
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಇಂಗ್ಲೀಷಿನಲ್ಲಿ ಕ್ಯಾಲೆಂಡರ್ ಮತ್ತು ಕನ್ನಡದಲ್ಲಿ ಪಂಚಾಂಗವೆಂದು ಕರೆಯಲ್ಪಡುವ ಕಾಲನಿರ್ಣಯ ವ್ಯವಸ್ಥೆಯ ಬಗ್ಗೆ ಎಲ್ಲರಿಗು ತಿಳಿದಿರುವ ವಿಷಯವೇ. ನಮ್ಮ ದಿನ ನಿತ್ಯದ ಚಟುವಟಿಕೆಗಳನ್ನು ನಾವು ಬಹುತೇಕ ಕ್ಯಾಲೆಂಡರ್ ಪ್ರಕಾರ ನಡೆಸಿಕೊಂಡು ಹೋಗುತ್ತಿರುತ್ತೇವೆ. ಕ್ಯಾಲೆಂಡರ್ ನಮ್ಮೆಲ್ಲರ ಅವಿಭಾಜ್ಯ ಅಂಗವಾಗಿದೆ. ಮನೆ, ಕಛೇರಿ, ಶಾಲೆ, ಕಾಲೇಜು, ಪೊಲೀಸ್ ಸ್ಟೇಷನ್, ಗ್ರಂಥಾಲಯ, ಇನ್ನೂ ಅಸಂಖ್ಯಾತ ಜಾಗಗಳಲ್ಲಿ ಇದರ ಸ್ಥಾನ ಅಜರಾಮರ. ಎಷ್ಟೋ ವೇಳೆ ಕ್ಯಾಲೆಂಡರ್ ಇಲ್ಲದೆ ಜೀವನ ನಡಯುವುದಿಲ್ಲವೇನೋ ಎನ್ನುವಷ್ಟು ನಮ್ಮ ಜೀವನ ಪರವಾಲಂಬಿಯಾಗಿರುತ್ತದೆ. ನಮ್ಮ ಜೀವನ ಶೈಲಿ ಮತ್ತು ವಿವೇಚನೆಯನ್ನು ಪ್ರಭಾವಿಸುವಷ್ಟು ಶಕ್ತಿಯಿರುವ ಕ್ಯಾಲೆಂಡರ್ ಗಳು ನಮ್ಮ ಸಂಸ್ಕೃತಿ-ಪರಂಪರೆಯ ಅವಿಭಾಜ್ಯ ಅಂಗವೆಂದು ತಿಳಿಯಬಹುದು. ತಲೆತಲಾಂತರದಿಂದ ಕ್ಯಾಲೆಂಡರ್ ಅನ್ನು ನಾವು ಅಳವಡಿಸಿಕೊಂಡು, ಅನುಸರಿಸಿಕೊಂಡು ಬಂದಿದ್ದೇವೆ. ನಮ್ಮ ನಂಬಿಕೆ ಮತ್ತು ವಿಚಾರಗಳಿಗೆ ಕನ್ನಡಿಯಾಗಿ ಕ್ಯಾಲೆಂಡರ್ಗಳನ್ನು ನಾವು ರೂಪಿಸಿಕೊಂಡಿದ್ದೇವೆ. ನಮ್ಮ ಅಭಿವ್ಯಕ್ತಿ ಮಾಧ್ಯಮವಾಗಿಯೂ ಇದನ್ನು ಬಳಸಿಕೊಂಡಿದ್ದೇವೆ.
ಆಧುನಿಕ ಭಾರತದಲ್ಲಿ ಕ್ಯಾಲೆಂಡರ್ನ ರೂಪು-ರೇಷೆಗಳು ವಿನೂತನ ಮತ್ತು ಆಧುನಿಕ ಶೈಲಿಯನ್ನು ಪಡೆದುಕೊಂಡು, ‘ಕ್ಯಾಲೆಂಡರ್ ಕಲೆ/ಸಂಸ್ಕೃತಿಗೆ ನಾಂದಿ ಹಾಡಿದೆ. ಪ್ಯಾಟ್ರಿಷಿಯ ಉಬೆರಾಯ್ ಎಂಬ ವಿದ್ವಾಂಸರು ಆಧುನಿಕ ಕಾಲದ ಕ್ಯಾಲೆಂಡರ್ಗಳನ್ನು ಅಧ್ಯಯನ ಮಾಡುವಾಗ ಅದರಲ್ಲಿ ಅಡಗಿರುವ ‘ಕಲಾತ್ಮಕ’ ಅಂಶವನ್ನು ಗಮನಿಸಿದ್ದಾರೆ. ಸಮಾಜದ ಸಂಸ್ಕೃತಿಯನ್ನು ಅಧ್ಯಯನ ಮಾಡಲು ಕ್ಯಾಲಂಡರ್ ಕಲೆಯು ಮುಖ್ಯ ಅಂಶವಾಗಬಹುದು ಎಂದು ಅವರು ತಮ್ಮ ಲೇಖನದಲ್ಲಿ ವಾದಿಸಿದ್ದಾರೆ. ಒಂದು ಸಂಸ್ಕೃತಿಯ ಸೃಷ್ಟಿ, ಆಶೋತ್ತರ ಮತ್ತು ಗುರುತನ್ನು ಕ್ಯಾಲಂಡರ್ ಗಳು ಪ್ರದರ್ಶಿಸುತ್ತವೆ. ಪ್ರಸ್ತುತ ಲೇಖನವು ಸಮಾಜದ ವಿವಿಧ ವರ್ಗದವರು ಬಸವಣ್ಣನವರನ್ನು ಕ್ಯಾಲೆಂಡರ್ ಕಲೆಯಲ್ಲಿ ಯಾವ ರೀತಿ ಕಲ್ಪಿಸಿಕೊಂಡಿದ್ದಾರೆ ಮತ್ತು ಈ ಕಲ್ಪನೆಯ ಮೂಲೋದ್ದೇಶವೇನು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗಿದೆ.
ಬಸವಣ್ಣ ಅಥವಾ ಬಸವಣ್ಣನವರ ಸಮಕಾಲೀನರಾದ ಇತರ ಶಿವಶರಣರನ್ನು ಕೇಂದ್ರವಾಗಿಟ್ಟುಕೊಂಡು, ಅವರ ಭಾವ ಚಿತ್ರದೊಂದಿಗೆ ತಯಾರಿಸಿರುವ ಕ್ಯಾಲೆಂಡರ್ಗಳು ಇತ್ತೀಚಿನ ಬೆಳವಣಿಗೆ. ಅಂದರೆ ಇದಕ್ಕೆ ಸುಮಾರು ಎಂಬತ್ತು ವರ್ಷಗಳ ಇತಿಹಾಸವಿದೆ ಎಂದು ಹೇಳಬಹುದು. ಈ ಭಾವಚಿತ್ರಗಳೂ ಇತ್ತೀಚೆಗೆ ಕಲ್ಪಿಸಲ್ಪಟ್ಟಿರುವಂತವು. ರವಿವರ್ಮ, ವೆಂಕಟಪ್ಪ ಮತ್ತು ಇತರ ಕಲಾವಿದರಿಂದ ಸ್ಪೂರ್ತಿಗೊಂಡು ಮಧ್ಯಕಾಲೀನ ಸಂತ/ಯೋಗಿ/ದಾರ್ಶನಿಕರ ಅನೇಕ ಭಾವಚಿತ್ರಗಳ ಕಲ್ಪನೆ 20ನೇ ಶತಮಾನದ ಮೊದಲರ್ಧದಲ್ಲಿ ಉಂಟಾಗಿದ್ದು ಐತಿಹಾಸಿಕ. ಈ ಕಲೆಯು ಅರಳುತ್ತಿದ್ದಂತೆ ಇದರ ಮುಂದುವರಿಕೆಯ ಭಾಗವಾಗಿ ಕ್ಯಾಲೆಂಡರ್ ಕಲೆ/ಸಂಸ್ಕೃತಿಯು ಬೆಳೆಯಿತು. ವಿನೂತನ, ವೈವಿಧ್ಯಮಯ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ತಾಂತ್ರಿಕ, ನೈಸರ್ಗಿಕ, ಸೌಂದರ್ಯಾತ್ಮಕ ಮತ್ತು ವೈಜ್ಞಾನಿಕ ವಿಷಯಗಳನ್ನೊಳಗೊಂಡ ಅನೇಕ ಭಾವಚಿತ್ರಗಳು ಈ ಕ್ಯಾಲೆಂಡರ್ ಕಲೆಯಲ್ಲಿ ಮೂಡಿ ಬಂದವು. ಪೇಂಟಿಂಗ್ ಮತ್ತು ಕುಂಚದ ಕಲೆಗೆ ಕ್ಯಾಲೆಂಡರ್ ಕಲೆ ಉತ್ತೇಜನ ನೀಡಿತು. ಅನೇಕ ಹಿಂದು, ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮದ ದೇವರು/ದೇವತೆಗಳು/ಸಂದೇಶಗಳನ್ನು ಬಿತ್ತರಿಸುವ ಅಥವಾ ಪ್ರದರ್ಶಿಸುವ ಪ್ರಕ್ರಿಯೆಗೆ ಕ್ಯಾಲೆಂಡರ್ ಕಲೆ ಪ್ರೋತ್ಸಾಹದಾಯಕವಾಯಿತು. ಹೀಗೆ ಧಾರ್ಮಿಕ ವಿಷಯಗಳುಳ್ಳ ಕ್ಯಾಲೆಂಡರ್ಗಳ ಜೊತೆಗೆ ‘ಜಾತ್ಯಾತೀತ’ ವಿಷಯಗಳನ್ನೊಳಗೊಂಡ ಕ್ಯಾಲೆಂಡರ್ಗಳು ಸಹ ಬೆಳೆದು ಬಂದವು. ಕ್ರಮೇಣ ಕ್ಯಾಲೆಂಡರ್ ಕಲೆ ಸಾಮುದಾಯಿಕ ವಿಷಯಗಳನ್ನೊಳಗೊಂಡ ತಾಣವಾಗಿ ಮಾರ್ಪಾಟಾಯಿತು. ಬೇಡಿಕೆಯ ಜೊತೆಗೆ, ಜನಪ್ರಿಯವೂ ಆದ ಕ್ಯಾಲೆಂಡರ್-ಸಂಸ್ಕೃತಿ ಸಮುದಾಯಗಳ ಜಾಗೃತ ಕಲ್ಪನೆಯನ್ನು ಪ್ರತಿಬಿಂಬಿಸುವ ಸಾಧನವಾಯಿತು. ಅಂದರೆ ಕ್ಯಾಲೆಂಡರ್ಗಳು ಸಾಮುದಾಯಿಕವಾಗುವಲ್ಲಿ ಸಮುದಾಯದ ಬಗ್ಗೆ ಉಂಟಾದ ಜಾಗೃತಿ/ಅರಿವು ಕಾರಣವಾಯಿತು. ಜೊತೆಗೆ ಸಾಮುದಾಯಿಕ ನೆನಪನ್ನು ಪ್ರತಿಬಿಂಬಿಸುವ ತಾಣವಾಗಿ ಕ್ಯಾಲೆಂಡರ್ ಗಳು ರೂಪುಗೊಂಡವು. ಇದರ ಪರಿಣಾಮವೇ 12ನೇ ಶತಮಾನದ ಶಿವಶರಣರ ಭಾವಚಿತ್ರಗಳುಳ್ಳ ಲಿಂಗಾಯತ ಸಮುದಾಯದ ಕ್ಯಾಲೆಂಡರ್ಗಳು.
ಲಿಂಗಾಯತ ಸಮುದಾಯದ ಕ್ಯಾಲೆಂಡರ್ ಮುಖ್ಯವಾಗಿ ಬಸವಣ್ಣ ಕೇಂದ್ರಿತವಾಗಿದ್ದರೂ, ಇತರ ಶರಣರ ಚಿತ್ರಗಳುಳ್ಳ ಕ್ಯಾಲೆಂಡರ್ಗಳನ್ನೂ ನಾವು ಕಾಣಬಹುದು. ಬಸವಣ್ಣನವರ ಭಾವಚಿತ್ರವಿರುವ ಕ್ಯಾಲೆಂಡರ್ಗಳು ಕಳೆದ ಎಂಬತ್ತು ವರ್ಷಗಳಿಂದ ವಿವಿಧ/ವೈವಿಧ್ಯಮಯತೆಗೆ ಸಾಕ್ಷಿಯಾಗಿವೆ. ಕಾಲಾಂತರದಲ್ಲಿ ಹೊಸ ಬಗೆಯ ಕ್ಯಾಲೆಂಡರ್ ಗಳನ್ನು ರೂಪಿಸುತ್ತಾ ಬಂದಿರುವ ಲಿಂಗಾಯತರು ಬಸವಣ್ಣನವರನ್ನು ಕಲ್ಪಿಸಿಕೊಂಡಿರುವಲ್ಲಿ ವೈವಿಧ್ಯತೆಯನ್ನು ಪ್ರದರ್ಶಿಸಿದ್ದಾರೆ. ಅಂದರೆ ಬಸವಣ್ಣನವರ ಒಂದೇ ತರಹದ ಚಿತ್ರಗಳು ಈ ಕ್ಯಾಲೆಂಡರ್ ಗಳಲ್ಲಿಲ್ಲ. ವೈವಿಧ್ಯತೆಯಿಂದ ಕೂಡಿರುವ, ಭಿನ್ನ, ಭಿನ್ನ ಕಲ್ಪನೆಗಳಿಂದ ಮೂಡಲ್ಪಟ್ಟಿರುವ ಬಸವಣ್ಣನವರ ಭಾವಚಿತ್ರಗಳು ಕಾಣಸಿಗುತ್ತವೆ. ಲಿಂಗಾಯತರ ವೈವಿಧ್ಯಮಯ ಕಲ್ಪನಾ ಶಕ್ತಿಯನ್ನು ಇದು ಸೂಚಿಸುತ್ತದೆ ಮತ್ತು ಲಿಂಗಾಯತರ ಆಂತರಿಕ ಭಿನ್ನತೆಗಳನ್ನು ಇದು ತೆರೆದಿಡುತ್ತದೆ. ತಮ್ಮ ಸಮಾಜದ ಜೊತೆಗೆ ಗುರುತಿಸಿಕೊಳ್ಳುವ ಜೊತೆಗೆ, ತಮ್ಮ ಸಮಾಜದಲ್ಲದವರಿಗೆ ಬಸವಣ್ಣನವರ ಮಹತ್ವವನ್ನು ತಿಳಿ ಹೇಳುವ ಪ್ರಯತ್ನವನ್ನು ಈ ಕ್ಯಾಲಂಡರ್ಗಳು ಮಾಡುತ್ತವೆ. ಬಸವಣ್ಣನವರ ಚಿತ್ರಗಳುಳ್ಳ ಪ್ರತಿಯೊಂದು ಕ್ಯಾಲೆಂಡರ್ ಆಯಾಯ ವ್ಯಕ್ತಿ, ಸಂಸ್ಥೆ, ಮಠ ಅಥವಾ ಉದ್ದೇಶಗಳಿಗನುಗುಣವಾಗಿ ಮೂಡಲ್ಪಟ್ಟಿದೆ. ಅಂದರೆ ಕ್ಯಾಲೆಂಡರ್ ಕೇವಲ ದಿನಾಂಕ, ತಿಂಗಳು ಅಥವಾ ಧಾರ್ಮಿಕ ಆಚರಣೆಗಳನ್ನು ತಿಳಿಸುವ ಮಾಧ್ಯಮವಾಗಿರದೆ, ಒಂದು ಸಮುದಾಯದ ಅಥವಾ ಸಂಸ್ಥೆಯ/ಸಂಘಟನೆಯ ಆಶೋತ್ತರಗಳನ್ನು ಅಥವಾ ಐಡಿಯಾಲಜಿಯನ್ನು ಕೊಂಡೊಯ್ಯುವ ಸಾಧನವಾಗಿರುತ್ತದೆ. ಹಾಗಾಗಿ ಈ ಆಶೋತ್ತರಗಳಿಗನುಗುಣವಾಗಿ ಬಸವಣ್ಣನವರ ಭಾವಚಿತ್ರಗಳು ಕೂಡ ವೈವಿಧ್ಯತೆಯನ್ನು ಪ್ರದರ್ಶಿಸುತ್ತವೆ. ಈ ಆಶೋತ್ತರಗಳು ಸಮುದಾಯದ ಭಿನ್ನ, ಭಿನ್ನ ವಿಚಾರಧಾರೆಗಳನ್ನು ಪ್ರತಿಬಿಂಬಿಸುತ್ತವೆ. ಇದನ್ನು ಪರೀಕ್ಷಿಸಲು ಎರಡು ಉದಾಹರಣೆಗಳನ್ನು ನಾವಿಲ್ಲಿ ವಿಶ್ಲೇಷಿಸಬಹುದು.
ಚಿತ್ರ 1ನ್ನು ನಾವು ವೀಕ್ಷಿಸಿದಾಗ ಅನೇಕ ವಿಷಯಗಳು ನಮಗೆ ಗೋಚರಿಸುತ್ತವೆ. ಮೊದಲಿಗೆ ಈ ಕ್ಯಾಲೆಂಡರ್ (ಜನವರಿ, 2021) ‘ಪ್ರಚಾರ’ದ ಕ್ಯಾಲೆಂಡರ್. ಇದನ್ನು ಬಸವಣ್ಣ ಎಂಬ ಫೇಸ್ಬುಕ್ ತಾಣದಿಂದ ತೆಗೆದುಕೊಂಡಿದ್ದು. ಲಿಂಗಾಯತ ಸಮುದಾಯಕ್ಕೆ ಸೇರಿದ ಬಸವಣ್ಣನ ಅನುಯಾಯಿಗಳು ಇದನ್ನು ತಮ್ಮ ಫೇಸ್ಬುಕ್ ತಾಣದಲ್ಲಿ ಹಾಕಿ, ಆಸಕ್ತಿಯಿದ್ದವರಿಗೆ ಈ ಕ್ಯಾಲೆಂಡರ್ನ್ನು ಅವರವರ ವಿಳಾಸಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ. ಲಿಂಗಾಯತ ಧರ್ಮದ ಬಗ್ಗೆ ಜನ ಜಾಗೃತಿ ಉಂಟು ಮಾಡಲು ಮತ್ತು ಅದರ ಮಹತ್ವವನ್ನು ತಿಳಿಸಲು ತಯಾರಿಸಲ್ಪಟ್ಟಿರುವ ಕ್ಯಾಲೆಂಡರ್ ಇದು. ಅಂದರೆ ಇದು ಲಿಂಗಾಯತರ ಧಾರ್ಮಿಕ ಜಾಗೃತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸುವ ದಿನದರ್ಶಿಕೆ. ಇತ್ತೀಚೆಗೆ ಲಿಂಗಾಯತರು ತಮ್ಮ ಸಮುದಾಯವು ಪ್ರತ್ಯೇಕ ಧರ್ಮವನ್ನು ಹೊಂದಿದೆ ಎಂದು, ಅದಕ್ಕಾಗಿ ಒಂದು ದೊಡ್ಡ ಚಳುವಳಿಯನ್ನೆ ಕೈಗೊಂಡರು. ಈ ಚಳುವಳಿಗೆ ಮೂಲಭೂತ ತಾತ್ವಿಕ ಚೌಕಟ್ಟು ಏಕದೇವೋಪಾಸನೆ (ಅದರಲ್ಲು ನಿರ್ದಿಷ್ಟವಾಗಿ ಇಷ್ಟಲಿಂಗ ಪೂಜೆ), ಏಕ ಧರ್ಮ ಸ್ಥಾಪಕ (ಬಸವಣ್ಣ) ಮತ್ತು ಏಕಧಾರ್ಮಿಕ ಗ್ರಂಥ (ವಚನಗಳು)ವಾಗಿರುತ್ತದೆ. ಈ ಮೂಲಭೂತ ತಾತ್ವಿಕ ಚಿಂತನೆಗೆ ದೃಶ್ಯದ ಚೌಕಟ್ಟನ್ನು ನೀಡಿ, ಅದನ್ನು ಎಲ್ಲೆಡೆ ಪಸರಿಸಲು ಸಾಮುದಾಯಿಕ ಕ್ಯಾಲೆಂಡರ್ನ ಬಳಕೆ ಮಾಡಲಾಗಿದೆ. ಪ್ರಸ್ತತ ಚಿತ್ರದ ಎಡ ಭಾಗದಲ್ಲಿ ಕರಸ್ಥಲದ ಲಿಂಗ ಪ್ರಮುಖವಾಗಿ ಕಾಣುತ್ತದೆ. ಇಷ್ಟಲಿಂಗ ಪೂಜೆಯು ಲಿಂಗಾಯತ ಧರ್ಮದ ಭಕ್ತಿಯ ಅಭಿವ್ಯಕ್ತಿ ಸಾಧನವೆಂದು ಸಾರುತ್ತದೆ. ಸ್ಥಾವರ ಲಿಂಗ ಅಥವಾ ಶಿವಾಲಯದ ಪ್ರಸ್ತುತತೆಯನ್ನು ಇದು ಪರೋಕ್ಷವಾಗಿ ಅಲ್ಲಗೆಳೆಯುತ್ತದೆ. ಬಲ ಭಾಗದಲ್ಲಿ ಷಟಸ್ಥಲವನ್ನು ತಿಳಿಸುವ ಚಿಹ್ನೆ/ಲೋಗೊವನ್ನು ಪ್ರಕಟಿಸಲಾಗಿದೆ. ಸಪ್ತ ಗಣಾಧೀಶರ ಭಾವಚಿತ್ರಗಳನ್ನು ಇಲ್ಲಿ ಕಾಣಬಹುದು. ಅಕ್ಕನಾಗಲಾಂಬಿಕೆ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಬಸವಣ್ಣ, ಅಲ್ಲಮಪ್ರಭು, ಸಿದ್ಧರಾಮೇಶ್ವರ ಮತ್ತು ಮಾಚಿದೇವರ ಚಿತ್ರಗಳನ್ನು ಇಲ್ಲಿ ಪ್ರಿಂಟ್ ಮಾಡಲಾಗಿದೆ. ಆದರೆ ಅದರಲ್ಲಿ ಬಸವಣ್ಣನವರ ಚಿತ್ರ ದೊಡ್ಡದಾಗಿ ಮೂಡಿಸಿರುವುದನ್ನು ನೋಡಿದರೆ, ಲಿಂಗಾಯತರು ಬಸವಣ್ಣನವರಿಗೆ ನೀಡಿರುವ ಕೇಂದ್ರ ಸ್ಥಾನವೇ ಕಾರಣ. ವರ್ಷದ ಮೊದಲ ತಿಂಗಳು (ಜನವರಿ) ಗಣಾಧೀಶರಲ್ಲಿ ಮೊದಲಿಗನಾದ ಬಸವಣ್ಣನವರಿಗೆ ಮೀಸಲು.
ಬಸವಣ್ಣನವರ ಕೇಂದ್ರ ಸ್ಥಾನ ಜಾಗತಿಕವಾಗಿದೆ ಎಂದು ತಿಳಿಸುವುದಕ್ಕಾಗಿ ಬಸವಣ್ಣನನ್ನು ‘ವಿಶ್ವಗುರು’ ಎಂದು ಘೋಷಿಸಲಾಗಿದೆ. ಲಿಂಗಾಯತ ಧರ್ಮ ಸ್ಥಾಪಿಸಿದವರು ಬಸವಣ್ಣನವರೇ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಮತ್ತು ಇಲ್ಲಿ ಬಸವಣ್ಣನವರು ಕುದುರೆ ಸವಾರಿ ಮಾಡುತ್ತಿರುವ ವ್ಯಕ್ತಿಯಾಗಿರದೆ (ಬಹಳ ಕಾಲದವರೆಗು ಕುದುರೆ ಸವಾರಿ ಮಾಡುತ್ತಿರುವ ಬಸವಣ್ಣನವರ ಚಿತ್ರ ಪ್ರಸಿದ್ಧಿಯಾಗಿತ್ತು. ಈಗಲೂ ಇದೇ ಭಾವಚಿತ್ರವನ್ನು ಅಲ್ಲಲ್ಲಿ ಕಾಣಬಹುದು. ಉದಾಹರಣೆಗೆ ಗದುಗಿನ ಶಾಬಾದಿಮಠ ಡಿಪೋದ 2022ರ ತೂಗು ಪಂಚಾಂಗವನ್ನು ನೋಡಿ), ವಚನಗಳನ್ನು ಸೃಷ್ಟಿಸಿದ ತತ್ವಜ್ಞಾನಿಯಂತೆ ಚಿತ್ರಿಸಲಾಗಿದೆ. ಬಸವಣ್ಣ ಮತ್ತು ಸಿದ್ಧರಾಮೇಶ್ವರನ ಕೈಯಲ್ಲಿ ವಚನ ಕಟ್ಟುಗಳಿವೆ ಎಂಬಂತೆ ಚಿತ್ರಿಸಲಾಗಿರುವ ಈ ಕ್ಯಾಲಂಡರ್ನಲ್ಲಿ ಇತರ ಗಣಾಧೀಶರ ಕೈಯಲ್ಲಿ ವಚನಗಳಿರದೆ ಅವರನ್ನು ಭಕ್ತ, ಯೋಗಿ/ದಾರ್ಶನಿಕ ಎಂಬಷ್ಟೆ ಚಿತ್ರಿಸಲಾಗಿದೆ..
ಸಿದ್ಧರಾಮೇಶ್ವರರ ಕೈಯಲ್ಲಿ ಕಾಣುವ ವಚನ ಕಟ್ಟುವಿನ ಚಿತ್ರದ ಮಹತ್ವವನ್ನು ಇದೇ ಪುಟದಲ್ಲಿ ಕಾಣಬಹುದು. ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯ ಹಾರ್ದಿಕ ಶುಭಾಶಯಗಳು ಎಂಬ ತಲೆಬರಹದ ಕೆಳಗೆ ಸಿದ್ಧರಾಮೇಶ್ವರರನ್ನು ಕುರಿತು ಬರೆಯುವಾಗ ‘ಬಸವ ಧರ್ಮ, ಬಸವ ಯೋಗ’ ಎಂಬ ಪದಗಳನ್ನು ಬಳಸಿದ ಶ್ರೇಷ್ಠ ತತ್ವಜ್ಞಾನಿ ಎಂದು ಬಣ್ಣಿಸಲಾಗಿದೆ. ಶರಣ ಧರ್ಮವನ್ನು ವಿಸ್ತಾರವಾಗಿ ಹರಡಿಸಿದ ತತ್ವಜ್ಞಾನಿಯೆಂದು ಸಿದ್ಧರಾಮೇಶ್ವರರನ್ನು ಕೊಂಡಾಡಲಾಗಿದೆ. ಇಂತಹ ಜ್ಞಾನಿಯ ಕೈಯಲ್ಲಿ ಗ್ರಂಥದ ಕಟ್ಟನ್ನು ನೀಡಿರುವುದು ಸಹಜವೆಂಬಂತೆ ಗೋಚರಿಸುತ್ತದೆ. ಸಿದ್ಧರಾಮೇಶ್ವರರ ಕೈಯಲ್ಲಿರುವ ಗ್ರಂಥವು ಕ್ಯಾಲಂಡರ್ನ ಮೂಲೋದ್ದೇಶವನ್ನು ಈಡೇರಿಸುತ್ತದೆ. ಅಂದರೆ ಗಣಾಧೀಶರು (ವಿಶೇಷವಾಗಿ ಬಸವಣ್ಣ ಮತ್ತು ಸಿದ್ಧರಾಮೇಶ್ವರ) ಲಿಂಗಾಯತ ಧರ್ಮಕ್ಕೆ ವಚನಗಳ ಮೂಲಕ ತಾತ್ವಿಕ ಚೌಕಟ್ಟನ್ನು ನೀಡಿದ ದಾರ್ಶನಿಕರು ಎಂದು ಈ ಚಿತ್ರವು ಸ್ಥಾಪಿಸುತ್ತದೆ.
ಅಷ್ಟೇ ಅಲ್ಲ. ಬಸವಣ್ಣನವರ ಚಿತ್ರದ ಕೆಳಗೆ ಅನೇಕ ಸಂದೇಶಗಳನ್ನು ನೀಡಲಾಗಿದೆ. ಇವುಗಳನ್ನು ಗಮನಿಸಿದರೆ ಈ ಕ್ಯಾಲಂಡರ್ನ್ನು ದೃಶ್ಯ-ಬರವಣಿಗೆಯೆರಡನ್ನು ಒಳಗೊಂಡ ಮಾಧ್ಯಮ ಎಂದು ಕರೆಯಬಹುದು. ಈ ಸಂದೇಶಗಳಲ್ಲಿ ಪ್ರಮುಖವಾಗಿ “2021 ಜನಗಣತಿಯ ಧರ್ಮದ ಇತರೆ ಕಾಲಂನಲ್ಲಿ ‘ಲಿಂಗಾಯತ’ ಎಂದು ಬರೆಸಿರಿ” ಎಂಬ ಧ್ಯೇಯ ವಾಕ್ಯವು ಎದ್ದು ಕಾಣುತ್ತದೆ. ಇದು ಈ ಕ್ಯಾಲಂಡರ್ನ ಮತ್ತೊಂದು ಮೂಲ ಉದ್ದೇಶವನ್ನು ಘಂಟಾಘೋಷವಾಗಿ ಸಾರುತ್ತದೆ. ಈ ಮನವಿಯನ್ನು ನಾವು ಲಿಂಗಾಯತರ ಪ್ರತ್ಯೇಕ ಧಾರ್ಮಿಕ ಚಳುವಳಿಯ ಹಿನ್ನಲೆಯಲ್ಲಿ ನೋಡಿದಾಗ ಕ್ಯಾಲೆಂಡರ್ ಪ್ರಚಾರದ ಮತ್ತು ಐಡೆಂಟಿಟಿಯ ಮಾಧ್ಯಮವಾಗಿ ತೋರುತ್ತದೆ. ಇದೇ ಪುಟದಲ್ಲಿ ಕಾಣುವ ಮತ್ತೊಂದು ತಲೆಬರಹ ನಮ್ಮ ಗಮನವನ್ನು ಸೆಳೆಯುತ್ತದೆ: ಲಿಂಗಾಯತ ಧರ್ಮ ಸಾಂವಿಧಾನಿಕ ಮಾನ್ಯತೆಯಿಂದಾಗುವ ಅನುಕೂಲತೆಗಳು, ಸೌಲಭ್ಯಗಳು ಎಂಬ ತಲೆಬರಹದಡಿಯಲ್ಲಿ ಶೈಕ್ಷಣಿಕ, ಆರ್ಥಿಕ ಮತ್ತು ಧಾರ್ಮಿಕ ಅನುಕೂಲತೆಗಳು ಎಂದು ಬರೆಯಲಾಗಿದೆ. ಈ ಪುಟದ ಹಿಂಬದಿಯಲ್ಲಿ ಈ ಅನುಕೂಲತೆಗಳನ್ನು ವಿವರಿಸಲಾಗಿದೆ ಎಂದು ತಿಳಿಸಲಾಗಿದೆ. ಇವೆಲ್ಲವು ಧಾರ್ಮಿಕ ಚಳುವಳಿಯ ಒತ್ತಾಸೆಗಳನ್ನು ಪ್ರಚಾರ ಮಾಡುವ ಉದ್ದೇಶಕ್ಕಾಗಿ ಜನಪ್ರಿಯ ಮಾಧ್ಯಮವಾದ ಕ್ಯಾಲೆಂಡರ್ ಅನ್ನು ಬಳಸಲಾಗಿದೆ ಎಂದು ಸುಸ್ಪಷ್ಟವಾಗುತ್ತದೆ.
ಈ ಧಾರ್ಮಿಕ/ಭಕ್ತಿಯ ಚಿತ್ರಗಳ ಜೊತೆಗೆ ಈ ಕ್ಯಾಲಂಡರ್ನ್ನು ವಾಣಿಜ್ಯ ಉದ್ದೇಶಕ್ಕು ಬಳಸಿರುವುದು ತಿಳಿಯುತ್ತದೆ. ಕ್ಯಾಲೆಂಡರ್ನ ಅಡಿ ಇಬ್ಬರು ವ್ಯಕ್ತಿಗಳ ಭಾವಚಿತ್ರಗಳನ್ನು ನೋಡಬಹುದು. ಇವರಿಬ್ಬರು ತಾವು ನಿರ್ವಹಿಸುತ್ತಿರುವ ವಾಣಿಜ್ಯ ಉದ್ಯಮಗಳ ಬಗ್ಗೆ ಮತ್ತು ಅದರ ಪ್ರಸರಣಕ್ಕಾಗಿ ಕ್ಯಾಲೆಂಡರ್ನ ಈ ಭಾಗವನ್ನು ಬಳಸಿಕೊಂಡಿರುವುದು ತಿಳಿಯುತ್ತದೆ. ಶರಣ ಸ್ವರೂಪ ಟ್ರೇಡಿಂಗ್ ಕಂಪನಿ ಮತ್ತು ಶಿವಬಸವ ಟ್ರೇಡರ್ಸ ಎಂಬ ಎರಡು ವಾಣಿಜ್ಯ ಉದ್ದಿಮೆಗಳ ಬಗ್ಗೆ ಇಲ್ಲಿ ವಿವರಗಳನ್ನು ಜಾಹಿರಾತಿನ ರೂಪದಲ್ಲಿ ಪ್ರಕಟಿಸಲಾಗಿದೆ. ಮೇಲ್ಮೈಯಲ್ಲಿ ಧಾರ್ಮಿಕ/ಭಕ್ತಿ ಮತ್ತು ವಾಣಿಜ್ಯ ಆಸಕ್ತಿಗಳು ಪರಸ್ಪರ ವೈರುಧ್ಯವುಳ್ಳ ಘಟಕಗಳಾಗಿ ಕಂಡರು, ಇವೆರಡನ್ನು ಬೆಸೆಯುವ ಕೊಂಡಿಯಾಗಿ ಈ ಕ್ಯಾಲೆಂಡರ್ ಹೊರಹೊಮ್ಮುತ್ತದೆ. ಪ್ರಾಯಶಃ ಈ ರೀತಿಯ ಬೆಸುಗೆಗೆ ಕ್ಯಾಲೆಂಡರ್ ಮಾಧ್ಯಮ ಅತ್ಯಂತ ಪರಿಣಾಮಕಾರಿಯಾಗಿರುವಂತದ್ದು ಎಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ಜೊತೆಗೆ ತಲತಲಾಂತರದಿಂದ ನಡೆದುಕೊಂಡು ಬಂದಿರುವ ಧಾರ್ಮಿಕ-ವಾಣಿಜ್ಯದ ಪರಸ್ಪರ ಪೂರಕ ಸಂಬಂಧವನ್ನು ಇದು ಮುಂದುವರೆಸುತ್ತದೆ (ಈ ಪೂರಕ ಅಂಶದ ಬಗ್ಗೆ ಪ್ರಸಿದ್ಧ ಚಿಂತಕ ಆರ್. ಎನ್. ನಂದಿಯವರ ‘ವೀರಶೈವ ಚಳುವಳಿಯ ಹುಟ್ಟು’ ಎಂಬ ಲೇಖನದಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ).
ಇದುವರೆಗು ಲಿಂಗಾಯತರ ಸಾಮುದಾಯಿಕ ಕ್ಯಾಲೆಂಡರ್ ಬಗ್ಗೆ ಚರ್ಚಿಸಲಾಯಿತು. ಈಗ ಲಿಂಗಾಯತ ಸಮುದಾಯೇತರ ಸಾಮಾಜಿಕ ಶಕ್ತಿಗಳು ಯಾವ ರೀತಿ ಬಸವಣ್ಣನವರನ್ನು ಕಲ್ಪಿಸಿಕೊಂಡಿವೆ ಎಂದು ಗಮನಿಸೋಣ. ನಮಗೆಲ್ಲ ತಿಳಿದಿರುವ ಒಂದು ಮಹತ್ವದ ವಿಚಾರಧಾರೆಯೆನೆಂದರೆ ಬಸವಣ್ಣನವರ ಸಮೇತವಾಗಿ 12ನೇ ಶತಮಾನದ ಇತರ ಶರಣರು ಜಾತಿ-ರಹಿತ, ಜಾತ್ಯಾತೀತ, ವರ್ಗರಹಿತ ಮತ್ತು ಲಿಂಗ ಸಮಾನತೆಯ ಸಮಾಜಕ್ಕಾಗಿ ಚಳುವಳಿ ಕೈಗೊಂಡವರು. ಇವರು ಸಾಮಾಜಿಕ ತಾರತಮ್ಯ, ಶೋಷಣೆ ಮತ್ತು ಜಾತೀಯತೆಯ ವಿರುದ್ಧ ದನಿ ಎತ್ತಿದ ಸಂತ/ದಾರ್ಶನಿಕರು. ಈ ವಿಚಾರಧಾರೆಯನ್ನು ಒಪ್ಪಿಕೊಂಡು, ಅಪ್ಪಿಕೊಂಡು ಸಾಮಾಜಿಕ ಸುಧಾರಣೆಯಲ್ಲಿ ತೊಡಗಿಸಿಕೊಂಡಿರುವವರಲ್ಲಿ ಲಿಂಗಾಯತೇತರ ಸಮುದಾಯಗಳು ಕೂಡ ಇವೆ. ಅವುಗಳಲ್ಲಿ ಪ್ರಮುಖವಾಗಿ ದಲಿತ ಸಮುದಾಯದ ಪ್ರಗತಿಪರರು, ಚಿಂತಕರು ಮತ್ತು ಕಾರ್ಯಕರ್ತರು ಇದ್ದಾರೆ. ‘ಬುದ್ಧ, ಬಸವ, ಅಂಬೇಡ್ಕರ್’ ಎಂಬ ಘೋಷಣೆಯಡಿ ದಲಿತರು ಮತ್ತು ಇತರ ನಿಮ್ನ ಸಮುದಾಯದವರು ತಮ್ಮ ಸಾಮಾಜಿಕ/ಧಾರ್ಮಿಕ ಹಕ್ಕು, ಸುಧಾರಣೆ ಮತ್ತು ಹೋರಾಟಕ್ಕಾಗಿ ಶ್ರಮಪಡುತ್ತಿರುವುದು ಈ ಸಮಾಜದ ಆಶೋತ್ತರಗಳನ್ನು ತಿಳಿಸುತ್ತದೆ. ಈ ದಿಕ್ಕಿನಲ್ಲಿ ಬಸವಣ್ಣನವರ ತತ್ವಗಳನ್ನು ಮತ್ತು ಸಾಮಾಜಿಕ ವಿಚಾರಗಳನ್ನು ತಮ್ಮ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಬಳಸಿಕೊಳ್ಳುತ್ತಿದ್ದಾರೆ. ಈ ಅನ್ಯಾಯವನ್ನು ಎಸಗಿದವರಲ್ಲಿ ಲಿಂಗಾಯತರಿದ್ದರೂ ಅವರ ವಿರುದ್ದ ಬಸವಣ್ಣನವರ ವಿಚಾರಗಳನ್ನು ಬಳಸಿಕೊಂಡು ಆಗುತ್ತಿರುವ ಅನ್ಯಾಯ ಪ್ರತಿಭಟಿಸುವ ಧೈರ್ಯವನ್ನು ತಳ ವರ್ಗ/ ಜಾತಿಯವರು ಪ್ರದರ್ಶಿಸಿದ್ದಾರೆ. ಹೀಗಾಗಿ ಬಸವಣ್ಣನವರು ಕೇವಲ ಲಿಂಗಾಯತರ ದೈವವಾಗಿರದೆ, ತಳ ಸಮುದಾಯದ ಆಶೋತ್ತರಗಳಿಗೆ ದಾರಿದೀಪವಾಗಿದ್ದಾರೆ. ಈ ಬಗೆಯ ಬಸವಣ್ಣನವರನ್ನು ಲಿಂಗಾಯತೇತರ ಮತ್ತು ತಳ ಸಮುದಾಯಕ್ಕೆ ಸೇರಿದ ಸಂಘಟನೆಯೊಂದರ ಕ್ಯಾಲೆಂಡರ್ ನಲ್ಲಿ ಹೇಗೆ ಕಲ್ಪಿಸಿಕೊಳ್ಳಲಾಗಿದೆಯೆಂದು ತಿಳಿದುಕೊಳ್ಳುವುದೆ ಮುಂದಿನ ಚರ್ಚೆಯ ಉದ್ದೇಶ.
ಚಿತ್ರ 2ರ ಕ್ಯಾಲೆಂಡರ್( ಮೇ, 2022) ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆಯವರದ್ದು. ವಿಶ್ವವಿದ್ಯಾನಿಲಯದ ಬೋಧಕೇತರ ಸಿಬ್ಬಂದಿಯ ಕೆಲವರು ಏಳೆಂಟು ವರ್ಷಗಳ ಹಿಂದೆ ಈ ವೇದಿಕೆಯನ್ನು ಸ್ಥಾಪಿಸಿ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರೀಯ ನಾಯಕರು, ಇತಿಹಾಸದಲ್ಲಿ ಆಗಿ ಹೋದ ಪ್ರಸಿದ್ದ ಸಂತ-ಯೋಗಿಗಳ ಜಯಂತಿಯನ್ನು ಆಚರಿಸುವುದು, ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸನ್ಮಾನ-ಗೌರವಗಳನ್ನು ಸಲ್ಲಿಸುವುದು ಈ ಚಟುವಟಿಕೆಗಳಲ್ಲಿ ಒಂದು. ಈ ವೇದಿಕೆಯ ಸಭೆ-ಸಮಾರಂಭಗಳಿಗೆ ಅತಿಥಿಗಳಾಗಿ ಸಮಾಜದ ಗಣ್ಯರು, ರಾಜಕಾರಣಿಗಳು, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಮತ್ತು ಉನ್ನತ ಅಧಿಕಾರಿಗಳು, ಪ್ರೊಫೆಸರ್ಗಳು, ಇತ್ಯಾದಿಯವರನ್ನು ಕರೆಯಿಸಲಾಗುತ್ತದೆ. ಈ ವೇದಿಕೆ ಯಾವುದೇ ರಾಜಕೀಯ ಅಥವಾ ಸಾಮಾಜಿಕ ಹೋರಾಟಗಳಲ್ಲಿ ಇದುವರೆಗು ನೇರವಾಗಿ ಅಥವಾ ಪರೋಕ್ಷವಾಗಿ ಪಾಲ್ಗೊಂಡಿರುವ ಉದಾಹರಣೆಗಳು ಪ್ರಸ್ತುತ ಲೇಖನದ ಲೇಖಕರಿಗೆ ಗೋಚರಿಸಿಲ್ಲ. ಇದುವರೆಗು ತನ್ನದೇ ಒಂದು ನಿರ್ದಿಷ್ಟ ಸೈದ್ಧಾಂತಿಕವಿದೆಯೆಂದು ಈ ವೇದಿಕೆ ಘೋಷಿಸಿಕೊಂಡಿಲ್ಲ. ಯಾವುದೇ ತಾತ್ವಿಕ ಅಡಿಪಾಯದ ಮೇಲೆ ನಿಲ್ಲದೆ ತನ್ನದೇ ಆದ ಅಸ್ತಿತ್ವವನ್ನು ಹೊಂದಲು ಇದು ಪ್ರಯತ್ನಿಸುತ್ತಿದೆ. ಪ್ರತಿ ವರ್ಷ ಈ ವೇದಿಕೆಯು ಹೆಚ್ಚು, ಹೆಚ್ಚು ಪ್ರಚಲಿತವಾಗುವ ಪ್ರಯತ್ನ ಮಾಡುತ್ತದೆ. ಪ್ರಸ್ತುತ ವರ್ಷದಲ್ಲಿ ಈ ವೇದಿಕೆ ತನ್ನ ಅಸ್ತಿತ್ವವನ್ನು ಕ್ಯಾಲೆಂಡರ್ ಮೂಲಕ ಪಸರಿಸುವ ಪ್ರಯತ್ನ ಮಾಡಿದೆ. ಈ ಕ್ಯಾಲಂಡರ್ನ ಮೇ ತಿಂಗಳ ಮುಖ ಪುಟದಲ್ಲಿ ಬಸವಣ್ಣನವರ ಎರಡು ಬಗೆಯ ಭಾವ ಚಿತ್ರಗಳನ್ನು ನಾವು ನೋಡಬಹುದು. ಇದರ ಜೊತೆಗೆ ಕ್ಯಾಲೆಂಡರ್ನ ಈ ಪುಟದಲ್ಲಿ ಇನ್ನು ಅನೇಕ ಅಂಶಗಳನ್ನು ಲಿಖಿತವಾಗಿ ಬರೆದಿರುವುದನ್ನು ನೋಡಬಹುದು. ಅವುಗಳನ್ನು ವಿಶ್ಲೇಷಿಸುವ ಮೊದಲು ಈ ಕ್ಯಾಲೆಂಡರ್ನಲ್ಲಿ ಬಸವಣ್ಣನವರ ಪರಿಕಲ್ಪನೆಯನ್ನು ಯಾವ ರೀತಿ ಅನಾವರಣಗೊಳಿಸಲಾಗಿದೆ ಎಂದು ನೋಡೋಣ.
ಬಸವಣ್ಣನವರನ್ನು ಇಲ್ಲಿ ಎರಡು ರೀತಿ ಕಲ್ಪಿಸಿಕೊಳ್ಳಲಾಗಿದೆ. ಮೊದಲನೆಯದು ದೊಡ್ಡ ಆಕಾರದ, ವಿಶಾಲವಾದ ಮತ್ತು ಎದ್ದು ಕಾಣುವ ಬಸವಣ್ಣನವರ ಫೋಟೊ. ಈ ಚಿತ್ರ ನೋಡಿದವರಿಗೆ ಅವರೊಬ್ಬ ಯೋಗಿ ಅಥವಾ ಸಂತ ಎಂಬ ಭಾವನೆ ಮೂಡುತ್ತದೆ. ಕೈಯಲ್ಲಿ ತಾಳೆಗರಿಗಳನ್ನು ಹಿಡಿದುಕೊಂಡು, ಬೋಧನಾ ಶೈಲಿಯಲ್ಲಿ ಕಾಣುವ ಬಸವಣ್ಣ ಒಬ್ಬ ತಪಸ್ವಿ/ ಸಿದ್ಧಪುರುಷನಂತೆ ಕಾಣುತ್ತಾರೆ. ಚಿತ್ರ 1 ರ ಸಾಮುದಾಯಿಕ ಕ್ಯಾಲಂಡರ್ ರೀತಿಯಲ್ಲಿ ಬಸವಣ್ಣನವರನ್ನು ಇಲ್ಲಿ ಕಲ್ಪಿಸಿಕೊಳ್ಳಲಾಗಿದೆ. ಆದರೆ ಚಿತ್ರ 1 ರಂತೆ ಬಸವಣ್ಣನವರನ್ನು ಇಷ್ಟಲಿಂಗ ತತ್ವದ ಪ್ರತಿಪಾದಕರಂತೆ ಇಲ್ಲಿ ಬಿಂಬಿಸಿಲ್ಲ. ಮೇ ತಿಂಗಳಲ್ಲಿ ಬಸವ ಜಯಂತಿ ಇರುವುದರಿಂದ ಈ ತಿಂಗಳ ಮುಖಪುಟದಲ್ಲಿ ಬಸವಣ್ಣನವರ ಚಿತ್ರವನ್ನು ಪ್ರಕಟಿಸಲಾಗಿದೆ. ಈ ಚಿತ್ರ ಯಾವುದೇ ಕುಂಚದಿಂದ ಮೂಡಿ ಬಂದದಲ್ಲ. ಅದು ಬಸವಣ್ಣನವರ ಪುತ್ಧಳಿಯ ಪ್ರತಿರೂಪ. ಇದೇ ಪುಟದಲ್ಲಿ ಚಿಕ್ಕ ಆಕಾರದ ಬಸವಣ್ಣನವರ ಚಿತ್ರವೂ ಇದೆ. ಇದು ಇತರ ವ್ಯಕ್ತಿ/ದೇವರು/ಸಂತರ ಸಾಲಿನಲ್ಲಿ ಒಂದು. ತಾಳೆಗರಿ/ವಚನ ಗ್ರಂಥವನ್ನು ಹಿಡಿದುಕೊಂಡಿರುವ ಬಸವಣ್ಣನವರ ಪುತ್ಧಳಿಯ ಚಿತ್ರ ಕ್ಯಾಲೆಂಡರ್ನ ವಿಶಾಲ ಜಾಗದಲ್ಲಿ ಪ್ರಮುಖವಾಗಿ ಕಾಣುಸುತ್ತಿದ್ದರೆ ಈ ಸಾಲಿನಲ್ಲಿ ಕಾಣುವ ಬಸವಣ್ಣ, ಕರ್ನಾಟಕದ ಸಂಸ್ಕೃತಿ ಮತ್ತು ಧಾರ್ಮಿಕ ಜೀವನವನ್ನು ಪ್ರಭಾವಿಸಿದ ಅನೇಕ ಮಹನೀಯರಲ್ಲಿ ಒಬ್ಬರು ಮಾತ್ರ. ಈ ಸಾಲಿನಲ್ಲಿ ಕಾಣಬರುವ ಇತರ ಮಹನೀಯರು ಯಾರೆಂದರೆ ಮೊದಲಿಗೆ ಬಿ.ಆರ್. ಅಂಬೇಡ್ಕರ್, ಕುವೆಂಪು, ನಾಲ್ವಡಿ ಕೃಷ್ಣರಾಜ ಒಡೆಯರ್, ಗಾಂಧಿ, ಬುದ್ಧ, ಶಂಕರಾಚಾರ್ಯ, ವಾಲ್ಮೀಕಿ ಮಹರ್ಷಿ, ಕನಕದಾಸ, ಜಗಜೀವನ ರಾಂ, ಅಬ್ದುಲ್ ಕಲಾಮ್ ಮತ್ತು ಏಸು ಕ್ರಿಸ್ತ. ವಿಶ್ವವಿದ್ಯಾಲಯದ ಸಾಮಾಜಿಕ ಆಗು-ಹೋಗುಗಳನ್ನು ತಿಳಿದುಕೊಂಡವರಿಗೆ ಕರ್ನಾಟಕದ ಎಲ್ಲಾ ಸಮುದಾಯದ/ಸಮಾಜದ ಮಹನೀಯರಿಗೆ ಮನ್ನಣೆ ನೀಡಬೇಕೆಂಬ ಉದ್ದೇಶದಿಂದ ಇಷ್ಟೊಂದು ಸಂಖ್ಯೆಯಲ್ಲಿ ಫೋಟೊಗಳನ್ನು ಈ ವೇದಿಕೆ ಪ್ರಕಟಿಸಿದೆಯೆಂದು ತಿಳಿಯುತ್ತದೆ. ದಲಿತ, ಮುಸ್ಲಿಂ ಅಥವಾ ಒಕ್ಕಲಿಗರ ಧಾರ್ಮಿಕತೆಯನ್ನು ಬಿಂಬಿಸುವ ಯಾವುದೇ ಚಿತ್ರವನ್ನು ಇಲ್ಲಿ ಪ್ರದರ್ಶಿಸಲು ಸಾಧ್ಯವಾಗಲಿಲ್ಲವೇನೋ! ಹಾಗಾಗಿ ಬಿ.ಆರ್. ಅಂಬೇಡ್ಕರ್, ಜಗಜೀವನ್ ರಾಂರನ್ನು ತಳ/ದಲಿತ ಸಮುದಾಯದ ಪ್ರತಿನಿಧಿಗಳಾಗಿ, ಕುವೆಂಪುರವರನ್ನು ಒಕ್ಕಲಿಗ ಸಮುದಾಯದ ಮತ್ತು ಭಾರತದ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂರನ್ನು ಮುಸ್ಲಿಂರ ಪ್ರತಿನಿಧಿಯಾಗಿ ಈ ಸಾಲಿನಲ್ಲಿ ಇರಿಸಲಾಗಿದೆ. ಪುರಾತನ ದೇವರು, ಸಂತರು, ಯೋಗಿಗಳು, ದಾರ್ಶನಿಕರು, ಆಧುನಿಕ ಕಾಲದ ರಾಜ, ಕವಿ ಮತ್ತು ರಾಜಕೀಯ ಮುತ್ಸದ್ಧಿ ಎಲ್ಲರನ್ನು ಒಂದೇ ಸಾಲಿಗೆ ಸೇರಿಸಿ, ಭಿನ್ನಭಿನ್ನ, ವೈರುಧ್ಯದ ವಿಚಾರಗಳುಳ್ಳ ಇವರನ್ನು ಸಮುದಾಯದ ಪ್ರತಿನಿಧಿಗಳಂತೆ ಬಿಂಬಿಸಿ, ಅವರೆಲ್ಲರ ನಡುವೆ ಸಮನ್ವಯತೆ ಸಾಧಿಸುವ ಪ್ರಯತ್ನವನ್ನು ಈ ಕ್ಯಾಲೆಂಡರ್ ಮಾಡುತ್ತದೆ. ಸಮನ್ವತೆಯಲ್ಲೂ ಸಮುದಾಯದ ನೆರಳನ್ನು ನಾವಿಲ್ಲಿ ಕಾಣುತ್ತೇವೆ.
ವಿಶಾಲಾಕಾರದ ಮತ್ತು ಚಿಕ್ಕ ಆಕಾರದ ಬಸವಣ್ಣ ಐತಿಹಾಸಿಕವಾಗಿ ಎರಡು ಭಿನ್ನ ಹಂತಗಳನ್ನು ಸೂಚಿಸುತ್ತಿದ್ದರೂ ಅವೆರಡು ಒಂದೇ ಎಂಬ ಮತ್ತೊಂದು ಸಮನ್ವಯದ ಪ್ರಯತ್ನವನ್ನು ನಾವಿಲ್ಲಿ ಕಾಣಬಹುದು. ಚಿಕ್ಕ ಆಕಾರದ ಬಸವಣ್ಣ ಕಿರೀಟಧಾರಿ. ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಮಂತ್ರಿಯಾಗಿದ್ದ ಬಸವಣ್ಣ ಈ ರೀತಿಯಾಗಿ ಕಂಡಿರಬಹುದೆಂದು ಕಲ್ಪಿಸಿ, ಚಿತ್ರಿಸಲ್ಪಟ್ಟ ಆಕೃತಿ. ಅಧಿಕಾರ, ಸ್ಥಾನ ಮತ್ತು ರಾಜಕೀಯ ಜವಾಬ್ದಾರಿಯ ಅಂಶಗಳನ್ನು ಈ ಚಿತ್ರ ಒಳಗೊಂಡಿದೆ. ಒಂದೇ ಪುಟದಲ್ಲಿ ಒಂದೇ ತರಹದ ಎರಡು ಚಿತ್ರಗಳನ್ನು ಪ್ರಕಟಿಸುವುದು ಚೆನ್ನಾಗಿ ಕಾಣುವುದಿಲ್ಲವೆನೋ ಎಂಬ ವಿಚಾರ ಇಲ್ಲಿ ಕಾರ್ಯಗತವಾಗಿರಬಹುದು. ಈ ಚಿತ್ರದ ಹಿನ್ನೆಲೆಯಲ್ಲಿ ಬಸವಣ್ಣನವರನ್ನು ಒಬ್ಬ ಸಂತ ಅಥವಾ ತತ್ವಜ್ಞಾನಿ ಎಂದು ಕಲ್ಪಿಸಿಕೊಳ್ಳಲು ಅಸಾಧ್ಯವಾಗುತ್ತದೆ.
ಬಸವಣ್ಣನ ಚಿತ್ರದ ಅಕ್ಕ-ಪಕ್ಕ, ಮೇಲೆ-ಕೆಳಗೆ ಸಮಕಾಲೀನ ರಾಜಕೀಯದಲ್ಲಿ ಸಕ್ರೀಯರಾಗಿರುವ ಆದರೆ ಪರಸ್ಪರ ವಿರುದ್ಧ ರಾಜಕೀಯ ಸಿದ್ಧಾಂತಗಳನ್ನೊಡಗೊಂಡ ಹಾಲಿ ಶಾಸಕರು (ಹಾಲಿ ಹಾಗು ಮಾಜಿ ಮುಖ್ಯಮಂತ್ರಿಗಳನ್ನು ಒಳಗೊಂಡು), ಸಿಂಡಿಕೇಟ್ ಸದಸ್ಯರು ಮತ್ತು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಪ್ರಮುಖ ವ್ಯಕ್ತಿಗಳ ಭಾವಚಿತ್ರಗಳನ್ನು ಪ್ರಿಂಟ್ ಮಾಡಲಾಗಿದೆ. ವಿಶ್ವವಿದ್ಯಾಲಯದ ಅಧ್ಯಾಪಕ ಬಳಗದವರ ಅನೇಕ ಫೋಟೋಗಳನ್ನೂ ಈ ಪುಟದಲ್ಲಿ ನೋಡಬಹುದು. ಈ ವೇದಿಕೆಗೆ ಸಮಸ್ತತೆ ಮತ್ತು ಸಂಯುಕ್ತತೆಯ ಕಾಳಜಿಯಿದೆ ಎಂದು ತಿಳಿಸುವ ಪ್ರಯತ್ನವನ್ನು ಕಾಣಬಹುದು. ಅನೇಕ ಚಿತ್ರಗಳಿಂದ ಕೂಡಿರುವ ಈ ಕ್ಯಾಲೆಂಡರ್ನಲ್ಲಿ ಭಾವಚಿತ್ರಗಳ ಮೂಲಕ ಅವರೆಲ್ಲರಿಗು ಸಮಾನವಾಗಿ ಮನ್ನಣೆ ನೀಡುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಭಾವ ಮೂಡುತ್ತದೆ.
ಕ್ಯಾಲೆಂಡರ್ ನ ಮೂಲ ಸಂರಚನೆಯಲ್ಲಿ (ದಿನಾಂಕ, ತಿಂಗಳು ಮತ್ತು ವರ್ಷಗಳ ಕಾಲಾವಧಿ) ಮಾರ್ಪಾಡುಗಳನ್ನು ಮಾಡಿಕೊಳ್ಳದೆ, ಅದನ್ನು ಯಥಾವತ್ತಾಗಿ ಸ್ವೀಕರಿಸಿ ಭಾವಚಿತ್ರಗಳ ಮೂಲಕ ಸಾಂಸ್ಕೃತಿಕ, ರಾಜಕೀಯ ಹಾಗು ಧಾರ್ಮಿಕ ವಲಯಗಳ ಜೊತೆಗೆ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ‘ಮುಖ್ಯವಾಹಿನಿ’ಯ ಸಮಾಜದಲ್ಲಿ ತಮ್ಮದು ಒಂದು ಸ್ಥಾನವಿದೆ ಎಂಬ ಸಂದೇಶವನ್ನು ಈ ವೇದಿಕೆ ಹೊರಡಿಸುತ್ತಿರುವಂತಿದೆ. ಒಟ್ಟಾರೆಯಾಗಿ, ಲಿಂಗಾಯತರ ಕ್ಯಾಲೆಂಡರ್ ನಲ್ಲಿ (ಚಿತ್ರ 1) ಬಸವಣ್ಣನವರನ್ನು ಹೆಚ್ಚು, ಹೆಚ್ಚು ಸಾಮುದಾಯಿಕವಾಗಿಸುವ, ಅದಕ್ಕೊಂದು ಧರ್ಮದ ಚೌಕಟ್ಟನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಆದರೆ ವಿಶ್ವಮಾನವ ವೇದಿಕೆಯಿಂದ ಪ್ರಕಟಗೊಂಡ ಎರಡನೇ ಕ್ಯಾಲಂಡರ್ನಲ್ಲಿ (ಚಿತ್ರ 2) ಬಸವಣ್ಣನವರನ್ನು ಸಾರ್ವತ್ರಿಕಗೊಳಿಸುವ ಪ್ರಯತ್ನ ಮಾಡಲಾಗಿದೆ.
Comments 13
ಮಹೇಶ್ ಚಿಕ್ಕಜಾಜೂರು
Jul 5, 2022ಕ್ಯಾಲೆಂಡರುಗಳಲ್ಲಿ ಬಸವಣ್ಣನವರನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುವ ಅಂಶ ನಿಜವಾದುದು. ಬಸವಣ್ಣನವರನ್ನು ಮುಂದಿಟ್ಟುಕೊಂಡು ನಡೆಸುವ ಯಾವುದೇ ವ್ಯವಹಾರಗಳನ್ನು ಮರೆಮಾಚಬಹುದು! ಪಾಪ ಬಸವಣ್ಣ!!
ಜಗದೀಶ್ ಪಿ.ಆರ್
Jul 7, 2022ಶಿವಶರಣರ ಭಾವಚಿತ್ರಗಳನ್ನು ಇಟ್ಟುಕೊಂಡು ತಯಾರಿಸುವ ಕ್ಯಾಲೆಂಡುಗಳಿಗೆ ಎಂಬತ್ತು ವರುಷಗಳ ಇತಿಹಾಸವಿರುವುದು ಕುತೂಹಲದ ಸಂಗತಿ. ಹಳೆಯ ಅಥವಾ ಮೊದಲ ಕ್ಯಾಲೆಂಡರಿನ ಪ್ರತಿ ಇದ್ದರೆ ಅದರ ಫೋಟೊ ಹಾಕುವಿರಾ? ಲೇಖನ ಇಷ್ಟವಾಯಿತು.
Kiran Kumar J
Jul 7, 2022ವಿಶಿಷ್ಟ ಲೇಖನ, ನಿಜಕ್ಕೂ ಆಸಕ್ತಿಪೂರ್ಣ ಅಧ್ಯಯನ ಸರ್.
ಮಹಾಲಿಂಗಪ್ಪ ಬಿಳಚೋಡು
Jul 10, 2022ಕ್ಯಾಲಂಡರ್ ದೃಶ್ಯ-ಬರವಣಿಗೆಯೆರಡನ್ನು ಒಳಗೊಂಡ ಮಾಧ್ಯಮ ಎಂದು ನೀವು ತೋರಿಸಿದ ರೀತಿ ಕುತೂಹಲಕಾರಿಯಾಗಿದೆ.
PROF. SOMASHEKHARAPPA, DAVANGERE
Jul 12, 2022Indeed it is a well written write up. The concepts like
Calendrical year, Lingayath Calender,
Basava Varsha and similar termiologies should be part of our day today vocabulary.
Basava’s birth should mark the beginning of New Year to any lingayath, and thereafter one year what should be considered the Lingayath Calender- a calendrical year.please
Convey my greetings to Prof Boratti.
I wish the bayalu should serve as a linking media to all the Lingaysts
Kudos to your concern and sustained efforts. Long live bayalu.
Regards with thanks.
Chinmayi
Jul 14, 2022Very interesting article
P Satyamedhavi
Jul 16, 2022I too have published one calender in which both Basavesh and Haralayya in Sharanu mudra STAND as a center of attraction among all sharanas
Jayadevappa Kini
Jul 19, 2022ಕ್ಯಾಲೆಂಡರಗಳನ್ನೂ ಜಾಹೀರಾತುವಿನಂತೆ ಬಳಸಲಾಗುವ ಇವತ್ತಿನ ಮನೋಧರ್ಮವನ್ನು ಧರ್ಮದ ವ್ಯಾಪಾರೀಕರಣ ಎನ್ನಬಹುದು? ಅಥವಾ ವ್ಯಾಪಾರದಲ್ಲಿ ಧಾರ್ಮಿಕರಣವೇ ಗೊತ್ತಾಗುತ್ತಿಲ್ಲ.
ಪ್ರಮೋದ್ ತರಿಕೇರೆ
Jul 19, 2022ಬಸವಣ್ಣ ಲಿಂಗಾಯತ ಧರ್ಮದ ಕೇಂದ್ರಬಿಂದು ಎನ್ನುವುದನ್ನು ಸಮಾಜ ಇವತ್ತು ಪೂರ್ಣಪ್ರಮಾಣದಲ್ಲಿ ಒಪ್ಪಿಕೊಂಡಿದೆ. ಅದನ್ನು ಪ್ರಸ್ತುತ ಲೇಖನದಲ್ಲಿ ಅಡಕವಾಗುವಂತೆ ತಿಳಿಸಲಾಗಿದೆ.
ಫಾಲಾಕ್ಷಯ್ಯ ಹುಂಚೆಕಟ್ಟೆ, ಬಳ್ಳಾರಿ
Jul 25, 2022ಕ್ಯಾಲೆಂಡರನ್ನು ನೋಡದ ಜನರಿಲ್ಲ. ಈಚೆಗೆ ನಾನೂ ಒಂದು ಕ್ಯಾಲೆಂಡರ್ ನೋಡಿದೆ. ಅದರಲ್ಲಿ ಸಂಪೂರ್ಣವಾಗಿ ಶರಣರ ನುಡಿ ವಚನಗಳನ್ನು ತುಂಬಿಬಿಟ್ಟಿದ್ದಾರೆ. ನೋಡಲಿಕ್ಕೆ ತುಂಬಾ ಗಜಿಬಿಜಿ ಎನಿಸುತ್ತಿತ್ತು. ಹೀಗೆ ಧರ್ಮವನ್ನು ಪ್ರಚಾರ ಮಾಡುತ್ತೇವೆಂದು ಅತಿಯಾಗಿ ಚೂರೂ ಜಾಗ ಬಿಡದೆ ಮಾಡುವ ಕ್ಯಾಲೆಂಡರುಗಳು ತಮ್ಮ ಉದ್ದೇಶವನ್ನು ಈಡೇರಿಸಲಾರವು, ಅಲ್ಲವೇ?
Vijaya H
Jul 26, 2022ಸಮಾಜದ ಸಂಸ್ಕೃತಿಯನ್ನು ಅಧ್ಯಯನ ಮಾಡಲು ಕ್ಯಾಲಂಡರ್ ಕಲೆಯು ಮುಖ್ಯ ಅಂಶವೆನ್ನುವ ಹೊಸ ನೋಟವನ್ನು ನೀಡಿದ ವಿಶಿಷ್ಟ ಲೇಖನ.
ನಿತೀಶ್ ಕುರವತ್ತಿ
Jul 31, 2022ನಾಲ್ಕು ದಶಕಗಳ ಹಿಂದೆ ಇದ್ದಷ್ಟು ಕ್ಯಾಲೆಂಡರುಗಳ ಬೇಡಿಕೆ ಈಗ ಸಾಕಷ್ಟು ಕುಸಿದಿದೆ. ಆದರೂ ಶರಣ ಸಂಸ್ಕೃತಿಯ ಮಾಹಿತಿಗಾಗಿ ಅನೇಕರು ಈ ಮಾಧ್ಯಮವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಅಲ್ಲಗಳೆಯಲಿಕ್ಕಾಗುವುದಿಲ್ಲ.
Martin Leo
Aug 6, 2022Excellent blog here! Your site uploads very fast, thanks for sharing this post.