ನಿನ್ನೆ-ಇಂದು
ನಿನ್ನೆ-
ಬೆಳಗ ಕಾಣದ ಮಸುಕು
ಚಿತ್ತದ ಜಾಡ್ಯ, ಮರೆವಿನ ಬಾಧೆ
ಬೆಂಬಿಡದ ಕಾಮನೆಗಳಲಿ
ಬಂಧಿಯಾಗಿದೆ ಜೀವ
ಬಿಡಿಸು ಗುರುವೆ ಇದರ ಪ್ರವರ…
ಇಂದು-
ಬೆಳಕ ಕೊಡುತಿಹ ಆ ದೀಪ
ಯಾವುದಕೆ ಅಂಟಿದೆ?
ಹಣತೆಗೋ, ಬತ್ತಿಗೋ,
ಎಣ್ಣೆಗೋ, ಗಾಳಿಗೋ…
ಇಲ್ಲಾ ನೋಡುವ ಕಣ್ಣ ಪಾಪೆಗೋ?
ಈ ಪ್ರಾಣ ಅದಾವುದಕೆ
ಅಂಟಿಕೊಂಡಿದೆ…
ದೇಹಕ್ಕೋ, ಉಸಿರಿಗೋ,
ನೀರಿಗೋ, ಸೇವಿಸುವ ಆಹಾರಕೋ
ಇಲ್ಲಾ ಒಳಗಣ ಪರಿಕರಗಳಿಗೋ…?
ಆ ಬೆಳಕಿನಂತೆ
ಈ ಪ್ರಾಣಕ್ಕೂ ಅಂಟಿಗೂ ಯಾವ ನಂಟೂ ಇಲ್ಲ…
ದೀಪ ಹಣತೆಯಲ್ಲಿ
ಜೀವ ದೇಹದಲ್ಲಿ
ಬಂಧಿಗಳೇ ಅಲ್ಲಾ!
ಅದು ಉರಿಯುತಲೇ ಬೆಳಗುವ…
ಇದು ಆಗುತಲೇ ಜೀವಿಸುವ…
ಸಹಜ ಪ್ರಕೃತಿಯ ಸೊಬಗು!
ಆಹಾ! ಎಂತಹ ಬೆಡಗು!!