ನಾನೆಂಬುದ ಅಳಿದು…
ನಾನೆಂಬುದ ಅಳಿದು ಇದಿರೆಂಬುದ ಮರೆತು ಭಾವ ದಗ್ಧವಾಗಿರಬಲ್ಲಡೆ ಅದು ಸ್ವತಂತ್ರ
ಸ್ವಾತಂತ್ರ್ಯದ ಸಂವೇದನೆಯು ತಾನು ಯಾವುದಕ್ಕೆ ಗುಲಾಮನಲ್ಲ ಎಂದು ವಿಶ್ಲೇಷಿಸಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ಮನುಷ್ಯ ಲೋಕದಿಂದಾದ ಪ್ರಭಾವಗಳಿಂದಲೇ ಮನುಷ್ಯನೊಳಗೆ ಉಂಟಾಗುತ್ತಿರುವ ಜೀವನ ಸಂದಿಗ್ಧತೆ (ವಿಕಲ್ಪ ಅಥವಾ ಭ್ರಾಂತಿ)ಗಳನ್ನು ಪ್ರಶ್ನಿಸಿಕೊಳ್ಳುತ್ತಾ ಸ್ವವಿಮರ್ಶೆಯಿಂದ ಜೀವನವನ್ನು ಸಂಸ್ಕರಿಸಿಕೊಳ್ಳಬಹುದಾದ ಅವಕಾಶವನ್ನು ಪ್ರಕೃತಿ ಎಲ್ಲಾ ಕಾಲಕ್ಕೂ ನಮಗೆ ನೀಡುತ್ತಲೇ ಬಂದಿದೆ.
ಜೀವನಪ್ರೀತಿ ಮತ್ತು ಸಮರಸವನ್ನು ಒಂದು ಆದರ್ಶ ಮೌಲ್ಯವನ್ನಾಗಿ ಬಾಳಿಸಿದ ಶರಣರು ಪ್ರಶ್ನಿಸುವ ಮತ್ತು ತಮ್ಮನ್ನು ತಾವು ತೀವ್ರವಾಗಿ ಸ್ವವಿಮರ್ಶೆಗೆ ಒಳಪಡಿಸಿಕೊಳ್ಳುವ ಹಾದಿಯನ್ನು ಕ್ರಮಿಸುತ್ತಾ ಮಾನವ ಲೋಕಕ್ಕಿರುವ ಸ್ವಾತಂತ್ರ್ಯದ ಅಂತಃಸತ್ವವನ್ನು ತೆರೆದು ತೋರಿದ್ದಾರೆ. ಸ್ವಾತಂತ್ರ್ಯವು ಜೀವಪರವಾದ ದಯಾಮೈತ್ರಿಗಳ ಅಂತಃಪ್ರೇರಣಾ ಶಕ್ತಿ ಎಂಬುದನ್ನೂ ಸಾರಿ ಹೋಗಿದ್ದಾರೆ. ಒಂದು ವೇಳೆ ಮಾನವ ಸಹಜವಾದ ಸ್ವಾತಂತ್ರ್ಯದ ಅಂತಃಶೀಲವನ್ನು ಮಾನವ ಗಳಿಸಲಾಗದಿದ್ದಲ್ಲಿ ವ್ಯಕ್ತಿ ಮತ್ತು ಸಮಾಜವು ಕೇವಲ ಪ್ರಲೋಭನೆಗಳಿಗೆ ತಮ್ಮನ್ನು ಅಡಿಯಾಳಾಗಿಸಿಕೊಳ್ಳಬಹುದಾದ ವಿಪರ್ಯಾಸವನ್ನು ಶರಣರು ನಮ್ಮ ಮುಂದಿಟ್ಟಿದ್ದಾರೆ.
ಈ ನೆಲೆಯಿಂದ ಅಲ್ಲಮಪ್ರಭುವಿನ ವಚನವೊಂದರಿಂದ ತೆಗೆದುಕೊಂಡ ಒಂದು ಸಾಲನ್ನು ಈ ಲೇಖನದ ಶೀರ್ಷಿಕೆಯಾಗಿ ತೆಗೆದುಕೊಂಡು ಇಲ್ಲಿ ಮುಂದುವರಿಯಲಾಗಿದೆ. ಈ ಸಾಲು ಬಹಳಷ್ಟು ಶರಣಾಭಿಮಾನಿಗಳಿಗೆ ಅತಿಶಯವಾದ ಅನುಭಾವಿಕ ನುಡಿಯಂತೆ ಕಾಣಬಹುದು. ಆದರೆ ಪರಿಶುದ್ಧವಾದ ವ್ಯಕ್ತಿ ಮತ್ತು ಸ್ವಾಸ್ಥ್ಯ ಸಮಾಜದ ಸಮ್ಯಕ್ ಜೀವನದ ನೆಲೆಯಿಂದ ಈ ವಾಕ್ಯವು ಅನುಭಾವಿಕ ಎನ್ನುವುದಕ್ಕಿಂತಲೂ ವ್ಯಕ್ತಿ ಮತ್ತು ಸಮಾಜದ ಮರು ನಿರ್ಮಾಣಕ್ಕೆ ಹೇಗೆ ಸಂಬಂಧಿಸಿದ್ದು ಎಂಬುದನ್ನು ಹೇಳಲು ಪ್ರಯತ್ನಿಸುವುದು ಈ ಲೇಖನದ ಉದ್ದೇಶವಾಗಿದೆ.
ಕನ್ನಡಕ್ಕೆ ಹನ್ನೆರಡನೇ ಶತಮಾನವು ಬಹಳ ಪ್ರಮುಖವಾದ ಕಾಲಘಟ್ಟ. ಪ್ರಶ್ನಿಸಲಾಗದೇ ಹಳಸಲಾದ ಸಿದ್ಧಮಾದರಿಯ ಸಾಮಾಜಿಕ ಕಟ್ಟುಪಾಡುಗಳು, ಸ್ವಯಂ ವಿಮರ್ಶೆಗೆ ಒಳಪಡಿಸಲಾಗದ ಆಚಾರ-ವಿಚಾರಗಳು ಹಾಗೂ ಪರಿಷ್ಕರಿಸಿಕೊಳ್ಳಲಾಗದ ಮಾನವ ಪ್ರಲೋಭನೆಗಳನ್ನು ಪ್ರಶ್ನಿಸಿ, ಸ್ವವಿಮರ್ಶೆಗೆ ಒಳಪಡಿಸಿ ಶರಣರು ಒಡಮೂಡಿಸಿಕೊಂಡ ಜೀವನ ಸಂಗತಿಗಳಲ್ಲಿ ಸ್ವಾತಂತ್ರ್ಯವು ಅತ್ಯಮೂಲ್ಯವಾದ ಅನುಭೂತಿಯಾಗಿ ಹೊರಹೊಮ್ಮಿದೆ. ಶರಣರ ಅನುಭವವು ಸಹ ಜೀವನ ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನಗಳಿಂದ ಸಮ್ಮಿಳಿತಗೊಂಡ ಸ್ವತಂತ್ರ ಸೃಜನಶೀಲ ಪ್ರತಿಭೆಯಾಗಿರುತ್ತದೆ. ಲೌಕಿಕತೆಯನ್ನೇ ಪಾರಮಾರ್ಥಿಕತೆಯಾಗಿ ಕಂಡ ಅವರ ಒಳನೋಟದ ಅನುಭಾವದಲ್ಲೂ ಇದು ವ್ಯಕ್ತವಾಗುತ್ತದೆ.
ಸ್ವತಂತ್ರ ಪರತಂತ್ರಕ್ಕೆ ಆವುದು ಚಿಹ್ನ ನೋಡಾ.
ತಾನೆಂಬುದ ಅಳಿದು ಇದಿರೆಂಬುದ ಮರೆದು,
ಭಾವದಗ್ಧವಾಗಿರಬಲ್ಲಡೆ ಅದು ಸ್ವತಂತ್ರ.
ನೀನೆಂಬುದ ಧಿಕ್ಕರಿಸಿ ತಾನೆಂಬುದ ನೀಕರಿಸಿ
ಉಭಯ ಭಾವದಲ್ಲಿ ಸನ್ನಿಹಿತವಾಗಿರಬಲ್ಲಡೆ ಪರತಂತ್ರ. (ಅಲ್ಲಮಪ್ರಭು)
ಈ ವಚನ ಪ್ರಸ್ಥಾನವನ್ನು ಸಾಮಾನ್ಯ ವಿವೇಚನೆಗೆ ಒಡ್ಡಿನೋಡಿದರೂ ನಮಗೆ ತಿಳಿಯುವುದೇನೆಂದರೆ ತಾನು ಮತ್ತು ಇದಿರಿನ ಲೋಕದೊಂದಿಗೆ ಒಳಗಾಗುತ್ತಿರುವ ಕ್ರಿಯೆ- ಪ್ರತಿಕ್ರಿಯೆ, ಮತ್ತವುಗಳ ಪರಿಣಾಮಗಳನ್ನು ಅವು ಹೇಗಿವೆಯೋ ಹಾಗೇ ಗುರುತಿಸಿಕೊಳ್ಳುವ ಅರಿವಿಲ್ಲಿ ಬಹುಮುಖ್ಯವಾಗುತ್ತದೆ.
ಈ ನೆಲೆಗಟ್ಟಿನಿಂದ ವಿವೇಚಿಸಿದಾಗ ಹೊರಗಣ ಮಾನವ ಲೋಕದಲ್ಲಿರುವುದೆಲ್ಲವೂ ನಮ್ಮೊಳಗೆಯೂ ಇರುತ್ತದೆ. ನಮ್ಮ ಸುತ್ತಲೂ ಇರುವ ಮಾನವ ಪರಿಸ್ಥಿತಿಗಳನ್ನು ಅವಲೋಕಿಸಿದಾಗ ಅಥವಾ ಅಕ್ಕಪಕ್ಕದ ಕುಟುಂಬ ಸ್ನೇಹಿತರ ಪರಿಸ್ಥಿತಿಗಳನ್ನು ನೋಡಿದಾಗಲೂ ಹಾಗೂ ನಮ್ಮ ಅಂತರಂಗದಲ್ಲಿ ಕೂಡಾ ಯಾವ್ಯಾವುದೋ ದುಃಖಗಳು, ಭೀತಿಗಳು, ಕೋರಿಕೆಗಳು, ಅವಮಾನ, ಅಸಹನೆ, ಸೋಲು, ಅಸಮಧಾನ, ಅತೃಪ್ತತೆಗಳಲ್ಲಿ ನಾವು ಒಂದಲ್ಲಾ ಮತ್ತೊಂದು ರೀತಿಯಲ್ಲಿ ತಲ್ಲಣದಲ್ಲಿರುವುದು ಕಂಡುಬರುತ್ತದೆ. ಹಾಗೆ ನೋಡಿದರೆ ಇವು ನಿನ್ನೆ, ಮೊನ್ನೆಯ ಸಮಸ್ಯೆಗಳೇನೂ ಅಲ್ಲ. ಈ ಭಯ, ದುಃಖ, ಕೋರಿಕೆಗಳು, ಅವಮಾನ, ಅಸಹನೆ, ಸೋಲುಗಳಿಂದ ಮನುಷ್ಯ ಅಂದಿನಿಂದಲೂ ಹೊರಬಂದು ನಿರಾಳವಾಗಿ ಬದುಕಲು ಪ್ರಯತ್ನಿಸುತ್ತಲೂ ಇದ್ದಾನೆ. ನೆಮ್ಮದಿ, ನಿರಾಳಗಳಿಂದ ಜೀವಿಸಬೇಕೆಂದು ಎಷ್ಟೇ ಪ್ರಯತ್ನಿಸುತ್ತಿದ್ದರೂ ಅದು ಸುಲಭ ಸಾಧ್ಯವಾಗಲಿಲ್ಲ. ಆದಾಗ್ಯೂ ವರ್ತಮಾನದ ಬದುಕಿನಲ್ಲಿ ನಿರಾಳ- ನಿರಾತಂಕ ಜೀವನಕ್ಕಾಗಿ ಪ್ರಯತ್ನಗಳು ಸಾಗುತ್ತಲೇ ಇವೆ.
ಅತ್ಯುನ್ನತ ಸ್ಥಾನಮಾನಗಳನ್ನು ಹೊಂದಿದರೆ ತಾನು ಸುಖವಾಗಿರಬಹುದೆಂದು ಆ ಸ್ಥಾನಕ್ಕಾಗಿ ಪ್ರಯತ್ನಿಸಿ ಫಲ ಸಿಕ್ಕಿತು, ಆದರೂ ನಿರಾಳವಾಗಿರಲು ಸಾಧ್ಯವಾಯಿತೇ? ಹೆಚ್ಚು ಆಸ್ತಿ ಮಾಡಿದರೆ ತಾನು ಸುಖವಾಗಿರಬಹುದೆಂದು ಅದನ್ನೂ ಗಳಿಸಿದ್ದಾಯಿತು. ಆದರೆ ನಿರಾಳತೆಯಿಂದ ಜೀವಿಸಲು ಸಾಧ್ಯವಾಯಿತೆ? ದರ್ಶನ ಶಾಸ್ತ್ರಗಳಲ್ಲಿ, ತಾತ್ವಿಕ ಸಿದ್ಧಾಂತಗಳಲ್ಲಿ ಆಧ್ಯಾತ್ಮಿಕ ಜೀವನ ನಡೆಸಿ ನೋಡಿದ, ತನ್ನ ಜಾತಕದಲ್ಲಿ ಏನಾದರೂ ದೋಷವಿದೆಯೇ ಎಂದು ತಡಕಾಡಿ ಅದೆಷ್ಟೋ ಜಾಗಗಳಿಗೆ ಭೇಟಿ ನೀಡಿದ್ದಾಯಿತು. ಗುಡಿಗೋಪುರ, ತೀರ್ಥಯಾತ್ರೆ, ಧ್ಯಾನ, ಪ್ರಾರ್ಥನೆ, ಸತ್ಸಂಗಗಳನ್ನು ಮಾಡಿದರೂ ಮನುಷ್ಯನೊಳಗಿನ ಬದುಕಿನ ತಲ್ಲಣಗಳು ಮಾತ್ರ ‘ನಾನು’ ನಿನ್ನ ಜೊತೆಗಿದ್ದೇನೆ ಎಂಬಂತೆಯೇ ಹಿಂಬಾಲಿಸುತ್ತಿವೆ.
ತಲ್ಲಣಕ್ಕೀಡಾದ ಮನಸ್ಸಿನಲ್ಲಿ ಅದೆಷ್ಟೋ ಭೀತಿಗಳು ಹುಟ್ಟು ಪಡೆಯುತ್ತಾ ಸಾಗುತ್ತಿರುತ್ತವೆ. ತನ್ನ ಮೋಸ ಮತ್ತು ಕಪಟತನ ಇತರರಿಗೆ ತಿಳಿದುಬಿಡುತ್ತದೇನೋ ಎಂಬ ಆತಂಕ! ಹೂಡಿದ ಬಂಡವಾಳ ಮತ್ತೆ ವಾಪಸ್ಸು ಬರುವುದೋ ಇಲ್ಲವೋ ಎಂಬ ಆತಂಕ! ತಾನು ಆಸೆಪಟ್ಟಿದ್ದು ತನಗೆ ಲಭಿಸುತ್ತೋ ಇಲ್ಲವೋ ಎಂಬ ಆತಂಕ! ತನಗಿರುವ ಆರೋಗ್ಯದ ಸಮಸ್ಯೆ ವಾಸಿಯಾಗುತ್ತದೆಯೋ ಇಲ್ಲವೋ ಎಂಬ ಆತಂಕ! ಬರೆದ ಪರೀಕ್ಷೆ ಪಾಸಾಗುತ್ತೋ ಇಲ್ಲವೋ ಎಂಬ ಆತಂಕ… ಹೀಗೆ ಎಷ್ಟೆಷ್ಟೋ ಯಾವ್ಯಾವುದೋ ಆತಂಕಗಳು!
ದುಃಖ ಮತ್ತು ದುಗುಡಗಳೂ ಅಷ್ಟೇ… ತನ್ನ ಪ್ರೀತಿಪಾತ್ರರು ತೀರಿಕೊಂಡಾಗಲೋ ಅಥವಾ ಅವರು ಬದುಕಿದ್ದೂ ತನ್ನ ಜೊತೆಗಿಲ್ಲವೆಂಬ ದುಃಖ! ಆಶಿಸಿದ್ದು ಎಷ್ಟೇ ಪ್ರಯತ್ನಿಸಿದರೂ ತನಗೆ ಲಭಿಸಲಿಲ್ಲ ಎಂಬ ದುಃಖ! ತನ್ನ ಜೀವನಾಧಾರ ಸಂಪತ್ತನ್ನು ಇತರರು ದೋಚಿಕೊಂಡು ಹೋದ ದುಃಖ! ಅಜಾಗ್ರತೆಯಿಂದ ತನ್ನಲ್ಲಿರುವುದನ್ನು ಕಳೆದುಕೊಂಡ ದುಃಖ! ತನಗೊಂದು ಆಶ್ರಯವಿಲ್ಲೆಂಬ ದುಃಖ! ನನಗೊಬ್ಬರು ಸರಿಯಾದ ಮಾರ್ಗದರ್ಶಕರು ಇಲ್ಲವೆಂಬ ದುಃಖ! ನನ್ನ ಅಸಹಾಯಕತೆಗೆ ಸಹಾಯಮಾಡಬಲ್ಲ ಬಂಧುಗಳಾರೂ ಇಲ್ಲವೆಂಬ ದುಃಖ!…
ಇನ್ನು ಕೋರಿಕೆಗಳ ವಿಷಯಕ್ಕೆ ಬಂದರೆ ಎಂದೆಂದಿಗೂ ಬಗೆಹರಿಯಲಾಗದಾ ಕೋರಿಕೆಗಳು ಒಂದರ ನಂತರ ಮತ್ತೊಂದು ಬರುವ ಸಾಗರದಲೆಗಳಂತೆ ಬರುತ್ತಲೇ ಇರುತ್ತವೆ. ತಾನು ಚೆನ್ನಾಗಿ ಓದಬೇಕೆಂಬ ಕೋರಿಕೆ, ಓದಿದ ನಂತರ ಉನ್ನತ ಉದ್ಯೋಗದ ಕೋರಿಕೆ, ಉದ್ಯೋಗ ದೊರೆತ ನಂತರ ಮನೆ ಕಟ್ಟಬೇಕೆಂಬ ಕೋರಿಕೆ, ಮನೆಕಟ್ಟಿದ ನಂತರ ಸಾಲ ತೀರಿಸುವ ಸಮಸ್ಯೆ, ಸಾಲ ತೀರಿದ ಮೇಲೆ ಮತ್ತೊಂದು… ಮಗದೊಂದು…
ಭೀತಿ, ದುಃಖ ಮತ್ತು ಕೋರಿಕೆಗಳ ಉಪ ಉತ್ಪನ್ನಗಳಾಗಿ ಹುಟ್ಟಿಕೊಳ್ಳುವ ಅವಮಾನ, ಅಸಹನೆ, ಸೋಲು, ಅತೃಪ್ತಿಗಳು ನಮ್ಮಲ್ಲಿನ ಅಂತಃಶಕ್ತಿಯನ್ನು ತುಳಿದುಹಾಕಿ ದುರ್ಬಲರನ್ನಾಗಿಸುತ್ತಿರುತ್ತವೆ.
ಹೀಗೆ ತನ್ನ ಭೀತಿ, ದುಃಖ, ಕೋರಿಕೆಗಳನ್ನು ಪರಿಹರಿಸಿಕೊಳ್ಳಲು ಮನುಷ್ಯನು ಎಷ್ಟೇ ಪ್ರಯತ್ನಗಳನ್ನು ಮಾಡಿದಾಗ್ಯೂ ಅವು ಮಾತ್ರ ಮನುಷ್ಯನನ್ನು ಬೆಂಬಿಡದೇ ಹಿಂಬಾಲಿಸುತ್ತಲೇ ಇವೆ.
ಹಾಗಾದರೆ ಮಾನವ ಬದುಕಿನ ರಹಸ್ಯ ಇಷ್ಟೇನಾ? ಎಲ್ಲರೂ ಅನುಭವಿಸುವುದನ್ನೇ ನಾನೂ ಅನುಭವಿಸಿ ಹೋಗಬೇಕೆ? ಅನುಭವಿಸುವುದಷ್ಟೇ ಜೀವನದ ಸಾರವೇ? ಯಾಕೆ ತಾನು ಪದೇ ಪದೇ ಈ ತಲ್ಲಣಗಳಿಗೆ ಒಳಗಾಗಬೇಕು? ಇವಕ್ಕೇನೂ ಪರಿಹಾರವೆಂಬುದು ಇಲ್ಲವೆ? ಅಥವಾ ಸಾವಿನ ತುದಿಯವರೆಗೂ ಈ ಸಮಸ್ಯೆಗಳು ಇರಲೇಬೇಕಾದ್ದು ಅನಿವಾರ್ಯವೇ? ಈ ತಲ್ಲಣ ಮತ್ತು ಸಮಸ್ಯೆಗಳ ಪ್ರವಾಹದಲ್ಲಿ ನಾವು ಬಾಯ್ದೆರೆದುಕೊಂಡೇ ಕೊಚ್ಚಿ ಹೋಗುತ್ತಾ ದುಃಖದಿಂದ, ಭೀತಿಗಳಿಂದ ಜೀವಿಸಿ ಬಿಡುತ್ತೇವೆ…
ಆದರೆ ಹೀಗೇಕೆ ನಡೆಯುತ್ತಿದೆ? ಮನುಷ್ಯ ಕೇವಲ ತಲ್ಲಣಗಳಲ್ಲಿ ಕಳೆದು ಹೋಗಲು ಹುಟ್ಟಿದನೆ? ಇಲ್ಲವೆ ಇವೆಲ್ಲಗಳಿಗೂ ಒಂದು ಪರಿಹಾರವಿದೆಯೇ? ಎಂದು ನಮ್ಮಲ್ಲಿ ನಾವು ಪ್ರಶ್ನಿಸಿಕೊಳ್ಳಲೇ ಬೇಕು. ನಮ್ಮ ಸಂತಮಹಂತರು ‘ನಿನ್ನ ನೀ ತಿಳಿ’ ಎಂದು ಹೇಳಿಹೋದರಲ್ಲ. ಒಂದು ವೇಳೆ ಇದು ಅಸಾಧ್ಯವೆಂದಾಗ ಯಾದೃಚ್ಚಿಕವಾಗಿ ಹೊರಗಣ ಜಗತ್ತನ್ನು ನೋಡಿಕೊಂಡೇ ಅದರಿಂದ ಪ್ರಭಾವಿಸಲ್ಪಡುವ ಹವ್ಯಾಸ- ಅಭ್ಯಾಸಗಳಿಗೆ ಬದುಕನ್ನು ಒಡ್ಡಿಕೊಳ್ಳುತ್ತಾ ಯಾಂತ್ರಿಕ ಜೀವನಕ್ಕೆ ತನ್ನನ್ನು ಬಲಿಕೊಟ್ಟುಕೊಂಡರೆ ನೈಜ ಸ್ವಾತಂತ್ರ್ಯದ ದಿವ್ಯಾನುಭೂತಿ ಖಂಡಿತ ಸಿಗಲಾರದು. ನಮಗೂ, ನಮ್ಮ ಸುತ್ತಲಿನ ಜಗತ್ತಿಗೂ ಒಳಿತಾಗುವ ವಿಸ್ಮಯವೊಂದು ನಮಗೆ ಸಿಗಲಾರದು. ಆದ್ದರಿಂದ ನಮ್ಮಿಂದ ನಮ್ಮನ್ನು ಸರಿಯಾಗಿ ಹುಡುಕಿಕೊಳ್ಳಬೇಕು, ಕಂಡುಕೊಳ್ಳಬೇಕು, ರಕ್ಷಿಸಿಕೊಳ್ಳಬೇಕು ಹಾಗೂ ತನ್ನಲ್ಲಿ ತಾನು ಎಚ್ಚರವಾಗಿರುವುದನ್ನು ಅರಸಬೇಕು. ಶಿವಶರಣೆ ಅಕ್ಕ ಹೇಳುತ್ತಾರೆ-
ಎಲ್ಲ ಎಲ್ಲವನರಿದು ಫಲವೇನಯ್ಯಾ,
ತನ್ನ ತಾನರಿಯಬೇಕಲ್ಲದೆ?
ತನ್ನಲ್ಲಿ ಅರಿವು ಸ್ವಯವಾಗಿರಲು
ಅನ್ಯರ ಕೇಳಲುಂಟೆ?
ಚೆನ್ನಮಲ್ಲಿಕಾರ್ಜುನಾ,
ನೀನರಿವಾಗಿ ಮುಂದುದೋರಿದ ಕಾರಣ
ನಿಮ್ಮಿಂದ ನಿಮ್ಮನರಿದೆನಯ್ಯಾ ಪ್ರಭುವೆ.
ಆದರೆ ಸಾಮಾನ್ಯ ಮನುಷ್ಯರಾದ ನಮಗೆ ಒಳನೋಟದ ಕಣ್ಣು ಪೂರ್ತಿ ಕುರುಡಾಗಿರುವುದರಿಂದ ನಮ್ಮನ್ನು ನಾವು ಅರಸುವುದು ಸಾಧ್ಯವಿಲ್ಲವೆಂದು ತೀರ್ಮಾನಿಸಿಬಿಡುತ್ತೇವೆ. ಈ ನಡೆ ಸಂತರಿಗೆ ಸಂಬಂಧಿಸಿದ್ದು ನಾವು ಎಷ್ಟಾದರೂ ಸಾಮಾನ್ಯ ಮನುಷ್ಯರಲ್ಲವೆ? ಆದ್ದರಿಂದ ಎಲ್ಲರ ಪಾಡು ನನ್ನ ಪಾಡೆಂದು ಆಯ್ಕೆ ಮಾಡಿಕೊಳ್ಳುತ್ತೇವೆ. ಜೀವನದಲ್ಲಿ ಮೌಲಿಕ ಪ್ರಶ್ನೆಗಳನ್ನು ಹಾಕಿಕೊಳ್ಳಲಾರೆವು. ಸಮಸ್ತ ತಲ್ಲಣಗಳಿಗೂ ನಮ್ಮೊಳಗೆ ಪರಿಹಾರವಿದೆ ಎಂಬ ಸಣ್ಣ ಸುಳಿವೂ ನಮ್ಮಲ್ಲಿ ಉದ್ಭವಿಸುವುದಿಲ್ಲ. ಆದ್ದರಿಂದ ಹೊರಗಣವನ್ನು ನೋಡೇ ಎಲ್ಲವನ್ನೂ ಅನುಕರಿಸುತ್ತಾ ಜೀವಿಸಿಬಿಡುತ್ತೇವೆ.
ಬಹಳಷ್ಟು ಸಂದರ್ಭಗಳಲ್ಲಿ ಎಲ್ಲಾ ತಲ್ಲಣ, ಭಯ, ದುಃಖ, ಕೋರಿಕೆಗಳಿಂದ ಸಾಕುಸಾಕಾಗಿ ಸ್ವಲ್ಪ ಕಾಲ ಇವೆಲ್ಲವುಗಳಿಂದ ಪಲಾಯನವಾಗಿ ವಿರಮಿಸಿಕೊಂಡರೆ ಸಾಕೆನಿಸಿಬಿಡುತ್ತದೆ. ಇಲ್ಲವೆ ಯಾರಾದರೂ ಮಿತ್ರರು ಸೂಚಿಸುವ ಸಲಹೆ ಮತ್ತು ಪರಿಹಾರೋಪಾಯಗಳ ಕಡೆ ಕಾಯುತ್ತೇವೆ. ಹೇಗಾದರೂ ಮಾಡಿ ಈ ಜಂಜಾಟಗಳಿಂದ ಸ್ವಲ್ಪ ಕಾಲವಾದರೂ ವಿರಮಿಸಿಕೊಳ್ಳಬೇಕೆಂದು ಉಪಶಮನದ ಉಪಾಯಗಳೆಡೆಗೆ ಯೋಚಿಸುತ್ತಿರುತ್ತೇವೆ. ಆದರೆ ಇಂತಹ ಯಾವುದೇ ಸಲಹೆಗಳು, ಉಪಶಮೆಗಳು ಶಾಶ್ವತವಾದ ಪರಿಹಾರವನ್ನು ಸೂಚಿಸಿದವೆ? ಮತ್ತೆ ಮತ್ತೆ ಅದೇ ಸಮಸ್ಯೆಗಳು ತಲೆದೋರುತ್ತಲೇ ಇವೆ. ದುಃಖಗಳು, ಕೋರಿಕೆಗಳು, ಭೀತಿಗಳು ಮತ್ತವುಗಳ ಸಹ ಉತ್ಪನ್ನಗಳಾದ ಅಸಹನೆ, ಅಸಂತೃಪ್ತಿ, ಅವಮಾನಗಳು ಪುನರ್ಭವಿಸುತ್ತಲೇ ಇವೆ.
ಇಲ್ಲೊಂದು ಉದಾಹರಣೆಯನ್ನು ಕೊಡುವುದಾದರೆ ಒಬ್ಬ ರೋಗಿಗೆ ಪ್ರತಿದಿನ ತೀವ್ರವಾದ ತಲೆನೋವು ಬರುತ್ತಿದೆ. ಆತ ಊಟ, ನೀರು, ವ್ಯವಹಾರ ಎಲ್ಲವನ್ನೂ ತೊರೆದು ಹಾಸಿಗೆ ಹಿಡಿದಿದ್ದ. ವೈದ್ಯರು ಬಂದು ಅವನ ಸ್ಥಿತಿಯನ್ನೂ, ಅವನ ಚಡಪಡಿಸುವಿಕೆಯನ್ನೂ ನೋಡಿ, ಅವನಿಗೆ ನೋವು ನಿವಾರಕ ಔಷಧಿ ಕೊಟ್ಟು ಹೋದರು. ಔಷಧಿ ಸ್ವೀಕರಿಸಿದ ಸ್ವಲ್ಪ ಕಾಲಕ್ಕೆ ಆ ರೋಗಿಯ ತಲೆನೋವು ಮಾಯವಾಗಿತ್ತು. ಎರಡು-ಮೂರು ದಿನ ಔಷಧಿ ಸೇವಿಸಿ ಮುಗಿಸಿದ. ಔಷಧಿ ಮುಗಿದ ನಂತರ ಮತ್ತದೇ ತಲೆನೋವು. ಮತ್ತೆ ಅದೇ ಚಡಪಡಿಕೆ. ಇದರಿಂದ ನಮಗೆ ತಿಳಿಯುವುದೇನೆಂದರೆ ರೋಗವನ್ನು ಪರಿಹರಿಸಿಕೊಂಡರೆ ಸಾಕೆ? ಅಥವಾ ರೋಗದ ಮೂಲವನ್ನು ಕಂಡುಹಿಡಿದು ಮೂಲಕ್ಕೆ ಚಿಕಿತ್ಸೆ ಮಾಡಬೇಕೆ? ರೋಗದ ಮೂಲಕಾರಣ ಹುಡುಕಿ ಅದಕ್ಕೆ ಚಿಕಿತ್ಸೆ ಮಾಡಿದರೆ ಮಾತ್ರ ರೋಗ ಪೂರ್ತಿಯಾಗಿ ಉಪಶಮನವಾಗುತ್ತದೆ.
ಹಾಗೆಯೇ ಸದಾ ಉಧ್ವಸ್ಥಗೊಂಡ ಮನಸ್ಸಿನಲ್ಲಿ ಉಂಟಾಗುತ್ತಿರುವ ಭಯ, ದುಃಖ, ಕೋರಿಕೆ, ಅವಮಾನ, ಅಸಂತೃಪ್ತಿ, ಅಸಹನೆ, ಸ್ವಹಿತಾಸಕ್ತಿ ಇತ್ಯಾದಿ ರೋಗಗಳ ಮೂಲ ಎಲ್ಲಿದೆ ಎಂದು ನಾವು ನಮ್ಮೊಳಗೆ ಗಮನಿಸಿ ಕಂಡುಹಿಡಿದಾಗ, ಪ್ರತಿಕ್ಷಣ ನಾವು ಯಾವುದನ್ನು ಹಿಂಬಾಲಿಸಿ ಬದುಕುತ್ತಿದ್ದೇವೆಯೋ ಅದೇ ಮೂಲ ಕಾರಣ! ಅದು ‘ನಾನು’!!! ಪೂರ್ವಾಪರವಾದ ನೆನಪುಗಳಿಗೆ ಸಂಬಂಧಿಸಿದ ಕೇಂದ್ರ ಬಿಂದು ಒಂದಿದೆ. ಅದೇ ‘ನಾನು’!
ನಮ್ಮ ಪ್ರತಿ ಮಾತಿನಲ್ಲಿಯೂ, ಪ್ರತಿ ದೃಕ್ಕೋನದಲ್ಲಿಯೂ, ನಮ್ಮ ಪ್ರತಿ ನೆನಪಿನಲ್ಲಿಯೂ ನಾವು ದಿನವೊಂದಕ್ಕೆ ಅದೆಷ್ಟು ಬಾರಿ ನಾನು, ನನಗಾಗಿ, ನನ್ನಿಂದ, ಎಂದು ಪ್ರಯೋಗಿಸುತ್ತಿದ್ದೇವೆ? ನಾನು- ಆಲೋಚನೆಗಳಲ್ಲಿ ಸರಿ, ನಾನು- ಮಾತಿನಲ್ಲಿ ಸರಿ, ನಾನು- ಜ್ಞಾನದಲ್ಲಿ ಉನ್ನತ, ನಾನು- ಪ್ರಾಮಾಣಿಕತೆಯಲ್ಲಿ ಮಿಗಿಲು, ನಾನು- ಸಂಪತ್ತಿನಲ್ಲಿ ಉನ್ನತ, ನಾನು- ಬಣ್ಣದಲ್ಲಿ ಉನ್ನತ, ನಾನು- ಜಾತಿಯಲ್ಲಿ ಉನ್ನತ, ನಾನು- ದೈವಾರಾಧನೆಗಳಲ್ಲಿ ಶ್ರೇಷ್ಠ, ನಾನು- ಇತರರಿಗೆ ನೀಡುವ ಮಾರ್ಗದರ್ಶನಗಳಲ್ಲಿ ಶ್ರೇಷ್ಠ… ಹೀಗೆ ನಾನುವಿನ ಸ್ಮರಣೆಯಲ್ಲಿಯೇ ನಾನು ತನ್ಮಯತ್ವವನ್ನು ಹೊಂದಿದೆ. ನಾನು ನಾನುವನ್ನೇ ನಿರಂತರವಾಗಿ ಧ್ಯಾನಿಸುತ್ತಿದೆ. ನಾನುವನ್ನು, ಅದರ ಉನ್ನತಿಯನ್ನು ಸುತ್ತಲ ಸಮಾಜವು ಉನ್ನತ ಸಂಘಟನೆಯನ್ನಾಗಿ ಒಪ್ಪಿಕೊಳ್ಳಬೇಕೆಂದೋ ಅಥವಾ ನಂಬಬೇಕೆಂದೋ ನಾನುವೇ ಒತ್ತಾಯಿಸುತ್ತಿದೆ.
ಈ ನಾನು ಮನುಷ್ಯನಲ್ಲಿ ಅಸಂಖ್ಯಾತ ರೂಪಗಳಲ್ಲಿ ಪ್ರಕಟವಾಗಬಹುದು. ಆದರೆ ಅದರ ರೂಪಗಳು ಎಷ್ಟೇ ಇದ್ದರೂ ನಾನುವಿನ ಕಾರ್ಯಕ್ಷಮತೆ ಒಂದೇ ತೆರನಾದದ್ದು. ಈ ನಾನು ಎಂಬ ದೃಕ್ಕೋನ ಅನಂತವಾದ ನಿಸರ್ಗ ತತ್ವದಿಂದ ತನ್ನನ್ನು ಪೂರ್ತಿಯಾಗಿ ‘ಬೇರೆ’ ಎಂದು ತನ್ನನ್ನು ಪ್ರತ್ಯೇಕಿಸಿಕೊಂಡು ಅದಕ್ಕೆ ತಕ್ಕುದಾದ ಭಾವನಾ ಲೋಕವನ್ನು ಸೃಷ್ಟಿಸಿಕೊಂಡಿರುತ್ತದೆ. ಆದ್ದರಿಂದ ಎದುರಿನ ಪ್ರಪಂಚವನ್ನು ತನ್ನ ಸುಖಕ್ಕಾಗಿ, ತನ್ನ ಒಳಿತಿಗಾಗಿ, ತನ್ನ ಲಾಭಕ್ಕಾಗಿ ಎಂದು ಅರ್ಥೈಸಿಕೊಂಡಿರುತ್ತದೆ.
ವಾಸ್ತವಿಕ ಸತ್ಯವೇ ಬೇರೆ ಇದೆ. ಮನುಷ್ಯನ ಜೈವಿಕ ಕ್ರಿಯಾ ಸ್ವರೂಪ ಸಂಬಂಧ ಈ ನಿಸರ್ಗ ಮತ್ತು ಸಮಾಜದಿಂದ ಬೇರೆಯಾಗಿರುವುದಿಲ್ಲ. ನಿಸರ್ಗ ಮತ್ತು ಸಮಾಜದೊಂದಿಗೆ ನಮಗೊಂದು ಸಾಮರಸ್ಯದ ಸಂಬಂಧವಿರುತ್ತದೆ. ಆದ್ದರಿಂದ ಶಿವಶರಣರು ಈ ‘ನಾನು’ ಎಂಬ ಪ್ರತ್ಯೇಕತೆಯನ್ನು ಅಹಂಕಾರವೆಂದರು.
ಅಹಂಕಾರ ಮನವನಿಂಬುಗೊಂಡಲ್ಲಿ ಲಿಂಗ ತಾನೆಲ್ಲಿಪ್ಪುದೊ
ಅಹಂಕಾರಕ್ಕೆ ಎಡೆಗೊಡದೆ ಲಿಂಗತನುವಾಗಿರಬೇಕು.
ಅಹಂಕಾರರಹಿತವಾದಲ್ಲಿ ಸನ್ನಿಹಿತ ಕಾಣಾ
ಕೂಡಲಸಂಗಮದೇವ.
ಈ ನಾನುವಿನ ಗುಣಸ್ವಭಾವ ಗತಿಗಳನ್ನು ಪೂರ್ತಿಯಾಗಿ ಸಂಶೋಧಿಸಿ, ಅದರ ವಸ್ತುಸ್ಥಿತಿಯನ್ನು ಕಂಡುಹಿಡಿಯದೇ ಇದ್ದಲ್ಲಿ ಇದರಿಂದ ಬಿಡುಗಡೆ ಸಾಧ್ಯವಿಲ್ಲ. ಉದಾಹರಣೆಗೆ ನಮಗೆ ಅತ್ಯಂತ ಪ್ರೀತಿಪಾತ್ರನಾದ ಒಬ್ಬ ಸ್ನೇಹಿತನಿದ್ದಾನೆ ಎಂದಿಟ್ಟುಕೊಳ್ಳೋಣ. ಅವನ ಸ್ನೇಹ ಸಂಬಂಧದಿಂದ ನಮಗೆ ಅನೇಕ ಇಕ್ಕಟ್ಟು ಬಿಕ್ಕಟ್ಟುಗಳು ಉಂಟಾಗುತ್ತಿವೆ ಎಂಬುದು ನಮ್ಮ ಗಮನಕ್ಕೆ ಬಂದರೆ ಅವನಿಂದ ಸ್ವಲ್ಪ ಸ್ವಲ್ಪ ದೂರ ಹೋಗಲು ಪ್ರಾರಂಭಿಸುತ್ತೇವೆ. ಈ ನಾನುವಿನ ಸಖ್ಯವೂ ಅಷ್ಟೇ. ನಾನುವು ಉತ್ಪಾದಿಸುವ ಬಿಕ್ಕಟ್ಟುಗಳು ನಮಗೆ ಅರಿವಾದಂತೆ ಅಲ್ಲಿಂದ ನಿರ್ಗಮಿಸಲು ಪ್ರಾರಂಭಿಸುತ್ತೇವೆ! ಈ ನಾನು ಎಂಬುದು ಅಗಾಧವಾದದ್ದೇ, ಅದನ್ನು ಕಂಡುಹಿಡಿಯುವುದು ಕಷ್ಟ! ಏಕೆಂದರೆ ದಿನವೊಂದಕ್ಕೆ ಅನೇಕ ರೂಪಾಂತರಗಳಲ್ಲಿ ತನ್ನ ಕಾರ್ಯವನ್ನು ನಿಯೋಜಿಸುವ ಅದು ನಿರ್ದೇಹಿ! ಅದಕ್ಕೆ ದೇಹವಿಲ್ಲ. ಆದರೆ ನಾನುವಿನ ಕ್ರಿಯಾಸ್ವರೂಪದ ಅನುಭೋಗಿದಾರ ನಾನುವೇ ಆಗಿರುವುದರಿಂದ ಅದರ ಪ್ರವೃತ್ತಿಗಳನ್ನು ಗ್ರಹಿಸಲು ಸಾಧ್ಯವಿದೆ. ನಾನುವಿನ ದೃಕ್ಕೋನದ ಕೇಂದ್ರದಿಂದಲೇ ದುಃಖ, ಭಯ, ಕೋರಿಕೆ, ಅಸಹನೆ, ಅಸಂತೃಪ್ತಿ, ಇತ್ಯಾದಿ ಒತ್ತಡಗಳು ಹುಟ್ಟನ್ನು ಪಡೆಯುತ್ತಿವೆ.
ಸದಾ ನಾನುವಿನಿಂದ ಉತ್ಪಾದಿಸಲ್ಪಟ್ಟ ದುಃಖ, ಭಯ, ಇತ್ಯಾದಿ ಸಮಸ್ಯೆಗಳಲ್ಲಿ ಗಮನ ಸಿಲುಕಿಕೊಂಡು ಅಲ್ಲೇ ತೊಳಲಾಡುತ್ತಿದ್ದೇವಲ್ಲದೆ, ಇವೆಲ್ಲಗಳಿಗೂ ಜನ್ಮದಾತೆಯಾಗಿರುವ ‘ನಾನು’ವನ್ನು ಎಂದೂ ಪರಿಶೋಧಿಸಲಿಲ್ಲ. ಹೀಗೆ ಅದನ್ನು ವಿವೇಚಿಸಿದಾಗ – ದುಃಖವು ನನಗಲ್ಲ; ಭಯವು ನನಗಲ್ಲ; ಸಮಸ್ಯೆಗಳು ನನಗಲ್ಲ; ಒತ್ತಡಗಳು ನನಗಲ್ಲ… ನಾನೇ ದುಃಖವಾಗಿದ್ದೇನೆ, ನಾನೇ ಭಯವಾಗಿದ್ದೇನೆ, ನಾನೇ ಎಲ್ಲಾ ಸಮಸ್ಯೆಗಳಿಗೂ ಮೂಲಕಾರಣ. ಆದರೆ ನಾವು ಈ ನೆಲೆಯ ಆಳದಲ್ಲಿ ಗಮನಿಸದೇ ಎಲ್ಲಾ ದುಃಖಕ್ಕೂ ಹೊರಗಣ ಪ್ರಪಂಚದಲ್ಲಿ ಪರಿಹಾರವಿದೆ ಎಂದು ನಂಬುತ್ತಾ ಓಡುತ್ತಿರುತ್ತೇವೆ.
ಗಿಳಿಯೋದಿ ಫಲವೇನು
ಬೆಕ್ಕು ಬಹುದ ಹೇಳಲರಿಯದು.
ಜಗವೆಲ್ಲವ ಕಾಬ ಕಣ್ಣು,
ತನ್ನ ಕೊಂಬ ಕೊಲ್ಲೆಯ ಕಾಣಲರಿಯದು.
ಇದಿರ ಗುಣವ ಬಲ್ಲೆವೆಂಬರು, ತಮ್ಮ ಗುಣವನರಿಯರು,
ಕೂಡಲಸಂಗಮದೇವಾ.
ಜಗವೆಲ್ಲವ ಕಾಬ ಕಣ್ಣು, ತನ್ನ ಕೊಂಬ ಕೊಲ್ಲೆಯ ಕಾಣಲರಿಯದು- ಈ ಸಾಲು ಏನನ್ನು ಹೇಳುತ್ತಿದೆ? ಹೊರಗಿನ ಜಗತ್ತನ್ನೆಲ್ಲಾ ನೋಡುತ್ತಿರುವ ಕಣ್ಣಿಗೆ ತಾನೇ ಬೆಳೆಸಿಕೊಂಡಿರುವ ‘ನಾನು’ ಎಂಬ ಹರಿತವಾದ ಕೊಂಬು ತನ್ನನ್ನೇ ಕೊಲ್ಲುವುದ ಕಾಣಲರಿಯದು ಎನ್ನುತ್ತಿದೆ. ಸಮಸ್ಯೆಗಳೆಲ್ಲಕ್ಕೂ (ಭವ) ಜನ್ಮ ನೀಡುತ್ತಿರುವ ‘ನಾನು’ವನ್ನು ಗಮನಿಸದೇ ಈ ಕೇಂದ್ರದಿಂದ ಉತ್ಪನ್ನವಾಗುತ್ತಿರುವ ತಲ್ಲಣಗಳಲ್ಲೇ ಕಳೆದುಹೋಗಿದ್ದೇವೆ. ಪರಿಹಾರಕ್ಕಾಗಿ ಹೊರಗಿನ ಜಗತ್ತಿನೆಡೆಗೆ ಬಾಯ್ದೆರೆದುಕೊಂಡಿದ್ದೇವೆ. ನಾನುವಿನ ಗುಣಸ್ವಭಾವ ತಿಳಿದುಕೊಳ್ಳಲು ಪ್ರಯತ್ನಿಸುವುದಿಲ್ಲ. ಅದಕ್ಕಾಗಿ ಬಸವಣ್ಣನವರು ‘ಇದಿರ ಗುಣವ ಬಲ್ಲೆವೆಂಬರು, ತಮ್ಮ ಗುಣವನ್ನರಿಯರು’, ಎನ್ನುತ್ತಾ ‘ನಾನು’ವಿನ ಗುಣಸ್ವಭಾವ ಅರಿಯೆಂದು ಸೂಚಿಸುತ್ತಿದ್ದಾರೆ. ಈ ನಾನುವಿನ ಗುಣ, ಹೊಲಬು ಮತ್ತು ಅದರ ನಿರ್ಮಾಣ ವಿನ್ಯಾಸಗಳನ್ನು ತಿಳಿದುಕೊಳ್ಳಲು ಖಂಡಿತವಾಗಿಯೂ ಸಾಧ್ಯವಿದೆ. ಕಾರಣ ಕಾರ್ಯ ಪ್ರಕ್ರಿಯೆಯನ್ನು ಆಧರಿಸಿದ ವೈಚಾರಿಕ ಶೀಲ ನಮ್ಮಲ್ಲಿರಬೇಕು. ಈ ನಾನುವಿನ ಚಲನವಲನಗಳನ್ನು ವಿಶ್ಲೇಷಿಸಿಕೊಳ್ಳುವ ದಿಟ್ಟವಾದ ಒಳನೋಟವಿದ್ದರೆ ಸಾಕು.
ಒಂದು ಲೇಖನವನ್ನು ಓದುವ ಪ್ರಕ್ರಿಯೆಗೂ ಆ ಲೇಖನವನ್ನು ಓದುವವನನ್ನು ಗಮನಿಸುತ್ತಾ ಓದುವುದಕ್ಕೂ ಬಹಳ ವ್ಯತ್ಯಾಸವಿದೆ. ಹೊರಗಿನ ಜಗತ್ತನ್ನು ಓದಿಕೊಳ್ಳುತ್ತಿರುವವನು ನಮ್ಮೊಳಗೊಬ್ಬನಿದ್ದಾನೆ. ಅವನೇ ನಾನು! ಹೊರಗಿನ ಜಗತ್ತನ್ನು ಏಕೆ ಹಾಗೆ ಓದಿ ಗ್ರಹಿಸಿಕೊಳ್ಳುತ್ತಿದ್ದಾನೆ? ಹಾಗೆ ಅವನು ಓದಿಕೊಳ್ಳುತ್ತಿರುವ ಉದ್ದೇಶವಾದರೂ ಏನು? ಎಂಬುದನ್ನು ಆಳವಾಗಿ ಗಮನಿಸಬೇಕು! ನಾನುವಿನಲ್ಲಿದ್ದುಕೊಂಡೇ ಸ್ವಯಂಚಿಂತನೆಯಿಂದ ನಾನುವನ್ನು ಓದಿಕೊಳ್ಳಬೇಕು! ಒಂದರ ನಂತರ ಮತ್ತೊಂದರಂತೆ ‘ನಾನು’ ಹುಟ್ಟಿಸುತ್ತಿರುವ ಉತ್ಪನ್ನಗಳಿಗೆ ಬಲಿಯಾಗದೇ ಅವನ್ನು ಉಪೇಕ್ಷಿಸಿಕೊಳ್ಳುತ್ತಾ ‘ನಾನು’ವಿನ ಅಂತಃಸತ್ವ ಹೇಗೆ ಘಟಿಸುತ್ತಿದೆ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.
ತನ್ನ ತಾ ಸ್ವಯಂ ಪರಿಶೀಲಿಸಿಕೊಳ್ಳುವ ಈ ಪ್ರಕ್ರಿಯೆ ನಾವು ಯಾಕಾಗಿ ಮಾಡುತ್ತಿದ್ದೇವೆ ಎಂಬ ಸ್ಪಷ್ಟತೆ ಕೂಡ ಇಲ್ಲಿ ಬಹಳ ಮುಖ್ಯ. ಈ ಪ್ರಯತ್ನ ದುಃಖವನ್ನು ಕೆಲಕಾಲ ನಿರ್ಬಂಧಿಸಿ ಹಾಯಾಗಿರುವುದಕ್ಕಲ್ಲ. ಇಲ್ಲವೆ ಆಸೆಗಳನ್ನು ಪೂರೈಸಿಕೊಳ್ಳಲೂ ಅಲ್ಲ. ನಾನುವನ್ನು ನಾನು ತಿಳಿದುಕೊಳ್ಳಬೇಕೆಂಬ ಅತೀವವಾದ ಆಸೆ ಕೂಡ ನಾನುವೇ ಆಗುವ ಅಪಾಯದಲ್ಲಿ ಸಿಕ್ಕಿಕೊಳ್ಳುವ ಪ್ರಮೇಯ ಇಲ್ಲಿ ಉಂಟಾಗಬಹುದು. ನಾನುವಿನ ಗುಣ, ಹೊಲಬು, ಮತ್ತದರ ನಿರ್ಮಾಣ ಹೇಗಿದೆಯೋ ಅದನ್ನು ಹಾಗೆಯೇ ತಿಳಿದುಕೊಳ್ಳುವುದಷ್ಟೇ ಇಲ್ಲಿ ಮುಖ್ಯ. ಮೊದಲು ರೋಗ ಕಾರಣವನ್ನು ಪತ್ತೆ ಹಚ್ಚದೆ ಚಿಕಿತ್ಸೆ ಸಾಧ್ಯವಿಲ್ಲಾ.
ನಾನುವಿನ ಗುಣಸ್ವಭಾವ ಮತ್ತದರ ಹೊಲಬನ್ನು ತಿಳಿಯುವುದು ಶರಣರಲ್ಲಿಯೂ ಬಹಳ ಮಹತ್ವದ ಘಟ್ಟವಾಗಿತ್ತು. ಮನುಷ್ಯರನ್ನು ಮನುಷ್ಯರನ್ನಾಗಿ ಪುನರ್ ನಿರ್ಮಿಸಲು ಅನುಭವ ಮಂಟಪದಲ್ಲಿ ಬಸವಾದಿಗಳು ಸೃಜಿಸಿದ ‘ತನ್ನ ತಾ ತಿಳಿಯಬೇಕೆಂಬ’ ನಡೆ ಅಂತರಂಗವನ್ನು ಸ್ವಯಂ ವಿಶ್ಲೇಷಿಸಿಕೊಳ್ಳುವ ಸಾಧಕ ಜೀವನದ ಮುಖ್ಯ ಮೌಲ್ಯವಾಗಿದೆ.
ಸತ್ತು ಹುಟ್ಟಿ ಕೆಟ್ಟವರೆಲ್ಲರು,
ದೇವಲೋಕಕ್ಕೆ ಹೋದರೆಂಬ ಬಾಲಭಾಷೆಯ ಕೇಳಲಾಗದು.
ಸಾಯದ ಮುನ್ನ ಸ್ವಯವನರಿದಡೆ
ದೇವನೊಲಿವ ನಮ್ಮ ಗುಹೇಶ್ವರನು.
ಸಾಯದ ಮುನ್ನ ಸ್ವಯವನರಿದಡೆ- ಎಂಬ ಸೂಚನೆ ದೇವನೊಲಿಯುವ ಸದ್ಗತಿಗಿಂತ ಮುನ್ನಿನದು. ಸದ್ಗತಿ ದೊರೆಯಬೇಕೆಂದರೆ ಸಾಯದ ಮುನ್ನ ನಾನೆಂಬ ಸ್ವಯವನ್ನು ಅರಿಯಲೇ ಬೇಕು ಎಂದಾಯ್ತು ಅಲ್ಲವೆ?
ಹಾಗಾದರೆ ‘ನಾನು’ ಎನ್ನುವುದು ಏನದು? ಅದರ ಗುಣಸ್ವಭಾವ ಎಂತಹದ್ದು? ಅದರ ಹೊಲಬೆಲ್ಲಿದೆ? ಎಂಬಿತ್ಯಾದಿ ಪ್ರಶ್ನೆಗಳನ್ನಿಟ್ಟುಕೊಂಡು ನಾನುವಿನಲ್ಲೇ ನೋಡಿದರೆ… ಹುಟ್ಟಿದಾಗಿನಿಂದ ಮರಣಾಂತ್ಯದವರೆವಿಗೂ ನಾನುವು ಇದಿರಿನ ಮಾನವ ಲೋಕದ ಅನುಸಂಧಾನದಲ್ಲಿಯೇ ನಿಮಗ್ನವಾಗಿರುತ್ತದೆ. ಈ ನಿಮಗ್ನತೆಯಿಂದಾಗಿ ಅದು ಸದಾ ಒಂದಿಲ್ಲೊಂದು ಅನುಭವಗಳನ್ನು ಗಳಿಸಿಕೊಳ್ಳುತ್ತಲೇ ಇರುತ್ತದೆ. ಎಲ್ಲಾ ಅನುಭವಗಳೂ ನಾನುವಿನ ದೃಕ್ಕೋನಕ್ಕನುಗುಣವಾಗಿಯೇ ನಮ್ಮೊಳಗೆ ಜೋಡಣೆಯಾಗುತ್ತಾ ಹೋಗುತ್ತವೆ. ಎಲ್ಲಾ ಅನುಭವಗಳಲ್ಲಿ ಸ್ವಹಿತವನ್ನೇ ಬಯಸುವುದು ದೃಕ್ಕೋನದ ಮುಖ್ಯ ಸ್ವಭಾವ. ದೃಕ್ಕೋನವು ಭಾಷೆಯೊಂದಿಗೆ ಒಡನಾಡಿದಾಗ ಅದು ವಿಷಯ ಜ್ಞಾನಗಳಾಗಿ ಬದಲಾಗುತ್ತದೆ. ಅವು ಎಂತಹ ವಿಷಯಜ್ಞಾನಗಳು?? ಇದು ನನಗೆ ಇಷ್ಟ, ಇದು ನನಗೆ ಇಷ್ಟವಿಲ್ಲ; ಇದು ಚೆನ್ನಾಗಿದೆ, ಅದು ಚೆನ್ನಾಗಿಲ್ಲ; ಇದು ಕಷ್ಟ, ಅದು ಸುಲಭ; ಇದು ಮಧುರವಾಗಿದೆ, ಇದು ಮಧುರವಾಗಿಲ್ಲ; ಇದು ಸುವಿಚಾರ, ಅದು ಸುವಿಚಾರವಲ್ಲ; ಇದು ಸಖ್ಯ, ಅದು ಅಸಖ್ಯ; ಇದು ಸುಂದರವಾಗಿಲ್ಲ, ಅದು ಸುಂದರವಾಗಿದೆ; ಇದು ಬೇಕು, ಅದು ಬೇಡ… ಎಂಬ ದ್ವಂದ್ವ ಜ್ಞಾನಗಳು ಅಥವಾ ಭಿನ್ನಬೇಧಗಳನ್ನು ಹಿಂದಿನ ಅನುಭವಗಳಿಂದಲೇ ಗ್ರಹಿಸುತ್ತಿದ್ದೇವೆ. ಅಂದರೆ ಹಿಂದಿನ ಅನುಭವಗಳ ಪರಿಣಾಮ ದ್ವಂದ್ವ ಅಥವಾ ಭಿನ್ನಾಭಿಪ್ರಾಯಗಳಾಗಿ ತೋರುತ್ತಿವೆ… ಹೀಗೆ ಗಳಿಸಿದ ಜ್ಞಾನಗಳೆಲ್ಲವೂ ಸ್ಮೃತಿಕೋಶದಲ್ಲಿ ನೆನಪುಗಳಾಗಿ ಸಂಗ್ರಹವಾಗುತ್ತವೆ.
ದಿನಂಪ್ರತಿ ಲೌಕಿಕ ಜೀವನದಲ್ಲಿ ನಾವು ಅನೇಕ ವ್ಯಕ್ತಿ, ವಿಷಯ, ವಸ್ತುಗಳನ್ನು ಎದುರುಗೊಳ್ಳಬೇಕಾದುದು ತೀರಾ ಸ್ವಾಭಾವಿಕವಾಗಿದೆ. ಹೀಗೆ ವಿಷಯಗಳನ್ನು ಎದುರುಗೊಂಡಾಗಲೋ, ಯಾವುದಾದರೂ ಅನಿರೀಕ್ಷಿತ ಸನ್ನಿವೇಶವನ್ನು ಅನುಸಂಧಿಸುವಾಗಲೋ, ಇಲ್ಲವೇ ಸವಾಲುಗಳನ್ನು ಮುಖಾಮುಖಿಯಾಗುವಾಗಲೋ, ಇಲ್ಲವೇ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗಲೋ ಈ ಎಲ್ಲಾ ಸಂಘಟನೆಗಳನ್ನು ಎಲ್ಲಿಂದ ಗ್ರಹಿಸುತ್ತಿದ್ದೇವೆ? ಎಂದು ಗಮನಿಸಿದಾಗ, ಸ್ಮೃತಿಕೋಶದಲ್ಲಿ ಸಂಚಯವಾಗಿರುವ ನೆನಪುಗಳಿಂದಲೇ ನೋಡುತ್ತಿದ್ದೇವೆ! ಅಲ್ಲಿಂದಲೇ ಪ್ರತಿಸ್ಪಂದಿಸುತ್ತಿದ್ದೇವೆ ಎಂಬುದರಲ್ಲಿ ಯಾವ ಅನುಮಾನಗಳೂ ಇಲ್ಲ.
ಉದಾಹರಣೆಗೆ ಯಾವುದೋ ಒಂದು ಸ್ಥಳದಲ್ಲಿ ನಾವು ನಮ್ಮ ಇಷ್ಟದ ಗೆಳೆಯರೊಂದಿಗೆ ಹರಟೆಕೊಚ್ಚಿಕೊಂಡು ಬಹಳ ಸಂತಸದಿಂದಿರುತ್ತೇವೆ ಎಂದಿಟ್ಟುಕೊಳ್ಳೋಣ. ಅದೇ ಸಮಯಕ್ಕೆ ನಾವು ಅತಿಯಾಗಿ ದ್ವೇಷಿಸುವ ವ್ಯಕ್ತಿ ಹಾಜರಾಗುತ್ತಾನೆ ಎಂದುಕೊಳ್ಳೋಣ, ಆಗ ನಮ್ಮಲ್ಲಿ ಇದುವರೆವಿಗೂ ಇದ್ದ ಸಂತೋಷ ಇರಲಾರದು. ಒಂದು ವೇಳೆ ಅದೇ ಜಾಗಕ್ಕೆ ನಮ್ಮ ಪ್ರೀತಿಪಾತ್ರರು ಬಂದರೆ? ನಮ್ಮ ಸಂತೋಷ ದ್ವಿಗುಣವಾಗಬಹುದು! ನಾವು ತುಂಬಾ ಹೆದರಿಕೊಳ್ಳುವ ವ್ಯಕ್ತಿ ಹಾಜರಾದರೆ ನಮ್ಮಲ್ಲಿ ಭಯವುಂಟಾಗಬಹುದು! ನಾವು ಭಯಪಡುವ ವ್ಯಕ್ತಿ, ನಾವು ಪ್ರೀತಿಸುವ ವ್ಯಕ್ತಿ, ನಾವು ಅಸೂಯೆಪಡುವ ವ್ಯಕ್ತಿ, ನಾವು ದ್ವೇಷಿಸುವ ವ್ಯಕ್ತಿ ಎದುರುಗೊಂಡಾಗ ಕಳವಳಕ್ಕೀಡಾಗುವ ಆಲೋಚನೆಗಳು ಆಯಾಯ ಸಂದರ್ಭಕ್ಕನುಗುಣವಾಗಿ ಬೇರೆಬೇರೆಯದೇ ಆದ ಅನುಭವಗಳನ್ನು ಹೊಂದುತ್ತವೆಯಾದ್ದರಿಂದ ಆ ಅನುಭವಗಳನ್ನು ಆ ಕ್ಷಣದ ಆಲೋಚನೆಗಳಾಗಿ ಎಲ್ಲಿಂದ ತೆಗೆದುಕೊಳ್ಳುತ್ತಿದ್ದೇವೆ… ಇದನ್ನು ಗಮನಿಸಿದಾದ ಅದು ಹಿಂದಿನ ನೆನಪುಗಳಿಂದ ಮತ್ತು ಅನುಭವಗಳಿಂದಲೇ ತೆಗೆದುಕೊಳ್ಳುತ್ತಿದೆ! ನೋಡುತ್ತಿದೆ! ಅಲ್ಲಿಂದಲೇ ಪ್ರತಿಸ್ಪಂದಿಸುತ್ತಿದೆ. ಅಲ್ಲಿಂದ ಬರುತ್ತಿರುವ ಒತ್ತಡಗಳಿಗೆ ಪ್ರತಿಕ್ರಿಯಿಸುತ್ತಿದೆ. ಅಲ್ಲಿಂದಲೇ ಈ ಕ್ಷಣವನ್ನು ನಿರ್ಣಯಿಸುತ್ತಿದೆ.
ಹಿಂದಿನ ಅನುಭವಗಳೊಂದಿಗೆ ಪ್ರತಿಸ್ಪಂದಿಸುವಿಕೆ/ ಪ್ರತಿಕ್ರಿಯಿಸುವಿಕೆ ಮತ್ತು ನಿರ್ಣಯಿಸುವಿಕೆಯು ದ್ವಂದ್ವಜ್ಞಾನದ ಆಲೋಚನೆಗಳಲ್ಲಿ ಮುಳುಗಿಸಿ ಎಚ್ಚರದಪ್ಪಿಸುತ್ತಿದೆ. ಹಾಗೆ ನೋಡಿದರೆ ಹಿಂದಿನ ನೆನಪುಗಳಲ್ಲಿ ನಿಮಗ್ನವಾಗಿದ್ದುಕೊಂಡು ಈ ಕ್ಷಣದ ಪ್ರತಿಸ್ಪಂದನೆ ಮತ್ತು ಪ್ರತಿಕ್ರಿಯೆಗಳಲ್ಲಿ ಇರುವುದೇ ನಾನು!!! ನೆನಪುಗಳ ಕೇಂದ್ರವೇ ನಾನು!!! ಈ ನಾನು ಎಂಬ ಕೇಂದ್ರದ ಸುತ್ತ ಪ್ರತಿಸ್ಪಂದನೆ ಮತ್ತು ಪ್ರತಿಕ್ರಿಯೆಗಳು ಪರಿಧಿಯಂತೆ ಸುತ್ತುತ್ತಿರುತ್ತವೆ. ಇದರ ಹೊರತಾಗಿ ನಾನು ಎನ್ನಲು ಏನೂ ಇಲ್ಲ! ನಾನು ಎಂಬುದು ನೆನಪುಗಳೊಂದಿಗೆ ಉಂಟಾಗುತ್ತಿರುವ ಪ್ರತಿಸ್ಪಂದನೆ/ ಪ್ರತಿಕ್ರಿಯೆಗಳ ಕಲಬೆರಕೆ! ಅದೊಂದು ಕಲಗಚ್ಚು ಬಾನೆ ಇದ್ದಂತೆ! ನಾನು ಎಂಬುದು ಒಂದು ಸೀಮಿತ ಆವರಣವೇ ವಿನಾ ಅದು ಅಸೀಮವೇನೂ ಅಲ್ಲ.
ನಮಗೆ ತೀರಾ ಪರಿಚಿತರಾದ ವ್ಯಕ್ತಿಯೊಬ್ಬರು ಎದುರಾದಾಗ ಮೊದಲಿಗೆ ಅವರ ಹೆಸರು ಥಟ್ಟನೆ ಹೊಳೆಯುತ್ತದೆ. ಆ ಹೆಸರು ಎಲ್ಲಿಂದ ತೆಗೆದುಕೊಂಡೆವು? ಹಿಂದಿನ ನೆನಪುಗಳಿಂದಲೇ ಅಲ್ಲವೆ? ನಂತರ ಆ ವ್ಯಕ್ತಿಗೆ ಸಂಬಂಧಿಸಿದ ವಿಷಯಾನುಭವಗಳೆಲ್ಲವೂ ನೆನಪುಗಳ ಹೊಲಬಿನಿಂದ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಯಾವ ಊರು? ಯಾವ ಜಾತಿ? ಯಾವ ಕುಲ? ಯಾವ ಧರ್ಮೀಯ? ಯಾವ ವಿಧವಾದ ಉದ್ಯೋಗ? ಅವನ ಜೀವನ ಶೈಲಿ ಶ್ರೇಷ್ಟವೋ ಕನಿಷ್ಟವೋ? ಅವನು ಹೇಗೆ ಆಸ್ತಿ ಮಾಡಿದ? ಹೇಗೆ ಅಧಿಕಾರಕ್ಕೆ ಬಂದ? ಅವನ ಗುಣಾವಗುಣಗಳೇನು? ಅವರೊಂದಿಗೆ ನನ್ನ ಸಂಘಟನೆ, ಸಂಬಂಧಗಳೇನು… ಇತ್ಯಾದಿಗಳೆಲ್ಲವೂ ಅಂತಃಸ್ಫುರಿಸುತ್ತಾ ಹೋಗುತ್ತವೆ… ಈ ಸ್ಫುರಣಾತ್ಮಕ ಪ್ರವಾಹಕ್ಕೆ ನಮ್ಮದೇ ಪ್ರತಿಸ್ಪಂದನೆ, ಪ್ರತಿಕ್ರಿಯೆಗಳು ಹೇಗೆ ವರ್ತಿಸುತ್ತವೆ ಎಂದರೆ… ತನಗೆ ಇಷ್ಟವೆಂದೋ, ಅನಿಷ್ಟವೆಂದೋ; ಸಹ್ಯವೆಂದೋ, ಅಸಹ್ಯವೆಂದೋ; ಮಾನವೆಂದೋ, ಅವಮಾನವೆಂದೋ; ದ್ವೇಷವೆಂದೋ, ಪ್ರೀತಿಯೆಂದೋ, ಒಪ್ಪಿಗೆಯೆಂದೋ, ವಿರೋಧವೆಂದೋ… ಹೀಗೆ ಪ್ರತಿಸಾರಿ ಆ ವ್ಯಕ್ತಿ ನಮ್ಮೊಂದಿಗೆ ಸುಳಿದಾಡಿದಾಗ ಹಿಂದಿನ ನೆನಪುಗಳಲ್ಲಿರುವ ಅನುಭವಗಳಿಗೆ ಈಗಿನ ಹೊಸ ಪ್ರತಿಸ್ಪಂದನೆ, ಪ್ರತಿಕ್ರಿಯೆಗಳು ಕೂಡಿಕೊಳ್ಳುತ್ತಾ ‘ನಾನು’ ಇನ್ನಷ್ಟು ಮತ್ತಷ್ಟು ಬಲಗೊಳ್ಳುತ್ತಾ ಸಾಗುತ್ತದೆ.
ಹಿಂದಿನ ನೆನಪುಗಳಲ್ಲಿ ಅಡಕವಾಗಿರುವ ಅನುಭವಗಳಿಗೆ ಸಂಬಂಧಿಸಿದ ಜ್ಞಾನಗಳಲ್ಲಿ ನಮ್ಮಲ್ಲಿ ಎರಡು ರೀತಿಯ ಜ್ಞಾನಗಳ ಸಂಗ್ರಹವಿರುತ್ತದೆ. ಜಡ (feelingless) ಜ್ಞಾನಗಳು ಮತ್ತು ಅಜಡ (ಆಲಸ್ಯ, ಬಳಲಿಕೆಯನ್ನುಂಟುಮಾಡುವ) ಜ್ಞಾನಗಳು.
ಯಾರಾದರೂ ನಮ್ಮನ್ನು “ಎವರೆಸ್ಟ್ ಶಿಖರವನ್ನು ಮೊದಲು ಏರಿದ ಪರ್ವತಾರೋಹಿಗಳು ಯಾರು?” ಎಂದು ಪ್ರಶ್ನಿಸಿದರೆ, ನಾವು ಥಟ್ ಅಂತ ತೇನಸಿಂಗ್ ಮತ್ತು ಹಿಲರಿ ಎನ್ನುತ್ತೇವೆ! ಇವು ಜಡಜ್ಞಾನಗಳು. ಇಂತಹವುಗಳಿಗೆ ತೀವ್ರವಾದ ಭಾವೋದ್ವೇಗಗಳು ಇರಲಾರವು. ಸಮಸ್ಯೆ ಇರುವುದು ಅಜಡ ಜ್ಞಾನಗಳಿಂದ! ತಾನು ಮತ್ತು ಇದಿರು ಎಂಬೆರಡು ದ್ವಿಮಾನ ಕೇಂದ್ರಗಳ ನಡುವಿನ ಹೋಲಿಕೆ ಮತ್ತು ವ್ಯತ್ಯಾಸಗಳಿಗೆ ಜೋತು ಬಿದ್ದ ನಾನುವು ಅಂತರಂಗಿಕ ಸ್ವಗತ, ಸಂವಾದದಲ್ಲಿ ತೊಡಗುತ್ತದೆ. ಈ ಒಳಗಣ ಅಂತರ್ ದನಿಯಲ್ಲಿಯೇ ತೀವ್ರವಾದ ಪ್ರತಿಸ್ಪಂದನೆ, ಪ್ರತಿಕ್ರಿಯೆಗಳು ಏರ್ಪಟ್ಟು ಭಾವನಾತ್ಮಕವಾಗಿ ಕೆರಳುವ, ಬಳಲುವ ಮತ್ತದೇ ದುಃಖ, ಸಮಸ್ಯೆ, ಕೋರಿಕೆ, ಅಪಮಾನ, ಅತೃಪ್ತಗಳು…
ನಾನುವಿನ ಸೃಷ್ಟಿಯೇ ಆಗಿರುವ ದುಃಖ, ಸಮಸ್ಯೆ, ಕೋರಿಕೆ, ಅಪಮಾನ, ಅತೃಪ್ತತೆ, ಭಯಗಳ ಅಂತಃಪ್ರವಾಹದಲ್ಲಿ ನಾನುವೇ ಸಿಕ್ಕಿಹಾಕಿಕೊಂಡಿರುವುದು ವಿಪರ್ಯಾಸವೇ ಸರಿ! ಹೀಗಿರುವಾಗ ನಾವೇನು ಮಾಡುತ್ತಿದ್ದೇವೆ? ಎದಿರನ್ನು ಆಪಾದಿಸುತ್ತೇವೆ. ಇದಿರು ಸರಿಹೋದರೆ ಎಲ್ಲವೂ ಸರಿಹೋಗುತ್ತದೆ ಎಂದೇ ಯೋಚಿಸುತ್ತೇವೆ. ಇದಿರನ್ನು ಸರಿಪಡಿಸುವ ಕಾರ್ಯ ಬಹುತೇಕ ನಮ್ಮ ಕೈಯಲ್ಲಿರುವುದಿಲ್ಲ. ನಾನು ಮತ್ತು ಇದಿರು ಎಂಬೆರಡು ತುದಿಗಳು ಒಂದಕ್ಕೊಂದು ಸ್ವಹಿತಕ್ಕಾಗಿ ಹೋರಾಟಕ್ಕಿಳಿದಿರುತ್ತವೆ. ನಾನುವಿಗೆ ಒಂದು ಸ್ವಹಿತವಿದ್ದ ಹಾಗೆ ಇದಿರಿಗೂ ಒಂದು ಸ್ವಹಿತವಿರುತ್ತದೆ. ಇವೆರಡೂ ತುಂಬಾ ಗಟ್ಟಿ. ಒಂದು ವೇಳೆ ನಮ್ಮ ಹಿತಕ್ಕನುಗುಣವಾಗಿ ಇದಿರು ಇರಬೇಕೆಂದು ನಾವು ಪ್ರಯತ್ನಿಸಿದಲ್ಲಿ ಅದೊಂದು ಪರಿಹರಿಸಲಾಗದಾ ಹಿತಾಸಕ್ತಿಗಳ ಸಂಘರ್ಷವಾಗಿ ಮತ್ತದೇ ಸಮಸ್ಯೆಗಳು ಫಲಿಸಲಾರಂಭಿಸುತ್ತವೆ. ಏಕೆಂದರೆ ಮತ್ತೆ ‘ನಾನು’ವಿನಿಂದ ಇದಿರನ್ನು ಸರಿಪಡಿಸುತ್ತೇನೆಂಬುದೂ ನಾನೆಂಬ ಅಹಮಿಕೆಯೇ ಆಗಿರುತ್ತದೆ. ಹಾಗಾದರೆ ಪರಿಹಾರ ಹೇಗೆ?
ನಾನೇ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದ್ದು, ನಾನು ಸಮಸ್ಯೆಗಳಿಂದ ಹೊರಹೋಗಬೇಕೆಂದುಕೊಳ್ಳುವುದು ಸಾಧ್ಯವೇ ಇಲ್ಲ. ಏಕೆಂದರೆ ಎಲ್ಲಾ ಸಮಸ್ಯೆಗಳನ್ನು ಸೃಷ್ಟಿಸಿದ ನಾನು, ಭಯಗಳನ್ನು ಸೃಷ್ಟಿಸಿಕೊಂಡ ನಾನು, ಅತೃಪ್ತತೆಗಳನ್ನು ಸೃಷ್ಟಿಸಿಕೊಂಡ ನಾನು… ಇವೆಲ್ಲವುಗಳನ್ನು ಆಲೋಚನೆಗಳಿಂದ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ಕಾರಣವೇನೆಂದರೆ ಆಲೋಚನೆಗಳು ನಾನುವಿನ ಕೇಂದ್ರದಿಂದಲೇ ಉಕ್ಕಿಹರಿಯುತ್ತಿರುತ್ತವೆ.
ಕೆಲವರು ನಾನು ಅಪಾರವಾದ ಜ್ಞಾನಸಂಪನ್ನ, ನಾನು ಎಲ್ಲವನ್ನೂ ತಿಳಿದವನು, ನಾನು ಜೀವನವನ್ನೇ ಭಗವತ್ ಸೇವೆಗೆ ಮುಡಿಪಾಗಿಟ್ಟಿದ್ದೇನೆ, ನಾನು ಆಧ್ಯಾತ್ಮಿಕ ಜೀವಿ, ನಾನು ನೈತಿಕವಾಗಿದ್ದೇನೆ, ನಾನು ಪ್ರಾಮಾಣಿಕನಾಗಿದ್ದೇನೆ ಎಂದು ನಂಬಿರುತ್ತಾರೆ. ಈ ಬಗೆಯ ನಾನು ತನಗೇ ಸಮ್ಮತಿಸಲ್ಪಟ್ಟ ವಿಷಯಗಳೊಂದಿಗೆ ಆಕರ್ಷಿತಗೊಂಡು ಎದಿರನ್ನು ತನಗೆ ಸಮವಲ್ಲವೆಂಬ ಚಿಂತನೆಯಲ್ಲಿರುತ್ತದೆ. ನಾನು ಯೋಚಿಸುತ್ತಿರುವ ಪದ್ಧತಿ ಹಾಗೂ ನಾನು ತೆಗೆದುಕೊಳ್ಳುತ್ತಿರುವ ನಿರ್ಣಯಗಳು ಇತರರಿಗಿಂತಲೂ ಉತ್ಕೃಷ್ಟವಾಗಿರುತ್ತವೆ ಎಂದು ಭಾವಿಸಿಕೊಂಡಿರುತ್ತಾರೆ. ನಾನುವಿನಲ್ಲಿ ಶ್ರೇಷ್ಟವಾದ ನಾನು, ಆಲ್ಪಿಕವಾದ ನಾನು ಇರುವುದಿಲ್ಲ. ಈ ನಿಸರ್ಗಕ್ಕೆ ಯಾರೂ ವಿಐಪಿಗಳಲ್ಲ. ಆದ್ದರಿಂದ ನಾನು ನಾನೇ!!! ಅಹಮಿಕೆ ಯಾವ ರೂಪದಲ್ಲಿದ್ದಾಗ್ಯೂ ಅದು ನಾನುವೇ ಆಗಿರುತ್ತದೆ.
ನಿರಹಂಭಾವದೊಳಗೆ ದಾಸೋಹದ ನಿರಹಂಕೃತಿ ನಿಷ್ಪತ್ತಿಯಾಗಿ,
ಎರಡರಿಯದೆ ನಿಜಪರಮಾನಂದದೊಳಿಪ್ಪೆನು,
ಕೂಡಲಸಂಗಯ್ಯಾ.
ಬಸವಣ್ಣನವರು ಅಹಂ ರಹಿತ ತತ್ವಾನುಸಂಧಾನದಲ್ಲಿ ಒಡಮೂಡಿಸಿಕೊಂಡ ಅನುಭಾವದಲ್ಲಿ ‘ನಿರಹಂಕೃತಿ ನಿಷ್ಪತ್ತಿಯಾಗಿ’ ಎನ್ನುತ್ತಾರೆ. ನಿರಹಂಕೃತಿ ನಿಷ್ಪತ್ತಿ- ಎಂದರೆ ನಾನು, ನನ್ನಿಂದ, ನನಗಾಗಿ ಎಂಬಿತ್ಯಾದಿ ಶಬ್ದಗಳ ಸುಳಿವಿಲ್ಲದೆ (ಅಂತರಂಗದಲ್ಲಿಯೂ) ನಾನು- ಇದಿರು ಎಂಬ ಪರಸ್ಪರಾನು ಬೇಧವಿಲ್ಲದೆ ಇದ್ದುದರಿಂದಾಗಿ ‘ನಿಜ ಪರಮಾನಂದದೊಳಿಪ್ಪೆನು’ ಎನ್ನುತ್ತಾರೆ. ಬಸವಣ್ಣನವರ ಈ ‘ನಿಜ ಪರಮಾನಂದ’ ಅಲ್ಲಮಪ್ರಭುಗಳಿಗೆ ‘ಪೂರ್ಣ ಸ್ವಾತಂತ್ರ್ಯ’ದ ಚಿಹ್ನವಾಗುತ್ತದೆ.
ಸ್ವತಂತ್ರ ಪರತಂತ್ರಕ್ಕೆ ಆವುದು ಚಿಹ್ನ ನೋಡಾ.
ತಾನೆಂಬುದ ಅಳಿದು ಇದಿರೆಂಬುದ ಮರೆದು,
ಭಾವದಗ್ಧವಾಗಿರಬಲ್ಲಡೆ ಅದು ಸ್ವತಂತ್ರ.
ನೀನೆಂಬುದ ಧಿಕ್ಕರಿಸಿ ತಾನೆಂಬುದ ನೀಕರಿಸಿ
ಉಭಯ ಭಾವದಲ್ಲಿ ಸನ್ನಿಹಿತವಾಗಿರಬಲ್ಲಡೆ ಪರತಂತ್ರ. (ಅಲ್ಲಮಪ್ರಭು)
ಇಲ್ಲಿ ‘ಉಭಯಭಾವದಲ್ಲಿ’ ಎಂಬ ಶಬ್ದವನ್ನು ಗಮನಿಸಿದರೆ, ನಾನೆಂಬುದು ನೀನೆಂಬ ಎದುರಿನ ಸಮಾಗಮದಿಂದಾಗಿ ಪರಸ್ಪರ ಎರಡೂ ಪರಾಧೀನವಾಗಿದ್ದವು. ನೀನೆಂಬ ಎದುರು ನಾನೆಂಬ ಅಹಮಿಕೆಗೆ ಕಾರಣಭೂಮಿಕೆಯಾಗಿತ್ತು. ಈ ಎರಡರಲ್ಲಿ ನಾನು ನಾನುವಿನಲ್ಲಿದ್ದರೂ ನೀನುವಿನಲ್ಲಿ ಪರಾಧೀನತೆ! ನಾನು ನೀನುವಿನಲ್ಲಿದ್ದರೂ ಪರಾಧೀನತೆ! ತಾನು- ಇದಿರು ಎಂಬ ಭಾವದಗ್ಧವಾಗಿದ್ದರೆ ಅದು ‘ಸ್ವತಂತ್ರ’ ಎಂದು ಅಲ್ಲಮರು ಹೇಳುತ್ತಾರೆ.
ಇಂತಹ ವಚನಗಳನ್ನು ನಾವು ನಮ್ಮ ಬದುಕಿನ ವರ್ತಮಾನ ತಲ್ಲಣಗಳಲ್ಲಿಟ್ಟು ನೋಡುವುದನ್ನು ಎಂದಿಗೂ ಕಲಿಯಲಾರೆವು. ಇಂತಹ ಅಮೂಲ್ಯವಾದ ಮಾತುಗಳನ್ನು ಶರಣರ ಅನುಭಾವವೆಂದೋ, ಸಂತರ ಅನುಭಾವವೆಂದೋ ಅವರಿಗೇ ಇಂತಹವನ್ನು ಮೀಸಲಿರಿಸಿ ನಮ್ಮ ಬದುಕಿನ ವಸ್ತುಸ್ಥಿತಿಯಿಂದ ಇವನ್ನು ದೂರಕ್ಕಿಟ್ಟುಬಿಡುತ್ತೇವೆ. ವಚನಗಳನ್ನು ಜೀವನ ವಿಜ್ಞಾನವನ್ನಾಗಿ ಗ್ರಹಿಸುವುದನ್ನು ಕಲಿಯಲೇ ಬೇಕು. ಇಲ್ಲದಿದ್ದರೆ ನಾವು ಎಷ್ಟಾದರೂ ಸಾಮಾನ್ಯ ಮನುಷ್ಯರು, ಎಲ್ಲರಂತೆ ನಾವೂ ಬದುಕಿ ಸತ್ತರಾಯ್ತು ಎಂಬಂತಹ ಭಾವನೆ ತಲೆದೋರಿ ಅವರ ಚಿತ್ರಪಟಗಳಿಗೆ ಹೂಮಾಲೆ ಹಾಕಿ ಕೈತೊಳೆದುಕೊಳ್ಳಬೇಕಾದ ದೈನೇಸಿ ಸ್ಥಿತಿಗೆ ನಮ್ಮನ್ನು ದೂಡಿಕೊಳ್ಳುತ್ತೇವೆ.
ಏನೂ ಇಲ್ಲದ ಠಾವಿನಲ್ಲಿ ನಾ ನೀನೆಂಬುದ ತಾನೆ ತಂದನು.
ಇಲ್ಲದುದ ಉಂಟಾದುದ ಸಾವಿರವನಾಡಿದಡೇನು?
ಉಂಟಾದುದನು `ಇಲ್ಲ’ ಮಾಡಬಲ್ಲಡೆ
ಆ `ಇಲ್ಲ’ವೆ ತಾನೆ ಗುಹೇಶ್ವರ!
ಈ ವಚನದಿಂದ ನಮಗೆ ತಿಳಿಯುವುದೇನೆಂದರೆ, ಏನೂ ಇಲ್ಲದ ತಾಣದಲ್ಲಿ ನಾನು- ನೀನು ಎಂಬ ಮನೋಲೋಕವನ್ನು ನಾವೇ ತಂದೆವು. ಸ್ವಕಲ್ಪನೆಯಿಂದ ಉಂಟಾದ ಭ್ರಾಂತಿಗಳಲ್ಲಿ ಎಷ್ಟು ಮಾತನಾಡಿದರೂ ಅದು ಬಗೆಹರಿಯಲಾಗದು. ಉಂಟಾಗಿರುವ ಆ ‘ನಾನೆಂಬ’ ಅಹಮಿಕೆ ಇಲ್ಲಗೊಳಿಸಬೇಕೆಂದು ಅಲ್ಲಮರು ಸಾರುತ್ತಾರೆ.
ಈ ರೀತಿಯ ವಚನಗಳನ್ನು ಓದುವಾಗ ಅನೇಕರಲ್ಲಿ ಕೆಲವು ದ್ವಂದ್ವಗಳುಂಟಾಗಬಹುದು. ‘ನಾನು’ವನ್ನು ಕಳೆದುಕೊಂಡುಬಿಟ್ಟರೆ ನನಗೆ ಈ ಮಾನವ ಸಮಾಜದಲ್ಲಿ ಯಾವುದೇ ರೀತಿಯ ಅಸ್ತಿತ್ವ ಇರಲಾರದೆಂದು ಭಾವಿಸಿಕೊಳ್ಳಬಹುದು. ಆದರೆ ನಿಸರ್ಗ ರಹಸ್ಯದ ಆಳದಲ್ಲಿ ಸಮರಸ, ಸ್ವಾತಂತ್ರ್ಯ, ಸಮತೆಗಳು ನಿರಂತರವಾಗಿ ಅಸ್ತಿತ್ವದಲ್ಲಿವೆ, ಅವೇ ಗೆಲ್ಲುತ್ತವೆ. ಇಡೀ ಭೌತಿಕ ಜಗತ್ತು ಸಾಮರಸ್ಯದಿಂದ ಉಂಟಾಗಿದೆ. ಇಲ್ಲಿ ಯಾವುದೂ ಅಂತಿಮವಲ್ಲ. ಯಾವುದೂ ಪ್ರತ್ಯೇಕವಲ್ಲ! ಮತ್ತೆ ಕೆಲವರು ನಾನುವನ್ನು ಕಳೆದುಕೊಂಡರೆ ಎಲ್ಲವನ್ನೂ ತೊರೆದು ಸನ್ಯಾಸಿಗಳಂತೆ ನಿರ್ಗತಿಕ ಸ್ಥಿತಿಗೆ ತಮ್ಮನ್ನು ದೂಡಿಕೊಳ್ಳಬೇಕಾಗುತ್ತದೆ ಎಂದು ಊಹಿಸಿಕೊಳ್ಳಬಹುದು. ಆದರೆ ಇದು ಪೂರ್ತಿ ತಪ್ಪು. ‘ನಾನು’ ಇಲ್ಲದಾದಾಗ ಲೌಕಿಕ ಜೀವನದಲ್ಲಿ ಎದಿರಾಗುವ ಬಹುತೇಕ ಸಮಸ್ಯೆಗಳು ಕಾಲ್ಪನಿಕ ಎಂಬ ಸತ್ಯ ನಿಮ್ಮಲ್ಲಿ ಅಂತಃಸ್ಫುರಿಸಿ ಶಾಂತತೆಯ ಕಡೆ ಪ್ರಯಾಣಿಸುತ್ತೀರಿ! ಮತ್ತೆ ಕೆಲವರಲ್ಲಿ ‘ನಾನು’ವನ್ನು ಕಳೆದುಕೊಂಡರೆ ಹೊಟ್ಟೆಪಾಡಿಗೆ ಹುಡುಕಿಕೊಂಡಿರುವ ಉದ್ಯೋಗವನ್ನು ತೊರೆದು ಹತಾಶೆಯ ಜೀವನಕ್ಕೆ ಮುಖಮಾಡಬೇಕಾಗುತ್ತದೆಂದು ಭಾವಿಸಿರಬಹುದು. ಆದರೆ ಇದೊಂದು ಮೂರ್ಖತನ. ಏಕೆಂದರೆ ‘ನಾನು’ ಇಲ್ಲದಾದಾಗ ನಿಮ್ಮ ಉದ್ಯೋಗವನ್ನು ಪ್ರತಿದಿನ ಹೊಸತನ ಮತ್ತು ಉತ್ಸಾಹದಿಂದ ನಿಭಾಯಿಸುವ ಕೌಶಲ್ಯವನ್ನು ಪಡೆಯುತ್ತೀರಿ! ಮತ್ತೆ ಕೆಲವರು ‘ನಾನು’ವನ್ನು ಕಳೆದುಕೊಂಡರೆ ಸಂಸಾರ ವ್ಯಾಮೋಹವನ್ನು ತೊರೆದು ಆಧ್ಯಾತ್ಮಿಕ ಬದುಕನ್ನು ನಡೆಸಬೇಕಾಗುತ್ತದೆಯೆಂದು ತಿಳಿದುಕೊಂಡಿರಬಹುದು. ಆದರೆ ಸಾಂಸಾರಿಕ ಬಂಧನದಲ್ಲಿರುವ ವ್ಯಾಮೋಹಕ್ಕಿಂತಲೂ ಮಿಗಿಲಾಗಿ ಸಂಸಾರಿಕ ಸಂಬಂಧಗಳಲ್ಲಿ ಅಡಗಿರುವ ಕಾರುಣ್ಯ, ಸ್ನೇಹ ಮತ್ತು ಆ ಸಂಬಂಧಗಳಲ್ಲಿರಬಹುದಾದ responsibility ಗಳ ಮಹತ್ವವೇನೆಂಬುದು ನಿಮಗೆ ಹೃದ್ಗೋಚರವಾಗುತ್ತದೆ. ಮತ್ತೆ ಕೆಲವರು ನಾನುವನ್ನು ಕಳೆದುಕೊಂಡರೆ ಎದುರಿನ ‘ನೀನು’ ಬಲಶಾಲಿಯಾಗಿ ‘ನಾನು’ ಕೈಕಟ್ಟಿ ಕೂತುಬಿಡುತ್ತದಲ್ಲಾ ಎಂದು ಯೋಚಿಸುತ್ತಿರಬಹುದು. ಆದರೆ ‘ನಾನು’ ಇಲ್ಲವಾದಾಗ ‘ನೀನು’ವು ನಾನುವಿನೊಂದಿಗೆ ಯಾವ ಪ್ರತಿಕೂಲ ಪರಿಸ್ಥಿತಿಗಳನ್ನೂ ಸೃಷ್ಟಿಸುವುದಿಲ್ಲ.
ಮೇಲ್ಕಂಡ ಅಲ್ಲಮರ ವಚನ ‘ಆ ಇಲ್ಲದ ತಾನೇ ಗುಹೇಶ್ವರಾ’ ಎಂದು ಹೇಳುವಾಗ ನಾನು ಇಲ್ಲವಾದ ಆ ತಾಣದಲ್ಲಿ ಸ್ವಾಸ್ಥ್ಯ ಹಾಗೂ ಸದೃಢವಾದ ಮನಸ್ತತ್ವವಿದೆ. ಪರಿಶುದ್ಧ ಸಮಾಜದ ಸೃಷ್ಟಿಯಿದೆ. ನಿಸರ್ಗದಾಳದಲ್ಲಿರುವ ಸ್ವಾತಂತ್ರ್ಯ ಮತ್ತು ಸಮರಸಗಳನ್ನು ಮುನ್ನೆಲೆಗೆ ತರುವ ಚೇತನಾಶಕ್ತಿಯಿದೆ. ಆದ್ದರಿಂದ ‘ನಾನು’ ಇಲ್ಲದಾದಾಗ ನಾವು ಕಳೆದುಕೊಳ್ಳುವುದಕ್ಕಿಂತಲೂ ಪಡೆದುಕೊಳ್ಳುವ ಅತ್ಯಮೂಲ್ಯವಾದ ಜೀವಪ್ರೀತಿಗಳೇ ಹೆಚ್ಚಾಗಿವೆ. ಆದ್ದರಿಂದ ‘ನಾನು’ ಎಂಬ ಜೀವವಿರೋಧಿ ವರ್ತುಲಕ್ಕೆ ಖಂಡಿತವಾಗಿಯೂ ಪರಿಷ್ಕಾರವಿದೆ!! ನಾವು ಸೃಷ್ಟಿಸಿಕೊಂಡಿರುವ ‘ನಾನು’ ಅಸ್ತಂಗತವಾದಾಗ ಮಾತ್ರ ನಮ್ಮಲ್ಲಿ ಹೊಸದಾದ ಸೃಜನಶೀಲ ಸೃಷ್ಟಿಯೊಂದು ಸಾಧ್ಯವಾಗುತ್ತದೆ.
ಹಾಗಾದರೆ ‘ನಾನು’ ಇಲ್ಲವಾಗುವ ಸಾಧನಾ ಪಥ ಎಲ್ಲಿಂದ, ಹೇಗೆ ಪ್ರಾರಂಭವಾಗುತ್ತದೆ ಎಂಬುದನ್ನು ನಮ್ಮ ಮಿತಿಗಳಲ್ಲಿಯೇ ನಿಷ್ಕರಿಸಿಕೊಳ್ಳೋಣ-
ಚೆನ್ನಬಸವಣ್ಣನವರು ಒಂದು ಕಡೆ “ಮನದ ಸೂತಕವಳಿಯದೇ ಘನದಲ್ಲಿ ಕೂಡಿಹೆನೆಂದರೆ ದೊರಕೊಳ್ಳದು ಭಕ್ತಿಪಥ, ದೊರಕೊಳ್ಳದು ಶರಣಪಥ…”ಎನ್ನುತ್ತಾರೆ. ಭಕ್ತಿ ಎನ್ನುವುದು ನೂರಾರು ಕೊಳಕುಗಳನ್ನಿಟ್ಟುಕೊಂಡು ತಿಪ್ಪೆ ಸಾರಿಸುವ ಕೆಲಸ ಅಲ್ಲ. ಭಕ್ತಿ ಮಾರ್ಗದ ಸಂಜ್ಞೆಯ ಸಣ್ಣ ಬೆಳಕೊಂದು ನಮಗೆ ಫಲಿಸಬೇಕೆಂದರೆ ಮನದ ಕೊಳೆಯನ್ನು ತೊಡೆದುಹಾಕಲೇ ಬೇಕು. ಶರಣಭಕ್ತಿ ಸರಿಯಾದ ಪರಿಶ್ರಮದಿಂದ ಫಲ ನೀಡುವಂತಹದ್ದು. ಅದು- ತಾನು ಮುನ್ನಡೆಯಬೇಕಾದ ಹಾದಿಯಲ್ಲಿ ಇರಲೇಬೇಕಾದ ಅತೀವವಾದ ಶ್ರದ್ಧೆ ಸದೃಢವಾಗಿ ಅಂತರಂಗದಲ್ಲಿ ಸ್ವಯಂ ಹೋರಾಟ ಮಾಡಿ ಲೋಕಸತ್ಯವನ್ನು ಗೆಲ್ಲಿಸಿಕೊಳ್ಳಬಲ್ಲ ಓಜಸ್ಸು; ಸರ್ವ ಲೋಕಕ್ಕೂ ನ್ಯಾಯಸಮ್ಮತವಲ್ಲವೆಂದು ಕಂಡುಬಂದಾಗ ಅಂದಂದಿಗೆ ಅಂತಹ ದುಷ್ಟ ಸ್ವಭಾವಗಳನ್ನು ನಿರಾಕರಿಸಿಕೊಳ್ಳಬೇಕಾದ ಧೀಮಂತ ತ್ಯಾಗ; ತನ್ನೊಳಗೆ ಕಂಡುಬರುವ ವಿಚಾರಲಂಪಟತನವನ್ನು ತನಗದು ಎಷ್ಟೇ ಉಪಯೋಗವೆನಿಸಿದರೂ ಅಂತಹದನ್ನು ಹತ್ತಿಕ್ಕಲು ಬೇಕಾದ ದಿಟ್ಟತನ; ತನ್ನನ್ನು ತಾನು ಹೇಗಿದೆಯೋ ಹಾಗೆ ಅಕಲ್ಪಿತವಾಗಿ ಓದಿಕೊಳ್ಳುವ ಚಿತ್ ಸಾಮರ್ಥ್ಯ; ಸದಾ ಎಚ್ಚರಿಕೆಯನ್ನು ಕಾಪಿಟ್ಟುಕೊಳ್ಳಬೇಕಾದ ಸಮಯಾಚಾರ, ಇತ್ಯಾದಿ ಸತ್ ಶೀಲಗಳನ್ನು ಅಂತರಂಗದಲ್ಲಿ ಸಾಧ್ಯಗೊಳಿಸುವ ಬೆಳಕು ಕ್ರಿಯಾಶೀಲವಾಗಿರುವಾಗ ಮಾತ್ರ ಭಕ್ತಿಪಥಕ್ಕೆ ಪ್ರವೇಶ ಸಿಗುತ್ತದೆ.
ಇಂತಹ ಅವಿಚ್ಛಿನ್ನವಾದ ಭಕ್ತಿಪೂರ್ವಕ ಪ್ರಯತ್ನಗಳಲ್ಲಿ ‘ನಾನು’ವನ್ನು ಸರಿಯಾಗಿ ಗ್ರಹಿಸಲು ಅಥವಾ ಅದನ್ನು ಕಂಡುಹಿಡಿದು ನಿಷೇಧಿಸಲು ದಿನದಲ್ಲಿ ಯಾವುದಾದರೂ ಒಂದು ಸಮಯವನ್ನು ಇಟ್ಟುಕೊಂಡರೆ ಸಾಕೆಂದುಕೊಳ್ಳುವಂತಿಲ್ಲ. ಸ್ವಪ್ನ, ಜಾಗೃತ್, ಸುಷುಪ್ತಿಗಳಲ್ಲೂ ಆಲೋಚನೆ ಮತ್ತು ಸುಪ್ತ ಜ್ಞಾನಗಳ ಮೂಲಕ ನಾನು ಅಸ್ತಿತ್ವದಲ್ಲಿರುತ್ತದೆ. ಆಲೋಚನೆಗಳು ಹರಿಯುತ್ತಿರುವಾಗಲೇ ಅವುಗಳನ್ನು ಗಮನಿಸುತ್ತಿರಬೇಕು. ಆಲೋಚನೆಗಳು ಇರುವಲ್ಲಿ ನಾನುವೇ ಪ್ರಾರಂಭವಾಗಿರುತ್ತದೆ. ನಮ್ಮ ಉಸಿರು, ಶಕ್ತಿ, ಪ್ರಜ್ಞೆ ಎಲ್ಲವನ್ನೂ ಬಳಸಿಕೊಂಡು ನಾನುವಿನಿಂದ ಸೃಷ್ಟಿಯಾಗಿ ತರಂಗಗಳಂತೆ ಆಲೋಚನೆಗಳು ಮೇಲೆರಗುತ್ತಿವೆ ಎಂದು ಗಮನಿಸಲು ಸಾಧ್ಯವಾಗಬೇಕು. ನಾನು ಎಂಬ ಸ್ಪೃಹೆ ಅಥವಾ ಕಲ್ಪನೆ ಆಲೋಚನೆಗಳಿಂದ ಪ್ರಕಟವಾಗುತ್ತದೆ. ಆಲೋಚನೆಗಳೇ ನಾನು! ಆಲೋಚನೆಗಳಿಲ್ಲದಿದ್ದರೆ ನಾನಿಲ್ಲ! ನಾನು ಆಲೋಚನೆಗಳಿಂದ ನಿರ್ಮಿಸಲ್ಪಟ್ಟದ್ದು. ಆದ್ದರಿಂದ ನಾನುವಿನಿಂದ ಹುಟ್ಟುತ್ತಿರುವುದೆಲ್ಲಾ ಆಲೋಚನೆಗಳೇ!!!
ಹೀಗೆ ಮತ್ತೆ ಮತ್ತೆ ಆಲೋಚನೆಗಳನ್ನು ಗಮನಿಸುತ್ತಾ ಹೋದಂತೆಲ್ಲಾ ನಮಗೆ ಅತ್ಯಪರೂಪದ ಅನುಭವವೊಂದು ಪ್ರಾಪ್ತವಾಗುತ್ತದೆ. ಅದೇನೆಂದರೆ ಆಲೋಚನೆಗಳು ಹಿಂದಿನ ಅನುಭವಗಳಲ್ಲಿರುವ ಬೇರೆಬೇರೆಯದೇ ಆದ ರುಚಿಗಳನ್ನು ಹೊತ್ತು ತರುತ್ತಾ, ಈಗಿನ ಕ್ಷಣವನ್ನು ಪ್ರಚೋದಿಸುತ್ತಿರುತ್ತವೆ…
ಯಾರೋ ನಮ್ಮನ್ನು ಈ ಹಿಂದೆ ಹೊಗಳಿದ ರುಚಿ ಈಗದನ್ನು ಚಪ್ಪರಿಸುತ್ತದೆ. ಯಾರೋ ಈ ಹಿಂದೆ ನಮ್ಮನ್ನು ತೆಗಳಿ ಅವಮಾನಿಸಿದ ರುಚಿ, ಅವರನ್ನು ನೆನೆದುಕೊಂಡು ರೋಷ, ದ್ವೇಷಗಳಲ್ಲಿ ಚಪ್ಪರಿಸುತ್ತದೆ. ಈ ಹಿಂದೆ ನಮಗೆ ತುಂಬಾ ಸಂತೋಷವಾದ ಸನ್ನಿವೇಶದ ರುಚಿ ಈಗದನ್ನು ನೆನಪಿಸಿಕೊಂಡು ಚಪ್ಪರಿಸುತ್ತದೆ. ಹೀಗೆ… ಯಾರೋ ನಮ್ಮನ್ನು ಹೊಗಳಿದ್ದು, ನಾವು ಪಟ್ಟ ಸುಖಗಳು, ಬಗೆಹರಿಯಲಾಗದ ಸಮಸ್ಯೆಗಳ ಸಂಕೀರ್ಣತೆಗಳು, ನಾವು ಅವಮಾನಗೊಂಡಿದ್ದು, ನಮ್ಮನ್ನು ಸನ್ಮಾನಿಸಿದ ಕ್ಷಣಗಳು ಎಲ್ಲವನ್ನೂ ‘ನಾನು’ ಆಲೋಚನೆಗಳ ಮೂಲಕ ನೆನಪಿಸಿಕೊಂಡು ಚಪ್ಪರಿಸುತ್ತಿರುತ್ತದೆ.
ಕಹಿ ರುಚಿಗಳು ತನಗೆ ಬೇಡವೆಂತಲೂ, ಸಿಹಿ ರುಚಿಗಳು ಜೀವನದಲ್ಲಿ ಮತ್ತೆ ಮತ್ತೆ ಮರುಕಳಿಸಬೇಕೆಂದು ಇಷ್ಟಪಡುತ್ತದೆ. ಎಂದೆಂದಿಗೂ ಸಿಹಿ ರುಚಿ, ಎಂದೆಂದಿಗೂ ಒಳ್ಳೆಯ ಫಲಗಳು ಸಿಗಬೇಕೆಂದು ಆಶಿಸುತ್ತಾ ಕೆಟ್ಟ ಫಲಗಳು ಬೇಡವೆಂದು ಅಂದುಕೊಳ್ಳುತ್ತದೆ. ಆದರೆ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಫಲಗಳು ನಾನುವಿನ ನಿರ್ಮಾಣವೇ ಆಗಿರುವುದರಿಂದ ಅವು ಫಲಿಸೇ ತೀರುತ್ತವೆ.
ಈ ನಾನುವಿನ ರಾಜಕೀಯವನ್ನು ನಮ್ಮಲ್ಲಿ ನಾವು ಸರಿಯಾಗಿ ಗಮನಿಸಲು ಸಾಧ್ಯವಾದರೆ ನಂತರ ಆ ಆಲೋಚನೆಗಳಲ್ಲಿರುವ ರುಚಿಗಳನ್ನು ಚಪ್ಪರಿಸದೇ, ಆಲೋಚನೆಗಳಿಗೆ ಹೌದೆಂತಲೋ, ಅಲ್ಲವೆಂತಲೋ, ಇದು ತಪ್ಪು, ಸರಿಯೆಂತಲೋ, ಇದು ಪ್ರೀತಿ-ದ್ವೇಷ ಎಂದು ಏನನ್ನೂ ವಿಶ್ಲೇಷಿಸದೆ, ಆ ಆಲೋಚನೆ ಹೇಗೆ ಬರುತ್ತೋ ಹೇಗೆ ಹೋಗುತ್ತದೋ ಹಾಗೆ ಗಮನಿಸುವುದಾದರೆ ಅದರ ರಹಸ್ಯ ಬೆಂಬಲ ಸಿಗದೆ ಬಿದ್ದು ಹೋಗುತ್ತದೆ.
ಇಲ್ಲೊಂದು ಉದಾಹರಣೆ ನೀಡಬಹುದು. ನಮ್ಮೂರಿನಲ್ಲಿ ಒಂದು ದೊಡ್ಡ ಆಲದಮರವಿದೆ. ಆ ಮರದಲ್ಲಿ ನೂರಾರು ಹೆಜ್ಜೇನುಗಳು ಮನೆಮಾಡಿಕೊಂಡಿವೆ. ತುಪ್ಪ ಮತ್ತು ಮೇಣವನ್ನು ತಿನ್ನುವ ಸಣ್ಣ ಹದ್ದಿನಂತಹ ಪಕ್ಷಿಗಳು ಆಗಾಗ ಜೇನಿನ ಮೇಲೆ ಬಿದ್ದು ಜೇನನ್ನು ಎಗರಿಸಿಕೊಂಡು ಹೋಗುತ್ತವೆ. ಆಗ ಕುಪಿತಗೊಂಡ ಜೇನುಗುಂಪು ತೋಟ ಮತ್ತು ಹೊಲದಲ್ಲಿ ಕೆಲಸ ಮಾಡುವವರ ಮೇಲೆ ದಾಳಿಗಿಳಿಯುತ್ತವೆ. ಇದು ನಮ್ಮೂರಿನಲ್ಲಿ ಆಗಾಗ ಸಾಮಾನ್ಯ. ಆದರೆ ಜೇನುಹುಳುಗಳ ದಾಳಿಯಿಂದ ಇದುವರೆಗೂ ನಮ್ಮೂರಿನಲ್ಲಿ ಯಾರೂ ಸತ್ತಿಲ್ಲ. ಇದುವರೆಗೂ ಸತ್ತಿರುವ ಅನೇಕರು ಪರ ಊರಿನವರು. ಏಕೆ ಹೀಗೆ ಎಂದು ನೋಡಿದಾಗ, ತೋಟದಲ್ಲಿ ಕೆಲಸ ಮಾಡುವವರ ಮೇಲೆ ಅವು ದಾಳಿ ಮಾಡಿದಾಗ ಅವರು ಅವುಗಳೊಂದಿಗೆ ಯಾವುದೇ ಪ್ರತಿಕ್ರಿಯೆ ಮಾಡದೆ ಸುಮ್ಮನೆ ನಿಶ್ಚಲವಾಗಿದ್ದುಬಿಡುತ್ತಾರೆ. ಅಂದರೆ ಸುತ್ತಲೂ ಮುತ್ತಿಕೊಂಡಿರುವ ಜೇನುಗಳನ್ನು ಕೈಯಿಂದಾಗಲಿ, ಟವಲ್ಲಿನಿಂದಾಗಲಿ ಓಡಿಸುವುದಾಗಲಿ, ಅವುಗಳೊಂದಿಗೆ ಯಾವುದೇ ಪ್ರತಿಕ್ರಿಯೆ, ಪ್ರತಿಸ್ಪಂದಿಸುವುದಾಗಲಿ ಮಾಡುವುದಿಲ್ಲ. ಹಾಗಾಗಿ ಅವು ಕೆಲಕ್ಷಣ ಸುತ್ತಾಡಿ ಹೊರಟು ಹೋಗುತ್ತವೆ.
ಹೀಗೆ ಆಲೋಚನೆಗಳು ಪ್ರಾರಂಭವಾದಾಗ ಆ ಸಮಯದಲ್ಲಿರಬೇಕಾದ ತಾಕ್ಷಣಿಕ ವಿವೇಕದಿಂದ ಆಲೋಚನೆಗಳಿಗೆ ಯಾವುದೇ ಪ್ರತಿಸ್ಪಂದನೆ, ಪ್ರತಿಕ್ರಿಯೆಯನ್ನು ಒಡ್ಡದೆ, ಯಾವುದೇ ಸಮ್ಮತಿಯನ್ನು ಸೂಚಿಸದೆ ಮೌನದಿಂದ ಆಲೋಚನೆಗಳನ್ನು ಕಂಡಾಗ ಅವು ಅಲ್ಲಿಂದ ಅಲ್ಲಿಯೇ ಹತವಾಗುತ್ತವೆ. ನಿಮಗೆ ಗೊತ್ತೇ? ಬಹಳ ಕಾಲದಿಂದ ಬಳಸದೇ ಇರುವ ವಸ್ತುಗಳು ತಂತಾನೇ ನಶಿಸುತ್ತವೆ!
ಆಲೋಚನೆಗಳಿಲ್ಲದಿದ್ದರೆ ಅಹಮಿಕೆ ಇದೆಯೇ? ದುಃಖವಿದೆಯೇ? ಸಮಸ್ಯೆಗಳಿವೆಯೇ? ಕೋರಿಕೆಗಳಿವೆಯೇ? ದುಃಖದಲ್ಲಿ ಆಲೋಚನೆಗಳಿವೆ! ಕೋರಿಕೆಗಳಲ್ಲಿ ಆಲೋಚನೆಗಳಿವೆ! ಅವಮಾನದಲ್ಲಿ ಆಲೋಚನೆಗಳಿವೆ! ಭಯದಲ್ಲಿ ಆಲೋಚನೆಗಳಿವೆ! ಅನುಮಾನಗಳಲ್ಲಿ ಆಲೋಚನೆಗಳಿವೆ!
ಒಂದೊಂದು ಆಲೋಚನೆಗೂ ನಾವು ಪ್ರತಿಸ್ಪಂದನೆ, ಪ್ರತಿಕ್ರಿಯೆ ನೀಡದಿದ್ದರೆ ಆ ಆಲೋಚನೆಗಳಿಗೆ ಆಹಾರ ಸಿಗುತ್ತದೆಯೇ? ದುಃಖಕ್ಕೆ ಸಂಬಂಧಿಸಿದ ಆಲೋಚನಾ ಲಹರಿಗೆ ನೀವು ಪೋಷಣೆ ನೀಡದಿದ್ದರೆ ಅವು ಬದುಕುಳಿಯುತ್ತವೆಯೇ? ಆಯ್ಕೆ ಇಲ್ಲದಾ ಮನಸ್ಸಿನಿಂದ ದಿಟ್ಟವಾಗಿ ದುಃಖ, ಕೋರಿಕೆ, ಭಯ, ಅವಮಾನ, ಅಸಡ್ಡೆ, ಇತ್ಯಾದಿ ಸಂಕೀರ್ಣ ಆಲೋಚನೆಗಳನ್ನು ಗಮನಿಸಿದಾಗ ಅವುಗಳಿಗೆ ಯಾವುದೇ ಆಧಾರ, ಆಹಾರ, ಸ್ಪಂದನೆ ಇಲ್ಲದೆ, ಹಾಗೆ ಬಂದು ಹೀಗೆ ಬಿದ್ದು ಹೋಗುತ್ತವೆ. ಆಲೋಚನೆಗಳಿಲ್ಲದಿದ್ದರೆ ಅಲ್ಲಿ ‘ನಾನು’ ಇರಲಾರದು. ಆಗ ಅಲ್ಲೊಂದು ನಿತ್ಯ ನೂತನತೆ ಪ್ರಾಪ್ತವಾಗುತ್ತದೆ. ಅದನ್ನು ನೀವು ಪ್ರಶಾಂತ ಅನ್ನಿ, ನಿರುತ್ತರಿ ಅನ್ನಿ, ಮೌನವೆನ್ನಿ, ಧ್ಯಾನವೆನ್ನಿ, ದೈವವೆನ್ನಿ, ನಿಮ್ಮಿಷ್ಟ!!
ಶರಣರು ಇಂತಹ ವರ್ತಮಾನದ ಅಪೂರ್ವವಾದ ಅನುಭಾವವನ್ನು ಪ್ರಸಾದವೆಂದರು, ನಿರಂಜನವೆಂದರು, ಕೂಡಲಸಂಗಮ ಎಂದರು, ಬಯಲೆಂದರು, ಶಬ್ದಮುಗ್ಧವೆಂದರು. ಅನೇಕಾನೇಕ ರೂಪಕಗಳಿಂದ ನಮ್ಮ ಮುಂದಿಟ್ಟು ಹೋದರು.
ನಿರ್ವಿಕಲ್ಪಿತವೆಂಬ ನಿಜದೊಳಗಯ್ಯಾ,
ನಿರಹಂಭಾವದಲ್ಲಿ ನಾನಿದ್ದೆನಯ್ಯಾ (ನೀ ನಿದ್ದೆಯಯ್ಯಾ?)
ನೋಡಿಹೆನೆಂದಡೆ ನೋಡಲಿಲ್ಲ, ಕೇಳಿಹೆನೆಂದಡೆ ಕೇಳಲಿಲ್ಲ.
ಘನನಿರಂಜನದ ಬೆಳಗಿಂಬಾದುದನೇನೆಂಬೆ ಗುಹೇಶ್ವರಾ?
ಆಲೋಚನೆಯಿಲ್ಲದ ನಿರ್ವಾತ ಸ್ಥಿತಿಯಿಂದ, ಶೂನ್ಯಭಾವದಿಂದ ನೋಡುವುದಾದರೆ ಅಲ್ಲೊಂದು ಮೌನ ಅನುತ್ತರ ಅನಾವರಣವಾಗುತ್ತದೆ. ಅದೇ ಸೃಜನಶೀಲವಾದ ಹೊಸತನ!! ‘ನಾನು’ ಇಲ್ಲದಾದಾಗ ಆ ಹೊಸತನ ಹುಟ್ಟುತ್ತದೆ. ಇಲ್ಲದ ನಾನು ವಿನಾಶವಾದರೆ ಇರುವ ನಿಜ ಅಲ್ಲಿ ಪ್ರಾದುರ್ಭವಿಸುತ್ತದೆ.
Comments 18
ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
Apr 9, 2023ಒಂದು ದಾರಿಯನ್ನು ತೋರಿಸಿ ಇನ್ನೊಂದು ದಾರಿಯೂ ಇರುವುದು ಎಂದು ನಮಗರಿವಿಗೆ ಬಾರದಂತೆ ತೋರಿಸುವುದು ಪದ್ಮಾಲಯ ರ ವಿಶೇಷತೆ.
ನಮ್ಮ ನಾನು..ಈ ಪರಿ ದಾರಿ ತಪ್ಪಿ ಓಡುವುದು.
VIJAYAKUMAR KAMMAR
Apr 10, 2023ಜಗತ್ತಿನಲ್ಲಿ ಹುಟ್ಟಿ ಹುಟ್ಟಲಾರದೆ ಸತ್ತು ಹೋದರು.
ಅದ್ಭುತ ಚಿಂತನೆ
Pro. K. S. Mallesh
Apr 10, 2023ಪದ್ಮಾಲಯ ರವರ ಈ ಲೇಖನದಲ್ಲಿ ಸ್ವಾತಂತ್ರ್ಯ ಮುಂತಾದ ಪದಗಳ ಮಹತ್ವವನ್ನು ತಿಳಿದೆ. ಕೆಲವು ಉದಾಹರಣೆಗಳ ಮೂಲಕ ನಾನುವಿನ ಮೆರೆದಾಟಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಮತ್ತೆ ಓದಿ ಮಗದೊಮ್ಮೆ ಓದಿ ಮನನಮಾಡಿಕೊಳ್ಳಬೇಕಾದ ಲೇಖನ.
ರವಿಕುಮಾರ್ ಬನಹಟ್ಟಿ
Apr 13, 2023ನನ್ನ ಮನಸ್ಸನ್ನೇ ನಾನು ನೋಡಿಕೊಳ್ಳುತ್ತಿದ್ದೇನೆ ಅಥವಾ ಅದನ್ನು ನೀವು ಹೇಳುತ್ತಿದ್ದೀರಿ ಎನ್ನುವ ಹೃದಯ ತಟ್ಟುವ ಮಾತುಗಳು ಇಲ್ಲಿವೆ. ಇದೊಂದು ಮನಸ್ಸಿಗೆ ದಾರಿ ಕೊರೆಯುವ ಚಿಂತನೆ. ಲೇಖನದ ಆಶಯವನ್ನು ಮನನ ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ.
ನಂದಕುಮಾರ ಚನ್ನಗಿ
Apr 20, 2023ಓದುತ್ತಾ ಓದುತ್ತಾ ಹೋದಂತೆ ಕೊನೆಯೇ ಇಲ್ಲದ ತಾಣಕ್ಕೆ ಕರೆದೊಯ್ಯುವಂತೆ, ಏನೇನು ವಿಷಯಗಳು, ಏನೇನು ಒಳ ಸಂಗತಿಗಳು…. ಎಲ್ಲವೂ ನನಗೇ ಸಂಬಂಧಿಸಿದಂತೆ, ಇಂತಹ ಲೇಖನವನ್ನೇ ನಾನು ಇದುವರೆಗೆ ಓದಿಲ್ಲ, ಇನ್ನೂ ಎರಡು ಮೂರು ಸಲ ಓದಿ ನನ್ನ ಅಭಿಪ್ರಾಯ ತಿಳಿಸುವೆ. ಲೇಖಕರಿಗೆ ಸಾವಿರ ಸಾವಿರ ಶರಣುಗಳು.
Naveeena h a
Apr 21, 2023ನಾನೆಂಬ ಪೂರ್ವಾಪರ ನೆನಪುಗಳ ಜ್ಞಾನ ಕೋಶ ಸೃಷ್ಟಿಸಿರುವ ಭಯ, ದುಃಖ ತಲ್ಲಣಗಳು ಲೇಖನದಲ್ಲಿ ತುಂಬಾ ಅದ್ಭುತವಾಗಿ ಮೂಡಿ ಬಂದಿವೆ. ಲೋಕ ಗ್ರಹಿಕೆಯಲ್ಲಿನ ಮಿಥ್ಯಾದೃಷ್ಟಿಯು ನಿಸರ್ಗಕ್ಕೆ ವಿರುದ್ಧವಾಗಿ ಅಭೌತಿಕವಾದ ನಾನೆಂಬ ಅಹಂಕಾರವನ್ನು ಸೃಷ್ಟಿಸುತ್ತಿದೆ. ತನ್ನ ಎದುರಿನ ಲೋಕವನ್ನು ತಪ್ಪೆಂದು, ಕನಿಷ್ಠವೆಂದು ತಿಳಿಸುವ ಈ ಜ್ಞಾನ ತಾನು ಸರ್ವಶ್ರೇಷ್ಠ ಉತ್ತಮನೆಂಬ ಇಲ್ಲದ ಗುಣಗಳನ್ನು ತನಗೆ ಆರೋಪಿಸಿಕೊಂಡು ತನ್ನೊಳಗಿನ ಅಂತಃಪ್ರವಾಹದ ಮೋಸವನ್ನು ಗುರುತಿಸುವಲ್ಲಿ ಎಡವುತ್ತದೆ. ಇದನ್ನ ಸರಹಪಾದ ಛೇಡಿಸುತ್ತಾನೆ, ‘ತನ್ನ ತಾನೇ ಕಾಂಬನಕ ತೊಲಗದು ಭ್ರಾಂತಿಯ ಗೂಡವೆ’ ಎಂದು, ನಾನೆಂಬ ಈ ಅಹಂಕಾರವೇ ಇಲ್ಲದ ಲೋಕ ಸಂಕಟವನ್ನ, ಭಯ, ಮನಕ್ಲೇಶವನ್ನು ತಂದೊಡ್ಡುತ್ತಿದೆ. ಇದನ್ನ ಗುರು ಉಪದೇಶದ ಹೊರತಾಗಿ ಬೇರಾವ ಗ್ರಾಂಥಿಕ ಶಬ್ದಾಲಂಕಾರಗಳಿಂದಲೂ ನಿರಸನಗೊಳಿಸಿಕೊಳ್ಳಲು ಸಾಧ್ಯವಿಲ್ಲ. ದಿನಪ್ರತಿ ನಮ್ಮ ಮುಂದೆ ನಮ್ಮ ಅರಿವಿನಿಂದಲೂ ಅರಿವಿಗೆ ಹೊರತಾಗಿಯೂ ಅಹಂಕಾರ, ಮೋಸ, ಅನ್ಯಾಯ, ಅಸೂಯೆ ಮೊದಲಾದ ವೈದಿಕ ವಿಚಾರಗಳ ದಾಳಿಯಿಂದ ಪರಿತಪಿಸುವ ಜೀವಿಗಳ ಪ್ರಾಣ ಸಂಕಟವನ್ನು ಕಂಡು ಮರುಗುವ ಮಾಧ್ಯಮಿಕ ಸರಹಪಾದನೆನ್ನುತ್ತಾನೆ, ‘ಗುರು ಉಪದೇಶದಲ್ಲಿಹುದು ಅಮೃತರಸ ದಾವಿಸಿ ಪಾನಗಯ್ಯದವ ಬಹು ಶಸ್ತ್ರಾರ್ಥ ಮರುದರೆಯಲ್ಲಿ ಬಾಯಾರಿ ಸಾವನವ’ ಎಂದು. ನಾವು ನಾನು ಪರಿಶೀಲಿಸಿಕೊಳ್ಳದೆ ದುಃಖದ ಮೂಟೆಯನ್ನು ಹೊತ್ತು ಬಳಲುತ್ತಿದ್ದೇವೆ. “ನಾನೆಂಬುದನ್ನು ಅರಿತರೆ ದುಃಖವೂ ನನಗಲ್ಲ ಭಯವು ನನಗಲ್ಲ ಸಮಸ್ಯೆಗಳು ನನಗಲ್ಲ ಒತ್ತಡಗಳು ನನಗಲ್ಲ” ಅಲ್ಲಿಗೆ ನಾವು ಸರ್ವಸ್ವತಂತ್ರರು, ನಿರಾತಂಕಿಗಳು. ಪದ್ಮಾಲಯ ಗುರುಗಳ ಈ ಮಾತು ಸರಹನ ಮಾತನ್ನು ನೆನಪಿಸುತ್ತಿದೆ. ನಾನುವನ್ನು ಪ್ರಜ್ಞೆಯಿಂದ ಸ್ವಯಂ ಪರಿಶೀಲಿಸಿಕೊಳ್ಳುವೆಡೆ ಒಯ್ಯುವ ಗುರುಪಥಕ್ಕೆ ಮಿಗಿಲಾದದು ಜಗತ್ತಿನಲ್ಲಿ ಮತ್ತೊಂದಿರಲು ಸಾಧ್ಯವಿಲ್ಲ. ಇಂತಹ ಅದ್ಭುತ ಪಥಕ್ಕಾಗಿ ಗುರುಗಳಿಗೆ ಎಷ್ಟು ನಮಿಸಿದರು ಕಡಿಮೆಯೇ!
ಬಸವರಾಜ ಹಂಡಿ
Apr 21, 2023ಈ ಲೇಖನವನ್ನು ನಾನು ಜೀವನಪೂರ್ತಿ ಓದುತ್ತೇನೆ. ಸಮಯ ಸಿಕ್ಕಾಗ ಮತ್ತೆ ಮತ್ತೆ ಈ ಲೇಖನ ಓದುತ್ತೇನೆ.
ನಾನು ಯಾರು ಎಂಬ ಆಳ ನಿರಾಳ ಲೇಖನದ ಸರಮಾಲೆ ಓದಿದಾಗ ಸೀಮಿತವಾಗಿ ನನ್ನ ಬಗ್ಗೆ ನನಗೆ ತಿಳಿದುಕೊಳ್ಳಲು ಸಾಧ್ಯವಾಗಿತ್ತು ಆದರೆ ಪೂರ್ತಿ ತೃಪಿ ಆಗಿದ್ದಿಲ್ಲ. ಕಳೆದ ಎರಡು ವರ್ಷಗಳಿಂದ ‘ನಿನ್ನನ್ನು ನೀನು ತಿಳಿ’, ‘ತಾನು ಯಾರು ಎಂದು ತಿಳಿದರೆ ತಾನೇ ದೇವಾ ನೋಡಾ’- ಈ ವಾಕ್ಯಗಳು ನನ್ನ ತಲೆಯಲ್ಲಿ ಓಡುತಿದ್ದವು. ಈ ಲೇಖನ ಓದಿದಾಗ ಇದನ್ನು ನನ್ನ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದು ಗೊತ್ತಾಯ್ತು.
‘ನಾನು’ವನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಂಡು ಗಮನಿಸಿದಾಗ ಎಷ್ಟು ಹೊಲಸು ನಮ್ಮಲ್ಲಿ ತುಂಬಿಕೊಂಡಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದೇ ಪ್ರಕ್ರಿಯೆಯಲ್ಲಿ ಮುಂದುವರಿದಾಗ, ‘ನಾನು’ ಎಂಬುದು ಎಳೆ ಎಳೆಯಾಗಿ ಬೀಳಲು ಶುರುಮಾಡುತ್ತದೆ.
ನಾನು ಎಂಬುದು ಮತ್ತೆನಿಲ್ಲ, ಗಾಳಿಯಲ್ಲಿ ಶಬ್ದಗಳ ಮುಖಾಂತರ ನಿರ್ಮಾಣಗೊಂಡ ಒಂದು ಗುಳ್ಳೆ . ಅರಿವಿನ(ವಿವೇಕ) ಬೆಳಕಿನಲ್ಲಿ ಇದನ್ನು ನೋಡಿದಾಗ ಈ ಗುಳ್ಳೆ ಒಡೆದು ಹೋಗುತ್ತದೆ. ಯಾವಾಗ ‘ನಾನು’ ಎಂಬುದು ಒಡೆದು ಹೋಗುತ್ತದೆ ಆಗ ನಾನು ಬೇರೆ ಅಲ್ಲ ಮತ್ತು ಪ್ರಕೃತಿ ಬೇರೆ ಅಲ್ಲ ಅಂತ ಗೊತ್ತಾಗುತ್ತದೆ.
“ಜಗವೆಲ್ಲವ ಕಾಬ ಕಣ್ಣು, ತನ್ನ ಕೊಂಬ ಕೊಲ್ಲೆಯ ಕಾಣಲರಿಯದು- ಈ ಸಾಲು ಏನನ್ನು ಹೇಳುತ್ತಿದೆ? ಹೊರಗಿನ ಜಗತ್ತನ್ನೆಲ್ಲಾ ನೋಡುತ್ತಿರುವ ಕಣ್ಣಿಗೆ ತಾನೇ ಬೆಳೆಸಿಕೊಂಡಿರುವ ‘ನಾನು’ ಎಂಬ ಹರಿತವಾದ ಕೊಂಬು ತನ್ನನ್ನೇ ಕೊಲ್ಲುವುದ ಕಾಣಲರಿಯದು ಎನ್ನುತ್ತಿದೆ.” ಮೊದಲ ಬಾರಿಗೆ ಈ ವಚನ ನನಗೆ ಅರ್ಥವಾಯ್ತು. ಬಹಳಷ್ಟು ವಚನಗಳು ‘ನಾನುವನ್ನ ಅರಿಯುವ’ ಪ್ರಕ್ರಿಯೆಯಿಂದ ಬಂದ ಉತ್ಪನ್ನಗಳು (outputs).
ಪದ್ಮಾಲಯ ನಾಗರಾಜ ಶರಣರು ಈ ಕೆಳಗೆ ಬರೆದ ಸಾಲುಗಳಲ್ಲಿ ಎಷ್ಟು ಗುರು ಕಾರುಣ್ಯ ತುಂಬಿಕೊಂಡಿದೆ ನೋಡಿ: ನಮ್ಮ ಕೈ ಹಿಡಿದುಕೊಂಡು ಗುರು ಮಾರ್ಗದಲ್ಲಿ ದೀಪವನ್ನು ಬೆಳಗಿ ಕರೆದುಕೊಂಡು ಹೋಗುತ್ತಿದ್ದಾರೆ-
“ತನ್ನ ತಾ ಸ್ವಯಂಪರಿಶೀಲಿಸಿಕೊಳ್ಳುವ ಈ ಪ್ರಕ್ರಿಯೆ ನಾವು ಯಾಕಾಗಿ ಮಾಡುತ್ತಿದ್ದೇವೆ ಎಂಬ ಸ್ಪಷ್ಟತೆ ಕೂಡ ಇಲ್ಲಿ ಬಹಳ ಮುಖ್ಯ. ಈ ಪ್ರಯತ್ನ ದುಃಖವನ್ನು ಕೆಲಕಾಲ ನಿರ್ಬಂಧಿಸಿ ಹಾಯಾಗಿರುವುದಕ್ಕಲ್ಲ. ಇಲ್ಲವೆ ಆಸೆಗಳನ್ನು ಪೂರೈಸಿಕೊಳ್ಳಲೂ ಅಲ್ಲ. ನಾನುವನ್ನು ನಾನು ತಿಳಿದುಕೊಳ್ಳಬೇಕೆಂಬ ಅತೀವವಾದ ಆಸೆ ಕೂಡ ನಾನುವೇ ಆಗುವ ಅಪಾಯದಲ್ಲಿ ಸಿಕ್ಕಿಕೊಳ್ಳುವ ಪ್ರಮೇಯ ಇಲ್ಲಿ ಉಂಟಾಗಬಹುದು.”
ಈ ಅತಿ ವಿರಳ ಜ್ಞಾನ ದಾಸೋಹ ಮತ್ತು ಅರಿವಿನ ದೀಪವನ್ನು ನಮ್ಮಲ್ಲಿ ಹಚ್ಚಿದ್ದಕ್ಕೆ ನಾಗರಾಜ ಶರಣರಿಗೆ ಮತ್ತು ಬಯಲು ತಂಡಕ್ಕೆ ನಾನು ಚಿರಋಣಿ.
ಶರಣು ಶರಣಾರ್ಥಿ
Panchakshari
Apr 22, 2023ನಮ್ಮ ಮನಸ್ಸಿನಲ್ಲುಂಟಾಗುವ ದ್ವಂದ್ವದ ಆಳ ಹರವುಗಳನ್ನು ಅತ್ಯಂತ ಒಳಹೊಕ್ಕು ನಾನೆಂಬ ಭಾವದ ಗಸಣಿಯನ್ನು ಸರಳಿಕರಿಸಿ ಕೊಟ್ಟಿದ್ದಾರೆ. ಲೇಖಕರ ಪ್ರಯತ್ನಕ್ಕೆ ಅಭಿನಂದನೆಗಳು ಮತ್ತು ಧನ್ಯವಾದಗಳು.
ಶರಣುಶರಣಾರ್ಥಿ 🙏
Srinath Rayasam
Apr 22, 2023ಘನತೆಯ ಬದುಕು ಮತ್ತು ಬದುಕಿನ ಮರ್ಮಗಳನ್ನು ಮನಮುಟ್ಟುವಂತೆ ಹೇಳುವ ಶರಣರ ವಚನಗಳು ಎಲ್ಲಾ ಕಾಲಕ್ಕೂ ಪ್ರಸ್ತುತ ಮತ್ತು ಪ್ರಾಯೋಗಿಸಬಲ್ಲ ತತ್ವಗಳು ! ಈ ಲೇಖನ ಪ್ರಾಜ್ಞರೊಬ್ಬರ ವಿವರಣಾತ್ಮಕ ಪ್ರಕ್ರಿಯೆಯಾಗಿ ಚೆನ್ನಾಗಿ ಮೂಡಿಬಂದಿದೆ !
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಣೆಹಳ್ಳಿ
Apr 23, 2023ಅತ್ಯುತ್ತಮ ಚಿಂತನೆ. ನಾನೆಂಬುದು ತೊಲಗಿದಾಗಲೇ ಸ್ವಾತಂತ್ರ್ಯ. ನಾನುವಿನಂತಹ ವೈರಿ ಮತ್ತೊಬ್ಬರಿಲ್ಲ. ಇದು ವೈರಿಯಷ್ಟೇ ಅಲ್ಲ. ಗೊತ್ತಾಗದ ವೈರಸ್. ಅದಕ್ಕಾಗಿ ಬಸವಣ್ಣನವರು ಹೇಳಿದ್ದು ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ ಎಂದು. ಲೇಖಕರು ಶರಣರ ಬದುಕಿನ ಸ್ವಾತಂತ್ರ್ಯ ಇದ್ದುದೇ ಅಹಂಕಾರ ನಿರಶನದಿಂದ ಎಂದು ವಚನಗಳ ಆಧಾರದ ಮೇಲೆಯೇ ಮನೋಜ್ಞವಾಗಿ ವಿಶ್ಲೇಷಣೆ ಮಾಡಿದ್ದಾರೆ. ಲೇಖಕರಿಗೆ ಅಭಿನಂದನೆಗಳು.
Shylaja Hugar
Apr 23, 2023👍 nijavada basava jayanti acharanege nirdeshisuva baraha
ಶೋಭಾದೇವಿ ಅಮರಶೆಟ್ಟಿ, ಭಾಲ್ಕಿ
Apr 25, 2023🙏🏻🙏🏻ಲೇಖನ ತುಂಬಾ ಚೆನ್ನಾಗಿದೆ “ಪ್ರಶ್ನಿಸಲಾರದ. ಮನಸ್ಸು,ವ್ಯವಸ್ಥೆ ಎಷ್ಟೇ ಕ್ರೂರವಾಗಿದ್ದರೂ ,ತನ್ನ. ಸ್ಥಿತಿ ಎಷ್ಟೇ ಚಿಂತಾಜನಕವಾಗಿದ್ದರೂ ಮರುಮಾತಾಡದೇ ಅದೆಲ್ಲವನ್ನೂ ದೈನ್ಯತೆಯಿಂದ. ಒಪ್ಪಿಕೊಂಡಿರುತ್ತದೆ”. ಸತ್ಯವಾದ ಮಾತು.👌👌👍👍
ವಿಜಯಕುಮಾರ್, ತುಮಕೂರು
Apr 25, 2023ಸತ್ತು ಹುಟ್ಟಿ ಸತ್ತವರೆಲ್ಲಾ…..
ನಾವೆಲ್ಲಾ ನೋವು ತುಂಬಿದ ದ್ವೀಪಗಳು. ನೋವು ನುಂಗಿ ಸಮ ಸಮಾಜ ಕಟ್ಟಿದ ಶರಣರು ಅಜರಾಮರರಾದರು. ನಾವು ಸತ್ತು ಹುಟ್ಟಿ ಹುಟ್ಟಲಾರದೆ ಸತ್ತೆವು.
ಸರಳ, ಸುಂದರ ಮತ್ತು ಉತ್ತಮ ಲೇಖನ. ಲೇಖಕರಿಗೆ ಅಭಿನಂದನೆಗಳನ್ನು ತಿಳಿಸಿ.
🙏🙏
ಶರಣ್ ಸ್ವಾಮಿ
Apr 25, 2023ನಾನುವಿನ ಒಳ ಹೊರಗೆ ಒಕ್ಕು ಆತ್ಮ ವಿಮರ್ಷಣೆಗೆ ಮನಸ್ಸನ್ನ ಒಗ್ಗಿಸುವ ಮಾಮಾರ್ಮಿಕ ಅದ್ಭುತ ಲೇಖನ.
ಸ್ಮ್ರತಿ ಪಲ್ಲಟದಲ್ಲಿ ನನಗೆ ತಿಳಿಯದಂತೆ ನನ್ನೆಲ್ಲ ಮಾಯಾ ಗುಣಗಳ ಆವರಣ ಲೇಖನ ಓದುತ್ತ ಗೋಚರಿಸಿದ್ದು ದಿಟ. ಅದಾಗ್ಯ ಈ ಅವಲೋಕನ ವಿಮರ್ಷಣೆ ಆತ್ಮಾವಲೋಕನ ಸದಾ ಸ್ವಪ್ನ ಜಾಗರ ಸುಷುಪ್ತಿಯಲ್ಲಿ ಸದಾ ನಡೆಯುತ್ತಿರಬೇಕು.
ಮರಳಿ ಓದಬೇಕೆನ್ನಿಸುವ ಲೇಖನ
ಪದ್ಮಾಲಯ ನಾಗರಾಜ ಹಾಗು ಬಯಲು ಬಾಂಧವರಿಗೆ ಅನಂತ ಶರಣುಗಳು
Sharan
Apr 26, 2023ನಾನೆಂಬ ಭಾವ ಅಳಿಯದೆ ನಿಜದ ನಿರ್ಲಿಪ್ತತೆ ಸಾಧ್ಯವಿಲ್ಲ ಎಂದು ಸಾರುವ ಕೈದೀವಿಗೆ ಈ ಲೇಖನ.
ನನ್ನದಲ್ಲದ ವಸ್ತುವಿನ ವ್ಯಾಮೋಹದಲ್ಲಿ ಬದುಕು ವ್ಯಯಿಸುವ ಮನುಜರಿಗೆ ಎಚ್ಚರಿಕೆಯೊಂದಿಗೆ ಜ್ಞಾನ ಮಾರ್ಗವು ತೋರಿಸುವ ಪ್ರಯತ್ನ ಲೇಖಕರು ಉತ್ತಮವಾಗಿ ತಿಳಿ ಮಾಡಿದ್ದಾರೆ.
ಮಾಯಾವರ್ಣದ ಅಳಿವು
ನಿಜದ ನಿಲುವಿನ ನೆನಹು
ಸಂದ ನಾನುವಿನ ಗೆಲುವು
ಲೇಖಕರ ಆತ್ಮ ವಿಮರ್ಷಕ ನಿಲುವು
ಆತ್ಮ ಅವಲೋಕಿಸುವ ಪದಗಳ ನಿರರ್ಗಳತೆಯು
ಶರಣೆಂತು ನಿಮಗೆ ಎನ್ನಂತರಂಗದ ಅರಿವು
ಶರಣ್ ಸ್ವಾಮಿ
ಜಗದೀಶ ಹೊಸಮಠ
Apr 27, 2023ತಮ್ಮ ಈ ಲೇಖನದಲ್ಲಿ ಶರಣರ ಬಗ್ಗೆ ಬರೆದ ಅನುಭವ ಇಂದಿಗೆ ಅತ್ಯಂತ ಸೂಕ್ತವಾದುದು. ನನ್ನ ಪ್ರಕಾರ ಅಂದಿನ ಆ ಕಲ್ಯಾಣದಲ್ಲಿ ಪ್ರತಿಯೊಬ್ಬರೂ ತಮ್ಮ ಮನುಷ್ಯ ಜೀವನದಿಂದ ಶರಣ ತತ್ವದ ಕಡೆಗೆ ಸಾಗಿ ಶರಣರಾದರು. ಅದು ಸತ್ಯದ ಮಾರ್ಗ, ಶರಣ ಮಾರ್ಗ ಸತ್ಯದ ಮಾರ್ಗ!! ಇಲ್ಲಿ ಯಾವುದೇ ಬೂಟಾಟಕ್ಕೆ ಇರುವುದಿಲ್ಲ ನನ್ನ ಅರಿವೇ ಬ್ರಹ್ಮಾಂಡ ಸತ್ಯ… ಅರಿವೇ ಗುರು!! ಒಂದು ಲಕ್ಷ 86,000 ಗಣಂಗಳನ್ನು ಸೇರಿಸಿ ನಂಬಲು ಅಸಾಧ್ಯವಾದ ಕಲ್ಯಾಣ ಕ್ರಾಂತಿಯನ್ನು ಮಾಡಿದ್ದು ಸಮಾಜವನ್ನು ಕಟ್ಟಿದ್ದು… ಎಲ್ಲವೂ ಅದ್ಭುತ… ಇವತ್ತು ಶರಣರನ್ನ ಸಂಕುಚಿತ ಜಾತಿಗಳಿಗೆ ಸೇರಿಸಿ, ತಮ್ಮ ತಮ್ಮ ಜಾತಿಗೆ ಗುರು ಎಂದು ಘೋಷಿಸಿ ಮತ್ತೆ ಅನಿಷ್ಟವಾದ ಜಾತಿ ಪದ್ಧತಿಯನ್ನು ಮುಂಚೆಗಿಂತಲೂ ಘೋರವಾಗಿ ಆಚರಿಸುತ್ತಿರುವುದ ಕಂಡರೆ ನೋವಾಗುತ್ತದೆ. 🙏🙏
ಮಹಾದೇವ ಹಡಪದ
Apr 30, 2023ಪದ್ಮಾಲಯ ಸರ್ ಲೇಖನ ಅದ್ಭುತ ನಿರೂಪಣೆ…. ಓದಿಸಿದ್ದಕ್ಕೆ ಶರಣು ಶರಣಾರ್ತಿಗಳು
ಮಧು ಬಿ.ಎನ್.
Nov 28, 2023ಪದ್ಮಾಲಯ ಸರ್, ನಿಮ್ಮ ಬರಹ ಓದುವಾಗ ಉಂಟಾದ ಅನುಭೂತಿ ಜಿಡ್ಡು ಕೃಷ್ಣಮೂರ್ತಿಯವರು ಇದೇ ಮಾತುಗಳನ್ನು “ನಾನು ” ಎಂಬುದರ ಬಗ್ಗೆ ಆಡಿರುವುದು ಸೋಜಿಗ!