
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
ಮನುಷ್ಯ ಯಾವಾಗಲೂ ನೆಮ್ಮದಿ, ಸುಖ, ಶಾಂತಿಯಿಂದ ಬಾಳಬೇಕೆಂದು ಬಯಸುತ್ತಾನೆ. ಸಾಕಷ್ಟು ವೇತನ ಬರುವ ಉದ್ಯೋಗ, ದೊಡ್ಡ ಮನೆ, ಓಡಾಡಲು ವಾಹನ, ರಾಜಕೀಯ ಸ್ಥಾನ-ಮಾನ, ಪ್ರಚಾರ, ಪ್ರಸಿದ್ಧಿ ಇದ್ದರೆ ಸುಖವೆಂದು ಭ್ರಮಿಸಿ ಅದಕ್ಕಾಗಿ ಏನೇನೋ ಮಾಡುತ್ತಿರುತ್ತಾನೆ. ನಿರಂತರ ಹೋರಾಟ ನಡೆಸುತ್ತಿರುತ್ತಾನೆ. ಆಗ ಅವನಿಗೆ ಸುಖ, ಶಾಂತಿ, ನೆಮ್ಮದಿ ಸಿಕ್ಕಂತೆ ಭಾಸವಾಗಿ ಮತ್ತೆ ದುಃಖದ ಮಡುವಿನಲ್ಲಿ ಮುಳುಗೇಳುವನು. ವಾಸ್ತವವಾಗಿ ಸುಖ ಬಾಹ್ಯ ವಸ್ತುಗಳಲ್ಲಿ ಮಾತ್ರ ಇಲ್ಲ; ಅದಿರುವುದು ನಮ್ಮ ಬದುಕಿನ ವಿಧಾನ ಮತ್ತು ತೆರೆದ ಮನದಲ್ಲಿ. ಸಿರಿಗೆರೆಯ ಶ್ರೀಮಠದಲ್ಲಿ ಎಸ್ ಆರ್ ಮಲ್ಲಪ್ಪ ಎನ್ನುವ ಸ್ವಾತಂತ್ರ್ಯ ಹೋರಾಟಗಾರರಿದ್ದರು. ಅವರು ಯಾವಾಗಲೂ ನಮಗೆ ಹೇಳುತ್ತಿದ್ದುದು: “ವಾರದಲ್ಲಿ ಒಂದು ದಿನ ನಿಮಗೆ ಬೇಕಾದ ಆತ್ಮೀಯರ ಜೊತೆ ಗಂಭೀರ ಚಿಂತನೆಗಿಂತ ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತ ಕಾಲ ಕಳೆಯಿರಿ. ಆಗ ನೀವು ಬಯಸಿದ ನೆಮ್ಮದಿ, ಸುಖ, ಶಾಂತಿ ತನ್ನಷ್ಟಕ್ಕೆ ತಾನೇ ದೊರೆಯುವುದು.” ಅವರು ಮುಂದುವರಿದು ಹೇಳುತ್ತಿದ್ದುದು- ಯಾರಿಗೂ ಕೇಡು ಬಯಸಬೇಡಿರಿ. ಯಾರ ಹೊಗಳಿಕೆ, ತೆಗಳಿಕೆಗೆ ಕಿವಿಕೊಡಬೇಡಿ. ಅಹಂಕಾರ ಬಿಟ್ಟು ವಿನಯ, ವಿವೇಕದಿಂದ ನಡೆದುಕೊಳ್ಳಿರಿ. ಪೂರ್ವಗ್ರಹಪೀಡಿತರಾಗಬೇಡಿ. ಸತ್ಯವನ್ನು ಸುಳ್ಳಾಗಿಸುವ ಸಾಹಸ ಮಾಡದೆ ಸತ್ಯನಿಷ್ಠರಾಗಿರಿ. ಆ ಹಿರಿಯರ ಮಾತುಗಳು ಯಾವಾಗಲೂ ನಮ್ಮ ಕಿವಿಯಲ್ಲಿ ಗುನುಗುಡುತ್ತಿರುತ್ತವೆ. ಮನುಷ್ಯ ಏನೇನೋ ಮಾಡಬೇಕೆಂದು ಹೊರಟು ಏನನ್ನೂ ಮಾಡದ ಸ್ಥಿತಿ ತಂದುಕೊಳ್ಳುವನು. ಈ ಕುರಿತೇ ಹೇಳಿದಂತಿದೆ ಪ್ರಭುದೇವರ ಒಂದು ವಚನ:
ಕಳ್ಳಗಂಜಿ ಕಾಡ ಹೊಕ್ಕಡೆ ಹುಲಿ ತಿಂಬುದ ಮಾಬುದೆ?
ಹುಲಿಗಂಜಿ ಹುತ್ತವ ಹೊಕ್ಕಡೆ ಸರ್ಪ ತಿಂಬುದ ಮಾಬುದೆ?
ಕಾಲಗಂಜಿ ಭಕ್ತನಾದಡೆ ಕರ್ಮ ತಿಂಬುದ ಮಾಬುದೆ?
ಇಂತೀ ಮೃತ್ಯುವಿನ ಬಾಯ ತುತ್ತಾದ,
ವೇಷಡಂಬಕರ ನಾನೇನೆಂಬೆ ಗುಹೇಶ್ವರಾ.
ಭಕ್ತರ ಬದುಕಿನ ವಿಧಾನ ಕುರಿತು ಹೇಳಿದಂತಿರುವ ಪ್ರಭುದೇವರು ವೇಷಾಡಂಬರ ಬೇಡ ಎನ್ನುವರು. ನೈಜ ಭಕ್ತಿಗಿಂತ ಭಕ್ತರಂತೆ ನಟಿಸುವವರ ಪರಿಯನ್ನು ಕೆಲವು ನಿದರ್ಶನಗಳ ಮೂಲಕ ವಿವರಿಸಿದ್ದಾರೆ. ಊರಲ್ಲಿದ್ದರೆ ಕಳ್ಳಕಾಕರ ಭಯ ಎಂದು ಕಾಡನ್ನು ಸೇರಿದರೆ ಅಲ್ಲೇನು ಸುಖವಾಗಿರಲು ಸಾಧ್ಯವೇ? ಅಲ್ಲಿ ಹುಲಿ ಮತ್ತಿತರ ಕಾಡುಪ್ರಾಣಿಗಳ ಕಾಟ ಇದ್ದದ್ದೇ. ಇದೇನಪ್ಪ ಇಲ್ಲಿ ಕಾಡುಪ್ರಾಣಿಗಳ ಕಾಟ ಎಂದು ಅವುಗಳಿಗೆ ಹೆದರಿ ಹುತ್ತವನ್ನು ಸೇರಿದರೆ ನಮ್ಮ ತಲೆಯ ಮೇಲೆ ನಾವೇ ಚಪ್ಪಡಿ ಎಳೆದುಕೊಂಡಂತೆ. ಕಾರಣ ಅಲ್ಲಿ ಹಾವು ಕಚ್ಚದೆ ಸುಮ್ಮನಿರಲು ಸಾಧ್ಯವಿಲ್ಲ. ಹೀಗೆ ಮನುಷ್ಯ ಸಾವಿಗಂಜಿ ಭಕ್ತನ ವೇಷ ಧರಿಸಿದರೆ ಆತ ಮಾಡಿದ ಪಾಪಕಾರ್ಯಗಳೇ ಆತನನ್ನು ತಿಂದುಹಾಕಿ ನಾಶ ಮಾಡುವವು. ಹೀಗೆ ಮನುಷ್ಯ ಒಂದಿಲ್ಲೊಂದು ರೀತಿ ಸಾವಿನ ಮನೆಯ ಬಾಗಿಲು ತಟ್ಟುತ್ತಿರುತ್ತಾನೆ. ಹಾಗಾಗಿ ಬದುಕಿಗಾಗಿ ಭಕ್ತನಾಗುವ ವೇಷ ಸಲ್ಲದು. ಅಂಥವರನ್ನು ಶಿವ ಮೆಚ್ಚುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಮನುಷ್ಯ ಎಲ್ಲ ರೀತಿಯ ಭಯದಿಂದ ಮುಕ್ತನಾಗಿ ಸತ್ಯದ ದಾರಿಯಲ್ಲಿ ನಡೆಯುವ ಮನಸ್ಸು ಮಾಡಿದರೆ ಆ ಭಯ ಅವನನ್ನು ಏನೂ ಮಾಡಲು ಸಾಧ್ಯವಿಲ್ಲ. ಹಾಗೆಂದು ಸತ್ಯದ ದಾರಿಯಲ್ಲಿ ನಡೆಯುವುದು ಅಂದುಕೊಂಡಷ್ಟು ಸುಲಭವಿಲ್ಲ. ಅದಕ್ಕೆ ಬಹುಮುಖ್ಯವಾಗಿ ಸರಳತೆಯನ್ನು ಮೈಗೂಡಿಸಿಕೊಂಡು ಅಹಂಕಾರ ನಿರಸನ ಮಾಡಿಕೊಳ್ಳಬೇಕಾಗುತ್ತಿದೆ. ಇಂದಿನ ದಿನಮಾನಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದರೆ ಪ್ರತಿಯೊಬ್ಬರಲ್ಲೂ ಅಹಂಕಾರ ಒಂದಿಲ್ಲೊಂದು ರೀತಿ ಹೆಡೆಯಾಡುತ್ತಿರುತ್ತದೆ. ಶರಣರು ಈ ಅಹಂಕಾರದ ಬಗ್ಗೆ ತುಂಬಾ ಮಾತನಾಡಿದ್ದಾರೆ. ವ್ಯಕ್ತಿಯಲ್ಲಿ ನಾನಾ ಕಾರಣಗಳಿಗಾಗಿ ಅಹಂಕಾರ ಅವನಿಗರಿವಿಲ್ಲದೆ ಆವರಿಸುವ ಸಾಧ್ಯತೆಗಳೂ ಇವೆ.
ನಾನೆಂಬ ಅಹಂಕಾರ ತಲೆದೋರಿದಲ್ಲಿ
ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು.
ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು.
ಜ್ಞಾನಜ್ಯೋತಿ ಕೆಡಲೊಡನೆ,
ನಾ ಬಲ್ಲೆ, ಬಲ್ಲಿದರೆಂಬ ಅರುಹಿರಿಯರೆಲ್ಲರು
ತಾಮಸಕ್ಕೊಳಗಾಗಿ ಸೀಮೆದಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ.
ಮಾನವನಲ್ಲಿ ನಾನು, ನಾನು ಎನ್ನುವ ಅಹಂ ಬಂದರೆ ಆತನೊಳಗೆ ಎಂತೆಂಥ ಬಿರುಗಾಳಿ ಬೀಸುವುದೆಂದು ಹೇಳಲಾಗದು. ಪ್ರಭುದೇವರು ಹೇಳುವಂತೆ ಅಲ್ಲಿ ಕುಟಿಲತೆ ಕಾಣಿಸಿಕೊಳ್ಳುವುದು. ಕುಹಕ ಬುದ್ಧಿ ಬೆಳೆಯುವುದು. ಅದೇ ಬಿರುಗಾಳಿಯಾಗಿ ಅವನೊಳಗೆ ಇರುವ ಜ್ಞಾನಜ್ಯೋತಿಯನ್ನೇ ಆರಿಸಿಬಿಡುವುದು. ಜ್ಞಾನಜ್ಯೋತಿ ಆರಿದರೆ ಎಂಥವರೂ ಅಜ್ಞಾನದ ಕೈಗೆ ಸಿಕ್ಕಿ ದಿಕ್ಕುತಪ್ಪಿ ದಿಂಡುರುಳುವರು. ನೋಡಿ ಎಲ್ಲ ಅನಾಹುತಗಳಿಗೆ ಕಾರಣವಾಗುವುದೇ ಅಹಂಕಾರ. ಅದನ್ನೇ ಮದ ಎಂದು ಕರೆಯುವರು. ಎಂಟು ರೀತಿಯ ಮದಗಳು ವ್ಯಕ್ತಿಯನ್ನು ಆವರಿಸುವುದುಂಟು. ಕುಲಮದ, ಛಲಮದ, ರೂಪಮದ, ತಾರುಣ್ಯಮದ, ಧನಮದ, ವಿದ್ಯಾಮದ, ರಾಜ್ಯಮದ, ತಪಸ್ಸಿನ ಮದ. ಈ ಮದಗಳು ಇನ್ನಿಲ್ಲದಂತೆ ಕಾಡುವ ಅನಿಷ್ಠಗಳು. ಈ ಅನಿಷ್ಠಗಳು ಯಾರ್ಯಾರಿಗೆ ಹೇಗೆ ಕಾಡಿವೆ ಎನ್ನುವ ಪಟ್ಟಿಯನ್ನೇ ಕೊಡುತ್ತಾರೆ ಸಿದ್ಧರಾಮೇಶ್ವರರು.
ಮದಗಳು ಮಾಯೆಯಾಗಿ ಮನುಷ್ಯನಿಗೆ ಮುತ್ತುವವು. ಕುಲಮದ ಮಯೂರನೃಪನಿಗೆ ಚಂಡಾಲಗಿತ್ತಿಯಾಗಿ ಕೆಡಿಸಿತ್ತು. ಛಲಮದ ವೀರವಿಕ್ರಮಗೆ ಮಾಂಸ ತಿನ್ನುವಂತೆ ಮಾಡಿತ್ತು. ಧನಮದ ಹರಿಶ್ಚಂದ್ರನಿಗೆ ದರಿದ್ರವಾಗಿ ಕಾಡಿತ್ತು. ರೂಪಮದ ನಳನಿಗೆ ಕುರೂಪ ಮಾಡಿತ್ತು. ತಾರುಣ್ಯಮದ ಭೀಮನಿಗೆ ಹಿಡಂಬಿಯಾಗಿ ಕಾಡಿತ್ತು. ವಿದ್ಯಾಮದ ಕವಿ ವಾದಿಶೇಖರನಿಗೆ ಅಜ್ಞಾನವಾಗಿ ಕಾಡಿತ್ತು. ರಾಜ್ಯ ಮದ ಮುಮ್ಮಡಿ ಸಿಂಗನೃಪನನ್ನು ರಾಕ್ಷಸನನ್ನಾಗಿ ಮಾಡಿತ್ತು. ತಪೋಮದ ವಿಶ್ವಾಮಿತ್ರನಿಗೆ ಹಲವು ರೀತಿಕಾಡಿತ್ತು. ಇಂಥ ಮದಗಳು ಅಷ್ಟಾವರಣದ ದಾರಿಯಲ್ಲಿ ನಡೆಯುವವರಿಗೆ ಏನೂ ಮಾಡಲಾರವು. ಸಿದ್ಧರಾಮೇಶ್ವರರು ಮದವನ್ನು ಮಾಯೆ ಎನ್ನುವರು. ಮಾಯೆ ಎಂದರೆ ಮರುಳು ಮಾಡಿ ದಿಕ್ಕುತಪ್ಪಿಸುವವಳು. ಇಂಥ ಮಾಯೆಗೆ ತುತ್ತಾಗಿ ಎಂತೆಂಥವರೋ ದಾರಿ ಬಿಟ್ಟಿದ್ದಾರೆ. ಈ ಮದಗಳ ವಿನಾಶಕ್ಕಾಗಿ ಅಷ್ಟಾವರಣಗಳ ಅನುಷ್ಠಾನ ಮಾಡಬೇಕೆನ್ನುವರು. `ಅರಸನ ಭಕ್ತಿ ಅಹಂಕಾರದಲ್ಲಿ ಹೋಯಿತ್ತು’ ಎನ್ನುವುದು ಮಡಿವಾಳ ಮಾಚಯ್ಯನವರ ಅಭಿಪ್ರಾಯ. ಸ್ವಯಜ್ಞಾನಿಯ ಸ್ಥಿತಿಯನ್ನು ಜಕ್ಕಣಯ್ಯನವರು ಹೇಗೆ ವಿವರಿಸಿದ್ದಾರೆ ನೋಡಿ:
ನಿಂದಕರು ನಿಂದಿಸಿದರೆ ಸ್ವಯಜ್ಞಾನಿ ಅಂಜುವನೇನಯ್ಯ?
ಆ ನಿಂದಕನ ಅಂತರಂಗದಲ್ಲಿ ಅಹಂಕಾರನೆಂಬ ಕೋಣ ಹುಟ್ಟಿ
ಜ್ಞಾನಿಗಳೆಂದರಿಯದೆ ಬಾಯಿಗೆ ಬಂದಂತೆ ನುಡಿವ ತರಕಿಮೂಳರ
ಎನಗೊಮ್ಮೆ ತೋರದಿರಯ್ಯ ಝೇಂಕಾರ ನಿಜಲಿಂಗಪ್ರಭುವೆ
ಜಕ್ಕಣಯ್ಯ ಅಹಂಕಾರವನ್ನು ಕೋಣಕ್ಕೆ ಹೋಲಿಸಿದ್ದಾರೆ. ಅಹಂಕಾರ ಇದ್ದಲ್ಲಿ ಅಜ್ಞಾನ ಸಹಜ. ಹಾಗಾಗಿ ಆತ ಕಂಡಕಂಡವರನ್ನು ಬಾಯಿಗೆ ಬಂದಂತೆ ನಿಂದಿಸುವನು. ಗ್ರಾಮೀಣರು ಅಹಂಕಾರಕ್ಕೆ ಉದಾಸೀನವೇ ಮದ್ದು ಎನ್ನುವರು. ಕೆಲವೊಮ್ಮೆ ಉದಾಸೀನ ಮಾಡಿದಾಗ ನನಗೆ ಹೆದರಿಕೊಂಡರೆಂದು ಭಾವಿಸಿ ಆ ಅಹಂಕಾರಿ ಇನ್ನಷ್ಟು ದರ್ಪ ದೌರ್ಜನ್ಯಗಳನ್ನು ತೋರಿಸಬಹುದು. ಅಂಥ ಸಂದರ್ಭದಲ್ಲಿ ಜ್ಞಾನಿಗಳು ಹೆದರದೆ ಅವನ ಅಹಂಕಾರವೆಂಬ ಕೋಣದ ಕೋಡುಗಳನ್ನು ಮುರಿಯುವ ಎದೆಗಾರಿಕೆ ತೋರಿಸ ಬೇಕಾಗುತ್ತದೆ. ಊರಲ್ಲಿ ಮಾರಿಜಾತ್ರೆ ಮಾಡುವಾಗ ಕೋಣವನ್ನು ಕಡಿಯುವರು. ವಾಸ್ತವವಾಗಿ ಅಲ್ಲಿ ಕಡಿಯಬೇಕಾದ್ದು ಆ ಅಮಾಯಕ ಪ್ರಾಣಿಯನ್ನಲ್ಲ. ಮನುಷ್ಯನ ಮನದಲ್ಲಿ ಮನೆಮಾಡಿರುವ ಅಹಂಕಾರವೆಂಬ ಕೋಣವನ್ನು ದಮನ ಮಾಡಬೇಕು. ಆಗಲೇ ಆತ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ. ಈ ಅಹಂಕಾರ ಮೊದಲು ಅಪಾಯ ಮಾಡುವುದು ಅಹಂಕಾರಿಯನ್ನೇ. ಅದು ಕಾರಣವೇ ಅಮುಗೆ ರಾಯಮ್ಮ `ಎನ್ನ ಅಂಗದಲ್ಲಿದ್ದ ಅಹಂಕಾರ ಸುಡುವವರಾರನೂ ಕಾಣೆ’ ಎನ್ನುತ್ತಲೇ `ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೆ ಸುಡಬೇಕು’ ಎಂದಿದ್ದಾರೆ. ಹೌದು; ಮನುಷ್ಯ ತನ್ನಲ್ಲಿರುವ ಅಹಂಕಾರ ಎನ್ನುವ ಬೆಂಕಿಯನ್ನು ತಾನೇ ಆರಿಸಬೇಕು. ಇಲ್ಲವಾದರೆ ಅದು ಅವನನ್ನೇ ಸುಟ್ಟು ಬೂದಿ ಮಾಡುವುದರಲ್ಲಿ ಅನುಮಾನವಿಲ್ಲ. ಅಹಂಕಾರ ಅಳಿದಾಗ ಆ ಮನುಷ್ಯ ನಿಜಕ್ಕೂ ದೊಡ್ಡ ವ್ಯಕ್ತಿಯಾಗುವನು. ಅದನ್ನೇ ಪ್ರಭುದೇವರು `ಅಹಂಕಾರವಳಿದಂತಹ ಮಹಾತ್ಮರ ಬಾಯ ತಂಬುಲವ ಮೆಲುವೆ, ಬೀಳುಡಿಗೆಯ ಹೊದೆವೆ, ಅವರ ಪಾದರಕ್ಷೆಗಳೆರಡನೂ ಮಂಡೆಯ ಮೇಲೆ ಹೊತ್ತುಕೊಂಡು ಬದುಕುವೆನಯ್ಯಾ’ ಎಂದಿದ್ದಾರೆ.
ಅಹಂಕಾರವೆಂಬ ಮದ ಸರ್ವಾಂಗ ವ್ಯಾಪಿಸಿ ತಲೆಗೇರಿದಲ್ಲಿ ಆತ ಸತ್ಯವರಿಯಲು ಅಸಮರ್ಥನಾಗುವನು. ಬುದ್ಧಿಗೇಡಿಯಾಗುವನು. ಆನಂದ ಅನುಭವಿಸಲಾರನು ಎಂದು ಹೆಂಡದ ಮಾರಯ್ಯನವರು ತಿಳಿಸಿದ್ದಾರೆ. ಹೆಂಡದ ಮದಕ್ಕಿಂತ ಅಪಾಯಕಾರಿ ಅಹಂಕಾರ ಮದ. ಸಿದ್ಧರಾಮೇಶ್ವರ ಮತ್ತು ಪ್ರಭುದೇವರ ನಡುವೆ ನಡೆದ ವಾದ, ವಿವಾದದ ಸಂದರ್ಭದಲ್ಲಿ ಪ್ರಭುದೇವರ ಮಾತುಗಳಿಂದ ಕೋಪಗೊಂಡ ಸಿದ್ಧರಾಮೇಶ್ವರರು ತಮ್ಮ ಹಣೆಗಣ್ಣಿಂದ ಪ್ರಭುದೇವರನ್ನು ಸುಟ್ಟುಬಿಡುವೆ ಎನ್ನುವ ಅಹಂಕಾರ ಮೆರೆಯುವರು. ಅದು ಸಾಧ್ಯವಾಗದಿದ್ದಾಗ `ಅರಿಯಲಾರದ ಘನವನರಿದು ಸಾಧಿಸಿ ಗೆದ್ದ ಘನಮಹಿಮ ಶರಣರ ಮುಂದೆ ಎನ್ನ ಪ್ರತಾಪ ನಿಲುಕುವುದೆ? ಅವರಿಪ್ಪರು ಲಿಂಗಪ್ರಭೆಯೊಳಗೆ; ನಾನಿಪ್ಪೆನು ಅಹಂಕಾರ ಪಂಜರದೊಳಗೆ. ಎನ್ನ ನೊಸಲ ಕಣ್ಣ ಕಿಚ್ಚಡಗಿ ಲಜ್ಜಿತವಾಗಿ ಮರಳಿ ಬಂದೆನ್ನ ಸುತ್ತಿ ಮುತ್ತಿತ್ತು’ ಎಂದು ಪ್ರಭುದೇವರಿಗೆ ಶರಣಾಗುವರು. ಅವರು ಹೇಳುವಂತೆ ಅಹಂಕಾರ ಒಂದು ಪಂಜರ ಇದ್ದಂತೆ. ಆ ಪಂಜರದೊಳಗೆ ಸಿಲುಕಿದರೆ ಕೇಡಾಗುವುದು ಪಂಜರದೊಳಗೆ ಇದ್ದವರಿಗೆ. ಬಸವಣ್ಣನವರ ಸಾತ್ವಿಕ ಅಹಂಕಾರವನ್ನು ಪ್ರಭುದೇವರು ಹೇಗೆ ಅಡಗಿಸಿದರು ಎನ್ನುವುದಕ್ಕೆ ಬಸವಣ್ಣನವರ ಒಂದು ವಚನವೇ ಸಾಕ್ಷಿ ನುಡಿಯುವಂತಿದೆ.
ಕೈಯಲ್ಲಿ ಮುಟ್ಟಿದ ಪದಾರ್ಥ ಕೈಯೊಳಗೆ ಐಕ್ಯ,
ಕಂಗಳು ತಾಗಿದ ಪದಾರ್ಥ ಕಂಗಳೊಳೈಕ್ಯ,
ನಾಲಗೆ ತಾಗಿದ ಪದಾರ್ಥ ನಾಲಗೆಯೊಳಗೈಕ್ಯ,
ನೀಡುವ ಪರಿಚಾರಕರು ಬೇಸತ್ತರಲ್ಲದೆ
ಆರೋಗಣೆಯ ಮಾಡಿಸಿಹೆನೆಂಬ ಅಹಂಕಾರದಲ್ಲಿ ಇದ್ದೆನಾಗಿ,
ನಾನು ಕೆಟ್ಟ ಕೇಡನೇನೆಂಬೆನಯ್ಯಾ?
ಕೂಡಲಸಂಗಮದೇವರ ತೃಪ್ತಿಯ ತೆರನ ಬಲ್ಲಡೆ ಹೇಳಾ ಮಡಿವಾಳ ಮಾಚಯ್ಯ.
ಮಹಾಮನೆಯ ದಾಸೋಹಕ್ಕೆ ಬಂದವರಿಗೆ ತೃಪ್ತಿಯಾಗುವಂತೆ ದಾಸೋಹ ವ್ಯವಸ್ಥೆ ಮಾಡಿಸುವವರು ತಾವು ಎನ್ನುವ ಸಾತ್ವಿಕ ಅಹಂಕಾರ ಬಸವಣ್ಣನವರ ಮನದಲ್ಲಿ ಮನೆ ಮಾಡಿತ್ತಂತೆ. ಈ ಅಹಂಕಾರವನ್ನು ಇಳಿಸಲು ಪ್ರಭು ಮಹಾಮನೆಗೆ ಬಂದು ಹಸಿವೆ, ಹಸಿವೆ ಎಂದು ಪ್ರಸಾದಕ್ಕೆ ಕೂರುವರು. ಮಹಾಮನೆಯಲ್ಲಿ ಅದೆಷ್ಟೋ ಜನರಿಗೆ ಮಾಡಿದ ಪ್ರಸಾದ ಪ್ರಭುದೇವರ ಹಸಿವು ಹಿಂಗಿಸಲು ಆಗುವುದಿಲ್ಲ. ಅದನ್ನೇ ಬಸವಣ್ಣನವರು ಕೈಯಿಂದ ಮುಟ್ಟಿದ ಪದಾರ್ಥ ಅಲ್ಲೇ ಐಕ್ಯ. ಕಂಗಳು ತಾಗಿದ ಪದಾರ್ಥ ಕಂಗಳೊಳಗೇ ಐಕ್ಯ. ನಾಲಗೆ ತಾಗಿದ ಪದಾರ್ಥ ನಾಲಗೆಯೊಳಗೇ ಐಕ್ಯವಾಗಿ ಪ್ರಸಾದ ಎಡೆ ಮಾಡುವ ಪರಿಚಾರಕರೇ ಬೇಸತ್ತರಂತೆ ಎನ್ನುವರು. ಅಷ್ಟಾದರೂ ನಾನು ಎಚ್ಚರಗೊಳ್ಳದೆ ಆರೋಗಣೆ ಮಾಡಿಸುವವ ನಾನೆಂಬ ಅಹಂಕಾರದಲ್ಲಿ ಬೀಗುತ್ತಿದ್ದೆ. ಅದರಿಂದ ನಾನು ಕೆಟ್ಟ ಕೇಡನ್ನು ಏನೆಂದು ಹೇಳಲಿ? ಈ ಪ್ರಭುದೇವರ ಹಸಿವನ್ನು ಹಿಂಗಿಸುವ ಪರಿ ನೀನೇ ಹೇಳು ಎಂದು ಮಡಿವಾಳ ಮಾಚಯ್ಯನವರನ್ನು ಕೇಳಿದಂತಿದೆ. ಇಲ್ಲಿ ಪ್ರಭುದೇವರು ಅಷ್ಟೊಂದು ಊಟ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆಗಿಂತ ಬಸವಣ್ಣನವರಲ್ಲಿದ್ದ ಅಹಂಕಾರ ಹೇಗೆ ನಿರಸನವಾಯಿತು ಎನ್ನುವುದು ಮುಖ್ಯ. ಅದಕ್ಕಾಗಿಯೇ ಅವರು `ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ, ಏಡಿಸಿ ಕಾಡಿತ್ತು ಶಿವನ ಡಂಗುರ. ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ, ಮಾಡಿದೆನೆಂಬುದು ಮನದಲ್ಲಿಲ್ಲದಿದ್ದಡೆ, ಬೇಡಿತ್ತನೀವ ಕೂಡಲಸಂಗಮದೇವ’ ಎಂದಿದ್ದಾರೆ. ಪ್ರಭುದೇವರು `ನಾನೆಂಬ ಅಹಂಕಾರದಲ್ಲಿ ನಾನುಂಡೆನಾದಡೆ, ಎನಗದೆ ಭಂಗ’ ಎಂದು ಎಚ್ಚರಿಸಿದ್ದಾರೆ. ಅಹಂಕಾರ ಕುರಿತಂತೆ ದಾಸಿಮಯ್ಯನವರು ಏನು ಹೇಳಿದ್ದಾರೆಂದು ನೋಡೋಣ:
ಭಕ್ತನ ಮಠವೆಂದು ಭಕ್ತಹೋದಡೆ
ಆ ಭಕ್ತ ಭಕ್ತಂಗೆ ಅಡಿಯಿಟ್ಟು ಇದಿರೆದ್ದುನಡೆದು
ಹೊಡೆಗೆಡೆದು ಒಡಗೊಂಡು ಬಂದು
ವಿಭೂತಿ ವೀಳ್ಯವನಿಕ್ಕಿ ಪಾದಾರ್ಚನೆಯಂ ಮಾಡಿಸಿ
ಒಕ್ಕುದ ಕೊಂಡು ಓಲಾಡುತ್ತಿಪ್ಪುದೆ ಭಕ್ತಿ.
ಹೀಂಗಲ್ಲದೆ ಬೆಬ್ಬನೆ ಬಿರಿತು, ಬಿಬ್ಬನೆ ಬೀಗಿ
ಅಹಂಕಾರಭರಿತನಾಗಿಪ್ಪವನ ಮನೆಯ
ಲಿಂಗಸನುಮತರು ಹೊಗರು ಕಾಣಾ! ರಾಮನಾಥ.
ಭಕ್ತನ ನಡಾವಳಿಕೆ ಹೇಗಿರಬೇಕೆಂಬ ಸೂಚನೆ ಇಲ್ಲಿದೆ. ಒಬ್ಬ ಭಕ್ತ ಮತ್ತೊಬ್ಬ ಭಕ್ತನ ಮನೆಗೆ ಹೋದಾಗ ಆತ ಗೌರವದಿಂದ ಸ್ವಾಗತಿಸಿ ಕೈಕಾಲಿಗೆ ನೀರು ಕೊಟ್ಟು ಒಳಗೆ ಬರಮಾಡಿಕೊಳ್ಳಬೇಕು. ಅವರ ಪಾದಪೂಜೆ ಮಾಡಿ ಪ್ರಸಾದದ ವ್ಯವಸ್ಥೆ ಮಾಡಿಸಬೇಕು. ಹೀಗೆ ಮಾಡದೆ ಅಹಂಕಾರದಿಂದ ಬೀಗಿದರೆ ಅಂಥವರ ಮನೆಗೆ ಶರಣರು ಮುಂದೆಂದೂ ಹೋಗರು ಎನ್ನುವ ಮೂಲಕ ಭಕ್ತ ಯಾವಾಗಲೂ `ಕೂಡಲಸಂಗನ ಶರಣರ ಬರವೆನಗೆ ಪ್ರಾಣ ಜೀವಾಳವಯ್ಯಾ’ ಎನ್ನುವ ಅರ್ಥದಲ್ಲಿ ಅವರನ್ನು ಸ್ವಾಗತಿಸಿ ಸತ್ಕರಿಸಬೇಕೆನ್ನುವ ಸಂದೇಶ ನೀಡಿದ್ದಾರೆ. ಅಹಂಕಾರದಿಂದ ವರ್ತಿಸುವವರ ಬಳಿ ಯಾರು ತಾನೆ ಹೋಗುವರು? ಮಾತನಾಡಿಸುವರು? ಅಹಂಕಾರದಿಂದ ಬೀಗುವವರು ಅನುಭಾವಿಗಳಾಗಲು ಸಾಧ್ಯವಿಲ್ಲ ಎನ್ನುತ್ತಾರೆ ಅಮುಗೆ ರಾಯಮ್ಮ. ಅಹಂಕಾರಿಗಳ ಬಗ್ಗೆ ಅಂಬಿಗರ ಚೌಡಯ್ಯ ಎಷ್ಟು ಕಟುವಾಗಿ ನುಡಿಯುವರು ನೋಡಿ: ಅಹಂಕಾರದಲ್ಲಿ ತರಿಸಿಕೊಂಡುಂಬ ಗೊಡ್ಡಮೂಳನ ಕಂಡಡೆ ಒದ್ದೊದ್ದು ಕೊಲ್ಲೆಂದಾತ ನಮ್ಮ ಅಂಬಿಗರ ಚೌಡಯ್ಯ. ಚೆನ್ನಬಸವಣ್ಣ, `ಅಕಟಕಟಾ ದೇವದಾನವ ಮಾನವರೆಲ್ಲ ಅಹಂ ಎಂದು ಅಹಂಕಾರದಿ ಕೆಟ್ಟರಲ್ಲ’ ಎನ್ನುವರು. ಪ್ರಭುದೇವರು `ಅಕ್ಷರವ ಬಲ್ಲೆನೆಂದು ಅಹಂಕಾರವೆಡೆಗೊಂಡು, ಲೆಕ್ಕಗೊಳ್ಳರಯ್ಯಾ’ ಎಂದು ಅಕ್ಷರ ಬಲ್ಲವರನ್ನು ಛೇಡಿಸಿದ್ದಾರೆ. ಹಾವಿನಹಾಳ ಕಲ್ಲಯ್ಯನವರು `ಅಹಂಕಾರವಳಿದು, ಶರಣರ ಅನುಭಾವವ ಕೇಳಿದಡೆ, ಅದೇ ಮುಕ್ತಿ ನೋಡಿರೆ’ ಎಂದು ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ನಾ ತಿಳಿದೆ, ನಾ ತಿಳಿದೆ ಎನ್ನುವುದೇ ಅಹಂಕಾರ ಎಂದು ಸಿದ್ಧರಾಮೇಶ್ವರರು ಹೇಳಿದ್ದಾರೆ. `ತನ್ನ ತಾನರಿದೆಹೆನೆಂಬ ಅಹಂಕಾರವುಳ್ಳಡೆ ನಿಮ್ಮವರಿಗೆ ದೂರ’ ಎಂದಿದ್ದಾರೆ ಬಸವಣ್ಣನವರು.
ಅಹಂಕಾರ ಮನವನಿಂಬುಗೊಂಡಲ್ಲಿ ಲಿಂಗ ತಾನೆಲ್ಲಿಪ್ಪುದೊ
ಅಹಂಕಾರಕ್ಕೆ ಎಡೆಗೊಡದೆ ಲಿಂಗತನುವಾಗಿರಬೇಕು.
ಅಹಂಕಾರರಹಿತವಾದಲ್ಲಿ ಸನ್ನಿಹಿತ ಕಾಣಾ
ಕೂಡಲಸಂಗಮದೇವಾ.
ಅಹಂಕಾರವಿದ್ದಲ್ಲಿ ಲಿಂಗ ಇರದು. ತನು ಅಹಂಕಾರದಿಂದ ಕೂಡಿರದೆ ಅದು ಲಿಂಗತನುವಾಗಬೇಕು. ಆಗ ಶಿವ ಸನ್ನಿಹಿತನಾಗುವನೆಂಬ ಬಸವಣ್ಣನವರ ಮಾತುಗಳನ್ನು ಅಹಂಕಾರದಿಂದ ಮದೋನ್ಮತ್ತರಾದವರು ಕ್ಷಣ ಕ್ಷಣಕ್ಕೂ ನೆನಪಿಸಿಕೊಳ್ಳುವುದು ಉತ್ತಮ. ಅಹಂಕಾರ ಹುಟ್ಟುವುದೇ ವ್ಯಕ್ತಿಯ ನಡೆ, ನುಡಿಗಳಿಂದ. ಬಸವಣ್ಣ ವಿನಯದ ಸಾಕಾರ ಮೂರ್ತಿ. ಅವರೆಂದೂ ಅಹಂಕಾರಕ್ಕೆ ತುತ್ತಾದವರಲ್ಲ. ಅವರು ತಮ್ಮ ಅಹಂಕಾರ ನಿರಸನಕ್ಕಾಗಿಯೇ ಮತ್ತೆ ಮತ್ತೆ ದೇವರಲ್ಲಿ ಪ್ರಾರ್ಥಿಸುವುದು `ಎನ್ನ ತಪ್ಪು ಅನಂತ ಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ’, `ಭಕ್ತಿಯಿಲ್ಲದ ಬಡವ ನಾನಯ್ಯಾ’, `ಅಯ್ಯಾ ನಿಮ್ಮ ಶರಣರ ಪಾದಕ್ಕೆ ಚಮ್ಮಾವುಗೆಯ ಮಾಡಯ್ಯಾ’, `ಎನ್ನಿಂದ ಕಿರಿಯರಿಲ್ಲ, ಶಿವಭಕ್ತರಿಂದ ಹಿರಿಯರಿಲ್ಲ’, `ಮಾವಿನಕಾಯೊಳಗೆ ಎಕ್ಕೆಯ ಕಾಯಿ ನಾನಯ್ಯಾ’ `ಉತ್ತಮಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯಾ’, `ಶರಣರ ಬರವೆನಗೆ ಪ್ರಾಣಜೀವಾಳವಯ್ಯಾ’ ಇಂಥ ಮಾತುಗಳು ಬಸವಣ್ಣನವರ ವಿನಯ, ವಿವೇಕದ ಪ್ರತೀಕಗಳಾಗಿ ತೋರುತ್ತವೆ.
ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ,
ರುದ್ರಪದವಿಯನೊಲ್ಲೆ,
ನಾನು ಮತ್ತಾವ ಪದವಿಯನೊಲ್ಲೆನಯ್ಯಾ.
ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ
ಪಾದವನರಿದಿಪ್ಪ ಮಹಾಪದವಿಯ ಕರುಣಿಸಯ್ಯಾ.
ಬಸವಣ್ಣನವರು ಬಯಸಿದ್ದರೆ ಎಂಥ ಪದವಿಯನ್ನಾದರೂ ಪಡೆಯಬಹುದಿತ್ತು. ಆದರೆ ಅವರು ದೇವರಲ್ಲಿ ಪ್ರಾರ್ಥಿಸುವುದು ನನಗೆ ಬ್ರಹ್ಮಪದವಿ, ವಿಷ್ಣುಪದವಿ, ರುದ್ರಪದವಿ ಬೇಕಾಗಿಲ್ಲ. ಬದಲಾಗಿ ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯನ್ನು ಕರುಣಿಸು ಎಂದು ಪ್ರಾರ್ಥಿಸಿಕೊಳ್ಳುತ್ತಾರೆ.
ಎನಗೆ ನಾನೇ ಹಗೆ ನೋಡಯ್ಯಾ,
ಎನಗೆ ನಾನೇ ಕೆಳೆ ನೋಡಯ್ಯಾ,
ನಿಮ್ಮ ಸದ್ಭಕ್ತರೊಡನೆ ವಿರೋಧ ಮಾಡಿದಡೆ ಎನ್ನ ಕೊಲುವುದಾಗಿ,
ನಿಮ್ಮ ಪುರಾತನರಿಗಂಜಿ ಬೆಸಗೊಂಡಡೆ ಎನ್ನ ಕಾಯ್ವುದಾಗಿ.
ಅನ್ಯ ಹಗೆಯೆಲ್ಲಿ? ಕೆಳೆಯೆಲ್ಲಿ?
ಬಾಗಿದ ತಲೆಯ ಮುಗಿದ ಕೈಯಾಗಿರಿಸು,
ಕೂಡಲಸಂಗಮದೇವಾ.
ಮಿತ್ರರನ್ನು ಇಲ್ಲವೇ ಶತೃಗಳನ್ನು ಮಾಡಿಕೊಳ್ಳುವುದು ಅವರವರ ನಡಾವಳಿಕೆಯನ್ನೇ ಅವಲಂಬಿಸಿದೆ. ಅದನ್ನೇ ಇಲ್ಲಿ ಬಸವಣ್ಣನವರು ಹೇಳುವುದು. ಎನಗೆ ನಾನೇ ಹಗೆ, ನಾನೇ ಕೆಳೆ ಎನ್ನುವರು. ಯಾರಿಗೇ ಆಗಲಿ ಮೊದಲ ಶತೃಗಳು ಅವರೊಳಗೆ ಇರುವ ಅರಿಷಡ್ವರ್ಗಗಳು. ಅವುಗಳನ್ನು ಗೆದ್ದರೆ ಅವನಿಗೆ ಅವನೇ ಮಿತ್ರನಾಗುವನು. ತನ್ನನ್ನು ಗೆಲ್ಲದೆ ಸದ್ಭಕ್ತರೊಡನೆ ವಿರೋಧ ಕಟ್ಟಿಕೊಂಡರೆ ಅದು ಅವರನ್ನೇ ಕೊಲ್ಲುವುದು. ಬದಲಾಗಿ ಆ ಪುರಾತನರಿಗೆ ಅಂಜಿ ವಿಶ್ವಾಸದಿಂದ ಇದ್ದರೆ ಅವರೇ ನಮಗೆ ಮಿತ್ರರಾಗಿ ಕಾಯುವರು. ಹಾಗಾಗಿ ಮಿತ್ರ, ಶತೃ ಹೊರಗಿಲ್ಲ ಎನ್ನುತ್ತಲೇ ಅವರಲ್ಲಿದ್ದ ವಿನಯ ನೋಡಬೇಕು. ಅವರು ಪ್ರಾರ್ಥನೆ ಮಾಡುವುದು `ಬಾಗಿದ ತಲೆಯ ಮುಗಿದ ಕೈಯಾಗಿರಿಸು’ ಎಂದು.
ಆವ ಜಾತಿಯಾದಡೂ ಆಗಲಿ;
ಪುರಾತನ ಚಾರಿತ್ರದಲ್ಲಿ ನಡೆದು,
ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನಮಂ ಕೊಟ್ಟು,
ಅಹಂಕಾರವಳಿದಂತಹ ಮಹಾತ್ಮರ
ಬಾಯ ತಂಬುಲವ ಮೆಲುವೆ, ಬೀಳುಡುಗೆಯ ಹೊದೆವೆ.
ಅವರ ಪಾದರಕ್ಷೆಗಳೆರಡನೂ,
ಮಂಡೆಯ ಮೇಲೆ ಹೊತ್ತುಕೊಂಡು ಬದುಕುವೆನಯ್ಯಾ.
ಆ ಗಣಂಗಳ ದಾಸನ ದಾಸ ನಾನು,
ಜನ್ಮ ಜನ್ಮದಲ್ಲಿ ಆಗುವೆ ಕಾಣಾ ಗುಹೇಶ್ವರಾ.
ಶರಣರು ಒತ್ತು ಕೊಟ್ಟದ್ದು ಜಾತಿಗಿಂತ ನೀತಿಗೆ. ವ್ಯಕ್ತಿ ಹುಟ್ಟಿನ ಕಾರಣಕ್ಕಾಗಿ ಯಾವುದೇ ಜಾತಿಗೆ ಸೇರಿದ್ದರೂ ಪುರಾತನರಂತೆ ಚಾರಿತ್ರ್ಯ ಶುದ್ಧಿಯುಳ್ಳವನಾಗಿ ನಡೆಯುವ ಮನಸ್ಸು ಮಾಡಬೇಕು. ಗುರು, ಲಿಂಗ, ಜಂಗಮಕ್ಕೆ ತನು, ಮನ, ಧನವನ್ನು ನೀಡಬೇಕು. ಇದರಿಂದ ಅಹಂಕಾರ ಅಡಗುವುದು. ಹಾಗೆ ಅಹಂಕಾರ ಅಳಿದ ಮಹಾತ್ಮರ ಬಾಯ ತಂಬುಲವನ್ನು ಮೆಲುವೆ, ಬೀಳುಡುಗೆಯ ಹೊದೆವೆ, ಅವರ ಪಾದರಕ್ಷೆಗಳನ್ನು ತಲೆಯ ಮೇಲೆ ಹೊತ್ತು ಬದುಕುವೆ. ಪ್ರಭುದೇವರಂತಹ ಅನುಭಾವಿಗಳು ತೋರುವ ವಿನಯ ಎಂತಹವರನ್ನೂ ಬೆರಗುಗೊಳಿಸುವುದು. ಬಸವಣ್ಣನವರು ಸಹ ಇಂಥದೇ ಮಾತುಗಳನ್ನು ಆಡಿದ್ದಾರೆ.
ಆವನಾದಡೇನು ಶ್ರೀಮಹಾದೇವನ ನೆನೆವನ
ಬಾಯ ತಂಬುಲವ ಮೆಲುವೆ, ಬೀಳುಡುಗೆಯ ಹೊದೆವೆ,
ಪಾದರಕ್ಷೆಯ ಕಾಯ್ದು ಬದುಕುವೆ,
ಕೂಡಲಸಂಗಮದೇವಾ.
ಈ ರೀತಿಯ ವಿನಯ, ಭೃತ್ಯಾಚಾರ ಮನೋಭಾವ ಅಳವಟ್ಟಾಗ ಅಹಂಕಾರ ತನ್ನಷ್ಟಕ್ಕೆ ತಾನೇ ಅಡಗುವುದು. ಅಹಂಕಾರ ಅಡಗಿದರೆ ಆ ವ್ಯಕ್ತಿ ಬಯಸಿದ ಸುಖ ಅಂಗೈ ನೆಲ್ಲಿಯಾಗುವುದರಲ್ಲಿ ಅನುಮಾನವಿಲ್ಲ. ಆದರೆ ಅಹಂಕಾರ ಅಡಗಿಸುವುದು ಬಹುಕಷ್ಟದ ಕಾರ್ಯ. ಹಾಗಂತ ಅಸಾಧ್ಯವಾದುದೇನಲ್ಲ. ಮನಸ್ಸಿದ್ದಲ್ಲಿ ಮಾರ್ಗ ಇದೆ. ಶರಣರಿಂದ ಸಾಧ್ಯ ಆಗಿದ್ದು ನಮ್ಮಿಂದ ಏಕೆ ಸಾಧ್ಯವಿಲ್ಲ ಎನ್ನುವ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳುತ್ತ ಹೋದರೆ ಕ್ರಮೇಣ ಅಹಂಕಾರ ನಿರಸನವಾಗಿ ಬದುಕು ಶಾಂತಿ, ಸಮಾಧಾನ ಕಂಡುಕೊಳ್ಳುವುದು.
Comments 15
Kamalesh Jevergi
Sep 9, 2021ನನಗೆ ನಾನೇ ಶತೃ, ನನಗೆ ನಾನೇ ಮಿತ್ರ ಅನ್ನೋ ಮಾತನ್ನ ಬಹಳ ಹಿಂದೆ ಎಲ್ಲೋ ಓದಿದ್ದು ನನ್ನ ಮನಸ್ಸಲ್ಲಿ ಗಟ್ಟಿಯಾಗಿ ಕೂತಿತ್ತು. ಆ ಮಾತು ಬಸವಣ್ಣನವರದೇ ಎನ್ನುವುದು ಇವತ್ತು ಗೊತ್ತಾಗಿ ಆಶ್ಚರ್ಯ, ಸಂತೋಷ ಒಟ್ಟಿಗೆ ಆದವು.
Dinesh P
Sep 11, 2021ಅಹಂಕಾರ ನೆತ್ತಿಗೆ ಏರಿಸಿಕೊಂಡರೆ ನನಗೆ ನಾನೇ ಶತೃವಾಗುತ್ತೇನೆ, ಅಹಂಕಾರ ಇಳಿದು ಹೋದರೆ ನನಗೆ ನಾನೇ ಮಿತ್ರನಾಗುತ್ತೇನೆ. ಸ್ವಾಮೀಜಿಯ ಬರವಣಿಗೆ ಅವರ ಆಶೀರ್ವಾದದಂತೆ ಮಾರ್ಗದರ್ಶನ ನೀಡುತ್ತದೆ. ಶರಣಾರ್ಥಿಗಳು.
Kalyani Gowda
Sep 12, 2021ಅಹಂಕಾರವನ್ನು ಕೋಣಕ್ಕೆ ಹೋಲಿಕೆ ಮಾಡಿದ ಜಕ್ಕಣಯ್ಯ ಅವರ ವಚನವನ್ನು ಓದುತ್ತಿದ್ದರೆ ಅವರು ಅಹಂಕಾರಿಗಳನ್ನು ಕಂಡ ಬಗೆ ಮನಸ್ಸಿಗೆ ನಾಟುವಂತಿತ್ತು. ಆಸಕ್ತಿಕರ ಲೇಖನ.
ವೀರೇಶ್ ಅಂಗಡಿ
Sep 13, 2021ಅಹಂಕಾರದಿಂದ ಹೊರಬರಲು ಶರಣರು ಹಲವಾರು ವಚನಗಳನ್ನು ಬರೆದಿದ್ದಾರೆ. ಅಹಂಕಾರ ಯಾವಾಗಲೂ ಕಲಹವನ್ನು, ವೈಮನಸ್ಯವನ್ನು, ಕೊನೆಗೆ ನೋವನ್ನು ತರುತ್ತದೆ. ಆದರೂ ಅಹಂಕಾರವನ್ನು ಬೇರೆ ಬೇರೆ ಪರ್ಸೆಂಟ್ ಗಳಲ್ಲಿ ಜನ ಅದನ್ನು ಇಟ್ಟುಕೊಂಡೇ ಜೀವನ ನಡೆಸುತ್ತಿರುತ್ತಾರೆ. ಇದು ಬೇಡವೇ ಬೇಡವೆಂದು ತಿಳಿಸುವ ಗುರುಗಳ ಬೋಧೆ ಬಹಳ ಚೆನ್ನಾಗಿದೆ.
Tippeswamy
Sep 15, 2021`ತನ್ನ ತಾನರಿದೆಹೆನೆಂಬ ಅಹಂಕಾರವುಳ್ಳಡೆ ನಿಮ್ಮವರಿಗೆ ದೂರ’ ಎನ್ನುವ ಬಸವಣ್ಣನವರ ವಚನದ ನುಡಿ ಅವರು ಎಷ್ಟರಮಟ್ಟಿಗೆ ತಮ್ಮನ್ನು ಒರೆಗಲ್ಲಿಗೆ ಹಚ್ಚಿ ನೋಡಿಕೊಂಡರೆಂಬುದ ತಿಳಿದು ಆಶ್ಚರ್ಯವಾಯಿತು. ಶರಣರಲ್ಲಿದ್ದ ವಿನಯ ನಡಾವಳಿಗಳು ನಮಗೆ ಎಂದೆಂದಿಗು ಆದರ್ಶ.
ರಾಜಶೇಖರಪ್ಪ ಸೀಮೆಕಲ್ಲು
Sep 15, 2021ಅಹಂಕಾರವನ್ನು ವಿಸರ್ಜಿಸುವುದು ಬಹಳ ಮುಖ್ಯ. ವಚನಗಳ ಸಮೇತ ಪ್ರಕಟವಾದ ಸವಿಸ್ತಾರವಾದ ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ. ಆದರೆ ಅಹಂಕಾರವನ್ನು ಬಿಡುವುದು ಹೇಗೆ?
Puttegowda
Sep 18, 2021ಶ್ರೀಗಳ ಲೇಖನವನ್ನು ನಾನು ಯಾವಾಗಲೂ ಓದುತ್ತೇನೆ. ಅವರ ಅಭಿಮಾನಿ ಶಿಷ್ಯರಲ್ಲಿ ನಾನೂ ಒಬ್ಬ. ಮತ್ತೆ ಕಲ್ಯಾಣ ಕಾರ್ಯಕ್ರಮ ಹೊಸ ಹೊಸ ವಿಚಾರಗಳನ್ನು ಅನಾವರಣಗೊಳಿಸುವ ಸುಂದರ ಕಾರ್ಯಕ್ರಮ. ಅವರ ಮಾತು, ಬರವಣಿಗೆಗಳು ಬಹಳ ನಿಷ್ಠುರ ಹಾಗೂ ನೇರ. ಆದರೆ ಈಚೆಗೆ ಅವರು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಪರವಾಗಿ ಮಾತನಾಡಿದ್ದು ನನ್ನಲ್ಲಿ ಅನೇಕ ಗೊಂದಲಗಳನ್ನು ಹುಟ್ಟಿಸಿತು. ನಿಜಕ್ಕೂ ಇದು ನಮ್ಮ ಶ್ರೀಗಳ ನಡೆಯಲ್ಲ ಎಂದು ನನ್ನ ಹೃದಯ ಹೇಳುತ್ತಿತ್ತು.
Parameshwara Tipatur
Sep 18, 2021ವಿನಯ, ಭೃತ್ಯಾಚಾರ ಮನೋಭಾವ ಅಳವಟ್ಟಾಗ ಅಹಂಕಾರ ತನ್ನಷ್ಟಕ್ಕೆ ತಾನೇ ಅಡಗುವುದು. ಅಹಂಕಾರ ಅಡಗಿದರೆ ಆ ವ್ಯಕ್ತಿ ಬಯಸಿದ ಸುಖ ಅಂಗೈ ನೆಲ್ಲಿಯಾಗುವುದರಲ್ಲಿ ಅನುಮಾನವಿಲ್ಲ. ಆದರೆ ಅಹಂಕಾರ ಅಡಗಿಸುವುದು ಬಹುಕಷ್ಟದ ಕಾರ್ಯ ಎಂದಿದ್ದೀರಿ… ಶರಣರು ಅದಕ್ಕಾಗಿ ಏನೇನು ಕ್ರಮಗಳನ್ನು ಕೈಗೊಂಡಿದ್ದರು ಎಂದು ಚರ್ಚಿಸಿದ್ದರೆ ಆ ಪ್ರಯತ್ನಕ್ಕೆ ಬೆಳಕು ಚೆಲ್ಲಿದಂತಾಗುತ್ತಿತ್ತು.
ಕಾರ್ತಿಕ್, ಚೆನ್ನೈ
Sep 20, 2021ಬಸವಣ್ಣನ ಮತ್ತು ಅಲ್ಲಮಪ್ರಭುದೇವರ ನಡುವೆ ನಡೆದದ್ದು ಎನ್ನಲಾದ ದಾಸೋಹ ಪ್ರಸಂಗ ಬಹಳ ಮಾರ್ಮಿಕವಾಗಿದೆ. ನಿಜಕ್ಕೂ ಪ್ರಭುದೇವರು ಹಾಗೆ ಮಹಾಮನೆಯ ಊಟವನ್ನೆಲ್ಲಾ ಒಬ್ಬರೇ ಮಾಡಿದರೇ ಎನ್ನುವುದು ನಂಬುವುದು ಕಷ್ಟ. ಆದರೆ ಈ ಕತೆಯಲ್ಲಿ ಅಹಂಕಾರ ಕಳೆಯುವ ಸತ್ಯ ಅಡಗಿದ್ದು ಬಹಳ ಮುಖ್ಯವೆನಿಸುತ್ತದೆ.
Lalithamma
Sep 20, 2021ಗುರುಗಳ ಲೇಖನ ಬಹಳ ಚೆನ್ನಾಗಿದೆ.
Indira Bidar
Sep 23, 2021`ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೆ ಸುಡಬೇಕು’- ಎಂಬ ಅಮ್ಮುಗೆ ರಾಯಮ್ಮನವರ ವಚನ ಅತ್ಯಂತ ಅದ್ಭುತವಾದ ವಚನ. ನಮ್ಮ ಅಹಂಕಾರವನ್ನು ನಾವೇ ದಹಿಸಬೇಕೆನ್ನುವ ಅವರ ಸಂದೇಶ ಸರ್ವಕಾಲಕ್ಕೂ ಸಲ್ಲುತ್ತದೆ.
Punya Kolapur
Sep 26, 2021ಬಸವಣ್ಣನವರು ದೇವರಲ್ಲಿ ಪ್ರಾರ್ಥಿಸುವುದು ನನಗೆ ಬ್ರಹ್ಮಪದವಿ, ವಿಷ್ಣುಪದವಿ, ರುದ್ರಪದವಿ ಬೇಕಾಗಿಲ್ಲ. ಬದಲಾಗಿ ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯನ್ನು ಕರುಣಿಸು ಎಂದು ಪ್ರಾರ್ಥಿಸಿಕೊಳ್ಳುತ್ತಾರೆ- ನನಗಂತೂ ಇದೊಂದು ಬಹಳ ಅಗಾಧ ಎನಿಸಿದ ವರ್ತನೆ. ಪದವಿಗಳಲ್ಲಿನ ನಿರುಪಯುಕ್ತತೆಯನ್ನು ಹೇಳುವ ವಚನ ನಮ್ಮನ್ನು ನಿಜದ ಕಡೆಗೆ ಕರೆದೊಯ್ಯುವ ದಾರಿಯೂ ಆಗಿದೆ.
Harsha m patil
Sep 26, 2021So wonderful to discover this WEbsite. Really.. many thanks for starting this up. This web site is one thing that’s needed on the web.
ಗುರುಲಿಂಗಯ್ಯ ಹೊಸಪೇಟೆ
Sep 28, 2021ಅಹಂಕಾರ ನಿರಸನದ ವಿಸ್ತಾರ ಲೇಖನ ಬಹಳ ಅತ್ಯಮೂಲ್ಯ ವಿಚಾರಗಳಿಂದ ಕೂಡಿದೆ. ಗುರುಗಳ ಅನುಭವಾಮೃತ ಶರಣರ ನಡೆಗಳನ್ನು ನಮಗೆ ಪರಿಣಾಮಕಾರಿಯಾಗಿ ಮುಟ್ಟಿಸುತ್ತವೆ. ಬೆಸರದ ಸಂಗತಿಯೆಂದರೆ ಇವತ್ತು ಬಹುತೇಕ ಲಿಂಗಾಯತರು ಅಹಂಕಾರವನ್ನು ಗಟ್ಟಿಮಾಡಿಕೊಂಡವರಂತೆ ತೋರುತ್ತಾರೆ. ವಿನಯ, ಸದಾಚಾರಗಳ ಧರ್ಮದಲ್ಲಿ ಇಂತಹ ಅನುಯಾಯಿಗಳೇ ಎಂದು ಪ್ರಶ್ನೆ ಹುಟ್ಟುತ್ತದೆ.
Nandeesha
Sep 30, 2021ಅಹಂಕಾರ ಎನ್ನುವ ರಾಕ್ಷಸ ಮನುಷ್ಯನ ಮನಸ್ಸನ್ನು ಹೊಕ್ಕಿದ್ದು ಯಾವಾಗ?