
ನಿಜ ನನಸಿನ ತಾವ…
ಕಣ್ಣು ಮುಚ್ಚಿದಾಗ ಬರುವ ಕನಸಿಗೂ
ಕಣ್ಬಿಟ್ಟಾಗಿನ ದಿನದ ಚಿತ್ರಾವಳಿಗೂ
ಏನಿಹುದು ಅಂತರ?
ನಗು, ಅಳು, ನೋವು, ಸಂಕಟ…
ಅನುಭವದಲ್ಲಿ ಅದ್ದಿ ತೆಗೆದಂತೆ
ಎಲ್ಲ ಎದುರೆದುರೇ ನಡೆದಂತೆ!
ಹೊಯ್ದಾಟಗಳ ಹಗಲ ನನಸು,
ಕನವರಿಕೆಗಳಾ ಇರುಳ ಕನಸು
ನನಸಂತೆ ಕನಸಲೂ ಅದೇ ಅದೇ
ಒಡಲ ಹಸಿವು, ಹುಸಿಗಳು
ಚಡಪಡಿಕೆಗಳು, ಹುಡುಕಾಟಗಳು
ಅಸಹಾಯಕತೆಯ ತಡವರಿಕೆಗಳು
ಇಲ್ಲಿರುವವರೆಲ್ಲಾ ಅಲ್ಲಿ ಸಿಗುತ್ತಾರೆ
ಅಲ್ಲಿಯವರೆಲ್ಲಾ ಇಲ್ಲಿ ಕಾಣುತ್ತಾರೆ
ಸಂಬಂಧಗಳು, ವಿರೋಧಗಳು,
ದಡಗಳೆರಡರ ಮೇಲೂ ನಿತ್ಯ ಹರಿದಾಡುತ್ತವೆ
ಕನಸು-ನನಸಿನ ಮೋಡಿಯಾಟದಲಿ
ನಾಳೆಗಳು ನಿನ್ನೆಗಳಾಗುತಿವೆ
ಮಲಗಿದಾಗ ದಿನ ಮರೆಯಾಗುತ್ತದೆ
ಎಚ್ಚರಾದಾಗ ಕನಸು ಸರಿಯುತ್ತದೆ
ಯಾವುದು ದಿಟ, ಯಾವುದು ಸಟೆ?
ಅಲ್ಲಿ ತೋರಿದ್ದೋ, ಇಲ್ಲಿ ಕಂಡದ್ದೋ?
ಅರಿವಾಗಿ ಎದೆಗಿಳಿದ ಗುರು ಹೇಳಿದ-
ಎರಡೂ ಸುಳ್ಳಲ್ಲ, ನಿಜದಿರುವೂ ಅಲ್ಲಿಲ್ಲ
ವಿಷಮ ವಿಷಯಗಳ ಹಗಲಿನ ಜಾತ್ರೆ
ಸಿಗದ ಬೇಗುದಿಗಳ ಇರುಳಿನ ಸಂತೆ
ಎಚ್ಚರವಾಗದ ಅಮಲಿನ ಬದುಕಿಗೆ
ಸತ್ಯದ ನೆಲೆಯು ಕಾಣುವುದೆ?
ಕನಸೊಳಗೊಂದು ಕನಸನು ಕಟ್ಟಲು
ನಿಜ ನನಸಿನ ಮರ್ಮ ತಿಳಿಯುವುದೆ?
ನಿನ್ನ ಕದಳಿಯ ನೀ ದಾಟಲೇ ಬೇಕು
ನಿನ್ನ ತಾವಕೆ ನೀ ಸೇರಲೇ ಬೇಕು
ಜಂಗಮ ಚಲನೆಯ ಲಾಸ್ಯವನರಿಯಲು
ಅಚಲವಾಗಿ ನೀ ನಿಲ್ಲಲೇ ಬೇಕು.
Comments 1
ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
Jul 13, 2023ಕಣ್ಣೆಚ್ಚರದಲಿ ಕನಸ ನೋಡಬೇಕು.. ಎಂಬುದನ್ನು ಎಷ್ಟು ಸರಳವಾಗಿ ಹೇಳಿರುವಿರಿ.
ಓದುವುದೇ ಒಂದು ಚೆಂದ .