬಿಜಾಪುರ, ಮತ್ತಿತರ ಗ್ರಾಮಗಳಲ್ಲಿ ಪ್ರಾರಂಭಿಸಲ್ಪಟ್ಟ ಶಿವಾನುಭವ ಸಂಸ್ಥೆ. ಎರಡೂ ಸಂಸ್ಥೆಗಳು ಲಿಂಗಾಯತರ ಪ್ರಗತಿ, ಏಳಿಗೆ ಮತ್ತು ಅಭಿವೃದ್ಧಿಯನ್ನು ಬಯಸುತ್ತಾ ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವು. ಲಿಂಗಾಯತ ಸಾಹಿತ್ಯ, ಧರ್ಮ ಮತ್ತು ತತ್ವಗಳ ಶೋಧನೆ, ಪರಿಶೀಲನೆ, ಪ್ರಕಟನೆ, ಪ್ರಚಾರ ಮತ್ತು ಪ್ರಸರಣಕ್ಕೆ ತಮ್ಮನ್ನು ತಾವು ಮುಡಿಪಾಗಿಸಿಕೊಂಡವು. ಜೊತೆಗೆ ಆಗಾಗ ಸಮಾಜ ಸುಧಾರಣೆಯ ಕೆಲಸ-ಕಾರ್ಯಗಳಲ್ಲೂ ಕೈ ಹಾಕಿ, ಮುನ್ನಡೆ ಸಾಧಿಸಿದವು. ಹಾಗಂತ ಇವೆರಡು ಸಂಸ್ಥೆಗಳು ಒಂದೇ ನಾಣ್ಯದ (ಲಿಂಗಾಯತ ಸಮಾಜ) ಎರಡು ಮುಖಗಳು ಎಂದು ನಾವು ತಿಳಿದುಕೊಂಡರೆ ಅವುಗಳ ಇತಿಹಾಸವನ್ನು ನಾವು ಬಹಳ ಸರಳವಾಗಿ ಅರ್ಥ ಮಾಡಿಕೊಳ್ಳುವ ತಪ್ಪನ್ನು ಎಸಗಿದಂತಾಗುತ್ತದೆ. ಒಂದು ದಕ್ಷಿಣದಲ್ಲಿ ಮತ್ತೊಂದು ಉತ್ತರದಲ್ಲಿ ಹುಟ್ಟಿಕೊಂಡ ಈ ಎರಡು ಸಂಸ್ಥೆಗಳು ಪ್ರಾದೇಶಿಕ, ಸೈದ್ಧಾಂತಿಕ ಮತ್ತು ಧಾರ್ಮಿಕ ಭಿನ್ನತೆಗಳನ್ನು ಒಳಗೊಂಡಿದ್ದವು. ಅವುಗಳ ಹುಟ್ಟು, ಬೆಳವಣಿಗೆ, ಚಟುವಟಿಕೆ ಮತ್ತು ಪ್ರಗತಿಯನ್ನು ನಾವು ಗಮನಿಸಿದರೆ ಅವು ಒಳಗೊಂಡ ಭಿನ್ನತೆಗಳನ್ನು ಮತ್ತು ಅವುಗಳ ಸಾಂಸ್ಕೃತಿಕ ಸೂಕ್ಷ್ಮತೆಗಳನ್ನು ಗಮನಿಸಬಹುದು. ಪ್ರಸ್ತುತ ಲೇಖನದ ಉದ್ದೇಶ ಇದನ್ನು ಅನಾವರಣಗೊಳಿಸುವುದೇ ಆಗಿದೆ.
ಶ್ರೀ ವೀರಶೈವ ಮತ ಸಂವರ್ಧಿನಿ ಸಭಾ ಮತ್ತು ವೀರಶೈವ ತತ್ವ
ಶ್ರೀ ವೀರಶೈವ ಮತ ಸಂವರ್ಧಿನಿ ಸಭೆಯು 1904ರಲ್ಲಿ ಮುಡುಕುತೊರೆಯ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಸ್ಥಾಪಿಸಲ್ಪಟ್ಟಿತು. ಮೈಸೂರು ಸಂಸ್ಥಾನದಲ್ಲಿ ಸ್ಥಾನ ಪಡೆದುಕೊಂಡಿದ್ದ ಪಿ.ಆರ್. ಕರಿಬಸವಶಾಸ್ತ್ರಿಯವರು ಈ ಸಭೆಯ ಸ್ಥಾಪನೆಗೆ ರೂವಾರಿಗಳಾಗಿದ್ದರಿಂದ, ಅವರ ಕಾರ್ಯವನ್ನು ಮೆಚ್ಚಿ ಅವರನ್ನು ಸಭೆಯ ಅಜೀವ ಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಪ್ರತಿ ವರ್ಷ ಶ್ರೀಭ್ರಮರಾಂಭಾ ಮಲ್ಲಿಕಾರ್ಜುನ ಸ್ವಾಮಿಯವರ ಜಾತ್ರೆಯ ಕಾಲದಲ್ಲಿ ಈ ಸಭೆಯನ್ನು ಏರ್ಪಡಿಸುತ್ತಿದ್ದರು. ಈಗಾಗಲೇ ಅಖಿಲ ಭಾರತ ವೀರಶೈವ ಮಹಾಸಭೆಯನ್ನು 1904ರಲ್ಲಿ ಸ್ಥಾಪಿಸಿದ್ದಾಗ್ಯು ಈ ಸಭೆಯ ಅವಶ್ಯಕತೆಯೇನಿತ್ತು ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ? ವೀರಶೈವ ಮಹಾಸಭೆ ಒಂದು ರೀತಿಯಲ್ಲಿ ಲಿಂಗಾಯತರ ಎಲ್ಲಾ ವಿಷಯಗಳನ್ನು ಚರ್ಚಿಸುವ ವೇದಿಕೆಯಾಗಿದ್ದರಿಂದ ನಿರ್ದಿಷ್ಟವಾಗಿ ವೀರಶೈವ ಧರ್ಮ ಮತ್ತು ತತ್ವದ ಪ್ರಕಟಣೆ ಮತ್ತು ಪ್ರಸರಣದ ಬಗ್ಗೆ ಹೆಚ್ಚು ಗಮನ ಕೊಡುವಂತಹ ವೇದಿಕೆಯಾಗಿರಲಿಲ್ಲ. ಹೀಗಾಗಿ ಮುಡುಕುತೊರೆ ಸಭೆಯ ಅವಶ್ಯಕತೆಯನ್ನು ಕೆಲವು ವೀರಶೈವ ವಿದ್ವಾಂಸರು ಕಂಡುಕೊಂಡರು. ಮೊದಲಿಂದಲೂ ಈ ಸಭೆ ಮೇಲ್ತರಗತಿಯ ಸಭೆಯಾಗಿ ರೂಪುಗೊಂಡಿತು. ಈ ಸಭೆಯ 1907ರ ನಾಲ್ಕನೆ ವರ್ಷದ ‘ಚರಿತ್ರ’ (ವರದಿ)ವನ್ನು ಗಮನಿಸಿದರೆ ಅನೇಕ ವಿಷಯಗಳು ಬಯಲಾಗುತ್ತವೆ. ಈ ಸಭೆಯನ್ನು ಸ್ಥಾಪಿಸಲು ಇದ್ದ ಮೂಲ ಉದ್ದೇಶ ಈ ವರದಿಯ ಮೊದಲನೆ ಪುಟದಲ್ಲಿ ಹೀಗೆ ಪ್ರಕಟವಾಗಿದೆ:
ವೀರಶೈವ ಸಿದ್ಧಾಂತವೆಂಬ ವೈದಿಕವಿದ್ಯೆಯು ಮುಕ್ತಿಸಾಧನವಾಗಿರುವದು ಮಾತ್ರವಲ್ಲದೆ ಐಹಿಕಸುಖಸಂಪಾದಕವಾದ ಸದಾಚಾರಸಂಪತ್ತಿಗೂ ಉಪಯೋಗಿಯಾಗಿರುವದರಿಂದ ಅವುಗಳ ಪ್ರಚಾರಕ್ಕೆ ಅನುಕೂಲ್ಯವನ್ನು ಕಲ್ಪಿಸುವುದು ಮತಾಭಿಮಾನಿಗಳಾದ ಶಿಷ್ಟಜನಗಳ ಮುಖ್ಯಕರ್ತವ್ಯವಾಗಿದೆಯಷ್ಟೆ!
ಈ ಘನತರವಾದ ಉದ್ದೇಶವನ್ನು ಸಾಧಿಸಬೇಕೆಂಬ ತಾತ್ಪರ್ಯದಿಂದ ಸಂಸ್ಕೃತ ಕರ್ಣಾಟಕ ಭಾಷಾಮಯವಾಗಿರುವ ವೀರಶೈವ ಸಿದ್ಧಾಂತ ಗ್ರಂಥಗಳ ಮತ್ತು ತತ್ಸಾಧಕಶಾಸ್ತ್ರಗಳ ಅಭ್ಯಾಸಕ್ಕೆ ಪ್ರೋತ್ಸಾಹವನ್ನು ಕೊಡುವುದಕ್ಕಾಗಿ ಶ್ರೀ ವೀರಶೈವಮತಸಂವರ್ಧಿನೀ ಎಂಬ ಸಭೆಯು ಶೋಭಕೃದವರ್ಷದ ಮಾಘಮಾಸದಲ್ಲಿ ಮುಡುಕುತೊರೆಯ ಶ್ರೀ ಮಲ್ಲಿಕಾರ್ಜುನಸ್ವಾಮಿಯ ಸನ್ನಿಧಿಯಲ್ಲಿ ಸ್ಥಾಪಿತವಾಯ್ತು.
ಸಭೆಯ ಧ್ಯೇಯೋದ್ದೇಶಗಳನ್ನು ಗಮನಿಸಿದರೆ ಕೆಲವೊಂದು ವಿಷಯಗಳು ಸ್ಪಷ್ಟವಾಗಿ ಕಾಣುತ್ತವೆ- ಒಂದು ವೀರಶೈವ ಸಿದ್ಧಾಂತವು ವೇದ ಪುರಸ್ಕೃತ, ವೇದ ಪ್ರಾಮಾಣಿತವೆಂದು ಭಾವಿಸಿರುವುದು ಮತ್ತು ವೀರಶೈವ ಸಿದ್ಧಾಂತ, ಶಾಸ್ತ್ರ, ಪುರಾಣಗಳ ಅಭ್ಯಾಸಕ್ಕೆ ಮತ್ತು ಸಂಪಾದನೆಗೆ ಸಭೆ ಮಹತ್ವ ನೀಡಿರುವುದು. ಇದರ ಜೊತೆಗೆ ಈ ಸಭೆಯು ವಿದ್ಯಾರ್ಥಿಗಳಲ್ಲಿ ವೀರಶೈವ ಗ್ರಂಥಗಳ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಲು ಪರೀಕ್ಷೆಗಳನ್ನು ನಡೆಸಿ, ಅದರಲ್ಲಿ ಉತ್ತೀರ್ಣರಾದವರಿಗೆ ಬಹುಮಾನ ಕೊಡುವ ವ್ಯವಸ್ಥೆಯನ್ನು ಕೂಡ ಒಳಗೊಂಡಿತ್ತು.
ಈ ಮುಡುಕುತೊರೆ ಸಭೆಯಲ್ಲಿ ಸಕ್ರೀಯರಾಗಿದ್ದವರನ್ನು ನಾವು ಎರಡು ರೀತಿಯಲ್ಲಿ ಗುರುತಿಸಬಹುದು. ಬೌದ್ಧಿಕ ಸದಸ್ಯರು ಮತ್ತು ಆಶ್ರಯದಾತರು. ಅಂದರೆ ಸಭೆಯ ವಾರ್ಷಿಕ ಸಭೆಗಳಲ್ಲಿ ಮತ್ತು ಧರ್ಮದ ಸಂಶೋಧನೆ ಮತ್ತು ಪ್ರಸರಣದಲ್ಲಿ ತೊಡಗಿಸಿಕೊಂಡವರಲ್ಲಿ ಬಹುತೇಕ ಜಂಗಮ ಅಥವಾ ಆರಾಧ್ಯ ಮೂಲದ ವೀರಶೈವರು. ಈ ಸಭೆಗೆ ಹಣಕಾಸಿನ ಆಶ್ರಯದಾತರು ಲಿಂಗಾಯತ ವ್ಯಾಪಾರಸ್ಥರು, ಜಮೀನುದಾರರು, ಮಠಾಧೀಶರು ಮತ್ತು ಸರ್ಕಾರಿ ನೌಕರರು (ಇದ್ದ ಕೆಲವೇ ಕೆಲವು ಮಂದಿಗಳಲ್ಲಿ). ಬೌದ್ಧಿಕವಾಗಿ ತೊಡಗಿಸಿಕೊಂಡವರಲ್ಲಿ ಬಹತೇಕ ಈಗಾಗಲೇ ಓದು ಪರಂಪರೆ, ಪೌರೋಹಿತ್ಯ ಮತ್ತು ಪಂಡಿತ ಹಿನ್ನಲೆಯುಳ್ಳ ಸ್ವಯಂ ಘೋಷಿತ ಶಾಸ್ತ್ರಿಗಳು ಮತ್ತು ವೇದಮೂರ್ತಿಗಳು. ವೇದ, ಆಗಮ, ಸ್ಮೃತಿ, ಪುರಾಣ, ಶಾಸ್ತ್ರ, ಸಾಂಖ್ಯ, ಷಟ್ಸ್ಥಳ, ಲಿಂಗಧಾರಣೆ, ಶಿವದೀಕ್ಷೆ, ಜ್ಯೋತಿಷ್ಯ, ವಾಸ್ತು, ಹಸ್ತರೇಖೆ, ವರ್ಣಾಶ್ರಮ, ವೀರಮಾಹೇಶ್ವರ ಮತ್ತು ಪೌರೋಹಿತ್ಯದಲ್ಲಿ ಪಾಂಡಿತ್ಯ ಹೊಂದಿದ್ದ ಈ ವಿದ್ವಾಂಸರು ವೀರಶೈವ ಮತದ ಸಿದ್ಧಾಂತ ಮತ್ತು ತಾತ್ವಿಕ ಚಿಂತನೆಗಳನ್ನು ಬೆಳಕಿಗೆ ತಂದು ತಮ್ಮ ಮತದ ‘ನಿಜ’ ಸ್ವರೂಪವನ್ನು ಪರಿಚಯಿಸುವುದಕ್ಕೆ ಈ ಸಭೆಯ ಮೂಲಕ ಪ್ರಯತ್ನಪಟ್ಟರು. ಪ್ರತಿವರ್ಷ ಒಬ್ಬೊಬ್ಬ ವಿದ್ವಾಂಸರನ್ನು ಸಭೆಯ ವೇದಿಕೆಗೆ ಆಹ್ವಾನಿಸಿ, ಅವರಿಂದ ವೀರಶೈವ ಮತದ ಧಾರ್ಮಿಕ ವಿಷಯದ ಬಗ್ಗೆ ಉಪನ್ಯಾಸ ಏರ್ಪಡಿಸಲಾಗುತ್ತಿತ್ತು. ಹೀಗೆ ಉಪನ್ಯಾಸ ಮತ್ತು ಲೇಖನಗಳನ್ನು ಬರೆದು ಪ್ರಕಟಿಸಿದವರಲ್ಲಿ ಪ್ರಮುಖವಾಗಿ ಪಿ.ಆರ್. ಕರಿಬಸವಶಾಸ್ತ್ರಿ (ಯತ್ನಾಗ್ರಫಿಯ ವಿಷಯ, 1905), ಸೋಸಲೆ ಸಿದ್ಧಲಿಂಗಮರಿದೇವರು (1906), ಸುತ್ತೂರು ಶಾಂತವೀರಶಾಸ್ತ್ರಿ (1908), ಸಿರಸಿ ಗುರುಶಾಂತಶಾಸ್ತ್ರಿ (ಗುರುತ್ವಕ್ಕೆ ವಿದ್ಯಾವಶ್ಯಕತೆ, 1911), ಎಮ್. ಬಸವಲಿಂಗಶಾಸ್ತ್ರಿ (ವೀರಶೈವಮತ ವಿಷಯಸಾರ, 1911), ವಿರುಪಾಕ್ಷ ಶಾಸ್ತ್ರಿ (ಆಸ್ತಿಕತ್ವವು, 1912) ಮತ್ತು ಇಂಗಳಗುಂದಿ ಶಾಂತಪ್ಪ (1914). ವಾರ್ಷಿಕ ಸಭೆಗಳಲ್ಲಿ ಪ್ರತಿ ಬಾರಿ ವೀರಶೈವ ಮತದ ಬಗ್ಗೆ ಪ್ರಬಲವಾಗಿ ಹೊರಹೊಮ್ಮತಿದ್ದ ವಿಷಯಗಳೇನೆಂದರೆ:
1. ವೀರಶೈವ ಮತವು ಸನಾತನವಾದುದು
2. ಈ ಮತವು ರೇಣುಕಾಚಾರ್ಯರಾದಿಯಾಗಿ ಅನಾದಿ ಕಾಲದಲ್ಲಿ ಸ್ಥಾಪಿಸಲ್ಪಟ್ಟಿತು. ಬಸವಣ್ಣ ಮತದ ಸುಧಾರಕನೆ ಹೊರತು, ಸ್ಥಾಪಕನಲ್ಲ,
3. ವೀರಶೈವ ಮತವು ಆರ್ಯ ಮತದ ಒಂದು ಪ್ರಮುಖ ಭಾಗ,
4. ವೀರಶೈವರಲ್ಲಿ ವರ್ಣಾಶ್ರಮ, ಗೋತ್ರ, ನಕ್ಷತ್ರಗಳಿವೆ.
ಚಾರಿತ್ರಿಕ ಮತ್ತು ಸಾಮಾಜಿಕ ಒತ್ತಡಗಳಿಗೆ ಬಲಿಪಶುವಾದ ಮೇಲಿನ ವಿದ್ವಾಂಸರು ‘ಆಂತರಿಕ ಬ್ರಾಹ್ಮಣ್ಯ’ವನ್ನು ಸ್ಥಾಪಿಸಲು ಹಠ ಹಿಡಿದರು. ಕ್ಷಣ ಕಾಲದ ಯಶಸ್ಸನ್ನು ಕಂಡರೂ, ಅವರ ವಾದಕ್ಕೆ ಸಾರ್ವಕಾಲಿಕ ಮನ್ನಣೆ ದೊರೆಯಲಿಲ್ಲ. ಈ ಚಾರಿತ್ರಿಕ ಕ್ಷಣದಲ್ಲಿ ವಚನ ಸಾಹಿತ್ಯವನ್ನು ಈ ವಿದ್ವಾಂಸರು ಗಂಭೀರವಾಗಿ ಅಥವಾ ಶಾಸ್ತ್ರೀಯವಾಗಿ ವ್ಯಾಸಾಂಗ ಮಾಡಲಿಲ್ಲ. ಅದರ ಶೋಧನೆ ಅಥವಾ ಪ್ರಕಟಣೆಯ ಬಗ್ಗೆ ಮುಡುಕುತೊರೆ ಸಭೆಯು ಹೆಚ್ಚು ಕೆಲಸ ಮಾಡಲಿಲ್ಲ (ಒಂದೆರಡು ಉದಾಹರಣೆಗಳನ್ನು ಬಿಟ್ಟರೆ). ಬಿ. ನಂಜುಂಡಸ್ವಾಮಿ ಎಂಬ ಲೇಖಕರು ಪಿ.ಆರ್. ಕರಿಬಸವಶಾಸ್ತ್ರಿಯವರ ಜೀವನ ಮತ್ತು ಅವರಿಂದ ಸ್ಥಾಪಿಸಲ್ಪಟ್ಟ ಮುಡುಕುತೊರೆ ಸಭೆಯ ಬಗ್ಗೆ ಬರೆಯುತ್ತಾ ಮೈಸೂರಿನ ವಿದ್ವಾಂಸರು ವಚನ ಸಾಹಿತ್ಯವನ್ನು ವೈಯಕ್ತಿಕವಾಗಿ ಅಥವಾ ಸಾಂಘಿಕವಾಗಿ ಹೆಚ್ಚು ಗಮನಿಸಲಿಲ್ಲವೆಂದು ಬರೆದಿದ್ದಾರೆ. ಸಂಸ್ಕೃತ ಕೃತಿಗಳು, ಕಾವ್ಯಗಳು ಕನ್ನಡ ಟಿಪ್ಪಣಿಗಳೊಡನೆ ತಮ್ಮ ಜೀವಮಾನ ಕಳೆದ ವಿದ್ವಾಂಸರುಗಳು ಮತದ ಸಾಹಿತ್ಯದ [ವಚನ ಸಾಹಿತ್ಯ] ಪ್ರಕಟಣೆ ಕಡೆ ಸ್ವಲ್ಪ ಗಮನ ಕೊಡಬೇಕಾಗಿತ್ತು. ಶಾಸ್ತ್ರಿಗಳ [ಪಿ.ಆರ್. ಕರಿಬಸವಶಾಸ್ತ್ರಿ] ಸಾಹಿತ್ಯ ಸೇವೆಯಲ್ಲಿ ಈ ಕೊರತೆ ಎದ್ದು ಕಾಣುತ್ತದೆ.
ಮುಡುಕತೊರೆ ಸಭೆಯು ಸಂಸ್ಕೃತ ಇತಿಹಾಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರಿಂದ ವಚನ ಸಾಹಿತ್ಯವು ಪಕ್ಕಕ್ಕೆ ಸರಿಯಿತು. ನಂತರ 1934ರಷ್ಟರಲ್ಲಿ ವಚನ ಸಾಹಿತ್ಯವನ್ನು ನಿರ್ಲಕ್ಷಿಸಲಾರದ ಅನಿವಾರ್ಯತೆಯುಂಟಾಗಿದ್ದರಿಂದ ಈ ಸಭೆಯು ವಚನ ಸಾಹಿತ್ಯವನ್ನು ಸಂಪೂರ್ಣ ನಿರ್ಲಕ್ಷಿಸಲಾಗಲಿಲ್ಲ. ಹಾಗಾಗಿ ಆಗಾಗ ಒಂದೆರಡು ಲೇಖನಗಳನ್ನು ಸಭೆಯ ವರದಿಯಲ್ಲಿ ನೋಡಬಹುದು. ಆದರೆ ಈ ಲೇಖನದಲ್ಲಿ ವಚನ ಸಾಹಿತ್ಯವನ್ನು ಸ್ವತಂತ್ರ ಸಾಹಿತ್ಯವೆಂದು ಪರಿಗಣಿಸದೆ, ಉಪನಿಷತ್ತುಗಳ ನೆರಳುಗಳಂತೆ ಬಿಂಬಿಸಲಾಗಿದೆ (ಉಪನಿಷತ್ತು ಮತ್ತು ವಚನ ಶಾಸ್ತ್ರ, 1934, 33ನೇ ವರದಿ). ಪ್ರಾಯಶಃ ಇದಕ್ಕೆ ಗುಬ್ಬಿ ಮಲ್ಹಣಾರ್ಯನ ‘ಗಣಭಾಷ್ಯ ರತ್ನಮಾಲೆ’ಯು ಪ್ರೇರಕವಾಗಿರಬಹುದು. ಪಾರಮಾರ್ಥಿಕ ವಿಷಯಗಳ ಮೂಸೆಯಿಂದ (ಪರಮಾತ್ಮನ ಸ್ವರೂಪ, ಸೃಷ್ಟಿಯ ಕ್ರಮ, ಜೀವೇಶ್ವರರ ಸಂಬಂಧ, ಸಾಧನ ಮಾರ್ಗ, ಇತ್ಯಾದಿ) ವಚನಗಳನ್ನು ಗಮನಿಸಲಾಯಿತು. ವಚನಗಳು ಸಮಾಜ ಸುಧಾರಕ, ಲಿಂಗ ಸಮಾನತೆ ಅಥವಾ ಕ್ರಾಂತಿಕಾರಕ ಸಾಹಿತ್ಯವೆಂದು ಪರಿಗಣಿಸಲಿಲ್ಲ.
ಯತ್ನಗ್ರಾಫಿಯ ವರದಿಗೆ (1904) ಈ ಸಭೆಯ ಮೂಲಕ ನೀಡಿದ ಪ್ರತಿಕ್ರಿಯೆಯನ್ನು ಗಮನಿಸಿದರೆ ಅದು ಪ್ರಭುತ್ವಕ್ಕು ಮತ್ತು ಲಿಂಗಾಯತ ಪ್ರಜೆಗಳಿಗು ಕೊಂಡಿಯಾಗಿ/ಮಧ್ಯವರ್ತಿಯಾಗಿ ಕೆಲಸ ಮಾಡುವ ಇಚ್ಛೆ ಹೊಂದಿತ್ತು ಎಂದು ತೋರುತ್ತದೆ. ಜೊತೆಗೆ ಲಿಂಗಾಯತ ಸಮುದಾಯದ ಇತರ ಸಮಾಜಗಳ ಮೇಲೆ ಬೌದ್ಧಿಕ ಮತ್ತು ಸಾಂಸ್ಕೃತಿಕ ಹಿಡಿತವನ್ನು ಸಾಧಿಸುವ ಉದ್ದೇಶವನ್ನೂ ಈ ಸಭೆಯು ಹೊಂದಿತ್ತು ಎಂದು ಅದರಲ್ಲಿ ಪ್ರಕಟಗೊಂಡ ಅನೇಕ ಉಪನ್ಯಾಸಗಳ ಮೂಲಕ ತಿಳಿಯಬಹುದು. ಈಗಿನ ದೃಷ್ಟಿಯಿಂದ ತೀವ್ರ ಸಾಂಪ್ರದಾಯಿಕವಾಗಿ ಕಾಣುವ ಈ ಸಭೆಯು ಲಿಂಗಾಯತ ಸಮಾಜದ ಮೇಲೆ ತನ್ನ ಮೊದಲ ದಿನಗಳಲ್ಲಿ ಹೆಚ್ಚು ಪ್ರಭಾವನ್ನುಂಟುಮಾಡಿತು ಎಂದು ನಿಃಸಂಶಯವಾಗಿ ಹೇಳಬಹುದು.
ಜಾತ್ಯಾತೀತದೆಡೆಗೆ ಲಿಂಗಾಯತರು ಮತ್ತು ಶಿವಾನುಭವ ಸಂಸ್ಥೆ
1920ರ ನಂತರ ಭಾರತದಲ್ಲುಂಟಾದ ಸಾಮಾಜಿಕ, ರಾಜಕೀಯ ಮತ್ತು ಸಾಹಿತ್ಯಕ ಬದಲಾವಣೆಗಳು ಲಿಂಗಾಯತ ಸಮಾಜದವರನ್ನು ಪ್ರಭಾವಿಸಿದವು. ಪ್ರಜಾಪ್ರಭುತ್ವ ಪರಿಕಲ್ಪನೆ, ಸರ್ವವ್ಯಾಪಿಯಾಗಿದ್ದ ರಾಷ್ಟ್ರೀಯತೆಯ ವಿಚಾರಧಾರೆ, ಜಾತ್ಯಾತೀತ ಸಮಾಜದ ಬಯಕೆ, ರಾಜ-ಪ್ರಭುತ್ವದ ಇತಿ-ಮಿತಿಗಳು, ಪ್ರಗತಿಪರತೆಯ ವಿಚಾರಗಳು, ವೈಜ್ಞಾನಿಕ ಮನೋಭಾವನೆ, ಸಮಾಜ-ಸುಧಾರಣೆಯ ಅತ್ಯಾವಶ್ಯಕತೆ, ಮೂಡನಂಬಿಕೆಯ ವಿರುದ್ಧದ ಸಮರ ಮತ್ತು ತಮ್ಮನ್ನು ತಾವು ಆಧುನೀಕರಣವಾಗಿಸಿಕೊಳ್ಳುವ ಅನಿವಾರ್ಯತೆ ಹೊಸ ಪೀಳಿಗೆಯ, ವಿದ್ಯಾವಂತ ಲಿಂಗಾಯತರನ್ನು ಹಿಂದೆಂದಿಗಿಂತ ಹೆಚ್ಚು ಸಕ್ರೀಯರನ್ನಾಗಿ ಮಾಡಿದವು. ಲಿಂಗಾಯತ ಸಮಾಜವನ್ನು ಪ್ರಗತಿಪರ ಮತ್ತು ಅಭಿವೃದ್ಧಿಯ ಮಾರ್ಗದಲ್ಲಿ ಕೊಂಡೊಯ್ಯ ಬೇಕೆಂಬ ಹಂಬಲ ಮೂಡಿತು. ಸಾಂಪ್ರದಾಯಿಕ ದೃಷ್ಟಿಯಿಂದ ಜಾತ್ಯಾತೀತದೆಡೆಗೆ ಸಮಾಜವನ್ನು ಕೊಂಡೊಯ್ಯುವ ತುಡಿತ ಬೆಳೆಯಿತು. ಲಿಂಗಾಯತರ ಸಾಂಸ್ಕೃತಿಕ, ಧಾರ್ಮಿಕ, ತಾತ್ವಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಇವುಗಳೆಲ್ಲದರ ಪ್ರಭಾವವನ್ನು ನಾವು ಕಾಣಬಹುದು. ಇದೇ ಸಂದರ್ಭದಲ್ಲಿ ಹೊಸ ಪೀಳಿಗೆಗೆ ಸೇರಿದ ಫ.ಗು.ಹಳಕಟ್ಟಿ, ಹರ್ಡೇಕರ್ ಮಂಜಪ್ಪ, ಸಿದ್ದಪ್ಪ ಕಂಬಳಿಯಂತಹ ಸಾಂಸ್ಕೃತಿಕ ಹಾಗು ರಾಜಕೀಯ ನಾಯಕರು ಲಿಂಗಾಯತರನ್ನು ಪ್ರಗತಿಯೆಡೆಗೆ ಕೊಂಡೊಯ್ಯವ ಸಾಹಸದಲ್ಲಿ ತೊಡಗಿಸಿಕೊಂಡರು. ಈ ದೆಸೆಯಲ್ಲಿ ಹಳಕಟ್ಟಿಯವರ ಶಿವಾನುಭವ ಸಂಸ್ಥೆ ಮಹತ್ತರ ಹೆಜ್ಜೆಗಳನ್ನು ಇಟ್ಟಿತು.
ಹಳಕಟ್ಟಿಯವರು ವಚನ ಪಿತಾಮಹ. ಆಧುನಿಕ, ವೈಜ್ಞಾನಿಕ ಮತ್ತು ವೈಚಾರಿಕೆಯ ಕೋನದಿಂದ ವಚನಗಳನ್ನು ಸಂಪಾದಿಸಿ, ಸಂಕಲಿಸಿ, ವಿಶ್ಲೇಷಿಸಿ, ಪ್ರಕಟಿಸಿ, ಪ್ರಚಾರ ಮಾಡಿದ ಮೊದಲ ವ್ಯಕ್ತಿ. ಅನುಭವಿ ರಾಜಕಾರಿಣಿ; ನುರಿತ ಸಮಾಜ ಸುಧಾರಕ ಮತ್ತು ಅನೇಕ ಸಂಸ್ಥೆ-ಸಂಘಟನೆಗಳನ್ನು ಹುಟ್ಟು ಹಾಕಿದ ಸಾಂಸ್ಕೃತಿಕ ಹರಿಕಾರ. ಲಿಂಗಾಯತ ಸಮಾಜಕ್ಕೆ ಅವರು ಕೈಗೊಂಡ ಸೇವೆ ಅಸಾಧಾರಣ. ಲಿಂಗಾಯತ ಸಮುದಾಯಕ್ಕೆ ವಚನಾಧಾರಿತ ಐಡಿಯಾಲಜಿಯ ಸುಭದ್ರ ತಳಪಾಯವನ್ನು ಹಾಕಿದ ನಾಯಕ ಅವರು. 12ನೇ ಶತಮಾನದ ಶಿವಶರಣರ ವಚನ ಸಾಹಿತ್ಯವನ್ನು ವ್ಯಕ್ತಿ ಮತ್ತು ಸಮಾಜವನ್ನು ಉದ್ಧರಿಸುವ ಸುಧಾರಕ ಸಾಧನವಾಗಿ ಅವರು ಕಂಡುಕೊಂಡರು. ಸಾಮಾಜಿಕ-ಲಿಂಗ ಸಮಾನತೆ, ಭ್ರಾತೃತ್ವ, ಸೌಹಾರ್ದತೆಯನ್ನು ಸಾಧಿಸುವ ನೈತಿಕ ಮಾರ್ಗದರ್ಶಿಯಾಗಿ ವಚನವನ್ನು ವ್ಯಾಖ್ಯಾನಿಸಿದರು. ತಾವು ಕಂಡುಕೊಂಡ ಸತ್ಯವನ್ನು ಇತರರೊಂದಿಗೆ ಹಂಚಿಕೊಳ್ಳುವ ದೆಸೆಯಲ್ಲಿ ಶಿವಾನುಭವ ಸಂಸ್ಥೆಯನ್ನು ಅವರು ಹುಟ್ಟಿಹಾಕಿದರು. ಹಳಕಟ್ಟಿಯವರ ಶಿವಾನುಭವ ಸಂಸ್ಥೆ ವಚನ ಸಾಹಿತ್ಯ ಮತ್ತು ವಚನಗಳನ್ನು ಎಲ್ಲೆಡೆ ಪಸರಿಸಿ, ಲಿಂಗಾಯತ ಸಮುದಾಯಕ್ಕೆ ಸುಸಜ್ಜಿತ ಹಾಗೂ ಏಕಬಂಧದ ಸಿದ್ಧಾಂತವನ್ನು ಕಟ್ಟಿಕೊಡುವುದಾಗಿತ್ತು. ಶಿವಾನುಭವ ಪತ್ರಿಕೆಯಲ್ಲಿ ಆಗಾಗ ಈ ಸಂಸ್ಥೆಯ ಹುಟ್ಟು, ಬೆಳವಣಿಗೆ, ಪ್ರಗತಿ ಮತ್ತು ಅದರ ಆಗು-ಹೋಗುಗಳ ವಿಚಾರಗಳನ್ನು ನೋಡಬಹುದು. ವಚನ ಸಾಹಿತ್ಯವನ್ನು ಯಶಸ್ವಿಯಾಗಿ ಸಂಪಾದಿಸಿ, ಸಂಕಲಿಸಿ ಮತ್ತು ಪ್ರಕಟಿಸಿದಾಗ ಅದರ ಪ್ರಸರಣಕ್ಕಾಗಿ ಕಂಡುಕೊಂಡ ಮಾರ್ಗವೇ ಶಿವಾನುಭವ ಸಂಸ್ಥೆ ಎಂದು ಹೇಳಬಹುದು.
ಮುಡುಕುತೊರೆ ಸಭೆಯು ಒಂದು ರೀತಿಯಲ್ಲಿ ಗಣ್ಯರಿಂದ, ಗಣ್ಯರಿಗೆ ಮೀಸಲಾಗಿ, ಮುಡುಕುತೊರೆಗೆ ಮಾತ್ರ ಸೀಮಿತವಾಗಿದ್ದರೆ, ಶಿವಾನುಭವ ಸಂಸ್ಥೆ ಎಲ್ಲೆಡೆ ಹರಡಿಕೊಳ್ಳುವ ಮತ್ತು ಎಲ್ಲರನ್ನು ಒಳಗೊಳ್ಳುವ ಪ್ರಜಾತಾಂತ್ರಿಕತೆಯ ಅಂಶವನ್ನು ಪ್ರದರ್ಶಿಸಿತು. ವಿಶೇಷವಾಗಿ ಗ್ರಾಮಗಳಲ್ಲಿ ವಚನ-ಸಾಹಿತ್ಯದ ಮಹತ್ವವನ್ನು ಈ ಸಂಸ್ಥೆಗಳ ಮೂಲಕ ಪ್ರಚಾರ ಮಾಡಲು ಹಳಕಟ್ಟಿಯವರು ಆಸಕ್ತಿ ತೋರಿಸಿದರು. ಈ ವಿಷಯವನ್ನು ಅವರು ಅನೇಕ ಕಡೆ ಪ್ರಸ್ತಾಪಿಸಿದರು. ಈ ರೀತಿಯ ಸಂಘಗಳನ್ನು ಸ್ಥಾಪಿಸಲು ಹಳಕಟ್ಟಿಯವರು ಬಸವಾದಿ ಪ್ರಮಥರು ಪೂರ್ವಕಾಲದಲ್ಲಿ ಶಿವಾನುಭವ ಮಂಟಪಗಳನ್ನು ಸ್ಥಾಪಿಸಿ ಹೇಗೆ ಶಿವಾನುಭವದ ಕಾರ್ಯಗಳನ್ನು ನಿರ್ವಹಿಸಿದರೊ, ಹಾಗೆ ಪ್ರಸ್ತುತ ಕಾಲದಲ್ಲಿ ಶಿವಾನುಭವ ಸಂಸ್ಥೆಗಳನ್ನು ಹುಟ್ಟು ಹಾಕಿ ಅವುಗಳ ಮೂಲಕ ಶಿವಾನುಭವ ಕಾರ್ಯಗಳು ಹಾಗು ವಚನಗಳ ಸಂಪತ್ತನ್ನು ಹಂಚಬೇಕೆಂದು ಆಶಿಸಿದರು. ಇಂತಹ ವಿಚಾರಗಳಿಂದ ಹಳಕಟ್ಟಿಯವರು ಶಿವಶರಣರ ಇತಿಹಾಸಕ್ಕೆ ಅಧಿಕೃತತೆಯನ್ನು ನೀಡುವುದಲ್ಲದೆ, ಪ್ರಸ್ತುತ ಕಾಲದಲ್ಲಿ ಶಿವಾನುಭವ ಸಂಸ್ಥೆಗಳ ಅವಶ್ಯಕತೆಯನ್ನು ತಿಳಿಸಿ ಹೇಳುವ ಅಂಶವು ಗೋಚರಿಸುತ್ತದೆ. ಶಿವಾನುಭವ ಸಂಸ್ಥೆಯ ಕಾರ್ಯ ಸಾಧಿಸುವವರಲ್ಲಿ ಮೊದಲಿಗೆ ಶಿವಶರಣರ ಬಗ್ಗೆ ಮತ್ತು ಅವರಾಡಿದ ಆಚಾರ-ವಿಚಾರಗಳ ಬಗ್ಗೆ ದೃಢವಾದ ನಂಬಿಕೆಯನ್ನು ಹೊಂದಿರಬೇಕೆಂದು ಹಳಕಟ್ಟಿಯವರು ನಂಬಿದ್ದರು, “ಇಂಥವರು ನಿಯಮಿತ ಕಾಲದಲ್ಲಿ ತಮ್ಮ ಗ್ರಾಮದಲ್ಲಿ ಕೂಡುತ್ತಿರಬೇಕು. ವಚನ ಶಾಸ್ತ್ರದಲ್ಲಿಯ ತತ್ವಗಳನ್ನು ವಿವೇಚಿಸಬೇಕು ಮತ್ತು ಅವುಗಳಂತೆ ನಡೆಯಲು ಪ್ರಯತ್ನಿಸಬೇಕು” ಎಂದು ಹಳಕಟ್ಟಿಯವರು ಬರೆದಿದ್ದಾರೆ (‘ಶಿವಾನುಭವ ಸಂಘಗಳ ಸ್ಥಾಪನೆ’, ಶಿವಾನುಭವ ಸಂಪುಟ 15, ಸಂಚಿಕೆ 2, ಪು. 66-73). ಒಟ್ಟಾರೆಯಾಗಿ ಶಿವಾನುಭವ ಸಂಸ್ಥೆ ಮತ್ತು ಅದರ ಸಭಾಸದರ ಉದ್ದೇಶವನ್ನು ನಾವು ಹೀಗೆ ಕ್ರೋಢೀಕರಿಸಬಹುದು-
1. ಶಿವಾನುಭವ ಶಾಸ್ತ್ರದ (ಮುಖ್ಯವಾಗಿ ವಚನ ಸಾಹಿತ್ಯ) ಪ್ರಚಾರ ಮತ್ತು ಸತತ ವ್ಯಾಸಂಗ
2. ಗ್ರಾಮಗಳಲ್ಲಿ ಶಿವಾನುಭವ ಶಾಸ್ತ್ರದ ಬಗ್ಗೆ ಹೆಚ್ಚು ಅರಿವನ್ನುಂಟು ಮಾಡುವುದು
3. ಶಿವಾನುಭವ ಶಾಸ್ತ್ರದ ಮುಖ್ಯ ಧ್ಯೇಯ, ಉದ್ದೇಶ ಮತ್ತು ವಿಚಾರಗಳನ್ನು ಬಿಟ್ಟುಬಿಡದೆ ತಮ್ಮ ಗ್ರಾಮಗಳಲ್ಲಿ ಮುಂದುವರೆಸುವುದು
4. ಆತ್ಮ ಸುಧಾರಣೆಯ ಕಾರ್ಯಗಳು
5. ಕುಟುಂಬ ಸುಧಾರಣೆಯ ಕಾರ್ಯಗಳು
ಶಿವಾನುಭವ ಸಂಸ್ಥೆ ಕೇವಲ ವಾಜ್ಞಯ ಪ್ರಚಾರಕ್ಕೆ ಸೀಮಿತವಾಗಿರಲಿಲ್ಲವೆಂದು ಈ ಉದ್ದೇಶಗಳ ಮೂಲಕ ತಿಳಿಯುತ್ತದೆ. ತನ್ನ ಕಾರ್ಯಕ್ಷೇತ್ರವನ್ನು ಹಿಗ್ಗಿಸಿಕೊಳ್ಳುವ ದೆಸೆಯಲ್ಲಿ ಇದರ ಸ್ವರೂಪವನ್ನು/ಸಂವಿಧಾನವನ್ನು ರೂಪಿಸಲಾಯಿತು. ಈ ಹಿನ್ನೆಲೆಯಲ್ಲಿ ಈ ಸಂಸ್ಥೆಯು ಸಾಮಾಜಿಕ ಆಯಾಮವನ್ನು ಹೊಂದಿತ್ತು ಎಂದು ಸ್ಪಷ್ಟವಾಗಿ ತಿಳಿಯಬಹುದು. ವಾಜ್ಞಯ ಪ್ರಸರಣವನ್ನು ಮೂಲ ಉದ್ದೇಶವಾಗಿಟ್ಟುಕೊಂಡು ಹುಟ್ಟಿಕೊಂಡ ಈ ಸಂಘ ಕ್ರಮೇಣ ಸಾಮಾಜಿಕ ಆಯಾಮವನ್ನು ಪಡೆಯಿತು.
ಅಂದಿನ ಕಾಲದಲ್ಲಿ ವಚನ ಸಾಹಿತ್ಯದ ಬಗ್ಗೆ ಅನೇಕ ಸಂಪ್ರದಾಯವಾದಿಗಳು (ಪೌರೋಹಿತ್ಯ ಹಿನ್ನಲೆಯ ಲಿಂಗಾಯತರು) ಅನುಮಾನದಿಂದ ನೋಡುತ್ತಿದ್ದರು. ಅದರ ಖಚಿತತೆ ಮತ್ತು ಶಾಸ್ತ್ರೀಯತೆಯ ಬಗ್ಗೆ ಅವರು ಸಂಶಯ ವ್ಯಕ್ತಪಡಿಸುತ್ತಿದ್ದರಿಂದ ಹಳಕಟ್ಟಿಯವರು ಮೇಲೆ ವ್ಯಕ್ತಪಡಿಸಿದ ದೃಢ ನಂಬಿಕೆಯ ಮಾತುಗಳನ್ನಾಡಿದ್ದು. ಮೊದಲಿಗೆ ಶಿವಾನುಭವ ಸಂಘಗಳನ್ನು ವಿಜಾಪುರ ಮತ್ತು ಬೆಳಗಾವ ಜಿಲ್ಲೆಗಳಲ್ಲಿನ ಗ್ರಾಮಗಳಲ್ಲಿ ಸ್ಥಾಪಿಸಲಾಯಿತು. ನಂತರ ಇದು ಅಂದಿನ ಕರ್ನಾಟಕದಾದ್ಯಂತ ಹರಡಿಕೊಂಡಿತು. ಶೀಘ್ರದಲ್ಲಿ 300-400 ಶಿವಾನುಭವ ಸಂಘಗಳನ್ನು ಸ್ಥಾಪಿಸುವ ಅವಶ್ಯಕತೆಯಿದೆಯೆಂದು ಹಳಕಟ್ಟಿಯವರು ಅನೇಕ ಕಡೆ ತಮ್ಮ ಆಶಯವನ್ನು ವ್ಯಕ್ತಪಡಿಸುತ್ತಿದ್ದರು (1939ರ ಸುಮಾರಿಗೆ). ತಾವೇ ನಡೆಸುತ್ತಿದ್ದ ಶಿವಾನುಭವ ಮತ್ತು ನವ ಕರ್ನಾಟಕ ಪತ್ರಿಕೆಗಳ ಮೂಲಕ ಶಿವಾನುಭವ ಸಂಸ್ಥೆಯ ಮಹತ್ವವನ್ನು ಮತ್ತು ಅವಶ್ಯಕತೆಯನ್ನು ತಿಳಿ ಹೇಳುತ್ತಿದ್ದರು. ಈ ಸಂಘಗಳ ಮೂಲಕ ಸಮಾಜದ ಸಂಘಟನೆಯನ್ನು ಮಾಡುವ ಉದ್ದೇಶವನ್ನು ಸಹ ಇಲ್ಲಿ ಕಾಣಬಹುದು.
ಈ ಸಂಘಗಳನ್ನು ಸ್ಥಾಪಿಸಲು ಅನೇಕ ಮಠಾಧೀಶರು ಮುಂದೆ ಬಂದಿದ್ದು ವಿಶೇಷವಾದ ಅಂಶ. ಇದು ಆಧುನಿಕ ಮಾದರಿಯ ಸಂಘಗಳಿಗೂ ಮತ್ತು ಧಾರ್ಮಿಕ ಕೇಂದ್ರಗಳಿಗೂ ಇದ್ದ ಸಂಬಂಧವನ್ನು ತೆರೆದಿಡುತ್ತದೆ. ಅನೇಕರು ವಾದಿಸುವಂತೆ ಆಧುನಿಕ ಸಂಘ-ಸಂಸ್ಥೆಗಳು ಸಾಂಪ್ರದಾಯಿಕ ಮಠಮಾನ್ಯಗಳಿಗೆ ಪರ್ಯಾಯವಾಗಿ ಬೆಳೆದವು. ಆದರೆ ಇಲ್ಲಿನ ಸನ್ನಿವೇಶ ವ್ಯತಿರಿಕ್ತವಾಗಿ ಕಾಣುತ್ತದೆ. ಆಧುನಿಕ ಮಾದರಿಗಳನ್ನು ಸಾಂಪ್ರದಾಯಿಕ ಮಠಮಾನ್ಯಗಳು ಒಳಗೊಳ್ಳುವ ಪ್ರಕ್ರಿಯೆಯನ್ನು ಸೂಚಿಸುತ್ತದೆ.
ಅನೇಕ ಶಿವಾನುಭವ ಸಂಘಗಳ ಮೂಲಕ ಸಮಾಜದಲ್ಲಿ ಸಾಮಾಜಿಕ, ಧಾರ್ಮಿಕ ಮತ್ತು ವಾಜ್ಞಯಾತ್ಮಕ ಸುಧಾರಣೆಯ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಆಶಯವನ್ನು ಹೊತ್ತಿದ್ದ ಹಳಕಟ್ಟಿಯವರು ತಮಗೆರಗಿದ ಅನೇಕ ಸವಾಲುಗಳು ಮತ್ತು ಸಮಸ್ಯೆಗಳನ್ನು ಕೂಡ ವಿಷಾದದಿಂದ ವ್ಯಕ್ತಪಡಿಸಿದ್ದಾರೆ, “ದೊಡ್ಡ, ದೊಡ್ಡ ಗ್ರಾಮಗಳಲ್ಲಿರುವ ವೈಯಕ್ತಿಕ ಕಲಹಗಳು, ತಮ್ಮ ವಾಜ್ಞಯದ ಬಗ್ಗೆ ಸುಶಿಕ್ಷಿತರಲ್ಲಿ ಇರುವ ಉದಾಸೀನಭಾವ, ರಾಜಕೀಯ ಕಲಹಗಳಲ್ಲಿ ಸೇರಿಕೊಂಡಿದ್ದರಿಂದ ಉಂಟಾಗಿರುವ ಈಷ್ರ್ಯಾಸೂಯೆಗಳು ಇವುಗಳೇ ಮುಖ್ಯವಾಗಿರುತ್ತವೆ. ಇದರಿಂದ ದೊಡ್ಡ, ದೊಡ್ಡ ಪಟ್ಟಣಗಳಲ್ಲಿ ಶಿವಾನುಭವ ಸಂಸ್ಥೆಗಳು ನಡೆಯುವುದು ದುಸ್ತರವೆಂದು ವಿಷಾದಪೂರ್ವಕವಾಗಿ ಇಲ್ಲಿ ನಾವು ಹೇಳದೆ ಇರಲಾರೆವು”.
ರಾಜಾಶ್ರಯವನ್ನು ಆಗಾಗ ಬಯಸುತ್ತಿದ್ದ ಮುಡುಕುತೊರೆ ಸಭೆ ಮತ್ತು ರಾಜಾಸ್ಥಾನದಲ್ಲಿ ಕೆಲವೊಂದು ಸ್ಥಾನಗಳನ್ನು ಹೊಂದಿದ್ದ ಶಾಸ್ತ್ರಿಗಳಂತೆ ಹಳಕಟ್ಟಿಯವರು ಶಿವಾನುಭವ ಸಂಸ್ಥೆಯನ್ನು ರೂಪಿಸಲು ಇಷ್ಟ ಪಡಲಿಲ್ಲ. ರಾಜಕೀಯ ಅಂಶದ ಲವಶೇಷವು ಇಲ್ಲದಂತೆ ಶಿವಾನುಭವ ಸಂಸ್ಥೆಯನ್ನು ರೂಪಿಸಬೇಕೆಂಬ ಆಶಯವನ್ನು ಅವರು ಹೊಂದಿದ್ದರು. ಹಾಗಾಗಿ ಅವರು ಶಿವಾನುಭವ ಸಂಸ್ಥೆಯ ಸಭಾಸದರಿಗೆ ಆಗಾಗ ಎಚ್ಚರಿಕೆಯ ಮಾತುಗಳನ್ನು ಆಡುತ್ತಿದ್ದರು. ಕಾಂಗ್ರೆಸ್ ಮಾದರಿಯಲ್ಲಿ ಕಾರ್ಯ ನಿರ್ವಹಿಸಲು ಅನೇಕ ಸಭಾಸದರು ಪ್ರಯತ್ನಪಡುತ್ತಿರುವುದನ್ನು ಗಮನಿಸಿದ ಹಳಕಟ್ಟಿಯವರು ಕಾಂಗ್ರೆಸ್ಸಿನ ಕಾರ್ಯಸೂಚಿ ಬೇರೆ, ಶಿವಾನುಭವ ಸಂಸ್ಥೆಯ ಕಾರ್ಯ-ಉದ್ದೇಶಗಳು ಬೇರೆ ಎಂದು ಪದೆ, ಪದೆ ಜ್ಞಾಪಿಸುತ್ತಿದ್ದರು. ಸಭಾಸದರು ಅಧಿಕಾರಕ್ಕಾಗಿ ಆಸೆ ಪಡದೆ ನಿಸ್ವಾರ್ಥದಿಂದ ದುಡಿಯಬೇಕೆಂದು ಆಶಿಸುತ್ತಿದ್ದರು.
ಕೊನೆಯದಾಗಿ…
ವೈಯಕ್ತಿಕ ಆದರ್ಶಗಳು, ಸಿದ್ಧಾಂತಗಳು, ಅಭಿಪ್ರಾಯಗಳನ್ನು ಕ್ರೋಡಿಕರಿಸಿ ಅವಕ್ಕೆ ಸಾಮೂಹಿಕ ರೂಪ ನೀಡುವಲ್ಲಿ ಈ ಸಂಘ-ಸಂಸ್ಥೆಗಳು ಮಹತ್ತರ ಪಾತ್ರ ನಿರ್ವಹಿಸಿದವು. ಈ ಎರಡೂ ಸಂಸ್ಥೆಗಳು ತಾವು ನಂಬಿದ ಮತ್ತು ಬೆಳೆಸಿದ ಶಾಸ್ತ್ರ, ಪುರಾಣ ಮತ್ತು ಸಾಹಿತ್ಯವನ್ನು ಸಂಸ್ಥೀಕರಣಗೊಳಿಸುವಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದವು. ಈ ಮುಡುಕುತೊರೆ ಸಭೆಯು ಮಧ್ಯಮ ವರ್ಗದ ಶ್ರೋತೃಗಳು ಮತ್ತು ಮೇಲ್ವರ್ಗದ ವ್ಯಕ್ತಿಗಳಿಂದ ಕೂಡಿದ್ದು, ಜನಸಾಮಾನ್ಯರದ್ದಲ್ಲದ ಸಂಸ್ಕೃತ ಶಾಸ್ತ್ರಕ್ಕೆ ಹೆಚ್ಚು ಮನ್ನಣೆ ನೀಡಿದರೆ, ಶಿವಾನುಭವ ಸಂಸ್ಥೆಯು ಗ್ರಾಮಗಳಲ್ಲಿ ಕನ್ನಡದ ವಚನ-ಕಂಪನ್ನು ಹರಡುವ ಪ್ರಯತ್ನ ಮಾಡಿತು. ಜನಸಂಪರ್ಕ ಕೊಂಡಿಗಳೆ ಇವೆರಡು ಸಂಘಗಳ ಮೂಲ ಸೆಲೆಯಾಗಿತ್ತು. ಈ ದೆಸೆಯಲ್ಲಿ ಮುಡುಕುತೊರೆ ಸಭೆಯು ಗಣ್ಯಾತಿಗಣ್ಯರನ್ನು ಒಳಗೊಂಡ ಮತ್ತು ಶ್ರೇಣೀಕೃತ ಲಿಂಗಾಯತ ಸಮಾಜವನ್ನು ಬೆಳೆಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡರೆ, ಶಿವಾನುಭವ ಸಂಸ್ಥೆ ಜನಸಾಮನ್ಯರನ್ನು ತಲುಪುವತ್ತ ಹೆಚ್ಚು ಆಸಕ್ತಿ ತೋರಿತು. ಸಭೆಯ ಮೂಲಕ ಲಿಂಗಾಯತ ಶಾಸ್ತ್ರಿಗಳು ರಾಜಪ್ರಭುತ್ವಕ್ಕು ಮತ್ತು ಲಿಂಗಾಯತ ಸಮಾಜಕ್ಕು ಕೊಂಡಿಯಾಗಿ ಮಾರ್ಪಾಡುವ ಆಶಯವನ್ನು ಹೊಂದಿದ್ದರೆ, ಶಿವಾನುಭವ ಸಂಘ ಇದ್ಯಾವುದೆ ಆಸಕ್ತಿಯನ್ನು ತೋರಲಿಲ್ಲ. ಸಮಾಜ ಮತ್ತು ವಾಜ್ಞಯದ ಸುಧಾರಣೆಯಲ್ಲಿ ಅದು ನಿರತವಾಯಿತು.
ಒಟ್ಟಾರೆಯಾಗಿ, ಇವೆರಡು ಹಾಗು ಆಗಿನ ಮತ್ತಿತರ ಸಂಘ-ಸಂಸ್ಥೆಗಳನ್ನು ನಾವು ಅಧ್ಯಯನ ಮಾಡುವುದರಿಂದ ಅಂದಿನ ಕಾಲದ ಆಂತರಿಕ ಆಶಯಗಳು, ಮೂಲಭೂತ ಸ್ವಭಾವಗಳು ಮತ್ತು ಸಾಮಾಜಿಕ-ಧಾರ್ಮಿಕ ಆಚಾರ-ವಿಚಾರಗಳನ್ನು ಐತಿಹಾಸಿಕ ದೃಷ್ಟಿಯಿಂದ ತಿಳಿದುಕೊಳ್ಳಬಹುದು.
Comments 12
Umesh Kotageri
Sep 11, 2023ಲಿಂಗಾಯತ ಇತಿಹಾಸದ ಆವಂತರಗಳನ್ನು ತುಂಬಾ ಚೆನ್ನಾಗಿ ಬರೆದಿರುವಿರಿ, thank you 🙏🏽
ರುದ್ರಪ್ಪ ಮಧುಗಿರಿ
Sep 11, 2023ರಾಜ್ಯಾದ್ಯಂತ ಅನೇಕ ಸಂಘ ಸಂಸ್ಥೆಗಳನ್ನು ಹೊಂದಿರುವ ಲಿಂಗಾಯತ ಸಮುದಾಯವು ಆರಂಭದಲ್ಲೇ ಎರಡು ಸ್ಪಷ್ಟ, ವಿಭಿನ್ನ ಹಾದಿಗಳನ್ನು ತುಳಿದದ್ದು ಮಹತ್ವಪೂರ್ಣ ದಾಖಲೆ. ಲೇಖನದ ವಿಶ್ಲೇಷಣೆ ಕೂಡ ಗಮನೀಯವಾಗಿದೆ.
Shivakumar Bengaluru
Sep 11, 2023ಶ್ರೀ ವೀರಶೈವ ಮತ ಸಂವರ್ಧಿನಿ ಸಭಾ ಮತ್ತು ಶಿವಾನುಭವ ಸಂಸ್ಥೆ ಎರಡೂ ಲಿಂಗಾಯತಕ್ಕೆ ಅವತ್ತೇ ತಮ್ಮತಮ್ಮ ಹಾದಿಯಲ್ಲಿ ದಿಕ್ಸೂಚಿಯಾಗಲು ಪ್ರಯತ್ನಿಸಿವೆ. ಜ್ಯಾತ್ಯಾತೀತ ದಾರಿ ಹಿಡಿದವರು ಶರಣರ ತತ್ವಗಳನ್ನು ಮುಂದುವರಿಸಿದರೆ, ವೀರಶೈವದ ಬಾಲ ಹಿಡಿದವರು ಇವತ್ತಿಗೂ misguide ಮಾಡುತ್ತಿರುವುದು ದುರಂತವೇ ಸರಿ. ಸರ್, ಒಂದೊಳ್ಳೆಯ ಲೇಖನ ಕೊಟ್ಟಿದ್ದಕ್ಕೆ ಅನಂತ ನಮಸ್ಕಾರಗಳು.
Rajesh Kaladagi
Sep 11, 2023I like reading this article which can make us think. Also thank you for allowing me to comment! Keep up the excellent work!!
Veeresh Banahatti
Sep 13, 2023ಚರಿತ್ರೆಯಲ್ಲಿ ಮರೆಯಾದ ಎರಡು ಮಹತ್ವದ ಬೆಳವಣಿಗೆಗಳನ್ನು ಲೇಖಕರು ಬಹಳ ಚೆನ್ನಾಗಿ ವಿಶ್ಲೇಷಿಸಿದ್ದಾರೆ. ವೀರಶೈವದ ಅಭಿಲಾಶೆಗಳು ಅಂದಿನಿಂದಲೂ ಸ್ಪಷ್ಟವಾಗಿಯೇ ಇವೆ. ಅವು ಯಾವತ್ತಿಗೂ ಪ್ರಗತಿಪರ, ಜ್ಯಾತ್ಯಾತೀತ ಮನೋಭಾವದ ಶರಣರೊಂದಿಗೆ ಬೆರೆಯಲಾರವು. ಶರಣರಾದ ವಿಜಯಕುಮಾರ ಬೋರಟ್ಟಿಯವರಿಗೆ ವಂದನೆಗಳು.
Subhash M
Sep 19, 2023ಕರ್ನಾಟಕದ ಎರಡು ಭಿನ್ನ ಪ್ರದೇಶಗಳಲ್ಲಿ ಕಾಣಿಸಿಕೊಂಡ ಎರಡು ಸಂಘಗಳು ಹೇಗೆ ತಮ್ಮ ಧ್ಯೇಯೋದ್ದೇಶಗಳನ್ನು ನಿರ್ಧರಿಸಿಕೊಂಡವು ಎಂಬುದನ್ನು ತಿಳಿದರೆ, ಅವುಗಳ ಹಿಂದಿನ ಹಿತಾಸಕ್ತಿಗಳು ಬೆಳಕಿಗೆ ಬರುತ್ತವೆ. ಪ್ರತಿಷ್ಠೆಗಾಗಿ ಲಿಂಗಾಯತ ಧರ್ಮವನ್ನು ಬಳಸಿಕೊಂಡವರು ತಮ್ಮ ಸ್ಥಾನಮಾನಕ್ಕಾಗಿ ಪರಿತಪಿಸಿದವರು. ಅಂಥ ಘಟಕವು ಇವತ್ತು ಬೃಹತ್ತಾಗಿ ಬೆಳೆದದ್ದರಿಂದಲೇ ಲಿಂಗಾಯತ ಧರ್ಮವು ಒಡೆದ ಮನೆಯಾಗಿದೆ.
Mallamma Patil
Sep 19, 2023ಧರ್ಮ ಜಾತಿಯಾದಾಗ ಇಂತಹ ಮೇಲಾಟಗಳು, ಕಿತ್ತಾಟಗಳು ಸರ್ವೇ ಸಾಮಾನ್ಯ. ಶರಣರ ಜೊತೆಯಲ್ಲೇ ಶರಣರ ಧ್ಯೇಯೋದ್ದೇಶಗಳು ಹೊರಟು ಹೋದವು. ಉದಾತ್ತ ಮೌಲ್ಯಗಳ ಲಿಂಗಾಯತವನ್ನು ಈಗ ಸಂಘ ಸಂಸ್ಥೆಗಳು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿವೆ. ಲೇಖನ ಬಹಳ ಹಿಡಿಸಿತು, ಶರಣು.
ದುರ್ಗಪ್ಪ ಜಿಗಣಿ
Sep 19, 2023ಜಾತ್ಯಾತೀತ ಮೌಲ್ಯಗಳು ಇವತ್ತು ಯಾರಿಗೂ ಬೇಡವಾಗಿವೆ, ಏನಿದ್ದರೂ ಪ್ರಬಲ ಜಾತಿಯಾಗಿ ಬೆಳೆಯುವ ಹುನ್ನಾರ ಎಲ್ಲ ಕಡೆಗೂ ಎಲ್ಲಾ ಧರ್ಮಗಳಲ್ಲೂ ಕಾಣಿಸುತ್ತಿರುವ ಬೆಳವಣಿಗೆ. ಲಿಂಗಾಯತವೂ ಅದಕ್ಕೆ ಹೊರತಾಗಿಲ್ಲ.
Sharanu
Sep 20, 2023ಹಾನಗಲ್ ಸ್ವಾಮಿಗಳು ವೀರಶೈವ ಹೆಸರಿಗೆ ಹೆಚ್ಚು ಮಹತ್ವ ನೀಡಿ ಲಿಂಗಾಯತ ಹೆಸರನ್ನು ಕಡೆಗಣಿಸಿದ್ದಾರೆ.
ವೀರಶೈವ ಮಹಾಸಭೆ ಲಿಂಗಾಯತ ಸ್ವತಂತ್ರ-ಅಲ್ಪಸಂಖ್ಯಾತ ಧರ್ಮ ಆಗುವುದಕ್ಕೆ ತನ್ನ ವಿರೋಧ ಮಾಡಿ ಲಿಂಗಾಯತರ ಅಭಿವೃದ್ಧಿಗೆ ಕಲ್ಲು ಹಾಕುತ್ತಿದೆ, ಲಿಂಗಾಯತರಿಗೆ ಸಿಗಬೇಕಾದ ಅಲ್ಪಸಂಖ್ಯಾತ ಧರ್ಮದ ಮೀಸಲಾತಿ, ಇತರೇ ಹಲವಾರು ಸರ್ಕಾರಿ ಸೌಲಭ್ಯಗಳು ಲಿಂಗಾಯತರಿಗೆ ಸಿಗದಂತೆ ಈ ವೀರಶೈವ ಮಹಾಸಭೆ ಮಾಡಿದೆ.
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಎಂದು ಹೆಸರು ಇಡಲಾಗಿದೆ, ಮೆಜೆಸ್ಟಿಕ್ ನಲ್ಲಿ ಇರುವ ಪ್ರಮುಖ ಬಸ್ ನಿಲ್ದಾಣಕ್ಕೆ ಕೆಂಪೇಗೌಡ ಹೆಸರು, ಮೆಟ್ರೋ ರೈಲು ನಿಲ್ದಾಣಕ್ಕೆ ಕೆಂಪೇಗೌಡ ಹೆಸರು, ಬೆಂಗಳೂರು ನಗರದ ರೈಲು ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು, ಆದರೆ ಬೆಂಗಳೂರಿನಲ್ಲಿ ಬಸವಣ್ಣನವರ ಹೆಸರಿನಲ್ಲಿ ಏನು ಇಲ್ಲ.
ಲಿಂಗಾಯತ ಸಂಘ ಸಂಸ್ಥೆಗಳು,ಲಿಂಗಾಯತ ಮಠಾಧೀಶರು, ಲಿಂಗಾಯತ ರಾಜಕಾರಣಿಗಳು (ಲಿಂಗಾಯತ ಹೆಸರಿನಲ್ಲಿ ಮುಖ್ಯಮಂತ್ರಿ ಆದವರು ಸಚಿವರು, ಶಾಸಕರು) ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಇದರಿಂದಲೇ ತಿಳಿಯುತ್ತದೆ. ಈ ವಿಚಾರವಾಗಿ ಒಬ್ಬರು ಸಹ ತಮ್ಮ ಬಾಯಿ ತೆರೆಯುತಿಲ್ಲ. ಬೆಂಗಳೂರಿನಲ್ಲಿ ಬಸವಣ್ಣನವರ ಹೆಸರಿನಲ್ಲಿ ಏನು ಇಲ್ಲದೆ ಇರುವುದು ಪರೋಕ್ಷವಾಗಿ ಬಸವಣ್ಣನವರಿಗೆ ಹಾಗೂ ಲಿಂಗಾಯತ ರಿಗೆ ಮಾಡುತ್ತಿರುವ ಅವಮಾನ ಆಗಿದೆ.
ಲಿಂಗಾಯತ ಮಠಾಧೀಶರು, ಲಿಂಗಾಯತ ರಾಜಕಾರಣಿಗಳು, ಲಿಂಗಾಯತ ಸಂಘ ಸಂಸ್ಥೆಗಳು ಒಕ್ಕಲಿಗ, ಕುರುಬ ಮಠಾಧೀಶರು, ಸಂಘಟನೆಗಳನ್ನು ನೋಡಿ ಪಾಠ ಕಲಿಯಬೇಕು, ಕರ್ನಾಟಕದಲ್ಲಿ ಇರೋದು ಎರಡೇ ಪ್ರಮುಖ ಒಕ್ಕಲಿಗ ಮಠಗಳು, ಆದರೆ ಒಕ್ಕಲಿಗ ಮಠಾಧೀಶರು, ಒಕ್ಕಲಿಗ ಸಂಘಟನೆಗಳು ಇಡೀ ಬೆಂಗಳೂರು ನಗರವನ್ನು ನಿಯಂತ್ರಣದಲ್ಲಿಟ್ಟು ಕೊಂಡಿದ್ದಾರೆ, ಇಲ್ಲಿವರೆಗೂ ಬೆಂಗಳೂರಿನ ಯಾವುದೇ ಕನ್ನಡ ಪರ ಸಂಘಟನೆಗಳು ಬೆಂಗಳೂರಿನ ಯಾವುದಾದರೂ ಒಂದು ಪ್ರಮುಖ ಮೆಟ್ರೋ ರೈಲು ನಿಲ್ದಾಣಕ್ಕೆ ಬಸವಣ್ಣನವರ ಹೆಸರು ಇಡಬೇಕು ಎಂದು ಹೇಳಿಲ್ಲ, ಇದಕ್ಕೆ ಮುಖ್ಯ ಕಾರಣ ಬಹುತೇಕ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರು ಒಕ್ಕಲಿಗರು, ಇದೆಲ್ಲಾ ಜಾತಿ ರಾಜಕೀಯ.
Veeresh, Bengaluru
Sep 20, 2023Thanks for sharing this valuable article 🙏🏽
Nagesh, Ramadurga
Sep 26, 2023ಸನಾತನದ ಶ್ರೇಷ್ಠತೆಯ ಅಮಲಿನಲ್ಲಿ ಸಿಲುಕಿದವರಿಗೆ ಬಸವಾದಿ ಶರಣರ ಬದುಕಿನ ಮೌಲ್ಯಗಳು ಅರ್ಥವಾಗುವುದು ಸಾಧ್ಯವೇ ಇಲ್ಲ ಎನ್ನುವುದನ್ನು ನಿಮ್ಮ ತುಲನಾತ್ಮಕ ವಿಶ್ಲೇಷಣೆ ಐತಿಹಾಸಿಕ ಪುರಾವೆಗಳನ್ನು ಒದಗಿಸಿಕೊಡುತ್ತದೆ.
Vani Ramesh
Sep 26, 2023ಲಿಂಗಾಯತ ಸಮುದಾಯಕ್ಕೆ ವಚನಾಧಾರಿತ ಐಡಿಯಾಲಜಿಯ ಸುಭದ್ರ ತಳಪಾಯವನ್ನು ಹಾಕಿದ ನಾಯಕ ಹಳಕಟ್ಟಿಯವರಿಗೆ ಲಿಂಗಾಯತ ಸಮಾಜ ಸದಾ ಚಿರಋಣಿಯಾಗಿರಬೇಕು. ಅವರ ಸೇವೆ ಅಸದಳ. ವಚನಗಳ ಮಹಿಮೆಯನ್ನು ಅವರು ಕಂಡುಕೊಳ್ಳದಿದ್ದರೆ ನಾವು ಏನಾಗಿರುತ್ತಿದ್ದೆವೋ?!