Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಭೃತ್ಯಾಚಾರ
Share:
Articles June 5, 2021 ಡಾ. ಪಂಚಾಕ್ಷರಿ ಹಳೇಬೀಡು

ಭೃತ್ಯಾಚಾರ

ಅಂಗಕ್ಕೆ ಆಚಾರವೇ ಭೂಷಣ. ಸತ್ಯದಿಂದ ಕೂಡಿದ ಆಚಾರಸಹಿತ ಅಂಗವೇ ಲಿಂಗ, ಅಂಗವು ಲಿಂಗವಾಗುವುದೇ ಲಿಂಗೈಕ್ಯ, ಅದುವೇ ಮಾನವ ಜೀವನದ ಗುರಿ. ಅಂಗವು ಲಿಂಗವಾಗುವುದೆಂದರೆ, ಬಸವಾದಿ ಶರಣರು ಐದು ಪ್ರಮುಖ ಆಚಾರಗಳನ್ನು ಮಾನವನು ತನ್ನ ಅಂಗದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ. ಆ ಐದು ಆಚಾರಗಳೆಂದರೆ ಲಿಂಗಾಚಾರ ಸದಾಚಾರ ಶಿವಚಾರ ಗಣಾಚಾರ ಮತ್ತು ಭೃತ್ಯಾಚಾರ. ಈ ಐದೂ ಆಚಾರಗಳನ್ನು ಕುರಿತು ಚಿನ್ಮಯಜ್ಞಾನಿ ಚನ್ನಬಸವಣ್ಣನವರು ಬಹಳ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಒಂದೊಂದು ವಾಕ್ಯದಲ್ಲಿ ಒಂದೊಂದು ಆಚಾರವನ್ನು ವಿವರಿಸಿದ್ದಾರೆ.
೧) ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ.
೨) ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ ಸತ್ಯಶುದ್ಧನಾಗಿಹುದೆ ಸದಾಚಾರ.
೩) ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೆ ಶಿವಚಾರ.
೪) ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ.
೫) ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ.

ಶರಣರ ಸಿದ್ಧಾಂತದಲ್ಲಿ, ಸಾಧಕನು ಸಾಧನೆಯ ಶಿಖರವನ್ನೇರಬೇಕಾದರೆ ಮೇಲಿನ ಐದೂ ಆಚಾರಗಳು ಅಳವಟ್ಟು ಸರ್ವಾಚಾರ ಸಂಪನ್ನನಾಗಬೇಕು. ಸಾಧನಾ ಪಥದಲ್ಲಿ ಶರಣರು ಪ್ರಮುಖವಾಗಿ ಆರು ನೆಲೆಗಳನ್ನು ಗುರ್ತಿಸಿದ್ದಾರೆ, ಅವೇ ಷಟಸ್ಥಲಗಳು, ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಮತ್ತು ಐಕ್ಯ. ಇವುಗಳಲ್ಲಿ ಆರಂಭಿಕ ಹಂತವೇ ಭಕ್ತಸ್ಥಲ. ಭಕ್ತಸ್ಥಲದಲ್ಲಿ ಭಕ್ತಿ ಧೃಢವಾಗಿ ಶ್ರದ್ಧೆಯಿಂದ ಅಳವಡಬೇಕು ನಂತರವೇ ಮುಂದಿನ ಸಾಧನೆ. ಭಕ್ತಿ ಅಳವಡಿಕೆಯಲ್ಲೇ ಲೋಪವಾದರೆ ಮುಂದಿನ ಮಾರ್ಗ ಸಾಧ್ಯವೇ ಇಲ್ಲ. ಆರು ಸ್ಥಲಗಳ ಸೌಧವನ್ನೇರಿ ಅದರ ತುತ್ತ ತುದಿಯಲ್ಲಿ ನಾವು ವಿರಮಿಸಬೇಕಾದರೆ ಮೊದಲು ಸೌಧದ ಅಡಿಪಾಯವನ್ನು ಸರಿಯಾಗಿ ಬಲವಾಗಿ ಸಧೃಢವಾಗಿ ನಿರ್ಮಿಸಬೇಕು. ನಂತರದ ಸ್ಥಲಗಳು ಸಾಧನಾ ಪಥದಲ್ಲಿ ತಮ್ಮಿಂದ ತಾವೇ ನಿರ್ಮಾಣವಾಗುತ್ತವೆ. ಬಹುತೇಕ ಸಾಧಕರು ಎಡವುದು ಮೊದಲ ಹಂತದಲ್ಲಿಯೇ, ಹಾಗೂ ಜೀವನದ ಕೊನೆಯವರೆಗೂ ಮೊದಲ ಹಂತವನ್ನು ದಾಟುವುದೇ ಇಲ್ಲ. ಕಾರಣ ನಮ್ಮಲ್ಲಿ ಅತೀ ಸೂಕ್ಷ್ಮರೂಪದಲ್ಲಿ ಅಡಗಿರುವ ಅಹಂಕಾರ. ಈ ಸೂಕ್ಷ್ಮಾತಿಸೂಕ್ಷ್ಮ ಅಹಂಕಾರವು ನಮ್ಮನ್ನಗಲದ ಹೊರತು ಉಳಿದ ಆಚಾರಗಳು ನಮ್ಮ ಬಳಿ ಸುಳಿಯುವುದಿಲ್ಲ. ಹಾಗಂತ ಈ ಎಲ್ಲಾ ಆಚಾರಗಳೂ ಸಂಪೂರ್ಣ ಒಂದರಿಂದ ಒಂದು ಭಿನ್ನವಾಗಿವೆ ಎಂದೇನೂ ಇಲ್ಲ, ಹಲವು ಬಾರಿ ಈ ಆಚಾರಗಳು ಒಂದರೊಳಗೊಂದು ಅವಿನಾಭಾವದಿಂದ ಬೆಸೆದುಕೊಂಡಿವೆ. ಈ ಎಲ್ಲಾ ಆಚಾರಗಳ ಅಡಿಪಾಯವೇ ಭೃತ್ಯಾಚಾರ. ಸಾಧಕನಲ್ಲಿ ಭೃತ್ಯಾಚಾರ ನೆಲೆಗೊಳ್ಳದೆ ಮುಂದಿನ ಆಚಾರಗಳು ನೆಲೆಗೊಳ್ಳುವುದು ಸಾಧ್ಯವೇ ಇಲ್ಲ. ಅಲ್ಲಿಗೆ ಆತನ ಸಾಧನೆ ಅಷ್ಟಕ್ಕೇ ಮೊಟಕು! ಅನವರತ ಲಿಂಗಪೂಜೆ ಜಂಗಮಸೇವೆ ಮಾಡಿದರೂ ಫಲ ಮಾತ್ರ ಶೂನ್ಯವೇ ಆಗಿರುತ್ತದೆ ಏಕೆಂದರೆ ಆತನಲ್ಲಿ ಭೃತ್ಯಾಚಾರ ಅಳವಟ್ಟಿರುವುದಿಲ್ಲ.

ಹಾಗಾದರೆ ಎಲ್ಲಾ ಆಚಾರಗಳ ಮೂಲವಾದ ಭೃತ್ಯಾಚಾರವೆಂದರೇನು?
ಚನ್ನಬಸವಣ್ಣನವರ ಪ್ರಕಾರ “ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ” ಮನದಲ್ಲಿ ಕಿಂಕರತ್ವ ಭಾವ (ಸೇವಾ ಮನೋಭಾವ) ಮೂಡಿ ಆ ರೀತಿ ವರ್ತಿಸುವುದೇ ಭೃತ್ಯಾಚಾರ, ಈ ಮಹಾಮನೆಯಲ್ಲಿ ಅರ್ಥಾತ್ ಈ ಜಗತ್ತಿನಲ್ಲಿ ತಾನೇ ಕಿರಿಯ ಉಳಿದವರೆಲ್ಲಾ ತನಗಿಂತ ಹಿರಿಯರು ಎಂದು ಅರಿತು ಆಚರಿಸಬೇಕು. ವಿದ್ಯೆ, ಅಂತಸ್ತು, ಅಧಿಕಾರ, ಜ್ಞಾನ, ರೂಪ ಹೀಗೆ ವಿಷಯ ಯಾವುದೇ ಇರಲಿ, ಆ ವಿಷಯದಲ್ಲಿ ತಾನು ಎಷ್ಟೇ ಪಾರಂಗತನಾಗಿರಲಿ ಕಿಂಕರನಾಗಿ ವರ್ತಿಸುವುದು ಬಹಳ ಮುಖ್ಯ. ಇದಕ್ಕೆ ಬಸವಣ್ಣನವರೇ ನಮಗೆ ಅತ್ಯುತ್ತಮ ನಿದರ್ಶನವಾಗುತ್ತಾರೆ. “ಎನ್ನಿಂದ ಕಿರಿಯರಿಲ್ಲ, ಶಿವಭಕ್ತರಿಂದ ಹಿರಿಯರಿಲ್ಲ. ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ. ಕೂಡಲಸಂಗಮದೇವಾ, ಎನಗಿದೇ ದಿಬ್ಯ” ಎಂಬ ವಚನವು ಬಸವಣ್ಣನವರಲ್ಲಿ ಅಳವಟ್ಟ ಕಿಂಕರತ್ವವನ್ನು ಸೂಚಿಸುತ್ತದೆ.
ಅವರ ಮತ್ತೊಂದು ವಚನವೂ ಅವರ ಕಿಂಕರತ್ವಕ್ಕೆ ಕನ್ನಡಿ ಹಿಡಿಯುವುದು. “ಮೇಲಾಗಲೊಲ್ಲೆನು ಕೀಳಾಗಲಲ್ಲದೆ, ಕೀಳಿಂಗಲ್ಲದೆ ಹಯನು ಕರೆವುದೆ? ಮೇಲಾಗಿ ನರಕದಲೋಲಾಡಲಾರೆನು. ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು, ಮಹಾದಾನಿ ಕೂಡಲಸಂಗಮದೇವಾ.” ಆಕಳ ಹಾಲು ಕರೆಯಲು ಆಕಳ ಕಾಲ ಬಳಿ ಕುಳಿತುಕೊಳ್ಳಬೇಕೇ ಹೊರತು ಆಕಳ ಬೆನ್ನ ಮೇಲೆ ಕುಳಿತು ಹಾಲು ಕರೆಯಲು ಬಾರದು. ಈ ಜಗದ ತುಂಬೆಲ್ಲಾ ಮತ್ತು ಈ ಸೃಷ್ಟಿಯ ಸಚರಾಚರದಲ್ಲೂ ಓತಪ್ರೋತವಾಗಿ ದೇವ ಕಾರುಣ್ಯವಿದೆ. ಅದನ್ನರಿತು ಬಾಳಲು ನಾವು ಜಗದ ಸಕಲ ಜೀವಿಗಳೊಂದಿಗೆ ಸದಾಕಾಲ ವಿನಮ್ರವಾಗಿ ವರ್ತಿಸಬೇಕು. ಆಗ ಮಾತ್ರ ನಮ್ಮಲ್ಲಿ ಭೃತ್ಯಾಚಾರ ಅಳವಡಲು ಸಾಧ್ಯ. ಬಸವಣ್ಣನವರ ಮತ್ತೊಂದು ಪ್ರಸಂಗ ಈ ವಚನದಲ್ಲಿ ಅಭಿವ್ಯಕ್ತವಾಗಿದೆ- “ಬಸವ ಬಾರಯ್ಯ ಮರ್ತ್ಯಲೋಕದೊಳಗೆ ಭಕ್ತರುಂಟೆ ಹೇಳಯ್ಯಾ, ಮತ್ತಾರೂ ಇಲ್ಲಯ್ಯಾ, ಮತ್ತಾರೂ ಇಲ್ಲಯ್ಯಾ, ಮತ್ತಾರೂ ಇಲ್ಲಯ್ಯಾ. ನಾನೊಬ್ಬನೆ ಭಕ್ತನು, ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ ಜಂಗಮ, ಲಿಂಗ ನೀನೇ ಅಯ್ಯಾ ಕೂಡಲಸಂಗಮದೇವಾ.” ಈ ಜಗತ್ತಿನಲ್ಲಿ ಭಕ್ತರೆಂದು ಕರೆಸಿಕೊಳ್ಳಲು ಯೋಗ್ಯರಾದವರು ಯಾರು ಎನಲು, ಅದಕ್ಕೆ ಬಸವಣ್ಣನವರು, “ನಾನೊಬ್ಬನೇ ಭಕ್ತ, ಇನ್ನುಳಿದ ಸಕಲರೂ ಜಂಗಮ, ಲಿಂಗ ಸ್ವರೂಪವೇ ಆಗಿದ್ದಾರೆ ಎಂದು ಹೇಳುವಲ್ಲಿ ಅವರ ಕಿಂಕರಭಾವ ಎಷ್ಟರಮಟ್ಟಿನದು ಎಂದು ನಮ್ಮಂಥವರಿಂದ ಅರಿಯಲು ಅಸಾಧ್ಯ! (ಏಕೆಂದರೆ ಇಂಥಾ ಕೆಲವು ವಚನಗಳನ್ನಿಟ್ಟುಕೊಂಡು ಕೆಲವು ಮೂಢ ಮತಾಂಧರು ಬಸವಣ್ಣನವರು ತಮ್ಮ ವಚದಲ್ಲಿ ತಾವೇ ಹೇಳಿಕೊಂಡಿದ್ದಾರೆ ತಾವು ಭಕ್ತ ಬೇರೆಯವರು ಜಂಗಮ ಲಿಂಗ ಎಂದು ಹಾಗಾಗಿ ಬಸವಣ್ಣ ಭಕ್ತ ನಾವು ಅವರ ಗುರುಗಳು ಎಂದು ಅಸಹ್ಯವಾಗಿ ಹೇಳುವುದನ್ನು ಕೇಳಿದ್ದೇವೆ, ನೋಡಿದ್ದೇವೆ) ಇದು ಅವರ ಭೃತ್ಯಾಚಾರದ ನಡೆಗೆ ಹಿಡಿದ ಕನ್ನಡಿ, ಅವರ ಪ್ರತಿಬಿಂಬ ಹಾಗೂ ನಮ್ಮ ಅಜ್ಞಾನಕ್ಕೆ ಹಿಡಿದ ಕನ್ನಡಿ.

ಶರಣ ಹಡಪದ ಅಪ್ಪಣ್ಣನವರ ಭೃತ್ಯಾಚಾರದ ಈ ವಚನವು ಸತಿ-ಪತಿ, ಪಿತ-ಸುತ, ಗುರು-ಶಿಷ್ಯ ಸಂಬಂಧಗಳ ಕುರಿತು ಬೆಳಕು ಚೆಲ್ಲುತ್ತದೆ “ಪ್ರಥಮದಲ್ಲಿ ಭಕ್ತಸ್ಥಲವೆಂದು ನುಡಿವಿರಿ. ಆ ಭಕ್ತಸ್ಥಲವೆಲ್ಲರಿಗೆಂತಾಯಿತ್ತು ಹೇಳಿರಣ್ಣಾ! ಸತಿಪತಿಸುತರು ಭೃತ್ಯಾಚಾರದಲ್ಲಿ ಭಕ್ತಿಯ ಮಾಡಿಹೆನೆಂದಣ್ಣಗಳು ಕೇಳಿರೊ. ಪತಿಯ ಮಾತ ವಿೂರುವಾಕೆ ಸತಿಯಲ್ಲ. ಪಿತನ ಮಾತ ವಿೂರುವಾತ ಸುತನಲ್ಲ. ಅತಿ ಕೃಪೆಯಿಂದ ದೀಕ್ಷೆ, ಶಿಕ್ಷೆಯನಿತ್ತ ಗುರುವಿನಾಜ್ಞೆಯ ವಿೂರುವಾತ ಶಿಷ್ಯನಲ್ಲ. ಇಂತಿವು ಭಕ್ತಸ್ಥಲಕ್ಕೆ ಸಲ್ಲವು ಕೇಳಿರಣ್ಣಾ! ಆ ಸತಿಗೆ ಪತಿಯೇ ಗುರುವಾಗಿ, ಆ ಸುತಗೆ ಪಿತನೆ ಗುರುವಾಗಿ, ಆ ಪಿತಗೆ ಅತಿಕೃಪೆಯಿಂದ ದೀಕ್ಷೆ ಶಿಕ್ಷೆಯನಿತ್ತ ಗುರುವೆ ಗುರುವಾಗಿ, ಏಕಪದವಿಲ್ಲಾಗ ಭಕ್ತಸ್ಥಲವ ಮಾಡಿಹೆನೆಂಬಣ್ಣಗಳಿರಾ ಕೇಳಿ. ಈ ಒಂದು ಸ್ಥಲವುಳ್ಳವರಿಗೆ ಆರುಸ್ಥಲವು ಅಡಗಿತ್ತು. ಇಂತಿವು ಏಕಸ್ಥಲವಾದ ಮೇಲೆ ಮುಂದೆಂತೆಂದಡೆ, ಆ ಪತಿಗೆ ಸತಿಯೇ ಗುರುವಾಗಿ, ಆ ಪಿತಗೆ ಸುತನೇ ಗುರುವಾಗಿ, ಅತಿಕೃಪೆಯಿಂದ ದೀಕ್ಷೆ ಶಿಕ್ಷೆಯನ್ನಿತ್ತ ಗುರುವೇ ಶಿಷ್ಯನಾಗಿ, ಇಂತಿದೀಗ ನಿರ್ಣಯಸ್ಥಲವು. ಇದನರಿಯದೆ, ಅವಳು ಸತಿ, ತಾ ಪತಿ ಎಂಬ ಹಮ್ಮಿಂದವೇ ಅವರು ಸುತರು, ತಾ ಪಿತನೆಂಬ ಹಮ್ಮಿಂದವೇ ಅವರು ಶಿಷ್ಯರು, ತಾ ಗುರುವೆಂಬ ಹಮ್ಮಿಂದವೇ ಇದು ಲಿಂಗಪಥಕ್ಕೆ ಸಲ್ಲದು, ಹಿಡಿದ ವ್ರತಕ್ಕೆ ನಿಲ್ಲದು ಇದ ಮುಂದೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.”
ಸತಿ ಪತಿಗೆ ವಿಧೇಯಳಾಗಿ, ಪತಿ ಸತಿಗೆ ವಿಧೇಯನಾಗಿ, ಮಗ ತಂದೆಗೆ ವಿಧೇಯನಾಗಿ, ತಂದೆ ಮಗನಿಗೆ ವಿಧೇಯನಾಗಿ, ಶಿಷ್ಯ ಗುರುವಿಗೆ ವಿಧೇಯನಾಗಿ, ಗುರುವು ಶಿಷ್ಯನಿಗೆ ವಿಧೇಯನಾಗಿ ಆಚರಿಸುವುದು ಭೃತ್ಯಾಚಾರದ ಲಕ್ಷಣ ಎಂದು ಅಪ್ಪಣ್ಣ ಶರಣರು ತಿಳಿಸುತ್ತಾರೆ. ಶರಣಧರ್ಮದಲ್ಲಿ ಯಾವುದೇ ತರಹದ ಮೇಲು ಕೀಳುಗಳಿಗೆ ಅವಕಾಶವಿಲ್ಲ. ಸರ್ವ ಸಮಾನತೆಯ ಧರ್ಮ ಶರಣಧರ್ಮ. ಶರಣ ಎಂಬ ಪದದಲ್ಲಿಯೇ ಶರಣಾಗುವ ಗುಣವನ್ನು ಸೂಚಿಸಲಾಗಿದೆ. ಪತಿ, ಗುರು, ತಂದೆ, ಮಾತ್ರ ಶ್ರೇಷ್ಠ ಸತಿ, ಶಿಷ್ಯ, ಮಗ ಕನಿಷ್ಠ ಎಂಬ ಭಾವವನ್ನು ಇಲ್ಲಿ ಸಂಪೂರ್ಣವಾಗಿ ಬೇರು ಸಹಿತ ಕಿತ್ತೆಸೆಯಲಾಗಿದೆ.
ಅಲ್ಲಮಪ್ರಭುದೇವರು- “ಲಿಂಗ ಜಂಗಮವ ಪೂಜಿಸಿ ಭಕ್ತನಾದೆನೆಂದಡೆ ಸದಾಚಾರವಿರಬೇಕು ನೋಡಾ. ಆ ಸದಾಚಾರಕ್ಕೆ ಭೃತ್ಯಾಚಾರವೆ ಮೊದಲು ನೋಡಾ. ವಿಶ್ವಾಸವುಳ್ಳ ಭಕ್ತಿಗೆ ಹೊರೆಯಿಲ್ಲ! ಅಹಂಕಾರವೆಂಬ ಅಲಗ ಹಿಡಿದು ಮಾಡುವ ಭಕ್ತಿ ತನ್ನನೆ ಇರಿವುದು ಗುಹೇಶ್ವರನೆಂಬ ಹಗೆಯ ಗೆಲುವಡೆ ಅರಿವೆಂಬ ಅಲಗ ಅವಧಾನ ತಪ್ಪದೆ ಹಿಡಿಯಬೇಕು ನೋಡಾ ಸಂಗನಬಸವಣ್ಣಾ” ಎಂಬ ವಚನದಲ್ಲಿ ಸದಾಚಾರ ನಮ್ಮಲ್ಲಿ ನೆಲೆಗೊಳ್ಳಲು ಪೀಠಿಕೆಯಾಗಿ ಭೃತ್ಯಾಚಾರವಿರಬೇಕು. ಅಂದರೆ ಭೃತ್ಯಾಚಾರವಳವಡದೆ ಉಳಿದ ಯಾವ ಆಚಾರಗಳೂ ನಮ್ಮಲ್ಲಿ ಬೇರು ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಗುರು ಬಸವಣ್ಣನವರು: “ಚೆನ್ನಬಸವಣ್ಣ ಎನ್ನನಾಗುಮಾಡಿ ಉಳುಹಿದನಾಗಿ ಇನ್ನೆನಗೆ ಭವವಿಲ್ಲದೆ, ಬಂಧನವಿಲ್ಲದೆ, ಭಕ್ತಿ ಮಾಟಕೂಟದ ಗೊತ್ತಿನಲ್ಲಿರ್ದು ನಾನು ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕುವೆನು.”
“ಬಸುರೆ ಬಾಯಾಗಿ, ಬಾಯಿ ಬಸುರಾಗಿಪ್ಪುದ ತೊಡೆದ, ಕಣ್ಣೆ ತಲೆಯಾಗಿ, ತಲೆಯೆ ಕಣ್ಣಾಗಿರಿಸಿದ, ಕಾಲೆ ಕೈಯಾಗಿ, ಕೈಯೆ ಕಾಲಾಗಿ ನಡೆಸಿದ, ನೆಳಲನುಟ್ಟು ಸೀರೆಯನೆನಗೆ ಉಡುಗೊರೆಯ ಕೊಟ್ಟನು, ಮಥನವಿಲ್ಲದ ಸಂಗ ಸುಖವನೆನಗೆ ತೋರಿದನು. ಕೂಡಲಸಂಗಮದೇವಾ, ಪ್ರಭುವಿನ ಶ್ರೀಪಾದಕ್ಕೆ ಶರಣೆನುತ್ತಿರ್ದೆನು.”
“ಅಯ್ಯಾ, ನಾನು ದಾಸೋಹವ ಮಾಡುವೆನಲ್ಲದೆ, ಸಮಯವನರಿಯೆ, ಅಯ್ಯಾ, ನಾನು ಭಕ್ತಿಯ ಮಾಡುವೆನಲ್ಲದೆ, ಭಾವವನರಿಯೆ. ಸ್ಥಳಕುಳವ ವಿಚಾರಿಸಿದಡೆ, ಎನ್ನಲ್ಲಿ ಏನೂ ಹುರುಳಿಲ್ಲ, ನಿಮ್ಮ ಶರಣರ ಸೋಂಕಿನಲ್ಲಿ ಶುದ್ಧನಾದೆನು. ಕೂಡಲಸಂಗಮದೇವರು ಸಾಕ್ಷಿಯಾಗಿ, ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು.”
ಗುರು ಬಸವಣ್ಣನವರು ತಾವೇ ಗುರುವಾದರೂ ಪ್ರಭುದೇವರ, ಚನ್ನಬಸವಣ್ಣನವರ, ಮಾಚಿದೇವರ ಶ್ರೀಪಾದಕ್ಕೆ ನಮೋನಮೋ ಎನ್ನುವ ಮೂಲಕ ಭೃತ್ಯಾಚಾರಿಯಾಗಿ ನಿಂತು ಉಳಿದ ಶರಣರಿಗೆಲ್ಲಾ ಮಾದರಿಯಾಗಿ ನಿಲ್ಲುತ್ತಾರೆ. ಇದು ನಾಯಕನಿಗಿರಬೇಕಾದ ಅವಶ್ಯಗುಣ, ಹಾಗಾಗಿಯೇ ಬಸವಣ್ಣನವರು ಅಸಾಧ್ಯವನ್ನು ಸಾಧ್ಯವಾಗಿಸಿದ್ದು. ಇದೇ ಪಥದಗುಂಟ ಸಾಗಿದ ಇನ್ನಿತರ ಶರಣರೂ ಕೂಡ ಗುರುವಿನಂತೆ ಭೃತ್ಯಾಚಾರವನ್ನು ಮೆರೆದಿರುವುದನ್ನು ಅವರ ವಚನಗಳಲ್ಲಿ ಕಾಣಬಹುದು, ಅಂಥಾ ಕೆಲವು ಆಯ್ದ ವಚನಗಳನ್ನು ಇಲ್ಲಿ ಪ್ರಸ್ತುತಪಡಿಸುವ ಪ್ರಯತ್ನ ಮಾಡಿದ್ದೇನೆ. ಶರಣರು ಒಬ್ಬರಿಗಿಂತೊಬ್ಬರು ಮಹಾ ಜ್ಞಾನಿಗಳು, ಅವರು ಒಬ್ಬರಿಗೊಬ್ಬರು ನಿರಹಂಕಾರದಿಂದ ವಂದಿಸುವ ವಚನಗಳ ಸೊಬಗು ಅವರ್ಣನೀಯ.
ಅಲ್ಲಮಪ್ರಭುದೇವರು: “ಆಯತದಲ್ಲಿ ಪೂರ್ವಾಚಾರಿಯ ಕಂಡೆ. ಸ್ವಾಯತದಲ್ಲಿ ಪೂರ್ವಾಚಾರಿಯ ಕಂಡೆ. ಸನ್ನಹಿತದಲ್ಲಿ ಪೂರ್ವಾಚಾರಿಯ ಕಂಡೆ. ಗುಹೇಶ್ವರಲಿಂಗದಲ್ಲಿ ಪೂರ್ವಾಚಾರಿ ಸಂಗನಬಸವಣ್ಣನ, ಶ್ರೀಪಾದಕ್ಕೆ ನಮೋ ನಮೋ ಎಂಬೆನು.”
“ಒಂದ ಮಾಡ ಹೋದಡೆ ಮತ್ತೊಂದಾಯಿತ್ತೆಂಬುದು, ಎನಗಾಯಿತ್ತು ನೋಡಾ ಬಸವಣ್ಣಾ ಮಡಿವಾಳನ ಪೂರ್ವಾಪರವನೊರೆದು ನೋಡಿದಡೆ ನಿನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ನಿನ್ನ ಪೂರ್ವಾಪರಸಂಗವ ಮಾಡಬಂದಡೆ ಎನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ಮಹಾಜ್ಞಾನಿಗಳ ಸಂಗದಿಂದ ಉಭಯ ಸಂಗಸಿದ್ಧಿಯೆಂಬುದು ದಿಟವಾಯಿತ್ತು ನೋಡಾ ಬಸವಣ್ಣಾ. ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ ಸಂಗನಬಸವಣ್ಣಾ.”
“ತಾನೆಂದೆನಲೊಲ್ಲದೆ ಗುರುವೆಂದು ಹಿಡಿದವನ, ಗುರುವೆಂದಲ್ಲಿಯೆ ನೀನೆಂದು ನಡೆದವನ, ನೀನೆಂದಲ್ಲಿಯೆ ಲಿಂಗಜಂಗಮದ ಸಕೀಲಸಂಬಂಧವ ನೆಲೆಗೊಳಿಸಿದವನ, ಲಿಂಗಜಂಗಮದಲ್ಲಿ ತನ್ನ ಮರೆದು ಕರಿಗೊಂಡ ಲಿಂಗೈಕ್ಯನ, ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.”
“ಆದಿಶಕ್ತಿ ಅನಾದಿಶಕ್ತಿಯೆಂಬರು ಅದನಾರು ಬಲ್ಲರಯ್ಯಾ? `ಆದಿ’ ಎಂದಡೆ ಕುರುಹಿಂಗೆ ಬಂದಿತ್ತು. ‘ಅನಾದಿ’ ಎಂದಡೆ ನಾಮಕ್ಕೆ ಬಂದಿತ್ತು. ಆದಿಯೂ ಅಲ್ಲ ಅನಾದಿಯೂ ಅಲ್ಲ, ನಾಮವಿಲ್ಲದ ಸೀಮೆಯಿಲ್ಲದ ನಿಜಭಕ್ತಿಯೆ ಚಿಚ್ಛಕ್ತಿಯಾಯಿತ್ತು ನೋಡಾ. ಅಂತರಂಗದ ಪ್ರಭೆ ಬಹಿರಂಗವೆಲ್ಲಾ ತಾನೆಯಾಗಿ ಗುಹೇಶ್ವರಲಿಂಗದಲ್ಲಿ ಸಂದಿಲ್ಲದಿಪ್ಪ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು”
ಚನ್ನಬಸವಣ್ಣನವರು: ” ಕೂಡಲಚೆನ್ನಸಂಗಯ್ಯನಲ್ಲಿ ಬಸವಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು” ” ನಿಜಪದವನೈದಿದ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು.” “ಕೂಡಲಚೆನ್ನಸಂಗಯ್ಯನಲ್ಲಿ, ಮೋಳಿಗೆಯ ಮಾರಿತಂದೆಗಳ ಶ್ರೀಪಾದಕ್ಕೆ ನಮೋ ನಮೋ ಜಯಜಯತು.” “ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವಿನ ಶ್ರೀಪಾದಕ್ಕೆ ನಮೋ ನಮೋ ಎಂಬೆನು.” “ನಿಸ್ಸೀಮ ಸಿದ್ಧರಾಮಯ್ಯನ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ ಪ್ರಭುವೆ.”
ಶರಣೆ ತಾಯಿ ಅಕ್ಕಮಹಾದೇವಿ: “ವಿರಕ್ತ ಜಂಗಮ ಷಟ್ಸ್ಥಲ ಬಾಲಬ್ರಹ್ಮಿ ನಿರಾಭಾರಿಯಾದ ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಚೆನ್ನಮಲ್ಲಿಕಾರ್ಜುನಾ.” “ಚೆನ್ನಮಲ್ಲಿಕಾರ್ಜುನಯ್ಯನ ಹೆಸರಿಟ್ಟ ಗುರು ನೀವಾದ ಕಾರಣ ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣಾ.” “ಬಸವಣ್ಣನ ಮನೆಯ ಮಗಳಾದ ಕಾರಣ ಭಕ್ತಿಪ್ರಸಾದವ ಕೊಟ್ಟನು. ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ ಒಕ್ಕಪ್ರಸಾದವ ಕೊಟ್ಟನು. ಪ್ರಭುದೇವರ ತೊತ್ತಿನ ತೊತ್ತಿನ ಮರಿದೊತ್ತಿನ ಮಗಳಾದ ಕಾರಣ ಜ್ಞಾನಪ್ರಸಾದವ ಕೊಟ್ಟನು. ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ ಪ್ರಾಣಪ್ರಸಾದವ ಸಿದ್ಧಿಸಿಕೊಟ್ಟನು. ಮಡಿವಾಳಯ್ಯನ ಮನೆಯ ಮಗಳಾದ ಕಾರಣ ನಿರ್ಮಲಪ್ರಸಾದವ ನಿಶ್ಚೈಸಿಕೊಟ್ಟನು. ಇಂತೀ ಅಸಂಖ್ಯಾತ ಗಣಂಗಳೆಲ್ಲರು ತಮ್ಮ ಕರುಣದ ಕಂದನೆಂದು ತಲೆದಡಹಿದ ಕಾರಣ ಚೆನ್ನಮಲ್ಲಿಕಾರ್ಜುನಯ್ಯನ ಶ್ರೀಪಾದಕ್ಕೆ ಯೋಗ್ಯಳಾದೆನು.”
ಶರಣ ಅಂಬಿಗರ ಚೌಡಯ್ಯ: “ಗುರುಲಿಂಗಜಂಗಮಕ್ಕೆ ಆಧಾರ ಬಸವಣ್ಣ, ಪಾದೋದಕ ಪ್ರಸಾದಕ್ಕೆ ಆಧಾರ ಬಸವಣ್ಣ, ಸರ್ವಾಪತ್ತಿಗಾಧಾರ ಬಸವಣ್ಣ, ಸ್ವರ್ಗ ಮರ್ತ್ಯ ಪಾತಾಳಕ್ಕೆ ಬಸವಣ್ಣನ ಚೈತನ್ಯವಲ್ಲದಿಲ್ಲ. ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದಾತನಂಬಿಗ ಚೌಡಯ್ಯ.”
ಶರಣ ಮಡಿವಾಳ ಮಾಚಿದೇವ: “ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಇಷ್ಟಪ್ರಾಣಭಾವವೆಂಬ ಲಿಂಗಗಳು ತಾವೆ, ಆ ಬಸವಣ್ಣನಿಂದಾದ ಕಾರಣ, ಕಲಿದೇವರಲ್ಲಿ ಅಹೋರಾತ್ರಿಯೊಳೆದ್ದು, ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.” “ನಿಮ್ಮ ಲಿಂಗೈಕ್ಯ ಪ್ರಭುದೇವರ ಶ್ರೀಪಾದಕ್ಕೆ ಭೃಂಗವಾಗಿರ್ದೆನು.”
ಮೋಳಿಗೆ ಮಾರಯ್ಯ ಶರಣರು ತಮ್ಮ ಪೂರ್ವಾಶ್ರಮದಲ್ಲಿ ಕಾಶ್ಮೀರದ ಅರಸ. ಆದರೆ ಈಗ ತನ್ನ ಹಿಂದಿನ ಎಲ್ಲಾ ಅಹಮಿಕೆಯನ್ನೂ ಸಂಪೂರ್ಣವಾಗಿ ಕಳೆದುಕೊಂಡು ಪ್ರಭುದೇವರ ಜ್ಞಾನಕ್ಕೆ ಶರಣಾಗುವ ಪರಿ ಈ ವಚನದಲ್ಲಿ ವ್ಯಕ್ತವಾಗಿದೆ. “ಎನ್ನ ನೆನಹಿನ ನಿಧಿಯ ನೋಡಾ, ಎನ್ನ ಅನುವಿನ ಘನವ ನೋಡಾ. ಆಹಾ ಎನ್ನ ಪುಣ್ಯವೆ, ಆಹಾ ಎನ್ನ ಭಾಗ್ಯವೆ, ಆಹಾ ಎನ್ನ ಕಂಗಳ ಮನೆಯ ಮಾಡಿಕೊಂಡಪ್ಪ ನಿತ್ಯದ ಬೆಳಗೆ. ಎನ್ನ ಧಾನ್ಯದೊಳಗಣ ದೃಢವೆ, ಎನ್ನ ಸುಖದೊಳಗಣ ಸುಗ್ಗಿಯೆ. ನಿಃಕಳಂಕ ಮಲ್ಲಿಕಾರ್ಜುನಾ. ನಿಮ್ಮ ಶರಣ ಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.”
ಹೀಗೆ ಎಲ್ಲಾ ಶರಣರೂ ಕೂಡ ಭೃತ್ಯಾಚಾರಿಗಳಾಗಿದ್ದರಿಂದಲೇ ಕಾಲ್ಪನಿಕ ಕೈಲಾಸವನ್ನು ಮೀರಿಸಿ ನೈಜ ಕೈಲಾಸವು ಬಸವಣ್ಣನವರ ಕಲ್ಯಾಣರಾಜ್ಯದಲ್ಲಿ ನೆಲೆಗೊಂಡುದು. ಭೃತ್ಯಾಚಾರವನ್ನೇ ಉಸಿರಾಗಿಸಿಕೊಂಡಿದ್ದ ಶರಣರು ರಚಿಸಿದ ಸಾವಿರಾರು ವಚನಗಳು ನಮ್ಮ ಬಾಳಿನ ಪಥದಲ್ಲಿ ಬೆಳಕನ್ನೀಯಲು ಲಭ್ಯವಿವೆ. ಅವುಗಳಲ್ಲಿ ಕೆಲವು ವಚನಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸುವ ಪ್ರಯತ್ನ ಮಾಡಿದ್ದೇನೆ.
“ಲಿಂಗ ಜಂಗಮ, ಜಂಗಮ ಲಿಂಗವೆಂಬುದ ಎನಗೆ ತೋರಿದವರಾರಯ್ಯಾ ಲಿಂಗವ ಪೂಜಿಸಿದಡೆ ಭವ ಹರಿಯದೆಂದು, ಜಂಗಮಮುಖ ಲಿಂಗವಾಗಿ ಬಂದು ಶಿಕ್ಷಿಸಿ, ರಕ್ಷಿಸಿ, ಎನ್ನ ಆದಿ ಅನಾದಿಯ ತೋರಿ, ಪ್ರಾಣಲಿಂಗ ಜಂಗಮವೆಂದು ಎನಗೆ ಪ್ರತಿಷ್ಠಿಸಿ ತೋರಿದಿರಾಗಿ, ಕೂಡಲಸಂಗಮದೇವಾ, ನಿಮ್ಮಿಂದಲಾನು ಬದುಕಿದೆನು ಕಾಣಾ, ಪ್ರಭುವೆ.”
“ಭಕ್ತ ಭಕ್ತನ ಮನೆಗೆ ಬಂದಡೆ, ಭೃತ್ಯಾಚಾರವ ಮಾಡಬೇಕು. ಕರ್ತನಾಗಿ ಕಾಲ ತೊಳೆಸಿಕೊಂಡಡೆ ಹಿಂದೆ ಮಾಡಿದ ಭಕ್ತಿಗೆ ಹಾನಿ. ಲಕ್ಕಗಾವುದ ದಾರಿಯ ಹೋಗಿ ಭಕ್ತನು ಭಕ್ತನ ಕಾಂಬುದು ಸದಾಚಾರ. ಅಲ್ಲಿ ಕೂಡಿ ದಾಸೋಹವ ಮಾಡಿದಡೆ ಕೂಡಿಕೊಂಬನು ನಮ್ಮ ಕೂಡಲಸಂಗಯ್ಯ.”
“ಏತ ತಲೆವಾಗಿದಡೇನು, ಗುರುಭಕ್ತನಾಗಬಲ್ಲುದೆ ಇಕ್ಕುಳ ಕೈಮುಗಿದಡೇನು, ಭೃತ್ಯಾಚಾರಿಯಾಗಬಲ್ಲುದೆ ಗಿಳಿಯೋದಿದಡೇನು, ಲಿಂಗವೇದಿಯಾಗಬಲ್ಲುದೆ ಕೂಡಲಸಂಗನ ಶರಣರು ಬಂದ ಬರವ, ನಿಂದ ನಿಲವ ಅನಂಗಸಂಗಿಗಳೆತ್ತಬಲ್ಲರು!
“ಲಿಂಗ ಜಂಗಮವ ಪೂಜಿಸಿ ಭಕ್ತನಾದೆನೆಂದಡೆ ಸದಾಚಾರವಿರಬೇಕು ನೋಡಾ. ಆ ಸದಾಚಾರಕ್ಕೆ ಭೃತ್ಯಾಚಾರವೆ ಮೊದಲು ನೋಡಾ. ವಿಶ್ವಾಸವುಳ್ಳ ಭಕ್ತಿಗೆ ಹೊರೆಯಿಲ್ಲ! ಅಲಂಕಾರವೆಂಬ ಅಲಗ ಹಿಡಿದು ಮಾಡುವ ಭಕ್ತಿ ತನ್ನನೆ ಇರಿವುದು ಗುಹೇಶ್ವರನೆಂಬ ಹಗೆಯ ಗೆಲುವಡೆ ಅರಿವೆಂಬ ಅಲಗ ಅವಧಾನ ತಪ್ಪದೆ ಹಿಡಿಯಬೇಕು ನೋಡಾ ಸಂಗನಬಸವಣ್ಣಾ.”
“ಲಿಂಗದೊಳಗೆ ಜಂಗಮ, ಜಂಗಮದೊಳಗೆ ಲಿಂಗ ಎಂದು ಅರಿದು ಮರೆದು ಬರುದೊರೆವೋದವರು, ಜಂಗಮವನಿನ್ನು ಬೇರೆ ಅರಸಲೇಕಯ್ಯಾ? ಆ ಲಿಂಗದೊಳಗೆ ಜಂಗಮವ ಅರಸಿಕೊಂಬುದು. ಲಿಂಗಾರ್ಚನೆಯ ಅವಸರಕ್ಕೆ ಜಂಗಮ ಮನೆಗೆ ಬಂದಡೆ ಲಿಂಗಾರ್ಚನೆಯ ಮಾದು, ಜಂಗಮಕ್ಕೆ ಇದಿರೆದ್ದು ವಂದಿಸಿ ಭಕ್ತಿಯ ಮಾಡಬಲ್ಲಾತನೆ ಭಕ್ತ._ಆ ಜಂಗಮ ಹೊರಗಿರಲು ಲಿಂಗಾರ್ಚನೆಯ ಮಾಡುತ್ತಿಪ್ಪಾತನೇತರ ಭಕ್ತ? ಜಂಗಮದ ಮುಂದೆ ಲಿಂಗವ ಕೈಯಲ್ಲಿ ಹಿಡಿದುಕೊಂಡು ಸಹಪಂಕ್ತಿಯಲ್ಲಿ ಕುಳ್ಳಿರ್ದು ಪೂಜಿಸುವಾತ ಭೃತ್ಯಾಚಾರದ್ರೋಹನು. ಆ ಭಕ್ತನ ಮನೆಯ ಹೋಗುವ ಜಂಗಮ ಅಜ್ಞಾನಿ. ನಮ್ಮ ಗುಹೇಶ್ವರನ ಶರಣರ ಕೂಡ ಅಹಂಕಾರವ ಹೊತ್ತಿಪ್ಪವರ ಕಂಡಡೆ ನಾನೊಲ್ಲೆ ಕಾಣಾ ಸಂಗನಬಸವಣ್ಣಾ.”
“ಇತ್ತ ಬಾರಯ್ಯಾ, ಇತ್ತ ಬಾರಯ್ಯಾ ಎಂದು ಭಕ್ತರೆಲ್ಲರೂ ಕೂರ್ತು ಹತ್ತಿರೆ ಕರೆವುತ್ತಿರಲು, ಮತ್ತೆ ಕೆಲಕ್ಕೆ ಸಾರ್ದು, ಶರಣೆಂದು ಹಸ್ತ ಬಾಯನೆ ಮುಚ್ಚಿ, ಕಿರಿದಾಗಿ ಭೃತ್ಯಾಚಾರವ ನುಡಿದು, ವಿನಯ ತದ್ಧ್ಯಾನವುಳ್ಳಡೆ ಎತ್ತಿಕೊಂಬನಯ್ಯಾ,
ಕೂಡಲಸಂಗಮದೇವ ಪ್ರಮಥರ ಮುಂದೆ.”
ಅಕ್ಕಮಹಾದೇವಿ: “ಲಿಂಗಾಂಗಿಗಳಾದ ಶಿವಭಕ್ತರೇ ಮರ್ತ್ಯದಲ್ಲಿ ಮಿಗಿಲಹರೆಂದು ತಾನು ಅವರ ಭೃತ್ಯನೆಂದರಿದು ಅಂತಪ್ಪ ನಿಜಲಿಂಗಾಂಗಿಗಳ ಚಮ್ಮಾವುಗೆಯ ಕಾಯ್ದಿಪ್ಪುದೇ ಭೃತ್ಯಾಚಾರ ನೋಡಯ್ಯ.”
“ಜಾತ್ಯಾಶ್ರಮ ಕುಲಗೋತ್ರ ನಾಮರೂಪು ಕ್ರಿಯಾರಹಿತನಾಗಿ, ಗುರೂಪಾವಸ್ಥೆಯಿಂದ ಗುರುವ ಪ್ರತ್ಯಕ್ಷವ ಮಾಡಿ, ಆ ಗುರುವಿನಿಂದ ಚಿದ್ಘನ ಮಹಾಲಿಂಗವ ಪಡೆದು, ಆ ಲಿಂಗಸಹಿತವಾಗಿ ಭಕ್ತಿಜ್ಞಾನವೈರಾಗ್ಯ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ಮೊದಲಾದ ಷಟ್ಸ್ಥಲಮಾರ್ಗದಲ್ಲಿ ನಿಂದ ಭಕ್ತಗಣಂಗಳಲ್ಲಿ ಪಂಚಸೂತಕಂಗಳ ಕಲ್ಪಿಸದೆ ಅವರಿದ್ದ ಸ್ಥಳಕ್ಕೆ ಹೋಗಿ, ತನುಮನಧನಂಗಳ ಸಮರ್ಪಿಸಿ, ಅವರೊಕ್ಕುಮಿಕ್ಕುದ ಹಾರೈಸಿ ಹಸ್ತಾಂಜಲಿತರಾಗಿ ಪ್ರತ್ಯುತ್ತರವ ಕೊಡದಿರ್ಪುದೆ ಭೃತ್ಯಾಚಾರವೆಂಬೆನಯ್ಯಾ.”
“ಲಿಂಗವಂತನು ಲಿಂಗಾಚಾರಿ ಸದಾಚಾರಿ ಭೃತ್ಯಾಚಾರಿಯೆನಿಸಿದಡೆ ಲಿಂಗವನೊಲಿಸಬಹುದು. ಲಿಂಗದ ನಚ್ಚು, ಲಿಂಗವಂತರ ಮೆಚ್ಚು. ಇದು ಸತ್ಯ ಮುಕ್ತಿ ಕೇಳಿರಣ್ಣಾ. ಲಿಂಗವಂತನು ಪರಧನ, ಪರಸ್ತ್ರೀ, ಪರದೈವಕ್ಕಳುಪಿ ಅಲ್ಲಿಯೇ ವರ್ತಿಸಿ ಮಾಹೇಶ್ವರಶೋಭೆಯಂ ಮಾಡಿಹೆನೆಂಬ, ಮತ್ತೆ ಲಿಂಗಾರ್ಚನೆಯಂ ಮಾಡಿಹೆನೆಂಬ, ಲಿಂಗವನೊಲಿಸಿಹೆನೆಂಬ, ಲಿಂಗವಂತರಲ್ಲಿ ಸಲುವೆನೆಂಬ, ಲಿಂಗವೇನು ತೊತ್ತಿನ ಮುನಿಸೆ? ವೇಶ್ಯೆಯ ಸರಸವೇ? ವೈತಾಳಿಕನ ಕಲಹವೆ? ತಪ್ಪಿ ನಡೆದು, ತಪ್ಪಿ ನುಡಿದು, ತಪ್ಪಿ ಕೂಡಿ ಮರಳಿ ಮರಳಿ ಪ್ರಯೋಗಿಸುವಂತಾಗಿ, ಅಂತಲ್ಲ ಕೇಳಿರಣ್ಣಾ. ಪತಿವ್ರತೆಯು ಸತ್ಪುರುಷನ ಕೂಡಿದಂತೆ, ಸಜ್ಜನಮಿತ್ರರ ಸಂಗದಂತೆ, ಮಹಾಜ್ಞಾನಿಗಳ ಅರಿವಿನಂತೆ, ಶುದ್ಧವಾದುದನೇ ಕೂಡಿಕೊಂಡಿಪ್ಪ, ಶುದ್ಧವಿಲ್ಲದುದನೇ ಬಿಡುವ. ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು ಅಣುಮಾತ್ರ ತಪ್ಪ, ಕ್ಷಣಮಾತ್ರ ಸೈರಿಸ.” ಉರಿಲಿಂಗಪೆದ್ದಿ ಶರಣರು ಮಾನವನು ಆಚಾರವಿಡಿದು ನಡೆದರೆ ಮತ್ತು ಆಚಾರಕ್ಕೆ ತಪ್ಪಿ ನಡೆದರೆ ಮುಂದುಂಟಾಗುವ ಫಲಾಫಲಗಳನ್ನು ತಮ್ಮ ಅನುಭಾವಿಕ ನುಡಿಗಟ್ಟಿನಲ್ಲಿ ಈ ವಚನದಲ್ಲಿ ನಮಗೆ ಕಟ್ಟಿಕೊಟ್ಟಿದ್ದಾರೆ. ಶರಣರ ವಚನಗಳನ್ನು ಓದುವುದರ ಜೊತೆಗೆ ಅವುಗಳನ್ನು ನಮ್ಮ ಜೀವನದಲ್ಲಿ ಅವಿಭಾಜ್ಯವಾಗಿಸಿ ಕೊಂಡರೆ ಅಸಾಧ್ಯವೂ ಸುಲಭ ಸಾಧ್ಯವಹುದು.

Previous post ಸುತ್ತಿ ಸುಳಿವ ಆಟ
ಸುತ್ತಿ ಸುಳಿವ ಆಟ
Next post ತೊತ್ತುಗೆಲಸವ ಮಾಡು
ತೊತ್ತುಗೆಲಸವ ಮಾಡು

Related Posts

ನಾನು ಕಂಡ ಡಾ.ಕಲಬುರ್ಗಿ
Share:
Articles

ನಾನು ಕಂಡ ಡಾ.ಕಲಬುರ್ಗಿ

September 7, 2021 ಸನತ್ ಕುಮಾರ ಬೆಳಗಲಿ
ಕರ್ನಾಟಕ ಕಂಡ ಹೆಸರಾಂತ ಸತ್ಯಶೋಧಕ ಶರಣ ಡಾ.ಎಂ.ಎಂ. ಕಲಬುರ್ಗಿ ಅವರು ಹಂತಕರ ಗುಂಡಿಗೆ ಬಲಿಯಾಗಿ ಕಳೆದ ಆಗಸ್ಟ್ ೩೦ ಕ್ಕೆ ಆರು ವರ್ಷಗಳಾದವು. ೨೦೧೫ ನೇ ಇಸವಿ ಇದೇ ದಿನ ಬೆಳಗಿನ...
ವಚನಗಳಲ್ಲಿ ಶಿವ
Share:
Articles

ವಚನಗಳಲ್ಲಿ ಶಿವ

September 4, 2018 ಡಾ. ಪಂಚಾಕ್ಷರಿ ಹಳೇಬೀಡು
ಪುರಾಣಗಳಲ್ಲಿ ಶಿವನನ್ನು  ಒಬ್ಬ ವ್ಯಕ್ತಿಯಾಗಿ ಬಿಂಬಿಸಲಾಗಿದೆ. ಆತನಿಗೆ ಪಾರ್ವತಿ ಮತ್ತು ದಾಕ್ಷಾಯಣಿ ಎಂಬ ಹೆಂಡತಿಯರೂ ಗಣೇಶ ಕಾರ್ತಿಕೇಯ ಎಂಬ ಇಬ್ಬರು ಮಕ್ಕಳೂ ಇದ್ದರೆಂದು...

Comments 12

  1. Dayakirana, Shimoga
    Jun 7, 2021 Reply

    ಪಂಚಾಚಾರಗಳಲ್ಲಿ ಭೃತ್ಯಾಚಾರವೇ ಬಹಳ ಮುಖ್ಯವಾದುದು ಎಂದು ಸ್ವಾಮಿ ಲಿಂಗಾನಂದರು ಪ್ರವಚನದಲ್ಲಿ ಹೇಳುತ್ತಿದ್ದರು. ಬಸವಣ್ಣನವರಿಗಿಂತ ವಿನಯಶೀಲರು ಮತ್ತೊಬ್ಬರು ಸಿಗಲಿಕ್ಕಿಲ್ಲ. ಎಲ್ಲ, ಎಲ್ಲವೂ ಇದ್ದೂ ಅವರು ಅಷ್ಟು ವಿನಯವಂತರಾಗಿರಲು ಹೇಗೆ ಸಾಧ್ಯವಾಯಿತೆಂದು ಅನೇಕ ಬಾರಿ ಯೋಚಿಸಿದ್ದೇನೆ.

  2. savitri dodmane
    Jun 9, 2021 Reply

    ಪಂಚಾಚಾರಗಳ ಲೇಖನಮಾಲೆ ಉಪಯುಕ್ತಕರವಾಗಿತ್ತು. ಶರಣರು ಪಂಚಾಚಾರಗಳನ್ನು ತಮ್ಮ ವಚನಗಳಲ್ಲಿ ವಿಭಿನ್ನ ಬಗೆಗಳಲ್ಲಿ ಹೇಳಿದ್ದಾರೆ. ಅವುಗಳನ್ನೆಲ್ಲಾ ಒಂದೆಡೆ ಕಲೆ ಹಾಕಿ ಕೊಟ್ಟಿದ್ದು ಲೇಖನಗಳ ಪ್ಲಸ್ ಪಾಯಿಂಟ್.

  3. Veeresh S, Belgavi
    Jun 9, 2021 Reply

    ಬಸವಣ್ಣನವರಲ್ಲಿ, ಎಲ್ಲ ಶರಣರಲ್ಲಿ ಇದ್ದ ವಿನಯದ ಒಂದು ಭಾಗವೂ ಇವತ್ತಿನ ಸ್ವಾಮಿಗಳಿಗಿಲ್ಲವಲ್ಲಾ, ಯಾವ ನಾಚಿಕೆಯಿಲ್ಲದೆ ಪಾದಪೂಜೆ ಮಾಡಿಸಿಕೊಂಡು ಆಶೀರ್ವಾದ ಮಾಡುತ್ತಾರಲ್ಲಾ!! ಅಸಹ್ಯವೆನಿಸುತ್ತದೆ. ಇವರಿಗೆ ಈ ಲೇಖನ ಕಳಿಸಿಕೊಡಿ ಅಣ್ಣಾ.

  4. Indudhar
    Jun 12, 2021 Reply

    ಪಂಚಾಚಾರಗಳನ್ನು ಶರಣರ ಜೀವನದಲ್ಲಿ ನೋಡಬಹುದು ಎನ್ನುತ್ತಾರೆ. ಭೃತ್ಯಾಚಾರವನ್ನು ಅಳವಡಿಸಿಕೊಳ್ಳುವುದು ಬಹಳ ಕಷ್ಟಕರ. ಭಕ್ತನಾಗಲು ಭೃತ್ಯನಾಗಲೇ ಬೇಕು… ಲೇಖನ ಚನ್ನಾಗಿದೆ.

  5. ಪ್ರವೀಣ್ ಜಂಬಲಗಿ
    Jun 15, 2021 Reply

    ನಿಜ, ಅಂಗ ಲಿಂಗವಾಗುವುದು ಲಿಂಗೈಕ್ಯ. ಆದರೆ ಅಂಗ ಅದ್ಹೇಗೆ ಲಿಂಗವಾಗುತ್ತದೆ? ಆ ಸಾಧನೆ ತಿಳಿಸುವ ವಚನಗಳಿದ್ದರೆ ತಿಳಿಸಿಕೊಡಿ. ಪಂಚಾಚಾರಗಳು ಪ್ರತಿಯಬ್ಬ ಲಿಂಗಾಯತನಲ್ಲೂ ಅಳವಡಲೇ ಬೇಕಾದ ಸದ್ಗುಣಗಳು. ಆದರೆ ಇವುಗಳ ಬಗೆಗೆ ಮಾರ್ಗದರ್ಶನ ನೀಡುವವರಾರು? ದೀಕ್ಷಾ ಗುರುಗಳೋ ಅಥವಾ ಮನೆಯ ಹಿರಿಯರೋ?

  6. ಸುರೇಶ್ ನಾಯಕ
    Jun 17, 2021 Reply

    ಹಡಪದ ಅಪ್ಪಣ್ಣನವರ ವಚನ ಸತಿ-ಪತಿ, ಪಿತ-ಸುತ, ಗುರು-ಶಿಷ್ಯ ಸಂಬಂಧಗಳಲ್ಲಿರಬೇಕಾದ ಬದ್ಧತೆಗಳನ್ನು ಸೂಕ್ಷ್ಮವಾಗಿ ಬಿತ್ತರಿಸುತ್ತದೆ. ಓದುತ್ತಾ ಹೋದಂತೆ ಅಚ್ಚರಿ, ಮೆಚ್ಚುಗೆ ಹುಟ್ಟಿಸಿತು. ಜೀವನದಲ್ಲಿ ಅಗತ್ಯವಾದ ಈ ಬಾಂಧವ್ಯ ಹೇಗಿರಬೇಕೆಂದು ಅಪ್ಪಣ್ಣ ಶರಣರು ಸೊಗಸಾಗಿ ಹೇಳಿದ್ದಾರೆ. ಇದನ್ನ ಅರಿಯಲು ಎಲ್ಲರಿಗೂ ಸಾಧ್ಯವಾದರೆ, ಅಳವಡಿಸಿಕೊಂಡರೆ ಬದುಕು ಸುಂದರವಾಗುವಲ್ಲಿ ಸಂದೇಹವೇ ಇಲ್ಲ.

  7. Mahadevappa
    Jun 21, 2021 Reply

    ಭೃತ್ಯಾಚಾರ ಮತ್ತು ಗಣಾಚಾರ ಇವುಗಳನ್ನು ಅನೇಕರು ಗೊಂದಲ ಮಾಡಿಕೊಂಡಿದ್ದಾರೆ. ನಯವಿನಯದ ನಡವಳಿಕೆಯ ಬದಲು ಅಹಂಕಾರದ ಗಣಾಚಾರಿಗಳೆಂದು ಹೇಳಿಕೊಳ್ಳುವ ಧೋರಣೆಯನ್ನು ಇಂದಿನ ಯುವಕರಲ್ಲಿ ಕಂಡಿದ್ದೇನೆ. ಪಂಚಾಚಾರಗಳು ಬಹು ಮುಖ್ಯ ಶೀಲಗಳೆನ್ನುವ ತಿಳುವಳಿಕೆಯನ್ನು ನಾವು ಮಕ್ಕಳಲ್ಲಿ ಬಿತ್ತಲೇ ಬೇಕು.

  8. Shivamurthy Ikkeri
    Jun 21, 2021 Reply

    ಕಿಂಕರಭಾವದ ಸ್ವಾಮಿಗಳು ಎಲ್ಲಿಯವರೆಗೆ ಇರುವುದಿಲ್ಲವೋ ಅಲ್ಲಿಯವರೆಗೆ ಭೃತ್ಯಾಚಾರದ ಭಕ್ತ ಗಣ ಲಿಂಗಾಯತ ಸಮಾಜದಲ್ಲಿ ಸಿದ್ಧವಾಗುವುದಿಲ್ಲ. ಪಂಚಾಚಾರಗಳು ಕೇವಲ ಆಚಾರಗಳಾಗಿ ವಚನಗಳಲ್ಲುಳಿಯುತ್ತವೆ. ನಾವು ಯಾವತ್ತೋ ಶರಣರನ್ನು ಆಚರಣೆಯಲ್ಲಿ ಕಳೆದುಕೊಂಡು ಬಿಟ್ಟಿದ್ದೇವೆ ಬಿಡಿ.

  9. Girija K.P
    Jun 26, 2021 Reply

    ಲಿಂಗವಂತನು ಲಿಂಗಾಚಾರಿ ಸದಾಚಾರಿ ಭೃತ್ಯಾಚಾರಿಯೆನಿಸಿದಡೆ ಲಿಂಗವನೊಲಿಸಬಹುದು. ಲಿಂಗದ ನಚ್ಚು, ಲಿಂಗವಂತರ ಮೆಚ್ಚು… ವಚನ ತುಂಬಾ ಅರ್ಥಗರ್ಭಿತವಾಗಿದೆ. ಈ ವಚನವನ್ನು ವಿವರಿಸಿಕೊಟ್ಟಿದ್ದರೆ ಪಂಚಾಚಾರಗಳು ನಿತ್ಯದ ಬಳಕೆಗೆ ಹೇಗೆ ಅಳವಡುತ್ತವೆಂಬುದು ಸ್ಪಷ್ಟವಾಗುತ್ತಿತ್ತು. ಪಂಚಾಚಾರಗಳನ್ನು ಆಧುನಿಕರಿಸಿ ಬರೆಯುವ ಪ್ರಯತ್ನ ಬಹಳ ಮೆಚ್ಚುವಂತಹುದು.

  10. Pramod Yalahanka
    Jun 26, 2021 Reply

    ಅಣ್ಣಾವ್ರೆ ಪಂಚಾಚಾರಗಳ ಲೇಖನ ಮಾಲೆ ಚೆನ್ನಾಗಿ ಮೂಡಿಬಂದಿತು. ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು.

  11. ಆನಂದ ಗುಬ್ಬಿ
    Jun 29, 2021 Reply

    ಅಹಂಕಾರವಿದ್ದಲ್ಲಿ ಮುಂದೆ ದಾರಿಯಿಲ್ಲ. ಅಹಂಕಾರವಳಿಯಲು ಭೃತ್ಯಾಚಾರವನ್ನು ಕೊಟ್ಟಿದ್ದಾರೆ. ಸವಿನಯ ಗುಣ ಎಲ್ಲಿದೆಯೋ ಅಲ್ಲಿ ಸದಾಶಿವನಿರುತ್ತಾನೆ. ಪಂಚಾಚಾರಗಳಿಗೆ ಇದೇ ಆಧಾರ. ಸರ್, ಲೇಖನ ಚೆನ್ನಾಗದೆ.

  12. H V Jaya
    Jul 16, 2021 Reply

    ಲಿಂಗಾಯತ ಧರ್ಮದ ಆಚರಣೆಗಳಲ್ಲಿ ಭೃತ್ಯಾಚಾರ ಅತ್ಯಂತ ಪ್ರಮುಖವಾದ ಆಚಾರವಾಗಿದ್ದು, ಅಕ್ಕ ತಮ್ಮ ಒಂದು ವಚನದಲ್ಲಿ ಹೇಳುವಂತೆ “ಲಿಂಗಾಂಗಿಗಳಾದ ಶಿವಭಕ್ತರೆ ಮರ್ತ್ಯದಲ್ಲಿ ಮಿಗಿಲಹರೆಂದು,ತಾನು ಅವರ ಭೃತ್ಯನೆಂದರಿದು, ಅಂತಪ್ಪ ನಿಜ ಲಿಂಗಾಂಗಿಗಳ ಚಮ್ಮಾವುಗೆಯ ಕಾಯ್ದಿರ್ಪುದೆ ಭೃತ್ಯಾಚಾರ ನೋಡಯ್ಯ” ಎಂದಿದ್ದಾರೆ. ಕಲ್ಯಾಣ ಕ್ರಾಂತಿಗೆ ಕಾರಣವಾದ ಶರಣು -ಶರಣಾಥಿ ಪದಗಳನ್ನು ನಾವು ಗಮನಿಸಿದಾಗ,ಒಂದು ಶರಣು ತನಗೆ ಜಾಸ್ತಿಹೇಳಿದ ಕಾರಣದಿಂದ ಶರಣ ಹರಳಯ್ಯನವರು ತಾನು ಅತ್ಯಂತ ಕಿಂಕರ ಎಂಬ ಭಾವದಿಂದ ತಮ್ಮ ಮೈ ಚರ್ಮದಿಂದ ಚಮ್ಮಾವುಗೆಯ ಮಾಡಿ ಗುರು ಬಸವಣ್ಣನವರಿಗೆ ಅರ್ಪಿಸಲು ಹೋದಾಗ ಗುರು ಬಸವಣ್ಣನವರು ಅತ್ಯಂತ ವಿನಯದಿಂದ, ನಾನು ಕಿಂಕರ ಈ ಪಾದರಕ್ಷೆಗಳೇ ಶಂಕರ ಇವು ದೇವರಿಗೆ ಸಲ್ಲ ಬೇಕಾದಂತಹವು,ಎಂದು ಆ ಚಮ್ಮಾವುಗೆಯನ್ನು ತಮ್ಮ ತಲೆಯ ಮೇಲಿಟ್ಟುಕೊಂಡು ಮೆರೆಸಿದ ರೀತಿಯನ್ನು ನೋಡಿದರೆ ಬಸವಣ್ಣನವರಂಥ ಗುರು ,ಹರಳಯ್ಯನವರಂತ ಶಿಷ್ಯ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.ಅದ್ದರಿಂದ ಲಿಂಗಾಯತ ಧರ್ಮದಲ್ಲಿ ಭೃತ್ಯಾಚಾರ ಎಷ್ಟು ಪವಿತ್ರವಾದ ಆಚಾರ ಎಂಬುದು ಸ್ಪಷ್ಟವಾಗುತ್ತದೆ.
    ಈ ನಿಟ್ಟಿನಲ್ಲಿ ಶರಣ ಪಂಚಾಕ್ಷರಿಯವರು ಪಂಚಾಚಾರಗಳ ಮಾಲೆಯನ್ನು ನಿರಂತರವಾಗಿ, ಅತ್ಯಂತ ಸುಂದರವಾಗಿ ತಿಳಿಸುತ್ತಾ ಬಂದಿರುವುದು ನಮಗೆಲ್ಲ ಅತ್ಯಂತ ಉಪಯುಕ್ತವಾಗಿದೆ.
    ಶರಣು ಶರಣಾರ್ಥಿಗಳು

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೀರಬೊಂಬೆಗೆ ನಿರಾಳದ ಗೆಜ್ಜೆ
ನೀರಬೊಂಬೆಗೆ ನಿರಾಳದ ಗೆಜ್ಜೆ
April 29, 2018
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ಧರ್ಮವನ್ನು ಒಡೆಯುವುದು – ಹಾಗೆಂದರೇನು?
ಧರ್ಮವನ್ನು ಒಡೆಯುವುದು – ಹಾಗೆಂದರೇನು?
October 2, 2018
ನಾನರಿಯದ ಬಯಲು
ನಾನರಿಯದ ಬಯಲು
April 9, 2021
ಹೀಗೊಂದು ತಲಪರಿಗೆ (ಭಾಗ-2)
ಹೀಗೊಂದು ತಲಪರಿಗೆ (ಭಾಗ-2)
July 4, 2021
ಲಿಂಗಾಚಾರ
ಲಿಂಗಾಚಾರ
May 6, 2021
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
September 4, 2018
ಮನವೇ ಮನವೇ…
ಮನವೇ ಮನವೇ…
May 6, 2020
ನೆಲದ ನಿಧಾನ
ನೆಲದ ನಿಧಾನ
April 29, 2018
Copyright © 2025 Bayalu