Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಚಿತ್ತ ಸತ್ಯ…
Share:
Poems June 14, 2024 ಕೆ.ಆರ್ ಮಂಗಳಾ

ಚಿತ್ತ ಸತ್ಯ…

ಚಿತ್ತದೊಳಿವೆ ಎರಡು ಕವಲು
ಒಂದು ರಂಗುರಂಗಿನ ದಾರಿ
ಅದು ಮಹಾ ಹೆದ್ದಾರಿ
ಪ್ರಪಂಚದರಿವು ಬಂದಾಗಿನಿಂದ
ಅತ್ತಲೇ ನಡೆದು ರೂಢಿ
ಅನಾದಿ ಕಾಲದ ದಾಸ್ತಾನುಗಳೆಲ್ಲ
ಅಲ್ಲಿ ಕಾಯುತ್ತಿರುತ್ತವೆ
ಮೈ ಏರಿ ಮನವಾಗಲು
ಅಲ್ಲಿನ ಒಳದಾರಿಗಳಲ್ಲೇ
ಸುಳಿದಾಡಿ ಸೆಣಸಾಡಿ ಗೊಣಗಾಡಿ
ಜೀವಿಸುವ ಮೋಡಿ.

ಅಲ್ಲಿ ಯಾರುಂಟು… ಅನ್ನುವಿರೋ
ಯಾರಿಲ್ಲಾ… ಎಂದು ಕೇಳಿ!
ನೆರೆಯವರು, ಮನೆಯವರು
ಇದ್ದವರು, ಹೋದವರು
ಹತ್ತಿರಾದವರು, ದೂರಾದವರು
ಒಲಿದವರು, ಮುನಿದವರು
ಎಲ್ಲೋ ಒಮ್ಮೆ ಕಂಡು ಮರೆಯಾದವರು
ಎಲ್ಲರೂ ಇಲ್ಲಿ ಎಡತಾಕುತ್ತಾರೆ
ಯಾವ ಗಳಿಗೆಗೂ ಸರಿಯೇ
ದಿಢೀರೆಂದು ಎದುರಾಗುತ್ತಾರೆ!

ಅಲ್ಲಿ ಏನಿವೆ!!! ಎನ್ನುವಿರೋ?
ಏನಿಲ್ಲಾ ನೋಡಿ ಹೇಳಿ…
ಬಯಸಿದ್ದು, ಒಲಿದದ್ದು
ಓದಿದ್ದು, ಮರೆತದ್ದು,
ಕೇಳಿದ್ದು, ನೋಡಿದ್ದು
ಕಳೆದದ್ದು, ಪಡೆದದ್ದು
ಕೈಗೆಟುಕದೆ ಹೋಗಿದ್ದು
ಹತ್ತಿರವಿದ್ದೂ ಸಿಗದದ್ದು…
ಇನ್ನು ಹೆಜ್ಜೆ ಇಟ್ಟಲ್ಲೆಲ್ಲಾ
ಮೋಜು-ಮಸ್ತಿಗಳು
ಆಮೋದ ಪ್ರಮೋದಗಳು
ಸುಖದ ಬಯಕೆಗಳು
ಸಂತೆಗಳು ಸೆಳೆತಗಳು
ಕುಣಿತಗಳು ಕರಗಗಳು
ಬೆಂಡು ಬತ್ತಾಸಿನ
ಉತ್ಸವದ ಮೆರವಣಿಗೆಗಳು
… ಋತುಗಳು ಉರುಳಿದರೂ
ತೀರದು ದಾರಿಯ ಸೆಳೆತ…

ಗೌಜು ಗದ್ದಲಗಳಿದ್ದರೂ
ಕಿಕ್ಕಿರಿದ ಜಂಗುಳಿಯಿದ್ದರೂ
ತುಂಬಿಕೊಳ್ಳುತ್ತಲೇ ಇರುತ್ತವೆ
ಮುಗಿಯಲಾರದ ಮಾಲುಗಳಲ್ಲಿ
ಹೊಸ ಹೊಸ ವಿಷಯಗಳು
ಜಾಗಕ್ಕೇನೂ ಕೊರತೆ ಇಲ್ಲ
ಆದರೂ ಉಸಿರುಗಟ್ಟುತ್ತದೆ
ನಿನ್ನೆಯ ಸಂಕಟ, ನಾಳೆಯ ಒತ್ತಡ
ಕೊರಗುಗಳು ತಪ್ಪುವುದಿಲ್ಲ
ನೋವುಗಳು ಮುಗಿಯುವುದಿಲ್ಲ
ಸೋಲಿನ ಸಂಕಟ, ನೋವು, ವೇದನೆ,
ತಳಮಳ, ದುಃಖ, ಶೋಧನೆ
ಅಂಟಿಕೊಂಡೇ ಇರುತ್ತವೆ… ನೆರಳಂತೆ.

ದೂರ ಸಾಗಿಬಂದಂತೆ
ಏನನ್ನೋ ಸಾಧಿಸಿ ಬೀಗಿದಂತೆ
ಸಾರ್ಥಕ ಪಯಣವೆಂಬಂತೆ
ಇಲ್ಲಿ ಭಾಸವಾಗುವುದೇ?…
ಅಯ್ಯೋ… ಇದು ನಿಂತಲ್ಲೇ ನಡೆವ
ಟ್ರೆಡ್ ಮಿಲ್ ನಡಿಗೆ ಕಣ್ರೀ…
ಗುರಿಯಿಲ್ಲದ ದಾರಿ
ಆಹ್ವಾನ- ವಿಸರ್ಜನೆಯ
ರಾಟಾಳದೊಳು ಚಿತ್ತ ಶುದ್ಧಿ ಎಲ್ಲಿ?
ಚಿತ್ತ ರಟ್ಟೆಯ ಕಾಯಿ,
ಚಿತ್ತ ಅತ್ತಿಯ ಹಣ್ಣು!!!

ಗಕ್ಕನೆ ಇಲ್ಲೊಮ್ಮೆ ನಿಂತು
ಕೊಂಚ ಕಣ್ಣ ಪಾಪೆಯ
ಹೊಂದಿಸಿಕೊಂಡರೂ ಸಾಕು
ಅಲ್ಲೇ ಪಕ್ಕವೇ ಜನಜಂಗುಳಿಯಿಲ್ಲದ
ಅಂಗಡಿಮುಗ್ಗಟ್ಟುಗಳಿಲ್ಲದ
ಕಾಲುದಾರಿ…
ಗುರು ತೋರಿದ ದಾರಿ…
ಶ್ರದ್ಧೆ ಇಟ್ಟು ನೋಡಿದರೆ ಕಂಡೀತು…

ಅಲ್ಲಿ ಏನಿಲ್ಲಾ… ಅಂತೀರಾ?
ವಿಷಯಗಳಿಲ್ಲ ವ್ಯಾಕುಲವಿಲ್ಲ
ಕಿರಿಕಿರಿಯಿಲ್ಲ ಪಿರಿಪಿರಿಯಿಲ್ಲ
ಆದ್ಯತೆ ಇಲ್ಲ ಅಸಡ್ಡೆಗಳಿಲ್ಲ
ಕೀರ್ತಿ ಕಾಮನೆಗಳಿಲ್ಲ
ದ್ವಂದ್ವಗಳಿಲ್ಲ ಧಾವಂತಗಳಿಲ್ಲ
ಬೇಕು ಬೇಡಗಳು ಮೊದಲೇ ಇಲ್ಲ
ವಸ್ತು-ವಿಷಯಗಳಿಲ್ಲದ ದಾರೀಲಿ
ಒಂಟಿಯೂ ನೀವಲ್ಲಾ!
ಹೇಗೆನ್ನುವಿರಾ…?

ಆ ಏಕಾಂತದಲಿ…
ನಿನಗೆ ನೀನೇ ಗೆಳತಿ
ಪ್ರಕೃತಿಯೇ ಜೊತೆಗಾತಿ
ಅದೆಂತು ಎನ್ನುವಿರಾ?
ಎಲ್ಲರಿಗೂ ನೆಲೆ ಕೊಟ್ಟೂ
ಅವರಿವರ ಸುದ್ದಿ ಬಿತ್ತದೆ
ಬೆಳೆ ಕೊಟ್ಟು ಉಣಿಸೋ ನೆಲದಮ್ಮ
ಕೈಹಾಕಿದವರಿಗೆಲ್ಲ ಹೂ-ಹಣ್ಣು,
ಬಿಸಿಲಿಗೆ ನೆಳಲ ತಂಪು ನೀಡೋ
ಮರ-ಗಿಡ-ಬಳ್ಳಿಗಳು
ಎಲ್ಲರ ಶ್ವಾಸ ಹೊಕ್ಕು ಬಂದರೂ
ಯಾರ ಗುಟ್ಟು ಯಾರಿಗೂ ಹರಡದೆ
ಸುಮ್ಮನೆ ಸುಳಿವ ಗಾಳಿ,
ಸುರಿವ ಮಳೆ, ಹರಿವ ನೀರು
ಕತ್ತಲಾದಾಗ ಅರಳುವ ನಕ್ಷತ್ರಗಳು…
ಸ್ವಚ್ಛಂದದ ಈ ಸಾಂಗತ್ಯದಲಿ
ನೀಲಾಗಸದಂತೆ ಮನ ನಿರ್ಮಲ
‘ಚಿತ್ತ ಸತ್ಯವೇ ಅಂತಿಮ ಸತ್ಯ’
ಇದಲ್ಲವೇ ಚಿತ್ತದ ಹೊಲಬು?
ದಾರಿಯೇ ಗುರಿಯಾದ ಸೊಬಗು.

Previous post ಪಾದಕೂ ನೆಲಕೂ…
ಪಾದಕೂ ನೆಲಕೂ…
Next post ಪ್ರಭುವಿನ ಗುರು ಅನಿಮಿಷಯೋಗಿ
ಪ್ರಭುವಿನ ಗುರು ಅನಿಮಿಷಯೋಗಿ

Related Posts

ಕಾಲ ಕಲ್ಪಿತವೇ?!
Share:
Poems

ಕಾಲ ಕಲ್ಪಿತವೇ?!

September 14, 2024 ಕೆ.ಆರ್ ಮಂಗಳಾ
ಬೊಗಸೆಯ ಬೆರಳ ಸಂದಿಯಲಿ ಸೋರಿ ಹೋಗುವ ನೀರಂತೆ… ಕಣ್ಮುಂದೆ, ಕಾಲಡಿಯೇ ಕ್ಷಣಕ್ಷಣವೂ ನೀ ಹರಿದು ಹೋಗುತಿರುವೆ ಕಾಲಬುಡದಲ್ಲೇ ಇರುವೆ ಕಣ್ಣಳತೆಯಲ್ಲೇ ಸರಿಯುತ್ತಿರುವೆ ಅದೇಕೆ...
ಸುಮ್ಮನೆ ಇರು
Share:
Poems

ಸುಮ್ಮನೆ ಇರು

December 6, 2020 ಜ್ಯೋತಿಲಿಂಗಪ್ಪ
ನಾನು ನೋಡಿದ್ದೇನು ಕೇಳಿದ್ದೇನು ಬಿಡು ನಾನಿರುವುದೇ ಹೀಗೆ ನೋಡೆ ಕೇಳೆ ಕಣ್ಣ ಕೊಳೆ ಕಿವಿಯ ಕಸ ತೊಳೆ ಇರುವೆ ಇರುವ ಹಾಗೆ ನಿನ್ನ ಬೆಳಕಲಿ ನನ್ನ ನೆಳಲ ತುಂಬದಿರು ಕೇಡು ನನದಲ್ಲ...

Comments 3

  1. Vijaya Kapparad, Dharawad
    Jun 16, 2024 Reply

    🙏 ಚಿತ್ತ ಸತ್ಯ ಕವನ ತುಂಬಾ ಚೆನ್ನಾಗಿ ಮೂಡಿಬಂದಿದೆ.

  2. ಬಸವ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ
    Jun 17, 2024 Reply

    ಪ್ರೀತಿಯ ಮಂಗಳಾ ಮೇಡಂ, ನಾನು ನಿಮ್ಮ ಆಳ ನಿರಾಳ ಶ್ರೇಷ್ಟ ಪುಸ್ತಕ ಅಧ್ಯಯನ ಮಾಡಿ ತುಂಬಾ, ತುಂಬಾ ಪ್ರಭಾವಿತನಾದೆ… !!! ಎಷ್ಟು ದೂರ, ಎತ್ತರಕ್ಕೆ ಓದುಗರ ಟ್ರೆಕ್ಕಿಂಗ್ ಮಾಡಿಸಿದ್ದೀರಿ…!!! ರಮ್ಯಾತಿ ರಮ್ಯ ತಾಣ ತೋರಿಸಿ, ಇನ್ನೂ ಮುಂದೆ ಮುಂದೆ ಸಾಗಿ ಎಂದಿದ್ದೀರಿ…
    ವಾಹ್ ಕಂಗ್ರಾಟ್ಸ್.. ಕೃತಜ್ಞತೆಗಳು ಧನ್ಯವಾದಗಳು, ನಿಮ್ಮ ಸದಲೋಚನೆಗಳಿಗೆ..

  3. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Jun 17, 2024 Reply

    ಸರಳವಾಗಿ,ಸರಳ ಗುರು ಮಾರ್ಗ ತೋರಿಸುವ ಕವನ.
    ಸರಳವಾಗಿ ಬರೆಯುವುದೇನು ಸರಳವೇ…

Leave a Reply to ಬಸವ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಧರೆಗೆ ಸೂತಕವುಂಟೆ?
ಧರೆಗೆ ಸೂತಕವುಂಟೆ?
August 11, 2025
ಹುಡುಕಾಟ
ಹುಡುಕಾಟ
July 21, 2024
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
March 9, 2023
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
October 6, 2020
ಎರವಲು ಮನೆ…
ಎರವಲು ಮನೆ…
August 10, 2023
ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ
February 5, 2020
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
February 6, 2025
Copyright © 2025 Bayalu