ಲಿಂಗಾಯತರು ಮತ್ತು ಬಸವತತ್ವ
ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ,
ಆಕಳ ಹಾಲನೆರೆದು, ಜೇನುತುಪ್ಪವ ಹೊಯ್ದಡೆ,
ಸಿಹಿಯಾಗಬಲ್ಲುದೆ, ಕಹಿಯಹುದಲ್ಲದೆ?
ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು,
ಕೂಡಲಸಂಗಮದೇವಾ.
ಬಸವತತ್ವ ಹೇಳುವುದು ಸುಲಭ. ಆಚರಣೆಯಲ್ಲಿ ತರುವುದು ಕಷ್ಟ. ಬಸವಣ್ಣನವರ ಪೂರ್ವದಲ್ಲಿ ಈ ಸಮಾಜ ಹೇಗಿತ್ತು ಎಂದು ಸಿಂಹಾವಲೋಕನ ಮಾಡುವುದಕ್ಕಿಂತ ಬಸವಣ್ಣನವರ ಹೆಸರು ಹೇಳುವ ವರ್ತಮಾನದ ಸಮಾಜ ಹೇಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಲಿಂಗವಂತ ಎಂದು ಹೇಳಿಕೊಳ್ಳುವ ಬಹುತೇಕ ಜನರ ಎದೆಯ ಮೇಲೆ ಇಷ್ಟಲಿಂಗವೇ ಇಲ್ಲ. ತತ್ವ ಹೇಳುವವರು ಸಹ ಪ್ರತಿನಿತ್ಯ ಹಣೆಯ ಮೇಲೆ ವಿಭೂತಿಯನ್ನೂ ಧರಿಸುತ್ತಿಲ್ಲ. ಲಿಂಗ ಧರಿಸಿದ್ದರೂ ಕೆಲವರು ನಿತ್ಯ ಲಿಂಗಪೂಜೆ ಮಾಡಿಕೊಳ್ಳುತ್ತಿಲ್ಲ. ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳನ್ನು ಅರಿತಿದ್ದರೂ ವ್ಯಕ್ತಿಗತ ಬದುಕಿನಲ್ಲಿ ಅಳವಡಿಸಿಕೊಂಡವರು ವಿರಳ. ಅಪ್ಪಟ ಲಿಂಗಾಯತರು ಎನ್ನುವವರೇ ವೈದಿಕ ಪರಂಪರೆಯಿಂದ ಹೊರಬಂದಿಲ್ಲ. ಈ ಬಗ್ಗೆ ಲಿಂಗಾಯತರು ಗಂಭೀರ ಚಿಂತನೆ ಮಾಡಬೇಕಾಗಿದೆ. ವ್ಯಕ್ತಿ ಬದಲಾದರೆ ಅವನ ವ್ಯಕ್ತಿತ್ವ ಅರಳುವುದು. ವ್ಯಕ್ತಿಯಲ್ಲಿ ಬದಲಾಗದೆ ವ್ಯಕ್ತಿತ್ವ ಅರಳಲು ಸಾಧ್ಯವಿಲ್ಲ. ವ್ಯಕ್ತಿ ಬದಲಾಗಬೇಕೆಂದರೆ ಲಿಂಗಾಯತ ಧರ್ಮದ ತತ್ವಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಅರ್ಥೈಸಿಕೊಂಡದ್ದನ್ನು ಆಚರಣೆಯಲ್ಲಿ ತರಬೇಕು. ಆಚರಣೆಯಲ್ಲಿ ತಂದದ್ದನ್ನು ಇತರರಿಗೂ ಹೇಳಿ ಅವರ ಮನಸ್ಸನ್ನೂ ಬದಲಾವಣೆ ಮಾಡಬೇಕು. ಆಗ ಮಾತ್ರ ಆತ ಬಸವಪರಂಪರೆಯಲ್ಲಿ ಮುಂದುವರಿಯಲು ಅರ್ಹನಾಗುವನು. ಇಲ್ಲವೆಂದರೆ ಲಿಂಗಾಯತರೇ ಬಸವಪರಂಪರೆಗೆ ಮಸಿಬಳಿಯುವ ಹೀನ ಕಾರ್ಯ ಮಾಡಿದಂತೆ. ಇವತ್ತು ಯಾರು ಯಾರಿಗೆ ವೈರಿಗಳು ಎಂದರೆ ಲಿಂಗಾಯತರು ಲಿಂಗಾಯತರಿಗೇ ವೈರಿಗಳು ಎನ್ನಬೇಕಾಗುತ್ತದೆ. ಕಾರಣ ಲಿಂಗಾಯತರೇ ಲಿಂಗಾಯತ ಧರ್ಮದ ತತ್ವ-ಸಿದ್ಧಾಂತಗಳನ್ನು ಅರ್ಥ ಮಾಡಿಕೊಳ್ಳದೆ ವೈದಿಕ ಪರಂಪರೆಯ ಆಚರಣೆಗಳನ್ನೇ ಮುಂದುವರಿಸುತ್ತಿರುವುದು. ಈ ನೆಲೆಯಲ್ಲಿ ಪ್ರತಿಯೊಬ್ಬ ಲಿಂಗಾಯತ ಮತ್ತು ಲಿಂಗಾಯತ ಮಠಾಧೀಶರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಇತ್ತೀಚಿನ ದಿನಮಾನಗಳಲ್ಲಿ ನಾವು ಅನೇಕ ಗೃಹಪ್ರವೇಶಕ್ಕೆ ಹೋದಾಗ ಅಲ್ಲಿ ಕಂಡಿರುವುದು ಬರೀ ವೈದಿಕ ಆಚರಣೆಗಳು. ಶುದ್ಧ ಲಿಂಗಾಯತರ ಮನೆಯಲ್ಲೇ ಹೋಮಾದಿ ಕ್ರಿಯೆಗಳು ಅತ್ಯಂತ ಸಂಭ್ರಮದಿಂದ ನಡೆಯುತ್ತಿರುತ್ತವೆ. ಅಲ್ಲೊಂದು ಬಸವಣ್ಣನವರ ಭಾವಚಿತ್ರ ಅಥವಾ ವಚನ ಪುಸ್ತಕಗಳು ಕಾಣುವುದಿಲ್ಲ. ಮನೆಯ ವಿನ್ಯಾಸ ತುಂಬಾ ಸುಂದರವಾಗಿರುತ್ತದೆ. ಮನೆಗೆ ಬಳಸಿರುವ ಬಣ್ಣ, ನೆಲಕ್ಕೆ ಹಾಕಿರುವ ಗ್ರಾನೈಟ್, ಷೋಕೇಸ್ ಮೊದಲಾದವುಗಳು ತುಂಬಾ ಬೆಲೆಯುಳ್ಳವು. ಹೋಮದ ಕಾರಣದಿಂದಾಗಿ ಮನೆಯೊಳಗೆ ಕುಳಿತುಕೊಳ್ಳಲಾಗುವುದಿಲ್ಲ. ಮನೆಯ ತುಂಬ ಹೊಗೆ ತುಂಬಿಕೊಂಡು ಉಸಿರಾಟವೇ ಕಷ್ಟವಾಗುವುದು. ಆಗ ನಾವು ತಮಾಷೆ ಮಾಡುವುದು ಬದುಕಿದ್ದಾಗಲೇ ಹೊಗೆ ಹಾಕಿಸಿಕೊಳ್ಳುವಿರಲ್ಲಾ ಎಂದು. ಹೊಗೆ ಹಾಕಿಸಿಕೊಳ್ಳುವುದು ಎಂದರೆ ಈ ಲೋಕವನ್ನು ಬಿಟ್ಟು ಹೋಗುವುದು. ಶರಣ ಪರಂಪರೆ ಹೊಗೆ ಹಾಕಿಸಿಕೊಳ್ಳುವುದಲ್ಲ. ಹೊಗೆಯನ್ನು ಹೊರಹಾಕಿ ಬದುಕನ್ನು ಅರಳಿಸುವುದು. ನಾವು 45 ವರ್ಷಗಳಿಂದ ಮೌಢ್ಯಗಳ ವಿರುದ್ಧ ಅರಿವು ಮೂಡಿಸುವ ಕಾಯಕ ಮಾಡುತ್ತ ಬಂದಿದ್ದರೂ ನಮ್ಮ ಪ್ರಯತ್ನ ಹೊಳೆಯಲ್ಲಿ ಹುಣಸೇಹಣ್ಣನ್ನು ಕದಡಿದಂತಾಗಿದೆ. ಮನುಷ್ಯ ಮಾನಸಿಕವಾಗಿ ಬದಲಾಗದಿದ್ದರೆ ಮನೆ, ಊರು, ನಾಡು ಬದಲಾಗಲು ಸಾಧ್ಯವಿಲ್ಲ. ಹಾಗಾಗಿಯೇ ಬಸವಣ್ಣನವರು ಲೋಕವನ್ನು ಪರಿವರ್ತನೆ ಮಾಡುವ ಮುನ್ನ ನಿಮ್ಮನ್ನು ನೀವು ಪರಿವರ್ತನೆ ಮಾಡಿಕೊಳ್ಳಿ ಎಂದು ತಮ್ಮ ವಚನಗಳ ಮೂಲಕ ಹೇಳಿದ್ದು. ವ್ಯಕ್ತಿ ಬದಲಾಗದೆ ದೇಶ ಬದಲಾಗುವುದಿಲ್ಲ. ಇಂಥ ವಿಚಾರಗಳ ಬಗ್ಗೆ ಪ್ರತಿಯೊಬ್ಬರೂ ಗಂಭೀರವಾಗಿ ಚಿಂತನೆ ಮಾಡಬೇಕಿದೆ. ಬಸವಣ್ಣ ಮತ್ತಿತರ ಶರಣರ ವಚನಗಳನ್ನು ಇಂದು ಹಲವರು ತುಂಬಾ ಸೊಗಸಾಗಿ ಹೇಳುತ್ತಾರೆ, ಹಾಡುತ್ತಾರೆ, ವಿಶ್ಲೇಷಣೆ ಮಾಡುತ್ತಾರೆ. ವಚನಗಳನ್ನು ಆಧರಿಸಿಯೇ ನೃತ್ಯ, ನಾಟಕ ನಡೆಯುತ್ತಿವೆ. ಆದರೆ ವಚನಗಳ ಆಶಯಕ್ಕನುಗುಣವಾಗಿ ವ್ಯಕ್ತಿಗತ ಬದುಕನ್ನು ಸುಧಾರಿಸಿಕೊಂಡವರು ತೀರಾ ವಿರಳ.
ನೂರನೋದಿ ನೂರ ಕೇಳಿ ಏನು?
ಆಸೆ ಬಿಡದು, ರೋಷ ಪರಿಯದು.
ಮಜ್ಜನಕ್ಕೆರೆದು ಫಲವೇನು?
ಮಾತಿನಂತೆ ಮನವಿಲ್ಲದ ಜಾತಿ [ಡಂ]ಬರ ನೋಡಿ
ನಗುವ ನಮ್ಮ ಕೂಡಲಸಂಗಮದೇವ.
ಒಬ್ಬ ವ್ಯಕ್ತಿ ಎಷ್ಟು ಅಧ್ಯಯನ ಮಾಡಿದ್ದಾನೆ, ಎಷ್ಟು ಸಂತರ ಪ್ರವಚನ ಕೇಳಿದ್ದಾನೆ ಎನ್ನುವುದು ಮುಖ್ಯವಲ್ಲ. ಅಧ್ಯಯನ ಮತ್ತು ಪ್ರವಚನದ ಪರಿಣಾಮ ಅವನ ವ್ಯಕ್ತಿಗತ ಬದುಕಿನ ಮೇಲೆ ಏನಾಗಿದೆ ಎನ್ನುವುದು ಗಮನಾರ್ಹ. ಆಸೆಯಿಂದ ಮುಕ್ತನಾಗಬೇಕು. ಸಿಟ್ಟು, ದ್ವೇಷ, ರೋಷಗಳನ್ನು ಕಳೆದುಕೊಳ್ಳಬೇಕು. ಯಾವಾಗಲೂ ಸಮಾಧಾನಚಿತ್ತದಿಂದಿರಬೇಕು. ಇದ್ದುದರಲ್ಲೇ ಸಂತೃಪ್ತಿ ಕಾಣುವ ಸ್ವಭಾವ ಬೆಳೆಸಿಕೊಳ್ಳಬೇಕು. ಹಾಗಾಗದೆ ದುರಾಸೆಯ ದಳ್ಳುರಿಯಲ್ಲಿ ಬೇಯುತ್ತಿದ್ದರೆ, ಸಿಟ್ಟಿನಿಂದ ದ್ವೇಷ ಕಾರುತ್ತಿದ್ದರೆ ಓದಿದ್ದು ಕೇಳಿದ್ದು ಅಷ್ಟೇ ಅಲ್ಲ; ಲಿಂಗ ಪೂಜೆ ಮಾಡಿದ್ದು ಸಹ ನಿರರ್ಥಕ. ಹಾಗಾಗಿ `ಮಾತಿನಂತೆ ಮನವಿಲ್ಲದ ಜಾತಿಡೊಂಬರ ನೋಡಿ ನಗುವ ನಮ್ಮ ಕೂಡಲಸಂಗಮದೇವ’ ಎಂದಿದ್ದಾರೆ ಬಸವಣ್ಣನವರು. ಮಾತು, ಮನಸ್ಸು ಒಂದಾಗಿರಬೇಕು. ಎಲ್ಲರನ್ನೂ ಪ್ರೀತಿಸುವ ಗುಣವಂತರಾಗಬೇಕು. ಅಧ್ಯಯನದ ಫಲವಾಗಿ ವೇದಿಕೆಯಲ್ಲಿ ಎಲ್ಲರೂ ತಲೆದೂಗುವಂತಹ ಮಾತುಗಳನ್ನು ಆಡಿ ಮನದಲ್ಲಿ ದ್ವೇಷ, ಅಸೂಯೆ, ಮತ್ಸರ ಇತ್ಯಾದಿ ದುರ್ಗುಣಗಳನ್ನು ತುಂಬಿಕೊಂಡಿದ್ದರೆ ಏನೂ ಪ್ರಯೋಜನವಾಗುವುದಿಲ್ಲ. ಇವತ್ತು ನಮ್ಮ ಸುತ್ತಮುತ್ತಲ ವಾತಾವರಣ ನೋಡುತ್ತಿದ್ದರೆ ಬಹತೇಕ ಜನ ಒಳಗೊಂದು ಮುಖ, ಹೊರಗೊಂದು ಮುಖ ತೋರಿಸುತ್ತಿದ್ದಾರೆ. ಮುಖವಾಡವಿಲ್ಲದ ಬದುಕೇ ಇಲ್ಲ ಎನ್ನುವಂತಹ ಪರಿಸ್ಥಿತಿ. ಅದನ್ನೇ ಆಂಗ್ಲ ಭಾಷೆಯಲ್ಲಿ `ವಿಯ್ ಹ್ಯಾವ್ ಬೆಸ್ಟ್ ಫೇಸ್ ಫಾರ್ ದಿ ಫೊಟೊಗ್ರಾಫರ್’ ಎನ್ನುವರು. ಒಬ್ಬ ಫೊಟೊ ತೆಗೆಯುವಾಗ ಹಸನ್ಮುಖಿಯಾಗಿ ಕಾಣಿಸಿಕೊಳ್ಳುವರು. ಅಂತರಂಗದಲ್ಲಿ ಅದೆಷ್ಟು ನರಿ, ನಾಯಿ, ಹಾವು, ಚೇಳು, ಹುಲಿ, ಕರಡಿ, ಸಿಂಹಗಳು ಅಡಗಿಕೊಂಡಿವೆಯೋ? ಬಾಹ್ಯ ಮುಖಕ್ಕಿಂತ ಆಂತರಿಕ ಮುಖ ಸುಂದರವಾಗಿರಬೇಕು. ಅದನ್ನೇ ಬಸವಣ್ಣನವರು `ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ’ ಎಂದದ್ದು.
ಅಂತರಂಗ, ಬಹಿರಂಗ ಶುದ್ಧಿಯಾಗದಿದ್ದರೆ ಭಗವಂತ ಒಲಿಯಲು ಸಾಧ್ಯವಿಲ್ಲ. ಆಡಂಬರದ ಪೂಜೆಗೆ ಬದಲು ಅಂತರಂಗದ ಪೂಜೆ ನಡೆಯಬೇಕು. ಆಗ ಅಂತರಂಗ ಶುದ್ಧಿಯಾಗುವುದು. ಮಾನವನೇ ದೇವನಾಗುವನು. ಇಂದು ಮಾನವರು ದೇವರಾಗುವ ಬದಲು ದೆವ್ವದ ಕೆಲಸ ಮಾಡುತ್ತ ಹೊರಗೆ ದೇವಾಲಯಗಳನ್ನು ಕಟ್ಟಿಸುತ್ತಲೇ ಇದ್ದಾರೆ. ಲಿಂಗಾಯತ ಗುರು-ಜಗದ್ಗುರುಗಳೇ ದೇವಾಲಯಗಳ ಕಳಸಾರೋಹಣ, ಉದ್ಘಾಟನೆ ಮತ್ತಿತರ ಕಾರ್ಯಗಳಿಗೆ ಹೋಗುವುದನ್ನು ನೋಡುತ್ತಿದ್ದೇವೆ. ಇದು ಲಿಂಗಾಯತ ಧರ್ಮಕ್ಕೆ ಸಲ್ಲುವ ಕಾರ್ಯವಲ್ಲ ಎಂದು ನಾವು ಕಠೋರವಾಗಿ ಮಾತನಾಡುವ ಮತ್ತು ಬರೆಯುವ ವಿಧಾನ ಕಂಡು ಅನೇಕ ಸ್ವಾಮಿಗಳೇ ನಮ್ಮನ್ನು ಹಿಂದೆ ಮುಂದೆ ಟೀಕೆ ಮಾಡುವರು. ನಾವೇ ಧಾರ್ಮಿಕ ಆಚರಣೆಗಳನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂದು ಲೇವಡಿ ಮಾಡುವರು. ಸರಿಯಾಗಿ ಅರ್ಥ ಮಾಡಿಕೊಂಡಿರುವುದರಿಂದಲೇ ವೈದಿಕ ಪರಂಪರೆಯ ಮೂಢಾಚರಣೆಗಳನ್ನು ಕಟುವಾಗಿ ಪ್ರತಿಭಟಿಸುತ್ತ ಬಂದಿದ್ದೇವೆ. ಶರಣರು ಅನುಭವ ಮಂಟಪದ ಮೂಲಕ ಸಮಾಜಕ್ಕೆ ಕೊಟ್ಟಿರುವ ವೈಚಾರಿಕ ಚಿಂತನೆಗಳನ್ನು ಜಾರಿಯಲ್ಲಿ ತರಬೇಕು ಎನ್ನುವ ಕಳಕಳಿ ನಮ್ಮದು. ಗುಡಿಯ ಯಾವ ದೇವರೂ ತನ್ನ ಭಕ್ತರಿಗೆ ವರ ಇಲ್ಲವೇ ಶಾಪ ಕೊಟ್ಟ ಉದಾಹರಣೆಗಳು ಎಲ್ಲಿಯೂ ಇಲ್ಲ. ಅವುಗಳಿಗೆ ವರ ಕೊಡುವ ಇಲ್ಲವೇ ಶಾಪ ಹಾಕುವ ವಿವೇಕ ಮತ್ತು ಶಕ್ತಿ ಎರಡೂ ಇಲ್ಲ. ಹಾಗಾಗಿ ಪ್ರಭುದೇವರು `ಕಲ್ಲ ಮನೆಯ ಮಾಡಿ, ಕಲ್ಲ ದೇವರ ಮಾಡಿ, ಆ ಕಲ್ಲು ಕಲ್ಲಮೇಲೆ ಕೆಡೆದರೆ ದೇವರೆತ್ತ ಹೋದರೋ’ ಎಂದು ಕೇಳುವರು. ದೇವಸ್ಥಾನ ಕಟ್ಟಲು ಕಲ್ಲುಗಳನ್ನು ಬಳಸುವರು. ಅದೇ ಕಲ್ಲಿನಿಂದ ಒಂದು ದೇವರ ವಿಗ್ರಹ ಕಟೆಸುವರು. ಅದನ್ನು ಕಲ್ಲಿನ ದೇವಾಲಯದ ಗರ್ಭಗುಡಿಯೊಳಗಿಟ್ಟು ಪೂಜೆ ಮಾಡುವರು. ಒಂದುವೇಳೆ ಗೋಡೆಯ ಕಲ್ಲು ದೇವರ ಕಲ್ಲಿನ ಮೇಲೆ ಬಿದ್ದರೆ ನಿಮ್ಮ ದೇವರು ಎತ್ತ ಹೋದರು ಎನ್ನುವ ಪ್ರಶ್ನೆಗೆ ಉತ್ತರ ಎಲ್ಲಿದೆ? ಅಷ್ಟಕ್ಕೇ ಪ್ರಭುದೇವರು ನಿಲ್ಲದೆ ತಮ್ಮ ಮತ್ತೊಂದು ವಚನದಲ್ಲಿ ಪ್ರಶ್ನಿಸುವುದನ್ನು ನೋಡಿ:
ನಾ ದೇವನಲ್ಲದೆ ನೀ ದೇವನೆ?
ನೀ ದೇವನಾದಡೆ ಎನ್ನನೇಕೆ ಸಲಹೆ?
ಆರೈದು, ಒಂದು ಕುಡಿತೆ ಉದಕವನೆರೆವೆ,
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ.
ನಾ ದೇವ ಕಾಣಾ ಗುಹೇಶ್ವರಾ!
ಪ್ರಭುದೇವರು ನಾನೇ ದೇವರು, ನೀನಲ್ಲ ಎಂದು ಬಾಹ್ಯ ಸ್ಥಾವರ ಗುಡಿಗಳಲ್ಲಿರುವ ದೇವರನ್ನು ಕುರಿತು ಹೇಳಿದ ಮಾತು ಇದಾಗಿರಬೇಕು. ಒಂದು ವೇಳೆ ನೀನು ದೇವರಾಗಿದ್ದರೆ ನನಗೆ ಬಾಯಾರಿಕೆ ಆದಾಗ ನೀರು ಕೊಡಬೇಕಿತ್ತು. ಹಸಿವಾದಾಗ ತುತ್ತು ಅನ್ನವನ್ನು ನೀಡಬೇಕಿತ್ತು. ಆದರೆ ಈ ಕೆಲಸವನ್ನು ಇದುವರೆಗೆ ಯಾವ ಸ್ಥಾವರ ದೇವರೂ ಮಾಡಿಲ್ಲ. ಬದಲಾಗಿ ಗುಡಿಯ ದೇವರಿಗೆ ಭಕ್ತರೇ ಅಭಿಷೇಕ ಮಾಡಿ ಎಡೆ ಹಿಡಿಯುವರು. ಆದುದರಿಂದ ನಾನೇ ದೇವರು ಎಂದು ಸ್ಪಷ್ಟಪಡಿಸಿದ್ದಾರೆ ಪ್ರಭುದೇವರು. ಇದೇ ವಿಚಾರವನ್ನು ಇನ್ನೂ ಸರಳವಾಗಿ ಬಸವಣ್ಣನವರು ಹೇಳಿದ್ದಾರೆ.
ಉಳ್ಳವರು ಶಿವಾಲಯ ಮಾಡಿಹರು,
ನಾನೇನ ಮಾಡುವೆ ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಲಶವಯ್ಯಾ.
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.
ಬಡವನಾದ ನಾನು ಶ್ರೀಮಂತರಂತೆ ದೇವಾಲಯ ಕಟ್ಟಿಸಲು ಸಾಧ್ಯವಿಲ್ಲ ಎನ್ನುವ ಬಸವಣ್ಣನವರೇನೂ ಬಡವರಾಗಿರಲಿಲ್ಲ. ಕಲ್ಯಾಣ ರಾಜ್ಯದ ಅರ್ಥಸಚಿವರಾಗಿದ್ದ ಅವರು ಮನಸ್ಸು ಮಾಡಿದ್ದರೆ ಶ್ರೀಮಂತರಿಗಿಂತ ಭವ್ಯ ದೇವಾಲಯಗಳನ್ನು ಕಟ್ಟಿಸಬಹುದಿತ್ತು. ಆದರೆ ದೇವಾಲಯಗಳನ್ನೇ ಕೇಂದ್ರವಾಗಿಸಿಕೊಂಡು ಪೂಜಾರಿ ಪುರೋಹಿತರು, ಪಟ್ಟಭದ್ರ ಹಿತಾಸಕ್ತರು ಭಕ್ತರ ಸುಲಿಗೆ ಮಾಡುತ್ತಿದ್ದುದನ್ನು ಅವರು ಗಮನಿಸಿದ್ದರು. ಹಾಗಾಗಿ ಶೋಷಣೆಗೆ ಕಾರಣವಾಗುವ ಸ್ಥಾವರ ದೇವಾಲಯಗಳನ್ನು ಒಪ್ಪಲಿಲ್ಲ. ಸ್ಥಾವರಕ್ಕೆ ನಾಶವುಂಟು. ಜಂಗಮಕ್ಕೆ ನಾಶವಿಲ್ಲ ಎಂದು ತಮ್ಮ ದೇಹವನ್ನೇ ದೇವಾಲಯ ಮಾಡಿಕೊಂಡು ಇತರರೂ ತಮ್ಮ ದೇಹವನ್ನು ದೇವಾಲಯ ಮಾಡಿಕೊಳ್ಳಬೇಕೆಂದವರು ಬಸವಣ್ಣನವರು. ಬಸವಣ್ಣನವರ ದೇವಾಲಯಕ್ಕೆ ಕಾಲುಗಳೇ ಕಂಬಗಳು. ತಲೆಯೇ ಬಂಗಾರದ ಕಲಶ. ಜೀವಾತ್ಮನೇ ಪರಮಾತ್ಮ. ಈ ಪರಿವರ್ತನೆ ಸಮಾಜದಲ್ಲಿ ಬಂದರೆ ಪ್ರತಿಯೊಬ್ಬರೂ ದೇವರೇ ಆಗುವರು. ಆಗ ಪರಸ್ಪರ ಜಗಳಕ್ಕೆ ಅವಕಾಶವೇ ಇರುವುದಿಲ್ಲ. ಆದರೆ ದೊಡ್ಡವರೆನ್ನುವವರು ತಾವು ಮಾತ್ರ ದೇವರು, ಉಳಿದವರೆಲ್ಲ ದೆವ್ವಗಳು ಎನ್ನುವಂತೆ ವರ್ತಿಸುವರು. ಇದರ ಪರಿಣಾಮವಾಗಿ ಜಾತಿ ಜಾತಿಗಳ ನಡುವೆ ವಿರಸ ವಿದ್ವೇಷಗಳು ಹೆಚ್ಚುತ್ತಿವೆ. ಮನುಷ್ಯ ಮನುಷ್ಯರ ನಡುವೆ ಸಂಶಯದ ಗೋಡೆಗಳು ಏಳುತ್ತಿವೆ. ನನ್ನ ದೇವರು ದೊಡ್ಡದು, ನನ್ನ ಧರ್ಮ ಶ್ರೇಷ್ಠ ಎನ್ನುವ ಅಹಂ ಅತಿಯಾಗಿ ಮನುಕುಲ ವಿನಾಶದ ಅಂಚಿನತ್ತ ಸಾಗುವಂತಾಗಿದೆ. ಇಂಥ ಭಾವನೆಗಳನ್ನು ತೊಡೆದುಹಾಕಿದ ಬಸವಾದಿ ಶರಣರು, ಜಾತಿಯನ್ನು ಅಳಿಸಿ ನೀತಿಯನ್ನು ಜಾರಿಯಲ್ಲಿ ತಂದರು. ಮಾನವ ಕುಲ ಒಂದು ಎಂದರು. ಮೌಢ್ಯಗಳನ್ನು ನಿರಾಕರಿಸಿದರು. ವೈಚಾರಿಕ, ನೈತಿಕ ತಳಹದಿಯ ಮೇಲೆ ಬದುಕನ್ನು ಕಟ್ಟಿಕೊಳ್ಳುವ ವಿಚಾರಗಳನ್ನು ತಿಳಿಸಿಕೊಟ್ಟರು.
ಶರಣರು ಬೇಡ ಎಂದದ್ದೇ ಇಂದು ಜನರಿಗೆ ಬೇಕಾಗಿದೆ. ವೈದಿಕ ಪರಂಪರೆಯ ಆಚರಣೆಗಳನ್ನು ಶರಣರು ನಿರಾಕರಿಸಿದರೆ ಈಗಿನವರು ಅವುಗಳನ್ನೇ ಪ್ರೀತಿಯಿಂದ ಅಪ್ಪಿಕೊಳ್ಳುತ್ತಿದ್ದಾರೆ. ಇವತ್ತು ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದ್ದರೂ ನೈತಿಕ ಮಟ್ಟ ಕುಸಿದಿದೆ, ಕುಸಿಯುತ್ತಲೇ ಇದೆ. ಆರ್ಥಿಕ ಮಟ್ಟ ಕುಸಿದರೆ ಮತ್ತೆ ಎತ್ತರಿಸಿಕೊಳ್ಳಬಹುದು. ನೈತಿಕ ಮಟ್ಟ ಕುಸಿದರೆ ಅದನ್ನು ಎತ್ತರಿಸಿಕೊಳ್ಳುವುದು ತುಂಬಾ ಕಷ್ಟಸಾಧ್ಯ. ಅದನ್ನೇ ನಮ್ಮ ಹಿರಿಯರು `ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂದು ಎಚ್ಚರಿಸಿದ್ದಾರೆ. ನೈತಿಕ ಮಟ್ಟ ಕುಸಿಯದಂತೆ ಎಚ್ಚರದಿಂದ ಇರಬೇಕಾಗಿದೆ. ವಿಚಿತ್ರವೆಂದರೆ ಆರ್ಥಿಕ ಉನ್ನತಿಯೇ ಉನ್ನತಿ ಎನ್ನುವ ಭಾವನೆ ಜನರಲ್ಲಿದೆ ಹೊರತು ನೈತಿಕ ಮಟ್ಟ ಕುಸಿಯದಂತೆ ಎಚ್ಚರದಿಂದಿರಬೇಕು ಎನ್ನುವ ಅರಿವು ಮೂಡುತ್ತಿಲ್ಲ. ಈಗ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಸಂಜೆ ಆಗುತ್ತಲೇ ಬಹುತೇಕ ಲಿಂಗಾಯತ ಯುವಕರು, ಹಿರಿಯರು ಎಲ್ಲಿರುತ್ತಾರೆ, ಏನು ಮಾಡುತ್ತಾರೆ ಎಂದು ಬಿಚ್ಚಿ ಹೇಳುವ ಅಗತ್ಯವಿಲ್ಲ. ಈ ಬಗ್ಗೆ ಲಿಂಗಾಯತರು ಯೋಚನೆ ಮಾಡಿ ತಮ್ಮ ದುಶ್ಚಟ ದುರಭ್ಯಾಸಗಳಿಂದ ಹೊರಬರಬೇಕು. ನಮ್ಮ ಹಿರಿಯರು ಹೇಗೆ ಬಾಳುತ್ತಿದ್ದರು ಎನ್ನುವುದನ್ನು ತಿಳಿದಾದರೂ ಅವರಂತೆ ಬಾಳುವುದನ್ನು ರೂಢಿಸಿಕೊಳ್ಳಬೇಕು. 50 ವರ್ಷಗಳ ಹಿಂದೆ ಬಹುತೇಕ ಲಿಂಗಾಯತರು ಬೆಳಗ್ಗೆ ಎದ್ದತಕ್ಷಣ ಸ್ನಾನ ಶಿವಪೂಜೆ ಇಲ್ಲದೆ ಬಾಯಲ್ಲಿ ಒಂದು ತೊಟ್ಟು ನೀರನ್ನು ಸಹ ಹಾಕಿಕೊಳ್ಳುತ್ತಿರಲಿಲ್ಲ. ಅವರ ಆಚಾರ, ವಿಚಾರಗಳು ಅಷ್ಟೊಂದು ಶುದ್ಧವಾಗಿದ್ದವು. ಇವತ್ತು ಅಂಥ ಮನೆಯ ಬಹುತೇಕ ಯುವಪೀಳಿಗೆ ಏನಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಮ್ಮ ಹಿರಿಯರು, ಕಿರಿಯರು ಮತ್ತು ಮಕ್ಕಳು ಹೆಣ್ಣು-ಗಂಡು ಎನ್ನದೆ ಇಷ್ಟಲಿಂಗದೀಕ್ಷೆ ಪಡೆದು ನಿತ್ಯ ಪೂಜೆ ಮಾಡಿಕೊಳ್ಳುವಂತಾಗಬೇಕು. ಮನೆ ಮತ್ತು ಮಠಗಳಲ್ಲಿ ಈ ಪರಂಪರೆಯನ್ನು ಬೆಳೆಸಬೇಕಾಗಿದೆ. ಮನೆ, ಮಠಗಳು ಧಾರ್ಮಿಕವಾಗಿ ಬದಲಾವಣೆ ಆಗದಿದ್ದರೆ ನಮ್ಮ ಜನರು, ನಮ್ಮ ಊರು ಬದಲಾವಣೆ ಆಗಲು ಸಾಧ್ಯವಿಲ್ಲ.
ಇವತ್ತು ಮನೆ ಮಠಗಳನ್ನು ದೊಡ್ಡದಾಗಿ ಕಟ್ಟುವುದಷ್ಟೇ ಮುಖ್ಯವಲ್ಲ. ಮನಸ್ಸುಗಳನ್ನು ಕಟ್ಟುವ, ಮನಸ್ಸಿಗೆ ಸಂಸ್ಕಾರ ಕೊಡುವ ಪವಿತ್ರವಾದ ಕೆಲಸವಾಗಬೇಕಿದೆ. ಅನುಭವ ಮಂಟಪದ ಮೂಲಕ ಶರಣರು 12ನೆಯ ಶತಮಾನದಲ್ಲಿ ಮನಸ್ಸುಗಳನ್ನು ಕಟ್ಟುವ ಕಾರ್ಯವನ್ನು ಬಹು ವ್ಯವಸ್ಥಿತವಾಗಿ ಮಾಡಿದರು. ಅಲ್ಲಿ ಜಾತಿಭೇದವಿಲ್ಲದೆ ಜಾತ್ಯತೀತವಾಗಿ ಎಲ್ಲರನ್ನೂ ತಮ್ಮವರು ಎಂದು ಅಪ್ಪಿಕೊಳ್ಳುತ್ತಿದ್ದರು. ಸೂಳೆ ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮ, ಕಸ ಗುಡಿಸುವ ಸತ್ಯಕ್ಕ, ಕಾಳವ್ವೆ, ಲಿಂಗಮ್ಮ, ಮಡಿವಾಳ ಮಾಚಯ್ಯ, ನುಲಿಯ ಚಂದಯ್ಯ, ಹಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ ಹೀಗೆ ಅತ್ಯಂತ ತಳವರ್ಗದವರನ್ನು ಬಸವಾದಿ ಶರಣರು ಅನುಭವ ಮಂಟಪಕ್ಕೆ ಬರಮಾಡಿಕೊಳ್ಳುತ್ತಿದ್ದರು. ನಂತರ ಅವರ ಬದುಕಿನ ವಿಧಾನವೇ ಬದಲಾಯ್ತು. ಅವರು ಶುದ್ಧ ಕಾಯಕಜೀವಿಗಳಾಗಿ ತಮ್ಮ ತಮ್ಮ ಕಾಯಕವನ್ನೇ ಮುಂದುವರಿಸಿ ಶರಣರಾದರು. ಕೆಲವರು ಸೂಳೆತನವೂ ಒಂದು ಕಾಯಕ ಎನ್ನುವುದುಂಟು. ವೃತ್ತಿ ಬೇರೆ, ಕಾಯಕ ಬೇರೆ. ಸೂಳೆತನ ಒಂದು ವೃತ್ತಿ; ಅದು ಕಾಯಕವಲ್ಲ ಎಂದು ಅವರಿಗೆ ತಿಳಿಸಿ ಹೊಸ ಬದುಕಿಗೆ ಅಣಿಗೊಳಿಸಿದರು. ಅವರಿಗೂ ವಿವಾಹ ಮಾಡಿಸಿ ಆದರ್ಶ ದಾಂಪತ್ಯ ಜೀವನ ನಡೆಸುವ ವ್ಯವಸ್ಥೆ ಮಾಡಿದರು. ಸೂಳೆತನ ತಿಳಿಯದೇ ಮಾಡಿದ ವೃತ್ತಿ. ಅನುಭವ ಮಂಟಪ ಅರಿವನ್ನು ಮೂಡಿಸಿದ್ದರಿಂದ ತಮ್ಮ ವೃತ್ತಿ ಕಾಯಕವಲ್ಲ ಎನ್ನುವ ವಿವೇಕ ಅವರಲ್ಲಿ ಉದಯವಾಗಿ ತಮ್ಮ ವೃತ್ತಿಯಿಂದ ಹೊರಬಂದು ಶರಣೆಯರಾದರು. ಇಂಥ ಬದಲಾವಣೆಯನ್ನು ಇಂದು ತರುವ ಅಗತ್ಯವಿದೆ. ಈ ನೆಲೆಯಲ್ಲಿ ಮಠಾಧೀಶರು ನೈಜ ಲಿಂಗಾಯತ ತತ್ವಗಳನ್ನು ಹೇಳುವ, ಆಚರಣೆಯಲ್ಲಿ ತರುವ ಕಾಯಕವನ್ನು ನಿಷ್ಠೆಯಿಂದ ಮಾಡಬೇಕಿದೆ. ಕೆಲವು ಮಠಾಧೀಶರು ಈ ಕಾಯಕ ಮಾಡುತ್ತಿದ್ದರೂ ಹಲವು ಮಠಾಧೀಶರು ವೈದಿಕ ಪರಂಪರೆಯನ್ನೇ ಪೋಷಿಸುತ್ತಿರುವುದು ವಿಷಾದನೀಯ. ಹಾಗಾಗಿ ಪರಿವರ್ತನೆ ಕತ್ತಲ ಕೋಣೆಯಲ್ಲಿ ಇಲ್ಲದ ಕರಿಯ ಬೆಕ್ಕನ್ನು ಹುಡುಕಿದಂತೆ ಆಗುತ್ತಿದೆ.
ಆರಂಭದ ವಚನವನ್ನು ಮತ್ತೊಮ್ಮೆ ಗಮನಿಸಬೇಕು. ಬೇವಿನ ಬೀಜ ಬಿತ್ತಿ, ಅದಕ್ಕೆ ಬೆಲ್ಲದ ಕಟ್ಟೆಯನ್ನು ಕಟ್ಟಿ, ಆಕಳ ಹಾಲನ್ನು ಸುರಿದು, ಜೇನುತುಪ್ಪ ಹಾಕಿದರೆ ಆ ಬೇವಿನ ಮರ ಮಾವಿನ ಹಣ್ಣನ್ನು ಬಿಡುವುದಿಲ್ಲ. ಅದು ತನ್ನ ಸಂಸ್ಕಾರಕ್ಕೆ ತಕ್ಕಂತೆ ಕಹಿಯಾದ ಬೇವಿನ ಹಣ್ಣುಗಳನ್ನೇ ಕೊಡುವುದು. ಈ ಉದಾಹರಣೆಯ ಮೂಲಕ ಬಸವಣ್ಣನವರು ಹೇಳಬಯಸಿರುವುದು ಕೆಲವರು ಬೇವಿನ ಬೀಜದ ಗುಣಧರ್ಮದವರಿರುತ್ತಾರೆ. ಅಂಥವರನ್ನು ಪರಿವರ್ತನೆ ಮಾಡುತ್ತೇವೆ ಎನ್ನುವುದು ಕೆಲವೊಮ್ಮೆ ಭ್ರಮೆಯಾಗುವುದು. ಹಾಗಾಗಿ ಭಕ್ತರಲ್ಲದವರ ಜೊತೆಗೆ ಮಾತನ್ನು ಸಹ ಆಡಬಾರದು ಎನ್ನುವರು. ಏಕೆಂದರೆ ಅವರು ಜನರನ್ನು ಭಕ್ತ, ಭವಿ ಎಂದು ವರ್ಗೀಕರಣ ಮಾಡುವರು. ಭಕ್ತ ಎಂದರೆ ಸದಾಚಾರದಲ್ಲಿ ನಡೆಯುವವ. ಭವಿ ಎಂದರೆ ದುರಾಚಾರಿ, ದುರ್ಮಾರ್ಗಿ. ಭಕ್ತರಲ್ಲದವರು ಎಂದರೆ ಭವಿಗಳೆಂದೇ ಅರ್ಥ. ಹಾಗಾಗಿ ಅಂಥ ಭವಿಗಳ ಜೊತೆ ನುಡಿಯುವುದು ಸಹ ಅಪಾಯಕಾರಿ ಎನ್ನುವರು. ಅಂಥವರಿಂದ ದೂರವಿದ್ದರೆ ವ್ಯಕ್ತಿತ್ವ ಅರಳಲು ಸಾಧ್ಯ. ಇಲ್ಲವಾದರೆ ವ್ಯಕ್ತಿ ವಿನಾಶದ ಮಾರ್ಗ ಹಿಡಿಯಬಹುದು. ಈ ನೆಲೆಯಲ್ಲಿ ಲಿಂಗವಂತರು ಇನ್ನಾದರೂ ಜಾಗೃತರಾಗಿ ತಮ್ಮತನವನ್ನು ಅರಿತು ಬಸವ ಮಾರ್ಗದಲ್ಲಿ ನಡೆಯುವ ಸಂಕಲ್ಪ ಮಾಡಬೇಕಿದೆ.
ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ
ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ.
ಲಿಂಗವಂತನು ಲಿಂಗವಂತನಿಗೆ ಬುದ್ಧಿಯ ಹೇಳುವಲ್ಲಿ
ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ.
ಲಿಂಗಭಕ್ತನು ಲಿಂಗಪಥವ ಹೇಳಿದಡೆ
ಮಚ್ಚರಿಸುವರ ಮೆಚ್ಚ ಕೂಡಲಸಂಗಮದೇವ.
ಅಂಗದ ಮೇಲೆ ಲಿಂಗವ ಧರಿಸಿ
ಲಿಂಗವಂತರೆನಿಸಿಕೊಂಬ ಮಹಾಲಿಂಗವಂತರು ನೀವು ಕೇಳಿರೊ.
ಮನೆಗೊಂದು ದೈವ, ನಿಮಗೊಂದು ದೈವ,
ನಿಮ್ಮಂಗನೆ ಅನ್ಯದೈವಕ್ಕೆಂದು ನಿಯಾಮಿಸಿ ಮಾಡಿದ ಪಾಕವ,
ನಿಮ್ಮ ಇಷ್ಟಲಿಂಗಕ್ಕೆ ಕೊಟ್ಟು ಭುಂಜಿಸುತ್ತಿರ್ದು,
ಮತ್ತೆ ಮರಳಿ ಲಿಂಗವಂತರೆನಿಸಿಕೊಂಬ ಲಿಂಗದ್ರೋಹಿಗಳಿಗೆ
ಕುಂಭೀಪಾತಕ, ನಾಯಕ ನರಕ ತಪ್ಪದೆಂದ ಕಲಿದೇವಯ್ಯ.
Comments 7
ಜಗದೀಶ ಸೋಗಲಿ
May 13, 2023ಬಯಲು ಬ್ಲಾಗಿನಲ್ಲಿ ನಿಮ್ಮ ಲೇಖನಗಳನ್ನು ತಪ್ಪದೇ ಓದುತ್ತೇನೆ, ನಿಮ್ಮ ವಿಚಾರಗಳಲ್ಲಿರುವ ಕಳಕಳಿ, ಸ್ಪಷ್ಟತೆ ನನಗೆ ಬಹಳ ಆಪ್ಯಾಯವೆನಿಸುತ್ತದೆ. ಧನ್ಯವಾದ ಗುರುಗಳಿಗೆ.
ಪ್ರಭಾಕರ ಜವಳಿ
May 16, 2023ಲಿಂಗಾಯತರಿಗೂ ಬಸವ ಧರ್ಮಕ್ಕೂ ಸಂಬಂಧವೇ ಇಲ್ಲವೆಂದು ಎಂಥವರಿಗೂ ಅನುಮಾನಗಳೇಳುತ್ತವೆ… ಎಲ್ಲಿಯ ಶರಣರು, ಎಲ್ಲಿಯ ಇಂದಿನ ಜಾತಿ ಭ್ರಮಿತರು!!
Guru
May 18, 2023ಬುದ್ದಿ ಶರಣು ಶರಣಾರ್ಥಿಗಳು.
ನಿಮ್ಮ ಲೇಖನಗಳು ಅಧ್ಬುತ, ಲೌಕಿಕ ಜೀವಿಗಳಿಗೆ ಶರಣರ ವಿಚಾರ ಸ್ವಲ್ಪ ಕಷ್ಟವೇ ಸರಿ… ಅಂದು ಇದ್ದ ಶರಣರು, ಮಠಾಧೀಶರು, ಸ್ವಾಮಿಗಳು ಶುದ್ದ ಕಾಯಕಜೀವಿಗಳಾಗಿದ್ದರು ಅವರನ್ನು ಕಂಡು ಲೌಕಿಕರು ಪರಿವರ್ತನೆಗೊಳ್ಳುತ್ತಿದ್ದರು ಆದರೆ ಇಂದಿನ ಮಾರ್ಗದರ್ಶಿಗಳಾದ ಸ್ವಾಮೀಜಿಗಳು ಮುಂದಿನ ದಿನಮಾನಗಳನ್ನು(Future) ನೆನೆದು ವಿಸ್ತಾರವಾದ ಮಠ, ಬಂಗಲೆ,ಕಾಂಪ್ಲೆಕ್ಸ, ಕಮರ್ಸಿಯಲ್ ಇನ್ವೆಸ್ಟಮೆಂಟ, ಲಗ್ಸುರಿ ಕಾರ, ವೈಭವೋಪೇರಿತ ಜೀವನ ನಡೆಸುತ್ತಿರುವುದರೊಂದಿಗೆ ಆದ್ಯಾತ್ಕಿಕಶೃಂಗಗಳು ರಾಜಕೀಯ ಕೇಂದ್ರಗಳಾಗಿ ಮಾರ್ಪಡಿಸಿ ಶರಣತತ್ವದಿಂದಾಚೆಗೆ ಬಂದಂತಾಗಿದೆ ಅಂದರೆ
ಒಬ್ಬ MBA ಮಾಡಿ ಒಂದು ಕಂಪನಿಯ MDಗೂ ನಮ್ಮ ಮಾರ್ಗದರ್ಶಿಗಳಾದ ಸ್ವಾಮೀಜಿಗಳಿಗೂ ಅಂತಹ ವ್ಯತ್ಯಾಸ ಕಾಣುತ್ತಿಲ್ಲವೆಂದಮೇಲೆ ಲೌಕಿಕರಾದ ನಾವು ಅದೇಗೆ ಬದಲಾಗಲು ಸಾಧ್ಯ ಬುದ್ದಿ.
ಶರಣರ ವಿಚಾರಗಳು ಲಿಂಗಪೂಜೆ ಮಾಡುವುದಲ್ಲವೆನಿಸುತ್ತದೆ ಲಿಂಗದೊಂದಿಗೆ ಪೂಜಿ zero ಶೂನ್ಯಸಂಪಾದಿಸುವುದು,
ಐಕ್ಯಸ್ಥಲದಲ್ಲಿರುವ ಶರಣರ ಚಿಂತನೆಗೂ ಭಕ್ತಸ್ಥಲವನ್ನೂ ಪೂರ್ಣಗೊಳಿಸದ ಲೌಕಿಕರಿಗೂ (ನಮಗೂ) ತುಂಬಾ ವ್ಯತ್ಯಾಸವಿದೆ, ವೃತ್ತಿಯಲ್ಲಿರುವ ನಾವು ಕಾಯಕಯೋಗಿಗಳಾಗಿ ಪರಿವರ್ತನೆಯಾದಾಗ ಮಾತ್ರ ಕಲ್ಯಾಣದ ಇಂಗಿತ ಸಿದ್ದಿಸಲು ಸಾಧ್ಯ… ಇಲ್ಲವಾದರೆ ನಮ್ಮ ವಿಚಾರಗಳು ಬರೀ ಪುಸ್ತಕ, ಸೋಸಿಯಲ್ ಮೀಡಿಯಾ ಮತ್ತು ಸಭೆಗಳಿಗೆ ಸೀಮಿತವಾಗುತ್ತದೆ, ಆಚರಣೆಗಿಂತಲೂ ಡಂಬಾಚಾರ ಹೆಚ್ಚಾಗಿ ಧರ್ಮದ ತಳಹದಿಗೆ ಪೆಟ್ಟುಬೀಳಬಹುದೆನ್ನುವುದು ನನ್ನ ಅನಿಸಿಕೆ…
ಬುದ್ದಿ ದಯವಿಟ್ಟು ಅಪಾರ್ಥಮಾಡಿಕೊಳ್ಳಬೇಡಿ ನಾನು ಕಂಡ ನನ್ನ ಧರ್ಮದ ಇತ್ತೀಚಿನನಡೆಗಿಂತಲೂ ಜೈನ ಮುನಿಗಳ ಆಚಾರ ವಿಚಾರಗಳು ನಮ್ಮ ಶರಣರ ತತ್ವಕ್ಕೆ ಹತ್ತಿರವೆನಿಸುತ್ತಿದೆ ಹಾಗೆಯೇ ನನ್ನದು ಆಕರ್ಷಿಸುತ್ತಿದೆ ಬುದ್ದಿ.
ತಾವು ವೈಚಾರಿಕ ಮತ್ತು ಸತ್ಯಕ್ಕೆ ಹತ್ತಿರದ ಸ್ವಾಮೀಜಿಗಳಾಗಿದ್ದರಿಂದ ನನ್ನಮನದಿಂಗಿತ ವ್ಯಕ್ತಪಡಿಸಿದ್ದೇನೆ…
ಎಲ್ಲಾದರೂ ತಮ್ಮಮನಸ್ಸಿಗೆ ನೋವುಂಟಗುವಂತಿದ್ದರೆ ನನ್ನನ್ನು ಕ್ಷಮಿಸಿಬುದ್ದಿ.
Mahesh D
May 29, 2023ಅಂತರಂಗ ಬಹಿರಂಗ ಶುದ್ಧಿ ಇವತ್ತು ಯಾರಿಗೂ ಬೇಕಾಗಿಲ್ಲ. ತೋರಿಕೆಯ ಆಚರಣೆಗಳಿಗೆ ಜೋತು ಬಿದ್ದ ಜನರಿಗೆ ಬಸವಾದಿ ಶರಣರ ಅವಶ್ಯಕತೆಯೇ ಕಾಣುತ್ತಿಲ್ಲ…
Jayadevappa Halakki
May 29, 2023ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ
ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ.
ಲಿಂಗವಂತನು ಲಿಂಗವಂತನಿಗೆ ಬುದ್ಧಿಯ ಹೇಳುವಲ್ಲಿ
ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ… ದಾರಿ ತಪ್ಪಿದ ಸಮಾಜಕ್ಕೆ ಬುದ್ಧಿ ಹೇಳುವುದು ಅಗತ್ಯವಾಗಿ ಆಗಲೇಬೇಕಾದ ಕಾರ್ಯ. ತಮ್ಮಿಂದ ಕಿವಿಹಿಂಡುವ ಇಂತಹ ಲೇಖನಗಳು ಬರಲಿ.
ಗವಿಸಿದ್ದಪ್ಪ ಚಾವಳಿ
May 30, 2023ಶರಣರು ನಡೆದ ದಿವ್ಯ ಹಾದಿಯನ್ನು ತೋರುತ್ತಿರುವ ಪೂಜ್ಯರಿಗೆ ಅನಂತ ಶರಣು
ಶೋಭಾದೇವಿ ಅಮರಶೆಟ್ಟಿ, ಭಾಲ್ಕಿ
Jun 6, 2023ನಿಜ, ಬಸವತತ್ವ, ಹೇಳುವುದು ಸುಲಭ ಆಚರಣೆಯಲ್ಲಿ ತರುವುದು ಕಷ್ಟ, ಎಲ್ಲೆಡೆಯೂ ಬಸವ ತತ್ವ ಹೇಳುವವರೆ ಆಚರಣೆ ಶೂನ್ಯ, ಲೇಖನ ತುಂಬ ಚೆನ್ನಾಗಿ ಬರೆದಿದ್ದಾರೆ ಸ್ವಾಮೀಜಿಯವರು👍👍🙏🏻🙏🏻