ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯನೇರ ಬಯಸುವವರು,
ವೀರರೂ ಅಲ್ಲ, ಧೀರರೂ ಅಲ್ಲ. ಇದು ಕಾರಣ-
ನೆರೆ ಮೂರು ಲೋಕವೆಲ್ಲವೂ ಹಲ್ಲಣವ ಹೊತ್ತುಕೊಂಡು,
ತೊಳಲುತ್ತ ಇದ್ದಾರೆ.
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರು?
ಮಾನವನ ಮನಸ್ಸಿನ ಸ್ವಭಾವವನ್ನು ಪ್ರಭುದೇವರು ತುಂಬಾ ಪರಿಣಾಮಕಾರಿಯಾಗಿ ಸೆರೆಹಿಡಿದಿದ್ದಾರೆ. ಮನುಷ್ಯ ತಾನು ಮಾಡುತ್ತಿರುವ ಉದ್ಯೋಗದಲ್ಲೇ ಸಂತೋಷ ಕಾಣಬೇಕು. ಆದರೆ ಹಾಗೆ ಕಾಣದೆ ಮತ್ತೇನನ್ನೋ ಹುಡುಕುತ್ತಿರುವನು. ಹೀಗೆ ಹುಡುಕುತ್ತ ಹುಡುಕುತ್ತ ಕೊನೆಗೆ ತನ್ನ ತಲೆಯ ಮೇಲೆ ತಾನೇ ಚಪ್ಪಡಿ ಎಳೆದುಕೊಳ್ಳುವನು. `ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎನ್ನುವರು ಗೋಪಾಲಕೃಷ್ಣ ಅಡಿಗರು. ವ್ಯಕ್ತಿ ತನಗೆ ದೊರೆತ ಕಾಯಕದಲ್ಲೇ ಆನಂದ ಅನುಭವಿಸಬೇಕು. ಬದಲಾಗಿ ನನಗೆ ಆ ಕಾಯಕ ಸಿಕ್ಕಿದ್ದರೆ, ಈ ಕಾಯಕ ಸಿಕ್ಕಿದ್ದರೆ ಎಂದು ಪರಿತಪಿಸುತ್ತ ಕೊರಗುವನು. ಇದು ಬಹುತೇಕ ಜನರ ಸ್ವಭಾವ. ಪ್ರತಿಯೊಬ್ಬ ಮಾನವನಿಗೂ ತನ್ನದೇ ಆದ ಶಕ್ತಿ ಮತ್ತು ದೌರ್ಬಲ್ಯ ಸಹ ಇವೆ. ಆತ ಇದನ್ನು ಅರ್ಥಮಾಡಿಕೊಳ್ಳದೆ, ಸಕಾರಾತ್ಮಕ ಚಿಂತನೆ ಬಿಟ್ಟು ನಕಾರಾತ್ಮಕ ಚಿಂತನೆಯಲ್ಲೇ ಕಾಲದ ದುರ್ವಿನಿಯೋಗ ಮಾಡಿಕೊಳ್ಳುವನು. ಅಂಥವನು ಎಲ್ಲಿಗೇ ಹೋಗಲಿ, ಏನೇ ಮಾಡಲಿ ಅದರಲ್ಲಿ ಯಶಸ್ಸು ಕಾಣಲಾಗುವುದಿಲ್ಲ. ಕಾರಣ ತನಗಿರುವ ಕಾಯಕವನ್ನೇ ಸದ್ಬಳಕೆ ಮಾಡಿಕೊಳ್ಳುವ ವಿವೇಕ ಇರುವುದಿಲ್ಲ. ಇದ್ದುದನ್ನೇ ವ್ಯವಸ್ಥಿತವಾಗಿ ಬಳಕೆ ಮಾಡಿಕೊಳ್ಳುವ ವಿವೇಕ ಮುಖ್ಯ. ಪ್ರಭುದೇವರು ಈ ವಚನದಲ್ಲಿ ಎರಡು ಸಂಗತಿಗಳಿಗೆ ಒತ್ತುಕೊಟ್ಟಿರುವಂತಿದೆ.
1. ಒಬ್ಬ ಈಗಾಗಲೇ ಯಾವುದೋ ಒಂದು ಕಾಯಕ ಸ್ವೀಕರಿಸಿದ್ದಾನೆ. ಆತ ಅದನ್ನೇ ಪರಿಣಾಮಕಾರಿಯಾಗಿ ಮಾಡಬೇಕು. ಅದನ್ನು ಬಿಟ್ಟು ನನಗೆ ಆ ಕಾಯಕ ಇದ್ದಿದ್ದರೆ, ಈ ಕಾಯಕ ಇದ್ದಿದ್ದರೆ ಎಂದು ಕೊರಗುವುದು ಸರಿಯಲ್ಲ. ಹಪಾಹಪಿತನ ಬಿಟ್ಟು ಇರುವ ಕಾಯಕದಲ್ಲೇ ಪ್ರಾವೀಣ್ಯತೆ ಸಾಧಿಸಬೇಕು. ತನ್ಮೂಲಕ ಬೇರೆ ಕಾಯಕದತ್ತ ಹೆಜ್ಜೆ ಇಡಲು ಅವಕಾಶ ದೊರೆಯುವುದು. ಅದನ್ನು ಬಿಟ್ಟು ಇನ್ನೇನೋ ಇದ್ದಿದ್ದರೆ ಚನ್ನಾಗಿತ್ತು ಎಂದು ಹಾತೊರೆಯುವುದು ಸರಿಯಲ್ಲ. ಒಬ್ಬ ಕೃಷಿಕ, ಸ್ವಾಮಿ, ಶಿಕ್ಷಕ, ವ್ಯಾಪಾರಿ, ರಾಜಕಾರಣಿ ಹೀಗೆ ಏನೇನೋ ಕಾಯಕ ಸ್ವೀಕರಿಸಿದ್ದಾನೆ ಎಂದರೆ ಅದರಲ್ಲೇ ಸಾಧನೆ ಮಾಡಬೇಕು. ಅವರವರ ಕಾಯಕದಲ್ಲಿ ಶ್ರದ್ಧೆಯನ್ನು ಬೆಳಸಿಕೊಳ್ಳಬೇಕು.
2. ಬಹುದೇವತಾರಾಧನೆಯನ್ನು ಕುರಿತ ಚಿಂತನೆ. ಬಹುದೇವತಾರಾಧನೆಯ ಬದಲು ಏಕದೇವ ನಿಷ್ಠೆಯನ್ನು ಬೆಳೆಸಿಕೊಳ್ಳಬೇಕಾದ್ದು ಅಪೇಕ್ಷಣಿಯ. ಆದರೆ ಎಷ್ಟೋ ಜನರು ಮೊದಲು ಹನುಮಂತ, ಕಲ್ಲಪ್ಪ ಇನ್ನಾವುದೋ ದೇವರನ್ನು ನಂಬಿ ಪೂಜೆ ಮಾಡುವರು. ನಂತರ ಚೌಡವ್ವ, ದ್ಯಾಮವ್ವ, ಕಾಳವ್ವ ಹೀಗೆ ಬೇರೆ ಬೇರೆ ದೇವರ ಹಿಂದೆ ಸುತ್ತುವರು. ಅವರಿಗೆ ಯಾವ ದೇವರಲ್ಲೂ ಶ್ರದ್ಧೆ ಗಟ್ಟಿಗೊಳ್ಳದೆ ಮಾನಸಿಕ ದೌರ್ಬಲ್ಯಕ್ಕೆ ಸಿಲುಕಿಕೊಳ್ಳುವರು. ಇಷ್ಟಲಿಂಗ ಧರಿಸಿದವರೂ ಹಾಗೇ ಮಾಡಿದರೆ ಅವರಿಗೆ ತಾವು ಧರಿಸಿಕೊಂಡ ಇಷ್ಟಲಿಂಗದ ಮೇಲೆ ನಿಷ್ಠೆ ಇಲ್ಲವೆಂದಾಯಿತು. ಅದನ್ನೇ ಪ್ರಭುದೇವರು ವಚನದ ಕೊನೆಯಲ್ಲಿ ಹೇಳಿದ್ದಾರೆ. ಅಂದರೆ ವ್ಯಕ್ತಿ ತಾನು ಒಪ್ಪಿಕೊಂಡ ಕಾಯಕವನ್ನು ಶ್ರದ್ಧೆಯಿಂದ ಮಾಡುವುದಲ್ಲದೆ ಗುರು ಕರುಣಿಸಿದ ಇಷ್ಟಲಿಂಗದಲ್ಲೇ ನಿಷ್ಠೆ ಬೆಳೆಸಿಕೊಂಡು ಅದನ್ನೇ ಆರಾಧಿಸಬೇಕು. ಇದನ್ನು ಕೊಟ್ಟ ಕುದುರೆಯ ನಿದರ್ಶನದ ಮೂಲಕ ಸ್ಪಷ್ಟಪಡಿಸಿದ್ದಾರೆ. ಮನಸ್ಸು ಚಂಚಲವಾಗದೆ ಒಂದೆಡೆ ಸ್ಥಿರವಾಗಿ ನಿಲ್ಲಬೇಕು. ಪಲಾಯನವಾದಿಗಳಿಗೆ ಸಹ ಉತ್ತರ ಇಲ್ಲಿದೆ. ಗಟ್ಟಿತನ ತಂದುಕೊಂಡು ಜೀವನದಲ್ಲಿ ಬಂದುದೆಲ್ಲವನ್ನೂ ಎದುರಿಸಬೇಕು.
ಸುಳ್ಳುಗಾರರು ತಮಗೆ ತಾವೇ ಕೊಟ್ಟುಕೊಳ್ಳುವ ದೊಡ್ಡ ಶಿಕ್ಷೆ ಎಂದರೆ ಅಕಸ್ಮಾತ್ ಅವರು ಸತ್ಯ ಹೇಳಿದರೂ ಯಾರೂ ನಂಬುವುದಿಲ್ಲ. ಅವರಾಡುವ ಪ್ರತಿಯೊಂದು ಮಾತಿನಲ್ಲೂ ಸುಳ್ಳೆ ಎದ್ದು ಕಾಣುವುದು, ಇಲ್ಲವೇ ಜನರು ಹಾಗೆ ಭಾವಿಸುವರು. ಅದು ತೋಳ ಬಂತು, ತೋಳ ಬಂತು ಎಂದು ಸುಳ್ಳು ಸುದ್ದಿ ಹರಡಿದ ಕುರುಬನ ಸ್ಥಿತಿಯಾಗಬಹುದು. ಒಮ್ಮೆ ಸುಳ್ಳು ಹೇಳಲು ರೂಢಿಸಿಕೊಂಡರೆ ಆತ ಮುಂದೆ ಸತ್ಯವನ್ನು ಸಹ ಸುಳ್ಳನ್ನಾಗಿಸುವನು. ಅವನನ್ನು ಯಾರೂ ನಂಬದ ಸ್ಥಿತಿ ಬರುವುದು. `ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ’ ಎನ್ನುವ ಮಾತಿನಲ್ಲಿ ಅತಿಶಯೋಕ್ತಿ ಏನಿಲ್ಲ. ಸತ್ಯವಂತರಿಗೆ ತಾತ್ಕಾಲಿಕವಾಗಿ ಸಂಕಷ್ಟಗಳು ಎದುರಾಗಬಹುದು. ಆದರೆ ಕೊನೆಗೆ ಗೆಲ್ಲುವುದು ಸತ್ಯವೇ ಹೊರತು ಸುಳ್ಳಲ್ಲ. ಹಣ ಇದ್ದರೂ ಸಮಸ್ಯೆ, ಇಲ್ಲದಿದ್ದರೂ ಸಮಸ್ಯೆ. ಎಷ್ಟಿರಬೇಕೋ ಅಷ್ಟಿದ್ದರೆ ಚಿಂತೆ ಇಲ್ಲ. ಹಲವರು ದುಡ್ಡಿಗಾಗಿ ಏನೆಲ್ಲ ಮಾಡುತ್ತಾರೆ ಎಂದು ವಿವರಿಸುವ ಅಗತ್ಯವಿಲ್ಲ. ದುಡ್ಡಿಗಾಗಿ ಅಧಿಕಾರ, ಅಧಿಕಾರಕ್ಕಾಗಿ ದುಡ್ಡು ಎನ್ನುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಬೀಳುವುದು ನನ್ನನ್ನು ಅವಲಂಬಿಸಿದರೆ ಬಿದ್ದವನನ್ನು ಎತ್ತುವುದು ದೇವರ ಜವಾಬ್ದಾರಿ ಎನ್ನುವ ಮಾತಿದೆ. ಮನುಷ್ಯ ಏನೇನೋ ಕಾರಣಕ್ಕಾಗಿ ಜಾರಿ ಬೀಳುವನು. ನಾವು ಹಲವರಿಂದ ದೂರವಿದ್ದಾಗ ಎಲ್ಲರೂ ಚನ್ನಾಗಿಯೇ ಕಾಣುವರು. ವ್ಯಕ್ತಿಯ ಸಂಪರ್ಕವಿಲ್ಲದೆ ಅವರು ದೂರದಲ್ಲಿದ್ದಾಗ ಅವರ ಬಗ್ಗೆ ಪ್ರೀತಿ, ಗೌರವ ತೋರುವುದು ಸಹಜ. ಅದೇ ಹತ್ತಿರವಿದ್ದಾಗ ಅವರ ಗುಣಾವಗುಣಗಳಿಂದ ಕಿರಿ ಕಿರಿ ಶುರುವಾಗುವುದು. `ದೂರದ ಗುಡ್ಡ ಕಣ್ಣಿಗೆ ನುಣ್ಣಗೆ’ ಎಂದಂತೆ ದೂರದಲ್ಲಿದ್ದಾಗ ದೋಷಗಳು ಕಾಣುವುದಿಲ್ಲ. ಹತ್ತಿರವಾದಾಗ ಸಂಬಂಧಗಳನ್ನು ಮಧುರವಾಗಿಸಿಕೊಳ್ಳುವುದು ತುಂಬಾ ಕಷ್ಟಸಾಧ್ಯ.
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ
ಚಿನ್ನದಾತುರಕಿಂತ ಹೆಣ್ಣು ಗಂಡೊಲವು
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷತಮ
ತಿನ್ನುವುದಾತ್ಮವನೆ ಮಂಕುತಿಮ್ಮ.
ಮನ್ನಣೆಯ ದಾಹ ನಮ್ಮ ಆತ್ಮವನ್ನೇ ತಿಂದುಹಾಕುವುದು. ಅದನ್ನು ಕೀರ್ತಿಶನಿ ಎನ್ನುವರು. ಅದಕ್ಕಾಗಿ ಬಸವಣ್ಣನವರು `ನೀನೆನಗೆ ಒಳ್ಳಿದನಾದರೆ ಎನ್ನ ಹೊಗಳತೆಗಡ್ಡಬಾರಾ ಧರ್ಮಿ’ ಎನ್ನುವರು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಿಲ್ಲೊಂದು ದೌರ್ಬಲ್ಯ ಇದ್ದೇ ಇರುವುದು. ನನಗೆ ಎಲ್ಲರೂ ಮನ್ನಣೆ ಕೊಡಬೇಕು ಎಂದುಕೊಳ್ಳುವುದು ಸಹ ಒಂದು ದೌರ್ಬಲ್ಯವೇ. ಅದು ಒಂದು ಮಿತಿಯಲ್ಲಿದ್ದರೆ ಚಿಂತೆ ಇಲ್ಲ. ಮನುಷ್ಯ ದೌರ್ಬಲ್ಯಗಳಾಚೆಗೂ ಇರುವ ಒಳ್ಳೆಯದನ್ನು ಗುರುತಿಸುವುದನ್ನು ರೂಢಸಿಕೊಳ್ಳಬೇಕು. ಹಣ ಸ್ವಶ್ರಮದಿಂದ ಬಂದುದಾಗಿದ್ದರೆ ಅದರ ಬೆಲೆ ಗೊತ್ತಿರುತ್ತದೆ. ಅದನ್ನು ಅಂದಾದುಂದಿ ಯಾರೂ ಖರ್ಚು ಮಾಡುವುದಿಲ್ಲ. ಇವತ್ತು ಕಾಯಕದಿಂದ ಸಂಪಾದನೆ ಮಾಡುವುದಕ್ಕಿಂತ ವಾಮಮಾರ್ಗದಿಂದ ಸಂಪತ್ತನ್ನು ಕೂಡಿಹಾಕುವ ದಾಹ ಹೆಚ್ಚಾಗುತ್ತಿದೆ. ಅದರಿಂದಾಗಿ ಮನುಷ್ಯ ವಿಚಿತ್ರವಾಗಿ ವರ್ತಿಸುವನು. ಈ ನೆಲೆಯಲ್ಲಿ ಮನುಷ್ಯ ಅತೀ ಒಳ್ಳೆಯವ ಅಥವಾ ಅತೀ ಕೆಟ್ಟವನಾಗಿದ್ದರೂ ಅಪಾಯ ತಪ್ಪಿದ್ದಲ್ಲ. ಬುದ್ಧನನ್ನು ವಿಷ ಎಂದರೆ ಏನು? ಯಾವುದು ಎಂದು ಕೇಳಿದಾಗ ಅತಿಯಾದದ್ದೆಲ್ಲ ವಿಷ ಎನ್ನುವರು. ಅತಿಯಾದರೆ ಅಮೃತ ಸಹ ವಿಷವಾಗುವುದು. ಎಷ್ಟೋ ಸಂದರ್ಭಗಳಲ್ಲಿ ಮನುಷ್ಯ ಸುಳ್ಳು ಹೇಳುವುದನ್ನೇ ರೂಢಿಸಿಕೊಂಡು ತಾನೂ ಹಾಳಾಗಿ ಇತರರನ್ನೂ ಹಾಳು ಮಾಡುವನು. ಹಾಗಾಗಿ ಮನುಷ್ಯ ಸುಳ್ಳನ್ನು ಬಿಟ್ಟು ಸತ್ಯದ ದಾರಿಯಲ್ಲಿ ನಡೆಯಬೇಕಾಗುತ್ತದೆ. ಇವತ್ತು ಹಣ ಎನ್ನುವುದೇ ಎಲ್ಲರಿಗೂ ಒಂದು ಭ್ರಮೆಯಾಗಿದೆ. ಹಣ ಹೆಚ್ಚಿದ್ದರೂ ಹಿಂಸೆ, ಕಡಿಮೆ ಇದ್ದರೂ ಹಿಂಸೆ. ಮನುಷ್ಯನಿಗೆ ಬೇಕಾದ್ದು ಸಂತೋಷ. ಅದು ಹಣದಲ್ಲಿದೆ ಎನ್ನುವ ಭ್ರಮೆ. ಹಾಗಾಗಿ ಎಲ್ಲರೂ ಹಣದ ಹಿಂದೆ ಓಡುತ್ತಿದ್ದಾರೆ. ಬಡವರಿಗೆ ಏನು ಬೇಕು ಎನ್ನುವುದು ಗೊತ್ತು. ಶ್ರೀಮಂತರಿಗೆ ಏನೆಲ್ಲ ಇದ್ದರೂ ತಮಗೇನು ಬೇಕು ಎನ್ನುವುದು ಗೊತ್ತಿರುವುದಿಲ್ಲ. ಅದನ್ನು ಅವರಿಗೆ ಗೊತ್ತುಪಡಿಸಲು ಇಂದು ಮಾರ್ಗದರ್ಶನ ಮಾಡಬೇಕಾಗಿದೆ.
ಒಬ್ಬ ಭಿಕ್ಷುಕ ಹಣವಿಲ್ಲದಿದ್ದರೂ ಸುಖವಾಗಿ ಜೀವನ ನಡೆಸುವನು. ಸಿಕ್ಕಲ್ಲಿ ಉಂಡು ನಿದ್ರೆ ಬಂದಲ್ಲಿ ಮಲಗುವನು. ಆದರೆ ಅದೇ ಹಣವುಳ್ಳವರು ಅದನ್ನು ಇನ್ನಷ್ಟು ಹೆಚ್ಚಿಸುವ ಭರಾಟೆಯಲ್ಲಿ ಸರಿಯಾಗಿ ಊಟ, ನಿದ್ರೆಯನ್ನೂ ಮಾಡಲಾಗುವುದಿಲ್ಲ. ಅವರಿಗೆ ನೆಮ್ಮದಿಯೂ ಇಲ್ಲದಾಗುವುದು. ಜೊತೆಗೆ ರೋಗಗಳ ಹಾವಳಿಯೂ ತಪ್ಪಿದ್ದಲ್ಲ. ಇದಕ್ಕೆ ಬೇಕಾದಷ್ಟು ನಿದರ್ಶನಗಳನ್ನು ನೋಡಬಹುದು. ಸರಳ ಜೀವನಕ್ಕೆ ಎಷ್ಟು ಬೇಕೋ ಅಷ್ಟು ಸಂಪತ್ತು ಇದ್ದರೆ ಸಾಕು. ಹಣ ಹೆಚ್ಚಾದಾಗ ಅನೀತಿ, ಅವ್ಯವಹಾರ ಹೆಚ್ಚಬಹುದು. `ದೂರದ ಗುಡ್ಡ ಕಣ್ಣಿಗೆ ನುಣ್ಣಗೆ’ ಎಂಬಂತೆ ದೂರದಿಂದ ನೋಡಿದಾಗ ಗುಡ್ಡ ತುಂಬಾ ಸುಂದರವಾಗಿ ಕಾಣುವುದು. ಹತ್ತಿರ ಹೋದರೆ ಅಲ್ಲಿ ಕಲ್ಲುಬಂಡೆಗಳು, ಮುಳ್ಳುಕಂಟಿಗಳು, ಗಿಡ-ಮರಗಳು ಇನ್ನೇನೇನೋ ಇದ್ದು ಕಾಲಿಡಲೂ ಕಷ್ಟವಾಗುವುದು. ಮನುಷ್ಯ ಅತೀ ಒಳ್ಳೆಯವ ಅಥವಾ ಅತೀ ಕೆಟ್ಟವ ಆಗಬಾರದು ಎನ್ನುವುದಕ್ಕೆ ಒಂದು ಹಾವಿನ ನಿದರ್ಶನ ನೆನಪಾಗುವುದು. ಕಾಡಿನಲ್ಲಿ ನಾಗರ ಹಾವೊಂದು ಕಂಡ ಕಂಡವರನ್ನು ಕಚ್ಚಿ ಸಾಯಿಸುತ್ತಿತ್ತು. ಹಾಗಾಗಿ ಆ ಭಾಗದಲ್ಲಿ ಓಡಾಡಲು ಜನರು ಭಯಪಡುತ್ತಿದ್ದರು. ಆದರೆ ಅದೇ ದಾರಿಯಲ್ಲಿ ನಾರದ ಹೋಗುವನು. ತನಗೆ ಎದುರಾದ ಹಾವಿಗೆ ಹಾಗೆಲ್ಲ ಕಚ್ಚದೆ ಸಾಧುಪ್ರಾಣಿಯಂತೆ ಇರಬೇಕು ಎಂದು ಉಪದೇಶ ಮಾಡುವನು. ನಾರದನ ಉಪದೇಶದಂತೆ ಅದು ಯಾರನ್ನೂ ಕಚ್ಚದೆ ಸಾಧುಪ್ರಾಣಿಯಾಗಿ ವರ್ತಿಸುವುದು. ಅದು ಕಚ್ಚುವುದಿಲ್ಲ ಎಂದು ತಿಳಿದಾಗ ಹಲವರು ಅದರೊಂದಿಗೆ ಆಟ ಆಡುವುದು, ಹೊಡೆಯುವುದು, ಹೊರೆ ಕಟ್ಟಲು ಬಳಸುವುದು ಹೀಗೆ ವಿಚಿತ್ರ ಹಿಂಸೆ ಕೊಡುತ್ತಿದ್ದರು. ಅವರ ಹಿಂಸೆ ತಾಳದೆ ಹಾವು ಹುತ್ತವನ್ನು ಸೇರಿತು. ಹೊರಗೆ ಬರಲು ಹೆದರುತ್ತಿತ್ತು. ಮತ್ತದೇ ದಾರಿಯಲ್ಲಿ ನಾರದ ಬಂದಾಗ ಆ ಹಾವನ್ನು ಕೂಗಿ ಕರೆಯುವನು. ಹಾವು ತೆವಳಿಕೊಂಡು ನಿಧಾನಕ್ಕೆ ಹೊರಬರುವುದು. ಅದರ ಮೈಮೇಲೆಲ್ಲ ಗಾಯ. ದೇಹ ತುಂಬಾ ಕೃಶವಾಗಿದೆ. ಯಾಕೆ ಹೀಗೆ ಎಂದು ಕೇಳಿದಾಗ ತಮ್ಮ ಉಪದೇಶದ ಫಲ ಎಂದು ನಡೆದ ಸಂಗತಿಯನ್ನು ವಿವರಿಸುವುದು. ಆಗ ನಾರದ ಹೇಳಿದ್ದು ಕಚ್ಚಬೇಡ ಎಂದು ಹೇಳಿದೆನೆ ಹೊರತು ಬುಸ್ ಎನ್ನಬೇಡ ಎಂದು ಹೇಳಿರಲಿಲ್ಲವಲ್ಲ! ನೀನು ಬುಸ್ ಎಂದಿದ್ದರೆ ಇಂದು ನಿನಗೆ ಈ ಗತಿ ಬರುತ್ತಿರಲಿಲ್ಲ ಎಂದು ಹೇಳಿದನಂತೆ.
ಮೇಲೆ ಉದಾಹರಿಸಿದ ಡಿವಿಜಿಯವರ ಪದ್ಯ ಚಿಂತನೆಗೆ ಆಹಾರ ಒದಗಿಸುವುದು. ಮನುಷ್ಯನಿಗೆ ಅನೇಕ ರೀತಿಯ ದಾಹಗಳಿವೆ. ಆ ದಾಹಗಳೇ ಆತನ ಬದುಕನ್ನು ನರಕವಾಗಿಸುವವು. ಹಾಗಂತ ದಾಹಗಳು ಇರಬಾರದು ಎಂದಲ್ಲ. ಅವುಗಳ ಮೇಲೆ ಹತೋಟಿ ಸಾಧಿಸಬೇಕು. ಆಗ ಬಡತನ, ಸಿರಿತನ ಎರಡೂ ಮನುಷ್ಯನನ್ನು ಹಾಳು ಮಾಡಲು ಸಾಧ್ಯವಿಲ್ಲ. ವ್ಯಕ್ತಿ ಸನ್ಮಾರ್ಗದಲ್ಲಿ ಸಾಗುವನು. ಇಂದು ಆದರ್ಶಯುತ ತತ್ವಗಳಿಗೆ ಕೊರತೆ ಇಲ್ಲ. ಆದರೆ ಅವುಗಳಂತೆ ಬಾಳುವಲ್ಲಿ ಮನುಷ್ಯ ಸೋಲುತ್ತಿದ್ದಾನೆ. ಹಾಗಾಗಿ ಮತ್ತೆ ಮತ್ತೆ ಆತ್ಮಾವಲೋಕನ, ಆತ್ಮವಿಮರ್ಶೆ ನಡೆಯಬೇಕಾದ ಅಗತ್ಯವಿದೆ. ಇಂದು ಮನುಷ್ಯ ಲೋಕವಿಮರ್ಶೆಗಿಂತ ಆತ್ಮವಿಮರ್ಶೆ, ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಲೋಕ ಏನಾಗಿದೆ ಎನ್ನುವುದಕ್ಕಿಂತ ನಾನು ಏನಾಗಿದ್ದೇನೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಬಸವಣ್ಣನವರ ವಚನಗಳನ್ನು ಗಮನಿಸಿದರೆ ಅವರು ಹೆಚ್ಚು ಹೆಚ್ಚು ಆತ್ಮಾವಲೋಕನ ಮಾಡಿಕೊಂಡದ್ದು ತಿಳಿದುಬರುವುದು. ಹಾಗಂತ ಲೋಕವಿಮರ್ಶೆ ಇಲ್ಲವೆಂದಲ್ಲ. ಅದೂ ಇದೆ. ಅದಕ್ಕಿಂತ ಹೆಚ್ಚಾಗಿ ಆತ್ಮಾವಲೋಕನದ ಮೂಲಕ ಲೋಕಕ್ಕೆ ಬೇಕಾದ ಸಂದೇಶ ನೀಡುವ ಕಾಯಕ ಮಾಡಿದ್ದಾರೆ. ಹಾಗಾಗಿ ಮನುಷ್ಯ ಇನ್ನೊಬ್ಬರ ದೋಷಗಳನ್ನೇ ವೈಭವೀಕರಿಸುವ ಬದಲು ಆತ್ಮಾವಲೋಕನ ಮಾಡಿಕೊಂಡು ಸರಿದಾರಿಯಲ್ಲಿ ಹೆಜ್ಜೆ ಇಡಬೇಕಾಗಿದೆ. ಆಗ ಅನೇಕ ರೀತಿಯ ಸಂಕಷ್ಟಗಳು ಬಂದೊದಗಬಹುದು. ಅವುಗಳನ್ನು ಮೆಟ್ಟಿನಿಲ್ಲುವ ಎದೆಗಾರಿಕೆ ಬೆಳೆಸಿಕೊಳ್ಳಬೇಕಾಗಿದೆ. ನೋವನ್ನೂ ನಲಿವನ್ನಾಗಿ ಮಾಡಿಕೊಳ್ಳಬೇಕು. ಮನಸ್ಸು ಶುದ್ಧವಾಗಿದ್ದಾಗ ಒಳ್ಳೆಯ ಗುಣಗಳು ಮನುಷ್ಯನೊಳಗೆ ಆವಿರ್ಭವಿಸಲು ಸಾಧ್ಯ. ಅದನ್ನೇ ಬಸವಣ್ಣನವರು ಅಂತರಂಗ ಮತ್ತು ಬಹಿರಂಗ ಶುದ್ಧಿ ಎಂದದ್ದು. ಅಂಥ ಶುದ್ಧಿಯನ್ನು ವ್ಯಕ್ತಿ ತನಗೆ ತಾನೇ ಮಾಡಿಕೊಳ್ಳಬೇಕಿದೆ. ಆಗ ವ್ಯಕ್ತಿ ತಾನು ಸಂತೋಷ ಅನುಭವಿಸುತ್ತ ತನ್ನ ಸುತ್ತ ಇರುವವರಿಗೂ ಸಂತೋಷ ಕೊಡಲು ಸಾಧ್ಯ. ಹಾಗಾಗಿ ವ್ಯಕ್ತಿಗತವಾಗಿ ಬದಲಾವಣೆ ಆಗಬೇಕಾಗಿದೆ.
ಅಯ್ಯಾ ಗುರುವರನ ಹೊಂದಿ ಗುರುಪುತ್ರನಾದ ಬಳಿಕ
ಅಕಸ್ಮಾತ್ ಆ ಗುರುವಿನಲ್ಲಿ ಅನಾಚಾರ ದುರಾಚಾರಗಳು ಮೈದೋರಿದಲ್ಲಿ,
ಅವು ಸೂಕ್ಷ್ಮವಿದ್ದಡೆ ತಿದ್ದಿಕೊಳ್ಳಬೇಕು,
ಸ್ಥೂಲವಿದ್ದಡೆ ಆ ಗುರುವ್ಯಕ್ತಿಯನುಳಿದು
ತಾನರಿದ ಗುರುತತ್ವವ ನಂಬಿ ಸದಾಚಾರವ ಸಾಧಿಸುತ್ತಿರಬೇಕು.
ಇಂತೀ ಆಚರಣೆಯೆ ನಿಮ್ಮ ಶರಣರಿಗೆ ಸದಾ ಸಮ್ಮತವಾಗಿರ್ಪುದು ಕಾಣಾ
ಕೂಡಲಚೆನ್ನಸಂಗಮದೇವಾ.
ಇದು ಚನ್ನಬಸವಣ್ಣವರ ವಚನ. ನಾವು ಒಬ್ಬ ಗುರುವಿನಿಂದ ದೀಕ್ಷೆ ಪಡೆದು ಅವರ ಮಾರ್ಗದರ್ಶನದಂತೆ ನಡೆಯುತ್ತಿರುತ್ತೇವೆ. ಒಂದು ವೇಳೆ ಆ ಗುರುವೇ ತಪ್ಪು ಮಾಡಿದರೆ? ಆ ತಪ್ಪು ಅಲ್ಪ ಪ್ರಮಾಣದಲ್ಲಿದ್ದರೆ ಚಿಂತೆ ಇಲ್ಲ. ತಪ್ಪುಗಳೇ ಅತಿಯಾದಲ್ಲಿ ಆ ಗುರುವನ್ನು ಬಿಟ್ಟು ಗುರುತತ್ವದಂತೆ ನಡೆದುಕೊಳ್ಳಬೇಕು. ಇಂಥ ವಚನಗಳನ್ನು ಕೇಳಿದ್ದರೂ ಸಂದರ್ಭಕ್ಕೆ ಅನುಗುಣವಾಗಿ ಅವು ಹೊಸ ಹೊಸ ಅರ್ಥಗಳನ್ನು ಬಿಚ್ಚಿಕೊಳ್ಳುತ್ತವೆ. ಗುರುವಿನಲ್ಲಿ ಒಳ್ಳೆಯದು ಅಥವಾ ಕೆಟ್ಟದ್ದು ಇದೆ ಎನ್ನುವುದು ನಮ್ಮ ಮನಸ್ಸಿನ ಭಾವನೆಗಳಿಗೂ ಅನ್ವಯಿಸುವುದು. ನಮ್ಮಲ್ಲಿರುವ ಒಳ್ಳೆಯ ಅಥವಾ ಕೆಟ್ಟ ಗುಣಗಳನ್ನು ಗುರುವಿನಲ್ಲೂ ನೋಡುತ್ತಿರುತ್ತೇವೆ. ನಮ್ಮ ಒಳಪ್ರಪಂಚವೇ ಹೊರಪ್ರಪಂಚದ ಪ್ರತಿಬಿಂಬ. ಅಂದರೆ ಅಂತರಂಗದೊಳಗಿನ ಪ್ರಪಂಚವೇ ಬಾಹ್ಯ ಪ್ರಪಂಚದಲ್ಲೂ ಕಾಣಿಸಿಕೊಳ್ಳುವುದು. ಹೊರಗೆ ದೋಷ ಕಾಣುತ್ತೇವೆ ಎಂದರೆ ನಮ್ಮೊಳಗೂ ಏನೋ ದೋಷ ಇದೆ ಎಂದು ಭಾವಿಸಬೇಕು. ಹಾಗಾಗಿ ಬಸವಣ್ಣನವರು ಲೋಕವಿಮರ್ಶೆಗೆ ಮುನ್ನ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದರು. ಅವರು ಕಳ್ಳರನ್ನು ಸಹ ಕಳ್ಳರನ್ನಾಗಿ ನೋಡುವುದಿಲ್ಲ. ಯಾರನ್ನೂ ಕೀಳೆಂದು ಭಾವಿಸುವುದಿಲ್ಲ. ಪ್ರತಿಯೊಬ್ಬರಲ್ಲೂ ಒಳಿತನ್ನು ಕಾಣುವ ಹೃದಯಶ್ರೀಮಂತಿಕೆ ಬೆಳೆಸಿಕೊಂಡಿದ್ದರು. ಆದುದರಿಂದ ಬೇರೆಯವರಲ್ಲಿ ಒಳ್ಳೆಯದನ್ನು ನೋಡಬೇಕೆಂದರೆ ಮೊದಲು ನಮ್ಮಲ್ಲಿ ಒಳ್ಳೆಯದನ್ನು ಅಳವಡಿಸಿಕೊಳ್ಳಬೇಕು. ಅಂತರಂಗದೊಳಗೆ ಒಳಿತು, ಆನಂದ ಅನುಭವಿಸುತ್ತ ಹೋಗಬೇಕು. ನಮ್ಮೊಳಗಿನ ಪ್ರಜ್ಞೆಯೇ ಗುಹೇಶ್ವರ. ಈ ನೆಲೆಯಲ್ಲಿ ಕೆಟ್ಟದ್ದರ ಬದಲು ಎಲ್ಲದರಲ್ಲೂ ಒಳ್ಳೆಯದನ್ನು ಕಾಣುವುದನ್ನು ರೂಢಿಸಿಕೊಳ್ಳಬೇಕು.
ಕರ್ಮವೆಂಬುದು ಮನೋಸಂಚಯ ಎನ್ನುವರು. ನಾವು ಏನಾದರೂ ಆಲೋಚನೆ ಮಾಡುತ್ತೇವೆ ಎಂದರೆ ಅದು ಮೊದಲು ಮನದಲ್ಲಿ ಮನೆ ಮಾಡಿರುತ್ತದೆ. ಮನೋಸಂಚಯವನ್ನು ಬರಿದಾಗಿಸಿಕೊಂಡರೆ ಮನೋವಿಮುಕ್ತಿ. ಹಾಗಾಗಿ ಮನುಷ್ಯ ಯಾವಾಗಲೂ ಮನಸ್ಸಿನ ಭಾವನೆಗಳನ್ನು ಆಗಾಗ ಖಾಲಿ ಮಾಡಿಕೊಳ್ಳಬೇಕು. ಮನಸ್ಸು ಬೇಕಾದ್ದು, ಬೇಡವಾದದ್ದನ್ನೆಲ್ಲ ತುಂಬಿಕೊಂಡು ಮಲಿನವಾಗಿ ಏನನ್ನೂ ಸಾಧನೆ ಮಾಡಲು ಆಗುವುದಿಲ್ಲ. ಖಾಲಿ ಮಾಡುವುದು ತುಂಬಾ ಕಷ್ಟದ ಕಾರ್ಯ. ಆದರೂ ಸ್ವಪ್ರಯತ್ನದಿಂದ ಖಾಲಿ ಮಾಡುತ್ತ ಹೋದರೆ ಖುಷಿಯಾಗುವುದು. ಖಾಲಿ ಮಾಡದೆ ಏನೇನನ್ನೋ ತುಂಬಿಕೊಳ್ಳುತ್ತಿದ್ದರೆ ಅದೇ ಮನುಷ್ಯನನ್ನು ಹುಚ್ಚನನ್ನಾಗಿ ಮಾಡಬಹುದು. ಆತ ಹುಚ್ಚತನದಿಂದ ಹೊರಬರಬೇಕೆಂದರೆ ಸಾಧ್ಯವಾದಷ್ಟು ಖಾಲಿ ಮಾಡಿಕೊಳ್ಳಬೇಕು. ಹಳೆ ನೀರು ಹೋಗಿ ಹೊಸ ನೀರು ಬರುವಂತೆ ಒಳ್ಳೆಯದನ್ನು ನಮ್ಮೊಳಗೆ ತುಂಬಿಕೊಳ್ಳುತ್ತ ಬೇಡವಾದದ್ದನ್ನು ಹೊರಹಾಕುತ್ತಿರಬೇಕು. ಒಂದು ಮನೆಯ ದೃಷ್ಟಾಂತ ನೆನಪಾಗುವುದು. ವ್ಯಕ್ತಿಯೊಬ್ಬ ಬಹುದೊಡ್ಡ ಮನೆ ಕಟ್ಟಿಸಿದ್ದ. ಅದರಲ್ಲಿ ನೂರಾರು ಜನ ಇರಬಹುದಾಗಿತ್ತು. ಕ್ರಮೇಣ ಆ ಮನೆಯಲ್ಲಿ ಜಾಗ ಇಲ್ಲದಾಯಿತು. ಆತ್ಮೀಯ ಗೆಳೆಯನೇ ಬರುತ್ತೇನೆ ಎಂದರೆ ಮನೆಯಲ್ಲಿ ಸ್ಥಳಾವಕಾಶವಿಲ್ಲ; ವಿಶ್ರಾಂತಿ ಗೃಹದಲ್ಲಿ ವ್ಯವಸ್ಥೆ ಮಾಡುವೆ ಎನ್ನುತ್ತಿದ್ದ. ನಿಮ್ಮದೇ ದೊಡ್ಡ ಮನೆ ಇರುವಾಗ ವಿಶ್ರಾಂತಿಗೃಹದಲ್ಲೇಕೆ? ನಿಮ್ಮ ಮನೆಗೇ ಬರುವೆ ಎಂದು ಆತ ಬಂದೇಬಿಟ್ಟ. ಮನೆಯೊಳಗೆ ಕಾಲಿಟ್ಟರೆ ಅಲ್ಲಿ ಸ್ಥಳಾವಕಾಶವೇ ಇಲ್ಲ. ಏನೇನೋ ವಸ್ತುಗಳಿಂದ ತುಂಬಿಬಿಟ್ಟಿದೆ. ಮೂರು ನಾಲ್ಕು ಜನರಿದ್ದ ಆ ಕುಟುಂಬದವರು ಪ್ರತಿಯೊಬ್ಬರಿಗೂ ಒಂದೊಂದು ಟಿವಿ ಇಟ್ಟುಕೊಂಡಿದ್ದಾರೆ. ವಿಪರೀತ ಸೋಫಾಸೆಟ್ಗಳಿವೆ. ನಾಲ್ಕು ಫ್ರಿಜ್ಗಳಿವೆ. ಹೀಗೆ ಬೇಕಾದ, ಬೇಡವಾದ ವಸ್ತುಗಳು ಮನೆಯಲ್ಲಿ ತುಂಬಿವೆ. ಅಷ್ಟು ವಸ್ತುಗಳ ಅವಶ್ಯಕತೆ ನಾಲ್ಕು ಜನರಿಗೆ ಇಲ್ಲವೆಂದು ಒಂದೊಂದೇ ವಸ್ತುವನ್ನು ಮನೆಯಿಂದ ಹೊರಹಾಕಲಾಗುವುದು. ಆಗ ಎಷ್ಟೊಂದು ವಿಶಾಲ ಜಾಗ ಇದೆಯಲ್ಲ ಎನಿಸಿತು ಮನೆಯ ಯಜಮಾನನಿಗೆ. ಅದರಂತೆ ಮನುಷ್ಯ ಮನಸ್ಸಿನೊಳಗೆ ಬೇಡವಾದದ್ದನ್ನೇ ಹೆಚ್ಚಾಗಿ ತುಂಬಿಕೊಂಡಿದ್ದಾನೆ. ಮನೆಯಲ್ಲಿ ವಸ್ತುಗಳನ್ನು ಹೊರಹಾಕಿದ ಹಾಗೆ ಮನದಲ್ಲಿರುವ ವಿಷಯಗಳನ್ನು ಹೊರಹಾಕುತ್ತಿದ್ದರೆ ಮನಸ್ಸು ಖಾಲಿಯಾಗುವುದು. ಆ ತಾಣದಲ್ಲಿ ಬೆಳಕನ್ನು ತುಂಬಿಕೊಳ್ಳುವ ಪ್ರಯತ್ನ ಮಾಡಬೇಕು. ಬೆಳಕು ತುಂಬಿದರೆ ಮನೆ ಸುಂದರವಾಗಿ ಕಾಣುವುದು. ಆ ಕೆಲಸ ವ್ಯಕ್ತಿಗತವಾಗಿ ನಡೆಯಬೇಕಾಗಿದೆ.
ದೇವರು ಮಾನವನಿಗೆ ಕರುಣಿಸಿರುವ ಬಹುದೊಡ್ಡ ವರ ಮರವು. ಅದು ಮನಸ್ಸನ್ನು ಖಾಲಿ ಮಾಡಿಕೊಳ್ಳಲು ಕರುಣಿಸಿರುವ ವರ. ಆದರೆ ಮನುಷ್ಯ ಬೇಡದಿರುವ ವಿಷಯವನ್ನೇ ಕ್ಷಣಕ್ಷಣಕ್ಕೂ ನೆನಪಿಸಿಕೊಳ್ಳುತ್ತ ಕೊರಗುವನು. ಇದರಿಂದ ಇರುವ ಸಮಸ್ಯೆಗಳು ಇನ್ನಷ್ಟು ಬೃಹತ್ತಾಗಿ ಕಾಣುವವು. ಮರೆಯಬೇಕಾದ ವಿಷಯಗಳನ್ನು ಮರೆಯದೆ ಅದಕ್ಕೆ ಏನೇನೋ ಅರ್ಥ ಹುಡುಕುತ್ತ ಹೋಗುತ್ತೇವೆ. ಅದರಿಂದ ಆಪಾದನೆ, ಅನರ್ಥ ಸಹಜವಾಗಿ ಮನುಷ್ಯ ವಾಸ್ತವ ಮರೆತು ಭ್ರಮೆಯಲ್ಲೇ ಬದುಕಲಾರಂಭಿಸುವನು. ಬೇಡವಾದ ವಿಷಯಗಳನ್ನು ಮರೆಯುತ್ತ ಹೋದರೆ ಮನಸ್ಸು ಖಾಲಿಯಾದ ಹಾಗೆ. ಅದೇ ಬಯಲಾಗುವುದು. ಮಳೆ, ಗಾಳಿ, ಬೆಂಕಿ, ಬಾಂಬ್ ಏನೇ ಬಿದ್ದರೂ ಬಯಲಿಗೆ ಯಾವುದೇ ಬಾಧೆ ಆಗುವುದಿಲ್ಲ. ಹಾಗೆ ನಮ್ಮ ಅಂತರಂಗವನ್ನು ಬಯಲಾಗಿಸಿಕೊಳ್ಳಲು ಪ್ರಯತ್ನಿಸಬೇಕು. ಬಯಲಿನಂತೆ ಸಮಾಧಾನವಾಗಿರಬೇಕು. ಅದೇ ಸಾಧನೆ. ಲಿಂಗಪೂಜೆಯ ಉದ್ದೇಶವೇ ಬಯಲಾಗುವುದು. ಇದನ್ನು ಒಂದು ಮೊಬೈಲ್ ನಿದರ್ಶನದ ಮೂಲಕ ನೋಡಬಹುದು. ಮೊಬೈಲ್ನಲ್ಲಿ ಸಂದೇಶಗಳು, ಬೇರೆಯವರ ಮೊಬೈಲ್ ನಂಬರ್, ಪೊಟೊ, ವಾಟ್ಸಪ್, ಫೇಸ್ಬುಕ್, ಯುಟೂಬ್, ವಿಡಿಯೊ ಇತ್ಯಾದಿ ತುಂಬಿಕೊಳ್ಳಬಹುದು. ಅದಕ್ಕೂ ಒಂದು ಮಿತಿ ಇರಬೇಕು. ಮಿತಿಮೀರಿದರೆ ಮೊಬೈಲ್ ಜಾಮ್ ಆಗುವುದು. ಅದು ಸರಿಯಾಗಿ ಕೆಲಸ ಮಾಡಬೇಕೆಂದರೆ ಆಗಾಗ ಬೇಡವಾದ ವಿಷಯಗಳನ್ನು ತೆಗೆದು (ಡಿಲೀಟ್) ಹಾಕುತ್ತಿರಬೇಕು. ಆಗ ಹೊಸ ಹೊಸ ವಿಚಾರಗಳನ್ನು ತುಂಬಿಕೊಳ್ಳಲು ಸಾಧ್ಯ. ಅದೇ ರೀತಿ ನಮ್ಮ ಮನಸ್ಸನ್ನು ಸಹ ಖಾಲಿ ಮಾಡುತ್ತಿರಬೇಕು.
ಮರವು ದೇವರು ಕೊಟ್ಟ ವರ. ಮರವೇ ಇಲ್ಲದಿದ್ದರೆ ಹುಚ್ಚರಾಗುತ್ತಿದ್ದೆವೇನೋ? ಇತ್ತೀಚಿನ ತಂತ್ರಜ್ಞಾನ ಯಾವುದನ್ನೂ ಡಿಲೀಟ್ ಮಾಡಬೇಡ. ಕ್ಲೌಡ್ನಲ್ಲಿ ಸೇವ್ ಮಾಡು ಎಂದು ಹೇಳುವುದು. ಬೇಕಿರಲಿ ಬೇಡವಿರಲಿ ಅವು ಒಂದು ಕಡೆ ಕೂತುಬಿಡುತ್ತವೆ. ಅದೇ ರೀತಿ ನಮ್ಮ ಮನಸ್ಸಿನಲ್ಲಿ ಕೂತಿರುವ ವಿಷಯಗಳನ್ನು ಸಹ ಸಾಧನೆಯ ಮೂಲಕ ಹೊರಹಾಕುವ ಪ್ರಯತ್ನ ಮಾಡಬೇಕು. ಮನೋಮುಕ್ತನಾದಾಗ ಮಾತ್ರ ಬಯಲನ್ನು ತಲುಪಲು ಸಾಧ್ಯ. ಪಥಹೀನರನ್ನು ಯಾವುದು ಬಂಧಿಸುವುದೋ ಅದೇ ಸಾಧಕರಿಗೆ ಬಿಡುಗಡೆ ಆಗುತ್ತದೆ. ಬಂಧನದ ಕಾರಣ ಅರಿತು ಮುಕ್ತರಾಗಬೇಕು. ಮೌನ ಮತ್ತು ಕತ್ತಲೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಮೌನವಾಗಿ ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿ. ಯಾವಾಗಲೂ ಬೆಳಕನ್ನೇ ಬಯಸುತ್ತೇವೆ. ಬೆಳಕು ಬೇಕು ನಿಜ, ಅದು ಎಷ್ಟು ಬೇಕು? ಕಣ್ಣು ಕೋರೈಸುವಷ್ಟು ಬೆಳಕಿನಲ್ಲಿ ಬದುಕುತ್ತಿದ್ದೇವೆ. ಎಲ್ಲದನ್ನೂ ಅತೀ ಮಾಡಿಕೊಂಡು ಹಾಳಾಗುತ್ತಿದ್ದೇವೆನೋ ಅನ್ನಿಸುವುದು. ಎಲ್ಲದಕ್ಕೂ ಒಂದು ಮಿತಿ ಇಟ್ಟುಕೊಂಡು ಬದುಕುವುದೇ ಸಾರ್ಥಕ. ನಿಶ್ಯಬ್ದದ ಅನುಭವ ಬೇಕು. ಮನುಷ್ಯ ಏಕಾಂಗಿಯಾಗಿ ಹೊರಟಾಗ ಯಾರಾದರೂ ಸಿಗುವರು. ದಾರಿ ಇಲ್ಲದೆ ನಡೆಯಬೇಕು. ಆಗ ದಾರಿ ಸಿಗುತ್ತದೆ. ಕತ್ತಲು ಮತ್ತು ಬೆಳಕು ಎರಡೂ ಬೇಕು. ಅದನ್ನೇ ಪ್ರಕೃತಿ ಸೃಷ್ಟಿಮಾಡಿದೆ. ಪ್ರಪಂಚ ಸುತ್ತಿ ಬಂದವರಿಗೆ ತೋಟದ ಬಯಲಿನಲ್ಲಿ ಸಿಗುವ ಸಂತೋಷ ಬೇರೆಲ್ಲೂ ಸಿಗುವುದಿಲ್ಲ. ಸಹಜತೆಯಲ್ಲೇ ಸೌಂದರ್ಯ ಇದೆ. ಬೆಳಕು ಮತ್ತು ಕತ್ತಲೆ ಎರಡೂ ಬೇಕು. ಅವುಗಳ ಬಳಕೆಯನ್ನು ಹೇಗೆ ಮಾಡಿಕೊಳ್ಳಬೇಕು ಎನ್ನುವ ವಿವೇಕವಿರಬೇಕು. ಮನುಷ್ಯ ಕೇವಲ ಕತ್ತಲೆ ಇಲ್ಲವೇ ಬೆಳಕಿನಲ್ಲಿ ಬದುಕಲು ಆಗುವುದಿಲ್ಲ. ಅವು ಬದುಕಿನ ಅವಿಭಾಜ್ಯ ಅಂಗಗಳು. ಅವುಗಳನ್ನು ಯಾವಾಗ, ಹೇಗೆ, ಏತಕ್ಕೆ ಬಳಸಿಕೊಳ್ಳಬೇಕು ಎನ್ನುವ ಅರಿವು ಮುಖ್ಯ. ಒಂದು ರಾತ್ರಿ ಎಂಟು ಗಂಟೆ ಸುಮಾರಿಗೆ ತುಂಬ ಮಳೆ ಬರುತ್ತಿತ್ತು. ಆಗ ನಾವು ನಮ್ಮ ರೂಮಿನ ಲೈಟ್ ಆಫ್ ಮಾಡಿಕೊಂಡು ಹೊರಗೆ ನಿಂತು ಮಳೆಯನ್ನೇ ನೋಡುತ್ತಿದ್ದೆವು. ಹೊರಗೆ ಲೈಟ್ ಇತ್ತು. ಅದು ಬೇಕಾಗಿತ್ತು. ಇಷ್ಟು ದಿನ ಮಳೆಯನ್ನು ನೋಡಲು ಆಗಿರಲಿಲ್ಲವಲ್ಲ ಎಂದು ಖುಷಿಯಾಯ್ತು. ಮರುದಿನ ಬೆಳಗ್ಗೆ ವಾಕ್ ಹೋಗುವಾಗ ಎಲ್ಲೆಡೆ ನೀರು. ಬಟ್ಟೆಯ ಬೂಟು ಬೇರೆ. ಆದರೂ ಆ ನೀರು ಮತ್ತು ಕೆಸರಿನಲ್ಲೇ ಹೆಜ್ಜೆ ಹಾಕುತ್ತ ಮುಂದೆ ಮುಂದೆ ಹೋಗುತ್ತಿದ್ದೆವು. ಅದೊಂದು ರೀತಿಯ ವಿಶೇಷ ಅನುಭವ. ಪ್ರಕೃತಿಯ ನಡುವೆ, ಗಿಡಮರಗಳ ಮಧ್ಯೆ, ನೀರಿನಲ್ಲಿ ನಡೆಯುವುದೇ ಹೊಸ ಅನುಭವ. ಅಲ್ಲಲ್ಲಿ ಹಾರುವ ಹಕ್ಕಿಗಳ ಚಿಲಿಪಿಲಿ. ಹಾಗೆ ನಮಗೆ ಬೆಳಕು, ಕತ್ತಲೆ ಎರಡೂ ಬೇಕು. ಅವುಗಳನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎನ್ನುವ ಅರಿವಿರಬೇಕು.
Comments 10
Shubha
Jan 10, 2022ಮನ ಮುಟ್ಟುವ ಲೇಖನ
Renikaiah H
Jan 10, 2022ಆಧುನಿಕ ವಿಚಾರಗಳಿಗೆ ಹತ್ತಿರವಾಗುವ ಮಾತುಗಳು. ಶರಣರು ಈಗಲೂ ಎಷ್ಟೊಂದು ಪ್ರಸ್ತುತರಾಗಿದ್ದಾರೆ ಎಂದು ಹೆಮ್ಮೆ ಒಂದು ಕಡೆ, ನಾವೇ ಸಂಪ್ರದಾಯವಾದಿಗಳಾಗುತ್ತಿದ್ದೇವೆ ಎನ್ನುವ ನೋವು ಮತ್ತೊಂದು ಕಡೆ.
Basavaraj Mudenur
Jan 10, 2022ಎಲ್ಲವನ್ನೂ ಬೇಕೆಂದು ಮನೆಯಲ್ಲಿ ಸಾಮಾನುಗಳನ್ನು ರಾಶಿ ರಾಶಿ ತುಂಬಿಕೊಂಡು ಕಸದ ತೊಟ್ಟಿಯಾಗಿಸಿದವರನ್ನು ನೋಡಿದ್ದೇನೆ. ಮನಸ್ಸಲ್ಲಿ ಬೇಡಾದದ್ದೂ, ಬೇಕಾದದ್ದೂ, ಅಗತ್ತವೇ ಇಲ್ಲದ್ದು ಎಲ್ಲಾ ಸೇರಿ ಕಸದ ತೊಟ್ಟಿ ಆಗಿಬಿಟ್ಟಿರುತ್ತದೆ, ಅದನ್ನು ಡಿಲೀಟು ಮಾಡಿಕೊಳ್ಳದೇ ಹೋದರೆ ನಮಗೇ ಕಷ್ಟ, ಭಾರ.
Shivamurthy Ikkeri
Jan 13, 2022ನೀನೆನಗೆ ಒಳ್ಳಿದನಾದರೆ ಎನ್ನ ಹೊಗಳತೆಗಡ್ಡಬಾರಾ ಧರ್ಮಿ- ಎನ್ನುವ ಬಸವಣ್ಣನವರು ಎಲ್ಲಿ? ಹೊಗಳಿಕೆಗಾಗಿಯೇ ಬಾಯಿ ತೆರೆದುಕೊಂಡಿರುವ ನಾವುಗಳೆಲ್ಲಿ? ಅಂತಹ ಮಹಾನುಭಾವರ ಹೆಸರು ಹೇಳುವ ಯೋಗ್ಯತೆಯಾದರೂ ನಮಗಿದೆಯೇ ಎನ್ನುವ ಸಂಶಯ ನನಗೆ ಇಂತಹ ಉತ್ತಮ ಲೇಖನಗಳನ್ನು ಓದಿದಾಗ ಕಾಡತೊಡಗುತ್ತದೆ.
ಯತೀಶ್ ರಾಂಪುರ
Jan 13, 2022ಅಯ್ಯಾ ಗುರುವರನ ಹೊಂದಿ ಗುರುಪುತ್ರನಾದ ಬಳಿಕ- ವಚನವು ಬಹಳ ಮುಖ್ಯವಾದ ವಿಚಾರಗಳನ್ನು ಹೇಳುತ್ತದೆ. ಗುರು-ಶಿಷ್ಯರ ಗಲಾಟೆಗಳಿಗೆ ಇವತ್ತಿನ ಎಲ್ಲಾ ಮಠಗಳು ಸಾಕ್ಷಿಯಾಗಿವೆ. ಅವರಾರೂ ಇದನ್ನು ಓದಿಲ್ಲವೇ?- ಅವರೆಲ್ಲರಿಗೂ ಇದನ್ನು ತಲುಪಿಸಿಕೊಡುವ ವ್ಯವಸ್ಥೆ ಮಾಡಿದರೆ ನಿಜಕ್ಕೂ ಸಮಾಜ ಸೇವೆ ಮಾಡಿದಂತಾಗುತ್ತದೆ.
Dinesh P
Jan 13, 2022My brother recommended me this blog. It’s very interesting. This post truly made my day, thank you.
Channappa Rolli
Jan 18, 2022ಲೇಖನ ಬಹಳ ಮಾರ್ಮಿಕವಾಗಿದೆ ಗುರುಗಳೇ. ಶರಣು ಶರಣಾರ್ಥಿ.
Vishwanath J.P
Jan 23, 2022ಆದರ್ಶ ಮಾತುಗಳು ಹೊಟ್ಟೆ ತುಂಬಿಸುವುದಿಲ್ಲ. ನೀತಿಯ ನುಡಿಗಳು ಯಾರಿಗೂ ರುಚಿಸುವುದಿಲ್ಲ. ಸಾಧು-ಸಂತರ ಮಾತುಗಳು ಯಾರನ್ನೂ ಬದಲಾಯಿಸುವುದಿಲ್ಲ. ಧರ್ಮಗಳು ಧರ್ಮಾತ್ಮರನ್ನು ಸೃಷ್ಟಿಸುವುದಿಲ್ಲ. ಬೋಧನೆಗಳಲ್ಲಿ ಸತ್ವವಿಲ್ಲದಿರುವುದರಿಂದ ಯಾರ ಮಾತುಗಳು ಯಾರನ್ನೂ ಮೇಲೆತ್ತುವುದಿಲ್ಲ. ಇಂತಹ ಸಂದರ್ಭದಲ್ಲಿ ವಚನಗಳು ಕೂಡ ಮೂಕವಾದಂತೆ ನನಗೆ ತೋರುತ್ತವೆ. ನೀವು ಹೇಳಿದ ಆತ್ಮಾವಲೋಕನದಿಂದ ಮಾತ್ರವೇ ಏನಾದರೂ ಸಮಾಜ ಸರಿದಾರಿಗೆ ಬರಲು ಸಾಧ್ಯವಾಗಬಹುದು.
Mamatha Patil
Jan 26, 2022ಕೂಡಿ ಹಾಕಿಕೊಳ್ಳುವ ಮನಸ್ಥಿತಿ ಇವತ್ತು ಬಹುತೇಕ ಎಲ್ಲರಲ್ಲಿಯೂ ಮನೆಮಾಡಿದೆ. ಅದರಲ್ಲೂ ಹಣವಂತರಂತೂ ಭೂಮಿಯಿಂದ ಹಿಡಿದು ಒಡವೆ- ಆಭರಣಗಳು, ಸೈಟುಗಳು… ಹೀಗೆ ಎಲ್ಲವನ್ನೂ ಶೇಖರಣೆ ಮಾಡುವ ಖಯಾಲಿಗೆ ಬಿದ್ದಿದ್ದಾರೆ. ಇನ್ನು ಹಣವಂತರ ಹೊರತಾಗಿ ಜನಸಾಮಾನ್ಯರು ಕೂಡ ಇದೇ ದಾರಿ ಹಿಡಿದಿದ್ದಾರೆ. ಮನಸ್ಸಲ್ಲೂ ಅಷ್ಟೇ. ಎಲ್ಲಾ ರೀತಿಯ ಭಾವನೆಗಳನ್ನು ಚಿಕ್ಕವರಿದ್ದಾಗಿನಿಂದ ನಡೆದ ಕಹಿ ಹಾಗೂ ಒಳ್ಳೆಯ ಎಲ್ಲಾ ನೆನಪುಗಳನ್ನು ಇಟ್ಟುಕೊಂಡಿದ್ದಾರೆ. ಜೀವನವನ್ನು ನರಕವನ್ನಾಗಿಸುವ ಇವುಗಳನ್ನು ಆಗಾಗ ಡಿಲೀಟ್ ಮಾಡಿ ಹಗುರಾಗಬೇಕೆನ್ನುವ ಗುರುಗಳ ಮಾತುಗಳು ಮಾರ್ಗದರ್ಶಕವಾಗಿವೆ.
Tipperudrappa G
Feb 1, 2022ಬದುಕಿಗೆ ಮಾರ್ಗದರ್ಶನ ನೀಡುವ ಮಾತುಗಳು, ವಂದನೆಗಳು.