ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
ಈ ಲೇಖನ ಓದಿದ ಬಳಿಕ ಬಸವಾನುಯಾಯಿಗಳು ತಬ್ಬಿಬ್ಬಾಗಬಹುದೆಂದು ನಾನು ಬಲ್ಲೆ. ಸುಮಾರು ಎಂಟು ನೂರು ವರ್ಷಗಳಷ್ಟು ಹಳೆಯದಾದ ವಚನಗಳಲ್ಲಿರುವ ‘ಭವ’ ಮತ್ತು ‘ಲಿಂಗ’ ಎಂಬ ಪರಿಭಾಷೆಗಳನ್ನು ಆಧುನಿಕ ಕಾಲಕ್ಕೆ ತಂದು ನಿಲ್ಲಿಸಿ, ನಾಗರಿಕ ಬದುಕಿನೊಂದಿಗೆ ನುಡಿವ ಉದ್ಯೋಗ ಕೆಲವರಿಗೆ ಬೊಗಳೆಯಂತೆ ಕಾಣಬಹುದು; ಅಥವಾ ವಚನಗಳಲ್ಲಿ ಬಗೆಬಗೆಯ ಸಿದ್ಧಾಂತಗಳನ್ನು ಕಲ್ಪಿಸಿಕೊಳ್ಳುವುದರಲ್ಲಿ ವಿಚಿತ್ರ ಸುಖ ಕಂಡುಕೊಂಡವರಿಗೆ ಇದು ಹಾಸ್ಯಾಸ್ಪದವೆನಿಸಬಹುದು. ಹಾಗೆಯೇ… ವಚನಗಳನ್ನು ಕಾವ್ಯಾತ್ಮಕ ರಸನಿಮಿಷಗಳನ್ನಾಗಿಸಿ ರೋಮಾಂಚನಕ್ಕೊಳಗಾಗುವವರಿಗೆ ಇದು ಒಂದು ಸಂಜೆಯ ಸ್ನ್ಯಾಕ್ಸ್ ನ ಆಸ್ವಾದದಂತೆ ಕ್ಷಣವಿದ್ದು ಮಾಯವಾಗಿ ಬಿಡಬಹುದು. ಈ ಎಲ್ಲಾ ಅತಿರೇಕಗಳನ್ನು ಬದಿಗೊತ್ತಿ ಈ ಲೇಖನದಲ್ಲಿ ‘ಭವ’ ಮತ್ತು ‘ಲಿಂಗ’ವು ಬದುಕಿನ ನಿಜಸತ್ವವನ್ನು ಅನುರಣಿಸುವ ಕೈಮರವನ್ನಾಗಿ ಓದುಗರ ಮುಂದಿಡಲು ಇಚ್ಛಿಸುತ್ತಿದ್ದೇನೆ.
ಎಲ್ಲವೂ ಸದಾ ಬದಲಾಗುವಿಕೆಗೆ ಅಧೀನವಾಗಿರುವ ಈ ಪ್ರಾಕೃತ ಜಗತ್ತಿನ ವಿಲಕ್ಷಣಗಳಲ್ಲಿ ಭಾಷೆಯೂ ಪರಿವರ್ತನೆಗಳಿಗೆ ಒಡ್ಡಿಕೊಂಡೇ ಕಾಲದಿಂದ ಕಾಲಕ್ಕೂ… ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೂ… ತನ್ನ ಆದ್ಯತೆಗಳನ್ನೂ, ಬಳಕೆಯ ವಿಧಾನಗಳನ್ನೂ ಹಾಗೂ ಗ್ರಹಿಕೆ ಮತ್ತು ಅಭಿವ್ಯಕ್ತಿಯ ವಿನ್ಯಾಸಗಳನ್ನೂ ಬದಲಿಸಿಕೊಂಡು ಬಳಕೆಗೊಳಗಾಗುತ್ತಿರುತ್ತದೆ. ಇದರಿಂದಾಗಿಯೇ ಭಾಷೆಯಲ್ಲಿ ಬಳಸಲಾಗುವ ಒಂದು ಪದ ಮತ್ತದರ ಪದಾರ್ಥ ಸಮೂಹಗಳಲ್ಲಿ ಹಾಗೂ ಒಂದು ನಿರ್ದಿಷ್ಟವಾದ ಜೀವನಾನುಭವ ಮತ್ತದರ ಸಂಬಂಧದ ನುಡಿಕಟ್ಟುಗಳ ಬಳಕೆಗಳಲ್ಲಿ ವಿಫುಲವಾದ ಸಾಮ್ಯತೆ ಇದ್ದಂತೆ, ಕೆಲವು ಸಲ ಒಂದೇ ಸಂದರ್ಭಕ್ಕೆ ಅನೇಕ ವ್ಯತಿರೇಕಾರ್ಥಗಳು, ಅಸಂಬದ್ಧತೆಗಳು ಮತ್ತು ಅನೇಕಾರ್ಥಗಳೂ ತಲೆದೋರುತ್ತವೆ. ವಚನ ಸಾಹಿತ್ಯದ ಮಟ್ಟಿಗೆ ಹೇಳುವುದಾದರೆ, ಎಂಟುನೂರು ವರ್ಷಗಳಷ್ಟು ಹಳೆಯದಾದ ಭವ, ಲಿಂಗ, ಅನುಭಾವ, ಅನುಪಮಸುಖ, ಭಕ್ತಿ, ಇತ್ಯಾದಿ ಭಾಷಾ ಪರಿಕರಗಳನ್ನು ಆಧುನಿಕ ಕಾಲದ ಜಾಯಮಾನಕ್ಕೆ ತಕ್ಕಂತೆ ಒಗ್ಗಿಸಿಕೊಂಡು ಓದುವುದು ಮಹತ್ವದ ಸಂಗತಿಯಾಗಿದೆ. ಏಕೆಂದರೆ ವಚನಗಳು ಅತೀವವಾದ ಶಾಸ್ತ್ರೀಯ ಶಬ್ದಾರ್ಥಗಳನ್ನು ನಿರಾಕರಿಸಿ ಕೇವಲ ಶಬ್ದದ ನೆಪದಲ್ಲಿ ಸತ್ಯವನ್ನು ಕಟ್ಟಲು ಹೆಣಗಾಡುತ್ತಿರುತ್ತವೆ. ಇದು ಸ್ವಲ್ಪ ಅಧ್ಯಯನಶೀಲತೆಯನ್ನು ಬೇಡುತ್ತದೆಯೆಂಬುದನ್ನು ಮರೆಯಲಾಗದು. ಬದಲಾವಣೆಯ ಅಸ್ಥಿತ ಪ್ರಜ್ಞೆಯಿಂದ ವಚನಗಳನ್ನು ಓದುವ ಕೌಶಲ್ಯವಿರದಿದ್ದಲ್ಲಿ ವಚನ ಸಾಹಿತ್ಯವನ್ನು ನವೀಕರಣವಾಗದಾ ಗೊಡ್ಡು ಸಂಪ್ರದಾಯಗಳಿಗೆ ಬಲಿ ಕೊಡಬೇಕಾದ ಅಪಾಯಕ್ಕೆ ಗುರಿಯಾಗಿಸಬೇಕಾಗುತ್ತದೆ. ವಚನಗಳಿಗಿರುವ ಸಾಮುದಾಯಿಕ ಕಳಕಳಿ, ಅವುಗಳಲ್ಲಡಗಿರುವ ಜೀವನ ಕೌಶಲ್ಯಗಳನ್ನು ಬಳಸಿಕೊಳ್ಳುವಲ್ಲಿ ಅವುಗಳನ್ನು miss ಮಾಡಿಕೊಳ್ಳುತ್ತಿರುವುದಕ್ಕೂ ಅವುಗಳನ್ನು ‘ಸಂಸ್ಕೃತಬದ್ಧ’ಗೊಳಿಸುತ್ತಿರುವುದೂ ಒಂದು ಕಾರಣವೇ ಆಗಿದೆ. ವಚನಗಳನ್ನು ನಿಂತ ನೀರಾಗಿಸದೇ ಹರಿಯುವ ನೀರನ್ನಾಗಿಸಿದಾಗ ಮಾತ್ರ ಅವು ಬಳಸಲು ಯೋಗ್ಯವಾಗಿರುತ್ತವೆ. ಇದನ್ನೇ ವಚನಕಾರರು, “ಲಿಂಗವಿಲ್ಲದಾ (ಕ್ರಿಯೆಯಿಲ್ಲದ) ಭಾಷೆಯ ಸೂತಕ ಕೇಳಲಾಗದು” ಎಂದು ಎಚ್ಚರಿಸಿದರು.
ಈ ದೃಷ್ಟಿಯಿಂದ ‘ಭವ’ ಮತ್ತು ‘ಲಿಂಗ’ ವಚನಕಾಲದಲ್ಲಿ ಏನಾಗಿತ್ತು? ಆಧುನಿಕ ಕಾಲದಲ್ಲಿ ನಾವು ಚರ್ಚಿಸುತ್ತಿರುವ ರಾಜಕೀಯ ಸಿದ್ಧಂತಗಳಿಗೂ ಹಾಗೂ ಸದಾ ಅನುಭವಿಸುತ್ತಿರುವ ಸಾಮಾಜಿಕ ಸ್ಥಿತ್ಯಂತರಗಳಿಗೂ ಹಾಗೂ ನಾವು ಗುಲಾಮರಾಗಿರುವ ಅಸಂಬದ್ಧ ಬಾಹ್ಯಾಡಂಬರಗಳಿಗೂ ಹಾಗೂ ನಮ್ಮ ಬುದ್ಧಿಗೇಡಿತನಗಳ ನೆಲೆಗೂ ವಚನಗಳನ್ನು ಮುಖಾಮುಖಿಯಾಗಿಸುವ ಬಗೆ ಹೇಗಿರಬೇಕು? ಇದು ಅನುಸರಣೆಗೆ ಬಂದಾಗ ಮಾತ್ರ ಬಸವ ತತ್ವ ಮತ್ತದರ ಸಾಹಿತ್ಯಕ್ಕೆ ಇರುವ ಶಕ್ತಿವಂತವಾದ ಕ್ರಿಯಾಶೀಲ ಘನತೆ ಜೀವಂತಿಕೆ ಪಡೆದುಕೊಳ್ಳುತ್ತದೆ. ಇಲ್ಲದಿದ್ದ ಪಕ್ಷದಲ್ಲಿ ವಚನಗಳು ಪ್ರಭಾವಿಸಲಾಗದ ಒಂದು ವಿಫಲ ತೋರಿಕೆಯಾಗುತ್ತವೆ.
ಭವ ಮತ್ತು ಲಿಂಗವನ್ನು ಜೀವನ ಮೀಮಾಂಸೆಯನ್ನಾಗಿ ಸ್ವೀಕರಿಸಿದಾಗ ಅವೆರಡೂ ಏನಾಗಿರಬಲ್ಲವು? ನೋಡೋಣ…
ಭೂತದ ಕೊಳಕನ್ನು ಅಂಟಿಸಿಕೊಳ್ಳದೆ, ಭವಿತವ್ಯದ ಭ್ರಮೆಗಳಿಗೆ ಅಡಿಯಾಳಾಗದೆ, ವರ್ತಮಾನದ ತದನ್ನಿಮಿಷ- ನಿಮಿಷ ಮೌನದ ಪ್ರತ್ಯಕ್ಷತೆಯ ಪರಮ ಮಹತ್ವದ ಆಳನಿರಾಳಕ್ಕೆ ಮನುಷ್ಯಕುಲವನ್ನೆಲ್ಲ ತಂದುನಿಲ್ಲಿಸಿ ಬಿಡಬೇಕೆಂಬ ಉನ್ನತಾಪೇಕ್ಷೆಯನ್ನು ಹೊಂದಿರುವ ವಚನಸಾಹಿತ್ಯದ ಬಹುಮುಖ್ಯ ವಕ್ತಾರರಾದ ಚೆನ್ನಬಸವಣ್ಣನವರು ಲಿಂಗದ ಕುರಿತಾಗಿ ಜನರಲ್ಲಿರುವ ಅಪಕಲ್ಪನೆಗಳನ್ನು ಕಟುವಾಗಿ ಅಲ್ಲಗಳೆಯುತ್ತಾರೆ. ಲಿಂಗವನ್ನು ‘ಆಕಾರ ಲಿಂಗವನ್ನಾಗಿಯೋ’ ಇಲ್ಲವೇ ‘ನಿರಾಕಾರ ಲಿಂಗ’ ವನ್ನಾಗಿಯೋ ಕಲ್ಪಿಸಿಕೊಂಡು ಭ್ರಾಂತಿಪೂರ್ವಕ ಆಚರಣೆಗಳನ್ನು ನಿಜವೆಂದು ನಂಬಿರುವವರನ್ನು ಆತ ಪಾತಕಿಗಳೆನ್ನುತ್ತಾರೆ.
ಅಂಗದ ಮೇಲೆ ಲಿಂಗಯುಕ್ತವಾದ ಭಕ್ತನು
ಆ ಭಕ್ತಿಯಾಚಾರದ ನೆಲೆಯನರಿಯದೆ
ಸಂಬಂಧಕ್ಕನ್ಯವಾದ ನಂದಿ ವೀರಭದ್ರ ಮತ್ತೆ ಲಿಂಗಾಂಗಗಳೆಂಬಿವಾದಿಯಾದ
ಭವಿಶೈವದೈವಂಗಳ ಹೆಸರಿನಲ್ಲಿ ಮೀಸಲುವಿಡಿದು ಬಾಸಣಿಸಿ
ಮನೆದೈವಕ್ಕೆಂದು ನೇಮಿಸಿ ಮಾಡಿದ ಪಾಕವ
ತನ್ನ ಕರಸ್ಥಲದ ನಿಜ ವೀರಶೈವಲಿಂಗಕ್ಕೆ
ಓಗರವೆಂದರ್ಪಿಸುವದು ಅನಾಚಾರ, ಪಂಚಮಹಾಪಾತಕ.
ಅವನು ಸದಾಚಾರಕ್ಕೆ ಹೊರಗು, ಅದೇನು ಕಾರಣವೆಂದೊಡೆ:
ಅದು ಶೈವದೈವೋಚ್ಛಿಷ್ಟವಾದ ಕಾರಣ…
ಈ ಮೇಲಿನ ವಚನದಲ್ಲಿ ಭವಿ, ಭಕ್ತ, ಲಿಂಗ- ಈ ಮೂರರ ಪರಸ್ಪರಾವಲಂಬನೆಯ ಸಂಬಂಧದಲ್ಲಿ ನಡೆಯುವ ಪ್ರಕ್ರಿಯೆ (ಆಚಾರ) ಏನೆಂಬುದು ಶರಣರಲ್ಲಿ ಬಹಳ ಮಹತ್ವವಾದುದು. ಗುರುಗಳು ಭವಿಯನ್ನು ಭಕ್ತನನ್ನಾಗಿಸುವ ಕ್ರಿಯೆ ಶರಣರಲ್ಲಿ ತುಂಬಾ ಯಥೇಚ್ಛವಾಗಿ ವಿವರಿಸಲ್ಪಟ್ಟಿದೆ. ಭಕ್ತನಾದವನಿಗೆ ಇರಲೇ ಬೇಕಾದ ಮೊದಲ ಅರ್ಹತೆಯೆಂದರೆ ಅವನು ‘ಭವ’ವನ್ನು ನಿರಾಕರಿಸಿಕೊಳ್ಳಲೇ ಬೇಕು.
ಹದಿನೆಂಟು ಯುಗದವರು ಲಿಂಗವ ಪೂಜಿಸಿ
ದೃಷ್ಟವಾವುದು ನಷ್ಟವಾವುದೆಂದರಿಯದೆ
ಭಾವ ಭ್ರಮಿತರಾದರು.
ಜೀವ ಸಂಕಲ್ಪಿಗಳಾದವರು
ಜೀವದಾಹುತಿಯನೆ ಲಿಂಗಕ್ಕರ್ಪಿತವೆಂಬರು,
ಭವದ ಬಳ್ಳಿಯ ಹರಿಯಲರಿಯರು,
ಇಂಥವನೆ ಭಕ್ತ? ಇಂಥವನೆ ಪ್ರಸಾದಿ?… (ಚೆನ್ನಬಸವಣ್ಣ)
ಭವದ ಬಳ್ಳಿ ಹರಿಯಲರಿಯದೆ ಹದಿನೆಂಟು ಯುಗಗಳಿಂದ ಲಿಂಗವ ಪೂಜಿಸಿ ಏನೂ ಫಲವಿಲ್ಲ ಎಂದಾದ ಮೇಲೆ ‘ಭವ’ ಎಂಬುದು ಏನದು? ಅದು ನಮ್ಮದೆ ಆದ ಹಿಂದಿನ ದಾರುಣತೆ! ತಾನೇ ಹೆಣೆದುಕೊಂಡಿರುವ ಬಲೆಯಲ್ಲಿ ತಾನೇ ಸಿಕ್ಕಿ ವಿಲವಿಲ ಒದ್ದಾಡುತ್ತಿರುವ ಭೀಕರತೆ! ನಮ್ಮ ಸುತ್ತಲಿನ ಸಮಾಜ ನಮ್ಮ ಮೇಲೆ ಹೇರಿರುವುದನ್ನೆಲ್ಲಾ ನಂಬಿ ಮೈಮೇಲೆ ಎಳೆದುಕೊಂಡಿರುವ ಕಡು ಮೂರ್ಖತನ! ಇವುಗಳನ್ನು ಕಿಂಚಿತ್ತೂ ಪರಿಶೀಲನೆಗೊಳಪಡಿಸಲಾಗದ ಮನೋದೌರ್ಬಲ್ಯ! ಭವ ಒಂದು ತಿದ್ದಲಾಗದಾ ಅನುಕರಣಾ ವ್ಯಾಧಿ! ಪರತಂತ್ರಕ್ಕೆ ತನ್ನನ್ನು ಕೊಟ್ಟುಕೊಂಡಿರುವ ಬಲಿ! ಇದನ್ನೇ ಈ ವಚನದಲ್ಲಿ ‘ದ್ರಷ್ಟ’ ಮತ್ತು ‘ನಷ್ಟ’ ಎಂದು ಸೂಚಿಸಲಾಗಿದೆ. ದ್ರಷ್ಟವೆಂದರೆ ವಿಚಾರಣೆಗೆ ಹಚ್ಚಬೇಕಾದದ್ದು. ನಷ್ಟವೆಂದರೆ- ಇದು ಸುಳ್ಳೆಂದು ತಿಳಿದಾದ ಮೇಲೆ ಅದನ್ನು ನಿರಾಕರಿಸಬೇಕಾದದ್ದು.
ನಾಗರೀಕತೆಯ ಸೋಗು ಹಾಕಿಕೊಂಡಿರುವ ನಮ್ಮ ಬದುಕುಗಳಲ್ಲಿ ನಾವು ಎದಿರುಗೊಂಡಿರುವ ಎರಡು ವಸ್ತುಸ್ಥಿತಿಗಳನ್ನು ಗಮನಿಸಲು ಹೋಗುವುದೇ ಇಲ್ಲ. ಒಂದೋ, ಪ್ರಕೃತಿಕವಾಗಿ ನಮಗೆ ಒದಗಿ ಬಂದಿರುವ ಜೀವ, ಶರೀರ, ಆಹಾರವಿಹಾರ, ಕಾಯಕ, ವಿವೇಕ, ತಾಕ್ಷಣಿಕವಾಗಿ ನಿರ್ವಹಿಸಲೇ ಬೇಕಾದ ವರ್ತಮಾನದ ಜವಾಬ್ದಾರಿಗಳು ಮತ್ತು ಎಚ್ಚರಗಳು, ಬದುಕಿನ ಇತಿಮಿತಿಗಳು, ರೋಗರುಜಿನಗಳೊಂದಿಗೆ ನಾವು ಒಪ್ಪಿಕೊಳ್ಳಲೇ ಬೇಕು. ಆದರೆ ಇವೆಲ್ಲವೂ ಭವವಲ್ಲ. ಇವೆಲ್ಲವುಗಳೊಂದಿಗೆ ಬದುಕನ್ನು ಒಡ್ಡಿಕೊಂಡು ನಡೆಸುವ ಬಾಳುವೆ ಜೀವನ ಕೌಶಲ್ಯವಾಗಿದೆ. ಎರಡನೆಯದು, ಇವೆಲ್ಲವುಗಳಿಗಿಂತಲೂ ಭೀಕರವಾದ ವಿಚಾರಧಾರೆಗಳು ಕಾಲಾಂತರದಲ್ಲಿ ಬಲಾತ್ಕಾರವಾಗಿ ನಮ್ಮ ಮೇಲೆ ಹೇರಲ್ಪಟ್ಟಿವೆ. ನಾವು ಜೀವ ಶರೀರ ಸಂಬಂಧದ ಕ್ಷಣಕ್ಷಣದಲ್ಲಿ ಬದುಕುತ್ತಿದ್ದೇವೆ ಎಂಬ ಸತ್ಯಕ್ಕಿಂತಲೂ ಭಾವಗಳಲ್ಲಿ ಬದುಕುತ್ತಿದ್ದೇವೆ. ಈ ಪ್ರಮಾದ ನಮ್ಮನ್ನು ಇಚ್ಛೆ ಅನಿಚ್ಛೆಗಳ ಹಿಂದೆ ಬೀಳುವಂತೆ ಮಾಡಿ ನಮ್ಮೊಳಗೆ ಸರಿಪಡಿಸಲಾಗದಷ್ಟು ಅಭದ್ರತೆಗಳನ್ನು, ಒಂಟಿತನಗಳನ್ನು, ಪ್ರತ್ಯೇಕತೆಯ ಅಹಂಕಾರಿಕೆಗಳನ್ನು ನಿರ್ಮಾಣ ಮಾಡಿದೆ. ಮನುಷ್ಯ ಸ್ವಾರ್ಥಗಳಿಂದ ಸೃಷ್ಟಿಸಲ್ಪಟ್ಟ ಅತ್ಯಾಸೆಗಳಿಗೆ, ಲಂಪಟತನಗಳಿಗೆ, ಢಾಂಬಿಕ ಪ್ರದರ್ಶನಗಳಿಗೆ, ನಂಬುಕೆ ದ್ರೋಹಗಳಿಗೆ, ವೈರುಧ್ಯಗಳಿಗೆ ಊಳಿಗತನ ಮಾಡುವುದೇ ಬದುಕಾಗಿ ಹೋಗಿದೆ. ಈ ಪ್ರಜ್ಞಾಹೀನ ಸ್ಥಿತಿಯಿಂದಾಗಿ ನಾವು ನಮ್ಮ ಸುತ್ತಲೂ ನಡೆಯುತ್ತಿರುವ ಘಟನೆಗಳು ಮತ್ತು ಸನ್ನಿವೇಶಗಳಲ್ಲಿ ತಪ್ಪಿಸಿಕೊಳ್ಳಲಾಗದಂತೆ ಸಿಕ್ಕಿಹಾಕಿಕೊಂಡಿದ್ದೇವೆ. ‘ಭವ’ ಎಂದರೆ ಭಾವದಿಂದ ಸೃಷ್ಟಿಸಲ್ಪಟ್ಟದ್ದನ್ನು ನಾವು ಅನುಭವಿಸುವುದು ಎಂದಾಗುತ್ತದೆ. ಭಾವವೆಂಬುದು ನಮ್ಮ ಸುತ್ತಲಿನ ಜಗತ್ತಿನ ಮುಂದೆ ನಮಗೆ ತಿಳಿಯದಂತೆ ನಾವೇ ಒಡ್ಡಿಕೊಂಡಿರುವ ಬೃಹತ್ ಕನ್ನಡಿಯಿದ್ದಂತೆ! ಎಲ್ಲರಲ್ಲೂ ಇರುವ ಎಲ್ಲಾ ಕೊಳಕುಗಳೂ ನಮ್ಮ ಭಾವಗಳಲ್ಲಿ ಪ್ರತಿಫಲಿಸುತ್ತಿರುತ್ತವೆ. ವಿಷಯಾಸಕ್ತಿಗಳ ರೂಪದಲ್ಲಿರುವ ಇದು ನಮ್ಮ ಸಾಮರ್ಥ್ಯವನ್ನು ಧ್ವಂಸ ಮಾಡುತ್ತಿರುತ್ತದೆ. ವಿಷಯಾಸಕ್ತಿಗಳು ನಮ್ಮಲ್ಲಿ ಕಿತ್ತೊಗೆಯಲಾಗದಷ್ಟು ಆಳವಾಗಿ ಬೇರು ಬಿಟ್ಟುಕೊಂಡಿರುವ ದೃಷ್ಟಿಕೋನಗಳೂ ಆಗಿವೆ. ಇವು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ಆಗಿರಬಹುದು. ಆದರೆ ಇವುಗಳ ಉದ್ದೇಶ ಒಂದೇ ಆಗಿದೆ. ಮನುಷ್ಯ ದೇಹದಲ್ಲಿ ಅಡಗಿರುವ ಸದೃಢವಾದ ಶಕ್ತಿ ಸಾಮರ್ಥ್ಯಗಳನ್ನು ಮತ್ತು ಸ್ವಾಸ್ಥ್ಯ ಮನೋಬಲವನ್ನು ಇವು ಅಲ್ಲೋಲಕಲ್ಲೋಲ ಮಾಡುತ್ತಿರುತ್ತವೆ. ವಿಷಯಾಸಕ್ತಿಗಳು ಮತ್ತು ದೃಷ್ಟಿಕೋನಗಳ ಪರಿಣಾಮವೇನೆಂದರೆ ಅವು ಸದಾ ಬಗೆಹರಿಸಲಾಗದ ಯಾತನೆಗಳನ್ನು ಸೃಷ್ಟಿಸುತ್ತಿರುತ್ತವೆ. ಪ್ರತಿಕ್ಷಣ ನಾವು ಅವುಗಳಲ್ಲೇ ಹುಟ್ಟಿ ಅವುಗಳಲ್ಲೇ ಸಾಯುತ್ತಿರುತ್ತೇವೆ. ಅವುಗಳಲ್ಲೇ ನರಳಾಡುತ್ತಿರುತ್ತೇವೆ.
ಈ ಜಗತ್ತಿಗೆ ಬಂದ ಎಲ್ಲಾ ಮನುಷ್ಯರಿಗೂ ಲಭ್ಯವಾಗಲೇ ಬೇಕಾಗಿರುವ ‘ಭವ’, ಭಕ್ತನಾದವನಿಗೆ ಪೂರ್ವಾಶ್ರಯವಷ್ಟೇ ಆಗಿದೆ. ಅಂದರೆ ಅವನು ಹಿಂದಿನ ಜೀವನಕ್ರಮದಿಂದ ಹೊರಬಂದವನಾಗಿದ್ದಾನೆ. ಕಂಬಳಿಹುಳು ಲಾರ್ವಾದಿಂದ ಬದಲಾಗಿ ಚಿಟ್ಟೆಯಾಗುವ ತೆರದಿ ಹಿಂದಿನ ಬದುಕನ್ನು ಹೋಗಲಾಡಿಸಿ ಈ ಕ್ಷಣದಲ್ಲಿ ಬದುಕುವ ಸುಂದರ ಜೀವಿಯಾಗಿದ್ದಾನೆ. ಆದ್ದರಿಂದ ಆತ ಭಕ್ತನೆನಿಸಿಕೊಂಡ. ಭಕ್ತನಿಗೆ ಭವ ಸೋಂಕದಂತೆ ಗುರುಕಾರುಣ್ಯ ಅವನನ್ನು ಗಟ್ಟಿಗೊಳಿಸಿದೆ.
ಪೂರ್ವಬೀಜನಲ್ಲ, ಪೂರ್ವಪ್ರಾಣಿಯಲ್ಲ, ಪೂರ್ವಾಹಾರಿಯಲ್ಲ.
ಪೂರ್ವಾದಿಗಳೆಲ್ಲವನುತ್ತರಿಸಿ ಕಳೆದು ಲಿಂಗಗರ್ಭಿತನಾದ,
ಕೂಡಲಚೆನ್ನಸಂಗಾ ನಿಮ್ಮ ಶರಣ.
ಭವಕ್ಕೆ ಹುಟ್ಟುವವನಲ್ಲ, ಸಂದೇಹ ಸೂತಕಿಯಲ್ಲ
ಆಕಾರ ನಿರಾಕಾರನಲ್ಲ ನೋಡಯ್ಯಾ.
ಕಾಯವಂಚಕನಲ್ಲ, ಜೀವವಂಚಕನಲ್ಲ,
ಶಂಕೆಯಿಲ್ಲದ ಮಹಾಮಹಿಮ ನೋಡಯ್ಯಾ.
ಕೂಡಲಸಂಗನ ಶರಣನುಪಮಾತೀತ, ನೋಡಯ್ಯಾ.
ಯಾವ ವಿಧಾನದಲ್ಲಿ ಭವಿಯನ್ನು ಭಕ್ತನನ್ನಾಗಿಸಲಾಯಿತು? ಎಂಬ ಪ್ರಶ್ನೆಗೆ ಉತ್ತರ ವಚನಗಳಲ್ಲಿ ಸ್ಪಷ್ಟವಾಗಿ ಹಾಸುಹೊಕ್ಕಾಗಿದೆ. ತನ್ನನ್ನು ತಾನು ತಿಳಿಯುವ ಮೂಲಕ ಅವನು ಭಕ್ತನಾಗಿದ್ದಾನೆ. ‘ಪೂರ್ವಾದಿಗಳೆಲ್ಲವನುತ್ತರಿಸಿ’ ಎಂಬ ಮಾತು ಭವವು ಉಂಟು ಮಾಡಿರುವ ಎಲ್ಲಾ ಪ್ರಮಾದಗಳನ್ನು ಕಂಡುಹಿಡಿದು, ಇದು ಮಾನವನ ಅವನತಿಗೆ ಕಾರಣವಾಗಿದ್ದೆಂದು ಅರಿವಾಗಿಸಿಕೊಂಡು ಭವವನ್ನು ನಿರಾಕರಿಸಿದ್ದನಾದ್ದರಿಂದ ಅವನು ಭಕ್ತ.
ಅಲ್ಲಮರಂತೂ ‘ಭವ ಸಂಸಾರ’ವನ್ನು ಸತ್ತ ಹೆಣವೆಂದು ಜರಿಯುತ್ತಾರೆ. ಮನುಷ್ಯ ಸೃಷ್ಟಿಸಿಕೊಂಡಿರುವ ಸಮಾಜದ ವ್ಯವಸ್ಥೆಗಳು, ಮತ್ತವನ ಸ್ವಭಾವಗಳನ್ನು ಭವದ ಹೆಣವನ್ನು ತಿನ್ನಲು ಬಂದ ನಾಯಿಜಗಳವೆಂದು ಛೇಡಿಸುತ್ತಾರೆ.
ಸಂಸಾರವೆಂಬ ಹೆಣ ಬಿದ್ದಿದ್ದಡೆ, ತಿನಬಂದ ನಾಯ ಜಗಳವ ನೋಡಿರೆ !
ನಾಯ ಜಗಳವ ನೋಡಿ ಹೆಣ[ನೆದ್ದು] ನಗುತ್ತಿದೆ.
ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೆ.
ಇದರಿಂದಾಗಿ ಸ್ಥಾವರಲಿಂಗವನ್ನು ಪೂಜಿಸಿದ ಮಾತ್ರಕ್ಕೆ ಅವನು ಭಕ್ತನಾಗಲಾರ! ಗುಡಿಗೋಪುರಗಳನೆಷ್ಟು ಸುತ್ತಿದರೂ ಭಕ್ತನಾಗಲಾರ! ಉಪವಾಸ ವ್ರತಗಳನೆಷ್ಟು ಮಾಡಿದರೂ ಭಕ್ತನಾಗಲಾರ. ಶಿವ ಪಂಚಾಕ್ಷರಿಯನ್ನು ಕೋಟ್ಯಾನುಕೋಟಿ ಸಾರಿ ಜಪಿಸಿದರೂ ಭಕ್ತನಾಗಲಾರ! ಮನೆ, ಮಕ್ಕಳು ಕುಟುಂಬವನ್ನು ತೊರೆದು ಅಡವಿಗೆ ಹೋದರೂ ಅವನು ಭಕ್ತನಾಗಲಾರ! ಕಾಷಾಯ ಕಮಂಡಲಗಳನ್ನು ಧರಿಸಿದರೂ ಭಕ್ತನಾಗಲಾರ! ಭವದ ಕುರಿತು ಬಹಳ ಸುಶ್ರಾವ್ಯವಾಗಿ ಮಾತಿನಲ್ಲಿ ನುಡಿದು ಅದನ್ನು ಬಿಡುವ ಬಗೆಯನ್ನು ಸಂಕ್ಷಿಪ್ತವಾಗಿ ಹೇಳಿದರೂ ಅವನು ಭಕ್ತನಾಗಲಾರ…. ಅವನ್ನು ತ್ಯಜಿಸುವ ಕ್ರಿಯೆ ಸದಾ ಅವನಲ್ಲಿ ನಡೆಯುತ್ತಿದ್ದಾಗ ಮಾತ್ರ ಅವನು ಭಕ್ತ. “ಅಂತರಂಗದಲ್ಲಿ ಅರಿವಾದಡೇನಯ್ಯಾ ಕ್ರಿಯೆ ಇಲ್ಲದನ್ನಕ್ಕ?” ಈ ದಿಸೆಯಲ್ಲಿ ವಿವೇಚಿಸಿದಾಗ ಭಕ್ತನು ಒಬ್ಬ ಸೃಜನಶೀಲ ವ್ಯಕ್ತಿತ್ವವುಳ್ಳವನು. ಅಂದರೆ ಅವನು ಸದಾ ಮುಕ್ತತೆ ಮತ್ತು ಸ್ವಾತಂತ್ರ್ಯತೆಯನ್ನು ಸೃಜಿಸುವ ವ್ಯಕ್ತಿ. ಭಕ್ತಿ ಎಂಬುದು ಕಠಿಣ ನಿರ್ಬಂಧಗಳಿಂದಾಗಿ ರೋಗಗ್ರಸ್ತವಾಗಿ “ನಾನೆಂಬ ಅಹಂಕಾರ”ದಿಂದಾಗಿ ಕ್ರೂರವಾಗಿರುವ ಸಮಾಜಕ್ಕೆ ತೆರೆದುಕೊಂಡಿರುವ ಸನ್ಮಾರ್ಗ ಕೂಡಾ ಆಗಿದೆ. ನಾನೆಂಬುದಿಲ್ಲದಾ ಆ ಭಕ್ತಿಯಲ್ಲಿ ಮಿಂದೆದ್ದ ವಚನ ಹೀಗೆ ಹೇಳುತ್ತದೆ:
ಏನೆಂಬೆನೇನೆಂಬೆ ಆಶ್ರಯವಿರಹಿತವ,
ಏನೆಂಬೆನೇನೆಂಬೆ ನಾಮ ನಿರ್ನಾಮವ,
ಏನೆಂಬೆನೇನೆಂಬೆ ಸಾರಾಯ ಸನುಮತವಲ್ಲದುದ,
ಏನೆಂಬೆನೇನೆಂಬೆ ದೇವಾ ಕ್ರೀಯ ಮೀರಿದ ಸಂಬಂಧವ,
ಕೂಡಲಚೆನ್ನಸಂಗಮದೇವಾ.
ಆನೆಂಬುದಿಲ್ಲದುದನೇನೆಂದುಪಮಿಸುವೆ.
ಇಲ್ಲಿ ಭಕ್ತಿಯೆಂಬುದು “ದೇವ ಕ್ರಿಯಾ ಮತ್ತು ಮತಕ್ರಿಯಾ”ಗಳನ್ನು ಮೀರಿದ ಸಂಬಂಧವಾಗಿದೆ. ಭಕ್ತಿಯು ಪರಿಪೂರ್ಣ ಸಾವಯವವಾಗಿ ಮನುಷ್ಯ ಸಂಬಂಧಗಳನ್ನು ಬೆಸೆಯಲು ಬೇಕಾದ ಯೋಗ್ಯತೆಯ ಆರಂಭವಾಗಿದೆ. ಕೇವಲ ‘ನಾಮ’ (ಹೆಸರಿನ) ರೂಪದಲ್ಲಿರುವ ಭಾವರೂಪಿ ಭವವನ್ನು ನಾಮಾವಶೇಷವೂ ಉಳಿಯದಂತೆ ನಿರ್ನಾಮ ಮಾಡುವ ಅಂತಃಶಕ್ತಿಯೇ ಭಕ್ತಿ!!!
ಜಾತಿಸೂತಕ ಬಿಡದು, ಜನನಸೂತಕ ಬಿಡದು,
ಪ್ರೇತಸೂತಕ ಬಿಡದು, ರಜಸ್ಸೂತಕ ಬಿಡದು, ಎಂಜಲುಸೂತಕ ಬಿಡದು,
ಭ್ರಾಂತುಸೂತಕ ಬಿಡದು, ವರ್ಣಸೂತಕ ಬಿಡದು,
ಇವರೆಂತು ಭಕ್ತರಹರು?
ಹೂಸಿ ಹುಂಡನ ಮಾಡಿದಲ್ಲಿ, ಬಾಯಿಗೆ ಬೆಲ್ಲವ ತೊಡೆದಲ್ಲಿ
ಸದ್ಗುರು ಲಿಂಗವು ಮೂಗ ಕೊಯ್ಯದೆ ಮಾಬನೆ?
ಕಾಡು ಕಿಚ್ಚಿನ ಕೈಯಲ್ಲಿ ಕರಡದ ಹುಲ್ಲ ಕೊಯ್ಸಿದಂತಿರಬೇಕು ಭಕ್ತಿ.
ಹಿಂದೆ ಮೆದೆಯಿಲ್ಲ, ಮುಂದೆ ಹುಲ್ಲಿಲ್ಲ.
ಇದು ಕಾರಣ ಕೂಡಲಚೆನ್ನಸಂಗನ ಭಕ್ತಿಸ್ಥಲ
ನಿಮ್ಮ ಶರಣಂಗಲ್ಲದೆ ಅಳವಡದು.
ಕಾಡಿನಲ್ಲೇ ಕಾಡಿನಿಂದಾಗಿ ಸ್ವಾಭಾವಿಕವಾಗಿ ಉದ್ಭವಿಸುವ ಬೆಂಕಿ ಕಾಡನ್ನು ಸುಟ್ಟು ಬಿಡುತ್ತದೆ. ಕಾಡಗಿಚ್ಚಿನ ಕೈಯಲ್ಲಿ ಕಾಡಿನ ಹುಲ್ಲನ್ನು ಸುಟ್ಟರೆ ಅದರ ಪರಿಣಾಮ ಹುಲ್ಲಿನ ಎಲ್ಲಾ ಬೀಜಗಳೂ ಬೂದಿಯಾಗಿ ಬಿಡುತ್ತವೆಯಾದ್ದರಿಂದ ಮುಂದೆ ಆ ಹುಲ್ಲು ಮತ್ತೇ ಭವಿಸದು- ಎಂಬ ಉಪಮಾನ “ಹಿಂದೆ ಮೆದೆಯಿಲ್ಲ, ಮುಂದೆ ಹುಲ್ಲಿಲ್ಲ”- ಎಂದು ಸಾರುತ್ತದೆ. ಭಾವನೆಗಳನ್ನು ಅವಲಂಬಿಸಿಕೊಂಡು ಚಲಾವಣೆಯಾಗುತ್ತಿರುವ ಭವವನ್ನು ಭಾವನೆಗಳಲ್ಲಡಗಿರುವ ವಿವೇಕದಿಂದ ಸುಟ್ಟಾಗ ಅದೆಂದೂ ಫಲಿಸದು. ಆಗವನು ಭಕ್ತನಾಗುತ್ತಾನೆ. ಈ ವಚನವನ್ನು ತೀವ್ರವಾದ ಆಧ್ಯಾತ್ಮಿಕ ಭ್ರಮೆಗಳಿಗೆ ಸೀಮಿತಗೊಳಿಸದೇ ಲೋಕಪರವಾಗಿ ವಿವೇಚಿಸಿದರೆ, ಭಕ್ತನಾದವನಿಗೆ ಜಾತಿಗಳಿಲ್ಲ; ಭೂತಪ್ರೇತಗಳ ಕುರಿತು ನಂಬುಗೆಗಳಿಲ್ಲ; ಕೋಪ ಅಸೂಯೆಯಾದಿ ತಾಪಗಳಿಲ್ಲ (ರಜಸ್ಸು) ಎಂಜಲೆಂಬ ಬೇಧದ ಭಾವವಿಲ್ಲ; ಭ್ರಾಂತುಗಳಿಲ್ಲ (=ದೇವಾನು ದೇವತಾ ವಿಗ್ರಹಾನುಗ್ರಹಗಳ ಭ್ರಾಂತಿ, ಮತೀಯ ಭ್ರಾಂತಿ, ಅತೀವ ಸುಖದ ಭ್ರಾಂತಿ, ಸಂಗ್ರಹಣಾ ಭ್ರಾಂತಿ, ಅಧಿಕಾರ ಭ್ರಾಂತಿ, ಜ್ಞಾನದಾ ಭ್ರಾಂತಿ, ಯೋಗ ಮತ್ತು ಭೋಗ ಭ್ರಾಂತಿ, ಡಾಂಭಿಕ ಭ್ರಾಂತಿ, ಮತ್ತೊಬ್ಬರನ್ನು ನಂಬಿಸುವ ಭ್ರಾಂತಿ…) ವರ್ಣಾಶ್ರಮಗಳಿಲ್ಲ. ಈ ಕೊಳಕುಗಳನ್ನು ಅವನು ಅನಂತರದ ಪರಂಪರೆಗೆ ಹಸ್ತಾಂತರಿಸುವುದಿಲ್ಲ. ಈ ವಚನದ ಮಾತುಗಳಿಂದ ನಮಗೆ ತಿಳಿಯುವುದೇನೆಂದರೆ ಸಮಾಜದ ಕೊಳಕನ್ನು ಹಾಗೂ ವ್ಯಕ್ತಿಯಲ್ಲಿರುವ ಕೊಳಕನ್ನೂ ಒಮ್ಮೆಗೇ ಶುದ್ಧೀಕರಿಸುವ ಪರಿಚಾರಕನಂತೆಯೂ ಭಕ್ತ ಕಾಣತೊಡಗುತ್ತಾನೆ. ಇಷ್ಟು ಶುದ್ಧಿಯಾದರೆ ನಮ್ಮೆದುರಿಗೆ ಇರುವ ಈ ಮಾನವ ಲೋಕ ಒಂದು ನಿತ್ಯನೂತನ ಪ್ರಪಂಚವಾಗಿ ಪುನರ್ರಚನೆಯಾಗಲೇ ಬೇಕಲ್ಲವೆ? ಆದ್ದರಿಂದ ಖಂಡಿತವಾಗಿಯೂ ಭಕ್ತನಾದವನು ಪರಿಶುದ್ಧ ಸಮಾಜ, ಮತ್ತದರ ವ್ಯಕ್ತಿತ್ವಗಳ ನಿರ್ಮಾತೃಕಾರ! ಹೊಸತನದ ನೇಕಾರ! ಸ್ವಾತಂತ್ರ್ಯತೆಯ ಸೃಷ್ಟಿಗಾರ!! ಮಹಾಮಾನವತೆಯ ಹರಿಕಾರ!!!
ಹುಸಿಯ ನುಡಿಯನು ಭಕ್ತ, ವ್ಯಸನಕ್ಕೆಳಸನು ಭಕ್ತ,
ವಿಷಯಂಗಳಾತಂಗೆ ತೃಣವು ನೋಡಾ, ಬಯಸುವವನಲ್ಲ ಭಕ್ತ.
ದಯೆಯೆಂಬುದು ತನ್ನ ಕೈಯಲ್ಲಿ, ಸ್ಮರಣೆಯೆಂಬುದು ತನಗೆ
ತೊತ್ತಾಗಿಪ್ಪುದು.
ಕೋಪವೆಂಥದೆಂದರಿಯ, ತಾಪತ್ರಯಂಗಳು ಮುಟ್ಟಲಮ್ಮವು,
ವ್ಯಾಪ್ತಿಗಳಡಗಿದವು.
ಲಿಂಗವನೊಳಕೊಂಡ ಪರಿಣಾಮಿ.
ಆತನ ಪಥ ಲೋಕಕ್ಕೆ ಹೊಸತು, ಲೋಕದ ಪಥವಾತನಿಗೆ ಹೊಸತು.
ತನಗೊಮ್ಮೆಯು ಲಿಂಗಧ್ಯಾನ, ಲಿಂಗಕೊಮ್ಮೆಯು ತನ್ನ ಧ್ಯಾನ.
ಘನಘನಮಹಿಮೆಯ ಹೊಗಳಲೆನ್ನಳವಲ್ಲ.
ಪನ್ನಗಧರ ಕೇಳಯ್ಯಾ, ಚೆನ್ನ ಹಂಪೆಯ ವಿರುಪಯ್ಯಾ,
ನಿಮ್ಮ ನಂಬಿದ ಸತ್ಯಶರಣ ಪರಿಣಾಮಿ. (ಅಘ್ಘವಣಿ ಹಂಪಯ್ಯ)
ಹೀಗೆ… ಭವ ನಿರ್ನಾಮಗೊಂಡ ಭಕ್ತನು ಭಕ್ತಿಯ ಸಂಚಯದಲ್ಲೇ ಗೂಡು ಕಟ್ಟಿಕೊಂಡು ಅಲ್ಲಿಯೇ ಸ್ಥಿರವಾಗಲಾರ. ಮುಂದೆ ಆತನು ಲಿಂಗವಂತನಾಗಿ ಪರಿವರ್ತನೆಯಾಗುತ್ತಾನೆ. ಕಾಯಗುಣಗಳ ರೋಗವನ್ನು ಹೋಗಲಾಡಿಸಲು ಬಸವಣ್ಣನವರು ‘ಲಿಂಗತತ್ವ’ವೆಂಬ ದಿವ್ಯೌಷಧವನ್ನು ಆವಿಷ್ಕರಿಸಿದರು. ಅಲ್ಲಮನಂತಹ ಸಿದ್ಧಪುರುಷರೂ ಬಸವಣ್ಣನ ಲಿಂಗತತ್ವಕ್ಕೆ ಬೆರಗಾಗಿ ‘ಲಿಂಗ’ವನ್ನು ತ್ರಿಕರಣಪೂರ್ವಕವಾಗಿ ಸಮ್ಮತಿಸಿ ಕೊಂಡಾಡಿದರು. ‘ಕಾಯ’ ಎಂದರೆ ಆವರಣ ಎಂದಾಗುತ್ತದೆ. ಇದು ಏಕಕಾಲಕ್ಕೆ ಸಮಾಜದ ಆವರಣವನ್ನೂ, ಅಂತರಂಗದ ಮನಸ್ಥಲದ ಆವರಣವನ್ನೂ ನವೀಕರಿಸಬಲ್ಲದು. ಲಿಂಗವಂತನಾದವನಿಗೆ ಲಿಂಗವೆಂದರೆ ಶಿಲಾಲಿಂಗವೆಂಬ ಭ್ರಾಂತಿ ಕಳೆದುಹೋಗಿ ತಾನು ತಿಳಿದಿರುವ ಸತ್ಯವನ್ನು ಕ್ರಿಯೆಯಲ್ಲಿ ಅಳವಡಿಸಲೇ ಬೇಕಾದ ಪ್ರಕ್ರಿಯೆ ಲಿಂಗವೆಂದಾಗುತ್ತದೆ.
ಶಿಲೆಯೆಂಬ ಪೂರ್ವಾಶ್ರಯವ ಕಳೆದು ಲಿಂಗವೆಂದ,
ನರನೆಂಬ ಪೂರ್ವಾಶ್ರಯವ ಕಳೆದು ಗುರುವೆಂದ,
ಜಾತಿಸೂತಕದ ಪೂರ್ವಾಶ್ರಯವ ಕಳೆದು ಜಂಗಮವೆಂದ,
ಎಂಜಲೆಂಬ ಪೂರ್ವಾಶ್ರಯವ ಕಳೆದು ಪ್ರಸಾದವೆಂದ.
ಇಂತೀ ಚತುರ್ವಿಧ ಪೂರ್ವಾಶ್ರಯವ ಕಳೆಯಬಲ್ಲನಾಗಿ
ಕೂಡಲಚೆನ್ನಸಂಗಯ್ಯನಲ್ಲಿ ಶರಣ ಸ್ವತಂತ್ರ.
ಭವಿ, ಭಕ್ತ, ಲಿಂಗದ ಕಾರ್ಯ ಕಾರಣ ಪರಿಣಾಮಗಳ ಸಂಬಂಧದಲ್ಲಿ ನಡೆಯುವ ತಥಾಕಥಿಕ ಕ್ರಿಯೆಗಳಿಗೆ ಬದಲಾಗಿ ‘ಲಿಂಗ’ವನ್ನು ಪೌರೋಹಿತ್ಯದ ಗೂಟಕ್ಕೆ ಕಟ್ಟಿಹಾಕಿ ಬಿಡುವ ವಿಷಯಾಂತರ ದುರಂತದ ಮುಂದೆ ಶರಣರು ಬೆಂಕಿಕೆಂಡವಾಗುತ್ತಾರೆ.
ಎನಗೊಂದು ಲಿಂಗ ನಿನಗೊಂದು ಲಿಂಗ ಮನೆಗೊಂದು ಲಿಂಗವಾಯಿತ್ತು.
ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ.
ಉಳಿ ಮುಟ್ಟದ ಲಿಂಗವ ಮನ ಮುಟ್ಟಬಲ್ಲುದೆ ಗುಹೇಶ್ವರಾ?
ಲಿಂಗ, ಲಿಂಗಕ್ರಿಯೆ ಮತ್ತು ಲಿಂಗಾನುಭವಗಳು ಅವರವರು ಇಷ್ಟಾನುಸಾರವಾಗಿ ಊಹಿಸಿಕೊಂಡು ಆಚರಿಸುವ ತೆರನಾದದ್ದಲ್ಲ. ಅದು ಅದ್ವಿತೀಯವಾದುದು ಮತ್ತು ಲೋಕವನ್ನು ಸತ್ಯದೆಡೆಗೆ ಕೊಂಡೊಯ್ಯಲು ಇರುವ ಏಕೈಕ ಮಾರ್ಗ! ಲಿಂಗವು ಥಿಯರಿಯಲ್ಲ. ಉಪ್ಪು, ಸಿಹಿ, ಖಾರ ಎಂಬಿತ್ಯಾದಿ ರುಚಿಗಳು ಎಲ್ಲಾ ಕಾಲಕ್ಕೂ ಎಲ್ಲರಿಗೂ ಹೇಗೆ ಪ್ರತ್ಯಕ್ಷಾನುಭವವನ್ನು ನೀಡುವಂತಹುದವುಗಳಾಗಿಯೋ ಹಾಗೆಯೇ ಲಿಂಗ, ಲಿಂಗಕ್ರಿಯೆ, ಲಿಂಗಾನುಭವ ಸಾರ್ವಕಾಲಿಕವಾಗಿ ಪ್ರತ್ಯಕ್ಷಾನುಭವವನ್ನು ನೀಡುವಂತಹುದವುಗಳಾಗಿವೆ. ಸರ್ವರಿಗೂ ಅವು ಒಂದೇ ಪಥವನ್ನು ಅನುಸರಿಸುವಂತೆ ಮಾಡುತ್ತವೆ. ಎಲ್ಲರೂ ಈ ಮಾರ್ಗದಲ್ಲಿ ನಡೆಯುವುದಾದರೆ ಲಿಂಗದ ದಿವ್ಯಾನುಭವ ಎಲ್ಲರಿಗೂ ಒಂದೇ ಆಗಿದೆ. ಆದ್ದರಿಂದ ಲಿಂಗದ ಕ್ರಿಯಾಚಾರ ಸಾರ್ವಕಾಲಿಕ ಸತ್ಯ.
ಹಾಗೆಯೇ… ಲಿಂಗಕ್ಕೆ ನಿರಾಕಾರ ತತ್ವವನ್ನು ಆರೋಪಿಸಿ ಅದನ್ನು ‘ಆತ್ಮ’ ಅಥವಾ ‘ಬ್ರಹ್ಮ ಚೈತನ್ಯ’ ಎಂಬಿತ್ಯಾದಿಗಳಿಗೆ ಅಸಂಬದ್ಧ ಸಂಬಂಧವನ್ನಾಗಿಸಿ ಅಪವ್ಯಾಖ್ಯಾನಿಸುವವರನ್ನು ಶರಣರು ಪಥದ ಕ್ರಿಯೆ ತಿಳಿಯದಾ ವ್ರತಗೇಡಿಗಳೆಂದೇ ಲೇವಡಿ ಮಾಡುತ್ತಾರೆ.
ಪ್ರಾಣದಲ್ಲಿ ಲಿಂಗವಿಪ್ಪುದೆಂಬ ವ್ರತಗೇಡಿಗಳ ಮಾತ ಕೇಳಲಾಗದು.
ಒಳಗಿಪ್ಪನೆ ಲಿಂಗದೇವನು ಮಲ ಮೂತ್ರ ಮಾಂಸದ ಹೇಸಿಗೆಯೊಳಗೆ ?
ಅಲ್ಲಿ ಪ್ರಾಣವಿಪ್ಪುದಲ್ಲದೆ ಲಿಂಗವಿಪ್ಪುದೆ? (ಅಲ್ಲಮಪ್ರಭುದೇವರು)
ಆದ್ದರಿಂದ ಲಿಂಗವು ಸ್ಥಾವರವೂ ಅಲ್ಲ; ನಿರಾಕಾರವೂ ಅಲ್ಲ; ಆದರೆ ಅದೊಂದು ಶರಣ ಮಾರ್ಗದ ಕ್ರಿಯಾಚಾರಕ್ಕೆ ಒಳಗಾದ ಕಾರ್ಯದ ಪರಿಣಾಮಿ ರೂಪದ ಅನುಭವವಾಗಿದೆ. ಅನುಭವವನ್ನು ಭಾಷೆಯಲ್ಲಿ ವ್ಯಕ್ತಪಡಿಸಲಾಗುವುದಿಲ್ಲವಾದ್ದರಿಂದ ಅದನ್ನು ಸಾಂಕೇತಿಕವಾಗಿ ಲಿಂಗವೆಂದರು. “ಪದವನ್ನು ಅರ್ಪಿಸಬಹುದೇ ವಿನಃ ಪದಾರ್ಥವನ್ನು ಅರ್ಪಿಸಲಹುದೆ?” ಆದ್ದರಿಂದ ಅಂತರಂಗ ಬಹಿರಂಗಗಳಲ್ಲಿ ಲಿಂಗತತ್ವವನ್ನು ಕಟ್ಟಿ ಅದರ ಪರಿಣಾಮಕ್ಕೆ ಗುರಿಯಾಗಬಹುದೇ ವಿನಃ ಇದು ಸಾಕ್ಷಾತ್ಕರಿಸಿಕೊಳ್ಳಬಲ್ಲ ಅನುಭೂತಿಯಲ್ಲ. ಲಿಂಗವು ಪ್ರಕೃತಿ ತತ್ವ! ಹೇಗೆಂದರೆ ಕೆಟ್ಟದ್ದನ್ನು ಮಾಡಿದರೆ ಅದರ ಪರಿಣಾಮ ಕೆಟ್ಟದ್ದಾಗುತ್ತದೆ. ಒಳ್ಳೆಯದನ್ನು ಮಾಡಿದರೆ ಅದರ ಪರಿಣಾಮ ಒಳ್ಳೆಯದೇ ಆಗುತ್ತದೆ ಎಂಬ ನಿಸರ್ಗ ವಿವೇಕದೊಂದಿಗಿನ ಅಂತಃಸಂಬಂಧ! ಜನರನ್ನು ಲೋಕಸಂಕಟಗಳಿಂದ ಪಾರು ಮಾಡುವ ಸದ್ವಿದ್ಯೆ. ಅದು ಜ್ಞಾನದಾಜ್ಞಾನ! ಮನುಷ್ಯನಲ್ಲಿರುವ ವಿಷಯಾಧಾರಿತ ಜ್ಞಾನವನ್ನು ಸದಾಚಾರಾಧಾರಿತ ಜ್ಞಾನವನ್ನಾಗಿ ಮಾರ್ಪಡಿಸುತ್ತದೆ.
ಲಿಂಗವು ಒಂದು ಕ್ರಿಯೆ ಎಂದು ಹೇಳುವುದಕ್ಕಿಂತಲೂ ಅದೊಂದು ನಮ್ಮ ಜೀವನದ ಪ್ರತಿಯೊಂದು ಘಳಿಗೆಯಲ್ಲೂ ಅಳವಡಬೇಕಾದ ಸಂರಕ್ಷಣಾತ್ಮಕ (safety zone) ನಿರ್ವಹಣೆಯಾಗಿದೆ- ಎಂದಾಗ ಇನ್ನೂ ಹೆಚ್ಚು ಸೂಕ್ತವಾಗುತ್ತದೆ. ಇಂದಿನ ಜಾಗತಿಕ ಪ್ರಪಂಚದ ತೀವ್ರವಾದ ಆತಂಕಗಳು, ಅನುಮಾನಗಳು ಹಾಗೂ ನೋವುಗಳ ಶಬ್ದಸಂದಣಿಯಲ್ಲಿ ದಿಕ್ಕುಗಾಣದಿರುವ ನಮಗೆ ಅದು ದಿಕ್ಕಾಗಬಲ್ಲುದು. ಸಾಂದ್ರವಾದ ವಿಷಯಗಳ ಕಗ್ಗಾಡಿನಲ್ಲಿ ಕಳೆದುಹೋಗಿರುವ ನಮ್ಮನ್ನು ಲಿಂಗಕ್ರಿಯೆಯು ಜಾಗೃತಗೊಳಿಸಿ ಮೇಲೆತ್ತಿ ಆ ಕ್ಷಣದ ಸಹಜತೆಯಲ್ಲಿ ಬದುಕುವ ಕೌಶಲ್ಯವನ್ನು ಸೃಜಿಸುತ್ತದೆ. ಲಿಂಗಕ್ಕೆ ‘ಇದಮಿತ್ಥಂ’ ಎಂಬ ನಿರ್ದಿಷ್ಟಪಡಿಸಿದ ಅರ್ಥವನ್ನು ಕೊಟ್ಟರೆ ಅದು ತೀರಾ ಸಂಕುಚಿತವಾಗಿ ಬಿಡುತ್ತದೆ. ಲಿಂಗವು ಸುವಿಶಾಲವಾದದ್ದು ಹಾಗೂ ಅಖಂಡವಾದದ್ದು… ಹೇಗೆಂದರೆ ನಡೆಗೂ ನುಡಿಗೂ; ಅಂತರಂಗಕ್ಕೂ-ಬಹಿರಂಗಕ್ಕೂ; ಮನಕ್ಕೂ ಶರೀರಕ್ಕೂ; ಶರಣನಿಗೂ ಶರಣ ಸಮುದಾಯಕ್ಕೂ; ಲೌಕಿಕ ಮತ್ತು ಪಾರಮಾರ್ಥಿಕಕ್ಕೂ; ಮನಸ್ಸು ಮತ್ತು ಪ್ರಜ್ಞೆಗೂ ಮಧ್ಯೆ ಹರಿದು ಹಂಚಿ ಹೋಗಿರುವ ಸಜೀವ ಸಂಬಂಧವನ್ನು ಮರುಜೋಡಿಸಿ ಜೀವನ ಏಕತ್ವದ ಮಹಾಘನಕ್ಕೆ ನಮ್ಮನ್ನು ಸಂಯೋಜಿಸುವ ಮಹತ್ ಕ್ರಿಯೆಯದು!
ಅಂಗದಲ್ಲಿ ಆಚಾರವ ತೋರಿದ
ಆ ಆಚಾರವೇ ಲಿಂಗವೆಂದರುಹಿದ.
ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ;
ಅರಿವೆ ಜಂಗಮವೆಂದು ತೋರಿದ.
ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು
ಎನಗೀ ಕ್ರಮವನರುಹಿದನಯ್ಯ ಪ್ರಭುವೆ.
ಭವವನ್ನು ನಿರಾಕರಿಸಿದವ ಭಕ್ತನಾಗುತ್ತಾನೆಂಬುದೇನೋ ನಿಜ! ಇದರಿಂದ ಹೊಸ ಕ್ರಾಂತಿ ಸಮಾಜದಲ್ಲಿ ಆಗುತ್ತದೆಯೆಂಬುದರಲ್ಲಿ ಯಾವ ಅನುಮಾನಗಳೂ ಇಲ್ಲ. ಆಡಂಬರಗಳಿಂದ ದೂರವಾಗಿ ಸರಳವಾಗಿ ಬದುಕಲಾರಂಭಿಸಿದರೂ, ಹೊಸ ಕ್ರಾಂತಿಯನ್ನು ಹುಟ್ಟು ಹಾಕಿದರೂ ಅಜ್ಞಾನ (ಮನಸೂತಕ) ಹೋಗಲಾರದು. ಏಕೆಂದರೆ ನಮ್ಮ ಮನಸ್ಸು ಸಾವಿರಾರು ವರ್ಷಗಳಿಂದ ಸಾಂಪ್ರದಾಯಿಕ ರಹದಾರಿಗಳಲ್ಲಿ ಓಡಾಡುವ ಜಾಡಿಗೆ ಅಡಿಯಾಳಾಗಿರುವುದರಿಂದ ಯಾವ ಕ್ಷಣದಲ್ಲಾದರೂ ಅದು ತನ್ನ ಹಿಂದಿನ ತಾಪಗಳಿಗೆ ಬಲಿಯಾಗಿ ಬಿಡಬಹುದು. ಆದ್ದರಿಂದ ಯಾವ ಕ್ಷಣದಲ್ಲಾದರೂ ಪ್ರಜ್ಞೆಯನ್ನು ಮನಸ್ಸು ನುಂಗಿ ಹಾಕುವ ಸಂಭವವಿದ್ದೇ ಇದೆ. ಮನಸ್ಸು ಮತ್ತು ಹೊರಗಿನ ಜಗತ್ತಿನ ಚಿಂತನೆಗಳು ಮತ್ತವುಗಳಿಗೆ ನಾವು ಕೊಡುತ್ತಿರುವ ಪ್ರತಿಕ್ರಿಯೆಗಳಲ್ಲಿ ಸದಾ ಪ್ರಜ್ಞೆಯಿಂದ ಇದ್ದಾಗ ಮಾತ್ರ ನಾವು ಅಜ್ಞಾನವನ್ನು ಹೊರಹಾಕಬಹುದು. ಸೂತಕಗಳನ್ನು ಬಳಿಗೆ ಸುಳಿಯದಂತೆ ಮಾಡಬಹುದು. ಆದ್ದರಿಂದ ಶರಣರಿಗೆ ಸರ್ವೇಂದ್ರಿಯಗಳಲ್ಲಿ ಲಿಂಗದೆಚ್ಚರ ಸದಾ ಇರುತ್ತದೆ.
ಅಂತರಂಗದ ಅರಿವು, ಬಹಿರಂಗದ ಕ್ರಿಯೆ-
ಈ ಉಭಯಸಂಪುಟ ಒಂದಾದ ಶರಣಂಗೆ
ಹಿಂಗಿತ್ತು ತನುಸೂತಕ, ಹಿಂಗಿತ್ತು ಮನಸೂತಕ.
ಕೂಡಲಚೆನ್ನಸಂಗಯ್ಯನಲ್ಲಿ
ಸಂಗವಾದುದು ಸರ್ವೇಂದ್ರಿಯ.
ಶರಣನಿಗೆ ಶರೀರದ ಎಲ್ಲಾ ಭಾಗಗಳಲ್ಲಿಯೂ ಲಿಂಗಪ್ರಜ್ಞೆ ಇರುತ್ತದೆ. ಆದ್ದರಿಂದಲೇ ಅವನು ದೇಹದ ಎಲ್ಲಾ ಅಂಗಗಳಿಗೂ ವಿಭೂತಿಧಾರಣೆ ಮಾಡುತ್ತಾನೆ. ಲೋಕದ ಕೊಳಕುಗಳು ತನಗೆ ಅಂಟಬಾರದೆಂಬ ರಕ್ಷಣಾತ್ಮಕ ಆವರಣವೇ ವಿಭೂತಿಧಾರಣೆ. ಲಿಂಗದೇಹಿಯಾಗುವುದೆಂದರೆ ಅವನನ್ನು ಅವನೇ ಮಾಡಿಕೊಂಡಿರುವ ಅದ್ಭುತ ಸೃಷ್ಟಿ. ಸಮಾಜವನ್ನು ಪರಿವರ್ತಿಸಬೇಕೆಂದರೆ ವ್ಯಕ್ತಿ ಯಾವ ರೀತಿ ಬದಲಾಗಬೇಕೆಂಬುದಕ್ಕೆ ಶರಣನು ಮಾದರಿಯಾಗುತ್ತಾನೆ.
ವಿಷಯಗಳ ವಿವರಣೆಯಲ್ಲಿ ಸಿಕ್ಕಿಹಾಕಿಕೊಂಡಿರುವ ತನ್ನನ್ನು ಮತ್ತು ಲೋಕವನ್ನು ಯಾರೂ ಆರೋಗ್ಯಪೂರ್ಣವಾಗಿ ವಿಶ್ಲೇಷಿಸಲಾಗದು. ಏಕೆಂದರೆ ಲೋಕವಿವೇಕವು ವಿಷಯಗಳಲ್ಲಿ ನಾಪತ್ತೆಯಾಗಿ ಬಿಟ್ಟಿದೆ. ವಿವರಣೆ ಮತ್ತು ವಿಷಯಗಳ ಮನೋಕೋಶದಿಂದ ಹೊರಬಂದಾಗ ಲಿಂಗಪ್ರಜ್ಞೆಯೇ ಅದನ್ನು ಸರಿಯಾದ ರೀತಿಯಲ್ಲಿ ವಿಶ್ಲೇಷಿಸಿ ಜ್ಞಾನದುದಯಕ್ಕೆ ನಾಂದಿ ಹಾಡುತ್ತದೆ.
ಮನಕತ್ತಲೆ, ತನು ಹಮ್ಮು, ನೆನಹು ಮರವೆ,
ಇವರೊಳಗೆ ಇದ್ದು ಘನವ ಕಂಡೆಹೆನೆಂಬ ಅಣ್ಣಗಳಿರಾ, ನೀವು ಕೇಳಿರೊ.
ಘನವ ಕಾಂಬುದಕ್ಕೆ ಮನವೆಂತಾಗಬೇಕೆಂದಡೆ,
ಅಕ್ಕಿಯ ಥಳಿಸಿದಂತೆ, ಹಲ್ಲ ಸುಲಿದಂತೆ, ಕನ್ನಡಿಯ ನೋಡಿದಂತೆ,
ಮನ ನಿರ್ಮಲವಾದಲ್ಲದೆ ಘನವ ಕಾಣಬಾರದು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
ಹೋಗುತ್ತ ಹೋಗುತ್ತ ಹೊಲಬುದಪ್ಪಿತ್ತು,
ತನ್ನ ನೆಲೆಯ ತಿಳಿದಿತ್ತು.
ಕತ್ತಲೆಯೊಳಗೆ ನಿಂದು ನೋಡುತ್ತಿರಲು,
ನೋಟ ಹಿಂದಾಯಿತ್ತು; ಆಟವಡಗಿತ್ತು;
ಮಾಟ ನಿಂದಿತ್ತು; ಬೇಟ ಬೆರಗಾಯಿತ್ತು.
ಊಟವನುಂಡು ಕೂಟವ ಕೂಡಿ
ಉನ್ಮನಿಯ ಬೆಳಗಿನೊಳಗೆ ಒಂದೆಂದರಿದು,
ತನ್ನಂದವ ತಿಳಿದು, ಲಿಂಗದಲ್ಲಿ ಸಂದು, ಜಂಗಮದೊಳು ಬೆರೆದು,
ಮಂಗಳದ ಮಹಾಬೆಳಗಿನೊಳಗೆ ಆಡುವ ಶರಣ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
ಜಗತ್ತು ಮತ್ತು ತನ್ನನ್ನು ತಿಳಿಯುವುದೆಂದರೆ ಮನಸ್ಸನ್ನು ತಿಳಿದುಕೊಳ್ಳುವುದೇ ಆಗಿದೆ. ಮನಸ್ಸನ್ನು ಪರಿಶೋಧಿಸಿ ಅದರಲ್ಲಿರುವ ಭ್ರಾಂತಿಯ ಕಳೆಯನ್ನು ತೊಡೆದು ಹಾಕುವ ಪ್ರಜ್ಞಾಪೂರ್ವಕ ಕ್ರಿಯೆಯೇ ಲಿಂಗ. ಲಿಂಗದ ಮೂಲಕ ಆಸೆಗಳು, ಸ್ವಾರ್ಥಗಳು, ಹಿತಾಸಕ್ತಿಗಳು, ಅವಮಾನಗಳು, ಅಹಂಕಾರಿಕೆಗಳನ್ನು ಮೀರಿ ಮುಂದೆ ಹೋಗಬಹುದು. ಅಹಂಕಾರಕ್ಕೆ ಆಶ್ರಯವನ್ನು ನೀಡಿರುವ ಚಿಂತನೆಗಳು ಮತ್ತು ಪ್ರಭಾವಗಳನ್ನು ತಿಳಿಯಬೇಕಾದರೆ ಲಿಂಗಪ್ರಜ್ಞೆ ಅತ್ಯಗತ್ಯ! ಶರಣರು ನಿತ್ಯ ಸ್ವಾತಂತ್ರ್ಯದ ದೈವವನ್ನು ತಮ್ಮ ಲಿಂಗಪ್ರಜ್ಞೆಯ ಮೂಲಕ ಸೃಜಿಸಿಕೊಂಡರು. ಲಿಂಗ ನಿಷ್ಕ್ರಿಯವಲ್ಲ. ಅದು ಬುದ್ಧಿ ಮತ್ತು ಹೃದಯವನ್ನು ಸುಂದರವಾಗಿ ಓದಿಕೊಂಡು ನಿರಾಳಕ್ಕೆ ನಿರಾಳವಾಗಿ ಬಿಡುತ್ತದೆ. ಲಿಂಗವನ್ನು ತಿಳಿದುಕೊಳ್ಳಬೇಕೆಂದರೆ ನಮ್ಮ ಎಚ್ಚರ ಮತ್ತು ಎಚ್ಚರತಪ್ಪಿಕೆಗಳೆರಡನ್ನೂ ಚೆನ್ನಾಗಿ ತಿಳಿದುಕೊಂಡಿರಬೇಕು. ಮಾನವನ ಮೋಸದಾಟದ ನಿತ್ಯ ಸನ್ನಿವೇಶಗಳನ್ನು ಅರ್ಥೈಸಿಕೊಳ್ಳುವುದರ ಮೂಲಕ ಮಾತ್ರ ಲಿಂಗವು ವಿಸ್ತಾರವಾಗುತ್ತಾ ಹೋಗುತ್ತದೆ. ಮನಸ್ಸಿನ ವ್ಯಾಪಾರಗಳು ಲಿಂಗಪ್ರಜ್ಞೆಯಿಂದ ನಿಷ್ಪ್ರಯೋಜಕವಾಗಿ ಬಿದ್ದು ಹೋಗುತ್ತವೆ.
ಮನವ ನಿರ್ಮಲವ ಮಾಡಿಹೆನೆಂದು
ತನುವ ಕರಗಿಸಿ ಮನವ ಬಳಲಿಸಿ ಕಳವಳಿಸಿ,
ಕಣ್ಣುಕಾಣದ ಅಂಧಕರಂತೆ ಮುಂದುಗಾಣದೆ,
ಸಂದೇಹದಲ್ಲಿ ಮುಳುಗಿರುವ ಮನುಜರಿರಾ,
ನೀವು ಕೇಳಿರೊ, ಹೇಳಿಹೆನು.
ಮನವ ನಿರ್ಮಲವ ಮಾಡಿ, ಆ ಘನವ ಕಾಂಬುದಕ್ಕೆ
ಆ ಮನವೆಂತಾಗಬೇಕೆಂದಡೆ
ಗಾಳಿಬೀಸದ ಜಲದಂತೆ, ಮೋಡವಿಲ್ಲದ ಸೂರ್ಯನಂತೆ,
ಬೆಳಗಿದ ದರ್ಪಣದಂತೆ ಮನ ನಿರ್ಮಲವಾದಲ್ಲದೆ
ಆ ಮಹಾಘನವ ಕಾಣಬಾರದೆಂದರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
ಶರಣರದು ಮನದ ಸೂತಕವನ್ನು ಮನದಲ್ಲಿಯೇ ಇರುವ ಪ್ರಜ್ಞೆಯನ್ನು ಬಳಸಿಕೊಂಡು ಮುನ್ನಡೆದ ಕ್ರಿಯಾ ಮಾರ್ಗ. ಆದ್ದರಿಂದ ಅವರು ಮನಸ್ವಿಗಳೇ ವಿನಃ ತಪಸ್ವಿಗಳಲ್ಲ. ತಪಶ್ಚರ್ಯಗಳಾದ ಯೋಗ, ಜಪ, ಕುಂಡಲಿಗಳ ಮೂಲಕ ಮನಸ್ಸನ್ನು ನಿರ್ಬಂಧಿಸಬಹುದೆಂಬ ಅವೈಜ್ಞಾನಿಕ ಅಂಶಗಳನ್ನು ಶರಣರು ಸಾರಾ ಸಗಟಾಗಿ ನಿರಾಕರಿಸಿದ್ದಾರೆ. ಮಂತ್ರಕ್ಕೆ ಮಾವಿನಕಾಯಿ ಉದುರಲಾರದು! ಹಾಗೆಯೇ ಮಂತ್ರಕ್ಕೆ ಭವದಿಂದ ಪಾರಾಗಲಾಗದು.
ಮನದ ಸೂತಕವಳಿಯದೆ ಘನದಲ್ಲಿ ಕೂಡಿಹೆನೆಂದರೆ ದೊರೆಕೊಳ್ಳದು,
ಭಕ್ತಿಪಥ ದೊರೆಕೊಳ್ಳದು, ಶರಣಪಥ ದೊರೆಕೊಳ್ಳದು,
ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯನಾದಂಗಲ್ಲದೆ.
ಕ್ರಿಯೆಯರತುದೆ ಕಾಯಲಿಂಗೈಕ್ಯ.
ಅನುಭಾವವರತುದೆ ಜೀವಲಿಂಗೈಕ್ಯ.
ಅರಿವು ಸಿನೆ ಬಂಜೆಯಾದುದೆ ಭಾವಲಿಂಗೈಕ್ಯ.
ಇಂತೀ ಅಂಗಸ್ಥಲ ಅರಕ್ಕಂ ಹದಿನೆಂಟು ಸ್ಥಲವಾಯಿತ್ತು.
ಉಭಯಸ್ಥಲ ಮೂವತ್ತಾರರೊಳಗಾದ ಸರ್ವಾಚಾರಸಂಪತ್ತನು
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನೆ ಬಲ್ಲ.
ಮನಸ್ಸಿಗೆ ಗುಲಾಮನಾಗುವ ಎಲ್ಲ ಪ್ರಲೋಭನೆಗಳ ಮಧ್ಯೆ ಮನುಷ್ಯನಿದ್ದಾನೆ. ಸ್ವಭಾವಗಳು, ನಂಬಿಕೆಗಳು, ಸದಾ ಅತೃಪ್ತವಾಗಿರುವ ವಿಷಯಾಸಕ್ತಿಗಳು ಎಲ್ಲವೂ ಇವೆ ಮನಸ್ಸಿನಲ್ಲಿ. ಇದೇ ಭವದ ಸುಳಿ. ಸುಖದ ಅಮಲನ್ನು ಏರಿಸಿಕೊಳ್ಳುತ್ತಲೇ ನರಳಿಕೆಗೆ ಬೀಳುವ ಬೇನೆ. ವಾಸಿಯಾಗದ ಜಾಡ್ಯ. ಇದನ್ನೆಲ್ಲ ಆಮೂಲಾಗ್ರವಾಗಿ ವಿಚಾರಣೆಗೆ ಒಳಪಡಿಸುವುದೇ ಲಿಂಗಕ್ರಿಯೆ. ಆಗ ಮನಸ್ಸಿನಲ್ಲಿರುವ ಯಾವುದೇ ಕಾಮಕ್ರೋಧಾದಿ ಸ್ವಭಾವಗಳಿಗೂ, ಸುಖ ಭೋಗೋಪಗಳಿಗೂ ಮನುಷ್ಯ ದಾಸನಾಗಲಾರ. ಲಿಂಗವೆಂದರೆ ಮನಸ್ಸನ್ನು ನಿರ್ಬಂಧಿಸಲು ಹೋಗುವಂತಹುದ್ದಲ್ಲ, ನಿರ್ಬಂಧಿಸಿ ಸೋಲುವಂತಹದ್ದೂ ಅಲ್ಲ. ಮನಸ್ಸು ಹೇಳಿದ ಎಲ್ಲಾ ಸಂವೇದನೆಗಳಿಗೆ ಗುಲಾಮನಾಗುವಂತಹದ್ದೂ ಅಲ್ಲ. ಬದಲಿಗೆ ಅದು ಮನಸ್ಸಿಗೆ ಒಡೆಯನಾಗುವ ಹಾದಿ, ಭವದ ಸನ್ನಿಗೆ ಸಿಲುಕದಂತಹ ಎಚ್ಚರದ ಮದ್ದು.
Comments 6
ಬಸವರಾಜ್ ಪಿ ಕರೆಹೊಳಿ
Jan 4, 2020“ಭವ ವೆಂಬ ರೋಗಕ್ಕೆ ಲಿಂಗವೆಂಬ ಮದ್ದು”:
ಶರಣರಿಗೆ ಭವವು ರೋಗ ಅಲ್ಲ. ಶರಣರಲ್ಲದವರಿಗೆ ದೇಹ ಬರಿ ದೇಹ ಮಾತ್ರ. ಶರಣರಿಗೆ ಅದೊಂದು ಲಿಂಗತತ್ತ್ವ ಇರುವ ನೆಲೆ. ಲಿಂಗತತ್ವ ವನ್ನೂ ದೇಹದಲ್ಲಿ ಅರಿತು ಅದನ್ನು ಅಂಗವೆಂದು ಅರಿತವರು ಶರಣರು. ಸಾಧಿಸಿಕೊಳ್ಳಲು ಅದನ್ನು ಕಾಯಗೊಳಿಸಿ ಕಾಯದಿಂದ ಮಾಡಿದ ಕೆಲಸ ಕಾಯಕ. ಶರಣರದವರಿಗೆ ಅದು ಬರಿ ಕೆಲಸ. ಭಾವದಲ್ಲಿ ಲಿಂಗ ಭವದಲ್ಲಿ ಅನುಭವದ ನೆಲೆ. ಲಿಂಗಭಿಗೋಪ ಭೋಗದ ಸೋಪಾನ ಭವ ಲಿಂಗ ದ್ವಯ.
Lalithamma
Jan 7, 2020ಭವರೋಗ ಎನ್ನುವುದು ವಚನಗಳಲ್ಲಿ ಅನೇಕ ಕಡೆ ಪ್ರಸ್ತಾಪವಾಗಿದೆ. ನನಗೆ ಅದರ ಬಗ್ಗೆ ಹೆಚ್ಚಿನ ತಿಳುವಳಿಕೆ ಇರಲಿಲ್ಲ. ಈ ಲೇಖನ ಹೊಸ ವಿಚಾರಗಳನ್ನು ತಿಳಿಸುವಂತಿದೆ, ಮತ್ತೆ ಓದಿ ಬರೆಯುತ್ತೇನೆ.
ವೀರಭದ್ರಪ್ಪ, ದಾವಣಗೆರೆ
Jan 12, 2020ಬಸವಣ್ಣನವರ ಲಿಂಗತತ್ವಕ್ಕೆ ಹೊಸ ದಿಕ್ಕನ್ನೇ ತೋರಿಸಿದ ಪದ್ಮಾಲಯ ಶರಣರಿಗೆ ಶರಣುಗಳು.
ಶಿವಣ್ಣ ಮಾಲೂರು
Jan 14, 2020ಲಿಂಗವು ಸ್ಥಾವರವೂ ಅಲ್ಲ; ನಿರಾಕಾರವೂ ಅಲ್ಲ; ಆದರೆ ಅದೊಂದು ಶರಣ ಮಾರ್ಗದ ಕ್ರಿಯಾಚಾರಕ್ಕೆ ಒಳಗಾದ ಕಾರ್ಯದ ಪರಿಣಾಮಿ ರೂಪದ ಅನುಭವ- ಕಣ್ಣು ತೆರೆಸುವ ವಿಚಾರಗಳನ್ನು ವಚನಗಳ ಮೂಲಕ ಪ್ರಸ್ತುತಪಡಿಸಿದ ಅದ್ಭುತ ಲೇಖನ.
Manju (Manjanna) Beluru
Jan 23, 2020ಲಿಂಗವಿಲ್ಲದಾ (ಕ್ರಿಯೆಯಿಲ್ಲದ) ಭಾಷೆಯ ಸೂತಕ ಕೇಳಲಾಗದು- ಎನ್ನುವಲ್ಲಿ ಲಿಂಗಕ್ಕೆ ಕ್ರಿಯೆಯ ಅರ್ಥ ಕೊಟ್ಟಿದ್ದೀರಿ, ಹಾಗಾದರೆ ಲಿಂಗವೆಂದರೆ ನಾವು ಪೂಜಿಸುವ ಪರಶಿವ ಅಲ್ಲವೇ? ನಿಮ್ಮ ಲೇಖನದ ಉದ್ದಕ್ಕೂ ಪ್ರಕ್ರಿಯೆ, ಆಚಾರ ಎನ್ನುವ ಅರ್ಥಗಳಲ್ಲೇ ಲಿಂಗ ಪದ ಬಳಕೆಯಾಗಿದೆ. ನನಗೆ ಆಶ್ವರ್ಯವಾಯಿತು. ಇದೇ ಹಿನ್ನೆಲೆಯಲ್ಲಿ ನಿಮ್ಮ ವಿಚಾರಗಳು ಹೆಚ್ಚು ವೈಚಾರಿಕವೆನಿಸಿದವು.
Pradeep Jawali
Jan 28, 2020ಭಕ್ತನು ಒಬ್ಬ ಸೃಜನಶೀಲ ವ್ಯಕ್ತಿತ್ವವುಳ್ಳವನು. ಅಂದರೆ ಅವನು ಸದಾ ಮುಕ್ತತೆ ಮತ್ತು ಸ್ವಾತಂತ್ರ್ಯತೆಯನ್ನು ಸೃಜಿಸುವ ವ್ಯಕ್ತಿ. ಭಕ್ತಿ ಅಹಂಕಾರದಿಂದ ಹೊರಬರುವ ಒಂದು ಸನ್ಮಾರ್ಗ…… ವಚನಗಳನ್ನು ಹೊಸದಾಗಿ ಶೋಧಿಸುವಂತಹ ಲೇಖನ,