
ನಾನು ಯಾರು? ಎಂಬ ಆಳ-ನಿರಾಳ
ತನ್ನ ತಾನರಿಯದೆ ತನ್ನ ತಾ ನೋಡದೆ, ತನ್ನ ತಾ ನುಡಿಯದೆ,
ಅನ್ಯರ ಸುದ್ದಿಯ ನುಡಿದಾಡುವ ಕುನ್ನಿಗಳಿಗೆ
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ.
ಅವನು ಸರ್ವಾಪರಾಧಿ, ಅವನ ಮುಖವ ನೋಡಲಾಗದು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
-ಹಡಪದ ಅಪ್ಪಣ್ಣ
ಚಿಕ್ಕಂದಿನ ಒಂದು ನೆನಪು. ಬಾಗಲಕೋಟೆಯಲ್ಲಿ ಅಜ್ಜಿಯ ಮನೆಯ ಹತ್ತಿರವೇ ಭಜನಾ ಮಂದಿರ. ವಾರಕ್ಕೆರಡು ದಿವಸ ಸುತ್ತಣ ಹಳ್ಳಿಯವರೆಲ್ಲಾ ಸೇರಿ ರಾಗವಾಗಿ ಭಜನೆಗಳನ್ನು ಹಾಡುತ್ತಿದ್ದರು. “ನೀನಾರು ನೀನಾರು ನಿನ್ನಲ್ಲಿ ಹುಡುಕು…” ಅನ್ನೋ ತತ್ವಪದ ಹೊರಗೆ ಆಡುತ್ತಿದ್ದ ನಮ್ಮ ಕಿವಿಗೆ ಆಗಾಗ ಬೀಳುತ್ತಿತ್ತು. ಜನಪದ ಶೈಲಿಯಲ್ಲಿದ್ದ ಆ ಹಾಡು ನಮ್ಮ ನಾಲಿಗೆಯನ್ನು ಸೇರಿ ಕಣ್ಣಾಮುಚ್ಚಾಲೆ ಆಟದಲ್ಲಿ “ನಾನೆಲ್ಲಿ ನಾನೆಲ್ಲಿ ನನ್ನನ್ನು ಹುಡುಕು…” ಎಂದು ಬದಲಾಗುತ್ತಿತ್ತು. ಅದರ ಆಳ ತಿಳಿಯದಾ ವಯಸ್ಸು. ಮುಂದೆ ಕಾಲೇಜಿನ ದಿನಗಳಲ್ಲಿ ಅಪ್ಪಾಜಿಯ ಪ್ರವಚನದಲ್ಲಿ ‘ನಾನು ಯಾರು?’ ಅನ್ನೋ ವಿಷಯ ಬಂದಾಗ ಮೈಯೆಲ್ಲಾ ಕಿವಿಯಾಗಿ ಕೇಳಿದ್ದೆ. ಆಸಕ್ತಿ ಹುಟ್ಟಿಸುವಂತಿದ್ದ ಆ ಪ್ರಶ್ನೆಯನ್ನು ಎಳೆಎಳೆಯಾಗಿ ಬಿಚ್ಚುತ್ತಾ ನಾನೆಂದರೆ ‘ಆತ್ಮ’ ಎಂದು ಮುಕ್ತಾಯ ಮಾಡಿದಾಗ ಏನೂ ತಿಳಿಯದೇ ಸುಮ್ಮನಾಗಿದ್ದೆ. ಕುತೂಹಲ ಹುಟ್ಟಿಸಿದ್ದ ಪ್ರಶ್ನೆ ಗೊತ್ತಿಲ್ಲದ ‘ಆತ್ಮ’ ಎನ್ನುವ ಕಾಲ್ಪನಿಕತೆಗೆ ಸಿಕ್ಕಿಕೊಂಡಾಗ ನಿರಾಶೆಯಾಗಿತ್ತು. ನಂತರ ಬೆಂಗಳೂರಿಗೆ ಬಂದಾಗ, ರಮಣ ಮಹರ್ಷಿಗಳ ಧ್ಯಾನಮಂದಿರದ ಮುಂದೆ ಹಾದುಹೋಗುವಾಗಲೆಲ್ಲಾ ಹೊರಗೆ ನೇತು ಹಾಕಿದ್ದ ‘ನಾನು ಯಾರು?’ ಎನ್ನುವ ಫಲಕ ಕಣ್ಣಿಗೆ ಬೀಳುತ್ತಿತ್ತು. ವಾಹನದಲ್ಲಿ ಹೋಗುವಾಗ, ಹಾಗೆ ಕಂಡು ಹೀಗೆ ಸರಿದು ಹೋಗುತ್ತಿದ್ದ ಈ ಪ್ರಶ್ನೆ ಮನಸ್ಸಿನಲ್ಲಿ ಜಾಗ ಪಡೆಯದೆ ಜಾರಿ ಹೋಗುತ್ತಿತ್ತು. ಹೀಗೆ ಜೀವನದ ವಿವಿಧ ಸಂದರ್ಭಗಳಲ್ಲಿ ಕಾಣಿಸಿಕೊಂಡ ಈ ಪ್ರಶ್ನೆ ನನ್ನ ಬದುಕಿನ ಸ್ವವಿಮರ್ಶೆಯಾಗಿ ನನಗೆ ಕೂಡಿ ಬಂದದ್ದು ತೀರಾ ಇತ್ತೀಚೆಗೆ.
ಅನಾದಿ ಕಾಲದಿಂದ ಮನುಷ್ಯನನ್ನು ಕಾಡಿರುವ ಪ್ರಶ್ನೆ ಇದು. ಪುರಾತನ ಗ್ರೀಕರು ಅಪೊಲೊದ ಡೆಲ್ಫಿಕ್ ದೇವಾಲಯದ ಹೊಸ್ತಿಲ ಮೇಲೆ “ನಿನ್ನ ನೀನರಿ” ಎಂದು ಕೆತ್ತಿಸಿದ್ದರು. “ಯಾಕೆ ಮನುಷ್ಯನಿಗೆ ತನ್ನ ನಿಜ ಜ್ಞಾನ ತಿಳಿದಿಲ್ಲ ಎನ್ನುವುದು ಆಶ್ಚರ್ಯಕರ” ಎನ್ನುತ್ತಾನೆ ಇಟಲಿಯ ಖ್ಯಾತ ತತ್ವಜ್ಞಾನಿ ಥಾಮಸ್ ಅಕ್ವೇನಸ್. “ಪ್ರತಿಯೊಬ್ಬರೂ ತನ್ನ ತಾ ತಿಳಿಯಲೇ ಬೇಕು, ಯಾಕೆಂದರೆ ನನ್ನ ಪ್ರಕಾರ ಅದೇ ಜೀವನದ ನಿಯಮ” ಎನ್ನುತ್ತಾನೆ ಫ್ರಾನ್ಸನ ಗಣಿತಜ್ಞ ಬ್ಲೇಸ್ ಪಾಸ್ಕಲ್. ಭಾರತದಲ್ಲಂತೂ ಮನುಷ್ಯನ ಬದುಕಿನ ಸಂಕೀರ್ಣತೆಯನ್ನು ಬಿಡಿಸಿಕೊಡಲು ಸಂತ ಪರಂಪರೆಗಳು ‘ನಾನು ಯಾರು’ ಎನ್ನುವ ಪ್ರಶ್ನೆಯ ಮೂಲಕ ಅವಿರತವಾಗಿ ಶ್ರಮಿಸಿವೆ. ಆ ಮೂಲಕ ಮನುಷ್ಯನಲ್ಲಿರಬೇಕಾದ ಸಹಜ ವಿಚಾರ ವಿಮರ್ಶೆಯನ್ನು ಜೀವಂತವಿರಿಸಲು ಪ್ರಯತ್ನಿಸಿವೆ. ಶರಣರಲ್ಲಂತೂ ಮನುಷ್ಯನ ಆಧ್ಯಾತ್ಮಿಕ ಸಾಧನೆಗೆ ಮೊದಲ ಹೆಜ್ಜೆಯಾಗಿ ನಾನು ಯಾರೆಂಬ ಪ್ರಶ್ನೆಯನ್ನು ಬಳಸಿಕೊಳ್ಳಲಾಗಿದೆ. ತತ್ವಪದಕಾರರು, ಅವಧೂತರು, ಸೂಫಿಗಳು, ಎಲ್ಲರೂ ಹೇಳುವುದು ಒಂದೇ- ತನ್ನ ತಾನರಿ ಎಂದು. “ಎಲ್ಲ ಎಲ್ಲವನರಿದು ಫಲವೇನಯ್ಯಾ, ತನ್ನ ತಾನರಿಯಬೇಕಲ್ಲದೆ?” ಎಂದು ಪ್ರಶ್ನಿಸುತ್ತಾಳೆ ಅಕ್ಕಮಹಾದೇವಿ. ಈ ಮೂಲಕ ನಮ್ಮ ಸಂತರು ಮನುಷ್ಯನಿಗೆ ಏನನ್ನು ದಕ್ಕಿಸಿ ಕೊಡಲು ಪ್ರಯತ್ನಿಸಿದ್ದಾರೆ ಎನ್ನುವ ಆಳಕ್ಕೆ ಇಳಿದು ನೋಡಿದಾಗ ಮಾತ್ರ “ನಾನು ಯಾರು” ಎನ್ನುವ ಪ್ರಶ್ನೆಯ ಅತ್ಯಗತ್ಯತೆ ತಿಳಿಯತೊಡಗುತ್ತದೆ.
ಈ ಪ್ರಶ್ನೆ ಅತ್ಯಂತ ಪ್ರಾಚೀನವಾದದ್ದೇ ಆಗಿದ್ದರೂ ಇಂತಹ ಆಧುನಿಕ ಯುಗದಲ್ಲೂ ಜಿಡ್ಡು ಕೃಷ್ಣಮೂರ್ತಿಯವರು ಈ ಪ್ರಶ್ನೆಯ ಪ್ರಾಮುಖ್ಯತೆಯನ್ನು ಹೇಳಿ ಹೋಗಿದ್ದಾರೆ: “ತನ್ನನ್ನು ತಾನು ವಸ್ತುನಿಷ್ಠವಾಗಿ ಅವಲೋಕನ ಮಾಡಿಕೊಳ್ಳುವುದು ಎಂದರೆ ಆತ್ಮ ತತ್ವವನ್ನು ಒಪ್ಪಿಕೊಳ್ಳುವಂತಹುದಲ್ಲ. ಏಕಾಂತವಲ್ಲ ಅಥವಾ ಅಖಂಡ ಮಾನವಕುಲದ ಜೊತೆಗಿನ ಸಂಬಂಧವನ್ನು ಕಳೆದುಕೊಳ್ಳುವಂತಹದ್ದೂ ಅಲ್ಲ. ಬದಲಾಗಿ ತಾನು ಎಷ್ಟರ ಮಟ್ಟಿಗೆ ಆರ್ಥಿಕ ಒತ್ತಡಗಳಿಂದ, ಸಂಸ್ಕೃತಿಗಳ ಪ್ರಭಾವದಿಂದ, ವಾತಾವರಣ, ಆಹಾರ ಪದ್ಧತಿ ಅಥವಾ ಧಾರ್ಮಿಕ ಸಂಘಟನೆಗಳ ಪ್ರಚಾರದಿಂದ ಅನುಬಂಧಿತನಾಗಿದ್ದೇನೆ ಎಂಬುದನ್ನು ಮನಗಾಣಬಹುದು. ಈಗ ಉದ್ಭವಿಸುವ ಪ್ರಶ್ನೆಯೆಂದರೆ, ಇಂತಹ ಅನುಬಂಧದಿಂದ ಬಿಡುಗಡೆ ಸಾಧ್ಯವೆ? ಬಿಡುಗಡೆಗೊಳ್ಳದಿದ್ದರೆ ವ್ಯಕ್ತಿ ಗುಲಾಮನಾಗುತ್ತಾನೆ ಮತ್ತು ಅದೇ ಹೇರಲ್ಪಟ್ಟಿರುವ ಬದುಕಿನ ವಿಧಾನವೇ ಸತ್ಯವೆಂದು ಭಾವಿಸಿಬಿಡುತ್ತಾನೆ” ಎನ್ನುತ್ತಾರೆ.
ಸಾರ್ವಕಾಲಿಕ ಪ್ರಶ್ನೆಯಾಗಿ “ತನ್ನ ತಾ ತಿಳಿ” ಎಂಬುದು ಯಾಕೆ ಮುಖ್ಯವಾದದ್ದು? ಅಂದರೆ ಸಚರಾಚರ ಜೀವಿಗಳಿಗೆಲ್ಲಾ ಮನುಷ್ಯನೇ ಅತ್ಯಂತ ಬುದ್ಧಿವಂತ ಎಂಬುದು ನಿಜವೇ ಆಗಿದ್ದ ಪಕ್ಷದಲ್ಲಿ “ನಾನು” ಎನ್ನುವುದು ಎಂತಹ ಮನೋಧೋರಣೆಯಿಂದ ಈ ಜಗತ್ತಿನೊಂದಿಗೆ ವ್ಯವಹರಿಸುತ್ತಿದೆ? ಇದನ್ನು ಸರಿಯಾಗಿ ಅರಿತುಕೊಳ್ಳುವುದು ಮುಖ್ಯ. ಆಗ ಮಾತ್ರ ಮನುಷ್ಯನ ಅಂತಃಪ್ರಜ್ಞೆಯಲ್ಲಿ ತನಗಿರುವ ಮಹತ್ವಪೂರ್ಣ ಜವಾಬ್ದಾರಿಗಳು ಉದಯಿಸಲು ಪ್ರಾರಂಭವಾಗುತ್ತವೆ.
ನಾವು ಈ ಜಗತ್ತಿನೊಂದಿಗೆ ವ್ಯವಹರಿಸುವಾಗ ಮೂರು ಮುಖ್ಯ ಸಂಬಂಧಗಳನ್ನು ಗಮನಿಸಲು ಹೋಗುವುದೇ ಇಲ್ಲ. ಮೊದಲನೆಯದು “ನಾನು!”, ಎರಡನೆಯದು, “ನನ್ನನ್ನೂ ಒಳಗೊಂಡಂತೆ ಇರುವ ನನ್ನ ಸುತ್ತಲಿನ ಸಮಾಜ” ಹಾಗೂ ಮೂರನೆಯದು, “ಇವೆರಡಕ್ಕೂ ಅವಕಾಶ ಒದಗಿಸುತ್ತಾ ತಾಯಿಯಂತೆ ನಮ್ಮನ್ನು ಪೋಷಿಸುತ್ತಿರುವ ಅನಂತ ನಿಸರ್ಗ”. ನಾನು ಎಂಬುದಕ್ಕಿಂತಲೂ ಹೆಚ್ಚು ಕಾಲ ಬಾಳುವಂತಹದ್ದು ನನ್ನ ಸಮಾಜ. ಇಂತಹ ಅದೆಷ್ಟೋ ಸಮಾಜಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡು ಪೋಷಿಸುತ್ತಿರುವುದು ಈ ಅನಂತ ಪ್ರಕೃತಿ! ಎಲ್ಲಿಯವರೆಗೆ ಮನುಷ್ಯ ‘ನಾನು’ ಎಂಬ ಸ್ವಹಿತದ ಕೇಂದ್ರಕ್ಕೆ ಜೋತುಬಿದ್ದು, ಸಮಾಜ ಮತ್ತು ನಿಸರ್ಗದ ಸವಲತ್ತುಗಳನ್ನು ಅನುಭವಿಸುವ ಪ್ರವೃತ್ತಿಗಷ್ಟೇ ದುರುಪಯೋಗಪಡಿಸಿಕೊಳ್ಳುತ್ತಲೇ ಇರುತ್ತಾನೋ… ಅಲ್ಲಿಯವರೆಗೆ ತನ್ನ ಸುತ್ತಲಿನ ಎಲ್ಲವನ್ನೂ ಕಠೋರವಾಗಿ ಭ್ರಷ್ಟಗೊಳಿಸುತ್ತಲೇ ಇರುತ್ತಾನೆ. ಇಂಥ use and throw ಸ್ವಭಾವ ಅವನಲ್ಲಿ ಸಹಜವಾಗಿ ಅಸ್ತಿತ್ವ ಪಡೆದುಕೊಳ್ಳುತ್ತದೆ. ಅಂತಹವನನ್ನು ‘ನಾಗರಿಕ’ ಎಂದು ಕರೆದುಕೊಳ್ಳುವುದು ತೀರಾ ನಾಟಕೀಯವಾಗುತ್ತದಲ್ಲವೇ? ಈ ಅಸಂಬದ್ಧತೆಯನ್ನು ಶರಣರು “ನಾನೆಂಬ ಅಹಂಕಾರ” ಎಂದು ಗುರುತಿಸಿಕೊಳ್ಳುತ್ತಾರೆ. ಅಹಂಕಾರವು ಸುತ್ತಲಿನ ಸಮಾಜದ ಸಂಕ್ಲೇಶಗಳಿಂದ ಪ್ರಭಾವಿತವಾಗಿದ್ದು, ಮನುಷ್ಯನ ಮನಸ್ಸನ್ನು ಆಕ್ರಮಿಸಿಬಿಡುತ್ತದೆ. ಮತ್ತದೇ ವ್ಯಕ್ತಿಯಿಂದ ಸುತ್ತಲಿನ ಸಮಾಜಕ್ಕೆ ಅದರ ಸೋಂಕು ಹರಡುತ್ತಿರುತ್ತದೆ.
ನಾನೆಂಬ ಅಹಂಕಾರ ತಲೆದೋರಿದಲ್ಲಿ
ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು
ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು
ಜ್ಞಾನಜ್ಯೋತಿ ಕೆಡಲೊಡನೆ
ನಾಬಲ್ಲೆ, ಬಲ್ಲಿದರೆಂಬ ಆರು ಹಿರಿಯರೆಲ್ಲರೂ
ತಾಮಸಕ್ಕೊಳಗಾಗಿ ಸೀಮೆ ಕೆಟ್ಟರು ಕಾಣಾ ಗುಹೇಶ್ವರಾ.
ಸಂಕ್ಲೇಶಗಳಿಂದ ಪರಿತಪಿಸುವ ಮನಸ್ಸು ಮತ್ತು ಅವನ ಸಮಾಜ ನಿರಂತರವಾಗಿ ಅನುಮಾನ, ದ್ವಂದ್ವ, ಭಯ, ಅಭದ್ರತೆ, ಅಸಹಾಯಕತೆ, ದುಃಖ, ಸಂಕಟ, ದುರಭಿಮಾನ, ದುರಾಚಾರಗಳಿಂದ ಸದಾ ಕ್ಷೋಭೆಗೊಳಗಾಗಿರುತ್ತವೆ. ಇದನ್ನೇ ಈ ವಚನದಲ್ಲಿ ‘ಬಿರುಗಾಳಿ’ ಎಂದಿರುವುದು. ಈ ಬಿರುಗಾಳಿ ಮನುಷ್ಯನಲ್ಲಿರುವ ಮಹತ್ವಪೂರ್ಣ ಅಂತಃಪ್ರಜ್ಞೆಯನ್ನೇ ಕೊಂದುಹಾಕಿರುತ್ತದೆ. ಆದ್ದರಿಂದ ‘ನಾನೆಂಬ’ ಮೆಳ್ಳೆಗಣ್ಣಿನಿಂದಲೇ ನಮ್ಮ ಸುತ್ತಲಿನ ಎಲ್ಲ ಆಗುಹೋಗುಗಳನ್ನು ಗ್ರಹಿಸುವ ಪರಿಪಾಠಕ್ಕೆ ನಮ್ಮ ಮನಸ್ಸು ಸಿಕ್ಕಿಕೊಂಡಿರುತ್ತದೆ. ಇದು ತನ್ನ ಕ್ಷೇಮವೇ ಅಂತಿಮ ಎನ್ನುವ ಸ್ಥಿತಿಗೆ ಮನುಷ್ಯನನ್ನು ದೂಡಿರುತ್ತದೆ. ಇಂತಹ ರೋಗಗ್ರಸ್ತ ಮನಸ್ಸುಗಳಿಂದ ಉತ್ತಮ ಸಮಾಜದ ನಿರ್ಮಾಣವಾಗಲಿ, ಉತ್ತಮ ವ್ಯಕ್ತಿಯನ್ನು ರೂಪಿಸುವುದಾಗಲಿ ಅಸಾಧ್ಯದ ಮಾತು. ಉತ್ತಮ ವ್ಯಕ್ತಿಯನ್ನು ನಿರ್ಮಿಸುವುದೇ ಉತ್ತಮ ಸಮಾಜದ ನಿರ್ಮಾಣಕ್ಕಿರುವ ಅಸ್ತಿಭಾರ. ಆದ್ದರಿಂದ ಮನುಷ್ಯನಲ್ಲಿ ತುಂಬಿ ಹೋಗಿರುವ ಅವನ ಪೂರ್ವಾಶ್ರಯಗಳನ್ನು ತೊಳೆಯದೇ ಬೇರೆ ಗತ್ಯಂತರವಿಲ್ಲ.
ಒಳಗೆ ತೊಳೆಯಲರಿಯದೇ ಹೊರಗೆ ತೊಳೆದು
ಕುಡಿವುತಿರ್ದರಯ್ಯಾ
ಪಾದೋದಕ ಪ್ರಸಾದವನರಿಯದೆ
ಬಂದ ಬಟ್ಟೆಯಲ್ಲಿ ಮುಳುಗುತ್ತೈದಾರೆ.
ಒಳಗಿನ ಕೊಳೆಯನ್ನು ಶುದ್ಧೀಕರಿಸಿಕೊಳ್ಳುವ ಆಚಾರವೇ ನಮ್ಮ ಸಂತರಲ್ಲಿ “ನಿನ್ನ ನೀನು ತಿಳಿ” ಎಂಬುದಕ್ಕಿರುವ ಮಹತ್ವ. “ನಿನ್ನ ನೀನು ತಿಳಿ” ಎಂಬ ಕ್ರಿಯಾಚಾರವು “ನಾನು ಯಾರು?” ಎಂಬ ಸ್ವ-ವಿಮರ್ಶೆಯಿಂದ ಪ್ರಾರಂಭವಾಗಿರುವುದನ್ನು ಅವರನ್ನು ಅಧ್ಯಯನ ಮಾಡುವುದರಿಂದ ಸರಿಯಾಗಿ ತಿಳಿದುಕೊಳ್ಳಬಹುದು. ಸಮಾಜ ಮತ್ತು ಪ್ರಕೃತಿಯ ಜೊತೆ ಒಂದು ಸಣ್ಣ ಅವಕಾಶವಾಗಿ ಬಂದಿರುವ ನಾನೊಂದು ತರಗೆಲೆ ಮಾತ್ರ! “ನಾನು” ಎಂಬುದಕ್ಕಿಂತಲೂ, ನನ್ನ ಸುತ್ತಲಿನ ಸಮಾಜ ಮತ್ತು ನಿಸರ್ಗವೇ ಅತ್ಯಮೂಲ್ಯವಾದದ್ದು ಎನ್ನುವ ವಿವೇಕದಿಂದ ಬಾಳಿ, ಮಾನವೀಯ ಅನುಕಂಪೆಗೆ ಶರಣಾದ ಶರಣರ ನಡೆ ಸಾರ್ವಕಾಲಿಕ. ಈ ನೆಲೆಯಿಂದ ಶರಣರ ಬದುಕನ್ನು ಮುಕ್ತವಾಗಿ ನೋಡಲು ಅನುವಾದಾಗ ಮಾತ್ರ, ನಾನು- ನನ್ನ ಸಮಾಜ- ನಿಸರ್ಗ, ಈ ಮೂರರಲ್ಲಿ ವ್ಯಾಪಿಸಿರುವ ತಾಯ್ಗರುಳ ಸಂಬಂಧದಲ್ಲಿ ಶರಣರು ಜೀವಿಸಿದ್ದು ಗೊತ್ತಾಗುತ್ತದೆ. ಆ ಮೂಲಕ ಅವರು ಪಡೆದ ಅತ್ಯಮೂಲ್ಯವಾದ ಆಳ-ನಿರಾಳ- ಅನುಭಾವ- ಬದುಕಿನ ರೋಮಾಂಚನ ನಮ್ಮನ್ನು ಬೆರಗಾಗಿಸಿ ಬಿಡುತ್ತದೆ. ಅವರು ನಡೆದು ಪಡೆದ ಸ್ವಾಸ್ಥ್ಯ ಮನಸ್ಸು, ಮಾನವ ಕುಲಕ್ಕೆ ಎಂದೆಂದಿಗೂ ಅನಿವಾರ್ಯವೇ ಆಗಿದೆ. ಪ್ರತಿ ಕ್ಷಣ ನಾವು ಅನುಭವಿಸುತ್ತಿರುವ ಸಂಕೀರ್ಣ ಬದುಕಿಗೆ, “ನಾನು ಯಾರು?” ಎನ್ನುವ ಪ್ರಶ್ನೆ ಬೇಸಿಗೆಯ ತಾಪಕ್ಕೆ ಇಟ್ಟಿರುವ ಅರವಟ್ಟಿಗೆ ಎಂಬುದನ್ನು ನೆನಪಿಟ್ಟುಕೊಳ್ಳಲೇ ಬೇಕು.
ಪ್ರಸ್ತುತವಾಗಿ “ನಾನು ಯಾರು?” ಎಂಬ ಪ್ರಶ್ನೆಯ ಮೂಲಕ ನಾವೇ ಹೊತ್ತುಕೊಂಡಿರುವ ಭ್ರಮೆಯ ಭಾರಗಳನ್ನು, ಕೊನೆಗೊಳ್ಳದಾ ಆಸೆಗಳನ್ನು, ವೈಚಾರಿಕ ಹಾದರತನಗಳನ್ನು ನಮ್ಮೊಳಗೆ ನಾವು ಸ್ಪಷ್ಟವಾಗಿ ಓದಿಕೊಳ್ಳಬಹುದು. ಅಹಂಕಾರಿಕೆಯನ್ನು ನಿಯಂತ್ರಿಸಿ ಮನುಷ್ಯ ಸಂಬಂಧಗಳನ್ನು ಪರಿಪೂರ್ಣತೆಯೆಡೆಗೆ ಕೊಂಡೊಯ್ಯುವುದರ ಮೂಲಕ ಪ್ರತಿಯೊಬ್ಬ ವ್ಯಕ್ತಿಯನ್ನು ಸುಶಿಕ್ಷಿತನನ್ನಾಗಿಸುವುದು ಈ ಆಚಾರದ ಗುರಿಯಾಗಿದೆ. ಆಧುನಿಕ ಶಿಕ್ಷಣಗಳು ನಾವು ಜೀವಿಸಿರುವ ವಸ್ತುಸ್ಥಿತಿಯ ಮಹತ್ವವನ್ನು ಎಂದೂ ನಮಗೆ ಹೇಳಿಕೊಡಲಿಲ್ಲ. ಅವು ಕೇವಲ ನಮಗೆ ಸುಖಿಸುವ ಭ್ರಮೆಯನ್ನಷ್ಟೇ ಕಲಿಸಿಕೊಟ್ಟಿವೆ. ನಮ್ಮೊಳಗೆ ಅಹಂಕಾರಿಕೆಗೆ ಆಶ್ರಯವನ್ನು ನೀಡಿ ಪೋಷಿಸುತ್ತಿರುವ ದುರ್ಬಲ ಭಾವನೆಗಳು, ಅಸಂಬದ್ಧ ನಂಬುಗೆಗಳು, ಅನುಚಿತ ಅಸ್ತಿತ್ವದ ಪರಿಕಲ್ಪನೆಗಳಿಂದಾದ ಭ್ರಷ್ಟ ಪರಿಣಾಮಗಳಿಂದ ಹೊರಬರುವುದನ್ನು ನಮ್ಮ ಶಿಕ್ಷಣ ನಮಗೆ ತಿಳಿಸಲಿಲ್ಲ. ಇದನ್ನು ಅರಿಯಬೇಕಾದರೆ ಸಂತ ಪರಂಪರೆಗಳು ನಡೆದಾಡಿದ ಈ ಮಣ್ಣಿನ ದಾರಿಯನ್ನೇ ತುಳಿಯಬೇಕಿದೆ. ನಮಗೇ ತಿಳಿಯದಂತೆ ನಮ್ಮನ್ನು ನಮ್ಮಿಂದಲೇ ನಿರ್ಬಂಧಿಸಿಕೊಂಡಿದ್ದೇವೆ. ಈ ಅವಿವೇಕದ ವಿವಶತೆಗಳಿಂದ ಹೊರಬರಲು ಇದೊಂದು ದಾರಿದೀವಿಗೆ. ಈ ಬಗೆಯ ವಿಚಾರ ವಿಮರ್ಶೆಯು ನಮ್ಮ ಸ್ವಭಾವದ ಆಳದಲ್ಲಿ ಬೇರುಬಿಟ್ಟುಕೊಂಡಿರುವ ಅನುಕರಣಾ ವ್ಯಾಧಿಗಳಿಂದ, ಅನಾವಶ್ಯಕ ಅಭಿಪ್ರಾಯಗಳಿಂದ ಮತ್ತು ಉಪಯೋಗಕ್ಕೆ ಬಾರದ ದುಗುಡಗಳಿಂದ ನಮ್ಮನ್ನು ಬಿಡುಗಡೆಗೊಳಿಸಬಲ್ಲದು. ಆ ಮೂಲಕ ಸ್ವಾನುಭಾವದ ಕಿಡಿಯನ್ನು ನಮ್ಮಲ್ಲಿ ಉದ್ದೀಪಿಸಬಲ್ಲದು.
ಈಗ ನಮ್ಮ ಮೂಲಭೂತ ಪ್ರಶ್ನೆಗೆ ಬರೋಣ…! ಹಾಗಾದರೆ “ನಾನು ಯಾರು?” – ಈ ಪ್ರಶ್ನೆ ಎರಡು ರೀತಿಯಲ್ಲಿ ನಮ್ಮನ್ನು ಗ್ರಹಿಸಿಕೊಳ್ಳಲು ಒತ್ತಾಯಿಸುತ್ತದೆ. ಬಹಿರಂಗ ಪ್ರಪಂಚದಲ್ಲಿ ನನ್ನ ಅಸ್ತಿತ್ವ ಹಾಗೂ ಅಂತರ್ಮುಖದಲ್ಲಿ ನನ್ನ ಅಸ್ತಿತ್ವದ ಇರುವಿಕೆಗೆ ನಾನು ಮಾಡುತ್ತಿರುವ ರಾಜಕೀಯ. ಈ ಬಹಿರ್- ಅಂತರ್ಗತ ರಾಜಕೀಯಗಳೇ ನಮ್ಮ ಸ್ವಭಾವವನ್ನು ರೂಪಿಸಿವೆ. ಯಾರಾದರೂ “ನಾನು ಯಾರು?” ಪ್ರಶ್ನೆಯನ್ನು ಕೇಳಿದರೆ ನಾವು ಥಟ್ಟನೆ ಹೆಸರು, ಉದ್ಯೋಗ, ಓದಿನ ವಿವರ, ಊರು- ಕೇರಿ, ಜಾತಿ- ಧರ್ಮ, ಆಹಾರ-ವಿಹಾರ, ಹಣ ಮತ್ತು ಅಧಿಕಾರಗಳಿಂದಾದ ಸ್ಟೇಟಸ್, ಕೌಶಲ್ಯ, ರಾಜಕೀಯ ಸಾಮರ್ಥ್ಯ ಮತ್ತು ಕೀರ್ತಿಯ ಉತ್ತುಂಗತೆಗಳ ಮೂಲಕ ನಮ್ಮನ್ನು ನಾವು ಪರಿಚಯ ಮಾಡಿಕೊಳ್ಳಲು ಶುರು ಮಾಡುತ್ತೇವೆ. ಹೊರಗಿನ ಜಗತ್ತಿಗೂ ನಮ್ಮನ್ನು ಈ ಐಡೆಂಟಿಟಿ ಮತ್ತು ಡಿಫರೆನ್ಸ್ ಗಳ ಮೂಲಕ ಮಾತ್ರ ಗುರುತಿಸುವ ಸಾಮರ್ಥ್ಯವಿದೆ. ಇದರಾಚೆಗೆ ಅದು ನಮ್ಮನ್ನು ಗ್ರಹಿಸಲಾರದು. ಈ ರೀತಿ ಗುರುತಿಸಿಕೊಳ್ಳುವುದು ತಪ್ಪೆಂತಲೂ ಅಥವಾ ಸರಿಯೆಂತಲೂ ಸಮರ್ಥಿಸಿಕೊಳ್ಳುವುದು ಇಲ್ಲಿನ ಉದ್ದೇಶವಲ್ಲ. ಪಾಶ್ಚಾತ್ಯ ಸಂಸ್ಕೃತಿಗಳು ನಮ್ಮನ್ನು ನಾಗರಿಕತೆಯ ನೆಪದಲ್ಲಿ ಪ್ರಭಾವಿಸಿದಾಗ ನಿಸರ್ಗದ ಅನಂತ ಸಂಬಂಧಗಳಲ್ಲಿ ಜೀವಿಸುತ್ತಿರುವ ಜೀವಂತ ವ್ಯಕ್ತಿಯನ್ನು ಭೌತಿಕ ಮತ್ತು ಬೌದ್ಧಿಕ ಚಹರೆಗಳ ಮೂಲಕವಷ್ಟೇ ಗುರುತಿಸುವ ಪರಿಪಾಠ ನಮ್ಮಲ್ಲಿ ತೀವ್ರವಾಗಿ ಬೆಳೆಯಲಾರಂಭಿಸಿತು. ಆಗ ಆದ ಪ್ರತಿಕೂಲ ಪರಿಣಾಮಗಳು ಏನು ಗೊತ್ತೆ? ಪ್ರತಿನಿತ್ಯ ಸಂಭವಿಸುವ ಮನುಷ್ಯ ಸಂಬಂಧಿ ಸಂಗತಿಗಳ ಕಾರ್ಯ-ಕಾರಣ-ಪರಿಣಾಮಗಳನ್ನು ಗ್ರಹಿಸಿಕೊಂಡು ಸ್ವಾಭಾವಿಕವಾದ ಅಂತಃಪ್ರಜ್ಞೆಯನ್ನು ತಲುಪಬೇಕಿದ್ದ ಬುದ್ಧಿಜೀವಿ ಮನುಷ್ಯ ಸಂಗ್ರಹಣೆಯ ಮಿತಿಮೀರಿದ ಪ್ರವೃತ್ತಿಗಿಳಿದ. ಇತರರಿಗಿಂತಲೂ ತನಗಿರುವ ವಿಶಿಷ್ಟವಾದ ಭೌತಿಕ/ಬೌದ್ಧಿಕ ಹೆಚ್ಚುಗಾರಿಕೆಯನ್ನು ಒಪ್ಪಿಕೊಳ್ಳುವಂತೆ ಸಮಾಜದ ಮೇಲೆ ತನ್ನ ಸಂಗ್ರಹಣೆಯ ಚಟವನ್ನು ಹೇರುವ ಅಭ್ಯಾಸ ಬೆಳೆಸಿಕೊಂಡ. ಇದರಿಂದ ಪ್ರಕೃತಿದತ್ತವಾಗಿ ಬಂದಿರುವ ಮಾನವ ಘನತೆಗಳ ಉಲ್ಲಂಘನೆ ಸಹಜವೆಂಬಂತಾಯಿತು. ಮನುಷ್ಯ- ಮನುಷ್ಯನ ಮಧ್ಯೆ ಇರಬೇಕಾದ ಜೈವಿಕ ಸಂಬಂಧಗಳಲ್ಲಿ ಉಂಟಾಗಬಹುದಾದ ನಂಬುಗೆ, ವಿಶ್ವಾಸ, ಪರಸ್ಪರ ಸಾಮರಸ್ಯ, ದಯೆ, ಮೈತ್ರಿಗಳಿಂದ ಮನುಷ್ಯ ವಂಚಿತನಾದ. ಮಾನವನ ಭೌತಿಕ- ಬೌದ್ಧಿಕ ಚಹರೆಗಳಿಗಿಂತಲೂ ಮಿಗಿಲಾದದ್ದು ಎಲ್ಲರನ್ನೂ ಒಳಗೊಂಡು ಬಾಳುವ ಬದುಕಿನ ಸೊಬಗು ಮತ್ತದರ ಮೌಲ್ಯಗಳು. ಭೌತಿಕ- ಬೌದ್ಧಿಕ ಚಹರೆಗಳು ಯಾವ ರೀತಿಯಲ್ಲೂ ಮಾನವನ ಘನತೆಯನ್ನು ಎತ್ತಿ ಹಿಡಿಯಲಾರವು. ಆದ್ದರಿಂದ ಈ ಚಹರೆಗಳ ಇತಿಮಿತಿಗಳನ್ನು ನಾವು ಒರೆಗೆ ಹಚ್ಚಲೇ ಬೇಕಾಗಿದೆ. ಏಕೆಂದರೆ ಇವುಗಳೇ ನಮ್ಮನ್ನು ತೀರ್ಮಾನಿಸಿಬಿಡುವಂತಾಗಬಾರದು. ಬದಲಾಗಿ ಅವುಗಳ ವಿವಕ್ಷೆಯಿಂದ ಮರಳಿ ಮಣ್ಣಿನ ಸೊಬಗನ್ನು ನಾವು ಒಪ್ಪಿ ಅಪ್ಪಿಕೊಳ್ಳುವಂತಾಗಬೇಕು.
ಹಾಗಾದರೆ ನನ್ನ ಹೆಸರು ನಾನೇ?
ನನ್ನ ಹೆಸರನ್ನು ನಾನೆಂದುಕೊಳ್ಳೋಣವೆಂದರೆ, ನನ್ನ ಜನ ನನ್ನನ್ನು ಗುರುತಿಸಿಕೊಳ್ಳುವುದಕ್ಕಷ್ಟೇ ಈ ಹೆಸರು ಇಟ್ಟಿದ್ದಾರೆ ವಿನಃ ಈ ಹೆಸರಲ್ಲಿ ನಾನಿಲ್ಲ. ಇದು ಹೇಗೆಂದರೆ ಸಿಹಿಯ ಅನುಭವ ನೀಡುವ ಬೆಳ್ಳನೆಯ ಸಣ್ಣಸಣ್ಣ ಮರಳಿನಂತಿರುವ ವಸ್ತುರಾಶಿಗೆ ‘ಸಕ್ಕರೆ’ ಎಂಬ ನಾಮಪದವನ್ನು ಸೂಚಿಸಿದಂತೆ. ಅದಕ್ಕೆ ಸಕ್ಕರೆ ಎಂದು ಹೆಸರಿಸಿದ್ದು ನಾವೇ ಅಲ್ಲವೇ? ಸಕ್ಕರೆ ಎಂಬ ಪದಕ್ಕೂ, ಆ ಪದಕ್ಕೆ ಅನ್ವಯಿಸಿಕೊಂಡ ಪದಾರ್ಥದ ಅನುಭವಕ್ಕೂ ವ್ಯತ್ಯಾಸವಿದೆ. ಪದವೇ ಬೇರೆ, ಪದಾರ್ಥದ ಅನುಭವವೇ ಬೇರೆ. ಪ್ರತಿಕ್ಷಣ ಈ ನಿಸರ್ಗದೊಂದಿಗೆ ಸಂಬಂಧವನ್ನಿಟ್ಟುಕೊಂಡೇ ಸಾಗುತ್ತಿರುವ ‘ನಾನು ಎಂಬ ಈ ಜೈವಿಕ ಪದಾರ್ಥದ್ದು’ (life substance) ಪ್ರಕೃತಿಗೆ ಬೆಸೆದುಕೊಂಡೇ ಇರುವ ಸಂಬಂಧ. ನಾನು ಎಂಬ ಜೀವದ ಇರುವಿಕೆ ಮತ್ತು ಆಗುವಿಕೆಯಲ್ಲಿ ನನ್ನ ಹೆಸರಿನ ಕುರುಹೇನೂ ಇಲ್ಲ. ನನ್ನ ಹೆಸರು ಮತ್ತು ನನ್ನ ಜೈವಿಕ ಪದಾರ್ಥದ ನಡುವೆ ಯಾವ ನೈಸರ್ಗಿಕ ಸಂಬಂಧವೂ ಇಲ್ಲ. ಭಾಷಾತೀತವಾದ ನನ್ನ ಜೀವಕ್ಕೆ ನನ್ನ ಹೆಸರು ತಿಳಿದೇ ಇಲ್ಲ!
ನನ್ನ ಉದ್ಯೋಗವು ನಾನೇ?
ನನ್ನ ಜೀವಕ್ಕೆ ಬದುಕಲು ಬೇಕಾದ ಅತ್ಯವಶ್ಯಕತೆಗಳನ್ನು ಒದಗಿಸಲು ನನಗೆ ಉದ್ಯೋಗ ಬೇಕಾಗಿದೆ. ನನ್ನ ಉದ್ಯೋಗದೊಂದಿಗೆ ನನಗಿರುವ ಬದ್ಧತೆ ನನ್ನನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾ ಸಾಗುತ್ತಿರುತ್ತದೆ ಎಂಬುದರಲ್ಲಿ ಯಾವ ಅನುಮಾನಗಳೂ ಇಲ್ಲ. ಉದ್ಯೋಗ ಎನ್ನುವುದಕ್ಕಿಂತ ‘ಕಾಯಕ’ ಎನ್ನುವ ಶರಣರ ಪದವೇ ಹೆಚ್ಚು ಸೂಕ್ತ. ಏಕೆಂದರೆ ಉದ್ಯೋಗವು ವ್ಯಕ್ತಿಯ ಶ್ರೇಷ್ಠತೆಯನ್ನು ಪ್ರತಿನಿಧಿಸುತ್ತದೆ. ಕಾಯಕ ಒಂದು ಸಜೀವ ಸಂಬಂಧದಲ್ಲಿ ಅನಿವಾರ್ಯವಾಗುತ್ತದೆ. ಕಾಯಕ ಇಡೀ ಜೀವಸಂಕುಲದ ಇರುವಿಕೆಯನ್ನು ಪೋಷಿಸಿ ಪ್ರೀತಿಸಲ್ಪಡುತ್ತದೆ. ಉದ್ಯೋಗ ಆಳುವ ಪ್ರವೃತ್ತಿಯನ್ನು ಬೆಳೆಸುತ್ತದೆ ಮತ್ತು ಅದು ಸದಾ ಸಮಾಜದ ಮುಂದೆ ಒಂದು ಪ್ರತ್ಯೇಕತೆಯ ಸಿದ್ಧಾಂತವನ್ನು ಮಂಡಿಸುತ್ತಿರುತ್ತದೆ.
ಎಲ್ಲಾ ಜೀವಿಗಳೂ ತಮ್ಮ ಮೂಲಭೂತ ಪರಿತಾಪಗಳನ್ನು ಪೂರೈಸಿಕೊಳ್ಳಲು ಸದಾ ಹೋರಾಟ ಮಾಡಬೇಕಾದ್ದು ಅನಿವಾರ್ಯ. ಜೀವದ ಇರುವಿಕೆಯನ್ನು ಕಾಪಾಡಿಕೊಳ್ಳಲು ಕೊನೆ ಉಸಿರಿನ ತನಕ ಎಲ್ಲಾ ಜೀವಿಗಳು ಸದಾ ಹೋರಾಟ ಮಾಡಲೇ ಬೇಕು. ಈ ನಿರಂತರ ಹೋರಾಟವು ಇತರೆ ಜೀವಿಗಳಿಗೆ ‘ಉದ್ಯೋಗ’ ಎನಿಸಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮನುಷ್ಯನಿಗಂತೂ ಉದ್ಯೋಗವೆಂಬುದು ಅತಿಯಾದ ಕಲ್ಪನೆಗಳನ್ನು ಕಟ್ಟಿಕೊಟ್ಟಿದೆ. ಎಲ್ಲರೂ ಎಲ್ಲಾ ಉದ್ಯೋಗಗಳನ್ನು ಮಾಡಲು ಬಯಸುವುದಿಲ್ಲ. ಮನುಷ್ಯನು ಉದ್ಯೋಗದ ಶ್ರೇಷ್ಠತೆಯನ್ನು ಕಲ್ಪಿಸಿಕೊಂಡು ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವುದೇ ಹೆಚ್ಚು. ಉದ್ಯೋಗದಲ್ಲಿ ಶ್ರೇಷ್ಠ ಮತ್ತು ಕನಿಷ್ಠ ಎಂಬ ತಾರತಮ್ಯಗಳನ್ನು ನಿಜವೆಂದು ನಂಬಿ, ಅದರ ಬಲೆಗೆ ಸಿಕ್ಕಿ ಮಾನವ ಕುಲ ಅದರಲ್ಲೇ ಪರಿತಪಿಸುತ್ತಿದೆ. ಮಹಾತ್ಮ ಗಾಂಧೀಜಿಯವರು ತಮ್ಮ ಸ್ವರಾಜ್ ಸಿದ್ಧಾಂತವನ್ನು ಮಂಡಿಸುವಾಗ, “ಒಬ್ಬ ರಾಷ್ಟ್ರಪತಿಗೆ ಎಷ್ಟು ಗೌರವವಿರುತ್ತದೋ ಚಪ್ಪಲಿ ಹೊಲೆಯುವವನಿಗೂ ಅಷ್ಟೇ ಗೌರವ ಇರಬೇಕಾಗುತ್ತದೆ” ಎನ್ನುತ್ತಾರೆ. ಮನುಷ್ಯನ ಉದ್ಯೋಗ, ಅವನು- ಅವನ ಸಮಾಜ ಮತ್ತವನ ನಿಸರ್ಗದ ಕ್ಷೇಮವನ್ನು ಕಾಪಾಡುವಂತಿರಬೇಕು. ಆಗ ಮಾತ್ರ ಮನುಷ್ಯ ಕುಲ ಗೌರವಕ್ಕೆ ಪಾತ್ರವಾಗುತ್ತದೆಂಬುದು ಗಾಂಧೀಜಿಯ ಉದ್ದೇಶವಾಗಿತ್ತು. ಅವರ ಉದ್ದೇಶ ಇಲ್ಲಿ ನೆರವೇರಲಿಲ್ಲ. ಕಾರಣವೇನೆಂದರೆ ಮೊದಲೇ ಚಾತುರ್ವರ್ಣದಲ್ಲಿ ಬೇಯುತ್ತಿದ್ದ ಭಾರತದ ಜೀವನ ಪದ್ಧತಿಗೆ ಪಾಶ್ಚಾತ್ಯರು ನೀಡಿದ ನಾಗರಿಕತೆಯ ಭ್ರಮೆಯೂ ಸೇರಿ, ಉದ್ಯೋಗಕ್ಕೆ ಶ್ರೇಷ್ಠತೆಯ ಭ್ರಷ್ಟತೆ ತಟ್ಟಿಬಿಟ್ಟಿತು. ಆದರೆ ನಿಸರ್ಗದ ಅಂತಿಮ ನಿರ್ಧಾರ ಹೇಗಿದೆಯೆಂದರೆ ಒಬ್ಬ ರಾಷ್ಟ್ರಪತಿಯಿಂದ ಮೊದಲ್ಗೊಂಡು ಕುರಿ ಕಾಯುವ ಸಾಮಾನ್ಯನವರೆಗೂ ಹಸಿವು, ಬಾಯಾರಿಕೆ, ರೋಗ, ಸಾವುಗಳು ಸಮವಾಗಿವೆ. ಆದ್ದರಿಂದ ಉದ್ಯೋಗ ಶ್ರೇಷ್ಠತೆ ಇಲ್ಲಿ ಕೇವಲ ಭ್ರಮೆ ಎನಿಸಿಬಿಡುತ್ತದೆ. ಮತ್ತೊಂದು ಸತ್ಯ, ಉದ್ಯೋಗವು ನನ್ನನ್ನಷ್ಟೇ ನಚ್ಚಿಕೊಂಡಿಲ್ಲ. ನಿರ್ದಿಷ್ಟ ಉದ್ಯೋಗಕ್ಕೆ ನಿರ್ದಿಷ್ಟ ವ್ಯಕ್ತಿಯೇ ಬೇಕೆಂದೇನೂ ಇಲ್ಲ. ಉದ್ಯೋಗದ ಕುರಿತಾಗಿ ನಮ್ಮ ಜನಪದರಲ್ಲಿ ಒಂದು ಗಾದೆ ಇದೆ: “ಮಗಳನ್ನು ಮಾರಿದರೂ ಬದುಕಿನ ಬವಣೆ ತೀರುತ್ತೆ, ಮಂಕರಿ ಮಾರಿದರೂ ಬದುಕಿನ ಬವಣೆ ತೀರುತ್ತೆ”- ಇವೆರಡರಲ್ಲಿ ಯಾವುದು ಉತ್ತಮ? ಮಂಕರಿ ಮಾರುವುದರಲ್ಲಿ ತನಗೂ, ಸುತ್ತಲಿನ ಸಮಾಜಕ್ಕೂ ಉಪಯುಕ್ತತೆ ಇದೆ. ಮನುಷ್ಯ ಪ್ರಜ್ಞೆ ಒಪ್ಪುವ ನೈತಿಕ ಮೌಲ್ಯ ಇದೆ. ನನ್ನ ಜೀವದ ಇರುವಿಕೆಯು ನೈತಿಕತೆಯ ಆಧಾರದಲ್ಲಿ ಗಟ್ಟಿಯಾಗಿ ನೆಲೆಯೂರುತ್ತದೆಯೇ ವಿನಃ ಭ್ರಮೆಗಳ ಮೇಲೆ ಅದು ಕುಸಿದು ಬೀಳಲೇ ಬೇಕು. ಆದ್ದರಿಂದ ನಾನು ಎಂಬ ಜೈವಿಕ ಪದಾರ್ಥಕ್ಕೆ ನೈತಿಕತೆಯೇ safety zone. ಪರಿಪೂರ್ಣವಾದ ನೈತಿಕ ಪ್ರಜ್ಞೆಗೆ ಜೀವನ ಕೌಶಲ್ಯ ತಂತಾನೆ ಸ್ವಾಭಾವಿಕವಾಗಿ ಸಂಭವಿಸಬಲ್ಲದು. ಜೀವನ ಕೌಶಲ್ಯವೇ ನಿಜವಾದ ಉದ್ಯೋಗ. ಆ ಕೌಶಲ್ಯವನ್ನು ‘ನಾನು’ create ಮಾಡಿಕೊಳ್ಳಬೇಕೆ ವಿನಃ, ಆ ನನ್ನ creativity ಯಲ್ಲಿ ನಾನೆಂಬ ಜೈವಿಕ ಪದಾರ್ಥ ಇಲ್ಲ. ನನ್ನ ನಿಮಿತ್ತವಾಗಿ ಅದಿದೆ, ಅಷ್ಟೆ. ಅದರ ನಿಮಿತ್ತವಾಗಿ ನಾನು ಇರಬೇಕೆಂದೇನೂ ಇಲ್ಲ.
ನನ್ನ ಊರುಕೇರಿಯನ್ನು ನಾನು- ನನ್ನದು ಎನ್ನಲೆ?
ನನ್ನ ಊರು ಕೇರಿ ನಾನು ಜೀವಿಸಲು ಒದಗಿ ಬಂದಿರುವ ಅದ್ಭುತ ಅವಕಾಶವೇ ವಿನಃ ಈ ಊರಿಗೆ ನಾನು ಸ್ಥಿರವಲ್ಲ. ನನ್ನ ಊರಿಗೆ ನನ್ನ ತಾತ ಮುತ್ತಾತಂದಿರು ಅದೆಷ್ಟೋ ಜನ ಬಂದು ಇದ್ದು ಹೋದರಲ್ಲ! ಈಗಲೂ ನನ್ನಂಥ ಎಷ್ಟೋ ಜನಕ್ಕೆ ಇದು ಆಶ್ರಯತಾಣವಾಗಿದೆ… ಇನ್ನು ಈ ಊರಿರುವ ತನಕ ಅದೆಷ್ಟೋ ಜನ ಇಲ್ಲಿ ಬರುವವರಿದ್ದಾರೆ!! ಇವರು ಯಾರನ್ನೂ ನನ್ನ ಊರುಕೇರಿ ನೆನಪಿಟ್ಟುಕೊಂಡಿಲ್ಲ. ಮೌನವಾಗಿ ಎಲ್ಲರಿಗೂ ಅವಕಾಶವಷ್ಟೇ ಆಗಿದೆ. ನನ್ನ ಊರುಕೇರಿಯ ಜನಕ್ಕೆ ನಾನು ಗೊತ್ತಿದ್ದರೂ ನನ್ನ ಊರುಕೇರಿಗೆ ನಾನು ಅಪರಿಚಿತಳಾಗಿದ್ದೇನೆ. ಅನಂತವಾಗಿರುವ ಈ ಪ್ರಕೃತಿಗೆ ನನ್ನ ಅಗತ್ಯವೇನೂ ಇಲ್ಲ.
ನಾನೆಂದರೆ ಜಾತಿ ಮತ್ತು ಧರ್ಮವೇ?
ಈ ವಿಶ್ವದ ಯಾವುದೇ ಭಾಗದಲ್ಲಿರುವ ಧರ್ಮವಾಗಲಿ, ಜಾತಿಯಾಗಲಿ ಆಕಾಶದಿಂದ ಇಳಿದು ಬಂದಿರಲು ಸಾಧ್ಯವಿಲ್ಲ. ಜಾತಿ-ಧರ್ಮಗಳನ್ನು ಮನುಷ್ಯನೇ ಸೃಷ್ಟಿಸಿದ್ದಾನೆ. ಮನುಷ್ಯನನ್ನು ಹೊರತುಪಡಿಸಿ ಇನ್ನುಳಿದ ಸಚರಾಚರ ಜೀವಿಗಳು ಮತ್ತು ಈ ಪ್ರಕೃತಿಗೆ ಮನುಷ್ಯ ನಿರ್ಮಿತವಾದ ಯಾವುದೇ ಧರ್ಮಗಳ ಹಂಗಿಲ್ಲ. ಪ್ರಕೃತಿಗೆ ಮಾತ್ರ ಅದರದೇ ಆದ ನಿಯಮ ಮತ್ತು ಧರ್ಮ ಇದ್ದೇ ಇದೆ. ಮಾನವ ನಿರ್ಮಿತ ಧರ್ಮಗಳಿಗೆ ಇದು ಅತೀತವಾದದ್ದು. ಮನುಷ್ಯ ಹೃದಯದಲ್ಲಿ ಉದ್ಭವಿಸಬೇಕಾದ ‘ದಯೆ’ಯೇ ನಿಜವಾದ ಧರ್ಮ. ಅದಕ್ಕೇ ಬಸವಣ್ಣನವರು, “ದಯೆಯೇ ಧರ್ಮದ ಮೂಲವಯ್ಯಾ” ಎಂದರು. ಹೃದಯಕ್ಕೂ ಮತ್ತು ತಿಳುವಳಿಕೆಗೂ ಬಹಳ ಜನಕ್ಕೆ ವ್ಯತ್ಯಾಸ ಗೊತ್ತಿಲ್ಲ. ಧರ್ಮ, ಜಾತಿಗಳು ನಾವು ಕಲಿತ ತಿಳುವಳಿಕೆಗಳಷ್ಟೇ ಆಗಿವೆ. ಜಾತಿ ಧರ್ಮಗಳು ಹೃದಯದಲ್ಲಿ ಇಲ್ಲವೇ ಇಲ್ಲ.
ನಾನು ನನ್ನ ಅಮ್ಮ ಅಪ್ಪನಿಂದ ಹುಟ್ಟಿದ್ದೇನೆ ಎನ್ನುವ ಸತ್ಯಕ್ಕಿಂತಲೂ ನಾನು ಇಂತಹ ಜಾತಿಗೆ ಸೇರಿದವನು; ನಾನು ಇಂತಹ ಧರ್ಮಕ್ಕೆ ಸೇರಿದವನು ಎಂದು ನಂಬುವುದೇ ನಮಗೆ ಇಲ್ಲಿ ಮುಖ್ಯವಾಗಿ ಬಿಟ್ಟಿರುತ್ತದೆ. ಧರ್ಮಕ್ಕೂ ಜಾತಿಗೂ ಯಾವುದೇ ವ್ಯತ್ಯಾಸವಿಲ್ಲ. ಏಕೆಂದರೆ ಧರ್ಮದಲ್ಲಿರುವ ಅನೇಕ ಸಾಮಾಜಿಕ ಕಾನೂನುಗಳಲ್ಲಿ ಜಾತಿ ಒಂದು ಕಾನೂನು ಮಾತ್ರ. ಮನುಷ್ಯನ ಆಲೋಚನೆ, ಮಾತು, ಕ್ರಿಯೆಗಳು, ಸಾಮಾಜಿಕ ವ್ಯವಸ್ಥೆ, ಆರ್ಥಿಕ ಉದಾರತೆಗಳನ್ನೆಲ್ಲವನ್ನೂ ಅದೇ ನಿರ್ದೇಶಿಸುತ್ತಿರುತ್ತದೆ ಎಂದು ಅನೇಕರಿಗೆ ಗೊತ್ತಿಲ್ಲ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಜಾತಿಗಳನ್ನು (ವರ್ಣ) ನಾನೇ ಸೃಷ್ಟಿಸಿದ್ದೇನೆ ಎಂದು ಹೇಳುತ್ತಾನೆ. ಮನುಬ್ರಹ್ಮನಂತೂ, ಒಬ್ಬ ಮನುಷ್ಯನನ್ನು ಇನ್ನೊಬ್ಬ ಮನುಷ್ಯ- ಮನುಷ್ಯನನ್ನಾಗಿ ನೋಡಲೂ ಆಗದಷ್ಟು ಕ್ರೂರವಾಗಿ ಜಾತಿಗಳ ಮೂಲಕ ಮಾನವ ಸಂಬಂಧಗಳನ್ನು ಛಿದ್ರಛಿದ್ರಗೊಳಿಸಿಬಿಡುತ್ತಾನೆ. ಈ ಬಿಸಿಯಿಂದ ನಮ್ಮ ಮನುಷ್ಯ ಲೋಕ ಇನ್ನೂ ತತ್ತರಿಸುತ್ತಲೇ ಇದೆ. ಆತ ಮನುಷ್ಯನೊಬ್ಬನಿಗೆ ಇನ್ನೊಬ್ಬ ಮನುಷ್ಯನ ಬಗ್ಗೆ ದ್ವೇಷವಿರಬೇಕೆ ವಿನಃ ದಯೆಯಲ್ಲ ಎಂಬುದನ್ನು ದೃಢೀಕರಿಸಿಬಿಡುತ್ತಾನೆ. ಧಾರ್ಮಿಕ ಶಾಸನವೇ ಅಂತಿಮ ಎನ್ನುತ್ತಾನೆ.
ನನ್ನ ಮೇಲೆ ಆರೋಪಿಸಲ್ಪಟ್ಟಿರುವ ಜಾತಿಯನ್ನು ನಾನೆಂದುಕೊಳ್ಳಲಾಗದು. ಹಾಗೆಯೇ ಧರ್ಮವೂ ನಾನಾಗಲು ಸಾಧ್ಯವಿಲ್ಲ. ಏಕೆಂದರೆ ಜಾತಿ ಮತ್ತು ಧರ್ಮಗಳನ್ನು ಉದ್ದೇಶಪೂರ್ವಕವಾಗಿ ನನಗೆ ನಂಬಿಸಲಾಗಿದೆ ಮತ್ತು ಹೇರಲ್ಪಟ್ಟಿದೆ. ಹಾಗಾಗಿ ನಾನು ಅವುಗಳ ಗುಲಾಮನಾಗಬಹುದೇ ವಿನಃ ಅವು ನಾನಾಗಲು ಸಾಧ್ಯವೇ ಇಲ್ಲ. ಈ ಜಾತಿ, ಧರ್ಮಗಳ ಗುಲಾಮಗಿರಿಯ ಕೊಳೆ ನನ್ನ ತಿಳುವಳಿಕೆಯಲ್ಲಿದೆ. ಜೈವಿಕ ಪದಾರ್ಥವಾಗಿರುವ ನನ್ನ ಆಳವಾದ ಅಂತಃಪ್ರಜ್ಞಾ ವಲಯದಲ್ಲಿ ಯಾವ ಧರ್ಮ, ಜಾತಿಗಳ ರೋಗವೂ ಇಲ್ಲ. ಅದು ನಿತ್ಯನೂತನವಾಗಿ, ಮುಕ್ತವಾಗಿ ಹೊಮ್ಮುತ್ತಿದೆ. ಇದೇ ನನ್ನ ಈ ಕ್ಷಣದ ಸತ್ಯ. ಆದ್ದರಿಂದ ಜಾತಿ, ಧರ್ಮಗಳು ನಾನಲ್ಲ.
ಪೂಜಿಸಿ ಕಳೆಯಿಂಕೆ ಇಳುಹಲದೇನೊ?
ಅನಾಹತ ಪೂಜೆಯ ಮಾಡಲದೇನೊ?
ದೇಹವೆ ಪೀಠಿಕೆ, ಜೀವವೆ ಲಿಂಗ ಗುಹೇಶ್ವರಾ. (ಅಲ್ಲಮಪ್ರಭುದೇವರು)
ಸಾವಯವವೆಂದರೆ ನಿರವಯವಾಯಿತ್ತು.
ನಿರವಯವೆಂದರೆ ಸಾವಯವವಾಯಿತ್ತು.
ಸಾವಯ ನಿರವಯ ತನ್ನೊಳಡಗಿತ್ತು.
ಸ್ಫಟಿಕದ ಘಟದೊಳಗಣ ಜ್ಯೋತಿಯಂತೆ
ಕೂಡಲಚೆನ್ನಸಂಗನ ಶರಣರ ಇರವು. (ಚನ್ನಬಸವಣ್ಣ)
ಲಿಂಗ ಒಳಗೊ ಹೊರಗೊ? ಬಲ್ಲಡೆ ನೀವು ಹೇಳಿರೆ?
ಲಿಂಗ ಎಡನೊ ಬಲನೊ? ಬಲ್ಲಡೆ ನೀವು ಹೇಳಿರೆ?
ಲಿಂಗ ಮುಂದೊ ಹಿಂದೊ? ಬಲ್ಲಡೆ ನೀವು ಹೇಳಿರೆ?
ಲಿಂಗ ಸ್ಥೂಲವೊ ಸೂಕ್ಷ್ಮವೊ? ಬಲ್ಲಡೆ ನೀವು ಹೇಳಿರೆ?
ಲಿಂಗ ಪ್ರಾಣವೊ, ಪ್ರಾಣ ಲಿಂಗವೊ?
ಬಲ್ಲಡೆ ನೀವು ಹೇಳಿರೆ ಗುಹೇಶ್ವರಲಿಂಗವನು. (ಅಲ್ಲಮಪ್ರಭುದೇವರು)
ಹಣ, ಅಧಿಕಾರದಿಂದ ಬಂದ ಸ್ಟೇಟಸ್ ನಾನೇ?
ಮನುಷ್ಯನಲ್ಲಿರುವ ಕ್ಲುಪ್ತ ಮತ್ತು ಕ್ಷುದ್ರ ರಾಜಕೀಯಗಳ ಅಂತರಾಳದಲ್ಲಿ ಅತಿಯಾದ ಹಣದ ದಾಹ ಇದ್ದೇ ಇರುತ್ತದೆ. ಹಣವು ಅನಿರೀಕ್ಷಿತವಾಗಿ ಬಂದೊದಗುವ ಆಪತ್ತುಗಳಿಗೆ ಭದ್ರತೆಯನ್ನು ತಂದುಕೊಡುತ್ತದೆ ಎಂಬ ನಂಬಿಕೆಗಿಂತಲೂ ಅದು ತನಗೆ ಬೇಕಾಗಿರುವ ಎಲ್ಲ ಸುಖಗಳನ್ನು, ಸಮಾಜದಲ್ಲಿ ಮನ್ನಣೆಯನ್ನೂ ಒದಗಿಸುತ್ತದೆನ್ನುವುದೇ ಅಂತಿಮವೆನಿಸಿಬಿಟ್ಟಿದೆ. ಹಣ ಮುಖ್ಯವೆಂತಲೋ ಅಥವಾ ಅಮುಖ್ಯವೆಂತಲೋ- ಯಾವುದಾದರೂ ಒಂದು ತುದಿಯಲ್ಲಿ ಮಾತನಾಡುವುದು ಇಲ್ಲಿನ ಉದ್ದೇಶವಲ್ಲ. ಹಣವು ಮನುಷ್ಯನಿಗೆ ಅನೇಕ ನಿರೀಕ್ಷೆಗಳನ್ನು ಕೊಟ್ಟಿದೆ. ಅವು ಸುಖ, ಅಧಿಕಾರ, ಮನ್ನಣೆ. ಹಾಗಾದರೆ ಸುಖ, ಅಧಿಕಾರ, ಮನ್ನಣೆಗಳು ನಿಜವೇ? ಸುಳ್ಳೇ? ಇವುಗಳಿಗೆ ಈ ಭೌತಿಕ ಜಗತ್ತಿನಲ್ಲಿ ಅಸ್ತಿತ್ವ ಉಂಟೆ? ಎಂದು ವಿಶ್ಲೇಷಿಸುವುದು ಇಲ್ಲಿನ ಪ್ರಾಮುಖ್ಯತೆ. ಇವುಗಳಿಗೂ ಮತ್ತು ನನ್ನ ಜೈವಿಕ ಪದಾರ್ಥ (life substance)ಕ್ಕೂ ಇರುವ ಅಂತಃಸಂಬಂಧವೇನು? ಇವು ನನಗೆ ಸಂಬಂಧಿಸಿವೆಯೇ, ಇಲ್ಲವೇ?
ನನ್ನ ಅನುಭವದಲ್ಲಿ ಸುಖ, ಅಧಿಕಾರ, ಮನ್ನಣೆಗಳು ಬೇರೆಯವರಿಂದ ನನಗೆ ಸೋಂಕಿರುವ ವ್ಯಾಧಿ. ಅನುಭವಿಸುತ್ತಿರುವ ಸುಖ ಸ್ಥಿರವಾಗಿ ನಿಲ್ಲಲಾರದು. ಅಧಿಕಾರವೂ ಅಷ್ಟೇ. ಸದಾ ಜನರಿಂದ ಮನ್ನಣೆ ಸಿಗುತ್ತಲೇ ಇರಬೇಕೆಂಬುದು ಆ ಕ್ಷಣ ದಾಟಿದ ನಂತರ ಹತಾಶೆಯ ಅನುಭವ ನೀಡುತ್ತಾ ಹೋಗುತ್ತಿರುತ್ತದೆ. ಈ ಕ್ಷಣದ ಸುಖ ಆ ಕ್ಷಣ ದಾಟಿದೊಡನೆ ಇಲ್ಲವಾಗುತ್ತದೆ. ಈ ಹೊತ್ತಿಗಿರುವ ಅಧಿಕಾರ ನಾಳೆಗಿರುತ್ತದೆ ಎಂದು ಹೇಳಲಾಗದು. ಈಗಿನ ಮನ್ನಣೆ ಹೊತ್ತು ಮುಳುಗಿದ ನಂತರ ಇಲ್ಲವಾಗುತ್ತದೆ. ಹೀಗೆ ಇಲ್ಲವಾಗುತ್ತಲೇ ಹೋಗುತ್ತಿರುವ ಇವುಗಳನ್ನು ಹಿಡಿದಿಡಲು ಮನುಷ್ಯ ವ್ಯರ್ಥಪ್ರಯತ್ನ ನಡೆಸುತ್ತಲೇ ಇರುತ್ತಾನೆ. ಹಣ, ಅಧಿಕಾರ, ಮನ್ನಣೆಯ ಭ್ರಾಂತಿಗಳನ್ನು ಸಾಕಾರ ಮಾಡಿಕೊಳ್ಳಲು ಮನುಷ್ಯ ಮೊಂಡು ಸಾಹಸ ಮಾಡುತ್ತಲೇ ಇರುತ್ತಾನೆ.
ಇಲ್ಲಿ ಮಾನವ ಜೀವನದ ಆತ್ಯಂತಿಕ ಸತ್ಯ ‘ಪ್ರಶಾಂತತೆ’ ಎಂಬುದನ್ನು ‘ಸುಖ’ ಎಂದು ತಪ್ಪಾಗಿ ಗ್ರಹಿಸಿಕೊಳ್ಳಲಾಗಿದೆ. ಪ್ರಶಾಂತತೆಗೆ ಏನಿದ್ದರೂ, ಏನಿಲ್ಲದಿದ್ದರೂ ಅದು ಪೂರ್ಣ ತೃಪ್ತ. ಸುಖವು ಸದಾ ಅತೃಪ್ತವಾಗಿರುತ್ತದೆ. ಸುಖವು ಮನುಷ್ಯನನ್ನು ಪೂರ್ಣವಾಗಿ ಮೆಟಿರಿಯಲಿಸ್ಟಗೆ ಅವಲಂಬಿಯಾಗುವಂತೆ ಮಾಡುತ್ತದೆ. ಪ್ರಶಾಂತತೆಯು ಲೋಕದ ವಸ್ತುಸ್ಥಿತಿಯನ್ನು ಸರಿಯಾಗಿ ವಿಶ್ಲೇಷಣೆಗೆ ಒಳಪಡಿಸುತ್ತದೆ. ಆರೋಗ್ಯಪೂರ್ಣವಾದ ಸ್ವಯಂ ವಿಶ್ಲೇಷಣೆಯ ಫಲವೇ ಸ್ವಾಸ್ಥ್ಯ ಮನಸ್ಸು. ಸ್ವಾಸ್ಥ್ಯ ಮನಸ್ಸೇ ಪ್ರಶಾಂತತೆಯ ಆಶ್ರಯಧಾಮ. ಮನುಷ್ಯನು ಪ್ರಕೃತಿಯನ್ನು ಸರಿಯಾಗಿ ತಿಳಿದುಕೊಳ್ಳದೇ ಸುಖ ಮತ್ತು ಅಧಿಕಾರಗಳನ್ನು ಬಲಾತ್ಕಾರವಾಗಿ ಅನುಭವಿಸಬೇಕೆಂಬ ಪ್ರವೃತ್ತಿಗೆ ಇಳಿದಾಗ ‘ಮನ್ನಣೆ’ ಎಂಬುದು ಕೇವಲ ಯಾಂತ್ರಿಕವಾಗಿ ಬಿಡುತ್ತದೆ. ಮನುಷ್ಯ ಮನುಷ್ಯನಿಗೆ ನೀಡುವ ಮನ್ನಣೆ ನಿರ್ಜೀವಗೊಂಡಾಗ ಮನುಷ್ಯ- ಮನುಷ್ಯರ ಮಧ್ಯದಲ್ಲಿ ದ್ವೇಷ, ಅಸಂತೃಪ್ತಿ, ಅಸಮಾಧಾನ, ವಿಕ್ಷಿಪ್ತತೆ, ತಿರಸ್ಕಾರ, ಅಭಿಪ್ರಾಯ ವಿರೋಧಗಳು ಹುಟ್ಟಿಕೊಳ್ಳುತ್ತವೆ. ಇವು ಯಾವ ಕಾಲಕ್ಕೂ ಮನುಷ್ಯನ ಆತ್ಮಗೌರವವನ್ನು ಪೋಷಿಸಲಾರವು. ಬದಲಾಗಿ ಒಬ್ಬರ ಸುಖವನ್ನು ಮತ್ತೊಬ್ಬರು ಹತ್ತಿಕ್ಕಲು ಬೇಕಾದ ಹತಾರಗಳಾಗಿ ಬಿಡುತ್ತವೆ.
ಹಣ, ಅಧಿಕಾರ ಮತ್ತು ಇವುಗಳಿಂದಾದ ಸ್ಟೇಟಸ್ ಗೆ ಯಾವುದೇ ಉತ್ತಮ ಪರಿಣಾಮಗಳಿಲ್ಲ. ಈ ಭೂಮಿಯನ್ನು ಆಳಿದ ರಾಜ ಮಹಾರಾಜರ ಮಹಲ್ಲುಗಳು ಇಂದು ಪಾಳು ಬಿದ್ದು ಮುಳ್ಳುಪೊದೆಗಳಿಂದಾವೃತವಾದದ್ದನ್ನು ನಾವು ನೋಡಿದ್ದೇವೆ. ಅಷ್ಟೆ ಏಕೆ- ಹಣದ ಚಕ್ರಾಧಿಪತಿಗಳಾದ ನೀರವ್ ಮೋದಿ, ಶಶಿಕಲಾ, ಮಲ್ಯಗಳ ಗತಿ ಏನಾಯಿತು ಎಂದು ನಾವು ನೋಡುತ್ತಿದ್ದೇವೆ, ಅಲ್ಲವೇ? ಅದೇ ಭಿಕಾರಿಗಳಾಗಿ ಬಾಳಿ, ಮನುಷ್ಯ ಸಂಬಂಧದೊಂದಿಗೆ ಜೀವಿಸಿದ ನಮ್ಮ ಸಂತರುಗಳ ಸಮಾಧಿಗಳ ಮೇಲಿರುವ ಮಲ್ಲಿಗೆ ಮತ್ತು ಜವಾಜಿಯ ಸುವಾಸನೆ ಮೈಲುಗಳಾಚೆ ಕಾಲಾತೀತವಾಗಿ ಪಸರಿಸುತ್ತಲೇ ಇದೆ.
ಅತಿಮುಖ್ಯವಾದ ಅನುಭವವೊಂದನ್ನು ಮನೋಗಲಭೆಗಳಲ್ಲಿ ನಾವು ಗ್ರಹಿಸಲು ಹೋಗುವುದಿಲ್ಲ. ದುಃಖ ಆವರಿಸಿದಾಗಲೂ, ಸುಖ ಅನುಭವಿಸುವಾಗಲೂ, ರೇಗಾಡುವಾಗಲೂ ಸದಾ ಆಗುತ್ತಲೇ ಇರುವ ನನ್ನಲ್ಲಿರುವ ಸಜೀವ ಪದಾರ್ಥ ಮಾತ್ರ ಮೂಕವಾಗಿ, ಮೌನವಾಗಿ ಆಗುತ್ತಲೇ ಇರುತ್ತದೆ. ಆದ್ದರಿಂದ ‘ನಾನು’ ಎಂಬ ಈ ಜೈವಿಕ ಪದಾರ್ಥಕ್ಕೆ ನನ್ನ ಮನೋಕ್ಲೇಷಗಳೆಂಬ ಅಹಂಕಾರ ಸೋಂಕಲಾರದು. ಹಾಗಾಗಿ ನನ್ನ ಇರುವಿಕೆಯನ್ನು ಸಾಬೀತುಪಡಿಸುತ್ತಿರುವ ಅನಂತ ಜೈವಿಕ ಕ್ರಿಯೆಯು ನಾನಲ್ಲದೆ, ನನ್ನ ಮನೋವಿಕಲ್ಪಗಳಿಂದಾದ ಸುಖ, ಅಧಿಕಾರ, ಸ್ಟೇಟಸ್ ಗಳೆಂಬ ಅಹಂಕಾರ ನಾನಾಗಲು ಸಾಧ್ಯವಿಲ್ಲ.
ಆನೆಯನೇರಿಕೊಂಡು ಹೋದಿರೇ ನೀವು,
ಕುದುರೆಯನೇರಿಕೊಂಡು ಹೋದಿರೇ ನೀವು,
ಕುಂಕುಮ ಕಸ್ತೂರಿಯ ಹೂಸಿಕೊಂಡು ಹೋದಿರೇ ಅಣ್ಣಾ!
ಸತ್ಯದ ನಿಲವನರಿಯದೆ ಹೋದಿರಲ್ಲಾ,
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ!
ಅಹಂಕಾರವೆಂಬ ಸದಮದಗಜವೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ!
ನಮ್ಮ ಕೂಡಲಸಂಗಮದೇವನರಿಯದೆ
ನರಕಕ್ಕೆ ಭಾಜನವಾದಿರಲ್ಲಾ!
(ಮುಂದುವರೆಯುತ್ತದೆ)
Comments 25
ಡಾ. ಜೆ ಎಸ್ ಪಾಟೀಲ
Mar 7, 2020ನಾನು ಯಾರು ಎಂದ ಬಹು ಮುಖ್ಯ ಪ್ರಶ್ನೆಯ ಸುತ್ತ ತಮ್ಮ ಲೇಖನ ಅನೇಕ ಸಿದ್ಧಾಂತಗಳ ಹೂರಣಗಳ ಸಮೀಕರಣದ ಮೂಲಕ ಉತ್ತರ ಕಂಡುಕೊಳ್ಳುವ ಯತ್ನ ಮಾಡಿದೆ. ಶರಣರ ವಚನಗಳ ಆಳವನ್ನು ತೇಲಿಸಿ ನಾನಾರೆಂಬ ಜಠಿಲ ಫ್ರಶ್ನೆಗೆ ಸರಳ ಉತ್ತರ ಸ್ಪಷ್ಟಿಕರಿಸಿದ್ದೀರಿ. ತಮ್ಮ ಬರಹದಲ್ಲಿ ಆಳವಾದ ಅಧ್ಯಯನದ ಚಿಗುರು ಕಂಗಳಿಗೆ ಗೋಚರಿಸುತ್ತದೆ.
ಮಹಾದೇವ
Mar 7, 2020ಸಂಗ್ರಹಯೋಗ್ಯ ಬರಹ ಮೇಡಮ್… ಮುಂದಿನ ಸಂಚಿಕೆಗೆ ಕಾಯುವೆ
Vinay Adihalli
Mar 7, 2020“ನಾನು ಯಾರು?” ಈ ಪ್ರಶ್ನೆ ನನಗೆ ಸುಮಾರು ೬ / ೭ ನೇ ವಯಸ್ಸಿನಿಂದಲೆ ಕಾಡುತ್ತಿದೆ.
ಯಾರು ನಾನು? ನಾನು ಹುಟ್ಟಿರುವುದು ಏತಕ್ಕೆ?
ಈ ಮನೆಯಲ್ಲಿಯೇ ಏಕೆ ಹುಟ್ಟಿದೆ? ಈ ತಂದೆ ತಾಯಿಗೆ ಏಕೆ ಕೂಸಾದೆ? ಈ ಊರಲ್ಲಿಯೇ ಏಕೆ? ಈ ಧರ್ಮ? ಈ ಜಾತಿಯೇ ಏಕೆ? ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಹಲವು ಸ್ವ ಚಿಂತನೆಯ ಪ್ರಯತ್ನಗಳು ಮಂಥವಾಗಿ ಕಾಡಿದ್ದವು. ಹಿರಿಯಲ್ಲಿ ಪ್ರಶ್ನಿಸಿದ್ದು ಉಂಟು ಅವರಲ್ಲಿ ಕ್ಷಣದ ಮಿಂಚಿನ ಸಂಚಲನವಾಗಿದ್ದು ನೋಡಿದ್ದೆನೆ. ಆದರೆ ಉತ್ತರ ಸಿಗಲಿಲ್ಲ. ಸ್ನೇಹ ಸಮೂಹದಲ್ಲಿ ಉತ್ತರ ಸಿಗಲಿಲ್ಲ. ನಂತರ ಉತ್ತರ ಹುಡುಕಲು ಆಯ್ದು ಕೊಂಡಿದ್ದು ಶರಣರ ಮಾರ್ಗ ವಚನಗಳ ಮೂಲಕ. ಕರ್ತಾರನ ಕಮ್ಮಟದೊಳಗೆ ಶಿವ ತತ್ವ ಜ್ಞಾನ ಸಂಪಾದಿಸಿದ್ದಾಗ ಶರಣನಾಗುವೆ, ಲೌಕಿಕ ಸಂಕೋಲೆಗಳಲ್ಲಿ ಸಿಲುಕಿ ಬಳಲಿ ಅಜ್ಞಾನವನ್ನು ಅನುಸರಿಸುತ್ತಲೆ ಇದ್ದರೆ ನಾನು ಶಿವನೊಲುಮೆಗೆ ಅನರ್ಹ.
ನಿಮ್ಮ ಲೇಖನ ಮತ್ತೆ ಕದಕಿದೆ ಮತ್ತು ಖಚಿತ ಮಾರ್ಗ ಸೂಚಿಸಿದೆ.🙏🙏
“ನಾನು ಯಾರು?” ಶೋಧನೆ ಮುಂದುವರೆದಿದೆ……
✍ ವಿನಯ್ ಆದಿಹಳ್ಳಿ.
Panchakshari H V
Mar 7, 2020ನಾನರೆಂದು ಬಹಳ ಸರಳವಾಗಿ ಮನಮುಟ್ಟುವಂತೆ ಅರುಹಿದ್ದೀರಿ.
ಶರಣು.
Madapathi.V.V
Mar 8, 2020ನಾನು ಯಾರು ?
ಬಹಳ ಸುಂದರವಾದ ವಿವರಣೆ..
ತತ್ನತಾನರಿವುದೇ ಜಿವನದ ಮುಖ್ಯ..!!
ಆದುದರಿಂದಲೇ ಶರಣರೂ ತನ್ನತಾನರಿದರೇ ತಾನೇ ಅಪ್ರಮಾಣ ಕೂಡಲಸಂಗಮದೇವ ಎಂದು ಬೋಧಿಸಿದರು.
ನಾನು ಯಾರೆಂಬುದು ತಿಳಿಯಲು ಅರಿವಿನ ಅಗತ್ಯವಿದೆ. ಆ ಅರಿವು ಮೂಡುವುದಕ್ಕಾಗಿ ಸದ್ಗುರುವಿನ ಅಗತ್ಯ ಖಂಡಿತ.
ಶರಣು ಶರಣಾರ್ಥಿ ಅಕ್ಕಾ ಅವರೆ..
👌👌👌🙏🙏🙏
ಜಿ.ಬಿ.ಪಾಟೀಲ
Mar 9, 2020ಕುರುಡನೇನು ಅರಿಯ ಸುಂದರತೆ,,ಯಃಖಶ್ಚಿತ ಮನುಷ್ಯ ನಾನು, ನಾನೇನು ಕಮೆಂಟ ಬರೆಯಬಲ್ಲೆ,..
ಶತ ಶತ ಮಾನಗಳಿಂದ ಉತ್ತರ ಕಂಡುಕೊಳ್ಳದ ಪ್ರಶ್ನೆ,
ಈ ಪ್ರಶ್ನೆ ವಾಲ್ಮೀಕಿಗೂ ಇತ್ತು, ಮತ್ತು ವ್ಯಾಸರಿಗೂ ಇತ್ತು. ವೇದ ಅದ್ಯಯನ ಕಾಲದಿಂದ ಕಲಿಗಾಲದ ವರೆಗೂ ಪ್ರಶ್ನೆಯಾಗುಳಿದ ಪ್ರಶ್ನೆ .ಕೆಲವು ಪ್ರಶ್ನೆಗಳಿಗೆ ಉತ್ತರವೇ ಇರುವದಿಲ್ಲ, ಅಲ್ಲಮರಿಗೂ ಉತ್ತರ ಸಿಕ್ಕಿಲ್ಲ,ಯಾವ ಶರಣರಿಗೂ ಸಿಕ್ಕಿರಲಿಕ್ಕಿಲ್ಲ. ಸಿಕ್ಕರೂ ಯಾರಿಗೂ ತಿಳಿಸಿಲ್ಲ, ತಿಳಿಸಿದ್ದರೂ ನಮಗೆ ತಿಳಿದಿಲ್ಲ, ಕಾಷ್ಮೀರದ ರಾಜ ಕಲ್ಯಾಣಕ್ಕೆ ಬಂದು ಕಟ್ಟಿಗೆ ಮಾರಿ ಜೀವನ ಮಾಡಿದರು ಅವನಿಗೆ ಈ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ರಾಜ ನಿದ್ದಾಗಲು ಅವನಿಗೆ ಅದೆ ಪ್ರಶ್ನೆ, ಶರಣನಾರು ಅದೆ ಪ್ರಶ್ನೆ , ಪ್ರಶ್ನೆ, ಖಿನ್ನತೆಯಲ್ಲಿಯೇ ಮರಣವನ್ನಪ್ಪಲಿಲ್ಲವೇ?
ಉತ್ತರ ಸಿಕ್ಕಾಗ ನಾವು ಅದನ್ನು ತಿಳಿಸಿ ಹೇಳುವ ಸ್ಥಿತಿಯಲ್ಲಿ ಇರಲಾರವೇನೋ. ನಿಮ್ಮ ಪ್ರಯತ್ನ ಅದ್ಭುತವಾಗಿದೆ,ಉಚ್ಚಮಟ್ಟದ್ದಾಗಿದೆ.ಭೂವಿಯಲ್ಲಿರುವ ಲೇಖಕಿ ಇವಳೇನಾ? ಎಂಬ ಸಂಶಯ ಬರುವದು. ಎರಡೆರಡು ಭಾರಿ ಓದಬೇಕು,
ರಂಜಾನ್ ದರ್ಗಾ
Mar 9, 2020ಇಡೀ ಜಗತ್ತು ದ್ರವ್ಯರಾಶಿಯಿಂದ ಕೂಡಿದೆ. ಅದರದೊಂದು ಕಣ ನಾನು. ಅದು ಎಲ್ಲದರ ಜೊತೆ ಇರೋದೇ ಅದರ ಅಸ್ತಿತ್ವ. ತನ್ನನ್ನು ತಾನು ತಿಳಿದುಕೊಳ್ಳೋದು ಅಂದ್ರೆ ಜಗತ್ತನ್ನು ತಿಳಿದುಕೊಳ್ಳುವುದು, ಜಗತ್ತನ್ನು ಪ್ರೀತಿಸುವುದನ್ನು ಕಲಿಯುವುದು… ಅಹಂಕಾರದ ಲವಲೇಶವೂ ಇಲ್ಲದ ಬರಹ, best article.
SIDDAPPA mulge
Mar 11, 2020ನಾನು ಯಾರು?
ಇತ್ತೀಚೆಗೆ ನಾನು ಓದಿರುವ ಅತ್ಯುತ್ತಮ ಲೇಖನ ಇದು.ಥ್ಯಾಂಕ್ಸ್ ಓದಿಸಿದಕ್ಕೆ.
ಬಸವರಾಜ ಹಂಡಿ
Mar 11, 2020ನಾನು ಯಾರು…… ನಿನ್ನನು ನೀನು ತಿಳಿ… ಈ ಪ್ರಶ್ನೆ ನನಗೆ ನೆನಪು ಇದ್ದ ಹಾಗೆ 7 ನೆಯ ತರಗತಿ ಯಿಂದ ಕಾಡುತ್ತಿವೆ. ಬುದ್ದಿ ಜಿ ಒಂದು ಪ್ರವಚನದಲ್ಲಿ ಹೇಳುತ್ತಾರೆ — ಯಾವುದನ್ನು ನೀನು ನೋಡುತ್ತಿ , ಯಾವುದನ್ನು ನೀನು ಕೇಳುತ್ತಿ , ಯಾವುದನ್ನು ನೀನು ಗಮನಸುತ್ತಿ ಅದನ್ನು ನೀನು ಅಲ್ಲ . ನಾನು ನನ್ನ ದೇಹವನ್ನು ನೋಡುವುದರಿಂದ , ನಾನು ದೇಹ ಅಲ್ಲ. ನಾನು ನನ್ನ ವಿಚಾರಗಳನ್ನು, ಭಾವನೆಗಳನ್ನು ಹಾಗು ಕಲ್ಪನೆಗಳನ್ನು ಗಮನಿಸುವ ದರಿಂದ , ನಾನು ನನ್ನ ಭಾವನೆಗಳು, ವಿಚಾರಗಳು ಹಾಗು ಕಲ್ಪನೆಗಳು ಅಲ್ಲ.
ಮಂಗಳಾ ಶರಣೆ ಈ ಮೂಲ ಪ್ರಶ್ನೆ ದ ಎಲ್ಲ ಭಾಗಗಳನ್ನು ಒಂದು ಒಂದಾಗಿ ಬಿಚ್ಚುತ್ತಾ , ಈ ಪ್ರಶ್ನೆಗೆ ಉತ್ತರವನ್ನು ಕೊಡಲು ಬಹಳ ಶ್ರಮವನ್ನು ವಯಿಸಿದ್ದಾರೆ. ಸಾದನೆ ಮಾಡುವ ಮೂಲಕ, ಈ ಪ್ರಶ್ನೆಯ ಪರಿಣಾಮಕ್ಕೆ ಒಳಗಾಗಿ ಹಾಗು ತಮ್ಮ ಜೀವನದಲ್ಲಿ ಅನ್ವಯಿಸಿ ಕೊಂಡು, ನಮಗಾಗಿ ಈ ಜ್ಞಾನ ದಾಸೋಹವನ್ನು ಮಾಡಿದ್ದಾರೆ.
ನಾನು 2 ಸಲ ಓದಿದ್ದೇನೆ, ನನಗೆ ಈಗ ಸುಮಾರಾಗಿ 50% ಅರ್ಥವಾಗಿದೆ. ಇನ್ನು 2-3 ಸಲ ಓದುತ್ತೇನೆ ಮತ್ತು ಸಮಯ ಸಿಕ್ಕಾಗ ಈ ಪ್ರಶ್ನೆಯನ್ನು ನನಗೆ ನಾನು ಕೇಳುತ್ತೇನೆ. ಇನ್ನು ಮೇಲೆ ಈ ಲೇಖನ ಹಾಗು ಈ ಪ್ರಶ್ನೆ ನನ್ನ ಜೀವನದ ಭಾಗವಾಗುತ್ತದೆ.
ಶರಣೆ ಮಂಗಳಾ ಗೆ ನಮ್ಮೆಲ್ಲ ಬಸವ ಅನುಯಾಯಿ ಗಳಿಂದ ದನ್ಯವಾದಗಳು ಹಾಗು ಶರಣು ಶರಣಾರ್ಥಿ.
ಪಂಡಿತಾರಾಧ್ಯ ಶ್ರೀಗಳು
Mar 12, 2020ಅಂತರಾವಲೋಕನ ಮಾಡಿಕೊಳ್ಳುವ ಲೇಖನ. ಅಹಂ ನಾನು ಎನ್ನುವುದಕ್ಕೆ ಇನ್ನಷ್ಟ ಒತ್ತು ಕೊಟ್ಟು ನಾನಾರು ಎನ್ನುವ ಪ್ರಶ್ನೆಯನ್ನೇ ಮರೆಸುತ್ತದೆ. ಅಹಂಕಾರ ಏನೆಲ್ಲ ಅನಾಹುತಗಳಿಗೆ ದಾರಿ ಮಾಡುತ್ತದೆ ಎನ್ನುವ ವಾಸ್ತವ ಸತ್ಯವನ್ನು ಶರಣರ ವಚನಗಳ ಮೂಲಕ ವಿವರಿಸುವ ನಿಮ್ಮ ದೀರ್ಘ ಲೇಖನ ಚಿಂತನೆಗೆ ತೊಡಗಿಸುವುದು. ಅಭಿನಂದನೆಗಳು
Jyothilingappa
Mar 13, 2020ಒಂದು ಕ್ಷಣ ಬಿರುಗಾಳಿ ನಂತರ ತಂಪು.. ಲೇಖನದ ಪ್ರಭಾವ… ಒಳ್ಳೆಯ ಲೇಖನ. ಆರಂಭ…ಸರಳ, ಗಂಭೀರ ಒಳಗು.. ಲೇಖನ ದ ಒಂದು ವಾಕ್ಯ- “ಸುಖ ಸದಾ ಅತೃಪ್ತ” ಎಷ್ಟು ಚೆನ್ನಾಗಿ ಹೇಳುವುದು..
ತನ್ನ ತಾನರಿವುದು..ಒಂದು ಬಿಡಿಸಲಾಗದ ಒಗಟು. ಒಂದು ಪ್ರಯತ್ನ.. ತುಂಬಾ ಉತ್ತಮ.. ಮುಂದಿನ ಸಂಚಿಕೆ ಕಾಯಬೇಕಲ್ಲಾ… ಕುತೂಹಲ ಇದೆ..ಯಾವ ಮುಕ್ತಾಯ ಕಾಣುವುದು ಎಂದು..
Ramesha gowda m y
Mar 15, 2020ನಿಮ್ಮ ಲೇಖನ ಓದಿದೆ
ನಾನು ಯಾರು ಎಂಬ ಪ್ರಶ್ನೆಯನ್ನು ನನ್ನಲ್ಲಿ ಹುಟ್ಟಿಸಿದ್ದೀರಿ
ನಾನು ಯಾರಾಗಬಾರದೆಂದು ಆ ಪ್ರಶ್ನೆಗೆ ಉತ್ತರ ಹುಡಕುವಲ್ಲಿಯೇ ತಿಳಿಸಿದ್ದೀರಿ
ನಿಮ್ಮ ಈ ಅಳ್ವದ ಅಧ್ಯನಕ್ಕೆ, ಪ್ರಬುದ್ಧವಾದ ಚಿಂತನೆಗೆ ತುಂಬು ಹೃದಯದ ಧನ್ಯವಾದಗಳು
Pro. Mallesh
Mar 18, 2020ಈ ಲೇಖನ ನನ್ನಂಥ ಹಲವರಿಗೆ ಅರಿವು ಮೂಡಿಸಲು ಸಹಕಾರಿಯಾಗುವಂಥದ್ದು. ಲೇಖನದುದ್ದಕ್ಕೂ ನಾನಾರು? ಎಂಬ ಪ್ರಶ್ನೆಗೆ ಯಾವುದಲ್ಲ ಎಂದು ಹೇಳಿದ್ದೀರಿ. ನಾನು ಎಂಬುದು ಕೇವಲ ನನ್ನ ಭೌತಿಕ ಸ್ಥಿತಿಯಲ್ಲ. ಅದು ಸಮಾಜ ಮತ್ತು ನಿಸರ್ಗಗಳೊಡನೆ ನಿರ್ದಿಷ್ಟ ಕ್ರಮದಲ್ಲಿ ಮೇಳೈಸಿಕೊಂಡಂಥ ಸ್ಥಿತಿ ಹಾಗೂ ನಿಲುವು ಎಂದು ಸೂಚ್ಯವಾಗಿ ತಿಳಿಸುತ್ತಾ ಜಿಡ್ಡು ಕೃಷ್ಣಮೂರ್ತಿಯವರು ಹೇಳಿದಂಥ ಅಖಂಡ ಮಾನವ ಕುಲದ ಜತೆಗಿನ ಸಂಬಂಧವನ್ನು ಕಳೆದುಕೊಳ್ಳುವಂಥ ಪ್ರತ್ಯೇಕತೆಯ ಸ್ಥಿತಿಯಲ್ಲ ಎನ್ನುವ ವಿಚಾರದೊಡನೆ ಸಹಮತ ವ್ಯಕ್ತಪಡಿಸಿದ್ದೀರಿ. ನಿಮ್ಮ ಎಲ್ಲ ವಿವರಣೆಗಳನ್ನು ಆಲೋಚಿಸಿ, ತರ್ಕಿಸಿ ಓದುಗ ಒಂದು ಹದವಾದ ಸ್ಥಿತಿ ತಲುಪಿದ ಮೇಲೆ ನಾನಾರೆಂಬುದರ ಬಗ್ಗೆ ನಿಮ್ಮ ನಿಲುವು ತಿಳಿಸಲೋಸುಗವೇ ಇಡೀ ಲೇಖನ ಪೀಠಿಕೆ ಎನ್ನುವುದಕ್ಕಿಂತ ಪೂರಕ ಪಠ್ಯವೆನಿಸುತ್ತದೆ. ಆರಂಭದಲ್ಲಿ ಗಾಢವಾಗಿ ಸೆಳೆಯುವ ಲೇಖನ ಮುಂದೆ ಸಾಗುತ್ತಿದ್ದಂತೆ ತನ್ನ ಬಿಗಿಯನ್ನು ಸಮದರ್ಶಿತ್ವವನ್ನು ಎಲ್ಲೋ ಸ್ವಲ್ಪ ಲೋಪ ಮಾಡಿಕೊಂಡಿದೆ ಎನಿಸುತ್ತದೆ. ಉದ್ಯೋಗ, ಶಿಕ್ಷಣ ಮತ್ತು ಸುಖ- ಈ ಸಂದರ್ಭಗಳನ್ನು ಕುರಿತು ಬರೆಯುವಾಗ ಅವುಗಳ ಅಪಾರ್ಥದಿಂದಾಗಿ ಅಯೋಗ್ಯವಾಗಿರುವ ಬದುಕಿನ ಬಗ್ಗೆ ನಿಮ್ಮ ಅಸಹನೆ ಬಿಂಬಿತವಾಗಿರಬೇಕಿತ್ತು, ಅಷ್ಟೇ ಸಾಕಿತ್ತು. ಕಾರಣವಿಷ್ಟೇ, ಇಂಥ ಸಂಕೀರ್ಣ ವ್ಯವಸ್ಥೆಯೊಳಗೂ ನಮ್ಮ ಬದುಕು ಉದ್ಯೋಗ, ಶಿಕ್ಷಣ, ಸುಖ… ಮುಂತಾದವುಗಳನ್ನು ನಿಜಾರ್ಥದಲ್ಲಿ ಅಳವಡಿಸಿಕೊಳ್ಳುವಂತೆ ತಮ್ಮ ನಡೆ-ನುಡಿಗಳಿಂದ ಪ್ರೇರೇಪಿಸಿದ ಅನೇಕ ಮಹನೀಯರುಗಳು ಈ ನೆಲದ ಇತಿಹಾಸದುದ್ದಕ್ಕೂ ಕಾಣಸಿಗುತ್ತಾರೆ. ಲೌಕಿಕ ಬದುಕಿನ ಅನೇಕ ಹೊದಿಕೆಗಳು ‘ನಾನು’ ಎಂಬುದಕ್ಕೆ ಅನೇಕ ಅರ್ಥ- ಅನರ್ಥಗಳನ್ನು ಕಲ್ಪಿಸಿ ನಮ್ಮೊಳಗಿರುವ ಅರಿವಿಗೂ ನಮ್ಮ ಬದುಕಿಗೂ ಅಗಾಧ ಅಂತರವನ್ನು ಸೃಷ್ಟಿಸಿರುವ ಸಂದರ್ಭದಲ್ಲಿ ನಿಜದ ನೆಲೆಗಟ್ಟಿನಲ್ಲಿ ‘ನಾನು’ ಎಂಬುದನ್ನು ಪರಿಭಾವಿಸಿ, ಗ್ರಹಿಸಿ, ಅರ್ಥೈಸಿಕೊಳ್ಳುವುದು ಸುಲಭ ಸಾಧ್ಯವಲ್ಲ ಎನ್ನುವುದನ್ನು ನಿಮ್ಮ ಲೇಖನದ ಸಾಲು ಸಾಲುಗಳಲ್ಲಿ ಬಿಂಬಿಸಿದ್ದೀರಿ. ಮುಂದುವರೆದ ಭಾಗದಲ್ಲಿ ನಾನಾರು ಎಂಬುದಕ್ಕೆ ನೀವು ಕೊಡಬಹುದಾದ ತಿಳುವಳಿಕೆಯನ್ನು ಅರ್ಥಮಾಡಿಕೊಳ್ಳಬಲ್ಲೆನೇ ಎಂಬ ಮನಸ್ಥಿತಿ ನನ್ನದು.
Manohar Achar
Mar 18, 2020ನಿಮ್ಮ ಲೇಖನ ಓದುವಾಗ ನನ್ನ ರೇಖಾಚಿತ್ರಗಳು ನನ್ನ ಕಣ್ಣ ಮುಂದೆ ಇರುವಂತೆ ಭಾಸವಾಗುತ್ತದೆ.
ಗಂಗಾಧರ ಮೊದಲಿಯಾರ್
Mar 19, 2020ನಾನು ಯಾರು ಲೇಖನ ಪ್ರಬುದ್ಧ ಮನಸ್ಥಿತಿಗೆ ಸಾಕ್ಷಿಯಾಗಿದೆ. ಸಂಶೋಧನಾತ್ಮಕ ಲೇಖನ. ವಿಷಯದ ಆಳಕ್ಕೆ ಇಳಿದಿರುವ ಪರಿ, ಅದರ ವಿಶ್ಲೇಷಣೆ ಹರಳುಗಟ್ಟಿದ ಚಿಂತನೆಯನ್ನು ಸಾಕ್ಷೀಕರಿಸಿದೆ.
ಆರ್.ಪಿ.ಜಗದೀಶ್
Mar 20, 2020Very good article, I have to read it again for better understanding
ಶ್ರೀಶೈಲ ಹಾದಿಮನಿ
Mar 26, 2020ತುಂಬಾ ಚೆನ್ನಾಗಿ ಬರೆದಿದ್ದೀರಿ, ಓದಿ ಬಹಳ ಸಂತೋಷವಾಯಿತು.
ಪೆರೂರು ಜಾರು, ಉಡುಪಿ
Mar 27, 2020ಲೇಖನ ಸುದೀರ್ಘವಾಗಿದೆ, ಚೆನ್ನಾಗಿದೆ. ನಿಸರ್ಗಕ್ಕೂ ನಾವು ಕೇಳಿಕೊಳ್ಳಲಿಲ್ಲ, ಹೆತ್ತವರಿಗೂ ನಾವು ಅರ್ಜಿ ಹಾಕಲಿಲ್ಲ. ನಿಸರ್ಗ ನಿಯಮದಂತೆ ಅವರು ಹುಟ್ಟಿಸಿದ ಜಾತಿಯಲ್ಲಿ, ಧರ್ಮದಲ್ಲಿ ಬೆಳೆದಿದ್ದೇವೆ. ಇವು ಯಾವೂ ನಮ್ಮ ಆಯ್ಕೆಗಳಲ್ಲ. ಹಾಗಾಗಿ ನಾನು ಎನ್ನುವುದು ನಾನಲ್ಲ, ಈ ನಿಸರ್ಗ, ಈ ಸಮಾಜ ಮತ್ತು ಹೆತ್ತವರು ಕೊಟ್ಟದ್ದು.
Shobhadevi, Kamalapura
Mar 28, 2020ಒಳಗಿನ ಕೊಳೆಯನ್ನು ಶುದ್ದೀಕರಿಸಿಕೊಳ್ಳುವ ಆಚಾರವೇ ನಿನ್ನ ನೀನು ತಿಳಿ. ಈ ಮಾತು ತುಂಬಾ ಸತ್ಯ. ತನ್ನ ಅಂತರಂಗದ ಕೊಳೆಯನ್ನು ಶುದ್ದೀಕರಿಸಿಕೊಳ್ಳದಿದ್ದರೆ ಏನು ಹೇಳಿ ಏನು ಸಾಧಿಸಿಯೂ ಪ್ರಯೋಜನವಿಲ್ಲ. ಎಂಬ ಮಾತು ಬಹಳ ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲದೆ ಶರಣರು, ತಾನು, ತನ್ನ ಸಮಾಜ ಹಾಗೂ ನಿಸರ್ಗ ಈ ಸಂಬಂಧಲ್ಲಿ ಬದುಕಿ ಪಡೆದದ್ಲು ಅತ್ಯಮೂಲ್ಯವಾದ ಆಳ ನಿರಾಳ ಅನುಭಾವ. ಬಸವಾದಿ ಶರಣರು ಬರೀ ಮಾತಲ್ಲಿ ಹೇಳದೆ ಅದರಂತೆ ಬದುಕಿದರು👌👌👍👍🙏🙏ನಾನು ಯಾರು ಲೇಖನ ಚೆನ್ನಾಗಿದೆ.
Vital Rao Hugar
Mar 29, 2020it is consciousness which is the root of all beings matter etc. every thing comes from this exists some time and then disapear in it. now science has proved it. i have sent a message of evolution of man. please read itcarefully. what really is we cannot see but what is really no more we see. what a wonder. your writting is essence of philosophy.
ಬಸವರಾಜ. ಸೂಳಿಭಾವಿ
Mar 30, 2020ತಮ್ಮ ಲೇಖನ, ಸುಲಿದ ಬಾಳೆಹಣ್ಣು ಹಾಗೂ ಹಸಿದ ಹೊಟ್ಟೆಗೆ ಪರಿಪೂರ್ಣ ಆಹಾರ.
D P Prakash
Apr 7, 2020ಶರಣರ ಅನುಭಾವ ಸಾಹಿತ್ಯ ಮನುಷ್ಯನ ಲೌಕಿಕ ಮತ್ತು ಪಾರಮಾರ್ಥಿಕ ವಲಯಗಳನ್ನು ಗಾಢವಾಗಿ ಬಳಸಿನಿ೦ತ ಸಾಹಿತ್ಯ. ಅದರ ಅಧ್ಯಯನ ಮತ್ತು ಗ್ರಹಿಕೆಯಲ್ಲಿನ ಮನಸ್ಥಿತಿ ಉತ್ಖನನದಲ್ಲಿ ತೊಡಗಿಸಿಕೊ೦ಡ ಅನ್ವೇಷಕನ ಮನಸ್ಥಿತಿಯ೦ತಿರಬೇಕು.
ಕೆ ಆರ್ ಮ೦ಗಳಾ ರವರ ‘ನಾನು ಯಾರು’ ಎ೦ಬ ಲೇಖನ ಮಾಲಿಕೆ ಅ೦ತಹ ಮನಸ್ಥಿತಿಯನ್ನು ಅನಾವರಣಗೊಳಿಸಿದೆ. ತನ್ನ ತಾನರಿವ ಆತ್ಯ೦ತಿಕ ನಿಲುಗಡೆಯತ್ತ ಓದುಗನನ್ನು ಕರೆದುಕೊ೦ಡು ಹೋಗುವ ಲೇಖನ ತನ್ನ ಧ್ಯೇಯಕ್ಕೆ ಅನ್ವಯವಾಗದ ಸ೦ಗತಿಗಳನ್ನು ವ್ಯವಕಲನದ ರೀತಿಯಲ್ಲಿ ವರ್ಜಿಸುತ್ತಾ ಮು೦ದುವರಿಯುವ ರೀತಿ ಅನನ್ಯವಾಗಿದೆ. ಜೊತೆಗೆ ಓದುಗನ ಆಲೋಚನಾ ಶಕ್ತಿಯನ್ನು ಆರೋಹಣಾ ಮಾರ್ಗದಲ್ಲಿ ಕೊ೦ಡೊಯ್ಯುವ ವಿಷಯ ಮ೦ಡಣೆಯು ಲೇಖನಕ್ಕೆ ಆಯ್ದುಕೊ೦ಡ ಗ೦ಭೀರ ವಿಷಯಕ್ಕೆ ಶೋಭೆ ತ೦ದಿದೆ. ಮನುಷ್ಯನ ಶತ ಶತಮಾನಗಳ ಮೂಲಭೂತ ಪ್ರಶ್ನೆಯೊ೦ದಕ್ಕೆ ಉತ್ತರ ಹುಡುಕುವ ದಿಟ್ಟ ಪ್ರಕ್ರಿಯೆಗೆ ಈ ಲೇಖನ ಚಾಲನೆ ನೀಡುವುದರಲ್ಲಿ ಸ೦ಶಯವಿಲ್ಲ. ಹಾಗೆಯೇ, ವಚನ ಸಾಹಿತ್ಯ ಅಧ್ಯಯನ ಹಾಗೂ ಗ್ರಹಿಕೆಯಲ್ಲಿ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಕ೦ಡು ಕೊಳ್ಳುವ ದೃಷ್ಟಿಕೋನ ಬೆಳೆಸುವುದರಲ್ಲಿ ಇದು ವೇಗ ವರ್ಧಕದ೦ತೆ ಕೆಲಸ ಮಾಡುತ್ತದೆ೦ಬ ನ೦ಬಿಕೆಯೂ ಇದೆ.
ಡಿ ಪಿ ಪ್ರಕಾಶ್
Shubha
May 2, 2020ಸಣ್ಣವಳಿದ್ದಾಗ ಈ ಕುರಿತು ಎರಡು ಸಂದರ್ಭದಲ್ಲಿ ಯೋಚಿಸಿದ್ದೆ. ಮೊದಲನೆಯದಾಗಿ ಕ್ರಾಮತಿಯೋಗಿ ಬಸವಣ್ಣ ಚಲನಚಿತ್ರ ನೋಡುವಾಗ , ಅಕ್ಕಮಹಾದೇವಿ ಬೆತ್ತಲೆಯಾಗಿ ಅನುಭವಮಂಟಪಕ್ಕೆ ಪ್ರವೇಶಿಸುವಳು, ಆಗ ಅಲ್ಲಮ ಪ್ರಭು ಯಾರಮ್ಮ ನೀನು ? ಎಂದು ಆರ್ಭಟಿಸುವನು. ಅದಕ್ಕೆ ಉತ್ತರವಾಗಿ ಆಕೆ ಅದನ್ನೆ ಅರಿಯುವ ಪ್ರಯತ್ನದಲ್ಲಿರುವೆ ಎಂದು ಉತ್ತರಿಸುವಳು.. ಈ ಸಂಪೂರ್ಣ ಸನ್ನಿವೇಶವನ್ನು ಬಾಯಿಪಾಠ ಮಾಡಿ ಎಲ್ಲರೆದರು ಹೇಳುವಾಗ ಎಂಥಾ ಅಭಿಮಾನ. ಆಗ ಮೂಲೆಯಲ್ಲಿ ಎಲ್ಲೋ ಆಕ್ಕಮಹಾದೇವಿಗೆ ಇಷ್ಟು ಸಣ್ಣ ಪ್ರಶ್ನೆಯ ಉತ್ತರ ತಿಳಿದಿರಲಿಲ್ಲವಾ ? ಎಂದು ಅನ್ನಿಸಿದ್ದ ಉಂಟು. ನಂತರದ ದಿನಗಳಲ್ಲಿ ಪೂಜ್ಯ ಅಪ್ಪಾಜಿಯವರ ಪ್ರವಚನ ಕೇಳುವಾಗ ನಾನು, ನನ್ನದು, ನನ್ನಿಂದ ,ನನಗೋಸ್ಕರ ಎಂಬ ನಾನೆಂಬ ಬಳ್ಳಿ ಕತ್ತರಿಸಿದಾಗಲೇ ಮುಕ್ತಿ ಸಾದ್ಯ ಎಂಬುದನ್ನು ಕೇಳಿ ಎಲ್ಲಿಯಾದರೂ ಇದ್ದೀತು ಈ ಬಳ್ಳಿ ಎಂದು ಆಗ ಯೋಚಿಸಿದ್ದೆ. ಅದಾಗಿ ೨೫ ವರ್ಷಗಳ ನಂತರ ಹೌದಲ್ಲಾ ನಾನು ಯಾರು ಎಂಬುದನ್ನು ಮತ್ತೆ ಕೆದಕಿದಂತಾಯಿತು.
Suryasakha PrasadKulkarni
Jan 10, 2021ಸಂಗ್ರಹ ಯೋಗ್ಯ , ವಿವರಣಾತ್ಮಕ ಲೇಖನ
NAGESHA B.
Jan 16, 2024ನಾನು ಯಾರು ಎಂಬ ಪ್ರಶ್ನೆ ಮನುಷ್ಯ ಪ್ರಜ್ಞೆಯಲ್ಲಿ ಹುಟ್ಟಿದ್ದು ತುಸು ತಡವಾಗಿಯೇ ಸರಿ. ಪ್ರಕೃತಿಯೊಂದಿಗೆ ಹೋರಾಡಿ ಒಟ್ಟಾಗಿ ಬದುಕುವಾಗ ಮಾನವ ಜೀವಿಗಳಿಗೆ ಈ ಪ್ರಶ್ನೆ ಕಾಡಿರಲಾರದು. ಸಂಗ್ರಹ, ಸಂಗ್ರಹ, ಸಂಗ್ರಹ…..ನಾಳೆಗೆ ಮುಂದಕ್ಕೆ ಮತ್ತೆ ಮುಂದಕ್ಕೆ….. ಇದೆಲ್ಲ ನಮಗಾಗಿ ಕೂಡಿಡೋಣ….. ಎಂಥೇಚ್ಛವಾಗಿ ಸಿಗಲೆಂದು ಪ್ರಾರ್ಥಿಸೋಣ…… ಈ ಹಂತದಲ್ಲೂ ನಾನು ಯಾರು ಎಂಬ ಪ್ರಶ್ನೆ ಮಾನವ ಜೀವಿಗಳ ಎದೆಯಲ್ಲಿ ಮೂಡಿರಲಾರದು. ಮುಂದೆ…. ಮುಂದೆ…. ಇನ್ನೂ ಮುಂದೆ… ಯಾವಾಗಲೋ ಇದು ನಾನು ಉತ್ಪಾದಿಸಿದ್ದು…. ಇದು ನಾನು ಮಾಡಿದ್ದು ಹೊಸಹೊಸ ಉಪಕರಣಗಳ ಆವಿಷ್ಕಾರ…. ಅದನ್ನು ಉತ್ಪಾದಿಸಿದ ತನ್ನ ಕೌಶಲ್ಯದ ಕುರಿತ ಹೆಮ್ಮೆ…..ಇತರರಿಗಿಂತ ನಾನು ವಿಶೆಷ… ನನ್ನಲ್ಲೇನೊ ಹೊಸ ಶಕ್ತಿ ಇದೆ? ಇಂಥದೇನೋ ಭಾವ… ಇತರರು ನೀಡಿದ ಗೌವರ ಇಂಥವು ಇಂಥವು ಮನುಷ್ಯನಲ್ಲಿ ಸುಳಿಯಲು ಕಾಲಿಟ್ಟಾಗಲೆ ಅಟಮಟ ಕುಟಿಲ ಕುಹಕ ತಲೆದೋರಿದೆ ಅನುಸುತ್ತೆ.. ಇದೊಂದು ಊಹೆಯಷ್ಟೇ
ಆದರೆ ಶರಣರ ಮಾರ್ಗ ಅದ್ಭುತ.
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ! ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ! ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮಕುಟ! ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ, ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ!
ಹೀಗೆ ಮಹದಾಕಾಶದಲ್ಲಿ ವಿಹರಿಸುತ್ತಲೇ ದುತ್ತನೆ ಎನ್ನುವ ಹಾಗೆ ಭೌತಿಕ ಪ್ರಪಂಚಕ್ಕೆ ಇಳಿದು ನಾನು ಈ ಸಮಾಜದ ಭಾಗ ಎಂದು ಭಾವಿಸಿದ ಕೂಡಲೇ
ಎರೆದರೆ ನೆನೆಯದು
ಮರೆದರೆ ಬಾಡದು
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು.
ಇದು ಬೇರೆಲ್ಲೂ ಕಾಣದೇನೊ! ಹೀಗೆ ಭಾವಿಸಿ ಕಾರ್ಯರಂಗಕ್ಕೆ ಇಳಿಯುವುದು ನಿಜದ ನಿಸರ್ಗ ವಿವೇಕ.
ಶರಣು ಶರಣು