ಕುರುಹಿಲ್ಲದಾತಂಗೆ ಹೆಸರಾವುದು?
ಜೀವ ಜಗತ್ತಿನ ಕುರಿತು ಚಿಂತನೆ ನಡೆದಾಗ ಮನುಷ್ಯನ ಕಲ್ಪನೆಯಲ್ಲಿ ಜನ್ಮ ತಳೆದದ್ದು ದೇವರು. ಅದೊಂದು ಬೆರಗು ಮತ್ತು ಭಯಗಳ ಮಿಶ್ರಣದಲ್ಲಿ ರೂಪು ತಳೆದ ಅಚ್ಚರಿ. ವಿಚಾರಗಳ ಹುಟ್ಟಿನೊಡನೆ ನಾಗರಿಕತೆಯ ಬೆಳವಣಿಗೆಯ ಉದ್ದಕ್ಕೂ ನಾನಾ ರೂಪುಗಳಲ್ಲಿ, ನಾನಾ ಭಾವಗಳಲ್ಲಿ ವಿಕಾಸಗೊಂಡ ವಿಸ್ಮಯ. ಜಗತ್ತನ್ನು ನಡೆಸುವ ಅಗೋಚರವಾದ ಆ ಅಮಾನುಷ ಶಕ್ತಿಯನ್ನು ಮನುಷ್ಯ ನಾನಾ ಆಕಾರಗಳಲ್ಲಿ ಪೂಜಿಸಿದ, ನಾನಾ ಹೆಸರುಗಳಿಂದ ಪ್ರಾರ್ಥಿಸಿದ. ದೇವರ ಸುತ್ತ ಧರ್ಮಗಳು ಹುಟ್ಟಿಕೊಂಡವು, ಜಾತಿಗಳು ತಲೆ ಎತ್ತಿದವು. ಪೂಜಾರಿ ರೂಪದ ಮಧ್ಯವರ್ತಿಗಳು, ಗುರುವಿನ ವೇಷದ ವಕ್ತಾರರು ಜಾಗ ಪಡೆದುಕೊಂಡರು. ಕಟ್ಟುಪಾಡುಗಳು, ವಿಧಿನಿಷೇಧಗಳು, ಮೂಢನಂಬಿಕೆಗಳು ಸುತ್ತುವರಿದವು. ಹೀಗೆ ತನ್ನ ಕಲ್ಪನೆಯ ಕೂಸಾದ ದೇವರನ್ನು ಬೆನ್ನು ಹತ್ತಿದ ಮನುಷ್ಯ ಕ್ರಮೇಣ ತನ್ನ ಮನಸ್ಸನ್ನು, ಭಾವನೆಗಳನ್ನು, ವಿಚಾರಗಳನ್ನು ಅದರ ಸುತ್ತ ಸುತ್ತಿಕೊಳ್ಳುತ್ತಾ ಅದರಲ್ಲೇ ಬಂಧಿಯಾದ. ಅದರಿಂದ ಹೊರಬರದಷ್ಟು ಹೂತುಹೋದ. ಕೊನೆಗೆ ತನ್ನನ್ನೇ ಸಂಪೂರ್ಣ ಮರೆತುಬಿಟ್ಟ.
ಅದ್ಭುತ ಕಲ್ಪನೆಯೊಂದು ಶೋಷಣೆಯ ಹಾದಿ ತುಳಿದಾಗ, ಮನುಷ್ಯನಲ್ಲಿ ಮತ್ತೆ ಮರುಚಿಂತನೆ ಆರಂಭವಾಯಿತು. ಅದರ ಪರಿಣಾಮವೆಂಬಂತೆ ಪ್ರಪಂಚದಾದ್ಯಂತ ಧರ್ಮದ ಹೊಟ್ಟೆಯಲ್ಲೇ ಅಲ್ಲಲ್ಲಿ ಬಂಡಾಯಗಳೆದ್ದು, ಅತಿಮಾನುಷ ಕಲ್ಪನೆಯಲ್ಲೇ ಹೊಸ ಚಿಂತನೆಗಳು ಮೊಳಕೆಯೊಡೆದವು. ಆದರೆ ಆ ಹೊಸ ನೋಟಗಳು, ವಿಚಾರಗಳು ಸಾರ್ವತ್ರಿಕವಾಗದಂತೆ ಆಯಾ ನಂಬಿಕೆಗಳ/ ಧರ್ಮಗಳ ಪಟ್ಟಭದ್ರ ಹಿತಾಸಕ್ತಿಗಳು ಗೋಡೆ ಕಟ್ಟಿವೆ, ಧರ್ಮನಿಂದನೆ ಹೆಸರಿನಲ್ಲಿ ದೇವರ ಕುರಿತ ವೈಚಾರಿಕ ಹುಡುಕಾಟಗಳು ಚಲನಶೀಲವಾಗದಂತೆ ತಡೆಯೊಡ್ಡಿವೆ.
ವಾಸ್ತವವಾಗಿ ದೇವರು ಯಾರು, ಅಥವಾ ದೇವರೆಂದರೆ ಏನು ಎಂಬುದು ತಿಳಿಯದು. ಹೀಗಾಗಿ ಆತ/ಆಕೆ/ಅದು ನಾಮರಹಿತ. ಒಂದೊಮ್ಮೆ ನಮಗೆ ದೇವರೆಂದರೆ ಏನು, ಯಾರು ಎಂಬ ಅರಿವು ಮೂಡಿದಾಗ ಆಗಲೂ ಅದು ನಾಮರಹಿತ, ರೂಪು ರಹಿತ. ಕುರುಹಿಲ್ಲದಾತಂಗೆ ಹೆಸರಾವುದಿಲ್ಲ ಎನ್ನುತ್ತಾರೆ ಅಂಬಿಗರ ಚೌಡಯ್ಯ. ದೇವರು ಅಸ್ತಿತ್ವದಾಚೆಯ ಅಸ್ತಿತ್ವ, ಅದರಾಚೆಯ ಶೂನ್ಯ. ಅದನ್ನು ಗ್ರಹಿಸುವ ಶಕ್ತಿ ಮಾನವನ ಬುದ್ಧಿಗೂ, ಮನಕ್ಕೂ ಸಾಧ್ಯವಿಲ್ಲ. ಸಂತ ಅಗಸ್ಟಿನ್ ಹೇಳುತ್ತಾರೆ: “ಅಂತರಂಗದಲ್ಲಿ ಪರಮಸತ್ಯವನ್ನರಿತ ಬಳಿಕ ದೇವರ ಬಗ್ಗೆ ಮೌನವಾಗಿ ಉಳಿಯುವುದೇ ಲೇಸು. ದೇವರ ಬಗ್ಗೆ ಏನೇ ಹೇಳಹೋದರೂ ಅದು ಒಟಗುಟ್ಟಿದಂತೆ, ಸುಳ್ಳನ್ನೇ ಬಡಬಡಿಸಿದಂತೆ. ಮಾತಿಗೆ ಮೀರಿದ ಸತ್ಯವನ್ನು ಮಾತಿನಲ್ಲಿ ಹಿಡಿವ ಹುಚ್ಚುತನ ಬೇಡ.”
ನಿಜ. ನಿತ್ಯತೆಯನ್ನು, ಅನಂತತೆಯನ್ನು, ಅಮರತ್ವವನ್ನು ಹೆಸರು ಮತ್ತು ರೂಪಗಳಿಂದ ಹಿಡಿದಿಡಲಾಗದು. ಅದು ತನ್ನನ್ನು ತಾನೇ ಮೀರಬಲ್ಲ, ತನಗೆ ತಾನೇ ಹೋಲಿಕೆಯಾಗಬಲ್ಲ ಸತ್ಯ. ಕ್ಷಣಕ್ಷಣಕ್ಕೂ ಬದಲಾಗುವ, ವಿಕಸನಗೊಳ್ಳುವ ನಿತ್ಯತೆ. ಆದ್ದರಿಂದ ದೇವರಿಗೊಂದು ಹೆಸರಿಡುವುದಾಗಲಿ, ರೂಪು ಕೊಡುವುದಾಗಲಿ ಸಾಧ್ಯವಿಲ್ಲ. ಯಾವುದನ್ನೇ ಆಗಲಿ ಹೆಸರಿಟ್ಟು ಕರೆದರೆ ಅಷ್ಟರಮಟ್ಟಿಗೆ ಅದರ ಮಹತ್ತನ್ನು ಕುಗ್ಗಿಸಿದಂತೆ. ಯಾವ ಹೆಸರೂ, ಯಾವ ರೂಪೂ ಅದನ್ನು ಹಿಡಿದಿಡಲಾಗದು. ಅದು ಕೇವಲ ‘ಇದೆ’ ಅಷ್ಟೇ. ಅದಕ್ಕೆ ಶರಣರು ‘ಹೆಸರಿಡಬಾರದ ಲಿಂಗ’ ಎನ್ನುತ್ತಾರೆ. ಇಷ್ಟಲಿಂಗವು ಕೂಡ ಕುರುಹಲ್ಲದಾ ಕುರುಹು.
ನಿರಾಳವೆಂಬ ಕೂಸಿಂಗೆ ಬೆಣ್ಣೆಯನಿಕ್ಕಿ, ಹೆಸರಿಟ್ಟು ಕರೆದವರಾರೊ ?
ಅಕಟಕಟಾ ಶಬ್ಧದ ಲಜ್ಜೆ[ಯ] ನೋಡಾ !
ಗುಹೇಶ್ವರನರಿಯದ ಅನುಭಾವಿಗಳೆಲ್ಲರ
ತರಕಟ ಕಾಡಿತ್ತು.
ನಿರಾಳವೆಂಬ ಕೂಸು- ಅಂದರೆ, ಅವಯವಗಳಿಲ್ಲದ, ನಿರಾಧಾರ, ನಿರಾಕಾರ, ನಿರ್ವಿಕಾರವಾದ ಘನಸತ್ಯ. ಅದಕ್ಕೆ ಯಾವ ಹೆಸರೂ ಸಮನಿಸಲಾರದು. ಎಂಥ ಹೆಸರುಗಳೂ ತಮ್ಮ ಮಿತಿಯನ್ನರಿತು ನಾಚಿ ನಿಂತು ಬಿಡುತ್ತವೆ. ಪರಸತ್ಯದ ಸಮೀಪವೂ ಅವು ಸುಳಿಯಲಾರವು. ಹೀಗಿರುವಾಗ ಆ ಪರಮಸತ್ಯವನ್ನು ಪದಗಳಿಂದ ಮುಟ್ಟಿ ವರ್ಣಿಸಲಾದೀತೇ? ಹಾಗೆ ಯಾವುದೇ ಶಬ್ದದಿಂದ ವರ್ಣಿಸಲು ಯತ್ನಿಸಿದರೂ ಅದು ಆ ಅಖಂಡತೆಗೆ ಭಂಗ ತರುತ್ತದೆ. ಆ ಪರಮ ಸತ್ಯವನ್ನು ಅರಿಯದ, ಅನುಭವಿಸದ ಶಬ್ದ ವೀರರೆಲ್ಲರೂ ನಿರಾಳಕ್ಕೆ ಹೆಸರು ಕೊಡಲು ಹೋಗಿ ಮೂರ್ಖರಾಗುತ್ತಾರೆ, ನಗೆಪಾಟಲಿಗೀಡಾಗುತ್ತಾರೆ. ಆ ಶಬ್ದದ ಜಾಲವೇ ಮಾಯೆಯಾಗಿ ಅವರನ್ನು ಇನ್ನಿಲ್ಲದಂತೆ ಕಾಡುತ್ತದೆ. ಹೆಸರಿಕ್ಕುವ ಹುಮ್ಮಸ್ಸಿನವರೆಲ್ಲ ಕೇವಲ ಶಬ್ದ ವ್ಯಾಮೋಹಿಗಳು ಎನ್ನುತ್ತಾರೆ ಅಲ್ಲಮರು.
ಭಾವನಾತ್ಮಕವಾಗಿ, ಮಾನಸಿಕವಾಗಿ ಹಾಗೂ ಮಾನವೀಯವಾಗಿ ದೇವರೊಂದಿಗೆ ಸಂಬಂಧ ಕುದುರಿಸಿಕೊಳ್ಳಲು ದೇವರನ್ನು ವೈಯಕ್ತೀಕರಿಸಿಕೊಳ್ಳುವುದು, ರೂಪಿಸಿಕೊಳ್ಳುವುದು, ಹೆಸರಿಡುವುದು ಆರಂಭವಾಯಿತು. ಆದರೆ ಅನಂತತೆಯನ್ನು ಗ್ರಹಿಸಿಕೊಳ್ಳಲು ಮಾನವ ಮಿದುಳಿಗೆ ಅಸಾಧ್ಯವಾದ್ದರಿಂದ ನಿಸ್ಸೀಮ, ಅನಂತ ರೂಪಿ ದೇವರನ್ನು ಹೇಗೆ ಕರೆಯುವುದು? ಹೀಗಾಗಿ ಆತನ ಅನಂತ ಗುಣಲಕ್ಷಣಗಳನ್ನು ಕಲ್ಪಿಸಿಕೊಂಡು ಹೆಸರಿಡುವ ಪ್ರಯತ್ನಗಳು ನಡೆದವು. ವೇದ, ಪುರಾಣ, ಆಗಮಗಳು ದೇವರನ್ನು ಶಿವ, ವಿಷ್ಣು, ಬ್ರಹ್ಮ, ಹೀಗೆ ಹಲವಾರು ಹೆಸರುಗಳಿಂದ ಕರೆದಿವೆ. ಉಪನಿಷತ್ತಿನಲ್ಲಿ ಪರವಸ್ತು, ಪರಮ ಸತ್ಯ, ಇದಂ, ಪುರುಷ, ತತ್ (ಅದು) ಎಂಬರ್ಥದಲ್ಲಿ ದೇವರನ್ನು ಸಂಬೋಧಿಸಲಾಗಿದೆ. ನಾಥ ಪಂಥದಲ್ಲಿ ಆದಿ, ಅನಾದಿ, ಶೂನ್ಯ, ಘನ, ಪರವಸ್ತು ಎನ್ನುತ್ತಾರೆ. ಮುಸ್ಲಿಂರು ಅಲ್ಲಾಹ್ ಎಂದರು. ಕ್ರೈಸ್ತರು ಜೆಹೊವಾ ಎಂದರು. ಸಿಖ್ಖರು ವಾಹೇಗುರು, ಅಕಲ್ ಪುರಾಕ್ ಎಂದು ಕರೆದರು. ಶೈವರಿಗೆ ಶಿವ, ವೈಷ್ಣವರಿಗೆ ವಿಷ್ಣು. ಶಿವಪುರಾಣದಲ್ಲಿ “ಆತ ಏಕ, ಆತ ಅನೇಕ”, “ಸಾವಿರಾರು ಹೆಸರುಗಳಿಂದ ನಾವು ಅವನನ್ನು ಸ್ತುತಿಸುತ್ತೇವೆ” ಎನ್ನುವ ಮಾತುಗಳಿವೆ. ದೈವದ ಆಳ, ಎತ್ತರ, ಅಗಲಗಳನ್ನು ಭವ್ಯವಾಗಿ ವರ್ಣಿಸುವ ಸ್ತುತಿಗಳಿವೆ. ಹಿಂದೂ ಸಂಸ್ಕೃತಿಯಲ್ಲಿ ಹೀಗೆ ಮುಕ್ಕೋಟಿ ದೇವರುಗಳು ಹುಟ್ಟಿಕೊಂಡವು!
ಹೆಸರಿಡಬಾರದ ಲಿಂಗ
ದೇವರು ಅತೀಂದ್ರಿಯ ಸತ್ಯ. ರೂಪ, ನಾಮಗಳ ಪರಿಧಿಯಲ್ಲಿ ಸಿಲುಕಲಾರ. ಆದರೆ ಕಾಲ, ದೇಶ ಮತ್ತು ಕಾರಣಗಳ ನಿಯಮಕ್ಕೆ ಅಧೀನವಾದ ಮನುಷ್ಯನ ಮನಸ್ಸು ನಿರಾಕಾರವಾದ ಶಾಶ್ವತ ಸತ್ಯವನ್ನು ಗ್ರಹಿಸಲಾರದು. ದೈಹಿಕ ಜಗತ್ತನ್ನು ಮೀರಿದ ಅತೀಂದ್ರಿಯ ವಾಸ್ತವತೆಯನ್ನು ಉಪನಿಷತ್ತಿನ ದಾರ್ಶನಿಕರು ಲಿಂಗವೆಂದು ಸಂಬೋಧಿಸಿದರು. ಲಿಂಗವೆಂದರೆ ಗುರುತು, ಚಿಹ್ನೆ. ಲಿ ಕಾರವೇ ಶೂನ್ಯ, ಬಿಂದುವೇ ಲೀಲೆ, ಗಕಾರವೇ ಚಿತ್ತು, ಈ ತ್ರಿವಿಧದೊಳಗಿದೆ ಲಿಂಗವೆಂಬ ಸಕೀಲ ಎಂದು ಲಿಂಗದ ಒಳಾರ್ಥವನ್ನು ತಿಳಿಸುತ್ತಾರೆ ಚೆನ್ನಬಸವಣ್ಣ. ರೂಪ ಮತ್ತು ಹೆಸರು ಎರಡರ ದೃಷ್ಟಿಯಲ್ಲೂ ಲಿಂಗವು ಅಲೌಕಿಕದತ್ತಲೇ ಬೆಟ್ಟು ಮಾಡಿ ತೋರುತ್ತದೆ. ಧಾರ್ಮಿಕ ಆಚರಣೆಗಳಿಗೆ ಸಿಗದಂತೆ ಶುದ್ಧ ತಾತ್ವಿಕ ಮಾರ್ಗದಲ್ಲಿ ಸಾಧಕನು ಮುನ್ನಡೆಯಲು ಇಷ್ಟಲಿಂಗವೇ ಸೂಕ್ತವೆಂದು ಶರಣರು ಭಾವಿಸಿದರು.
ಆಸ್ತಿಕತೆಯ ಅಥವಾ ನಾಸ್ತಿಕತೆಯ ತುದಿಗಳನ್ನು ಮುಟ್ಟದೆ ಶರಣರು ವಿಶಿಷ್ಟ ರೀತಿಯಲ್ಲಿ ಲೋಕವನ್ನು ಹಾಗೂ ಲೋಕ ಕಾರಣವನ್ನು ಪರಿಭಾವಿಸಿದಂತೆ ತೋರುತ್ತದೆ. ಜಗತ್ತಿನ ಬಹುತೇಕ ಧರ್ಮಗಳು ದೇವರನ್ನು ಹೊರಗಿಟ್ಟು ಅರಸುತ್ತಿವೆ. ದೇವರನ್ನು ಬಯಲಿನ ರೂಪದಲ್ಲಿ ಪರಿಭಾವಿಸಿದ ಶರಣರು ಮನುಷ್ಯನೂ ಬಯಲ ರೂಪಿ ಎಂದು ನಂಬಿದವರು. ಅಂತೆಯೇ ತಮಗೆ ಪ್ರಿಯವಾದ ಹೆಸರುಗಳಿಂದ ಆ ಲೋಕ ಕಾರಣ ಶಕ್ತಿಯನ್ನು ತಮ್ಮ ವಚನಗಳಲ್ಲಿ ಸಂಬೋಧಿಸಿದ್ದಾರೆ. ವಚನಾಂಕಿತಗಳಲ್ಲಿ ಸೂಚ್ಯಾರ್ಥ ಹಿಡಿದು ಸಹಜಾರ್ಥದವರೆಗಿನ ಎಲ್ಲ ಬಗೆಯ ಹೆಸರುಗಳನ್ನು ಗಮನಿಸಬಹುದು. ಆ ಮೂಲಕ ನಾಮಹಿಡಿದು ನಾಮಮೀರುವ, ಕುರುಹು ಹಿಡಿದು ಅರಿವು ಪಡೆಯುವ ವಿಶಿಷ್ಟ ಮಾರ್ಗವೊಂದನ್ನು ಶರಣರು ಕಂಡುಕೊಂಡಿದ್ದಾರೆ. ಅದಕ್ಕೆ ‘ನಾಮ, ಸೀಮೆಗಳು ಕೇವಲ ಮನದಳತೆ’ ಎನ್ನುತ್ತಾರೆ ಚಿನ್ಮಯಜ್ಞಾನಿ ಚೆನ್ನಬಸವಣ್ಣ.
ದೇವರ ಬಗೆಗಿನ ನಮ್ಮ ಕಲ್ಪನೆ ಏನೇ ಆಗಿದ್ದರೂ ಅದು ನಮ್ಮಿಂದ ಭಿನ್ನವಾದದ್ದಂತೂ ಆಗಿರಲಿಕ್ಕಿಲ್ಲ. ಆತ ಸಮಷ್ಟಿಯೇ ಆಗಿದ್ದರೆ ನಾವೂ ಅದೇ ಸೃಷ್ಟಿಯ ಭಾಗವೇ. ತನ್ನ ನಿರಂಕುಶ ಮತಿಯನ್ನು ಮಿತಿಗೊಳಿಸಿಕೊಂಡ ಜೀವಕ್ಕೆ ನೀನೇ ದೇವ ಸ್ವರೂಪವೆಂದರೆ ನಂಬಲಾರದು. ಅದನ್ನು ಪರೀಕ್ಷಿಸಿಕೊಳ್ಳುವ, ಸಾಧ್ಯವಾಗಿಸಿಕೊಳ್ಳುವ ದಾರಿಯೂ ರುಚಿಸಲಾರದು. ಅದಕ್ಕಾಗಿ ಬಸವಣ್ಣನವರು ಆ ಭ್ರಮೆಯನ್ನು ಹಂತಹಂತವಾಗಿ ಕಳೆದುಕೊಳ್ಳುವ ಮಾರ್ಗವನ್ನು ತೋರಿಸಿದ್ದಾರೆ. ಶರಣರ ವಚನಗಳನ್ನು ಸೂಕ್ಷ್ಮವಾಗಿ ಸಾಧನೆಯ ಹಾದಿಯಗುಂಟ ಅವಲೋಕಿಸಿದಲ್ಲಿ ಈ ವಿಷಯ ಸ್ಪಷ್ಟವಾಗುತ್ತದೆ. ಇಲ್ಲವಾದರೆ ಮತ್ತೆ ದಾರಿ ತಪ್ಪಬೇಕಾಗುತ್ತದೆ. ಉದಾಹರಣೆಗೆ “ದೆಸೆಗೆಟ್ಟ ಲಿಂಗಕ್ಕೆ ಹೆಸರಿಟ್ಟ ಗುರು” ಎಂದು ಬಸವಣ್ಣನವರನ್ನು ಸ್ಮರಿಸುವ ಸಿದ್ಧರಾಮೇಶ್ವರರ ವಚನಗಳನ್ನು ಗಮನಿಸೋಣ:
ಹೆಸರಿಡಬಾರದ ಲಿಂಗವ
ಕರಸ್ಥಳಕ್ಕೆ ಹೆಸರಿಟ್ಟು ತಂದನೆನ್ನ ಗುರು.
ಆ ಹೆಸರಿಟ್ಟ ಲಿಂಗದ ಹೆಸರು ಹೇಳುವೆನು.
ಕಂಜಕನ್ನಿಕೆಯ ಹಣೆಯಲ್ಲಿ ವಿದ್ಥಿವಶವೆಂದು ಬರೆದ
ಐದಕ್ಷರವೆ ಆತನ ಪರಮನಾಮ…
ಇಂಥ ವಚನಗಳೆಲ್ಲ ಸಾಧನೆಯ ಆರಂಭಿಕ ಹಂತದವು. ಅರಿವಿನ ಪ್ರಾರಂಭಿಕ ಹೆಜ್ಜೆಗಳಲ್ಲಿ ಕುರುಹು ಮತ್ತು ಹೆಸರುಗಳು ಬೇಕಾಗಬಹುದು. ನಂತರದಲ್ಲಿ ಇವನ್ನು ಮೀರಿ ಸಾಗಲೇ ಬೇಕು. ಇಲ್ಲವಾದರೆ ನಮ್ಮ ಗ್ರಹಿಕೆಗೆ ನಾವೇ ಗಡಿ ಎಳೆದುಕೊಂಡಂತಾಗುತ್ತದೆ. ಆಗ ಸಮಗ್ರ ನೋಟ ಸಿಕ್ಕುವುದಿಲ್ಲ. ಅಂಥ ಬದಲಾವಣೆಯನ್ನು ಸಿದ್ಧರಾಮೇಶ್ವರರು ಸಾಧನೆಯ ನಂತರದ ಹಂತಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
“….. ಹೆಸರು ನಿನಗೇನು ಹೇಳಾ?
ಕಪಿಲಸಿದ್ಧಮಲ್ಲಿಕಾರ್ಜುನ
ನೀನು ಆಮುಖಶೂನ್ಯ ಕಾಣಾ”
ಹೆಸರಿಡಬಾರದ ಭವಗೇಡಿ,
ನಿನ್ನ ಕೂಡಿದವರು ನಿನ್ನಂತೆ ಹೆಸರುಗೆಡುವರಲ್ಲದೆ
ಮರಳಿ ಹೆಸರುಂಟೆ?
ಎಲೆ, ಭವಗೇಡಿ ಹರನೆ,
ನಿನ್ನನರ್ಚಿಸಿದವರು ನಿನ್ನಂತೆ ಭವಗೆಡುವರಲ್ಲದೆ
ಮರಳಿ ಭವವುಂಟೆ?
ಅನಾದಿ ಸಂಸಿದ್ಧಯೋಗಮೂರ್ತಿ
ಕಪಿಲಸಿದ್ಧಮಲ್ಲಿಕಾರ್ಜುನ
ಇದ್ದೆಸಗೇಡಿ ನೀನು,
ನಿನ್ನವರು ನಿನ್ನಂತೆ ಇದ್ದೆಸೆಗೆಟ್ಟರಯ್ಯಾ.
ನಾಮ ರೂಪಿಲ್ಲದ ಘನವ ನಾಮರೂಪಿಂಗೆ ತಂದುದರ ಹಿಂದೆ ಏಕಾಗ್ರ ಚಿತ್ತದ ಸಾಧನೆಯ ಉದ್ದೇಶವಿದೆ. ಅದು ಬಯಲ ಸಾಧನೆಯ/ ಬಯಲ ಬದುಕಿನ ಆರಂಭದ ಹಂತ. ಅಲ್ಲಿಂದ ವ್ಯಕ್ತಿಯ ವಿಕಾಸ ಪ್ರಕ್ರಿಯೆ ಅದನ್ನು ದಾಟಿ ಮುಂದೆ ಸಾಗಬೇಕು. ನಡೆ-ನುಡಿಗಳ ಸಮರಸವಾಗಿ ಎಚ್ಚರಿಕೆಯ ವಿವೇಕ ಪ್ರಾಪ್ತವಾಗಬೇಕು. ಅಂಗದ ಮೇಲಿನ ಲಿಂಗವರಿಯುವುದೆಂದರೆ ಇದೇ. ದೇವರ ಅಥವಾ ಲಿಂಗದ ವಿಷಯದಲ್ಲಿ ಶರಣರು ವೈಚಾರಿಕ ದೃಷ್ಟಿಕೋನ ಹೊಂದಿದ್ದರು. ಕುರುಹು ಮತ್ತು ಹೆಸರುಗಳ ವಿಷಯದಲ್ಲಿ ಅವರು ತೆಗೆದುಕೊಂಡ ನಿರ್ಧಾರ, ತುಳಿದ ಮಾರ್ಗ ವಿನೂತನವೆನಿಸುತ್ತದೆ. ತಮ್ಮಷ್ಟಕ್ಕೆ ತಾವೇ ಯಾವುದೇ ಮಹತ್ವವಿಲ್ಲದ ಕುರುಹು ಮತ್ತು ಹೆಸರುಗಳಿಗೆ ವಿಪರೀತ ಮಹತ್ವ ಕೊಟ್ಟು ತಮ್ಮ ಮಾನಸಿಕ ನೆಮ್ಮದಿಯ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಅರೆಮರುಳರನ್ನು ಎಚ್ಚರಿಸಿಯೂ ಹೋಗಿದ್ದಾರೆ.
ವಿರಹದಲುತ್ಪತ್ಯವಾದವರ, ಮಾಯದ ಬೇಳುವೆ ಹತ್ತಿತ್ತಲ್ಲಾ !
ಸ್ವರೂಪ ನಿರೂಪವೆಂದರಿಯರು,
ಹೆಸರಿಟ್ಟು ಕರೆವ ಕಷ್ಟವ ನೋಡಾ ಗುಹೇಶ್ವರಾ
ದೇವರ ಕಲ್ಪನೆಯಲ್ಲೇ ತನ್ನ ನಿಜ ರೂಪ ಇದೆ ಎಂಬ ಸತ್ಯ ಮನುಷ್ಯನಿಗೆ ತಿಳಿಯದೆ ಇರುವುದು ಎಲ್ಲ ಗೊಂದಲಗಳಿಗೂ ಮೂಲ ಕಾರಣ. ಆದ್ದರಿಂದ ಈ ದೇಹದೊಳಗಿನ ಜೀವ, ಕೇವಲ ತನ್ನನ್ನು ಈ ದೇಹಕ್ಕೂ, ಹೆಸರಿಗೂ ಸೀಮಿತಗೊಳಿಸಿಕೊಂಡಿದೆ. ತಾನೆಂದರೆ ಈ ದೇಹ ಮತ್ತು ಹೆಸರು ಎಂದು ಬಲವಾಗಿ ನಂಬಿ ಅವುಗಳನ್ನು ಪೊರೆಯಲು, ಅವುಗಳ ಕಾಮನೆಗಳನ್ನೆಲ್ಲ ಪೂರೈಸಲು ಹಗಲಿರುಳು ಶ್ರಮಿಸುತ್ತದೆ. ಜೀವಕ್ಕಂಟಿದ ಮಾಯೆಯ ಮಬ್ಬು(ಬೇಳುವೆ) ಎಂದರೆ ಇದೇ. ಯಾವುದೇ ಆಕಾರ, ಗುಣ ಮತ್ತು ಕ್ರಿಯೆಗಳಿಲ್ಲದ ನಿರೂಪವೇ ತನ್ನ ನಿಜ ಸ್ವರೂಪವೆಂದು ತಿಳಿಯದೆ, ದೇಹ ಮತ್ತು ಹೆಸರುಗಳ ಆವರಣಕ್ಕೆ ತನ್ನನ್ನು ಬಂಧಿಯಾಗಿಸಿಕೊಂಡ ಮನುಷ್ಯ, ಅವುಗಳ ಅತಿ ವ್ಯಾಮೋಹದಿಂದ ಕಷ್ಟ, ನಷ್ಟ, ನೋವುಗಳಿಗೆ ಸಿಲುಕಿಕೊಂಡಿದ್ದಾನೆ. ಸಂಕಷ್ಟಗಳಿಂದ ಪಾರು ಮಾಡಲು ಕಲ್ಪಿತ ದೇವರನ್ನು ನಾನಾ ಹೆಸರಿಟ್ಟು ಕರೆಯುತ್ತಿದ್ದಾನೆ. ಇದೆಂಥಾ ಚ್ಯೋದ್ಯ!! ಲೋಕದ ಈ ಪರಿ ಕಂಡು ಕನಿಕರಿಸುತ್ತಾರೆ ಅಲ್ಲಮಪ್ರಭು.
ದೇವರಿಗೆ ಹೆಸರಿಡುವ ಹುಚ್ಚು ಸಾಹಸಕ್ಕೆ ಇಳಿದರೆ ಪರಮಸತ್ಯ ಕಣ್ಮರೆಯಾಗುತ್ತದೆ ಎಂಬುದು ಶರಣರ ಆತಂಕ. ಯಾವುದೇ ಹೆಸರಿಟ್ಟರೂ ಅದು ಕಳಂಕವೇ ಎಂಬುದು ಆದಯ್ಯ ಶರಣರ ಅಭಿಮತ. ಹೆಸರು ಮತ್ತು ಕುರುಹುಗಳಿಗೆ ಜೋತುಬಿದ್ದವರನ್ನು ಮತಿಭ್ರಷ್ಟರು ಎಂದು ಚನ್ನಬಸವಣ್ಣನವರು ಜರಿಯುತ್ತಾರೆ. ಉರಿಲಿಂಗಪೆದ್ದಿ ಶರಣರ ವಚನ ಹೀಗಿದೆ:
ಹೆಸರಿಲ್ಲದ ದೆಶೆಗೇಡಿ ಲಿಂಗವ ವಶಕ್ಕೆ ತಂದು
ಹೆಸರಿಟ್ಟು ಕರೆದರೆ ನೀನು ಸುಲಭನೇ? ಅಲ್ಲ.
ನೀನು ಕುಲಗೇಡಿ, ನಿನ್ನನಾರು ಬಲ್ಲರು? ನೀನಗೋಚರ.
ಶರಣ ಚಂದಿಮರಸರ ಈ ವಚನ ನೋಡಿ:
ಪಂಚಭೂತದ ಸೂತಕದ ಬಳಿವಿಡಿದು
ಪ್ರಜ್ವಲಿಸುವ ಆತ್ಮಜ್ಯೋತಿಯೆಂಬ ಮಾತಿನೊಳಗಲ್ಲ.
ನಾದ ಬಿಂದು ಕಳಾತೀತನೆಂದು ನುಡಿವರು.
ಹೆಸರಿಲ್ಲದ ಬಯಲ ತಮ್ಮ ತಮ್ಮ ಮುಖಕ್ಕೆ ಹೆಸರಿಟ್ಟು
ತಮ ತಮಗೆ ಕರತಳಾಮಳಕವೆಂಬರು.
ಅದರಾದಿಯಂತ್ಯವನರಿಯರು
ಎಂತು ಬಲ್ಲರು ಸಿಮ್ಮಲಿಗೆಯ ಚೆನ್ನರಾಮನೆಂಬ
ಶಬ್ದ ಉದ್ದೇಶಿಗಳು?
ಪಂಚಭೂತಗಳನ್ನು ಅನುಸರಿಸಿ (ಬಳಿವಿಡಿದು) ತೇಜೋಮಯವಾದ ಆತ್ಮಜ್ಯೋತಿಯನ್ನು ವಿವರಿಸ ತೊಡಗುವವರನ್ನು ಗೇಲಿ ಮಾಡಿದ್ದಾರೆ ಚಂದಿಮರಸರು. ಇದು ಹಿಂದಿನಿಂದಲೂ ಹೇಳುತ್ತಾ ಬಂದಿರುವ ಶಬ್ದ ಮೈಲಿಗೆಯ ಮಾರ್ಗ. ತಮ್ಮರ್ಥವನ್ನೇ ಕೆಡಿಸಿಕೊಂಡಿರುವ ಈ ಶಬ್ದಗಳ ವಿಷಯ ಜ್ಞಾನ ನಿಷ್ಪ್ರಯೋಜಕ. ಇಂಥವರು ಕೇವಲ ವಿಷಯ ಜ್ಞಾನದಿಂದ ಪರತತ್ವವು ನಾದ, ಬಿಂದು ಕಳಾತೀತ ಎಂದು ಚರ್ವಿತಚರ್ವಣದ ಶಬ್ದಗಳನ್ನು ಯಾಂತ್ರಿಕವಾಗಿ ಹೇಳುತ್ತಾ ಮತ್ತೆ ಹೆಸರೇ ಇಲ್ಲದ ಬಯಲಿಗೆ ತಮ್ಮ ತಮ್ಮ ಬಾಯಿಗೆ ಬಂದ ಹೆಸರಿಟ್ಟು, ತಮಗೆ ಎಲ್ಲವೂ ಸಿದ್ಧಿಸಿದೆ ಎಂದು ಬೀಗುತ್ತಾರೆ. ಬಯಲಿನ ನಿಜಸ್ವರೂಪವನ್ನು ಶಬ್ದಗಳಿಂದಲೇ ಹೇಳಹೊರಡುವ ಇಂಥವರು ಬಯಲು ಸ್ವರೂಪವನ್ನು ಅರಿಯಲಾರರು.
ನಾಮಾತೀತ, ಸೀಮಾತೀತ
ಯಹೂದ್ಯರ ಹಳೆಯ ಒಡಂಬಡಿಕೆ (Old Testament)ಯಲ್ಲಿ ಒಂದು ಆಸಕ್ತಿಕರ ಸನ್ನಿವೇಶ ಇದೆ. ದೇವರ ಹೆಸರನ್ನು ದೇವರ ಬಾಯಿಂದಲೇ ಹೇಳಿಸುವ ತಂತ್ರವೊಂದನ್ನು ಅಲ್ಲಿ ಹೆಣೆಯಲಾಗಿದೆ. ಅದು ಮೋಸಸ್ ಮತ್ತು ದೇವರ ನಡುವೆ ನಡೆಯುವ ಸಂಭಾಷಣೆ. ಮೋಸಸ್ ಯಹೂದ್ಯರ ಧರ್ಮ ಜೂಡಾಯಿಸಂನ ಪ್ರಮುಖ ನಾಯಕ. ಈಜಿಪ್ಟಿನ ಫರೊನನ್ನು ಭೇಟಿಯಾಗಿ, ಆತನಲ್ಲಿ ಗುಲಾಮರಾಗಿರುವ ಯಹೂದಿಗಳನ್ನು ಬಿಡುಗಡೆಗೊಳಿಸಿ ಅವರು ಇಸ್ರೇಲಿಗೆ ಬರಲು ಹೇಳು ಎಂದು ಮೋಸಸ್ ಗೆ ದೇವರ ಆಜ್ಞೆಯಾಗುತ್ತದೆ. ಮೋಸಸ್ ಗಾಬರಿಯಾಗುತ್ತಾನೆ. ನಿಜಕ್ಕೂ ಇದು ಆಗುವಂಥ ಕೆಲಸವೇ, ಆ ಜನ ತನ್ನ ಮಾತು ಕೇಳದಿದ್ದರೆ ಹೇಗೆ ಎಂಬ ಗೊಂದಲಗಳು ಕಾಡುತ್ತವೆ. ಆಗ ಮೋಸಸ್ ಒಂದು ಬಹುಮುಖ್ಯ ಪ್ರಶ್ನೆ ಎತ್ತುತ್ತಾನೆ: “ಆಯ್ತು, ನಾನು ನಿನ್ನ ನಿರೂಪವನ್ನೇನೋ ಇಸ್ರೇಲಿಯನ್ನರಿಗೆ ಮುಟ್ಟಿಸುತ್ತೇನೆ, ಆದರೆ ಅವರು ನನಗೆ ಈ ಸಂದೇಶ ಕಳಿಸಿದವರಾರು? ಅವರ ಹೆಸರೇನು ಎಂದು ಪ್ರಶ್ನಿಸಿದರೆ ಏನು ಹೇಳಲಿ?” ಎಂದು ಕೇಳುತ್ತಾನೆ. ಆಗ ದೇವರು ತನ್ನ ಹೆಸರು ಬಹಿರಂಗಪಡಿಸುವ ಸಂದರ್ಭ ಎದುರಾಗುತ್ತದೆ. ದೇವರು ಹೇಳುತ್ತಾನೆ: “ನಾನು YHWH ಎಂದು ಇಸ್ರೇಲಿಯರಿಗೆ ಹೇಳು” ಎನ್ನುತ್ತಾನೆ. (I AM has sent me to you. Exodus 3:13-14) ಹೀಬ್ರೂ ಭಾಷೆಯಲ್ಲಿರುವ YHWH ಹೆಸರಲ್ಲದ ಹೆಸರು, ಉಚ್ಛರಿಸಲು ಸಾಧ್ಯವಾಗದ ಶಬ್ದ. ಅದು ನಾಮಪದದಲ್ಲಿರದೆ to be ಕ್ರಿಯಾಪದದಲ್ಲಿದೆ, ಅಂದರೆ (I AM WHO I AM). ಕ್ರೈಸ್ತ ಧರ್ಮ ಪಂಡಿತರು ಇದನ್ನು ಅನೇಕ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ: “ನಾನು ಇದ್ದೇನೆ, ಅಂದು ಇಂದು ಮುಂದೆಂದಿಗೂ ನಾನು ನಾನಾಗಿದ್ದೇನೆ” ಅಥವಾ ‘ನಾನು ನೀನೇ ಆಗಿದ್ದೇನೆ ಎಂಬ ಸೂಕ್ಷ್ಮ ಗ್ರಹಿಕೆಯೂ ಆಗಿರಬಹುದು’. ಇಂಥ ಒಳಾರ್ಥಗಳೆಲ್ಲ ಹಿಂದೆ ಸರಿದು ಮುಂದೆ ಈ ಶಬ್ದ ಇಂಗ್ಲಿಷಿನಲ್ಲಿ ದೇವರ ಹೆಸರು ‘ಜೆಹೊವಾ’ ಎಂದು ಕರೆಯಲ್ಪಟ್ಟಿತು.
ಜಗತ್ತಿನ ಜನರೆಲ್ಲಾ ದೇವರನ್ನು ಹೊರಗೆ ಅರಸುತ್ತಿದ್ದಾರೆ. ಎಲ್ಲೋ ದೂರವಿದ್ದಾನೆ, ಅವನನ್ನು ಒಲಿಸಿಕೊಳ್ಳಬೇಕೆಂಬ ಭ್ರಮೆಗೆ ಒಳಗಾಗಿದ್ದಾರೆ. ಅದಕ್ಕಾಗಿ ನಾನಾ ಹೆಸರುಗಳನ್ನಿಟ್ಟು ಸ್ತುತಿಸುತ್ತಾರೆ, ಪೂಜಿಸುತ್ತಾರೆ. ತಾವು ನಂಬಿದ ದೇವರೇ ನಿಜವಾದ ದೇವರು, ಶಕ್ತಿಶಾಲಿ ಎಂಬ ಭ್ರಾಂತಿ ಅವರನ್ನು ಆವರಿಸಿದೆ. ತಾವು ನಂಬಿದ ಹೆಸರೇ ನಿಜವಾದ ದೇವರ ಹೆಸರೆಂದು ಭ್ರಮೆಗೆ ಬಿದ್ದಿದ್ದಾರೆ. ಇಂಥವರನ್ನು ಕಂಡು, “ಹೆಸರಿಲ್ಲದ ಲಿಂಗಕ್ಕೆ ಹೆಸರಿಡುವ ಲಿಂಗದ್ರೋಹಿಯ ಮಾತ ಕೇಳಲಾಗದು.” ಎಂದು ಅಲ್ಲಮಪ್ರಭುದೇವರು ಮರುಗುತ್ತಾರೆ, ನೋವಿನಿಂದ ಛೇಡಿಸುತ್ತಾರೆ.
ಹೆಸರು ಹುಟ್ಟಿಸುವ ಆವಾಂತರಕ್ಕೆ ಮನುಷ್ಯ ಬಲಿ ಬೀಳುತ್ತಲೇ ಇದ್ದಾನೆ. ಶರಣರು ತಮ್ಮ ವಚನಗಳಲ್ಲಿ ಇದನ್ನು ಆಗಾಗ ಸ್ಪಷ್ಟಪಡಿಸುವ ಅನಿವಾರ್ಯತೆ ಅಂದೇ ಹುಟ್ಟಿದಂತೆ ತೋರುತ್ತದೆ. ಕುರುಹಿಗೆ, ಹೆಸರಿಗೆ ಜೋತು ಬಿದ್ದು ನಿಜವಾದ ಅರುಹಿನ ತಿರುಳನ್ನೇ ಮರೆತಿರುವವರನ್ನು ಕುರಿತು ಅಂಬಿಗರ ಚೌಡಯ್ಯನವರ ಈ ವಚನ ಅನೇಕ ಸಂದೇಹಗಳಿಗೆ ಉತ್ತರವಾಗಿದೆ:
ಅಸುರರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ,
ಬ್ರಹ್ಮಕಪಾಲವಿಲ್ಲ, ಭಸ್ಮಭೂಷಣನಲ್ಲ,
ವೃಷಭವಾಹನನಲ್ಲ, ಋಷಿಯರುಗಳೊಡನಿದ್ದಾತನಲ್ಲ.
ಎಸಗುವ ಸಂಸಾರದ ಕುರುಹಿಲ್ಲದಾಂತಗೆ
ಹೆಸರಾವುದಿಲ್ಲೆಂದನಂಬಿಗರ ಚೌಡಯ್ಯ.
ಧರ್ಮಕ್ಕೊಂದು, ಜಾತಿಗೊಂದು ಎಂಬಂತೆ ಜಗತ್ತಿನ ತುಂಬ ನಾನಾ ನಮೂನೆಯ, ನಾನಾ ಹೆಸರಿನ ದೈವಗಳು. ಅಷ್ಟು ಸಾಲದೆಂಬಂತೆ ಹೊಸ ಹೆಸರುಗಳಲ್ಲಿ ನಿತ್ಯ ಹೊಸ ದೈವಗಳ ಜನನ. ಇದರ ನಡುವೆ ನಮ್ಮ ದೇವರ ಹೆಸರೇ ಶ್ರೇಷ್ಠವಾದದ್ದು ಏಕೆಂದರೆ ನಮ್ಮ ದೇವರೇ ನಿಜವಾದ ದೇವರು ಎನ್ನುವ ಹಠ, ಧಾಷ್ಟ್ಯ. ಹೀಗೆ ಲೋಕದಲ್ಲಿ ದೇವರೇ ಒಂದು ಕಗ್ಗಂಟಾಗಿ, ಆತನ ಹೆಸರೇ ಒಂದು ಸಮಸ್ಯೆಯಾಗಿ ಜೀವ ಜಗತ್ತಿನ ಬದುಕೇ ಧರ್ಮ- ದೇವರ ಹೆಸರಿನಲ್ಲಿ ಅಭದ್ರಗೊಂಡಿದೆ. ದೇವರಿಲ್ಲದ ಜಗತ್ತಿನಲ್ಲಿ ತಾರತಮ್ಯಗಳೇ ಇರುವುದಿಲ್ಲ ಎನ್ನುವ ಮಟ್ಟಿಗೆ ವಾತಾವರಣ ಕಲುಷಿತಗೊಂಡಿದೆ. ಇಂಥ ಒಣ ಹೊಡೆದಾಟಕ್ಕೆ ಸೂಕ್ತ ಉತ್ತರದಂತಿದೆ ಘಟ್ಟಿವಾಳಯ್ಯ ಶರಣರ ಈ ವಚನ:
ನಾಮಾನಾಮವೆಂದು ನೀನು ನಾಮಕ್ಕೆ ಬಳಲುವೆ.
ನಾಮವಾವ ಸೀಮೆಯೊಳಗಿಪ್ಪುದು ಹೇಳೆಲೆ ಮರುಳೆ?
ನಾಮವೂ ಇಲ್ಲ ಸೀಮೆಯೂ ಇಲ್ಲ,
ಒಡಲೂ ಇಲ್ಲ ನೆಳಲೂ ಇಲ್ಲ,
ನಾನೂ ಇಲ್ಲ ನೀನೂ ಇಲ್ಲ ಏನೂ ಇಲ್ಲ,
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದುದಾಗಿ.
ದೇವರು ನಮಗೇ ತಿಳಿಯದ ನಮ್ಮೊಳಗಿನ ಅರಿವು. ಅನಂತತೆಯೇ ಅವನೊಡಲು. ಅದು ಹೊರಗೂ ಇದೆ, ಒಳಗೂ ಇದೆ. ಬುದ್ಧನು ಅದನ್ನು ಮಹಾಶೂನ್ಯವೆಂದರೆ, ಬಸವಾದಿ ಶರಣರು ಅದನ್ನು ಬಯಲು ಎಂದರು. ನಾಮ, ಸೀಮೆ, ಒಡಲು, ನೆಳಲು, ನಾನು, ನೀನು… ಹೀಗೆ ಮನುಷ್ಯನ ಮಾತಿಗೆ, ಕಲ್ಪನೆಗೆ ಸಿಗುವ ಯಾವುದೂ ಯಾವುದೂ ಅದಲ್ಲ. ಅದು ಈ ಶಬ್ದಜಾಲಗಳಿಗೆ ಸಿಗದ ಏನೂ ಏನೂ ಅಲ್ಲದ ಬಯಲು. ಸಾಕಾರ ಹಿಡಿದು ನಿರಾಕಾರಕ್ಕೆ ಹೋಗುವ ಸಮನ್ವಯ ಮಾರ್ಗದಲ್ಲಿ ಶರಣರು ಕುರುಹಿನಂತೆ ಹೆಸರನ್ನೂ ನಿಮಿತ್ಯವಾಗಿ ಬಳಸಿಕೊಂಡುದು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಕುರುಹುವಿಡಿದು ಕುರುಹುಗೆಡಬೇಕು, ನಾಮ ಹಿಡಿದು ನಾಮ ಮೀರಬೇಕು ಎನ್ನುವ ವಾಕ್ಯಗಳು ಅವರ ಆಶಯವನ್ನು ಧ್ವನಿಸುತ್ತವೆ. ಅದೇ ಕಾರಣಕ್ಕೆ “ದೇವನಾಮ ಸೊಗಸದು ಲಿಂಗಾಯತಂಗೆ, ಮಾನವನಾಮ ಸೊಗಸದು ಜಂಗಮ ಭಕ್ತಂಗೆ”- ಎಂದಿದ್ದಾರೆ ಚೆನ್ನಬಸವಣ್ಣ. ತಾನೂ ಬಯಲರೂಪಿ ಎಂದರಿತ ಶರಣನು ದ್ವೈತದಲ್ಲಿ ಯಾರನ್ನು ದೇವರೆಂದು ಸಂಬೋಧಿಸಿಯಾನು? ಶ್ರದ್ಧೆಯಿಂದ ಸ್ವಜ್ಞಾನ ಅಥವಾ ಸ್ವಯಂ ಅರಿವಿನ ತನಕ ಸಾಗುವ ಸಾಧನೆಯ ಹಾದಿಯಲ್ಲಿ ಮನಸ್ಸಿನಲ್ಲಿ ತುಂಬಿದ್ದ ಅರ್ಥರಹಿತ ಸಂರಚನೆಗಳ ಹೊರೆಯನ್ನು ಒಡೆದುಕೊಂಡು ಶುದ್ಧ ಸರಳ ಸಹಜ ಬದುಕನ್ನು ಸಂಭ್ರಮದಿಂದ ಬಾಳುವ ಕಲೆಯನ್ನು ಕರಗತಮಾಡಿಕೊಳ್ಳುವುದೇ ಶರಣರ ಮಾರ್ಗ.
Comments 13
Radha Niranjan
Feb 7, 2019ನಿಜ ಮೇಲಿನ ಮಾತು ಎಷ್ಟು ಸತ್ಯವಾದದ್ದು! ದೇವರು ಅಸ್ತಿತ್ವದಾಚೆಯ ಅಸ್ತಿತ್ವ, ಅದರಾಚೆಯ ಶೂನ್ಯ. ಹೌದು, ಸಾಕಾರ ಹಿಡಿದು ನಿರಾಕಾರ ಕಾಣುವ, ಅದು ನಮ್ಮೊಳಗೇ ಇರುವ, ನಮಗೇ ತಿಳಿಯದ ಅರಿವು. ಅನಂತತೆಯ ದಿವ್ಯತೆಯನ್ನೇ ನೀವು ನಿಮ್ಮ ಲೇಖನದಲ್ಲಿ ತೋರಿಸಿದ್ದೀರಿ. ಕುರುಹಿಲ್ಲದ, ನಾಮರಹಿತ, ನಿರಾಕಾರ ಬಯಲು ರೂಪನ್ನೇ ಕಣ್ಣೆದುರು ಬಂದಂತೆನಿಸುತ್ತದೆ. ಲೇಖನ superb. ನಿಮಗೆ ನನ್ನ ಭಕ್ತಿಪೂರ್ವಕ ಶರಣು.
ನಂದಿನಿ ಚಿಕ್ಕೋಡಿ
Feb 8, 2019ಲೇಖನದ ಪ್ರತಿಯೊಂದು ಸಾಲೂ ಚಿಂತನೆಗೆ ಹಚ್ಚುತ್ತದೆ, ನಮ್ಮ ನಂಬಿಕೆಗಳನ್ನು ಪ್ರಶ್ನಿಸಿ ಸರಿ ಹಾದಿಯಲ್ಲಿ ನಡೆಯೋಕೆ ಬೆಳಕು ಕೊಡುತ್ತದೆ. ದೇವರ ಬಗ್ಗೆಯೇ ಇನ್ನೊಮ್ಮೆ ಬರೆಯಿರಿ, ನಿಮ್ಮ ಬರವಣಿಗೆಯಲ್ಲಿ ಓದಬೇಕು, ವಿಷಯದ ಆಳಕ್ಕೆ ನೇರವಾಗಿ ಒಯ್ಯುವ ನಿಮ್ಮ ಬರವಣಿಗೆ ಹಿಡಿಸುತ್ತದೆ. ಥ್ಯಾಂ್ಸ್ ಅಕ್ಕಾ.
Jayakumar
Feb 8, 2019ಲೀಲೆ ಆಡಿದರೆ ಉಮಾಪತಿ ಇಲ್ಲದಿರೆ ಸ್ವಯಂಭು ಗುಹೇಶ್ವರ ಎನ್ನುವಂತೆ. ಲೀಲೆಯಾಡಿದರೆ ಅದ್ಭುತ ಪದಗುಚ್ಛ, ಭಗವಂತನ ಸೃಷ್ಟಿಯಂತೆ ಪೇಪರಿನ ಮೇಲೆ ಇಳಿಸಿದ್ಧಿರ. ಆದರೆ ಅದರ ಇನ್ನೊಂದು ತುದಿ ಸುಮ್ಮನೆ ಕೂತರೆ ಹೇಗಿರಬೇಕು? ಶರೀಫ ಹೇಳ್ತಾನೆ- ತೂಗುತಿದೆ ನಿಜಬಯಲಲಿ ಜೋಕಾಲಿ ಜೋಲಿಲಾಲಿ ಜೋಕಾಲಿ, ಮುಂದೆ ಬಂದ ಮೇಲೆ ಹಿಂದೆ ಹೋಗಲೇ ಬೇಕು.
-ಜಯಕುಮಾರ್
ಶ್ರೀಮತಿ ರುದ್ರಮ್ಮ ಅಮರೇಶ ಹಾಸಿನಾಳ ಗಂಗಾವತಿ
Feb 9, 2019ಮಂಗಳಾವರೇ ದೇವರ ಅಸ್ತಿತ್ವ ಕುರಿತಾದ ನಿಮ್ಮ ಲೇಖನವು ಶರಣಮಾರ್ಗದಲ್ಲಿ ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಶರಣರು ಕಂಡುಕೊಂಡ ದೇವರ ಪರಿಕಲ್ಪನೆ ಹಾಗೂ ಲೌಖಿಕವಾಗಿ ಜನಸಾಮಾನ್ಯರು ದೇವರನ್ನು ನೋಡುವ ರೀತಿ ತಾವು ಈ ಎರಡರ ಮಧ್ಯೆ ಸೇತುವೆಯಾಗಿ ನಿಂತು ತುಂಬಾ ಚೆನ್ನಾಗಿ ಆತ್ಮಾವಲೋಕನ ಮಾಡಿಕೊಂಡು ವಚನಸಮೇತ ವಿಶ್ಲೇಷಣೆ ನೀಡಿರುವಿರಿ. ದೇವರ ಅನಂತ ಸ್ವರೂಪವನ್ನ ಮರೆಮಾಚಿ ನಮ್ಮ ಜನಗಳು ಒಂದು ಚೌಕಟ್ಟಿನಲ್ಲಿ ಇಟ್ಟು ವಿಗ್ರಹ ರೂಪದಲ್ಲಿ ಪೂಜೆ ಮಾಡುತ್ತಿರುವುದು ನಮ್ಮ ದೇಶದ ದೊಡ್ಡ ದುರಂತ. ಇನ್ನಾದರೂ ನಮ್ಮ ಜನಗಳು ನಿಮ್ಮಂಥ ಅನುಭಾವಿಗಳ ಲೇಖನಗಳನ್ನಾದರು ಓದಿ ಎಚ್ಚೆತ್ತುಕೊಳ್ಳಲೆಂದು ಈ ಮೂಲಕ ನಾನಿಲ್ಲಿ ಆಶಿಸುತ್ತೇನೆ. ಇದೆ ರೀತಿ ಎಲ್ಲ ವಿಷಯಗಳ ಬಗ್ಗೆ ನಿಮ್ಮ ಲೇಖನಗಳು ಈ ಬಯಲು ಬ್ಲಾಗ್ ಲ್ಲಿ ಮೂಡಿ ಬರಲೆಂದು ಹಾರೈಸುವೆ.
ಶರಣು ಶರಣಾರ್ಥಿಗಳು.
ಶ್ರೀಮತಿ ರುದ್ರಮ್ಮ ಅಮರೇಶ ಹಾಸಿನಾಳ ಗಂಗಾವತಿ.
ಮಹಾದೇವ ಹಡಪದ
Feb 10, 2019ದೇವರ ಪರಕಲ್ಪನೆಯನ್ನು ಸೊಗಸಾಗಿ ನಿರೂಪಿಸಿದ್ದೀರಿ ಮೇಡಮ್
ಮಹೇಂದ್ರ ನೊಳಂಬ ಪಲ್ಲವ
Feb 10, 2019ತುಂಬಾ ಸೊಗಸಾದ ವಿವರಣೆ…
ಅನಂತವಾದದ್ದನ್ನು ಗ್ರಹಿಸಲು ಸಾಂತವನ್ನು ದಾರ್ಶನೀಕರು ಮಾಡಿಕೊಟ್ಟರೂ ನಂತರ ಸಮಾಜ ದೇವರನ್ನು ಧರ್ಮಗ್ರಂಥವೆಂಬ ಪುಸ್ತಕದಲ್ಲಿ , ಆಲಯಗಳಲ್ಲಿ ಬಂಧಿಸಿದ್ದು ದುರಂತ…
ಧರ್ಮ ಎಂಬ ಚೌಕಟ್ಟೇ ಸರಿಬಾರದು..
ಅನುಭಾವ ಮಾರ್ಗಕ್ಕಿಂತ ಮಿಗಿಲಾದ ಧರ್ಮವಿಲ್ಲ… ಧರ್ಮವೆಂದರೆ ಅನುಷ್ಠಾನ – ಅನುಭಾವ… ಅಂತಹ ಮಾರ್ಗವನ್ನು ಸಮಾಜ ಅನುಸರಿಸಬೇಕಿದೆ.. ಆದರೆ ಧರ್ಮವನ್ನು ಪುಸ್ತಕದೊಳಗೆ ಬಂದಿಸಿ ಸೀಮಿತಮಾಡಲಾಗಿದೆ..
“ಹೆಸರಿಲ್ಲದ ಲಿಂಗಕ್ಕೆ ಹೆಸರಿಡುವ ಲಿಂಗದ್ರೋಹಿಯ ಮಾತ ಕೇಳಲಾಗದು ” ಇದ ನನಗೆ ಪದೇ ಪದೇ ನೆನಪಾಗುವ ಪ್ರಭುದೇವರ ವಚನ.. ಲೇಖನ ಪ್ರಸ್ತಾವನೆಗೆ ಧನ್ಯವಾದಗಳು..
Mruthyunjaya Nara
Feb 10, 2019ಸಮತೋಲಾತ್ಮಕ ಲೇಖನ ಮೇಡಂ
ಧನ್ಯವಾದಗಳು ಶರಣು ಶರಣಾರ್ತಿಗಳು ?
ಡಾ. ಪಂಚಾಕ್ಷರಿ ಹಳೇಬೀಡು
Feb 11, 2019ದೇವರ ಸ್ವರೂಪವನ್ನು ಮನ ಮುಟ್ಟುವಂತೆ ವಿವರಿಸಿದ್ದೀರಿ. VERY good artjcle.
Ramesh C.A
Feb 11, 2019Read your study on God, it’s very exhaustive study, but I felt still you have not given your conclusive opinion on how to go about naming Him. Then again I went through, got the answer… you have given a deep insight.
G.B.Patil
Feb 12, 2019ಒಬ್ಬನನ್ನು ಕರೆಯಲು ಅಥವಾ ಸಂಭೋದಿಸಲು ಒಂದು ಭಾಷೆ, ಸಂಜ್ಞೆ ಅಥವಾ ಚಿಹ್ನೆ ಬೇಕಲ್ಲವೆ? ಭಾವನೆಯನ್ನು ವ್ಯಕ್ತಪಡಿಸಲು ಭಾಷೆಯ ಅವಶ್ಯಕತೆಯಂತೆ, ಅತಿಮಾನವನನ್ನು ಸಂಭೋದಿಸಲು ನಾವು ‘x’ ಅನ್ನಬಹುದು, ‘y’ ಅನ್ನಬಹುದು. ಅಥವಾ ಲಿಂಗ, ಜೀಸಸ್, ಅಲ್ಲಾ ಅನ್ನಬಹುದು. ಅದು ನಾವು ಅವನನ್ನು ಸಂಭೋದಿಸಲು ಬಳಸುವ ಭಾಷೆ, ಸಂಜ್ಞೆ ಅಥವಾ ಚಿಹ್ನೆ.
” ದೇವರು ನಮಗೇ ತಿಳಿಯದ ನಮ್ಮೊಳಗಿನ ಅರಿವು. ಅನಂತತೆಯೇ ಅವನೊಡಲು, ಅದು ಹೊರಗೂ ಇದೆ, ಒಳಗೂ ಇದೆ”.
ಇದಕ್ಕಿಂತ ಇನ್ನೇನು ಬೇಕು
dr. maribasappa banavar
Feb 27, 2019ತುಂಬಾ ಚೆನ್ನಾಗಿ ಆಳವಾದ ವಿಷಯಜ್ಞಾನದಿಂದ ಕೂಡಿದ ಲೇಖನ. ಮತ್ತೆ ಮತ್ತೆ ಓದಬೇಕೆನಿಸುತ್ತದೆ, ನಿಮ್ಮ ಶ್ರಮ ಸಾರ್ಥಕ.
Shivanna J.P
Feb 27, 2019ನಿಮ್ಮ ಲೇಖನಗಳೆಲ್ಲ ನಿಮ್ಮೊಳಗಿನ ಹುಡುಕಾಟದಂತಿವೆ. ಆ ಕಾರಣಕ್ಕೆ ಓದುಗರ ಮನಸ್ಸನ್ನೂ ಮುಟ್ಟುತ್ತವೆ. ಹೀಗೇ ಬರೆಯಿರಿ, ಶರಣರ ವಿಚಾರಗಳನ್ನು ನಮಗೆ ಉಣಬಡಿಸಿರಿ.
Chinmayi
Mar 1, 2019Well written madam.