ಮನೆ ನೋಡಾ ಬಡವರು
ಈಗಿನ ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನ ಅಮರೇಶ್ವರ ಎಂಬ ಗ್ರಾಮಕ್ಕೆ ಸುಮಾರು ಎಂಟನೂರೈವತ್ತು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಬಸವಣ್ಣನವರ ಕಾಲಕ್ಕೆ ಆ ಊರಿನಲ್ಲಿ ಮಾರಯ್ಯ ಮತ್ತು ಲಕ್ಕಮ್ಮ ಎಂಬ ದಂಪತಿಗಳಿದ್ದರು. ಅನನ್ಯ ಶಿವಭಕ್ತರಾಗಿದ್ದ ಅವರಿಬ್ಬರೂ ಊರಿನಲ್ಲಿದ್ದ ಅಮರೇಶ್ವರ (ಶಿವ) ಸೇವೆಯಲ್ಲಿ ನಿರತರಾಗಿದ್ದರು. ಇದನ್ನು ಗುಡುಗುಂಟಿ ಅಮರೇಶ್ವರ ಎಂತಲೂ ಕರೆಯುತ್ತಾರೆ. ನಾಡಿನಾದ್ಯಂತ ಪ್ರಸರಿಸುತ್ತಿದ್ದ ಕಲ್ಯಾಣದ ಸಮಾಚಾರ, ಬಸವಣ್ಣನವರ ಕೀರ್ತಿವಾರ್ತೆ ಮಾರಯ್ಯ ದಂಪತಿಗೂ ತಲುಪಿತು. ಮಹಾಕ್ರಾಂತಿಕಾರ ಬಸವಣ್ಣನವರನ್ನು ಕಾಣುವ ಹಂಬಲದಿಂದ ಕಲ್ಯಾಣದ ದಾರಿ ಹಿಡಿದು ಮಹಾಮನೆಗೆ ಬಂದು ಅಲ್ಲಿ ಶರಣರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ‘ಆಯದ’ ಅಂದರೆ ಕೂಲಿಯ ಅಕ್ಕಿಯಿಂದ ಅನ್ನ ದಾಸೋಹ ನಡೆಸುತ್ತಿದ್ದ ದಂಪತಿಗೆ ಆಯ್ದಕ್ಕಿ ಎಂಬುದು ಅನ್ವರ್ಥ ನಾಮವಾಯಿತು. ಶರಣರೆಲ್ಲರೂ ಅವರನ್ನು ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ ಎಂದೇ ಗುರುತಿಸುತ್ತಿದ್ದರು.
‘ಆಯ’ ಎಂದರೆ ಕೂಲಿ. ಇಲ್ಲಿಯವರೆಗೆ ಎಲ್ಲ ವಚನ ಸಂಪುಟ, ಶರಣ ಚರಿತಾಮೃತ ,ಶರಣರ ಚರಿತ್ರೆ ಶೂನ್ಯ ಸಂಪಾದನೆಯಲ್ಲಿ, ಆಯ ಅಂದರೆ – ಆಯ್ದುಕೊಳ್ಳುವುದು ಅಂತ ದಾಖಲೆಯಾಗಿದೆ. ಅದು ಸಂಪೂರ್ಣ ತಪ್ಪು. ಕಾಯಕಕ್ಕೆ ಎಲ್ಲಕ್ಕಿಂತ ಹೆಚ್ಚಿನ ಮಹತ್ವ ಕೊಟ್ಟವರು ಲಕ್ಕಮ್ಮ ಮತ್ತು ಮಾರಯ್ಯ ದಂಪತಿಗಳು. ರಸ್ತೆಯಲ್ಲಿ ಬಿದ್ದ ಕಾಳುಗಳನ್ನು ಹೆಕ್ಕಿ, ಆಯ್ದು ಅವುಗಳನ್ನು ಶುದ್ಧೀಕರಿಸಿ ಪ್ರಸಾದ ಮಾಡುತ್ತಿದ್ದರು ಎನ್ನುವುದು ಶುದ್ಧ ತಪ್ಪು ಕಲ್ಪನೆ. ಅವರದು “ಆಯ”- ಕೂಲಿ ಮಾಡುವ ಸತ್ಯ ಶುದ್ಧ ಕಾಯಕವಾಗಿತ್ತು. ಕೂಲಿಗಾಗಿ ಕಾಳು ಅಂದಿನ ಆರ್ಥಿಕ ವ್ಯವಸ್ಥೆಯ ಒಂದು ಭಾಗವಾಗಿತ್ತು.
ಆಯ್ದಕ್ಕಿ ಲಕ್ಕಮ್ಮನ ಸಿಕ್ಕ ವಚನಗಳು 25, ಸಂಖ್ಯಾತ್ಮಕವಾಗಿ ಕಡಿಮೆ ಎನಿಸಿದರೂ ಮೌಲಿಕವಾಗಿ ಅರ್ಥಪೂರ್ಣವಾಗಿವೆ. ಅವುಗಳಲ್ಲಿ ಕಾಯಕ ತತ್ವನಿಷ್ಠತೆ, ಸಮಯ ಪ್ರಜ್ಞೆಯಂತಹ ದಿಟ್ಟ ಗುಣಗಳನ್ನು ಕಾಣಬಹುದು. ಕಲ್ಯಾಣ ಕ್ರಾಂತಿಯ ಆಶಯಗಳನ್ನು ಹೊತ್ತ ನೈಜ ವಿಚಾರಗಳು ಇಲ್ಲಿವೆ. ಲಕ್ಕಮ್ಮ ಮಹಾಮನೆಯಲ್ಲಿ ಅಕ್ಕಿ, ಬೇಳೆ, ಕಾಳು ಹಸನು ಮಾಡುವ ಕಾರ್ಯದಲ್ಲಿ ನಿರತಳಾದ ಮಹಾ ಶರಣೆ. ಆಕೆಯ ವಚನಾಂಕಿತ ‘ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ.’
ಇನ್ನು ಮಾರಯ್ಯನವರ ಲಭ್ಯ ವಚನಗಳು 32. ಅವರ ವಚನಾಂಕಿತ ‘ಅಮರೇಶ್ವರ ಲಿಂಗ.’ ಅವರು ಶ್ರದ್ಧೆ ನಿಷ್ಠೆಯಿಂದ ಕಲ್ಯಾಣದ ಮಹಾಮನೆಗೆ ಬರುವ ಕಾಳು ಅಕ್ಕಿ ಬೇಳೆ ಬೆಲ್ಲ ಹಾಗೂ ಇತರೆ ಆಹಾರ ಮೂಟೆಗಳನ್ನು ಹೊತ್ತು ತಂದು ಉಗ್ರಾಣದಲ್ಲಿ ಇಳಿಸುವ ಕೂಲಿ ಕೆಲಸ ಮಾಡುತ್ತಿದ್ದರು. ನಿಜ ಅರ್ಥದಲ್ಲಿ ಕಾಯಕದ ಮಹತ್ವವನ್ನು ಶರಣ ಸಂಕುಲಕ್ಕೆ ತಿಳಿಸಿದ ಮೊದಲ ಪುರುಷ ಮಾರಯ್ಯ. ಅದನ್ನು ಈ ಕೆಳಗಿನ ವಚನದಲ್ಲಿ ಕಾಣಬಹುದು.
ಕಾಯಕದಲ್ಲಿ ನಿರತನಾದರೆ ಗುರು
ದರುಶನವಾದರೂ ಮರೆಯಬೇಕು;
ಲಿoಗಪೂಜೆಯಾದರೂ ಮರೆಯಬೇಕು;
ಜoಗಮ ಮುoದಿದ್ದಡೂ ಹoಗು ಹರಿಯಬೇಕು ;
ಕಾಯಕವೇ ಕೈಲಾಸವಾದ ಕಾರಣ,
ಅಮರೇಶ್ವರ ಲಿoಗವಾಯಿತ್ತಾದಡೂ ಕಾಯಕದೊಳಗು !
ಮಾರಯ್ಯ ದoಪತಿಗಳಿಬ್ಬರೂ ಕಾಯಕ ನಿಷ್ಠೆಯುಳ್ಳವರಾಗಿದ್ದರು. ಶರಣ ಸoಸ್ಕೃತಿಯ ತತ್ವವಾದ ದುಡಿಮೆಗೆ ಪ್ರಾಶಸ್ತ್ಯ ನೀಡಿ “ಕಾಯಕವೇ ಕೈಲಾಸ” ಎಂಬ ಮಾತನ್ನು ನಡೆಯಿಸಿಕೊoಡು ಬoದ ಆದರ್ಶವಾದಿಗಳು. ಅವರು ಬರೆದ ಈ ವಚನವು ಕಾಯಕದ ಬಗ್ಗೆ ಬರೆದ ಶಾಸನದoತಿದೆ.
ಕಾಯಕದಲ್ಲಿ ನಿರತನಾದಾಗ ಆತ್ಮಾಭಿಮಾನ ಕಳೆದುಕೊಳ್ಳಬಾರದು. ಆದ್ದರಿoದ ಕಾಯಕ ಮಾಡುವಾಗ ಒಮ್ಮೊಮ್ಮೆ ಗುರುದರುಶನವಾಗಲಿ, ಲಿoಗಪೂಜೆಯ ಸಮಯವಾಗಿರಲಿ ಅಥವಾ ಜoಗಮ ಮುoದೆ ಬoದು ನಿಂತರೂ ನಾವು ನಮ್ಮ ಕಾಯಕ ಮಾಡಬೇಕೆ ವಿನಃ ಅದನ್ನು ಬಿಟ್ಟು ಬoದವರನ್ನು ಉಪಚರಿಸುವತ್ತ ಗಮನ ಕೊಟ್ಟು, ಎದುರಿಗೆ ಬoದವರನ್ನು ಮೆಚ್ಚಿಸುವ ಸಲುವಾಗಿ ಕಾಯಕವನ್ನು ಅರ್ಧದಲ್ಲಿಯೇ ಬಿಡಬಾರದು. ಕಾಯಕದಲ್ಲಿ ಮಗ್ನನಾದವನ ಮನಸ್ಸು ಏಕಾಗ್ರತೆಯಲ್ಲಿರಬೇಕು. ಚಿತ್ತ ಚoಚಲವಾಗಬಾರದು. ಮಾಡುವ ಕಾಯಕವನ್ನು ನಿರ್ವoಚನೆಯಿoದ ಮಾಡಿದಾಗಲೇ ಅದು ಕೈಲಾಸವಾಗುತ್ತದೆ. ಇದರ ಹೊರತು ಬೇರೆ ಕೈಲಾಸವಿಲ್ಲ ಎನ್ನುತ್ತಾರೆ ಮಾರಯ್ಯ. ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ ಮಹಾಮನೆಯಲ್ಲಿ ಸತ್ಯ ಶುದ್ಧ ಕಾಯಕ ಮಾಡುತ್ತಿದ್ದರು ಎನ್ನುವುದಕ್ಕೆ ಲಕ್ಕಮ್ಮನ ಈ ವಚನವು ಸ್ಪಷ್ಟ ಉದಾಹರಣೆಯಾಗುತ್ತದೆ.
ಆಯಿದೆಹೆನೆಂಬ ಕಾಯಕದ ಅರಿಕೆ ಹಿಂಗಿತೆ?
ನಾ ಮಾಡಿದೆಹೆನೆಂಬ ತವಕ ಹಿಂಗಿತೆ?
ಉಭಯದ ಕೈಕೂಲಿ ಹಿಂಗಿ,
ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ಆಲಸಿಕೆಯಾಯಿತು.
ಆಯುದು- ಹೆಕ್ಕಿ ಮಾಡುವುದು ಅವಳ ಕಾಯಕವಲ್ಲ. ಆದರೆ ಕೈಕೂಲಿ ಮಾಡುವಾಗ, ಹಸನು ಮಾಡುವಾಗ ಬಿದ್ದ ಕಾಳು ಬೇಳೆ ಅಕ್ಕಿಯನ್ನು ಆಯ್ದು ಒಯ್ಯುವ ಕೆಲಸ ಮಾಡುತ್ತಿದ್ದಳು. ತಾನು ಮಾಡಿದೆ ಎಂಬುದು ಅವಸರದ ತವಕ ಹಿಂಗಿತೆ? ಉಭಯದ ಕೈಕೂಲಿ ಹಿಂಗಿ ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ಆಲಸಿಕೆಯಾಗುವ ರೀತಿಯಲ್ಲಿ ತೃಪ್ತಿ ಭಾವವಿರಬೇಕು ಎನ್ನುತ್ತಾಳೆ. ಪ್ರಾಪಂಚಿಕ ಪಾರಮಾರ್ಥಿಕ ಕೈಕೂಲಿಯು ಸಮಾಜಕ್ಕೆ ಸಂದಾಗಲೇ ಅದು ಧನ್ಯತೆಗೆ ಪಾತ್ರವಾಗುತ್ತದೆ ಎನ್ನುತ್ತಾಳೆ ಲಕ್ಕಮ್ಮ. ಇದನ್ನು ನೋಡಿದರೆ ಅವರು ಆಯುವ ಕಾಯಕ ಮಾಡದೆ ಕೈಕೂಲಿ ಕಾಯಕ ಮಾಡಿ ಜಂಗಮ ಸಮಾಜಕ್ಕೆ ತಮ್ಮ ಸೇವೆ ಸಲ್ಲಿಸುತ್ತಿದ್ದರು ಎಂದು ಪರಿಗಣಿಸಬೇಕು.
ಒಮ್ಮೆ ಆಯ್ದಕ್ಕಿ ಮಾರಯ್ಯನವರು ಹೆಚ್ಚಿನ ಕಾಯಕ ಮಾಡಿ ಹೆಚ್ಚಿನ ಅಕ್ಕಿ ಮನೆಗೆ ತಂದಾಗ ಅದನ್ನು ಗಂಭೀರವಾಗಿ ತೆಗೆದುಕೊಂಡ ಲಕ್ಕಮ್ಮ, ಪತಿಯನ್ನು ಬಾಗಿಲ ಹೊಸ್ತಿಲಿನಲ್ಲಿಯೆ ತಡೆದಳು. ಅವಳ ಸಾತ್ವಿಕ ಕೋಪ ಎಷ್ಟಿತ್ತೆಂದು ಈ ವಚನದ ಮೂಲಕ ತಿಳಿದುಕೊಳ್ಳಬಹುದು.
ಆಶೆಯೆಂಬುದು ಅರಸಿಂಗಲ್ಲದೆ
ಶಿವ ಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ ,
ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಿಮಗೇಕೆ ಈಶ್ವರನೊಪ್ಪ
ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ .
ಅರಸರಿಗೆ ಇರುವ ಆಶೆ ಶಿವಭಕ್ತರಿಗೇಕೆ ಎಂದು ಪ್ರಶ್ನಿಸಿ ಸಮಕಾಲೀನ ಶರಣೆಯರಲ್ಲಿ ಕಾಯಕ ದಾಸೋಹದ ಮಹತ್ವ ಸಾರುತ್ತಾಳೆ. ಈಸಕ್ಕಿಯಾಸೆ ನಿಮಗೇಕೆ ಈಶ್ವರನೊಪ್ಪ ಎಂದು ನಿಷ್ಠುರವಾಗಿ ಹೇಳುತ್ತಾಳೆ. ಹಾಗೇನಾದರು ಆಸೆ ಪಟ್ಟಲ್ಲಿ ಅದರಿಂದ ನಾವು ಸಮಾಜಮುಖಿ ಲಿಂಗಮುಖಿಯಿಂದ ದೂರವಾಗುತ್ತೇವೆ ಎಂದೆನ್ನುತ್ತಾಳೆ. ಅದು ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ಸಲ್ಲಿಸುವ ದೂರಾಗುತ್ತದೆಂದು ಗಂಡನನ್ನು ಎಚ್ಚರಿಸುತ್ತಾಳೆ.
ಆದರೆ ಮಾರಯ್ಯ ಇದನ್ನು ಪ್ರತಿರೋಧಿಸಿ ತಾನು ದುಡಿದು ತರುವ ವಸ್ತುವಿನ ಮೇಲೆ ತನ್ನ ಸಂಪೂರ್ಣ ಅಧಿಕಾರವಿದೆಯೆಂದು ನಂಬಿ ಹೆಂಡತಿಗೆ ಹೇಳಲು ಹೋದಾಗ ಲಕ್ಕಮ್ಮ ಕುಪಿತಗೊಂಡು,
ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ,
ಇದು ನಿಮ್ಮ ಮನವೊ, ಬಸವಣ್ಣನನ ಅನುಮಾನದ ಚಿತ್ತವೋ ?
ಈ ಮಾತು ಮಾರಯ್ಯಪ್ರಿಯ ಅಮರೇಶ್ವರ ��ಿಂಗಕ್ಕೆ ಸಲ್ಲದ ಬೋನ.
ಅಲ್ಲಿಯೇ ಸುರಿದು ಬನ್ನಿರಿ ಮಾರಯ್ಯ.
ಆಗ ಮಾರಯ್ಯನವರಿಗೂ ತಮ್ಮ ತಪ್ಪಿನ ಅರಿವಾಗಿ, ಬಸವಣ್ಣನವರ ಮನೆಗೆ ಬಂದು ಅಕ್ಕಿಯನ್ನು ತಿರುಗಿಸುತ್ತಾರೆ. ಬಸವಣ್ಣನವರು ವ್ಯಾಕುಲಗೊಂಡು ಇದನ್ನು ಮರಳಿ ಒಯ್ಯಲು ವಿನಂತಿಸುತ್ತಾರೆ. ಆಗ ಮಾರಯ್ಯ-
ಎನಗೆ ಮನೆ ಇಲ್ಲ , ಎನಗೆ ಧನವಿಲ್ಲ ,
ಮಾಡುವದೇನು? ನೀಡುವದೇನು?
ಮನೆ ಧನ ಸಕಲ ಸಂಪದ ಸೌಖ್ಯವುಳ್ಳ
ನಿಮ್ಮ ಶರಣರ ತಪ್ಪಲಕ್ಕಿಯ ತಂದು,
ಎನ್ನೊಡಲ ಹೊರೆವೇನಾಗಿ,
ಅಮರೇಶ್ವರ ಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ ಸಂಗನ ಬಸವಣ್ಣಾ.
ಪ್ರಾಯಶಃ ಒಬ್ಬ ದಿನಗೂಲಿ ಶರಣ ಮಾರಯ್ಯ ಅಂದಿನ ಬಹುದೊಡ್ಡ ರಾಜ್ಯದ ಪ್ರಧಾನ ಮಂತ್ರಿ ಪದವಿಯಲ್ಲಿದ್ದ ಬಸವಣ್ಣನವರಿಗೆ ಈ ರೀತಿಯಾಗಿ ಪ್ರಶ್ನಿಸಿ ತಾನು ಗಳಿಸಿದ ಅಗತ್ಯಕ್ಕಿಂತ ಹೆಚ್ಚಿನ ಅಕ್ಕಿಯನ್ನು ಹಿಂದಿರುಗಿಸಿದ ಅತ್ಯಂತ ವಿರಳ ಘಟನೆ ನೋಡಿದರೆ ಕಾಯಕ ಮತ್ತು ದಾಸೋಹಕ್ಕೆ ಎಷ್ಟು ಮಹತ್ವವನ್ನು ಶರಣರು ನೀಡಿದ್ದರು ಎಂದು ಗೊತ್ತಾಗುತ್ತದೆ.
ಬಸವಣ್ಣನವರು ಈ ವಿಷಯವನ್ನು ಅನುಭವ ಮಂಟಪಕ್ಕೆ ಒಯ್ಯುತ್ತಾರೆ. ಕಾರಣ ದುಡಿದ ಶ್ರಮಕ್ಕೆ ತಕ್ಕ ಆದಾಯವನ್ನು ನೀಡಿ ಆದಾಯವಾದ ಅಕ್ಕಿಯನ್ನು ಕಳುಹಿಸಿ ಕೊಟ್ಟರೆ ಅದನ್ನು ವಿನಮ್ರವಾಗಿ ನಿರಾಕರಿಸುವ ಚಿಂತನೆ ಮಾಡಿದ ದಂಪತಿಗಳ ನಿಲುವನ್ನು ಬಸವಣ್ಣನವರು ಅನುಭವ ಮಂಟಪದಲ್ಲಿ ಚರ್ಚೆಗೆ ಅನುವು ಮಾಡಿಕೊಡುತ್ತಾರೆ. ಅಲ್ಲಿ ಶರಣರು ಮತ್ತು ಜ್ಞಾನಿಗಳು ಅಲ್ಲಮರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸುತ್ತಾರೆ. ಅಲ್ಲಮರು ಮಾರಯ್ಯನವರಿಗೆ ಪ್ರಶ್ನಿಸಲು ಅವರು ಈ ರೀತಿ ಉತ್ತರಿಸುತ್ತಾರೆ.
ಗೆಜ್ಜಲು ಮನೆ ಮಾಡಿ ಸರ್ಪನಗಿಂಬಾದಂತೆ
ನಾನತ್ತಣ ದ್ರವ್ಯವ ತಂದು ಇತ್ತ ಮಾಡಿದಡೆ .
ನನಗಿನ್ನೆತ್ತಣ ಮುಕ್ತಿ ಅಮರೇಶ್ವರ ಲಿಂಗ !
ಗೆದ್ದಲು ಮನೆಯ ಮಾಡಿ ಸರ್ಪನಿಗೆ ಬಿಟ್ಟು ಕೊಟ್ಟಂತೆ ತಾನು ಸಮಾಜದಲ್ಲಿನ ಪ್ರತಿಯೊಬ್ಬರ ಆದಾಯದ ಕಣಕಣವನ್ನು ತಂದು ಪ್ರಸಾದವ ಮಾಡಿದರೆ ನನಗೆ ಮುಕ್ತಿ ಸಿಗಲು ಸಾಧ್ಯವೆ? ಎಂದು ನಯವಾಗಿ ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ. ತನ್ನ ನಿಲುವನ್ನು ತಿಳಿಸಲು ಅಲ್ಲಮರು ಲಕ್ಕಮ್ಮನನ್ನು ಕೇಳುತ್ತಾರೆ. ಆಗ ಲಕ್ಕಮ್ಮ-
ಗರ್ವದಿಂದ ಮಾಡಿದ ಭಕ್ತಿ ದ್ರವ್ಯದ ಕೇಡು:
ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ :
ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ :
ಧೃಢವಿಲ್ಲದ ಭಕ್ತಿ ಆದಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವ ಮುಟ್ಟದ ಭಕ್ತಿ.
ಗರ್ವದಿಂದ ಮಾಡಿದ ಭಕ್ತಿ ದ್ರವ್ಯಕ್ಕೆ ಕೇಡು, ಆಸ್ತಿಗೆ ಹಾನಿ, ನಡೆಯಿಲ್ಲದ ನುಡಿಯು ಅರಿವಿನ ಹಾನಿ, ಕೊಡದೆ ತ್ಯಾಗಿ ಎನ್ನಿಸಿಕೊಳ್ಳುವವ ಮುಡಿಯಿಲ್ಲದೆ ಶೃಂಗಾರವ ಮಾಡಿಕೊಂಬಂತೆ ಇಂತಹ ದೃಢವಿಲ್ಲದವನ ಭಕ್ತಿಯು ಒಡೆದ ಮಡಿಕೆಯೊಳಗೆ ಸುಜಲವ ಹಾಕಿದಂತೆ ಎಂದು ವ್ಯಂಗ್ಯವಾಡುತ್ತಾಳೆ.
ಮುಂದುವರೆದು ಲಕ್ಕಮ್ಮ ಹೀಗೆ ವಾದಿಸುತ್ತಾಳೆ.
ಭಕ್ತನಿಗೆ ಬಡತನವುಂಟೆ? ನಿತ್ಯಂಗೆ ಮರಣವುಂಟೆ?
ಭಕ್ತರು ಬಡವರೆಂದು ಮತ್ತೊಂದ ಕೊಟ್ಟೆಹೆನೆಂದಡೆ ,
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವು ಸತ್ತಂದಿಗಲ್ಲದೆ ಬಡತನವಿಲ್ಲ.
ಭಕ್ತನು ಬಡವನಾಗುವುದಿಲ್ಲ ನಿತ್ಯ ಸಂಘರ್ಷಕ್ಕಿಳಿಯುವವ ಸಾಯುವುದಿಲ್ಲ. ಭಕ್ತರು ಬಡವರೆಂದು, ಮತ್ತೊಂದು ವಸ್ತು ಕೊಟ್ಟಡೆ ಅದು ವ್ಯಕ್ತಿಯ ಸಾವು ಎಂದು ಉತ್ತರಿಸುತ್ತಾಳೆ. “ಕಾಯಕವೇ ಕೈಲಾಸವಾದ ಕಾರಣ ಮಾರಯ್ಯನವರು ತಾವು ಮಾಡಿದ ಕೂಲಿಗೆ ತಮ್ಮ ಪಾಲಿನ ಆದಾಯವನ್ನು ಪಡೆಯಲೇ ಬೇಕು” ಎಂದು ಬಸವಣ್ಣನವರು ಒತ್ತಾಯಿಸುತ್ತಾರೆ.
ಆಗ ಲಕ್ಕಮ್ಮ- “ಮಾಡಿ ನೀಡಿ ಹೋದೆನೆಂಬಾಗ ಕೈಲಾಸವೇನು ಕೈಕೂಲಿಯೆ?” ಎಂದು ಪ್ರಶ್ನಿಸುತ್ತಾಳೆ. ಸಮಾಜವು ಒಪ್ಪದ ಹೆಚ್ಚಿನ ಹಣ ಅಥವಾ ದವಸ ಧಾನ್ಯ ಪಡೆಯುವದು ಘೋರ ಪಾಪವೆಂದು ಹೇಳುತ್ತಲೇ ಕೈಲಾಸವೇನು ಕೈಕೂಲಿ ಮಾಡಿ ಸಂಪಾದಿಸಲು ಸಾಧ್ಯವೇ? ಸತ್ಯ ಶುದ್ಧವಾದ ಕಾಯಕದಿಂದ ಮಾಡಿ ಅಗತ್ಯದಷ್ಟೇ ಪಡೆದು ಸಮಾಜ ಸೇವೆ ಮಾಡಬೇಕೆಂಬುದು ಲಕ್ಕಮ್ಮನ ಪ್ರಬಲವಾದ ಮಂಡನೆ.
ಅದೇ ತತ್ವವನ್ನು ಮಾರಯ್ಯನವರು ಪ್ರತಿಪಾದಿಸುತ್ತಾರೆ:
ನೇಮವ ಮಾಡಿಕೊಂಡು ಭಕ್ತರ ಭವನಂಗಳ ಹೊಕ್ಕು
ಕಾಯಕ ಸತ್ತು, ಹಣ ಹೊನ್ನ ಬೇಡೆಹೆನೆಂಬುದು ಕಷ್ಟವಲ್ಲದೆ ಸದ್ಭಕ್ತನಿಗೆ .
ಆ ಗುಣ ಅಮರೇಶ್ವರ ಲಿಂಗಕ್ಕೆ ದೂರ.
ಒಂದು ವ್ರತ ಆಚರಣೆ ನೇಮವ ಮಾಡಿಕೊಂಡು ಅದನ್ನು ಈಡೇರಿಸಲು ಭಕ್ತರು ಮನೆಯ ಅಂಗಳಕ್ಕೆ ಹೋಗಿ ಕಾಯಕ ಕೊಂದು ಹಣ ಹೊನ್ನ ಬೇಡೆಹೆನೆಂಬುದು ಕಷ್ಟವಾಗುವದಲ್ಲದೆ ಸದ್ಭಕ್ತನಿಗೆ ಇಂತಹ ಗುಣ ಅಮರೇಶ್ವರ ಲಿಂಗಕ್ಕೆ ದೂರ, ಸಮಾಜದಿಂದ ದೂರವಾಗುವ ಸಂದರ್ಭವೆಂದು ಹೇಳುತ್ತಾರೆ.
ಇಂತಹ ಸುದೀರ್ಘ ಸಮಾಲೋಚನೆ ಇನ್ನೂ ಜೀವಂತವಿದ್ದಾಗಲೆ ಲಕ್ಕಮ್ಮ ತನ್ನ ಸಮಯ ಪ್ರಜ್ಞೆ ಮೆರೆಯುವ ಪ್ರಸಂಗವನ್ನು ತೋರುತ್ತಾಳೆ:
ಕಾಯಕವು ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ.
ಭಾವ ಶುದ್ಧವಾಗಿ ಮಹಾ ಶರಣ ತಿಪ್ಪೆಯ ತಪ್ಪಲ ಅಕ್ಕಿಯ ತಂದು
ನಿಶ್ಚೈಸಿ ಮಾಡಬೇಕು ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ.
ಬೇಗ ಹೋಗು ಮಾರಯ್ಯ.
ಅನುಭವ ಮಂಟಪದಲ್ಲಿ ವೈಚಾರಿಕ ಚರ್ಚೆ ಗಂಭೀರವಾಗಿ ನಡೆದಾಗ ಲಕ್ಕಮ್ಮ, ತನ್ನ ಪತಿ ಮಾರಯ್ಯನವರಿಗೆ ಕಾಯಕದ ವೇಳೆಯ ಬಗ್ಗೆ ಜ್ಞಾಪಿಸುತ್ತಾಳೆ. ಇಂತಹ ವ್ಯರ್ಥ ಚರ್ಚೆ ಶ್ರಮಿಕರಿಗೆ ಸಲ್ಲದು. ಕಾಯಕ ಜೀವಿಗಳಾದ ನಾವು ಮೊದಲು ಕಾಯಕಕ್ಕೆ ಆದ್ಯತೆ ಕೊಡಬೇಕೆಂದು, ಕಾಯಕಕ್ಕೆ ಹೋಗೋಣ ನಡೆ ಎಂದು ಪತಿಯನ್ನು ಭಿನ್ನವಿಸುತ್ತಾಳೆ.
ಸಮತಾ ಭಾವದ ಹಿರಿಯ ಪ್ರಜ್ಞೆಯನ್ನು ಲಕ್ಕಮ್ಮ ತನ್ನ ವಚನಗಳಲ್ಲಿ ಮೆರೆದಿದ್ದಾಳೆ:
ಯಾವ ಬೀಜವು ಬೀಳುವಲ್ಲಿ ಮೊಳೆ ಮುಖ ಹಿಂಚು ಮುಂಚುಂಟೆ ?
ನೀ ಮರೆದಲ್ಲಿ ನಾನರಿದಲಿ ಬೇರೊಂದೊಡಲುಂಟೆ ?
ಮೂಲ ನಷ್ಟವಾದಲ್ಲಿ ಅಂಕುರ ನಿಂದಿತ್ತು.
ಕೂಟಕ್ಕೆ ಸತಿ ಪತಿ ಎಂಬ ನಾಮವಲ್ಲದೆ
ಅರಿವಿಂಗೆ ಬೇರೊಂದೊಡಲುಂಟೆ ?
ಬೇರೊಂದಡಿಯಿಡದಿರು,
ಮಾರಯ್ಯಪ್ರಿಯ ಅಮರೇಶ್ವರಲಿಂಗವನರಿಯಬಲ್ಲಡೆ.
ಭೂಮಿಯಲ್ಲಿ ಯಾವುದೇ ಬೀಜ, ಹಿಂದೆ ಮುಂದೆ ಹೇಗೇ ಬೀಳಲಿ, ಅದರ ಮೊಳಕೆ ಮೇಲೇ ಬರುವಂತೆ ಸತಿ ಪತಿಯ ಅರುವಿನ ಭಾವವು. ಗಂಡ ಮರೆದಲ್ಲಿ ಹೆಂಡತಿ ಅರಿದಲ್ಲಿ ಮತ್ತೆ ಬೇರೊಂದೊಡಲುಂಟೆ? ಎಂದು ಪ್ರಶ್ನಿಸಿ ಬೀಜದ ಅರಿವಿನ ಮೂಲ ನಷ್ಟವಾದಲ್ಲಿ ಮಾತ್ರ ಅಂಕುರವು ಮೊಳಕೆಯು ನಿಲ್ಲುತ್ತದೆ. ಕಾರಣ ಅರಿವಿನ ಮೂಲವು ಗಟ್ಟಿಯಾಗಿರಬೇಕು. ಕೇವಲ ದೈಹಿಕ ಸಂಬಂಧಗಳಲ್ಲಿ ಹೆಣ್ಣು ಗಂಡು ಎಂಬ ಭಿನ್ನ ಭಾವ ಇರುವುದಲ್ಲದೆ ಅರಿವಿಗೆ ಬೇರೆ ಬೇರೆ ಒಡಲುಂಟೇ ಎಂದು ಪ್ರಶ್ನಿಸಿ ಅಮರೇಶ್ವರಲಿಂಗದ ಸಮಷ್ಟಿ ಭಾವವ ಅರಿಯದೆ ಬೇರೊಂದಡಿಯಿಡದಿರು ಎಂದು ಸಲಹೆ ನೀಡುತ್ತಾಳೆ.
“ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ” ಎಂದು ಕೇಳುವ ದಿಟ್ಟತನ, ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರ, ಇದು ನಿಮ್ಮ ಮನವೊ, ಬಸವಣ್ಣನ ಅನುಮಾನದ ಚಿತ್ತವೋ? ಎಂದು ಪ್ರಶ್ನಿಸುವ ಎದೆಗಾರಿಕೆ, “ಕೂಟಕ್ಕೆ ಸತಿ ಪತಿ ಎಂಬ ನಾಮವಲ್ಲದೆ ಅರಿವಿಂಗೆ ಬೇರೊಂದೊಡಲುಂಟೆ?” ಎನ್ನುವಲ್ಲಿ ಸ್ತ್ರೀ ಸಮಾನತೆ, “ಆಶೆಯೆಂಬುದು ಅರಸಿಂಗಲ್ಲದೆ ಶಿವ ಭಕ್ತರಿಗುಂಟೆ ಅಯ್ಯಾ?” ಎನ್ನುವಲ್ಲಿನ ಸಾತ್ವಿಕ ಅರಿವು; “ಮಾಡಿ ನೀಡಿ ಹೋದೆನೆಂಬಾಗ ಕೈಲಾಸವೇನು ಕೈಕೂಲಿಯೆ?” ನಿರಪೇಕ್ಷ ನಿಷ್ಠೆ ಲಕ್ಕಮ್ಮಳ ಬುದ್ದಿವಂತಿಕೆ ವಿವೇಕತನ ತಾಳ್ಮೆ ಜಾಣ್ಮೆ ಆಧ್ಯಾತ್ಮಿಕ ಹಸಿವು ನಿಜಕ್ಕೂ ಶ್ಲಾಘನೀಯ.
ಬಡವರಾದರೂ ಸ್ವಾಭಿಮಾನಿಗಳಾಗಬೇಕೆಂಬ ಹಂಬಲ ಆಯ್ದಕ್ಕಿ ಲಕ್ಕಮ್ಮ ದಂಪತಿಗಳದ್ದು. ನಿತ್ಯ ಸತ್ಯ ಶುದ್ಧ ಕಾಯಕ ಮಾಡಿ ಸಂಗ್ರಹಿಸಿದ ದವಸ ಧಾನ್ಯದಿಂದ ಒಮ್ಮೆ ಲಕ್ಕಮ್ಮ ಮತ್ತು ಮಾರಯ್ಯ ಕಲ್ಯಾಣದ ಜಂಗಮ ಗಣ ಸಮೂಹಕ್ಕೆ ಪ್ರಸಾದದ ಬಿನ್ನಹ ನೀಡುತ್ತಾರೆ. ಅದನ್ನು ಸಿದ್ಧಪಡಿಸಿದ ಲಕ್ಕಮ್ಮ ತನ್ನ ಗಂಡನಿಗೆ ಕರೆದು ಹೀಗೆ ಹೇಳುತ್ತಾಳೆ.
ಬಸವಣ್ಣ ಚೆನ್ನ ಬಸವಣ್ಣ ಪ್ರಭುದೇವ ಮೊದಲಾದ
ನೇಮ ನಿತ್ಯ ಕೃತ್ಯ ಸಕಲ ಸಮೂಹ ನಿತ್ಯ ನೇಮವ
ಜಂಗಮ ಭಕ್ತರು ಗಣಂಗಳು ಮುಂತಾದ ಸಮೂಹ ಪದಕ್ಕೆ
ನೈವೇದ್ಯಕ್ಕೆ ವೇಳೆಯೆಂದು ಹೇಳಿ ಬಾರಯ್ಯ ,
ಅಮರೇಶ್ವರಲಿಂಗದ ಮನೆಯಲ್ಲಿ ಆದಿತೆಂದು.
ಶರಣ ಸಮೂಹವನ್ನು ಪ್ರಸಾದಕ್ಕೆ ಆಮಂತ್ರಿಸುತ್ತಾರೆ ಕಾಯಕ ದಂಪತಿಗಳು. ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ ಮೊದಲಾದವರಿಗೆ ತಮ್ಮ ಗುಡಿಸಲಿನಲ್ಲಿ ಪ್ರಸಾದಕ್ಕೆ ಕರೆದು ಬರಲು ಲಕ್ಕಮ್ಮ ಗಂಡನಿಗೆ ಹೇಳುವದಲ್ಲದೆ ಪ್ರಸಾದದ ಸ್ಥಳವು ಅಮರೇಶ್ವರಲಿಂಗದ ಮನೆಯಲ್ಲಿ ಆದಿತೆಂದು ಹೇಳುತ್ತಾಳೆ. ಇಂತಹ ಪ್ರಸಂಗ ಕಲ್ಯಾಣದಲ್ಲಿ ನಡೆದಿದೆಯೆಂದರೆ ಅದಕ್ಕೆ ಕಾರಣ ಬಸವಣ್ಣನವರು ಮಹಿಳೆಯರಿಗೆ ಬಡವರಿಗೆ ದಲಿತರಿಗೆ ಕೊಟ್ಟ ಮುಕ್ತ ಅವಕಾಶ ಸಮಾನತೆ ಮತ್ತು ವೃತ್ತಿ ಗೌರವ.
ದಂಪತಿಗಳ ಸಮಾಧಿ:
ಕಲ್ಯಾಣ ಕ್ರಾಂತಿಯ ನಂತರ ಶರಣರು ಸೋಲಾಪುರ ಜಮಖಂಡಿ ಅಂಕಲಗಿ ಹಿರೇಬಾಗೇವಾಡಿ ಕಾದ್ರೊಳ್ಳಿ ಹುಣಸಿಕಟ್ಟಿ ಮುರುಗೋಡ ಗೊಡಚಿ ಕಟಕೋಳ ತೊರಗಲ್ಲು ಮುನವಳ್ಳಿ ಸವದತ್ತಿ ಧಾರವಾಡ ಮಾರ್ಗವಾಗಿ ಹೊರಡುತ್ತಾರೆ. ಇಲ್ಲಿಂದ ಒಂದು ತಂಡ ಚೆನ್ನಬಸವಣ್ಣನವರ ನೇತೃತ್ವದಲ್ಲಿ ಜಗಳಬೆಟ್ಟ ಲಿಂಗನಮಠ ಮಾರ್ಗವಾಗಿ ಉಳವಿಗೆ ಹೋದರೆ ಇನ್ನೊಂದು ತಂಡವು ಅಕ್ಕನಾಗಮ್ಮ ನುಲಿಯ ಚೆಂದಯ್ಯ ಅಂಬಿಗರ ಚೌಡಯ್ಯ ಮುಂತಾದವರ ನೇತೃತ್ವದಲ್ಲಿ ನುಲಿಗನೂರು ಎಣ್ಣೆಹೊಳೆ ಶಿಕಾರಿಪುರ ಬನವಾಸಿ ಕದಂಬ ರಾಜರ ಆಶ್ರಯ ಪಡೆದರು.
ಕಾದ್ರೋಳಿಯ ಯುದ್ಧ ನಂತರ ಮಾರಯ್ಯ ಮತ್ತು ಲಕ್ಕಮ್ಮ, ಅಕ್ಕ ನಾಗಮ್ಮನವರನ್ನು ಸೇರಿಕೊಂಡರು. ಆಯದ ಕಾಯಕ ಮಾಡುವಾಗ ಕಲ್ಯಾಣದಲ್ಲಿ ದಾಸೋಹಕ್ಕೆ ಬಂದ ಅಕ್ಕಿ ಕಾಳು ಮೂಟೆಗಳನ್ನು ಹೊತ್ತು ಸಾಗುತ್ತಿದ್ದ ದಂಪತಿಗಳು ಈಗ ವಚನಗಳ ತಾಡೋಲೆಗಳ ಜೋಳಿಗೆ ಮೂಟೆಗಳನ್ನು ಹೊತ್ತು ನಡೆದರು. ಹಿರೇಮಠದವರ ಜಂಗಮವರ್ಗದಲ್ಲಿ ಈಗಲೂ ಹೆಣ್ಣು ಜೋಳಿಗೆ ಮತ್ತು ಗಂಡು ಜೋಳಿಗೆಯವರು ಎಂದು ಗುರುತಿಸಿಕೊಳ್ಳುತ್ತಾರೆ. ಹೆಣ್ಣು ಜೋಳಿಗೆಯವರು ಎಂದರೆ ಅಕ್ಕನಾಗಮ್ಮ ಮತ್ತು ಲಕ್ಕಮ್ಮ ಸತ್ಯಕ್ಕನವರಿಂದ ವಚನ ತಾಡೋಲೆಗಳನ್ನು ಪಡೆದು, ಜಂಗಮ ದೀಕ್ಷೆ ಪಡೆದವರು ಎಂದರ್ಥ. ಗಂಡು ಜೋಳಿಗೆ ಎಂದರ�� ನುಲಿಯ ಚೆಂದಯ್ಯ, ಅಂಬಿಗರ ಚೌಡಯ್ಯ ಮತ್ತು ಆಯ್ದಕ್ಕಿ ಮಾರಯ್ಯ ಇವರಿಂದ ವಚನಗಳ ಕಟ್ಟನ್ನು ಇಳಿಸಿಕೊಂಡು, ಬನವಾಸಿಯ ಜಂಗಮರು ಧರ್ಮ ಪ್ರಚಾರಕ್ಕೆ ನಿಂತವರು ಎಂದು ತಿಳಿದುಬರುತ್ತದೆ. ಅಷ್ಟೇ ಅಲ್ಲ, ಹಿರೇಮಠದ ಜಂಗಮರಲ್ಲಿ ಮದುವೆ ಮಹೂರ್ತ ಕಲ್ಯಾಣ ಕಾರ್ಯಕ್ರಮದಲ್ಲಿ ಹೆಣ್ಣುಜೋಳಿಗೆ ಜಂಗಮರನ್ನು ಇಂದಿಗೂ ಹಳ್ಳಿಯಲ್ಲಿ ಆಹ್ವಾನಿಸುತ್ತಾರೆ. ಕಾರಣ ಹೆಣ್ಣು ಜೋಳಿಗೆಯ ಜಂಗಮರು ಶ್ರೇಷ್ಠರು ಎಂದರ್ಥ.
ನನ್ನ ಈ ತರ್ಕಕ್ಕೆ ಇನ್ನೊಂದು ಕಾರಣವೆಂದರೆ ರಕ್ತಸಿಕ್ತ ಕ್ರಾಂತಿಯಲ್ಲಿ ನಿರಾಶ್ರಿತರಾದವರಿಗೆ ಆಶ್ರಯ ನೀಡಿದವರು ಜೈನರು ಮತ್ತು ಕದಂಬರು. ಕದಂಬರು ಹಾನಗಲ್ಲು ತಮ್ಮ ಕ್ಷೇತ್ರವಾಗಿಟ್ಟುಕೊಂಡು ಬನವಾಸಿ ಮಧುಕೇಶ್ವರ ಶಿವಮೊಗ್ಗ ಶಿಕಾರಿಪುರ ಮುಂತಾದ ಕಡೆಗಳಲ್ಲಿ ರಾಜ್ಯ ಭಾರ ಮಾಡುತ್ತಿದ್ದರು.
ಚಾಲುಕ್ಯರ ಮುಮ್ಮಡಿ ತೈಲಪನನ್ನು ಪದಚ್ಯುತಗೊಳಿಸಿದ ಪೆರ್ಮಾಡಿ ಕಳಚೂರಿ ವಂಶದವನು. ಅಲ್ಪಾವಧಿಯ ಆಡಳಿತಕ್ಕೆ ಸೀಮಿತನಾದನು. ಪೆರ್ಮಾಡಿ ತನ್ನ ಮಗ ಬಿಜ್ಜಳನನ್ನು ಪಟ್ಟಕ್ಕೆ ಬರಲು ಕಾರಣವಾಗುತ್ತಾನೆ. ಕಲ್ಯಾಣ ಚಾಲುಕ್ಯರು ಹಾಗೂ ಕದಂಬ ವಂಶದವರು ದಾಯಾದಿಗಳು ತಾಯಿ ಕಡೆ ಸಂಬಂಧಿಕರು. ಕದಂಬರರಿಗೂ ಕಳಚೂರಿಗಳಿಗೂ ನಿರಂತರ ಕದನವಿತ್ತು. ಹೀಗಾಗಿ ಕಲ್ಯಾಣದ ಶರಣರು ಕದಂಬರ ಆಶ್ರಯ ಪಡೆದು ಚಂದವಳ್ಳಿ, ಹಲಸಿ, ಬನವಾಸಿ, ಹಾನಗಲ್ಲು, ನುಲಿಗನೂರು, ಶಿವಮೊಗ್ಗದಲ್ಲಿ ಆಶ್ರಯ ಪಡೆದರು.
ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ ತಮ್ಮ ಕೊನೆಯ ಕಾಲವನ್ನು ವಚನ ಸಂರಕ್ಷಣೆಗಾಗಿ ಬನವಾಸಿಯ ಮಧುಕೇಶ್ವರದಲ್ಲಿ ಕಳೆಯುತ್ತಾರೆ. ಇನ್ನೊಂದು ಮುಖ್ಯ ಕಾರಣವೆಂದರೆ ಬನವಾಸಿಯ ಮಧುಕೇಶ್ವರದಲ್ಲಿನ ಶಿವೋತ್ಸವ ಮಂಟಪದಲ್ಲಿ ಆಯ್ದಕ್ಕಿ ಮಾರಯ್ಯನವರ ವಿಗ್ರಹವಿದೆ.
ಬನವಾಸಿಯಲ್ಲಿ ಮಧುಕೇಶ್ವರ ಶಿವೋತ್ಸವ ಮಂಟಪದ ಅಕ್ಕಪಕ್ಕದಲ್ಲಿ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ ಐಕ್ಯವಾಗಿದ್ದಾರೆ.
ಕದಂಬರ, ಕಲ್ಯಾಣ ಚಾಲುಕ್ಯರ, ಹೊಯ್ಸಳರ ಮತ್ತು ಕಲಚೂರಿಗಳ ಆಂತರಿಕ ಕದನ ಸಂಬಂಧಗಳು ಜನಪದದಲ್ಲಿನ ದೇಸಿ ಪದಗಳು ಹಳ್ಳಿಯಲ್ಲಿ ಬರುವ ಲಿಂಗಾಯತ ಆಚರಣೆಗಳು ನಮಗೆ ಕಲ್ಯಾಣ ಕ್ರಾಂತಿಯ ನಂತರದ ಶರಣ ಮಾರ್ಗವನ್ನು, ವಚನ ಚಳುವಳಿಯನ್ನು ಸ್ಪಷ್ಟವಾಗಿ ಕಾಣಲು ಸಾಧ್ಯವಾಗುತ್ತದೆ. ಶರಣರ ಸ್ಮಾರಕಗಳು, ಸಮಾಧಿಗಳು ಶಿವಮೊಗ್ಗ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆ ಅದರಲ್ಲೂ ಮುರುಗೋಡದಲ್ಲಿ ಹೆಚ್ಚಾಗಿ ಕಾಣುತ್ತವೆ.
Comments 1
ಪುರಾಣಿ ಕಾಟ್ರಹಳ್ಳಿ
Sep 1, 2024ವೀರಶೈವ ಮತ್ತು ಲಿಂಗಾಯತ ಮತಾಚರಣೆ ಗಳು ಒಂದೇ ಆಗಿವೆ.