ತಮ್ಮೊಳಗಿರ್ದ ಮಹಾಘನವನರಿಯರು
ಕೆಲವರಿಗೆ ಬಿಪಿ ಮತ್ತು ಶುಗರ್ ಪ್ರಮಾಣ ಏರುತ್ತಲೇ ಇರುವಂತೆ ಈಗ ಹೊರಗಿನ ತಾಪಮಾನವೂ ಏರುತ್ತಲಿದೆ. ಮೇ ತಿಂಗಳು ಬಂದರೂ ಅದೇನು ಕಡಿಮೆ ಆಗುತ್ತಿಲ್ಲ. ಸಾಣೇಹಳ್ಳಿಯಲ್ಲೇ 40 ಡಿಗ್ರಿ ದಾಟುತ್ತಲಿದೆ. ಒಳಗೂ ಕೂರುವಂತಿಲ್ಲ, ಹೊರಗೂ ಕೂರುವಂತಿಲ್ಲ. ಬಿಡಾರದಿಂದ ಹೊರಬರುತ್ತಲೇ ಬಿಸಿಲಿನ ಝಳ ಮುಖಕ್ಕೆ ರಾಚುತ್ತದೆ. ತೆಂಗಿನಗರಿಗಳಿಗೆ ರೋಗ ತಗಲಿ ಬಿಸಿಲಿನ ತಾಪಕ್ಕೆ ಎಲ್ಲ ಗರಿಗಳು ಒಣಗಿ ಜೋತುಬಿದ್ದಿವೆ. ಹೊರಗಿನ ಶಾಖಕ್ಕಿಂತ ಮಾನವನೊಳಗಿನ ಶಾಖ ಹೆಚ್ಚಾಗುತ್ತಲಿದೆ. ಹೊರಗಿನ ಶಾಖವನ್ನು ಹೇಗೋ ತಡೆಗಟ್ಟಬಹುದು. ಮನುಷ್ಯನೊಳಗಿನ ಶಾಖವನ್ನು ತಡೆಗಟ್ಟುವುದು ಹೇಗೆ? ಒಳಗಿನ ಶಾಖ ಎಂದರೆ ಹೊಟ್ಟೆಕಿಚ್ಚು. ಒಬ್ಬ ಮತ್ತೊಬ್ಬನ ಪ್ರಗತಿಯನ್ನು ಕಂಡಾಗ ಖುಷಿಪಡಬೇಕು. ಭೇಷ್ ಎಂದು ಬೆನ್ನು ತಟ್ಟಬೇಕು. ಆದರೆ ಇಂಥ ಗುಣಗಳು ಇಂದು ತುಂಬಾ ಕಡಿಮೆಯಾಗಿ ಮತ್ಸರಿಸುವ ಗುಣ ಹೆಚ್ಚಾಗುತ್ತಿದೆ. ಬಾಹ್ಯ ನೋಟಕ್ಕೆ ಕೆಲವರು ಸಜ್ಜನರಂತೆ ಕಂಡರೂ ಆ ಸಜ್ಜನಿಕೆಯನ್ನು ಎಷ್ಟು ಜನ ತಮ್ಮ ಅಂತರಂಗದಲ್ಲಿ ಅಳವಡಿಸಿಕೊಂಡಿದ್ದಾರೆ? ಬಹುತೇಕರ ಸ್ಥಿತಿ ‘ಮೇಲೆ ಬಸಪ್ಪ, ಒಳಗೆ ವಿಷಪ್ಪ’ ಎಂಬಂತಾಗಿದೆ. ಅವರು ಹೊರಗೆ ಕಾಣಿಸಿಕೊಳ್ಳುವುದೇ ಒಂದು, ಅಂತರಂಗದೊಳಗೆ ಇರುವುದೇ ಬೇರೊಂದು. ಶರಣರು ಹೇಳಿದ್ದು: ಅಂತರಂಗ, ಬಹಿರಂಗ ಒಂದಾಗಿರಬೇಕು ಎಂದು. ಅಂತರಂಗ, ಬಹಿರಂಗ ಬೇರೆ ಬೇರೆಯಾಗಿದ್ದರೆ ಬದುಕು ನರಕವಾಗುವುದು. ಅದು ಇತರರಿಗಿಂತ ಆ ವ್ಯಕ್ತಿಗೇ ಕೇಡುಂಟುಮಾಡುವುದು. ಅದಕ್ಕಾಗಿಯೇ ಬಸವಣ್ಣನವರು ಹೇಳಿದ್ದು- ‘ತನುವಿನ ಕೋಪ ತನ್ನ ಹಿರಿಯತನದ ಕೇಡು. ಮನದ ಕೋಪ ತನ್ನ ಅರಿವಿನ ಕೇಡು, ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು’ ಎಂದು. ಒಬ್ಬ ವ್ಯಕ್ತಿಯನ್ನು ತುಂಬಾ ಸಾತ್ವಿಕ, ದೊಡ್ಡಮನುಷ್ಯ, ಜನೋಪಕಾರಿ ಎಂದೆಲ್ಲ ಹೊಗಳುವುದು ಸಹಜ. ಅದೇ ವ್ಯಕ್ತಿ ಸತ್ತಾಗ ಅವನ ಹೆಣ ಮುಟ್ಟಲೂ ಕೆಲವರು ಮುಜುಗರಪಟ್ಟುಕೊಳ್ಳುವರು. ಇದರ ಅನುಭವ ಕೊರೊನಾ ಸಂದರ್ಭದಲ್ಲಿ ಅನೇಕರಿಗೆ ಆಗಿದೆ. ಆಗ ಕೊರೊನಾ ಪೀಡಿತರಾದ ಸ್ವಾಮಿಗಳ ಸಂಸ್ಕಾರಕ್ಕೂ ಭಕ್ತರು ಹೋಗಲಿಲ್ಲ. ಕೇಂದ್ರದ ಸಚಿವ ಸುರೇಶ್ ಅಂಗಡಿಯವರ ಶವಸಂಸ್ಕಾರ ದೆಹಲಿಯಲ್ಲಿ ಹೇಗೆ ನಡೆಯಿತು ಎಂದು ದೃಶ್ಯಮಾಧ್ಯಮಗಳಲ್ಲಿ ನೋಡಿ ನಮಗಂತೂ ತುಂಬಾ ಬೇಸರವಾಗಿತ್ತು. ಮನೆಯವರಾಗಲಿ, ಮಂತ್ರಿ ಮಂಡಳದವರಾಗಲಿ, ಅಧಿಕಾರಿಗಳಾಗಲಿ ಅಲ್ಲಿರಲಿಲ್ಲ. ಒಂದು ಅನಾಥ ಹೆಣವನ್ನು ಹೂತು ಹಾಕಿದ ನೆನಪು ತರುತ್ತಿತ್ತು. ಆಗ ತಂದೆ ಮಗನ, ಮಗ ತಂದೆಯ, ಗಂಡ ಹೆಂಡತಿಯ, ಹೆಂಡತಿ ಗಂಡನ ಮುಖವನ್ನು ನೋಡುವಂತಿರಲಿಲ್ಲ. ಇದಕ್ಕೆ ಕಾರಣ ಮನುಷ್ಯ ತಾನು ಸಾಯಬಾರದು ಎನ್ನುವ ಭಾವನೆ. ಒಬ್ಬ ವ್ಯಕ್ತಿ ಎಷ್ಟು ವರ್ಷ ಬದುಕಿದ ಎನ್ನುವುದಕ್ಕಿಂತ ಹೇಗೆ ಬದುಕಿದ ಎನ್ನುವುದು ಮುಖ್ಯ. ಈ ನಿಟ್ಟಿನಲ್ಲಿ ಬಸವಣ್ಣನವರ ವಚನ ಕಣ್ಣು ತೆರೆಸುವಂತಿದೆ.
ಲೇಸೆನಿಸಿಕೊಂಡು ಅಯ್ದು ದಿವಸ ಬದುಕಿದಡೇನು?
ಲೇಸೆನಿಸಿಕೊಂಡು ನಾಲ್ಕು ದಿವಸ ಬದುಕಿದಡೇನು?
ಲೇಸೆನಿಸಿಕೊಂಡು ಮೂರು ದಿವಸ ಬದುಕಿದಡೇನು?
ಲೇಸೆನಿಸಿಕೊಂಡು ಎರಡು ದಿವಸ ಬದುಕಿದಡೇನು?
ಕೂಡಲಸಂಗನ ಶರಣರ ವಚನದಲ್ಲಿ
ಲೇಸೆನಿಸಿಕೊಂಡು ಒಂದು ದಿವಸ ಬದುಕಿದಡೇನೊ!
ಮನುಷ್ಯ ಎಷ್ಟು ವರ್ಷ ಬದುಕಿದ್ದ ಎನ್ನುವುದಕ್ಕಿಂತ ಹೇಗೆ ಬದುಕಿದ್ದ, ಎಷ್ಟು ಜನರಿಗೆ ಬೇಕಾದವನಾಗಿದ್ದ ಎನ್ನುವುದು ಮುಖ್ಯ. `ಕೂಡಲಸಂಗನ ಶರಣರ ವಚನದಲ್ಲಿ ಲೇಸೆನಿಸಿಕೊಂಡು ಒಂದು ದಿವಸ ಬದುಕಿದಡೇನೊ!’ ಎನ್ನುವ ಅಭಿಪ್ರಾಯ ಬಸವಣ್ಣನವರದು. ಯಾರ್ಯಾರಿಂದಲೋ ಒಳ್ಳೆಯವ ಎನಿಸಿಕೊಂಡು ಬದುಕುವುದಲ್ಲ; ಸಜ್ಜನರು, ಸಾತ್ವಿಕರು, ಶರಣರು ಇಂಥವರಿಂದ ಒಳ್ಳೆಯವ ಎನಿಸಿಕೊಂಡು ಒಂದು ದಿವಸ ಬದುಕಿದರೂ ಅದೇ ಸಾರ್ಥಕ ಜೀವನ. ವ್ಯಕ್ತಿ ತನ್ನ ಮನೆತನಕ್ಕೆ, ಊರಿಗೆ, ಸಮಾಜಕ್ಕೆ ಏನು ಕೊಡುಗೆ ನೀಡಿದ್ದಾನೆ ಎನ್ನುವುದನ್ನು ಜನರು ಸೂಕ್ಷ್ಮವಾಗಿ ಗಮನಿಸುವರು. ತನ್ನ ಊರಿಗೆ, ಸಮಾಜಕ್ಕೆ ಯಾವ ಕೊಡುಗೆ ನೀಡದಿದ್ದರೂ ತನ್ನ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸಿದ್ದರೆ ಅದು ಸಹ ಮೆಚ್ಚುವಂತಹುದೇ. ನಾವು ಅನೇಕ ಸಂದರ್ಭಗಳಲ್ಲಿ ಹೇಳುವುದು: ನೀವು ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳೇ ಆಸ್ತಿ ಎಂದು ಭಾವಿಸಿ ಅವರಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಕೊಡಬೇಕು ಎಂದು. ಇಂದು ಮಕ್ಕಳಿಗೆ ವಿದ್ಯೆ ಕೊಡಿಸುವವರಿಗೇನೂ ಕೊರತೆ ಇಲ್ಲ. ಆದರೆ ವಿದ್ಯೆಗಿಂತ ಸಂಸ್ಕೃತಿ, ಸಂಸ್ಕಾರ ಮುಖ್ಯ. ಆರ್ಥಿಕ, ಭೌತಿಕ, ಬೌದ್ಧಿಕ ಶ್ರೀಮಂತಿಕೆಗಿಂತ ಹೃದಯಶ್ರೀಮಂತಿಕೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ನಮ್ಮಲ್ಲಿ ಇಂದು ಆರ್ಥಿಕ, ಭೌತಿಕ, ಬೌದ್ಧಿಕ ಶ್ರೀಮಂತರು ಸಾಕಷ್ಟು ಜನರಿದ್ದಾರೆ. ಅವರಲ್ಲಿ ಆ ಶ್ರೀಮಂತಿಕೆಗೆ ತಕ್ಕಂತೆ ಹೃದಯ ಸಂಸ್ಕಾರದ ಕೊರತೆ ಎದ್ದು ತೋರುವುದು. ಹೃದಯ ಶ್ರೀಮಂತಿಕೆಯ ಸಂಸ್ಕಾರ ಬೇಕೆಂದರೆ ಮಕ್ಕಳಿಗೆ ಬಾಲ್ಯದಿಂದಲೇ ಶರಣರ ವಚನಗಳ ಪರಿಚಯವನ್ನು ಮಾಡಿಕೊಡಬೇಕು. ಆದರೆ ಅವರಿಗೆ ನಾವು ಕಲಿಸುವುದೇನನ್ನು ಎನ್ನುವುದಕ್ಕೆ ಅಕ್ಕನ ಮುಂದಿನ ವಚನ ವಿವರಿಸುವುದು.
ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು.
ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು.
ಅಗಸ ನೀರೊಳಗಿದ್ದು ಬಾಯಾರಿ ಸತ್ತಂತೆ,
ತಮ್ಮೊಳಗಿರ್ದ ಮಹಾಘನವನರಿಯರು ಚೆನ್ನಮಲ್ಲಿಕಾರ್ಜುನಾ.
ಹಗಲು ಮತ್ತು ರಾತ್ರಿ ಜನರು ಹೇಗೆ ಕಾಲ ಕಳೆಯುತ್ತಾರೆ ಎನ್ನುವುದನ್ನು ಮಹಾದೇವಿಯಕ್ಕ ತುಂಬಾ ಪರಿಣಾಮಕಾರಿಯಾಗಿ ಈ ವಚನದಲ್ಲಿ ವಿವರಿಸಿದ್ದಾಳೆ. ಸೂರ್ಯೋದಯ ಆಗುತ್ತಲೇ ಹಣ ಸಂಪಾದಿಸುವ, ಅದಕ್ಕಾಗಿ ಬೆವರು ಸುರಿಸಿ ದುಡಿಯುವ, ಹೊಟ್ಟೆಯ ಹಸಿವನ್ನು ತುಂಬಿಸಿಕೊಳ್ಳುವ, ಮಕ್ಕಳು ಮರಿಗಳಿಗೆ ಕೂಡಿಡುವ ದಾಹ. ಅದೇ ಒಂದು ರೀತಿಯ ಕುದಿತ. ಇದ್ದುದರಲ್ಲೇ ಸಂತೃಪ್ತರಾಗಬೇಕು ಎನ್ನುವ ಭಾವನೆ ಇಲ್ಲ. ಬೇಕು, ಬೇಕು ಎನ್ನುವ ಕುದಿತ ಅವರ ಸುಖವನ್ನು ಕಿತ್ತುಕೊಂಡು ದುಃಖಿಗಳನ್ನಾಗಿ ಮಾಡುವುದು. ಅವರ ದುಃಖಕ್ಕೆ ಕಾರಣ ಚಿಂತೆ. ಆ ಚಿಂತೆಯ ಚಿತೆಯಲ್ಲೇ ಜನರು ಬೆಂದು ಹೋಗುವರು. ಸೂರ್ಯಾಸ್ತವಾಗುತ್ತಲೇ ದುಶ್ಚಟ, ದುರಭ್ಯಾಸಗಳತ್ತ ಅವರ ಮನಸ್ಸು ಓಡುವುದು. ವ್ಯಭಿಚಾರ, ಜೂಜಾಟ, ಕುಡಿತ, ಕಳವು ಇಂಥವುಗಳಲ್ಲೇ ಕತ್ತಲೆ ಕಳೆಯುವುದು. ಹಗಲಿನಲ್ಲಿ ಒಂದು ರೀತಿ ಕುದಿತಕ್ಕೆ ಒಳಗಾಗುವ ಜನರು ರಾತ್ರಿ ಮತ್ತೊಂದು ರೀತಿಯ ಕುದಿತಕ್ಕೊಳಗಾಗುವರು. ಹಗಲು ನಾಲ್ಕು ಜಾವ ಅಶನಕ್ಕೆ, ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿಯುವವರು ತಮ್ಮೊಳಗಿನ ಶಿವ ತತ್ವವನ್ನು ಅರಿಯುವುದು ಯಾವಾಗ? ಅದನ್ನು ಅಕ್ಕ, ‘ಅಗಸ ನೀರೊಳಗಿದ್ದು ಬಾಯಾರಿ ಸತ್ತಂತೆ’ ಎನ್ನುವ ಉದಾಹರಣೆಯ ಮೂಲಕ ವಿವರಿಸುವಳು. ನೀರಿನಲ್ಲೇ ನಿಂತು ಬಟ್ಟೆ ತೊಳೆಯುವ ಅಗಸನಿಗೆ ಬಾಯಾರಿಕೆ ಆಗಿದೆ. ಆತ ನೀರು ನೀರು ಎಂದು ಕೂಗುತ್ತಲೇ ದಾಹ ಹೆಚ್ಚಾಗಿ ಸತ್ತು ಹೋಗುವನಂತೆ. ತಾನು ನೀರಲ್ಲೇ ನಿಂತಿರುವಾಗ ಅದೇ ನೀರನ್ನು ಸ್ವಲ್ಪ ಬಾಯಿಗೆ ಹಾಕಿಕೊಂಡಿದ್ದರೆ ಅವನ ದಾಹ ಕಡಿಮೆ ಆಗುತ್ತಿತ್ತು. ಸಾಯುವ ಪ್ರಸಂಗ ಬರುತ್ತಿರಲಿಲ್ಲ. ಹಾಗೆ ಶಿವ ತತ್ವ ನಮ್ಮೊಳಗೇ ಇದ್ದರೂ ಅದನ್ನು ಅರ್ಥ ಮಾಡಿಕೊಳ್ಳದ ಅಗಸನ ಸ್ಥಿತಿಯಾಗುತ್ತಿದೆ ಎಂದಿದ್ದಾರೆ ಅಕ್ಕ. ಪ್ರತಿಯೊಬ್ಬರ ಅಂತರಂಗದಲ್ಲೂ ಶಿವ ಚೈತನ್ಯ ಇದೆ ಎಂದು ತಿಳಿಸಿ ಹೇಳಿದರೂ ಅದನ್ನು ಕೇಳುವ ವ್ಯವಧಾನ ಬಹುತೇಕರಿಗೆ ಇಲ್ಲ.
ಬಾಹ್ಯವಾಗಿ ಮನುಷ್ಯ ತುಂಬಾ ಸುಂದರವಾಗಿ ಕಂಡರೂ ಅವನ ಆಂತರಿಕ ಬದುಕು ಅಷ್ಟೇ ಕೊಳಕಾಗುತ್ತಲಿದೆ. ಆಂಗ್ಲ ಭಾಷೆಯಲ್ಲಿ ಒಂದು ನುಡಿಗಟ್ಟಿದೆ: We have best face for the Photographer. ಯಾರಾದರೂ ವಿಡಿಯೊ ಅಥವಾ ಫೋಟೊ ತೆಗೆಯುತ್ತಿದ್ದರೆ ಹಸನ್ಮುಖ ತೋರುವುದು. ಆದರೆ ಅವನ ಅಂತರಂಗದಲ್ಲಿ ಅದೆಷ್ಟು ಹಾವು, ಚೇಳು, ಹುಲಿ, ಕರಡಿ, ಸಿಂಹ, ನರಿ ಇತ್ಯಾದಿ ಕ್ರೂರ ವಿಷಜಂತುಗಳು, ಪ್ರಾಣಿಗಳು ಅಡಗಿವೆಯೋ!? ಮನುಷ್ಯ ಬಾಹ್ಯವಾಗಿ ನಗುಮುಖ ತೋರಿದರೆ ಸಾಲದು. ಆಂತರಿಕ ಮುಖವೂ ಅಷ್ಟೇ ಹಸನ್ಮುಖಿಯಾಗಿ ಶುದ್ಧವಾಗಿರುವಂತೆ ನೋಡಿಕೊಳ್ಳುವ ಅಗತ್ಯವಿದೆ. ಆಂತರಿಕ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ? ಅದಕ್ಕೆ ಬೇಕಾದ್ದು ಆದರ್ಶ ತತ್ವಗಳು. ಬಸವಣ್ಣನವರ `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎನ್ನುವ ವಚನದಂತೆ ಬದುಕನ್ನು ಕಟ್ಟಿಕೊಂಡರೆ ಆಂತರಿಕ ಮತ್ತು ಬಾಹ್ಯ ಸೌಂದರ್ಯ ತನ್ನಷ್ಟಕ್ಕೆ ತಾನೇ ಹೆಚ್ಚಾಗುವುದು. ಈ ವಚನದಲ್ಲಿ ದೇವರನ್ನು ಒಲಿಸುವ ದಾರಿ ಯಾವುದು ಎಂದು ಹೇಳುತ್ತಾರೆ. ದೇವರನ್ನು ಒಲಿಸುವುದು ಹೇಗೆಂದು ಪೂಜಾರಿ ಪುರೋಹಿತರಿಗೆ ಕೇಳಿದರೆ ತಿರುಪತಿ ತಿಮ್ಮಪ್ಪ, ಧರ್ಮಸ್ಥಳದ ಮಂಜುನಾಥ ಅಥವಾ ಇನ್ನಾವುದೋ ಕ್ಷೇತ್ರಕ್ಕೆ ಹೋಗು ಎನ್ನಬಹುದು. ಬಸವಣ್ಣನವರು ಹಾಗೆ ಹೇಳದೆ ಅಂತರಂಗ ಮತ್ತು ಬಹಿರಂಗ ಶುದ್ಧಿಯೇ ದೇವರನ್ನು ಒಲಿಸುವ ದಾರಿ ಎಂದಿದ್ದಾರೆ. ಅಂತರಂಗ, ಬಹಿರಂಗ ಶುದ್ಧಿ ಮಾಡಿಕೊಳ್ಳುವುದು ಹೇಗೆಂದು ಮತ್ತೆ ಪಟ್ಟಭದ್ರರನ್ನು ಕೇಳಿದರೆ ಗಂಗಾಸ್ನಾನ, ತುಂಗಾಪಾನ ಮಾಡಬೇಕು ಎನ್ನಬಹುದು. ಬಸವಣ್ಣನವರು ಅವರಂತೆ ಹೇಳದೆ ಕಳಬೇಡ, ಕೊಲಬೇಡ ಎನ್ನುವ ಏಳು ಸೂತ್ರಗಳನ್ನು ಬದುಕಿನಲ್ಲಿ ಸಾಕಾರಗೊಳಿಸಿಕೊಂಡರೆ ಅಂತರಂಗ ಮತ್ತು ಬಹಿರಂಗ ಶುದ್ಧಿಯಾಗುವುದು ಎಂದಿದ್ದಾರೆ. ಬಸವಣ್ಣನವರ ಸಪ್ತಶೀಲಗಳನ್ನು ಅದೆಷ್ಟು ಜನರು ವ್ಯಕ್ತಿಗತ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ? ಬದಲಾಗಿ `ಹೊತ್ತು ಬಂದಂತೆ ಕೊಡೆ ಹಿಡಿಯುವ’ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಿಂದ ಮನುಷ್ಯ ಹೊರಬರದಿದ್ದರೆ ತನ್ನ ಸಮಾಧಿಯನ್ನು ತಾನೇ ತೋಡಿಕೊಳ್ಳುವನು.
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು.
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು.
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು.
ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು.
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು.
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು.
ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು.
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು.
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ
ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ?
ಬಹುತೇಕರು ದೇವರ ಪೂಜೆಗೆ ನೀರು, ಹೂ, ಗಂಧ, ಅಕ್ಷತೆ, ಆರತಿ, ಧೂಪ, ನೈವೇದ್ಯ, ತಾಂಬೂಲ ಇತ್ಯಾದಿ ಪರಿಕರಗಳು ಬೇಕೇ ಬೇಕೆಂದು ಅವುಗಳನ್ನು ಜೋಡಿಸಿಕೊಂಡು ಪೂಜೆ ಮಾಡುವುದೇ ದೇವರ ಒಲುಮೆಗೆ ದಾರಿ ಎಂದು ಪರಿಭಾವಿಸುವರು. ಆದರೆ ಮಹಾದೇವಿಯಕ್ಕನ ಪೂಜಾ ಪರಿಕರಗಳೇ ಬೇರೆ. ಅವು ಹೊರಗೆ ಇರುವ ಪರಿಕರಗಳಲ್ಲ; ತನ್ನೊಳಗೇ ಇರುವ ಪರಿಕರಗಳು. ಕರುಣಾಭಾವವೇ ಮಜ್ಜನ. ಮತ್ತೊಬ್ಬರ ನೋವಿಗೆ ಮರುಗುವುದೇ ಪುಷ್ಪ. ಎಲ್ಲರ ಒಳಿತು ಬಯಸುವುದೇ ಗಂಧಾಕ್ಷತೆ. ಅಜ್ಞಾನ ನಿವಾರಿಸಿಕೊಂಡು ಅರಿವಿನಿಂದ ಕೆಲಸ ಕಾರ್ಯ ಮಾಡುವುದೇ ಧೂಪ. ಸಂತೋಷವಾಗಿರುವುದೇ ನೈವೇದ್ಯ. ತನು, ಮನ, ಭಾವದಲ್ಲಿ ಶುದ್ಧವಾಗಿರುವುದೇ ತಾಂಬೂಲ. ಹೃದಯ ಕಮಲ ಅರಳಿದರೆ ಅಲ್ಲೇ ದೇವನ ಸಾಕ್ಷಾತ್ಕಾರ. ಈ ಭಾವ ಬಾರದೆ ಬಾಹ್ಯವಾಗಿ ಏನೇ ಪರಿಕರ ಬಳಸಿ ಪೂಜೆ ಮಾಡಿದರೂ ಅಲ್ಲಿ ದೇವರು ಇರುವುದಿಲ್ಲ ಎಂದು ಸ್ಪಷ್ಟಪಡಿಸುವಳು ಅಕ್ಕ. ಆದರೆ ನನ್ನಲ್ಲಿ ಇಂಥ ಭಾವನೆಗಳು ಇವೆಯೋ ಇಲ್ಲವೋ? ಆದರೂ ಏನು ನೋಡಿ ನೀ ನನ್ನ ಕರಸ್ಥಲದಲ್ಲಿರುವೆ ಹೇಳಾ ಎಂದು ಇಷ್ಟಲಿಂಗಯ್ಯನಿಗೇ ಪ್ರಶ್ನೆ ಮಾಡುವಳು. ಅದರರ್ಥ ಎಲ್ಲಿ ದೇವನಿರುತ್ತಾನೆ, ಎಲ್ಲಿ ಆತ ಇರುವುದಿಲ್ಲ ಎನ್ನುವುದು ಅಕ್ಕನಿಗೆ ಗೊತ್ತು. ಅಕ್ಕನ ರೀತಿಯಲ್ಲಿ ಇಷ್ಟಲಿಂಗ ನಿಷ್ಠೆ ಬೆಳೆಸಿಕೊಂಡು ಅಕ್ಕ ಹೇಳುವ ಭಾವದಲ್ಲೇ ಪೂಜೆ ಮಾಡಿಕೊಳ್ಳುವುದಾದರೆ ಯಾವ ಬಾಹ್ಯ ದೇವಾಲಯಗಳಿಗೂ ಹೋಗುವ ಅಗತ್ಯವಿರುವುದಿಲ್ಲ. ವಿಷಾದದ ಸಂಗತಿ ಎಂದರೆ ಎಷ್ಟೆಲ್ಲ ಶರಣರ ವಿಚಾರಗಳನ್ನು ಕೇಳಿದರೂ ನಮ್ಮ ಜನರು ದೇವಾಲಯಗಳನ್ನು ಸುತ್ತುವುದನ್ನು ಬಿಡುವುದಿಲ್ಲ.
ಇತ್ತೀಚೆಗೆ ಸಾಣೇಹಳ್ಳಿಯಲ್ಲಿ ಒಂದು ಮದುವೆ ಆಯ್ತು. ಅವರೆಲ್ಲರೂ ಬಸವಭಕ್ತರು, ನಮ್ಮ ಸಂಪರ್ಕದಲ್ಲಿ ಇರುವವರು ಮತ್ತು ಲಿಂಗಾಯತ ಧರ್ಮೀಯರು. ಅವರ ಮದುವೆಯಲ್ಲಿ ಏನೆಲ್ಲ ಕರ್ಮಠಗಳು ನಡೆದವು ಎನ್ನುವ ವರದಿ ನಮಗೆ ಬಂತು. ಕೊನೆಗೆ ಅವರ ಮನೆದೇವರಿಗೂ ಹೋಗಿ ಪೂಜೆ ಮಾಡಿಕೊಂಡು ಬಂದರಂತೆ. ಹಾಗಾದರೆ ಅವರು ಅಂಗದ ಮೇಲೆ ಲಿಂಗ ಧರಿಸಿದ್ದು ಏಕೆ? ಸಂತೋಷದ ಸಂಗತಿ ಎಂದರೆ ವರ ಅಲ್ಲಿಗೆ ಹೋಗಿದ್ದರೂ ಕರ್ಮಾಚರಣೆಗಳಲ್ಲಿ ಭಾಗವಹಿಸಲಿಲ್ಲ ಎನ್ನುವುದು. ಯಾರದೋ ಮುಲಾಜಿಗೆ ಒಳಗಾಗಿ ಮನಸ್ಸಿಗೆ ವಿರುದ್ಧವಾದ ಕ್ರಿಯೆಗಳಲ್ಲೇ ಭಾಗವಹಿಸುವ ಸಂದರ್ಭಗಳೂ ಎದುರಾಗುವವು. ನಿಷ್ಠೆ ಮತ್ತು ನಿಷ್ಠುರತೆ ಇದ್ದರೆ ಯಾವುದೇ ಮುಲಾಜಿಗೆ ಒಳಗಾಗುವ ಅಗತ್ಯವಿಲ್ಲ. ಈ ನೆಲೆಯಲ್ಲಿ ಅಂಬಿಗರ ಚೌಡಯ್ಯನವರ ವಚನವನ್ನು ಮತ್ತೆ ಮತ್ತೆ ಲಿಂಗವಂತರು ನೆನಪಿಸಿಕೊಳ್ಳಬೇಕು.
ಕಟ್ಟಿದ ಲಿಂಗವ ಕಿರಿದು ಮಾಡಿ,
ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡಾ!
ಇಂತಪ್ಪ ಲೊಟ್ಟಿಮೂಳರ ಕಂಡರೆ
ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.
ಇದಕ್ಕಿಂತ ಕಠೋರವಾಗಿ ಯಾವ ಬಂಡಾಯ ಸಾಹಿತಿಗಳೂ ಹೇಳಲು ಸಾಧ್ಯವಿಲ್ಲ. ನಿಜವಾದ ಬಂಡಾಯ ಸಾಹಿತಿಗಳು 12ನೆಯ ಶತಮಾನದ ಎಲ್ಲ ಶರಣ ಶರಣೆಯರು. ಈ ವಚನದಲ್ಲಿ ಚೌಡಯ್ಯನವರು ಹೇಳುವುದು: ಇಷ್ಟಲಿಂಗ ದೀಕ್ಷೆ ಪಡೆದು ಅಂಗದ ಮೇಲೆ ಲಿಂಗ ಧರಿಸಿಕೊಂಡವರು ಅದನ್ನೇ ನಿಷ್ಟೆಯಿಂದ ಪೂಜಿಸಬೇಕು. ಆದರೆ ಈ ಲಿಂಗಕ್ಕಿಂತ ಬೆಟ್ಟದ ಮೇಲಿರುವ ಸ್ಥಾವರ ಲಿಂಗ ಶ್ರೇಷ್ಠ ಎಂದು ಅಲ್ಲಿಗೆ ಹೋಗಿ ಅಡ್ಡ ಬೀಳುವವರ ಪರಿಯನ್ನು ಕಂಡು ಅವರು ಚಾಟಿ ಏಟು ಬೀಸುತ್ತಾರೆ. ಹಾಗೆ ಲಿಂಗ ಧರಿಸಿಯೂ ಬೆಟ್ಟದ ಲಿಂಗಕ್ಕೆ ಹೋಗುವವರನ್ನು ಲೊಟ್ಟಿಮೂಳರು ಎಂದು ಛೇಡಿಸುತ್ತಾರೆ. ಅಷ್ಟಕ್ಕೇ ಸುಮ್ಮನಾಗದೆ ಅಂಥವರನ್ನು ಗಟ್ಟಿಯಿರುವ ಚಪ್ಪಲಿಯಿಂದ ಲೊಟಲೊಟನೆ ಹೊಡೆಯಿರಿ ಎನ್ನುವರು. ಸವೆದ, ಹರಿದ ಚಪ್ಪಲಿ ಎನ್ನದೆ ಗಟ್ಟಿವುಳ್ಳ ಪಾದರಕ್ಷೆ ಎಂದಿರುವಲ್ಲಿ ಅವರ ಆಕ್ರೋಶ ವ್ಯಕ್ತವಾಗುವುದು. ಗಟ್ಟಿಯಾಗಿರುವ ಚಪ್ಪಲಿಯಿಂದ ಹೊಡೆದರೆ ಅವರಿಗೆ ಬಲವಾದ ಏಟು ಬಿದ್ದು ಸರಿಯಾದ ಶಿಕ್ಷೆ ಕೊಟ್ಟಂತಾಗುವುದು. ಇಷ್ಟೆಲ್ಲ ಕಟುವಾಗಿ ಶರಣರು ಬುದ್ಧಿ ಹೇಳಿದರೂ ಲಿಂಗಾಯತರ ಬದುಕು ನಿಂತ ನೀರಿನಂತಾಗಿರುವುದು ನೋವಿನ ಸಂಗತಿ. ಹತ್ತರಕೂಡ ಹನ್ನೊಂದು, ಪರಷಿಯ ಕೂಡ ಗೋವಿಂದ ಎನ್ನುವಂತೆ ಹಿರಿಯರು ಆ ದಾರಿಯಲ್ಲಿ ನಡೆದಿದ್ದಾರೆ; ನಾವೂ ಅದೇ ದಾರಿ ಹಿಡಿಯುತ್ತೇವೆನ್ನುವ ಹುಂಬತನದ ಮಾತುಗಳನ್ನಾಡುವವರೂ ಇದ್ದಾರೆ. ಹಿರಿಯರು ನೀತಿವಂತರಾಗಿ, ಸತ್ಯವಂತರಾಗಿ, ಪ್ರಾಮಾಣಿಕರಾಗಿ, ಕಾಯಕಶೀಲರಾಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದರು. ಮತ್ತೊಬ್ಬರ ನೋವಿಗೆ ಸ್ಪಂದಿಸುತ್ತಿದ್ದರು. ಎಲ್ಲರನ್ನೂ ಪ್ರೀತಿಸುತ್ತಿದ್ದರು. ಅವರ ಇಂಥ ಗುಣಗಳನ್ನೇಕೆ ಬೆಳೆಸಿಕೊಳ್ಳುತ್ತಿಲ್ಲ? ಹಾಗೆ ಬೆಳೆಸಿಕೊಳ್ಳದಿದ್ದರೆ ಹಿರಿಯರ ಹಾದಿಯಲ್ಲಿ ನಡೆಯುತ್ತೇವೆ ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ.
ಇವತ್ತಿನ ದಿನಗಳಲ್ಲಿ ಜನರ ಮನದಲ್ಲಿ ಏನೆಲ್ಲ ಮೌಢ್ಯಗಳು ತುಂಬಿಕೊಂಡಿವೆ. ಯಾವುದೇ ಮನೆಯಲ್ಲಿ ಗೃಹಪ್ರವೇಶ, ಮದುವೆ ಮತ್ತಿನ್ನೇನೋ ಶುಭ ಕಾರ್ಯಗಳು ನಡೆಯುತ್ತವೆ ಎಂದರೆ ಅದೂ ಲಿಂಗಾಯತರ ಮನೆಯಲ್ಲೇ ಹೋಮಾದಿ ಕ್ರಿಯೆಗಳು ಯಗ್ಗಿಲ್ಲದೆ ನಡೆಯುತ್ತಿವೆ. ಲಿಂಗಾಯತರು ಯಾವ ಹೋಮಾದಿ ಕ್ರಿಯೆಗಳನ್ನೂ ಮಾಡಿಸುವ ಅಗತ್ಯವಿಲ್ಲ. ಅವರಿಗೆ ಶುಭ, ಅಶುಭ ಎನ್ನುವುದೇ ಇಲ್ಲ. ‘ಎಮ್ಮವರು ಬೆಸಗೊಂಡರೆ ಶುಭಲಗ್ನ’ ಎನ್ನುವುದು ಲಿಂಗಾಯತ ತತ್ವ. ಅದರಮೇಲೂ ಮನೆಯಲ್ಲಿ ಏನಾದರೂ ಕಾರ್ಯ ಮಾಡುವಾಗ ಅಲ್ಲೊಂದು ಬಸವಣ್ಣನವರ ಭಾವಚಿತ್ರ ಇಟ್ಟು ಅದಕ್ಕೆ ಪುಷ್ಪಗಳನ್ನು ಹಾಕಿ ಬಸವಣ್ಣನವರ ಕೆಲವು ವಚನಗಳನ್ನು ಓದಿ ಇಲ್ಲವೇ ಹಾಡಿ ತಮ್ಮ ಕಾರ್ಯ ಪೂರೈಸಿಕೊಳ್ಳಬಹುದು. ಇದನ್ನು ಮಾಡದೆ ಮತ್ತೇನೋ ಕರ್ಮಠಗಳನ್ನು ಮಾಡಿದರೆ ಅಂಥವರು ಬಸವ ಪರಂಪರೆಯವರು, ಲಿಂಗವಂತರು ಎಂದು ಹೇಳಿಕೊಳ್ಳುವ ಅರ್ಹತೆಯನ್ನೇ ಕಳೆದುಕೊಳ್ಳುವರು. ನಮ್ಮನ್ನು ಬಸವಜಯಂತಿ ಮತ್ತಿತರ ಕಾರ್ಯಗಳಿಗೆ ಆಹ್ವಾನಿಸಲು ಬಂದವರಿಗೆ ನಾವು ಹಾಕುವ ಮೊದಲ ಪ್ರಶ್ನೆ ನಿಮ್ಮಲ್ಲಿ ಎಷ್ಟು ಜನ ಲಿಂಗದೀಕ್ಷೆ ಪಡೆದು ಇಷ್ಟಲಿಂಗವನ್ನೇ ಪೂಜಿಸುತ್ತಿದ್ದೀರಿ ಎಂದು. ಇದುವರೆಗೂ ಲಿಂಗದೀಕ್ಷೆ ಪಡೆಯದಿದ್ದರೆ ಈಗಲಾದರೂ ಲಿಂಗದೀಕ್ಷೆ ಪಡೆಯಿರಿ. ಸಮಿತಿಯ ಸದಸ್ಯರಾದರೂ ಕಡ್ಡಾಯವಾಗಿ ಇಷ್ಟಲಿಂಗಧಾರಿಗಳಾಗಬೇಕು. ನೀವು ಲಿಂಗಪೂಜೆ ಮಾಡದೆ ಏನೇ ತತ್ವ ಹೇಳಿದರೂ ಪ್ರಯೋಜನವಾಗುವುದಿಲ್ಲ ಎಂದು ಸ್ಪಷ್ಟವಾಗಿಯೇ ಹೇಳುತ್ತೇವೆ. ತತ್ವ ಹೇಳುವುದು, ಕೇಳುವುದಷ್ಟೇ ಮುಖ್ಯವಾಗದೆ ಆಚರಣೆ ಮುಖ್ಯವಾಗಬೇಕು.
ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಅಷ್ಟಕ್ಕೇ ಲಿಂಗಾಯತರು ಅಥವಾ ಬಸವಾನುಯಾಯಿಗಳು ಸಂತೋಷಪಟ್ಟರೆ ಸಾಲದು. ನಾಯಕನ ತತ್ವ ಸಿದ್ಧಾಂತಗಳನ್ನು ಅರಿತು ಆಚರಣೆಯಲ್ಲಿ ತರುವ ಕಾರ್ಯ ತುರ್ತಾಗಿ ಆಗಬೇಕಿದೆ. ಈ ನೆಲೆಯಲ್ಲೇ `ವಚನ ಸಂವಿಧಾನ’ ಎನ್ನುವ ಸಂಪಾದನಾ ಕೃತಿಯನ್ನು ನಾವೇ ಹೊರತಂದಿದ್ದೇವೆ. 30 ಜನ ವಿದ್ವಾಂಸರು 30 ವಿಭಿನ್ನ ಲೇಖನಗಳನ್ನು ಬರೆದಿದ್ದಾರೆ. ಆ ಕೃತಿಯ ಲೋಕಾರ್ಪಣೆ ಮೇ 1ರಂದು ‘ಕಾಯಕ ದಿನಾಚರಣೆ’ಯಂದೇ ನಡೆಯಿತು. ಆಗ ಸಾಹಿತಿಗಳು, ಮಠಾಧೀಶರು ಭಾಗವಹಿಸಿ ಆಡಿದ ಮಾತುಗಳು ಕೃತಿಯ ಮೌಲ್ಯಕ್ಕೆ ಕನ್ನಡಿ ಹಿಡಿದಂತಿದ್ದವು. ವಚನ ಸಾಹಿತ್ಯ ಕೇವಲ ಓದು, ಬರಹ, ಚರ್ಚೆಗೆ ಇರುವಂತಹುದಲ್ಲ. ಅದು ಅರಿವು ಮತ್ತು ಆಚಾರದಲ್ಲಿ ಮುಂದುವರಿಯಬೇಕು. ಹಿಂದೆ ಮಠಗಳು ಶರಣರ ತತ್ವಸಿದ್ಧಾಂತಗಳನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡುವುದಲ್ಲದೆ ತಮ್ಮ ನಿತ್ಯ ಬದುಕಿನಲ್ಲೂ ಆ ತತ್ವಗಳನ್ನು ಜಾರಿಯಲ್ಲಿ ತರುತ್ತಿದ್ದವು. ಆದರೆ ಇತ್ತೀಚಿನ ದಿನಮಾನಗಳಲ್ಲಿ ಎಷ್ಟೋ ಮಠಗಳೂ ಮೌಢ್ಯಗಳಿಗೆ ಒಳಗಾಗಿವೆ. ಅಲ್ಲಿ ಏನೇನು ನಡೆಯುತ್ತದೆ ಎಂದು ಭಕ್ತರು ಅರಿಯದವರೇನಲ್ಲ. ಅಲ್ಲೂ ಹೋಮಾದಿ ಕ್ರಿಯೆಗಳು, ಕರ್ಮಠ ಪೂಜೆಗಳು, ಯಂತ್ರ ಕಟ್ಟುವುದು, ಬೂದಿ ಮಂತ್ರಿಸಿ ಕೊಡುವುದು, ದಾರ ಕಟ್ಟುವುದು, ಶಾಸ್ತ್ರ ಹೇಳುವುದು ಇತ್ಯಾದಿ ನಡೆಯುತ್ತಿವೆ. ಈ ನೆಲೆಯಲ್ಲಿ ಕಾವಿಧಾರಿಗಳು ಸಹ ಬಸವಪ್ರಜ್ಞೆಯನ್ನು ಮೈಗೂಡಿಸಿಕೊಂಡರೆ ಭಕ್ತರಲ್ಲೂ ಬಸವಪ್ರಜ್ಞೆಯನ್ನು ಜಾಗೃತಗೊಳಿಸಲು ಸಾಧ್ಯ. ‘ವಚನ ಸಂವಿಧಾನ’ ಕೃತಿಯನ್ನು ಮಠಾಧೀಶರು ಮತ್ತು ರಾಜಕಾರಣಿಗಳು ತಪ್ಪದೆ ಓದುವಂತಾಗಬೇಕು. ಶಾಲಾ ಕಾಲೇಜುಗಳಲ್ಲೂ ವಚನ ಸಂವಿಧಾನ ಕುರಿತಂತೆ ಬೋಧನೆ, ಸಂವಾದ ನಡೆಯುವಂತಾಗಬೇಕು ಎನ್ನುವುದು ಆ ಕೃತಿಯನ್ನು ಕುರಿತು ಮಾತನಾಡಿದವರ ಅಭಿಪ್ರಾಯವಾಗಿತ್ತು.
ತನುವ ಗೆಲಲರಿಯದೆ, ಮನವ ಗೆಲಲರಿಯದೆ,
ಧನವ ಗೆಲಲರಿಯದೆ, ಭ್ರಮೆಗೊಂಡಿತ್ತು ಲೋಕವೆಲ್ಲವು.
ತನುವ ದಾಸೋಹಕ್ಕೆ ಸವೆಸಿ, ಮನವ ಲಿಂಗಧ್ಯಾನದಲ್ಲಿ ಸವೆಸಿ
ಧನವ ಜಂಗಮದಲ್ಲಿ ಸವೆಸಿ ಗೆಲಬಲ್ಲಡೆ,
ಸಂಗನಬಸವಣ್ಣನಲ್ಲದೆ ಮತ್ತಾರನು ಕಾಣೆ.
ಗುಹೇಶ್ವರಾ-ನಿಮ್ಮ ಶರಣ ಸಂಗನಬಸವಣ್ಣಂಗೆ
ನಮೋ ನಮೋ ಎನುತಿರ್ದೆನು.
Comments 6
ರಾಜು ಜುಗದಿ, ಮಹಾರಾಷ್ಟ್ರ
May 15, 2024ಶಿವ ತತ್ವ ನಮ್ಮೊಳಗೇ ಇದ್ದರೂ ಅದನ್ನು ಅರ್ಥ ಮಾಡಿಕೊಳ್ಳದ ಅಗಸನ ಸ್ಥಿತಿಯಾಗುತ್ತಿದೆ ಎಂದು ಅಕ್ಕಮಹಾದೇವಿ ಎಚ್ಚರಿಸಿದ್ದಾರೆ. ನಾವೆಲ್ಲ ಆ ಶಿವನ ಚೇತನಗಳೇ ಆದರೂ ನಮ್ಮ ಸ್ವಭಾವಗಳು ಎಷ್ಟು ವೈರುಧ್ಯಮಯವಾಗಿವೆ…..
Roopa manjunath
May 21, 2024🙏sharanu shranrti,.basava thathwa ,sharanara nudi anubavada nudigalu ,so anthranga bahiiranga sudda erabeku, nannlli devaridanne, bere devara hagekke, magalammanige sharanu shranrti
ಗುರುದೇವ ಜಗಳೂರು
May 25, 2024ಗುರುಗಳಿಗೆ ವಂದನೆ.
ಜಯಶ್ರೀ ಪಾಟೀಲ್
May 26, 2024ಅಕ್ಕ ಹೇಳುವ ಭಾವದಲ್ಲೇ ಪೂಜೆ ಮಾಡಿಕೊಳ್ಳುವುದಾದರೆ ಯಾವ ಬಾಹ್ಯ ದೇವಾಲಯಗಳಿಗೂ ಹೋಗುವ ಅಗತ್ಯವಿರುವುದಿಲ್ಲ- ಎಂದಿದ್ದೀರಿ. ಹಾಗಾದರೆ ನಾವು ಮಾಡಿಕೊಳ್ಳುವ ಇಷ್ಟಲಿಂಗ ಪೂಜೆಯೂ ಅರ್ಥಹೀನ ಎನಿಸುತ್ತದೆ. ಹೂ, ಧೂಪ, ದೀಪಗಳಿಂದಲೇ ನಾವು ಲಿಂಗಯ್ಯನನ್ನು ಪೂಜೆ ಮಾಡುತ್ತೇವೆ, ದೀಕ್ಷೆ ಕೊಟ್ಟ ಗುರುಗಳೂ ಇದನ್ನೇ ಹೇಳಿಕೊಂಡಿದ್ದಾರೆ. ಹಾಗಾದರೆ ಪೂಜೆ ಮಾಡಬಾರದೇ?
ಪ್ರತಿಭಾ ಎಂ.ಎಚ್
May 26, 2024ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ, ನಮಗೆಲ್ಲ ಬಹಳ ಸಂತೋಷವಾಗಿದೆ. ಆದರೆ, ಲಿಂಗಾಯತರೇತರಿಗೆ ಬಸವಣ್ಣನವರು ಹೇಗೆ ತಲುಪುತ್ತಾರೆ? ಅದಕ್ಕಾಗಿ ಸರ್ಕಾರ ಏನಾದರೂ ಯೋಜನೆಗಳನ್ನು ಹಾಕಿಕೊಂಡಿದೆಯೇ?
Komal Halyal
May 26, 2024`ವಚನ ಸಂವಿಧಾನ’ ಕೃತಿಯು ಎಲ್ಲಿ ಸಿಗುತ್ತದೆ? ಹೇಗೆ ತರಿಸಿಕೊಳ್ಳುವುದು?