ಪ್ರಭುವಿನ ಗುರು ಅನಿಮಿಷಯೋಗಿ
(ಅಲ್ಲಮಪ್ರಭುದೇವರಂತಹ ಯುಗಪುರುಷನನ್ನು ಶಿಷ್ಯನನ್ನಾಗಿ ಪಡೆದು, ಲೋಕಕ್ಕೆ ಪ್ರಕಟಿಸಿದ ಗುರು ಅನಿಮಿಷಯ್ಯನವರ ಜೀವನದ ವಿವರಗಳು ಇತಿಹಾಸದಲ್ಲಿ ಎಲ್ಲಿಯೂ ದಾಖಲಾಗಿಲ್ಲ. ಅವರ ಊರು ಯಾವುದು? ಅವರ ಕತೆ ಎಂಥದು? ಎಂಬುದಕ್ಕೆ ನಿಖಿರವಾದ ದಾಖಲೆಗಳು ಸಿಗದೆ ಇದ್ದರೂ, ಹೀಗೊಂದು ಪಾಳುಬಿದ್ದ ಗವಿ, ಅಲ್ಲೊಬ್ಬ ಇಹಲೋಕದ ಪರಿಜ್ಞಾನವೇ ಇಲ್ಲದಂತೆ ಲಿಂಗಧ್ಯಾನದಲ್ಲಿ ಲೀನವಾಗಿ ಹೋದ ಸಿದ್ಧಪುರುಷನಂತೆ ನಮ್ಮ ಮನಸ್ಸಿನಲ್ಲಿ ಅನಿಮಿಷರು ಉಳಿದುಹೋಗಿದ್ದಾರೆ. ಶರಣರ ವಚನಗಳಲ್ಲಿ ಅನಿಮಿಷಯ್ಯನವರ ಹೆಸರು ಆಗಾಗ ಪ್ರಸ್ತಾಪವಾಗಿದೆ. “ಗುರುವಿನ ಪ್ರಾಣ ಲಿಂಗದಲ್ಲಿ ಲೀಯವಾದ ಬಳಿಕ, ಆ ಲಿಂಗವೆನ್ನ ಕರಸ್ಥಲಕ್ಕೆ ಬಂದಿತ್ತು ನೋಡಾ. ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಕರಸ್ಥಲದಲ್ಲಿ, ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಜ್ಞಾನದೊಳಗೆ…” ಎಂದು ಅಲ್ಲಮಪ್ರಭುದೇವರು ತಮಗೆ ಲಿಂಗವಿತ್ತ ಗುರು ಅನಿಮಿಷಯ್ಯನವರನ್ನು ಹಲವಾರು ವಚನಗಳಲ್ಲಿ ನೆನೆದಿದ್ದಾರೆ. ಒಗಟಾಗಿ ಉಳಿದ ಆ ಗುರುವಿನ ವಿವರವನ್ನು ‘ಸಿಂಗಿರಾಜ ಪುರಾಣ’ದಲ್ಲಿ ಸಿಕ್ಕ ಚಿಕ್ಕ ಎಳೆಯೊಂದರ ಜಾಡು ಹಿಡಿದು ಕತೆಯಾಗಿ ಬಿಡಿಸಿಕೊಟ್ಟಿದ್ದಾರೆ ನಾಟಕಕಾರ, ಮನೋಜ್ಞ ಕತೆಗಾರ ಮಹಾದೇವ ಹಡಪದ ಅವರು- ಸಂ)
ಆ ಪಟ್ಟದಕಲ್ಲಿನ ಚಂದ್ರಮೌಳೇಶ್ವರನಲ್ಲಿ ಶಿರಬಾಗಿ, ವಿರುಪಾಕ್ಷನೆದುರು ಮಂಡಿಯೂರಿ ಆ ಬೃಹತ್ ನಂದಿಯ ಹೆಗಲ ಮೇಲಿನ ಇನಿಯನ್ನು ಶಿವನೆಂದು ಭಾವಿಸಿ ಕೈಮುಗಿದು ಕೆಲಸಕ್ಕೆ ತೊಡಗುತ್ತಿದ್ದವರು ಯಾರೆಂದರೆ ತ್ರೈಲೋಕ್ಯ ಚೂಡಾಮಣಿ ಮತ್ತು ಮಹಾಲೇಖೆ. ಇವರಿಬ್ಬರ ಉದರದಲ್ಲಿ ಹುಟ್ಟುವ ಕೂಸುಗಳಿಗೆ ಆಯುಷ್ಯ ಕಡಿಮೆಯೋ ಅಥವಾ ಆ ಮಹಾಲೇಖೆಯ ಮೈಕಾವು ಹೆಚ್ಚಾದುದರಿಂದಲೋ ಏನೋ ಹೊಟ್ಟೆಯಲ್ಲಿ ಮೂಡುವ ಕೂಸುಗಳು ಆಕಾರಗೊಳ್ಳುವ ಮೊದಲೇ ಮೂರು-ನಾಲ್ಕು ತಿಂಗಳಲ್ಲಿ ಕರಗಿ ಮಾಂಸದ ಚೂರುಗಳಾಗಿ ಉದುರಿಬೀಳುತ್ತಿದ್ದವು. ಮಾಡದ ಮದ್ದಿಲ್ಲ, ಕುಡಿಯದ ರಸವಿಲ್ಲ ಅನ್ನೋ ಹಾಗೆ ಗಂಡಹೆಂಡತಿ ಇಬ್ಬರೂ ಮಕ್ಕಳನ್ನು ಹಂಬಲಿಸಿ ಬೇಡದ ದೇವರೂ ಉಳಿದಿರಲಿಲ್ಲ. ತ್ರೈಲೋಕ್ಯನಿಗೆ ದಿನ ಬೆಳಗಾದರೆ ಕಲಿಯಲು ಬಂದಿರುವ ಕಲಿಗಳಿಗೆ ಸಮರ ಕೌಶಲ ಕಲಿಸುವುದರಲ್ಲಿ ಚೂರೇಚೂರು ತೃಪ್ತಿ. ಮಹಾಲೇಖೆಯ ಮನಸಿನ ತುಂಬ ಬರೀ ಬೇಸರ, ಹೊಟ್ಟೆ ಜರಿದಾಗೊಮ್ಮೆ ಗುಡ್ಡದ ನರಸವ್ವನನ್ನು ಕರೆಸಿ ಮದ್ದು ಕುಡಿದು, ನಾಲ್ಕಾರು ದಿನ ಆರೈಕೆ ಮಾಡಿಸಿಕೊಂಡು ಮತ್ತದೇ ಯಾವತ್ತಿನ ಬದುಕಿಗೆ ಬರುವುದು ಏಳೆಂಟು ವರುಷಗಳ ರೂಢಿಯಾಗಿತ್ತು. ಮನಸಿನ ತುಂಬ ಮಕ್ಕಳ ಹಂಬಲವೇ ತುಂಬಿದ್ದರಿಂದಾಗಿ ದಿನಗಳು ದೊಡ್ಡವಾಗಿ ಚಣಚಣವನ್ನೂ ಉಸಿರುಗಳೆದೆ ಬದುಕುತ್ತಿದ್ದಳು. ಗಂಡನ ಬಿಡುವಿಲ್ಲದ ಕೆಲಸದ ನಡುವೆ ನೊಂದು ಆತುಕೊಳ್ಳಲು ಆಕೆ ನರಸವ್ವನ ಮನೆವರೆಗೂ ಹೋಗಿ ‘ಈ ಬಂಜಿ ಹೊಟ್ಟೆಗೆ ಮದ್ದೇನಾದರೂ ಇದ್ದರೆ ಕೊಡು ತಾಯಿ’ ಎಂದು ಬೇಡಿಕೊಳ್ಳುತ್ತಿದ್ದಳು. ನರಸವ್ವನ ಕಳ್ಳು ಚುರುಗುಟ್ಟಿ ‘ಯವ್ವಾ ಕೊಡುವಾತ ಕೊಟ್ಟರ ಯಾರ ಮನಿಮದ್ದು ಯಾಕ ಬೇಕ ತಾಯಿ ಅಂವ ಕಾದು ಕೊಡತಾನಬ್ಬೆ ತಡಕೋ’ ಎಂಬ ಆಕೆಯ ಸಮಾಧಾನದ ಮಾತುಗಳು ಸಾಕುಸಾಕಾಗಿದ್ದವು. ಒಮ್ಮೊಮ್ಮೆ ಬೇಸರ ಕಳೆಯಲು ಮಹಾಲೇಖೆ ರಾಜವಾಡೆಯ ಲಾಯದ ಬಯಲಿಗೆ ಹೋಗುತ್ತಿದ್ದಳು. ಕುದುರೆಗಳಿಗೆ ಹುಲ್ಲು ತಿನ್ನಿಸಿ ನೀರು ಕುಡಿಸಿ, ಅದರುವ ಕುದುರಗಳ ಮೈ ತಿಕ್ಕುತ್ತ ನಿಂತುಬಿಡುತ್ತಿದ್ದಳು. ಹೊರಗೆ ಗರಡಿ ಬಯಲಿನಲ್ಲಿ ಗಂಡ ತ್ರೈಲೋಕ್ಯ ದಂಡಿನ ಮ್ಯಾಳದ ಹುಡುಗರಿಗೆ ಶ್ರದ್ಧೆಯಿಂದ ಕಲಿಸುತ್ತಲಿರುತ್ತಿದ್ದ. ಆ ಬೀಸುಗತ್ತಿಯಾಟ, ಮೊಂಡುಗತ್ತಿ, ಕೈಕೈ ಮಿಲಾಯಿಸುವ ಪಟ್ಟುಗಳು, ಉರುಳುದಿಂಡಿನ ನೆಗೆದಾಟ, ಪೇಚುಹಾಕಿ ಕೆಡೆಯುವ ಕಾಲ್ತೊಡಕು, ಬಿಚ್ಚುಗತ್ತಿಯನ್ನು ಎಗ್ಗಿಲ್ಲದೆ ಬೀಸುತ್ತಾ ಒಬ್ಬ ಇನ್ನೊಬ್ಬನನ್ನು ಕೊಂದೆ ಬಿಟ್ಟ ಎನ್ನುವಾಗ ಆ ಇನ್ನೊಬ್ಬ ದಿಢೀರನೇ ನೆಗೆದೆದ್ದು ಮತ್ತೆ ಮೊದಲಿನಂತೆ ಪಟ್ಟು, ಪೇಚು ಪೈಪೋಟಿಗಳು ಆಕೆಗೆ ಚಣಕಾಲ ಮುದಕೊಡುತ್ತಿದ್ದವು. ಆ ದಂಡಿನ ಮಕ್ಕಳನ್ನು ಕಂಡಾಗಲೆಲ್ಲ ಆಕೆಯ ಹೊಟ್ಟೆ ಚುರುಗುಡುತ್ತಿತ್ತು. ಎದೆ ಭಾರವಾದಂತಾಗಿ ದುಃಖವತ್ತರಿಸಿ ಕಣ್ಣಂಚು ಒದ್ದೆಯಾಗುತ್ತಿದ್ದವು. ನೀರುತುಂಬಿಕೊಂಡ ಕಣ್ಣುಗಳಲ್ಲಿ ಒಂದು ಕಾಲಿಲ್ಲದ ಹೆಳವು ಕೂಸೊಂದು ‘ಅಬ್ಬೆ..’ ಅಂತ ಕೈಚಾಚಿಕೊಂಡು ಓಡಿ ಬರುವ ಭ್ರಮೆ ಕಾಡುತ್ತಿತ್ತು.
ಮಹಾಲೇಖೆಯ ಮನೆಯಲ್ಲಿ ಯಾವತ್ತಿಗೂ ಏಳೆಂಟು ಜನ ಹುಡುಗರು ದಂಡಿನ ಪಟ್ಟುಕಲಿಯಲು ಬಂದು ಉಳಿಯುತ್ತಿದ್ದರಲ್ಲ ಹಂಗಾಗಿ ಆ ಮಕ್ಕಳನ್ನು ತನ್ನ ಮಕ್ಕಳೆಂದೇ ಭಾವಿಸಿ ಊಟ ಬಡಿಸುತ್ತಿದ್ದಳು. ಗಂಡ ತ್ರೈಲೋಕ್ಯಚೂಡಾಮಣಿ ಗರಡಿಯಲ್ಲಿ ಕಲಿತ ಹುಡುಗರೆಂದರೆ ದಂಡುದಾಳಿಯಲ್ಲಿ ಮುಂದಾಳುಗಳು. ಆತ ಕಟ್ಟುನಿಟ್ಟಿನ ಮನುಷ್ಯ. ಸೂರ್ಯನ ಬೆಳಕು ಚುಮುಚುಮು ಮೂಡುವುದರೊಳಗೆ ಗರಡಿಮನೆಯಲ್ಲಿ ಸಾಮಗಳನ್ನು, ಪಟ್ಟುಗಳನ್ನು ಎಡಬಿಡದೆ ಅಭ್ಯಾಸ ಮಾಡಿಸುತ್ತಿದ್ದ. ಸೂರ್ಯ ಮೂಡಿದಾಗ ಹಬೆಯಾಡುವ ಬಿಸಿನೀರಲ್ಲಿ ಮಿಂದು ನಂದಿಯ ಹೆಗಲ ಮೇಲಿನ ಇನಿಯನ್ನು ಮುಟ್ಟಿ ಸನಮಾಡಿ ಅಂಬಲಿ ಕುಡಿಯಲು ಕೊಡುತ್ತಿದ್ದ. ಅದಾದ ಮೇಲೆ ಎಳೆ ಹೋರಿಗಳನ್ನು ಬೇಸಾಯಕ್ಕಾಗಿ ನೊಗ ಹೂಡಿ ಪಳಗಿಸುವುದು, ಎಳೆಕುದುರೆಗಳನ್ನು ಪಳಗಿಸುವುದಕ್ಕಾಗಿ ಬಿಡುತ್ತಿದ್ದ. ಬಿಸಿಲೇರುತ್ತಿದ್ದಂತೆ ದನಕರು, ಕುದುರೆ ಲಾಯಗಳನ್ನು ಸ್ವಚ್ಛಗೊಳಿಸಿ, ಅವುಗಳಿಗೆ ನೀರು, ಮೇವು ಮಾಡಿಟ್ಟು ಮದ್ಯಾಹ್ನದ ಸೂರ್ಯ ನೆತ್ತಿಯ ಮೇಲಿದ್ದಾಗ ಹೊಳೆಯ ಹರುವಿನಲ್ಲಿ ಎಲ್ಲ ಹುಡುಗರನ್ನು ಕರೆದುಕೊಂಡು ಹೋಗಿ ಈಸ್ಯಾಡಿ, ಅಲ್ಲೊಂದಷ್ಟು ಕಸರತ್ತುಗಳನ್ನು ಮಾಡಿಸಿದ ಮೇಲೆ ಮದ್ಯಾಹ್ನದ ಊಟ, ವಿಶ್ರಾಂತಿ. ಸಂಜೆ ಪಡುವಣದತ್ತ ಸೂರ್ಯ ಬಾಗಿದಾಗ ಕುಸ್ತಿ, ಕತ್ತಿ, ಬಿಚ್ಚುಗತ್ತಿ, ಬೀಸುಗತ್ತಿ, ಬಡಿಗೆಯ ಬಡಿದಾಟಗಳನ್ನು ಸತತ ಕಲಿಸುತ್ತಿದ್ದ. ಒಮ್ಮೊಮ್ಮೆ ಬೆಳದಿಂಗಳ ರಾತ್ರಿಯಲ್ಲೂ ಕಸರತ್ತು ಮಾಡುತ್ತಿದ್ದರು. ವರುಷದಲ್ಲಿ ಒಂದಿಬ್ಬರು ಕಲಿತು ದಂಡು ಸೇರಿದರೆಂದರೆ ಮತ್ತೊಂದಿಬ್ಬರು ಹೊಸಬರು ಬಂದು ದಂಡಿನ ಮ್ಯಾಳದಲ್ಲಿ ಸೇರುತ್ತಿದ್ದರು. ಹೊಸದಾಗಿ ಬಂದವರಿಗೆ ವಿರುಪಾಕ್ಷನ ಸನ್ನಿಧಿಯಲ್ಲಿ ಧರ್ಮದ ನಡೆನುಡಿ, ಆಚಾರ ವಿಚಾರದ ಪಾಠಗಳು ತದನಂತರ ತ್ರೈಲೋಕ್ಯನ ಕಸರತ್ತುಗಳ ಕಲಿಕೆ ಹೀಗೆ ಮದುವೆಯಾದಂದಿನಿಂದ ಮನೆತುಂಬ ಮಕ್ಕಳೇ ಇರುವಾಗ ಯಾವ ತಾಯಿಗೆ ತನಗೂ ಒಂದು ಮಗು ಬೇಕೆನಿಸುವುದಿಲ್ಲ. ಮಾಡಿದ ಪ್ರಯತ್ನಗಳೆಲ್ಲವೂ ಹೀಗೆ ಕರಗಿ ರಕ್ತವಾಗಿ ಸೋರುವಾಗ ತಾನು ಬಂಜೆ ಎನ್ನುವ ಕಳಂಕ ಮಹಾಲೇಖೆಯ ಮನಸ್ಸನ್ನು ಕೊರೆಯುತ್ತಿತ್ತು.
ಹಿರಿಯಾ.. ನಾ ಬಂಜಿ ಅದಿನೇನು..?
ಹುಚ್ಚಿ ಯಾರು ಹೇಳಿದರು ಹಂಗಂತ. ನಾಕನಾಕ ಅಮಾಸಿತನಕ ನಿಂತು ಹೋಗ್ಯಾವು.
ಆದರ ಕೂಸೊಂದು ಆಕಾರಗೊಂಡು ಹುಟ್ಟತಿಲ್ಲಲ್ಲಾ.. ನೀ ಮತ್ತೊಂದು ಮದುವಿನಾದರೂ ಆಗು.
ಯಾಕ ಇಲ್ಲದ್ದೆಲ್ಲ ಮಾತಾಡತೀ.. ಸುಮ್ಮನ ಮಲಕೋ.
ನನಗಂತೂ ಹಿಂದಿಲ್ಲ ಮುಂದಿಲ್ಲ. ಅನಾಥಳಾಗಿ, ಅಬ್ಬೇಪಾರಿಯಾಗಿ ಯುದ್ಧಭೂಮಿಯೊಳಗ ಓಡಾಡತಿದ್ದ ನನ್ನ ಮಾವ ಕರಕೊಂಡು ಬಂದು ನಿನಗ ಗಂಟು ಹಾಕಿದರು.
ಯಾಕ ಹಿಂಗೆಲ್ಲ ಯೋಚಿಸತೀ.. ನಾನಿದ್ದೇನಲ್ಲ. ನಿನ್ನ ಬಿಟ್ಟು ಮಿಸುಕಾಡದಷ್ಟು ನನ್ನ ಕಟ್ಟಿ ಹಾಕಿ.
ಅದು ಹಂಗಲ್ಲ ಹಿರಿಯಾ ಊರಾಗ ಏನೇ ಶುಭಕಾರ್ಯ ನಡದರೂ, ಏನೊಂದುಕೂ ನನ್ನ ಕರೆಯುತಿಲ್ಲ.
ಏನೊಂದಕೂ ಅಂದರ
ಶುಭಕಾರ್ಯಕ್ಕ, ಲಗ್ಗಣಾ, ಉಡಿತುಂಬೋದು, ಕುಬಸದ ಕಾರಣಕ್ಕ, ಮುತ್ತೈದೆರ ಕಾರ್ಯಕ್ಕ.. ನಾ ಖರೇನ ಬಂಜಿ.
ಹಂಗನಬ್ಯಾಡ ಲೇಖಿ, ನಿನ್ನ ಹೊಟ್ಯಾಗ ಕೂಸು ಹುಟ್ಟತೈತಿ, ಅದು ಅಂತಿಂಥ ಕೂಸಲ್ಲ, ಸಾಕ್ಷಾತ್ ಶಿವನ ರೂಪದ ಕೂಸ ಹುಟ್ಟತೈತಿ. ಮಕ್ಕಳ ಸಲುವಾಗಿ ಈಗೇನ ಅವಸರ ನಿನಗ… ನಮಗ ಮನಿತುಂಬ ಮಕ್ಕಳದಾವು.
ಬಂಜಿತನದ ನೋವು ನಿನಗ ಹೆಂಗ ಹೇಳಲಿ. ಹತ್ತೆನ್ನರಡ ವರ್ಷದ ಮ್ಯಾಗ ಆತು. ಸುತ್ತಲ ದೇವರಿಗೆ ಬೇಡಕೊಂಡೆ, ಬನ್ನಿಗಿಡ ಸುತ್ತ ಹಾಕಿದೆ, ಶಿವನಪತ್ರಿ ತಿಂದೆ, ಆ ಗಿಡದ ತಪ್ಪಲ, ಈ ಕಂಟಿತಪ್ಪಲ ರಸ ಎಲ್ಲಾ ಕುಡದರೂ ಆ ನಮ್ಮಪ್ಪ ಈ ಹೊಟ್ಯಾಗೊಂದು ಕೂಸ ಕೊಡವಲ್ಲ..
ಏ ಹುಚ್ಚಿ ಅಳಬ್ಯಾಡ. ಶ್ರೀಶೈಲದಿಂದ ಒಬ್ಬ ಸಾಧೂ ಬಂದಾರಂತ. ಚಂದ್ರಮೌಳಿ ಗುಡಿಯೊಳಗ ಮಲಕೊಂಡು ನಾಲ್ಕು ದಿನ ಆತಂತ. ಮಲಕೊಂಡಲ್ಲೇ ಅವನ ಪಾದಕ್ಕ ಬಿದ್ದ ಕಲ್ಲೂರಪ್ಪನ ಬಾಗಿದ್ದ ಸೊಂಟ ಸರಿಯಾಗೇತಂತ, ಬಂಡೆವ್ವನ ಕಳಕೊಂಡ ಎಮ್ಮಿ ಸಿಕ್ಕೈತಂತ. ಅಂವ ಪವಾಡಪುರುಷ ಇದ್ದಾನಂತ ಊರಾನ ಮಂದಿ ಹೇಳತಿದ್ದರು.
ಹಂಗಾರ ನಾವೂ..
ಹೂಂ ಹೋಗೂಣಂತ… ಮುಂಜಾನೆ. ಈಗ ಮಲಕ್ಕೋ..
ಎಡಬಲಕಾಗಿ ಮಲಗಿದ್ದ ಇಬ್ಬರ ಕಣ್ಣಲ್ಲೂ ನಾಳೆಬೆಳಗಾಗುವ ಬಗ್ಗೆ ಕನವರಿಕೆ ಇದ್ದುದಕೋ ಏನೋ ಎಷ್ಟೋ ಹೊತ್ತಾದರೂ ನಿದ್ದೆ ಬಾರಲಿಲ್ಲ. ಆಕಳಿಕೆಗಳು ಬೇಸರಿಕೆಯಾದಾಗ ಒಬ್ಬರೊಬ್ಬರ ಉಸಿರು ಬಿಸಿಯಾಗುತ್ತ ಆ ಬೆಳದಿಂಗಳ ರಾತ್ರಿಯಲ್ಲಿ ಮೋಹದ ಮದ ಅವರ ದೇಹದ ಬಿಸುಪನ್ನು ಬಿಗಿಯಾಗಿಸಿ ಶಿವಶಿವೆಯರಂತೆ ಪರವಶರಾದರು.
ಮರುದಿನವೆಂಬುದು ಬೆಳಕಿನ ಜೊತೆಗೆ ಬಾರದೆ ಮನಸಿನಲ್ಲಿ ಬಾಕಿ ಉಳಿಸಿದ್ದ ಪ್ರೇಮದಿಂದ ಬಂದಾಗ ಇಬ್ಬರ ಮುಖದಲ್ಲಿ ನಗುಮೂಡಿತ್ತು. ಕಲಿಯಲು ಬಂದಿರುವ ಹುಡುಗರು ಅದಾಗಲೇ ಗರಡಿಮನೆಯ ಕಸರತ್ತುಗಳನ್ನು ಮಾಡಿಮುಗಿಸಿ, ನೀರುಬಿಸಿ ಮಾಡಿಕೊಂಡು ಮೀಯುತ್ತಿರಲು, ಮಹಾಲೇಖೆ ಕೆಂಡವೊಂದು ರಾತ್ರಿಯಲ್ಲಾ ಉರಿದು ಬೆಳಿಗ್ಗೆ ಇದ್ದಿಲಾದ ತುಂಡೊಂದನ್ನು ತೆಗೆದುಕೊಂಡು ಹಲ್ಲುಜ್ಜಿ ಬಾಯ್ತೊಳೆದು ಅಂಬಲಿಗೆ ಹೆಸರಿಟ್ಟಳು. ತ್ರೈಲೋಕ್ಯ ಬಿಸಿನೀರಲ್ಲಿ ಮಿಂದು ಚಂದ್ರಮೌಳೇಶ್ವರನಲ್ಲಿ ಶಿರಬಾಗಿ, ವಿರುಪಾಕ್ಷನೆದುರು ಮಂಡಿಯೂರಿ ಆ ಬೃಹತ್ ನಂದಿಯ ಹೆಗಲ ಮೇಲಿನ ಇನಿಯನ್ನು ಶಿವನೆಂದು ಭಾವಿಸಿ ಕೈಮುಗಿದು ಅಂಬಲಿಯ ತಾಟನ್ನು ತುಟಿಗಿಟ್ಟು ಒಂದೇ ಗುಟುಕಿಗೆ ಕುಡಿದು ಪೂರೈಸಿದ. ಆ ಅಂಬಲಿ ಮೀಸೆಗೆ ಅಂಟಿಕೊಂಡದ್ದನ್ನು ಮಹಾಲೇಖೆ ತನ್ನ ಸೆರಗಿನ ಅಂಚಿನಿಂದ ಒರೆಸಿದಾಗ ತ್ರೈಲೋಕ್ಯನಿಗೆ ಲೋಕವೆಂಬುದು ಉಳಿದ ದಿನಗಳಂತೆ ಈ ದಿನವೂ ಇಲ್ಲ ಎಂಬುದು ಅರಿವಿಗೆ ಬಂತು. ಹುಡುಗರು ಹುಣಸೆ ತೊಕ್ಕನ್ನು ಈಟೀಟೆ ನೆಕ್ಕುತ್ತ ಅಂಬಲಿ ಗುಟುಕರಿಸುತ್ತಿದ್ದವರು ಇವರಿಬ್ಬರ ನಡವಳಿಕೆಯಲ್ಲಿ ಏನೋ ಬದಲಾದದ್ದು ಕಂಡು ಬೆರಗಾಗಿ ಕುದುರೆಗಳನ್ನು ಪಳಗಿಸುವ ಕಡೆಗೆ ಹೊಂಟೆದ್ದು ನಡೆದರು. ವಿರಸವೆಂಬುದು ಒಂದಿನಿತು ಬಾರದಿರಲಿ, ಉಪ್ಪಿನ ರುತಿ ನಮಗಿರಲಿ, ಕೆಡುಕೆಲ್ಲ ನುಂಗಿ ಒಳ್ಳೆಯದನ್ನು ಮಾಡಲಿ ಶಿವ ಎಂದು ಗಲ್ಲಗಲ್ಲ ಬಡಿದುಕೊಂಡ ಮಹಾಲೇಖೆಯು ಹಿಡಿಉಪ್ಪು ಅಂಗೈಯಲ್ಲಿ ಹಿಡಿದುಕೊಂಡು ಚಂದ್ರಮೌಳೇಶ್ವರ ಗುಡಿಯತ್ತ ಗಂಡನನ್ನು ಕರೆದುಕೊಂಡು ಹೊರಟಳು.
ಗುಡಿಯ ಹೊಸ್ತಿಲ ಮೇಲೆ ಐದುಗುಪ್ಪೆ ಉಪ್ಪುಹಾಕಿ ಉದ್ದಂಡ ಬಿದ್ದು ಸನಮಾಡಿ, ಆ ಶ್ರೀಶೈಲದಿಂದ ಬಂದು ಮಲಗಿದ್ದ ಮಹಾಶಯನ ಪಾದ ಮುಟ್ಟಿದಾಗ ಆ ಸಾಧುವಿಂಗೂ ಎಚ್ಚರಾಗಿ ಆಕಳಿಕೆ ತೆಗೆದು ಮಲ್ಲಿನಾಥ ಎನ್ನುತ್ತ ಎದ್ದುಕುಳಿತು ಕಣ್ಣುಜ್ಜಿಕೊಂಡ.
ಮಲ್ಲಯ್ಯ ನಿಮಗ ಒಳ್ಳೆದ ಮಾಡತಾನ ಹಿಡೀರಿ… ಇಬ್ಬರೂ ಹಂಚಗೊಂಡು ತಿನ್ನಿರಿ.
ಬೊಗಸೆ ತುಂಬ ಒಣಗಿದ್ದ ಕವಳಿಹಣ್ಣು ಕೊಟ್ಟು, ಉದುರಿದ್ದ ಪಾವಡಾ ತಲೆತುಂಬ ಸುತ್ತಿಕೊಂಡು ತನ್ನ ದೈನಂದಿನ ವ್ಯವಹಾರದಲ್ಲಿ ತೊಡಗಿದಂತವನಾಗಲೂ ಇಬ್ಬರೂ ಅವನ ಪಾದಕ್ಕೆರಗಿ ‘ನಮಗ ಮಕ್ಕಳ ಭಾಗ್ಯ ಕೊಡೋ ಯಪ್ಪಾ’ ಅಂದರು.
ಕೊಡಾಕ ನಾ ಯಾರು, ಆ ಶಿವ ಇಟ್ಟಂಗ ಇದೀನಿ. ನೀವು ಹಕ್ಕಶೀರ ಅವನನ್ನ ಬೇಡರಿ. ಎಲಿಹಸರಾಗಿ ಚಿಗುರಿ ಹೂವಾಗತೈತಿ, ಹೂವು ಉದುರಿ ತುಂಬೊಳಗ ಕಾಯಿ ಮೂಡತೈತಿ, ಕಾಯಿ ಮಾಗಿ ಹಣ್ಣಾಗತೈತಿ, ಹಣ್ಣು ಹಣ್ಣಣ್ಣಾಗಿ ಉದುರಿ ನೆಲಕ್ಕ ಬೀಳತೈತಿ. ಆ ಹಣ್ಣಿನ ಸ್ವಾದ ಕಳತು ಕಟ್ಟಕಡೆಗೆ ಉಳಿಯೋದು ಬೀಜವೊಂದ. ಆ ಬೀಜ ಕೈಯಾಗ ಹಿಡಕೊಂಡ ನನ್ನ ಕೇಳಿದರ ನಾ ಏನು ಕೊಟ್ಟೀನಿ. ಕೊಡಾಂವ ಮ್ಯಾಲಿದ್ದಾನ ಮೂಲೋಕದ ದೊರಿ. ಅವನನ್ನ ಕೇಳರೀ…
ಮಾತಾಡುತ್ತಲೇ ತಾನು ತಂದಿದ್ದ ಜೋಳಿಗೆಯಲ್ಲಿ ಎಲ್ಲಾನೂ ತುಂಬಿಕೊಂಡು ಹೊರಟು ನಿಂತ.
ತಂಗೀ.. ನಿನಗ ಕೊಟ್ಟಕೊಟ್ಟ ಉದುರಿದ ಹೂಗಳು, ಬಾಣಂತಿಕೊಳ್ಳದಾಗ ಸೇರ್ಯಾವ. ಯಾವದಕ್ಕೂ ಒಂದು ದಿನ ಹೋಗಿ ಆ ಕೊಳ್ಳದಾಗ ಮಿಂದು ಅಲ್ಲಿನ ಹಳದಿ ನೆಳ್ಳಾಗ ಕುಂತು ಉಂಡೆದ್ದು ಬಾರವಾ… ಆದರೂ ಹೇಳತೇನಿ.. ಪಡಕೊಂಡ ಕಳಕೊಳ್ಳೋ ಆಟದ ಸಲುವಾಗಿ ಯಾಕಿಷ್ಟ ಪರದಾಡತೀ… ನಾ ಮುಂದ ಹೋಗೋದೈತಿ. ಹೋಗತೇನಿ…
ಉಂಡಿಲ್ಲ ತಿಂದಿಲ್ಲ ಮಲಗಿದಲ್ಲೇ ನಾಕು ದಿನ ಮಲಗಿದ್ದವನು ಹಿಂಗ ಎಚ್ಚರಾದ ಕೂಡಲೇ ಕವಳಿಹಣ್ಣು ಕೊಟ್ಟು, ನಾಕ ತತ್ವದ ಮಾತಾಡಿ, ಪಾವಡಾ ಸುತಗೊಂಡು ಮೈಗೆಲ್ಲ ಬೂದಿಬಳಕೊಂಡು ಪಡುವಣದ ಕಡೆಗೆ ಹೊಂಟಹೋದ ನಿಗೂಢತೆಯನ್ನು ಹೆಂಗ ತಿಳಕೊಳ್ಳೋದು ಅನ್ನೋದು ತಿಳಿಲಾರದ ಮಂಕಾದರಿಬ್ಬರು. ಆ ಪರಶಿವನೇ ಸಾಧುವಿನ ರೂಪದಾಗ ಬಂದು ಕೊಟ್ಟ ಹಣ್ಣಿದು, ಪಂಚಾಮೃತ ಅಂತ ಇಬ್ಬರು ತಿಂದು ಮನೆಗೆ ಬಂದು ತಮ್ಮ ಕೆಲಸಗಳಲ್ಲಿ ಮುಳುಗಿದರು. ದಿನಗಳು ಕಾಲ ಹಾಕುತ್ತ ತಿಂಗಳು ಎರಡು ಕಳೆದಾಗ ಮಹಾಲೇಖೆಯ ಮುಖದ ಬಣ್ಣ ಬದಲಾಯಿತು. ಈಗ ಕಣ್ಣುಮಂಜು ಮಂಜಾದಾಗ ಮೂಡುತ್ತಿದ್ದ ಆ ಭ್ರಮೆಯ ಕೂಸು ಕಾಣಿಸುವುದು ನಿಂತಿತ್ತು. ತನ್ನ ಮೇಲೆ ತನಗೆ ನಂಬಿಕೆ ಬರತೊಡಗಿದಾಗ ಶಿವನ ಭಕ್ತಿಯು ಕಾವು ಕುಂತಂತೆ ದಿನವಿಡೀ ಗಿರಿಯ ಮಲ್ಲಯ್ಯನ ಧ್ಯಾನದೊಳಿರುತ್ತಿದ್ದಳು. ಹೀಗಿರಲು ತಿಂಗಳು ಮೂರಾದಾಗ ನರಸವ್ವ ಬಂದು ಕೈಯಾಗಿನ ನಾಡಿ ತಿಳಿಗಟ್ಟಿದ್ದ ಕಂಡು ಹೊಟ್ಟಿಯೊಳಗ ನಿಂತದ್ದು ಖರೇ ಮಾಡಿ ಹೇಳಿದಾಗ ಆಕೆಯ ಬಾಯಿಗೆ ಬೆಲ್ಲಹಾಕಿ ಹಾಲು ಕುಡಿಸಿದಳು. ಗಂಡಹೆಂಡತಿಯರು ಊರೊಳಗಿನ ಎಲ್ಲಾ ದೇವರ ಮುಂದೂ ತುಪ್ಪದ ದೀಪ ಹಚ್ಚಿ ಇದೊಂದಾದರೂ ಪೂರ ದಡಮುಟ್ಟಸು ಅಂತ ಗಲ್ಲಗಲ್ಲ ಬಡಕೊಂಡು ಮನಸಾರೆ ಬೇಡಿಕೊಂಡರು. ಮಹಾಲೇಖೆ ಒಂದು ಸಂಜೆ ಬೂದಿಸಾಧು ಹೇಳಿದ್ದ ಬಾಣಂತಿಕೊಳ್ಳದ ನೆನಪು ಮಾಡಿದಳು. ಮರುದಿನದ ಸೂರ್ಯ ಮೂಡಲು ದಂಡಿನ ಮಕ್ಕಳು, ನರಸವ್ವನೂ ಮೊದಲಾಗಿ ಗಂಡಹೆಂಡಿರು ಬಂಡಿ ಕಟ್ಟಿಕೊಂಡು ಬಾಣಂತಿಕೊಳ್ಳಕ್ಕೆ ಹೋಗಿ ಮಿಂದುಂಡು, ಉಟ್ಟದಡಿಯನ್ನು ಅಲ್ಲೇ ಬಿಟ್ಟು ಆ ದಿನವೆಂಬೋ ದಿನವನ್ನು ಅಲ್ಲೇ ಇದ್ದು ಬಂದದ್ದು ಆಯ್ತು.
ದಿನದಿಂದ ದಿನಕ್ಕೆ ಹೆಂಡತಿಯ ಬಣ್ಣ ಬದಲಾಗುತ್ತ ಮೈಕೈ ತುಂಬಿಕೊಳ್ಳುತ್ತಿತ್ತು. ತ್ರೈಲೋಕ್ಯ ಜೀವದಲ್ಲಿ ಜೀವವಿಲ್ಲದಂತೆ ಹೆಂಡತಿಯ ಆರೈಕೆ ಮಾಡುತ್ತ, ಹೆಂಡತಿ ವಾಕರಿಕೆ ಮಾಡಿದರೂ ನರಸವ್ವನನ್ನು ಕರೆಯುತ್ತಿದ್ದ, ಹೊಟ್ಟೆಯೊಳಗೆ ಕೂಸು ಚುಳುಗುಟ್ಟಿದರೂ ನರಸವ್ವನನ್ನು ಕರೆದು ಆ ಎಲ್ಲ ಸೋಜಿಗವನ್ನು ಅಂಜುತ್ತ ಅಳಕುತ್ತಲೇ ದಿನ ತುಂಬುವುದಕ್ಕಾಗಿ ತುದಿಗಾಲ ಮೇಲೆ ನಿಂತಿದ್ದ. ಇತ್ತ ದಂಡಿನ ಹುಡುಗರ ಪಾಠ-ಅಭ್ಯಾಸಗಳನ್ನು ಮರೆತು ಹೆಂಡತಿ ಮತ್ತವಳ ಹೊಟ್ಟೆಯಲ್ಲಿ ಮಿಸುಕಾಡುವ ಜೀವಗಳ ಹೊರತು ಮತ್ತೆಲ್ಲವೂ ನಶ್ವರ ಎಂಬಷ್ಟು ಭಾವಪರವಶನಾಗಿದ್ದ, ಇತ್ತ ಕಲಿಯಲು ಬಂದಿದ್ದ ದಂಡಿನ ಮಕ್ಕಳು ಅವರ ಪಾಡಿಗೆ ಅವರು ದೊಡ್ಡ ಹುಡುಗರು ಹೇಳುತ್ತಿದ್ದ ಪಾಠಗಳನ್ನು ಸಣ್ಣವರು ಕಲಿಯುತ್ತ ತಮ್ಮ ವಯೋಸಹಜ ಹುಡುಗಾಟಿಕೆ, ದೇಹದ ಅಂಗಾಂಗಗಳ ಬಿಸುಪಿನ ಒಳಗುಟ್ಟುಗಳ ಬಗ್ಗೆ ಕುಹುಕವಾಡುತ್ತ ಮನಸೋ ಇಚ್ಚೆ ಬೆಳೆಯತೊಡಗಿದ್ದರು, ದಿನಕಳೆದಂತೆ ಅವರೋ ತಿಂದುಂಡು ಗುಂಪುಕಟ್ಟಿಕೊಂಡು ಊರೂರ ಮೇಲೆ ತಿರುಗುತ್ತಾ, ತಮ್ಮ ವಯೋಸಹಜ ಕೀಟಲೆಗಳನ್ನು ಮಾಡುವುದರಲ್ಲಿ ತೊಡಗಿದರು. ಬೆಳೆದು ನಿಂತ ಫಸಲೊಳಗೆ ದನಕರು-ಕುದರೆಗಳನ್ನು ಬಿಟ್ಟು ಮೇಯಿಸುವುದು, ಭೋಗಿಸುವ ಸಲುವಾಗಿ ರಾತೋರಾತ್ರಿ ಪರ ಊರುಗಳ ಮೇಲೆ ನುಗ್ಗಿ ಕಲಿತ ಕಾದಾಟದ ಪಟ್ಟುಗಳನ್ನು ಬಳಸಿ ಕೊಳ್ಳೆ ಹೊಡೆಯತೊಡಗಿದರು. ಇದು ಮೊದಮೊದಲು ಆಟವಾಗಿ ಮಾಂಸ ಮದ್ಯ ಮೈಥುನಗಳ ಸುಖ ಬೇಕೆನಿಸುತ್ತ ಕೊಳ್ಳೆಹೊಡೆಯುವ ವ್ಯಸನಕ್ಕೆ ಸಿಲುಕಿ ದಿಕ್ಕುತಪ್ಪಿದ ಹುಡುಗರಂತಾದರು.
ಅದೊಂದು ದಿನ ನೀರು ತರಲು ಬಂದಿದ್ದ ಶಿಲ್ಪಿ ಆಚಾರಿಯ ಮಗಳನ್ನು ಎಳೆದಾಡಿ ಹಣ್ಣುಗಾಯಿ ಮಾಡಿ ಎಳೆಯ ಹೆಣ್ಣು ಜೀವವೊಂದನ್ನು ಇಲ್ಲವಾಗಿಸಿದಾಗ ಆ ಆಚಾರಿಯ ಪಿತ್ತನೆತ್ತಿಗೇರಿ ಆ ಸುದ್ದಿಯು ಮಳಖೇಡದ ರಾಜನ ಆಸ್ಥಾನದಲ್ಲಿಗೆ ಮುಟ್ಟಿಸಿದ. ಇಲ್ಲಿ ತಿಂಗಳುಗಳು ಉರುಳಿ ಮಹಾಲೇಖೆಗೆ ದಿನತುಂಬಿ ಇಂದುನಾಳೆ ಎನ್ನುವ ಹೊತ್ತಿಗೆ ಸರಿಯಾಗಿ ರಾಜನ ಓಲಗಕ್ಕೆ ದಂಡಿನ ಹುಡುಗರ ಆಟೋಟೋಪದ ಸುದ್ದಿಗಳು ಮುಟ್ಟಿ ರಾಜರಾದಂತ ರಾಜರು ಸಿಟ್ಟಾಗಿ ತ್ರೈಲೋಕ್ಯನ ಸಮೇತ ದಂಡಿನ ಹುಡುಗರನ್ನು ಬಂಧಿಸಿಡಲು ದಂಡು ಕಳಿಸಿದರು. ಇಲ್ಲಿ ನರಸವ್ವನೆಂಬ ಆ ಮುದುಕಿಯನ್ನು ಕರೆತಂದು ‘ನನ್ನರಸಿ ಬೇನೆ ತಿನ್ನುತ್ತಿದ್ದಾಳವ್ವ, ನಿಗಾವಹಿಸಿ ಹೆರಿಗೆ ಮಾಡಿಸು, ನಿನಗೆ ಈಯಲು ಬಂದ ಹಸು ಕೊಡುತ್ತೇನೆ’ ಎಂದು ಆರೈಕೆ ಮಾಡಲು ಬಿಟ್ಟು ದಂಡಿನ ನ್ಯಾಯಾಧೀಶರ ಮುಂದೆ ಹೋಗಿ ಶರಣಾದನು.
ದಂಡಿನ ಮಕ್ಕಳು ದಾರಿತಪ್ಪಿದ್ದಾರೆ ಶಿಕ್ಷೆ ಆಗಬೇಕಲ್ಲವೇ..
ಆಗಲಿ ಸ್ವಾಮಿ, ನಾನು ಎಡವಿದ್ದೇನೆ. ನೀವು ಕೊಟ್ಟ ಶಿಕ್ಷೆಯನ್ನು ಪಾಲಿಸುತ್ತೇನೆ. ಮನೆಯಲ್ಲಿ ಹೆಂಡತಿ ತುಂಬುಗರ್ಭಿಣಿ ಬೇನೆ ತಿನ್ನುತ್ತ ಮಲಗಿದ್ದಾಳೆ.
ಇದು ರಾಜರ ಆದೇಶ, ದಂಡಿನ ದಳವಾಯಿಗಳ ಆದೇಶದಂತೆ ನೀನು ಈಗೀಂದೀಗಲೇ, ಉಟ್ಟ ಉಡುಗೆಯಲ್ಲಿ ನಿನ್ನನ್ನು ಮತ್ತು ಮ್ಯಾಳವನ್ನು ಬಂಧಿಸಿ, ಮೂರು ವರ್ಷಗಳ ಕಾಲ ಕನೋಜಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ರಾಜರು ಹೊಸದಾಗಿ ದೇವಸ್ಥಾನ ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ. ಅಲ್ಲಿಗೆ ಬೇಕಾದ ಬಂಡೆಕಲ್ಲುಗಳನ್ನು ಸಾಗಿಸುವ ಕೆಲಸದಲ್ಲಿ ಗುಲಾಮನಾಗಿ ತೊಡಗಬೇಕು.
ಸ್ವಾಮಿ ಮನೆಯಲ್ಲಿ ಹೆಂಡತಿ ಬೇನೆ ತಿನ್ನುತ್ತಿದ್ದಾಳೆ. ಚೊಚ್ಚಲ ಮಗುವಿನ ಮುಖ ನೋಡಿಕೊಂಡು ಹೋಗಲು ಅಪ್ಪಣೆ ನೀಡಿ.
ಸಾಧ್ಯವಿಲ್ಲ. ಇದು ರಾಜರಾಜ್ಞೆ. ಇದನ್ನು ಮೀರಿದೆಯಾದರೆ ತಲೆ ಹೋಗುತ್ತದೆ.
ಮತ್ತೊಬ್ಬ ದಂಡಿನ ಮೇಳನಾಯಕನ್ನು ನೇಮಿಸಿ, ಸಕಲ ಕುದುರೆಗಳನ್ನು, ದನಕರುಗಳನ್ನು, ಸಕಲ ಸಲಕರಣೆಗಳನ್ನು ಅವನ ಸುಪರ್ದಿಗೆ ಒಪ್ಪಿಸಿದರು. ಅಯ್ಯೋ ಸ್ವಾಮಿ ನನ್ನ ಹೆಂಡತಿ, ಹುಟ್ಟುವ ಕೂಸಿನ ಗತಿ ಎಂದು ತೊದಲುತ್ತಿರುವಾಗಲೇ ಮುಂದೆ ಮಾತನಾಡಲೂ ಏನೊಂದು ಉಳಿಯದಂತೆ ಆ ದಂಡಿನ ಜನರು ಕೈಗಳಿಗೆ ಸರಪಳಿ ಬಿಗಿದು ಎಳೆಯತೊಡಗಿದರು.
***********
ಇಲ್ಲಿ ನರಸವ್ವನ ಮುಂದೆ ಸೊಂಟ ಹಿಡಿದು ಹೊರಳಾಡುತ್ತಾ ಮಲ್ಲಯ್ಯ.. ಮಹಾಕೂಟೇಶ.. ವಿರೂಪಾಕ್ಷ ಅಂತ ಬಡಬಡಿಸುತ್ತಾ ನೋವು ತಿನ್ನುವ ಸಂಕಟವನ್ನು ತುಟಿಕಚ್ಚಿ ಸಹಿಸಿಕೊಂಡು ಬಾಗಿಲಿನತ್ತ ನೋಡುತ್ತಿದ್ದ ಮಹಾಲೇಖೆ ಉಸಿರುಗರೆಯತ್ತಿದ್ದಳು. ನರಸವ್ವ ಪರ್ಯಾಣವೊಂದರಲ್ಲಿ ಕೆಂಡ ತಂದು ಆ ಕೆಂಡದಲ್ಲಿ ಧೂಪಹಾಕಿ, ಹೊಗೆಯು ಮನೆಯಂತ ಮನೆಯಲ್ಲಾ ವ್ಯಾಪಿಸಿ ಒಳಗೆ ಹೋದ ಉಸಿರು ಹೊರಗೆ ಬಾರದೇನೋ ಎನ್ನುವಷ್ಟು ಚಿಟ್ಟಾರನೇ ಚೀರುತ್ತಿದ್ದವಳ ಮುಂದೆ ಬಿಸಿನೀರ ಉಗಾ ಕೊಟ್ಟು, ಎದ್ದು ಹೋಗಿ ಹರಳೆಣ್ಣೆಯಲ್ಲಿ ಮದ್ದು ಹಾಕಿ ತೊಡೆ, ಸೊಂಟದ ಕೆಳಭಾಗಕ್ಕೆಲ್ಲ ಸವರುತ್ತಿದ್ದಾಗ ಪಡುವಣದ ಮಡುವಿನಲ್ಲಿ ಸೂರ್ಯ ಎಂಬೋ ಸೂರ್ಯನು ಬೆಂಕಿ ಕೆಂಡವಾಗಿ ಇಂಚಿಂಚೆ ಮುಳುಗುತ್ತಿದ್ದ. ಇನ್ನೇನು ಸೂರ್ಯ ಮಡುವಲ್ಲಿ ಅಡಗಿದ ಎನ್ನುವಷ್ಟರಲ್ಲಿ ನರಸವ್ವ ನೀವುತ್ತಾ ನೀವುತ್ತಾ ಮೊಣಕಾಲಿನ ಕೆಳಗಿನ ನರವೊಂದನ್ನು ಅದುಮಿದಳು. ಮಹಾಲೇಖೆ ಉಸಿರೆಳೆದು ಕಡೆಯ ಸರಿ ಎಂಬಂತೆ ತಿಣಕಿ ಉಸಿರು ಬಿಟ್ಟಾಗ ಅಳುವ ಕೂಸು ಹೊಕ್ಕಳಬಳ್ಳಿಯ ಎಳೆದುಕೊಂಡು ಈ ಜಗಕೆ ಬಂದಿತು.
ಎಚ್ಚರಾದಾಗ ನರಸವ್ವ ಮನೆಯ ಮೂಲೆಮೂಲೆಗೂ ಧೂಪ ಹಿಡಿಯುತ್ತಿದ್ದಳು. ಆ ಕತ್ತಲಿಗೆ ಪುಟಿದೆದ್ದು ತನ್ನ ಬೆಳಕನ್ನು ಹಂಚುತ್ತಿದ್ದ ಪ್ರಣತಿಗೆ ಹೊಗೆಯದ್ದೊಂದು ಬೃಹತ್ ಸುರಂಗವೇ ಸುತ್ತಿಕೊಂಡು ಬಾಗಿಲ ಕಡೆಗೆ ನುಗ್ಗುತ್ತಿತ್ತು. ಅದ್ಯಾವದೋ ಮಾಯಕ ಲೋಕದಿಂದ ಎದ್ದುಬಂದವಳಿಗೆ ಮೈಕೈ ನೋವು, ಯಾರೋ ಬಡಿದು ನೆಲಕ್ಕೆ ಹಾಕಿದ ಅನುಭವ. ಆ ಪ್ರಣತಿಯ ಬೆಳಕಲ್ಲಿ ಮನೆಯ ಬಾಗಿಲಿನ ಬಲಭಾಗದಲ್ಲಿ ಬೇವಿನ ಸೊಪ್ಪು ಸಿಕ್ಕಿಸಿದ್ದು ಕಾಣಿಸಿದಾಗ ಖುಷಿಗೊಂಡು ‘ಅಬ್ಬೆ ಗಂಡು’ ಎಂದು ಆ ಮೈಕೈ ನೋವಿನಲ್ಲೂ ಸಣ್ಣಕೆ ನಕ್ಕಳು. ಹೌದೆನ್ನುವಂತೆ ಗೋಣಾಡಿಸಿದ ನರಸಬ್ಬೆ ನೆಲವನ್ನು ಸಗಣಿ ಗಂಜಳದಿಂದ ಬಳಿಯತೊಡಗಿದಳು. ಹಸಿಹಸಿ ರಕ್ತದ ವಾಸನೆ, ತೊಯ್ದು ತಪ್ಪಡಿಯಾದ ದಟ್ಟಿ, ನೆಲದ ತಂವಟು ಈಗ ಹುಟ್ಟಿರುವ ಆ ಮಗುವಿಗೆ ತಾಕದಂತೆ ದಟ್ಟಿಯೊಂದನ್ನು ಜೋಳಿಗೆಯಾಗಿಸಿ ಅದರೊಳಗೆ ಹಾಕಿದ್ದ ಕೂಸು ಮಿಸುಕಿದಾಗ ಅವಳ ಎದೆಯಲ್ಲಿ ಹಾಲು ಚಿಮ್ಮಿತು.
ಅಬ್ಬೆ ಮಗನ ನೋಡಬೇಕು.
ಆ ಸೂರ್ಯನ ಬೆಳಕು ನಂದುವಾಗ ಈ ನಿನ್ನ ಮನೆಯ ಬೆಳಕು ಹುಟ್ಟಿದ್ದಾನವ್ವ ನಿನ್ನ ಮಗನಿಗೆ ವಸುದೀಪ್ಯ ಅಂತ ಹೆಸರಿಡು.
ನೋಡಲು ಅವರದ್ದೆ ರೂಪು, ಗುಂಡುಗುಂಡಾದ ಮುದ್ದು ಮುಖ, ಮ್ಯಾಣದಲ್ಲಿ ಕೊರೆದಿಟ್ಟಂತೆ, ಮೂಗು-ಬಾಯಿ-ಕಣ್ಣು. ಅಬ್ಬೆ ಅವರೆಲ್ಲಿ..?
ಯಾರೂ..? ತ್ರೈಲೋಕ್ಯನಾ..! ಅವನು ಬರತಾನೆ. ರಾಜರ ಕಂಡು ಬರಲು ಮಳಖೇಡಿಗೆ ಹೋಗಿದ್ದಾನಂತವ್ವ, ನಾಳಿದ್ದು ಮುಂಜಾವಿಗೆ ಬರತಾನೆ. ನೀನು ದಣಿದಿದ್ದಿಯ ಮಗಳೇ ಈಗ ಮಲಗು.
ಅಬ್ಬೆ.. ಮಳಖೇಡಿಗೆ..?
ಹೌದಂತವ್ವ, ನನ್ನ ಮಗ ಮಾಲಿಂಗ ಬಂದು ಹೇಳಿದ. ರಾಜರು ತುರ್ತಾಗಿ ಬರಲು ಹೇಳಿದ್ದರಿಂದ ಹೊರಟಿದ್ದಾನೆ. ಬರತಾನೆ ಮಲಗು.
ಬಾಯಾರಿಕೆಗೆ ಬಿಸಿಬಿಸಿ ನೀರು ಕುಡಿಸಿ ತಲೆ ಸವರಿ ಮಲಗಿಸಿದಳು. ಆ ದಣಿವಿನಲ್ಲಿ ಈ ಧರೆ ಬಾಯ್ದೆರೆದರು ಒಳಗೆ ಹೊಕ್ಕುಬಿಡುವಷ್ಟು ಆಯಾಸಗೊಂಡಿದ್ದವಳಿಗೆ ಏನು ಯೋಚಿಸುವದಕ್ಕೂ ಆಗದಷ್ಟು ಬಸವಳಿದಿದ್ದಳಲ್ಲಾ ನಿದ್ದೆಯ ಮಂಪರು ಕಣ್ಣರೆಪ್ಪೆಗೆ ತಾಗಿತು.
ದೂರದಾರಿಯಲ್ಲಿ ಅದ್ಯಾರೋ ಪುಣ್ಯಾತ್ಮ ತಲೆಗೆ ಪಾವಡಾ ಸುತ್ತಿಕೊಂಡು, ಹಣೆಗೆ ಮೈಕೈಗೆಲ್ಲ ಬೂದಿ ಬಳಿದುಕೊಂಡು ಮಾಪುಗಾಲುಗಳನ್ನ ದಾಪುಗಾಲು ಹಾಕುತ್ತಾ ಬರುತ್ತಿದ್ದಾನೆ. ಅವನ ಕೈಯಲ್ಲಿ ಸರಪಳಿಯೊಂದನ್ನು ಹಿಡಿದು ಕರ್ಕಶವಾಗಿ ನಕ್ಕು ಆ ಸರಪಳಿಯ ತುದಿಯನ್ನೆಳೆದಾಗ ಅಲ್ಲೊಂದು ಜೀವ ಧೊಪ್ಪನೆ ನೆಲಕ್ಕೆ ಬೀಳ್ತು. ಬಿದ್ದ ದೇಹ ತಲೆಎತ್ತಿ ಅವನ ಬಾಯಿಗೆ ಕೈಹಾಕಿ ನಾಲಗೆಯನ್ನು ಹೊರತೆಗೆದು ಸೊಂಟದಲ್ಲಿನ ಕಿರಗತ್ತಿಯಿಂದ ನಾಲಗೆಯನ್ನು ಕತ್ತರಿಸಿದಾಗ ಮಹಾಲೇಖೆ ಬೆಚ್ಚಿಬಿದ್ದು ಎಚ್ಚರಗೊಂಡಳು. ಮಗುವನ್ನು ತೊಡೆಯ ಮೇಲಿಟ್ಟುಕೊಂಡು ಬಟ್ಟೆಯ ತುದಿಯನ್ನು ಹಾಲಿನೊಳಗದ್ದಿ ಮಗುವಿನ ಬಾಯಿಗೆ ಹಾಲು ಚೀಪಿಸುತ್ತ ಕುಳಿತಿದ್ದ ನರಸವ್ವ ಏನಾಯ್ತೆಂಬಂತೆ ತಲೆಯಾಡಿಸಿದಳು.
ಅಬ್ಬೆ ನನ್ನ ಎದೆಹಾಲು ಉಕ್ಕುತ್ತಿದೆ ನಾ ಕುಡಿಸಲೇನು.
ಬೇಡವ್ವ, ಎಷ್ಟೋ ದಿನ ಕಾಡಿಸಿ ಈ ಮಗು ಹುಟ್ಟಿದೆ. ನಿನ್ನೆದೆಯ ಹಾಲು ಬಹಳ ದಿನದಿಂದ ಕಾದಿರುವ ಹಾಲು, ನಂಜೋ, ಮಂಜೋ ಆಗಿರತದೆ. ಅದನ್ನು ಹಿಂಡಿ ಹೊರಗಾಕು. ಈ ನನ್ನ ಮೊಮ್ಮಗನಿಗೆ ಮುಂದಲ ಮೂರುದಿವಸ ಹಸುವಿನ ಹಾಲೇ ಗತಿ. ಓನು ಬಂಗಾರು ಮಗನೇ.. ನಿನಗೆ ಅಬ್ಬೇ ಹಾಲು ಬೇಕೇನಪ್ಪಾ ವಾತಾಪಿಯ ದೊರಿಯೇ.. ಯಾಕವ್ವ ಆಗಲೇ ಬೆದರಿದೆ ಕನಸ ಕಂಡೆಯೇನು..?
ಹೂಂನಬ್ಬೆ, ಯಾರೋ ಒಬ್ಬ ಅವರನ್ನು ಸರಪಳಿ ಕಟ್ಟಿ ಎಳೆದೊಯ್ಯವ ಕನಸು. ಅವರ ನಾಲಗೆ ಕತ್ತರಿಸಿದ ಭ್ರಮೆ.
ನೀನು ಭಯಬಿಡು ಮಗಳೇ… ನಿನ್ನ ಗಂಡ ಬರುವತನಕ ನಾನು ನಿನ್ನ ಜೊತೆಗಿರುವೆ. ನಾಕುದಿನ ತಡೆದು ಬಂದಾನು.
ನಾಕು ದಿನ..?
ರಾಜಕಾರ್ಯ ಏನಿದೆಯೋ ಏನೋ.
ಮಹಾಲೇಖೆಗೆ ಬೆಳಗಾಗುವುದರೊಳಗೆ ನಡೆದ ಸಂಗತಿಗಳು ಆಟೋ ಈಟೋ ತಿಳಿದವು. ತನ್ನ ಭೂಮಿಭಾರದ ದೇಹ, ಎಡಗೈ ಅಂತರದಲ್ಲಿ ಮಲಗಿದ್ದ ಮಗನಿಗಾಗಿ ಆಕೆಯ ಮನಸ್ಸು ಕಲ್ಲಾದರೂ ತ್ರೈಲೋಕ್ಯನ ಬರುವಿಕೆಗಾಗಿ ಆಸೆ ಇಟ್ಟುಕೊಂಡು ದಿನಗಳ ದೂಡುವುದಕ್ಕಾಗಿ ಯೋಚಿಸಿದಳು. ದಿನಗಳು ತಿಂಗಳುಗಳಾದಾಗ ಗರಡಿಗೆ ಹೊಂದಿಕೊಂಡಂತಿದ್ದ ಮನೆಯನ್ನು ಹೊಸದಾಗಿ ನೇಮಕಗೊಂಡಿದ್ದ ದಂಡಿನ ಮೇಳನಾಯಕನಿಗೆ ಬಿಟ್ಟುಕೊಟ್ಟು ದೇವಾಲಯದಿಂದ ದೂರವಿರುವ ನರಸವ್ವನ ಮನೆಗೆ ಹೋಗಬೇಕಾಯ್ತು. ತಿಂಗಳುಗಳು ವರುಷಗಳಾದಾಗ ಅಪ್ಪನ ಮುಖವನ್ನೇ ನೋಡದ ವಸುದೀಪ್ಯನೂ ಬಾಯ್ದೆರೆದು ಅಬ್ಬೆ, ಅಪ್ಪ ಎನ್ನಲು ಹಾತೊರೆಯುತ್ತ ಮೊಣಕಾಲ ಮೇಲೆ ಹರಿದಾಡತೊಡಗಿದ್ದ.
(ಮುಂದುವರೆಯುವುದು)
Comments 9
ಸಂತೋಷ್ ಎಂ.
Jul 25, 2024ಮಹಾದೇವ ಹಡಪದ ಅವರು ಇದೇ ಬಯಲು ವೇದಿಕೆಯಲ್ಲಿ ಹಿಂದೆ ಬರೆದ ಶರಣರ ಕತೆಗಳನ್ನು ನಾನು ಮರೆತಿಲ್ಲ. ಅವುಗಳನ್ನು ಶಾಲೆಯ ಮಕ್ಕಳಿಗೆ ನಾಟಕ ಮಾಡಿಸುವ ಪ್ರಯತ್ನಗಳನ್ನೂ ಮಾಡಿದ್ದೇವೆ. ಅನಿಮಿಷ ಯೋಗಿಯ ಜೀವನ ಕತೆ ಆಸಕ್ತಿದಾಯಕವಾಗಿದೆ. ಕತೆಯ ಶೈಲಿ ಸುಂದರವಾಗಿದೆ.
Tippeswamy Bilichod
Jul 25, 2024ಮೋಡಿ ಮಾಡುವ ಕತೆಯ ಭಾಷೆ ಓದುಗನನ್ನು ಆ ಕಾಲಕ್ಕೆ ಹೊತ್ತೊಯ್ಯುತ್ತದೆ👌🏽👌🏽
Mahesh Koppala
Jul 28, 2024ಅನಿಮಿಷ ಯೋಗಿಗಳು ನಮ್ಮ ಜಿಲ್ಲೆಯವರೆಂದು ಗೊತ್ತಾಗಿ ಖುಷಿ, ಅಚ್ಚರಿ ಎರಡೂ ಆದವು… STORY IS REALLY VERY INTERESTING 🤔 ♥️
ಜಯಪ್ರಭು ವಿ.
Aug 3, 2024ಕತೆಯಲ್ಲಿ ಬರುವ ಹೆಸರುಗಳು ಬಹಳ ವಿಶಿಷ್ಟವಾಗಿದ್ದು, ಗಮನಸೆಳೆಯುವಂತಿವೆ- ತ್ರೈಲೋಕ್ಯ ಚೂಡಾಮಣಿ, ಮಹಾಲೇಖೆ. ಪಾತ್ರಗಳು ಹೆಸರಿಗೆ ತಕ್ಕಂತೆ ಸುಂದರ ವ್ಯಕ್ತಿತ್ವವನ್ನು ಹೊಂದಿವೆ. ಕತೆಯ ಓಟವು ಸೊಗಸಾಗಿ ಮೂಡಿಬರುತ್ತಿದೆ.
ನಾಗಭೂಷಣ ಕನಕಪುರ
Aug 3, 2024ಹನ್ನೆರಡನೆ ಶತಮಾನದ ಕತೆ ಆ ದಿನಗಳನ್ನು ಎದುರಿಗೆ ತರುತ್ತದೆ. ಜೀವನ ಹೂವಿನ ಹಾಸಿಗೆಯಲ್ಲ. ಎಷ್ಟು ಕಷ್ಟನಷ್ಟಗಳು ಮನುಷ್ಯನನ್ನು ಹುಡುಕಿಕೊಂಡು ಬರುತ್ತವೆ. ಮಗುವಿಗಾಗಿ ಹಾತೊರೆವ ತಾಯಿ-ತಂದೆಯರು ಮಗುವಾದಾಗ ಆ ಸಂಭ್ರಮ ಪಡದೇ ಹೋಗುವುದು ಎಷ್ಟು ನೋವು….. ಕತೆಯಲ್ಲಿ ಮುಳುಗಿ ಹೋಗಿಸಿಕೊಳ್ಳುವ ಕಲೆ ಕತೆಗಾರರ ಲೇಖನಿಗೆ ಇದೆ. ಮಹಾದೇವಣ್ಣನವರಿಗೆ ಶರಣು.
Shivalingappa
Aug 4, 2024ಅನಿಮಿಷ ಯೋಗಿಗಳು ನಮ್ಮ ಜಿಲ್ಲೆಯವರೆಂದು ಗೊತ್ತಾಗಿ ಖುಷಿ, ಅಚ್ಚರಿ ಎರಡೂ ಆದವು… story is really very interesting 🤔 ♥️
ಗಿರೀಶ್ ಎಂ.ಎಲ್
Aug 4, 2024ಕತೆ ಮನಮುಟ್ಟುವಂತಿದೆ, ಖಂಡಿತ ನಾಟಕ ಮಾಡಬಹುದು.
Siddesh S
Aug 5, 2024ಮಹಾತ್ಮರು ಹುಟ್ಟು ತಾಯಿ-ತಂದೆಗಳು ಕಾಡಿ-ಬೇಡಿದಾಗಲೇ ಸಂಭವಿಸುವುದು ಕಾಕತಾಳೀಯವೋ? ಕವಿಯ ಕಲ್ಪನೆಯೋ? ಅಸಾಮಾನ್ಯವೆಂದು ತೋರಿಸುವುದು ಅಗತ್ಯವಾಗಿ ಹೋಗಿದೆಯೋ? ಹೇಗೆ?? ಬಸವಣ್ಣನವರ ಹುಟ್ಟೂ, ಅಕ್ಕನ ಹುಟ್ಟೂ, ಅಲ್ಲಮರ ಹುಟ್ಟೂ, ಸಿದ್ಧರಾಮೇಶ್ವರರ ಹುಟ್ಟೂ ಎಲ್ಲಾ ಇದೇ ರೀತಿ ಇವೆ.
ಅಂಬಿಕಾ ಪಾಟೀಲ್, ರಾಯಚೂರ
Aug 8, 2024ಅನಿಮಿಷ ಯೋಗಿಗಳು ಬಸವಣ್ಣನವರ ಸಂಪರ್ಕಕ್ಕೆ ಬಂದು, ಅವರಿಂದ ಲಿಂಗ ದೀಕ್ಷೆ ಪಡೆದರು ಎಂದು ಎಲ್ಲೋ ಕೇಳಿದ ನೆನಪು. ಬಯಲಿನಲ್ಲಿ ಶರಣರ ಕತೆಗಳು ಪ್ರಕಟ ಮಾಡಿದ್ದಕ್ಕೆ ಖುಷಿಯಾಯಿತು.