ಗುರು ಶಿಷ್ಯ ಸಂಬಂಧ
ಶಿವ ಪಥವನರಿವಡೆ ಗುರು ಪಥವೇ ಮೊದಲು
ನಮ್ಮ ಶರಣರ ವಚನಗಳಲ್ಲಿ ‘ಶಿವ’ ಮತ್ತು ‘ಗುರು’ವಿಗೆ ಅತ್ಯುತ್ಕೃಷ್ಟವಾದ ಗೌರವಾದರಗಳಿವೆ. ಅಷ್ಟೇಕೆ, ಶರಣರ ಅಂಕಿತನಾಮಗಳೆಲ್ಲವೂ ಅವರವರ ಗುರುವೂ ಹೌದು! ಶಿವನೂ ಹೌದು!
ಈ ಮೇಲ್ಕಂಡ ಸಾಲನ್ನು ಓದುವಾಗ ಆತುರಪಡದೆ ಸ್ವಲ್ಪ ಎಚ್ಚರಿಕೆಯಿಂದ ಗಮನಿಸಿದಾಗ, ಶಿವ ಮತ್ತು ಗುರು ವ್ಯಕ್ತಿಸೂಚಕ ಪದಗಳಲ್ಲ; ಸ್ಥಿತ ಸೂಚಕಗಳೂ ಅಲ್ಲ. ಸಕಲ ಜೀವಿಗಳಿಗೆ ಲೇಸನು ಬಯಸುವಲ್ಲಿ ಮಾನವಕೋಟಿ ಅನುಸರಿಸಬೇಕಾದ ಮಾರ್ಗವನ್ನು ಸೂಚಿಸುತ್ತಿವೆ ಎಂಬಂಶ ಮನದಟ್ಟಾಗಬೇಕು. ಹಾಗೆ ನೋಡಿದಾಗ ಶಿವ ಮತ್ತು ಗುರು ಹಾಗೂ ಶರಣರ ಅಂಕಿತಗಳೆಲ್ಲವೂ ಅವರು ನಡೆದಾಡಿ (ನಡೆಕೊಂಡು) ಜೀವಿಸಿದ ದಾರಿಯ ಸಂಜ್ಞಾ ಸೂಚಕಗಳಾಗಿವೆ.
‘ಶಿವ’ ಮತ್ತು ‘ಗುರು’ ಹಾಗೂ ಶರಣರ ಅಂಕಿತಗಳೆಲ್ಲವೂ ದನಿ ವ್ಯತ್ಯಾಸ ಮತ್ತು ಪದ ಪ್ರಯೋಗದ ದೃಷ್ಟಿಯಿಂದ ಬೇರೆ ಬೇರೆಯಂತೆ ಕಂಡರೂ ಶರಣರಲ್ಲಿ ಇವುಗಳ ಮಧ್ಯೆ ಯಾವುದೇ ಬೇಧ ಇಲ್ಲ.
ತನ್ನೊಳಗಣ ಅರಿವು ಗುರು (ಮಾರ್ಗ)ವಾಗಲು ಬಹಿರಂಗ ಲೋಕದೊಳಗೆ ಪ್ರತ್ಯಕ್ಷ ಗುರುವಿನ ಅಗತ್ಯತೆಯನ್ನು ಶರಣರು ಬಹುಮುಖ್ಯವಾಗಿ ಸ್ವೀಕರಿಸಿದ್ದಾರೆ. ಮಹಾಮನೆಯ ಪ್ರತ್ಯಕ್ಷ ಗುರುವನ್ನಾಗಿ ಅಲ್ಲಮಪ್ರಭುಗಳನ್ನು ಶರಣರು ಸ್ವೀಕರಿಸಿದ್ದಾರಲ್ಲವೇ?
ಗುರುವಿಗಿರುವ ಇತಿಹಾಸವೂ ನಮ್ಮಲ್ಲಿ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ನಮ್ಮ ಬಹುತ್ವ ಸಾಂಸ್ಕೃತಿಕ ಇತಿಹಾಸಗಳಲ್ಲಿ ಅದರಲ್ಲೂ ಶ್ರಮಪ್ರಧಾನ ಪರಂಪರೆಗಳಲ್ಲಿ ಅಸಂಖ್ಯಾತ ಗುರುಪರಂಪರೆಗಳಿರುವುದು ಕಂಡುಬರುತ್ತದೆ. ಇವೆಲ್ಲವೂ ಮೌಖಿಕ ಮೂಲದವು. ಅಕ್ಷರದಿಂದ ಹೊರದೂಡಲ್ಪಟ್ಟ ಪರಂಪರೆಗಳು ಮೌಖಿಕ ಅಭಿವ್ಯಕ್ತಿ ಮೂಲಕ ಎಲ್ಲಾ ಕಾಲಕ್ಕೂ ಹರಿವ ನದಿಯಂತೆ ನಿರಂತರವಾಗಿ ಹರಿದಾಡಿವೆ. ಎಲ್ಲಾ ಗುರು ಪರಂಪರೆಗಳು ತಾತ್ವಿಕವಾಗಿ ಒಂದೇ ಅಲ್ಲದಿದ್ದರೂ ಈ ಪರಂಪರೆಗಳಲ್ಲಿ ಕೆಲವೊಂದು ಸಾಮ್ಯತೆಗಳೂ ಇವೆ. ತಲೆತಲೆಮಾರುಗಳಿಂದ ಕಾಪಿಟ್ಟುಕೊಂಡು ಬಂದಿರುವ ‘ಜೀವನಾನುಭವ’ ಮತ್ತು ‘ಜೀವನ ಮೀಮಾಂಸೆ’ಗಳನ್ನು ಆಯಾ ಕಾಲಘಟ್ಟಕ್ಕೆ ತಕ್ಕಂತೆ ಸಮಯೋಚಿತಗೊಳಿಸಿ ವರ್ತಮಾನಕ್ಕೆ ಸರಿಹೊಂದುವಂತೆ ನಂತರದ ತಲೆಮಾರುಗಳಿಗೆ ಹಸ್ತಾಂತರಿಸುವ ಕೆಲಸವನ್ನು ಗುರುಪರಂಪರೆಗಳು ನಿರಂತರವಾಗಿ ಮಾಡುತ್ತಾ ಸಾಗಿವೆ. ಮತ್ತೊಂದು ಕಡೆ ಈ ಪರಂಪರೆಗಳು ಕುಸಿದು ಹೋಗುವಷ್ಟು ಪ್ರಬಲವಾಗಿ ವೈದಿಕ ಹಿತಕ್ಕನುಗುಣವಾದ ರಾಜಾಧಿಕಾರಗಳು ಪೂರ್ವ ಮೀಮಾಂಸೆ ಮತ್ತು ಉತ್ತರ ಮೀಮಾಂಸೆಗಳೇ ನಿಜವಾದ ಜೀವನ ಮೀಮಾಂಸೆಗಳೆಂಬಂತೆ ನಂಬಿಸುವಲ್ಲಿ ಎಲ್ಲಾ ಕಾಲದಲ್ಲೂ ನಿರತವಾಗಿವೆ.
ಈ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು 12ನೇ ಶತಮಾನದ ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ಥಿತ್ಯಂತರಗಳನ್ನು ಗ್ರಹಿಸಿದಾಗ – ಈ ಕಾಲಕ್ಕೆ ಸುಮಾರು 40ಕ್ಕಿಂತಲೂ ಹೆಚ್ಚು ಗುರು ಪರಂಪರೆಗಳಿದ್ದವೆಂದು ಚರಿತ್ರೆ ಹೇಳುತ್ತದೆ. ಇವುಗಳಲ್ಲಿ ಅಂದಿಗೆ ಅತ್ಯಂತ ಪ್ರಬಲವಾಗಿದ್ದ ಪರಂಪರೆಗಳೆಂದರೆ- ನಾಥ, ಸಿದ್ಧ, ಕಾಳಾಮುಖ, ಜೈನ, ಬೌದ್ಧತಂತ್ರ, ಶೈವತಂತ್ರ, ಲಕುಲೀಶ, ಕಾಪಾಲಿಕ, ಭೈರವ, ಗಾಣಪತ್ಯ, ಶಿವಾದ್ವೈತ, ಮಹಾದ್ವೈತ, ಪೂರ್ವ ಮೀಮಾಂಸೆ, ಉತ್ತರ ಮೀಮಾಂಸೆ, ಇತ್ಯಾದಿ. ಇವೆಲ್ಲವೂ ಹನ್ನೆರಡನೆಯ ಶತಮಾನದ ಹೊತ್ತಿಗೆ ಬಹುಶಃ ಸಂಕರಗೊಂಡ ತಾತ್ವಿಕ ಜಿಜ್ಞಾಸೆಗಳಾಗಿ ಹೋಗಿದ್ದವು. ತಾತ್ವಿಕ ಸಂಕರದ ಪ್ರಭಾವ ಕೂಡ ಅಂದಿನ ಮನುಷ್ಯನ ಚಿಂತನ ವಿಧಾನಗಳನ್ನು ತೀರ್ಮಾನಿಸುವುದರ ಜೊತೆಗೆ ಸಾಮಾಜಿಕ ಜೀವನದ ಸನ್ನಿವೇಶಗಳಲ್ಲಿ ಅನೇಕ ವೈಪರೀತ್ಯಗಳಿಗೆ ಎಡೆಮಾಡಿಕೊಟ್ಟಿತ್ತು. ಅಂತಹ ಒಂದು ಪ್ರಮುಖ ವೈಪರೀತ್ಯವೆಂದರೆ “ಅಲೌಕಿಕ ಜ್ಞಾನವೇ ಶ್ರೇಷ್ಠವಾದುದು. ಇಂತಹ ಜ್ಞಾನದಲ್ಲೇ ಬದುಕಿನ ರಹಸ್ಯ ಅಡಗಿದೆ ಎಂದು ಅದನ್ನು ಹುಡುಕಲು ಬದುಕನ್ನೇ ಮುಡುಪಾಗಿಡುವುದು ಹಾಗೂ ಸಚರಾಚರ ಜಗತ್ತಿನ ಹುಟ್ಟಿನ ಮೂಲ ತನ್ನೊಳಗಿದೆ ಎಂದು ಪರಿಭಾವಿಸುವುದು”- ಈ ವೈಪರೀತ್ಯದಿಂದ ಮುಖ್ಯವಾಗಿ ಮನುಷ್ಯನಲ್ಲಿರಬೇಕಾದ ಸಾಮಾಜಿಕ ಹೊಣೆಗಾರಿಕೆ ಮತ್ತು ನೈತಿಕ ಜೀವನದ ಮಹತ್ವದಿಂದ ಮನುಷ್ಯನು ವಿಮುಖನಾಗುವಂತೆ ಮಾಡಿತ್ತು.
ಇಂತಹ ಎಲ್ಲಾ ವೈಪರೀತ್ಯಗಳು ಮತ್ತು ಅವುಗಳಿಂದಾಗುತ್ತಿದ್ದ ಎಲ್ಲಾ ಪ್ರತಿಕೂಲ ಪರಿಣಾಮಗಳನ್ನೂ ಅಲ್ಲಮಗುರು ಮತ್ತು ಬಸವಣ್ಣನವರು ತುಂಬ ಹತ್ತಿರದಿಂದ ಕಂಡವರಾಗಿದ್ದರು. ಅಲ್ಲಮರಂತೂ ಎಲ್ಲೂ ವಿರಮಿಸದ ಅಪ್ಪಟ ಜೋಗಿ ಜಂಗಮ! ಆತ ಎಲ್ಲಾ ಅಲೌಕಿಕ ಜ್ಞಾನಗಳ ಭ್ರಮೆ ತಿಳಿದವನಾಗಿದ್ದ. ಎಲ್ಲಾ ಪಂಥಗಳ ಪಾಂಥಿಕ ಶಠತ್ವ ಹಾಗೂ ಮತಾಂಧತೆಗಳ ಅಹಮಿಕೆಯನ್ನು ಬಲ್ಲವನಾಗಿದ್ದ. ಮೇಲಾಗಿ ಆತನಿಗೆ ಪಾಂಥಿಕ ಅಹಮಿಕೆಯಿಂದ ಸಂರಚನೆಗೊಂಡ ಭ್ರಾಂತಿ ಮೂಲದ ನಿರ್ಮಾಣಗಳೆಲ್ಲದರ ಪರಿಚಯವಿತ್ತು. ಜೊತೆಗೆ ಇವು ಸಮಾಜ ಮತ್ತು ವ್ಯಕ್ತಿಯಲ್ಲುಂಟು ಮಾಡುವ ಪ್ರತಿಕೂಲ ಪರಿಣಾಮಗಳ ಪರಿಚಯವೂ ಇತ್ತು. ಆತ ಬಸವಣ್ಣನವರೊಡಗೂಡಿ – ಜೀವದ ನೆಲೆಯಿಂದ ಸಾಮಾಜಿಕ ನೆಲೆಗೆ… ಸಾಮಾಜಿಕ ನೆಲೆಯಿಂದ ಪರಿವರ್ತನೀಯವಾದ ನಿಸರ್ಗದ ಚಲನಶೀಲ ಅನಂತತೆಯೆಡೆಗೆ ಅರಿವನ್ನರಳಿಸಿ ಜಂಗಮವಾಗುವ ಮಾರ್ಗವನ್ನು ರೂಪಿಸಿದರು. ಇದುವೇ ಬಸವ ಪಥ,… ಶರಣ ಪಥ,… ಶಿವ ಪಥ,… ಗುರು ಪಥ,… ಬಯಲ ಪಥ.…
ಶರಣರ ಪರಿಭಾಷೆಯಲ್ಲಿ ಈ ಮಾರ್ಗಸೂಚಿಯನ್ನು ಗುರು, ಲಿಂಗ, ಜಂಗಮ ಎನ್ನಲಾಗಿದೆ. ಈ ಮೂರರಲ್ಲಿ ಯಾವುದು ಮಹತ್ತರವಾದುದು? ಯಾವುದು ಮೊದಲು ಎಂಬ ಪ್ರಶ್ನೆ ಬಂದಾಗ “ಮುಂದೆ ಗುರು ಹಿಂದೆ ಲಿಂಗ ಕೂಡಲಸಂಗಮದೇವಾ” ಎಂದರು.
ಗುರುವಿಗೆ ಮಹತ್ವ ಶಿಷ್ಯನ ದೆಸೆಯಿಂದಲೇ ಅಲ್ಲವೇ? ಶಿಷ್ಯನೂ ಮುಂದೆ ಭವಿಷ್ಯದಲ್ಲಿ ಗುರುವಾಗಬಲ್ಲ. ಅರಿವಿಗೆ ತೆರೆದುಕೊಳ್ಳುವ ಅವರಿಬ್ಬರ ಸಂಬಂಧದ ನಡೆ-ನುಡಿಗಳಲ್ಲೇ ಗುರುಪಥದ ಹೆಜ್ಜೆ ಗುರುತುಗಳಿವೆ.
ಜ್ಯೋತಿಯೊಳಗಣ ಕರ್ಪುರಕ್ಕೆ, ಅಪ್ಪುವಿನ ಕೈಯಲಿಪ್ಪ ಉಪ್ಪಿಂಗೆ,
ಶ್ರೀಗುರುವಿನ ಹಸ್ತದೊಳಗಿಪ್ಪ ಶಿಷ್ಯಂಗೆ_ಈ ಮೂರಕ್ಕೆಯೂ
ಬೇರೆ ಕ್ರಿಯಾವರ್ತನೆಯುಂಟೆ ಗುಹೇಶ್ವರಾ?
ಗುರು-ಶಿಷ್ಯ ಸಂಬಂಧ ಕೇವಲ ಸಮಾನ ಚಿಂತನೆಗಳ ನೆಂಟಸ್ತಿಕೆ ಅಲ್ಲ. ಅದೊಂದು ಕ್ರಿಯಾವರ್ತನೆಗೆ ಒಳಗಾಗಿಸಿಕೊಳ್ಳುವ ಪ್ರಕ್ರಿಯೆ ಎಂದು ಅಲ್ಲಮರು ಹೇಳುತ್ತಾರೆ. ಶ್ರೀಗುರುವಿನ ಸಂಬಂಧದಲ್ಲಿರುವ ಶಿಷ್ಯ ಜ್ಯೋತಿಯೊಳಗಣ ಕರ್ಪುರದಂತೆ! ಜ್ಯೋತಿಯೊಳಗಿನ ಕರ್ಪುರದ ಘನೀಕೃತ ಪೂರ್ವಾವಸ್ಥೆ ಉರಿದುರಿದು ಇಲ್ಲವಾಗಿ ಮತ್ತದು ಬೆಳಕಾಗಿ ಕ್ರಿಯಾವರ್ತನೆಯಲ್ಲಿದೆ. ಹಾಗಾಗಿ ಶಿಷ್ಯನು ಗುರುವನ್ನು ಕೂಡುವುದಕ್ಕಿಂತ ಪೂರ್ವದಲ್ಲಿ ಆಶ್ರಯಿಸಿಕೊಂಡು ಬದುಕುತ್ತಿದ್ದ ಪೂರ್ವಾಶ್ರಿತ ಸಂಚಯ ಉರಿದುರಿದು ಬೂದಿಯಾಗಿ ಅವನು ನಿಸರ್ಗ ಧರ್ಮದ ವಸ್ತುಸ್ಥಿತಿಗೆ ಕಣ್ತೆರೆಯಬೇಕು. ಬಹು ಪ್ರಮುಖವಾಗಿ ಗುರುಪಥದ ಮೊದಲನೆ ನಡಿಗೆ ಪ್ರಾರಂಭವೇ ಇಲ್ಲಿ. ಆದ್ದರಿಂದಲೇ ಬಸವಣ್ಣನವರು “ವೇದಾದಿ ನಾಮ ನಿರ್ನಾಮ ಮಹತ್ವಂ ಮಮರೂಪಕಮ್ ಗುರೂಕ್ತಮಂತ್ರಮಾರ್ಗೇಣ…” ಎನ್ನುತ್ತಾರೆ. ಅಂದರೆ ವೇದ- ವೇದಾಂತಗಳಿಂದ ಸೃಷ್ಟಿಸಲ್ಪಟ್ಟ ಅಸಂಖ್ಯಾತ ನಾಮರೂಪಗಳನ್ನು ನಿರ್ನಾಮಗೊಳಿಸುವ ಮಹತ್ವ ಯಾವುದಿದೆಯೋ ಅದೇ ಗುರುಮಾರ್ಗದ ಮಂತ್ರ ಎನ್ನುತ್ತಾರೆ.
ವೇದಾದಿ ನಾಮರೂಪ ಹಾಗೆಂದರೇನು? ಗುರುವಿನ ಕೈಯಲ್ಲಿರುವ ಶಿಷ್ಯನಲ್ಲಿ ತುಂಬಿಕೊಂಡಿರುವ ಈ ನಾಮರೂಪಗಳನ್ನು ಏಕೆ ಇಲ್ಲವಾಗಿಸಬೇಕು? ಎಂಬ ಪ್ರಶ್ನೆ ಕೂಡ ಇಲ್ಲಿ ಮುಖ್ಯವಾಗುತ್ತದೆ. ‘ನಾಮ’ ಎಂದರೆ ಮಾನಸಿಕ ಜಗತ್ತು. ಮನಸ್ಸಿನಲ್ಲಿ ಕಲ್ಪಿತಗೊಂಡ ಸೃಷ್ಟಿಸಲ್ಪಟ್ಟ ನಿರ್ಮಾಣಗಳು. ಈ ನಿರ್ಮಾಣಗಳಿಗೆ ಪದಾರ್ಥ ಜಗತ್ತಿನೊಂದಿಗೆ ಯಾವುದೇ ಸಂಬಂಧ ಕಲ್ಪಿಸಲಾಗದು. ಅದಕ್ಕಾಗಿಯೇ ಶರಣರು ಇವುಗಳನ್ನು ಕಲ್ಪಿತ, ಭ್ರಮೆ, ಭ್ರಾಂತಿ, ಆಸೆ, ಇತ್ಯಾದಿಯಾಗಿ ವಿವರಿಸಿಕೊಟ್ಟಿದ್ದಾರೆ. ‘ರೂಪ’ ಎಂಬುದು ಭೌತಿಕ ದ್ರವ್ಯ. ಇವುಗಳಿಗೆ ತೂಕ, ಗಾತ್ರ, ಬಣ್ಣ ಇತ್ಯಾದಿ ಗುಣಸ್ವಭಾವಗಳೆಂಬ ಪ್ರಮಾಣಗಳುಂಟು.
ನಮ್ಮ ಸುತ್ತಲೂ ಇರುವ ಭೌತಿಕ/ ನೈಸರ್ಗಿಕ ಜಗತ್ತನ್ನು ಪರಿಗ್ರಹಿಸುವಾಗ ಮನಸ್ಸು ಈ ಹಿಂದೆ ಸಂಚಯಗೊಂಡ ಕಲ್ಪನೆಗಳ ದೃಷ್ಟಿಯಿಂದಲೇ ನೈಸರ್ಗಿಕ ಜಗತ್ತನ್ನು ಪರಿಗ್ರಹಿಸುವ ಚಾಳಿಗೆ ಬಿದ್ದಿರುತ್ತದೆ.
ಮನೋಕಲ್ಪಿತ ದೃಷ್ಟಿಗಳು ಪರಂಪರೆಯಿಂದ ಪರಂಪರೆಗೆ ನೆನಪುಗಳ ಮೂಲಕ ಪಸರಿಸಿದ್ದು ಸುತ್ತಲಿರುವ ಸಾಮಾಜಿಕ ಮನಸ್ಸಿನಲ್ಲಿ ಸಂರಕ್ಷಿಸಲ್ಪಟ್ಟಿರುತ್ತವೆ. ಇವು ಒಪ್ಪಿಸಲ್ಪಟ್ಟ ಸತ್ಯಗಳು. ಇವುಗಳನ್ನು ಪ್ರಶ್ನಿಸದೇ, ತರ್ಕಿಸದೇ ಮನಸ್ಸು ಅವುಗಳಿಗೆ ಬದ್ಧವಾಗಿರುತ್ತದೆ. ನಮ್ಮೊಳಗೆ ನಮಗೆ ತಿಳಿಯದಂತೆ ನಾವೇ ಅದರ ಪರಿಚಾರಕ ಪೋಷಕರಾಗಿರುವ ಆ ಮಾನಸಿಕ ಪ್ರಪಂಚದಲ್ಲಿ ಭಾವಗಳ ಕೆರಳುವಿಕೆಗಳಿವೆ, ಅನುಚಿತ ನಂಬಿಕೆಗಳಿವೆ, ಕ್ರೌರ್ಯಗಳಿವೆ, ಒಳಸಂಚುಗಳಿವೆ, ಸ್ವಭಾವಜನ್ಯ ಸಿದ್ಧಾಂತಗಳಿವೆ, ಹಿತಾಸಕ್ತಿಗಳಿವೆ, ಪಕ್ಷಪಾತಗಳಿವೆ, ಜಾತಿಗಳಿವೆ, ಅಸಹನೆಗಳಿವೆ, ಆಮೋದ -ಪ್ರಮೋದಗಳಿವೆ, ಸೋಲು-ಗೆಲುವುಗಳ ಪಂದ್ಯಾವಳಿಗಳಿವೆ. ಎಂದಿಗೂ ತೃಪ್ತಿಯಾಗದ ಅತೃಪ್ತಿಗಳಿವೆ. ಇವೆಲ್ಲವುಗಳ ಕಾರಣವೂ ಅದೇ, ಕಾರ್ಯವೂ ಅದೇ ಆಗಿದೆ. ಬಹುಶಃ ಈ ಭ್ರಾಂತಿಯೇ ಮತೀಯತೆ! ಮನಸ್ಸಿನಿಂದ ಹುಟ್ಟಿದ್ದು ಮತೀಯತೆ!
ಶರಣರು ಈ ಎಲ್ಲಾ ಭ್ರಮೆಗಳ ಮೂಲವನ್ನು ‘ಅಹಂ’ ಎಂದು ಗುರುತಿಸುತ್ತಾರೆ. ಅಹಂ ಎಂಬುದು ತನ್ನ ಸುತ್ತಲೂ ಇರುವ ಜಗತ್ತು ಸರ್ವವೂ ತನ್ನ ಹಿತಾಸಕ್ತಿಗಳಿಗೆ ಅನುಗುಣವಾಗಿರಬೇಕೆಂದು ಒತ್ತಾಯಿಸುತ್ತದೆ. ಹೀಗೆ ನಡೆಯದಿದ್ದಾಗ ತನ್ನನ್ನು ತಾನು ಎದಿರಿನೊಂದಿಗೆ ಪ್ರತ್ಯೇಕಿಸಿಕೊಂಡು ಬಿಡುತ್ತದೆ. ಈ ಅನಂತ ವಿಶ್ವದ ನಿರಂತರತೆ ಯಾರನ್ನೂ ಯಾರಿಂದಲಾಗಲಿ, ಯಾವುದನ್ನೂ ಯಾವುದರಿಂದಲಾಗಲಿ ಪ್ರತ್ಯೇಕಿಸಿಕೊಳ್ಳಲಾಗದಷ್ಟು ಅನನ್ಯ ಸಂಬಂಧದಲ್ಲಿದೆ. ಈ ವಿಶ್ವತತ್ವಕ್ಕೆ ವಿಮುಖವಾದ ಮನಸ್ತತ್ವವೇ ವ್ಯಕ್ತಿಯ ದುಃಖ ಹಾಗೂ ಎಲ್ಲಾ ಸಾಮಾಜಿಕ ಅಸಮಾನ ಸ್ಥಿತ್ಯಂತರಗಳ ಉತ್ಪಾದನಾ ಶಕ್ತಿಯಾಗಿದೆ.
ಮತೀಯತೆಯನ್ನು ಶರಣರು ನಾಮ, ಕಂಗಳ ಸೂತಕ, ಮನದ ಸೂತಕ, ಭವ, ಸಂಸಾರ, ಮನೋವಿಕಾರ, ದಂದುಗ, ಕಲ್ಪಿತ, ಮಾಯೆ ಎಂದು ಹಲವಾರು ಬಗೆಯಾಗಿ ಈಡಾಡುತ್ತಾರೆ. ಅಕ್ಕ ಈ ಮತೀಯತೆಯ ಮೂಲ ‘ಅಹಂಕಾರ’ ಎನ್ನುತ್ತಾಳೆ. ಅಹಂ ಉತ್ಪಾದಿಸುವ ಭ್ರಮೆಗಳನ್ನು ನಿರ್ವಚಿಸುತ್ತಾ-
ಅಯ್ಯಾ, ಸರ್ವಮೂಲಹಂಕಾರವಿಡಿದು
ಕುಲಭ್ರಮೆ ಛಲಭ್ರಮೆ ಜಾತಿಭ್ರಮೆ,
ನಾನಾ ವರ್ಣ ಆಶ್ರಮ ಮತ ಶಾಸ್ತ್ರಭ್ರಮೆ,
ತರ್ಕಭ್ರಮೆ ರಾಜ್ಯಭ್ರಮೆ, ಧನ ಧಾನ್ಯ ಪುತ್ರ ಮಿತ್ರಭ್ರಮೆ,
ಐಶ್ವರ್ಯ ತ್ಯಾಗ ಭೋಗ ಯೋಗಭ್ರಮೆ,
ಕಾಯ ಕರಣ ವಿಷಯಭ್ರಮೆ,
ವಾಯು ಮನ ಭಾವ ಜೀವ ಮೋಹಭ್ರಮೆ,
ನಾಹಂ ಕೋಹಂ ಸೋಹಂ ಮಾಯಾಭ್ರಮೆ ಮೊದಲಾದ
ಬತ್ತೀಸ ಪಾಶಭ್ರಮಿತರಾಗಿ ತೊಳಲುವ ವೇಷಧಾರಿಗಳ ಕಂಡು
ಶಿವಶಕ್ತಿ ಶಿವಭಕ್ತ ಶಿವಪ್ರಸಾದಿ ಶಿವಶರಣ ಶಿವೈಕ್ಯ
ಶಿವಜಂಗಮವೆಂದು ನುಡಿಯಲಾರದೆ ಎನ್ನ ಮನ ನಾಚಿ
ನಿಮ್ಮಡಿಗಭಿಮುಖವಾಯಿತ್ತಯ್ಯಾ ಚೆನ್ನಮಲ್ಲಿಕಾರ್ಜುನಾ.
ಅಲ್ಲಮರಂತೂ ಈ ಭ್ರಮಾಲೋಕಗಳನ್ನು, “ಊರದ ಚೇಳಿನ ಏರದ ಬೇನೆಯಲ್ಲಿ ಮೂರು ಲೋಕವೆಲ್ಲಾ ನರಳಿತ್ತು” ಎನ್ನುತ್ತಾರೆ. ಚೇಳು ಕಚ್ಚಲೇ ಇಲ್ಲ, ವಿಷ ಏರಲೂ ಇಲ್ಲ. ಆದರೆ ಮೂರು ಲೋಕವೆಲ್ಲಾ ಆ ನೋವಿನಲ್ಲಿ ನರಳುತ್ತಿದೆ!
ಈ ಕಾರಣದಿಂದ ಗುರುಪಥದಲ್ಲಿ ಇರುವವರೆಲ್ಲಾ ಗುರುವನ್ನು ‘ಭವರೋಗ ವೈದ್ಯ’ ಎಂದು ಕೊಂಡಾಡುತ್ತಾರೆ. ಗುರು ಮಹಾರಾಜ ಇಲ್ಲದ ರೋಗಗಳನ್ನು ತನ್ನ ಶಿಷ್ಯನಲ್ಲಿ ಮನಗಾಣಿಸಲೂ ಬಲ್ಲ, ಮತ್ತವುಗಳಿಂದ ಅವನನ್ನು ಪಾರು ಮಾಡಲೂ ಬಲ್ಲ. ಅಂತಹ ಕ್ರಿಯಾವರ್ತನೆ ಗುರುವಿನ ಕೈಯಲ್ಲಿದೆ. ಭವಿಯನ್ನು ಭಕ್ತನನ್ನಾಗಿಸುವ ಪ್ರಕ್ರಿಯೆ ಭಕ್ತಿ ಎನಿಸಿಕೊಂಡಿದೆ. ಗುರುಮಾರ್ಗದಲ್ಲಿ ಭಕ್ತಿ ಮೂಢಾಚಾರವಲ್ಲ; ಮತಾಚಾರವಲ್ಲ; ವೈದಿಕಾಚರಣೆಯೂ ಅಲ್ಲ. ಭ್ರಮಾಲೋಕದಿಂದ ಲೋಕಪರವಾದ ವಸ್ತುಸ್ಥಿತಿಗೆ ಭಕ್ತನನ್ನು ಕಣ್ತೆರೆಯಿಸಿ ನೈಸರ್ಗಿಕ ಬದುಕಿನಲ್ಲಿ ತನಗೆಷ್ಟು ಲಭ್ಯವಿದೆಯೋ ಅದರಲ್ಲಿ ನಿರಾತಂಕವಾಗಿ ಮುಕ್ತ ಚಿಂತನೆಗಳಿಂದ ಜೀವಿಸಲು ಸಜ್ಜುಗೊಳಿಸಲ್ಪಟ್ಟವನು ಭಕ್ತ. ಭಕ್ತಿ ಅದೆಷ್ಟು ಶಕ್ತಿಯುತವಾದುದೆಂದರೆ- ಮಹಾಮನೆಯ ಶರಣರ ಸಂಗದಲ್ಲಿ ಭಕ್ತ ತಾನು ನುಡಿದಂತೆ ನಡೆದು, ನಡೆದಂತೆ ನುಡಿಯಬೇಕು. ಅವನ ಮಾತಿನಲ್ಲಿ ಭ್ರಮಾಶೂನ್ಯ ಮೈದಾಳಿರಬೇಕು. ನಡೆಯಲ್ಲಿ ಪಾರದರ್ಶಕತೆಯ ಶೌರ್ಯ ಮೆರೆಯಬೇಕು. ಕಾಯಕದ ಧ್ಯಾನದಲ್ಲಿ ತನ್ಮಯನಾಗಿರಬೇಕು. ತಾನು – ಇದಿರು ಎಂಬುದಳಿದು ನಾವೆಂಬ ಅದ್ವಯದ ಅರಿವಾಗಿರಬೇಕು. ದಾಸೋಹಿಯಾಗಿ ಎಲ್ಲರೊಡಗೂಡಿ ಹಂಚಿಕೊಂಡು ಜೀವಿಸಬೇಕು.
ಭಕ್ತಿಯೆಂಬುದ ಮಾಡಬಾರದು,
ಕರಗಸದಂತೆ ಹೋಗುತ್ತ ಕೊರೆದು, ಬರುತ್ತ ಕೊಯ್ವುದು.
ಘಟಸರ್ಪನಲ್ಲಿ ಕೈದುಡುಕಿದಡೆ ಹಿಡಿವುದ ಮಾಬುದೆ
ಕೂಡಲಸಂಗಮದೇವಾ.
ಗುರು ಮತ್ತು ಶಿಷ್ಯನ ಸಂಬಂಧದಲ್ಲಿ ಭಕ್ತಿಯು ಹೇಗೆ ಪರಿಣಮಿಸುತ್ತದೆ ಎಂಬುದನ್ನು ಈ ವಚನದಿಂದ ತಿಳಿಯಬಹುದು. ಗರಗಸ ಹೋಗುತ್ತಾ ಮತ್ತು ಬರುತ್ತಾ ಕೊಯ್ಯುವ ಹಾಗೆ, ಹೋಗುತ್ತಾ ಗುರುವಿನ ಎದಿರಿನಲ್ಲಿರುವ ಶಿಷ್ಯನ ಭ್ರಮೆ ಮತ್ತು ಅಹಮಿಕೆಯನ್ನೂ ಕೊರೆಯಬಲ್ಲದು; ಬರುತ್ತಾ ಗುರುವಿನಲ್ಲೂ ಉಳಿದಿರುವ ಭ್ರಮೆ ಮತ್ತು ಅಹಂಕಾರವನ್ನೂ ಕೊರೆಯಬಲ್ಲುದು. ಘಟಸರ್ಪದ ಬಾಯಲ್ಲಿ ಕೈಯಿಟ್ಟರೆ ಅದರ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಹಾಗೆಯೇ ಭಕ್ತಿಯ ಆವರಣಕ್ಕೆ ಸಿಕ್ಕವರಲ್ಲಿ ಅಹಂಕಾರ ಅಳಿಯಲೇ ಬೇಕು. ಹಾಗಾಗಿ ಭಕ್ತಿಯೆಂಬುದು ಒಳಗಣ ಸೂತಕವನ್ನು ತೊಳೆಯಲು ಅರಿಯುವ ವಿವೇಕ. ಹೀಗೆ ತೊಳೆಯುವುದರಿಂದ ಗುರು ಉಪದೇಶದಲ್ಲಿ ಪಾದೋದಕ, ಪ್ರಸಾದವೆಂಬ ಫಲಪ್ರಾಪ್ತಿಯೂ ಉಂಟು.
ಜಾತಿಸೂತಕ ಬಿಡದು, ಜನನಸೂತಕ ಬಿಡದು,
ಪ್ರೇತಸೂತಕ ಬಿಡದು, ರಜಸ್ಸೂತಕ ಬಿಡದು, ಎಂಜಲುಸೂತಕ ಬಿಡದು,
ಭ್ರಾಂತುಸೂತಕ ಬಿಡದು, ವರ್ಣಸೂತಕ ಬಿಡದು,
ಇವರೆಂತು ಭಕ್ತರಹರು?
ಹೂಸಿ ಹುಂಡನ ಮಾಡಿದಲ್ಲಿ, ಬಾಯಿಗೆ ಬೆಲ್ಲವ ತೊಡೆದಲ್ಲಿ
ಸದ್ಗುರು ಲಿಂಗವು ಮೂಗ ಕೊಯ್ಯದೆ ಮಾಬನೆ?
ಕಾಡು ಕಿಚ್ಚಿನ ಕೈಯಲ್ಲಿ ಕರಡದ ಹುಲ್ಲ ಕೊಯ್ಸಿದಂತಿರಬೇಕು ಭಕ್ತಿ.
ಹಿಂದೆ ಮೆದೆಯಿಲ್ಲ, ಮುಂದೆ ಹುಲ್ಲಿಲ್ಲ.
ಇದು ಕಾರಣ ಕೂಡಲಚೆನ್ನಸಂಗನ ಭಕ್ತಿಸ್ಥಲ
ನಿಮ್ಮ ಶರಣಂಗಲ್ಲದೆ ಅಳವಡದು.
ಅಲ್ಲಮರಂತೂ ಭಕ್ತಿಯೆಂಬುದು ಒಂದು ಕ್ರಯವಿಕ್ರಯದಂತೆ ಅನ್ನುತ್ತಾರೆ. ಭಕ್ತಿ ಶಿಷ್ಯನಲ್ಲಿ ಕ್ರಿಯಾವರ್ತನೆಯಾಗದಿದ್ದಲ್ಲಿ ಯಾರಿಗೂ ಗುಹೇಶ್ವರನೇ ಬೇಡ ಎಂದು ಶಾಪ ಹಾಕುತ್ತಾರೆ-
ಕ್ರಯವಿಕ್ರಯವ ಮಾಡಿ ಮನೆಯ ಸಂಚ ನಡೆಯದನ್ನಕ್ಕ
ಆ ಕ್ರಯವಿಕ್ರಯದ ಘೋರವೇತಕ್ಕಯ್ಯಾ?
ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿರ್ದಡೆ
ಆ ಓಲಗದ ಘೋರವೇತಕ್ಕಯ್ಯಾ?
ಭಕ್ತನಾಗಿ ಭವಂ ನಾಸ್ತಿಯಾಗದಿರ್ದಡೆ;
ಆ ಉಪದೇಶವ ಕೊಟ್ಟ ಗುರು,
ಕೊಂಡ ಶಿಷ್ಯ- ಇವರಿಬ್ಬರ ಮನೆಯಲ್ಲಿ ಮಾರಿ ಹೊಗಲಿ,
ಗುಹೇಶ್ವರನೆಂಬವನತ್ತಲೆ ಹೋಗಲಿ.
ಭಕ್ತಿಯೊಲಿದು ಬಸವಣ್ಣ ನಿಜಭಕುತರಾದಾಗಲಂತೂ ಹಿರಿಹಿರಿ ಹಿಗ್ಗಿ-
ಭಕ್ತಿರತಿಯೆಂಬ ಮದುವೆಗೆ
ಕಣಗಿಲೆಲೆಯ ಉಂಗುರವನಿಕ್ಕಿ,
ಮೊಲ್ಲೆಮಲ್ಲಿಗೆಯ ತೆರೆಯ ಕಟ್ಟಿ,
ಸೇವಂತಿಗೆಯ ಚಪ್ಪರವನಿಕ್ಕಿ,
ಪುಷ್ಪಜಾತಿಗಳೆಲ್ಲಾ ನಿಬ್ಬಣವ ಬನ್ನಿರೇ.
ನಮಗೆಯು ನಮ್ಮ ಕೂಡಲಸಂಗಮದೇವಂಗೆಯು ಮದುವೆ.
ಶರಣ ನಿಜಭಕ್ತನಾದ ನಂತರ ಗುರುಪಥ ಅಲ್ಲಿಗೆ ಮುಗಿಯಲಿಲ್ಲ. ಗುರುವನ್ನರಸಿ ತಾನು ಪಟ್ಟ ಶ್ರಮದ ಪರಿಣಾಮವು ಆತನನ್ನು ಪ್ರಾಣಲಿಂಗಿ ಸಂಬಂಧಿಯನ್ನಾಗಿಸಿತು. ಅದನ್ನೇ ಬಹಳ ಯುಕ್ತಿಯಿಂದ ‘ನಮಗೆಯು ನಮ್ಮ ಕೂಡಲಸಂಗಮದೇವಂಗೆಯು ಮದುವೆ’ ಎಂದು ಸಾರಿದರು.
ಪ್ರಾಣಲಿಂಗಿ ಸಂಬಂಧಿಯಾಗುವುದು ಅಥವಾ ಲಿಂಗವಂತ-ನಾಗುವುದೆಂದರೆ ಕೈಯಲ್ಲಿರುವ ಲಿಂಗಕ್ಕೆ ಅರ್ಚನೆ, ಪೂಜೆಗಳನ್ನು ಸಲ್ಲಿಸಿದ ಮಾತ್ರಕ್ಕೆ ಲಿಂಗಾನುಭವಿ ಎಂದು ಹೇಳುವುದನ್ನು ಅಲ್ಲಮರು ಒಪ್ಪುವುದಿಲ್ಲ. ಬದಲಾಗಿ ಅಂತಹ ಹೊರಗಣ ಅರ್ಚನೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿ ಅವು ನಿಷ್ಪ್ರಯೋಜಕ ಎನ್ನುತ್ತಾರೆ.
ಅಗ್ಘವಣಿ ಪತ್ರೆ ಪುಷ್ಪ ಧೂಪ ದೀಪ ನಿವಾಳಿಯಲ್ಲಿ
ಪೂಜಿಸಿ ಪೂಜಿಸಿ ಬಳಲುತ್ತೈದಾರೆ.
ಏನೆಂದರಿಯರು ಎಂತೆಂದರಿಯರು.
ಜನ ಮರುಳೊ ಜಾತ್ರೆ ಮರುಳೊ ಎಂಬಂತೆ;
ಎಲ್ಲರೂ ಪೂಜಿಸಿ, ಏನನೂ ಕಾಣದೆ,
ಲಯವಾಗಿ ಹೋದರು ಗುಹೇಶ್ವರಾ.
ಹಾಗಾದರೆ ಪ್ರಾಣಲಿಂಗವೆಂದರೆ ಅದೇನು? ಲಿಂಗಾನುಭವ ಯಾವುದು? ಅದು ಬೇಕೆಂದು ಆಸೆಪಟ್ಟು ಕಲ್ಪಿಸಿಕೊಂಡದ್ದಲ್ಲ; ಭಾವಿಸಿ, ಭಾವಿಸಿ ರೂಪಿಸಿಕೊಂಡದ್ದಲ್ಲ; ತಾನೇ ರೂಪಿಸಿಕೊಂಡು, ಊಹಿಸಿಕೊಂಡು ಅದನ್ನು ನಾನಿಂದು ಬೇಧಿಸಿಯೇ ಬಿಟ್ಟೆ ಎಂಬಂತಹ ಅಸಂಗತ ಸಂಗಮವೂ ಅಲ್ಲ. ಅದು ಕಲ್ಪಿಸದೆ ನಿಂದ ನಿಲುವು-
ಕಾಮಿಸಿ ಕಲ್ಪಿಸಲಿಲ್ಲ, ಕಲ್ಪಿಸಿ ಭಾವಿಸಲಿಲ್ಲ,
ಭಾವಿಸಿ ರೂಪಿಸಲಿಲ್ಲ, ರೂಪಿಸಿ ಭೇದಿಸಲಿಲ್ಲ.
ಇದು ಕಾರಣ, ಕೂಡಲಚೆನ್ನಸಂಗಮದೇವಾ,
ಸರ್ವಾಂಗಲಿಂಗವಾದಲ್ಲಿ ಅನರ್ಪಿತವಿಲ್ಲ.
ವಚನಗಳು ಲಿಂಗದ ಬಗ್ಗೆ ಮಾತನಾಡುವಾಗಲೆಲ್ಲಾ ‘ಕಲ್ಪಿಸದೆ ನಿಂದ ನಿಲುವು’ ಎಂಬುದನ್ನು ಪದೇ ಪದೇ ನೆನಪಿಸುತ್ತವೆ. ಲಿಂಗ ಪ್ರತ್ಯಕ್ಷಾನುಭವ, ಅದು ಪರೋಕ್ಷ ಅನುಭೂತಿಯಲ್ಲ. “ಲಿಂಗವನೂ ಪ್ರಾಣವನೂ ಒಂದು ಮಾಡಿ ತೋರಿದ ಗುರುವಿದ್ದಾನಲ್ಲ ಗುರುವಿದ್ದಾನಲ್ಲ” ಎಂದು ಹೇಳುವಾಗ ಚೆನ್ನಬಸವಣ್ಣ ಪ್ರತ್ಯಕ್ಷಾನುಭವದ ದೃಷ್ಟಾಂತವನ್ನು ಕೊಡುತ್ತಾನೆ.
ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದಿಹೆನೆಂದಡೆ,
ಸಿಕ್ಕದೆಂಬ ಬಳಲಿಕೆಯ ನೋಡಾ.
ಕಂಡುದನೆ ಕಂಡು ಗುರುಪಾದವಿಡಿದಲ್ಲಿ,
ಕಾಣಬಾರದುದ ಕಾಣಬಹುದು ಗುಹೇಶ್ವರಾ.
ಶರಣರಲ್ಲಿ ಲೋಕದ ಪ್ರತ್ಯಕ್ಷ ಸತ್ಯವೇ ಪಾರಲೌಕಿಕ ಸತ್ಯವೇ ಹೊರತು ಬೇರೊಂದು ಪಾರಲೌಕಿಕತೆಗೆ ಅವರಲ್ಲಿ ಅವಕಾಶವಿಲ್ಲ. ಇದು ಕನ್ನಡದ ಮಣ್ಣು ಮತ್ತು ಭಾಷೆ, ಜನಕ್ಕೆ ಒದಗಿದ ದೊಡ್ಡ ಹೆಗ್ಗಳಿಕೆಯೆನ್ನಲೇ ಬೇಕು.
ಲಿಂಗಾನುಭವವನ್ನು ನಿಸರ್ಗ ಸತ್ಯದ ವಾಸ್ತವತೆಯೊಂದಿಗೆ ಅನುಸಂಧಾನ ಮಾಡುವ ಗುರುಪಥ ನಿಜಕ್ಕೂ ರೋಮಾಂಚನಕಾರಿ. ಆದ್ದರಿಂದ ‘ಕಲ್ಪಿಸದೇ ನಿಂದ ನಿಲುವು’ ಗುರು-ಶಿಷ್ಯರಲ್ಲಿನ ಪರಿಶುದ್ಧ ಜೀವನದ ಒಳನೋಟದಿಂದ ಅಂತಃಸ್ಪೃಹೆಯಾದ ಮಹಾಜ್ಞಾನವೆಂತಲೇ ಹೇಳಬಹುದು.
ಮಾನಸಿಕ ವಿದ್ಯಮಾನಗಳು ಏನೇ ಇರಲಿ, ಅವುಗಳನ್ನು ಬದಿಗಿರಿಸಿ ಈ ಅಖಂಡ ವಿಶ್ವವನ್ನು ಪ್ರಾಣಸಂಚಯದಿಂದ ಗಮನಿಸಿದಾಗ ಪ್ರಾಣವು ಎಲ್ಲ ಜೀವಿಗಳ ವರ್ತಮಾನ ಸತ್ಯ! ಪ್ರಾಣವು ಕಾಲ್ಪನಿಕವಲ್ಲ. ಬದಲಾಗಿ ನಿರಂತರ ಪರಿವರ್ತನೆಯಿಂದ ಸಾಧ್ಯವಾಗಿರುವ ಅತ್ಯಪರೂಪದ ವಿಸ್ಮಯ! ಪ್ರಾಣವು ಒಂದು ದ್ರವ್ಯ (matter) ಎಂಬುದನ್ನು ನಾವು ನೆನಪಿಟ್ಟುಕೊಂಡು ನೋಡಿದರೆ ಪ್ರಾಣ ಕಣ್ಣಿಗೆ ಕಾಣದು. ಆದರೆ ಶಕ್ತಿ ಸಂಚಯ ಮತ್ತು ಶಾಖದಿಂದ ಅದರ ಜೀವಂತಿಕೆ ಗಮನಿಸಬಹುದು. ಹಾಗಂತ ಪ್ರಾಣವೂ ಸರ್ವತಂತ್ರ ಸ್ವತಂತ್ರವಾದದ್ದೂ ಅಲ್ಲ, ಪ್ರತ್ಯೇಕ ಅಸ್ತಿತ್ವವೂ ಅದಕ್ಕಿಲ್ಲ, ಸ್ಥಿರವೂ ಅಲ್ಲ. ಅದು ತನ್ನ ಅಸ್ತಿತ್ವಕ್ಕಾಗಿ ಪ್ರಕೃತಿಯ ಅನೇಕ ಸಾಧ್ಯತೆಗಳಿಗನುಗುಣವಾದ ಪೂರಕ ಘಟಕಾಂಶಗಳನ್ನು ಅವಲಂಬಿಸಿದೆ. ನೀರು, ಗಾಳಿ, ಆಹಾರ! ಆಹಾರದ ವಸ್ತುಸ್ಥಿತಿ ಹೇಗಿದೆಯೆಂದರೆ ಆಹಾರವಾಗುವ ಪ್ರತಿ ಕಣಕಣವೂ ಪ್ರಾಣಚೈತನ್ಯದಿಂದ ತುಂಬಿ ಹೋಗಿದೆ. ಒಂದರ ಜೈವಿಕ ಸಾಧ್ಯತೆ ಮತ್ತೊಂದರ ಜೈವಿಕದ ಇರುವಿಕೆಯನ್ನು ಅವಲಂಬಿಸಿದೆ. ಈ ನಿಲುಗಡೆಯಿಲ್ಲದಾ ಸಮರ್ಪಣ ಪ್ರಕ್ರಿಯೆಯಲ್ಲಿ ಪ್ರಾಣವು ಕ್ಷಣಕ್ಷಣ ನಿತ್ಯನೂತನತೆಯಲ್ಲಿ ಬೆಳಗುವ ಜ್ಯೋತಿರ್ಲಿಂಗ! ಅದು ಮತ್ತೊಂದಕ್ಕೆ ಕೊಡುತ್ತದೆ ಹಾಗೂ ಮತ್ತೊಂದರಿಂದ ಬೇಕಾದ್ದನ್ನು ಪಡೆಯುವ ಸಂಬಂಧದಲ್ಲಿದೆ. ಕೊಡು – ಕೊಳುವ ಆ ಪ್ರಕ್ರಿಯಾ ಸಂಬಂಧದಲ್ಲಿ ದಯೆ ಮತ್ತು ಒಳಗೊಂಡು ಬಾಳುವ ಅಂತಃಸತ್ವವಿದೆ. ಪ್ರಾಣವು ಒಂದು ದಿನ ಸಾಯಲೇ ಬೇಕು. ಆದರೆ ಅದು ಸಂಪೂರ್ಣ ನಾಶವಲ್ಲ. ಜೀವ ಸಾಯುವುದರ ಮೂಲಕ ಮತ್ತೊಂದು ಜೀವ ಸಂಚಯಕ್ಕೆ ಪ್ರಾಣಾಧಾರವಾಗಲೇ ಬೇಕು.
ಜೀವಿಯೊಂದು ಸತ್ತ ನಂತರ ಅದರ ದೇಹದಲ್ಲಿ ಉಳಿದಿರುವ ದ್ರವ್ಯಗಳು ಸಸ್ಯಗಳಿಗೋ ಜೀವಿಗಳಿಗೂ ಪ್ರಾಣಾಧಾರವಾಗಲೇ ಬೇಕಲ್ಲವೇ? ಈ ಜಗತ್ತಿನಲ್ಲಿ ಯಾವುದಾದರೂ ಕರುಣೆಗೆ ಅರ್ಹವಾದುದು ಇದೆಯೆಂದರೆ, ಅದು ಜೀವ! ಏಕೆಂದರೆ ಅದಕ್ಕೊಂದು ಸ್ಥಿರ ಸ್ಥಿತಿಯಾಗಲಿ, ಗತಿಯಾಗಲೀ ಸಾಧ್ಯವಿಲ್ಲ. ಹುಟ್ಟು – ಸಾವು ಎಂಬ ಎರಡು ತುದಿಗಳು ‘ನಾನು’ ಎಂಬ ಇಲ್ಲದ ಕೇಂದ್ರದಿಂದ ಪರಿಭಾವಿಸಿದ್ದರಿಂದಾದ ನಿರ್ಮಿತ ಭ್ರಮೆ. ಪ್ರಾಣ ಚೇತನ ಅಖಂಡವಾಗಿ ಆದಿ ಮಧ್ಯಂತರಹಿತವಾಗಿ ಸದಾ ಪರಿಣಾಮದಲ್ಲಿ ರೂಪಾಂತರಗೊಳ್ಳುತ್ತಲೇ ಇರುವ ಕ್ರಿಯೆಗೆ ಅಧೀನವಾದದ್ದು. ಈ ನಿರಂತರತೆಯಲ್ಲಿ ಎಲ್ಲಾ ಪೂರ್ವಾಶ್ರಯಗಳಿಂದಲೂ ಅದು ಮುಕ್ತವಾಗಿ ವರ್ತಮಾನದ ಹೊಸತನದಲ್ಲಿ ಜ್ಯೋತಿರ್ಲಿಂಗದಂತೆ ಸದಾ ಬೆಳಗುತ್ತಿರುತ್ತದೆ. ಶರಣರು ಹೇಳುವ ಪ್ರಾಣಲಿಂಗ ಕೇವಲ ಒಬ್ಬ ವ್ಯಕ್ತಿಯು ಜೀವಿಸುವ ಪ್ರಾಣದ ವ್ಯಾಪ್ತಿಗೆ ಮಾತ್ರ ಸೀಮಿತಗೊಂಡದ್ದಲ್ಲ. ಬಹಿರಂತರ್ಗತವಾಗಿ ಪ್ರಾಣಲಿಂಗ ಸರ್ವವಸ್ತು ಸರ್ವ ಜೀವಿಗಳಲ್ಲೂ ಸಮಾನವಾಗಿ ವ್ಯಾಪಿಸಿಕೊಂಡಿರುವ ಚೇತನಾ ಶಕ್ತಿ. ಆ ಚೈತನ್ಯವನ್ನು ಒಂದು ಶಾಶ್ವತ ಸ್ಥಿತಿಯನ್ನಾಗಿಯೂ ನೋಡಲಾಗುವಂತಿಲ್ಲ. ಏಕೆಂದರೆ ಒಂದು ಕ್ಷಣದ ಚೈತನ್ಯ, ಆ ಹಿಂದಿನ ಚೈತನ್ಯದ ಇಲ್ಲದಾಗುವಿಕೆಯ ಫಲ. ಶರಣರೇ ಹೇಳುವಂತೆ ಇದೆಯೆಂತಾಗಲಿ ಇಲ್ಲವೆಂತಾಗಲಿ ಹೇಳಲಿಕ್ಕಾಗದ ಸಂಗತಿ. ಇದೆಯೆಂದ ತಕ್ಷಣ ಈ ಹಿಂದಿನದ್ದು ಇಲ್ಲವಾಗಿದೆ. ಇಲ್ಲವೆಂದು ಹೇಳುವಾಗಲೇ ಮತ್ತೊಂದು ಹೊಸ ಚೈತನ್ಯ ಪ್ರಾವಿರ್ಭವಿಸುತ್ತಾ ಮುಂದಿನದ್ದೂ ಬಯಲು ಬಯಲಾಗುತ್ತಿದೆ. ಆದ್ದರಿಂದ ಈ ಸಚರಾಚರವು ಪ್ರಾಣಲಿಂಗಿ ಸಂಬಂಧಿಯಾಗಿರುವಾಗ ಒಂದು ಕಣವನ್ನೂ ಇಲ್ಲಿಂದ ಬೇರ್ಪಡಿಸಿ ನೋಡಲು ಸಾಧ್ಯವೇ ಇಲ್ಲ. ಎಲ್ಲಗಳ ಸಂಬಂಧ ಒಂದೇ ಆಗಿದೆ. ಎಲ್ಲವೂ ಒಂದೇ ವಿಶ್ವಕುಟುಂಬಕ್ಕೆ ಸೇರಿದೆ ಎಂಬ ಅಂತಃಸತ್ವವು ಶರಣರ ಬಹುಮುಖ್ಯ ಪ್ರತ್ಯಕ್ಷಾನುಭವವಾಗಿದೆ. ಅವರ ಈ ಅನುಭವ ಪರೋಕ್ಷ ಧ್ಯಾನಕ್ಕಿಂತಲೂ ಅಗಾಧವಾದದ್ದು. ಆದ್ದರಿಂದ ಶರಣರಲ್ಲಿ ಸರ್ವಜೀವಿಗಳಲ್ಲೂ ಸಮಾನತೆ, ಸರ್ವ ಜೀವಿಗಳಲ್ಲೂ ಅಂತಃಕರುಣೆ ಎನ್ನುವ ಮಾತು ಕೇವಲ ಮಾತಾಗಿ ಉಳಿಯದೆ ಲೋಕಾನುಭವವಾಗಿದೆ. ಈ ವಿಶ್ವದ ನಿರಂತರ ಜೀವಚೇತನಾ ಸತ್ಯವಾಗಿದೆ. ಅದು ಲೋಕಾರ್ಥಪರವಾದ ಅಂತಿಮ ಸತ್ಯವೂ ಆಗಿದೆ.
ಪ್ರಾಣಲಿಂಗ ಪರಾಪರವೆಂದರಿದು,
ಅಣು ರೇಣು ತೃಣ ಕಾಷ್ಠದಲ್ಲಿ ಕೂಡಿ ಪರಿಪೂರ್ಣಶಿವನೆಂದರಿದು,
ಇಂತು_ಕ್ಷಣವೇದಿ ಅಂತರಂಗವ ವೇಧಿಸಲ್ಕೆ
ಅಗಣಿತ ಅಕ್ಷೇಶ್ವರ ತಾನೆಂದರಿದು
ಪ್ರಣವಪ್ರಭೆಯ ಮೇಲಣ ಪರಂಜ್ಯೋತಿ ತಾನೆಂದರಿದ ಕಾರಣ,
ಗುಹೇಶ್ವರಾ ನಿಮ್ಮ ಶರಣನುಪಮಾತೀತನು.
ಇಲ್ಲಿ ‘ಪ್ರಣವ ಪ್ರಭೆಯ ಮೇಲಣ’ ಎಂಬ ಮಾತು ಬಲು ಮುಖ್ಯವಾದದ್ದು. ಅಲ್ಲಮರು ತಮ್ಮ ಪಥವನ್ನು ಪ್ರಣವ ಪ್ರಭೆಯ ಮೇಲಣ ಎನ್ನುತ್ತಿದ್ದಾರೆ. ಪ್ರಣವ ಪ್ರಭೆ ಸೀಮಿತಗೊಂಡ ಆವರಣಗಳಾದ ಧರ್ಮ, ಜಾತಿ, ಲಿಂಗ ಇತ್ಯಾದಿ ಮಾನವ ನಿರ್ಮಿತ ಸಂರಚನೆಗಳಿಂದ ಆಚೆಗಿಟ್ಟು ಶರಣಪಥವನ್ನು ಅತೀತಗೊಳಿಸುವ ಬೆಡಗಾಗಿಸುತ್ತಿದ್ದಾರೆ. ಆದ್ದರಿಂದ ಗುರುಪಥ ಜೀವಪರ ತತ್ವವಾಗಿ ಸಾರ್ವಕಾಲಿಕ ಸತ್ಯವಾಗಿ ನಮ್ಮ ಮುಂದಿದೆ… ಆದ್ದರಿಂದ-
ಭಕ್ತಂಗೆ ಉತ್ಪತ್ಯ(ತ್ತಿ?)ವಿಲ್ಲಾಗಿ, ಸ್ಥಿತಿಯಿಲ್ಲ.
ಸ್ಥಿತಿಯಿಲ್ಲಾಗಿ ಲಯವಿಲ್ಲ. ಮುನ್ನ ಎಲ್ಲಿಂದ ಬಂದನಲ್ಲಿಗೆ ಹೋಗಿ,
ನಿತ್ಯನಾಗಿರ್ಪ ಗುಹೇಶ್ವರಾ ನಿಮ್ಮ ಶರಣ.
** ** **
ವಚನಗಳಲ್ಲಡಗಿರುವ ನಿಜತತ್ವವು ಮನುಷ್ಯ ವಿವೇಕದ ಸಮಪಾತಳಿಯಿಂದ ನಡೆಗೆ ಆವರಿಸಿಕೊಳ್ಳದ ಕೇಡಿನಲ್ಲಿ ನಾವಿಂದು ನಾಚಿಕೆಗೆಟ್ಟು ಶರಣರ ಕುರಿತು ಮಾತನಾಡಬೇಕಿರುವ ಮೋಸಕ್ಕೊಳಗಾಗಿದ್ದೇವೆ. ನೂರಾರು ವರ್ಷಗಳಿಂದ ಸತ್ಯವನ್ನು ನುಡಿವ ನಾಲಿಗೆಗಳಿಗೂ ಕೇಳಿಸಿಕೊಳ್ಳುವ ಕಿವಿಗಳಿಗೂ ಉದ್ದೇಶಪೂರ್ವಕವಾಗಿ ಹೊಲಿಗೆ ಹಾಕುತ್ತಲೇ ಮಾತಿಗಿರುವ ಕ್ರಿಯಾಶಕ್ತಿಯನ್ನು ಕೊಂದು ಹಾಕಿರುವ ಸಾಂಸ್ಕೃತಿಕ ರಾಜಕಾರಣ ಮತ್ತು ಭಾಷಾ ರಾಜಕಾರಣಗಳು ಬಸವ ತತ್ವವನ್ನು ಒಂದು ಅಮಲಿನ ಹಂತಕ್ಕೋ ಅಥವಾ ವಿದ್ವತ್ ಪ್ರದರ್ಶನಕ್ಕಾಗಿಯೋ ಸೀಮಿತಗೊಳಿಸಿರುವುದನ್ನು ನಾನು ಬಲ್ಲೆ. ಆದ್ದರಿಂದ ಈ ಅಪಾಯದ ಸಂದರ್ಭದಲ್ಲಿ ಶರಣರ ಕುರಿತು ಬರೆದು ಉದ್ದಾರವಾಗುವಂತದ್ದೇನೂ ಇಲ್ಲ ಎಂದು ಉಪೇಕ್ಷಿಸಿದ್ದೂ ಉಂಟು.
ಬರೀ ಮಾತು ಮತ್ತು ಭಾವನಾತ್ಮಕ ಹಂತಕ್ಕೆ ಶರಣರ ವಚನಗಳನ್ನು ಇಳಿಸಿಬಿಟ್ಟರೆ, ನಿಜ ಬದುಕಿನ ರೀತಿ ನೀತಿಗಳ ಮೇಲೆ ಅವುಗಳ ಪ್ರಭಾವವೇನೂ ಉಳಿಯಲಾರದು. ಈ ವಿಷಮ ಸ್ಥಿತಿ ವಚನಗಳ ಸಾರವನ್ನು ಕೊನೆಯಿರದ ಶಾಬ್ದಿಕ ಗೊಂದಲಕ್ಕೋ ಇಲ್ಲವೇ ಅಸಂಬದ್ಧ ಊಹೆಗಳಿಗೋ ತಳ್ಳಿ ಬಿಡುತ್ತದೆ.
ಎಲ್ಲ ಕಾಲಕ್ಕೂ ಧರ್ಮಾಧಿಕಾರ, ದೈವಾಧಿಕಾರ ಹಾಗೂ ರಾಜ್ಯಾಧಿಕಾರಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವ ಶಕ್ತಿಗಳು ಈ ನೆಲದಲ್ಲಿ ನಿರಂತರವಾಗಿ ಪ್ರಜಾಸತ್ತಾತ್ಮಕ ಮಹತ್ವವನ್ನು ಗಾಯಗೊಳಿಸುತ್ತಲೇ ಬಂದಿವೆ. ಜೀವವಿರೋಧಿಯಾದ ಈ ರಾಜಕಾರಣದ ಮೇಲೆ ಸತ್ವಪೂರ್ಣವಾಗಿ ನೇರವಾಗಿ ಪರಿಣಾಮ ಬೀರಿದ ಒಂದು ಆದರ್ಶ ಪರ್ಯಾಯ ರಾಜಕಾರಣವನ್ನಾಗಿ ಶರಣಪಥವನ್ನು ನಾವಿಂದು ಗ್ರಹಿಸಬೇಕಿದೆ. ಆಧುನಿಕ ಜಗತ್ತಿನ ಅವಕಾಶಗಳಲ್ಲಿ ಜೀವಿಸುತ್ತಿರುವ ನಾವು ಸಂಪೂರ್ಣವಾಗಿ ವಚನಗಳನ್ನು ಆಧ್ಯಾತ್ಮಿಕ ಚೌಕಟ್ಟಿನಲ್ಲಿಟ್ಟು ನೋಡುವ ಗೀಳಿಗೆ ಬಿದ್ದರೆ ವಚನಗಳಿಗೆ ಯಾವ ನ್ಯಾಯವನ್ನೂ ಒದಗಿಸಲಾಗದು. ಇಂತಹದ್ದು ಕೇವಲ ಸೋಗಿನ ಅನುಭಾವವಷ್ಟೇ ಆಗಬಲ್ಲದು. ಶರಣಪಥ ಆಧ್ಯಾತ್ಮಕ್ಕೂ ಮೀರಿ ವಿಶಾಲವಾದ ಶ್ರೇಷ್ಠ ಸಮಾಜವಾದವಾಗಿದೆ. ಮತ್ತು ಮಾನವ ಜೀವಿ ಅನುಸರಿಸಲೇ ಬೇಕಾದ ಈ ನೆಲದ ನಡಿಗೆಯಾಗಿದೆ. ಈ ಕಾರಣದಿಂದ ಶರಣಪಥದ ಮಹತ್ತರ ಆಕಾಂಕ್ಷೆಗಳನ್ನು ನಾವು ಚಿಂತನೆಗೆ ಹಚ್ಚಬೇಕು. ಇದರಲ್ಲಿ ಬಹಳ ಮುಖ್ಯವಾದುದೆಂದರೆ ಮಾನವನ ಮನಸ್ಸನ್ನು ಬದಲಾಯಿಸುವುದು. ಅವನಲ್ಲಿರುವ ಅನಗತ್ಯ ಕೊಳೆಯನ್ನು ತೊಡೆದುಹಾಕುವುದು. ಅಂದರೆ ಮನುಷ್ಯ ಸ್ವಭಾವವನ್ನು ಬದಲಾಯಿಸುವುದರ ಮೂಲಕ ಸಮ ಸಮಾಜವನ್ನು ಸರ್ವರೂ ನಿರಂತರವಾಗಿ ಬಾಳುವ ಮಾನವ ಘನತೆಯನ್ನು ಪುನರ್ ರೂಪಿಸುವುದು ಶರಣಪಥದ ಮುಖ್ಯ ಗುರಿ.
Comments 23
vidya patil
Apr 10, 2024Guru shishya sambandda article has written by padmalaya nagaraj sir was excellent. overall article leads everyone to be in right path and removes all unrealistic thoughts(illusions). Thank you very much sir
ಶಶಿಕುಮಾರ ಗುಂಜಾಳ
Apr 12, 2024ಇಂಚಿಂಚಾಗಿ ಈ ಬರಹದ ವಿಚಾರಗಳನ್ನು ಓದಿಕೊಂಡರೆ, ‘ಶಿವಪಥವನರಿವೊಡೆ ಗುರುಪಥವೇ ಮೊದಲು’ ಎಂದು ಹೇಳಿದ್ದು ಯಾಕೆ ಅಂತ ಮನದಟ್ಟಾಗುತ್ತದೆ.🙏🏽🙏🏽🙏🏽
ಶಿವಾನಂದ ಗುರೂಜಿ, ದಾವಣಗೆರೆ
Apr 15, 2024ಗುರು ಶಿಷ್ಯರ ಸಂಬಂಧ ತಾಯಿ ಮಗುವಿನ ಸಂಬಂಧದಂತೆ. ಮಗುವಿನ ಸರ್ವಾಂಗೀಣ ಉನ್ನತಿಗೆ ತಾಯಿಯ ಅಂತ:ಕರಣವೇ ಮೂಲ. ನಿಮ್ಮ ಬರವಣಿಗೆ ಅಮೂಲ್ಯ. ಶರಣಾರ್ಥಿಗಳು.
ಸಿದ್ದು ಯಾಪಲಪರವಿ, ಗದಗ
Apr 19, 2024ತುಂಬಾ ಆಳವಾದ ವಿಶ್ಲೇಷಣೆ🙏😊🙏
ಕಾವ್ಯಶ್ರೀ ಕಲಬುರಗಿ
Apr 19, 2024ಬಹಳ ಆಳವಾದ ಚಿಂತನೆ ಇಲ್ಲಿದೆ. ಬಯಲು ಲೇಖನಗಳ ವಿಶೇಷ ಏನು ಅಂದ್ರೆ, ಅಲ್ಲಿ ಮಾಹಿತಿಯೂ ಇರುತ್ತೆ, ಆಳವಾದ ಚಿಂತನೇನೂ ಇರುತ್ತೆ. ಲಘುವಾಗಿ ಯಾವುದೂ ಇರೋದಿಲ್ಲ. ಎಲ್ಲಾ ಲೇಖನಗಳನ್ನು ಗಂಭೀರವಾಗಿ ಓದಬೇಕು.
ಪರಮೇಶ್ ಜಗಳೂರು
Apr 20, 2024ಗುರು-ಶಿಷ್ಯ ಸಂಬಂಧವು ಶರಣರಲ್ಲಿ ಎಷ್ಟೊಂದು ಉದಾತ್ತವಾಗಿದೆ! ಸಮಾನ ತಳಹದಿಯ ಮೇಲೆ ನಿಂತ ಅವರ ವಿಚಾರಗಳನ್ನು ಈ ನೆಲೆಯಲ್ಲಿ ವಿನೂತನವಾಗಿ ಗ್ರಹಿಸಬಹುದೆನ್ನುವುದಕ್ಕೆ ಈ ಲೇಖನದ ಪ್ರತಿ ವಿಚಾರವು ಸಾಕ್ಷಿ ನೀಡುತ್ತದೆ. ಆದರೆ ಇಂತಹ ಗುರು-ಶಿಷ್ಯರು ಎಲ್ಲಿ ಸಿಗುತ್ತಾರೆ?
Pavitra Gangadhar
Apr 20, 2024ಸಾಮಾಜಿಕ ಹೊಣೆಗಾರಿಕೆ ಮತ್ತು ನೈತಿಕ ಜೀವನದ ಮಹತ್ವವನ್ನು ಯಾಕೆ ವಚನಗಳನ್ನು ಎಲ್ಲ ಕಡೆ ಸಾರುವ ಭಾಷಣಕಾರರು, ಪ್ರವಚನಕಾರರು, ಸ್ವಾಮೀಜಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿಲ್ಲಾ. ಯಾರು ಬಸವಣ್ಣನವರ ಬಗ್ಗೆ ಪ್ರಚಾರ ಮಾಡುತ್ತಾರೋ, ಯಾವ ಯಾವ ಮಠ ಮಂದಿರಗಳು ತಾವು ನಿಜವಾದ ಬಸವಗುರುವಿನ ಸೇವೆ ಮಾಡುತ್ತಾವೆಂದು ಭಾವಿಸಿದ್ದಾವೆಯೋ ಅಲ್ಲೆಲ್ಲಾ ಅಧಿಕಾರಕ್ಕೆ, ಪೀಠಕ್ಕೆ, ಹಣಕ್ಕೆ ಎಷ್ಟೊಂದು ತಿಕ್ಕಾಟಗಳಿವೆ! ನೈತಿಕತೆಯನ್ನು ಬಿಟ್ಟರೆ ಶರಣರ ಕೈಯನ್ನು ಬಿಟ್ಟಂತೆಯೇ ಅಲ್ಲವೇ?
Channappa Biradar
Apr 20, 2024ಭಕ್ತಿಯ ಆವರಣಕ್ಕೆ ಸಿಕ್ಕವರಲ್ಲಿ ಅಹಂಕಾರ ಅಳಿಯಲೇ ಬೇಕು, ಭಕ್ತಿಯೆಂಬುದು ಒಳಗಣ ಸೂತಕವನ್ನು ತೊಳೆಯಲು ಅರಿಯುವ ವಿವೇಕ ಎನ್ನುವ ನಿಮ್ಮ ಮಾತುಗಳನ್ನು ಓದಿ ಗೊಂದಲವಾಯಿತು. ಭಕ್ತಿಯ ವ್ಯಾಖ್ಯಾನ ಹೀಗೂ ಉಂಟೆ? ಹಾಗಾದರೆ ಶಿವನ ಮೇಲಿಡುವ ಅಪಾರ ನಂಬಿಕೆ, ಅವನಿಗಾಗಿ ಭಜಿಸುವ, ಪೂಜಿಸುವ, ಪ್ರಾರ್ಥಿಸುವ ವಿಧಿವಿಧಾನಗಳು ಭಕ್ತಿ ಅಲ್ಲವೇ? ಪ್ರತಿದಿನ ತಪ್ಪದೆ ಮಾಡುವ ಲಿಂಗಪೂಜೆಯೂ ಭಕ್ತಿ ಅಲ್ಲವೇ?
ಚಿಂತನೆಗೆ ಹಚ್ಚುವ ಪದ್ಮಾಲಯ ನಾಗರಾಜ್ ಶರಣರ ಲೇಖನವನ್ನು ಓದಲೇಬೇಕೆಂದು ಒತ್ತಾಯಿಸಿದ್ದಕ್ಕೆ ಮಂಗಳಕ್ಕಾ ಅವರಿಗೆ ವಿಶೇಷ ವಂದನೆಗಳು. ಈ ಲೇಖನವನ್ನು ಅರಗಿಸಿಕೊಳ್ಳಲು ಖಂಡಿತ ಪ್ರಯತ್ನಿಸುತ್ತೇನೆ.
veeranna C
Apr 22, 2024ಲಿಂಗ ಪ್ರತ್ಯಕ್ಷಾನುಭವ, ಅದು ಪರೋಕ್ಷ ಅನುಭೂತಿಯಲ್ಲ- ಎನ್ನುವುದನ್ನು ಓದುತ್ತಿದ್ದರೆ, ಅಲ್ಲಮಪ್ರಭುಗಳ, “ಗುಹೇಶ್ವರನೆಂಬುದು ಕಲ್ಪಿತವಲ್ಲ ಕೇಳಿರೇ” ಎನ್ನುವ ವಚನ ನೆನಪಾಯಿತು. ಅಂದರೆ ಲಿಂಗವನ್ನು ಪ್ರತ್ಯಕ್ಷವಾಗಿ ಕಾಣಬಹುದು!!!!
Gururaj Koluru
Apr 23, 2024ಶರಣಪಥದ ನಿಜದರ್ಶನ ಮಾಡಿಸಿದ ಲೇಖಕರಿಗೆ ಶರಣು ಶರಣಾರ್ಥಿಗಳು… ಮೈಮರೆತು ಓದಿದೆ, ಮತಿಗೆ ನಿಲುಕಿದಷ್ಟನ್ನು ಹೀರಿಕೊಂಡು.🙏🏽
ಅಂಬಾರಾಯ ಬಿರಾದಾರ
Apr 23, 2024ವಚನಗಳ ವಚನಾಂಕಿತಗಳು ಅನುಭಾವದ ನೆಲೆಗಟ್ಟು, ಸ್ವಾನುಭಾವದ ನೆಲೆ, ನಿಜದ ನಿಲುವುಗಳಾಗಿವೆ…
ಅರಿವಿನ ನೆಲೆ, ಶಿವಾನುಭಾವವು ಹೌದು. ಶಿವ ಬಯಲು ಅರಿವಿಗೆ ಬಂದಾಗ ಅದು ಗುರು ಸಹ ಆಗುತ್ತದೆ. ಅದುವೆ ಅರಿವೆ ಗುರು. ಗುರು ಲಿಂಗ ಜಂಗಮ ಭೌತಿಕವು ಹೌದು
ಅಭೌತಿಕವು ಹೌದು
ಸಾಕಾರವಿಲ್ಲದೆ ನಿರಾಕಾರ ನಂಬಲಾಗದು- ಅಲ್ಲಮಪ್ರಭು
ಮಾರ್ಗ ಸೂಚಿಸುತ್ತವೆ ಅಂದ ಮೇಲೆ ಭೌತಿಕವು ಹೌದಲ್ಲವೆ? ಪ್ರತ್ಯಕ್ಷ ಗುರುವಿನ ಅಗತ್ಯತೆ
ಒಳ್ಳೆಯ ಮಾತು.
Shankar Devanoor
Apr 23, 2024Odide. Adbutha.
Shubha
Apr 24, 2024Guru Shishya – worth reading
Umesh Bengaluru
Apr 24, 2024ಕ್ರಿಯಾವರ್ತನೆ ಎಂದರೇನು? ಪ್ರಾಣಲಿಂಗ ಯಾವುದು? ಲಿಂಗಾನುಭವ ಯಾವುದು? ಉರಿಯುಂಡ ಕರ್ಪೂರದ ಮರ್ಮವೇನು? ಗುರು, ಲಿಂಗ, ಜಂಗಮದ ಮಹತ್ವವೇನು- ಇಂತಹ ಗಹನ ಸಂಗತಿಗಳನ್ನು ಆಳವಾಗಿ ನಿರೂಪಿಸುವ ಗಂಭೀರ ಬರಹ. ಪದ್ಮಾಲಯ ನಾಗರಾಜ ಅವರ ಲೇಖನಿಗೆ ಸಾಷ್ಟಾಂಗ ನಮಸ್ಕಾರಗಳು.
ಚನ್ನಪ್ಪ ಗಾಣಿಗೇರ
May 1, 2024ಅತ್ಯಂತ ಉತ್ತಮ ತಿಳುವಳಿಕೆ ನೀಡುವ ಲೇಖನ. ಗುರುವಿನ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ. ಆರಂಭದಲ್ಲಿ ‘ಶಿವ’ನ ಕುರಿತಾಗಿಯೂ ಹೇಳಿದ್ದೀರಿ. ಅದರ ಮೇಲೂ ಲೇಖನ ಬರೆಯುತ್ತೀರಾ? ಪೌರಾಣಿಕ ಶಿವ, ಯೋಗಿ ಶಿವ, ಪರಶಿವ ಎಂದೆಲ್ಲಾ ಮಾತನಾಡುತ್ತಾರೆ, ನಿಜಕ್ಕೂ ಯಾರು ನಮ್ಮ ಶಿವ?
ರವೀಂದ್ರ ಗವಿಮಠ
May 1, 2024“ಊರದ ಚೇಳಿನ ಏರದ ಬೇನೆಯಲ್ಲಿ ಮೂರು ಲೋಕವೆಲ್ಲಾ ನರಳಿತ್ತು” ಎನ್ನುತ್ತಾರೆ. ಚೇಳು ಕಚ್ಚಲೇ ಇಲ್ಲ, ವಿಷ ಏರಲೂ ಇಲ್ಲ. ಆದರೆ ಮೂರು ಲೋಕವೆಲ್ಲಾ ಆ ನೋವಿನಲ್ಲಿ ನರಳುತ್ತಿದೆ!- ಈ ಸಾಲನ್ನು ಹತ್ತಾರು ಸಲ ಓದಿದೆ, ಭ್ರಾಂತಿಯನ್ನು ಕಳೆಯುವಂತಹ ಈ ಲೇಖನವನ್ನು ಮತ್ತೆಮತ್ತೆ ಓದಬೇಕೆನಿಸಿದ್ದು ಸುಳ್ಳಲ್ಲಾ. ನಾಗರಾಜ್ ಶರಣರಿಗೆ ಶರಣುಗಳು.
Panchakshari h v
May 3, 2024ಬರೀ ಭ್ರಮೆಯನ್ನೇ ತಿಂದು ಜೀರ್ಣಿಸಿಕೊಂಡ ಮನಕ್ಕೆ ಅರಿವಿನ ಬೆಳಗನ್ನೀಯುವ ಗುರು ಶಿಷ್ಯ ಸಂಬಂಧದ ಈ ಲೇಖನ ಪ್ರಸಾದಿಸಿದ್ದಕ್ಕೆ ಧನ್ಯವಾದಗಳು ಸರ್. ಗುರು ಯಾರು, ಶಿವ ಯಾರು? ನಮ್ಮ ಅವರ ಸಂಬಂಧವೇನು ಎಂದು ಮನ ಮುಟ್ಟುವಂತೆ ಚಿತ್ರಿಸಿದ್ದೀರಿ.
ಶರಣು🙏
Kiran Belllad
May 5, 2024ಈ ಲೇಖನದಲ್ಲಿ ಶರಣ ಪದ್ಮಾಲಯ ನಾಗರಾಜ್ ಅವರು ‘ಭ್ರಮೆ’ ಹಾಗೂ ‘ಅಹಂ’ ಹೇಗೆ ನಮ್ಮ ಮನದಲ್ಲಿ ಮನೆ ಮಾಡಿ ಬಹಿರಂಗದಲ್ಲಿ ವ್ಯಕ್ತವಾಗುತ್ತವೆ ಎನ್ನುವುದನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ. ಗುರುಪಥದ ಬಗ್ಗೆ ವಿವರಣೆ ಚೆನ್ನಾಗಿ ಮೂಡಿಬಂದಿದೆ.
ಧನ್ಯವಾದಗಳು
ಶರಣು ಶರಣಾರ್ತಿ
K S mallesh
May 5, 2024ಪದ್ಮಾಲಯ ನಾಗರಾಜರ “ಗುರು ಶಿಷ್ಯ ಸಂಬಂಧ” ಒಂದು ವಿಚಾರಪೂರ್ಣ ಲೇಖನ. ಮೇಲ್ನೋಟಕ್ಕೆ ಅಥವಾ ಮೊದಲ ಓದಿಗೆ ಈ ಲೇಖನ ಧಾರ್ಮಿಕ ಹಾಗೂ ತಾತ್ವಿಕ ಆಯಾಮಗಳಿಗೆ ಒಳಪಟ್ಟಂತೆ ಕಾಣುತ್ತದೆ. ಅವರು ಕಾಣ ಬಯಸುವ ಗುರು ಮತ್ತು ಶಿಷ್ಯ ಹಾಗೂ ಅವರ ಪರಸ್ಪರ ಉಭಯರೀತಿಯ ಕ್ರಿಯಾಶೀಲ ಸಂಬಂಧಗಳು, ಸಿದ್ಧಾಂತ ಮತ್ತು ಪ್ರಯೋಗಗಳ ಚೌಕಟ್ಟಿಗೆ ಒಳಪಡುವ ವಿಜ್ಞಾನ ಕ್ಷೇತ್ರದಿಂದ ಹಿಡಿದು ಲೌಕಿಕ ಬದುಕಿನ ಸಾಮಾಜಿಕ, ವ್ಯಾವಹಾರಿಕ ಹೀಗೆ ಎಲ್ಲ ಕಡೆಗೂ ಅನ್ವಯಿಸುತ್ತವೆ ಎನಿಸುತ್ತದೆ. ವ್ಯಷ್ಟಿ ಸಮಷ್ಟಿಯ ಬದುಕಿಗೆ ಅವಶ್ಯವೆನಿಸುವ ಜೀವನಾನುಭವ ಮತ್ತು ಜೀವನ ಮೀಮಾಂಸೆಗಳ ಬಗ್ಗೆ ಆಯಾ ಕಾಲಕ್ಕೆ ತಕ್ಕಂತೆ ಅರಿವು ಮೂಡಿಸುವ ಅನೇಕ ಮೌಖಿಕ ಗುರುಪರಂಪರೆಗಳಿದ್ದವು ಎಂಬುದನ್ನು ಓದಿದಾಗ ಆ ಪರಂಪರೆಯ ಅಂದಿನ ವಾಣಿ ಇಲ್ಲಿನ ವಾಕ್ಯಗಳಲ್ಲಿ ಪ್ರತಿಧ್ವನಿಸಿದಂತಾಯಿತು. ಅದರ ಜೊತೆಗೆ ಅವರ ಕಾಣ್ಕೆಗಳನ್ನು ಅವಗಣಿಸಿ ಹತ್ತಿಕ್ಕಿ, ಸ್ವಾರ್ಥಕ್ಕಾಗಿ ಭೋಗಜೀವನಕ್ಕಾಗಿ ಅಲೌಕಿಕ ಜ್ಞಾನವೆಂಬ ಸುಳ್ಳು ಸೃಷ್ಟಿಸಿ ಮುಗ್ಧ ಜನರನ್ನು ಪಾಪಪ್ರಜ್ಞೆ ಶಾಪಪ್ರಜ್ಞೆಗಳಿಗೆ ಒಳಪಡಿಸಿ ಶೋಷಣೆಗೊಳಿಸಿದ ರಾಜಸತ್ತೆ ಮತ್ತು ಮತಸತ್ತೆಗಳ ದುಷ್ಕೃತ್ಯಗಳ ನೆನಪೂ ಬಂತು. ಎಂತಹ ಸಂತನ ಹೃದಯವನ್ನೂ ಕಲಕಿ ಕಠೋರವಾಗಿ ಪ್ರತಿಕ್ರಯಿಸುವಂತೆ ಮಾಡುವ ಇಂತಹ ಅಕ್ಷಮ್ಯ ಕೃತ್ಯಗಳ ಬಗ್ಗೆ ನಾಗರಾಜರು ನೇರವಾಗಿ ನುಡಿದರೂ ಅವರ ವಾಕ್ಯಗಳಲ್ಲಿನ ಹಿಂದೆ ಕಾಣುವ ಒಂದು ನಿರ್ಲಿಪ್ತ ಸೌಮ್ಯಭಾವ ಅವರ ಹೃದಯ ವೈಶಾಲ್ಯವನ್ನು ತಿಳಿಸುತ್ತದೆ.
“ಅಲ್ಲಮ ಎಲ್ಲೂ ವಿರಮಿಸದ ಅಪ್ಪಟ ಜೋಗಿ ಜಂಗಮ”, “ಆತನಿಗೆ ಪಾಂಥಿಕ ಅಹಮಿಕೆಯಿಂದ ಸಂರಚನೆಗೊಂಡ ಭ್ರಾಂತಿ ಮೂಲದ ನಿರ್ಮಾಣಗಳೆಲ್ಲದರ ಪರಿಚಯವಿತ್ತು” -ಎಂದಿರುವ ವಾಕ್ಯಗಳನ್ನು ಓದಿದಾಗ ಇವು ಅದೆಷ್ಟು ಅರ್ಥಗರ್ಭಿತವಾಗಿವೆ, ಸಾಂದ್ರರೂಪದಲ್ಲಿ ಅಲ್ಲಮನ ನಿಜವ್ಯಕ್ತಿತ್ವವನ್ನು ಅದೆಷ್ಟು ವಿಶಾಲವಾಗಿ ಅರ್ಥೈಸುತ್ತವೆ ಎನಿಸುತ್ತದೆ.
ಗುರು ಶಿಷ್ಯ ಸಂಬಂಧವನ್ನು ಪರಿಣಾಮಕಾರಿಯಾಗಿ ತಿಳಿಸುವ ವಚನಗಳನ್ನು ಉದ್ಧರಿಸುತ್ತ ಶಿಷ್ಯನ ಅಹಮಿಕೆಯನ್ನು ಒಬ್ಬ ಸಮರ್ಥ ಗುರು ಹೋಗಲಾಡಿಸುತ್ತಾನೆ. ಅಲ್ಲಿಗೆ ಶಿಷ್ಯ ಶುದ್ಧನಾದಂತೆ. ಅಲ್ಲಿಂದಾಚೆಗೆ ಶಿಷ್ಯ ಗುರುವಿನ ಉಪಾಸನೆಯಲ್ಲಿ ಕಾಯಕನಿಷ್ಠೆ, ಭ್ರಮಾಶೂನ್ಯತೆ, ಪಾರದರ್ಶಕತೆ ಈ ಎಲ್ಲ ಸದಾಚಾರಗಳನ್ನು ಮೈಗೂಡಿಸಿಕೊಳ್ಳುತ್ತಾನೆ, ಅಹಮಿಕೆ ಎಂಬ ಮಾಲಿನ್ಯ ಕಳೆದು ಶುಚಿಗೊಂಡವ ನಿಸರ್ಗ ಸತ್ಯದ ವಾಸ್ತವತೆಯೊಂದಿಗೆ ಅನುಸಂಧಾನ ಮಾಡುವ ಮೂಲಕ ಹೊಂದುವ ಲಿಂಗಾನುಭವವನ್ನೇ ಶಿವತ್ವದೆಡೆಗಿನ ಬಟ್ಟೆ ಎನ್ನುವ ಸತ್ಯವನ್ನು ಶರಣರಲ್ಲಿ ಲೇಖಕರು ಗುರುತಿಸಿಯೇ ಏನೋ ಆರಂಭದಲ್ಲಿ ಗುರು ಮತ್ತು ಶಿವ ಎರಡೂ ಒಂದೇ ಎಂದು ನಿರ್ಣಯಿಸಿದ್ದಾರೆ ಎಂದು ನನಗನಿಸುತ್ತದೆ.
ಪ್ರಾಣದ ಬಗ್ಗೆ ಪದ್ಮಾಲಯರವರು ಒಂದು ವೈಚಾರಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿದಂತೆ ಕಂಡರೂ ಅದರಲ್ಲಿ ಬಹುಭಾಗ ವೈಜ್ಞಾನಿಕವೇ ಆಗಿದೆ. ಭೌತವಿಜ್ಞಾನದ ಪ್ರಕಾರ ಈ ಜಗತ್ತಿನ ಪ್ರತಿಯೊಂದು ಸ್ಥೂಲ ವಸ್ತುವೂ ಪರಮಾಣುಗಳಿಂದ ಉಂಟಾಗಿದೆ. ಉಳಿದೆಲ್ಲವೂ ಮೂಲ ಕಣಗಳ ಮತ್ತು ಚೈತನ್ಯದ ರೂಪದಲ್ಲಿದೆ. ಈ ಜಗತ್ತಿನ ಅದ್ಭುತ ವ್ಯವಸ್ಥೆಯೊಳಗೆ ಕ್ರಮಬದ್ಧವಾದ ಮೂಲ ಕಣಗಳ ಚಲನೆಯಿದೆ. ಈ ಚಲನ ವ್ಯವಸ್ಥೆ ಯಾವುದನ್ನು ಜಡ ಎನ್ನುತ್ತೇವೆ ಅದರಲ್ಲೂ ಇದೆ. ನಿಜವಾದ ಅರ್ಥದಲ್ಲಿ ಯಾವುದೂ ಜಡವಲ್ಲ. ಸಿದ್ದಯ್ಯ ಪುರಾಣಿಕರು “ಜಡವಿದೆಲ್ಲವು ಜಂಗಮ” ಎನ್ನುವುದು ಕೇವಲ ಕಾವ್ಯದ ಕಲ್ಪನೆಯಲ್ಲ. ಅದೊಂದು ವೈಜ್ಞಾನಿಕ ಸತ್ಯ. ಜೀವವಿರುವಲ್ಲಿ ಅದರೊಳಗಿನ ಪಾರ್ಶ್ವಿಕ ಚಲನೆಗಳೆಲ್ಲ ಸೇರಿ ಒಂದು ಅದ್ಭುತ ಸಹಯೋಗ ಅಥವಾ ಸಂಯೋಗ ಉಂಟಾಗಿ (ಇಂಗ್ಲಿಷಿನಲ್ಲಿ ಇದನ್ನು synergy ಎನ್ನುತ್ತಾರೆ ) ಅದೊಂದು ಅನುರಣನ ಸ್ಥಿತಿ (resonance) ಏರ್ಪಟ್ಟು ಪ್ರಾಣರೂಪದಲ್ಲಿ ಅದು ವ್ಯಕ್ತವಾಗುತ್ತದೆ. ಜಡ ವಸ್ತುಗಳಿಗಿರದ ಸ್ವಯಂ ಚಲನೆ ಸ್ವಯಂ ಚಿಂತನೆ ಮುಂತಾದ ಕೆಲವು ವಿಶಿಷ್ಟ ವರ್ತನೆಗಳ ಮೂಲಕ ಪ್ರಾಣ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುತ್ತದೆ. ಜಡದಲ್ಲೂ, ಜೀವಿಯಲ್ಲೂ ಜಂಗಮವಿದೆ, ಪ್ರಾಣವಿರುವ ಜೀವಿಯಲ್ಲಿ ಈ ಜಂಗಮತ್ವ ಮೇಲಿನ synergy ಯಿಂದಾಗಿ ವಿಶೇಷವೆನಿಸುತ್ತದೆ. ಅದಿಲ್ಲದೆ ಹೋದಲ್ಲಿ ಜೀವ ಮತ್ತೆ ಜಡವಾಗುತ್ತದೆ, ವಿಶ್ವದೊಳಗಿರುವ ಇನ್ನೆಲ್ಲ ಅದ್ಭುತ ವ್ಯವಸ್ಥೆಯ ಭಾಗವಾಗುತ್ತದೆ. ಪದ್ಮಾಲಯರವರ ವಿಚಾರಗಳನ್ನು ಭೌತವಿಜ್ಞಾನದ ಅಧ್ಯಾಪಕನಾಗಿರುವ ನಾನು ನನ್ನ ಮಿತಿಯಲ್ಲಿ ಹೀಗೆ ಅರ್ಥ ಮಾಡಿಕೊಂಡಿದ್ದೇನೆ. ಪ್ರಾಣವೆಂಬುದು ದ್ರವ್ಯವೆನ್ನುವುದಕ್ಕೆ ವೈಚಾರಿಕ ವಿಶಾಲ ನೆಲೆಗಟ್ಟಿನಲ್ಲಿ ಯಾವ ತೊಂದರೆಯೂ ಇಲ್ಲ. ಪ್ರಾಣವನ್ನು ದ್ರವ್ಯವೆಂದು ಕರೆದರೆ ವಿಜ್ಞಾನದ ಪ್ರಕಾರ ಅದು ಅಳತೆಗೆ ಸಿಗುವುದಿಲ್ಲವೆನಿಸಿ, ಬದಲಾಗಿ ಚೈತನ್ಯವೆಂದು ಕರೆದರೆ ಹೆಚ್ಚು ಸೂಕ್ತವೇನೋ ಎಂದು ನನ್ನ ಅಲ್ಪಮತಿಗೆ ಅನಿಸಿದರೂ, ದ್ರವ್ಯ ಮತ್ತು ಚೈತನ್ಯಗಳೆರಡೂ ಒಂದೇ ಗುಣದ ಎರಡು ರೂಪಗಳಷ್ಟೇ ಎಂಬ ಶ್ರೇಷ್ಠ ವಿಜ್ಞಾನಿ ಐನ್ಸ್ ಟೈನ್ ರವರ ಹೇಳಿಕೆ ತಕ್ಷಣ ಜ್ಞಾಪಕಕ್ಕೆ ಬಂದು ನಾಗರಾಜರ ನಿರ್ಣಯಗಳಿಗೆ ಸಹಮತಿಸಿ ಅವರಿಗೆ ನನ್ನ ಓಟನ್ನು ನೀಡುತ್ತಿದ್ದೇನೆ.
ತಮ್ಮ ಲೇಖನದಿಂದ ಹೊಸ ನೋಟಗಳನ್ನು ಬೀರಿದ ಪದ್ಮಾಲಯರವರಿಗೂ, ಲೇಖನ ಪ್ರಕಟಿಸಿದ ಶ್ರೀಮತಿ ಮಂಗಳಾ ಅವರ ಬಳಗಕ್ಕೂ ನನ್ನ ನಮನಗಳು
ಕೆ. ಎಸ್. ಮಲ್ಲೇಶ್
ಬಸವರಾಜ ಹಂಡಿ
May 5, 2024‘ಗುರು ಶಿಷ್ಯ ಸಂಬಂಧ’ ಇಂತ ಲೇಖನವನ್ನು ನಾನು ಜೀವನದಲ್ಲಿ ಇನ್ನುವರೆಗೆ ಓದಿಲ್ಲ. ಮುಂದೆಯೂ ಓದಲಿಕ್ಕೆ ಆಗಲಿಕ್ಕಿಲ್ಲ. ಈ ಲೇಖನ 4ನೆಯ ಸಲ ಓದಿದ ನಂತರ 12ನೆಯ ಶತಮಾನದಲ್ಲಿ ಬಸವಣ್ಣ ಮತ್ತು ಬಸವಾದಿ ಶರಣರು ಏನನ್ನು ಹೇಳಲು ಇಚ್ಚಿಸಿದರು ಅಥವಾ ಯಾವ ಮಟ್ಟದಲ್ಲಿ ಅವರ ಜ್ಞಾನ/ಅನುಭಾವ ಇತ್ತೋ ಅದೆ ಮಟ್ಟದಲ್ಲಿ ಈ ಲೇಖನ ಸಂಕೇತಗಳ ಮುಖಾಂತರ ಸೂಚಿಸುತ್ತದೆ.
ಲೇಖನದಲ್ಲಿ ಬರೆದ ಹಾಗೆ ಗುರುಮಾರ್ಗ ಈ ಕೆಳಗಿನಂತೆ ಇದೆ.”ಜೀವದ ನೆಲೆಯಿಂದ ಸಾಮಾಜಿಕ ನೆಲೆಗೆ… ಸಾಮಾಜಿಕ ನೆಲೆಯಿಂದ ಪರಿವರ್ತನೀಯವಾದ ನಿಸರ್ಗದ ಚಲನಶೀಲ ಅನಂತತೆಯೆಡೆಗೆ ಅರಿವನ್ನರಳಿಸಿ ಜಂಗಮವಾಗುವ ಮಾರ್ಗವನ್ನು ರೂಪಿಸಿದರು.”
ಗುರುಮಾರ್ಗ – ಗುರು ಲಿಂಗ ಜಂಗಮ ಪಾದೋದಕ ಪ್ರಸಾದ.
ಇದು ಬಹಳ ಸ್ಪಷ್ಟ ಆಗುತ್ತೆ ಮತ್ತು ಅನುಭವಕ್ಕೆ ಸಹ ಬರುತ್ತೆ.
ಭಕ್ತಿ ಎಂಬದು ಗರಗಸ ಇದ್ದಂತೆ. ಭಕ್ತಿ ಸಮಾನಾಂತರವಾಗಿ( parallel) ಗುರುಮಾರ್ಗದ ಎಲ್ಲ ಹಂತಗಳಲ್ಲಿ ಬರುತ್ತದೆ. ಭಕ್ತಿಯ ಮೂಲಕ ನಾವು ಗುರುಮಾರ್ಗದ ಎಲ್ಲ ಹಂತಗಳನ್ನು ತಲುಪಲು ಸಾದ್ಯ ಆಗುತ್ತದೆ.
ಬಹಳ ವರ್ಷಗಳ ನಂತರ ಭಕ್ತಿ ಏನು ಎಂಬುದು ಅಂತ ಕೆಳಗಿನ ಸಾಲುಗಳನ್ನು ಓದಿದ ನಂತರ ಗೊತ್ತು ಆಯ್ತು.
“ಗುರುಮಾರ್ಗದಲ್ಲಿ ಭಕ್ತಿ ಮೂಢಾಚಾರವಲ್ಲ; ಮತಾಚಾರವಲ್ಲ; ವೈದಿಕಾಚರಣೆಯೂ ಅಲ್ಲ. ಭ್ರಮಾಲೋಕದಿಂದ ಲೋಕಪರವಾದ ವಸ್ತುಸ್ಥಿತಿಗೆ ಭಕ್ತನನ್ನು ಕಣ್ತೆರೆಯಿಸಿ ನೈಸರ್ಗಿಕ ಬದುಕಿನಲ್ಲಿ ತನಗೆಷ್ಟು ಲಭ್ಯವಿದೆಯೋ ಅದರಲ್ಲಿ ನಿರಾತಂಕವಾಗಿ ಮುಕ್ತ ಚಿಂತನೆಗಳಿಂದ ಜೀವಿಸಲು ಸಜ್ಜುಗೊಳಿಸಲ್ಪಟ್ಟವನು ಭಕ್ತ.”
ಭಕ್ತ ಗುರುಮಾರ್ಗದ ಮೂಲಕ ಪ್ರಾಣಲಿಂಗ ಸಂಬಂಧಿ ಆಗುತ್ತಾನೆ.
“ಈ ಅನಂತ ವಿಶ್ವದ ನಿರಂತರತೆ ಯಾರನ್ನೂ ಯಾರಿಂದಲಾಗಲಿ, ಯಾವುದನ್ನೂ ಯಾವುದರಿಂದಲಾಗಲಿ ಪ್ರತ್ಯೇಕಿಸಿಕೊಳ್ಳಲಾಗದಷ್ಟು ಅನನ್ಯ ಸಂಬಂಧದಲ್ಲಿದೆ.” ನಾವು ಹೇಗೆ ಸಂಬಂಧದಲ್ಲಿ ಇದ್ದೇವೆ ಎಂಬದನ್ನು ಮೇಲಿನ ಸಾಲುಗಳು ತಿಳಿಸುತ್ತವೆ.
ಎಲ್ಲ ಭ್ರಮೆಗಳನ್ನು ಸರಿಯಾಗಿ ಗುರುತಿಸಿ ಎಲ್ಲ ಭ್ರಮೆಗಳಿಂದ ಹೊರಬಂದು ಪ್ರಾಣಲಿಂಗ ಮಟ್ಟಕ್ಕೆ ಇಳಿಯುವುದೇ ಗುರುಮಾರ್ಗದಲ್ಲಿ ನಡೆದು ಕೊನೆಗೆ ಸಾಧಿಸಬೇಕಾಗಿದ್ದು. ಒಂದು ಪ್ರಾಣಕ್ಕೆ ಬೇಕಾಗಿದ್ದು ಪ್ರಾಣದ ಅಂಶವಿರುವ ಆಹಾರ.
“ಒಂದರ ಜೈವಿಕ ಸಾಧ್ಯತೆ ಮತ್ತೊಂದರ ಜೈವಿಕದ ಇರುವಿಕೆಯನ್ನು ಅವಲಂಬಿಸಿದೆ” ಪ್ರಕೃತಿಯ ತುಂಬೆಲ್ಲ ಪ್ರಾಣ ಆವರಿಕೊಂಡಿದೆ.
“ಪ್ರಾಣವೇ ಲಿಂಗ ಲಿಂಗವೇ ಪ್ರಾಣ” ಇದರಲ್ಲಿ ಎರಡು ಮಾತು ಇಲ್ಲ. ಯಾವ ಲಿಂಗಾಯತ ಸ್ವಾಮೀಜಿಗಳಿಗೆ ಇಲ್ಲಿಯವರೆಗೆ ಇದು ಗೊತ್ತು ಆಗಲಿಲ್ಲ.
ನನ್ನ ಗುರು ಪದ್ಮಾಲಯ ನಾಗರಾಜ್ ಶರಣರನ್ನು ಏನು ಅಂತ ಹೇಳಲಿ. ಹೇಗೆ ಅಂತ ಹೇಳಲಿ. ನನ್ನ ಜೀವನವನ್ನೇ ಬದಲಾವಣೆ ಮಾಡಿದ ಗುರುಗಳಿಗೆ ಮತ್ತು ಬಯಲು ತಂಡಕ್ಕೆ ಅತಿ ವಿರಳವಾದ ಜ್ಞಾನ ದಾಸೋಹಕ್ಕೆ ಧನ್ಯವಾದಗಳು ಮತ್ತು ಶರಣು ಶರಣಾರ್ಥಿಗಳು.
Roopa manjunath
May 7, 2024ತುಂಬ ಒಳ್ಳೆಯ ಲೇಖನ, ಗುರು ಶಿಷ್ಯ ಸಂಬಂಧ,ತಾಯಿ ಮಗುವಿನ ಸಂಬಂಧ.
ಶರಣುಶರಣಾಥ್ತ್ರಗಳು.
Padmalaya
May 8, 2024ಪ್ರೀತಿಯ ಮಲ್ಲೆಶ್ ರವರಿಗೆ,
ದ್ರವ್ಯವನ್ನ ಚೇತನ ಎಂದು ವ್ಯಾಖ್ಯಾನಿಸಿಕೊಂಡರೆ ಏನೂ ಅರ್ಥ ವ್ಯತ್ಯಾಸವಾಗಲಾರದು. ಇಲ್ಲಿ ಬಹಳ ಮುಖ್ಯವಾದದ್ದು ಚೇತನವು ಪದಾರ್ಥ ಜಗತ್ತಿಗಷ್ಟೇ ಸಂಬಂಧಿಸಿದ್ದು. ಪರಿವರ್ತನೀಯ ಬೌತಿಕ ಜಗತ್ತು ದ್ರವ್ಯ ಮತ್ತು ಚೇತನಾಶೀಲಗಳ ಆಗುವಿಕೆಯಲ್ಲಿರುತ್ತದೆ. ಈ ಸಂಗತಿ ನನಗಿಂತಲೂ ವಿಜ್ಞಾನಿಗಳಾದ ನಿಮಗೆ ಹೆಚ್ಚು ವಿವರಣಾತ್ಮಕವಾಗಿ ಗೊತ್ತಿದೆ ಎಂಬುದನ್ನ ನಾನು ಬಲ್ಲೆ. ಶರಣರು ಈ ಚಲನಶೀಲತೆಯನ್ನೇ ಜಂಗಮ ಅಂದದ್ದು.ಪ್ರಾಣಲಿಂಗ ಸದಾ ಜಂಗಮ! ಪ್ರಾಣಲಿಂಗವನ್ನ ಶರಣರು ಜೋತಿರ್ಲಿಂಗ ಎಂಬ ರೂಪಕದಿಂದಲೂ ಹೇಳುತ್ತಾರೆ.ದ್ರವ್ಯ ಚೇತನವಾಗಿ ಪರಿಣಮಿಸುವ ಕ್ರಿಯೆಗೆ ಜೋತಿರ್ಲಿಂಗ ಅದ್ಬುತ ರೂಪಕ. ಎಣ್ಣೆ, ಬತ್ತಿ, ಆಮ್ಲಜನಕ ಮತ್ತು ಬೆಂಕಿ ಇವುಗಳ ಸಮಾಗಮದಿಂದ ಬೆಳಕು ಮತ್ತು ಶಾಖ ಹೊಮ್ಮುವಿಕೆಯಲ್ಲಿರುತ್ತದೆ.ಪ್ರಾಣವೂ ಸಹ ಒಂದು ಹೊಮ್ಮುವಿಕೆ.ಅಥವಾ ಪರಿಣಾಮಿ.ಈ ಹೊಮ್ಮವಿಕೆಯು ಆಹಾರ,ಗಾಳಿ,ನೀರು ಇತ್ಯಾದಿಗಳಿಂದ ಸಾಧ್ಯ. ಹೊಮ್ಮುವಿಕೆಯನ್ನು ಕೇವಲ ಒಂದು ಜೀವಿಯ ಘಟಕಕ್ಕೆ ಸೀಮಿತಗೊಳಿಸಲಾಗದು.ಈ ಬೌತಿಕ ಜಗತ್ತಿಗೆ ಸೇರಿದ ಎಲ್ಲಾ ಪದಾರ್ಥಗಳಲ್ಲಿ ಯಾವುದನ್ನೂ ಬೇರ್ಪಡಿಸಲಾಗದಷ್ಷು ಅಂತರ್ ಸಂಬಂಧವಿದೆ.ಈ ಅಂತರ್ಸಂಬಂಧದಿಂದಾಗುತ್ತಲೇ ಇರುವಂತಹದ್ದು ಲಿಂಗ. ಪದಾರ್ಥ ಜಗತ್ತನ್ನು ಜೀವ ಜಗತ್ತನ್ನಾಗಿ,ಜೀವಜಗತ್ತಿನ ಅಂತರ್ಸಂಬಂಧದಲ್ಲಿರುವ ಕೊಡುಕೊಳುವಿಕೆಯನ್ನು ಧರ್ಮ ಮತ್ತು ದಯೆಯನ್ನಾಗಿ ಕಂಡದ್ದು ಶರಣಪಥದ ದೊಡ್ಡ ಹೆಗ್ಗಳಿಕೆ. ಲೋಕದ ವಸ್ತುಸ್ಥಿತಿಗೆ ಮನುಷ್ಯ ಕುಲವನ್ನು ಕಣ್ತೆರೆಸುವ ಅವರ ಹಾದಿ ಒಮ್ಮೆಗೇ ಜೀವನ ಸಾರ್ಥಕತೆಯನ್ನೂ, ಜೀವನ ವಿಜ್ಞಾನವನ್ನೂ, ಸ್ವಾಸ್ಥ್ಯ ಸಮಾಜವನ್ನೂ ದಿಗ್ದರ್ಶನ ಮಾಡಿಸುತ್ತದೆ.
ಮಂಜುನಾಥ್, ಗುರುಮಾರ್ಗ
May 10, 2024ಎಷ್ಟು ಚಂದವಾಗಿ ಹೇಳಿದ್ದಾರೆ ಪದ್ಮಾಲಯ ಸರ್! ಶರಣರ ಅಂಕಿತಗಳೆಲ್ಲವೂ ಅವರು ನಡೆದಾಡಿ ಜೀವಿಸಿದ ದಾರಿಯ ಸಜ್ಞ ಸೂಚಕಗಳಾಗಿವೆ.
ಈ ಲೇಖನ ಈಗಿನ ಕಾಲಕ್ಕೆ ನಾವು ಯಾವ ರೀತಿ ಗುರುವಿನ ಮಹತ್ವ ಇದೆ ನಮಗೆ ಯಾಕೆ ಗುರುವಿನ ಅಗತ್ಯತೆ ಇದೆ ಎಂದು ಹೇಳುತ್ತದೆ.
ಸರ್, ಶರಣರು ಹೇಳಿದ ಮಾತನ್ನು ಇಲ್ಲಿ ಉಲ್ಲೇಖಿಸಿ, “ಜೀವದ ನೆಲೆಯಿಂದ ಸಾಮಾಜಿಕ ನೆಲೆಗೆ… ಸಾಮಾಜಿಕ ನೆಲೆಯಿಂದ ಪರಿವರ್ತನಿಯವಾದ ನಿಸರ್ಗದ ಚಲನಶೀಲ ಅನಂತತೆಯಡೆಗೆ ಅರಿವನ್ನರಳಿಸಿ ಜಂಗಮವಾಗುವ ಮಾರ್ಗವನ್ನು ರೂಪಿಸಿದರು. ಇದುವೇ ಬಸವ ಪಥ, ಶರಣಪಥ, ಶಿವಪಥ, ಗುರುಪಥ, ಬಯಲಪಥ ಎನ್ನುತ್ತಾರೆ. ಪೂರ್ವಾಶ್ರಿತ ಸಂಚಯ ಉರಿದುರಿದು ಬೂದಿಯಾಗಿ ಅವನ್ನು ನಿಸರ್ಗ ಧರ್ಮದ ವಸ್ತು ಸ್ಥಿತಿಗೆ ಕಣ್ತೆರೆಯಬೇಕು”.
“ವೇದ ವೇದಾಂತಗಳಿಂದ ಸೃಷ್ಟಿಸಲ್ಪಟ್ಟ ಅಸಂಖ್ಯಾತ ನಾಮರೂಪಗಳನ್ನು ನಿರ್ನಾಮಗೊಳಿಸುವ ಮಹತ್ವ ಯಾವ ದಿದೆಯೋ ಅದೇ ಗುರುಮಾರ್ಗದ ಮಂತ್ರ ಎನ್ನುತ್ತಾರೆ”
ಇಲ್ಲಿ ಕೆಲವು ಸಾಲುಗಳನ್ನು ಸಾರ್ ಹೇಳಿದ್ದಾರೆ.
* ಗುರುಪಥದಲ್ಲಿ ಇರುವವರೆಲ್ಲ ಗುರುವನ್ನು “ಭವರೋಗ ವೈದ್ಯ” ಎಂದು ಕೊಂಡಾಡಿದ್ದಾರೆ.
* ದಾಸೋಹಿಯಾಗಿ ಎಲ್ಲರೊಳಗೂಡಿ ಹಂಚಿಕೊಂಡು ಜೀವಿಸಬೇಕು.
*ಗುರು ಉಪದೇಶದಲ್ಲಿ ಪಾದೋಧಕ ಪ್ರಸಾದವೆಂಬ ಫಲಪ್ರಾಪ್ತಿಯೂ ಉಂಟು.
* ಕಲ್ಪಿಸದೆ ನಿಂದ ನಿಲುವು.
* ಪ್ರಾಣವು ಒಂದು ದಿನ ಸಾಯಲೇಬೇಕು. ಆದರೆ ಅದು ಸಂಪೂರ್ಣ ನಾಶವಲ್ಲ ಜೀವ ಸಾಯುವುದರ ಮೂಲಕ ಮತ್ತೊಂದು ಜೀವಸಂಚಯಕ್ಕೆ ಪ್ರಾಣಾಧಾರವಾಗಲೇಬೇಕು.
*ಎಲ್ಲಾಗಳ ಸಂಬಂಧ ಒಂದೇ ಆಗಿದೆ. ಎಲ್ಲವೂ ಒಂದೇ ವಿಶ್ವ ಕುಟುಂಬಕ್ಕೆ ಸೇರಿದೆ.
ಕೊನೆಯದಾಗಿ ಪದ್ಮಾಲಯ ಸಾರ್ ಹೇಳಿದಂಗೆ ಮಾನವನ ಮನಸ್ಸನ್ನು ಬದಲಾಯಿಸುವುದು ಅವನಲ್ಲಿರುವ ಅನಗತ್ಯ ಕಳೆಯನ್ನು ತೊಡೆದು ಹಾಕುವುದು. ಅಂದರೆ ಮನುಷ್ಯ ಸ್ವಭಾವವನ್ನು ಬದಲಾಯಿಸುವುದರ ಮೂಲಕ ಸಮ ಸಮಾಜವನ್ನು ಸರ್ವರು ನಿರಂತರವಾಗಿ ಬಾಳುವ ಮಾನವ ಘನತೆಯನ್ನು ಪುನರ್ ರೂಪಿಸುವುದು.
ತಮ್ಮ ಲೇಖನದಿಂದ ಇನ್ನಷ್ಟು ಹೊಸ ಹೊಸ ನೋಟಗಳನ್ನು ನಮ್ಮಲ್ಲಿ ಬೀರಿದ್ದಾರೆ,
ಸಾರ್ ನಿಮ್ಮ ಸಂಪರ್ಕಕ್ಕೆ ಬಂದಮೇಲೆ ನಾವು ಒಂದು ಸ್ವಲ್ಪನಾದರೂ ಈ ಸಮಾಜದಲ್ಲಿ ಬದಲಾಗಿದ್ದೇವೆ.
ಲೇಖನ ಬರೆದ ತಮಗೂ ಹಾಗೂ ಪ್ರಕಟಿಸಿದ ಮಂಗಳ ಮೇಡಂರವರಿಗೂ ಅನಂತ ಧನ್ಯವಾದಗಳು. 🙏🙏🙏