
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
ಸ್ವಾಸ್ಥ್ಯವಾದ ಅಂತರಂಗದ ಸಮಪಾತಳಿಯ ಅಂತರ್ ನೋಟದಿಂದ ಈ ಸ್ವಗತ ಸಂವಾದವನ್ನು ಓದಿ ಕಾಮೆಂಟ್ ಮಾಡುತ್ತಿರುವ ಸಮಸ್ತ ಓದುಗ ಬಂಧುಗಳಿಗೆ ವಿನಮ್ರ ಕೃತಜ್ಞತೆಗಳು.
ಈ ಸಂವಾದವು ಗುರು ಮಾರ್ಗದ ಅಣತಿಯಂತೆ ನನಗೆ ನಾನೇ ನನ್ನೊಳು ನನಗಾಗಿ ಹುಡುಕಿಕೊಳ್ಳುತ್ತಿರುವ ಕ್ರಿಯಾತ್ಮಕ ಚಿಂತನಾ ಪ್ರಸ್ಥಾನವೇ ಹೊರತು ಎಲ್ಲರೂ ಇದನ್ನು ಒಪ್ಪಬೇಕೆಂದೇನೂ ಇಲ್ಲ. ಆದಾಗ್ಯೂ ‘ಬಯಲ’ ಗಮ್ಯದ ಚಿಂತನಾ ಪ್ರಸ್ಥಾನವೊಂದು ಹೇಗಿದ್ದೀತು ಎಂಬುದಕ್ಕೆ ಈ ಸಂವಾದ ಒಂದು ಉದಾಹರಣೆ ಮಾತ್ರವಾಗಿರುತ್ತದೆ. ಜಗತ್ತಿನ ಸಮಸ್ತ ವಿಷಯಗಳನ್ನು ಪಕ್ಷಪಾತದ ರೋಗಕ್ಕೆ ಎಳೆದು ತಂದು ವಿವಾದಾತ್ಮಕಗೊಳಿಸುತ್ತಿರುವ ತೆವಲು ನಾನು ನಡೆಯಬೇಕಿರುವ ಹಾದಿಗೆ ಗವಗತ್ತಲನ್ನು ಗವಚಿ ಹಾಕಿದೆ. ಮುಕ್ತವಾದ ಚಿಂತನೆಗಳಿಂದ ನಾನು ಆ ಗವಗತ್ತಲನ್ನು ಹೋಗಲಾಡಿಸಿಕೊಳ್ಳದಿದ್ದಲ್ಲಿ ನನಗೆ ಸ್ವತಂತ್ರ ಚಿಂತನೆಯ ಸ್ವರೂಪವಾಗಲಿ, ಸತ್ಯವನ್ನು ಒಪ್ಪಿಕೊಂಡು ಆ ಹಾದಿಯಲ್ಲಿ ನಡೆಯುವ ಓಜಸ್ಸಾಗಲಿ ತೆರೆದುಕೊಳ್ಳದು. ಈ ಅಂಶವೇ ಬಯಲು ಬ್ಲಾಗಿನಲ್ಲಿ ಈ ಸಂವಾದವನ್ನು ಪ್ರಕಟಿಸಲು ಸ್ವಯಂಪ್ರೇರಣೆ ನೀಡಿದೆ. ಈ ಚರ್ಚೆಯಲ್ಲಿ ಹೃದಯಸ್ಪರ್ಶಿಯಾದ ಒಳನೋಟಗಳಿದ್ದಲ್ಲಿ ನೀವೂ ಒಪ್ಪಬಹುದು. ಇಲ್ಲದಿದ್ದಲ್ಲಿ ಉಪೇಕ್ಷಿಸಿ ಹಾಕಬಹುದು. ಸೈದ್ಧಾಂತಿಕ ಹೇರಿಕೆಯಂತೂ ಈ ಲೇಖನದಲ್ಲಿ ಇಲ್ಲ ಎಂಬುದನ್ನು ನಾನು ದಿಟ್ಟವಾಗಿ ಹೇಳಬಲ್ಲೆ. ಆದಾಗ್ಯೂ ಹೃದಯಮುಟ್ಟುವ ಸತ್ಯವನ್ನು ಒಪ್ಪಿಕೊಳ್ಳುವ ಅಂತಃಸತ್ವವಿರುವ ಎಲ್ಲರ ಬಾಂಧವ್ಯದಲ್ಲಿದ್ದೇನೆ ಎಂಬ ಸಂಗತಿ ನನ್ನಲ್ಲಿ ನನಗೆ ಧನ್ಯತಾಭಾವವನ್ನು ಹೆಚ್ಚಿಸುತ್ತಿದೆ ಎಂಬುದನ್ನು ಹೇಳಲು ಮರೆಯಲಾರೆ…
ಈ ಸಂವಾದದ ರೀತಿನೀತಿಗಳು ಮತ್ತು ಪ್ರಶ್ನೆಗಳು ಯಾರದೋ ಕಾಲ್ಪನಿಕವಲ್ಲ. ಭಗ್ನಗೊಂಡು ಮರೆಯಾಗಿರುವ ಚರಿತ್ರೆಯೊಳಗೆ ಇಂದಿಗೂ ಅಪರೂಪಕ್ಕೆಂದು ಕಾಣಿಸಿಕೊಳ್ಳುವ ಕಾಡುಹೂಗಳ ಘಮಘಮಲಿನಂತೆ ಉಳಿದುಕೊಂಡಿರುವ ಗುರುಮಾರ್ಗಗಳ ಜಾಡು ಇದು. ಹಾಗೆ ನೋಡಿದರೆ ಗುರುಮಾರ್ಗವು ನಿನ್ನೆ ಮೊನ್ನೆಗೆ ಹುಟ್ಟಿ ಬಂದದ್ದಲ್ಲ. ಸಾವಿರಾರು ವರ್ಷಗಳಿಂದ ಇತ್ತೀಚಿನವರೆಗೂ ನಮ್ಮ ಸಮಾಜದಲ್ಲಿ ತಮ್ಮ ಪಾಡಿಗೆ ತಾವು ಯಾವುದೇ ಪ್ರಚಾರಕ್ಕೆ ಜೋತು ಹೋಗದೇ ‘ತನ್ನ ತಾ ತಿಳಿಯುವ’ ಭಾಗವಾಗಿ ಈ ಬಗೆಯ ಚರ್ಚೆಗಳನ್ನು ಇಂದಿಗೂ ಮಾಡುತ್ತಿದ್ದಾರೆ. ನಾನು ಈ ಜಗತ್ತಿಗೆ ಯಾಕೆ ಬಂದಿದ್ದೇನೆ? ಈ ಕ್ಷಣದಲ್ಲಿ ನಾನು ಎಲ್ಲಾ ಪೂರ್ವಾಗ್ರಹಗಳನ್ನು ದೂರಸರಿಸಿ ಮಾಡಬೇಕಿರುವ ನೈಜ ಜವಾಬ್ದಾರಿ ಯಾವುದು? ಸತ್ಯ ಮತ್ತು ಸುಳ್ಳಿಗಿರುವ ವ್ಯತ್ಯಾಸವೇನು? ಯಾವುದು ಸತ್ಯ? ಯಾವುದು ಸುಳ್ಳು? ನಿಜವಾದ ಜೀವನದ ಪರಮಾರ್ಥ ಏನು? ಮೋಕ್ಷವೆಂದರೆ ಏನು? ಅದು ಯಾರಿಗೆ? ನಾನು ಸಂಬಂಧಗಳ ಜೊತೆಗೆ ಬದುಕುವುದೆಂದರೆ ಹೇಗೆ? ಜೀವನದ ಸತ್ಯವನ್ನು ಒಪ್ಪಿಕೊಂಡು ಬಾಳುವ ಪರಮಸುಖ ಯಾವುದು? ಎಂಬ ಪ್ರಶ್ನೆಗಳನ್ನು ಈ ಚರ್ಚೆ ಸ್ಪಷ್ಟಗೊಳಿಸುತ್ತಾ ಹೋಗುತ್ತದೆ. ಶರಣ ಮಾರ್ಗವೂ ಗುರು ಮಾರ್ಗವೇ ಆಗಿರುವುದರಿಂದ ಗುರುಮಾರ್ಗದಿಂದ ಶರಣರ ವಚನಗಳನ್ನು ನೋಡುವ ಸೌಭಾಗ್ಯ ನನ್ನದು.
ಈ ಹಾದಿಯಲ್ಲಿ “ಶಿವಪಥವನರಿವೊಡೆ ಗುರುಪಥವೇ ಮೊದಲು” ಎಂಬ ಬಸವ ಧ್ಯೇಯ ವಾಕ್ಯವು ನನ್ನ ಜೊತೆಯಲ್ಲಿದೆ. ದಾರಿಯುದ್ದಕ್ಕೂ ಬೆಳಕಾಗಿ ಸಾವಿರಾರು ವಚನಗಳಿವೆ. ಇದರೊಟ್ಟಿಗೆ ಹೃದಯವಂತರಾದ ನೀವೂ ಇದ್ದೀರಿ ಎಂಬ ಕಾರಣವು ಈ ಕ್ರಿಯೆಯನ್ನು ಇನ್ನಷ್ಟು ದಿಟವಾಗಿಸುವ ಪ್ರಯತ್ನಕ್ಕೀಡಾಗಿಸಿದೆ.
*****************
ನಾವೀಗ ಪ್ರಶ್ನೆಗೆ ಬರೋಣ… ನಮ್ಮ ಇಂದಿನ ಪ್ರಶ್ನೆ- ನನ್ನ ಮನಸ್ಸು ನಾನೆ? ಅಗಾಧವಾಗಿರುವ ಈ ಮನಸ್ಸನ್ನು, ಅದರ ಲೀಲೆಯನ್ನು ಗ್ರಹಿಸುವುದಾದರೂ ಹೇಗೆ? ಅದರ ಕತೃ ಯಾರು? ನನ್ನ ಸಮಸ್ತ ಚಲನವಲನಗಳನ್ನು ನಿರ್ದೇಶಿಸುತ್ತಿರುವ ಈ ಮನಸ್ಸನ್ನು ನಾನೆಂದುಕೊಳ್ಳಲೇ? ಒಳ್ಳೆಯದು-ಕೆಟ್ಟದು; ಸತ್ಯ-ಸುಳ್ಳು; ಭ್ರಮೆ-ವಾಸ್ತವ; ನೀತಿ- ಅನೀತಿ ಈ ರೀತಿಯಾಗಿ ವಿಲಕ್ಷಣವಾಗಿ ನನ್ನನ್ನು ಬೆಂಬತ್ತಿರುವ ಆ ಮನಸ್ಸಿನಲ್ಲಿಯೇ ಶಿವನಿರುವನೋ ಅಥವಾ ಜೀವ- ದೇಹಗಳ ಸಂಯೋಗದಂತಿರುವ ನನ್ನ ಜೈವಿಕ ಅಸ್ತಿತ್ವದಂತೆಯೇ ನನ್ನ ಮನಸ್ಸಿಗೂ ಒಂದು ಅಸ್ತಿತ್ವ ಇದೆಯೇ? ಹಾಗಾದರೆ ಅದು ಎಲ್ಲಿದೆ? ಹೇಗಿದೆ? ನಾಮವಿದ್ದಾಗ ವಸ್ತು ರೂಪದಲ್ಲಾದರೂ ಅದು ಇರಬೇಕಿತ್ತಲ್ಲ? ಘನವೂ ಅಲ್ಲದೆ, ದ್ರವವೂ ಅಲ್ಲದೆ, ಅನಿಲವೂ ಅಲ್ಲದೆ, ಪ್ಲಾಸ್ಮಾವೂ ಅಲ್ಲದೆ ನಿರೂಪದ ಮೂಲಕ ತೀರ್ಮಾನಿಸುತ್ತಿರುವ ಅದು, ಅಂದರೆ ಆ ಮನಸ್ಸು ನಾನೇ?
ಹಾಗೆ ನೋಡಿದರೆ… ಈ ಪ್ರಶ್ನೆಗಳು ಹೊಚ್ಚ ಹೊಸವಾದವೇನೂ ಅಲ್ಲ. ನಮ್ಮ ನೆಲದಲ್ಲಿ ಈ ಪ್ರಶ್ನೆಗಳ ಮೇಲೆ ಸಾವಿರಾರು ವರ್ಷಗಳ ಹಿಂದೆ ಚರ್ಚೆ ನಡೆದಿದೆ. ಈ ಚರ್ಚೆಯು ಅನೇಕ ಸಂಘರ್ಷಗಳಿಗೂ ದಾರಿ ಮಾಡಿಕೊಟ್ಟಿದೆ. ಅಲ್ಲದೆ ನಮ್ಮಲ್ಲಿ ಭಿನ್ನ ದರ್ಶನಗಳೂ ಹುಟ್ಟಿಕೊಳ್ಳಲು ಕಾರಣವಾಗಿದೆ. ಇವುಗಳಲ್ಲಿ ಅತಿ ಮುಖ್ಯವಾದ ಎರಡು ದರ್ಶನಗಳೆಂದರೆ ‘ಭಾವನಾವಾದ’ ಮತ್ತು ‘ಭೌತ ವಾದ’! ಜೈಮಿನಿ ಬಾದರಾಯಣ ಮತ್ತು ಆದಿ ಶಂಕರಾಚಾರ್ಯರು ಭಾವನಾವಾದದ ಆಚಾರ್ಯರೆನಿಸಿಕೊಂಡರೆ, ಭೌತವಾದದ ಮೇಲೆ ಚಾರ್ವಾಕರು ತಮ್ಮ ದರ್ಶನವನ್ನು ಮಂಡಿಸಿದ್ದಾರೆ.
ಭಾವನಾವಾದವು- ಭಾವವೇ ಆತ್ಯಂತಿಕ ಸತ್ಯವೆನ್ನುತ್ತದೆ. ಶಂಕರರ ‘ಶಿವೋಹಂ’ (ನಾನು ಶಿವನಾದೆ) ಎಂಬ ವಾಕ್ಯವು ಭಾವ ಪ್ರಧಾನವೇ ಆಗಿದ್ದರೂ, ನಾನು ಭಗವಂತನಾಗುವಿಕೆಗೆ ಮತ್ತು ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವಲ್ಲಿ ಮತ್ತು ಭಕ್ತಿ ಜ್ಞಾನಗಳನ್ನು ತಿಳಿಯುವಲ್ಲಿ ಮತ್ತು ನಂಬುವಲ್ಲಿ, ಮತ್ತದನ್ನು ಭವಿಸುವಲ್ಲಿ ಭಾವ ಜಗತ್ತೇ ಮುಖ್ಯವಾಗುತ್ತದೆ. ಇಲ್ಲಿ ಭಾವವೇ ‘ಸಾಕ್ಷಿಭೂತ’ವಾಗಿದೆ. ಮತ್ತು ಅದೇ ಭಗವಂತನ ಸ್ಪಷ್ಟ ರೂಪವಾಗಿದೆ. ತನ್ನೊಳಗೆ ಭಾವಿಸಲಾಗುವ ಭಗವತ್ ಸ್ವರೂಪವೇ ಹೊರಗಿನ ಎಲ್ಲಾ ಜಗತ್ತನ್ನು ಸೃಷ್ಟಿಸಿದೆ ಎಂಬ ಭ್ರಾಂತಿ ಹಾಸ್ಯಾಸ್ಪದವೆಂದು ತತ್ವಶಾಸ್ತ್ರಜ್ಞರು ಗೇಲಿ ಮಾಡಿರುವುದುಂಟು. ವಿಪರ್ಯಾಸವೆಂದರೆ ಇಡೀ ಜಗತ್ತಿನ ಎಲ್ಲಾ ಮತೀಯವಾದಗಳಿಗೂ ಆಶ್ರಯತಾಣ ನಂಬಿಕೆ ಮತ್ತು ಭಾವನೆಗಳೇ ಆಗಿವೆ. ಸಾವಿರಾರು ವರ್ಷಗಳಿಂದಲೂ ಮತೀಯತೆಯ ಹೇರಿಕೆ ಕೂಡಾ ಮನುಷ್ಯನ ನಂಬಿಕೆ ಮತ್ತು ಭಾವನೆಗಳ ಮೇಲೆ ನಡೆದ ದಬ್ಬಾಳಿಕೆ ಸಹ ಆಗಿದೆ ಎಂಬುದು ತತ್ವಶಾಸ್ತ್ರಜ್ಞರ ಅಭಿಪ್ರಾಯವಾಗಿದೆ (ದೇವಿಪ್ರಸಾದ್ ಚಟ್ಟೋಪಾಧ್ಯಾಯರು, ಎಂ.ಎನ್.ರಾಯ್, ಕಾರ್ಲೈಲ್, ಟಾಲಸ್ಟಾಯ್, ಅರಿಸ್ಟಾಟಲ್, ಜಿಡ್ಡು ಕೃಷ್ಣಮೂರ್ತಿ, ಇತ್ಯಾದಿ).
ಭೌತವಾದವನ್ನು ಪ್ರಸ್ತಾಪಿಸಿದ ಚಾರ್ವಾಕರಂತೂ ನಂಬುಗೆ, ಭಾವನೆಗಳು ಮನುಷ್ಯನ ಕಲ್ಪನೆಗಳಾಗಿರುವುದರಿಂದ ಇವುಗಳ ಪ್ರಮೇಯಗಳಿಲ್ಲದೆ, ಮನುಷ್ಯ ಬದುಕಬಹುದು. ಭೌತಿಕ ಜಗತ್ತಿನ ಎಲ್ಲಾ ಆಗು ಹೋಗುಗಳೂ, ನಿಸರ್ಗದ ಎಲ್ಲಾ ಕ್ರಿಯೆಗಳು ಮನುಷ್ಯ ನಿರ್ಮಿತ ಕಲ್ಪನೆಗಳಿಂದ ಆಗಿದ್ದವಲ್ಲವೇ ಅಲ್ಲ. ಎಲ್ಲಾ ಮತಗಳೂ ಭೌತಿಕ ಜಗತ್ತನ್ನು ಅಧಿಕಾರ ಕೇಂದ್ರಿತವಾದ ಮನೋ ಸಂರಚಿತ ವಿಷಯಗಳನ್ನಾಗಿ ಪರಿಭಾವಿಸುವ ಸಂಸ್ಕಾರಕ್ಕೆ ಒಳಗಾಗಿಸಿರುತ್ತವೆ. ಇದು ದೊಡ್ಡ ಹುಸಿ ಲೋಕ. ಭೌತಿಕ ಜಗತ್ತಿನ ಇರುವಿಕೆ ಮತ್ತು ನಶಿಸುವಿಕೆಗಳನ್ನು ಭೌತಿಕ ವಸ್ತುಗಳ ಸ್ವಾಭಾವಿಕ ಪರಿವರ್ತನೆ ನಿರ್ಧರಿಸುತ್ತದೆಯೇ ವಿನಾ ಮನುಷ್ಯ ನಂಬಿಕೆಗಳಾಗಲೀ, ಭಾವನೆಗಳಾಗಲೀ ಅಲ್ಲ. ಭೌತಿಕ ವಸ್ತು ಜಗತ್ತು ಉಂಟಾಗಲು ಭೌತಿಕ ವಸ್ತುಗಳೇ ಕಾರಣ ಮತ್ತು ಕಾರ್ಯಗಳಾಗಿವೆ. ಭೌತಿಕ ಕಾರ್ಯದಲ್ಲೇ ಕಾರಣವೂ ಅಡಗಿರುತ್ತದೆ. ಕಾರಣ ಮತ್ತು ಕಾರ್ಯಗಳೆರಡೂ ಪ್ರಕೃತಿಯೇ ಆಗಿದೆ ಎಂದು ಚಾರ್ವಾಕರು ತಮ್ಮ ಭೌತಸಿದ್ಧಾಂತದಲ್ಲಿ ಮಂಡಿಸುತ್ತಾರೆ.
ಯತಾರ್ಥವಾಗಿ ಭಾವನಾವಾದವು ‘ಆಸ್ತಿಕ’ ಸಿದ್ಧಾಂತವನ್ನು ಪ್ರಸ್ತುತಗೊಳಿಸಲು ಕರ್ಮಜ್ಞಾನದ ಪರಿಕಲ್ಪನೆಯನ್ನು ಮುನ್ನಲೆಗೆ ತಂದರೆ, ಭೌತಿಕ ವಾದವು ‘ನಾಸ್ತಿಕ’ ಸಿದ್ಧಾಂತದ ಮೂಲಕ ಪ್ರಕೃತಿ ತತ್ವವನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿತ್ತು. ಈ ಎರಡೂ ಸಿದ್ಧಾಂತಗಳನ್ನು ಒಪ್ಪಿ ಸ್ವೀಕರಿಸಿ ಆ ಹಾದಿಯಲ್ಲಿ ನಡೆಯುವ ಬುಡಕಟ್ಟುಗಳೂ ನಮ್ಮಲ್ಲಿ ಸಾಕಷ್ಟಿದ್ದವು. ಇಂದಿಗೂ ಜನಪದರು ಆಚರಿಸುವ ಮುಂಗಾರು ಹಬ್ಬ, ಕಾರು ಹಬ್ಬ, ಸಂಕ್ರಾಂತಿ, ಹೊನ್ನೇರು ಹಬ್ಬ, ಎಳ್ಳೆತ್ತಿನ ಅಮವಾಸ್ಯೆ, ಇತ್ಯಾದಿ ಹಬ್ಬಗಳು ಭೌತವಾದಿಗಳದ್ದೇ ಆಗಿವೆ. ಜನಪದರ ವಿವೇಕ ಏನಿದ್ದರೂ ನೈಸರ್ಗಿಕ ಉತ್ಪಾದನೆ ಮತ್ತು ಬದುಕಿಗೆ ಸಂಬಂಧಿಸಿದ್ದಾಗಿದೆ. ಅಲ್ಲಿ ಹೆಣ್ಣೇ ಪ್ರಧಾನ. ಅಲ್ಲಿನ ದೇವರುಗಳೂ ಹೆಣ್ಣೇ ಆಗಿರುತ್ತವೆ. ಭಾವನಾ ವಾದವು ಇದಕ್ಕೆ ತೀರಾ ವಿಭಿನ್ನವಾದದ್ದು. ಅದರದು ಪುರುಷ ಪ್ರಧಾನ. ಹೆಣ್ಣಿಗೆ ಯಾವುದೇ ಹಕ್ಕುಗಳು ಅಲ್ಲಿ ಇರುವುದಿಲ್ಲ. ರಾಮ, ಕೃಷ್ಣ, ಈಶ್ವರ, ಇತ್ಯಾದಿ ದೈವಗಳು ಪುರುಷ ಪ್ರಧಾನವನ್ನೇ ಸಮರ್ಥಿಸಿಕೊಳ್ಳುತ್ತವೆ. ಇಂದ್ರಾದಿ ದೇವತೆಗಳೆಲ್ಲರೂ ಪುರುಷರೇ ಆಗಿದ್ದಾರೆ. ಭಾವನಾ ವಾದವು ಆದಿದೈವಿಕವೇ ಸೃಷ್ಟಿಯ ಮೂಲವೆಂದರೆ ಭೌತಿಕವು ಆದಿಭೌತಿಕವೇ ಸೃಷ್ಟಿಯ ಮೂಲವೆನ್ನುತ್ತದೆ. ಭಾವನಾ ವಾದಕ್ಕೆ ಭಾವವೇ ಪ್ರಧಾನ. ಭೌತವಾದಕ್ಕೆ ಭೌತ ವಸ್ತುವೇ ಪ್ರಧಾನ.
ಒಂದಕ್ಕೊಂದು ವಿರುದ್ಧವಾದ ಈ ಎರಡೂ ವಾದಗಳ ಮೇಲೆ ಶರಣರು ಮಾತನಾಡಿರುವುದು ಬಹಳ ವಿಸ್ಮಯವನ್ನುಂಟು ಮಾಡುತ್ತದೆ. ಭಾವನಾವಾದದ ಕುರಿತ ವಚನಗಳು ಸಂಖ್ಯೆಯಲ್ಲಿ ನೂರಾರು ಇದ್ದರೂ ಅವುಗಳಲ್ಲಿ ಕೆಲವನ್ನು ಇಲ್ಲಿ ಉದಾಹರಿಸಬಹುದು:
ಭಾವದಲ್ಲಿ ಭ್ರಮಿತರಾದವರ
ಸೀಮೆಯೇನು? ನಿಸ್ಸೀಮೆಯೇನು?
ವಚನದ ರಚನೆಯ ರಂಜನೆಯ ಲೀಲೆಯನಾಡುವರು.
ಗುಹೇಶ್ವರನಿಪ್ಪ ಗುಪ್ತವೆಂತೆಂದರಿಯರು.
ಒತ್ತಿ ಹಣ್ಣ ಮಾಡಿದಡೆ ಅದೆತ್ತಣ ರುಚಿಯಪ್ಪುದೊ?
ಕಾಮಿಸಿ ಕಲ್ಪಿಸಿ ಭಾವಿಸಿದಡೆ ಅದೆ ಭಂಗ.
ಭಾವಿಸುವ ಭಾವನೆಗಿಂದ ಸಾವು[ದೆ]ಲೇಸು ಕಾಣಾ ಗುಹೇಶ್ವರಾ.
ಭಾವದಲೊಬ್ಬ ದೇವರ ಮಾಡಿ,
ಮನದಲೊಂದು ಭಕ್ತಿಯ ಮಾಡಿದಡೆ,
ಕಾಯದ ಕೈಯಲ್ಲಿ ಕಾರ್ಯವುಂಟೆ?
ವಾಯಕ್ಕೆ ಬಳಲುವರು ನೋಡಾ.
ಎತ್ತನೇರಿ ಎತ್ತನರಸುವರು, ಎತ್ತ ಹೋದರೈ ಗುಹೇಶ್ವರಾ?
ಈಶ್ವರ ಸದ್ಭಾವೇ ಕಿಂ ಪ್ರಮಾಣಂ
ಎಂಬ ಮೀಮಾಂಸಕನ ಮೂಗಿನ ಕೊನೆಯನು
ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ
ವಿಶ್ವತೋ ಬಾಹುರುತ ವಿಶ್ವತಃ ಪಾತ್
ಸಂ ಬಾಹುಭ್ಯಾಂ ಧಮತಿ ಸಂ ಪತತ್ರಃ
ದ್ಯಾವಾಭೂಮೀ ಜನಯನ್ ದೇವ ಏಕಃ
ಎಂಬ ಸುರಗಿಯಲ್ಲಿ ಅರಿದು, ವೈಶೇಷಿಕವೆಂಬ ಇಟ್ಟಿಗೆಯಲೊರಸಿ,
ಕೂಡಲಸಂಗಯ್ಯನೆಂಬ ಕನ್ನಡಿಯ ತೋರುವೆನು.
ಪಂಚಬ್ರಹ್ಮವ ಕೆಡಿಸಿತ್ತು, ಪ್ರಣವಮಂತ್ರವನೀಡಾಡಿತ್ತಲ್ಲಾ.
ಕರ್ಮಂಗಳನೆ ಕಳೆಯಿತ್ತು, ಕ್ರೀಗಳನೆ ಮೀರಿತ್ತಲ್ಲಾ.
ಆಗಮದ ಹಲ್ಲನೆ ಕಳೆಯಿತ್ತು
ಕೂಡಲಸಂಗಯ್ಯನ ಭಕ್ತಿಗಜ ಹೋ!
ನ್ಯಾಯ ನಿಷ್ಠುರಿ:ದಾಕ್ಷಿಣ್ಯಪರ ನಾನಲ್ಲ,
ಲೋಕವಿರೋಧಿ:ಶರಣನಾರಿಗಂಜುವನಲ್ಲ,
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ.
ಹಾಗೆಯೇ ಚಾರ್ವಾಕರನ್ನು ಛೇಡಿಸುವ ವಚನಗಳನ್ನೂ ನಾವು ಹುಡುಕಿದಾಗ-
ಪಶು ಪಾಷಂಡಿ ಚಾರ್ವಾಕ ಮಾತುಗಂಟಿ
ಎಷ್ಟನಾಡಿದಡೂ ಶಿವಯೋಗಸಂಬಂಧ ಸಂಪನ್ನನೊಪ್ಪುವನೆ?
ರಾಜ್ಯಭ್ರಷ್ಟಂಗೆ ತ್ಯಾಗಭೋಗವುಂಟೆ?
ನಪುಂಸಕಂಗೆ ಜಿತೇಂದ್ರಿಯತ್ವವುಂಟೆ?
ದರಿದ್ರಂಗೆ ನಿಸ್ಪೃಹತ್ವವುಂಟೆ?
ನಿಶ್ಚೈಸಿ ನಿಜವಸ್ತುವನರಿಯದವನು
ಕರ್ತೃಭೃತ್ಯಸಂಬಂಧವನೆತ್ತ ಬಲ್ಲನೊ?… (ಪ್ರಸಾದಿ ಭೋಗಣ್ಣ)
ಅಲ್ಲಮರು ಕಠೋರ ಮಾತುಗಳಿಂದ ಚಾರ್ವಾಕರನ್ನು ಛೇಡಿಸಿದಂತೆ ಯಾರೂ ಛೇಡಿಸಲಾರರು…
ಚಾರ್ವಾಕ ಚಾಂಡಾಲ ಶಿವದ್ರೋಹಿಯ ಮಾತಕೇಳಿ,
ಬಿಟ್ಟನಾದರೆ,_ಅವ ವ್ರತಭ್ರಷ್ಟ ಅವನ ಮುಖವ ನೋಡಲಾಗದು.
ಸಾಕ್ಷಿ:“ಸರ್ವಾಚಾರಪರಿಭ್ರಷ್ಟಃ ಶಿವಾಚಾರೇನ ಶುಧ್ಯತಿ
ಶಿವಾಚಾರ ಪರಿಭ್ರಷ್ಟಃ ರೌರವಂ ನರಕಂ ವ್ರಜೇತ್”_
ಇಂತೆಂದುದಾಗಿ, ಸಮಸ್ತವಾದ ವ್ರತಂಗಳಲ್ಲಿ ಭ್ರಷ್ಟರಾದವರ
ಶಿವಾಚಾರದಲ್ಲಿ ಶುದ್ಧನ ಮಾಡಬಹುದು…
ಆಗಮಶಾಹಿ ಸಂಸ್ಕೃತಿಯ ಸಾಹಿತ್ಯಿಕ ಸಂರಚನೆಗಳೆಲ್ಲವೂ ಭಾವನೆಗಳು ಮತ್ತು ನಂಬಿಕೆಗಳನ್ನು ಅವಲಂಬಿಸಿಕೊಂಡು ಅವುಗಳ ಮೇಲೆ ಅಚ್ಚೊತ್ತಿಕೊಂಡು ಬೆಳೆದಿವೆ. ಆಗಮಶಾಹಿಯ ತತ್ವದರ್ಶನದಲ್ಲಿ ಲೌಕಿಕದ ಸಂಕೀರ್ಣ ಸಮಸ್ಯೆಗಳಿಗೆ ಯಾವುದೇ ಆದರಣೆ ಇಲ್ಲ. ಅದು ಕಲ್ಪನಾಜನ್ಯವಾದದ್ದು. ಅದೇ ಭೌತಿಕ ವಾದವನ್ನು ಬಿಚ್ಚಿ ನೋಡಿದಾಗ ಅದು ವಸ್ತು ಅವಲಂಬಿತ ಬದುಕನ್ನಷ್ಟೇ ಪ್ರಚೋದಿಸುತ್ತದೆ. ಆದರೆ ಶರಣ ಮಾರ್ಗವು ಯಾವುದೇ ಮುಲಾಜಿಗೊಳಗಾಗದೇ ಇವೆರಡನ್ನೂ ಗಾಳಿಗೆ ತೂರಿಬಿಡುತ್ತದೆ, ಯಾಕೆ?
ಜಗತ್ತಿನಲ್ಲಿ ಬಾಳಿ ಹೋದ ವಿವಿಧ ನಾಗರಿಕತೆಗಳು, ಸಮಾಜೋ- ರಾಜಕೀಯ ವಿದ್ಯಮಾನಗಳು ಮತ್ತು ತಾತ್ವಿಕ ದರ್ಶನಗಳನ್ನು ಅಧ್ಯಯನ ಮಾಡಿರುವ ಯಾರೇ ಆಗಿರಲಿ ಅಂತಹವರು ಶರಣ ಸಾಹಿತ್ಯವನ್ನೊಮ್ಮೆ ಮುಖಾಮುಖಿಯಾದಾಗ ಅಲ್ಲೊಂದು ಅನನ್ಯವಾದ ರೋಮಾಂಚನದ ಅನುಭವವಿರುತ್ತದೆ. ಅವರು ಕಟ್ಟಿದ ಅನುಭವ ಮಂಟಪದಲ್ಲಿ ಹೊಸದಾಗಿ ಉಂಟಾದ ಸಾಮಾಜಿಕ ಸಂಬಂಧಗಳಲ್ಲಿ ಅವರಿಗಿದ್ದ ಸಾಮಾಜಿಕ ಕಳಕಳಿ ವಿಸ್ಮಯಗೊಳಿಸುತ್ತದೆ. ಅವರು ಆ ಪರಿಸರದಲ್ಲಿ ರೂಪಿಸಿದ ಅಮನಸ್ಕ ದರ್ಶನದೊಳಗೆ ಸಮಚಿತ್ತದಿಂದ ಕೂಡಿದ ಮನೋ ವಿಜ್ಞಾನವಿದೆ. ಅವರು ಅನುಭವಿಸಿದ ಆಳ-ನಿರಾಳದಲ್ಲಿ ಪರ್ಯಾಯ ಸಂಸ್ಕೃತಿಯೊಂದರ ಅನುಭಾವದ ಕುರುಹಿದೆ. ಸಾರ್ವಕಾಲಿಕವಾದ ಈ ಜನಾಂಗೀಯ ಸಮಸ್ಯೆಗಳಿಂದ ಜನರನ್ನೆಲ್ಲ ಮೇಲೆತ್ತುವಷ್ಟು ತಾಕತ್ತಿನ ಅಂತಃಶ್ರದ್ಧೆಯಿದೆ. ಈ ಹೊಸ ಅಸ್ತಿವಾರಕ್ಕೆ ಭಾರತದ ಎಲ್ಲಾ ಮತಾಚಾರಗಳೂ ಕಂಟಕವಾಗಿದ್ದವು.
ಭಾವನಾ ವಾದವೋ… ಇಲ್ಲಾ ಭೌತಿಕ ವಾದವೋ… ಇಲ್ಲ ವೈಶೇಷಿಕವೋ… ಇಂತಹ ಇಸಮ್ಮುಗಳ ಚರಿತ್ರಾತ್ಮಕ ವಿಷಯಗಳು ನಮ್ಮ ಮುಂದೆ ಸುಳಿದಾಡಿದಾಗ ಅಥವಾ ಒಂದಕ್ಕೊಂದು ತೀರಾ ವಿರುದ್ಧವಾಗಿವೆ ಎಂದು ತೋರಿಬರುವ ಇಂತಹ ಐತಿಹಾಸಿಕ ಸರಣಿಗಳನ್ನು ಓದುವಾಗ ಇಂತಹವೆಲ್ಲವೂ ಕೇವಲ ಗ್ರಂಥಸ್ಥ ವಿಷಯಗಳೆಂದು ಅವುಗಳನ್ನು ಓದಿ ಮರೆತು ಹೋಗುತ್ತೇವೆ. ಕೆಲವೊಮ್ಮೆ ಚರಿತ್ರೆಯೊಳಗೆ ನಡೆದ ಸಂಘರ್ಷಗಳೆಂದು ತಿಳಿದುಕೊಳ್ಳುವ ಹಂತಕ್ಕೆ ಅವುಗಳನ್ನು ಮೀಸಲಾಗಿರಿಸುತ್ತೇವೆ. ಆದರೆ ಮನುಷ್ಯ ಚರಿತ್ರೆಯು ಕೇವಲ ಐತಿಹಾಸಿಕ ಪುಸ್ತಕ ಮಾತ್ರವಾಗಿರುವುದಿಲ್ಲ. ಮುಖ್ಯವಾಗಿ ಮಾನವ ನಾಗರಿಕತೆಗಳು ರೂಪುಗೊಳ್ಳುವಲ್ಲಿ ಅಧಿಕಾರ ಶಕ್ತಿಗಳು ಸಾಮಾನ್ಯರ ಮೇಲೆ ಜಾರಿಗೊಳಿಸಿದ ಅನುಶಾಸನಗಳು ಮತ್ತು ಅವುಗಳೊಂದಿಗೆ ಸಾಮಾನ್ಯರು ಬಂಡಾಯವೆದ್ದ ವಿಷಯಗಳಿಂದ ಪ್ರೇರಣೆಗೊಂಡ ತಾತ್ವಿಕ ಸಿದ್ಧಾಂತಗಳಿಂದ ಮನುಷ್ಯರ ಮನಸ್ತತ್ವ ರೂಪುಗೊಂಡಿರುತ್ತದೆ. ಮನಸ್ಸೇ ಸಂಸ್ಕೃತಿಗಳನ್ನು ಪರಂಪರೆಯಿಂದ ಪರಂಪರೆಗೆ ಹಸ್ತಾಂತರಿಸುವ ವಾಹಕವಾಗಿರುವುದರಿಂದ ಮನಸ್ಸೆಂಬುದು ಸಂಸ್ಕೃತಿಯ ಸಂಗ್ರಹಗಾರವಾಗಿರುತ್ತದೆ. ಆ ಸಂಸ್ಕೃತಿ ನಮ್ಮ ಜನರ ಸಾಮಾಜಿಕತೆ ಮತ್ತು ವ್ಯಕ್ತಿತ್ವಗಳನ್ನು ರೂಪಿಸುವ ಕಾರ್ಯಾಗಾರವಾಗಿರುತ್ತದೆ. ಭಾರತೀಯ ಮನಸ್ಸಿನ ಕಾರಣ ಕಾರ್ಯದ ಲಕ್ಷಣವೇನೆಂದರೆ- ಶ್ರೇಷ್ಠತೆಯ ವ್ಯಸನವನ್ನು ಸಮಾಜದಿಂದ ಬಳುವಳಿಯಾಗಿ ಪಡೆದು, ಭಾವದಲ್ಲಿ ಅದನ್ನು ಅಂತಿಮ ಸತ್ಯವೆಂದು ನಂಬಿ, ಭೌತಿಕ ಜಗತ್ತಿನಲ್ಲಿ ವಸ್ತುಗಳನ್ನು ಪಡೆಯುವುದರ ಮೂಲಕ ವ್ಯಕ್ತಿ ಶ್ರೇಷ್ಠತೆಯನ್ನು ಸ್ಥಾಪಿಸಿಕೊಳ್ಳುವ ಕಾರ್ಯದಲ್ಲಿ ಅದು ಸದಾ ತೊಡಗಿಕೊಂಡಿರುತ್ತದೆ. ಇದು ನಮ್ಮ ದೇಶದಲ್ಲಿ ನಡೆದ ಭಾವನಾ ವಾದ ಮತ್ತು ಭೌತ ವಾದಗಳ ಪ್ರಭಾವದಿಂದ ರೂಪುಗೊಂಡ ಮನಸ್ಸಿನ ಚರಿತ್ರೆಯ ಸಣ್ಣ ತುಣುಕು ಮಾತ್ರ.
ಮನಸ್ಸೆಂಬುದು ಕೇವಲ ಒಬ್ಬ ಮನುಷ್ಯನ ಅನುಭವ, ಸಂವೇದನೆ, ಸ್ವಭಾವಗಳಿಂದ ರೂಪುಗೊಂಡಿದ್ದಲ್ಲ. ನಮ್ಮೊಳಗಿನ ಅತ್ಯಂತ ಪುರಾತನ ವ್ಯಕ್ತಿ ಯಾರೆಂದು ಕೇಳಿದರೆ ಅದು ಮನಸ್ಸು. ಅದರೊಳಗೆ ನಮ್ಮನ್ನು ನಂಬಿಸಿ ಒಪ್ಪಿಕೊಳ್ಳುವಂತೆ ಮಾಡಿರುವ ವಿಚಿತ್ರವಾದ ಸಾಮಾಜಿಕ ಒಪ್ಪಂದಗಳಿವೆ, ತಾರತಮ್ಯಗಳಿಂದ ಕೂಡಿದ ಶೋಷಿತ ವ್ಯವಸ್ಥೆಗಳನ್ನು ಪೋಷಿಸುವ ಕಾವಲು ಕಂಬಗಳಿವೆ, ವಿಕೃತವಾದ ಸುಖಾಪೇಕ್ಷೆಗಳಿವೆ, ಅರ್ಥಹೀನವಾದ ಭಾವನೆಗಳಿವೆ, ಬದುಕಿನ ವಸ್ತುಸ್ಥಿತಿಗೆ ದೂರವಾದ ನಂಬಿಕೆಗಳಿವೆ, ಕಠೋರತೆಗಳಿವೆ, ಹಿತಗಳಿವೆ. ಒಟ್ಟಿನಲ್ಲಿ ಮನಸ್ಸೇ ವ್ಯಕ್ತಿ ಮತ್ತು ಸಮಾಜವನ್ನು ರೂಪಿಸುವಲ್ಲಿನ ಕಾರಣ-ಕಾರ್ಯ-ಪರಿಣಾಮದ ಗಿರಗಟ್ಲೆ.
ಸಂಸ್ಕೃತಿಯ ಪ್ರಭಾವಗಳು ಮನಸ್ಸನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದರೆ, ಆ ಮನಸ್ಸೇ ವ್ಯಕ್ತಿಯನ್ನು ದಿಗ್ದರ್ಶಿಸುತ್ತದೆ. ವ್ಯಕ್ತಿಗಳೇ ಸಮಾಜೋ ಧಾರ್ಮಿಕ ರಾಜಕೀಯಗಳನ್ನು ಬದಲಾಗದಂತೆ ಸ್ಥಾಪಿಸಿಬಿಡುತ್ತಾರೆ. ಈ ಹಠಮಾರಿತನದಿಂದ ಕೂಡಿದ ಅರಿವಿನ ಪ್ರವಾಹವನ್ನು ತೊಡೆದು ಹಾಕದಿದ್ದಲ್ಲಿ ಪರ್ಯಾಯವಾದ ಸಮಷ್ಠಿ ಪ್ರಜ್ಞೆಯ ಸಂಸ್ಕೃತಿಯೊಂದನ್ನು ಪುನರ್ ನಿರ್ಮಾಣ ಮಾಡಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಬಸವಣ್ಣನವರು “ಆಗಮದ ಹಲ್ಲನ್ನು ಕಳೆಯಿತ್ತು ಕೂಡಲ ಸಂಗಯ್ಯನ ಭಕ್ತಿ ಗಜ ಹೋ” ಎಂದು ಘೋಷಿಸುತ್ತಾರೆ. ಇದು ಲಿಂಗಾಯತ ಧರ್ಮವನ್ನು ಎತ್ತಿ ಹಿಡಿದಿದ್ದ ಶರಣ ಸಂಸ್ಕೃತಿಗಿದ್ದ ಶಕ್ತಿ. ಆ ಶಕ್ತಿಗೆ ಮನಸ್ಸಿನಲ್ಲಿ ಸಂಚಿತಗೊಂಡು ಆಳವಾಗಿ ಬೇರೂರಿರುವ ಕಲ್ಮಶಗಳನ್ನು ಬೇರು ಸಹಿತ ನಿರ್ನಾಮ ಮಾಡಿ ತೆಗೆದು ಹಾಕುವ ಮನೋವಿಜ್ಞಾನವಿದೆ. ಶರಣ ಸಂಸ್ಕೃತಿಯಲ್ಲಿ ಯಾವುದು ಮನೋ ವಿಜ್ಞಾನವಾಗಿದೆಯೋ ಅದು ‘ಶಿವಯೋಗ’ವೆಂದೆನಿಸಿಕೊಂಡಿದೆ.
ಭಾವದಲ್ಲಿ ಗಮನ, ಪ್ರಾಣದಲ್ಲಿ ಲೋಭ,
ಜಿಹ್ವೆಯಲ್ಲಿ ರುಚಿ, ಶ್ರೋತ್ರದಲ್ಲಿ ಕುಶಬ್ದ,
ನಾಸಿಕದಲ್ಲಿ ದುರ್ಗಂಧ, ನೋಟದಲ್ಲಿ ಕಾಮ, ಶಬ್ದದಲ್ಲಿ ವಿರೋಧ_
ಇಂಥ ಭವಿಯ ಕಳೆದು ಭಕ್ತನ ಮಾಡಿದ ಪರಿಯೆಂತೆಂದರೆ:
ಕಾಮನ ಸುಟ್ಟ ವಿಭೂತಿಯೂ ಅಲ್ಲ, ಜವನ ಸುಟ್ಟ ವಿಭೂತಿಯೂ ಅಲ್ಲ,
ತ್ರಿಪುರವ ಸುಟ್ಟ ವಿಭೂತಿಯೂ ಅಲ್ಲ,
ಆದಿಯಾಧಾರವಿಲ್ಲದಂದಿನ [ಚಿದ್] ವಿಭೂತಿಯ ತಂದು ಪಟ್ಟವ ಕಟ್ಟಿದರೆ,
ಭಾವಕ್ಕೆ ಗುರುವಾಯಿತ್ತು, ಪ್ರಾಣಕ್ಕೆ ಲಿಂಗವಾಯಿತ್ತು
ಜಿಹ್ವೆಗೆ ಪ್ರಸಾದವಾಯಿತ್ತು, ಶ್ರೋತ್ರಕ್ಕೆ ಶಿವಮಂತ್ರವಾಯಿತ್ತು,
ನಾಸಿಕಕ್ಕೆ ಸುಗಂಧವಾಯಿತ್ತು ನೋಟಕ್ಕೆ ಜಂಗಮವಾಯಿತ್ತು,
ಶಬ್ದಕ್ಕೆ ಸಂಭಾಷಣೆಯಾಯಿತ್ತು_
ಇಂತೀ ಪೂರ್ವಗುಣಂಗಳೆಲ್ಲವ ಕಳೆದು ಸ್ವಸ್ಥಾನವಾಯಿತ್ತಾಗಿ
ಕೂಡಲಚೆನ್ನಸಂಗಾ ನಿಮ್ಮ ಶರಣ ಸರ್ವಾಂಗಲಿಂಗಿಯಾದ.
ಶರಣರು ಎಂದಿಗೂ ತಪಸ್ವಿಗಳೂ ಅಲ್ಲ, ಸನ್ಯಾಸಿಗಳೂ ಅಲ್ಲ. ಅವರು ಮನವನ್ನು ಹಸನುಗೊಳಿಸಲು ‘ಚಿದ್’ ವಿಭೂತಿಯನ್ನು ತಂದವರು. ಅಂದರೆ ಜನ ಕಂಟಕವಾದ ಮನೋ ಸಂರಚನೆಗಳನ್ನು ‘ಭಸ್ಮ’ ಮಾಡಿದ ಶಿವಯೋಗದ ಉಪಾಯವನ್ನು ಕೊಟ್ಟಂಥವರು. ಮನಸ್ಸಿನ ಎಲ್ಲಾ ಪೂರ್ವ ಗುಣಗಳೂ ಕಳೆದು ಹೋದಾಗ ಉಂಟಾಗುವ ಸಹಜ ಮನಸ್ಸು ಅವರಿಗೆ ಆದಿಯಾಧಾರದ ಸ್ವಸ್ಥಾನವಾಗಿದೆ.
ಹಾಗಾದರೆ ನೈಜ ಮನಸ್ಸು ಅಂದರೆ ಯಾವುದು? ಮತ್ತು ಯಾವುದಲ್ಲ ಎಂಬ ಜಿಜ್ಞಾಸೆ ಮನೋ ವೈಜ್ಞಾನಿಕ ಅಂಶಗಳನ್ನು ಅತ್ಯಂತ ಸ್ಪಷ್ಟವಾಗಿ ವಿಶದೀಕರಿಸುತ್ತದೆ. ಶರಣರನ್ನು ‘ಅಮನಸ್ಕ’ ಯೋಗಿಗಳೆಂತಲೂ ಕರೆಯುತ್ತೇವೆ. ವಚನಗಳಲ್ಲಿ ಅಮನಸ್ಕ, ಸಹಜಾ ಮನಸ್ಕ ಎಂಬ ಶಬ್ದಗಳೂ ಬೇಕಾದಷ್ಟು ಹರಿದಾಡಿವೆ.
ನಾವಿಂದು ಮನಸ್ಸೆಂಬ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಗಮ್ ಪಟ್ಟಿಯ ಮೇಲೆ ಬಿಡಿಸಿಕೊಳ್ಳಲಾಗದಂತೆ ಅಂಟಿಕೊಂಡ ಹೆಗ್ಗಣದಂತೆ ನಾವು ಮನಸ್ಸಿನಾಟದೊಳಗೆ ತಗುಲಿಕೊಂಡಿರುತ್ತೇವೆ. ಬೃಹತ್ ಗಾತ್ರದ ದಾಸ್ತಾನನ್ನು ನಾವೇ ತಲೆದಂಡವಾಗಿಸಿಕೊಂಡು ಸದಾ ಹೊತ್ತುಕೊಂಡೇ ತಿರುಗುತ್ತಿರುತ್ತೇವೆ. ಅಲ್ಲಿ ನಮ್ಮನ್ನು ದಡ ಮುಟ್ಟಿಸದಾ ವಿಚಾರಗಳಿವೆ. ಪೂರ್ಣವಾಗದಾ ಸುಖಗಳು ಮತ್ತೆಮತ್ತೆ ಸುಳಿದಾಡುತ್ತಾ ಬಲಾತ್ಕರಿಸುತ್ತಿರುತ್ತವೆ. ಇವುಗಳು ಅನೇಕ ಭಯಗಳನ್ನು ಹುಟ್ಟಿಸಿ ನಮ್ಮ ಸಾವಯವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತಿರುತ್ತವೆ. ಭಯಗಳಿಂದಾಗಿ ಆವೇದನೆಗಳು ಉತ್ಪತ್ತಿಯಾಗುತ್ತವೆ. ಇವೆಲ್ಲಾ ಪ್ರವಾಹವನ್ನು ನಾವು ನಿಯಂತ್ರಿಸಲಾಗದೇ ಅಸಹಾಯಕರಾಗಿ ಚಿತ್ರವಿಚಿತ್ರ ಕಲ್ಪನೆಗಳಿಗೆ ಮೊರೆ ಹೋಗುತ್ತಿರುತ್ತೇವೆ. ಸಂತಸವನ್ನು ಹಿಡಿದಿಡಲಾಗದೇ ಮತ್ತದೇ ಅದೇ ಸಂತಸಕ್ಕಾಗಿ ಹಾತೊರೆಯುತ್ತಿರುತ್ತೇವೆ. ನೆನಪುಗಳು ಸಂತಸಗಳನ್ನು ನಿಜವೆಂದು ನಂಬಿಸುತ್ತವೆ. ಇದರಿಂದಾಗಿ ನಮ್ಮದೇ ಆದ ನಂಬಿಕೆಗಳಿಗೆ ನಾವು ಜೋತು ಬೀಳುವಂತಾಗುತ್ತದೆ. ನಂಬಿಕೆಗಳು ಮತ್ತು ಅಂಧಶ್ರದ್ಧೆ ಅಸಂಖ್ಯಾತ ಒಳಸಂಚುಗಳನ್ನೂ, ಸಂಶಯಗಳನ್ನೂ, ಗೊಂದಲಗಳನ್ನೂ ನಿರ್ಮಿಸುತ್ತಾ ಹೋಗುತ್ತವೆ.
ಬಹಿರಂಗ ಜಗತ್ತನ್ನು ನೋಡಿ ಅಂತರಂಗದೊಳಗೆ ಮಾತನಾಡಿಕೊಳ್ಳುವ ನಮ್ಮ ಮಾತು ಮತ್ತು ನಮ್ಮಿಷ್ಟಕ್ಕೆ ಸ್ಪಂದಿಸುವ ಬಿಹೇವಿಯರ್ ನ ಕ್ರೀಡಾಂಗಣದಂತಿದೆ ನಮ್ಮ ಮನಸ್ಸು. ಅದರೊಳಗೆ ಎಲ್ಲವೂ ಒಳ್ಳೆಯದೇ ಇರುವುದಿಲ್ಲ. ಹಾಗಂತ ಎಲ್ಲವೂ ಕೆಟ್ಟದ್ದೇ ಇರುವುದಿಲ್ಲ. ಅಸ್ತಿತ್ವಕ್ಕಾಗಿ ಮಾಡುವ ಹೋರಾಟವನ್ನು ಅಸ್ತಿತ್ವದ ಅಹಂಕಾರದ ಭ್ರಮೆಯನ್ನಾಗಿ ಜಗತ್ತನ್ನು ಓದಿಕೊಂಡ ಮನಸ್ಸು ನಮ್ಮದು. ಹೊರಜಗತ್ತಿನಲ್ಲಿರುವ ಕೆಟ್ಟದ್ದನ್ನು ಮತ್ತು ಒಳ್ಳೆಯದನ್ನೆಲ್ಲವನ್ನೂ ಸಾಕಿಕೊಂಡು ಅವೆಲ್ಲವುಗಳ ಪರಿಣಾಮಗಳಿಗೆ ಜೀವವನ್ನು ಗುರಿಯಾಗುವಂತೆ ಮಾಡುತ್ತಿರುತ್ತದೆ.
ನಾವು ಇಷ್ಟಪಡುವ ವ್ಯಕ್ತಿಗಳು, ವಸ್ತುಗಳು ಮತ್ತು ನಮಗೆ ಹಿತಾನುಭವವನ್ನು ನೀಡುವ ವಿಚಾರಗಳ ಬಗ್ಗೆ ನಮಗೆ ಪ್ರತ್ಯೇಕವಾದ ಆಕರ್ಷಣೆ ಇರುತ್ತದೆ. ನಮಗೆ ಇಷ್ಟವಾಗದ ವ್ಯಕ್ತಿಗಳು, ವಸ್ತುಗಳು ಮತ್ತು ವಿಚಾರಗಳ ಬಗ್ಗೆ ನಮ್ಮ ಗ್ರಹಣ ಕೋಶವು ಅಸಹನೆಗಳನ್ನು ವ್ಯಕ್ತಪಡಿಸುತ್ತಿರುತ್ತದೆ. ಅಸಹನೆಗಳು ನಮ್ಮಲ್ಲಿ ಬೇರೆ ಬೇರೆಯಾಗಿರುತ್ತವೆ. ಜಾತಿ ಅಸಹನೆ, ಧರ್ಮದ ಅಸಹನೆ, ಲಿಂಗಸಂಬಂಧಿ ಅಸಹನೆ, ವಯೋ ಸಂಬಂಧಿ ಅಸಹನೆ, ವರ್ಣ ಸಂಬಂಧಿ ಅಸಹನೆ, ಭಾಷಾ ಸಂಬಂಧಿ ಅಸಹನೆ. ನಮ್ಮೊಳಗಿನ ಆಲೋಚನಾ ವಿಧಾನಗಳು ಹೊಂದಿಕೆಯಾಗದಾ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಾ ಹೋಗುತ್ತವೆ. ಇವುಗಳಲ್ಲಿ ಸತ್ಯ ಯಾವುದು, ಸುಳ್ಳಾವುದು ಎನ್ನುವಷ್ಟರ ಮಟ್ಟಿಗೆ ಮಾನಸಿಕ ಸ್ವಾಸ್ಥ್ಯ ಹಾಳಾಗಿ ಹೋಗಿರುತ್ತದೆ. ಆದ್ದರಿಂದ ಸಾಮರಸ್ಯದ ಪರಿಕಲ್ಪನೆಯೊಂದು ನಮ್ಮೊಳಗೇ ಇರುತ್ತದೆಂಬ ಪ್ರಜ್ಞೆ ಪೂರ್ತಿಯಾಗಿ ಆವಿಯಾಗಿ ಹೋಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಮನುಷ್ಯನಿಗೆ ಸಹಾಯ ಮಾಡಲು ಈ ಲೋಕದಲ್ಲಿ ಯಾರೂ ಇರಲಾರರು. ಆಗ ಅವನು ಬೆಂದುಹೋದ ಕಾಳಿನಂತೆ. ತನ್ನ ಕೌಶಲ್ಯ, ಸಾಮರ್ಥ್ಯ, ಆಸಕ್ತಿ ಮತ್ತು ದಿಟ್ಟತನಗಳನ್ನು ಪೂರ್ತಿ ಕಳೆದುಕೊಂಡು ಜೀವಂತ ಶವದಂತಾಗಿರುತ್ತಾನೆ. ಇಂದಿನ ಜನಾಂಗ ಅದರಲ್ಲೂ ಯುವಜನರು ಸುಲಭವಾಗಿ ಬಲಿಬೀಳುತ್ತಿರುವ ಮನೋಖಿನ್ನತೆಗೆ ಮತ್ತು ಎಲ್ಲದಕ್ಕೂ ಆತ್ಮಹತ್ಯೆಯೇ ಪರಿಹಾರ ಎನ್ನುವಂಥ ನಿರ್ಧಾರಗಳು ಬಲಿಯಲಿಕ್ಕೆ ಈ ಅಸಹಾಯ ಪರಿಸ್ಥಿತಿಯೇ ಕಾರಣವಾಗಿದೆ.
ಅತಿಯಾದ ಮಾನಸಿಕ ಒತ್ತಡಗಳಿಂದಾದ ಬದುಕು ಆಧುನಿಕ ಯುಗದ ಮನುಷ್ಯನ ಸರಾಸರಿ ಆಯುಷ್ಯವನ್ನೂ ಮತ್ತು ಸಾಮಾನ್ಯ ಆರೋಗ್ಯ ಶಕ್ತಿಯನ್ನೂ ಕಂಗೆಡಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ನಮ್ಮನ್ನು ಎಚ್ಚರಿಸುತ್ತಲೇ ಇದೆ. ಮನುಷ್ಯ ಕುಲ ಬಲಿಯಾಗುತ್ತಿರುವ ಅನಾರೋಗ್ಯದ ಕಾಯಿಲೆಗಳಿಗೆ ಆಧುನಿಕ ಆರೋಗ್ಯ ಶಾಸ್ತ್ರವು ‘ಮಾನಸಿಕ ಸ್ಥಿತಿಯೇ ಕಾರಣ’ ಎನ್ನುತ್ತದೆ. ಹೋಮಿಯೋಪಥಿಕ್ ವೈದ್ಯ ವಿಜ್ಞಾನವು ಮನೋ ವಿಜ್ಞಾನದ ಆಸರೆಯಲ್ಲಿ ರೋಗ ಕಾರಣಗಳನ್ನು ಗುರುತಿಸಿದೆ. ಆಧುನಿಕ ಸಮಾಜವು ಈಡಾಗುತ್ತಿರುವ ಬಹುತೇಕ ಶಾರೀರಿಕ ಕಾಯಿಲೆಗಳಿಗೆ ಸಮಾಜದೊಳಗೆ ತಾನು ಅನುಭವಿಸುತ್ತಿರುವ ನರಳಾಟಿಕೆಗಳು, ಸಂಕಟಗಳು ಮತ್ತು ಉನ್ಮಾದಗಳ ಮನೋಸ್ಥಿತಿ ಕಾರಣವೆಂದು ಅದು ಪಟ್ಟಿ ಮಾಡಿದೆ. ಅವು ಯಾವುವೆಂದರೆ-
• ಅವಕಾಶದ ಸಂಕಟ ಅಥವಾ ಭರವಸೆಯ ತೊಂದರೆ (Hope Crisis)
• ಗುರುತಿನ ತೊಂದರೆ (Identity Crisis)
• ಸಂಬಂಧದ ತೊಂದರೆ (Relationship Crisis)
• ನೈತಿಕತೆಯ ತೊಂದರೆ (Morality Crisis)
ಅವಕಾಶದ ಸಂಕಟ ಅಥವಾ ಭರವಸೆಯ ತೊಂದರೆ (Hope Crisis):
ಈ ತೊಂದರೆಯು ಹಣ ಮತ್ತು ಅಧಿಕಾರಕ್ಕೆ ಸಂಬಂಧಿಸಿದ್ದಾಗಿದೆ. ಈ ತೊಂದರೆಯಿಂದಾದ ಗೊಂದಲ (confuse) ನಮ್ಮಲ್ಲಿ ಬಹಳಷ್ಟು ಕ್ಲಿಷ್ಟಕರವಾದ ಸಮಾಜ ಮತ್ತು ರಿಪೇರಿ ಮಾಡಲಾಗದ ವ್ಯಕ್ತಿಗಳನ್ನು ರೂಪಿಸಿದೆ. ವ್ಯಕ್ತಿಗತವಾಗಿ ತನಗಿರುವ ಸಾಮರ್ಥ್ಯ ಮತ್ತು ಅದನ್ನು ಅವಕಾಶಗಳ ಈ ಪ್ರಪಂಚದಲ್ಲಿ ಬಳಸಿಕೊಂಡು ಸಫಲವಾಗುವ ಕೌಶಲ್ಯವನ್ನು ಪಡೆಯುವಲ್ಲಿ ತಪ್ಪು ಮಾಡುವುದು. ಅಂದರೆ ತನಗಿರುವ ಸಾಮರ್ಥ್ಯದ ಮಿತಿಯನ್ನು ತಾನು ಸರಿಯಾಗಿ ಗ್ರಹಿಸಿಕೊಳ್ಳಲಾಗದೇ ಅದಕ್ಕಿಂತಲೂ ಮೀರಿದ ಅವಕಾಶಗಳನ್ನು ಪಡೆಯಲು ಪ್ರಯತ್ನಿಸಿ ಸೋತು ಹೋಗುವುದು ಈ ತೊಂದರೆಯ ಮುಖ್ಯ ಲಕ್ಷಣ. ಇಲ್ಲಿ ಜಾರಿದರೆ ಸಮಾಜಕ್ಕೂ ತನಗೂ ಉಪಯೋಗವಿಲ್ಲದಂತಹ ವ್ಯಕ್ತಿಯಾಗಿ ರೂಪುಗೊಳ್ಳಬಹುದು. ಬದುಕು ಅಸಹ್ಯವೆನಿಸಲೂಬಹುದು. (ಅವಕಾಶಗಳು ಮತ್ತು ವ್ಯಕ್ತಿಗಳಲ್ಲಿ ಶ್ರೇಷ್ಠವೂ ಕನಿಷ್ಠವೂ ಇಲ್ಲ.)
ಗುರುತಿನ ತೊಂದರೆ (Identity Crisis):
ಈ ಮೇಲ್ಕಂಡ ಅವಕಾಶದಲ್ಲಿ ಸಫಲನಾದ ನಂತರ ಆ ವ್ಯಕ್ತಿಯು ಈ ಸಮಾಜದಲ್ಲಿನ ಪ್ರತಿಯೊಬ್ಬರೂ ತನ್ನನ್ನು ವಿಶೇಷವಾಗಿ ಗುರುತಿಸಬೇಕೆಂದೂ, ಗೌರವಿಸಬೇಕೆಂದೂ ಭ್ರಮಿಸುತ್ತಿರುತ್ತಾನೆ. ಹೀಗಾಗದಿದ್ದ ಪಕ್ಷದಲ್ಲಿ ಎಲ್ಲರನ್ನೂ ಬೇರೆಬೇರೆ ರೀತಿಯಲ್ಲಿ ಹಿಂಸಿಸಲು ಪ್ರಾರಂಭಿಸುತ್ತಾನೆ. (ನಿಸರ್ಗದಲ್ಲಿ ನಾಯಕ- ಗುಲಾಮ ತಾರತಮ್ಯಗಳಿಲ್ಲ).
ಸಂಬಂಧದ ತೊಂದರೆ (Relationship Crisis):
ಅವಕಾಶ ಮತ್ತು ಗುರುತು ಸಫಲವಾದಾಗ ಅವನು ಅವನದೇ ಆದ ಯಶಸ್ವಿ ವ್ಯಕ್ತಿಗಳ ಜೊತೆ ಗುರುತಿಸಿಕೊಳ್ಳುತ್ತಾನೆ. ಆ ವ್ಯಕ್ತಿಗಳೊಂದಿಗೆ ಮತ್ತು ಸಮಾಜದೊಂದಿಗೆ ಅನ್ಯೋನ್ಯ ಸಂಬಂಧಗಳನ್ನು ಸೃಷ್ಟಿಸಿಕೊಳ್ಳಲು ಉದಾರ ನೀತಿ ತಾಳುತ್ತಾನೆ. ಅದು ಫಲ ಕಾಣದೆ ಅಲ್ಲಿಂದಲೂ ಪರಿತ್ಯಕ್ತನಾಗುತ್ತಾನೆ. ಇತರ ಸಮಾಜ ಅಯೋಗ್ಯವೆಂದು ಅದನ್ನು ಉಪೇಕ್ಷಿಸಿದ್ದರಿಂದ ಅಲ್ಲಿಂದಲೂ ಮಾನವ ಸಂಬಂಧಗಳಿಂದ ವಂಚಿತನಾಗುತ್ತಾನೆ. (ಎಲ್ಲ ಮಾನವರ ಮಧ್ಯೆ ನೈಸರ್ಗಿಕವಾದ ಒಂದು ಅನ್ಯೋನ್ಯ ಸಂಬಂಧವಿದೆ.)
ನೈತಿಕತೆಯ ತೊಂದರೆ (Morality Crisis):
ತನ್ನ ಆಡಳಿತಕ್ಕೆ ಒಳಪಡುವವರನ್ನೆಲ್ಲಾ ನೈತಿಕವಾಗಿರಬೇಕೆಂದು ನಿರೀಕ್ಷಿಸುತ್ತಾನೆಯೇ ಹೊರತು ತನ್ನ ನೈತಿಕತೆಯು ತನ್ನ ಜವಾಬ್ದಾರಿ ಎಂದುಕೊಳ್ಳುವುದಿಲ್ಲ. ತಾನು ನೈತಿಕವಾಗಿದ್ದು ಹೊರಗಿನ ಅನೈತಿಕತೆ ಅಧೀರಗೊಳಿಸುತ್ತದೆ ಇಲ್ಲವೇ ತಾನು ಅನೈತಿಕವಾಗಿದ್ದು ಮಾನಸಿಕವಾಗಿ ನಿರಾಳತೆ ಇಲ್ಲದಿದ್ದಾಗ ಎದುರಿನ ನೈತಿಕತೆಯ ನಿರಾಳತೆಯನ್ನು ಕಂಡು ಕಂಗಾಲಾಗುತ್ತಾನೆ.
ವ್ಯಕ್ತಿಯು ಶಾರೀರಿಕವಾಗಿಯೂ, ಮಾನಸಿಕವಾಗಿಯೂ ಆರೋಗ್ಯದಿಂದಿರಬೇಕೆಂದರೆ…. ಮೇಲೆ ವಿವರಿಸಿದ ನಾಲ್ಕೂ ವಿಭಾಗಗಳಲ್ಲಿಯೂ ಸಮಾನಾಂತರ ಅನುಪಾತದಲ್ಲಿ ವ್ಯಕ್ತಿಯು ಸಫಲತೆ ಹೊಂದಿರಬೇಕಾಗುತ್ತದೆ. ಆದರೆ ಇದು ಅಸಂಭವ. ಏಕೆಂದರೆ ಇವೆಲ್ಲವು ಕೇವಲ ಮನುಷ್ಯ ಭ್ರಮೆಗಳು. ಜೀವ- ದೇಹ ಸಂಯುಕ್ತವಾಗಿರುವ ಈ ಜನ್ಮದ ಅಸ್ತಿತ್ವಕ್ಕೆ ಈ ಎಲ್ಲಾ ಪರಿಕಲ್ಪನೆಗಳು ಸಂಬಂಧ ಪಟ್ಟಿರುವುದಿಲ್ಲ. ಆದರೆ ಈ ನಾಲ್ಕು ವಿಭಾಗಗಳು ಒಂದಕ್ಕೊಂದು ಅಸಮರ್ಪಕವಾದಾಗ ಮನುಷ್ಯನು ಅನಾರೋಗ್ಯಕ್ಕೀಡಾಗುವ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಾನೆ. ಇಂದಿನ ಜಾಗತಿಕ ಪ್ರಪಂಚದಲ್ಲಿ ತಾಂಡವವಾಡುತ್ತಿರುವ ಕ್ರಾನಿಕ್ ಡಿಸೀಜ್ ಗಳು (ದೀರ್ಘಕಾಲದ ಕಾಯಿಲೆಗಳು) ಮಿತಿಮೀರಿ ಬೆಳೆಯುತ್ತಿರಲು ಕಾರಣವೇನೆಂದರೆ… ಮನುಷ್ಯನು ತನ್ನ ಜೀವದ ಅಸ್ತಿತ್ವದ ಮಿತಿಗಳನ್ನು ಪಕ್ಕಕ್ಕಿಟ್ಟು ಅಸ್ತಿತ್ವದ ಅಹಂಕಾರಿಕೆಯ ಭ್ರಮೆಗಳಲ್ಲಿ ಮುಳುಗಿ ಹೋಗಿರುವುದೇ ಆಗಿದೆ. ಸಾಮಾನ್ಯವಾಗಿ ಅಸ್ತಿತ್ವದ ಅಹಂಕಾರಿಕೆಯ ಮನೋಕ್ಲೇಶಗಳು (ಮನೋ ಸಂಕಟಗಳು) ಹಾರ್ಮೋನುಗಳ ಬಿಡುಗಡೆಯಲ್ಲಿ ವ್ಯತ್ಯಯವನ್ನುಂಟು ಮಾಡುವುದರಿಂದ ಒಳಗಿನ ಜೈವಿಕ ಕ್ರಿಯೆಗಳಲ್ಲಿ ಏರುಪೇರನ್ನುಂಟುಮಾಡುತ್ತವೆ. ಈ ವ್ಯತ್ಯಾಸ ಕ್ರಾನಿಕ್ ಕಾಯಿಲೆಗಳಿಗೆ ದಾರಿಯಾಗುತ್ತದೆ. ಕ್ರಾನಿಕ್ ಕಾಯಿಲೆಗಳಿಗೆ ಶಾಶ್ವತ ಪರಿಹಾರವಿಲ್ಲ. ಏಕೆಂದರೆ ಈ ಕಾಯಿಲೆಗಳಿಗೆ ಸರಿಯಾದ ಕಾರಣ ಇಲ್ಲ. ಸದ್ಯಕ್ಕೆ ಪ್ರಕಟವಾಗುವ ಕಾರಣವೇನೆಂದರೆ ಹಾರ್ಮೋನ್ ವ್ಯತ್ಯಯ. ಹಾರ್ಮೋನ್ ವ್ಯತ್ಯಯವನ್ನು ತಾತ್ಕಾಲಿಕವಾಗಿ ತಡೆಯಲು ರೋಗ ಸಾಂತ್ವನ ಔಷಧಿಗಳನ್ನು ನೀಡಲಾಗುತ್ತದೆ, ಅಷ್ಟೆ. ಗ್ಯಾಸ್ಟ್ರಿಸೈಡ್, ಹಸಿವೆ ಆಗದಿರುವಿಕೆ, ಊಟ ರುಚಿಸದೇ ಇರುವಿಕೆ, ದಾಹ ಗುರ್ತಿಸದೇ ಇರುವುದು, ಮೈಗ್ರೇನ್ ತಲೆನೋವು, ನರಸಂಬಂಧಿ ಕಾಯಿಲೆಗಳು, ಸೋರಿಯಾಸಿಸ್, ಆರ್ಥರೈಟಿಸ್, ರುಮುಟಾಯಿಡ್ ಆರ್ಥರೈಟಿಸ್ (ಸಂಧಿವಾತ), ರಕ್ತದ ಏರೊತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳಿಗೆ ಮಾನಸಿಕ ಕ್ಲೇಶಗಳು ಬಹುತೇಕ ಕಾರಣವೆಂದು ಮನೋವಿಜ್ಞಾನವು ಹೇಳುತ್ತದೆ.
ಇಡೀ ಮಾನವ ಲೋಕವು ಇವೆಲ್ಲಾ ಭೀಕರ ಪರಿಣಾಮಗಳಿಗೆ ಬಲಿಯಾಗಿರುವ ಆ ಮನಸ್ಸೆಂಬುದು ಇದೆಯೇ? ಎಂದು ಕೇಳಿದರೆ ಅದಕ್ಕೂ ಮನೋ ವಿಜ್ಞಾನವು ಸ್ಪಷ್ಟ ಉತ್ತರ ಕೊಟ್ಟಿದೆ. ಡೇನಿಯಲ್ ಡೆನೆಟ್ ಎಂಬ ಮನೋ ವಿಜ್ಞಾನಿ, “ಮನಸ್ಸೆಂಬ ನಿರೂಪಣಾ ಕೇಂದ್ರದಂತಹ ಯಾವುದೇ ಪ್ರತ್ಯೇಕ ವಸ್ತುವಿಲ್ಲ. ಅದರ ಬದಲಾಗಿ ಕೇವಲ ಸಂವೇದನೆಗಳ ಒಳ ಹರಿವು (ಅಂತರಂಗ) ಹೊರ ಉತ್ಪನ್ನಗಳ ಸಂಗ್ರಹವಾಗಿದೆ”- ಎನ್ನುತ್ತಾರೆ.
ಹೊರ ಸಮಾಜದ ಜನಾಂಗೀಯ ಲೋಕದೊಳಗಿರುವ ಮನೋ ಉತ್ಪನ್ನಗಳ ಅರಿವುಗಳಿಗೆ ನಮ್ಮ ಒಳಗಿನ ಸಂವೇದನೆಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸುವುದರಿಂದ ಹೊರ- ಒಳ ಎರಡು ಪರಿಕಲ್ಪನೆಗಳ ಮಧ್ಯೆ ಒಂದು ಭ್ರಮಾತ್ಮಕ ಸಂಬಂಧದ ಸೇತು ನಿರ್ಮಾಣವಾಗಿರುತ್ತದೆ. ಈ ಸಂಬಂಧಗಳ ಕರ್ತೃ, ಭೋಕ್ತೃಗಳು ನಾವೇ ಆಗಿದ್ದೇವೆ. ದುರಂತವೆಂದರೆ ಇದು ನಮ್ಮ ವಿಧಿಬರಹ. ಈ ವಿಧಿಬರಹವನ್ನು ಯಾವ ದೇವರುಗಳೂ ಬರೆದದ್ದಲ್ಲ. ನಾವೇ ಬರೆದುಕೊಂಡಿರುವಂತಹದ್ದು. ಈ ಭ್ರಮಾತ್ಮಕ ಸಂಬಂಧದ ಸೇತು ನಿರ್ಮಾಣಗಳಿಗೆ ನಾವು ನಮ್ಮನ್ನು ಒಪ್ಪಿಸಿಬಿಡುತ್ತೇವೆ. ಇದನ್ನೇ ನಾವು ಅಂತಿಮ ಸತ್ಯವೆಂದು ನಂಬಿಬಿಟ್ಟಿರುತ್ತೇವೆ. ಆದ್ದರಿಂದ ನಮ್ಮ ಎಲ್ಲಾ ಬಿಹೇವಿಯರ್ ಆಟಿಟ್ಯೂಡನ್ನು ಈ ಭ್ರಮೆಗಳೇ ನಿರ್ಧರಿಸುವಂತಾಗಿದೆ.
ಶರಣರು ‘ಜೀವಗುಣ’ ಮತ್ತು ‘ಕಾಯಗುಣ’ ಎಂಬೆರಡರ ನೆಲೆಯಿಂದ ಮನುಷ್ಯ ಜೀವನದ ಸಂಕಟಗಳನ್ನು ಅನುಸಂಧಾನ ಮಾಡಿರುವುದನ್ನು ನಾವು ಕಾಣಬಹುದು. ‘ಜೀವ ಗುಣ’ಕ್ಕೆ ಶರಣರು ಮೊದಲ ಆದ್ಯತೆ ಕೊಟ್ಟಿದ್ದಾರೆ. ಮುಖ್ಯವಾದ ಜೀವಗುಣಗಳಾವುವೆಂದರೆ- ಗಾಳಿ, ನೀರು, ಆಹಾರ, ನಿಲ್ಲಲು ನೆಲೆ, ಜೀವ ಪೋಷಣೆಗಾಗಿ ಕಾಯಕ, ಕೂಡಿ ಬದುಕಲು ಸಮಾಜ, ಸಮಾಜದಲ್ಲಿ ಜೀವಿಸಲು ನೈತಿಕತೆ. ಆದ್ದರಿಂದಲೇ ಅವರ ತತ್ವ ಜೀವಪರವಾದದ್ದು. ‘ಜೀವ ಗುಣ’ಕ್ಕೆ ಕಾಯಕದ (ಶ್ರಮ) ಅತ್ಯಾಗತ್ಯತೆಯನ್ನು ಅದ್ಭುತವಾಗಿ ಜೋಡಿಸಿರುವಂತದ್ದು ಎಂದೆಂದಿಗೂ ವೈಜ್ಞಾನಿಕವೆನಿಸಿಕೊಳ್ಳುತ್ತದೆ. ಶರಣರಿಗೆ ಕಾಯಕವೇ ನೈಜ ಪರಮಾರ್ಥವಾಗಿದೆ. ಕಾಯಕವು ಕೇವಲ ತನ್ನ ವೈಯಕ್ತಿಕ ಉಳಿವನ್ನು ಆಧರಿಸಿಲ್ಲ. ಅಖಂಡವಾದ ಜೀವ ಪ್ರಕೃತಿಯ ಕ್ರಿಯೆಗಳಿಗೆ ಅದು ಪೂರಕಾಂಶವಾಗಿದೆ. ಕಾಯಕವು ಭ್ರಮೆಗಳಿಂದ ದಾಟಿಸಿ ಮನುಷ್ಯನನ್ನು ನೈಜ ಸ್ಥಿತಿಗೆ ತರುತ್ತದೆ. ಕಾಯಕವೇ ಶರಣರಲ್ಲಿ ಜೀವದ ಇರುವಿಕೆ ಮತ್ತು ನಿಸರ್ಗದ ಆಗುವಿಕೆಯನ್ನು ಪೋಷಿಸುವ ಮಹಾಮಂತ್ರವಾಗಿದೆ.
ಜೀವಗುಣಗಳಿಗೆ ಕಾಯಗುಣಗಳು ವಿರುದ್ಧವಾದವು. ಆದ್ದರಿಂದ ಕಾಯಗುಣಗಳನ್ನು ಭ್ರಮೆಗಳೆಂದು ಶರಣರು ನಿರಾಕರಿಸುತ್ತಾರೆ. ಕಾಯಗುಣಗಳಲ್ಲಿ ಮನಸ್ಸು ಯಜಮಾನನಾಗಿರುತ್ತದೆ. ಮನಸ್ಸಿನ ಆಜ್ಞೆಗಳನ್ನು ಪಾಲಿಸುವ ಸೇವಕನಂತೆ ಕಾಯವು ಇಲ್ಲಿ ಪ್ರವರ್ತಿಸುತ್ತಿರುತ್ತದೆ. ಈ ವಿಧಾನವೇ ಜೀವ ವಿರೋಧಿಯಾದದ್ದು. ಕಾಯಗುಣಗಳನ್ನು ಮಲಮೂತ್ರ, ವಿಷಯ, ಮಿಥ್ಯೆ, ಚಂಚಲೆ, ಮದ, ಅಹಂಕಾರ, ಭ್ರಾಂತಿ, ಅಸಮಾನತೆ, ಆಸೆ, ವ್ಯಸನ, ಕಾಮ, ಬೇಧ, ಅಸ್ಥಿರ, ಅನಿತ್ಯ, ದುಃಖ, ರಂಜನೆ ಇಂತಹ ಪದಗಳಿಂದ ನಿರ್ವಚಿಸಲಾಗಿದೆ. ಏಕೆಂದರೆ ಇವೆಲ್ಲವೂ ಮನಸ್ಸಿನ ಲಕ್ಷಣಗಳಾಗಿವೆ.
ಪಂಚಾಮೃತದಲ್ಲಿ ಉಂಡರೇನು!
ಮಲಮೂತ್ರ ವಿಷಯ ಘನವಕ್ಕು.
ಭ್ರಾಂತು ಬೇಡ ಮರುಳೆ
ಬೇಡದು ಕಾಯಗುಣ.
ಆಸೆಯಾಮಿಷ ತಾಮಸ ಹಸಿವು ತೃಷೆ
ವ್ಯಸನ ವಿಷಯಾದಿಗಳಲ್ಲಿ
ಹಿರಿಯರು, ಗರುವರುಂಟೆ!
ಭ್ರಾಂತು ಬೇಡ ಮರುಳೆ!
ಬೇಡದು ಕಾಯಗುಣ.
ಈ ಭೇದವ ಭೇದಿಸಬಲ್ಲಡೆ
ಕೂಡಲ ಸಂಗನ ಶರಣರ ಸಾಣಿಯಲ್ಲಿ ಸವೆದ
ಶ್ರೀಗಂಧದಂತಿರಬೇಕು ಶರಣ.
ಮಿಥ್ಯವನಳಿದ ಸತ್ಯಪ್ರಸಾದಿ,
ರಂಜನವಿಲ್ಲದ ನಿರಂಜನ ಪ್ರಸಾದಿ,
ದುಃಖವನಳಿದ ಘನಾನಂದ ಪ್ರಸಾದಿ,
ಅನಿತ್ಯವಿಲ್ಲದ ನಿತ್ಯಪ್ರಸಾದಿ,
ಖಂಡಿತವಿಲ್ಲದ ಅಖಂಡಿತಪ್ರಸಾದಿ,
ಕೂಡಲಸಂಗಮದೇವರಲ್ಲಿ ತಾನೆ ಪ್ರಸಾದಿ.
ಎನ್ನ ಮನವೆಂಬ ಮರ್ಕಟನು ತನುವಿಕಾರವೆಂಬ ಅಲ್ಪಸುಖದಾಸೆಗಾಡಿ,
ವೃಥಾ ಭ್ರಮೆಗೊಂಡು, ನಾನಾ ದೆಸೆಗೆ ಲಂಘಿಸಿ
ಅಳಲಿಸಿ ಬಳಲಿಸುತ್ತಿದೆ ನೋಡಾ!
ಕೂಡಲಸಂಗಮದೇವರೆಂಬ ಕಲ್ಪವೃಕ್ಷಕ್ಕೆ ಲಂಘಿಸಿ
ಅಪರಿಮಿತದ ಸುಖವನೈದದು, ನೋಡಾ.
ಭ್ರಾಂತಿಗಳಿಂದ ಕೂಡಿದ ಮನುಷ್ಯ ಬದುಕುವಿಕೆಯ ರಚನಾ ವಿನ್ಯಾಸಗಳೆಲ್ಲವನ್ನೂ (Habit Pattern) ಸಮಾಜವೇ ವ್ಯಕ್ತಿಗೆ ಹಸ್ತಾಂತರಿಸುತ್ತಿರುತ್ತದೆ. ಗ್ರೆಗ್ ಬಾರ್ಡೆನ್ ಎಂಬ ಮನೋವಿಜ್ಞಾನಿ “we are absorbing the patterns from all those people that we are exposed and surrounded with” ಎನ್ನುತ್ತಾನೆ. ಸಮಾಜದ ಜನರಿಗೆ ವ್ಯಕ್ತಿಯೇ ಭ್ರಾಂತಿಗಳನ್ನು ಗತಿ ತಾರ್ಕಿಕ ಭೌತಿಕ ವಿಧಾನದಲ್ಲಿ ಕಲಿಸುತ್ತಿರುತ್ತಾನೆ. ವ್ಯಕ್ತಿಯ ಭ್ರಾಂತಿಗಳಲ್ಲಿ ಮತೀಯತೆಯಿಂದಾದ ಸಂಸ್ಕೃತಿಗಳು ಸತ್ತ ಮೀನನ್ನು ಕೊಳೆಯದಂತೆ ಸಂರಕ್ಷಿಸುವ ಉಪ್ಪಿನಂತೆ ಸಂರಕ್ಷಿಸಲ್ಪಡುತ್ತವೆ. ಆದ್ದರಿಂದಲೇ ನಮ್ಮ ನಾಡಿನ ವಿಚಾರವಂತರು, ಸಮಾಜ ಸುಧಾರಕರು, ಸಂತರು ಮನುಷ್ಯನಲ್ಲಿರುವ ಭ್ರಾಂತುಗಳನ್ನು ಹೋಗಲಾಡಿಸಲು ತುಂಬಾ ಶ್ರಮಿಸಿದ್ದಾರೆ.
ಮನಸ್ಸಿನೊಳಗೆ ಹೂತು ಹೋಗಿರುವ ಮನುಷ್ಯರ ಭ್ರಾಂತಿಗಳ ಸಂಕಟವನ್ನು ಹೋಗಲಾಡಿಸಲಂತೂ ಶರಣರು ಬಹಳ ಪ್ರಯತ್ನಪಟ್ಟಿದ್ದಾರೆ. ಮನೋವಿಜ್ಞಾನವು ಕ್ರಮಿಸಿರುವುದಕ್ಕಿಂತಲೂ ಹೆಚ್ಚು ದೂರವನ್ನು ಕ್ರಮಿಸಿ ಮಾದರಿ ವ್ಯಕ್ತಿಗಳನ್ನು ಸೃಷ್ಟಿಸುವ ಹಂತಕ್ಕೆ ಶರಣರು ಹೋಗಿರುವುದು ಸ್ಪಷ್ಟವಾಗಿದೆ. ಈ ಪ್ರಯತ್ನದ ಭಾಗವಾಗಿ ‘ಲಿಂಗಕ್ರಿಯೆ’ಯ ಪ್ರಸ್ಥಾನ ಅನುಭವ ಮಂಟಪದಲ್ಲಿ ಅಂದಿಗೆ ಬಹಳ ಪ್ರಸಿದ್ಧಿಯಾಗಿದ್ದ ಪ್ರಕ್ರಿಯೆಯಾಗಿದ್ದಿತು. ಲಿಂಗಕ್ರಿಯೆಯು ಭವಿಯನ್ನು ಭಕ್ತನನ್ನಾಗಿಸುವ ಕ್ರಿಯೆ. ಮನಸ್ಸಿನ ಕಾರ್ಗತ್ತಲಿನಲ್ಲಿ ಹೂತು ಹೋಗಿರುವವರನ್ನು ಅಮನಸ್ಕವೆಂಬ ನಿಜ ತಾವಿಗೆ ಸೇರಿಸುವ ಸಂಕೀರ್ಣವಾದ ಪ್ರಕ್ರಿಯೆಯದು. ಈ ಪ್ರಕ್ರಿಯೆ ಮನಸ್ಸಿನ ಮೇಲೆ ನಡೆದ ಅತ್ಯಪರೂಪದ ಪ್ರಯೋಗವೂ ಆಗಿದೆ.
ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ.
ತುಟ್ಟ ತುದಿಯ ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ.
ನಿತ್ಯನೇಮದಿಂದ ತನುವ ಮುಟ್ಟಿಕೊಂಡಡಿಲ್ಲ.
ನಿಚ್ಚಕ್ಕೆ ನಿಚ್ಚ ನೆನೆವ ಮನವ, ಅಂದಂದಿಗೆ;
ಅತ್ತಲಿತ್ತ ಹರಿವ ಮನವ ಚಿತ್ತದಲಿ ನಿಲಿಸಬಲ್ಲಡೆ
ಬಚ್ಚಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು.
ಇಲ್ಲಿ ಭಕ್ತನ ಜವಾಬ್ದಾರಿಗಳು ಮತ್ತು ಭಕ್ತಿಯ ಲಕ್ಷಣಗಳನ್ನು ನೋಡಬಹುದು. ತೀರ್ಥಗಳ ಸುತ್ತುವುದರಿಂದಾಗಲಿ, ಪವಿತ್ರ ನದಿಗಳಲ್ಲಿ ಮೀಯುವುದರಿಂದಾಗಲಿ, ಸಹಸ್ರಾರುವಿನ ಗಿರಿಯ ಮೆಟ್ಟಿದೆನೆಂದು ಕೂಗುವುದಾಗಲಿ, ಅಂಗನ್ಯಾಸ ಕರನ್ಯಾಸದಿಂದ ಶರೀರದ ಅಂಗಗಳನ್ನು ಮುಟ್ಟಿ ಮಂತ್ರ ಪಠಿಸುವುದರಿಂದಾಗಲಿ ‘ಬಚ್ಚಬರಿಯ ಬೆಳಗು’ ಎಂಬ ಅಮನಸ್ಕವು ಸಾಧ್ಯವಾಗುವುದಿಲ್ಲ. ಚಂಚಲ ಸ್ವರೂಪದ ಹುಚ್ಚು ಕುದುರೆಯನ್ನು ಅಂದಂದಿಗೆ ಚಿತ್ತದಲಿ ನಿಲಿಸಬೇಕು. ಹಾಗೆ ಮಾಡಬೇಕೆಂದರೆ ಬದುಕಿನ ಪ್ರತ್ಯಕ್ಷಾನುಭವದ ಭಾವನೆಗಳನ್ನು ಮನಸ್ಸು ಭವಿಸುವಂತಾಗದಂತೆ ನೋಡಿಕೊಳ್ಳಬೇಕು.
ನೆನೆಯಲರಿಯೆ ನಿರ್ಧರಿಸಲರಿಯೆ ಮನವಿಲ್ಲವಾಗಿ.
ಭಾವಿಸಲರಿಯೆ ಬೆರಸಲರಿಯೆ ಭಾವ ನಿರ್ಭಾವವಾಯಿತ್ತಾಗಿ.
ಧ್ಯಾನ ಮೌನವನರಿಯೆ ಧ್ಯಾನಾತೀತ ತಾನೆಯಾಯಿತ್ತಾಗಿ.
ಜ್ಞಾತೃ ಜ್ಞಾನ ಜ್ಞೇಯಂಗಳೆಲ್ಲವ ಮೀರಿ
ಅಭಿನವ ಮಲ್ಲಿಕಾರ್ಜುನನಲ್ಲಿ ಪರಮ ಸುಖಿಯಾಗಿರ್ದೆ. (ಡೋಹರ ಕಕ್ಕಯ್ಯ)
ಮನೋವಿಜ್ಞಾನದಲ್ಲಿ “ಸೈಕೋ ಅನಾಲಿಸಿಸ್” ಸಿದ್ಧಾಂತವು ಮನಸ್ಸಿನ ಪರಿಕಲ್ಪನೆಗೆ ಸಂಬಂಧಿಸಿದ ಕ್ರಿಯಾತ್ಮಕ ಸುಪ್ತಾವಸ್ಥೆಯ ಅಸ್ತಿತ್ವವನ್ನು ಪ್ರತಿಪಾದಿಸುತ್ತದೆ. ಆದಾಗ್ಯೂ ಮನೋವಿಶ್ಲೇಷಣೆಯು ವೈಜ್ಞಾನಿಕ ವಿಧಾನವನ್ನು ಅನುಸರಿಸುವುದಿಲ್ಲ. ಆದ್ದರಿಂದ ಸೈಕೋ ಅನಾಲಿಸಿಸ್ ಸಿದ್ಧಾಂತವು ಮನಸ್ಸಿನ ಅಧ್ಯಯನಕ್ಕೆ ಪರೀಕ್ಷಿಸಲಾಗದಾ ಸಿದ್ಧಾಂತಗಳನ್ನು ಮಾತ್ರ ಕೊಡುಗೆಯಾಗಿ ನೀಡಿದೆ (Non- testable theories).
ಮನಸ್ಸಿನ ಅಧ್ಯಯನಕ್ಕೆ ಪರೀಕ್ಷಿಸಲಾಗುವ ಸಿದ್ಧಾಂತಗಳನ್ನು ಶರಣರು ನೀಡಿದ್ದಾರೆಂಬುದು ಅತ್ಯಾಶ್ಚರ್ಯದ ಸಂಗತಿ. ಅವುಗಳಲ್ಲಿ ಬಹಳ ಪ್ರಮುಖವಾದುದೆಂದರೆ- ಜ್ಞಾನ- ಜ್ಞೇಯ- ಜ್ಞಾತೃ ಸಂಬಂಧದಲ್ಲಿ ಮನಸ್ಸನ್ನು ಸಂಕ್ಷಿಪ್ತವಾಗಿ ವಿವರಿಸಿಕೊಟ್ಟಿರುವುದನ್ನು ನೋಡಬಹುದು. ಅವರ ಪ್ರಕಾರ ಮನಸ್ಸೆಂಬುದು ಅರ್ಥ ಮಾಡಿಕೊಳ್ಳಲಾಗದಾ, ಹಿಡಿದಿಡಲಾಗದಾ, ಅತ್ಯಂತ ವಿಸ್ತಾರವಾದ ಆಕಾಶದಗಲದ ಅಖಂಡವಾದ ಪ್ರವಾಹವೇನಲ್ಲ. ಅದರ ವಿಸ್ತಾರ ಬಹಳ ಸೀಮಿತವಾದದ್ದು. ಅದು ಏನನ್ನೇ ಮಾತನಾಡುತ್ತಿರಲಿ, ಚಿಂತಿಸುತ್ತಿರಲಿ ಅದು ಜ್ಞಾನ- ಜ್ಞೇಯ- ಜ್ಞಾತೃ ಎಂಬ ತ್ರಿಕೋನಾಕಾರವಾದ ಬಿಂದುಗಳಲ್ಲಿ ಒಂದರಿಂದ ಮತ್ತೊಂದಕ್ಕೆ ಹಾರುತ್ತಿರುತ್ತದೆ ಅಷ್ಟೇ. ಅದರಾಚೆಗೆ ಅದಕ್ಕೆ ಏನೂ ತಿಳಿಯದು. ಹಿಂದಿನ ದಿನಗಳಲ್ಲಿ ತಾನು ನೋಡಿ ಕಲಿತು ಅನುಭವಿಸಿರುವ ಸುಖ-ಸಂತೃಪ್ತಿಯ ರುಚಿಯ ಸಂಗ್ರಹವೇ ‘ಜ್ಞಾನ’. ಜ್ಞಾನವು ಅನೇಕ ನಂಬಿಕೆಗಳನ್ನು ಹೆರುತ್ತಿರುತ್ತದೆ. ನೆನಪಿನ ಸಂಗ್ರಹಗಾರದಲ್ಲಿ ಅಡಕವಾಗಿರುವ ಸುಖ ಸಂತೃಪ್ತಿಗಳನ್ನು ಮತ್ತೆ ಮತ್ತೆ ವರ್ತಮಾನಕ್ಕೆ ತಂದು ಪುನರ್ಭವಿಸಲು ಮಾಡುವ ಕಾರ್ಯವು ‘ಜ್ಞೇಯ’ವೆನಿಸಿಕೊಳ್ಳುತ್ತದೆ. ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಅದರದೇ ಫಲವಿರುತ್ತದೆ. ಇದು ನಿಸರ್ಗ ನಿಯಮ. ನಾವು ಮಾಡಿದ ಕಾರ್ಯಗಳಿಂದ ಒಲಿದು ಬರುವ ಫಲ ‘ಜ್ಞಾತೃ’ವೆನಿಸಿಕೊಳ್ಳುತ್ತದೆ. ಇಡೀ ಜಗತ್ತು ಈ ಮೂರರಲ್ಲೇ ಸಿಕ್ಕಿಹಾಕಿಕೊಂಡಿರುವುದನ್ನು ಶರಣರು ‘ಕದಳಿಯ ಬನದ ಹೊಲಬು’ ಎಂದು ಎಚ್ಚರಿಸಿದರು.
ಜ್ಞಾನ- ಜ್ಞೇಯ- ಜ್ಞಾತೃಗಳು ‘ಆಗಮಿ ಸಂಚಿತ ಪ್ರಾರಬ್ಧ’ ಮತ್ತು ‘ಲೌಕಿಕ ಪ್ರಾರಬ್ಧ’ ಎಂಬೆರಡು ವಿಷಯಗಳಿಂದ ತುಂಬಿ ಹೋಗಿರುತ್ತವೆ. ಆಗಮಿ ಸಂಚಿತದಲ್ಲಿ ಮತಗಳು, ದೈವಗಳು, ಜಾತಿಗಳು, ಸಂಸ್ಕೃತಿಗಳು, ಸ್ವಾರ್ಥಗಳು ಇರುತ್ತವೆ. ಲೌಕಿಕ ಪ್ರಾರಬ್ಧದಲ್ಲಿ ಗುಣಕರ್ಮಗಳಿಂದ ರೂಪುಗೊಂಡ ಸ್ವಭಾವಗಳು, ಅಮಲುತೆವಲುಗಳು, ಬೇಕು ಬೇಡಗಳು ತುಂಬಿರುತ್ತವೆ. ಈ ಕೆಲವೇ ಸೀಮಿತ ಕ್ಷೇತ್ರದೊಳಗಷ್ಟೇ ಜ್ಞಾನ- ಜ್ಞೇಯ- ಜ್ಞಾತೃ ರೂಪದಲ್ಲಿ ಮನಸ್ಸು ಕಾರ್ಯಶೀಲವಾಗಿರುತ್ತದೆ.
ಜ್ಞಾನದ ಸಂವೇದನೆಗಳು ಕೇವಲ ಜಡವಲ್ಲ. ಅವು ನಿಷ್ಕ್ರಿಯವಾಗಿಯೂ ಇರಲಾರವು. ನಂಬಿಕೆ ಮತ್ತು ಜ್ಞಾನದ ಸಂಚಯದಿಂದ ಬರುವ ಸಂವೇದನೆಗಳು ಅದಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮಾಡಲೇಬೇಕೆಂದು ಒತ್ತಡ ಹಾಕುತ್ತವೆ. ಈ ಒತ್ತಡಗಳನ್ನು ತಡೆಯಲು ಕಷ್ಟವೇ ಆಗಿರುತ್ತದೆ. ಏಕೆಂದರೆ ನಾವೇ ಮಾಡಿಕೊಂಡಿರುವ ಪೂರ್ವಾಪರ ಆಚಾರದ ಬಲದ ಮುಂದೆ ಮನೋಶಕ್ತಿ ಕೈಕಟ್ಟಿ ನಿಂತು ಗುಲಾಮನಾಗಿ ಬಿಡುತ್ತದೆ. ಮೇಲ್ಕಾಣಿಸಿದ ಜ್ಞಾನ ಮತ್ತು ನಂಬಿಕೆಗಳು ಹೇಗೆ ಕಾರ್ಯಪ್ರವೃತ್ತವಾಗುತ್ತವೆ ಎಂಬುದಕ್ಕೆ ಉದಾಹರಣೆ ಕೊಡುವುದಾದರೆ- ಮತೀಯ ಜ್ಞಾನ ಮತ್ತು ನಂಬಿಕೆಗಳು ಜ್ಞೇಯಕ್ಕಿಳಿದಾಗ ಅಂದರೆ ಕಾರ್ಯಕ್ಕಿಳಿದಾಗ ಅಲ್ಲೊಂದು ಸ್ಥಾವರ ರೂಪದ ದೇವಾಲಯವೋ… ದೇವರ ವಿಗ್ರಹವೋ, ಇಲ್ಲವೇ ಅದರ ಕುರಿತಾದ ಕಾಲ್ಪನಿಕ ಕಥೆಯೋ, ಬರಹವೋ, ಪ್ರಾರ್ಥನಾ ಮಂದಿರವೋ… ದೈವವನ್ನು ಧ್ಯಾನದಲ್ಲಿ ಹುಡುಕುವ ಕ್ರಿಯೆಯೋ ಹುಟ್ಟಿಕೊಳ್ಳುತ್ತದೆ.
ಉಪಮೆ ಉಪಮಿಸಲರಿಯದೆ ಉಪಮಾತೀತವೆನುತ್ತಿದ್ದಿತ್ತು.
ಅರಿವು, ಅರಿವಿನ ಮರೆಯಲ್ಲಿರ್ದುದನರಿಯಲರಿಯದೆ,
ಪರಾಪರವೆಂದು ನುಡಿಯುತ್ತಿದ್ದಿತ್ತು.
ಧ್ಯಾನ ಧ್ಯಾನಿಸಲರಿಯದೆ, ಧ್ಯಾನರೂಪಾತೀತನೆಂದು, ತದ್ಧ್ಯಾನಗೊಂಡಿತ್ತು.
ಜ್ಞಾತೃ ಜ್ಞಾನ ಜ್ಞೇಯಕ್ಕೆ ಇನ್ನಾವ ಜ್ಞಾನವೊ?
ವೇದವಿಜ್ಞಾನವೆಂದುದಾಗಿ,`ತತ್ತ್ವಮಸಿ’ವಾಕ್ಯಂಗಳೆಲ್ಲವೂ
ಹುಸಿಯಾಗಿ ಹೋದವು.
ಸಚ್ಚಿದಾನಂದವೆಂದುದಾಗಿ
ದ್ವೈತಾದ್ವೈತಿಗಳೆಲ್ಲ ಸಂಹಾರವಾಗಿ ಹೋದರು.
ಬಂದೂ ಬಾರದ, ನಿಂದ ನಿರಾಳ ಗುಹೇಶ್ವರ.
ಅದೇ ರೀತಿ ಜಾತಿಯ ಜ್ಞಾನವು ಕಾರ್ಯ ಪ್ರವೃತ್ತಿಗೊಳಗಾದಾಗ ಒಕ್ಕಲಿಗರ ಬೀದಿ, ಬ್ರಾಹ್ಮಣರ ಬೀದಿ, ಲಿಂಗಾಯತರ ಬೀದಿಗಳು ಸೃಷ್ಟಿಯಾಗಿ ಅಲ್ಲಿನ ಜನರು ಅನ್ಯ ಜಾತಿಯವರೊಂದಿಗೆ ಅಸಹನೆಗಳನ್ನು ತಾಳುವಂತೆ ಮಾಡುತ್ತದೆ.
ಗುಣಕರ್ಮಗಳಿಂದಾದ ಸ್ವಭಾವಗಳು ಮತ್ತು ಅಮಲು ತೆವಲುಗಳ ಒತ್ತಡವಂತೂ ಹೇಳತೀರದು. ಹಿಂದೆ ಅನುಭವಿಸಿದ ಸುಖ ಸಂತೃಪ್ತಿಗಳು ಮನದಲ್ಲಿ ಧೂಳೆಬ್ಬಿಸುವಂತೆ ಕುಣಿದಾಡುತ್ತವೆ. ಇಲ್ಲಿ ಯಾರೂ ತಪ್ಪಿಸಿಕೊಳ್ಳಲಾರರು. ತಾನು ಹಿಂದೆ ಮಾಡಿದ್ದನ್ನೇ ಈ ಕ್ಷಣ ಮಾಡಲೇಬೇಕಾದ ಅಸಹಾಯಕತೆಗೆ ಅವು ನಮ್ಮನ್ನು ತಳ್ಳಿ ಬಿಡುತ್ತವೆ. ಈ ವ್ಯಥೆಯು ಮುಕ್ತವಾದ ಆ ಕ್ಷಣದ ಮಹತ್ವವನ್ನು ನಮ್ಮ ಕೈಯಿಂದ ಕಿತ್ತುಕೊಂಡು ಬಿಟ್ಟಿರುತ್ತದೆ.
ವಿಚಿತ್ರ ಸತ್ಯವೇನೆಂದರೆ ಈ ಮೇಲ್ಕಂಡ ಜ್ಞಾನ- ಜ್ಞೇಯ (ಕಾರಣ- ಕಾರ್ಯ)ಗಳು ಅವು ತಾವು ಮಾಡಿಕೊಂಡಷ್ಟು ಫಲವನ್ನು ನಮಗೆ ಉಣ್ಣುವಂತೆ (ಜ್ಞಾತೃ) ಮಾಡುತ್ತವೆ. ಮತಗಳು ಸ್ವ-ಪರವೆಂಬ ಭೇದಗಳಲ್ಲೂ, ದೈವಗಳು ಇದೆ- ಇಲ್ಲ ಎಂಬ ಸಂಶಯಗಳಲ್ಲೂ, ಜಾತಿಗಳು ಸಹ್ಯ- ಅಸಹ್ಯವೆಂಬ ಭಾವನೆಗಳಲ್ಲೂ, ಅಮಲುಗಳು ಬೇಕು- ಬೇಡವೆಂಬ ಅಸಂತೃಪ್ತಿಗಳ ಒತ್ತಡದ ಫಲಗಳಲ್ಲೂ ಪರ್ಯಾವಸಾನವಾಗುತ್ತವೆ. ಇದು ಶರಣರು ವಿಶದೀಕರಿಸಿದ ಮಾನವ ಮನಸ್ಸಿನ ತತ್ವ!!!
ಜ್ಞಾತೃವೆ ಅರಸುವುದು ಜ್ಞಾನವೆ ಅರಿವುದು.
ಜ್ಞೇಯವೆ ನಿಶ್ಚಯಿಸುವುದು.
ಈ ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿವಿಧಸಾಧನದಿಂದ
ಲಿಂಗವನರಸಿ ಲಿಂಗವನರಿದು ಲಿಂಗವ ಬೆರಸಿ ಲಿಂಗವಾದ ಮತ್ತೆ,
ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿವಿಧಭ್ರಾಂತಿಸೂತಕ ಹೋಯಿತ್ತು
ನಿಜವಾಯಿತ್ತು ಕಾಣಾ ಗುಹೇಶ್ವರಾ. (ಅಲ್ಲಮಪ್ರಭು)
ಜ್ಞಾತೃ ಸ್ವರೂಪದಿಂದರುಹಿಸುವ ಬುದ್ಧಿ,
ಜ್ಞಾನಸ್ವರೂಪದಿಂದರಿವ ಚಕ್ಷುರಾದಿಂದ್ರಿಯ,
[ಜ್ಞೇಯ] ಸ್ವರೂಪದಿಂದರುಹಿಸಿಕೊಂಬ
ವಿಷಯಂಗಳಿಗೊಳಗಹುದೆ ಆ ಪರಬ್ರಹ್ಮವು.
ಇಂತೀ ತ್ರಿಪುಟಿರಹಿತವಾದದರಿವನರಿತಲ್ಲದೆ
ಸೌರಾಷ್ಟ್ರ ಸೋಮೇಶ್ವರಲಿಂಗವನರಿಯಬಾರದು. (ಆದಯ್ಯ)
ಜ್ಞಾನವೆಂಬ ಕಾರಣದಿಂದಾದ ‘ಜ್ಞೇಯ’ವೆಂಬ ಕಾರ್ಯವನ್ನೂ, ‘ಜ್ಞಾತೃ’ವೆಂಬ ಪರಿಣಾಮವನ್ನೂ ಉಂಟು ಮಾಡುತ್ತಿರುವ ಈ ಮನಸ್ಸನ್ನು ಆಧುನಿಕ ವಿಜ್ಞಾನವು ‘perception level mind’ ಎಂದು ಗುರುತಿಸುತ್ತದೆ. ಸಾಮಾನ್ಯವಾಗಿ ಜಗತ್ತಿನ ಎಲ್ಲಾ ಜನರು ಈ ಮನಸ್ಸಿನಿಂದಲೇ ಮಾತು, ವರ್ತನೆ, ವಿಚಾರ, ಆಚಾರವೆಲ್ಲವುಗಳ ಕ್ರಿಯೆ- ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಾರೆ. ಮನೋವಿಜ್ಞಾನವು ಹೇಳುವಂತೆ ಮನಸ್ಸೆಂಬುದು ಮೆದುಳಿನ ಕಾರ್ಯದ ಶೇ.5 ಕ್ಕೆ ಮಾತ್ರ ಸೀಮಿತಗೊಂಡಿರುತ್ತದೆ. ಉಳಿದ ಮೆದುಳಿನ ಸುಪ್ತ ಕಾರ್ಯ ಪ್ರವೃತ್ತಿಗಳು ಶೇ.95 ಭಾಗ ನಮಗೆ ಅಜ್ಞಾತವಾಗಿಯೇ ಇವೆ.
ಮನೋವಿಜ್ಞಾನದ ಪ್ರಕಾರ perception level ನ ಮನಸ್ಸಿಗೆ ಯಾವುದೇ ಸ್ವಂತ ಅಸ್ತಿತ್ವವಿಲ್ಲ. ಅಲ್ಲಮರ “ಮನವುಂಟೇ ಮರುಳೆ ಶಿವಯೋಗಿಗೆ?” “ಬೇರೆ ಮನವುಂಟೆಂಬ ಭ್ರಮಿತರ ಮಾತ ಕೇಳಲಾಗದು” ಎಂಬ ವಚನಗಳನ್ನಿಲ್ಲಿ ನೆನಪಿಸಿಕೊಳ್ಳಬಹುದು. ಎಲ್ಲಿಯ ತನಕ ಮನುಷ್ಯನಲ್ಲಿ ಅಸ್ತಿತ್ವ ಅಹಂಕಾರದ ಐಡೆಂಟಿಟಿಯ ಭಾವ ಇರುತ್ತದೋ ಅಲ್ಲಿಯವರೆಗೂ ಈ ಮೇಲ್ಪದರದ ಮನಸ್ಸು ಇರುತ್ತದೆ. ಯಾವಾಗ ಈ ಐಡೆಂಟಿಟಿ ಇಲ್ಲವಾಗುತ್ತದೆಯೋ ಅಲ್ಲಿ “ಉನ್ನತವಾದ ಪ್ರಜ್ಞಾ ಸ್ಥಿತಿ” ಇರುತ್ತದೆ. ಇದನ್ನು ಮನೋವೈಜ್ಞಾನಿಕ ಪರಿಭಾಷೆಯಲ್ಲಿ Non mind state ಅಥವಾ No mind state ಎಂದೂ ಗುರುತಿಸಲಾಗುತ್ತದೆ. ಅದ್ಭುತವೇನೆಂದರೆ ಮನುಷ್ಯನಲ್ಲಿರುವ ಅಸ್ತಿತ್ವದ ಐಡೆಂಟಿಟಿಯನ್ನು ಶರಣರು “ಅಸ್ತಿತ್ವದ ಅಹಂಕಾರ”ವೆಂದು ಜರಿದು ಅಲ್ಲಿಂದ ಹೊರಬರಲು ತುಂಬಾ ಸಾಧನೆ ಮಾಡಿದ್ದಾರೆ:
ಐದು ಮನವ ಕುಟ್ಟಿ ಒಂದು ಮನವ ಮಾಡು, ಕಂಡಾ ಮದವಳಿಗೆ!
ಇದು ನಮ್ಮ ಬಾಳುವೆ, ಮದವಳಿಗೆ!
ಇದು ನಮ್ಮ ವಿಸ್ತಾರ, ಮದವಳಿಗೆ!
ಮದವಳಿದು ನಿಜವುಳಿದ ಬಳಿಕ ಅದು ಸತ್ಯ ಕಾಣಾ,
ಕೂಡಲಸಂಗಮದೇವಾ.
ಈ ವಚನವು ಶರಣರ ಬಾಳುವೆ, ಅವರ ತಾತ್ವಿಕ ವಿಸ್ತಾರ, ಅವರ ಸಾಧಕ ಬದುಕು ಮನದ ಮೇಲೆ ನಡೆಸಿದ ಕ್ರಿಯಾಮೀಮಾಂಸೆಯಾಗಿದೆ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ಹೇಳುತ್ತದೆ. ಭ್ರಾಂತಿಯ ಮನಸ್ಸು ಸದಾ ಐದು ಆಲ್ಪಿಕ ವಿಷಯಗಳಲ್ಲಿ ತನ್ಮಯತೆಯನ್ನು ಹೊಂದಿರುತ್ತದೆ. 1. ಶ್ರೇಷ್ಠತೆಯ ಮದ, 2. ಸಂಗ್ರಹಣೆಯ ಮದ, 3. ಸುಖದ ಮದ, 4. ತಾರತಮ್ಯದ ಮದ, 5. ಹಿಂಸೆಯ ಮದ. ನಿಸರ್ಗ ತತ್ವಕ್ಕೆ ಈ ಐದು ಕಳಂಕಗಳಿಲ್ಲ. ಈ ಐದನ್ನೂ ಕುಟ್ಟಿ ಒಂದು ಸಾವಯವ ಮನವನ್ನಾಗಿಸಿದಾಗ ಮನುಷ್ಯನ ಅಸ್ತಿತ್ವದ ಮದದ ಐಡೆಂಟಿಟಿ ಪೂರ್ತಿಯಾಗಿ ಬಿದ್ದು ಹೋಗಿರುತ್ತದೆ. ಇದು ‘ಅಮನಸ್ಕ’ಕ್ಕೆ ಪಯಣಿಸಬೇಕಾದ ಮಾರ್ಗ. ಅಮನಸ್ಕವೆಂದರೆ ಪ್ರಜ್ಞಾಹೀನ ಸ್ಥಿತಿಯಲ್ಲ. ನಿರಂತರವಾದ ಜಾಗರೂಕತೆಯಿಂದ ಬಾಳುವೆ ಮಾಡುವ ‘ಅಂತರ್ನೋಟ’ (insight)ವದು. ಇದೊಂದು ಜೀವಂತ ಇರುವಿಕೆಯ ಸ್ಥಿತಿ. ಪೂರ್ಣಪ್ರಜ್ಞೆಗೆ ಜಗತ್ತಿನ ಇರುವಿಕೆ ಮತ್ತದರ ಆಗುವಿಕೆಯನ್ನು ಅಂತಃಸ್ಪೃಹೆಯಾಗಿಸಿಕೊಳ್ಳುವ ಸಾಮರ್ಥ್ಯ ಇದೆಯೇ ವಿನಾ ಮನಸ್ಸಿಗದು ಸಾಧ್ಯವಾಗದು. ಏಕೆಂದರೆ ಮನಸ್ಸು ಕೇವಲ ಸೀಮಿತ ಖಂಡ ಜ್ಞಾನಿ. ಪ್ರಜ್ಞಾ ಸಾಮರ್ಥ್ಯವು ಇದಕ್ಕಿಂತಲೂ ವಿಶಿಷ್ಟವಾದದ್ದು ಮತ್ತು ಅನೂಹ್ಯವಾದದ್ದು. ಅದು ಇಂದ್ರಿಯಗಳ ಸಹಾಯವಿಲ್ಲದೆಯೂ ಎಲ್ಲವನ್ನೂ ತಿಳಿಯಬಲ್ಲದು. ಯಾವುದು ಸತ್ಯ? ಯಾವುದು ನಿತ್ಯ? ಯಾವುದನ್ನು ಮಾಡಬಾರದು? ಯಾವುದು ನಾವು ಮಾಡಲೇ ಬೇಕಾದ ಜವಾಬ್ದಾರಿ?… ಎಂಬುದನ್ನು ಅದು ಮಾತ್ರ ತಿಳಿಯಬಲ್ಲದು. ಪೂರ್ಣ ಪ್ರಜ್ಞೆಯೇ ಅಮನಸ್ಕ! ಅಮನಸ್ಕವೇ ಶರಣರ ಆಳ-ನಿರಾಳ-ಪರಮಸುಖ- ಬಯಲು- ಸಹಜಾಮನಸ್ಕ.
ಮನಸ್ಸಿನಲ್ಲಿ ‘ನಾನು’ ಎಂಬ ಹುಸಿ ಭ್ರಾಂತಿಯಿದೆಯೇ ವಿನಾ ಆ ‘ನಾನು’ ಎಂಬ ಅಹಂಕಾರಕ್ಕೆ ಈ ನಿಸರ್ಗದಲ್ಲಿ ಶಾಶ್ವತವಾದ ಅಸ್ತಿತ್ವವೇನೂ ಇಲ್ಲ. ಪ್ರಜ್ಞೆಯಲ್ಲಿರುವ ‘ನಾನು’ ಎಂಬ ಅಂತಃಸತ್ವ ಅಖಂಡವಾದ ಜೈವಿಕ ನಿಸರ್ಗದೊಂದಿಗೆ ಬೆಸೆದುಕೊಂಡ ಸಂಬಂಧದ ಏಕತ್ವವಾಗಿದೆ. ಅಲ್ಲಿ ಬೇಧಗಳಿಲ್ಲ, ತಾರತಮ್ಯಗಳಿಲ್ಲ. ಬದುಕಿನ ನಿಜ ಅಸ್ತಿತ್ವವನ್ನು ನಿರಾಕರಿಸುವ ದರ್ಶನಗಳಿಲ್ಲ, ಕುಚೋದ್ಯಗಳಿಲ್ಲ, ಕುಮನಸ್ಸಿಲ್ಲ, ಭ್ರಾಂತಿಗಳಿಲ್ಲ, ಅಹಂಕಾರಿಕೆಗಳಿಲ್ಲ. ಈ ಅನಂತವಾದ ಸಚರಾಚರವೂ ತನ್ನೊಂದಿಗೆ ಬೆಸೆದುಕೊಂಡಿರುವ ಅನನ್ಯ ಜೈವಿಕ ಸಂಬಂಧದ ‘ಅನುಭಾವ’ದ ಅನುಭೂತಿ ನಿತ್ಯನೂತನವಾಗಿ ಮೈದಾಳಿರುತ್ತದೆ. ಇದುವೇ ಶಿವತತ್ವ. ಇಲ್ಲಿ ಉಪರಿ(ಕಲ್ಪಿತ) ಭೂತಗಳಾದ ಆತ್ಮತತ್ವದ ಪ್ರತಿಪಾದನೆಯ ಮಹಾವಾಕ್ಯಗಳೂ. ಮನಸ್ಸು ಜ್ಞಾನಗಳೂ, ಪಂಚಕೋಶಗಳೂ, ಹಿರಣ್ಮಯಾದಿಕೋಶಗಳೂ… ಎಲ್ಲವೂ ಬೆಂದು ಆವಿಯಾಗಿ ಶೂನ್ಯವೇ ಮೈವೇತ್ತಿಕೊಂಡ ಮಹಾಜ್ಞಾನವಿದೆ, ಬಯಲಿದೆ.
ಅಂಗವಿಲ್ಲಾಗಿ ಅನ್ಯಸಂಗವಿಲ್ಲ, ಅನ್ಯಸಂಗವಿಲ್ಲಾಗಿ ಮತ್ತೊಂದ ವಿವರಿಸಲಿಲ್ಲ.
ಮತ್ತೊಂದ ವಿವರಿಸಲಿಲ್ಲಾಗಿ ನಿಸ್ಸಂಗವಾಯಿತ್ತಯ್ಯಾ.
ಗುಹೇಶ್ವರಾ ನಿಮ್ಮ ನಾಮವಿಂತುಟಯ್ಯಾ.
ನಿರ್ವಿಕಲ್ಪಿತವೆಂಬ ನಿಜದೊಳಗಯ್ಯಾ,
ನಿರಹಂಭಾವದಲ್ಲಿ ನಾನಿದ್ದೆನಯ್ಯಾ (ನೀ ನಿದ್ದೆಯಯ್ಯಾ?)
ನೋಡಿಹೆನೆಂದಡೆ ನೋಡಲಿಲ್ಲ, ಕೇಳಿಹೆನೆಂದಡೆ ಕೇಳಲಿಲ್ಲ.
ಘನನಿರಂಜನದ ಬೆಳಗಿಂಬಾದುದನೇನೆಂಬೆ ಗುಹೇಶ್ವರಾ?
ಮನದೊಳಗೆ ಘನ ವೇದ್ಯವಾಗಿ, ಘನದೊಳಗೆ ಮನ ವೇದ್ಯವಾದ ಬಳಿಕ
ಪುಣ್ಯವಿಲ್ಲ ಪಾಪವಿಲ್ಲ, ಸುಖವಿಲ್ಲ ದುಃಖವಿಲ್ಲ,
ಕಾಲವಿಲ್ಲ ಕರ್ಮವಿಲ್ಲ, ಜನನವಿಲ್ಲ ಮರಣವಿಲ್ಲ.
ಗುಹೇಶ್ವರಾ ನಿಮ್ಮ ಶರಣನು ಘನಮಹಿಮ ನೋಡಯ್ಯಾ.
ಬಂಧುಗಳೇ ಈಗ ಹೇಳಿ! ನನ್ನ ಮನಸ್ಸನ್ನು ನಾನೆಂದುಕೊಳ್ಳಲೇ? ನೀವೇ ಹೇಳಿ… ನಿಮ್ಮ ಭೇದರಹಿತವಾದ ಅನುಭವದ ಭಿಕ್ಷೆ ನನ್ನನ್ನು ಸತ್ಯದೆಡೆಗೆ ಮುನ್ನಡೆಸಲಿ…
ನಮ್ಮ ಮುಂದಿನ ಪ್ರಶ್ನೆ “ಕಾಯವು ನಾನೇ?” ಈ ನನ್ನ ದೇಹವು ಖಂಡವ್ಯಾಪ್ತಿಯುಳ್ಳದ್ದೋ? ಅಖಂಡವಾದದ್ದೊ? ಇದರೊಳಗೆ ನನ್ನ ಅಸ್ತಿತ್ವವೆಂದರೆ ಏನು?
ಮುಂದಿನ ಸಂಚಿಕೆಯಲ್ಲಿ ಭೇಟಿಯಾಗುವೆ. ಈಗ ವಿರಾಮವಿರಲಿ. ಶರಣಾರ್ಥಿ.
(ಮುಂದುವರೆಯುವುದು)
Comments 29
Jyothilingappa
Jun 18, 2020ತುಂಬಾ ಕಾಯಿಸಿದಿರಿ…
ಅಷ್ಟೊಂದು ಕುತೂಹಲವಿತ್ತು, ನಿಮ್ಮ.. ನಾನು ಯಾರು.. ಓದಲು. ಈಗಲೂ ಇನ್ನೂ ಕುತೂಹಲ ಉಳಿಸಿಕೊಂಡಿರುವಿರಿ… ನಿಜ
ನಾನು ಯಾರು.. ಎಂಬುದು ಸರಳವೂ ಅಲ್ಲ, ಉತ್ತರಿಸುವ ಪ್ರಶ್ನೆಯೂ ಅಲ್ಲ. ನಮ್ಮೊಳಗೆ ನಾವೇ ಅರಿಯುವ ಅರಿವು. ಇದಕ್ಕೆ ಪೂರಕವಾಗಿ ನಿಮ್ಮ ಲೇಖನ… ತುಂಬಾ ಸಂತಸ. ಮುಂದಿನ ಸಂಚಿಕೆಯಲ್ಲಿ ಮತ್ತೇನೋ…
ಮನೋಹರ್ ಆಚಾರ್
Jun 18, 2020ಲೇಖನ ಬಹಳ ಚೆನ್ನಾಗಿದೆ ಅಂದರೆ ಯೋಚನೆಗೆ ಹಚ್ಚುತ್ತದೆ. ಒಂದು ಸುಂದರ ಕಲಾಕೃತಿಯನ್ನು ನೋಡಿದ ಅನುಭವವಾಯಿತು. ಧನ್ಯವಾದಗಳು, ನಿಮ್ಮ ಸಾಹಸ ಕೆಲಸಕ್ಕೆ.
Dr. Mallesh, Mysuru
Jun 19, 2020I have read your article. You have tried your best to convince the reader how the mind minds. The article reveals that the panacea for the 21st century problems exists in 12th century. The Sharana tradition lead by Basavanna could not only identify the cause and effects of perverted self-centred dogmatic mindset of their contemporary society, but also showed remedies through their simple unselfish meaningful and good to all way of living.
To be frank, your article created a feeling of fear in me at some places as I felt I have gone too far from the righteous path so much so that my heart still beats more for the attractions of life. The aging is only making the body weaker but the mind still controls and dominates the THOUGHTS, actions and responses.
There are some hints in your article on how to be totally pure. I would have been happier if you, consolidating your devoted studies drew a lakshmana rekha to separate the good and the bad, whether they are either thoughts or actions. The Patanjali yoga says mind controls the body and our breath controls the mind. Pranayama embodies a set of breathing exercises which are necessary for those who aren’t doing physical work. May I expect in a future summary of your series of articles, a step wise procedural account of the best ways of good living in which a person can enjoy the gifts of both the inner and outer world?
Your concern to point out the do’S and don’ts in life makes me feel I am indebted to you. I am really thankful and grateful to you for your unselfish effort to set things right in the journey of our lives. May you get more strength and good health in your means to reach the goal.
Basavaraj Karihole
Jun 20, 2020ಅಗಾಧವಾದ ವಿಶ್ಲೇಷಣೆಗೆ ತೆಗೆದುಕೊಂಡ ವಿಷಯ ಆಧಾರಗಳು ವ್ಯಾಪ್ತಿ ಮೀರಿಯೇ ಕಂಡು ಬಂದಿವೆ. ವಚನಗಳ ವಿಹಂಗಮ ಮಸೂರದ ಕೆಳಗೆ ಅವೆಲ್ಲ ಸಂಗಮಿಸಿವೆ. ಕೆಲವು ವಿಚಲಿತ ಗೊಂಡಿವೆ🙏🙏
Hareesh Mysuru
Jun 23, 2020ಆಳ ಅಧ್ಯಯನಕ್ಕೆ ಬೆರಗಾಗಿ ಹೋದೆ. ನನ್ನ ಮನಸ್ಸನ್ನು ಬೆಂಬಿಡದಂತೆ ಕಾಡುತ್ತಿದ್ದ ಅನೇಕಾನೇಕ ಗೊಂದಲಗಳು ನಿಚ್ಚಳಗೊಳ್ಳುವಂತಾಯಿತು. ಅಕ್ಕಾ, ನಿಮ್ಮ ಅಕ್ಷರಗಳಿಗಾಗಿ, ಅವುಗಳ ಹಿಂದಿನ ಕಳಕಳಿಗಾಗಿ ಧನ್ಯವಾದಗಳು. ಕಳೆದ ತಿಂಗಳ ಭಾಗ-3 ಓದಿ, ಇದನ್ನು ಓದಿದೆ. ನನಗಾದ ಆನಂದವನ್ನು ಹೇಳಿಕೊಳ್ಳಲು ನಾನು ಸಾಹಿತಿ ಅಲ್ಲ. ಒಂದು ಮಾತು ನಿಜ, ಮನಸ್ಸು ತುಂಬಿ ಬಂತು ಓದುತ್ತಾ ಓದುತ್ತಾ ಕಳೆದುಹೋಗಿಬಿಟ್ಟೆ.
ಪಂಡಿತಾರಾಧ್ಯ ಶ್ರೀಗಳು
Jun 24, 2020ಚಿಂತನೆಗೆ ತೊಡಗಿಸುವ ಬರಹ.
ಶಿವಾನಂದ ಗುರೂಜಿ, ದಾವಣಗೆರೆ
Jun 24, 2020ಶರೀರ ಮತ್ತು ಮನಸ್ಸುಗಳ ಸಂಯೋಜನೆಯಿಂದ ಒಳ ಒರಗಿನ ಮರ್ಮವನ್ನು ವಿವರಿಸಿರುವ ನಿಮ್ಮ ಜಾಣ್ಮೆ ಅಧ್ಭುತ. ಧನ್ಯವಾದಗಳು
Pro. Shivanna N
Jun 24, 2020It’s simply engrossing and very intuitive thoughts and it took some time to figure out!
It’s difficult to understand ones own mind and how it behaves ; self controlling is the best way but given the circumstances and situations it takes its own course. I always feel that the mind can be controlled provided the actions and feelings are genuine and they don’t harm or hurt others; one should nothave ulterior motives , not feel guilty and be good to your family and society. Corrupt mind is always dangerous.
Your thoughts will certainly make to think and question ones actions whether they are righteous or otherwise.
I am extremely happy for you the way you are moulding yourself in becoming a powerful and matured writer!
I don’t know whether my views match your thoughts and ideas since it is a soul searching piece.
With best wishes
N Sivanna
Kiran bellad
Jun 25, 2020ಶರಣರ ಕಾಯಗುಣ ಜೀವಗುಣದ ವಿವರಣೆ ಚೆನ್ನಾಗಿದೆ
ಪೆರೂರು ಜಾರು, ಪೆರೂರು
Jun 27, 2020ನಾನೆಂದೆರೆ ಅಹಂ. ಅಹಂನ ಕಂಟ್ರೋಲ್ ಮಾಡೋರು ಯಾರು? ಬೆಕ್ಕಿಗೆ ಗಂಟೆ ಕಟ್ಟೋರಾರು? ನಾನು ನನ್ನ ಅಹಂನಲ್ಲಿರುವಾಗ, ಆ ಬೆಕ್ಕಿಗೆ ನಾನೇ ಗಂಟೆ ಕಟ್ಟಬೇಕು. ನಾನು ಕಟ್ಟೋದು ಬಿಡೋದು ನನ್ನ ವಿವೇಚನೆಗೆ ಬಿಟ್ಟಂಥ ವಿಚಾರ. ಎಲ್ಲರೂ ಮಾಡ್ತಾ ಇರೋದು ಅನೈತಿಕ ಕಾವಲು (Immoral Policing), ಅಂದ್ರೆ ತಮ್ಮ ಬಗ್ಗೆ ಯೋಚಿಸದೆ, ಬೇರೆಯವರ ಮೇಲೆ ಕಣ್ಣಿಡ್ತಾ ಇರೋದು… ಚೆನ್ನಾಗಿ ಬರ್ದಿದೀರಿ, ಆದ್ರೆ ಇದನ್ನು ಕಣ್ತೆರೆದು ನೋಡುವ ಓದುಗರು ಇದಾರಾ ಅನ್ನೋದು ನನ್ನ ಕಳಕಳಿ. ನಿಮ್ಮ ಪ್ರಯತ್ನವನ್ನು ಬಹಳ ಚೆನ್ನಾಗಿ ಮಾಡಿದಿರಿ.
ಪ್ರಕಾಶ್ ಶಿಕ್ಷಕರು, ಬೀದರ್
Jun 27, 2020ಕನ್ನಡಿ ಮುಂದೆ ನಿಂತಾಗ ನಮ್ಮ ಮೈಮಾಟ ಗೊತ್ತಾಗುತ್ತದೆ. ನಿಮ್ಮ ಲೇಖನ ಓದಿದಾಗ ಮನಸ್ಸಿನ ರೂಪ ತೋರಿಸುತ್ತದೆ. ಅದು ಹೇಗೆ ಕರಾಳತೆಯನ್ನು ಕಳಚಿಕೊಂಡು ನಿರಾಳವಾಗಿರಬೇಕೆಂಬುದನ್ನು ಕಲಿತುಕೊಂಡೆ.
Radha Niranjan
Jun 29, 2020ಜೀವಗುಣ, ಕಾಯಗುಣಗಳೇ ನಾವಾ? ಅಥವಾ ಎಲ್ಲಕ್ಕೂ ಮೀರಿದ ಆಂತರಿಕ ಶಕ್ತಿ ಇದೆಯಾ, ಅದು ನಾವಾ? ಲೇಖನ ಬಹಳ ಅದ್ಭುತವಾಗಿ ಮೂಡಿಬಂದಿದೆ. ನಾವಾರು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತೆ, ಆದರೆ ಎಲ್ಲರೂ ಉತ್ತರ ಕಂಡುಕೊಳ್ಳುವಲ್ಲಿ ಪ್ರಯತ್ನಶಿಲರಾಗುವುದಿಲ್ಲ. ನಿಮ್ಮ ಲೇಖನ ನಮ್ಮನ್ನೂ ಆ ದಿಕ್ಕಿನತ್ತ ಕರೆದೊಯ್ಯುವುದಂತೂ ಸತ್ಯ.
Lingaraj Patil
Jun 29, 2020ನಮ್ಮ ಓದಿನ ಗತಿಯನ್ನೇ ಬದಲಿಸುತ್ತಿದ್ದೀರಿ. ಅದೇ ರೀತಿ ನಮ್ಮ ಚಿಂತನೆಯ ದಿಕ್ಕೂ ಬೇರೊಂದು ದಿಕ್ಕಿನತ್ತ ತೆರೆದುಕೊಳ್ಳುತ್ತಿದೆ… ನಿಮಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ.
Dr. J S Patil
Jun 29, 2020ಭಾವನಾವಾದ ಮತ್ತು ಭೌತವಾದಗಳ ಹರವು ವಿಸ್ತಾರ ಮತ್ತವುಗಳನ್ನು ಶರಣರು ವಿಮರ್ಶಿಸಿದ ರೀತಿ ಅನನ್ಯ ಚಿಂತನೆಗೆ ತೊಡಗಿಸುವಂತೆ ಬರೆದಿದ್ದಿರಿ. ಒಟ್ಟಾರೆಯಾಗಿ ಈ ಸರಣಿ ಬರಹಗಳು ಒಂದು ಹೊಸ ತನೆಯನ್ನಂತೂ ಹುಟ್ಟು ಹಾಕಿದ್ದರಲ್ಲಿ ಸಂಶಯವಿಲ್ಲ…
ಪಂಚಾಕ್ಷರಿ ಹವೀ
Jun 30, 2020ಯಾವುದೇ ತತ್ವ ಸಿದ್ದಾಂತ ರೂಪುಗೊಳ್ಳುವಲ್ಲಿ ಸಿದ್ದಾಂತಿಯ ಅನುಭಾವದ ನೆಲೆ ಪ್ರಮುಖಪಾತ್ರವಹಿಸುತ್ತದೆ. ಯಾವುದು ಸರಿ, ಯಾವುದು ತಪ್ಪು ಎಂದು ಹೇಳಲಾಗುವುದಿಲ್ಲ.
ಮನಸ್ಸನ್ನು ಚಿಂತನೆಯೆಡೆಗೆ ಒಯ್ಯುವ ಉತ್ತಮ ಲೇಖನ.
Dr. Vijay boratti
Jun 30, 2020I did not know that i can write in english. let me say a few words about the article. K.R. Mangala must have spent lots of energy and time to pen such deep, dense and insightful article on vachanas. she has shown that vachanas are still open for innumerable interpretations. her understandings are quite notice worthy and provocative intellectually. she provokes us to engage with vachanas more and more.
Veena Hassan
Jul 1, 2020ಬಹಳ ಸಮಗ್ರ ಲೇಖನ. ಆಧ್ಯಾತ್ಮಿಕ ಮತ್ತು ವಾಸ್ತವತೆಯ ನಡುವಿನ ತುಯ್ದಾಟವನ್ನು ಸೊಗಸಾಗಿ ಚಿತ್ರೀಕರಿಸಿದ್ದೀರಿ. ನಡುನಡುವೆ ಶರಣ ಸಾಹಿತ್ಯದ ಸಮರ್ಥನೆ ಎನ್ನುವಂತಹ ಎಳೆಗಳು ಸಹ ಇವೆ. ಇದರಲ್ಲಿ ಹೆಚ್ಚಿನ ವಿಷಯಗಳನ್ನು ನಾನು online ಸತ್ಸಂಗಗಳಲ್ಲಿ ಕೇಳಿದ್ದೆ. ನೀವು ಉದಾಹರಿಸಿರುವ ವಚನಗಳನ್ನು ಹೋಲುವ ದಾಸ ಸಾಹಿತ್ಯದ ಅಲ್ಪಸ್ವಲ್ಪ ಪರಿಚಯವಿದೆ.
ನನ್ನ ನಾನು ವಿನ ಹುಡುಕಾಟದಲ್ಲಿ ಸಧ್ಯ ಐಡೆಂಟಿಟಿಯೇ crisis ಉಂಟುಮಾಡುತ್ತದೆ ಎನ್ನುವ reflection ನಲ್ಲಿದೀನಿ. ಅದರಿಂದ ಉಳಿದ crisis ಗಳು ಉಂಟಾಗುತ್ತವೆ. ಈ identity ya ರಾಜಕೀಯವೇ ನಮ್ಮನ್ನು ಭೌತವಾದ ಹಾಗೂ ಭಾವನಾವಾದಗಳ ತೂಗುಯ್ಯಾಲೆಯಲ್ಲಿ ಕೆಡುವುತ್ತದೆ ಎಂದು ನನ್ನ ಅನಿಸಿಕೆ. ಆಗ ನಾವು ಸಮಚಿತ್ತ ಅಥವಾ ಸಾಮರಸ್ಯವನ್ನು ಮನಸ್ಸು ಮೂಲವಾದ ಜ್ಞಾನದ ಆಧಾರದ ಮೇಲೆ ಸಾಧಿಸಲು ಹೊರಡುತ್ತೇವೆ.
ಈಗ influence of the subconscious memory on our day to day existence ಬಗ್ಗೆ ಸಾಕಷ್ಟು ವಿಷಯಗಳು ಹೊರಬರುತ್ತಿವೆ. ಒಮ್ಮೆ ಮತ್ತು ಒಮ್ಮೆಲೇ ಓದಿದಾಗ ನನಗೆ ಅನಿಸಿದ್ದು ಇಷ್ಟು.
Vijaykumar Kammar
Jul 2, 2020ಅಂತರಂಗದ ಅರಿವಿನ ವಿಕಾಸವನ್ನು ಅತ್ಯಂತ ಸರಳ ಭಾಷೆಯಲ್ಲಿ ವಿವರಿಸಿದ್ದೀರಿ. ಹೃತ್ಪೂರ್ವಕ ಅಭಿನಂದನೆಗಳು. ನನಗೆ ಒಂದು doubt. ವಚನಕಾರರು ವೈಯಕ್ತಿಕವಾಗಿ ಯಾರನ್ನೂ ದೂಷಣೆ ಮಾಡಿಲ್ಲ. ಆದರೆ ತತ್ವ ಸಿದ್ಧಾಂತಗಳನ್ನು ಕಟುವಾಗಿ ಟೀಕಿಸಿದ್ದಾರೆ. ಹಾಗಾಗೀ ಈ ವಚನ ಪ್ರಕ್ಷಿಪ್ತ ವಚನವೇ ಎನ್ನುವುದು ನನ್ನ doubt:
ಅಲ್ಲಮರು ಕಠೋರ ಮಾತುಗಳಿಂದ ಚಾರ್ವಾಕರನ್ನು ಛೇಡಿಸಿದಂತೆ ಯಾರೂ ಛೇಡಿಸಲಾರರು…
“ಚಾರ್ವಾಕ ಚಾಂಡಾಲ ಶಿವದ್ರೋಹಿಯ ಮಾತಕೇಳಿ…”
I dont know whether it is true or not.
In the nut shell the artical is classic in ite subject gathering. The articulation of the ideas are superb.
Congratulations and look forward to some more articals.
ಜಯಾ ಹೆಚ್.ವಿ
Jul 3, 2020ಲೇಖನ ತುಂಬಾ ಚನ್ನಾಗಿ ಮೂಡಿ ಬಂದಿದೆ. ಜಗತ್ತಿನಲ್ಲಿರುವ ಯಾವ ವಸ್ತುವನ್ನು, ಯಾವ ವಿಷಯವನ್ನೂ ಬೇಕಾದರೂ ತಿಳಿದುಕೊಳ್ಳಬಹುದು. ಆದರೆ ನಾನು ಯಾರು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಕಷ್ಟದ ಕೆಲಸ. ನಿಮ್ಮ ಸಮಗ್ರ ಲೇಖನ ಓದುತ್ತಾ ಓದುತ್ತಾ,ಮತ್ತಷ್ಟು ಕುತೂಹಲ ಹೆಚ್ಚುತ್ತದೆ. ನಮ್ಮನ್ನು ನಾವು ಅರಿಯುವ ಬಗ್ಗೆ ಹೆಚ್ಚು ಹೆಚ್ಚು ಚಿಂತನೆಗೆ ಒಳಪಡಿಸುತ್ತದೆ. ನಿಮ್ಮ ಅಧ್ಯಯನ ತುಂಬಾ ಆಳವಾದದ್ದು. ಆ ಆಳಕ್ಕೆ ಓದುಗರನ್ನು ಎಳೆದುಕೊಂಡು ಹೋಗುವ ಲೇಖನದ ಚತುರತೆ ಮತ್ತು ವಚನಗಳ ವಿಶ್ಲೇಷಣೆ ಮತ್ತಷ್ಟು ವಿಶೇಷವಾದದ್ದು. 🙏🙏🙏
Harsha
Jul 3, 2020ನಾಲ್ಕೂ ಭಾಗಗಳನ್ನು ಓದಿದ್ದೇನೆ. ಮೊದಲನೆಯದಾಗಿ ನಿಮ್ಮ ಅಗಾಧ ಅಧ್ಯಯನಶೀಲತೆಗೆ ನನ್ನದೊಂದು ನನ್ನಿ. ನಾನು ಗಮನಿಸಿರುವಂತೆ ಇತ್ತೀಚಿನ ವರ್ಷಗಳಲ್ಲಿ ತತ್ವಶಾಸ್ತ್ರದ ಮುಖ್ಯ ಸಂಗತಿಗಳನ್ನು ಇಷ್ಟು ಆಳವಾಗಿ ಅಧ್ಯಯನ ನಡೆಸಿ, ಬರೆವಣಿಗೆ ಮಾಡಿದವರು ಯಾರೂ ಇಲ್ಲ. ಇಂತಹ ಒಂದು ಸಾಹಸಕ್ಕೆ ಕೈ ಹಾಕಿ ಅದರಲ್ಲಿ ಯಶಸ್ವಿಯೂ ಆಗಿರುವ ನಿಮಗೆ ಅಭಿನಂದನೆಗಳು. ಭಾರತೀಯ ತತ್ವಶಾಸ್ತ್ರದ ಭಿನ್ನ ಪರಂಪರೆಗಳ ಕುರಿತು ನನ್ನ ಹಲವಾರು ವರ್ಷಗಳ ಕುತೂಹಲಕ್ಕೆ ದೊಡ್ಡ ಸರಕು ನಿಮ್ಮ ಈ ಲೇಖನ ಸರಣಿಯಲ್ಲಿದೆ. ಬಹಳ ಮುಖ್ಯವಾಗಿ ೧೨ನೆಯ ಶತಮಾನದ ವಚನಕಾರರು ಹುಟ್ಟು ಹಾಕಿದ ತಾತ್ವಿಕ ಪರಂಪರೆ ವೈದಿಕಶಾಹಿಯ ಪ್ರಪಂಚ ದೃಷ್ಟಿಕೋನಕ್ಕೆ ವಿರುದ್ಧವಾದ ತಾತ್ವಿಕ ತಳಹದಿಯನ್ನು ನೀಡಿದರೆಂಬುದು ತಿಳಿದ ವಿಷಯ. ಆದರೆ ಅದು ಯಾವ ಬಗೆಯಲ್ಲಿ ಎಂಬ ಬಗ್ಗೆ ಆಳವಾದ ಅಧ್ಯಯನವು ತತ್ವಶಾಸ್ತ್ರೀಯವಾಗಿ ನಡೆದಿರಲಿಲ್ಲ ಎಂದೇ ಹೆಳಬೇಕು. ಕೆ.ಆರ್.ಮಂಗಳಾ ಅವರ ಈ ಬರೆಹ ಇಂತಹ ಒಂದು ಶೂನ್ಯವನ್ನು ತುಂಬುತ್ತಿದೆ ಮಾತ್ರವಲ್ಲ ಶರಣರು ಪ್ರತಿಪಾದಿಸಿದ ತತ್ವಗಳನ್ನು ನಿಜಕ್ಕೂ ಅರ್ಥ ಮಾಡಿಕೊಳ್ಳಬೇಕಾದ ಬಗೆ ಏನೆಂಬುದನ್ನು ತಿಳಿಸಿಕೊಡುತ್ತಿದೆ. ಕೆಲವು ಬ್ರಾಹ್ಮಣವಾದಿಗಳು ಶರಣರ ತತ್ವಗಳನ್ನು ಲೇವಡಿ ಮಾಡಿ, ಶಂಕರಾಚಾರ್ಯರು ಹೇಳದ ಯಾವ ಮಹಾ ಸಂಗತಿಯನ್ನು ವಚನಕಾರರು ಹೇಳಿದ್ದಾರೆ ಎಂದು ಕೇಳಿ ಉಡಾಫೆ ಮಾಡಿದ್ದನ್ನು ಪ್ರಜಾವಾಣಿಯಲ್ಲಿ ನಡೆದ ಚರ್ಚೆಯೊಂದರಲ್ಲಿ ಗಮನಿಸಿದ್ದೆ. ಇಂತಹ ವೈದಿಕಶಾಹಿ ಅಹಂಕಾರದ ಮಾತುಗಳಿಗೆ ಈ ಸರಣಿ ಲೇಖನ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದೆ ಮಾತ್ರವಲ್ಲ, ವೇದ, ಉಪನಿಷತ್ತುಗಳ ಕುರಿತು ಹಲವರಿಗೆ ಇರುವ ಭ್ರಮಗಳನ್ನು ಈ ಲೇಖನ ಒಡೆದು ಹಾಕಿದೆ ಎನ್ನಬಹುದು. ಇತ್ತೀಚೆಗೆ ರಭಸ ಪಡೆದುಕೊಂಡಿದ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಒದಗಿಸುವ ಚಳವಳಿಗೆ ಈ ಸರಣಿಯು ಅತ್ಯಂತ ಅಗತ್ಯವಾಗಿದ್ದ ತಾತ್ವಿಕ ಚೌಕಟ್ಟುನ್ನು ನಿರ್ಮಿಸಿಕೊಡಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಈ ಸರಣೀಯ ಮುಂದಿನ ಭಾಗಕ್ಕೆ ಕುತೂಹಲದಿಂದ ಕಾಯುತ್ತಿದ್ದೇನೆ. ಇಲ್ಲಿ ಉಲ್ಲೇಖಿಸುವ ಕೆಲವು ವಚನಗಳನ್ನು ಕೊಂಚ ಸರಳವಾಗಿ ಬಿಡಿಸಿ ಅರ್ಥೈಸಿದರೆ ಓದುಗರಿಗೆ ಇನ್ನೂ ಹೆಚ್ಚಿನ ಪ್ರಯೋಜನವಾಗುತ್ತದೆ ಎನಿಸುತ್ತದೆ… ಮತ್ತೊಮ್ಮೆ ತುಂಬಾ ತುಂಬಾ ಧನ್ಯವಾದಗಳು.
Paramashivaiah
Jul 5, 2020Very good article.
ಕಿಶೋರ್ ಕಾರ್ತಿಕ್
Jul 8, 2020ಮನಸ್ಸಿನ ಕುರಿತಾಗಿ ಏನು ಬರೆಯಬಹುದೆಂಬ ಕುತೂಹಲವಿತ್ತು, ನಿಜಕ್ಕೂ ಬಯಲಿಗಾಗಿ ಕಾಯುತ್ತಿದ್ದೆ. ಕೆಲಸದ ಒತ್ತಡಗಳಿಂದಾಗಿ ಇದುವರೆಗೆ ಓದಲಾಗದೆ ಇವತ್ತು ಓದಿ ಮುಗಿಸಿದೆ…..ಅಲ್ಲ ಅಲ್ಲ ಇವತ್ತಿನಿಂದ ಓದಲು ಆರಂಭಿಸಿದ್ದೇನೆ. ಈ ತಿಂಗಳ ಕೊನೆಯ ತನಕ ಓದುತ್ತಲೇ ಇರುತ್ತೇನೆ. ನನ್ನ ಮನಸ್ಸಿನ ಮುಂದೆಯೇ ಬಂದು ನಿಂತು ಮಾತನಾಡುವಂತೆ ಬರೆಯುತ್ತೀರಿ ಅಕ್ಕಾ. ಪತ್ರಿಕೆಯಲ್ಲಿ ನಿಮ್ಮ ಲೇಖನಗಳನ್ನು ಓದಿದ್ದೆ. ಮಯೂರದಲ್ಲಿ ಬರೆದ ಪಾಲೊ ಕೊಯಿಲೊ ಬಗೆಗಿನ ವ್ಯಕ್ತಿ ಪರಿಚಯದಿಂದ ಪ್ರಭಾವಿತನಾಗಿ ಆತನ ಎಲ್ಲಾ ಪುಸ್ತಕಗಳನ್ನು ಓದಿ ಮುಗಿಸಿದೆ. ಬಯಲ ಲೇಖನಗಳಂತೂ ನನ್ನ ನೆಚ್ಚಿನ ಸಂಗಾತಿಗಳಾಗಿವೆ.
Sathish
Jul 14, 2020ಶರಣ ಸಾಹಿತ್ಯಕ್ಕೆ ನಿಮ್ಮ ಲೇಖನಗಳಿಂದ ಹೊಸ ಸ್ಪರ್ಶ ಸಿಗಲಿದೆ.
Jyothi Hulyal
Jul 14, 2020ಓದು, ಮತ್ತೆ ಓದು, ಮತ್ತೆ ಓದು… ಅಕ್ಕಾ, ನೀವು ಹೊಸದೇನನ್ನೋ ಹೇಳುತ್ತಿದ್ದೀರಿ. ಇದುವರೆಗಿನ ವಚನಗಳ ಓದಿಗಿಂತ ನಿಮ್ಮ ವಿಚಾರಗಳು ಭಿನ್ನವಾಗಿವೆ, ಮತ್ತು ಶರಣರ ವಿಚಾರಗಳಿಗೆ ಹೆಚ್ಚು ಹತ್ತಿರವಾಗಿವೆ. ನಿಮ್ಮ ಅನುಭಾವಕ್ಕೆ ಶರಣು ಶರಣು.
BASAVARAJ G SULIBHAVI
Jul 15, 2020ಮಂಗಳಾ ಶರಣಿಯರು, ಅನೇಕ ವಿಷಯಗಳನ್ನು ಕ್ರಮಬದ್ದವಾಗಿ ಕ್ರೋಡಿಕರಿಸಿ, ಮನುಷ್ಯನ ಮನಸ್ಸಿನ ಬಗ್ಗೆ ವಿವರವಾಗಿ ಬರೆದಿದ್ದಾರೆ. ಅಪಾರವಾದ ಜ್ಞಾನಬರಿತ ಲೇಖನವಾಗಿದೆ. ಬಸವಾದಿಶರಣರು ಹೇಳುವಂತೆ, ನಾಳೆಯ ಬಗ್ಗೆ ಚಿಂತಿಸದೆ, ಕೇವಲ ಈ ಕ್ಷಣದ ಬಗ್ಗೆ ಯೋಚಿಸಿ, ಕಾಯಕದ ಮೇಲೆ ನಂಬಿಗೆ ಇಟ್ಟು, ಆಸೆಗಳನ್ನು ಅಳಿಸಿದರೆ, ಮನಸ್ಸು ನಿರ್ಮಲವಾಗಿ ಸಹಜವಾಗಿರುತ್ತದೆ. ಆಸೆಗಳು ಅಳಿದು, ಮಿತಿಗೊಂಡಾಗ ಮನುಷ್ಯ ನಿರಮ್ಮುಳವಾಗಿರುತ್ತಾನೆ, ಮನಸ್ಸು ಸಹಜವಾಗಿರುತ್ತವೆ. ಬಸವಾದಿಶರಣರ ಹಾದಿ, ಸತ್ಯದ ಹಾದಿ, ಪಾಲಿಸುವುದು ಸರಳ ಹಾಗೂ ಉತ್ತಮ, ಆದರೆ ಅದರ ಪರಿಣಾಮಗಳು ಘನಘೋರ. ಸತ್ಯದ ಹಾದಿಯಲ್ಲಿ ಪ್ರಾಮಾಣಿಕವಾಗಿ ನಡೆಯುವವನಿಗೆ ಜೀವನವೆಲ್ಲಾ ಕಷ್ಟಗಳು, ನಿಂದನೆಗಳು, ಅಪಹಾಸ್ಯಗಳು, ಸಮಾಜದಿಂದ ಬಹಿಷ್ಕಾರ…. ಆದರೆ ಸರಿ ತಪ್ಪು, ಸತ್ಯ ಅಸತ್ಯಗಳು ಹಾಗೂ ನ್ಯಾಯ ನೀತಿಗಳ ಬಗ್ಗೆ ಏನನ್ನೂ ಚಿಂತಿಸದೆ ಮುನ್ನುಗ್ಗುವ ಜನರೇ ಪರಮಸುಖಿಗಳು ಇಂದಿನ ಜಗತ್ತಿನಲ್ಲಿ. ತಮ್ಮೆಲ್ಲರ ಮುಂದೆ ದಿನನಿತ್ಯ ಸಾವಿರಾರು ಘಟನೆಗಳು ಸಾಕ್ಷಿಯಾಗಿವೆ.
ಅಕ್ಕಮಹಾದೇವಿಯವರು ಹೇಳುವಂತೆ, ಆವ ವಿದ್ಯೆಯ ಕಲಿತಡೇನು, ಸಾವ ವಿದ್ಯೆ ಬೆನ್ನ ಬಿಡದು.
ಹಾಗೇಯೇ ಯಾವ ವಿಷಯ ತಿಳಿದು ನಡೆದರೇನು ಫಲ? ತಿಳಿದು ಹಾಗೂ ತಿಳಿಯದೆ ಮುನ್ನುಗ್ಗುವವರೆ ಶ್ರೇಷ್ಠರು ಈ ಜಗತ್ತಿನಲ್ಲಿ.
Shashikala Beluru
Jul 18, 2020ಈ ಲೇಖನ ಓದಿ ಜೀರ್ಣಿಸಿಕೊಳ್ಳಲು ನನ್ನಂತವರಿಗೆ ಕನಿಷ್ಟ ಐದಾರು ಓದುಗಳು ಬೇಕು. ನೀವು ಮಾಡುತ್ತಿರುವ ಕಾರ್ಯ ಬೆಲೆಕಟ್ಟಲಾಗದ್ದು. ಹೀಗೆಲ್ಲಾ ನಾವು ಯೋಚನೆಯನ್ನೇ ಮಾಡಲಿಲ್ಲ. ಹೊಸದಾಗಿ ನಮ್ಮನ್ನು ನಾವು ನೋಡಿಕೊಳ್ಳುವಂತೆ ಭಾಸವಾಗುತ್ತಿದೆ. ನಾನು ಯಾರು ಲೇಖನಗಳು ನಮ್ಮ ಮುಂದೆ ಕನ್ನಡಿ ಹಿಡಿದು ನಮ್ಮನ್ನು ನಮಗೆ ತೋರಿಸುವಂತಿವೆ…..
ಕರಿಬಸಪ್ಪ, ಸವಣೂರು
Jul 26, 2020ಶರಣರ ವಿಚಾರಗಳನ್ನು, ಅವರ ವಾಸ್ತವತೆಯ ದೃಷ್ಟಿಯನ್ನು ಮನಸ್ಸಿನ ಆವರಣವನ್ನು ಕಳಚಿಕೊಳ್ಳಲು ಅವರು ನಡೆಸಿದ ಪ್ರಯತ್ನಗಳನ್ನು ತಿಳಿದುಕೊಳ್ಳಲು ಈ ಲೇಖನ ನೆರವಾಗುತ್ತದೆ. ನಾನು ಯಾರು ಎನ್ನುವ ಹುಡುಕಾಟದಲ್ಲಿ ಶರಣರು ತುಳಿದ ವಿನೂತನ ಹಾದಿಯನ್ನು ಇಷ್ಟು ಶ್ರಮವಹಿಸಿ ನಮಗೆ ಉಣಬಡಿಸುತ್ತಿರುವ ತಾಯಿ ನಿನಗೆ ಅನಂತ ಶರಣುಗಳು. ಇಲ್ಲಿಯ ಮಾತುಗಳು ಕೇವಲ ಓದಿಸಿಕೊಂಡು ಹೋಗುವುದಿಲ್ಲ, ವಿಚಾರಕ್ಕೆ ಹಚ್ಚುತ್ತವೆ, ಜಿಡ್ಡುಗಟ್ಟಿದ ನಮ್ಮ ಮನಸ್ಸನ್ನು ಅನುಭಾವದ ದಾರಿಗೆ ದೂಡುತ್ತವೆ.
ಮಧುಸೂದನ್
Jul 26, 2020ಮನಸ್ಸನ್ನು ನೋಡಿಕೊಳ್ಳಲು ಇಲ್ಲೊಂದು ದಾರಿ ಇದೆ, ಶರಣರ ಅದ್ಭುತ ದಾರಿ ಇದೆ,
NAGESHA B
Jan 15, 2024ನಾನೆಂಬ ಅಹಂಕಾರ ತಲೆದೋರಿದಲ್ಲಿ
ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು
ನಾನೀನೆಂಬ ಭಾವವಾರಿಂದಾಯಿತ್ತು ಹೇಳಾ?
ನೀನೆಂಬುದೆ ಅಜ್ಞಾನ, ನಾನೆಂಬುದೆ ಮಾಯಾಧೀನ.
ನೀನೆನ್ನದೆ ನಾನೆನ್ನದೆ ಇಪ್ಪ ಸುಖವ,
ಭಿನ್ನವಿಲ್ಲದೆ ಅರಿಯಬಲ್ಲಡೆ
ಆ ಸುಖ ನಿಮಗರ್ಪಿತ ಕಾಣಾ ಗುಹೇಶ್ವರಾ
ಪಕೃತಿ ವಿವೇಕದಿಂದ ಬಾಳುವುದನ್ನು ಕಲಿತಲ್ಲದೆ ಮನುಷ್ಯ ನಿರ್ಮಿತ ನರಕದಿಂದ ಬಿಡುಗಡೆಯಿಲ್ಲ