ಕುಂಬಾರ ಲಿಂಗಾಯತರು
ಬಹು ಪ್ರಾಚೀನ ವೃತ್ತಿಗಳಲ್ಲಿ ಕುಂಬಾರಿಕೆಯೂ ಒಂದು. ಸುಮಾರು ಮೂರು ಸಾವಿರ ವರ್ಷಗಳಿಗಿಂತ ಹೆಚ್ಚು ಪ್ರಾಚೀನತೆಯುಳ್ಳ ಕುಂಭ ಕಲೆ 21ನೆಯ ಶತಮಾನದಲ್ಲೂ ಜೀವಂತವಾಗಿ ಉಳಿದಿರುವುದು, ಮನುಷ್ಯನ ಬದುಕಿಗೆ ಅದರ ಉಪಯುಕ್ತತೆಯನ್ನು ತಿಳಿಸುತ್ತದೆ. ವಿಶ್ವದಾದ್ಯಂತ ಪ್ರಾಚೀನ ನಾಗರಿಕತೆಯ ಉತ್ಖನನದಲ್ಲಿ ಮಡಕೆಗಳ ಪಳೆಯುಳಿಕೆಗಳು ಅಸ್ಥಿಯೊಂದಿಗೆ ದೊರೆಯುತ್ತಲೇ ಇವೆ. “The history of ceramics is the history of all humanity” ಎನ್ನುವ ಮಾತು ಮಡಕೆಯ ಚಾರಿತ್ರಿಕ ಮಹತ್ವವನ್ನು ತಿಳಿಸುತ್ತದೆ. ಇಷ್ಟು ಮಹತ್ವದ ಮಡಕೆಯನ್ನು ಮಾಡುವ ಕುಂಬಾರ ಕುಲೋತ್ಪತ್ತಿ ವಿಷಯವಾಗಿ ‘ವಿವಾಹ ಪುರಾಣ’ ಎನ್ನುವ ಸಣ್ಣ ಕೃತಿಯನ್ನೊಳಗೊಂಡ ಸೊಲ್ಲಾಪುರದ ಶಿಲಾಶಾಸನ, ಹಂಪಿಯ ತಾಮ್ರ ಶಾಸನಗಳು ಒಂದಿಷ್ಟು ಸಂಗತಿಯನ್ನು ಒದಗಿಸುತ್ತವೆ. ಕುಂಬಾರರ ಹುಟ್ಟು ಮತ್ತು ಅವರ ಸ್ಥಾನಮಾನ, ಬಿರುದು, ಪ್ರಶಸ್ತಿಗಳು, ಸವಲತ್ತುಗಳು ಮುಂತಾದ ಅಂಶಗಳನ್ನು ಒಳಗೊಂಡಿರುವ ಈ ಶಾಸನಗಳ ಕಾಲಮಾನ ಸುಮಾರು 12ನೆಯ ಶತಮಾನ.
‘ವಿವಾಹ ಪುರಾಣ’ ಕತೆಯ ಸಾರಾಂಶವೆಂದರೆ, ಶಿವ ಗಿರಿಜೆಯರ ಮದುವೆಯ ಸಮಯದಲ್ಲಿ ಗಿರಿರಾಜನು ಕೈ ಧಾರೆಯೆರೆಯಲು ಕಳಸ, ಹೂಜೆ ಮಾಡಲು ತನ್ನ ದಿವ್ಯ ಧ್ಯಾನದಿಂದ ವಿಷ್ಣುವಿನ ಚಕ್ರವನ್ನೇ ಕುಂಬಾರನ ತಿಗುರಿ ಮಾಡಿದ. ಬ್ರಹ್ಮ ಕೈಯಲ್ಲಿರುವ ಪುಸ್ತಕದ ಕಂಬಿಯನ್ನೇ ತಿಗುರಿಯ ಮೊಳೆ ಮಾಡಿದ. ಶಿವನ ಕೈಯ ಯೋಗ ದಂಡವನ್ನೇ ತಿಗುರಿಯ ಕೋಲನ್ನಾಗಿ ಮಾಡಿದ. ತನ್ನ ಜನಿವಾರವನ್ನು ತಿಗುರಿಯಿಂದ ಮಡಕೆಯನ್ನು ಬೇರ್ಪಡಿಸುವ ಕೊರೆದಾರ ಮಾಡಿದ. ಹೀಗೆ ಕುಂಬಾರನಿಗೆ ಬೇಕಾದ ಎಲ್ಲಾ ಸಲಕರಣೆಗಳನ್ನು ಮಾಡಿದ ಮೇಲೆ ಯಮನ ಕೋಣದ ಮೇಲೆ ಮಣ್ಣನ್ನು ಹೇರಿ ತರಿಸಲಾಯಿತು. ಗಿರಿರಾಜನು ಕುಂಬಾರನನ್ನು ಸೃಷ್ಟಿಸಿದನು. ಕುಂಬಾರನು ಮಂಗಲ ಕಾರ್ಯಕ್ಕೆ ಬೇಕಾದ ಕಲಶ, ಹೂಜೆ, ಪಂಚ ಬಾಗೀನಗಳನ್ನು ಕೊಟ್ಟು, ಮಣ್ಣಿನ ಭಾಂಡೆಗಳನ್ನು ವಿವಾಹ ಮಂಟಪಕ್ಕೆ ತಂದರು. ಅದರ ಪ್ರತೀಕವಾಗಿಯೇ ಈಗಲೂ ಕುಂಬಾರನ ಮನೆಯಿಂದ ಐರಾಣಿ ಗಡಿಗೆಗಳನ್ನು ತರುವ ಪದ್ಧತಿ ನಡೆದು ಬಂದಿದೆ. ಜನಪದದಲ್ಲಿ ಐರಾಣಿ ಗಡಿಗೆಗಳು ದೇವರೆಂದೇ ನಂಬಿಕೆ. ಹೀಗೆ ಈಶ್ವರನ ಮದುವೆಯ ಸಂದರ್ಭದಲ್ಲಿ ಹುಟ್ಟಿದ ಕುಂಬಾರರು, “ಗಿರಿರಾಜನ ವಂಶಸ್ಥರು, ಶಿವನ ಮೈದುನರು, ನಾವು ಗಣಪತಿಯ ಸೋದರಮಾವಂದಿರು” ಎಂದು ಈ ಶಾಸನ ಹೇಳುತ್ತದೆ.
ಗ್ರಾಮಜೀವನದಲ್ಲಿ ಕುಂಬಾರ
ಗ್ರಾಮೀಣ ಸಮಾಜದಲ್ಲಿ ಕುಂಬಾರನ ಪಾತ್ರ ಬಹುಮುಖ್ಯವಾದುದು. ಅಡುಗೆಗೆ ಬೇಕಾದ ಮಡಕೆ, ಕುಡಿಕೆಗಳು, ದನಕರುಗಳಿಗೆ ಕುಡಿವ ನೀರಿನ ಬಾನಿಗಳು, ಸಾಂಸ್ಕೃತಿಕ ಸಂದರ್ಭದ ಮಡಕೆಗಳು, ಮದುವೆಯ ಐರಾಣಿ ಗಡಿಗೆ, ದೇವತೆಯ ಜಾತ್ರೆಗೆ ಗಟ್ಟಿಗಡಿಗೆ, ಆಟಕ್ಕೆ ಬೇಕಾದ ಗೊಂಬೆ, ಪೂಜೆ-ಹರಕೆಗಳಿಗೆ ಬೇಕಾಗುವ ಮೂರುತಿ, ಶವಸಂಸ್ಕಾರಕ್ಕೆ ಪ್ರೇತಗಡಿಗೆ, ಕಳ್ಳು (ಹೆಂಡ) ಇಳುವಲು ಗೊಬ್ಬೆ… ಹೀಗೆ ಅನೇಕ ತರದ ಮಡಕೆಗಳನ್ನೂ, ಮಣ್ಣಿನ ಮೂರುತಿಗಳನ್ನೂ ಪೂರೈಸುವುದು ಕುಂಬಾರನ ಕೆಲಸವಾಗಿದೆ. ಗ್ರಾಮದ ಪ್ರಮುಖ 12 ಜನ ಪ್ರಮುಖ ಆಯಗಾರರಲ್ಲಿ ಕುಂಬಾರನೂ ಒಬ್ಬ. ವರ್ಷವಿಡೀ ರೈತನಿಗೆ ಬೇಕಾಗುವ ಮಡಕೆ-ಕುಡಿಕೆಗಳನ್ನು ಪೂರೈಸಿ, ಸುಗ್ಗಿಯ ಸಮಯದಲ್ಲಿ ಇವನು ರೈತನಿಂದ ದವಸ-ಧಾನ್ಯಗಳನ್ನು ಪಡೆಯುತ್ತಾನೆ. ಕುಂಬಾರನು ಮಡಕೆ ಮಾಡುವುದಲ್ಲದೆ ಬೇರೆ ಬೇರೆ ವೃತ್ತಿಗಳನ್ನು ಕೂಡ ಮಾಡುತ್ತಾನೆ. ಮನೆ ಕಟ್ಟುವಾಗ ಬಿದರಿನ ಹಂದರದ ಮೇಲೆ ಮಣ್ಣನ್ನು ಮೆತ್ತಿ ಗೋಡೆಯನ್ನೆಬ್ಬಿಸುವುದು, ನೆಲಕ್ಕೆ ಮಣ್ಣನ್ನು ಘಟ್ಟಿಸಿ ನಯಗಾರೆಯಂತೆ ಮಾರ್ಪಡಿಸುವುದು, ಇವರು ಹಳ್ಳಿಗಳಲ್ಲಿ ಕುಂಬಾರರ ಕೆಲಸಗಳೇ ಆಗಿವೆ. ಆಲೆಮನೆಗಳಲ್ಲಿ ಕಬ್ಬಿನ ಹಾಲನ್ನು ಕುದಿಸುವ ಬಾಣಲಿಗಳಿಗೆ ಕುಂಬಾರರೆ ಕಟ್ಟೆಯನ್ನು ಕಟ್ಟುವರು. ಹೀಗೆ ಗ್ರಾಮ ಜೀವನದಲ್ಲಿ ನಿತ್ಯ, ನೈಮಿತ್ತಿಕ ಪ್ರಯೋಜನಗಳಿಗೆಲ್ಲ ಕುಂಬಾರನ ನೆರವಿದೆ.
ಕುಂಬಾರ-ಲಿಂಗಾಯತರ ಸ್ಥಾನಮಾನ
ದಕ್ಷಿಣ ಭಾರತದ ಕುಂಬಾರರನ್ನು ಶೈವ, ವೀರಶೈವ ಮತ್ತು ವೈಷ್ಣವ ಧರ್ಮೀಯರೆಂದು ವಿಂಗಡಿಸಬಹುದು. ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗವಂತ ಧರ್ಮದ ಕುಂಬಾರರಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗುನಗ ಕುಂಬಾರರು ಗ್ರಾಮದೇವತೆಯ ಅರ್ಚಕರು. ಇವರು ಹೆಚ್ಚಾಗಿ ಶೃಂಗೇರಿ ಪೀಠಕ್ಕೆ ನಡೆದುಕೊಳ್ಳುವರು. ಕುಂಬಾರರು ಜಾತಿ ನಿರ್ದೇಶನದ ದೃಷ್ಟಿಯಿಂದ ಶೂದ್ರರೆಂದೇ ಪರಿಗಣಿತರಾಗಿದ್ದರೂ ಬ್ರಾಹ್ಮಣ ತಂದೆ, ಶೂದ್ರ ತಾಯಿಯ ಮೂಲದವರೆಂದು ಕುಂಬಾರರ ಕುರಿತಾದ ಹಲವಾರು ಐತಿಹ್ಯಗಳಿವೆ. ಹೀಗಾಗಿ ಇವರನ್ನು ದ್ವಿಜಾತಿ ಎಂದು ಹೇಳುತ್ತಿದ್ದುದುಂಟು. ಏನಿದ್ದರೂ ಶ್ರೇಣೀಕೃತ ಸಮಾಜದಲ್ಲಿ ಶೂದ್ರರಲ್ಲಿಯೇ ಮೇಲುವರ್ಗದವರಾಗಿದ್ದುದು ತಿಳಿದು ಬರುತ್ತದೆ. ವರ್ಣಾಶ್ರಮ ಪದ್ಧತಿಯ ನಾಲ್ಕು ಜಾತಿಗಳ ಮಿಶ್ರಣದಿಂದ ಕುಂಬಾರ ಉಪಜಾತಿ ಹುಟ್ಟಿತೆನ್ನುವುದು ಕೆಲವು ವಿದ್ವಾಂಸರ ಅಭಿಪ್ರಾಯ. ಸರ್ ವಿಲಿಯಮ್ ಮೊನಿಯರ್ ತಮ್ಮ ಸಂಸ್ಕೃತ ಶಬ್ದಕೋಶದಲ್ಲಿ ಕುಂಬಾರ ಕುಲದ ತಾಯಿ ಕ್ಷತ್ರಿಯಳು, ತಂದೆ ಬ್ರಾಹ್ಮಣ ಎಂದು ವಿವರಿಸಿದ್ದಾರೆ. ಅನೇಕ ಕುಂಬಾರ ಉಪಪಂಗಡದವರು ಶಾಲಿವಾಹನನ್ನು ತಮ್ಮ ಕುಲದ ಮೂಲಪುರುಷ ಎಂದು ಹೇಳಿಕೊಳ್ಳುವರು. ಇದೇ ರೀತಿ ಸರ್ವಜ್ಞನ ಹುಟ್ಟಿನ ಬಗೆಗೂ ಇದೆ. ಈ ಕುರಿತಾದ ವಿವಾದ ಅಪರಿಹಾರ್ಯ ವಿಷಯ.
ಕುಂಬಾರರು ತಮ್ಮ ಸ್ಥಾನಮಾನ ದೃಷ್ಟಿಯಿಂದ ಮೇಲ್ಪದರಿನಲ್ಲಿದ್ದು, ಸಾಮಾಜಿಕ ಮೇಲ್ಮೈಯನ್ನು ಸಾಧಿಸಲು ಆಗಾಗ ತಮ್ಮ ಹಕ್ಕುಗಳಿಗಾಗಿ ಸಂಘರ್ಷ ನಡೆಸುತ್ತಿದ್ದುದು ತಿಳಿದು ಬರುತ್ತದೆ. ಯಳಂದೂರಿನ ಶಾಸನವೊಂದರಲ್ಲಿ ತಮ್ಮ ಹಕ್ಕುಗಳಿಗಾಗಿ ಇವರು ಪರೀಕ್ಷೆಗೊಳಗಾದ ಘಟನೆ ಹೀಗೆ ನಿರೂಪಿತವಾಗಿದೆ; ಕುಂಬಾರರಿಗೆ ಮದುವೆ ಪ್ರಸಂಗದಲ್ಲಿ ಕ್ಷೌರಿಕರಿಂದ ಕಾಲುಗುರು ತೆಗೆಯಿಸಿಕೊಳ್ಳುವ ಹಕ್ಕು ಇಲ್ಲವೆಂಬ, ಅಗಸರಿಂದ ಚಪ್ಪರಕ್ಕೆ ಬಟ್ಟೆ ಮೇಲ್ಕಟ್ಟು ಕಟ್ಟಿಸಿಕೊಳ್ಳುವ ಹಕ್ಕು ಇಲ್ಲವೆಂಬ ವಾದ ಹುಟ್ಟುತ್ತದೆ. ಆಗ ಕುಂಬಾರರು ಪರಿಹಾರ ಕಂಡುಕೊಳ್ಳಲು ಹರದನಹಳ್ಳಿಯ ದಿವ್ಯಲಿಂಗೇಶ್ವರನ ಸಮಕ್ಷಮದಲ್ಲಿ ಕುದಿಯುವ ತುಪ್ಪದಲ್ಲಿ ಕೈಯಿಟ್ಟು ಸತ್ವಪರೀಕ್ಷೆಯಲ್ಲಿ ಗೆಲ್ಲುತ್ತಾರೆ. ಆಗ ಕುಂಬಾರರಿಗೆ ಕ್ಷೌರಿಕರಿಂದ ಕಾಲುಗುರು ತೆಗೆಯಿಸಿಕೊಳ್ಳುವ, ಅಗಸರಿಂದ ಮೇಲ್ಕಟ್ಟು ಕಟ್ಟಿಸಿಕೊಳ್ಳುವ ಹಕ್ಕುಂಟು ಎಂದು ಶಾಸನ ಬರೆಸಲಾಯಿತು. ಮಹಾರಾಷ್ಟ್ರದಲ್ಲಿ ಪೇಶ್ವೆಯರ ಆಡಳಿತ ಕಾಲದಲ್ಲಿ ಅಲ್ಲಿಯ ಬಡಗಿಯವರು “ಕುಂಬಾರ ಜನಾಂಗದವರು ಮದುಮಗನ ಮೆರವಣಿಗೆಯನ್ನು ರಾಜಬೀದಿಯಲ್ಲಿ ಅಶ್ವಾರೂಢವಾಗಿ ಮಾಡಬಾರದು” ಎಂದು ತಕರಾರು ತೆಗೆದಾಗ. ಅದನ್ನು ಪೇಶ್ವೆಯವರು ತಳ್ಳಿಹಾಕಿದುದು ತಿಳಿದು ಬರುತ್ತದೆ.
ಕುಂಭ (ನೀರಿನ ಗಡಿಗೆ)+ಕಾರ= ಕುಂಭಕಾರ> ಕುಂಬಾರ ಎಂದು ನಿಷ್ಪತ್ತಿ ಹೇಳಲಾಗುತ್ತದೆ. ಈ ದೇಶದಲ್ಲಿ ಬ್ರಾಹ್ಮಣ ಮೊದಲ್ಗೊಂಡು ಅಂತ್ಯಜರವರೆಗೆ ಅನೇಖ ಉಪಜಾತಿಗಳಿವೆ. ವಿದೇಶಿ ಪ್ರವಾಸಿಗ ಡಾ.ಬುಕನೆನ್ ಹಳೆ ಮೈಸೂರು ಪ್ರದೇಶದಲ್ಲಿನ ಜಾತಿಗಳ ಎಡಗೈ ಬಲಗೈ ಕುರಿತು ಒಂದು ಯಾದಿಯನ್ನೇ ಸಿದ್ಧಪಡಿಸಿದ್ದಾನೆ. ಬಲಗೈ ಪಂಗಡದ ಹದಿನೆಂಟು ಜಾತಿಗಳಲ್ಲಿ ಕುಂಬಾರರದು ಕೂಡ ಒಂದು. ಕುಂಬಾರರಲ್ಲಿನ ಉಪಜಾತಿಗಳು, ಅವರು ಬಳಸುವ ಉಪಕರಣಗಳ ರಚನೆ, ಮಡಕೆಗಳ ಬಣ್ಣ, ಅವರ ಸಾಕುಪ್ರಾಣಿಗಳು ಹಾಗೂ ಅವರು ಮಾಡುವ ಇತರೆ ವೃತ್ತಿಗಳಿಂದ ಹುಟ್ಟಿಕೊಂಡಿವೆ. ತಿಗುರಿಯನ್ನು ಬಳಸದೆ ಬರಿಕೈಯಿಂದ ಮಡಕೆ ಮಾಡುವವರನ್ನು ‘ಕೈಕುಂಬಾರ’ರೆಂದು, ತಿಗುರಿಯಿಂದ ಮಡಕೆ ಮಾಡುವವರನ್ನು ‘ಚಕ್ರ ಕುಂಬಾರ’ರೆಂದು, ಅದರಲ್ಲೂ ಸಣ್ಣ ಚಕ್ರ, ದೊಡ್ಡ ಚಕ್ರ, ಮರದ ಚಕ್ರ, ಕಲ್ಲು ಚಕ್ರ ಎಂಬ ಪ್ರಭೇದಗಳಿವೆ. ಉತ್ತರ ಕರ್ನಾಟಕದ ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಚಕ್ರಸಾಲಿ ಎಂಬ ಅಡ್ಡಹೆಸರು ಹೆಚ್ಚು ಬಳಕೆಯಲ್ಲಿದೆ. ಬಿಳಿವರ್ಣದ ಮಡಕೆ ಸುಡುವವರನ್ನು ‘ಗೋರ ಕುಂಬಾರ’ ಎಂದು ಮಹಾರಾಷ್ಟ್ರದಲ್ಲಿ ಕರೆಯಲಾಗುತ್ತದೆ. ಸಂತ ಗೋರಕುಂಬಾರ ಅದೇ ಪಂಗಡದವನಿರಬೇಕು. ಮಹಾರಾಷ್ಟ್ರದಲ್ಲಿ ರಾಣಿಕುಂಬಾರ ಎನ್ನುವ ಪಂಗಡವಿದೆ. ಉತ್ತರ ಕನ್ನಡ ಜಿಲ್ಲೆಯ ಗುನಗ ಕುಂಬಾರರು ಗ್ರಾಮದೇವತೆಯ ಅರ್ಚಕರು. ತುಳುನಾಡಿನಲ್ಲಿ ‘ಮೂಲ್ಯ’ ಎಂಬ ತುಳುಪದ ಬಳಕೆಯಲ್ಲಿದೆ. ಹಳೆ ಮೈಸೂರು ಭಾಗದಲ್ಲಿ ‘ಮುಳ್ಳು ಕುಂಬಾರ’, ‘ಬಯಲು ಕುಂಬಾರ’, ‘ಕುಂಬಾರ ಶೆಟ್ಟಿ’ ಎನ್ನುವ ಪಂಗಡಗಳಿವೆ. ಹೀಗೆ ಕುಂಬಾರರಲ್ಲಿಯೂ ಉಪಜಾತಿಗಳ ದೊಡ್ಡ ಪಟ್ಟಿಯೇ ಇದೆ.
ಲಿಂಗಾಯತ ಕುಂಬಾರ
ಕರ್ನಾಟಕದಲ್ಲಿ ನೆಲೆಸಿರುವ ಕುಂಬಾರ ಸಮಾಜದಲ್ಲಿ ಲಿಂಗಾಯತ ಕುಂಬಾರರದು ಪ್ರಮುಖ ಶಾಖೆ. ಬೇರೆ ಕುಂಬಾರ ಶಾಖೆಗಳೊಂದಿಗೆ ಹೋಲಿಸಿದರೆ ತುಂಬಾ ವಿಶಿಷ್ಟವಾಗಿರುವ ಮತ್ತು ಅವರಿಗಿಂತ ಜನಸಂಖ್ಯೆಯಲ್ಲಿ ಅಧಿಕವಾಗಿ ಮತ್ತು ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ವಾಸವಾಗಿರುವ ಪಂಗಡವಿದು. ಭೌಗೋಳಿಕ ವಿಸ್ತಾರದಲ್ಲಿ ಮಂಡ್ಯ, ಮೈಸೂರು, ಕೋಲಾರ, ದಕ್ಷಿಣ ಕನ್ನಡ, ಉತ್ತರ ಕನ್ನಡ ಈ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲಿಯೂ ಲಿಂಗಾಯತ ಕುಂಬಾರರು ನೆಲೆಸಿರುವುದು ಕಂಡುಬರುತ್ತದೆ. ಇವರು ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಹೆಚ್ಚಾಗಿಯೂ, ದಕ್ಷಿಣ ಕರ್ನಾಟಕದಲ್ಲಿ ವಿರಳವಾಗಿಯೂ ನೆಲೆಸಿರುವರು. ಕರ್ನಾಟಕ ರಾಜ್ಯದಲ್ಲಿ ಲಿಂಗವಂತ ಕುಂಬಾರರ ಸಂಖ್ಯೆ ಐದು ಲಕ್ಷಕ್ಕೂ ಹೆಚ್ಚಿದೆ. ಕರ್ನಾಟಕವನ್ನು ಬಿಟ್ಟರೆ ಗಡಿನಾಡು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವೊಂದು ಭಾಗಗಳಲ್ಲಿ ಲಿಂಗಾಯತ ಕುಂಬಾರರು ಅಲ್ಪಸಂಖ್ಯೆಯಲ್ಲಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ, ಸೊಲ್ಲಾಪುರ, ಪಂಡರಾಪುರ ಪ್ರದೇಶಗಳಲ್ಲಿ; ಆಂಧ್ರಪ್ರದೇಶದ ಆದವಾನಿ, ಆಲೂರು, ರಾಯದುರ್ಗ, ಅನಂತಪುರ ಪ್ರದೇಶಗಳಲ್ಲಿ ಲಿಂಗಾಯತ ಕುಂಬಾರರು ಇರುವುದು ಕಂಡುಬರುತ್ತದೆ. ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದಿನಲ್ಲಿ ಲಿಂಗಾಯತ ಕುಂಬಾರ ಕುಟುಂಬಗಳಿರುವುದು ತಿಳಿದು ಬಂದಿದೆ. ಇವರು ಶುದ್ಧ ಕನ್ನಡಿಗರು, ಸಸ್ಯಾಹಾರಿಗಳು, ಶಿವಭಕ್ತರು.
ಲಿಂಗಾಯತ ಕುಂಬಾರ ಮೂಲ
ಹನ್ನೆರಡನೆ ಶತಮಾನದ ಬಸವಯುಗದಲ್ಲಿ ಅನೇಕ ವ್ಯಕ್ತಿಯ ಜನರು ಲಿಂಗವಂತ ಧರ್ಮವನ್ನು ಸ್ವೀಕರಿಸಿರುವುದು ತಿಳಿದ ವಿಷಯ. ಕುಂಬಾರರು ಮೂಲತಃ ಶಿವಭಕ್ತರಾಗಿದ್ದು, ಬಸವಯುಗದಲ್ಲಿ ಲಿಂಗವಂತ ಧರ್ಮವನ್ನು ಸ್ವೀಕರಿಸಿದರು. ಇದಕ್ಕೆ ಪುಷ್ಟಿಯಾಗಿ The Mysore Tribes and Castes ಎಂಬ ಪುಸ್ತಕದಲ್ಲಿ ಶ್ರೀನಿವಾಸನ್ ಅವರು ಲಿಂಗಾಯತ ಕುಂಬಾರರು ಮತಾಂತರ ಹೊಂದಿದವರೆಂದು ಹೇಳುತ್ತಾರೆ. ಪೂರ್ವದಲ್ಲಿದ್ದ ಕುಂಬಾರ ಗುಂಡಯ್ಯ ಮೊದಲಾದ ಕುಂಬಾರರು ಶೈವದಿಂದ ಲಿಂಗಾಯತ ಧರ್ಮಕ್ಕೆ ಹೊರಳಿದರೆಂದು ತೋರುತ್ತದೆ. ಹೀಗಿದ್ದೂ ಹನ್ನೆರಡನೆಯ ಶತಮಾನದ ಶರಣ ಸಮೂಹದಲ್ಲಿ ಸಮಾಜದ ಬಹುಮುಖ್ಯ ಕಸುಬುದಾರರಾಗಿದ್ದ ಕುಂಬಾರ ಜನಾಂಗದ ಶರಣರಾರೂ ಕಂಡುಬರದಿರುವುದು ಕೌತುಕದ ವಿಷಯ. ನಗೆಯ ಮಾರಿತಂದೆ ಕುಂಬಾರ ಜನಾಂಗದ ಶರಣನೆಂದು ಕೆಲವೆಡೆ ಮಾತ್ರ ಪ್ರಸ್ತಾಪಿಸಲಾಗಿದೆ. ಏನಿದ್ದರೂ ಲಿಂಗಾಯತ ಕುಂಬಾರರ ಕುರಿತಂತೆ, ಸದ್ಯದ ಮಟ್ಟಿಗೆ ಬಸವಯುಗದಿಂದಲೇ ಆರಂಭಿಸಬೇಕಾಗಿರುವುದು ಅನಿವಾರ್ಯವೆಂದು ತೋರುತ್ತದೆ. ಜನನದಿಂದ ಮರಣದವರೆಗಿನ ಇವರ ಎಲ್ಲ ಆಚರಣೆಗಳು, ನೀತಿ, ನಡಾವಳಿಗಳು, ಧಾರ್ಮಿಕ ಆಚರಣೆಗಳು ಆಹಾರ, ಉಡುಪು, ಇತ್ಯಾದಿ ಎಲ್ಲವೂ ಲಿಂಗವಂತ ಧರ್ಮದ ಚೌಕಟ್ಟಿಗೆ ಒಳಪಟ್ಟಿವೆ. ಉಳಿದ ವೀರಶೈವರಿಗೂ, ಇವರಿಗೂ ಯಾವುದೇ ಭೇದವಿಲ್ಲ. ಲಿಂಗಾಯತ ಕುಂಬಾರರು, ಇಷ್ಟಲಿಂಗ ಉಪಾಸನೆ, ಷಟಸ್ಥಲ, ಪಂಚಾಚಾರ, ಅಷ್ಟಾವರಣಗಳಲ್ಲಿ ನಂಬಿಕೆಯುಳ್ಳವರು. ಗುರು ಲಿಂಗ ಜಂಗಮ ಉಪಾಸಕರು. ಪುರೋಹಿತ ಕಾರ್ಯಗಳಿಗೆ ಜಂಗಮರು ಆಗಮಿಸುವರು. ಶುದ್ಧ ಸಸ್ಯಾಹಾರಿಗಳು. ಹೀಗಿದ್ದೂ ಈ ಸಮಾಜದಲ್ಲಿ ಅನೇಕ ಭೇದಗಳು ಬೆಳೆದು ಬಂದಿವೆ. ಶೈಕ್ಷಣಿಕವಾಗಿ ಮುಂದುವರಿದಂತೆಲ್ಲ ಇವು ಕಳಚಿ ಬೀಳುತ್ತಿರುವುದು ಉತ್ತಮ ಬೆಳವಣಿಗೆ.
ಇವರು ರೇಣುಕ, ದಾರುಕ, ಗಜಕರ್ಣ, ಘಂಟಾಕರ್ಣ, ವಿಶ್ವಕರ್ಮ ಎಂಬ ಐದು ಗೋತ್ರಗಳನ್ನು ಹೇಳಿಕೊಳ್ಳುತ್ತಿದ್ದರೂ ಗೋತ್ರಗಳ ಆಚರಣೆ ಇವರಲ್ಲಿ ಇಲ್ಲ. ಲಿಂಗಾಯತ ಕುಂಬಾರರಲ್ಲಿ ಮೊದಲಿನ ಕಾಲದಲ್ಲಿ ನೆಂಟಸ್ಥಿಕೆ ಬೆಳೆಸುವಾಗ ಗೋತ್ರಗಳಿಗೆ ಬದಲು ಮನೆದೇವರ ಲೆಕ್ಕಾಚಾರವಿತ್ತು. ಮೈಲಾರಲಿಂಗ ಎಲ್ಲಮ್ಮ ದೇವರಿರುವ ಮನೆತನಗಳೊಡನೆ ವೀರಭದ್ರ, ಬಸವಣ್ಣ, ಸಂಗಮೇಶ ಮನೆದೇವರಿರುವವರು ನೆಂಟಸ್ಥಿಕೆ ಬೆಳೆಸುತ್ತಿರಲಿಲ್ಲ. ಈಗೀಗ ಅದು ಕಡಿಮೆಯಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಾಗಿಯೂ ಮಧ್ಯ ಕರ್ನಾಟಕದಲ್ಲಿ ವಿರಳವಾಗಿಯೂ ನೆಲೆಸಿರುವ ಸಜ್ಜನ ಕುಂಬಾರರು ಒಂದು ಕಾಲಕ್ಕೆ ಲಿಂಗಾಯತ ಕುಂಬಾರರಾಗಿದ್ದುದು ತಿಳಿದು ಬರುತ್ತದೆ. ಮಧುಗಿರಿಯ ಸುತ್ತಮುತ್ತ ಸಜ್ಜನ ಕುಂಬಾರರು, ಶೆಟ್ಟಿ ಕುಂಬಾರರು, ಲಿಂಗಾಯತ ಕುಂಬಾರರು ಇದ್ದಾರೆ. ಸಜ್ಜನ ಕುಂಬಾರರ ಕುರಿತು ಇಲ್ಲೊಂದು ಕತೆ ಪ್ರಚಲಿತದಲ್ಲಿದೆ. ಬಹಳ ಹಿಂದೆ ಸಣ್ಣ ವಯಸ್ಸಿನಲ್ಲಿ ವಿಧವೆಯಾದ ಶೆಟ್ಟಿ ಕುಂಬಾರ ಹೆಣ್ಣುಮಗಳು ಲಿಂಗಾಯತ ಪುರುಷನ ಸಂಪರ್ಕ ಪಡೆದು ಮಗುವಿಗೆ ಜನ್ಮ ನೀಡಿದಳು. ಅವರು ಸಜ್ಜನ ಕುಂಬಾರರಾದರು. ಇನ್ನೊಂದು ಕತೆ ಹೀಗಿದೆ: ಅಸಾಧಾರಣ ಮಾಂತ್ರಿಕ ಸಜ್ಜನ ಕುಂಬಾರನೊಬ್ಬ ಲಿಂಗಾಯತ ಆಚರಣೆಗಳನ್ನು ಧಿಕ್ಕರಿಸಿ ಮಾಂಸಾಹಾರಿಯಾಗಿದ್ದರಿಂದ ಅವನನ್ನು ಕುಲದಿಂದ ಹೊರಹಾಕಿದರು. ಇದರಿಂದ ಕುಪಿತಗೊಂಡ ಆತ ಪ್ಲೇಗು ಹರಡುವಂತೆ ಮಾಡಿ, ತನ್ನನ್ನು ಹೊರಹಾಕಿದವರೆಲ್ಲಾ ಮದ್ಯ, ಮಾಂಸ ಸೇವನೆ ಮಾಡುವವರೆಗೆ ಬಿಡದೆ ಕಾಡಿದ. ಇದರಿಂದಾಗಿ ಹೆಚ್ಚಿನ ಸಜ್ಜನ ಕುಂಬಾರರು ಮಾಂಸಾಹಾರಿಗಳಾದರು. ಅಲ್ಲಿಂದ ತಪ್ಪಿಸಿಕೊಂಡು ಹೋದವರು ಲಿಂಗಾಯತ ಕುಂಬಾರರಾಗಿ ಉಳಿದರು. ಹೀಗೆ ಮಾಂಸಾಹಾರಿಗಳಾದರೂ ಸಜ್ಜನ ಕುಂಬಾರರ ಅನೇಕ ಆಚರಣೆಗಳು ಕುಂಬಾರ ಲಿಂಗಾಯತರ ಆಚರಣೆಗಳನ್ನು ಹೋಲುತ್ತವೆ. ಮದುವೆಯ ಸಂದರ್ಭದಲ್ಲಿ ಕುಂಬೇಶ್ವರ ಪೂಜೆಗೆ ಅವರು ಬಹಳ ಮಹತ್ವ ಕೊಡುತ್ತಾರೆ. ಮದುವೆ ಮುಂತಾದ ಮಂಗಳ ಕಾರ್ಯಗಳ ಪೌರೋಹಿತ್ಯಕ್ಕೆ ಜಂಗಮರನ್ನು ಬರಮಾಡಿಕೊಳ್ಳುತ್ತಾರೆ.
ಲಿಂಗಾಯತ ಕುಂಬಾರರು ತಮ್ಮ ಹೆಸರಿನ ಮುಂದೆ ಇಲ್ಲವೆ ಹಿಂದೆ ಗುಂಡಾ ಭಕ್ತ ಎಂದು ಬರೆದುಕೊಳ್ಳುವ ರೂಢಿಯಿತ್ತು. ಇತ್ತೀಚೆಗೆ ಅದು ಕಡಿಮೆಯಾಗಿದೆ. ಸಾಮಾನ್ಯವಾಗಿ ಕುಂಬಾರ ಇಲ್ಲವೆ ಚಕ್ರಸಾಲಿ ಎಂದು ಬರೆದುಕೊಳ್ಳುತ್ತಾರೆ. ಗುಲ್ಬರ್ಗಾದ ಕೆಲವು ಲಿಂಗಾಯತ ಕುಂಬಾರರು ಕುಲಾಲ ಎಂಬ ಹೆಸರನ್ನಿಟ್ಟುಕೊಂಡಿರುವುದು ತಿಳಿದು ಬರುತ್ತದೆ. ಚಕ್ರಸಾಲಿ ಎಂಬುದು ಸಾಮಾನ್ಯವಾಗಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕು, ಹಿರೆಕೆರೂರು ತಾಲ್ಲೂಕು ಹಾಗೂ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಕುಂಬಾರರಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತದೆ. ಈ ಪ್ರದೇಶ ಸರ್ವಜ್ಞನ ಹುಟ್ಟೂರಾದ ಹಿರೆಕೆರೂರು ತಾಲ್ಲೂಕಿನ ಮಾಸೂರಿಗೆ ಹತ್ತಿರವಾದುದು. ಇದು ಕೈಯಿಂದ ಕುಂಬಾರಿಕೆ ಮಾಡುವ ಕೈಕುಂಬಾರ ಪಂಗಡದವರಲ್ಲ ಎಂಬ ಅರ್ಥ ಕೊಡುವಂತೆ ತೋರುತ್ತದೆ.
ಹಾಸನ, ಚಿಕ್ಕಮಗಳೂರು ಜಿಲ್ಲೆಯ ಹೆಚ್ಚಿನ ಲಿಂಗಾಯತ ಕುಂಬಾರರು ತಮ್ಮ ಹೆಸರಿನ ಕೊನೆಯಲ್ಲಿ ಶೆಟ್ಟರು ಎಂದು ಇಟ್ಟುಕೊಳ್ಳುವರು. ಕುಂಬಾರಶೆಟ್ಟಿ ಎನ್ನುವ ಪದ, ಬಹು ಹಿಂದಿನಿಂದಲೂ ಬಳಕೆಯಲ್ಲಿದ್ದಂತೆ ಕಂಡುಬರುತ್ತದೆ. ಇವೆಲ್ಲ ಏನೇ ಇರಲಿ, ಕುಂಬಾರ ಎಂಬ ಪದವನ್ನು ಇಂದಿನ ಅನೇಕ ಯುವಕರು, ತಮ್ಮ ಹೆಸರಿನೊಂದಿಗೆ ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಹೆಚ್ಚು ಶ್ರಮ ಮತ್ತು ಕಡಿಮೆ ಆದಾಯದ ಈ ವೃತ್ತಿಗೆ ಇದ್ದ ಮಾನ್ಯತೆ ಅಷ್ಟಕ್ಕಷ್ಟೆ. ನನ್ನ ಅಜ್ಜಿ ನಾನು ಚಿಕ್ಕವನಿದ್ದಾಗ, “ನಿನ್ನನ್ನು ಯಾರಾದರೂ ಯಾವ ಪೈಕಿ? ಎಂದು ಕೇಳಿದರೆ ಕುಂಬಾರ ಎಂದು ಹೇಳಬೇಡ, ಪಂಚಾಚಾರದವರು(=ಪಂಚಮಸಾಲಿ) ಎಂದು ಹೇಳು” ಎಂದು ಬೋಧಿಸುತ್ತಿದ್ದಳು.
ಲಿಂಗವಂತ ಕುಂಬಾರರ ಹೆಸರುಗಳು ಉಳಿದ ಲಿಂಗವಂತರಂತೆ ಅಪ್ಪ, ಅಣ್ಣ, ಅಕ್ಕ, ಅವ್ವ ಹೆಸರಿನಿಂದ ಕೊನೆಗೊಳ್ಳುತ್ತವೆ. ಉದಾ: ಬಸಪ್ಪ, ಶಿವಪ್ಪ, ವೀರಭದ್ರಪ್ಪ, ಲಿಂಗಣ್ಣ, ಶಂಕ್ರಣ್ಣ, ಬಸಣ್ಣ ಇತ್ಯಾದಿ. ಹೆಂಗಸರ ಹೆಸರುಗಳು- ಗಂಗವ್ವ, ಹಾಲವ್ವ, ಬಸವ್ವ, ಮಹದೇವಕ್ಕ, ನೀಲಕ್ಕ, ಇತ್ಯಾದಿ.
ಲಿಂಗಾಯತ ಕುಂಬಾರರು ಈಶ್ವರ, ಬಸವಣ್ಣ, ವೀರಭದ್ರ ದೇವರುಗಳನ್ನು ಹೆಚ್ಚಾಗಿ ಪೂಜಿಸುವರು. ಆಯಾ ಗ್ರಾಮದ ದೇವತೆಗಳಲ್ಲೂ ಇವರಿಗೆ ನಂಬಿಕೆ ಇದೆ. ಇಷ್ಟಲಿಂಗ ಪೂಜೆಯಂತೂ ಕಡ್ಡಾಯ. ಕುಂಬಾರರು ಮಾಡುವ ಮತ್ತೊಂದು ವಿಶಿಷ್ಟ ಪೂಜೆಯೆಂದರೆ ಕುಂಬೇಶ್ವರ ಪೂಜೆ. ಕುಂಭವು ಈಶ್ವರನೆಂದು ಇವರ ನಂಬಿಕೆ. ಕರ್ನಾಟಕದ ಅನೇಕ ಭಾಗಗಳಲ್ಲಿ ಕುಂಭೇಶ್ವರ ದೇವಾಲಯಗಳಿವೆ. ಧಾರವಾಡ ಜಿಲ್ಲೆಯ ಮುಳಗುಂದದಲ್ಲಿ, ಶಿರಹಟ್ಟಿ ತಾಲ್ಲೂಕಿನ ಯಳವತ್ತಿಯಲ್ಲಿ, ಹೊಳಲ್ಕೆರೆ ತಾಲ್ಲೂಕಿನ ಗುಂಜಸೂರ ಗ್ರಾಮದಲ್ಲಿ, ಹರಿಹರ, ಲಕ್ಕುಂಡಿ, ಶಿವಮೊಗ್ಗ ತಾಲ್ಲೂಕಿನ ಕುಂಸಿಯಲ್ಲಿ, ಕೋಲಾರ ಜಿಲ್ಲೆಯ ಹಲವಾರು ಕಡೆ ಕುಂಭೇಶ್ವರ ದೇವಾಲಯಗಳಿವೆ. ಶಾಸನಗಳಲ್ಲಿಯೂ ಅನೇಕ ಸಲ ಕುಂಭೇಶ್ವರ ಪ್ರಸ್ತಾಪ ಕಂಡುಬರುತ್ತದೆ. ಕುಂಬಾರರು ಬ್ರಹ್ಮನನ್ನು ಭರಮಪ್ಪ ಹೆಸರಿನಿಂದ ಅನೇಕ ಗ್ರಾಮಗಳಲ್ಲಿ ಪೂಜಿಸುತ್ತಿರುವುದು ತಿಳಿದು ಬಂದಿದೆ.
ಆಯಾ ವೃತ್ತಿಯ ಜನರು ತಮ್ಮ ಕಸುಬಿನ ಸಾಧನ ಸಲಕರಣೆಗಳನ್ನು ಪೂಜಿಸುವಂತೆ ಕುಂಬಾರರು ಕೂಡ ತಮ್ಮ ಕಸುಬಿನ ಸಲಕರಣೆಗಳಾದ ಸೊಳಕಲ್ಲು, ತಿಗುರಿ, ಮಡಕೆ ಸುಡುವ ಆವಿಗೆಯನ್ನು ಪೂಜಿಸುವ ಪದ್ಧತಿ ಇದೆ.
(ಮುಂದುವರೆಯುವುದು)
-ಬಸವರಾಜ ಕುಂಚೂರು
Comments 9
Vijayakumar Honnalli
Mar 20, 2021ಕುಂಬಾರ ಲಿಂಗಾಯತರ ಆಚಾರವಿಚಾರಗಳನ್ನು ತಿಳಿಸುವ ಮಹತ್ವಪೂರ್ಣ ಲೇಖನ. ಹಿರಿಯರಾದ ಬಸವರಾಜ ಕುಂಚೂರು ಅವರು ಈ ವಿಷಯದಲ್ಲಿ ಆಳ ಅಧ್ಯಯನ ನಡೆಸಿದ್ದಾರೆ.
Tippeswamy
Mar 22, 2021ಕುಂಬಾರರ ಹಿನ್ನೆಲೆ ಮತ್ತು ಪುರಾಣೇತಿಹಾಸ ಬಹಳ ಕುತೂಹಲಕರವಾಗಿದೆ. ಸರಳ ವಿವರಣೆಯಿಂದ ಓದಿಸಿಕೊಳ್ಳುವ ಬರಹ.
Mallikarjuna
Mar 23, 2021ಕೈ ಕುಂಬಾರರು ಮತ್ತು ಚಕ್ರ ಕುಂಬಾರರ ಬಗೆಗೆ ಕೇಳಿ ತಿಳಿದಿದ್ದೆ. ಕುಂಬಾರರ ಬದುಕಿನ ಅನೇಕ ಹೊಸ ವಿಷಯಗಳು ಗೊತ್ತಾದವು. ಶರಣು.
Ravindra Desai
Mar 26, 2021ಕುಂಬಾರರು ಮೂಲತಃ ಶಿವಭಕ್ತರಿರಬೇಕೆಂದು ನಾನು ಹೇಳುತ್ತಿದ್ದೆ. ತಾವು ಇದು ನಿಜವೆಂದೂ ಕುಂಬಾರರು ಶಿವಭಕ್ತರಾಗಿದ್ದು, ಬಸವಯುಗದಲ್ಲಿ ಲಿಂಗವಂತ ಧರ್ಮವನ್ನು ಸ್ವೀಕರಿಸಿದರು… ಎನ್ನುವುದನ್ನು ಆಧಾರ ಸಹಿತವಾಗಿ ತೋರಿಸಿದ್ದಕ್ಕೆ ಧನ್ಯವಾದಗಳು.
Basappa Chamarajnagar
Mar 27, 2021ಈಶ್ವರನ ಮದುವೆಯ ಸಂದರ್ಭದಲ್ಲಿ ಹುಟ್ಟಿದ ಕುಂಬಾರರು, “ಗಿರಿರಾಜನ ವಂಶಸ್ಥರು, ಶಿವನ ಮೈದುನರು, ನಾವು ಗಣಪತಿಯ ಸೋದರಮಾವಂದಿರು” ಎಂದು ಹೇಳುವ ಶಾಸನವನ್ನು, ಕುಂಬಾರರ ಸಂಸ್ಕೃತಿಯನ್ನು ತೋರಿಸುವ ಉತ್ತಮ ಲೇಖನ.
Halappa Bhavi
Mar 29, 2021ಕುಂಬಾರರ ಬದುಕಿನ ಮೇಲೆ ಬೆಳಕು ಬೀರುವ ಲೇಖನ ಚೆನ್ನಾಗಿ ಮೂಡಿಬಂದಿದೆ. ಬಸವರಾಜ ಕುಂಚೂರು ಶರಣರಿಗೆ ಶರಣಾರ್ಥಿಗಳು.
Sharada A.M
Apr 4, 2021ಲಿಂಗಾಯತ ಕುಂಬಾರರ ಕುರಿತಾಗಿ ಖಚಿತ ಮಾಹಿತಿ ನೀಡಿದ ಉತ್ತಮ ಲೇಖನ.
Anji k
Jul 20, 2022ಕುಂಬಾರ ಅಂದರೆ ಎಲ ಕುಂಬಾರ ಒಂದೇನ
ಇಲ್ಲ ಬೇರೆ ಕುಂಬಾರ ಇದನ
Manjunath kn
Dec 26, 2022Kumbar