
ಗುರುವೆಂಬೋ ಬೆಳಗು…
ಒಳಗಿರುವುದೆಲ್ಲವೂ
ಕೂಡಿಸಿಟ್ಟುಕೊಂಡದ್ದೇ
ಬುದ್ಧಿ ಬಲಿತಾಗಿನಿಂದ
ಗೊತ್ತಿದ್ದೋ… ಇಲ್ಲದೆಯೋ
ನನಗೆ ನೆನಪಿದೆ
ಕಂಡದ್ದು ಉಂಡದ್ದು
ಮುಟ್ಟಿದ್ದು ಮೂಸಿದ್ದು
ತಟ್ಟಿದ್ದು ಸೆಳೆದದ್ದು
ನಕ್ಕಿದ್ದು ನಗಿಸಿದ್ದು
ಅತ್ತದ್ದು ಅಳಿಸಿದ್ದು..
ಎಲ್ಲ ಒಳಗಿಳಿದು
ಕಡು ಕೆಂಪಗಾಗಿ
ನರನಾಡಿಗಳಿಗೆಲ್ಲ ನುಗ್ಗಿ
ಲೆಕ್ಕಕ್ಕೆ ಸಿಗದಷ್ಟು
ಕತೆಗಳನು ಹೇಳೋ
ನೆನಪಿನ ಕೋಶಗಳಾಗಿ
ಹೆಜ್ಜೆಹಜ್ಜೆಗೂ ಕುರುಹಾಗಿ
ಕೆಣಕುತಿರುವುದೆಲ್ಲವೂ
ಹಿಂದಣ ಹಂಗು…
ಇಂದಲ್ಲ ನಾಳೆ
ಮತ್ತೆ ಯಾವಾಗಲಾದರೂ
ಸಿಕ್ಕೀತು, ದಕ್ಕೀತು
ಎನುವ ಬಯಕೆಗಳೆಲ್ಲ
ಕನವರಿಕೆಗಳಾಗಿ
ನಾಳೆಗಳ ಹಳವಂಡಗಳಾಗಿ
ಅದಾಗಿದ್ದರೆ ಇದಾಗಿದ್ದರೆ
ಎನುವ ರೆಗಳ ಲೋಕವಾಗಿ
ಹಾಗಾದರೆ ಹೀಗಾದರೆ
ಎನುವ ಲೆಕ್ಕಾಚಾರಗಳಾಗಿ
ಆಸೆಗಳಾಗಿ ಮೋಹವಾಗಿ
ನಿರೀಕ್ಷೆಯ ಭಾರವಾದದ್ದೆಲ್ಲಾ
ಮುಂದಣ ಮಾಯೆ…
ಹಿಂದು-ಮುಂದುಗಳ
ಸೆಳೆತದ ಸುಳಿಯೊಳಗೆ
ಸಮಯ ಸರಿದದ್ದು ಗೊತ್ತಾಗಿ
ಎಲ್ಲೋ ಎಡವಟ್ಟಾಯ್ತಲ್ಲ
ಅಯ್ಯೋ ಸಾಕೆನಗೆಂದು
ಜೀವ ಬಸವಳಿದಾಗ…
ಪ್ರಾಣವಾಯುವಿನಂತೆ
ಉಸಿರಾದ ನನ್ನ ಗುರು
ಅರಿವಾಗಿ, ಬೆಳಕಾಗಿ
ಎಚ್ಚರದ ಗಂಟೆಯಾಗಿ
ಇರುವಿಕೆಯ ಬಯಲಾಗಿ
ಕೈಹಿಡಿದ ತಾಯಾಗಿ!