ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ಫ್ರಿಜೋ ಕಾಪ್ರ- ಆಸ್ಟ್ರಿಯಾ ಮೂಲದ ಅಮೆರಿಕದ ಭೌತಶಾಸ್ತ್ರಜ್ಞ. ಕಣ ಭೌತವಿಜ್ಞಾನದಲ್ಲಿ ಅವರದು ಗಮನಾರ್ಹ ಸಾಧನೆ. ‘ದಿ ತಾವೋ ಆಫ್ ಫಿಸಿಕ್ಸ್’ ಸೇರಿದಂತೆ ಮಹತ್ತರ ಕೃತಿಗಳನ್ನು ರಚಿಸಿರುವ ಕಾಪ್ರ ಅವರಿಗೆ ದರ್ಶನಶಾಸ್ತ್ರಗಳಲ್ಲಿ ವಿಶೇಷ ಆಸಕ್ತಿ. ಅವರ ದಿ ತಾವೋ ಫಿಸಿಕ್ಸ್- 23 ಭಾಷೆಗಳಿಗೆ ಅನುವಾದಗೊಂಡ 43 ಬಾರಿ ಮುದ್ರಣ ಕಂಡ ಕೃತಿ. ಈ ಹೆಸರಾಂತ ಪುಸ್ತಕದ ಕಿರು ಪರಿಚಯ ಪ್ರಸ್ತುತ ಲೇಖನ. ದಿ ತಾವೋ ಆಫ್ ಫಿಸಿಕ್ಸ್ ಎಂದರೆ ಭೌತವಿಜ್ಞಾನದ ಹಾದಿ ಎಂದು ಸರಳವಾಗಿ ಹೇಳಬಹುದು. ಆಧುನಿಕ ಭೌತವಿಜ್ಞಾನ ಮತ್ತು ಪೌರ್ವಾತ್ಯ ದಾರ್ಶನಿಕತೆಗಳ ನಡುವಿನ ಸಾಮ್ಯಗಳ ಪರಿಶೋಧನೆ ಇಲ್ಲಿದೆ. ಆಧುನಿಕ ಭೌತವಿಜ್ಞಾನ ಎಂದರೆ ಮುಖ್ಯವಾಗಿ 20ನೆ ಶತಮಾನದಲ್ಲಿ ಪ್ರಕಟಗೊಂಡ ಆಲ್ಬರ್ಟ್ ಐನ್ಸ್ಟೈನರ ಸಾಪೇಕ್ಷತಾ ಸಿದ್ಧಾಂತ ಮತ್ತು ಪ್ಲಾಂಕ್, ನೀಲ್ಸ್ ಬೋರ್ ಹೈಸನ್ಬರ್ಗ್, ಸ್ಕ್ರಾಡಿಂಜರ್, ಡಿರಾಕ್ ಮುಂತಾದವರು ಕೊಟ್ಟ ಕ್ವಾಂಟಂ ಸಿದ್ಧಾಂತಗಳಿಂದ ರೂಪಿತವಾದದ್ದು. ಪೌರ್ವಾತ್ಯ ದರ್ಶನಗಳೆಂದರೆ ಬೌದ್ಧ, ಝೆನ್, ಹಿಂದೂ (ಪ್ರಮುಖವಾಗಿ ಶೈವ) ಮತ್ತು ತಾವೋ ದರ್ಶನಗಳು.
ಈ ಕೃತಿಯಲ್ಲಿ ಆಧುನಿಕ ಭೌತವಿಜ್ಞಾನ ಮತ್ತು ಪೂರ್ವ ದರ್ಶನಗಳ ನಡುವಿರುವ ಸಂಬಂಧಗಳನ್ನು ಕಾಪ್ರ ಅಧಿಕಾರಯುತವಾಗಿಯೂ ವಿವರವಾಗಿಯೂ ಪರಿಶೋಧಿಸಿದ್ದಾರೆ. ಭೌತವಿಜ್ಞಾನದ ಲೌಕಿಕ ದೃಷ್ಟಿಕೋನ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳ ನಡುವೆ ಇರುವ ಆಳವಾದ ಸಾಮರಸ್ಯದ ಬಗೆಗೆ ಕಾಪ್ರ ಹೊಸ ಅರಿವು ಮೂಡಿಸಿದ್ದಾರೆ.
“ಬೇಸಿಗೆಯ ಮಧ್ಯಾಹ್ನದಲ್ಲೊಮ್ಮೆ ಸಮುದ್ರ ತೀರದಲ್ಲಿ ಸುರುಳಿಯಾಗಿ ಅಬ್ಬರಿಸಿ ಬರುತ್ತಿದ್ದ ಅಲೆಗಳನ್ನು ನೋಡುತ್ತ ಜೊತೆಗೆ ಲಯಬದ್ಧವಾಗಿ ಸಾಗಿದ್ದ ಎದೆಬಡಿತವನ್ನು ಅನುಭವಿಸುತ್ತ ಕುಳಿತಿದ್ದ ನನಗೆ ಇದ್ದಕ್ಕಿದ್ದಂತೆ ಇಡೀ ಸೃಷ್ಟಿಯೇ ಒಂದು ಅದ್ಭುತ ಬ್ರಹ್ಮಾಂಡ ನರ್ತನಗೈಯುತ್ತಿದ್ದಂತೆ ಭಾಸವಾಯಿತು. ಸುತ್ತಲಿನ ಜಡ ಚೇತನಗಳಲ್ಲಿ ಕಂಪಿಸುತ್ತಿರುವ ಅಣು ಪರಮಾಣುಗಳು ಸಂಲಗ್ನಗೊಂಡು ಸೃಷ್ಟಿ ಲಯ ಕಾರ್ಯಗಳಲ್ಲಿ ತೊಡಗಿರುವ, ವಿಶ್ವದ ಕಿರಣಗಳು ವಾಯುಮಂಡಲದಲ್ಲಿ ಸಂಘಟಿಸಿ ನವನವೀನ ಕಣಸೃಷ್ಟಿಯೊಡನೆ ಅವಿಚ್ಛಿನ್ನವಾಗಿ ಭೂಮಿಯನ್ನು ಅಪ್ಪಳಿಸುವ ಕ್ರಿಯೆಗಳೆಲ್ಲವೂ ಭೌತವಿಜ್ಞಾನಿಯಾದ ನನಗೆ ಅಂಕಿ ಅಂಶ ನಕ್ಷೆ ಚಿತ್ತಾರಗಳ ಮೂಲಕ ಈ ಮೊದಲೇ ಪರಿಚಯವಾಗಿತ್ತಾದರೂ ಸಮುದ್ರತೀರದಲ್ಲಿ ಕುಳಿತಿದ್ದ ಆ ಕ್ಷಣದಲ್ಲಿ ಮಾತ್ರ ಬಾಹ್ಯಾಕಾಶದಿಂದ ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿದ್ದ ಚೈತನ್ಯವು ವಸ್ತು ಸೃಷ್ಟಿ ಲಯ ಕ್ರಿಯೆಯನ್ನು ಲಯಬದ್ಧವಾಗಿ ನಡೆಸುತ್ತ ನನ್ನೊಳಗಿನ ಕಣಗಳನ್ನೂ ಸೇರಿಸಿಕೊಂಡು ಒಂದು ಮಹಾನರ್ತನದಲ್ಲಿ ತೊಡಗಿದ್ದಂತೆ ಭಾಸವಾಯಿತು. ಇದೇ ಆ ಶಿವತಾಂಡವ ನೃತ್ಯವೆಂದು ನನಗೆ ಅರಿವಾದುದಕ್ಕೆ ಆ ಕ್ಷಣ ಸಾಕ್ಷಿಯಾಯಿತು. ಕೃತಿ ಬರೆಯಲು ಈ ಸುಂದರ ಅನುಭವವೇ ಪ್ರೇರಣೆಯಾಯಿತು” ಎಂದು ಕಾಪ್ರ ಹೇಳುತ್ತಾರೆ. “ನಮ್ಮ ಚಿಂತನೆಯ ಇತಿಹಾಸವನ್ನು ಗಮನಿಸಿದರೆ ವಿಭಿನ್ನ ನೆಲೆಗಳ ಚಿಂತನಾಕ್ರಮಗಳು ಸಂಧಿಸಿದಾಗಲೆಲ್ಲಾ ಫಲಪ್ರದ ಬೆಳವಣಿಗೆಗಳಾಗಿವೆ. ಈ ನೆಲೆಗಳು ಬೇರೆ ಬೇರೆ ಕಾಲಘಟ್ಟ, ಸಂಸ್ಕೃತಿ ಅಥವಾ ಆಧ್ಯಾತ್ಮ ಪರಂಪರೆಗಳಾಗಿರಬಹುದು” ಎನ್ನುವ ಕ್ವಾಂಟಂ ಭೌತವಿಜ್ಞಾನದ ಪ್ರವರ್ತಕರಲ್ಲಿ ಒಬ್ಬರಾದ ವರ್ನರ್ ಹೈಸನ್ಬರ್ಗ್ರ ಹೇಳಿಕೆಯನ್ನು ಕಾಪ್ರ ತಮ್ಮ ವಿಚಾರಸರಣಿ ಮಂಡಿಸಲು ಆಧಾರವಾಗಿಟ್ಟುಕೊಂಡು ಮುನ್ನಡೆಯುತ್ತಾರೆ. ಇಡೀ ಕೃತಿಯಲ್ಲಿ ತಮ್ಮ ನಿಲುವುಗಳ ಸಮರ್ಥನೆಗೆ ಆಧುನಿಕ ಭೌತವಿಜ್ಞಾನಿಗಳ ಹಾಗೆಯೇ ದಾರ್ಶನಿಕರ ಹೇಳಿಕೆಗಳನ್ನು ಯಥೇಚ್ಛವಾಗಿ ಬಳಸಿದ್ದಾರೆ. ಸ್ವತಃ ಭೌತವಿಜ್ಞಾನಿಯಾಗಿರುವ ಕಾಪ್ರ ಆಧುನಿಕ ಭೌತವಿಜ್ಞಾನದ ಸ್ವರೂಪವನ್ನು ತಿಳಿಸುವಾಗ ಈ ಕ್ಷೇತ್ರದಲ್ಲಿನ ಹಿರಿಯ ವಿಜ್ಞಾನಿಗಳ ಹೇಳಿಕೆಗಳ ಬೆಳಕಿನಲ್ಲಿ ತಮ್ಮ ನಿರ್ಣಯಗಳನ್ನು ಮಂಡಿಸುತ್ತಾರೆ. ದರ್ಶನಗಳ ಸಾರವನ್ನು ಆಧುನಿಕ ಭೌತವಿಜ್ಞಾನದ ಜ್ಞಾನದೊಡನೆ ತಾಳೆಹಾಕುತ್ತಾ ಸಾಗುತ್ತಾರೆ.
ಆಧುನಿಕ ಭೌತವಿಜ್ಞಾನ ತನ್ನ ಆವಿಷ್ಕಾರಗಳ ಮೂಲಕ ನಮ್ಮ ಬದುಕಿಗೆ ಪೂರಕವಾಗಿಯೂ ಮಾರಕವಾಗಿಯೂ ಬದಲಾವಣೆಗಳನ್ನು ತಂದಿದೆ. ತಂತ್ರಜ್ಞಾನದ ಅಳವಡಿಕೆಯಿಂದಾಚೆಗೂ ದಾಟಿ ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಹೀಗೆ ಎಲ್ಲ ಕ್ಷೇತ್ರಗಳನ್ನೂ ಆವರಿಸಿ ಪ್ರಭಾವ ಬೀರಿದೆ. ನ್ಯೂಟನ್ ಕಾಲಘಟ್ಟದಿಂದ 20ನೆಯ ಶತಮಾನದವರೆಗೂ ನಮಗಿದ್ದ ವಿಶ್ವದ ಬಗೆಗಿನ ಹಾಗೂ ವಿಶ್ವದೊಡನೆ ನಮಗಿದ್ದ ಸಂಬಂಧದ ಬಗೆಗಿನ ಮೂಲ ತತ್ವಗಳಲ್ಲೂ ವಿಚಾರಗಳಲ್ಲೂ ಆಮೂಲಾಗ್ರ ಬದಲಾವಣೆಗಳಾಗಿವೆ. ಆಧುನಿಕ ಭೌತವಿಜ್ಞಾನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಪೌರ್ವಾತ್ಯ ದರ್ಶನಗಳು ವಿಶ್ವದ ಬಗ್ಗೆ ತಾಳಿರುವ ನಿಲುವುಗಳನ್ನೇ ಹೋಲುವಷ್ಟು ಸಮೀಪಕ್ಕೆ ಭೌತವಿಜ್ಞಾನ ಕರೆದೊಯ್ಯುತ್ತದೆ ಎನ್ನುವುದು ಕಾಪ್ರರ ನಿಲುವು. ಪರಮಾಣುಗಳ ಬಗೆಗಿನ ಸಂಶೋಧನೆಯಲ್ಲಿ ಕಂಡುಕೊಂಡ ವಿಚಾರಗಳು, ವಿಜ್ಞಾನಕ್ಕೆ ಹೊಸವಿರಬಹುದು. ಆದರೆ ಬೌದ್ಧ ಮತ್ತು ಶೈವರಲ್ಲಿ ಇವು ಬಹಳ ಹಿಂದಿನಿಂದಲೇ ಪ್ರಚಲಿತವಾಗಿವೆ ಎಂಬ ಓಪನ್ ಹೈಮರ್ರ ಅಭಿಪ್ರಾಯ ಹಾಗೂ ಭೌತಿಕ ಕ್ರಿಯೆಯೊಂದರ ನೋಡುಗನೂ ಕ್ರಿಯೆಯ ಭಾಗವೇ ಆಗುತ್ತಾನೆನ್ನುವ ಕ್ವಾಂಟಂ ಸಿದ್ಧಾಂತದ ನಿಲುವು ಬುದ್ಧ ಮುಂತಾದವರು ನಮ್ಮೆಲ್ಲ ಇರುವಿಕೆಯ ನಾಟಕದಲ್ಲಿ ನೋಡುಗರೂ ಪಾತ್ರಗಳೂ ನಾವೇ ಎನ್ನುವ ನಿಲುವಿಗೆ ಸಾಮ್ಯಹೊಂದಿದೆ ಎಂಬ ನೀಲ್ಸ್ ಬೋರ್ ಕಂಡುಕೊಂಡ ಅಂಶ ಕಾಪ್ರಾನ ಹೇಳಿಕೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಕೇವಲ ಸಾಮ್ಯತೆಯ ನೆಲೆಯಲ್ಲಿ ನಿಲ್ಲದೆ ಇಂತಹ ದೃಷ್ಟಿಕೋನ ಫಲಪ್ರದವೂ ಆಗುವ ಸಾಧ್ಯತೆಯಿದೆ ಎನ್ನುವುದಕ್ಕೆ ಸಾಕ್ಷಿಯಾಗಿ 1950ರ ನಂತರ ಜಪಾನ್ ಆಧುನಿಕ ಭೌತವಿಜ್ಞಾನದಲ್ಲಿ ಅಸಾಧಾರಣ ಕೊಡುಗೆ ಕೊಟ್ಟಿರುವುದನ್ನು ವರ್ನರ್ ಹೈಸನ್ಬರ್ಗ್ ಗುರುತಿಸಿ ಈ ಪ್ರಗತಿಗೆ ಪೌರ್ವಾತ್ಯ ದರ್ಶನಗಳ ವಿಚಾರ ಪರಂಪರೆ ಮತ್ತು ಕ್ವಾಂಟಂ ವಿಜ್ಞಾನದ ತಾತ್ವಿಕ ಅಂಶಗಳ ನಡುವೆ ನಿಶ್ಚಿತಸಂಬಂಧವಿರುವುದೇ ಕಾರಣ ಎಂದಿದ್ದಾರೆ.
ಎರಡು ವಿಭಿನ್ನ ಜ್ಞಾನಗಳು
ಸಾಮ್ಯಗಳನ್ನು ಗುರುತಿಸುವುದಕ್ಕೆ ಮುನ್ನ ನಾವು ಹೋಲಿಕೆ ಮಾಡುತ್ತಿರುವುದಾದರೂ ಏನನ್ನು ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಇದಕ್ಕೆ ಉತ್ತರ ಇವೆರಡರಲ್ಲಿರುವ ಜ್ಞಾನಗಳನ್ನು ಹೋಲಿಸಬೇಕಾಗಿದೆ. ಒಂದು ಖಚಿತ ವಿಜ್ಞಾನ, ಅಂದರೆ ಪ್ರ್ರಮಾಣಿಸಿ ಪಡೆದದ್ದು, ಆಧುನಿಕ ಗಣಿತದ ಉನ್ನತ ಭಾಷೆಯಲ್ಲಿ ನಿರೂಪಿತವಾದದ್ದು (Universal, logical). ಇನ್ನೊಂದು ಧ್ಯಾನಾಧಾರಿತ ಅಂದರೆ ಭಾಷೆಯ ಮೂಲಕ ಸಂವಹಿಸಲು ಸಾಧ್ಯವಾಗದ ಒಳನೋಟಗಳಿಂದ ಕೂಡಿದ್ದು. Poetry and Science ಎಲ್ಲಿಯ ಹೋಲಿಕೆ ಎಂದು ಅನ್ನಿಸಿದರೂ ಇವೆರಡೂ ಕ್ಷೇತ್ರಗಳೊಳಗೆ ಸಮರ್ಪಿಸಿಕೊಂಡು ಇಲ್ಲಿನ ಜ್ಞಾನಗಳನ್ನು ತಮ್ಮದಾಗಿಸಿಕೊಂಡ ವಿಜ್ಞಾನಿಗಳು ಮತ್ತು ದಾರ್ಶನಿಕರು ಆ ಜ್ಞಾನಗಳನ್ನು ಅವರವರ ಅನುಭವ- ಅನುಭಾವಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಅವುಗಳನ್ನು ಹೋಲಿಕೆ ಮಾಡಿದರೆ ಆ ಜ್ಞಾನಗಳನ್ನು ಹೋಲಿಸಿ ನೋಡಿದಂತೆಯೇ ಆಗುವುದೆನ್ನುವ ಕಾಪ್ರ ಅದಕ್ಕೆ ಸೂಕ್ತ ಚೌಕಟ್ಟನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಜ್ಞಾನವೆಂದರೆ ಯಾವ ತೆರನಾದದ್ದು, ಬುದ್ಧ ಹೇಳುವ ಜ್ಞಾನ ಆಕ್ಸಫರ್ಡನ ವಿಜ್ಞಾನಿ ಹೇಳುವ ಜ್ಞಾನ ಎರಡೂ ಒಂದೇ ಏನು? ಎನ್ನುತ್ತ ಮಾನವ ಚಿಂತನೆಯ ಚಾರಿತ್ರಿಕ ಬೆಳವಣಿಗೆಯತ್ತ ಹೊರಳುತ್ತಾರೆ. ವೈಚಾರಿಕ ಅಥವಾ ತಾರ್ಕಿಕ ಜ್ಞಾನ ಒಂದಿದೆ ಹಾಗೆಯೇ ಧ್ಯಾನೋತ್ಪನ್ನ ಜ್ಞಾನ ಇನ್ನೊಂದಿದೆ. ಇದನ್ನೇ ಬೌದ್ಧರು ಸಾಪೇಕ್ಷ ನಿರಪೇಕ್ಷ ಜ್ಞಾನಗಳೆಂದೂ, ಚೀನೀಯರು ಯಿನ್ ಮತ್ತು ಯಾಂಗ್ಗಳೆಂದೂ ಕರೆಯುತ್ತಾರೆ. ವಿಜ್ಞಾನದ್ದು ತಾರ್ಕಿಕ ಜ್ಞಾನ, ದರ್ಶನಗಳದ್ದು ಧ್ಯಾನೋತ್ಪನ್ನ ಜ್ಞಾನ.
ಪರಿಸರದೊಡನೆ ನಮ್ಮ ನಿತ್ಯ ಸಂಪರ್ಕ ವರ್ತನೆಗಳಿಂದ ಬಂದದ್ದು ತಾರ್ಕಿಕ ಜ್ಞಾನ. ಇದರಿಂದಾಗಿಯೇ ನಾವು ವಸ್ತುಸ್ಥಿತಿಗಳನ್ನು ಪರಿಮಾಣಾತ್ಮಕವಾಗಿ ಗುರುತಿಸುವ, ಸಂಬಂಧ ಕಲ್ಪಿಸುವ, ಅಳೆದು ನೋಡುವ, ವಿಂಗಡಿಸುವ ಸಾಮರ್ಥ್ಯ ಪಡೆದಿದ್ದೇವೆ. ವಸ್ತುಸ್ಥಿತಿಗಳ ಗುಣವಿಶೇಷಗಳನ್ನು ಸಾಂಕೇತಿಕವಾಗಿ ಖಚಿತವಾಗಿ ನಿರ್ದಿಷ್ಟವಾಗಿ ನಿರೂಪಿಸಲು ಯುಕ್ತವಾಗಿ ಸಂವಹಿಸಬಹುದಾದ ಸಾರ್ವತ್ರಿಕವಾದ ಸಾಂಕೇತಿಕ ಭಾಷೆಯಲ್ಲಿ ನಿರೂಪಿಸಲು ಸಾಧ್ಯವಾಗಿದೆ.
ಈ ತಾರ್ಕಿಕ ಜ್ಞಾನ ಭೌತವಿಜ್ಞಾನದಲ್ಲಿ ಮೂರು ಹಂತದಲ್ಲಿ ರೂಪುಗೊಳ್ಳುತ್ತದೆ. ಮೊದಲಿಗೆ ವಿಜ್ಞಾನಿಗಳು ಯಾವ ಕ್ರಿಯೆಯನ್ನು ಅರ್ಥೈಸಬೇಕೋ ಅದಕ್ಕೆ ಪ್ರಾಯೋಗಿಕ ಪ್ರಮಾಣಗಳನ್ನು ಕಲೆಹಾಕಿ ನಂತರದಲ್ಲಿ ಪ್ರಯೋಗ ಫಲಿತಾಂಶಗಳನ್ನು ಸಂಕೇತಗಳಿಗೆ ಹೊಂದಿಸಿ ನಿರ್ದಿಷ್ಟ ಗಣಿತ ಸೂಕ್ತಿಗಳನ್ನು ಪಡೆಯುತ್ತಾರೆ. ಇವನ್ನು ಕ್ರಮಬದ್ಧ ರೀತಿಯಲ್ಲಿ ಜೋಡಿಸಿದ್ದನ್ನೇ ಕ್ರಿಯೆಯ ಬಗೆಗಿನ ಮಾದರಿಯೆಂದು, ಇನ್ನೂ ಸ್ವಲ್ಪ ಸಂಸ್ಕರಿಸಿ ಸಿದ್ಧಾಂತವೆಂದು ಪರಿಗಣಿಸುತ್ತಾರೆ. ಎರಡನೆ ಹಂತದಲ್ಲಿ ಈ ಸಿದ್ಧಾಂತವನ್ನು ಹೊಸ ಪ್ರಯೋಗಗಳಿಗೆ ಒರೆಹಚ್ಚಿ ಸುಸಂಬದ್ಧ ಫಲಿತಾಂಶಗಳು ಬಂದಲ್ಲಿ ಸರಿಯಾದ ಸಿದ್ಧಾಂತವೆಂದು ಅಂಗೀಕರಿಸುತ್ತಾರೆ. ಮೂರನೆಯ ಹಂತದಲ್ಲಿ ಈ ಸಿದ್ಧಾಂತದಿಂದ ಸತ್ಯದ ಸಾಕ್ಷಾತ್ಕಾರವೆಷ್ಟಾಗಿದೆಯೋ ಅದನ್ನು ಇತರರಿಗೆ ಪರಿಚಯಿಸುವುದಕ್ಕೆ ಸರಳ ಭಾಷೆಯಲ್ಲಿ ಸಿದ್ಧಾಂತದ ಮೂಲ ವಿಚಾರಗಳನ್ನೂ ಗಣಿತೋಕ್ತಿಗಳ ಸಾರವನ್ನೂ ಸಂಗ್ರಹಿಸಿ ಪ್ರಕಟಿಸುತ್ತಾರೆ. ಈ ನಿರ್ದಿಷ್ಟ ಕ್ರಮದಲ್ಲಿಯೇ ವಿಜ್ಞಾನದಲ್ಲಿ ಸಿದ್ಧಾಂತಗಳು ರೂಪುಗೊಳ್ಳುತ್ತವೆಯೆಂದಲ್ಲ. ಎರಡನೆಯ ಹಂತದಲ್ಲಿ ಒಮ್ಮೊಮ್ಮೆ ವಿಜ್ಞಾನಿ ತನ್ನ ಕ್ರಿಯಾಶೀಲ ದೃಷ್ಟಿಯಿಂದಲೋ, ಆಧ್ಯಾತ್ಮಿಕ ನೆಲೆಗಟ್ಟಿನಿಂದಲೋ ಸ್ವಪ್ನ ಸುಷುಪ್ತ ಸ್ಥಿತಿಯಲ್ಲಿಯೋ ತಳೆದ ವಿಶಿಷ್ಟ ಆಲೋಚನೆಗಳನ್ನು ಗಣಿತದ ಸಾಂಕೇತಿಕ ಭಾಷೆಗೆ ಅಳವಡಿಸಿ, ಸಿದ್ಧಾಂತವೊಂದನ್ನು ಕಟ್ಟಬಹುದು. ಹೇಗೇ ಕಟ್ಟಿದರೂ ಸಿದ್ಧಾಂತಗಳು ಸಿಂಧುತ್ವಕ್ಕಾಗಿ ಪ್ರಯೋಗಗಳಿಗೆ ಒಡ್ಡಿಕೊಳ್ಳಬೇಕು. ಹೀಗೆ ಕ್ರಿಯೆಯನ್ನು ಅರ್ಥೈಸುವಲ್ಲಿ, ಎಲ್ಲ ಸಿದ್ಧಾಂತಗಳನ್ನೂ ಪ್ರಯೋಗಗಳಿಗೆ ಆಧಾರಪಡಿಸುವುದನ್ನೇ ವೈಜ್ಞಾನಿಕ ದೃಷ್ಟಿಕೋನ/ ಕ್ರಮವೆನ್ನುತ್ತಾರೆ. ತಾರ್ಕಿಕ ಜ್ಞಾನ ರೂಪುತಳೆಯಬೇಕಾದರೆ ಅಲ್ಲಿನ ಸಿದ್ಧಾಂತಗಳು ಪ್ರಯೋಗಗಳ ಕುಲುಮೆಗಳಲ್ಲಿ ತೇರ್ಗಡೆಯಾಗಿ ಹೊರಬರಬೇಕಾದ್ದು ಅನಿವಾರ್ಯ. ತಾರ್ಕಿಕ ಜ್ಞಾನಕೋಶಾಗಾರಕ್ಕೆ ಪ್ರವೇಶ ಬಯಸುವುದಾದರೆ ಸಿದ್ಧಾಂತಗಳು ಪ್ರಯೋಗಗಳೆಂಬ ಎಲ್ಲ ಪ್ರವೇಶದ್ವಾರಗಳಲ್ಲಿ ರಹದಾರಿ ಪತ್ರಗಳನ್ನು ಪಡೆಯಲೇಬೇಕು. ಹೀಗೆ ಪಕ್ವಗೊಂಡ ಸಿದ್ಧಾಂತಗಳು ತಮ್ಮೊಳಗಿನ ತಾರ್ಕಿಕ ಜ್ಞಾನದ ಮೂಲಕ ಸೃಷ್ಟಿಯ ರಹಸ್ಯಗಳಿಗೆ ಕ್ರಮಬದ್ಧ ರೀತಿಯಲ್ಲಿ ವ್ಯಾಖ್ಯಾನ ಕೊಟ್ಟು ಹೆಚ್ಚಿನ ಜ್ಞಾನಕ್ಕೆ ಮುಂದುವರಿದ ಸಂಶೋಧನೆಗಳಿಗೆ ಮಾರ್ಗದರ್ಶಕವಾಗುತ್ತವೆ.
ಇಷ್ಟಾದರೂ ಈ ಜ್ಞಾನ ಪರಿಮಿತವಾದದ್ದು ಎಂಬುದು ಸೃಷ್ಟಿಯ ಸಂಕೀರ್ಣ ರಚನಾ ವೈವಿಧ್ಯದಿಂದಲೇ ಸ್ಪಷ್ಟ. ಯಾವ ವಸ್ತುಸ್ಥಿತಿಯಿಲ್ಲದ ಶೂನ್ಯಸ್ಥಿತಿಯ ಅವಕಾಶವೇ ವಕ್ರತೆಯನ್ನು ಹೊಂದಿದೆ ಎಂದು ಆಧುನಿಕ ಭೌತವಿಜ್ಞಾನವೇ ಕಂಡುಕೊಂಡಿದೆ. ಇನ್ನು ಅಸಂಖ್ಯಾತ ಪರಮಾಣುಗಳಿಂದ ಹಿಡಿದು ಬಿಲಿಯಗಟ್ಟಲೆ ಗೆಲಾಕ್ಸಿಗಳನ್ನೂ, ಕೋಟ್ಯಾಂತರ ಜೀವರಾಶಿಗಳನ್ನೂ ಹೊಂದಿರುವ ವಿಶ್ವರಚನೆಯಂತೂ ಅತ್ಯಂತ ಜಟಿಲ ಹಾಗೂ ಸಂಕೀರ್ಣವಾದದ್ದು. ಹೀಗಿರುವಾಗ ಇಡೀ ವಿಶ್ವವನ್ನೇ ಜೀವ ನಿರ್ಜೀವ ಭಾಗಗಳೆಂದು ಗುರುತಿಸಿ ಇವುಗಳನ್ನು ಮತ್ತೆ ಮತ್ತೆ ವಿಭಜಿಸಿ ಖಂಡದೃಷ್ಟಿಯಿಂದಲೇ ವಿವಿಧ ಭಾಗಗಳನ್ನು ಅಭ್ಯಸಿಸುವ ವಿಜ್ಞಾನ ತನಗೆ ತಾನೇ ಪರಿಮಿತಿ ಒಡ್ಡಿಕೊಂಡಿರುವುದಂತೂ ನಿಜ. ಇದರಿಂದಾಗಿಯೇ ಇದರ ತತ್ವ ಹಾಗೂ ಅದನ್ನು ನಿರೂಪಿಸುವ ಭಾಷೆ ನಿರ್ದಿಷ್ಟವೆನಿಸಿದರೂ ನಿರ್ಬಂಧಿತ ಎಲ್ಲೆಗಳಿಗೆ ಸೀಮಿತವಾಗಿವೆ. ಆದರೂ ಹಲವು ಬಾರಿ ಇದು ಗಮನಕ್ಕೆ ಬಾರದೆ ಇಂತಹ ಜ್ಞಾನವು ಬಿಂಬಿಸುವುದನ್ನೇ ನಾವು ವಾಸ್ತವವೆಂದು ಗ್ರಹಿಸಿ ಗೊಂದಲದಲ್ಲಿ ಸಿಲುಕಿ ಬೀಳುತ್ತೇವೆ.
ಇಂತಹ ನಿಲುವು ಸರಿಯಲ್ಲವೆಂದು ದರ್ಶನಗಳು ಎಚ್ಚರಿಸಿ ಗೊಂದಲದಿಂದ ನಮ್ಮನ್ನು ಪಾರುಮಾಡಲು ಪ್ರಯತ್ನಿಸಿವೆ. ಚಂದ್ರನನ್ನು ತೋರಿಸಲು ಬೆರಳು ಅಗತ್ಯವೆನಿಸಿದರೂ ಒಮ್ಮೆ ಚಂದ್ರನನ್ನು ಗುರುತಿಸಿದ ಮೇಲೆ ಬೆರಳನ್ನು ಗಮನಿಸುವ ಗೋಜಿಗೆ ಸಿಲುಕಬಾರದು ಎನ್ನುತ್ತ ಈ ದರ್ಶನಗಳು ಇಂದ್ರಿಯಗೋಚರ ಅನುಭವದಿಂದಾಚೆಗೂ ಒಂದು ಅನುಭವವಿದೆ. ಆ ಅನುಭವದ ಫಲವೇ ನಿರಪೇಕ್ಷ ಜ್ಞಾನ, ಈ ಜ್ಞಾನವೇ ಬೇರೊಂದು ವಾಸ್ತವ ಅಥವಾ ನಿಜಸ್ಥಿತಿ ಎನ್ನುವುದಿದೆ ಎಂದು ಹೇಳುತ್ತದೆ. ಅನುಭವಕ್ಕೆ ಮಾತ್ರ ದಕ್ಕುವ ಈ ಸತ್ಯವನ್ನು ಪ್ರಚುರಪಡಿಸಲು ಸಾಧ್ಯವಿಲ್ಲ. ನಿರಪೇಕ್ಷ ಜ್ಞಾನ ಬುದ್ಧಿಪೂರ್ವಕವಲ್ಲದ (ಮುಗ್ಧ) ಸ್ಥಿತಿಯಲ್ಲಿ ಪಡೆದ ವಾಸ್ತವದ ನಿಜರೂಪದ ಅನುಭವ, ಸಾಧಾರಣವಲ್ಲದ ವಿವೇಕಸ್ಥಿತಿ. ಇದನ್ನು ಧ್ಯಾನಿಕ ಅಥವಾ ದಾರ್ಶನಿಕ ಸ್ಥಿತಿಯೆನ್ನಬಹುದೇನೋ, ಇದೇ ನಿರಪೇಕ್ಷ ಜ್ಞಾನ. ಇಂತಹದ್ದೊಂದಿದೆ ಎಂದು ದಾರ್ಶನಿಕರು ಹೇಳುವುದಕ್ಕೆ ಪೂರಕವಾಗಿ ಮನಃಶಾಸ್ತ್ರಜ್ಞರೂ ಸಂಶೋಧನೆಯ ಮೂಲಕ ತಮ್ಮ ಒಪ್ಪಿಗೆ ಕೊಟ್ಟಿದ್ದಾರೆ.
ವಸ್ತುಸ್ಥಿತಿಯನ್ನು ವಿಶೇಷ ರೀತಿ ಗಮನಿಸುವುದರ ಮೂಲಕ ಬುದ್ಧಿರಹಿತ ಅನುಭವ ಪಡೆಯಲು ಸಾಧ್ಯವೆನ್ನುವ ದಾರ್ಶನಿಕ ಜ್ಞಾನ ಕೂಡ ಮೊದಲಿಗೆ ಪ್ರಾಯೋಗಿಕ ಮಾರ್ಗಗಳನ್ನೇ ಅನುಸರಿಸುತ್ತದೆ. ಆದರೆ ಅದರ ಅನುಸರಣೆ ತಾರ್ಕಿಕ ಜ್ಞಾನದಂತಲ್ಲ. ತಾರ್ಕಿಕ ಜ್ಞಾನವು ಪ್ರಯೋಗವನ್ನು ಅವಲಂಬಿಸಿದರೆ ದಾರ್ಶನಿಕ ಜ್ಞಾನ ಅನುಭವವನ್ನು ಅವಲಂಬಿಸಿದೆ. ಬೌದ್ಧದರ್ಶನದಲ್ಲಿ ಸತ್ಯ ಸಾಕ್ಶಾತ್ಕಾರವಾಗಲಿಕ್ಕೆ ಮುನ್ನ ಸರಿಯಾದ ವೀಕ್ಷಣೆ ಅಗತ್ಯವೆಂದು ಹೇಳಿರುವಲ್ಲಿ ಬುದ್ಧಿರಹಿತ ಅನುಭವದ ಕುರಿತೇ ಹೇಳಲಾಗಿದೆ. ಇಲ್ಲೊಂದು ಸರಿಯಾಗಿ ಗಮನಿಸಬೇಕಾದ ಅಂಶವಿದೆ. ದಾರ್ಶನಿಕರ ಪ್ರಕಾರ ನಿಜಸ್ಥಿತಿಯೆಂದರೆ ಇಂದ್ರಿಯಗೋಚರವಾದುದಷ್ಟೇ ಅಲ್ಲ. ಅದರಿಂದಾಚೆಗೂ ಇರುವಂತಹದು. ಹಾಗೆಯೇ ವೀಕ್ಷಣೆ ಎಂದರೆ ಕೇವಲ ಕಣ್ಣಿಂದ ನೋಡುವುದಷ್ಟೆ ಅಲ್ಲ. ಅದನ್ನೂ ಕೂಡಿಕೊಂಡು ಪಡೆಯುವ ಒಂದು ಅನುಭವ.
ವೈಜ್ಞಾನಿಕ ಪ್ರಯೋಗ ಮತ್ತು ದಾರ್ಶನಿಕ ಅನುಭವಗಳು ಬಹಳಷ್ಟು ಭಿನ್ನವಾಗಿದ್ದರೂ ಅವುಗಳ ನಡುವೆ ಸಾಮ್ಯವಿರುವುದು ವಿಸ್ಮಯವೆನ್ನಿಸಬಹುದು. ಅತ್ಯುನ್ನತ ತಂತ್ರಜ್ಞಾನ ಬಳಸಿ ಭೌತವಿಜ್ಞಾನಿ ಅನೇಕ ಪರಿಣಿತರೊಡನೆ ಪ್ರಯೋಗದಲ್ಲಿ ತೊಡಗಿ ಫಲಿತಾಂಶಗಳನ್ನು ಪಡೆದರೆ, ದಾರ್ಶನಿಕನಾದರೋ ಯಾವ ಯಂತ್ರ ಬಳಸದೆ ಏಕಾಂತದಲ್ಲಿ ಧ್ಯಾನಮಗ್ನನಾಗಿದ್ದು ಅಂತಃದೃಷ್ಟಿಯ ಮೂಲಕ ಅನುಭವಗಳನ್ನು ಪಡೆಯುತ್ತಾನೆ. ವಿಜ್ಞಾನದ ಪ್ರಯೋಗಗಳೋ ಪುನರಾವರ್ತನೀಯ. ಯಾರು ಬೇಕಾದರೂ ಯಾವಾಗ ಬೇಕೆನಿಸಿದರೂ ಮತ್ತೆ ಮತ್ತೆ ನಡೆಸಿ ಒಂದೇ ಫಲಿತಾಂಶಗಳನ್ನು ಪಡೆಯಬಹುದು. ಆದರೆ ದಾರ್ಶನಿಕ ಅನುಭವಗಳು ಹೀಗಲ್ಲ. ಇವು ಕೆಲವರಿಗೆ ಮಾತ್ರ ಕೆಲ ಸಂದರ್ಭಗಳಲ್ಲಿ ಮಾತ್ರ ಗೋಚರವಾಗುತ್ತವೆ. ಈ ವೈರುಧ್ಯಗಳೇ ವಿಸ್ಮಯಕ್ಕೆ ಎಡೆಮಾಡುತ್ತವೆ. ಆದರೆ ಈ ವ್ಯತ್ಯಾಸಗಳು ಕೇವಲ ಮಾರ್ಗಗಳಲ್ಲಿವೆಯೇ ಹೊರತು ಅಲ್ಲಿನ ಫಲಿತಾಂಶಗಳಲ್ಲಲ್ಲ ಎನ್ನುವುದು ಸೂಕ್ಷ್ಮವಾಗಿ ಗಮನಿಸಿದರೆ ಅರಿವಾಗುತ್ತದೆ.
ಸಾಧಾರಣ ಸಾಮ್ಯಗಳು
ಇವುಗಳನ್ನು ಸಾಮ್ಯವೆಂದು ಕಾಪ್ರ ಗುರುತಿಸುವುದಿಲ್ಲ. ಆದರೆ ಎರಡೂ ಜ್ಞಾನಗಳ ಬಗ್ಗೆ ಬರೆಯುವಾಗ ಇವನ್ನು ವಿಶೇಷವಾಗಿ ಗಮನಿಸುತ್ತಾರೆ.
1.ಪರಿಣತಿಯಿಂದ ಪಕ್ವತೆ: ಮೊದಲನೆಯ ಸಾಮ್ಯವೊಂದನ್ನು ಕಾಪ್ರ ನಮ್ಮ ಮುಂದಿಡುತ್ತಾರೆ. ಆಧುನಿಕ ಭೌತವಿಜ್ಞಾನದ ಸೂಕ್ಷ್ಮಕಣಗಳನ್ನು ಪುನರ್ ಪ್ರಯೋಗ ಮಾಡಬಯಸುವ ಯಾರೇ ಆಗಲಿ ಹಲವಾರು ವರ್ಷಗಳ ತರಬೇತಿ ಪಡೆಯಬೇಕಾಗುತ್ತದೆ. ಆ ನಂತರವೇ ಆ ವ್ಯಕ್ತಿ ನಿರ್ದಿಷ್ಟ ಪ್ರಶ್ನೆ ಕೇಳಿ ಸೂಕ್ತ ಪ್ರಯೋಗದ ಮೂಲಕ ಬಂದ ಫಲಿತಾಂಶದಿಂದ ಉತ್ತರ ಕಂಡುಕೊಳ್ಳಲು, ಪದೇ ಪದೇ ಪ್ರಯೋಗ ಮಾಡಿ ಮೊದಲ ಉತ್ತರ ಮತ್ತೆ ಪಡೆಯಲು ಸಾಧ್ಯ. ಹಾಗೇ ದರ್ಶನಾಕಾಂಕ್ಷಿಯೂ ಗುರು ಸಾನಿಧ್ಯದಲ್ಲಿ ತರಬೇತಿ ಹೊಂದಬೇಕು. ಈ ತರಬೇತಿಯಲ್ಲಿ ನಿರ್ದಿಷ್ಟವಲ್ಲದಿದ್ದರೂ ಯಾವುದೋ ಕ್ಷಣದಲ್ಲಿ ದರ್ಶನವಾಗಿ ಜಯಶೀಲ ವಿದ್ಯಾರ್ಥಿಯೆನಿಸಿದರೆ ಮತ್ತೆ ಮತ್ತೆ ಅದೇ ದರ್ಶನ ಭವಿಷ್ಯದಲ್ಲಿ ಖಂಡಿತ ಪುನರಾವರ್ತನೆ ಆಗುತ್ತದೆನ್ನುವ ಕಾಪ್ರ ಇದಕ್ಕೆ ಉದಾಹರಣೆಯಾಗಿ ಯಾರೇ ಆಗಲಿ ಕೆಲವೊಮ್ಮೆ ಏನನ್ನೋ ಯಾರ ಹೆಸರನ್ನೋ ಮರೆತು ಎಷ್ಟೇ ಏಕಾಗ್ರತೆಯಿಂದ ಪ್ರಯತ್ನಿಸಿದರೂ ಹೊಳೆಯದಿದ್ದುದು ನಂತರ ಆ ಪ್ರಸಂಗ ಮರೆತು ಯಾವುದೋ ವಿರಾಮ ಸ್ಥಿತಿಯಲ್ಲೋ ಇನ್ನೇನನ್ನೋ ಮಾಡುವಾಗ ಇದ್ದಕ್ಕಿದ್ದಂತೆ ಜ್ಞಾಪಕಕ್ಕೆ ಬರುವ ಸನ್ನಿವೇಶವನ್ನು ಮುಂದಿಟ್ಟು, ಇಂತಹ ನೇರ ಅನುಭವಗಳಂತೆಯೇ ದಾರ್ಶನಿಕ ಅನುಭವಗಳೂ ತರಬೇತಿಯಿಂದ ಪಕ್ವಗೊಂಡ ಮನಸ್ಸಿಗೆ ಗೋಚರವಾಗುತ್ತವೆ ಎನ್ನುತ್ತಾರೆ.
2.ಭಾಷೆಯ ಮಿತಿ: ವೈಜ್ಞಾನಿಕ ಸಿದ್ಧಾಂತಗಳು ಮೊದಲೇ ತಿಳಿಸಿದಂತೆ ಖಂಡದೃಷ್ಟಿಯಿಂದ ಪಡೆದ ಜ್ಞಾನವನ್ನಷ್ಟೇ ತಿಳಿಸುವುದರಿಂದ ಮೂಲತಃ ಅವುಗಳಿಗೆ ಮಿತಿಯಿದೆ. ಅಂತೆಯೇ ಅವು ವಿಶ್ವಸ್ಥಿತಿಯ ನೈಜ ಸ್ವರೂಪವನ್ನು ತಿಳಿಸಲಾರವು. ಈ ಸಿದ್ಧಾಂತಗಳನ್ನು ಪರಸ್ಪರ ಜ್ಞಾನವಿನಿಮಯಕ್ಕಾಗಿ ಪ್ರಚಲಿತ ಆಡುಭಾಷೆಯೊಂದನ್ನು ಕೂಡ ಬಳಸಿ ಹೇಳಬೇಕಾದ ಅನಿವಾರ್ಯತೆ ಇರುವುದರಿಂದ ಆ ಭಾಷೆಯ ಮಿತಿಯಿಂದಾಗಿಯೂ ನಿಜಸ್ಥಿತಿಯ ಸ್ವರೂಪ ತಿಳಿಯಲು ಸಾಧ್ಯವಾಗದಿರಬಹುದು. ದಾರ್ಶನಿಕ ಜ್ಞಾನದಲ್ಲೂ ಇದೇ ತೊಡಕಿದೆ. ನಿಜಸ್ಥಿತಿಯ ಪ್ರತ್ಯಕ್ಷ ಅನುಭವವು ನಮ್ಮ ಆಲೋಚನೆಗಳನ್ನೂ ಅಭಿವ್ಯಕ್ತಿ ಮಾರ್ಗಗಳನ್ನೂ ದಾಟಿ ನಿಲ್ಲುವುದರಿಂದ, ದರ್ಶನವನ್ನು ಹೇಗೆ ಹೇಳಿದರೂ ಪಾರ್ಶ್ವ ಸತ್ಯವಾಗಬಹುದೇ ವಿನಾ ಅದು ಪರಿಪೂರ್ಣ ಸತ್ಯವಾಗಲಾರದು. ಈ ತೊಡಕನ್ನು ಬಿಡಿಸಲೆಂದೇ ದರ್ಶನ ಮಾರ್ಗಗಳಲ್ಲಿ ಅನೇಕ ತಾಂತ್ರಿಕ ವಿಧಾನಗಳು, ತಾವೋ ಮುಂತಾದ ದರ್ಶನಗಳಲ್ಲಿ ಬಳಸಿರುವುದನ್ನು ವಿವರಿಸುತ್ತ ಎರಡೂ ಜ್ಞಾನಗಳು ಅಭಿವ್ಯಕ್ತಗೊಳ್ಳುವ ಮಾರ್ಗಗಳಿಂದಾಗಿ ಮಿತಿಗೊಳಗಾಗುವುದನ್ನು ತಿಳಿಸಿದ್ದಾರೆ.
ಪ್ರಮುಖ ಸಾಮ್ಯಗಳು
ಸಾಧಾರಣವೆಂದು ಗುರುತಿಸಿದ ಮೇಲಿನ ಎರಡೂ ಸಾಮ್ಯಗಳು ಆಯಾ ಜ್ಞಾನಗಳನ್ನು ಪಡೆಯುವಲ್ಲಿ ಮತ್ತು ಅವುಗಳನ್ನು ಅಭಿವ್ಯಕ್ತಗೊಳಿಸುವಲ್ಲಿ ಕಾಣುತ್ತವೆಯೇ ಹೊರತು ಆ ಜ್ಞಾನಗಳ ಸ್ವರೂಪ ಅಥವಾ ತತ್ವಗಳಿಗೆ ಸಂಬಂಧಪಟ್ಟವಲ್ಲ. ಈ ಎರಡನೆಯ ಅಂಶಗಳನ್ನು ಕುರಿತಾಗಿ ಇರುವ ಸಾಮ್ಯಗಳನ್ನೇ ಕಾಪ್ರ ತಮ್ಮ ಕೃತಿಯಲ್ಲಿ ವಿಶಿಷ್ಟವಾಗಿ ಗುರುತಿಸುತ್ತಾರೆ. ಮುಂದಿನ ವಿವರಣೆ ಇವುಗಳನ್ನೇ ಕೇಂದ್ರೀಕರಿಸಿದೆ.
1.ದ್ವಂದ್ವಗುಣ: ನ್ಯೂಟನ್ನನ ಕಾಲದಿಂದ 19ನೆ ಶತಮಾನದ ಅಂತ್ಯದವರೆಗೂ ಪ್ರಚಲಿತವಾಗಿದ್ದ ಭೌತವಿಜ್ಞಾನದ ಸ್ವರೂಪ 20ನೆ ಶತಮಾನ ಆರಂಭವಾಗುತ್ತಿದ್ದಂತೆ ಕ್ಷಿಪ್ರ ಬದಲಾವಣೆಗೆ ಒಳಪಡಬೇಕಾಯಿತು. ಕೇವಲ ಸ್ಥೂಲರೂಪದ ವಸ್ತುಸ್ಥಿತಿಯನ್ನು ಸರಿಯಾಗಿ ಗ್ರಹಿಸಿದ ಹಿಂದಿನ ಭೌತವಿಜ್ಞಾನಕ್ಕೆ ಸೂಕ್ಷ್ಮರೂಪದ ಭೌತಪ್ರಪಂಚವನ್ನು ತನ್ನ ಹಳೆಯ ಚೌಕಟ್ಟಿನಲ್ಲಿ ಹಿಡಿದಿಡಲಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಸೂಕ್ಷ್ಮಜಗತ್ತಿನ ವಸ್ತುಸ್ಥಿತಿ. ಆ ಹೊತ್ತಿಗಾಗಲೇ ಸ್ಥೂಲಜಗತ್ತಿನ ಪ್ರತಿವಸ್ತುವೂ ಪ್ರತ್ಯಕ್ಷನೋಟಕ್ಕೆ ಕಾಣದಷ್ಟು ಸೂಕ್ಷ್ಮ ಕಣಗಳಿಂದಾಗಿವೆ ಎನ್ನುವ ಸತ್ಯವನ್ನು ಮುಂದುವರೆದ ತಂತ್ರಜ್ಞಾನವನ್ನು ಬಳಸಿ ನಡೆಸಿದ ಪ್ರಯೋಗಗಳಿಂದ ಗುರುತಿಸಲಾಗಿತ್ತು. ಇಂತಹ ಈ ಕಣಗಳು ತಮ್ಮ ಸ್ವರೂಪ ಮತ್ತು ವರ್ತನೆಗಳನ್ನು ಪರೋಕ್ಷ ಸೂಕ್ಷ್ಮಪ್ರಯೋಗಗಳ ಮೂಲಕವಷ್ಟೇ ಹೊರಗೆಡಹಿದವು. ಇವುಗಳ ವರ್ತನೆ ಸ್ಥೂಲಜಗತ್ತನ್ನು ವಿವರಿಸುವ ಸಿದ್ಧಾಂತಗಳನ್ನು ಪಾಲಿಸುವುದಿರಲಿ ಆ ಸಿದ್ಧಾಂತಗಳ ಮೂಲತತ್ವಗಳನ್ನೇ ಬುಡಮೇಲು ಮಾಡುವಂತೆ ತೋರತೊಡಗಿತು. ಉದಾಹರಣೆಗೆ ಬೆಳಕು ಎಲ್ಲೆಲ್ಲೂ ವ್ಯಾಪಕವಾಗಿ ಹರಡಿರುವ ಅಲೆಯಂತೆಯೂ ಅದೇ ಕ್ಷಣದಲ್ಲಿ ಒಂದೇ ಬಿಂದುವಿನಲ್ಲಿ ಗೋಚರಿಸುವ ಕಣದಂತೆಯೂ ವರ್ತಿಸತೊಡಗಿತು. ವಸ್ತುವೊಂದು ಕಣರೂಪದಲ್ಲಿದ್ದರೆ ಕಣದಂತೆಯೂ ಅಲೆಯಾಗಿದ್ದರೆ ಸದಾ ಅಲೆಯಂತೆಯೂ ವರ್ತಿಸುತ್ತದೆ. ಕಣವಾಗಿದ್ದಾಗ ಅಲೆಯ ಗುಣವಾಗಲೀ ಅಲೆಯಾಗಿದ್ದಾಗ ಕಣದ ಗುಣವಾಗಲೀ ಸಾಧ್ಯವಿಲ್ಲವೆಂಬ ಇಂದ್ರಿಯಗೋಚರವೂ ತಾರ್ಕಿಕವೂ ಆದ ಪ್ರಮಾಣವನ್ನು ಮೂಲತತ್ವವಾಗಿಸಿಕೊಂಡು ರೂಪಗೊಂಡಿದ್ದ ಹಿಂದಿನ ಸಿದ್ಧಾಂತಕ್ಕೆ ಬೆಳಕಿನ ದ್ವಿ ಬಗೆಯ ವರ್ತನೆ ಕಗ್ಗಂಟಾಗಿ ತೋರಿತು. ಬೆಳಕಿನಂತೆ ಸೂಕ್ಷ್ಮಕಣಗಳೂ ಇಂತಹ ಇಬ್ಬಂದಿ ವರ್ತನೆ ಹೊಂದಿವೆ ಎನ್ನುವ ಪ್ರಾಯೋಗಿಕ ಸತ್ಯವನ್ನು ಅರಗಿಸಿಕೊಳ್ಳಲಾರದೆ ಸೋತಿತು. ಸ್ಥೂಲ ಜಗತ್ತಿನ ವರ್ತನೆಗಳನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ ಪಡೆದಿದ್ದ ಜ್ಞಾನವನ್ನೇ ಸತ್ಯವೆಂದುಕೊಂಡಿದ್ದ ವೈಜ್ಞಾನಿಕ ಮನಸ್ಸಿಗೆ ಸೂಕ್ಷ್ಮ ಕಣಗಳ ಈ ವರ್ತನೆ ವಿರೋಧಾಭಾಸಕ್ಕೆ ಎಡೆಮಾಡಿಕೊಟ್ಟು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಸಿದುದು ಒಂದು ಮಹತ್ತರ ಸಂಗತಿ. ತಾರ್ಕಿಕಮಾರ್ಗವನ್ನೇ ಹೆದ್ದಾರಿಯಾಗಿ ಆಯ್ಕೆ ಮಾಡಿಕೊಂಡು ಆಲೋಚಿಸುತ್ತಿದ್ದ ಪಾಶ್ಚಿಮಾತ್ಯ ವೈಜ್ಞಾನಿಕ ಮನಸ್ಸು ಈ ಇಬ್ಬಂದಿ ಗುಣವನ್ನು ಮೊದಲು ಸುಲಭವಾಗಿ ಒಪ್ಪಿಕೊಳ್ಳಲಿಲ್ಲ. ಸೂಕ್ಷ್ಮಜಗತ್ತಿನ ನಿಜ ವರ್ತನೆಯನ್ನು ಅರಿಯುವುದಕ್ಕಾಗಿ ತಾರ್ಕಿಕವಾಗಿ ಎಷ್ಟೇ ಕಹಿ ಎನಿಸಿದರೂ ಅನಿವಾರ್ಯವಾಗಿ ಹೊಸತತ್ವಗಳನ್ನು ಕಟ್ಟಲೇಬೇಕಾಯಿತು. ಅಂತೆಯೇ ಹಳೆ ಸಿದ್ಧಾಂತವನ್ನು ಕೈಬಿಟ್ಟು ಪ್ರತಿಕಣಕ್ಕೂ ಈ ದ್ವಿಮುಖ ವರ್ತನೆಯಿದೆಯೆನ್ನುವುದನ್ನೇ ಪುರಸ್ಕರಿಸುವಂಥ ಕ್ವಾಂಟಂ ಮೂಲತತ್ವಗಳನ್ನು ಸೇರಿಸಬೇಕಾಯಿತು. ಹಳೆ ಪರಿಕಲ್ಪನೆಗಳ ಜಾಗದಲ್ಲಿ ಹೊಸದವುಗಳನ್ನು ಸೇರಿಸಿಕೊಂಡು ಬೆಳೆದದ್ದೇ ಆಧುನಿಕ ಭೌತವಿಜ್ಞಾನ. ಹೀಗೆ ಕಟ್ಟಿದ ಆಧುನಿಕ ಭೌತವಿಜ್ಞಾನದಲ್ಲಿ ದ್ವಿಮುಖ ವರ್ತನೆ ವಸ್ತುಸ್ಥಿತಿಯ ನಿಜಗುಣವೆನ್ನುವುದು ಪ್ರಮುಖ ಮೂಲತತ್ವಗಳಲ್ಲಿ ಒಂದೆನಿಸಿತು.
ದ್ವಿಮುಖವರ್ತನೆ ಪಾಶ್ಚಿಮಾತ್ಯ ವೈಜ್ಞಾನಿಕ ಚಿಂತನೆಗೆ ಹೊಸದೆನಿಸಿ ವಿರೋಧಾಭಾಸಕ್ಕೆ ಎಡೆ ಮಾಡಿಕೊಟ್ಟು ನಂತರ ಅದನ್ನೇ ಸತ್ಯವೆಂದು ಸ್ವೀಕರಿಸಬೇಕಾದ ಅನಿವಾರ್ಯತೆಗೆ ಜಾಗ ಕೊಟ್ಟರೆ, ಪೌರ್ವಾತ್ಯ ದರ್ಶನಗಳು ವಿಶ್ವದಲ್ಲಿನ ವರ್ತನೆಗಳನ್ನು ಅನುಭವಿಸಿ ಪಡೆದ ದರ್ಶನಗಳಲ್ಲೂ ದ್ವಿಮುಖ ವರ್ತನೆ ಅಥವಾ ಗುಣವಿರುವುದನ್ನು ಗುರುತಿಸಿದವು. ದಾರ್ಶನಿಕರು ಇಂತಹ ವಿರೋಧಾಭಾಸಗಳನ್ನು ತೊಡಕೆಂದು ಭಾವಿಸದೆ ಸಹಜ ಅನುಭವಗಳೆಂದು ಸ್ವೀಕರಿಸಿ ಅವುಗಳ ಆಂತರ್ಯವನ್ನು ಗ್ರಹಿಸಿ ನಿಜಸ್ಥಿತಿಯ ಸಾಕ್ಷಾತ್ಕಾರ ಪಡೆಯಲು ಯತ್ನಿಸಿದರು. ದಾರ್ಶನಿಕ ಉಕ್ತಿಗಳಲ್ಲಿ ವಿರೋಧಾಭಾಸವೆನಿಸುವ ಹೇಳಿಕೆಗಳು ಹೇರಳವಾಗಿರುವುದನ್ನು ನೋಡಿದರೆ ಅವು ಅನುಭವಗಳ ವಿಶೇಷ ನೆಲೆಗಳನ್ನು ಸೂಚಿಸುವಂತಿವೆ. ಉದಾಹರಣೆಗೆ ಝೆನ್ ಗುರು ಡೈಟೊ ಚಕ್ರವರ್ತಿ ಗೊಡೈಗೋಗೆ ಹೇಳುವುದನ್ನು ಗಮನಿಸಿ: “ಕಲ್ಪಗಳ ಹಿಂದೆಯೇ ನಾವಿಬ್ಬರೂ ವಿದಾಯ ಹೇಳಿದೆವು, ಆದರೆ ಒಂದು ಕ್ಷಣವೂ ಅಗಲಲಿಲ್ಲ. ದಿನವಿಡೀ ಮುಖಾಮುಖಿಯಾಗಿ ಕುಳಿತಿದ್ದೇವೆ ಆದರೆ ಸಂಧಿಸಲೇ ಇಲ್ಲ.”ಚೀನಾದ ಯಿಂಗ್ ಮತ್ತು ಯಾಂಗ್ ಒಂದಕ್ಕೊಂದು ಪೂರಕವಾಗಿ ಸೇರಿ ಸೃಷ್ಟಿಯ ಪರಿಪೂರ್ಣತೆಯನ್ನು ಪ್ರತಿನಿಧಿಸುತ್ತವೆ. ಭಾರತದಲ್ಲಿ ಅರ್ಧನಾರೀಶ್ವರ, ಪ್ರಕೃತಿ-ಪುರುಷ… ಹೀಗೆ ಹಲವು ರೀತಿಯಲ್ಲಿ ಪ್ರಕಟಗೊಂಡಿದೆ.
ಸೃಷ್ಟಿಯ ಸೂಕ್ಷ್ಮಪ್ರಪಂಚವನ್ನು ಪ್ರವೇಶಿಸಿದ ಭೌತ ಸಂಶೋಧನೆ ಅಲ್ಲಿನ ಸತ್ಯವನ್ನು ತಿಳಿಯುವುದಕ್ಕಾಗಿ ತಾನೇ ಕಟ್ಟಿದ್ದ ತಾರ್ಕಿಕ ನೆಲೆಗಟ್ಟನ್ನು ದಾಟಿ ಹೊಸತತ್ವಗಳ ಬೆಳಕಿನಲ್ಲಿ ಸಾಕ್ಷಾತ್ಕರಿಸಿಕೊಂಡ ಒಂದು ಜ್ಞಾನವೆಂದರೆ ಸೃಷ್ಟಿಗೆ ದ್ವಿಮುಖ ವರ್ತನೆಯಿದೆ ಎನ್ನುವುದು. ದಾರ್ಶನಿಕರು ಒಳನೋಟದಲ್ಲಿ ಪಡೆದಿದ್ದ ಅನುಭವವೂ ಇದೇ ಎನ್ನುವಲ್ಲಿ ಕಾಪ್ರ ಎರಡೂ ಜ್ಞಾನಗಳ ಮೊದಲ ಸಾಮ್ಯವನ್ನು ತೋರುತ್ತಾರೆ.
2.ಸಂಬಂಧಿತ ಸೃಷ್ಟಿ ಸ್ವರೂಪ ಮತ್ತು ಸಾಪೇಕ್ಷ ಗುಣ:
20ನೆಯ ಶತಮಾನದ ಪೂರ್ವದ ಭೌತವಿಜ್ಞಾನ ವಿಶ್ವದ ವಿವಿಧ ವಸ್ತುಸ್ಥಿತಿಗಳನ್ನು ಕಾಲ ದೇಶ ಮುಂತಾದ ಅನೇಕ ಗುಣಗಳನ್ನು ಪ್ರತ್ಯೇಕವೆಂದೂ ಸ್ವತಂತ್ರ ಅಸ್ತಿತ್ವವುಳ್ಳವೆಂದೂ ಗುರುತಿಸಿತ್ತು. ಇಡೀ ವಿಶ್ವಕ್ಕೆ ಒಂದೇ ಗಡಿಯಾರವೆಂದು ನ್ಯೂಟನ್ ಕಾಲದಲ್ಲಿ ತಿಳಿಯಲಾಗಿತ್ತು. ವಸ್ತು ಆಕ್ರಮಿಸುವ ದೇಶ ಅಥವಾ ಜಾಗವೂ ಕಾಲದಂತೆಯೇ ಸ್ವತಂತ್ರ. ತಕ್ಕಡಿಯಲ್ಲಿ ತೂಗಿದಾಗ ಒಂದು ವಸ್ತುವಿಗಿರುವ ದ್ರವ್ಯರಾಶಿ ಹಾಗೂ ಚಲಿಸುತ್ತಿದ್ದಾಗ ವಸ್ತುವಿಗಿರುವ ಶಕ್ತಿ ಕೂಡ ಕಾಲ ದೇಶಗಳಂತೆಯೇ ಸ್ವತಂತ್ರ ನಿರಪೇಕ್ಷ ಪರಿಮಾಣಗಳೆಂದು ಗುರುತಿಸಲ್ಪಟ್ಟಿದ್ದವು. ಆದರೆ ಐನ್ಸ್ಟೈನರ ಸಾಪೇಕ್ಷತಾ ಸಿದ್ಧಾಂತ ಈ ಪರಿಮಾಣಗಳೆಲ್ಲವೂ ಸಾಪೇಕ್ಷವೆಂದೂ ಸ್ವತಂತ್ರವಲ್ಲವೆಂದೂ ಸಾರಿತು. ದ್ರವ್ಯರಾಶಿ ಮತ್ತು ಶಕ್ತಿ ಒಂದೇ ಗುಣದ ಎರಡು ಹೆಸರುಗಳೆಂದಿತು. ಕಾಲ ದೇಶವನ್ನು, ದೇಶ ಕಾಲವನ್ನು ಅವಲಂಬಿಸಿವೆಯೆಂದಿತು. ಈ ಸಿದ್ಧಾಂತವನ್ನು ತನ್ನ ಭಾಗವಾಗಿಸಿಕೊಂಡ ಆಧುನಿಕ ಭೌತವಿಜ್ಞಾನ ವಸ್ತುಸ್ಥಿತಿಯ ವರ್ತನೆಗಳನ್ನು ನಿರ್ದೇಶಿಸುವ ಅನೇಕ ಗುಣಗಳು ಒಂದನ್ನೊಂದು ಅವಲಂಬಿಸಿವೆಯೆಂದು ತೀರ್ಮಾನಿಸಿತು.
20ನೆಯ ಶತಮಾನದ ಕಾಲಚಕ್ರ ಉರುಳುತ್ತಿದ್ದಂತೆಯೇ ಆಧುನಿಕ ಭೌತವಿಜ್ಞಾನದಲ್ಲೂ ಸಾಕಷ್ಟು ಪ್ರಗತಿಯುಂಟಾಯಿತು. ಕ್ವಾಂಟಂ ಸಿದ್ಧಾಂತಕ್ಕೆ ಸಾಪೇಕ್ಷತಾ ಸಿದ್ಧಾಂತ ಅಳವಡಿಸಿ ಸಾಪೇಕ್ಷ ಕ್ವಾಂಟಂ ಸಿದ್ಧಾಂತವನ್ನು ಕಟ್ಟಿ ಇನ್ನಷ್ಟು ಸಂಶೋಧನೆಗಳನ್ನು ಕೈಗೊಳ್ಳಲಾಯಿತು. ಕಣಕ್ಕೊಂದು ಪ್ರತಿಕಣವಿದೆ, ಬಲಕ್ಷೇತ್ರಗಳೇ ಎಲ್ಲೆಲ್ಲೂ ವ್ಯಾಪಕವಾಗಿ ಹರಡಿ ವಿಶ್ವಸೃಷ್ಟಿಯಲ್ಲಿನ ಸಕಲ ಕಣಗಳೂ ಈ ಬಲಕ್ಷೇತ್ರಗಳ ಅವತಾರಗಳೇ ಎಂದೂ ಈ ಕ್ಷೇತ್ರಗಳಲ್ಲಿ ಅಂತರ್ಗತವಾದ ಶಕ್ತಿಯೇ ಕಣ ಪ್ರತಿಕಣಗಳಾಗಿ ಕಾಣಿಸಿಕೊಳ್ಳಲು ಸಾಧ್ಯವೆಂದೂ ಗ್ರಹಿಸಲಾಯಿತು. ನ್ಯೂಟನ್ ಕಾಲದ ತರ್ಕಾಧಾರಿತ ಜ್ಞಾನಕ್ಕೆ ವಿರುದ್ಧ ನಿರ್ಣಯ ತಾಳಿದ ಆಧುನಿಕ ಭೌತವಿಜ್ಞಾನವು ಇಡೀ ಸೃಷ್ಟಿಯೇ ಒಂದು ತೆರನಾದ ಒಳಸಂಬಂಧ ಹೊಂದಿದೆ, ವಸ್ತುಸ್ಥಿತಿಯ ಅನೇಕ ವರ್ತನೆಗಳು ಒಂದನ್ನೊಂದು ಅವಲಂಬಿಸಿವೆಯೆಂದು ಸಾರಿತು.
ಸೃಷ್ಟಿಯ ಬಗೆಗೆ ಇಂತಹದೇ ಅನುಭವವನ್ನು ದರ್ಶನಗಳೂ ಕಂಡಿವೆ ಎನ್ನುತ್ತ ಎರಡನೆಯ ಸಾಮ್ಯವನ್ನು ಕಾಣುವ ಕಾಪ್ರ, ದಾರ್ಶನಿಕರು ಬೇರೆ ಬೇರೆ ಪ್ರದೇಶಗಳಲ್ಲಿ, ಭಿನ್ನ ಕಾಲಘಟ್ಟಗಳಲ್ಲಿ, ಭಿನ್ನ ಸಾಮಾಜಿಕ, ಸಾಂಸ್ಕೃತಿಕ ನೆಲೆಗಳಲ್ಲಿದ್ದರೂ ಅವರ ದರ್ಶನಗಳು ಸರಿಸುಮಾರು ಒಂದೇ ಆಗಿವೆ ಎನ್ನುತ್ತಾರೆ.
ನಾಟಕ ರಂಗ
ಸ್ಥೂಲ ಜಗತ್ತಿನ ಕೆಲವು ಕ್ರಿಯೆಗಳಲ್ಲಿ ಇನ್ನಿತರ ವಸ್ತುಗಳ ಜೊತೆ ಪ್ರತ್ಯಕ್ಷವಾಗಿ ಭಾಗವಹಿಸಿ ಅಲ್ಲಿನ ಬದಲಾವಣೆಗಳಿಗೆ ನಾವೂ ಕಾರಣರಾಗುತ್ತೇವೆ. ನಾವು ಭಾಗವಹಿಸದೆ ಕೇವಲ ಪ್ರೇಕ್ಷಕರಾಗಿ ನೋಡುವಂತಹ ಕ್ರಿಯೆಗಳೂ ಇವೆಯೆಂದು ತಿಳಿದಿದ್ದೇವೆ. ಆಕಾಶದಲ್ಲಿ ಹಾರುತ್ತಿರುವ ವಿಮಾನವೊಂದನ್ನು ನೆಲದ ಮೇಲೆ ನಿಂತು ನೋಡುವ ಅದರ ಶಬ್ದವನ್ನು ಕೇಳುವ ಸಂದರ್ಭದಲ್ಲಿ ನಮ್ಮ ನೋಡುವಿಕೆಯ ಕಾರಣದಿಂದಾಗಿ ವಿಮಾನದ ಹಾರುವ ಗತಿ ಬದಲಾಗುವುದಿಲ್ಲವೆಂದು ಗೊತ್ತು. ನೋಡುತ್ತಿರುವ ನಾವು ಮತ್ತು ಹಾರುತ್ತಿರುವ ವಿಮಾನ ಎರಡು ಪ್ರತ್ಯೇಕ ಸ್ವತಂತ್ರ ವಸ್ತುಸ್ಥಿತಿಗಳೆಂಬುದು ನಮ್ಮ ಸಾಮಾನ್ಯ ತಿಳುವಳಿಕೆ. ಭೌತವಿಜ್ಞಾನದ ಪ್ರಕಾರ ನಾವು ನೋಡುವ ನೋಟಕ್ಕೆ ಅಥವಾ ಕೇಳುವ ಧ್ವನಿಗೆ ಮಾಧ್ಯಮವೊಂದರ ಅಗತ್ಯವಿದೆ. ಈ ಗ್ರಹಿಕೆಯ ಕ್ರಿಯೆಯಲ್ಲಿ ವಸ್ತು, ವೀಕ್ಷಕ ಮತ್ತು ಮಾಧ್ಯಮ ಮೂರೂ ಇವೆ. ವಿಮಾನ ಸ್ಥೂಲಕಾಯವಾದ ಕಾರಣ ನಮ್ಮ ನೋಡುವ ಕ್ರಿಯೆಯಿಂದ ಗತಿ ಬದಲಾಯಿಸಲಿಲ್ಲ ಎಂಬುದು ತಾರ್ಕಿಕ ಅರಿವು. ಸೂಕ್ಷ್ಮಜಗತ್ತಿನಲ್ಲಿಯೂ ಕ್ರಿಯೆಗಳನ್ನು ಅರಿತುಕೊಳ್ಳಲು ವಸ್ತು, ವೀಕ್ಷಕ ಮತ್ತು ಮಾಧ್ಯಮಗಳು ಬೇಕು. ಆದರೆ ಸ್ಥೂಲ ಜಗತ್ತಿನಂತೆ ಇಲ್ಲಿ ನಾವು ಅಥವಾ ನಾವು ನೋಡಬಯಸಲು ಬಳಸುವ ಸೂಕ್ಷ್ಮದರ್ಶಕ ಕೇವಲ ವೀಕ್ಷಕರಾಗಿಯಷ್ಟೇ ಇರುತ್ತೇವೆ. ಚಲಿಸುತ್ತಿರುವ ಎಲೆಕ್ಟ್ರಾನೊಂದನ್ನು ಅದರ ಗತಿ ಬದಲಿಸದೆ ಕೇವಲ ನೋಡುತ್ತೇವೆನ್ನುವುದು ಸಾಧ್ಯವಿಲ್ಲ. ನೋಡುವುದಕ್ಕಾಗಿ ಬಳಸುವ ಮಾಧ್ಯಮ ಎಲೆಕ್ಟ್ರಾನಿನ ಸ್ಥಿತಿಯನ್ನೇ ಬದಲಿಸಿಬಿಡುತ್ತದೆ. ಕ್ವಾಂಟಂ ಭೌತವಿಜ್ಞಾನ ಈ ಸತ್ಯವನ್ನೇ ತನ್ನ ಮೂಲತತ್ವಗಳಲ್ಲಿ ಅಳವಡಿಸಿಕೊಂಡಿದೆ. ಅಲ್ಲದೆ ಒಂದು ಗುಣವನ್ನು ಅಳೆವ ವ್ಯವಸ್ಥೆಯಲ್ಲಿ ಅಳೆಯಲಾಗದ ಪ್ರತಿಗುಣವೊಂದಿದೆ. ಸೃಷ್ಟಿಯಲ್ಲಿ ಅಂತರ್ಗತವಾಗಿರುವ ಇಂತಹ ಅನಿಶ್ಚಯತೆಯನ್ನು ಗುರುತಿಸುವುದೂ ವೀಕ್ಷಕನೇ. ಈ ವಿವೇಕವನ್ನು ಬಳಸಿ ಸೂಕ್ತವ್ಯವಸ್ಥೆ ರೂಪಿಸಿ ಎಷ್ಟರ ಮಟ್ಟಿಗೆ ತಾನು ಅಭ್ಯಸಿಸುವ ಕ್ರಿಯೆಯನ್ನು ತನ್ನ ಉಪಕರಣಗಳಿಂದ ನಗಣ್ಯವೆನಿಸುವಷ್ಟು ಕ್ಷೀಣ ಪ್ರಭಾವಕ್ಕೆ ಒಳಪಡಿಸಿ ಎಷ್ಟು ನಿಖರವಾಗಿ ಪರಿಮಾಣಗಳನ್ನು ಅಳೆಯಬಹುದೆಂದು ನಿರ್ಧರಿಸುವ ಸಾಮರ್ಥ್ಯವೂ ಇವನದೇ ಎನ್ನುವುದನ್ನು ಕ್ವಾಂಟಂ ವಿಜ್ಞಾನ ವ್ಯಕ್ತಗೊಳಿಸುತ್ತದೆ. ಹೀಗೆ ಆಧುನಿಕ ಭೌತವಿಜ್ಞಾನ ಮುಂದುವರಿದ ಅಧ್ಯಯನದಲ್ಲಿ ವೀಕ್ಷಕರೂ ಕ್ರಿಯೆಯ ಅವಿಭಾಜ್ಯ ಭಾಗವಾಗಿ ಇಡೀ ಸೃಷ್ಟಿಯೇ ವಸ್ತು ಸ್ಥಿತಿಗಳನ್ನೂ ನೋಡುಗರನ್ನೂ ಪ್ರತ್ಯಕ್ಷವಾಗಿ ಒಳಗೊಂಡ ಕ್ರಿಯಾಸಮುಚ್ಚಯವೆಂದು ಗುರುತಿಸಿದೆ. ದರ್ಶನಗಳಂತೂ ತಮ್ಮೊಳಗೆ ಅನೇಕ ಪ್ರಭೇದಗಳನ್ನು ಹೊಂದಿದ್ದರೂ ಮೇಲಿನ ಅನುಭವವನ್ನೇ ಸಾರಿವೆ. ಕಾಪ್ರ ಅವರು ಇದನ್ನೇ ಮತ್ತೊಂದು ಸಾಮ್ಯವೆಂದು ಗುರುತಿಸಿ ದರ್ಶನಗಳು ಒಂದು ಹೆಜ್ಜೆ ಮುಂದೆ ಸಾಗಿ ಸೃಷ್ಟಿಯ ಈ ಸಮ್ಯಕ್ ರಚನೆಯಲ್ಲಿ ಮಾನವ ಪ್ರಜ್ಞೆಯೂ ಮಿಳಿತವಾಗಿದೆ. ಆದರೆ ವಿಜ್ಞಾನಕ್ಕಿನ್ನೂ ಪ್ರಜ್ಞೆಯನ್ನು ಒಂದು ಪರಿಮಾಣಾತ್ಮಕ ಗುಣವನ್ನಾಗಿ ನೋಡಲು, ಸೃಷ್ಟಿಯೊಳಗೆ ಅಂತರ್ಗತವಾಗಿದೆಯೆಂದು ತಿಳಿಯಲು ಸಾಧ್ಯವಾಗಿಲ್ಲವೆಂದು ಅಭಿಪ್ರಾಯಪಡುತ್ತಾರೆ. ಪ್ರಕೃತಿಯ ಶಾಶ್ವತ ಸ್ವರೂಪವೆಂದರೆ ನಿರಂತರ ಕ್ರಿಯಾತ್ಮಕ ಬದಲಾವಣೆ ಎಂದು ತಾವೋ ಗ್ರಹಿಸಿದರೆ ಬಲಕ್ಷೇತ್ರಗಳ ನಿರಂತರ ಅಂತಃಕ್ರಿಯೆಯೆಂದು ಆಧುನಿಕ ಭೌತವಿಜ್ಞಾನ ಗ್ರಹಿಸುತ್ತದೆ.
ಅಪಭ್ರಂಶ ನೋಟ
ಸೃಷ್ಟಿಯ ನೈಜರೂಪದ ದರ್ಶನವಾಗಬೇಕಾದರೆ ವಿಶೇಷ ಅಂತರ್ದೃಷ್ಟಿಯಿಂದ ಸಾಧ್ಯ. ಸಾಮಾನ್ಯ ದೃಷ್ಟಿಗೆ ಗೋಚರವಾಗುವುದು ಸೃಷ್ಟಿಯ ನಿಜರೂಪವಲ್ಲ ಕೇವಲ ಅದರ ಅಪಭ್ರಂಶವೆಂದು ದರ್ಶನಗಳೂ ಅರುಹುತ್ತವೆ. ಆಧುನಿಕ ಭೌತ ವಿಜ್ಞಾನದಲ್ಲಿನ ಸಾಪೇಕ್ಷ ಸಿದ್ಧಾಂತವೂ ಸೃಷ್ಟಿಯ ಘಟನೆಗಳನ್ನು ಕಾಲ ದೇಶಗಳೆರಡನ್ನೂ ಒಳಗೊಂಡ 4-ದಿಶೆಯ ಚೌಕಟ್ಟಿನಲ್ಲಿ ಸರಿಯಾಗಿ ಗ್ರಹಿಸಬಹುದು ಎನ್ನುತ್ತ ನಮ್ಮ ಸಾಮಾನ್ಯ ಗ್ರಹಿಕೆ 3-ದಿಶೆಯ ದೇಶವನ್ನುಳ್ಳ ಚೌಕಟ್ಟನ್ನು ಆಧರಿಸಿದೆ, ಇದರಿಂದಾಗಿ ನಮ್ಮ ವಿವರಣೆ ನಿಖರವಾಗಿರದೆ ಅಂದಾಜಾಗಿದ್ದು ಅನೇಕ ಸಾರಿ ಅಪೂರ್ಣವೂ ದೋಷಯುಕ್ತವೂ ಆಗಿರುತ್ತದೆಂದು ಹೇಳುವ ಮೂಲಕ ದರ್ಶನಗಳ ಅನುಭವವನ್ನೇ ವಿಜ್ಞಾನವೂ ಪ್ರತಿಧ್ವನಿಸಿದೆ ಎನ್ನಿಸುತ್ತದೆ.
ತಾರ್ಕಿಕ ನೋಟ ಬೀರಿ ವಿಜ್ಞಾನಿ ಹೊರಜಗತ್ತಿನ ವಿಶ್ಲೇಷಣೆ ಮಾಡಿದರೆ ದಾರ್ಶನಿಕರು ಒಳನೋಟಗಳ ಬೆಂಬತ್ತಿ ಅನುಭವಗಳನ್ನು ಪಡೆದಿದ್ದಾರೆ. ಭಿನ್ನದಾರಿಗಳಲ್ಲಿ ಸಾಗಿದರೂ ವಿಶ್ವವನ್ನು ಪೂರ್ಣವಾಗಿ ಕಾಣಬೇಕೆನ್ನುವುದೇ ಇಬ್ಬರ ಗುರಿ. ಒಂದು ಹೋಲಿಕೆಯಿಟ್ಟು ಹೇಳುವುದಾದರೆ ವಿಶ್ವವೆಂಬ ವೃಕ್ಷವನ್ನು ಅರಿಯಲು ವಿಜ್ಞಾನಿಗಳು ರೆಂಬೆ ಕೊಂಬೆಗಳನ್ನು ಅಧ್ಯಯನ ಮಾಡಿದರೆ ದಾರ್ಶನಿಕರು ಬೇರುಗಳನ್ನು ಹಿಡಿದರೆನ್ನಬಹುದು. 20ನೆಯ ಶತಮಾನದ ಪೂರ್ವದಲ್ಲಿದ್ದ ಭೌತವಿಜ್ಞಾನವೂ ಇದೇ ಗುರಿಯಿಟ್ಟುಕೊಂಡು ಸಾಗಿತ್ತಾದರೂ ಮುಂದುವರಿದ ವೈಜ್ಞಾನಿಕ ಪ್ರಯೋಗಗಳೇ ಅದರ ತತ್ವಗಳಲ್ಲಿನ ದೋಷಗಳನ್ನೂ ಮಿತಿಗಳನ್ನೂ ಪ್ರಮಾಣಿಸಿ ತೋರಿಸಿದವು. ಆ ಸಂಕ್ರಮಣ ಸ್ಥಿತಿಯಲ್ಲೇ ರೂಪುಗೊಂಡ ಆಧುನಿಕ ಭೌತವಿಜ್ಞಾನ ತನ್ನ ಹೊಚ್ಚ ಹೊಸ ಹಾಗೂ ಪರಿಷ್ಕೃತ ನಿಯಮಗಳ ಬೆಳಕಿನಲ್ಲಿ ಜಗತ್ತಿನ ಸೂಕ್ಷ್ಮ ಹಾಗೂ ಸ್ಥೂಲ ರಚನೆಗಳೆಲ್ಲವನ್ನೂ ಅರಿಯುವ ಪ್ರಯತ್ನಗಳಿಗೆ ಕೈಹಾಕಿ ಯಶಸ್ಸು ಗಳಿಸಲಾರಂಭಿಸಿತು. ಇಂತಹ ಯಶಸ್ಸಿಗೆ ಕಾರಣರಾದ ಅನೇಕ ವಿಜ್ಞಾನಿಗಳು ಪೌರ್ವಾತ್ಯ ದರ್ಶನಗಳನ್ನು ಅಧ್ಯಯನ ಮಾಡಿದಾಗ ಅಲ್ಲಿನ ಅನುಭವಗಳಲ್ಲೂ ವೈಜ್ಞಾನಿಕ ನಿಲುವುಗಳಲ್ಲೂ ಸಾಮ್ಯಗಳೆಂದು ತೋರಿದ್ದನ್ನು ವಿವಿಧ ಸಂದರ್ಭಗಳಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದರು. ಭೌತವಿಜ್ಞಾನದಲ್ಲೇ ಸಾಕಷ್ಟು ಸಂಶೋಧನೆಗೈದಿದ್ದ ಕಾಪ್ರ ಹಲವು ವರ್ಷ ಕಾಲ ಎರಡೂ ಜ್ಞಾನದಾಗರಗಳನ್ನು ಆಸಕ್ತಿಯಿಂದ ಅಧ್ಯಯನ ಮಾಡಿ ಹಿರಿಯ ವಿಜ್ಞಾನಿಗಳಲ್ಲದೆ ಸ್ವತಃ ತಾವೂ ಕಂಡ ಸಾಮ್ಯಗಳನ್ನು ವಿವರಣಾತ್ಮಕವಾಗಿ ‘ದಿ ತಾವೋ ಫಿಸಿಕ್ಸ್’ ಕೃತಿಯಲ್ಲಿ ದಾಖಲಿಸಿದ್ದಾರೆ. ಎರಡೂ ಜ್ಞಾನಗಳಲ್ಲಿನ ತಾತ್ವಿಕ ನೆಲೆಗಟ್ಟುಗಳನ್ನು ಪರಿಚಯಿಸಿ ಸಾಮ್ಯಗಳನ್ನು ವ್ಯಾಖ್ಯಾನಿಸಿದ್ದೇನೆಯೇ ಹೊರತು ಕಟ್ಟುನಿಟ್ಟಾಗಿ ಪ್ರಮಾಣೀಕರಿಸಿಲ್ಲವೆಂದು ವಿನೀತವಾಗಿ ಹೇಳುವ ಕಾಪ್ರ ತಮ್ಮ ಅನುಭವವೇ ಓದುಗರಿಗೂ ಆಗಬಹುದೆಂಬ ವಿಶ್ವಾಸಹೊಂದಿದ್ದಾರೆ. ಸಾಮ್ಯಗಳನ್ನು ಪರಿಶೋಧಿಸುವ ಉದ್ದೇಶದಿಂದ ಹೊರಡುವ ಕಾಪ್ರ ತಮ್ಮ ಕೃತಿಯಲ್ಲೊಂದು ಕಡೆ ವಿಜ್ಞಾನ ಮತ್ತು ದರ್ಶನ ಮನಸ್ಸಿನ ಅಥವಾ ಪ್ರಜ್ಞೆಯ ಪರಸ್ಪರ ಪೂರಕ ರೂಪಗಳು. ವಿಜ್ಞಾನಕ್ಕೆ ದರ್ಶನ ಬೇಕಿಲ್ಲ, ದರ್ಶನಕ್ಕೆ ವಿಜ್ಞಾನ ಬೇಕಿಲ್ಲ ಎಂದು ವಿಜ್ಞಾನಿಯಂತೆ ಖಡಾಖಂಡಿತವಾಗಿ ನುಡಿದರೂ, ಮಾನವರಿಗೆ ಆಂತರ್ಯದ ಸ್ವರೂಪವನ್ನು ತಿಳಿಯಲು ದರ್ಶನ ಬೇಕು, ಆಧುನಿಕ ಬದುಕಿಗಾಗಿ ವಿಜ್ಞಾನ ಬೇಕು ಎನ್ನುವಲ್ಲಿ ದಾರ್ಶನಿಕರಂತೆ ನುಡಿಯುತ್ತಾರೆ.
ಹನ್ನೆರಡನೆಯ ಶತಮಾನದಲ್ಲೊಂದು ಕ್ರಾಂತಿಯಾಗಿ ಬಸವಣ್ಣ ಅಲ್ಲಮ ಅಕ್ಕಮಹಾದೇವಿಯವರೇ ಮುಂತಾದವರಿಂದ ಹೊಸ ದರ್ಶನವೊಂದು ಈ ನಾಡಿನಲ್ಲಿ ಮೈದಳೆದಿತ್ತು. ಮುಕ್ತ ಚಿಂತನೆಗಳ ಮೂಲಕ ಲೌಕಿಕದಲ್ಲಿ ಕಾಯಕ ನಿಷ್ಟರಾಗಿ ವೈಚಾರಿಕ ದಾರ್ಶನಿಕ ನಿಲುವುಗಳೆರಡನ್ನೂ ಅನುಭವಮಂಟಪದ ಅಂಗಳದಲ್ಲಿ ಮುಖಾಮುಖಿಯಾಗಿಸಿ, ಜಂಗಮಕ್ಕೆ ತಮ್ಮನ್ನು ಅರ್ಪಿಸಿಕೊಂಡು ಶರಣತ್ವ ಪಡೆದ ಈ ಮಹಾಚೇತನಗಳು, ಕಾಲವನ್ನು ಬದಿಗಿಟ್ಟು ನೋಡುವುದಾದರೆ, ಕಾಪ್ರರ ಆಶಯಗಳಿಗೆ ಸಾಕ್ಷಿಯೆಂಬಂತೆ ಪರಿಪೂರ್ಣವಾಗಿ ಬದುಕಿದ್ದರು ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಎರಡೂ ಜ್ಞಾನಗಳು ಶರಣರ ಬದುಕಿನಲ್ಲಿ ಸಮ್ಮಿಳಿತವಾಗಿತ್ತು ಎನ್ನುವುದಕ್ಕೆ ಬಸವಣ್ಣನವರ ಈ ವಚನ ಗಮನಿಸಬಹುದು: ‘ಅಯ್ಯಾ ನೀನು ನಿರಾಕಾರವಾಗಿದ್ದಲ್ಲಿ ನಾನು ಜ್ಞಾನವೆಂಬ ವಾಹನವಾಗಿದ್ದೆ ಕಾಣಾ, ಅಯ್ಯಾ ನೀನು ಆಕಾರವಾಗಿದ್ದಲ್ಲಿ ನಾನು ವೃಷಭನೆಂಬ ವಾಹನವಾಗಿದ್ದೆ ಕಾಣಾ, ಅಯ್ಯಾ ನೀನು ನಾಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿದ್ದೆ ಕಾಣಾ, ಅಯ್ಯಾ ನೀನೆನ್ನ ಭವವ ಕೊಂದಹೆನೆಂದು ಜಂಗಮ ಲಾಂಛನವಾಗಿ ಬಂದಲ್ಲಿ, ನಾನು ಭಕ್ತನೆಂಬ ವಾಹನವಾಗಿದ್ದೆ ಕಾಣಾ, ಕೂಡಲಸಂಗಮದೇವಾ.’ ಹಾಗೆಯೇ ‘ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ, ಮೂಡಲಿ ಮಂಗಳ ಮತಿಮತಿಯಲ್ಲಿ, ಕವಿ ಋಷಿ ಸಂತರ ಆದರ್ಶದಲಿ ಸರ್ವೋದಯವಾಗಲಿ ಸರ್ವರಲಿ’ ಎಂದು ರಾಷ್ಟ್ರಕವಿ ಕುವೆಂಪು ಹೊಂದಿದ್ದ ಆಶಯವನ್ನೇ ಕಾಪ್ರ ಅವರಲ್ಲೂ ಕಾಣಬಹುದು.
Comments 9
J.K. Patil
Dec 12, 2021ಹೀಗೆ ವಿಜ್ಞಾನ ಮತ್ತು ಧರ್ಮಗಳನ್ನು ಜೊತೆಜೊತೆಯಾಗಿ ತೂಗಿ ನೋಡುವ ವಿಚಾರಗಳು ಬಹಳ ಕುತೂಹಲಕರವಾಗಿರುತ್ತವೆ. ಶರಣರ ವಿಚಾರಗಳನ್ನು ಮತ್ತಷ್ಟು ಜೋಡಿಸಿ ನೋಡುವ ಸಾಧ್ಯತೆ ಇತ್ತು ಎನಿಸುತ್ತದೆ. ಪುಸ್ತಕದ ಪರಿಚಯ ಮಾಡಿ ಕೊಟ್ಟ ಮಲ್ಲೇಶ್ ಸರ್ ಅವರಿಗೆ ಧನ್ಯವಾದಗಳು.
Prasanna Kumar
Dec 14, 2021ಲೇಖನ ಓದಿದ ಬಳಿಕ ಶ್ರೇಷ್ಠ ವಿಜ್ಞಾನಿ ಶ್ರೇಷ್ಠ ತತ್ವಜ್ಞಾನಿಯೂ ಆಗಿರುತ್ತಾನೆ ಎಂದು ಎಂದೋ ಓದಿದ ಮಾತು ನೆನಪಾಯಿತು, ನಿಜವೆನಿಸಿತು.
Nandini
Dec 15, 2021ವಿಜ್ಞಾನದ್ದು ತಾರ್ಕಿಕ ಜ್ಞಾನ, ದರ್ಶನಗಳದ್ದು ಧ್ಯಾನೋತ್ಪನ್ನ ಜ್ಞಾನ… ಇವೆರಡು ಸಂಧಿಸುತ್ತಲೇ ಇರುತ್ತವೆ ಎನ್ನುವುದು ನಿಜಕ್ಕೂ ವಿಸ್ಮಯ!! ಇಂತಹ ವೈಜ್ಞಾನಿಕ ಬರಹಗಳು ಬರಲಿ. ತಾವೋ ಫಿಸಿಕ್ಸ್ ನ ವಿವರಣೆ ಅಸ್ಪಷ್ಟವಾಗಿದೆಯಾದರೂ ಒಟ್ಟಾರೆ ಲೇಖನ ಪುಸ್ತಕ ಪರಿಚಯವಾದ್ದರಿಂದ ಆ ಕೊರತೆ ಎದ್ದು ಕಾಣಲಿಲ್ಲ.
P.K. Halappa
Dec 19, 2021ಆಧುನಿಕ ಭೌತವಿಜ್ಞಾನದ ಸಂಶೋಧನೆಗಳು ತಮ್ಮ ಪಥವನ್ನು ಬದಲಿಸಿಕೊಂಡು ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಾ ಹೋಗುತ್ತವೆ ಎನ್ನುವುದನ್ನು ಮನಮುಟ್ಟುವಂತೆ ವಿವರಿಸಿದ್ದೀರಿ. ಆಧ್ಯಾತ್ಮಜೀವಿಯ ಅನುಭಾವಕ್ಕೆ ಯಾವ ಪ್ರಯೋಗಗಳ ಒರೆಗಲ್ಲು ಹಾಕುವುದು? ಅವುಗಳನ್ನು ವಿಜ್ಞಾನದೊಂದಿಗೆ ತುಲನೆ ಮಾಡಿ ನೋಡುವುದೇ ಸರಿಯಾದುದು ಎನ್ನುವುದು ನನ್ನ ಅಭಿಪ್ರಾಯ.
ಗೌರೀಶ್ ಗದಗ
Dec 19, 2021ಉತ್ತಮ ಪುಸ್ತಕವೊಂದರ ಪರಿಚಯ ಮಾಡಿಕೊಟ್ಟಿರುವಿರಿ. ನಾನು ಖಂಡಿತ ಓದುತ್ತೇನೆ. ವಿಜ್ಞಾನಿಯೊಬ್ಬ ಆಧ್ಯಾತ್ಮದ ಒಳನೋಟಗಳನ್ನು ಗಣನೆಗೆ ತೆಗೆದುಕೊಂಡಿರುವುದು ನಿಜಕ್ಕೂ ಅಚ್ಚರಿ ಹುಟ್ಟಿಸುವಂಥದ್ದು.
Vivekananda Jigali
Dec 23, 2021Informative and interesting, thanks for introducing this book.
Ramesh Saligrama
Dec 23, 2021ವಿಜ್ಞಾನ ಮತ್ತು ಆಧ್ಯಾತ್ಮದ ಎರಡು ವಿಭಿನ್ನ ಜ್ಞಾನಗಳನ್ನು ತುಲನೆ ಮಾಡಿದ ರೀತಿ ಚೆನ್ನಾಗಿದೆ, ಹೀಗೆ ಎರಡು ಭಿನ್ನ ದಾರಿಗಳನ್ನು ಏಕೀಭವಿಸುವ ಪ್ರಯತ್ನ ಹೊಸ ದಾರಿಯೊಂದಕ್ಕೆ ಜಾಗ ಮಾಡಿಕೊಡುತ್ತದೆ. ಐನಸ್ಟಿನರಂಥ ವಿಜ್ಞಾನಿಗಳ ಸಾಲಿನಲ್ಲಿ ಇವರೂ ನಿಲ್ಲುತ್ತಾರೆ.
Basavalinga H
Dec 27, 2021ಭೌತವಿಜ್ಞಾನಿ ಫ್ರಿಜೋಕಾಪ್ರ ಅವರಿಗೆ ಸಮುದ್ರದ ದಡದ ಮೇಲಾದ ಆ ಅನುಭೂತಿ ಎಂತಹುದು? ಈ ಪುಸ್ತಕ ಬರೆಯಲು ಅದೇ ಅವರಿಗೆ ಪ್ರೇರಣೆಯಾಗಿದ್ದು. ಅದರ ಬಗ್ಗೆ ಏನಾದರೂ ವಿಶೇಷವಾಗಿ ಈ ಪುಸ್ತಕದಲ್ಲಿ ಅಥವಾ ಬೇರೆಡೆಗೆ ಮಾತನಾಡಿದ್ದಾರೆಯೇ? ವಿಜ್ಞಾನಿಯ ಕಣ್ಣಿಗೆ ಗೋಚರಿಸಿದ ಆ ಲೀಲೆಗೆ ವಿಜ್ಞಾನ ಪ್ರಾಧ್ಯಾಪಕರಾದ ನೀವೇನು ಹೇಳುತ್ತೀರಿ? ನನಗೆ ತಿಳಿಯುವ ಕುತೂಹಲ, ಉತ್ತರಿಸಿ ಸರ್.
Pradeep
Dec 28, 2021ವಿಜ್ಞಾನ ಆವಿಷ್ಕಾರಗಳಿಗೆ ಗಣಿತವೇ ಭಾಷೆ. ಆಧ್ಯಾತ್ಮದ ಕಾಣ್ಕೆಗಳಿಗೆ ಒಗಟೆನಿಸುವ ಮಾತುಗಳೇ ಭಾಷೆ!! ವಿಶ್ವದ ರಹಸ್ಯವನ್ನು ತಿಳಿದುಕೊಳ್ಳಬೇಕೆನ್ನುವ ಮನುಷ್ಯನ ಹುಡುಕಾಟಕ್ಕೆ ಕೊನೆಯೇ ಇಲ್ಲ… ನೀವು ಪರಿಚಯಿಸಿದ ಪುಸ್ತಕ ಈ ಎರಡೂ ದಾರಿಗಳನ್ನು ಜೊತೆಯಾಗಿಸಲು ಯತ್ನಿಸುವಂತಿದೆ.