
ಚಿತ್ತ ಸತ್ಯ…
ಚಿತ್ತದೊಳಿವೆ ಎರಡು ಕವಲು
ಒಂದು ರಂಗುರಂಗಿನ ದಾರಿ
ಅದು ಮಹಾ ಹೆದ್ದಾರಿ
ಪ್ರಪಂಚದರಿವು ಬಂದಾಗಿನಿಂದ
ಅತ್ತಲೇ ನಡೆದು ರೂಢಿ
ಅನಾದಿ ಕಾಲದ ದಾಸ್ತಾನುಗಳೆಲ್ಲ
ಅಲ್ಲಿ ಕಾಯುತ್ತಿರುತ್ತವೆ
ಮೈ ಏರಿ ಮನವಾಗಲು
ಅಲ್ಲಿನ ಒಳದಾರಿಗಳಲ್ಲೇ
ಸುಳಿದಾಡಿ ಸೆಣಸಾಡಿ ಗೊಣಗಾಡಿ
ಜೀವಿಸುವ ಮೋಡಿ.
ಅಲ್ಲಿ ಯಾರುಂಟು… ಅನ್ನುವಿರೋ
ಯಾರಿಲ್ಲಾ… ಎಂದು ಕೇಳಿ!
ನೆರೆಯವರು, ಮನೆಯವರು
ಇದ್ದವರು, ಹೋದವರು
ಹತ್ತಿರಾದವರು, ದೂರಾದವರು
ಒಲಿದವರು, ಮುನಿದವರು
ಎಲ್ಲೋ ಒಮ್ಮೆ ಕಂಡು ಮರೆಯಾದವರು
ಎಲ್ಲರೂ ಇಲ್ಲಿ ಎಡತಾಕುತ್ತಾರೆ
ಯಾವ ಗಳಿಗೆಗೂ ಸರಿಯೇ
ದಿಢೀರೆಂದು ಎದುರಾಗುತ್ತಾರೆ!
ಅಲ್ಲಿ ಏನಿವೆ!!! ಎನ್ನುವಿರೋ?
ಏನಿಲ್ಲಾ ನೋಡಿ ಹೇಳಿ…
ಬಯಸಿದ್ದು, ಒಲಿದದ್ದು
ಓದಿದ್ದು, ಮರೆತದ್ದು,
ಕೇಳಿದ್ದು, ನೋಡಿದ್ದು
ಕಳೆದದ್ದು, ಪಡೆದದ್ದು
ಕೈಗೆಟುಕದೆ ಹೋಗಿದ್ದು
ಹತ್ತಿರವಿದ್ದೂ ಸಿಗದದ್ದು…
ಇನ್ನು ಹೆಜ್ಜೆ ಇಟ್ಟಲ್ಲೆಲ್ಲಾ
ಮೋಜು-ಮಸ್ತಿಗಳು
ಆಮೋದ ಪ್ರಮೋದಗಳು
ಸುಖದ ಬಯಕೆಗಳು
ಸಂತೆಗಳು ಸೆಳೆತಗಳು
ಕುಣಿತಗಳು ಕರಗಗಳು
ಬೆಂಡು ಬತ್ತಾಸಿನ
ಉತ್ಸವದ ಮೆರವಣಿಗೆಗಳು
… ಋತುಗಳು ಉರುಳಿದರೂ
ತೀರದು ದಾರಿಯ ಸೆಳೆತ…
ಗೌಜು ಗದ್ದಲಗಳಿದ್ದರೂ
ಕಿಕ್ಕಿರಿದ ಜಂಗುಳಿಯಿದ್ದರೂ
ತುಂಬಿಕೊಳ್ಳುತ್ತಲೇ ಇರುತ್ತವೆ
ಮುಗಿಯಲಾರದ ಮಾಲುಗಳಲ್ಲಿ
ಹೊಸ ಹೊಸ ವಿಷಯಗಳು
ಜಾಗಕ್ಕೇನೂ ಕೊರತೆ ಇಲ್ಲ
ಆದರೂ ಉಸಿರುಗಟ್ಟುತ್ತದೆ
ನಿನ್ನೆಯ ಸಂಕಟ, ನಾಳೆಯ ಒತ್ತಡ
ಕೊರಗುಗಳು ತಪ್ಪುವುದಿಲ್ಲ
ನೋವುಗಳು ಮುಗಿಯುವುದಿಲ್ಲ
ಸೋಲಿನ ಸಂಕಟ, ನೋವು, ವೇದನೆ,
ತಳಮಳ, ದುಃಖ, ಶೋಧನೆ
ಅಂಟಿಕೊಂಡೇ ಇರುತ್ತವೆ… ನೆರಳಂತೆ.
ದೂರ ಸಾಗಿಬಂದಂತೆ
ಏನನ್ನೋ ಸಾಧಿಸಿ ಬೀಗಿದಂತೆ
ಸಾರ್ಥಕ ಪಯಣವೆಂಬಂತೆ
ಇಲ್ಲಿ ಭಾಸವಾಗುವುದೇ?…
ಅಯ್ಯೋ… ಇದು ನಿಂತಲ್ಲೇ ನಡೆವ
ಟ್ರೆಡ್ ಮಿಲ್ ನಡಿಗೆ ಕಣ್ರೀ…
ಗುರಿಯಿಲ್ಲದ ದಾರಿ
ಆಹ್ವಾನ- ವಿಸರ್ಜನೆಯ
ರಾಟಾಳದೊಳು ಚಿತ್ತ ಶುದ್ಧಿ ಎಲ್ಲಿ?
ಚಿತ್ತ ರಟ್ಟೆಯ ಕಾಯಿ,
ಚಿತ್ತ ಅತ್ತಿಯ ಹಣ್ಣು!!!
ಗಕ್ಕನೆ ಇಲ್ಲೊಮ್ಮೆ ನಿಂತು
ಕೊಂಚ ಕಣ್ಣ ಪಾಪೆಯ
ಹೊಂದಿಸಿಕೊಂಡರೂ ಸಾಕು
ಅಲ್ಲೇ ಪಕ್ಕವೇ ಜನಜಂಗುಳಿಯಿಲ್ಲದ
ಅಂಗಡಿಮುಗ್ಗಟ್ಟುಗಳಿಲ್ಲದ
ಕಾಲುದಾರಿ…
ಗುರು ತೋರಿದ ದಾರಿ…
ಶ್ರದ್ಧೆ ಇಟ್ಟು ನೋಡಿದರೆ ಕಂಡೀತು…
ಅಲ್ಲಿ ಏನಿಲ್ಲಾ… ಅಂತೀರಾ?
ವಿಷಯಗಳಿಲ್ಲ ವ್ಯಾಕುಲವಿಲ್ಲ
ಕಿರಿಕಿರಿಯಿಲ್ಲ ಪಿರಿಪಿರಿಯಿಲ್ಲ
ಆದ್ಯತೆ ಇಲ್ಲ ಅಸಡ್ಡೆಗಳಿಲ್ಲ
ಕೀರ್ತಿ ಕಾಮನೆಗಳಿಲ್ಲ
ದ್ವಂದ್ವಗಳಿಲ್ಲ ಧಾವಂತಗಳಿಲ್ಲ
ಬೇಕು ಬೇಡಗಳು ಮೊದಲೇ ಇಲ್ಲ
ವಸ್ತು-ವಿಷಯಗಳಿಲ್ಲದ ದಾರೀಲಿ
ಒಂಟಿಯೂ ನೀವಲ್ಲಾ!
ಹೇಗೆನ್ನುವಿರಾ…?
ಆ ಏಕಾಂತದಲಿ…
ನಿನಗೆ ನೀನೇ ಗೆಳತಿ
ಪ್ರಕೃತಿಯೇ ಜೊತೆಗಾತಿ
ಅದೆಂತು ಎನ್ನುವಿರಾ?
ಎಲ್ಲರಿಗೂ ನೆಲೆ ಕೊಟ್ಟೂ
ಅವರಿವರ ಸುದ್ದಿ ಬಿತ್ತದೆ
ಬೆಳೆ ಕೊಟ್ಟು ಉಣಿಸೋ ನೆಲದಮ್ಮ
ಕೈಹಾಕಿದವರಿಗೆಲ್ಲ ಹೂ-ಹಣ್ಣು,
ಬಿಸಿಲಿಗೆ ನೆಳಲ ತಂಪು ನೀಡೋ
ಮರ-ಗಿಡ-ಬಳ್ಳಿಗಳು
ಎಲ್ಲರ ಶ್ವಾಸ ಹೊಕ್ಕು ಬಂದರೂ
ಯಾರ ಗುಟ್ಟು ಯಾರಿಗೂ ಹರಡದೆ
ಸುಮ್ಮನೆ ಸುಳಿವ ಗಾಳಿ,
ಸುರಿವ ಮಳೆ, ಹರಿವ ನೀರು
ಕತ್ತಲಾದಾಗ ಅರಳುವ ನಕ್ಷತ್ರಗಳು…
ಸ್ವಚ್ಛಂದದ ಈ ಸಾಂಗತ್ಯದಲಿ
ನೀಲಾಗಸದಂತೆ ಮನ ನಿರ್ಮಲ
‘ಚಿತ್ತ ಸತ್ಯವೇ ಅಂತಿಮ ಸತ್ಯ’
ಇದಲ್ಲವೇ ಚಿತ್ತದ ಹೊಲಬು?
ದಾರಿಯೇ ಗುರಿಯಾದ ಸೊಬಗು.
Comments 3
Vijaya Kapparad, Dharawad
Jun 16, 2024🙏 ಚಿತ್ತ ಸತ್ಯ ಕವನ ತುಂಬಾ ಚೆನ್ನಾಗಿ ಮೂಡಿಬಂದಿದೆ.
ಬಸವ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ
Jun 17, 2024ಪ್ರೀತಿಯ ಮಂಗಳಾ ಮೇಡಂ, ನಾನು ನಿಮ್ಮ ಆಳ ನಿರಾಳ ಶ್ರೇಷ್ಟ ಪುಸ್ತಕ ಅಧ್ಯಯನ ಮಾಡಿ ತುಂಬಾ, ತುಂಬಾ ಪ್ರಭಾವಿತನಾದೆ… !!! ಎಷ್ಟು ದೂರ, ಎತ್ತರಕ್ಕೆ ಓದುಗರ ಟ್ರೆಕ್ಕಿಂಗ್ ಮಾಡಿಸಿದ್ದೀರಿ…!!! ರಮ್ಯಾತಿ ರಮ್ಯ ತಾಣ ತೋರಿಸಿ, ಇನ್ನೂ ಮುಂದೆ ಮುಂದೆ ಸಾಗಿ ಎಂದಿದ್ದೀರಿ…
ವಾಹ್ ಕಂಗ್ರಾಟ್ಸ್.. ಕೃತಜ್ಞತೆಗಳು ಧನ್ಯವಾದಗಳು, ನಿಮ್ಮ ಸದಲೋಚನೆಗಳಿಗೆ..
ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
Jun 17, 2024ಸರಳವಾಗಿ,ಸರಳ ಗುರು ಮಾರ್ಗ ತೋರಿಸುವ ಕವನ.
ಸರಳವಾಗಿ ಬರೆಯುವುದೇನು ಸರಳವೇ…