ಗಮ್ಯದೆಡೆಗೆ ಗಮನ
ಮಾನವನ ವ್ಯಕ್ತಿತ್ವ ಆತನ ಬಹಿರಂಗದ ಚಟುವಟಿಕೆಗಳು/ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತದೆ. ಆಚರಣೆಗಳು ಆತನ ಅಂತರಂಗದ ಅರಿವಿನ ನೆಲೆಯ ಬಿಂಬವಾಗಿದ್ದರೆ, ಅಂತರಂಗದ ಅರಿವಿನ ನೆಲೆಯು ಆತನ ಮನಸ್ಸಿನ ಸ್ವಾಸ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ಘನ ವ್ಯಕ್ತಿತ್ವಕ್ಕೆ ಸ್ವಸ್ಥ ಮನಸ್ಸು ಅತ್ಯವಶ್ಯ. ಅಂಥಾ ಸ್ವಸ್ಥ ಮನವನ್ನು ಹೊಂದುವುದು ಹೇಗೆ?
ಆದಯ್ಯ ಶರಣರು “ಸಕಲೇಂದ್ರಿಯಂಗಳಲ್ಲಿ ವಿಕಾರಿಸುವ ಮನವ ಸೆಳೆದು ನಿಂದಾತ ಸುಖಿ, ಪಂಚೇಂದ್ರಿಯಂಗಳಿಚ್ಛೆಯೊಳು ಮನಂಗೊಂಡು ಸುಳಿವಾತ ದುಃಖಿ. ಮನಸ್ಸು ಬಹಿರ್ಮುಖವಾಗಲು ಮಾಯಾಪ್ರಪಂಚಿ, ಮನವಂತರ್ಮುಖವಾದಡವಿರಳ ಜ್ಞಾನಿ, ಮನವು ಮಹದಲ್ಲಿ ನಿಂದಡಾತ ಮುಕ್ತನು. ಮನೋಲಯವಾದಡೆ ಸೌರಾಷ್ಟ್ರ ಸೋಮೇಶ್ವರ ಲಿಂಗದಲ್ಲಿ ಅಭೇದ್ಯನು” ಎಂದಿದ್ದಾರೆ. ಇಂದ್ರಿಯಗಳು ತಮ್ಮಷ್ಟಕ್ಕೆ ತಾವೇ ಏನೂ ಮಾಡಲಾರವು. ಅವು ಏನನ್ನೇ ಮಾಡಬೇಕಾದರೂ, ಏನನ್ನೇ ಗ್ರಹಿಸಬೇಕಾದರೂ ಅವಕ್ಕೆ ಮನಸ್ಸಿನ ಒಡನಾಟ ಬೇಕು. ಮನಸ್ಸು ಕಣ್ಣಿನಲ್ಲಿ ನೆಲೆ ನಿಂತಾಗ ನೋಟ, ಕಿವಿಯಲ್ಲಿ ನೆಲೆ ನಿಂತಾಗ ಶಬ್ಧ, ನಾಲಿಗೆಯಲ್ಲಿ ನಿಂತಾಗ ರುಚಿ, ಚರ್ಮದೊಡನೆ ಬೆರೆತಾಗ ಸ್ಪರ್ಶ, ಮೂಗಿನೊಡನೆ ವ್ಯವಹರಿಸುವಾಗ ವಾಸನೆಗಳನ್ನು ಈ ದೇಹವು ಗ್ರಹಿಸುವುದು. ಸಕಲ ವಿಷಯಗಳ ಗ್ರಹಿಕೆಗೆ ಕಾರಣವಾಗಿರುವ ಮನಸ್ಸು ವಿಕಾರವಾಗಿದ್ದರೆ ಗ್ರಹಿಸಲ್ಪಡುವ ವಿಷಯಗಳು ತಾಮಸದಿಂದ ಕೂಡಿರುತ್ತವೆ. ತಾಮಸ ವಿಷಯಗಳು ಮಾನವನ ಅಧೋಮುಖ ಪ್ರವೃತ್ತಿಗೆ ಕಾರಣವಾಗುತ್ತವೆ. ಆದರೆ ಅದೇ ಮನಸ್ಸು ನಿರ್ವಿಕಾರವಾಗಿದ್ದರೆ ಅದು ಸಾತ್ವಿಕ ವಿಷಯಗಳನ್ನು ಮಾತ್ರ ಗ್ರಹಿಸುತ್ತದೆ, ಸಾತ್ವಿಕ ವಿಷಯಗಳು ಮಾನವನ ಊರ್ಧ್ವಮುಖ ಪ್ರವೃತ್ತಿಗೆ ಕಾರಣವಾಗುತ್ತವೆ. ವಿಕಾರಿಸುವ ಮನವನ್ನು ಸೆಳೆದು ನಿಲ್ಲಿಸಿ ಅದನ್ನು ನಿರ್ವಿಕಾರವಾಗಿಸಿ ಪ್ರಸಾದಮಯ ಮಾಡಿಕೊಂಡು ಸಮಚಿತ್ತವನ್ನು ಹೊಂದಿದಾಗ ನಮಗೆ ಶಾಂತಿ ಸಮಾಧಾನ ಲಭಿಸುವುದು. ಮನಸ್ಸು ಯಾವಾಗ ಕೇವಲ ಬಹಿರ್ಮುಖವಾಗಿ ಲೌಕಿಕ ಚಿಂತೆಗಳಲ್ಲೇ ಮುಳುಗಿದಾಗ ಬರೀ ದುಃಖ ನೋವುಗಳೇ ತುಂಬಿರುತ್ತವೆ. ಅದೇ ಮನಸ್ಸು ಅಂತರ್ಮುಖವಾಗಿ ತನ್ನನ್ನೇತಾನು ವಿವೇಚನೆಗಳಿಗೊಳಪಡಿಸಿಕೊಂಡಾಗ ತನ್ನೊಳಗೇ ಅವಿರಳವಾಗಿ ಹುದುಗಿರುವ ಜ್ಞಾನವು ಅನುಭಾವವಾಗಿ ಹೊರಹೊಮ್ಮುವುದು. ಮನವು ತನ್ನ ಸ್ವಭಾವತಃ ಹೊಯ್ದಾಟಗಳನ್ನು ಕಳೆದುಕೊಂಡು ನಿಶ್ಚಲವಾದರೆ ಅದೇ ಮುಕ್ತಿ, ಮನವು ನಿಶ್ಚಲವನ್ನೂ ಮೀರಿ ಸಂಪೂರ್ಣವಾಗಿ ಲಯವಾಗಿ ಲಿಂಗದೊಡಲು ಸೇರಿದರೆ ಆತನೇ ಲಿಂಗಸ್ವರೂಪಿ, ಆತನೇ ಶರಣನೆನಿಸುವನು.
ಶರಣೆ ಲಿಂಗಮ್ಮ ತಾಯಿ ಆಧ್ಯಾತ್ಮದ ತುಟ್ಟತುದಿಯನ್ನು ಏರಿದ ಹನ್ನೆರಡನೇ ಶತಮಾನದ ಮಹಾಶರಣೆ. ಧರ್ಮಗುರು ಬಸವಣ್ಣನವರಿಗೆ ಸರಿಸಮಾನವಾಗಿ ಚಿಂತಿಸಬಲ್ಲ ಶಕ್ತಿಯನ್ನು ಪಡೆದುಕೊಂಡಂಥ ಶರಣೆ. ಇವರ ಪತಿ ಹಡಪದ ಕಾಯಕ ಮಾಡುವ ಅಪ್ಪಣ್ಣ. ಶರಣ ಹಡಪದ ಅಪ್ಪಣ್ಣ ಬಸವಣ್ಣನವರ ಆಪ್ತಕಾರ್ಯದರ್ಶಿ. ಶರಣ ದಂಪತಿಗಳು ಇಹಲೋಕದಲ್ಲಿದ್ದು ಅಲೌಕಿಕ ದಾಂಪತ್ಯ ನಡೆಸಿದವರು. ಶರಣೆ ಲಿಂಗಮ್ಮ ತಾಯಿ ಆಧ್ಯಾತ್ಮ ಸಾಧನೆಗೆ ಮನಸ್ಸನ್ನು ಹೇಗೆ ಅಣಿಗೊಳಿಸಬೇಕು ಎಂದು ತಮ್ಮ ವಚನಗಳಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
“ಸಾಸಿರದಳಕಮಲವೆಂದಡೆ ಸೂಸಿಕೊಂಡಿರುವ ಮನ. ಪವನವೆಂದಡೆ ಎಲ್ಲೆಡೆಯಲ್ಲಿ ಸೂಸಿ ಆಡುವಂತಹದು. ಬಿಂದುವೆಂದಡೆ ಆಗುಮಾಡುವಂತಹದು. ಈ ಮನ ಪವನ ಬಿಂದು ಮೂರನು ಒಡಗೂಡಿ ನೋಡಲು, ಪರಂಜ್ಯೋತಿಪ್ರಕಾಶದಂತಹ ಬೆಳಗೆ ಎನ್ನ ಕಂಗಳ ಮುಂದೆ ನಿಂದಿತ್ತು. ಆ ಮಹಾಬೆಳಗನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ, ಎನ್ನಂಗದ ಒಳಹೊರಗೆ ಪರಿಪೂರ್ಣವಾಗಿದ್ದಿತ್ತು ಕಾಣಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ, ನಿಮ್ಮ ಪಾದಕರುಣದಿಂದ.”
ದೇಹದಲ್ಲಿ ಮನಸ್ಸು ಉತ್ಪತ್ತಿ ಸ್ಥಾನ ಸಹಸ್ರಾರಚಕ್ರ (ಸಾಸಿರದಳಕಮಲ) ಎಂದು ಈ ವಚನದಲ್ಲಿ ಲಿಂಗಮ್ಮ ತಾಯಿ ತಿಳಿಸುತ್ತಾರೆ. ಮನಸ್ಸಿನ ಸ್ಥಾನವನ್ನು ಇದುವರೆಗೂ ಯಾರೂ ಸರಿಯಾಗಿ ತಿಳಿಸಿದಂತೆ ಕಾಣುವುದಿಲ್ಲ. ಆದರೆ ಅದರ ಸ್ಥಾನ ಸಹಸ್ರಾರ ಎಂದು ಈ ವಚನದಲ್ಲಿ ತಿಳಿಸಿದ್ದಾರೆ. ಮನಸ್ಸು ಎಲ್ಲೆಡೆ ಹರಿದಾಡಿದರೂ ಅದರ ಪ್ರಮುಖ ನೆಲೆ ಸಹಸ್ರಾರ. ದೇಹದ ಒಳಹೊರಗೆ ನಿರಂತರ ಚಲಿಸುವ ವಾಯು, ದೇಹೇಂದ್ರಿಯಗಳ ಮೂಲಕ ಮನಸ್ಸು ಸೇರಿ ಅನೇಕ ಕಾರ್ಯ ಚಟುವಟಿಕೆಗಳಲ್ಲಿ ನಿರತವಾಗುವುದು, ಇದೇ ಬಿಂದು. ಮನಸ್ಸು, ದೇಹದಲ್ಲಿ ನಿರಂತರ ಸುಳಿದಾಡುವ ಗಾಳಿ ಹಾಗೂ ಚೈತನ್ಯಾತ್ಮಕ ಶಕ್ತಿ ಇವು ಮೂರೂ ಒಂದೇ ನೆಲೆಯಲ್ಲಿ ಕೇಂದ್ರೀಕೃತವಾದಲ್ಲಿ ಪರಂಜ್ಯೋತಿ ಪ್ರಕಾಶದ ಬೆಳಗು ಇಷ್ಟಲಿಂಗದಲ್ಲಿ ಕಾಣಬರುವುದು, ಆ ಬೆಳಗಿನಲ್ಲಿ ತಲ್ಲೀಯವಾದಡೆ ನಮ್ಮ ಒಳಗೂ ಹೊರಗೂ ಬೆಳಗಿನ ಬಟ್ಟೆ ಉಟ್ಟಂತಾಗುವುದೆಂದು ತಿಳಿಸಿದ್ದಾರೆ.
ಒಂದು ಬಿಳಿಯ ವಸ್ತ್ರ ಶುದ್ಧವಾಗಿರಬೇಕಾದರೆ ಅದು ಕೊಳಚೆ, ಕಸ, ಹೊಗೆ ಮುಂತಾದ ಅಶುದ್ಧತೆಗಳಿಂದ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ, ಹಾಗೆಯೇ ಮನವು ಮಹದಲ್ಲಿ ನಿಲ್ಲಬೇಕಾದರೆ ಅದು ನಿರ್ಮಲವಾಗಿರಬೇಕು ಜಗದ ಕೊಳಕು ಅದಕ್ಕಂಟಬಾರದು. ಇದಕ್ಕೆ ಮನವು ಅಧೋಮುಖವಾಗಿ ಹರಿಯದೆ ಊರ್ಧ್ವಮುಖಿಯಾಗಿ ಉನ್ಮನವಾಗಬೇಕು. ಶರಣೆ ಲಿಂಗಮ್ಮ ತಾಯಿಯವರು-
“ಬಟ್ಟ ಬಯಲಲ್ಲಿ ಒಂದು ಶರಧಿ ಹುಟ್ಟಿತ್ತು. ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು. ಆ ಕಮಲದ ನೆಲೆಯ ಕಾಣಲರಿಯದೆ ತೊಳಲಿ ಬಳಲಿ, ಜಗದೊಳಗೆ ನಚ್ಚುಮಚ್ಚಿಗೊಳಗಾಗಿ, ಚುಚ್ಚಳ ಪೂಜೆಗೆ ಸಿಲ್ಕಿ, ಕುಲಕೆ ಛಲಕೆ ಕೊಂದಾಡಿ, ಭವಕ್ಕೆ ಗುರಿಯಾಗುವ ಮನುಜರ ಕಂಡು ನಾಚಿತ್ತೆನ್ನ ಮನವು. ಆ ಮನದ ಬೆಂಬಳಿಗೊಂಡು ಹೋದವರೆಲ್ಲ ಮರುಳಾಗಿ ಹೋದರು. ಇದ ನೋಡಿ ನಾನು ಬಟ್ಟಬಯಲಲ್ಲಿ ನಿಂದು ನೋಡಿದಡೆ, ಶರಧಿ ಬತ್ತಿತ್ತು ಕಮಲ ಕಾಣಬಂದಿತ್ತು. ಆ ಕಮಲ ವಿಕಾಸವಾಯಿತ್ತು ಪರಿಮಳವೆಂಬ ವಾಸನೆ ತೀಡಿತ್ತು. ಆ ವಾಸನೆವಿಡಿದು ಜಗದಾಸೆಯ ಹಿಂಗಿ ಮಾತು ಮಥನವ ಕೆಡಿಸಿ, ಮಹಾಜ್ಯೋತಿಯ ಬೆಳಗಿನಲಿ ಓಲಾಡುವ ಶರಣರ, ಆಸೆ ರೋಷ ಪಾಶಕ್ಕೊಳಗಾದ ಈ ಜಗದ ಹೇಸಿಗಳೆತ್ತಬಲ್ಲರು, ಈ ಮಹಾಶರಣರ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ?” ಎಂದು ಮನಸ್ಸನ್ನು ಭವದಿಂದ ವಿಮುಖವಾಗಿಸುವ ಮಾರ್ಗವನ್ನು ಅರುಹಿದ್ದಾರೆ. ಲೌಕಿಕ ವಿಷಯಾಸಕ್ತಿಯನ್ನು ಕಳೆದುಕೊಂಡ ಶರಣನ ತನುವದುವೇ ಬಟ್ಟಬಯಲು ಅದು ನಿರ್ಮಲತನು, ಆ ನಿರ್ಮಲ ತನುವೆಂಬ ಬಯಲೊಳಗೊಂದು ನಿಶ್ಚಿಂತವಾದ ಮನವೆಂಬ ಸರೋವರ, ಆ ಸರೋವರದಲ್ಲಿ ಆಗಾಗ ಅಪ್ಪಳಿಸುವ ಅಲೆಗಳಿಲ್ಲ, ಅದು ಸದಾ ನಿಶ್ಚಲ, ನಿರಾಳ. ಆ ನಿಶ್ಚಿಂತ ನಿರಾಳ ಸರೋವರದ ಮಧ್ಯದಲ್ಲಿ ಪ್ರಸನ್ನ ಪ್ರಸಾದವೆಂಬ ಸುಗಂಧ ಬೀರುವ ಕಮಲ. ನಮ್ಮೊಳಗೇ ಕಂಡು ಅನುಭವಿಸಬಹುದಾದ ಇಂಥಾ ಪ್ರಸನ್ನ ಪ್ರಸಾದದ ನೆಲೆಯನರಿಯದೇ ಅದನ್ನರಸಿಕೊಂಡು ಜಗದ ಗುಡಿಗಳನ್ನೆಲ್ಲಾ ಸುತ್ತಿ, ಬೇಡಿ, ಬಳಲಿ ಬೆಂಡಾದವರನ್ನು ಕಂಡು ನೊಂದುಕೊಳ್ಳುತ್ತಾರೆ ಲಿಂಗಮ್ಮತಾಯಿ.
ಮನವೆಂಬ ಮರ್ಕಟ ತನ್ನ ಮರ್ಕಟ ಬುದ್ಧಿಯನ್ನು ಹಿಂಗಿ ಶಾಂತವಾಗಿ ಒಂದೆಡೆ ನಿಲ್ಲುವಂತೆ ಮಾಡುವುದು ನಮ್ಮಂಥವರಿಗೆ ನಿಜಕ್ಕೂ ಸವಾಲೇ ಸರಿ. ಆದರೆ ಶರಣರು ಅದನ್ನು ಬಹಳ ಸುಲಭವಾಗಿ ಸಾಧಿಸಿದರು. ಅವರು ಮನಸ್ಸನ್ನು ಶಾಂತಗೊಳಿಸಲು ಮಾಡಿದುದೇನೆಂದರೆ, ಮನಸ್ಸು ಅತ್ತಲಿತ್ತ ಹರಿಯದಂತೆ ಇಂದ್ರಿಯಗಳ ಬಾಗಿಲಲ್ಲಿ ಲಿಂಗಗಳನ್ನು ನೆಲೆಗೊಳಿಸಿದರು. ಆ ಲಿಂಗದ ಮೂಲಕವೇ ಪ್ರತಿಯೊಂದು ಪದಾರ್ಥವೂ ದೇಹವನ್ನು ಪ್ರವೇಶಿಸುವುದರಿಂದ ಅದು ಲಿಂಗಾರ್ಪಿತವಾಗಿ ಪದಾರ್ಥ ರೂಪದಿಂದ ಪಲ್ಲಟಗೊಂಡು ಪ್ರಸಾದವಾಗುವುದು. ಅಂಥಾ ಪ್ರಸಾದವನ್ನು ಸವಿದಾತನ ಮನ ಸದಾ ನಿಶ್ಚಲವಾಗಿರುವುದು. ಶರಣ ದೇಶಿಕೇಂದ್ರ ಸಂಗನಬಸವಯ್ಯನವರು-
“ನಾಸಿಕದಲ್ಲಿ ಆಚಾರಲಿಂಗವನರಿದರ್ಪಿಸಿಕೊಂಡು ಅನ್ಯವಾಸನೆಯ ನೆನೆವ ಮನ ಶೂನ್ಯ ಕಾಣಾ. ಜಿಹ್ವೆಯಲ್ಲಿ ಗುರುಲಿಂಗವನರಿದರ್ಪಿಸಿಕೊಂಡು ಅನ್ಯರುಚಿಯ ಭಾವಿಪ ಮನ ಶೂನ್ಯ ಕಾಣಾ. ನೇತ್ರದಲ್ಲಿ ಶಿವಲಿಂಗವನರಿದರ್ಪಿಸಿಕೊಂಡು ಅನ್ಯದೃಷ್ಟಿಗೆಳಸುವ ಮನವಿರಹಿತ ಕಾಣಾ. ತ್ವಕ್ಕಿನಲ್ಲಿ ಜಂಗಮಲಿಂಗವನರಿದರ್ಪಿಸಿಕೊಂಡು ಅನ್ಯಸ್ಪರ್ಶನಕ್ಕಾಸ್ಪದವಾದ ಮನ ನಾಸ್ತಿ ಕಾಣಾ. ಶೋತ್ರದಲ್ಲಿ ಪ್ರಸಾದಲಿಂಗವನರಿದರ್ಪಿಸಿಕೊಂಡು ಅನ್ಯಶಬ್ದರಮಿಸಲು ಮನವಿಲ್ಲ ಕಾಣಾ. ಹೃದಯದಲ್ಲಿ ಮಹಾಲಿಂಗವನರಿದರ್ಪಿಸಿಕೊಂಡು ಅನ್ಯಪರಿಣಾಮಕ್ಕೆಳಸುವ ಮನವಿರಹಿತ ಕಾಣಾ. ಕಾಯ ಕಾರಣ ಪ್ರಾಣಶೂನ್ಯ ಲಿಂಗಮಯ ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಪ್ರಸಾದಿ” ಎಂದು ಆರು ಲಿಂಗಗಳನ್ನು ಆರು ಸ್ಥಾನಗಳಲ್ಲಿ ಅಳವಡಿಸಿಕೊಳ್ಳುವುದರ ಕುರಿತು ವಿವರವಾಗಿ ತಿಳಿಸಿದ್ದಾರೆ.
ಮನಸ್ಸು ನೀರಿನಂತೆ, ಸ್ವಾಭಾವಿಕವಾಗಿ ಅಧೋಮುಖವಾಗಿ ಹರಿಯುವುದು, ಅದೇ ನೀರನ್ನು ಮೇಲೆತ್ತಲು ಹೆಚ್ಚಿನ ಶ್ರಮಬೇಕಾಗುವುದು. ಹಾಗೇ ಮನಸ್ಸನ್ನು ಅಧೋಮುಖವಾಗಿ ಹರಿಯಗೊಡದೆ ಊರ್ಧ್ವಮುಖವಾಗಿ ಚಲಿಸುವಂತೆ ಮಾಡಲು ಶಿವಜ್ಞಾನ, ಶಿವಚಿಂತನೆಗಳಿಂದ ಮಾತ್ರ ಸಾಧ್ಯ. “ಮನವೆಂದಡೆ ಮರವೆಗೆ ಒಳಗುಮಾಡಿತ್ತು. ತನುವೆಂದಡೆ ತಾಮಸಕ್ಕೊಳಗುಮಾಡಿತ್ತು. ಧನವೆಂದಡೆ ಆಶೆಯೆಂಬ ಪಾಶಕ್ಕೊಳಗುಮಾಡಿತ್ತು. ಇವೀಸು ಮಾಯಾಪಾಶವೆಂದು ಬಿಟ್ಟು ಹುಟ್ಟನರಿದು, ಬಟ್ಟಬಯಲಲ್ಲಿ ನಿಂದು, ಚಿತ್ತನಿರ್ಮಲನಾಗಿ ನೋಡಿ ಕಂಡ ಶರಣಂಗೆ ತನುವೆ ಗುರುವಾಯಿತ್ತು. ಮನವೆ ಘನವಾಯಿತ್ತು, ಧನವೆ ಜಂಗಮವಾಯಿತ್ತು. ಈ ತ್ರಿವಿಧವನು ತ್ರಿವಿಧಕಿತ್ತು, ತಾ ಬಯಲದೇಹಿಯಾದನಯ್ಯಾ ಆ ಮಹಾಶರಣನು. ಇದರ ನೆಲೆಯನರಿಯದೆ, ಆ ಮನದ ಬೆಂಬಳಿಗೊಂಡಾಡಿದವರೆಲ್ಲ ನರಗುರಿಗಳಾದರಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.” ಮನವು ಮರವೆಗೆ ಒಳಗಾದಾಕ್ಷಣ ತನುವಿನಲ್ಲಿ ತಾಮಸ ಪ್ರವೃತ್ತಿ ಮನೆಮಾಡುತ್ತದೆ, ಧನ ಬಂಧನಕ್ಕೀಡುಮಾಡುತ್ತದೆ. ಶಿವಜ್ಞಾನದಿಂದ ಯಾವಾಗ ಮನಸ್ಸು ಊರ್ಧ್ವಮುಖಿಯಾಗುವುದೋ ಆಗ ತನು ಗುರುವಾಗುವದು, ಧನ ಜಂಗಮಕ್ಕೆ ಸವೆಯುವುದು. ತ್ರಿವಿಧಕ್ಕೆ ತ್ರಿವಿಧವನ್ನಿತ್ತಾಗ ಮಾನವನು ಶರಣನಾಗಿ ಬಯಲದೇಹಿಯಾಗುವನು.
“ಮನವ ನಿರ್ಮಲವ ಮಾಡಿದೆ. ಬೆಳಗಿದ ದರ್ಪಣದಂತೆ ಚಿತ್ತ ಶುದ್ಧವಾದಲ್ಲಿ, ನೀವು ಅಚ್ಚೊತ್ತಿದ್ದ ಕಾರಣದಿಂದ ನಿಮ್ಮ ಪಾದವಿಡಿದು ನಾನು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ”. ಮನದಲ್ಲಿ ಲೌಕಿಕ ಕೊಳಕು ತುಂಬಿದ್ದಾಗ ದೇಹವು ಶಿವಾಲಯವಾಗುವುದೆಂತು? ಎಲ್ಲಾ ಕೊಳಕನ್ನು ತೊಳೆದು ಅಥವಾ ಕೊಳಕನ್ನು ಮೆತ್ತಿಕೊಳ್ಳದೆ ಮನವು ನಿರ್ಮಲವಾಗಿರಲು ಅಲ್ಲಿ ಶಿವನ ನಿವಾಸ ಉಂಟಾಗುವುದು. “ಅಯ್ಯಾ, ಏನೂ ಇಲ್ಲದ ಬಯಲ ದೇಹಕ್ಕೆ ತಾಮಸವ ಮುಂದುಮಾಡಿ, ಹೀಗೆ ಕೆಟ್ಟಿತ್ತಲ್ಲಾ ಜಗವೆಲ್ಲ. ಅದೇನು ಕಾರಣವೆಂದಡೆ, ಸುಖದ ಮುಖ ಕಂಡಿತ್ತು; ಜಗದ ರಚನೆಯ ನೋಡಿತ್ತು; ಇಚ್ಫೆಯ ಮೆಚ್ಚಿತ್ತು; ಮನವ ನಿಶ್ಚಯವ ಮಾಡದು; ಅಂಗಸುಖವ ಬಯಸಿತ್ತು; ಕಂಗಳ ಕಾಮವನೆ ಮುಂದುಮಾಡಿತ್ತು ಇದರಿಂದ ಲಿಂಗವ ಮರೆಯಿತ್ತು; ಜಂಗಮವ ತೊರೆಯಿತ್ತು. ಇದು ಕಾರಣದಿಂದ ಜಗದ ಮನುಜರು ಭವಬಂಧನಕ್ಕೊಳಗಾದರು. ಇವೆಲ್ಲವನು ಹಿಂಗಿಸಿ, ನಮ್ಮ ಶಿವಶರಣರು ಲಿಂಗದಲ್ಲಿಯೆ ಬೆರೆದರು. ಜಂಗಮಪ್ರಾಣವೆಂದು ಪಾದೋದಕ ಪ್ರಸಾದವ ಕೊಂಡು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು”. ಅರಿತು ನೋಡಿದರೆ ಎಲ್ಲಾ ಬಯಲು, ನಾನೆಂಬುವುದಿಲ್ಲ ನನ್ನದೆಂಬುವುದಿಲ್ಲ. ಅರಿಯದ ಕಾರಣ ಈ ಅನಂತ ಜಗತ್ತು ವಿಘಟನೆಗೊಂಡು, ವಿರೂಪಗೊಂಡಂತೆ ನಮಗೆ ಕಾಣುತ್ತಿದೆ. ತಾಮಸದಿಂದಾಗಿ, ಭ್ರಮೆಯಿಂದಾಗಿ ಜಗದ ಜನರು ವಾಸ್ತವವನ್ನು ಮರೆತು ಭವಿಗಳಾಗಿ ಬಂಧನಕ್ಕೊಳಗಾಗಿದ್ದಾರೆ. ಶರಣರು ಭ್ರಮೆ ತಾಮಸಗಳು ಅಳಿದು ಲಿಂಗವನೊಡಗೂಡಿದವರು.
ಅತ್ಯಂತ ಸರಳವಾಗಿ ಲಿಂಗಮ್ಮ ತಾಯಿಯವರು ದೇವನನ್ನು ತನ್ನೊಳಗೆ ಅನುಭವಿಸುವ ಸಾಧಕನ ಸ್ಥಿತಿಯನ್ನು ಬಹಳ ಸುಂದರವಾಗಿ ಈ ವಚನದಲ್ಲಿ ಚಿತ್ರಿಸಿದ್ದಾರೆ: “ಅಯ್ಯಾ, ಈ ಮಹಾಘನವ ಕಾಂಬುದಕ್ಕೆ ಹಸಿವು ಕೆಡಬೇಕು; ತೃಷೆಯಡಗಬೇಕು; ವ್ಯಸನ ನಿಲ್ಲಬೇಕು; ನಿದ್ರೆ ಹರಿಯಬೇಕು; ಜೀವನ ಬುದ್ಧಿ ಹಿಂಗಬೇಕು; ಮನ ಪವನ ಬಿಂದು ಒಡಗೂಡಬೇಕು; ಚಿತ್ತ ಒತ್ತಟ್ಟಿಗೆ ಹೋಗದಿರಬೇಕು. ಹೊತ್ತು ಹೊತ್ತಿಗೆ ಉತ್ತರವನೇರಿ ಬಿಚ್ಚು ಬೇರಿಲ್ಲದೆ ಲಿಂಗದೊಳಗೆ ಅಚ್ಚೊತ್ತಿದಂತೆ ಬೆರೆದಡೆ, ಕತ್ತಲೆ ಹರಿವುದು, ಮರವೆ ಹಿಂಗುವುದು, ನಿದ್ರೆ ಹರಿವುದು, ಹಸಿವು ಕೆಡುವುದು, ತೃಷೆಯಡಗುವುದು, ವ್ಯಸನ ನಿಲುವುದು. ಇವೆಲ್ಲವನು ಹಿಂಗಿಸಿ ತಾ ಲಿಂಗವ್ಯಸನಿಯಾಗಬಲ್ಲಡೆ, ಮುಂದೆ ಮಹಾಮಂಗಳದ ಬೆಳಗು ಕಾಣಿಪುದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.”
ಈ ವಚನ ಮೊದಲಾರ್ಧದಲ್ಲಿ ಸಾಧಕನು ತನ್ನನ್ನು ತಾನು ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವ ಮೂಲಕ ಆಧ್ಯಾತ್ಮ ಪಥಕ್ಕೆ ಅಡಿಯಿಡಬೇಕು ಎಂದು ತಿಳಿಸುತ್ತದೆ. ತನ್ಮೂಲಕ ಅಧೋಮುಖಿಯಾದ ಮನವು ಊರ್ಧ್ವಮುಖಿಯಾಗಿ ಅಂತರಂಗದ ಸುವಿಚಾರಗಳು ಬಹಿರಂಗದ ಸದಾಚಾರಗಳಾಗಿ ವ್ಯಕ್ತವಾಗಿ ಆ ಸದಾಚಾರವೇ ಲಿಂಗವಾದಾತನ ಅನುಭಾವದೊಡಗೂಡಿ ಎಲ್ಲಾ ಚಟುವಟಿಕೆಗಳೂ ಸ್ವಯಂನಿಯಂತ್ರಣಕ್ಕೆ ಬರುವವು ಎಂದು ಅತ್ಯಂತ ಸರಳವಾಗಿ ತಿಳಿಸಿದ್ದಾರೆ. ಆದರೆ ಅಂತರಂಗ ಮತ್ತು ಬಹಿರಂಗಗಳ ಸಮೀಕರಣ ಅಷ್ಟು ಸರಳವಾದುದಲ್ಲವೆಂಬುದನ್ನು ನಾವು ಅರಿಯಬೇಕು. ಅಂತರಂಗ ಬಹಿರಂಗ ಸಮೀಕರಣವಾಗದ ಹೊರತು ಕೇವಲ ಧ್ಯಾನ, ಪ್ರಾಣಾಯಾಮ ಮುಂತಾದ ಮಾರ್ಗಗಳಿಂದ ಶಿವನೊಲುಮೆ ಸಾಧ್ಯವಾಗದೆಂಬುದು ಶರಣರ ಗಟ್ಟಿ ನಿಲುವು.
ಮನವನ್ನು ಉನ್ಮನವಾಗಿ ಏರಿಸಲು ಶರಣೆ ಲಿಂಗಮ್ಮ ತಾಯಿಯವರು ಅನೇಕ ವಚನಗಳಲ್ಲಿ ಮಾಡಿರುವ ಮಾರ್ಗದರ್ಶನವನ್ನು ನೋಡಬಹುದು:
“ಮದ ಮತ್ಸರ ಬಿಡದು, ಮನದ ಕನಲು ನಿಲ್ಲದು, ಒಡಲಗುಣ ಹಿಂಗದು. ಇವ ಮೂರನು ಬಿಡದೆ ನಡೆಸುವನ್ನಕ್ಕ ಘನವ ಕಾಣಬಾರದು. ಘನವ ಕಾಂಬುದಕ್ಕೆ ಮದಮತ್ಸರವನೆ ಬಿಟ್ಟು, ಮನದ ಕನಲನೆ ನಿಲಿಸಿ, ಒಡಲಗುಣ ಹಿಂಗಿ, ತಾ ಮೃಢರೂಪಾದಲ್ಲದೆ ಘನವ ಕಾಣಬಾರದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ”.
“ತನುವ ಕರಗಿಸಿ, ಹರಿವ ಮನವ ನಿಲಿಸಿ, ಅಂಗಗುಣವ ಅಳಿದು, ಲಿಂಗಗುಣವ ನಿಲಿಸಿ, ಭಾವವಳಿದು, ಬಯಕೆ ಸವೆದು, ಮಹಾದೇವನಾದ ಶರಣರ ಜಗದ ಮಾನವರೆತ್ತ ಬಲ್ಲರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ?” “ಮನವ ನಿಲಿಸಿಹೆನೆಂದು, ಆ ಮನದ ನೆಲೆಯ ಕಾಣದೆ, ಅರುಹು ಮರವೆಗೊಳಗಾಗಿ, ಕಳವಳವ ಮುಂದುಮಾಡಿ, ಚಿಂತೆ ಸಂತೋಷವನೊಡಲುಮಾಡಿ, ಭ್ರಾಂತುಗೊಂಡು ತಿರುಗುವ ಮನುಜರಿರಾ, ನೀವು ಕೇಳಿರೊ. ಮನವ ನಿಲಿಸುವುದಕ್ಕೆ ಶರಣರ ಸಂಗಬೇಕು, ಜನನಮರಣವ ಗೆಲಬೇಕು. ಗುರುಲಿಂಗಜಂಗಮದಲ್ಲಿ ವಂಚನೆಯಿಲ್ಲದೆ, ಮನಸಂಚಲವ ಹರಿದು, ನಿಶ್ಚಿಂತವಾಗಿ ನಿಜವ ನಂಬಿ ಚಿತ್ತ ಸುಯಿದಾನವಾದಲ್ಲದೆ, ಮನದೊಳಗೆ ಲಿಂಗವು ಅಚ್ಚೊತ್ತಿದಂತಿರದೆಂದರು ಬಸವಣ್ಣನ ಶರಣರು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.”
“ಕಂಡು ಕೇಳಿಹೆನೆಂಬ ದಂದುಗವ ಬಿಟ್ಟು, ನೋಡಿ ನುಡಿವೆನೆಂಬ ನೋಟವ ನಿಲಿಸಿ, ಮಾಡಿ ಕೂಡಿಹೆನೆಂಬ ಮನ ನಿಂದು, ತನುವ ಮರೆದು ತಾ ನಿಜಸುಖಿಯಾದಲ್ಲದೆ ಘನವ ಕಾಣಬಾರದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.”
“ಮನವ ನಿರ್ಮಲವ ಮಾಡಿಹೆನೆಂದು ತನುವ ಕರಗಿಸಿ ಮನವ ಬಳಲಿಸಿ ಕಳವಳಿಸಿ, ಕಣ್ಣುಕಾಣದ ಅಂಧಕರಂತೆ ಮುಂದುಗಾಣದೆ, ಸಂದೇಹದಲ್ಲಿ ಮುಳುಗಿರುವ ಮನುಜರಿರಾ, ನೀವು ಕೇಳಿರೊ, ಹೇಳಿಹೆನು. ಮನವ ನಿರ್ಮಲವ ಮಾಡಿ, ಆ ಘನವ ಕಾಂಬುದಕ್ಕೆ ಆ ಮನವೆಂತಾಗಬೇಕೆಂದಡೆ ಗಾಳಿಬೀಸದ ಜಲದಂತೆ, ಮೋಡವಿಲ್ಲದ ಸೂರ್ಯನಂತೆ, ಬೆಳಗಿದ ದರ್ಪಣದಂತೆ ಮನ ನಿರ್ಮಲವಾದಲ್ಲದೆ ಆ ಮಹಾಘನವ ಕಾಣಬಾರದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ”.
“ಮನವ ಗೆದ್ದೆಹೆನೆಂದು, ತನುವ ಕರಗಿಸಿ ಕಾಯವ ಮರುಗಿಸಿ, ನಿದ್ರೆಯ ಕೆಡಿಸಿ ವಿದ್ಯೆಯ ಕಲಿತೆಹೆನೆಂಬ ಬುದ್ಧಿಹೀನರಿರಾ ನೀವು ಕೇಳಿರೋ, ನಮ್ಮ ಶರಣರು ಮನವನೆಂತು ಗೆದ್ದಹರೆಂದಡೆ ಕಾಮ ಕ್ರೋಧವ ನೀಗಿ, ಲೋಭ ಮೋಹ ಮದ ಮತ್ಸರವ ಛೇದಿಸಿ, ಆಸೆ ರೋಷವಳಿದು, ಜಗದ ಪಾಶವ ಬಿಟ್ಟು, ಆ ಮರುಗಿಸುವ ಕಾಯವನೆ ಪ್ರಸಾದಕಾಯವ ಮಾಡಿ ಸಲಹಿದರು. ಕೆಡಿಸುವ ನಿದ್ರೆಯನೆ ಯೋಗಸಮಾಧಿಯ ಮಾಡಿ, ಸುಖವನೇಡಿಸಿ ಜಗವನೆ ಗೆದ್ದ ಶರಣರ ಬುದ್ಧಿಹೀನರೆತ್ತಬಲ್ಲರೊ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ?”
ತನುವೆಂಬ ಹುತ್ತದಲ್ಲಿ ಮನವೆಂಬ ಸರ್ಪ ಹೆಡೆಯನುಡುಗಿಕೊಂಡಿರಲು ಜ್ಞಾನಶಕ್ತಿ ಬಂದು ಎಬ್ಬಿಸಲು, ಉರಿ ಭುಗಿಲೆನುತ್ತ ಹೆಡೆಯನೆತ್ತಿ ಊರ್ಧ್ವಕ್ಕೇರಲು, ಅಷ್ಟಮದವೆಲ್ಲ ಹಿಟ್ಟುಗುಟ್ಟಿದವು; ಕರಣಂಗಳೆಲ್ಲ ಉರಿದುಹೋದವು. ಇದ್ದ ಶಕ್ತಿಯನೆ ಕಂಡು, ಮನ ನಿಶ್ಚಯವಾದುದನೆ ನೋಡಿ, ಪಶ್ಚಿಮದ ಕದವ ತೆಗೆದು, ಬಟ್ಟಬಯಲ ಬೆಳಗಿನೊಳಗೆ ಓಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
ಸ್ವಸ್ಥ ಮನದಿಂದ – ಸ್ವಸ್ಥ ಕಾಯ, ಸ್ವಸ್ಥ ಕಾಯದಿಂದ – ಸುವಿಚಾರ, ಸುವಿಚಾರದಿಂದ – ಸದಾಚಾರ, ಸದಾಚಾರದಿಂದ – ಸದ್ಭಾವ, ಸದ್ಭಾವ ನಿರ್ಭಾವವಾಗುವುದೇ ಅಂಗ -ಲಿಂಗ ಸಮರಸ.
Comments 13
Vinay Kanchikere
Jul 7, 2019ಮನದ ಗಮನವನ್ನು ಗಮ್ಯದೆಡೆಗೆ ತಿರುಗಿಸುವುದು ಹೇಗೆ ಎಂಬ ಅಂಶ ಲೇಖನದಲ್ಲಿ ನಾಪತ್ತೆಯಾಗಿದೆ. ಇಡೀ ಲೇಖನದಲ್ಲಿ ನಾನು ಅದನ್ನೇ ಹುಡುಕುತ್ತಿದ್ದೆ…… ಮುಂದಿನ ಲೇಖನದಲ್ಲಿ ತಿಳಿಸಿಕೊಡಿ ಸರ್.
Mariswamy Gowdar
Jul 9, 2019ತನ್ಮೂಲಕ ಅಧೋಮುಖಿಯಾದ ಮನವು ಊರ್ಧ್ವಮುಖಿಯಾಗಿ ಅಂತರಂಗದ ಸುವಿಚಾರಗಳು ಬಹಿರಂಗದ ಸದಾಚಾರಗಳಾಗಿ ವ್ಯಕ್ತವಾಗಿ ಆ ಸದಾಚಾರವೇ ಲಿಂಗವಾದಾತನ ಅನುಭಾವದೊಡಗೂಡಿ ಎಲ್ಲಾ ಚಟುವಟಿಕೆಗಳೂ ಸ್ವಯಂನಿಯಂತ್ರಣಕ್ಕೆ ಬರುವವು ಎಂದು ಅತ್ಯಂತ ಸರಳವಾಗಿ ತಿಳಿಸಿದ್ದಾರೆ…
ಸರಳವಾಗಿ ತಿಳಿಸಿರುವುದನ್ನು ಸರಳವಾಗಿ ಪಾಲಿಸುವುದು ಹೇಗೆ?
ದಯವಿಟ್ಟು ತಿಳಿಸಿಕೊಡಿ ಸರ್.
Sushma karaga
Jul 9, 2019ಲಿಂಗಮ್ಮ ತಾಯಿಯವರ ಅನುಭಾವ ಚೆನ್ನಾಗಿ ವಿವರಿಸಿದ್ದೀರಿ, ಅಣ್ಣಾ. ಧನ್ಯವಾದಗಳು.
Giridhar Tonde
Jul 9, 2019ಲಿಂಗಮ್ಮನವರ ವಚನಗಳಲ್ಲಿ ಇಷ್ಟು ಜ್ಞಾನಭಂಡಾರವಿದೆ ಎನ್ನುವುದು ನಿಮ್ಮ ಲೇಖನದಿಂದ ನನಗೆ ತಿಳಿಯಿತು. ವಚನಗಳ ಅರ್ಥವನ್ನು ನಮಗೆ ತಿಳಿಯುವಂತೆ ಸರಳವಾಗಿ ಹೇಳಿರುವಿರಿ.
Paramashivappa Patil
Jul 10, 2019ಶರಣೆ ಲಿಂಗಮ್ಮನವರ ವಚನಗಳ ಮೇಲೆ ಯಾರಾದರೂ ವ್ಯಾಖ್ಯಾನ ಬರೆದಿದ್ದರೆ ತಿಳಿಸುವಿರಾ? ನಿಮ್ಮ ಲೇಖನ ಓದಿ ಲಿಂಗಮ್ಮನವರ ಕುರಿತು ಆಸಕ್ತಿ ಮೂಡಿತು.
Shreeshail Tungalad
Jul 10, 2019ಸುಪರ್
Geetha Jayraj
Jul 14, 2019ನೀಲಾಂಬಿಕೆ ತಾಯಿಯವರೂ ಮನಸ್ಸು ಮತ್ತು ಯೋಗದ ಮೇಲೆ ಅನೇಕ ವಚನಗಳನ್ನು ಬರೆದಿ್ದಾರೆ, ಲಿಂಗಮ್ಮನವರ ಅನುಭಾವದ ಎತ್ತರ ಮೂಕರನ್ನಾಗಿಸುತ್ತದೆ.
ದೇವೀರಯ್ಯ ಹೊನ್ನಾಪುರ
Jul 15, 2019ದೇಹದಲ್ಲಿ ಮನಸ್ಸಿನ ಉತ್ಪತ್ತಿ ಸ್ಥಾನ ಸಹಸ್ರಾರಚಕ್ರ ಎಂದು ಹೇಳಿದ್ದೀರಿ, ಅದು ಹೇಗೆ ತಿಳಿಯಲಿಲ್ಲ. ಲಿಂಗಮ್ಮನವರ ವಚನದಲ್ಲಿ ಹಾಗೆ ಇಲ್ಲವೆಂದು ನನಗೆ ತೋರುತ್ತದೆ. “ಸಾಸಿರದಳಕಮಲವೆಂದಡೆ ಸೂಸಿಕೊಂಡಿರುವ ಮನ….” ವಚನದಲ್ಲಿ ಅವರು ಸಾಸಿರಕಮಲದಳವಾದ ಸಹಸ್ರಾರಕ್ಕೆ ಮನಸ್ಸು ಎಂದು ಕರೆದಿರುತ್ತಾರೆ. ಸರ್, ಮತ್ತೊಮ್ಮೆ ಈ ವಚನ ಪರಿಶೀಲಿಸಿ. ಉಳಿದಂತೆ ಲೇಖನವು ಆಧ್ಯಾತ್ಮದ ಭಾರದಲ್ಲಿ ತೂಗಿದೆ. ಶರಣು.
ದೇವೀರಯ್ಯ ಹೊನ್ನಾಪುರ
veeranna madiwalar
Jul 17, 2019ಗಮ್ಯದ ಕಡೆ ನಮ್ಮ ಗಮನವನ್ನು ತಿರುಗಿಸಿದ ಲೇಖನ, ಅರ್ಥಮಾಡಿಕೊಳ್ಳಲು ತುಸು ಕಷ್ಟವೆನಿಸುತ್ತದೆ…..
Dileep H. N
Jul 19, 2019‘ಮನಸ್ಸನ್ನು ಅಧೋಮುಖವಾಗಿ ಹರಿಯಗೊಡದೆ ಊರ್ಧ್ವಮುಖವಾಗಿ ಚಲಿಸುವಂತೆ ಮಾಡಲು ಶಿವಜ್ಞಾನ, ಶಿವಚಿಂತನೆಗಳಿಂದ ಮಾತ್ರ ಸಾಧ್ಯ’ ಸಾಧನೆಗೆ ಮನವೇ ಅಡಿಗಲ್ಲು, ಅದನ್ನು ಮೇಲೆತ್ತಲು ಶರಣರು ಹೇಗೆ ಶ್ರಮಿಸಿದರು ಎಂಬುದರ ಮೇಲೆ ಬೆಳಕು ತೋರಿದ್ದೀರಿ. ಶರಣುಗಳು ಸರ್.
Jahnavi Naik
Jul 24, 2019ಮನಸ್ಸು ಅಂಥರ್ಮುಖವಾದಾಗ ಜ್ಞಾನವು ಅನುಭಾವವಾಗಿ ಪರಿವರ್ತನೆಯಾಗುವುದು- ನಿಜವಾದ ಮಾತು. ಶರಣರ ನಡೆಗಳು ಸರಳ, ಸುಂದರ, ಅದ್ಭುತ.
B.S.Patil
Jul 26, 2019ವಿಕಾರ ಮನಸ್ಸು ಶರಣನಾಗುವುದು ಹೇಗೆ? ಲಿಂಗಮ್ಮ ತಾಯಿಯವರ ವಚನಗಳಲ್ಲಿ ಅದಕ್ಕೇನಾದರೂ ಪರಿಹಾರವಿದೆಯೇ?
Panchakshari h v
Jul 26, 2019ಮನಸ್ಸನ್ನು ಶಾಂತಗೊಳಿಸಲು ಮಾಡಿದುದೇನೆಂದರೆ, ಮನಸ್ಸು ಅತ್ತಲಿತ್ತ ಹರಿಯದಂತೆ ಇಂದ್ರಿಯಗಳ ಬಾಗಿಲಲ್ಲಿ ಲಿಂಗಗಳನ್ನು ನೆಲೆಗೊಳಿಸಿದರು. ಆ ಲಿಂಗದ ಮೂಲಕವೇ ಪ್ರತಿಯೊಂದು ಪದಾರ್ಥವೂ ದೇಹವನ್ನು ಪ್ರವೇಶಿಸುವುದರಿಂದ ಅದು ಲಿಂಗಾರ್ಪಿತವಾಗಿ ಪದಾರ್ಥ ರೂಪದಿಂದ ಪಲ್ಲಟಗೊಂಡು ಪ್ರಸಾದವಾಗುವುದು. ಅಂಥಾ ಪ್ರಸಾದವನ್ನು ಸವಿದಾತನ ಮನ ಸದಾ ನಿಶ್ಚಲವಾಗಿರುವುದು.