ನಾನು ಕಂಡ ಡಾ.ಕಲಬುರ್ಗಿ
ಕರ್ನಾಟಕ ಕಂಡ ಹೆಸರಾಂತ ಸತ್ಯಶೋಧಕ ಶರಣ ಡಾ.ಎಂ.ಎಂ. ಕಲಬುರ್ಗಿ ಅವರು ಹಂತಕರ ಗುಂಡಿಗೆ ಬಲಿಯಾಗಿ ಕಳೆದ ಆಗಸ್ಟ್ ೩೦ ಕ್ಕೆ ಆರು ವರ್ಷಗಳಾದವು. ೨೦೧೫ ನೇ ಇಸವಿ ಇದೇ ದಿನ ಬೆಳಗಿನ ಜಾವ ಡಾ.ಕಲಬುರ್ಗಿ ಸರ್ ಹಂತಕರ ಗುಂಡಿಗೆ ಬಲಿಯಾದರು. ದಾಬೊಳ್ಕರ, ಪಾನ್ಸರೆ ಅವರನ್ನು ಕೊಂದ ಗಾಯ ಇನ್ನೂ ಮಾಯ್ದಿರಲಿಲ್ಲ. ಧಾರವಾಡದಲ್ಲಿ ಇನ್ನೊಬ್ಬ ವಿಚಾರವಾದಿ ಸತ್ಯಶೋಧಕನನ್ನು ಗುಂಡಿಕ್ಕಿ ಕೊಂದರು.
ಡಾ.ಕಲಬುರ್ಗಿ ಕರ್ನಾಟಕ ಕಂಡ ಮಹಾನ್ ಸಂಶೋಧಕ. ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮ, ಅದು ಹಿಂದು ಧರ್ಮದ ಭಾಗವಲ್ಲ ಎಂದು ಖಚಿತ ಚಾರಿತ್ರಿಕ ದಾಖಲೆಗಳೊಂದಿಗೆ ಪ್ರತಿಪಾದಿಸುತ್ತ ಬಂದವರು. ನಾನು ಅವರ ವಿದ್ಯಾರ್ಥಿ ಅಲ್ಲ. ಆದರೆ ಒಂದೇ ಜಿಲ್ಲೆಯವರು ಸಮಾನ ಮನಸ್ಕರು ಎಂಬ ಅಭಿಮಾನದಿಂದ ಆಗಾಗ ಫೋನ್ ನಲ್ಲಿ ಮಾತಾಡುತ್ತಿದ್ದರು. ನಾನು ಹುಬ್ಬಳ್ಳಿಯ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಒಂದೆರಡು ಸಲ ಹುಡುಕಿಕೊಂಡು ಬಂದು ಮಾತಾಡಿದ್ದರು. ಅವರ ಮಾರ್ಗ_೧ ವಿವಾದದ ಅಲೆ ಎಬ್ಬಿಸಿದಾಗ ನಾವೆಲ್ಲ ಬೆಂಬಲವಾಗಿ ನಿಂತಿದ್ದನ್ನು ಅವರು ಮರೆತಿರಲಿಲ್ಲ.
ದಾಬೊಳ್ಕರ, ಪಾನ್ಸರೆ ಹಂತಕರನ್ನು ಹಿಡಿದಿದ್ದರೆ ಕಲಬುರ್ಗಿ ಹತ್ಯೆಯಾಗುತ್ತಿರಲಿಲ್ಲವೇನೊ. ಕಲಬುರ್ಗಿ ನಂತರ ಗೌರಿ ಲಂಕೇಶ್ ಹತ್ಯೆಯೂ ನಡೆಯಿತು. ಗೌರಿ ಹತ್ಯೆ ಆರೋಪಿಗಳು ಸಿಕ್ಕರು. ಅವರ ದೊಡ್ಡ ಜಾಲ ಇನ್ನೂ ಬಯಲಾಗಬೇಕಾಗಿದೆ. ಆದರೆ ಸಾರ್ವಜನಿಕರ ಸ್ಮರಣೆಗೆ ದೀರ್ಘಾಯುಷ್ಯವಿಲ್ಲ. ಏನೇ ಆಗಲಿ ಕಲಬುರ್ಗಿ ಅವರಂಥ ಸತ್ಯಶೋಧಕನನ್ನು ಕರ್ನಾಟಕದ ಜನತೆ ಮರೆಯಬಾರದು. ಕಲಬುರ್ಗಿ ಅವರನ್ನು ಕೊಂದವರು ಬರೀ ವ್ಯಕ್ತಿಗಳಲ್ಲ, ಅವರ ಹಿಂದೊಂದು ಸಿದ್ದಾಂತವಿದೆ. ಆ ಜೀವ ವಿರೋಧಿ ಸಿದ್ದಾಂತವನ್ನು ಸೋಲಿಸುವವರೆಗೆ ವಿರಮಿಸಬಾರದು.
ಯಾವುದು ಆ ಕರಾಳ ಸಿದ್ದಾಂತ? ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಿಂದ ಬಸವಣ್ಣನವರನ್ನು ಗಡಿಪಾರು ಮಾಡಿಸಿ ಮುಗಿಸಿದ ಜೀವವಿರೋಧಿ ಸಿದ್ದಾಂತ ಅದು. ಸಕಲ ಜೀವಾತ್ಮರ ಲೇಸನು ಬಯಸಿದ ಬಸವಣ್ಣನವರ ಧರ್ಮ ಮಡಿ ಮೈಲಿಗೆಯಾಗಿರಲಿಲ್ಲ. ದಯವೇ ಅವರ ಧರ್ಮದ ಮೂಲವಾಗಿತ್ತು. ಅಂತಲೇ ಅವರೆಷ್ಟು ಕೆಳಗಿಳಿದು ಬಂದರೆಂದರೆ ತನ್ನನ್ನು ತಾನು ಮಾದಾರ ಚೆನ್ನಯ್ಯನ ಮಗನೆಂದು ಕರೆದುಕೊಂಡರು. ಜಾತಿ ಸೂತಕದಿಂದ ಸಮಾಜವನ್ನು ಹೊರಗೆ ತರಲು ಮಧುವರಸನ ಮಗಳನ್ನು ಹರಳಯ್ಯನ ಮಗನಿಗೆ ಕೊಟ್ಟು ಮದುವೆ ಮಾಡಿಸಲು ಹೊರಟರು. ಇಂಥ ಬಸವಣ್ಣನವವರನ್ನು ಸಂಪ್ರದಾಯವಾದಿ ಮನುವಾದಿ ಶಕ್ತಿಗಳು ಚರಿತ್ರೆಯ ಪುಟಗಳಲ್ಲಿ ಮರೆ ಮಾಡಲು ಹೊರಟಾಗ ಅದನ್ನು ಬಯಲಿಗೆಳೆದು ಬಸವಣ್ಣನವರ ನೈಜ ಚರಿತ್ರೆಯನ್ನು ಜನತೆಯ ಮುಂದೆ ಬಿಚ್ಚಿಟ್ಟವರು ಡಾ.ಕಲಬುರ್ಗಿ ಅವರು.
ಹಾಗೇ ನೋಡಿದರೆ ನಾನು ಚಿಕ್ಕವನಾಗಿದ್ದಾಗ ಅಂದರೆ ಎಪ್ಪತ್ತರ ದಶಕದವರೆಗೆ ಬಸವಣ್ಣ ಅಂದರೆ ಮಣ್ಣೆತ್ತಿನ ಅಮವಾಸ್ಯೆಯಲ್ಲಿ ಪೂಜೆ ಮಾಡುವ ನಂದಿಯಾಗಿದ್ದ. ಎತ್ತುಗಳಿಗೆ ಜನರು ಬಸವಣ್ಣ ಎಂದು ಕರೆಯುತ್ತಾರೆ. ಬಸವಣ್ಣ ಎಂಬ ಒಬ್ಬ ಮಹಾಪುರುಷ ಈ ಜಗತ್ತಿನಲ್ಲಿ ಬದುಕಿದ್ದ ಎಂಬುದನ್ನು ಅಳಿಸಿ ಹಾಕಿದ್ದರು. ವೀರಶೈವ ಮಠಾಧೀಶರಿಗೂ ಬಸವಣ್ಣ ಬೇಕಾಗಿರಲಿಲ್ಲ. ಇಂಥ ಸನ್ನಿವೇಶದಲ್ಲಿ ಬಸವಣ್ಣನವರನ್ನು ಮನೆ ಮನೆಗೆ ಕೊಂಡೊಯ್ದವರು ನಮ್ಮ ಬಿಜಾಪುರ ಜಿಲ್ಲೆಯ ಮನಗೂಳಿಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು ಮಾತೆ ಮಹಾದೇವಿ ಅವರು. ಇವರು ಊರೂರು ಸುತ್ತಾಡಿ ಬಸವಣ್ಣನವರ ಮಹತ್ಕ್ರಾಂತಿಯ ಇತಿಹಾಸವನ್ನು ವಿವರಿಸಿದ ನಂತರ ಉಳಿದ ಸ್ವಾಮಿಗಳು ಹೇಳಲು ಶುರು ಮಾಡಿದರು.
ಡಾ.ಕಲಬುರ್ಗಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಚನ ಚಳವಳಿಯ ಇತಿಹಾಸದ ಮೇಲೆ ಬಸವಣ್ಣನವರ ಕಾಲಘಟ್ಟದ ಮೇಲೆ ತಮ್ಮ ಸಂಶೋಧನೆಯ ಮೂಲಕ ಹೊಸ ಬೆಳಕನ್ನು ಚೆಲ್ಲಿದರು. ಬಸವನಿಗಾಗಿ ಬಲಿದಾನವನ್ನೂ ಮಾಡಿದರು. ಬಸವಣ್ಣನವರು ಕರ್ಮಸಿದ್ಧಾಂತಕ್ಕೆ ಪ್ರತಿಯಾಗಿ ಕಾಯಕ ಸಿದ್ದಾಂತವನ್ನು ಪ್ರತಿಪಾದಿಸಿದರು. ಅದರ ಬಗ್ಗೆ ಇನ್ನೊಮ್ಮೆ ವಿವರಿಸುತ್ತೇನೆ.
ಬಸವಣ್ಣನವರು ಬದುಕಿನುದ್ದಕ್ಕೂ ಸ್ಥಾವರ ಸಂಸ್ಕೃತಿಯನ್ನು ವಿರೋಧಿಸುತ್ತಾ ಬಂದರು. ಆದರೆ ಈಗ ಅವರನ್ನೇ ಸ್ಥಾವರಾಗಿಸುವ ಮಸಲತ್ತುಗಳು ನಡೆದಿವೆ. ಇಂಥ ಸಂಕೀರ್ಣ ಕಾಲಘಟ್ಟದಲ್ಲಿ ಡಾ.ಕಲಬುರ್ಗಿ ಅವರು ಮತ್ತೆ ಮತ್ತೆ ನೆನಪಾಗುತ್ತಾರೆ. ಅವರ ಬಲಿದಾನ ವ್ಯರ್ಥವಾಗದಿರಲಿ. ಬಸವಣ್ಣನವರ ವೈಚಾರಿಕ ಜ್ಯೋತಿ ಎಲ್ಲೆಡೆ ಬೆಳಕನ್ನು ನೀಡಲಿ.
ಡಾ.ಕಲಬುರ್ಗಿ ಅವರನ್ನು ಹತ್ಯೆ ಮಾಡಿದ ಸಿದ್ದಾಂತದ ಪ್ರತಿಪಾದಕರು ಇನ್ನೂ ಆರ್ಭಟಿಸುತ್ತಾರೆ. ವಿಷಾದದ ಸಂಗತಿ ಅಂದರೆ ಬಸವಣ್ಣನವರ ಹೆಸರನ್ನು ಬಂಡವಾಳ ಮಾಡಿಕೊಂಡ ಅನೇಕರಿಗೆ ಈಗ ಕಲಬುರ್ಗಿ ಅವರ ನೆನಪಿಲ್ಲ. ಮನೆ ಮನೆಗಳಲ್ಲಿ ಸತ್ಯ ನಾರಾಯಣ ಪೂಜೆ ಮಾಡಿಸುತ್ತಾ ಲಿಂಗಾಯತ ಧರ್ಮಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಇಂಥವರು ಅಯೋಧ್ಯೆಯ ರಾಮ ಮಂದಿರಕ್ಕೆ ನಿಧಿ ಸಂಗ್ರಹಿಸಿ ಕೊಡುತ್ತಾರೆ.
ಡಾ.ಕಲಬುರ್ಗಿ ಅವರ ವಿದ್ಯಾರ್ಥಿ ನಾನಲ್ಲ. ಆದರೆ ಅವರ ಒಡನಾಟ ನನಗಿತ್ತು. ನಾನು ಸಂಯುಕ್ತ ಕರ್ನಾಟಕದಲ್ಲಿ ಕೆಲಸಕ್ಕೆ ಸೇರಿ ಹುಬ್ಬಳ್ಳಿಗೆ ಬಂದು ನೆಲೆಸಿದಾಗ ನಮ್ಮ ಸಂಬಂಧ ನಿಕಟವಾಯಿತು. ಮಾರ್ಗ-೧ ಎಂಬ ಅವರ ಸಂಶೋಧನ ಗ್ರಂಥ ಬಂದಾಗ ಸಾಂಪ್ರದಾಯವಾದಿಗಳಿಂದ ತೀವ್ರ ವಿರೋಧ ಎದುರಾಯಿತು. ಎಷ್ಟೇ ಒತ್ತಡ ಬಂದರೂ ಕಲಬುರ್ಗಿ ಅವರು ಮಣಿಯಲಿಲ್ಲ.ಆಗ ನಾವೆಲ್ಲ ಅವರ ಬೆಂಬಲಕ್ಕೆ ನಿಂತಿದ್ದೆವು. ಕೊನೆಗೆ ಒತ್ತಡ ಎಷ್ಟು ತೀವ್ರವಾಯಿತೆಂದರೆ ಕಲಬುರ್ಗಿ ಅವರು ರಾಜಿ ಸಂಧಾನಕ್ಕೆ ಒಪ್ಪಿಕೊಳ್ಳಲೇಬೇಕಾಯಿತು. ಅಂತಲೇ ಕಲಬುರ್ಗಿ ಅವರು “ಆಗಾಗ ಭಾರತದಲ್ಲಿ ಸಂಶೋಧಕನೊಬ್ಬ ಶಿಲುಬೆಗೆ ಏರಲೇ ಬೇಕಾಗುತ್ತದೆ” ಎಂದು ಹೇಳುತ್ತಿದ್ದರು.
ಅವರ ಸಂಶೋಧನೆಗೆ ಯಾವುದೇ ಮತ ಧರ್ಮದವರನ್ನು ಕೆರಳಿಸುವ, ಇಲ್ಲವೇ ಪ್ರಚೋದಿಸುವ ಉದ್ದೇಶವಿರಲಿಲ್ಲ. ಸತ್ಯ ನಿಷ್ಠೆಯೊಂದೇ ಅವರ ಸಂಶೋಧನೆಯ ಗುರಿಯಾಗಿತ್ತು. ಅವರು ತಮಗೆ ಸರಿ ಕಂಡದ್ದನ್ನು ಹೇಳಲು ಯಾವ ಮುಲಾಜನ್ನು ನೋಡುತ್ತಿರಲಿಲ್ಲ. ಸಂಶೋಧನೆ ಕ್ಷೇತ್ರದಲ್ಲಿ ಅಂಬೆಗಾಲನ್ನಿಡುವಾಗಲೇ ಪ್ರೊ.ಡಿ.ಎಲ್.ನರಸಿಂಹಾಚಾರ್ ಅವರ ಶಬ್ದಮಣಿದರ್ಪಣದ ಸಂಪಾದನೆಯನ್ನು ಪ್ರಶ್ನಿಸಿದರು. ಇದರ ಬಗ್ಗೆ ನರಸಿಂಹಾಚಾರ್ಯರು ಎಂದೂ ಕಲಬುರ್ಗಿ ಅವರ ಬಗ್ಗೆ ತಪ್ಪು ತಿಳಿದುಕೊಳ್ಳಲಿಲ್ಲ.
ಡಾ.ಕಲಬುರ್ಗಿ ಅವರು ಕನ್ನಡ ಸಾರಸ್ವತಲೋಕಕ್ಕೆ ನೀಡಿದ ಕೊಡುಗೆ ಅಮೂಲ್ಯವಾದುದು. ಭಾಷೆ, ಇತಿಹಾಸ, ನಾಮ ವಿಜ್ಞಾನ, ನಿಘಂಟು, ಹಸ್ತಪ್ರತಿ ಶಾಸ್ತ್ರ, ಶಾಸನ ಶಾಸ್ತ್ರ, ವಚನ ಸಾಹಿತ್ಯ ಹೀಗೆ ಹಲವಾರು ವಿಷಯಗಳ ಬಗ್ಗೆ ಅವರ ಸಾಧನೆ ಅಸಾಮಾನ್ಯವಾದುದು.
ಲಿಂಗಾಯತ ಎಂಬುದು ಕನ್ನಡಿಗರು ಸೃಷ್ಟಿಸಿದ ಮೊದಲ ಧರ್ಮ ಎಂದು ಬಲವಾಗಿ ಪ್ರತಿಪಾದಿಸಿದರು. ಲಿಂಗಾಯತ ಧರ್ಮವು ಉತ್ತರ ಭಾರತದಿಂದ ವಲಸೆ ಬಂದ ನಾಲ್ಕು ಧರ್ಮಗಳ ವಿರುದ್ಧ ಎಲ್ಲ ಸಮುದಾಯಗಳ ಕನ್ನಡಿಗರು ಕಟ್ಟಿಕೊಂಡ ಹೊಸ ಧರ್ಮ ಎಂಬುದನ್ನು ಡಾ.ಕಲಬುರ್ಗಿ ಅವರು ಪುರಾವೆ ಸಹಿತ ಪ್ರತಿಪಾದಿಸುತ್ತ ಬಂದರು. ಕಲಬುರ್ಗಿ ಅವರನ್ನು ಕಳೆದುಕೊಂಡ ಕರ್ನಾಟಕ ಅಂಥ ಮಹಾನ್ ಸಂಶೋಧಕನ ಸ್ಥಾನವನ್ನು ತುಂಬಬೇಕಾದ ಇನ್ನೊಬ್ಬ ಸತ್ಯ ಶೋಧಕನಿಗಾಗಿ ಕಾಯಬೇಕಾಗಿದೆ.
ಡಾ.ಕಲಬುರ್ಗಿಯವರ ಕೆಲವು ಮಹತ್ತರ ವಿಚಾರಗಳು (ಮಾರ್ಗ-ಒಂದರಿಂದ)
ಸರ್ವಕಾಲೀನ ಆದರ್ಶಕ್ಕಿಂತ ಸಮಕಾಲೀನ ಮೌಲ್ಯವನ್ನು ಪ್ರತಿಪಾದಿಸುವಲ್ಲಿ ಒಂದು ಸಾಹಿತ್ಯ ತನ್ನ ಜನತೆಗೆ ತೀರ ಹತ್ತಿರವಾಗುತ್ತದೆ. ಪ್ರಾಚೀನ ಕರ್ನಾಟಕದ ಜೈನ, ಲಿಂಗಾಯತ, ಬ್ರಾಹ್ಮಣ ಸಾಹಿತ್ಯ ಸಮುದಾಯ ಆಯಾ ಜನಾಂಗದ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದರೂ ವಚನ ಸಾಹಿತ್ಯದಲ್ಲಿ ಆ ಕಾರ್ಯ ತುಂಬಾ ತೆರೆದ ಮನಸ್ಸಿನಿಂದ ನಡೆದಿದೆ. ಆದರೆ ಲಿಂಗಾಯತ ಆಂದೋಲನೆಗೆ ಹರಿಹರಾದಿ ಕವಿಗಳ ಮೂಲಕ, ಹಲವು ಜನ ಆಚಾರ್ಯ ಪುರುಷರ ಮೂಲಕ ಶೈವವು ಉತ್ತರಾಧಿಕಾರಿಯಾಗಿ ಬರುವಲ್ಲಿ ಶರಣರ ತತ್ವಶುದ್ಧಿ ಕ್ರಮೇಣ ವ್ಯತ್ಯಾಸವಾಗುತ್ತಾ ನಡೆಯಿತು. ಇನ್ನೊಂದು ಸಂಗತಿಯೆಂದರೆ ವೈಚಾರಿಕ ಕ್ರಾಂತಿಯಾಗಿ ಸೆಲೆಯೊಡೆದು, ಧಾರ್ಮಿಕ ನದಿಯಾಗಿ ಹರಿದು, ಕೊನೆಗೆ ಮತೀಯ ಹೊಂಡವಾಗಿ ಪರಿಣಮಿಸಿದ ‘ಲಿಂಗಾಯತ ಇತಿಹಾಸ’ದ ಈ ಮಜಲುಗಳಿಗೆ ತಕ್ಕಂತೆ, ಮೂಲ ವಚನಗಳನ್ನು ತಿದ್ದುತ್ತ, ಹೊಸವಚನಗಳನ್ನು ಕಟ್ಟಿ ಸೇರಿಸುತ್ತ ಬರಲಾಯಿತು. ವಿಶ್ವಮಾನ್ಯ ಜನತಾಧರ್ಮವೊಂದು ಜಾತಿ ಕೂಪಕ್ಕೆ ಜಾರಿ ಬೀಳಲು ಬೇಕಾಗುವ ಜಾಣಪಾಠಗಳನ್ನು ಕಲಬೆರಕೆ ಮಾಡಲಾಯಿತು. ಈ ಮುತ್ತು ಮೆಣಸಿನ ರಾಶಿಯನ್ನು ಕಣ್ಣ ಮುಂದೆ ಹರಡಿಕೊಂಡು, ಮೌಲ್ಯಗಳನ್ನು ಅನ್ವೇಷಿಸುವಲ್ಲಿ ಕೆಲವು ವಿರೋಧಾಭಾಸಗಳು ಎದ್ದು ತೋರುವ ಸಾಧ್ಯತೆಯಿದೆ. ವಚನ ಸಾಹಿತ್ಯದಲ್ಲಿ ನಿಜ ಮೌಲ್ಯಗಳನ್ನು ಶೋಧಿಸ ಹೊರಟವನು ಈ ಅಪಾಯಕೂಪಗಳ ಕಡೆಗೆ ಆದ್ಯ ಗಮನ ಕೊಡಬೇಕಾಗುತ್ತದೆ.
##### ##### #####
‘ಪಾರಮಾರ್ಥಿಕವಾಗಿ ಮಾಯೆ, ಪ್ರಾಪಂಚಿಕವಾಗಿ ಶೂದ್ರ’ ಎನಿಸಿದ್ದ ಸ್ತ್ರೀ, ‘ಆತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ’ ಎಂಬ ಶರಣರ ನಂಬುಗೆಯಿಂದಾಗಿ ಜೀವನದ ಸರ್ವಕ್ಷೇತ್ರಗಳಲ್ಲಿ ಪುರುಷನ ಜೊತೆ ಜೊತೆ ನಡೆದುಬಂದಳು. “ಕೂಟಕ್ಕೆ ಸತಿಪತಿಯೆಂಬ ನಾಮವಲ್ಲದೆ ಅರಿವಿಂಗೆ ಬೇರೊಂದು ಒಡಲುಂಟೇ” ಎಂದು ಆಯ್ದಕ್ಕಿ ಲಕ್ಕಮ್ಮ ಗಂಡನಿಗೆ ಹಾಕುವ ಪ್ರಶ್ನೆ, ಸ್ತ್ರೀ ಸಮಾಜದ ಒಟ್ಟು ಧೋರಣೆಯನ್ನು ಧ್ವನಿಸುತ್ತದೆ. ಪುರುಷರೇ ಅಕ್ಷರಜ್ಞಾನದಿಂದ ವಂಚಿತರಾಗಿದ್ದ ಆ ಕಾಲದಲ್ಲಿ ನೂರಾರು ಜನ ಸ್ತ್ರೀಯರು, ಅದರಲ್ಲಿಯೂ ದಲಿತ ವರ್ಗದ ಸ್ತ್ರೀಯರು ಸಾಹಿತ್ಯ ನಿರ್ಮಿತಿಯಲ್ಲಿ ತೊಡಗುವುದರ ಮೂಲಕ ಬಹುದೊಡ್ಡ ಪ್ರಸಾರ ಮಾಧ್ಯಮವೊಂದು ವರಿಷ್ಠರ ವಜ್ರಮುಷ್ಠಿಯಿಂದ ಕನಿಷ್ಠ ವರ್ಗದ ಪುರುಷರ ಕೈಗೆ, ಸ್ತ್ರೀಯರ ಕೈಗೂ ಇಳಿದು ಬಂದುದು ತೀವ್ರ ಗಮನಿಸಬೇಕಾದ ಅಂಶವಾಗಿದೆ.
##### ##### #####
ಗುರು, ಭಾರತೀಯ ಸರ್ವದರ್ಶನಗಳು ಒಪ್ಪಿಕೊಂಡ ಅರ್ಥವತ್ತಾದ ತತ್ವ. ಆದರೆ ಕೆಲವು ಮತಗಳಲ್ಲಿ ಭೇದರೂಪದಲ್ಲಿಯೇ ಮುಂದುವರಿಯುವ ಗುರುಶಿಷ್ಯ ಸಂಬಂಧ ಶರಣರಲ್ಲಿ ಅಭೇದರೂಪದಲ್ಲಿ ಪರ್ಯವಸಾನ ಹೊಂದಿರುತ್ತದೆ. ‘ಕಿಚ್ಚಿನಲ್ಲಿ ಕೋಲು ಬೈಚಿಟ್ಟಂತೆ, ದರ್ಪಣಕ್ಕೆ ದರ್ಪಣವ ತೋರಿದಂತೆ’ ಎಂದು ಮುಂತಾಗಿ ವಚನಗಳು ವರ್ಣಿಸುತ್ತವೆ. ಶಿಷ್ಯನನ್ನು ಗುರುವಿನ ಗುಲಾಮಗಿರಿಗೆ ತಳ್ಳದೆ, ದೀಪವನ್ನು ಬೆಳಗಿಸುವ ದೀಪದಂತಿರುವ ಈ ಗುರುವು ಶಿಷ್ಯನಲ್ಲಿ ಗುರುತ್ವವನ್ನು ತುಂಬುವುದರಿಂದ ಲಿಂಗಾಯತ ಧರ್ಮ ‘ಗುರು’ವನ್ನು ಒಂದು ಮೌಲ್ಯವನ್ನಾಗಿ ಸ್ವೀಕರಿಸಿದೆ. ‘ಶಿವಪಥವರಿವೊಡೆ ಗುರುಪಥ ಮೊದಲು’ ಇತ್ಯಾದಿ ವಚನವಾಕ್ಯಗಳು ಈ ಮೌಲ್ಯದ ಮಹತ್ವವನ್ನು ಸ್ಪಷ್ಟಪಡಿಸುತ್ತವೆ. ಹೀಗೆ ಒಂದು ಮೌಲ್ಯವಾಗಿ ನಿಂತು, ಇನ್ನೊಂದು ಮೌಲ್ಯವಾದ ‘ಲಿಂಗೋಪಾಸನೆ’ಯ ಮೂಲಕ ಒಳಗೆ ನೋಡಿಕೊಳ್ಳುವುದನ್ನು ಶಿಷ್ಯನಿಗೆ ಕಲಿಸುವ ಹೊಣೆ, ಈತನದು. ಶಿಷ್ಯನ ಸ್ಥೂಲ ತನುವಿನ ಮೇಲೆ ಇಷ್ಟಲಿಂಗವನ್ನು ಕರುಣಿಸಿ, ಇದು ನಿನ್ನಲ್ಲಿ ಅಡಗಿರುವ ಶಿವಶಕ್ತಿಯ ವ್ಯಕ್ತರೂಪವೆಂದು ಮನಗಾಣಿಸಿ ಕೊಟ್ಟು, ಪಂಚಮ ಪುರುಷಾರ್ಥವಾದ ಭಕ್ತಿಯ ಮೂಲಕ ಅದರ ಸಾಧನೆಯಲ್ಲಿ ಮುನ್ನಡೆಯಲು ಬೆರಳು ತೋರಿಸುವ ಮಾರ್ಗದರ್ಶನ ಮೌಲ್ಯ, ಈ ಗುರು.
##### ##### #####
ದಾಸೋಹ ಪ್ರಸಂಗದಲ್ಲಿ ಗಮನಿಸಬೇಕಾದ ಇನ್ನೊಂದು ಪದ ಕಾಯಕ. ಜೈನ ಅಪರಿಗ್ರಹ, ವೈದಿಕ ನಿಷ್ಕಾಮ ಕರ್ಮ, ಕ್ರೈಸ್ತ ಕಾಲಿಂಗಗಳಿಂದ ಭಿನ್ನವೂ ಅರ್ಥಪೂರ್ಣವೂ ಆಗಿದೆ, ಈ ಕಾಯಕ ಮೌಲ್ಯ. ಲಿಂಗಾಯತದ ಇತರೆ ಮೌಲ್ಯಗಳಾದ ಗುರು-ಲಿಂಗ-ಜಂಗಮಗಳಿಗೂ ಕಾಯಕ ಕಡ್ಡಾಯ. “ಮಾಡುವ ಮಾಟದಿಂದ ಮತ್ತೊಂದನರಿಯಬೇಕು” ಎಂಬ ಭಾವದಿಂದಾಗಿ ಕೈಕೊಳ್ಳುವ ಕಾರ್ಯಗಳೆಲ್ಲ ಪೂಜೆಯಾಗಿ ಪರಿಣಮಿಸಿ ಕ್ರಿಯಾ ತಾರತಮ್ಯದಿಂದ ಮುಕ್ತವಾದವು. “ಕಾಯಕದಲ್ಲಿ ನಿರತನಾದರೆ ಗುರು ದರ್ಶನವಾದರೂ ಮರೆಯಬೇಕು. ಲಿಂಗಪೂಜೆಯಾದರೂ ಮರೆಯಬೇಕು. ಜಂಗಮ ಮುಂದಿದ್ದರೂ ಹಂಗು ಹರಿಯಬೇಕು” ಎನ್ನುವಲ್ಲಿ ಕಾಯಕ ಮೌಲ್ಯವು ಗುರು ಮೌಲ್ಯ, ಲಿಂಗ ಮೌಲ್ಯ, ಜಂಗಮ ಮೌಲ್ಯಗಳನ್ನು ಒಳಗೊಂಡೂ ಮೀರಿ ನಿಲ್ಲುತ್ತದೆ.
ಇಷ್ಟಲಿಂಗಪೂಜೆ ವರ್ಣಬೇಧವನ್ನು ಹೊಡೆದು ಹಾಕಿ ಉಪಾಸನೆಗೆ ಶಕ್ತಿಯುತ ಸಾಧನವಾದರೆ, ಈ ಕಾಯಕ ನಿಷ್ಠೆ ವರ್ಗಬೇಧವನ್ನು ಹೊಡೆದು ಹಾಕಿ ಕ್ರಿಯಾಶೀಲತೆಗೆ ದೈವೀ ಮಾಧ್ಯಮವಾದುದು. ಅಂದರೆ ಅಲ್ಲಿ ಕಾಯವೇ ಕೈಲಾಸವಾದರೆ, ಇಲ್ಲಿ ಕಾಯಕವೇ ಕೈಲಾಸವಾದುದು ಅಪೂರ್ವ ಅಂಶವೇ ಸರಿ. ಈ ವಿವರಗಳನ್ನು ಪರಿಭಾವಿಸಿದರೆ ಶಿವಶರಣರು ಕಟ್ಟಬಯಸಿದ ಸಮಾಜ ವರ್ಣ ವ್ಯವಸ್ಥೆಯದಲ್ಲ, ವರ್ಗ ವ್ಯವಸ್ಥೆಯದಲ್ಲ, ಕಾಯಕ ವ್ಯವಸ್ಥೆಯದೆಂದು ಸ್ಪಷ್ಟವಾಗುತ್ತದೆ.
##### ##### #####
ಲಿಂಗಾಯತನಾಗುವ ಪೂರ್ವದಲ್ಲಿ ಸಿದ್ಧರಾಮನೂ ಬಹುಶಃ ನಕುಲೀಶ ಪಾಶುಪತನಾಗಿದ್ದು, ಆ ಅವಧಿಯಲ್ಲೇ ಅವನು ಕೆಲವು ವಚನಗಳನ್ನು ಬರೆದಿರುವ ಸಾಧ್ಯತೆ ಇದೆ. ಅವನ ಬಹುಪಾಲು ವಚನಗಳು ಜೇಡರ ದಾಸೀಮಯ್ಯನ ವಚನಗಳಂತೆ ಪದ್ಯಗಂಧಿಯಾಗಿರುವುದನ್ನು ನೋಡಿದರೆ ಇದು ನಕುಲೀಶ ಪಾಶುಪತದ ‘ವಚನಶಿಲ್ಪ’ವೆಂದೂ, ಮುಂದೆ ಇದು ಬಸವ ಯುಗದಲ್ಲಿ ಗದ್ಯಗಂಧಿಗೆ ತಿರುಗಿತೆಂದೂ ಹೇಳಬಹುದು. ಬಸವಣ್ಣನವರು 16ನೆಯ ವಯಸ್ಸಿನಲ್ಲಿ ಜನ್ನಿವಾರ ಹರಿದು ಹಾಕುವ ಪೂರ್ವದಲ್ಲಿ ನಕುಲೀಶ ಪಾಶುಪತ (ಲಿಂಗೀ ಬ್ರಾಹ್ಮಣ)ನಾಗಿರಬೇಕೆಂದು ಶ್ರೀ ಟಿ.ಎನ್.ಮಲ್ಲಪ್ಪ ಹೇಳಿದರೆ, “ಬೆಡಗಿನ ಕೀಲ ಕಳೆದು ಕೆಡೆದ ಬಳಿಕ ಒಡಲನುರಿಕೊಂಬುದು” ಎಂಬ ವಚನದಲ್ಲಿ ಬರುವ ಲಿಂಗಾಯತದಲ್ಲದ ಮರಣೋತ್ತರ ಅಗ್ನಿಸಂಸ್ಕಾರವನ್ನು ಗಮನಿಸಿ ಲಿಂಗಾಯತದ ಪೂರ್ವದಲ್ಲಿಯೇ ಬಸವಣ್ಣನವರು ವಚನ ರಚಿಸುತ್ತಿರಬೇಕೆಂದು ಡಾ.ಹಳಕಟ್ಟಿ ಊಹಿಸುತ್ತಾರೆ. ಈ ಕಾರಣದಿಂದಲೇ ಬಸವಣ್ಣನವರ ಮತ್ತು ಇತರ ಶರಣರ ವಚನಗಳಲ್ಲಿ ಕೆಲವೊಮ್ಮೆ ಪರಸ್ಪರ ವಿರೋಧ ಕಂಡುಬರುತ್ತಿರಬೇಕು. ಅಂದರೆ ಈ ಪರಸ್ಪರ ವಿರೋಧಕ್ಕೆ ಕೆಲವು ಶೈವ ಮಾರ್ಗದ, ಇನ್ನು ಕೆಲವು ಲಿಂಗಾಯತ ಮಾರ್ಗದ ವಚನಗಳಾಗಿರುವುದು. ಒಬ್ಬನೇ ತಾನು ಶೈವನಾಗಿರುವಾಗ ಕೆಲವು, ಲಿಂಗಾಯತನಾದಾಗ ಕೆಲವು ವಚನಗಳನ್ನು ಸೃಷ್ಟಿಸಿದುದು ಕಾರಣವೆಂದು ಹೇಳಬಹುದು…
##### ##### #####
ಬದ್ಧವಾಗಿರುವುದು ಚರಿತ್ರೆಯ (close) ಲಕ್ಷಣ, ಮುಕ್ತವಾಗಿರುವುದು (open) ಪುರಾಣದ ಲಕ್ಷಣ. ಹೀಗಾಗಿ ಪುರಾಣವೆಂಬುದು ಬರೆದು ಮುಗಿಸಿದ ಸಾಹಿತ್ಯ ಪ್ರಕಾರವಲ್ಲ. ಕಾಲಕಾಲಕ್ಕೆ ಹೊಸ ಹೊಸ ವಿಷಯಗಳನ್ನು ಬರೆದು ಸೇರಿಸಲಿಕ್ಕೆ ಅವಕಾಶವಿರುವ ಸಾಹಿತ್ಯ ಪ್ರಕಾರ. ಈ ಕಾರಣದಿಂದಲೇ ಪಾಲ್ಕುರಿಕೆ ಸೋಮನಾಥನ ತೆಲುಗು ಬಸವ ಪುರಾಣವನ್ನು ಕನ್ನಡಕ್ಕೆ ಅನುವಾದಿಸುವ ಸಂದರ್ಭದಲ್ಲಿ ಮಾಯಾದೇವಿಯ ಪ್ರಸಂಗ, ಶಿವಯೋಗ ನಿದ್ರಾಮುದ್ರೆ, ಬಸವನ ಪ್ರಾಣದಾನ, ತಂಗಟೂರ ಮಾರಿದೇವ, ನುಲಿಯ ಚಂದಯ್ಯ, ಕೊಂಡಗುಳಿ ಕೇಶಿರಾಜ, ಮೇದರ ಕೇತಯ್ಯ, ದಸರಯ್ಯಗಳ ಕಥೆಯನ್ನೂ ಕಜ್ಜಾಯ ಪವಾಡಗಳನ್ನೂ ಭೀಮಕವಿ ಹೊಸದಾಗಿ ಸೇರಿಸಿದ (ಗುರು ಭಕ್ತಾಂಡಾರಿ ಕಥೆ ಮೊದಲು ಮಾಡಿ 10 ಕಥೆಗಳನ್ನು ಆಮೇಲೆ ಯಾರೋ ಸೇರಿಸಿರುವ ಸಾಧ್ಯತೆ ಇದೆ). ಹೀಗೆ ಬೆಳೆದು ನಿಂತ ಭೀಮಕವಿಯ ಬಸವ ಪುರಾಣ ಕಳೆದ 600 ವರ್ಷಗಳಿಂದ ಲಿಂಗಾಯತರ ಮೇಲೆ ಬಹುಮುಖ ಪ್ರಭಾವ ಬೀರುತ್ತ ಬಂದಿದೆ. ಈ ಪ್ರಭಾವವನ್ನು 1.ಕಾವ್ಯ ಕಥಾಕೋಶಗಳು, 2. ಹಸ್ತಪ್ರತಿ ಲೇಖನ, 3. ಗಮಕ ಪ್ರವಚನ ಎಂದು ಮೂರು ನಿಟ್ಟಿನಲ್ಲಿ ಗುರುತಿಸಬಹುದು.
Comments 8
Basavaraj Bengaluru
Sep 9, 2021ಕಲಬುರ್ಗಿ ಸರ್ ಅವರ ವಿದ್ವತ್ತು ಅಪಾರವಾಗಿತ್ತು. ಅವರನ್ನು ಕಳೆದುಕೊಂಡ ಮೇಲೆ ನಮಗೆ ಅವರ ಮಹತ್ವ ಇನ್ನಷ್ಟು ಗೊತ್ತಾಗುತ್ತಾ ಬಂದಿದೆ. ತುಂಬಾ ನೋವಾಗುತ್ತದೆ.
Veeranna Madiwalar
Sep 11, 2021ಕಲಬುರ್ಗಿಯವರನ್ನು ಕಳೆದುಕೊಂಡು ಬಡವಾದದ್ದು ಕೇವಲ ಲಿಂಗಾಯತ ಸಮಾಜವಲ್ಲ, ಇಡೀ ಸಾರಸ್ವತ ಲೋಕ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಜಕ್ಕೂ ನಾವು ದುರ್ದೈವಿಗಳು.
Gangadhara Murthy
Sep 13, 2021ಕಲಬುರ್ಗಿ ಸರ್ ಅವರ ಹತ್ಯೆಗೆ ನ್ಯಾಯ ಸಿಗದೇ ಇರುವುದು ಬಸವಣ್ಣನವರಿಗೆ ಮಾಡಿದ ಅವಮಾನ ಎನ್ನುವುದು ನನ್ನ ಗಟ್ಟಿಯಾದ ಮಾತು. ಅವರ ಮೇಲಿನ ಯಾವುದೇ ಬರಹ ಓದುವಾಗಲೂ, ಭಾಷಣ ಕೇಳುವಾಗಲೂ ನನ್ನ ಕಣ್ಣುಗಳಲ್ಲಿ ತಂತಾನೇ ನೀರು ಹರಿಯುತ್ತದೆ.
Nagaraj G.N
Sep 15, 2021ದಿಟ್ಟ ಸಂಶೋಧನಾಕಾರರು ಹುಟ್ಟುವುದು ಆ ನಾಡಿನ ಪುಣ್ಯ. ಲೇಖನದಲ್ಲಿ ಕೊಟ್ಟ ಕಲ್ಬುರ್ಗಿ ಶರಣರ ವಿಚಾರಗಳ ಕೊಂಡಿಗಳು ಎಷ್ಟೊಂದು ಗುಣಾತ್ಮಕವಾಗಿವೆ. ಅವರಿನ್ನೂ ಇರಬೇಕಿತ್ತು.
Puttegowda
Sep 18, 2021ಪ್ರೊ.ಡಿ.ಎಲ್.ನರಸಿಂಹಾಚಾರ್ ಅವರ ಶಬ್ದಮಣಿದರ್ಪಣದ ಸಂಪಾದನೆಯನ್ನು ಡಾ.ಕಲಬುರ್ಗಿಯವರು ಪ್ರಶ್ನಿಸಿದ್ದರು ಎನ್ನುವ ವಿಷಯ ನನಗೆ ತಿಳಿದಿರಲೇ ಇಲ್ಲ. ಉತ್ತಮ ಮಾಹಿತಿಗಾಗಿ ಧನ್ಯವಾದಗಳು.
Sharada A.M
Sep 18, 2021ಲಿಂಗಾಯತ ಸಮಾಜ ಕಲಬುರ್ಗಿಯವರಿಗೆ ನಿಜವಾದ ನೆನಹುಗಳನ್ನು, ಕೃತಜ್ಞತೆಗಳನ್ನು ಅರ್ಪಿಸಬೇಕೆಂದರೆ ಮೊದಲು ವಚನಶಾಸ್ತ್ರಕ್ಕೆ ಹೊಂದದ ತನ್ನ ಮೌಢ್ಯ ಆಚರಣೆಗಳಿಂದ ಹೊರಬರಬೇಕು ಎನ್ನುವ ನಿಮ್ಮ ಮಾತು ಅಕ್ಷರಶಃ ನಿಜ ಸರ್.
Ganesh A.P
Sep 23, 2021ಕಲಬುರ್ಗಿಯವರ ವಿಚಾರಗಳು ಮಹತ್ತರವಾದವುಗಳು ಅದರಲ್ಲಿ ಯಾವ ಸಂದೇಹವೂ ಇಲ್ಲ. ಅವರ ಹಂತಕರ ವಿಚಾರಣೆ ಎಲ್ಲಿಗೆ ಬಂತು? ಸರ್ಕಾರ ಯಾಕೆ ಮೌನ ತಾಳಿದೆ? ತನಿಖೆಯ ಪ್ರಗತಿಯ ಕುರಿತು ಲೇಖನದಲ್ಲಿ ತಿಳಿಸಿದ್ದರೆ ಈಗ ಹೆಚ್ಚು ಪ್ರಸ್ತುತವಾಗುತ್ತಿತ್ತು.
ಮಹದೇವಸ್ವಾಮಿ ಗೋಕಾಕ್
Sep 28, 2021ನಿಮ್ಮ ಮಾತು ನಿಜ, ಲಿಂಗಾಯತರು ತಮ್ಮದಲ್ಲದ ಏನೇನೋ ಆಚರಣೆಗಳಲ್ಲಿ ತೊಡಗಿಕೊಂಡು ಕುಲಗೆಟ್ಟು ಹೋಗಿದ್ದಾರೆ. ಇಂಥವರಿಗೆ ಕಲಬುರ್ಗಿಯವರ ಕಳಕಳಿ, ಬರಹ, ಅದಕ್ಕಾಗಿ ಅವರು ಕೊಟ್ಟ ಬಲಿದಾನ ಒಂದೂ ಅರ್ಥವಾಗಲಾರವು. ಲಿಂಗಾಯತ ಧರ್ಮ ಶೋಚನೀಯ ಸ್ಥಿತಿಯಲ್ಲಿದೆ.