ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
ಅಮುಗೆ ರಾಯಮ್ಮ 116 ವಚನಗಳನ್ನು ರಚಿಸಿರುವ ಮಹತ್ವದ ವಚನಕಾರ್ತಿ. ಇವರ ವಚನಗಳಲ್ಲಿ ವಸ್ತು ವೈವಿಧ್ಯತೆಯಿದೆ. ಸರಳ ಮಾತುಗಳಲ್ಲಿ, ನೇರ ನುಡಿಗಳಲ್ಲಿ ಶರಣರ ತತ್ವಗಳನ್ನು ಹೇಳಿದ್ದಾರೆ. ಅಲ್ಲಲ್ಲಿ ಪುನರಾವರ್ತನೆ ಕಂಡು ಬಂದರೂ, ಶರಣಸಿದ್ಧಾಂತಕ್ಕೆ ಇವರ ವಚನಗಳು ಬದ್ಧವಾಗಿವೆ. ಅಕ್ಕಮಹಾದೇವಿಯ ಹಾಗೆ ಕಾವ್ಯಗುಣ ಹೆಚ್ಚಾಗಿ ಕಾಣಿಸದಿದ್ದರೂ, ವಚನ ಚಳವಳಿಯ ನಿಲುವುಗಳು ಸ್ಪಷ್ಟವಾಗಿ ಮೂಡಿಬಂದಿವೆ. ಇವರ ವಚನಗಳು, ಅಕ್ಕಮ್ಮನ ವಚನಗಳಂತೆ ವ್ರತ, ನಿಷ್ಠೆ, ಭಕ್ತಿ, ಆಧ್ಯಾತ್ಮದಂತಹ ವಿಷಯಗಳಿಗೆ ಪ್ರಾಮುಖ್ಯತೆ ಕೊಡುತ್ತವೆ. ರಾಯಮ್ಮ ನಿಷ್ಠುರವಾದಿ. ವೇಷಧಾರಿ ವಿರಕ್ತರನ್ನು, ತೋರಿಕೆಯ ಡಾಂಭಿಕರನ್ನು ಕಟುವಾಗಿ ವಿಡಂಬಿಸಿದ್ದಾರೆ. ಅಜ್ಞಾನ ಮತ್ತು ಮೌಢ್ಯತೆಗಳನ್ನು ತೊರೆದು ಸುಜ್ಞಾನ ಮತ್ತು ವೈಚಾರಿಕತೆಗೆ ಮಹತ್ವ ನೀಡಿದ್ದಾರೆ. ರಾಯಮ್ಮ ತಮ್ಮ ವಚನಗಳಲ್ಲಿ ಅನೇಕ ಸಮಕಾಲೀನ ಶರಣರನ್ನು ಸ್ಮರಿಸಿದ್ದಾರೆ. ಶರಣರ ಬಗೆಗೆ, ಶರಣ ಚಳವಳಿಯ ಬಗೆಗೆ ಇದ್ದ ಅವರ ಗೌರವಭಾವನೆ ಇಲ್ಲಿ ಎದ್ದು ಕಾಣುತ್ತದೆ. ‘ನ್ಯಾಯ ನಿಷ್ಠುರಿ ಶರಣನಾರಿಗೂ ಅಂಜುವವನಲ್ಲ’ ಎಂದು ಬಸವಣ್ಣನವರು ಹೇಳಿರುವಂತೆ, ಈ ಶರಣೆ ಕೂಡ ಯಾರಿಗೂ ಅಂಜದೆ, ಅಳುಕದೆ ನಿಷ್ಠುರ ಸತ್ಯಗಳನ್ನು ನಿರ್ಭಯವಾಗಿ ಹೇಳಿದ್ದಾರೆ. ಶರಣರಾದವರು ಹೇಗಿರಬೇಕೆಂಬುದಕ್ಕೆ ಈ ದಂಪತಿಗಳು ಸಾಕ್ಷಿಯಾಗಿದ್ದಾರೆ. ರಾಯಮ್ಮನವರ ವಚನಗಳಲ್ಲಿರುವ ವಿಶಿಷ್ಟತೆಗಳನ್ನು ತೋರಿಸುವ ಕಿರು ಪ್ರಯತ್ನವೊಂದು ಇಲ್ಲಿದೆ.
i) ಗುರು-ಲಿಂಗ-ಜಂಗಮ
ಗುರು-ಲಿಂಗ-ಜಂಗಮ ಪದಗಳು 12ನೇ ಶತಮಾನಕ್ಕೂ ಮೊದಲೇ ಇದ್ದವು. ಆದರೆ 12ನೇ ಶತಮಾನದಲ್ಲಿ ಶರಣರು ಅವುಗಳಿಗೆ
ಹೊಸ ಆಯಾಮವನ್ನೇ ಕೊಟ್ಟರು. ಮೇಲ್ನೋಟಕ್ಕೆ ಈ ಮೂರೂ ಮೂರ್ತ ರೂಪಗಳಲ್ಲಿ ಕಾಣಿಸಿದರೂ, ಇವುಗಳ ನಿಜವಾದ ಅರ್ಥವು ಬೇರೆಯಾಗಿದೆ. ಶರಣರು ಹೊರಗಿನದಕ್ಕಿಂತ ಒಳಗಿನದಕ್ಕೆ ಬೆಲೆ ಕೊಟ್ಟರು. ಹೊರಗೆ ಕಾಣುವ ಧರ್ಮ- ದೇವರು- ದೇವಾಲಯಗಳಿಗಿಂತ ಅಂತರಂಗಕ್ಕೆ ಮಹತ್ವ ನೀಡಿದರು. ಗುರು-ಲಿಂಗ-ಜಂಗಮಗಳೂ ಒಳಗಡೆಯೇ ಇವೆ, ಅವು ಆಮೂರ್ತವಾಗಿವೆ. ಶರಣರು ಅರಿವನ್ನೇ-ಗುರುವೆಂದು ಕರೆದರು, ಆಗ ಅರಿವೇ ಗುರುವಾಯಿತು. ಆಚಾರವೇ ಲಿಂಗವಾಯಿತು. ಅನುಭಾವವೇ ಜಂಗಮವಾಯಿತು. ವ್ಯಕ್ತಿರೂಪದ ಹೊರಗಿನ ಗುರು ಲಿಂಗಜಂಗಮರಿಗಿಂತ, ಶಕ್ತಿರೂಪದ ಒಳಗಿನ ಅರಿವು-ಅನುಭಾವಗಳು ಶರಣರಿಗೆ ಹೊಸ ವ್ಯಕ್ತಿತ್ವ ಕಲ್ಪಿಸಿಕೊಟ್ಟವು. ಲಿಂಗವೆಂಬುದು ಇಷ್ಟಲಿಂಗವಾಗಿರುವುದರ ಜೊತೆಗೆ ಆಚಾರ ಲಿಂಗವೂ ಆಯಿತು. ಹೀಗಾಗಿ ಅರಿವು- ಆಚಾರ- ಅನುಭಾವಗಳು ಅಮೂರ್ತವಾಗಿದ್ದುಕೊಂಡೇ ಮನುಷ್ಯನಲ್ಲಿ ಹೊಸ ಬೆಳವಣಿಗೆಗೆ ಕಾರಣವಾದವು. ಆದುದರಿಂದಲೇ ಶರಣಧರ್ಮವು ಇತರ ಧರ್ಮಗಳಿಗಿಂತ ಭಿನ್ನವಾದುದಾಗಿದೆ. ವಿಶಿಷ್ಟವಾದುದಾಗಿದೆ. ಆದುದರಿಂದಲೇ ಶರಣ ಧರ್ಮ ಅಥವಾ ಲಿಂಗಾಂಯತ ಧರ್ಮವು ಸ್ವತಂತ್ರ ಧರ್ಮವೆಂದು ಶರಣರು- ಸಂತರು-ವಿದ್ವಾಂಸರು ಮೊದಲಿನಿಂದ ಹೇಳುತ್ತಲೇ ಬಂದಿದ್ದಾರೆ. ಅಮುಗೆ ರಾಯಮ್ಮ ಕೂಡಾ ಇದೇ ಹೊಸನೋಟದೊಂದಿಗೆ ತಮ್ಮ ವಚನಗಳಲ್ಲಿ ಅವುಗಳನ್ನು ಪ್ರಸ್ತಾಪಿಸಿದ್ದಾರೆ.
ಗುರುವೆಂಬೆನೆ, ಗುರುವು ನರನು;
ಲಿಂಗವೆಂಬೆನೆ, ಲಿಂಗವು ಕಲ್ಲು;
ಜಂಗಮವೆಂಬೆನೆ,ಜಂಗಮವು ಆತ್ಮನು…-(ಸ.ವ.ಸಂ.5, ವ-642)
ಕಣ್ಣಿಗೆ ಕಾಣುವ ಮೂರ್ತ ರೂಪಗಳನ್ನೇ ಜನರು ಗುರು-ಲಿಂಗ-ಜಂಗಮರೆಂದು ಪೂಜಿಸುತ್ತಿದ್ದರು. ಆದರೆ ಶರಣರು ಈ ವಿಷಯದ ಬಗೆಗೆ ಸ್ಪಷ್ಟ ವ್ಯಾಖ್ಯಾನ ನೀಡಿದರು. ‘ಹೊನ್ನು ಹೆಣ್ಣು ಮಣ್ಣು ಈ ತ್ರಿವಿಧವ ಹಿಡಿದ ಕಾರಣ ಹೀಗಾಯಿತೆಂದು’ ವಚನದ ಮುಂದಿನ ಭಾಗದಲ್ಲಿ ರಾಯಮ್ಮ ತಿಳಿಸಿದ್ದಾರೆ. ‘ಒಳಗನ್ನು ಶೋಧಿಸದೆ, ಹೊರಗಿನದನ್ನೇ ನಾವು ನಂಬಿದಾಗ ನರನು ಗುರುವಾಗಿ ಕಾಣುತ್ತಾನೆ. ಅಷ್ಟವಿಧಾರ್ಚನೆ, ಷೋಡಶೋಪಚಾರಕ್ಕೆ ಒಳಗಾದ ಕಾರಣ ಲಿಂಗವೆಂಬುದು ಕಲ್ಲಿನ ರೂಪದಲ್ಲಿ ಕಾಣಿಸುತ್ತದೆ. ಆಶೆಪಾಶೆಗೆ ಒಳಗಾದ ಕಾರಣ, ಜಂಗಮವೆಂಬುದು ವ್ಯಕ್ತಿರೂಪದಲ್ಲಿ ಸಾಧಕ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ’ ಎಂದು ರಾಯಮ್ಮ ತನ್ನವಚನದಲ್ಲಿ ಹೇಳಿದ್ದಾರೆ. ಈ ಸತ್ಯವನ್ನು ತಿಳಿದುಕೊಳ್ಳದಿದ್ದರೆ, ಕೆಸರಿನೊಳಗೆ ಬಿದ್ದ ಪಶುವಿನ ಸ್ಥಿತಿಯಾಗುತ್ತದೆಂದು ರಾಯಮ್ಮ ಸ್ಪಷ್ಟಪಡಿಸಿದ್ದಾರೆ. ಒಂದು ಪದಕ್ಕೆ ಒಂದೇ ಅರ್ಥವಿರುವುದಿಲ್ಲ, ಅನೇಕ ಅರ್ಥಗಳಿರುತ್ತವೆ. ಈ ಮಹತ್ವ ತಿಳಿಯದವರು ಪದದಲ್ಲಿ ಅರ್ಥವಿದೆಯೆಂದು ಭಾವಿಸಿ, ಒಂದು ಪದಕ್ಕೆ ಒಂದು ಅರ್ಥ ಹೇಳಿ, ಅದೇ ಅಂತಿಮವಾದುದೆಂದು ವಾದಿಸುತ್ತಾರೆ. ಪದದಲ್ಲಿ ಅರ್ಥವಿಲ್ಲವೆಂದು ಅಲ್ಲಮಪ್ರಭು ಹೇಳಿದ್ದಾರೆ. ಈ ಎಲ್ಲ ಸಂಗತಿಗಳನ್ನು ಗಮನಿಸಿದಾಗ ಶರಣರ ಗುರು-ಲಿಂಗ-ಜಂಗಮದ ಪರಿಕಲ್ಪನೆಗಳು ಹೊಸತನದಿಂದ ಕೂಡಿವೆ, ವಿನೂತನವಾದವುಗಳಾಗಿವೆ. ಮೇಲ್ನೋಟಕ್ಕೆ ಕಾಣುವುದು ಮಾತ್ರ ಸತ್ಯವಲ್ಲ, ಒಳಗೆ ಹೋಗಿ ಹುಡಿಕಿದಾಗ ಬೇರೆಯದೇ ಜಗತ್ತು ಕಾಣಿಸುತ್ತದೆ. ಈ ದೇಹವು ಮೂಳೆ-ಮಾಂಸದ ಮಡಿಕೆಯೆಂದು ಭಾವಿಸಿದ್ದ ಸಮಾಜ ವ್ಯವಸ್ಥೆಯಲ್ಲಿ ಶರಣರು ಈ ದೇಹವನ್ನೇ ದೇವಾಲಯವೆಂದು ಕರೆದದ್ದು ಸಣ್ಣ ಮಾತಲ್ಲ. ಈ ದೇಹ ನಶ್ವರವಾದುದೆಂದು ನಂಬಿದ್ದ ಜನರೆದುರು, ಅದೇ ನಿಜವಾದ ದೇವರ ತಾಣವೆಂದು ಹೇಳಿದ್ದು ಸಣ್ಣ ವಿಚಾರವಲ್ಲ.
ನಾನೆ ಗುರುವಾದ ಬಳಿಕ ಇನ್ನಾರ ನೆನೆವೆನಯ್ಯಾ ?
ನಾನೆ ಲಿಂಗವಾದ ಬಳಿಕ ಇನ್ನಾರ ನೆನೆವೆನಯ್ಯಾ ?
ನಾನೆ ಜಂಗಮವಾದ ಬಳಿಕ ಇನ್ನಾರ ನೆನೆವೆನಯ್ಯಾ ?
ಎನಗೆ ಗುರುವಾದಾತನು ನೀನೆ, ಎನಗೆ ಲಿಂಗವಾದಾತನು ನೀನೆ,
ಎನಗೆ ಜಂಗಮವಾದಾತನು ನೀನೆ
ಎನಗೆ ಪಾದೋದಕ ಪ್ರಸಾದವಾದಾತನು ನೀನೆ.
ಅಮುಗೇಶ್ವರ ಲಿಂಗವಾಗಿ ಎನ್ನ ಕರಸ್ಥಲಕ್ಕೆ ಬಂದಾತನು ನೀನೆ, ಪ್ರಭುವೆ.
– (ಸ.ವ.ಸಂ.5, ವ-654)
ಈ ವಚನದಲ್ಲಿ ರಾಯಮ್ಮ ಗುರು-ಲಿಂಗ-ಜಂಗಮ ತನ್ನೊಳಗಡೆಯೇ ಇದ್ದಾರೆಂದು ಸ್ಪಷ್ಟಪಡಿಸಿದ್ದಾರೆ. ತಾನೇ ಗುರು-ಲಿಂಗಜಂಗಮವಾದ ಬಳಿಕ ಇನ್ನಾರ ನೆನೆವೆ? ಎಂದು ಪ್ರಶ್ನಿಸಿದ್ದಾರೆ.
“ಮತ್ರ್ಯದಲ್ಲಿ ಹುಟ್ಟಿದವರೆಲ್ಲರೂ ಇಷ್ಟಲಿಂಗ ಸಂಬಂಧಿಗಳೆ?
ಗುರುವಿನಲ್ಲಿ ಉಪದೇಶವ ಪಡೆದವರೆಲ್ಲರೂ ವಿರಕ್ತರಾಗಬಲ್ಲರೆ?”
– (ಸ.ವ.ಸಂ.5, ವ-674)
“ಲಿಂಗವನರಿಯದೆ ಲಿಂಗೈಕ್ಯರೆಂಬ
ಅಂಗವಿಕಾರಿಗಳ ಕಂಡಡೆ ಹೊದ್ದದು ಎನ್ನಮನ…”
– (ಸ.ವ.ಸಂ.5, ವ-689)
ಈ ಜಗತ್ತಿನಲ್ಲಿ ಅನೇಕರು ಹುಟ್ಟುತ್ತಾರೆ. ಅವರೆಲ್ಲರೂ ಇಷ್ಟಲಿಂಗ ಸಂಬಂಧಿಗಳೆ? ಎಂದು ಮೊದಲನೇ ಪ್ರಶ್ನೆ ಕೇಳುತ್ತಾರೆ. ಅನೇಕರು ಗುರುವಿನ ಉಪದೇಶವನ್ನ ಪಡೆಯುತ್ತಾರೆ, ಅವರೆಲ್ಲರೂ ವಿರಕ್ತರಾಗಬಲ್ಲರೆ? ಎಂದು ಎರಡನೇ ಪ್ರಶ್ನೆ ಕೇಳುತ್ತಾರೆ. ಹುಟ್ಟಿದಾಕ್ಷಣ ಲಿಂಗವಂತರಾಗುವುದಿಲ್ಲ, ಅರಿವು ಆಚರಣೆ ಮೂಲಕ ಲಿಂಗವಂತರಾಗುತ್ತಾರೆಂದು ತಿಳಿಸಿದ್ದಾರೆ. ಅದೇ ರೀತಿ ಗುರುವಿನಿಂದ ಉಪದೇಶ ಪಡೆದು ಕಾವಿಯನ್ನು ಧರಿಸಿದಾಕ್ಷಣ ಅವರು ವಿರಕ್ತಾಗುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಕಾವಿ ಧರಿಸಿ ಕಾಯವಿಕಾರಕ್ಕೆ ಒಳಗಾಗುವರನ್ನು ಗಾವಿಲರು ಎಂದು ವಿಡಂಬಿಸಿದ್ದಾರೆ. ಎರಡನೇ ವಚನದಲ್ಲಿ ವೇಷಧಾರಿಗಳನ್ನು ಕಂಡು ನಾಚಿತ್ತೆನ್ನಮನ ಎಂದು ವಚನದ ಮುಂದಿನ ಭಾಗದಲ್ಲಿ ಹೇಳಿದ್ದಾರೆ. ಲಿಂಗವನರಿಯದೆ ಲಿಂಗೈಕ್ಯರೆನ್ನುವವರನ್ನು ಅಂಗವಿಕಾರಿಗಳೆಂದು ಕರೆದಿದ್ದಾರೆ. ಅರಿದು ಆಚರಿಸಿದೆನೆಂಬುದೂ ಅಹಂಭಾವವೇ ಆಗುತ್ತದೆಂದು, ಮೊದಲು ಲಿಂಗವನರಿಯಬೇಕೆಂದು ತಿಳಿಸಿದ್ದಾರೆ. ಸ್ಥಾವರ ಲಿಂಗವಿದೆ-ಇಷ್ಟಲಿಂಗವಿದೆ, ಗುಡಿಯ ಲಿಂಗವಿದೆ- ಹಿಡಿಯ ಲಿಂಗವಿದೆ ಈ ಎಲ್ಲಾ ಲಿಂಗಗಳಿಗಿಂತ ಆಚಾರ ಲಿಂಗ ಮುಖ್ಯ ಎನ್ನುತ್ತಾರೆ. ಸುಮ್ಮನೆ ಡಾಂಭಿಕವಾಗಿ ಲಿಂಗಪೂಜೆ ಮಾಡುವವರನ್ನು ಮೃಡನ ಶರಣರು ಮೆಚ್ಚುವುದಿಲ್ಲವೆಂದು ಈ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಅರಿವು-ಆಚರಣೆಗೆ ಬಂದಾಗ ಆ ಅರಿವಿಗೆ ಮಹತ್ವ ಬರುತ್ತದೆ. ಅದೇ ರೀತಿ ಜ್ಞಾನ ಕ್ರಿಯೆಯಾದಾಗ ಆ ಜ್ಞಾನಕ್ಕೆ ಬೆಲೆ ಬರುತ್ತದೆ.
ನಾನೆ ಗುರುವಾದ ಬಳಿಕ ಗುರುವೆಂಬುದಿಲ್ಲ.
ನಾನೆ ಲಿಂಗವಾದ ಬಳಿಕ ಲಿಂಗವೆಂಬುದಿಲ್ಲ.
ನಾನೇ ಜಂಗಮವಾದ ಬಳಿಕ ಜಂಗಮವೆಂಬುದಿಲ್ಲ…
– (ಸ.ವ.ಸಂ.5, ವ-655)
ಈ ವಚನದಲ್ಲಿ ಗುರುಲಿಂಗಜಂಗಮದ ನಿಜವಾದ ಅರ್ಥವನ್ನು ತಿಳಿಸಿದ್ದಾರೆ. ತಾನೇ ಗುರುವಾಗುವುದು, ತಾನೇ ಲಿಂಗವಾಗುವುದು, ತಾನೇ ಜಂಗಮವಾಗುವುದು ಸಾಧನೆಯಿಂದ ಮಾತ್ರ ಸಾಧ್ಯ.
ನಿರವಲಯಸ್ಥಲದಲ್ಲಿ ನಿಂತ ಅಭೇದ್ಯನ
ಅರಿವಿನ ವಚನವುಳ್ಳವಂಗೆ ಅಂಗದ ಹಂಗೇಕೆ ?
ಅರಿವುಳ್ಳವಂಗೆ ಗುರುವಿನ ಹಂಗೇಕೆ ?
ಅರಿವುಳ್ಳವಂಗೆ ಲಿಂಗದ ಹಂಗೇಕೆ ?
ಅರಿವುಳ್ಳವಂಗೆ ಜಂಗಮದ ಹಂಗೇಕೆ ?…
– (ಸ.ವ.ಸಂ.5, ವ-658)
ಈ ವಚನದಲ್ಲಿ ಅರಿವಿನ ಮಹತ್ವವನ್ನು ಹೇಳಲಾಗಿದೆ. ಅರಿವಿನಿಂದ ನಿರವಲಯಸ್ಥಲದಲ್ಲಿ ನಿಂತಾಗ ಯಾರ ಹಂಗೂ ಇರುವುದಿಲ್ಲವೆಂದು ಹೇಳಿದ್ದಾರೆ. ಅರಿವುಳ್ಳವಂಗೆ ಎಂಬ ಪದವು ಐದು ಸಾಲುಗಳಲ್ಲಿ ಬಂದಿದೆ. ಈ ಎಲ್ಲ ಸಾಧನೆಗೆ ಅರಿವು-ಆಚಾರಗಳೇ ಪ್ರಮುಖ ಕಾರಣವಾಗಿವೆಯೆಂದು ತಿಳಿಸಿದ್ದಾರೆ.
ii) ಭವಿ – ಭಕ್ತ
ಭವಿ-ಭಕ್ತ ಕುರಿತಂತೆ ವಚನಸಾಹಿತ್ಯದಲ್ಲಿ ಬಹುದೊಡ್ಡ ಚರ್ಚೆ ನಡೆದಿದೆ. ಲಿಂಗಾಯತರಾದವರೆಲ್ಲ ಭಕ್ತರು, ಲಿಂಗಧರಿಸದವರೆಲ್ಲ ಭವಿಗಳು ಎಂಬುದು ಮೇಲ್ನೋಟದ ಅರ್ಥ, ಆಳವಾಗಿ ಆಲೋಚನೆಗೆ ತೊಡಗಿದರೆ ಇವುಗಳ ಹೊಸ ಅರ್ಥಗಳು ಕಾಣಿಸಿಕೊಳ್ಳುತ್ತವೆ. “ನಾನೀ ಭವಿ ಬಿಜ್ಜಳಂಗಂಜುವನೇ?” ಎಂಬ ಬಸವಣ್ಣನವರ ವಚನವನ್ನು ಗಮನಿಸಿ. ವಚನಕಾರರು ಭವಿ ಮತ್ತು ಭಕ್ತ ಎಂಬ ಎರಡು ಗುಂಪುಗಳಲ್ಲಿ ಜನರನ್ನು ವಿಂಗಡಿಸಿದ್ದಾರೆ. ಭವಿಗಳೆಂದರೆ ಶರಣರು ಉರಿದುಬೀಳುತ್ತಾರೆ, ಭಕ್ತರೆಂದರೆ ಅಪ್ಪಿಕೊಳ್ಳುತ್ತಾರೆ. ದಯಾಮಯಿಗಳು, ನಿಸ್ವಾರ್ಥಿಗಳು ಭಕ್ತರಾಗಿ ಕಂಡರೆ; ಅಹಂಕಾರಿಗಳು, ಸ್ವಾರ್ಥಿಗಳು ಭವಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಹೀಗೆ ಈ ಪದಗಳಿಗೆ ಅನೇಕ ಅರ್ಥಗಳಿವೆ.
ಅಂಗಕ್ಕಾಚಾರ ಮನಕ್ಕೆ ಜ್ಞಾನ ಸಮರಸಾದ್ವೈತವಾದ ಮತ್ತೆ
ಪುನರವೆ ಪುನರ್ದೀಕ್ಷೆಯುಂಟೆ?
ಗರುಡಿಯಲ್ಲಿ ಕೋಲಲ್ಲದೆ, ಕಾಳಗದಲ್ಲಿ ಉಂಟೆ ಕೋಲು ?
ಭವಿಗೆ ಮೇಲುವ್ರತ ಪುನರ್ದೀಕ್ಷೆಯಲ್ಲದೆ ಭಕ್ತರಿಗುಂಟೆ ?
ವ್ರತತಪ್ಪಿ ಅನುಗ್ರಹವಿಡಿದ ನರಕಿಗಳಿಗೆ
ಮುಕ್ತಿ ಇಲ್ಲ ಎಂದೆ ಅಮುಗೇಶ್ವರಲಿಂಗದಲ್ಲಿ.
– (ಸ.ವ.ಸಂ.5, ವ-559)
ಈ ವಚನದಲ್ಲಿ ರಾಯಮ್ಮ ಭವಿ-ಭಕ್ತರನ್ನು ಕುರಿತು ಹೇಳಿದ್ದಾರೆ. ಅರಿವು-ಆಚಾರ ಕೂಡಿಕೊಂಡಾಗ ಆತನೇ ಭಕ್ತನಾಗುತ್ತಾನೆ. ಆದುದರಿಂದ ಸಾಧನೆಯಿಂದ ಭಕ್ತನಾಗಲು ಸಾಧ್ಯವೇ ಹೊರತು, ಸುಮ್ಮಸುಮ್ಮನೆ ಭಕ್ತನಾಗಲಾರ. ಕೋಲನ್ನು ಹೇಗೆ ಹಿಡಿಯಬೇಕೆಂಬುದನ್ನು ಗರಡಿಮನೆಯಲ್ಲಿ ಕಲಿಸುತ್ತಾರೆಯೆ ವಿನಃ ಕಾಳಗದಲ್ಲಲ್ಲ, ಭವಿಗೆ ದೀಕ್ಷೆ ಕೊಡಬೇಕಾಗುತ್ತದೆಯೇ ಹೊರತು ಭಕ್ತನಾದವನಿಗೆ ಅದರ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಅಂಗದ ಆಪ್ಯಾಯನಕ್ಕೆ ಲಿಂಗವ ಮರೆತು ತಿರುಗುವ
ಭಂಡ ಭವಿಗಳನೇನೆಂಬೆನಯ್ಯಾ?
ಲಿಂಗದಲ್ಲಿ ನಿತ್ಯರಲ್ಲ, ಜಂಗಮದಲ್ಲಿ ಪ್ರೇಮಿಗಳಲ್ಲ
ಹಿಡಿದ ಛಲದಲ್ಲಿ ಕಡುಗಲಿಗಳಲ್ಲ!
ಮೃಡನ ಕಂಡೆಹೆನೆಂಬ ಮೂರ್ಖರ ಮುಖವನೋಡಲಾಗದು,
ಅವರಡಿಯ ಮೆಟ್ಟಲಾಗದು ಕಾಣಾ ಅಮುಗೇಶ್ವರಾ.
– (ಸ.ವ.ಸಂ.5, ವ-590)
ಈ ವಚನದಲ್ಲಿ ಲಿಂಗವಿಲ್ಲದವರು, ಲಿಂಗವ ಮರೆತು ತಿರುಗುವವರು ಭವಿಗಳೆಂದು ಹೇಳಿದ್ದಾರೆ. ಬರೀ ಲಿಂಗ ಧರಿಸಿದಾಕ್ಷಣ ಭಕ್ತರಾಗುವುದಿಲ್ಲವೆಂಬ ವಿಷಯವನ್ನು ಅನೇಕ ವಚನಕಾರರು ಹೇಳಿದ್ದಾರೆ. ಲಿಂಗ ಮರೆತು ತಿರುಗುವವರನ್ನು ಭಂಡ ಭವಿಗಳೆಂದು ಕರೆದಿದ್ದಾರೆ. ಭಕ್ತರಾದವರು ನಿತ್ಯವೂ ಲಿಂಗಪೂಜೆ ಮಾಡಬೇಕು, ಲಿಂಗ ಸಾಧನೆ ಮಾಡಬೇಕು, ಆಚಾರವಂತರಾಗಿರಬೇಕೆಂದು ಹೇಳಲಾಗಿದೆ. ಶರಣರು, ಭಕ್ತರನ್ನು ಸ್ವಾಗತಿಸುತ್ತಾ ಭವಿಗಳನ್ನು ತಿರಸ್ಕರಿಸಿದರು. ಅಹಂಭಾವಿಗಳನ್ನು ಅಲ್ಲಗಳೆಯುತ್ತ, ದಯಾಮಯಿಗಳನ್ನು ಅಪ್ಪಿಕೊಂಡರು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಭವಿಗಳಲ್ಲಿರುತ್ತವೆಯೇ ಹೊರತು ಭಕ್ತರಲ್ಲಿರುವುದಿಲ್ಲವೆಂದು ಸ್ಪಷ್ಟಪಡಿಸಿದರು. ಆದುದರಿಂದ ಭವಿಯ ಮುಖವ ನೋಡಲಾಗದೆಂದು ಖಡಾಖಂಡಿತವಾಗಿ ಹೇಳಿದರು. ಲಿಂಗ ಧರಿಸಿದಾಕ್ಷಣ ಭಕ್ತನಾಗಲಾರ, ಲಿಂಗದ ನಿಜವನರಿತಿರಬೇಕೆಂದು ರಾಯಮ್ಮ ತನ್ನ ಇನ್ನೊಂದು ವಚನದಲ್ಲಿ ಹೇಳಿದ್ದಾರೆ.
ಉತ್ತರಪಥಕ್ಕೆ ಹೋಗಿ ಮುಕ್ತಿಯನರಿದೆನೆಂಬವರು
ಅರಿಯಲಾರರು ನೋಡಾ
ಭಕ್ತನಾದೆನೆಂಬವರೆಲ್ಲ ಭವಿಗಳಾದರು ನೋಡಾ
ಜಂಗಮವಾದೆನೆಂಬವರೆಲ್ಲ ಜಗಭಂಡರಾದರು ನೋಡಾ
ಲಿಂಗೈಕ್ಯನಾದೆನೆಂಬವರೆಲ್ಲ ಅಂಗವಿಕಾರಿಗಳಾದರು ನೋಡಾ
ಅಮುಗೇಶ್ವರಲಿಂಗವನರಿಯದ ಅಜ್ಞಾನಿಗಳ
ಲಿಂಗೈಕ್ಯರೆಂದರೆ ಅಘೋರನರಕ ತಪ್ಪದು.
– (ಸ.ವ.ಸಂ.5, ವ-610)
ಎಲ್ಲರೂ ಭಕ್ತರಾಗಬೇಕೆಂದುಕೊಳ್ಳುತ್ತಾರೆ, ಎಲ್ಲರೂ ಒಳ್ಳೆಯವರಾಗಬೇಕೆಂದುಕೊಳ್ಳುತ್ತಾರೆ. ಆದರೆ ಹಾಗಾಗುವುದಿಲ್ಲ. ಅಂದುಕೊಳ್ಳುವುದೇ ಬೇರೆ ಆಗುವದೇ ಬೇರೆ. ರಾಯಮ್ಮ ಈ ವಚನದಲ್ಲಿ ಅಂತಹ ಸತ್ಯಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಉತ್ತರ ಪಥವೆಂದರೆ ಹಿಮಾಲಯ, ಕಾಶಿ. ಅಲ್ಲಿಗೆ ಹೋಗಿ ತಪಸ್ಸು ಮಾಡಿ ಮುಕ್ತಿಯನರಿದೆನೆನ್ನುವವರು ಅರಿಯಲಿಲ್ಲ. ಕಾಶಿಗೆ ಹೋಗುವುದರಿಂದ ಮುಕ್ತಿ ಸಿಗುವುದಿಲ್ಲ, ಕಾಯಕ ಮಾಡುವುದರಿಂದ ಅದು ಸಾಧ್ಯವೆಂದು ಹೇಳಿದ್ದಾರೆ. “ಭಕ್ತನಾದೆನೆಂಬವರೆಲ್ಲ ಭವಿಗಳಾದರು ನೋಡಾ” ಎನ್ನುವ ಮಾತು ತುಂಬ ಪರಿಣಾಮಕಾರಿಯಾಗಿದೆ. ಮನುಷ್ಯ ಏಕೆ ಹೀಗಾಗುತ್ತಾನೆ? ಎಂಬ ಪ್ರಶ್ನೆ ಈ ಮಾತು ಕೇಳಿದಾಕ್ಷಣವೇ ಹುಟ್ಟಿಕೊಳ್ಳುತ್ತದೆ. ಭಕ್ತನಾಗುವುದು ಕಠಿಣ, ಭವಿಯಾಗುವುದು ಸರಳ. ಆದುದರಿಂದ ಭಕ್ತರಾಗಬೇಕೆಂದು ಹೋದವರೆಲ್ಲಾ ಭವಿಗಳಾಗಿ ಬಿಡುತ್ತಾರೆ. ಜಂಗಮನಾದೆನೆಂಬವರೆಲ್ಲಾ ಜಗಭಂಡರಾಗುತ್ತಾರೆ ಎಂದು ರಾಯಮ್ಮ ವಿಡಂಬಿಸುತ್ತಾರೆ. ಷಟ್ಸ್ಥಲಗಳಲ್ಲಿ ಕೊನೆಯ ಸ್ಥಲವೇ ಐಕ್ಯಸ್ಥಲವಾಗಿದೆ. ಐಕ್ಯಸ್ಥಲ ತಲುಪುವುದು ಎಲ್ಲರಿಗೂ ಸಾಧ್ಯವಿಲ್ಲ. ಹಾಗೆ ಲಿಂಗೈಕ್ಯನಾದೆನೆಂದು ಹೇಳುವವರೆಲ್ಲಾ ಅಂಗವಿಕಾರಿಗಳಾದರೆಂದು, ಇಂತಹವರನ್ನೆಲ್ಲಾ ಅಜ್ಞಾನಿಗಳೆಂದು ಕರೆದಿದ್ದಾರೆ. ಭವಿ-ಭಕ್ತರ ಬಗೆಗೆ ರಾಯಮ್ಮಾ ಸರಳವಾಗಿ, ನೇರವಾಗಿ ಎಲ್ಲರಿಗೂ ತಿಳಿಯುವಂತೆ ಮಾತನಾಡಿದ್ದಾರೆ.
iii) ಆತ್ಮಶೋಧನೆ:
ಉಪಮಾತೀತವಾದ ಶರಣನ ಉಪಾಧಿಕನೆನ್ನಬಹುದೆ?
ತನ್ನ ತಾನರಿದ ಸಮ್ಯಗ್ಞನಿಗೆ ನನ್ನವರು, ತನ್ನವರೆಂಬ
ಭಾವದ ಭ್ರಾಂತಿನ ಭ್ರಮೆ ಏತಕ್ಕೆ…- (ಸ.ವ.ಸಂ.5, ವ-612)
ರಾಂಯಮ್ಮನವರ ಈ ವಚನದಲ್ಲಿ ಆತ್ಮಶೋಧನೆಯ ಪ್ರಾರಂಭವಿದೆ. ಶರಣನಾದವನು ಉಪಮಾತೀತನಾದರೂ ಆತನನ್ನು ಉಪಾಧಿಕನೆನ್ನಬಹುದೆ? ಎಂದು ಪ್ರಶ್ನಿಸಿದ್ದಾರೆ. ತನ್ನನ್ನು ತಾನರಿವುದು ತುಂಬಾ ಮುಖ್ಯ. ಆತ್ಮಶೋಧನೆಯ ಕ್ರಿಯೆ ಎಂದರೆ ತನ್ನನ್ನು ತಾನರಿವುದು. ಹೀಗೆ ತನ್ನನ್ನು ತಾನರಿತುಕೊಂಡಾಗ ಭೇದಭಾವ ಹೊರಟುಹೋಗುತ್ತದೆ. ನನ್ನವರು-ತನ್ನವರೆಂಬ ತಾರತಮ್ಯ ಇಲ್ಲದಂತಾಗುತ್ತದೆ.
ಎನ್ನ ದೇಹವ ದಗ್ಧವ ಮಾಡಯ್ಯಾ
ಎನ್ನ ಕಾಯದಲ್ಲಿಪ್ಪ ಕರ್ಮವ ತೊಡೆಯಯ್ಯಾ
ಎನ್ನ ಭಾವದಲ್ಲಿಪ್ಪ ಭ್ರಮೆಯ ಜರಿಯಯ್ಯಾ
ನಾ ಹಿಡಿದ ಛಲವ ಬಿಡದೆ ನಡೆಸಯ್ಯಾ ಅಮುಗೇಶ್ವರ ಲಿಂಗವೆ – (ಸ.ವ.ಸಂ.5, ವ-615)
ಈ ವಚನದಲ್ಲಿ ಆತ್ಮಶೋಧನೆಯ ಕ್ರಿಯೆ ಎದ್ದು ಕಾಣುತ್ತದೆ. ಇಲ್ಲಿ ದೇಹವನ್ನು ದಗ್ಧ ಮಾಡಿಕೊಂಡಾಗ, ದೇಹದ ಚಪಲಗಳು ಹೊರಟು ಹೋಗುತ್ತವೆ. ಅದೇ ರೀತಿ ಮನಸ್ಸಿನಲ್ಲಿರುವ ಭ್ರಮೆಯನ್ನು ತೆಗೆದುಹಾಕಿದಾಗ, ದುಷ್ಟಭಾವ, ಸ್ವಾರ್ಥಭಾವ ಹೊರಟು ಹೋಗುತ್ತವೆ. ಇದು ಸಾಧಕನ ಛಲವಾಗಿದೆ.
ನೀರೊಳಗೆ ಹೋದವನ ಹೆಜ್ಜೆಯ ಕಾಂಬವರುಂಟೆ?
ಅಂದಳವನೇರಿದ ಆತ್ಮನ ಹೆಜ್ಜೆಯ ಕಾಬವರುಂಟೆ?
ಆನೆಯನೇರಿಕೊಂಡು ಅರಿವನರಸುವನಂತೆ,
ಜ್ಞಾನಿಗಳ ಸಂಗದಲ್ಲಿರ್ದು ಆತ್ಮತೇಜಕ್ಕೆ ಹೋರುವನಂತೆ,
ನಾನು ನೀನೆಂಬುದನಳಿದು ತಾನೆಯಾಗರಿಬಲ್ಲಡೆ
ಅಮುಗೇಶ್ವರಲಿಂಗವು ತಾನೆ ಎಂಬೆನು.- (ಸ.ವ.ಸಂ.5, ವ-662)
ಈ ವಚನದಲ್ಲಿ ಕೆಲವು ಪ್ರಶ್ನೆಗಳನ್ನೆತ್ತುತ್ತಲೇ ಅವುಗಳಿಗೆ ಉತ್ತರಗಳನ್ನು ಕಂಡುಕೊಳ್ಳಲಾಗಿದೆ. ಅರಿವನ್ನು ಪಡೆಯಬೇಕಾದರೆ ಸಾಧನೆ ಮಾಡಬೇಕಾಗುತ್ತದೆ. ತನ್ನಷ್ಟಕ್ಕೆ ತಾನೇ ಅರಿವು ಬರುವುದಿಲ್ಲ. ಶರಣ ಧರ್ಮದಲ್ಲಿ ಅರಿವಿಗೆ ಬಹಳ ಪ್ರಾಮುಖ್ಯತೆಯಿದೆ. ಅರಿವು ಮತ್ತು ಕ್ರಿಯೆ ಹಾರುವ ಹಕ್ಕಿಗೆ ಎರಡು ರೆಕ್ಕೆಗಳಿದ್ದಂತೆ. ನನ್ನನ್ನು ನಾನು ಶೋಧಿಸಿಕೊಳ್ಳುವುದೆಂದರೆ ಇದೇ. ಈ ಶೋಧನೆಯ ಕ್ರಿಯೆಯಲ್ಲಿ ಅಂತರಂಗ ಮತ್ತು ಬಹಿರಂಗ ಎರಡೂ ಸೇರಿಕೊಂಡಿರುತ್ತವೆ. ನಾನೆಂಬುದು -ನಾವು ಆಗಬೇಕಾದರೆ, ನನ್ನದು ಎಂಬುದು -ಸಮಾಜದ್ದು ಎಂಬ ಭಾವ ಬರಬೇಕಾದರೆ ಆತ್ಮಶೋಧನೆ ಅತ್ಯಗತ್ಯ.
ಕರ್ಮೇಂದ್ರಿಯಗಳ ಜರಿದು ಕಡುಗಲಿಯಾದೆನು
ವರ್ಮವನತಿಗಳೆದು ನಿರ್ಮಳನಾದೆನು.
ಅಣ್ಣಾ ಅಪ್ಪಾ ಎಂದು ಬಿನ್ನಾಣದ ಮಾತ ನುಡಿಯೆನು.
ಅನ್ನ ಕೂಳಿಕ್ಕುವರ ಮನೆಯ ಕುನ್ನಿಗಳಾಗಿಪ್ಪವರ
ಎನಗೆ ಸರಿ ಎಂಬೆನೆ ಅಮುಗೇಶ್ವರಾ- (ಸ.ವ.ಸಂ.5, ವ-625)
ಕೃತಕತೆಗೆ ಬದಲಾಗಿ ಸಹಜತೆಯನ್ನು, ಸರಳತೆಯನ್ನು ಆತ್ಮಶೋಧನೆ ಕಲಿಸಿಕೊಡುತ್ತದೆ. ಆತ್ಮಶೋಧನೆ ಮಾಡಿಕೊಂಡವರು, ಯಾರನ್ನೂ ಅಣ್ಣಾ, ಅಪ್ಪಾ ಎಂದು ಬೇಡುವುದಿಲ್ಲ. ವಿಧೇಯತೆಗೆ ಬದಲು ವಿನಯವನ್ನು, ಶರಣಾಗತಿಗೆ ಬದಲು ಸ್ವಾಭಿಮಾನವನ್ನು ಕಲಿಸುತ್ತದೆ. ರಾಯಮ್ಮ ಅನೇಕ ವಚನಗಳಲ್ಲಿ ಆತ್ಮಶೋಧನೆಯ ಕ್ರಿಯೆಯ ಮಹತ್ವವನ್ನು ತಿಳಿಸಿದ್ದಾರೆ. ಹೆದರುವ, ಹಿಮ್ಮೆಟ್ಟುವ, ಅಂಜುವ, ಅಳುಕುವ ಸ್ವಭಾವವು ಹೊರಟುಹೋಗಿ ತನ್ನನ್ನು ತಾನು ತಿಳಿದುಕೊಳ್ಳುವ ಸದವಕಾಶವಿದು.
Comments 9
ಸದಾಶಿವಯ್ಯ ಸವಣೂರು
Oct 16, 2022ರಾಯಮ್ಮನವರ ವಚನಗಳಲ್ಲಿರುವ ವಿಚಾರಗಳು ಎಷ್ಟೊಂದು ವೈಚಾರಿಕವಾಗಿವೆ! ನಿಷ್ಠುರವಾಗಿವೆ!!
Chandru H
Oct 16, 2022EXCELLENT BLOG HERE! ALSO YOUR WEB SITE LOADS UP FAST!
Basappa Halurr
Oct 18, 2022ರಾಯಮ್ಮನವರು- ಗುರು-ಲಿಂಗ-ಜಂಗಮ ತನ್ನೊಳಗಡೆಯೇ ಇದ್ದಾರೆಂದು ಸ್ಪಷ್ಟಪಡಿಸುವ ವಚನಗಳು ಇನ್ನಾದರೂ ಲಿಂಗಾಯತ ಸಮಾಜದ ಕಣ್ಣುತೆರೆಸಲಿ. ಹೊರಗಿನ ಗುರು-ಲಿಂಗ-ಜಂಗಮದಿಂದ ಮುಕ್ತರಾಗಲಿ!!!!!
Nirmala Bhadravathi
Oct 20, 2022ಇದುವರೆಗೆ ನಾನು ಅಮುಗೆ ರಾಯಮ್ಮನವರ ವಚನಗಳನ್ನು ಅಷ್ಟಾಗಿ ಗಮನಿಸಿರಲಿಲ್ಲ. ಅವರ ಅನುಭಾವಿಕ ನಿಲುವನ್ನು ಓದಿ ದಂಗುಬಡಿದಂತಾಯಿತು. ಒಬ್ಬೊಬ್ಬ ವಚನಕಾರ್ತಿಯರೂ ಒಂದೊಂದು ವಿಶ್ವಕೋಶದಂತೆ ಕಾಣಿಸುತ್ತಾರೆ.
ಮಹಾದೇವಪ್ಪ ಕವಳಿ
Oct 23, 2022ಕಣ್ಣಿಗೆ ಕಾಣುವ ಮೂರ್ತ ರೂಪಗಳನ್ನೇ ಜನರು ಗುರು-ಲಿಂಗ-ಜಂಗಮರೆಂದು ಪೂಜಿಸುತ್ತಿದ್ದಾಗ ಅವುಗಳಿಗೆ ಭಿನ್ನವಾದ, ಸಂಪೂರ್ಣ ಅರಿವಿನ ದಾರಿ ತೋರುವ ಸಂಕೇತಗಳಾಗಿ ಶರಣರು ಕಂಡಿದ್ದನ್ನು ಅಮುಗೆ ರಾಯಮ್ಮ ತಮ್ಮ ವಚನಗಳಲ್ಲಿ ತಿಳಿಯಾಗಿ ಹೇಳಿದ್ದಾರೆ. ಶರಣ ದಂಪತಿಗಳ ಸರಳತೆ ಅವರ ವಚನಗಳಲ್ಲಿ ತುಂಬಿಕೊಂಡಿದೆ.
ಗವಿಸಿದ್ದೇಶ ತುಮಕೂರು
Oct 23, 2022ಎನ್ನ ದೇಹವ ದಗ್ಧವ ಮಾಡಯ್ಯಾ
ಎನ್ನ ಕಾಯದಲ್ಲಿಪ್ಪ ಕರ್ಮವ ತೊಡೆಯಯ್ಯಾ
ಎನ್ನ ಭಾವದಲ್ಲಿಪ್ಪ ಭ್ರಮೆಯ ಜರಿಯಯ್ಯಾ
ನಾ ಹಿಡಿದ ಛಲವ ಬಿಡದೆ ನಡೆಸಯ್ಯಾ ಅಮುಗೇಶ್ವರ ಲಿಂಗವೆ… ಎಂತಹ ವಚನ!!! ಅಮ್ಮಾ ತಾಯಿ ರಾಯಮ್ಮಾ ಶರಣು ತಾಯಿ ನಿನಗೆ ಶರಣು ಶರಣು.
Kumuda H
Oct 27, 2022ಅಮುಗೆ ರಾಯಮ್ಮನವರ ವಚನಗಳಲ್ಲಿರುವ ಮೊನಚು ಹಾಗೂ ವೈಚಾರಿಕ ಸ್ಪಷ್ಟತೆ ಆಧುನಿಕ ಸಮಾಜವನ್ನು ನಾಚಿಸುವಂತಿದೆ. ಗುರು-ಲಿಂಗ-ಜಂಗಮವನ್ನು ಕುರುಡಾಗಿ ನಂಬದೇ ಆಚರಣೆ ಭಾಗವಾಗಿ ರೂಢಿಸಿಕೊಂಡ ರೀತಿ ನಿಜಕ್ಕೂ ಆಶ್ಚರ್ಯಕರವಾಗಿದೆ.
ಮಲ್ಲಿಕಾರ್ಜುನ ಪಾವಟೆ
Oct 29, 2022ಅಮುಗೆ ರಾಯಮ್ಮನವರ ಪರಿಚಯಾತ್ಮಕ ಬರವಣಿಗೆ ಚೆನ್ನಾಗಿದೆ. ಅವರ ವಚನಗಳನ್ನು ಆಧ್ಯಾತ್ಮದ ಹಿನ್ನೆಲೆಯಲ್ಲಿ ವಿವರಿಸಿದ್ದರೆ ರಾಯಮ್ಮನವರ ಜ್ಞಾನದ ಉತ್ತುಂಗವನ್ನು ಅರಿಯಲು ಅನುವಾಗುತ್ತಿತ್ತು. ವಂದನೆಗಳು.
Sharanappa Hipparigi
Nov 5, 2022ಲೇಖನದ ಶೀರ್ಷಿಕೆ ನಿಜಕ್ಕೂ ಬಹಳ ವಿಚಾರಕ್ಕೊಡ್ಡುವಂತಿದೆ. ರಾಯಮ್ಮ ತಾಯಿಯವರ ನೇರ ಮಾತುಗಳು ಪರಿಣಾಮಕಾರಿಯಾಗಿವೆ. ಆ ತಾಯಿಯನ್ನು ಪರಿಚಯಿಸಿದ ಲೇಖಕರಿಗೆ ಧನ್ಯವಾದಗಳು.