ಭಾಷೆ ಮತ್ತು ಚಿಂತನೆ
ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು-
ಸಗಣಕ್ಕೆ ಸಾಸಿರ ಹುಳು, ಹುಟ್ಟವೆ ದೇವಾ?
ಕಾಡ ಮೃಗವೊಂದಾಗಿರಲಾಗದೆ, ದೇವಾ?
ಊರ ಮೃಗವೊಂದಾಗಿರಲಾಗದೆ, ಹರನೆ?
ನಮ್ಮ ಕೂಡಲಸಂಗನ ಶರಣರಿಲ್ಲದ ಊರು, ದೇಶ-
ವನವಾಸ ನರವಿಂಧ್ಯ ಕಾಣಿರಣ್ಣಾ.
ವ್ಯಕ್ತಿಯೊಬ್ಬ ದೈಹಿಕವಾಗಿ ಕೆಲಸ ಕಾರ್ಯಗಳನ್ನು ಮಾಡುವ ಮುನ್ನ ಮಾನಸಿಕವಾಗಿ ಆಲೋಚನೆ, ಚಿಂತನೆ ಮಾಡುವುದು ಸಹಜ. ಆಗ ಆತ ಬಳಸುವ ಭಾಷೆಗೆ ಅನುಗುಣವಾಗಿ ಭಾವನೆಗಳು, ಚಿಂತನೆಗಳು, ಯೋಚನೆಗಳು ಹೊರಹೊಮ್ಮುತ್ತವೆ. ತನಗೆ ಎದುರಾಗಿರುವ ಸಮಸ್ಯೆ, ಸವಾಲು, ಅವಕಾಶ ಎಂದುಕೊಂಡಾಗ ಬೇರೆ ಬೇರೆ ರೀತಿಯ ಭಾವನೆಗಳು ಹೊರಹೊಮ್ಮುತ್ತವೆ. ಆತ ಯಾವ ರೀತಿ ಯೋಚಿಸುತ್ತಾನೆ ಎನ್ನುವ ಆಧಾರದ ಮೇಲೆ ಅವನ ಭಾಷಾಪ್ರಯೋಗವೂ ಆಗುವುದು. ಅದರ ಆಧಾರದ ಮೇಲೆ ಆತನಲ್ಲಿ ಖುಷಿ, ಉತ್ತೇಜನ, ಒತ್ತಡ, ಉದ್ವೇಗ, ಸಂಕಟ ಇತ್ಯಾದಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಮನುಷ್ಯನಿಗೆ ಬಯಲನ್ನು ನೋಡುವುದಕ್ಕಿಂತ ವಸ್ತುಗಳನ್ನು ನೋಡುವ ರೂಢಿಯಾಗಿದೆ. ಆತ ವಸ್ತುಗಳಿಂದ ಬಯಲಿನ ಕಡೆಗೆ ಮುನ್ನಡೆಯುವನು. ಬದಲಾಗಿ ಬಯಲಿನಿಂದ ವಸ್ತುವಿನ ಕಡೆಗೆ ನಡೆಯಬೇಕು.
ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ಬಯಲ ಜೀವನ ಬಯಲ ಭಾವನೆ,
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ನಿಮ್ಮ ಪೂಜಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ಪೂಜಿಸಿ ಬಯಲಾದೆ ಗುಹೇಶ್ವರಾ.
ಅಲ್ಲಮಪ್ರಭುದೇವರ ಈ ವಚನ ಬಯಲಿನ ಮಹತ್ವವನ್ನು ಸಾರುವಂತಹುದಾಗಿದೆ. ಬಯಲನ್ನು ಅರಿತು ಅವಕಾಶಗಳ ಕಡೆ ನೋಡಬೇಕಿದೆ. ಮನುಷ್ಯನ ಸ್ವಭಾವ ‘ನಾನು’ ಎನ್ನುವಲ್ಲೇ ನಿಂತುಬಿಡುವುದು. ನಿಂತ ನೀರು ಏನಾಗುತ್ತದೆ ಎಂದು ವಿವರಿಸುವ ಅಗತ್ಯವಿಲ್ಲ. ನಿಂತ ನೀರಾಗದೆ ಹರಿಯುವ ನೀರಾಗಬೇಕೆಂದರೆ ‘ನಾನು’ ಎನ್ನುವುದು ‘ನಾವು’ ಎಂದು ಬದಲಾಗಬೇಕು. ಆಗ ಎಲ್ಲರೂ ಒಂದಾಗಿ ಸತ್ಕಾರ್ಯಗಳನ್ನು ಮಾಡಲು ಸಾಧ್ಯ. ಎಲ್ಲರೂ ಒಂದಾಗಿ ಕಾರ್ಯೋನ್ಮುಖರಾದಾಗ ಅಂದುಕೊಂಡದ್ದನ್ನು ಸುಲಭವಾಗಿ ಸಾಧಿಸಬಹುದು. ಸಾಮೂಹಿಕ ಚಿಂತನೆ ಮತ್ತು ಸಾಮೂಹಿಕ ಕ್ರಿಯೆ ಬಹಳ ಮುಖ್ಯ. ಇದಕ್ಕೆ ತಗಲಿರುವ ರೋಗವೇ ‘ನಾನು’ ಎನ್ನುವುದು. ‘ನಾನು’ ಎನ್ನುವ ರೋಗವನ್ನು ನಿವಾರಿಸಿಕೊಳ್ಳುವ ದಿವ್ಯೌಷಧಿ ‘ನಾವು’ ಎನ್ನುವುದು. ಸಾತ್ವಿಕರೆಲ್ಲ ಒಂದಾದರೆ ದುಷ್ಟರ ಸಂಖ್ಯೆ ತನ್ನಷ್ಟಕ್ಕೆ ತಾನೇ ತಗ್ಗುವುದು. ಒಬ್ಬನ ಆಲೋಚನೆಗಳು ಆತ ಬಳಸುವ ಭಾಷೆಯನ್ನು ಅವಲಂಬಿಸಿರುತ್ತವೆ ಎನ್ನುವಲ್ಲಿ ಎರಡು ಮಾತಿಲ್ಲ. ಬಸವಣ್ಣನವರದು ಕೋಮಲ ಭಾಷೆ. ನುಡಿದರೆ ಮುತ್ತಿನ ಹಾರದಂತೆ, ಮಾಣಿಕ್ಯದ ದೀಪ್ತಿಯಂತೆ, ಸ್ಫಟಿಕದ ಸಲಾಕೆಯಂತೆ ಇರಬೇಕು ಎನ್ನುವರು. ಅದಕ್ಕಾಗಿ ‘ಭಕ್ತಿ ಸುಭಾಷೆಯ ನುಡಿಯ ನುಡಿಯುವೆ, ನುಡಿದಂತೆ ನಡೆಯುವೆ, ನಡೆಯೊಳಗೆ ನುಡಿಯ ಪೂರೈಸುವೆ’, ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’, ‘ಅಯ್ಯಾ ಅಯ್ಯಾ ಎಂದು ಕರೆವುತ್ತಲಿದ್ದೇನೆ’, ‘ಶಾಸ್ತ್ರ ಘನವೆಂಬೆನೆ? ಕರ್ಮವ ಭಜಿಸುತ್ತಿದೆ!’ ಇಂಥ ಭಾಷೆಯ ಕಾರಣಕ್ಕಾಗಿ ಬಸವಣ್ಣನವರ ವ್ಯಕ್ತಿತ್ವ ಲೋಕಪೂಜ್ಯವಾಗುವುದು.
ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ;
ತಾಳೋಷ್ಠ ಸಂಪುಟವೆಂಬುದು ನಾದಬಿಂದುಕಳಾತೀತ.
ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ ಕೇಳಾ ಮರುಳೆ.
ಮಾತು ಹೇಗಿರಬೇಕು ಎನ್ನುವ ಸೂಚನೆ ನೀಡಿದ್ದಾರೆ ಅಲ್ಲಮಪ್ರಭುದೇವರು.
ನಮ್ಮ ಆಲೋಚನೆ ಮತ್ತು ಭಾಷೆ ಬಸವಾದಿ ಶರಣರ ಬದುಕು-ಬರಹದಂತಿರಬೇಕು. ಆಗ ವ್ಯಕ್ತಿ ಸುಸಂಸ್ಕೃತನಾಗಲು ಸಾಧ್ಯ. ಒಬ್ಬ ಸುಸಂಸ್ಕೃತನಾದಲ್ಲಿ ಅವನ ಸುತ್ತ ಇರುವವರು ಸಹ ಅದೇ ಹೆಜ್ಜೆಯಲ್ಲಿ ಹೆಜ್ಜೆ ಹಾಕಲು ಪ್ರಯತ್ನಿಸುವರು. 12ನೆಯ ಶತಮಾನದಲ್ಲಿ ಬಸವಣ್ಣನವರು ಅಲ್ಪಾವಧಿಯಲ್ಲಿ ಅದ್ಭುತ ಪರಿವರ್ತನೆ ತರಲು ಸಾಧ್ಯವಾದದ್ದು ಅವರು ಬಳಸಿದ ಭಾಷೆ, ಅವರ ಚಿಂತನೆ ಹಾಗೂ ನಡಾವಳಿಕೆ. ಭಾಷೆ ಮತ್ತು ಚಿಂತನೆ ನಡೆಯಲ್ಲಿ ಬಂದಾಗ ವ್ಯಕ್ತಿತ್ವ ಅರಳುವುದು. ಬಸವಣ್ಣನವರ ವ್ಯಕ್ತಿತ್ವ ಅರಳಿದ್ದ ಕಾರಣದಿಂದಾಗಿ ರಾಜ್ಯ, ಪರರಾಜ್ಯ, ಪರದೇಶಗಳಿಂದ ವಿವಿಧ ಚಿಂತಕರು, ಕಾಯಕ ಜೀವಿಗಳು ಕಲ್ಯಾಣಕ್ಕೆ ಬರಲು ಸಾಧ್ಯವಾಯಿತು. ಭಾಷೆ, ಭಾವನೆ, ಚಿಂತನೆ ವ್ಯಕ್ತಿಯ ಮತ್ತು ಸಮೂಹದ ಒಳಿತಿಗೆ ಪೂರಕವಾಗಿರಬೇಕು. ಶುದ್ಧ ಗಾಳಿ, ಶುದ್ಧ ನೀರು. ಶುದ್ಧ ಪರಿಸರ, ಶುದ್ಧ ಜನಾಂಗ ಎನ್ನುವಲ್ಲಿ ‘ಶುದ್ಧ’ ಎನ್ನುವ ಪದವೇ ಎಲ್ಲರನ್ನೂ ಪುಳುಕಿತರನ್ನಾಗಿ ಮಾಡುವುದು. ಈ ನೆಲೆಯಲ್ಲಿ ಬಸವಾದಿ ಶರಣರು ಭಾಷೆಯನ್ನು ಅತ್ಯಂತ ಸರಳವಾಗಿ, ಮೃದುವಾಗಿ, ಅರ್ಥಪೂರ್ಣವಾಗಿ ಬಳಸಿದ್ದು ಅವರ ವಚನಗಳಿಂದ ತಿಳಿದುಬರುತ್ತದೆ. ‘ಕೂಡಲಸಂಗಮದೇವಾ ನಿಮಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎನ್ನುವ ಬಸವಣ್ಣನವರ ಮಾತೇ ಎಷ್ಟೊಂದು ಹಿತಕಾರಿಯಾಗಿದೆಯಲ್ಲವೇ? ಇಂತಹ ಮಾತುಗಳೇ ಅಂದಿನ ಸಮಾಜದಲ್ಲಿ ಬದಲಾವಣೆ ತರಲು ಪ್ರೇರಕವಾಗಿದ್ದವು.
ಇಂದು ಸಾಮಾನ್ಯರಿಂದ ಅಸಾಮಾನ್ಯರವರೆಗೂ ಆವರಿಸಿರುವ ಬಹುದೊಡ್ಡ ರೋಗವೆಂದರೆ ‘ನಾನು’ ಎನ್ನುವುದು. ಅದೇ ಅಹಂಕಾರ. ನಾನು, ನನ್ನಿಂದ, ನನಗೆ, ನನಗಾಗಿ, ನನಗೋಸ್ಕರ ಎನ್ನುವುದನ್ನು ನಾವು, ನಮ್ಮಿಂದ, ನಮಗೆ, ನಮಗಾಗಿ, ನಮಗೋಸ್ಕರ ಎಂದು ಬದಲಾಯಿಸಿಕೊಂಡರೆ ಅತ್ಯುತ್ತಮ ಸೇವಾಕಾರ್ಯಗಳು ಸಮಾಜದಲ್ಲಿ ನಡೆಯಲು ಸಾಧ್ಯ. ‘ನಾವು’ ಎನ್ನುವ ಸಮೂಹಕ್ಕಿರುವ ಶಕ್ತಿ ‘ನಾನು’ ಎನ್ನುವ ಒಬ್ಬ ವ್ಯಕ್ತಿಯಿಂದ ಸಾಧ್ಯವಾಗದು. ಅರಣ್ಯ ಬೆಳೆಸುವುದು, ಸಹಜ ಕೃಷಿಗೆ ಒತ್ತು ಕೊಡುವುದು, ಪ್ರಾಕೃತಿಕ ಸಮತೋಲನ ಕಾಪಾಡುವುದು, ಜನರ ಜೊತೆ ಬೆರೆತು ಸತ್ಕಾರ್ಯಗಳಿಗೆ ಕೈ ಜೋಡಿಸುವುದು ನಾನು ಎನ್ನುವ ಅಹಂ ಬಿಟ್ಟಾಗಲೇ ಸಾಧ್ಯ. ಅಲ್ಲಮಪ್ರಭುದೇವರು-
ನಾನೆಂಬ ಅಹಂಕಾರ ತಲೆದೋರಿದಲ್ಲಿ ಅಟಮಟ ಕುಟಿಲ
ಕುಹಕವೆಂಬ ಬಿರುಗಾಳಿ ಹುಟ್ಟಿತ್ತು.
ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ
ಕೆಟ್ಟಿತ್ತು. ಜ್ಞಾನಜ್ಯೋತಿ ಕೆಡಲೊಡನೆ,
ನಾ ಬಲ್ಲೆ ಬಲ್ಲಿದರೆಂಬ ಅರುಹಿರಿಯರೆಲ್ಲರು
ತಾಮಸಕ್ಕೊಳಗಾಗಿ ಸೀಮೆದಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ.
ಎಂದಿರುವುದು ಚಿಂತನಾರ್ಹವಾಗಿದೆ. ಅವರೇ ಮತ್ತೊಂದು ವಚನದಲ್ಲಿ-
ನಾನೆಂಬ ಅಹಂಕಾರದಲ್ಲಿ ನಾನುಂಡೆನಾದಡೆ,
ಎನಗದೆ ಭಂಗ. ಸ್ತುತಿ-ನಿಂದೆಗೆ ನೊಂದೆನಾದಡೆ ಅಂಗೈಯಲ್ಲಿರ್ದ
ಗುಹೇಶ್ವರಲಿಂಗಕ್ಕೆ ದೂರ ಕಾಣಾ ಸಂಗನಬಸವಣ್ಣಾ.
ಎನ್ನುವ ಮೂಲಕ ಅಹಂಕಾರ ಅಡಗದಿದ್ದರೆ ಎಂಥ ಅನಾಹುತ ಆಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ನೆಲೆಯಲ್ಲೇ ಅಂದಿನ ಶರಣರು ಆಲೋಚನೆ ಮಾಡಿದ್ದು. ಈ ಹಿನ್ನೆಲೆಯಲ್ಲಿ ಬಸವಣ್ಣನವರ ವಚನ ಎಲ್ಲರ ಕಣ್ಣು ತೆರೆಸುವಂತಿದೆ.
ಅಹಂಕಾರ ಮನವನಿಂಬುಗೊಂಡಲ್ಲಿ ಲಿಂಗ ತಾನೆಲ್ಲಿಪ್ಪುದೊ?
ಅಹಂಕಾರಕ್ಕೆ ಎಡೆಗೊಡದೆ ಲಿಂಗತನುವಾಗಿರಬೇಕು.
ಅಹಂಕಾರರಹಿತವಾದಲ್ಲಿ ಸನ್ನಿಹಿತ ಕಾಣಾ ಕೂಡಲಸಂಗಮದೇವ.
ಅಹಂಕಾರ ಮಾನಸಿಕವಾಗಿ ಅಥವಾ ಬಾಹ್ಯವಾಗಿ ಇದ್ದರೂ ಅಪಾಯಕಾರಿ. ಅದು ಮನಸ್ಸನ್ನು ಆವರಿಸಿದಾಗ ಇಷ್ಟಲಿಂಗ ಪೂಜೆ ಕೂಡ ವ್ಯರ್ಥ. ಅದು ಬಾಹ್ಯವಾಗಿ ಕಾಣಿಸಿಕೊಂಡಾಗ ಎಲ್ಲವೂ ನನ್ನದು, ನನ್ನಿಂದ ಎನ್ನುವ ಮದ ಮಡುಗಟ್ಟಿ ಮನುಷ್ಯ ಮೃಗದಂತೆ ವರ್ತಿಸಬಹುದು. ಹಾಗಾಗಿ ಮಾನಸಿಕ ಮತ್ತು ಬಾಹ್ಯ ಈ ಎರಡೂ ಅಹಂಕಾರದಿಂದ ಮನುಷ್ಯ ಮುಕ್ತನಾಗಬೇಕು. ಅವನ ತನು, ಮನ, ಭಾವ ಲಿಂಗದೊಡನೆ ಬೆರೆಯಬೇಕು. ಆತ ಅಹಂಕಾರರಹಿತನಾದಲ್ಲಿ ಮಾತ್ರ ಲಿಂಗಾಂಗ ಸಮರಸ ಸುಖ ಸಾಧ್ಯ. ಅಹಂಕಾರ ಅಳಿದಾಗ ಮನಶುದ್ಧಿ, ಭಾವಶುದ್ಧಿ, ಬದುಕು ಶುದ್ಧಿಯಾಗುವುದು. ಅಹಂಕಾರವೇ ಎಲ್ಲ ರೀತಿಯ ಅನರ್ಥ, ಅನಾಹುತದ ತಾಯಿಬೇರು. ಬಸವಣ್ಣನವರು ‘ನಾನು’ ಎನ್ನುವ ತಾಯಿಬೇರನ್ನೇ ಕಿತ್ತುಹಾಕಿದ್ದರಿಂದ ಅವರು ಎಲ್ಲರ ಅಣ್ಣ, ಭಕ್ತಿಭಂಡಾರ, ಪೂರ್ವಾಚಾರಿ, ವಿಶ್ವಗುರು, ಗೃಹಸ್ಥ ಜಗದ್ಗುರು ಆಗಲು ಸಾಧ್ಯವಾಯ್ತು. “ಬಸವಣ್ಣನವರು ಪ್ರಧಾನಿ ಸ್ಥಾನದಲ್ಲಿದ್ದು ಕ್ಷತ್ರಿಯರಾಗಿ, ಅರ್ಥಸಚಿವರಾಗುವುದರ ಮೂಲಕ ವೈಶ್ಯರಾಗಿ, ಕೆಳಜಾತೀಕರಣಗೊಂಡು ಶೂದ್ರರಾಗಿ, ಮಾದಾರ ಚೆನ್ನಯ್ಯನ ಮನೆಯ ಮಗನೆಂದು ಅಸ್ಪೃಶ್ಯರಾಗಿ, ಚೆನ್ನಯ್ಯನ ಮನೆಯ ದಾಸನ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು,ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ ಸಂಗವ ಮಾಡಿದರು, ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲಸಂಗಮದೇವ ಸಾಕ್ಷಿಯಾಗಿ ಎಂದು ಹೇಳುತ್ತ ಅನೈತಿಕ ಸಂಬಂಧದಿಂದ ಜನಿಸಿದವರ ಧ್ವನಿಯಾಗಿ ಎಲ್ಲ ತರನಾದ ಅನುಭವವನ್ನು ಪಡೆದವರು. ಎಲ್ಲ ವರ್ಣಗಳ ಸಾಮಥ್ರ್ಯ ಮತ್ತು ದೌರ್ಬಲ್ಯಗಳನ್ನು ಬಲ್ಲವರು…” ಎನ್ನುವ ಮೂಲಕ ಸರ್ವಜನಾಂಗದ ಪ್ರೀತಿಗೆ ಪಾತ್ರರಾದರು ಎಂದು ರಂಜಾನ್ ದರ್ಗಾ ಹೇಳಿರುವ ಮಾತುಗಳಲ್ಲಿ ಅತಿಶಯೋಕ್ತಿ ಏನಿಲ್ಲ.
ಎಲ್ಲ ವರ್ಗದ ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಅವುಗಳ ಮಥನ ಮಾಡಿ ಹೊಸ ಸಮಾಜದ ಸೃಷ್ಟಿಗೆ ಕಾರಣರಾದದ್ದರಿಂದಲೇ ಬಸವಣ್ಣನವರು ಬಹು ಎತ್ತರಕ್ಕೇರಲು ಸಾಧ್ಯವಾಯಿತು. ಇವತ್ತು ಬಸವಣ್ಣನವರಂತೆ ಎಲ್ಲ ವರ್ಗದವರೊಡನೆ ಜಾತ್ಯತೀತರಾಗಿ, ಸಮಾನತೆಯಿಂದ ಬಾಳುವ ಹೃದಯಶ್ರೀಮಂತಿಕೆ ಬೆಳೆಸಿಕೊಳ್ಳಬೇಕಾಗಿದೆ. ಬಸವಣ್ಣನವರು ತಾವೇ ದೊಡ್ಡವರಾಗಲು ಬಯಸಲಿಲ್ಲ. ‘ಮಾವಿನ ಕಾಯೊಳಗೊಂದು ಎಕ್ಕೆಯ ಕಾಯಿ’ ನಾನು ಎನ್ನುವ ಭೃತ್ಯಾಚಾರವೇ ಅವರ ಬದುಕಿನ ಬಹುದೊಡ್ಡ ಬಂಡವಾಳವಾಗಿತ್ತು. ಇದು ಬಸವಣ್ಣನವರ ಭಾಷೆ ಮತ್ತು ಚಿಂತನೆಗೆ ಹೊಳಪು ತಂದುಕೊಟ್ಟ ವಿಚಾರ. ಅವರದು ತಾಯಿಯ ಭಾಷೆ. ಮಕ್ಕಳಿಗೆ ಯಾರು ಏನೇ ಹೇಳಿದರೂ ತಾಯಿಯ ಮಾತು ಮಾತ್ರ ತುಂಬಾ ಪ್ರಿಯ ಮತ್ತು ಹಿತಕಾರಿ. ಕಾರಣ ತಾಯಿ ಹೃದದಿಂದ ಮಾತನಾಡುವಳು. ಅಲ್ಲಿ ಕರುಣೆ, ಮಮತೆ, ವಾತ್ಸಲ್ಯ, ಪ್ರೀತಿ ಇರುತ್ತೆ. ಈ ಎಲ್ಲ ಭಾವನೆಗಳು ಬಸವಣ್ಣನವರ ವಚನಗಳಲ್ಲಿ ಅಡಕವಾಗಿವೆ. ಅವರು ಬಳಸುವ ಭಾಷೆಯಲ್ಲಿ ಅಪ್ಪಿಕೊಳ್ಳುವ, ಮನಸ್ಸನ್ನು ಅರಳಿಸುವ ಗುಣವಿದೆ. ಭಾಷೆ ಮನಸ್ಸನ್ನು ಅರಳಿಸಬೇಕೇ ಹೊರತು ಕೆರಳಿಸಬಾರದು. ಬಸವಣ್ಣನವರು ‘ಬಾಗಿದ ತಲೆಯ ಮುಗಿದ ಕೈಯಾಗಿರಿಸು’ ಎನ್ನುವ ಮೂಲಕ ವಿನಯ, ವಿವೇಕ ಮತ್ತು ಭೃತ್ಯಾಚಾರದ ಪ್ರತೀಕವಾಗಿದ್ದವರು. ಹಾಗಾಗಿ ವಿವಿಧ ಪ್ರದೇಶದಿಂದ ಧರ್ಮಾಸಕ್ತರು ಕಲ್ಯಾಣದ ಅನುಭವ ಮಂಟಪಕ್ಕೆ ಬರಲು, ಸಂಘಟಿತರಾಗಲು ಸಾಧ್ಯವಾಯ್ತು. ಅವರು ‘ಅಯ್ಯಾ’ ಎನ್ನುವ ಮೃದುನುಡಿಗಳಿಂದ ಮಾತನಾಡುತ್ತಿದ್ದರು. ಭಾಷೆಗೆ ವಿಶೇಷ ಮೆರಗು ತಂದುಕೊಟ್ಟವರು ಬಸವಣ್ಣ ಮತ್ತು ಅಕ್ಕನಂಥವರು. ಪ್ರಭುದೇವರು, ಚೆನ್ನಬಸವಣ್ಣ ಮತ್ತಿತರರ ಭಾಷೆ ತಂದೆಯ ಭಾಷೆ ಇದ್ದಂತೆ. ತಂದೆಯ ಭಾಷೆಯಲ್ಲಿ ಆದೇಶವಿರುವುದೇ ಹೆಚ್ಚು. ತಾಯಿ ಮತ್ತು ತಂದೆಯ ಭಾಷೆಯಲ್ಲಿ ವ್ಯತ್ಯಾಸವಿರುವುದನ್ನು ಗಮನಿಸಬಹುದು.
‘ನಾನು’ ಎಂದು ಭಾಷೆಯನ್ನು ಬಳಸುವುದು ಸ್ವಾರ್ಥದ ಮೂಲ. ಆಗ ಎಲ್ಲವೂ ನನ್ನ ಸ್ವಂತದ್ದು ಎನ್ನುವ ಅಹಂಭಾವ ಹೆಡೆಯಾಡುವುದು. ‘ಸ್ವಂತ’ ಶಬ್ದದಲ್ಲಿ ‘ಸ’ಕ್ಕಿರುವ ಒತ್ತಕ್ಷರ ತೆಗೆದರೆ ಅವನೇ ಸಂತ. ಸಂತತನ ಬಂದಾಗ ‘ನಾನು’ ಮರೆಯಾಗಿ ‘ನಾವು’ ಎನ್ನುವ ವಿಶಾಲ ಭಾವನೆ ಅಳವಡುವುದು. ಸ್ವಾರ್ಥಿಯ ಲಕ್ಷಣ ‘ನಾನು’ ಎನ್ನುವುದು. ಸಂತನ ಲಕ್ಷಣ ‘ನಾವು’ ಎನ್ನುವುದು. ನಾವು ಎನ್ನುವ ಭಾವನೆ ಬಂದಾಗ ಸುಧಾರಣೆ ಸುಲಭ. ಬಸವಾದಿ ಶರಣರು ಅಂದಿನ ಸಮಾಜದಲ್ಲಿ ಸುಧಾರಣೆ ತರಲು ಕಾರಣವಾದುದೇ ಅವರ ‘ಸಂತ’ ಭಾಷೆ ಮತ್ತು ಭಾವನೆಗಳು. ಅವರು ಹೇಳುವುದು: ಆಯುಷ್ಯ ತೀರಿದಲ್ಲದೆ ಮರಣವಿಲ್ಲ, ಭಾಷೆ ತಪ್ಪಿದಲ್ಲದೆ ದಾರಿದ್ರ್ಯವಿಲ್ಲ. ಅಂಜಲದೇಕೋ ಲೋಕವಿಗರ್ಭಣೆಗೆ ಕೂಡಲಸಂಗಮದೇವಾ ನಿಮ್ಮಾಳಾಗಿ. ಬಸವಣ್ಣನವರ ಭಾಷೆ ಸಾರ್ವಜನಿಕರ ಬದುಕಿನಲ್ಲಿ ಅಳವಟ್ಟರೆ ನಾನು, ನನ್ನದು ಎನ್ನುವ ಸ್ವಾರ್ಥಕ್ಕೆ ಇಂಬಿಲ್ಲವಾಗುವುದು. ಆಗ ಕಲ್ಯಾಣರಾಜ್ಯದ ಕಲ್ಪನೆ ಸಾಕಾರಗೊಳ್ಳುವುದು. ಈ ಸಿದ್ಧಾಂತವನ್ನು ಅರ್ಥಮಾಡಿಕೊಂಡವರು ಉತ್ತಮ ಸ್ವಾಮಿಗಳಾಗಲು, ಶ್ರೇಷ್ಠ ಆಡಳಿತಗಾರರಾಗಲು, ಆದರ್ಶ ಮಾನವರಾಗಲು ಸಾಧ್ಯ. ಬಸವಣ್ಣನವರ ವಚನಗಳಲ್ಲಿ ಅಹಂಕಾರ ನಿರಶನದ ವಿಚಾರಗಳು ಮತ್ತೆ ಮತ್ತೆ ಬರುತ್ತವೆ.
ಆನೆಯನೇರಿಕೊಂಡು ಹೋದಿರೇ ನೀವು,
ಕುದುರೆಯನೇರಿಕೊಂಡು ಹೋದಿರೇ ನೀವು,
ಕುಂಕುಮ ಕಸ್ತೂರಿಯ ಹೂಸಿಕೊಂಡು ಹೋದಿರೇ ಅಣ್ಣಾ!
ಸತ್ಯದ ನಿಲವನರಿಯದೆ ಹೋದಿರಲ್ಲಾ,
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ!
ಅಹಂಕಾರವೆಂಬ ಸದಮದಗಜವೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ!
ನಮ್ಮ ಕೂಡಲಸಂಗಮದೇವರನರಿಯದೆ
ನರಕಕ್ಕೆ ಭಾಜನವಾದಿರಲ್ಲಾ!
ಸತ್ಯದ ನಿಲವನರಿಯದೆ, ಸದ್ಗುಣವೆಂಬ ಫಲವ ಬಿತ್ತಿ ಬೆಳೆಯದೆ ‘ಅಹಂಕಾರವೆಂಬ ಸದಮದಗಜವೇರಿ ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ!’ ಎನ್ನುವ ಮಾತು ಮನನೀಯವಾಗಿದೆ. ಅದನ್ನೇ ಅಕ್ಕಮಹಾದೇವಿ ಬೇರೊಂದು ರೀತಿಯಲ್ಲಿ ಹೇಳಿದ್ದಾರೆ:
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು.
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು.
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು.
ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು.
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು.
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು.
ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು.
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು.
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ
ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ?
ಮನುಷ್ಯ ಒಳ್ಳೆಯವನಾಗಿದ್ದರೆ ಯಾರೂ ಅವನನ್ನು ಉಪೇಕ್ಷೆ ಮಾಡಲು ಸಾಧ್ಯವಿಲ್ಲ. ಬಸವಣ್ಣನವರ ಒಳ್ಳೆಯ ಗುಣವೇ ಅವರನ್ನು ಎಲ್ಲರೂ ಅಪ್ಪಿಕೊಳ್ಳುವಂತೆ, ಒಪ್ಪಿಕೊಳ್ಳುವಂತೆ ಮಾಡಿದ್ದು. ತಮಗೆ ವೈರಿಗಳೇ ಇಲ್ಲ ಎನ್ನುವಷ್ಟು ಒಳ್ಳೆಯವರಾಗಿದ್ದವರು ಬಸವಾದಿ ಶರಣರು. ಬೆಳಕಿಗೆ ಬೆಲೆ ಕತ್ತಲೆ ಇದ್ದಾಗ. ಸತ್ಯಕ್ಕೆ ಬೆಲೆ ಸುಳ್ಳಿನಿಂದ. ನ್ಯಾಯಕ್ಕೆ ಬೆಲೆ ಅನ್ಯಾಯದಿಂದ. ಧರ್ಮಕ್ಕೆ ಮಹತ್ವ ಅಧರ್ಮದಿಂದ. ನೀತಿಗೆ ಬೆಲೆ ಅನೀತಿ ಹೆಚ್ಚಾದಾಗ. ಮಾನವನಲ್ಲಿ ಅಪಾರ ಕರುಣೆ, ಶಕ್ತಿ, ಸಾತ್ವಿಕ ಗುಣ ಅವ್ಯಕ್ತವಾಗಿರುತ್ತದೆ. ಅವುಗಳನ್ನು ಬಳಸಿಕೊಂಡು ಸಕಲ ಜೀವಾತ್ಮರಿಗೆ ಒಳಿತು ಬಯಸುವ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು. ವ್ಯಕ್ತಿ ತಾನು ಒಳ್ಳೆಯವನಾಗದಿದ್ದರೆ ಲೋಕವೇ ಅವನನ್ನು ತಿರಸ್ಕರಿಸುವುದು. ಲೋಕ ತಿರಸ್ಕರಿಸಬಾರದು ಎಂದರೆ ಎಲ್ಲರನ್ನೂ ಅಪ್ಪಿಕೊಳ್ಳುವ, ಎಲ್ಲ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಬದ್ಧತೆ ಬಹುಮುಖ್ಯ. ಆಗ ಒಳ್ಳೆಯ ಸಮಾಜ ತನ್ನಿಂದ ತಾನೆ ನೆಲೆಗೊಳ್ಳುವುದು. ಅಷ್ಟೇ ಅಲ್ಲ; ಸಜ್ಜನರ ಸತ್ಕಾರ್ಯಗಳಿಗೆ ಬೆಲೆ, ಬೆಂಬಲ ಬರುವುದು. ಅದಕ್ಕೆ ಬೇಕಾದುದು ಸಜ್ಜನರ ಸಂಗ. ಧ್ಯಾನ, ಮೌನ, ಪ್ರಾರ್ಥನೆ. ಬಿತ್ತಿದಂತೆ ಬೆಳೆ.
ಏನಿ ಬಂದಿರಿ, ಹದುಳವಿದ್ದಿರೆ ಎಂದಡೆ
ನಿ[ಮ್ಮೈ]ಸಿರಿ ಹಾರಿ ಹೋಹುದೆ?
ಕುಳ್ಳಿರೆಂದಡೆ ನೆಲ ಕುಳಿಹೋಹುದೆ?
ಒಡನೆ ನುಡಿದಡೆ ಸಿರ, ಹೊಟ್ಟೆಯೊಡೆವುದೆ?
ಕೊಡಲಿಲ್ಲದಿದ್ದೊಡೊಂದು ಗುಣವಿಲ್ಲದಿದ್ದಡೆ
ಮೂಗ ಕೊಯ್ಯದೆ ಮಾಬನೆ ಕೂಡಲಸಂಗಮದೇವಯ್ಯ?
Comments 11
Pratap S
Sep 19, 2024ಅರಿವಿನ ಭಾಷೆಯಲ್ಲಿ ಶರಣರು ಮಾತನಾಡಿದರು. ಅರಿವಿನ ಭಾಷೆ ಕಾಯಕದ ಭಾಷೆಯೂ ಆಗಿತ್ತು, ಶ್ರಮಜೀವಿಗಳ ಬೆವರಿನ ವಾಸನೆಯೂ ಅಲ್ಲಿತ್ತು. ಆದ್ದರಿಂದಲೇ ಅದು ಮಣ್ಣಿನ ಭಾಷೆ, ನೆಲದ ಭಾಷೆ!👌👌
ಗಿರಿಮಲ್ಲೇಶ ಸವಣೂರು
Sep 19, 2024ಬಸವಣ್ಣನವರಲ್ಲಿ ಅಹಂಕಾರದ ಲವಲೇಶ ಇಲ್ಲದ್ದರಿಂದಲೇ ಅವರನ್ನು ಹುಡುಕಿಕೊಂಡು ಎಲ್ಲೆಡೆಯಿಂದ ಸಾಧಕರು ಕಲ್ಯಾಣದತ್ತ ಹರಿದುಬಂದರು. 12ನೆ ಶತಮಾನವನ್ನು ನೆನೆದರೇ ಮನಸ್ಸು ಹಿಗ್ಗುತ್ತದೆ, ಇದೇ ನೆಲದಲ್ಲಿ ಇಂತಹ ಅಪರೂಪದ ಘಟನೆ ಸಂಭವಿಸಿತೆ?! ಎಂದು ಆಶ್ಚರ್ಯ, ಸಂತೋಷ ಉಕ್ಕುತ್ತದೆ. ಗುರುಗಳಿಗೆ ವಂದನೆ.
ಚಂದ್ರಪ್ಪ ಕೊರಲಿ
Sep 24, 2024‘ಸ್ವಂತ’ ಶಬ್ದದಲ್ಲಿ ‘ಸ’ಕ್ಕಿರುವ ಒತ್ತಕ್ಷರ ತೆಗೆದರೆ ಅವನೇ ಸಂತ. ಸಂತತನ ಬಂದಾಗ ‘ನಾನು’ ಮರೆಯಾಗಿ ‘ನಾವು’ ಎನ್ನುವ ವಿಶಾಲ ಭಾವನೆ ಅಳವಡುವುದು- ಪೂಜ್ಯರ ಮಾತುಗಳು ಸುಂದರವಾಗಿವೆ👏🏾
VIJAYAKUMAR KAMMAR
Sep 25, 2024Excellant artical.
Shraddhananda swamiji, Vijayapura
Sep 26, 2024All articles in Bayalu are very good.
Shivananda Chavadi
Sep 27, 2024ಬಸವಣ್ಣನವರಿಂದ ಶರಣ ಸಮಾಜ ನಿರ್ಮಾಣವಾದದ್ದರ ಹಿಂದೆ ಅವರ ಸರಳ ವ್ಯಕ್ತಿತ್ವದ ಘನ ರಹಸ್ಯ ಅಡಗಿದೆ ಎನ್ನುವುದನ್ನು ಪೂಜ್ಯ ಗುರುಗಳು ತಿಳಿಸಿ ಕೊಟ್ಟಿದ್ದಾರೆ.
ಗಂಗಾದೇವಿ ಮಹಾಲಿಂಗಪ್ಪ
Sep 29, 2024ಅನುಭಾವಿಕರಾದ ಬಸವಾದಿ ಶರಣರು ನುಡಿದದ್ದೇ ವಚನ ಭಾಷೆಯಾಯಿತು, ಅವರು ನಡೆದದ್ದೇ ಚಿಂತನೆಯಾಯಿತು.
ಗುರುರಾಜ ಜಯನಗರ
Sep 29, 2024ಪರಸ್ಪರರ ಮೇಲೆ ದ್ವೇಷ, ಅನುಮಾನಗಳೇ ತುಂಬುತ್ತಿರುವ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಕಾಲದಲ್ಲಿ ಶರಣರಿಗೆ ಜಾಗವಿದೆಯೇ? ಎಂಬ ಪ್ರಶ್ನೆ ನನ್ನನ್ನ ಕಾಡುತ್ತಿದೆ ಗುರುಗಳೇ.
ಪರಮಶಿವಪ್ಪ ಬಾಗೂರು
Oct 4, 2024ಬಸವಣ್ಣನವರ ಭಾಷೆ, ಚಿಂತನೆ ಎಂಥವರನ್ನೂ, ಎಲ್ಲಾ ಕಾಲದವರನ್ನೂ ಸೆಳೆಯಬಲ್ಲವು ಅದರಲ್ಲಿ ಎರಡು ಮಾತಿಲ್ಲ. ಆದರೆ ಅವರ ವ್ಯಕ್ತಿತ್ವವನ್ನೇ ಇವತ್ತು ಹಾಳುಮಾಡುತ್ತಿದ್ದಾರೆ… ಇದಕ್ಕೆ ತಾವೇನಾದರೂ ಪರಿಹಾರ ಸೂಚಿಸಬೇಕು…..
gurudeva HUbli
Oct 8, 2024ಬಸವಣ್ಣನವರ ವಚನಗಳಲ್ಲಿ ಕರುಣೆ, ಮಮತೆ, ವಾತ್ಸಲ್ಯ, ಪ್ರೀತಿಯ ಭಾವನೆಗಳೆಲ್ಲಾ ಅಡಕವಾಗಿವೆ. ಅವರು ಬಳಸುವ ಭಾಷೆಯಲ್ಲಿ ಅಪ್ಪಿಕೊಳ್ಳುವ, ಮನಸ್ಸನ್ನು ಅರಳಿಸುವ ಗುಣವಿದೆ… ಭಾಷೆ ಮನಸ್ಸನ್ನು ಅರಳಿಸಬೇಕೇ ಹೊರತು ಕೆರಳಿಸಬಾರದು… ಸಾರ್ವಕಾಲಿಕ ಸತ್ಯದ ನುಡಿ. ಶರಣರಿಂದ ನಾವು ನಡೆ- ನುಡಿ ಎರಡನ್ನೂ ಕಲಿಯಬೇಕಿದೆ.
Shivanna M
Oct 8, 2024ನಾನು, ನಾನು ಅಂತ ಹೊಡೆದಾಡುವವರು ಸಾಮಾನ್ಯರಿಗಿಂತ ಸ್ವಾಮಿಗಳೇ ಹೆಚ್ಚು. ನಾನತ್ವವೆನ್ನುವ ಅಂಟನ್ನು ಮೈತುಂಬಾ ಅಂಟಿಸಿಕೊಂಡ ಕಾವಿಧಾರಿಗೂ ಎಲ್ಲೆಲ್ಲೂ ಇದ್ದಾರೆ. ಎಲ್ಲಾ ಮಠದಲ್ಲೂ ತುಂಬಿದ್ದಾರೆ. ಮಠಗಳ ಒಳರಾಜಕೀಯ ನೋಡಿ ನೋಡಿ ಜಿಗುಪ್ಸೆ ಬಂದುಹೋಗಿದೆ. ನಾನು ಹೋಗಿ ನಾವು ಬರಬೇಕೆಂದು ಬೋಧಿಸಬೇಕಾದ ಗುರುಗಳಲ್ಲೇ ಅಹಂ ಮದಗಳು ಇರುವಾಗ ಸಂಸಾರಸ್ಥರ ಗತಿ ಏನು ಗುರುಗಳೇ?