ನಾನೆಲ್ಲಿ ಇದ್ದೆ?
ಶರಧಿ ಭೂಮಿಯ ನುಂಗಿ
ಸೂರ್ಯ ಶರಧಿಯ ನುಂಗಿ
ಆಗಸ ಸೂರ್ಯನ ನುಂಗಿ
ವಾಯು ಆಗಸ ನುಂಗಿ
ಎಲ್ಲ ಎಲ್ಲವ ನುಂಗಿ ನೊಣೆಯುವಾಗ
ನಾನೆಲ್ಲಿ ಅಡಗಿದ್ದೆ?
ಬಾಲ್ಯ ಭ್ರೂಣವ ನುಂಗಿ
ಹರಯ ಬಾಲ್ಯವ ನುಂಗಿ
ಪ್ರೌಢತೆ ಯೌವನವ ನುಂಗಿ
ಸಾವು ಬದುಕನು ನುಂಗಿ
ಎಲ್ಲ ಎಲ್ಲವ ತಿಂದು ತೇಗುವಾಗ
ನಾನೆಲ್ಲಿ ಹೋಗಿದ್ದೆ?
ಕಾಲದ ಒಡಲಲ್ಲಿ ಸೂರ್ಯಚಂದ್ರರಡಗಿ
ಬ್ರಹ್ಮಾಂಡದೆದೆಯೊಳಗೆ ಕಾಲವಡಗಿ
ಬಯಲ ಹೊಟ್ಟೆಯಲಿ ಬ್ರಹ್ಮಾಂಡಗಳಡಗಿ
ಎಲ್ಲ ಮಾಯವ ಮಾಡಿ ಕೇಕೆ ಹಾಕುವಾಗ
ನೀ ತೊಟ್ಟೆ ಬಯಲ ಬಟ್ಟೆ
ಎನ್ನ ಕಣ್ಣೊಳಗೆ ನಿನ್ನ ಬೆರಗನಿಟ್ಟೆ.
Comments 3
Dundappa Inamadar
Jan 17, 2019ಶರಣು ಶರಣಾರ್ಥಿಗಳು…
Manohar acharya
Aug 16, 2019‘ನಾನೆಲ್ಲಿ ಇದ್ದೆ’ ಸೊಗಸಾಗಿ ಹೆಣೆದಿದ್ದಿಯ.ಇನ್ನೂ ಆಳಕ್ಕೆ ಇಳಿದರೆ ಹೆಚ್ಚು ಮುತ್ತು ಸಿಗಬಹುದು.
Suryaprakash dh
Sep 14, 2024ಎಲ್ಲರಿಗಿಂತ ಒಂದು ನೂರು ಕಿ.ಮಿ ವೇಗದಲ್ಲಿದೆ ತಮ್ಮ ಚಿಂತನೆ. – ಈ ಕಲ್ಪನೆ ನೀಡಿದ್ದಕ್ಕೆ ಧನ್ಯವಾದ.