ತುಮ್ಹಾರೆ ಸಿವಾ ಔರ್ ಕೋಯಿ ನಹಿ…
ತಂದೆ ನೀನು, ತಾಯಿ ನೀನು,
ಬಂಧು ನೀನು, ಬಳಗ ನೀನು.
ನೀನಲ್ಲದೆ ಮತ್ತಾರೂ ಇಲ್ಲಯ್ಯಾ,
ಕೂಡಲಸಂಗಮದೇವಾ,
ಹಾಲಲದ್ದು ನೀರಲದ್ದು.
2023 ಜುಲೈ 2 ರಿಂದ ಸೆಪ್ಟೆಂಬರ್ 2ರವರೆಗೆ `ದೇಶದ ಪ್ರಥಮ ವಚನ ಸಂಸ್ಕೃತಿ ಅಭಿಯಾನ’ ಸಾಣೇಹಳ್ಳಿಯ ‘ಶ್ರೀ ಶಿವಕುಮಾರ ಕಲಾಸಂಘ’ದಿಂದ ನಡೆಯುತ್ತಲಿದೆ. ಬಸವಣ್ಣನವರ 44 ವಚನಗಳನ್ನು ಹಿಂದಿಯಲ್ಲಿ ಅನುವಾದಿಸಿ ಹಿಂದಿಯ ಹಾಡುಗಾರರಿಂದಲೇ ಹಾಡಿಸಲಾಗಿದೆ. ಸಂಗೀತ ಸಿ ಅಶ್ವಥ್ ಅವರದು. 24 ಜನ ನೃತ್ಯ ಕಲಾವಿದೆಯರು ವಚನಗಳ ಆಶಯಕ್ಕೆ ತಕ್ಕಂತೆ ಅದ್ಭುತ ಭಾವಾಭಿನಯ ನೀಡಿದ್ದಾರೆ. ಬಸವಣ್ಣನವರು ಸಮಾಜಕ್ಕೆ ಬೆಳಕು ನೀಡಿದವರು. ಅದುವರೆಗೆ ಇದ್ದ ಮೌಢ್ಯ, ಅಜ್ಞಾನ, ಕಂದಾಚಾರ ಮತ್ತಿತರ ಅನಿಷ್ಟಗಳನ್ನು ಹೋಡೆದೋಡಿಸಲು ಟೊಂಕಕಟ್ಟಿ ನಿಂತವರು. ಇಂದಿನ ಸಂಸತ್ತಿಗೆ (ಪಾರ್ಲಿಮೆಂಟ್) ‘ಅನುಭವ ಮಂಟಪ’ದ ಮೂಲಕ ಬುನಾದಿ ಹಾಕಿದವರು. ಅವತ್ತಿನ ಅನುಭವ ಮಂಟಪಕ್ಕೂ ಇಂದಿನ ಸಂಸತ್ತಿಗೂ ಹೋಲಿಸಲು ಸಾಧ್ಯವಿಲ್ಲ. ಅನುಭವ ಮಂಟಪದ ಸದಸ್ಯರಾಗಿದ್ದವರು ಆಚಾರ, ವಿಚಾರ ಶುದ್ಧಿಯನ್ನು ಕಾಯ್ದುಕೊಂಡ 770 ಜನ ಅಮರ ಗಣಂಗಳು. ಅವರೇ ಸಂಸತ್ ಸದಸ್ಯರು. ಅವರು ವ್ಯಕ್ತಿಗತ ಶುದ್ಧಿಯ ಜೊತೆಗೆ ಸಾಮಾಜಿಕ ಶುದ್ಧಿಗೂ ಒತ್ತುಕೊಟ್ಟವರು. ಶರಣರ ಆಚಾರ, ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. 900 ವರ್ಷ ಕಳೆದರೂ ಶರಣರ ಆಶಯದಂತೆ ನಡೆದುಕೊಳ್ಳಲು ಸಾಧ್ಯವಾಗಿಲ್ಲ.
ಶರಣರು ಜಾತ್ಯತೀತ ಸಮಾಜವನ್ನು ನಿರ್ಮಾಣ ಮಾಡಿ ಲಿಂಗಸಮಾನತೆಯನ್ನು ಜಾರಿಯಲ್ಲಿ ತಂದರು. ಸಮಸಮಾಜದ ನಿರ್ಮಾಣ ಅವರ ಧ್ಯೇಯವಾಗಿತ್ತು. ಸಮಾಜದಲ್ಲಿ ಬಡವ, ಶ್ರೀಮಂತ ಎನ್ನುವ ಅಂತರ ಇರಬಾರದು ಎಂದು ಅದಕ್ಕಾಗಿ ಕಾಯಕ ಶ್ರದ್ಧೆಯನ್ನು ಜಾರಿಯಲ್ಲಿ ತಂದರು. ಏನೆಲ್ಲ ಪರಿವರ್ತನೆಯ ಹರಿಕಾರರಾಗಿದ್ದವರು ಬಸವಣ್ಣನವರು. ಅವರ ಆಶಯಗಳನ್ನು ಅಂದಿನಿಂದ ಇಂದಿನವರೆಗೆ ಕತೆ, ಕಾದಂಬರಿ, ಕಾವ್ಯ, ಕವನ, ವೈಚಾರಿಕ ಲೇಖನ, ನಾಟಕ ಮುಂತಾದ ಸಾಹಿತ್ಯ ಪ್ರಕಾರಗಳ ಮೂಲಕ ಪ್ರಚಾರ, ಪ್ರಸಾರ ಮಾಡುತ್ತಲಿದ್ದಾರೆ. ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಶರಣರ ತತ್ವಾದರ್ಶಗಳನ್ನು ಬೇರೆ ಬೇರೆ ಆಯಾಮಗಳ ಮೂಲಕ ಜನರಿಗೆ ತಲುಪಿಸುವ ಕಾಯಕ ಮಾಡುತ್ತಲೇ ಬಂದವರು. ಅವರೇ ನಮಗೆ ಸ್ಪೂರ್ತಿಯ ಸೆಲೆ. ಅವರ ಸ್ಪೂರ್ತಿಯ ಸತ್ಫಲವೇ ‘ಶ್ರೀ ಶಿವಕುಮಾರ ಕಲಾಸಂಘ’. ಅದರ ಮೂಲಕವೇ ಶಿವಸಂಚಾರ, ಭಾರತ ಸಂಚಾರ, ಶಿವದೇಶ ಸಂಚಾರದಂತಹ ರಂಗಚಟುವಟಿಕೆಗಳು, ‘ಶಾವಣ ಸಂಜೆ’, ‘ಮತ್ತೆ ಕಲ್ಯಾಣ’ ಮುಂತಾದ ಕಾರ್ಯಕ್ರಮಗಳು ನಡೆಯುತ್ತ ಬಂದಿವೆ. ಇವೇ ನಮಗೆ ಹೊಸ ಹೊಸ ಚಿಂತನೆಗೆ ಪ್ರೇರಣೆ. 2018ರಲ್ಲಿ ಬಸವಣ್ಣನವರ 44 ವಚನಗಳಿಗೆ ಸಾಣೇಹಳ್ಳಿಯ ಶಾಲೆಯ ನೂರು ವಿದ್ಯಾರ್ಥಿಗಳು ‘ನೀನಲ್ಲದೆ ಮತ್ತಾರೂ ಇಲ್ಲವಯ್ಯಾ’ ಎನ್ನುವ ನೃತ್ಯರೂಪಕವನ್ನು ಹತ್ತಾರು ಕಡೆ ಪರಿಣಾಮಕಾರಿಯಾಗಿ ಅಭಿನಯಿಸಿದ್ದರು. ಅದರ ಮೂರು ಪ್ರಯೋಗಗಳು ಮುಂಬೈ ನಗರದಲ್ಲೂ ನಡೆದವು. ಆಗ ಅನೇಕ ಕನ್ನಡಿಗರು, ಇವೇ ವಚನಗಳಿಗೆ ಹಿಂದಿ ಭಾಷೆಯಲ್ಲಿ ಅಭಿನಯ ನೀಡಿದರೆ ಭಾರತದಾದ್ಯಂತ ಬಸವಣ್ಣನವರ ಪ್ರಗತಿಪರ ಚಿಂತನೆಗಳನ್ನು ಬಿತ್ತಬಹುದು ಎನ್ನುವ ಹೊಳಹು ನೀಡಿದರು. ಅದರ ಸತ್ಫಲವೇ `ತುಮ್ಹಾರಿ ಸಿವಾ ಕೋಯಿ ನಹಿ’ ಎನ್ನುವ ಹಿಂದಿ ನೃತ್ಯರೂಪಕ.
ಬಸವಣ್ಣನವರ ವಚನಗಳನ್ನು ಹಿಂದಿ ಭಾಷೆಗೆ ಅನುವಾದಿಸಿ ಅದಕ್ಕೆ ಹಿಂದಿ ಗಾಯಕರಿಂದಲೇ ಹಾಡಿಸಿ ಧ್ವನಿಮುದ್ರಿಸಿ ಕೊಟ್ಟವರು ಶ್ರೀನಿವಾಸ ಜಿ ಕಪ್ಪಣ್ಣನವರು. ಅವರ ಮಗಳು ಸ್ನೇಹಾ 24 ನೃತ್ಯ ಕಲಾವಿದೆಯರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಒಂದು ತಿಂಗಳ ಅವಧಿಯಲ್ಲಿ ನೃತ್ಯಾಭ್ಯಾಸ ಮಾಡಿಸಿದ್ದಾರೆ. ಜುಲೈ ಎರಡರಂದು ಬೆಂಗಳೂರಲ್ಲಿ ನೀಡಿದ ಮೊದಲ ಪ್ರದರ್ಶನಕ್ಕೆ ಬಂದ ಅಪಾರ ಕಲಾಸಕ್ತರ ಸಂಖ್ಯೆಯೇ ನೃತ್ಯರೂಪಕದ ಯಶಸ್ಸನ್ನು ತೋರಿತು. ಒಂದು ದೃಶ್ಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಕನ್ನಡ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಹಿರಿಯರಾದ ಶಾಮನೂರು ಶಿವಶಂಕರಪ್ಪ, ಸಚಿವ ಎಂ ಬಿ ಪಾಟೀಲ, ಪಿ ಜಿ ಆರ್ ಸಿಂಧ್ಯ ಮತ್ತಿತರರು ನೋಡಿ ಬೆರಗುಗೊಂಡರು. ವಚನಗಳ ಅರ್ಥ, ಸಂಗೀತ, ನೃತ್ಯಾಭಿನಯ, ನೆರಳು ಬೆಳಕಿನ ಸಂಯೋಜನೆ ಪ್ರೇಕ್ಷಕರು ನಿಶ್ಯಬ್ದತೆ ಕಾಯ್ದುಕೊಳ್ಳಲು ಕಾರಣವಾಗಿತ್ತು. ಅವರು ಕೊನೆಯಲ್ಲಿ ತಮ್ಮ ಮಾತುಗಳ ಮೂಲಕ ಸಂತೋಷ ವ್ಯಕ್ತಪಡಿಸಿದರು. ವಚನ ಸಂಸ್ಕೃತಿಯನ್ನು ಜನಮನದಲ್ಲಿ ಬಿತ್ತಿ ಅವರಲ್ಲಿ ಜಾಗೃತಿ ಮೂಡಿಸುವ ಸದಾಶಯವೇ ‘ತುಮ್ಹಾರಿ ಸಿವಾ ಕೋಯಿ ನಹಿ’ ಎನ್ನುವ ನೃತ್ಯಾಭಿನಯ. ಆರಂಭದಲ್ಲೇ ಯಶಸ್ವಿಯಾಗಿದ್ದು ಅದರ ಮುಂದಿನ ಯಾನಕ್ಕೆ ಸ್ಪೂರ್ತಿಯನ್ನು ನೀಡಿತು. ದೇಶದ ಮೊದಲ ವಚನ ಸಂಸ್ಕೃತಿ ಅಭಿಯಾನ ಈ ನೃತ್ಯ ಎನ್ನುವುದು ಅನೇಕರ ಅಭಿಪ್ರಾಯ. ಕಾರಣ ಇಂಥ ಅಭಿಯಾನ ಇದುವರೆಗೂ ನಡೆಯದಿದ್ದುದು. ಹೈದರಾಬಾದಿನಲ್ಲಿ ನಮ್ಮ ತಂಡದ ಪ್ರದರ್ಶನ ನೋಡಿದ ಕೆಲವರು ನಮಗೆ ಪೋನ್ ಮಾಡಿ ಅವಿಸ್ಮರಣೀಯ, ಅದ್ಭುತ, ಹಿಂದೆಂದೂ ಇಂಥ ಪ್ರಯೋಗವನ್ನು ನೋಡಿರಲಿಲ್ಲ. ವಸ್ತ್ರವಿನ್ಯಾಸ, ವೈವಿಧ್ಯಮಯ ನೃತ್ಯ ಸಂಯೋಜನೆ! ಇಲ್ಲಿ ಯಾವುದೇ ಧರ್ಮ ಅಥವಾ ವ್ಯಕ್ತಿಯ ಅವಹೇಳನ ಇಲ್ಲ. ಆದರ್ಶ ತತ್ವಗಳನ್ನು ಹೇಳಲಾಗಿದೆ. ಇದು ಆತ್ಮಾವಲೋಕನಕ್ಕೆ ಪ್ರೇರಕವಾಗಿದೆ ಎಂದರು.
ಮುಂದೆ ಜಾಯಿರಾಬಾದ್ನಲ್ಲಿ ನಡೆದ ಪ್ರದರ್ಶನ ನೋಡಿದವರು ಇನ್ನೂ ಒಂದೆರಡು ಕಡೆ ಕಾರ್ಯಕ್ರಮ ಕೊಡಿ. ಅದರ ಖರ್ಚು ವೆಚ್ಚಗಳನ್ನು ಭರಿಸುತ್ತೇವೆ ಎಂದು ಬೇಡಿಕೆ ಸಲ್ಲಿಸಿದ್ದು ವಚನ ಸಂಸ್ಕೃತಿ ಸಾರುವ ನೃತ್ಯದ ಪರಿಣಾಮ ಪ್ರೇಕ್ಷಕರ ಮೇಲೆ ಎಷ್ಟಾಗಿದೆ ಎನ್ನುವುದರ ದ್ಯೋತಕ. ಈ ಅಭಿಯಾನ ತೆಲಂಗಾಣ, ಆಂಧ್ರಪ್ರದೇಶ, ಒರಿಸ್ಸಾ, ಪಶ್ಚಿಮಬಂಗಾಳ, ಜಾರ್ಖಂಡ್, ಉತ್ತರ ಪ್ರದೇಶ, ದೆಹಲಿ, ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಚೆನ್ನೈ ಮತ್ತು ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿ 60ಕ್ಕೂ ಹೆಚ್ಚು ಪ್ರದರ್ಶನ ನೀಡಲಿದೆ. ಸೆಪ್ಟೆಂಬರ್ ಎರಡರಂದು ಸಾಣೇಹಳ್ಳಿಯಲ್ಲಿ ಮುಕ್ತಾಯವಾಗಲಿದೆ. ಇದೊಂದು ವಿಶಿಷ್ಠ, ವಿನೂತನ ಹಾಗೂ ಅಷ್ಟೇ ದುಸ್ಸಾಹಸದ ಪ್ರಯೋಗ. ಇಲ್ಲಿ ಕೇವಲ ನೃತ್ಯಪ್ರದರ್ಶನ ಮಾತ್ರ ಇಲ್ಲ; ಆದರ್ಶಗಳನ್ನು ಬಿತ್ತುವ ಮೂಲಕ ಎಲ್ಲೆಡೆ ಶಾಂತಿ, ಸಮಾಧಾನ, ಸೌಹಾರ್ದತೆ ನೆಲೆಗೊಳ್ಳುವಂತಾಗಬೇಕು ಎನ್ನುವುದು ನಮ್ಮ ಆಶಯ. ವಚನಗಳ ಭಾವ ಜನರನ್ನು ಎಚ್ಚರಿಸಿ ಜಾಗೃತಗೊಳಿಸುವಂತಹವು. `ನೀನೊಲಿದಡೆ ಕೊರಡು ಕೊನರುವುದಯ್ಯ, ಕರಿಯಂಜುವುದು ಅಂಕುಶಕ್ಕಯ್ಯ, ದಯವಿಲ್ಲದ ಧರ್ಮವದೇವುದಯ್ಯಾ?, ಇವನಾರವ ಇವನಾರವ, ಲೇಸೆನಿಸಿಕೊಂಡು ಅಯ್ದು ದಿನ ಬದುಕಿದಡೇನು?, ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ, ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ, ಸೂರ್ಯನ ಉದಯ ತಾವರೆಗೆ ಜೀವಾಳ, ನರೆ ಕೆನ್ನೆಗೆ ತೆರೆ ಗಲ್ಲಕೆ ಶರೀರ ಗೂಡು ಹೋಗದ ಮುನ್ನ, ಎನ್ನ ವಾಮಕ್ಷೇಮ ನಿಮ್ಮದಯ್ಯಾ, ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು, ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲವಯ್ಯಾ, ಶರಣ ನಿದ್ರೆಗೈದಡೆ ಜಪ ಕಾಣಿರೊ, ನುಡಿದಡೆ ಮುತ್ತಿನ ಹಾರದಂತಿರಬೇಕು, ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ, ಆರು ಮುನಿದು ನಮ್ಮನೇನ ಮಾಡುವರು, ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ, ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ, ಆಡಿದಡೇನು ಹಾಡಿದಡೇನು ಓದಿದಡೇನು’ ಎನ್ನುವ ಪ್ರತಿಯೊಂದು ವಚನಗಳೂ ಪ್ರೇಕ್ಷಕರ ಮನಸ್ಸನ್ನು ಮುಟ್ಟಿ, ತಟ್ಟಿ ಅರಿವನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ.
ಜನರಲ್ಲಿ ನೈತಿಕ ಜಾಗೃತಿಯನ್ನು ಮೂಡಿಸಬೇಕಾಗಿದೆ ಎಂದು ಪ್ರತಿಯೊಬ್ಬರೂ ಹೇಳುತ್ತಿರುತ್ತಾರೆ. ಅಂಥ ನೈತಿಕತೆಯನ್ನು ಅರಳಿಸುವ ಕಾಯಕವನ್ನು ‘ವಚನ ಸಂಸ್ಕೃತಿ’ ಸಾರುವ ನೃತ್ಯಾಭಿನಯ ಮಾಡುತ್ತದೆ ಎನ್ನುವುದು ಹಲವರ ಅಭಿಪ್ರಾಯ. ವಚನಗಳ ನೃತ್ಯಾಭಿನಯ ಜನಮನವನ್ನು ತಟ್ಟುವುದು. ವಚನಗಳ ಭಾಷೆ ಕೂಡ ಹಿಂದಿಯಲ್ಲೇ ಇರುವುದರಿಂದ ಕನ್ನಡೇತರ ಭಾಷೆಯ ಜನರೂ ವಚನಗಳ ಬಗ್ಗೆ ವಿಶೇಷ ಒಲವು ಮೂಡಿಸಿಕೊಳ್ಳಲು ಸಹಕಾರಿಯಾಗುವುದು. ನೃತ್ಯಾಭಿನಯ ಮುಗಿಯುತ್ತಲೇ ಸಂವಾದ ಇರುತ್ತದೆ. ಅದರಲ್ಲಿ ನೃತ್ಯಕಲಾವಿದೆಯರು ಮತ್ತು ನಮ್ಮ ಸಂಘಟಕರು ಸಾರ್ವಜನಿಕರ ಜೊತೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವರು. ಸಂವಾದ ಪ್ರೇಕ್ಷರನ್ನು ಚಿಂತನೆಗೆ ಪ್ರೇರೇಪಿಸುವುದು. 24 ಕಲಾವಿದೆಯರೂ ಶಾಸ್ತ್ರೀಯ ನೃತ್ಯ ಸಾಧಕರು. ಅವರಲ್ಲಿ ವಿದ್ಯಾರ್ಥಿಗಳು, ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಗಳು, ವಕೀಲರು, ಬಿಇ, ಎಂ ಕಾಮ್, ಬಿ ಎಸ್ ಸಿ, ಬಿ ಎ ಮತ್ತಿರರ ಪದವೀಧರರೂ ಇದ್ದಾರೆ. ಒಂದು ಕಂಪನಿಯಲ್ಲಿ ಕೆಲಸ ಮಾಡುವ ಕಲಾವಿದೆಗೆ ರಜೆಯನ್ನು ಕೊಡದ ಕಾರಣ ತನ್ನ ಉದ್ಯೋಗಕ್ಕೇ ರಾಜಿನಾಮೆ ಸಲ್ಲಿಸಿ ನಮ್ಮ ತಂಡದಲ್ಲಿದ್ದಾಳೆ. ಶಾಸ್ತ್ರೀಯ ನೃತ್ಯಶಾಲೆಯನ್ನು ತೆರೆದವರೂ ಇದ್ದಾರೆ. ಈ ರೀತಿಯ ಮಹಿಳೆಯರು ಎರಡು ತಿಂಗಳ ಕಾಲ ಓದು, ಮನೆ, ಉದ್ಯೋಗ ಬಿಟ್ಟು ಹೊರರಾಜ್ಯಗಳ ಪ್ರವಾಸದಲ್ಲಿ ತೊಡಗುವುದು ಸಾಮಾನ್ಯ ಸಂಗತಿಯಲ್ಲ. ಆದರೆ 24 ಜನರೂ ತುಂಬಾ ಕ್ರಿಯಾಶೀಲರಾಗಿ ತಮ್ಮನ್ನೇ ತಾವು ಸಂಪೂರ್ಣವಾಗಿ ಅರ್ಪಣೆ ಮಾಡಿಕೊಂಡಿದ್ದಾರೆ. ನಾವು ಬಸವಣ್ಣನವರ ಕಾಲದಲ್ಲಿ ಇರಲಿಲ್ಲ. ಆದರೂ ಅವರ ತತ್ವಗಳನ್ನು ಪ್ರಸಾರ ಮಾಡುವ ಪುಣ್ಯದ ಕಾರ್ಯ ನಮ್ಮದಾಗಿದೆ ಎಂದು ಸಂತೋಷಪಡುತ್ತಾರೆ. ಇಂಥದನ್ನು ಮಾಡಲು ಧೀಶಕ್ತಿ ಎಲ್ಲಿಂದ ಬಂತು? ಹಣಕಾಸು ಮತ್ತು ಸಂಘಟನೆಯನ್ನು ಹೇಗೆ ನಿರ್ವಹಿಸುತ್ತೀರಿ ಎನ್ನುವರು.
ನಮಗೆ ಧೀಶಕ್ತಿ ಬಂದದ್ದು ಬಸವಣ್ಣನವರು ಹಾಗೂ ನಮ್ಮ ಪರಮಾರಾಧ್ಯ ಗುರುಗಳಿಂದ. ಅವರೇ ನಮ್ಮ ಬೆನ್ನಹಿಂದಿನ ಬೆಳಕು. ಈ ನಂಬಿಕೆಯಿಂದಲೇ ನಾವು ಇದುವರೆಗೆ ಏನೆಲ್ಲ ಪ್ರಗತಿಪರ ಕಾರ್ಯಗಳನ್ನು ಮಾಡುತ್ತ ಬಂದಿದ್ದೇವೆ. ಹಣ ಇದ್ದರೆ ಮಾತ್ರ ಯೋಜನೆಗಳನ್ನು ಹಾಕಿಕೊಳ್ಳಬೇಕು ಎನ್ನುವ ಭಾವನೆ ನಮಗಿಲ್ಲ. ನಮ್ಮ ಗುರುಗಳು ಮೊದಲು ಯೋಜನೆ ಹಾಕಿಕೊಂಡು ಕಾರ್ಯಪ್ರವೃತ್ತರಾಗುತ್ತಿದ್ದರು. ನಂತರ ಹಣ ತಾನಾಗಿ ಹರಿದುಬರುತ್ತಿತ್ತು. ಅದೇ ವಿಶ್ವಾಸದಲ್ಲಿ ನಾವೂ ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡು ಸಾಗುತ್ತಿದ್ದೇವೆ. ನಮಗೆ ಎಂದೂ ಹಣಕಾಸಿನ ಕೊರತೆ ಆಗಿಲ್ಲ. ನಮ್ಮ ಕಾರ್ಯಗಳನ್ನು ನೋಡಿ ಜನರು ತಾವಾಗಿಯೇ ಆರ್ಥಿಕ ನೆರವು ನೀಡುತ್ತ ಬಂದಿದ್ದಾರೆ. `ಬೇಡಲಾಗದು ಜಂಗಮ, ಬೇಡಿಸಿಕೊಳ್ಳಲಾಗದು ಭಕ್ತ’ ಎನ್ನುವ ತತ್ವದಲ್ಲಿ ನಮಗೆ ಅಪಾರ ನಂಬಿಕೆ ಇದೆ. ನಮ್ಮ ಈ `ವಚನ ಸಂಸ್ಕೃತಿ’ ನೃತ್ಯ ಪ್ರಸಾರದ ಕಾರ್ಯಕ್ಕೆ ಸುಮಾರು 60 ಲಕ್ಷದ ಮೇಲೆ ಖರ್ಚಾಗಬಹುದು. ಹಣ ಕೂಡಿಸಿಕೊಂಡು ನಾವು ಈ ಯೋಜನೆಯನ್ನು ಕೈಗೆತ್ತಿಕೊಂಡಿಲ್ಲ. ಸರ್ಕಾರ, ಸಾರ್ವಜನಿಕರು ಮುಂದೆ ಸಹಾಯ ಮಾಡುತ್ತಾರೆಂಬ ವಿಶ್ವಾಸವಿದೆ. ಬೆಂಗಳೂರಲ್ಲಿ ಪ್ರದರ್ಶನ ನೋಡಿದವರು ಸ್ಥಳದಲ್ಲೇ ಸುಮಾರು ಒಂದು ಲಕ್ಷ ಹಣ ದೇಣಿಗೆ ನೀಡಿದರು. ಹೈದರಾಬಾದ್ ಮತ್ತು ಜಾಹಿರಾಬಾದ್ನಲ್ಲೂ ಸ್ವಲ್ಪ ಆರ್ಥಿಕ ನೆರವು ಬಂದಿದೆ. ಈ ಯೋಜನೆ ಕಾಲೇಜಿನ ವಿದ್ಯಾರ್ಥಿಗಳಿಗೆಂದೇ ಪ್ರಾರಂಭವಾಗಿದ್ದು. ಆದರೆ ಉತ್ತರ ಭಾರತದಲ್ಲಿ ಈಗ ಇನ್ನೂ ಅನೇಕ ಕಾಲೇಜುಗಳು ಪ್ರಾರಂಭವಾಗಿಲ್ಲವೆಂದು ತಿಳಿದುಬಂದಿದೆ. ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ಸಾರ್ವಜನಿಕರೂ ಇದನ್ನು ನೋಡುವ ವ್ಯವಸ್ಥೆ ಈಗ ಆಗಿದೆ. ಕೆಲವೆಡೆ ವಿಶ್ವವಿದ್ಯಾಲಯದ ಆವರಣದಲ್ಲೇ ಕಾರ್ಯಕ್ರಮ ಇದೆ. ಕೆಲವರು ನಮ್ಮನ್ನೂ ಆಹ್ವಾನಿಸುತ್ತಿದ್ದಾರೆ. ಒಂದೆರಡು ಕಡೆ ಹೋಗುವ ಯೋಚನೆಯೂ ಇದೆ.
ಇದಕ್ಕಾಗಿ ಪ್ರಾಯೋಜಕತ್ವ ಪಡೆಯಬಹುದಲ್ಲವೇ ಎನ್ನುವ ಅಭಿಪ್ರಾಯ ಬಂದಿದೆ. ಇದುವರೆಗೆ ಪ್ರಾಯೋಜಕತ್ವ ಪಡೆದಿಲ್ಲ. ಯಾರಾದರೂ ಪ್ರಾಯೋಜಕತ್ವ ಕೊಡುವುದಾದರೆ ಸಂತೋಷದಿಂದ ಸ್ವಾಗತಿಸುತ್ತೇವೆ. ಬಹಳ ಜನರಿಗೆ ಆರ್ಥಿಕ ನೆರವು ನೀಡುವ ಬಯಕೆ ಇದ್ದರೂ ಹೇಗೆ ಕೊಡಬೇಕು ಎನ್ನುವುದು ತಿಳಿದಿರುವುದಿಲ್ಲ. ಅಂಥವರು ಮುಂದಿನ ವಿಳಾಸಕ್ಕೆ ತಮ್ಮ ಕೈಲಾದ ಆರ್ಥಿಕ ನೆರವು ನೀಡಬಹುದು. ‘Secretary, Sri Shivakumra Kalasngha (R), Sanehalli. Karnataka Gramina Bank a/c No:10796100001812, IFSC Cood Pkgb10796. ಕರ್ನಾಟಕದ ಶಾಲಾ ಕಾಲೇಜುಗಳಲ್ಲೂ ನೃತ್ಯವನ್ನು ಪ್ರದರ್ಶಿಸಬೇಕು ಎನ್ನುವ ಬೇಡಿಕೆ ಇದೆ. ನೃತ್ಯಕಲಾವಿದೆಯರು ಎರಡು ತಿಂಗಳು ಮಾತ್ರ ಒಪ್ಪಿರುವುದರಿಂದ ಸದ್ಯಕ್ಕೆ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸಲಾಗುವುದಿಲ್ಲ. ಆದರೂ ಬೆಳಗಾವಿ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಮತ್ತು ಸಾಣೇಹಳ್ಳಿಯಲ್ಲಿ ಈ ಪ್ರದರ್ಶನಗಳು ನಡೆಯಲಿವೆ. ಮುಂದೆ ಕರ್ನಾಟಕದ ಬೇರೆ ಬೇರೆ ಶಾಲಾ ಕಾಲೇಜುಗಳಲ್ಲಿ ಪ್ರದರ್ಶಿಸಲು ಯೋಚಿಸುತ್ತೇವೆ. ಹಣಕಾಸಿಗಿಂತ ಜನರಲ್ಲಿ ವಿಚಾರಕ್ರಾಂತಿ ಬಿತ್ತುವುದು, ನೈತಿಕ ಜಾಗೃತಿ ಮೂಡಿಸುವುದು ಮುಖ್ಯ. ಈ ನೃತ್ಯಪ್ರದರ್ಶನದ ಜೊತೆಗೆ ಕಲಾಸಂಘದ ಚಟುವಟಿಕೆಗಳು ವರ್ಷದುದ್ದಕ್ಕೂ ನಡೆಯುತ್ತವೆ. ಪ್ರತಿವರ್ಷ ಶಿವಸಂಚಾರದ ಕಲಾವಿದರು ಶರಣರಿಗೆ ಸಂಬಂಧಿಸಿದ ನಾಟಕವೂ ಸೇರಿದಂತೆ ಮೂರು ನಾಟಕಗಳನ್ನು ವರ್ಷದುದ್ದಕ್ಕೂ ನಾಡಿನೆಲ್ಲೆಡೆ ಪ್ರದರ್ಶಿಸುವರು. ನವೆಂಬರ್ ಮೊದಲ ವಾರದಲ್ಲಿ ರಾಷ್ಟ್ರೀಯ ನಾಟಕೋತ್ಸವ ಸಾಣೇಹಳ್ಳಿಯಲ್ಲಿ ವಿನೂತನ ರೀತಿಯಲ್ಲಿ ನಡೆಯುವುದು. ಕರ್ನಾಟಕ ಮತ್ತು ಹೊರರಾಜ್ಯದ ಪ್ರಖ್ಯಾತ ರಂಗತಂಡದವರು ನಮ್ಮ ರಂಗಮಂಚದ ಮೇಲೆ ನಾಟಕಗಳನ್ನು ಅಭಿನಯಿಸುವರು. ಆಗ ಕಡಿಮೆ ಎಂದರೂ ಪ್ರತಿದಿನ ಏಳೆಂಟು ಸಾವಿರ ಜನರು ನಾಟಕ ನೋಡಿ ಸಂತೃಪ್ತರಾಗುವರು. ಆಶ್ಚರ್ಯವೆಂದರೆ ನಮ್ಮ ಆವರಣದಲ್ಲಿ ಯಾವುದೇ ದೇವಾಲಯಗಳಿಲ್ಲ. ರಂಗಮಂದಿರಗಳೇ ನಮ್ಮ ದೇವಾಲಯಗಳು. ಕಲಾವಿದರೇ ನಮ್ಮ ದೇವರು. ಪ್ರೇಕ್ಷಕರೇ ನಮ್ಮ ಪೂಜಾರಿಗಳು.
ಶರಣರ ವಿಚಾರಗಳು ಸರ್ವಕಾಲಕ್ಕೂ ಸಲ್ಲುವಂತಹವು. ಅವುಗಳನ್ನು ಮೊದಲು ವಿದ್ಯಾರ್ಥಿಗಳ ಮನದಲ್ಲಿ ಬಿತ್ತಬೇಕಾಗಿದೆ. ಹಾಗಾಗಿ ಪಠ್ಯಪುಸ್ತಕದಲ್ಲಿ ಬಸವಾದಿ ಶರಣರ ಕೆಲವು ವಚನಗಳನ್ನು ಸೇರಿಸಬೇಕೆಂದು ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಅವಕಾಶ ಕೊಟ್ಟರೆ ನಾವೇ ವಚನಗಳ ಆಯ್ಕೆ ಮಾಡಿಕೊಡುತ್ತೇವೆ. ಪಠ್ಯದ ಬಗ್ಗೆ ಹಿಂದಿನ ಸರ್ಕಾರದಲ್ಲೂ ಆಕ್ಷೇಪವಿತ್ತು. ಹಾಗೆ ಆಕ್ಷೇಪ ಎತ್ತಿದವರಲ್ಲಿ ನಾವೂ ಒಬ್ಬರು. ಬಸವಣ್ಣನವರ ವಿಚಾರಗಳನ್ನು ತಿರುಚಲಾಗಿತ್ತು. ಅದನ್ನು ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಹಾಗೂ ಮಾಧ್ಯಮಗಳ ಗಮನಕ್ಕೆ ತಂದಾಗ ಆ ಪಠ್ಯದಲ್ಲಿ ಬದಲಾವಣೆ ಮಾಡಿದ್ದರು. ಇನ್ನೂ ಮಾಡುವುದು ಸಾಕಷ್ಟಿದೆ. ಅದನ್ನು ಈಗಿನ ಸರ್ಕಾರ ಮಾಡುತ್ತದೆ ಎನ್ನುವ ವಿಶ್ವಾಸವಿದೆ. ಬಾಲವಾಡಿಯಿಂದ ವಿವಿಧ ಪದವಿಯ ಎಲ್ಲ ತರಗತಿಗಳಿಗೂ ವಚನಗಳನ್ನು ಪರಿಚಯಿಸುವ ಪಠ್ಯವನ್ನು ಕಡ್ಡಾಯವಾಗಿ ಜಾರಿಯಲ್ಲಿ ತರಬೇಕು. ಆಗ ವಿದ್ಯಾರ್ಥಿಗಳಲ್ಲಿ ಸತ್ಚಿಂತನೆ ಬೆಳೆಯುವುದು.
ಆಡಿದಡೇನು, ಹಾಡಿದಡೇನು, ಓದಿದಡೇನು,
ತ್ರಿವಿಧದಾಸೋಹವಿಲ್ಲದನ್ನಕ್ಕ?
ಆಡದೆ ನವಿಲು? ಹಾಡದೆ ತಂತಿ? ಓದದೆ ಗಿಳಿ?
ತ್ರಿವಿಧ ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ.
Comments 9
ಬೋರಲಿಂಗಯ್ಯ ಕಂತೀಮಠ
Jul 12, 2023ಈ ಲೇಖನದಿಂದ ನನ್ನ ನೆಚ್ಚಿನ ಗುರುವಾದ ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮಿಗಳು ಮಾಡುತ್ತಿರುವ ಅನನ್ಯವಾದ ಶರಣ ಸೇವೆ ಗೊತ್ತಾಯಿತು. ಅವರ ಪಾದಗಳಿಗೆ ವಂದನೆಗಳು.
Guruprasad Bellary
Jul 12, 2023ಶಿವಕುಮಾರ ಕಲಾಸಂಘದ ಕಲಾ ಸೇವೆಯು ಮೆಚ್ಚುವಂತಹದ್ದು. ಈ ನೃತ್ಯ ಅಭಿನಯವನ್ನು ನೋಡಲೇ ಬೇಕೆನಿಸಿದೆ, ಎಲ್ಲೆಲ್ಲಿ ಕರ್ನಾಟಕದಲ್ಲಿ ಇದರ ಪ್ರದರ್ಶನಗಳು ನಡೆಯುತ್ತವೆ ಎನ್ನುವುದನ್ನು ದಯವಿಟ್ಟು ತಿಳಿಸಿ. ನೃತ್ಯ ಕಲಾವಿದೆಯರ ನಿಷ್ಠೆ ಮತ್ತು ಶ್ರದ್ಧೆ ಗೌರವಕ್ಕೆ ಅರ್ಹವಾಗಿದೆ.
Halappa Bengaluru
Jul 17, 2023ನೀನಲ್ಲದೆ ಮತ್ತಾರೂ ಇಲ್ಲವಯ್ಯಾ ಎನ್ನುವ ನೃತ್ಯ ರೂಪಕ ದೇಶಾದ್ಯಂತ ಪ್ರಸಾರವಾಗಿ ಜನಮೆಚ್ಚುಗೆ ಪಡೆಯುವಂತಾಗಲಿ. ಶಾಲಾ-ಕಾಲೇಜುಗಳ ಮಕ್ಕಳ ಹೃದಯವನ್ನು ಹೊಕ್ಕಲಿ… ತಮ್ಮ ಅಭೂತಪೂರ್ವ ಕಾರ್ಯಕ್ಕೆ ಅನಂತ ಶರಣುಗಳು.
ಜಗದೀಶ್ ಹಿರೇಕುಂದಿ
Jul 18, 2023ಪೂಜ್ಯರು ಮಾಡುತ್ತಿರುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ಶ್ರೀನಿವಾಸ ಕಪ್ಪಣ್ಣ ಮತ್ತು ಅವರ ಮಗಳು ಸ್ನೇಹಾ ಅವರಿಗೆ ನಮ್ಮ ಗೌರವಗಳನ್ನು ಈ ಮೂಲಕ ತಿಳಿಸುತ್ತಿದ್ದೇವೆ.
ವಿಜಯಾ ಕಪ್ಪರದ, ಧಾರವಾಡ
Jul 23, 2023ಎಲ್ಲಾ ಲೇಖನಗಳು ಚೆನ್ನಾಗಿವೆ
Shivamallappa Bevuru
Jul 25, 2023ಸದಾ ಶರಣ ಸೇವೆಯಲ್ಲಿ ತೊಡಗಿರುವ ಗುರುಗಳಿಗೆ ವಂದನೆಗಳು. ತಾವು ನಮ್ಮ ಸಮಾಜದ ಹೆಮ್ಮೆಯ ಸಂತ ಪ್ರತಿನಿಧಿಯಾಗಿದ್ದೀರಿ. ನಿಮ್ಮ ಸರಳತೆ, ನೆರ ಮಾತುಗಳು, ದಿಟ್ಟ ನಡೆ ನೋಡುತ್ತಿದ್ದರೆ ಹಿಂದೆ ಇದ್ದ ಗದಗಿನ ತೋಂಟದಾರ್ಯ ಶ್ರೀಗಳ ನೆನಪಾಗುತ್ತದೆ.
ಶೀಲಾ ರಾಜಪ್ಪ, ಗಜೇಂದ್ರಗಡ
Jul 26, 2023ಮತ್ತೆ ಕಲ್ಯಾಣ ನಾಡಿನಾದ್ಯಂತ ಹೆಸರು ಮಾಡಿದಂತೆ ಈ ನೃತ್ಯ ರೂಪಕವೂ ಜನರನ್ನು ಮುಟ್ಟುವಲ್ಲಿ ಯಶಸ್ವಿಯಾಗಲಿ. ಕಲ್ಯಾಣದತ್ತ ನಮ್ಮ ಮನಸ್ಸು ತಿರುಗಿದರೆ ನಮ್ಮ ಬದುಕೂ ಕಲ್ಯಾಣವಾಗುತ್ತದೆ.
Aditya G
Jul 26, 2023ಸಾಣೆಹಳ್ಳಿಯಲ್ಲಿ ನಡೆಯುವ ರಾಷ್ಟ್ರೀಯ ನಾಟಕೋತ್ಸವದ ಕುರಿತು ನಾನು ಕೇಳಿದ್ದೇನೆ, ಆದರೆ ಒಮ್ಮೆಯೂ ಭಾಗವಹಿಸಲು ಸಾಧ್ಯವಾಗಿಲ್ಲ. ಸರ್ವಕಾಲಕ್ಕೂ ಸಲ್ಲುವ ಶರಣರ ವಿಚಾರಗಳನ್ನು ಎಲ್ಲಾ ಕಲಾ ಮಾಧ್ಯಮಗಳ ಮೂಲಕ ಪ್ರಚುರಪಡಿಸಬೇಕೆನ್ನುವ ತಮ್ಮ ಕಲಾಸೇವೆ, ಶರಣ ಸೇವೆ ಅನನ್ಯವಾದುದು. ನವೆಂಬರಿನಲ್ಲಿ ನಡೆಯುವ ನಾಟಕೋತ್ಸವವನ್ನು ನೋಡಲು ಈ ಬಾರಿ ಕುಟುಂಬ ಸಮೇತರಾಗಿ ಬರುತ್ತೇವೆ ಗುರುಗಳೇ.
Mahanthesh Hadagali
Jul 28, 202324 ನೃತ್ಯ ಕಲಾವಿದೆಯರಿಗೆ ಮತ್ತು ಅವರದನ್ನು ತಯಾರು ಮಾಡಿದ ನೃತ್ಯ ಗುರುಗಳಿಗೆ ಶರಣು ಶರಣು. ನೃತ್ಯ ಕಲಾವಿದೆಯರ ತನ್ಮಯತೆ ಓದಿ ಆನಂದವಾಯಿತು. ಇದರ ಪ್ರಾಯೋಜಕತ್ವಕ್ಕೆ ಖಂಡಿತ ನೆರವಾಗುತ್ತೇವೆ, ಸ್ನೇಹಿತರಿಗೂ ಬಂಧುಬಳಗಕ್ಕೂ ಈ ಲೇಕನವನ್ನು ಶೇರ್ ಮಾಡಿ ಅವರಿಗೂ ಕೈಲಾದಷ್ಟು ನೆರವಾಗಲು ಕೇಳಿಕೊಂಡಿದ್ದೇನೆ.