ಕಾಯಕಯೋಗಿನಿ ಕದಿರ ರೆಮ್ಮವ್ವೆ
ಕದಿರ ರೆಮ್ಮವ್ವೆ ಅವಿರಳ ವಚನಕಾರ್ತಿ. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರ ಕಲ್ಯಾಣ ಕ್ರಾಂತಿಯಲ್ಲಿ ಪಾಲ್ಗೊಂಡಿದ್ದ ರೆಮ್ಮವ್ವ, ರಾಟಿಯಿಂದ ಕದಿರು ತೆಗೆದು ನೂಲುವ ಕಾಯಕವನ್ನು ಮಾಡುತ್ತಿದ್ದಳು. ಹಾಗೆ ತೆಗೆದ ನೂಲನ್ನು ಮಾರಿ, ಬಂದ ಹಣದಲ್ಲಿ ಗುರು ಲಿಂಗ ಜಂಗಮ ದಾಸೋಹ ಮಾಡಿ ಶರಣ ಬದುಕು ಸವೆಸಿದವಳು ರೆಮ್ಮವ್ವೆ.
ರೆಮ್ಮವ್ವೆಯ ಕಾಲಮಾನದ ಕುರಿತು ಅನೇಕ ಚರ್ಚೆಗಳಾಗಿವೆ. ಬಹುತೇಕರು ಈಕೆಯ ಕಾಲವನ್ನು ಬಸವಾದಿ ಪ್ರಮಥರ ಕಾಲವೆಂದು ನಿರ್ಣಯಿಸುತ್ತಾರೆ. ಡಾ ಎಲ್ ಬಸವರಾಜು ಅವರು ರೆಮ್ಮವ್ವೆಯ ವಚನದಲ್ಲಿ ಬರುವ ‘ಪರದಳ ವಿಭಾಡ’, ‘ಗಜವೇಂಟೆಕಾರ’ ಎಂಬ ಪದಗಳನ್ನು ಗಮನಿಸಿ ಇವಳು ವಿಜಯನಗರದ ಕ್ರಿ.ಶ. 1430ರ ಕಾಲದ ವಚನಕಾರ್ತಿ ಎಂದು ತೀರ್ಮಾನಿಸುತ್ತಾರೆ. ಆದರೆ ಹರಿಹರ ತನ್ನ ರಗಳೆಯಲ್ಲಿ ಕದಿರ ರೆಮ್ಮವ್ವೆಯನ್ನು ಸ್ಮರಿಸಿದ್ದಾನೆ. ಪಾಲ್ಗುರಿಕೆ ಸೋಮನಾಥನ ‘ಪಂಡಿತಾರಾಧ್ಯ ಚರಿತ್ರೆ’ಯಲ್ಲಿ ಕದಿರ ರೆಮ್ಮವ್ವೆ ಶರಣೆಯ ಉಲ್ಲೇಖವಿದೆ. ಅಲ್ಲದೆ ಕದಿರು ಕಾಯಕದ ರೆಮ್ಮವ್ವೆಯು ತನ್ನ ಒಂದು ವಚನದಲ್ಲಿ ಬಸವಣ್ಣ, ಚೆನ್ನ ಬಸವಣ್ಣ ಮತ್ತು ಪ್ರಭುದೇವರನ್ನು ಸ್ಮರಿಸಿದ್ದಾಳೆ. ಈಕೆಯ ವಚನಗಳು ಶರಣರ ವಚನಗಳ ಜೊತೆ ಮತ್ತು ಸಕಲ ಪುರಾತನರ ವಚನಗಳು ಹಾಗೂ ಇತರ ಸ್ಥಲ ಕಟ್ಟಿನ ವಚನಗಳಲ್ಲಿ ಸಮಾವೇಶಗೊಂಡಿರುವುದನ್ನು ಗಮನಿಸಿದರೆ ಕದಿರು ರೆಮವ್ವೆ ಬಸವ ಕಾಲದ ಶರಣೆ ಎನ್ನಲು ಹೆಚ್ಚು ಪುಷ್ಟಿ ಸಿಗುತ್ತದೆ. ಕ್ರಿ.ಶ 1620 ರ ಶಂಕರದೇವನ ‘ಇಷ್ಟಲಿಂಗ ಚಾರಿತ್ರ್ಯ’ ಮತ್ತು ಅಜ್ಞಾತ ಕವಿಯ ‘ನೂರೆಂಟು ಶರಣೆಯರ ಅಷ್ಟಕ’ದಲ್ಲಿ ಕದಿರ ರೆಮ್ಮವ್ವೆಯ ಉಲ್ಲೇಖ ಕಂಡುಬಂದಿದೆ. ಹೀಗಾಗಿ ಕದಿರ ರೆಮ್ಮವ್ವೆ ಹನ್ನೆರಡನೆಯ ಶತಮಾನದ ಬಸವಾದಿ ಪ್ರಮಥರ ಸಂಕುಲಕೆ ಸೇರಿದ ಶರಣೆ ಎಂದು ಗಟ್ಟಿಯಾಗಿ ನಿರ್ಧರಿಸಬಹುದು.
ಸತ್ಯ ಶುದ್ಧ ಶರಣೆಯಾದ ಕದಿರ ರೆಮ್ಮವ್ವೆ ಒಬ್ಬ ನಿಷ್ಠಾವಂತ ನೇಕಾರ ಕುಟುಂಬದ ಕಾಯಕಜೀವಿ. ರಾಟಿಯಿಂದ ನೂಲು ತೆಗೆಯುವುದು, ನೂಲನ್ನು ಮಾರಿ ಬಂದ ಆದಾಯದಿಂದ ಜಂಗಮ ಸೇವೆ ಕೈಗೊಳ್ಳುವುದು ಆಕೆಯ ಪ್ರೀತಿಯ ಕಾಯಕವಾಗಿತ್ತು. ಇವಳ ಗಂಡನ ಬಗ್ಗೆ ಯಾವುದೇ ದಾಖಲೆಗಳು ದೊರೆತಿಲ್ಲ. ತನ್ನ ಕಾಯಕದ ಜೊತೆಗೆ ನಿತ್ಯ ಅನುಭಾವದ ಗೋಷ್ಠಿಯಲ್ಲಿ ಪಾಲ್ಗೊಂಡು ಲೌಕಿಕ ಮತ್ತು ಪಾರಮಾರ್ಥಿಕ ಚಿಂತನೆಗಳಲ್ಲಿ ರೆಮ್ಮವ್ವೆ ಭಾಗವಹಿಸುತ್ತಿದ್ದಳು. ಅವಳ ಎರಡು ವಚನಗಳಲ್ಲಿ ನಿರಾಕಾರದ ಗಂಡನ ಬಗ್ಗೆ ಒಲವು ತೋರಿಸಿದ್ದನ್ನು ನೋಡಿದರೆ, ಆಕೆ ಅವಿವಾಹಿತೆಯಾಗಿರಬಹುದು ಎಂಬುದು ನನ್ನ ಗ್ರಹಿಕೆ.
ಕದಿರ ರೆಮ್ಮವ್ವೆಯ ನಾಲ್ಕು ವಚನಗಳು ಮಾತ್ರ ದೊರೆತಿವೆ. ‘ಕದಿರ ರೆಮ್ಮಿವೊಡೆಯ ಗುಮ್ಮೇಶ್ವರ’ ಆಕೆಯ ವಚನಾಂಕಿತ. ನಾಲ್ಕು ವಚನಗಳಲ್ಲಿ ಎರಡು ವಚನಗಳು ಸತಿ ಪತಿ ದಾಂಪತ್ಯ ಧರ್ಮಕ್ಕೆ ಸಂಬಂಧ ಪಟ್ಟ ಅಲೌಕಿಕ ವಿಚಾರಗಳು, ಒಂದು ವಚನದಲ್ಲಿ ಶರಣರ ಸ್ತುತಿ ಕಂಡು ಬಂದಿದೆ. ಇನ್ನೊಂದರಲ್ಲಿ ಕಾಯಕದ ಮಹತ್ವ ಅಡಕವಾಗಿದೆ.
ಎನ್ನ ಸ್ಥೂಲ ತನುವೆ ಬಸವಣ್ಣನಯ್ಯಾ
ಎನ್ನ ಸೂಕ್ಷ್ಮ ತನುವೆ ಚೆನ್ನಬಸವಣ್ಣನಯ್ಯ
ಎನ್ನ ಕಾರಣ ತನುವೆ ಪ್ರಭುದೇವರಯ್ಯಾ
ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ
ಕದಿರ ರೆಮ್ಮಿಯೊಡೆಯ ಗುಮ್ಮೆಶ್ವರಾ.
ಈ ವಚನದಲ್ಲಿ ರೆಮ್ಮವ್ವೆಯು ಬಸವಣ್ಣ ತನ್ನ ಸ್ಥೂಲ ಶರೀರದ ಗುರುತು. ಅಂದರೆ ತನಗೆ ಶರಣೆಯ ಮುದ್ರೆಯನ್ನೊತ್ತಿದ ಬಸವಣ್ಣನು ತನ್ನ ಸ್ಥೂಲ ಶರೀರಕ್ಕೆ ತನುವಾಗುತ್ತಾನೆ ಎಂದು ಹೇಳುವಲ್ಲಿ ಮಾರ್ಮಿಕ ಅರ್ಥವಡಗಿದೆ. ಕಲ್ಯಾಣ ಸಮತೆಯ ಕ್ರಾಂತಿಯಲ್ಲಿ ಕದಿರ ರೆಮ್ಮವ್ವೆಗೆ ಸ್ಥಾನ ದೊರಕಿಸಿಕೊಟ್ಟ ಬಸವಣ್ಣನವರು ಹೊಸ ಹುಟ್ಟು ನೀಡಿದ ಜನ್ಮದಾತ. ಹೀಗಾಗಿ ತನ್ನ ಕಾಯ ಶರೀರದ ಸ್ಥೂಲ ತನುವಾದವರು ಬಸವಣ್ಣ ಎಂದು ಅಭಿಮಾನದಿಂದ ಹೇಳುತ್ತಾಳೆ. ಇನ್ನು ತನ್ನ ಸೂಕ್ಷ್ಮ ಶರೀರದ ಅಂದರೆ, ಕಣ್ಣಿಗೆ ಕಾಣದ ಭಾವ ಸೂಕ್ಷ್ಮತೆಯ ತನುವು ಕೊಟ್ಟವನು ಚೆನ್ನಬಸವಣ್ಣ. ಚೆನ್ನಬಸವಣ್ಣನವರ ಷಟಸ್ಥಲದ ಅರಿವಿನ ಜ್ಞಾನವು ಮನೋ ವಿಕಸನಕ್ಕೆ ಕಾರಣವಾಯಿತೆಂಬ ಕೃತಜ್ಞತೆ ಅಲ್ಲಿದೆ. ಆದ್ದರಿಂದ ಸೂಕ್ಷ್ಮ ಶರೀರದ ತನುವು ಚೆನ್ನಬಸವಣ್ಣ. ಅದೇ ರೀತಿ ತನ್ನ ಆತ್ಮದ ಅರಿವಿಗೆ ಕಾರಣರಾದವರು ಅಲ್ಲಮಪ್ರಭುಗಳು ಎನ್ನುತ್ತಾಳೆ. ತನ್ನ ಕಾರಣ ತನುವಿಗೆ ಅಲ್ಲಮರು ಕಾರಣ ಎಂದು ಹೇಳುವ ಮೂಲಕ ಅಲ್ಲಮರ ಆಪ್ತವಲಯದಲ್ಲಿ ತನ್ನನ್ನು ಗುರುತಿಸಿಕೊಳ್ಳುತ್ತಾಳೆ. ದೇಹ, ಪ್ರಾಣ, ಆತ್ಮವು ಕ್ರಮವಾಗಿ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ತನುವಾಗಿ ವಿಕಾಸಗೊಂಡ ಬಗೆಯನ್ನು ಹೀಗೆ ಹಿಡಿದಿಟ್ಟಿದ್ದಾಳೆ ಕದಿರ ರೆಮ್ಮವ್ವೆ.
ತನ್ನ ಕಾಯಕದಲ್ಲಿ ಅತೀವ ಆನಂದ ಕಂಡ ಕದಿರ ರೆಮ್ಮವ್ವೆ, ರಾಟಿಯಿಂದ ನೂಲು ತೆಗೆಯುವ ಬಗೆಯಲ್ಲಿ ಸೃಷ್ಟಿಯ ದರ್ಶನವನ್ನೇ ಮಾಡಿಸುತ್ತಾಳೆ.
ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ;
ಅಡಿಯ ಹಲಗೆ ಬ್ರಹ್ಮ , ತೋರಣ ವಿಷ್ಣು,
ನಿ��ದ ಬೊಂಬೆ ಮಹಾರುದ್ರ;
ರುದ್ರನ ಬೆಂಬಳಿಯವೆರಡು ಸೂತ್ರ ಕರ್ಣ .
ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ,
ಸುತ್ತಿತ್ತು ನೂಲು ಕದಿರು ತುಂಬಿತ್ತು.
ರಾಟೆಯ ತಿರುಹಲಾರೆ -ಎನ್ನ ಗಂಡ ಕುಟ್ಟಿಹ
ಇನ್ನೇವೆ ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರಾ?
ಮೇಲ್ನೋಟಕ್ಕೆ ಇದು ಆಕೆಯ ಬದುಕಿಗೆ ಸಂಬಂಧಪಟ್ಟ ಕಾಯಕದ ವಚನವಾಗಿ ಕಂಡರೂ ಇಲ್ಲಿ ಅತ್ಯಂತ ಪಾರಮಾರ್ಥಿಕ ಅರ್ಥವನ್ನು ಕದಿರು ರೆಮ್ಮವ್ವೆ ವ್ಯಕ್ತ ಪಡಿಸಿದ್ದಾಳೆ. ತನ್ನ ಕುಲ ಕಸುಬು ಹಾಗೂ ಕೆಳ ಜಾತಿಯ ಉಲ್ಲೇಖ ಮಾಡಿದ್ದಾಳೆ. ಹಾಗೆ ಹೇಳುವಲ್ಲಿ ಯಾವುದೇ ಕೀಳರಿಮೆಯೂ ಅಲ್ಲಿ ಕಾಣುವುದಿಲ್ಲ. ಜೊತೆಗೆ ತಿರುಹುವ ರಾಟಿಗೆ ಅದರ ಅಡಿಯ ಹಲಗೆ ಬ್ರಹ್ಮ ಅದಕ್ಕೆ ಕಟ್ಟಿದ ತೋರಣವೇ ವಿಷ್ಣು, ರಾಟೆಗೆ ಕಟ್ಟಿದ ಬೊಂಬೆ ಮಹಾರುದ್ರ, ರುದ್ರನ ಬೆಂಬಲಕೆ ಎರಡು ಸೂತ್ರ ಕರ್ಣಗಳು. ಇಂತಹ ರಾಟೆಯಿಂದ ನೂತಾಗ ಹೊರಡುವ ಅರಿವೇ ಕದಿರು. ಭಕ್ತಿಯಿಂದ ತಿರುಹಲಾಗಿ ನೂಲು ಸುತ್ತಿಕೊಂಡಿತ್ತು ಮತ್ತು ಕದಿರು ತುಂಬಿತ್ತು. ಕದಿರ ತುಂಬಿದ ಮೇಲೆ ಮತ್ತೆ ರಾಟೆಯ ತಿರುಹಲಾರೆ ಎನ್ನುತ್ತಾಳೆ. ಬ್ರಹ್ಮ ವಿಷ್ಣು ರುದ್ರ ಮಹಾರುದ್ರ ಎಂಬ ದೈವೀ ಕಲ್ಪನೆಗಳನ್ನು ಸೊಗಸಾಗಿ ಹೆಣೆದಿದ್ದಾಳೆ. ತಾನು ನೂಲುವ ಕದಿರಿನ ಹಲಗೆಯನ್ನು ಆಕೆ ಬ್ರಹ್ಮ ಎನ್ನುತ್ತಾಳೆ, ಏಕೆಂದರೆ ಹಲಗೆ ಗಟ್ಟಿಯಾಗಿದ್ದರೆ ತಾನೇ ಕದಿರು ತೆಗೆಯುವವರು ಅದರ ಮೇಲೆ ಕುಳಿತು ನೂಲಬಹುದು. ಅದು ಕದಿರಿನ ಉತ್ಪತ್ತಿಯ ಆರಂಭ (ಸೃಷ್ಟಿ). ಅದೇ ರೀತಿ ಕದಿರಿಗೆ ಕಟ್ಟುವ ತೋರಣವು ವಿಷ್ಣು -ಇದು ಸ್ಥಿತಿ ಪ್ರಜ್ಞೆಯಾಗಿದೆ. ಲಯದ ಸಂಕೇತವಾದ ರುದ್ರನು ಕದಿರಿನ ಹೆಮ್ಮೊಳೆ- ಲೋಹದ ತುಂಡು ಕದಿರು ತೆಗೆಯುವ ಸಾಧನ (spikes). ಇಲ್ಲಿಂದ ಹೊರಬರುವ ಅರಿವೇ ಕದಿರು. ಭಕ್ತಿಯ ಕೈಯಲ್ಲಿ ರಾಟಿ ತಿರುಹಲಾಗಿ, ನೂಲು ಸುತ್ತಿಕೊಳ್ಳ ತೊಡಗಿತು ಮತ್ತು ಕದಿರು ತುಂಬಿ ಬಿಟ್ಟಿತು. ಪ್ರಾಪಂಚಿಕ ಪಾರಮಾರ್ಥಿಕ ನಿಲುವುಗಳನ್ನು ಸಮನ್ವಯಿಸುವ ಪ್ರಯತ್ನ ಇದಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಆದಾಯ ತಿರಸ್ಕರಿಸಿದ ಶರಣೆ ರೆಮ್ಮವ್ವೆ ಹಾಗೇನಾದರೂ ಹೆಚ್ಚಿಗೆ ಕದಿರ ತೆಗೆದು ಆದಾಯ ಮಾಡಿಕೊಂಡರೆ ತನ್ನ ಲಿಂಗವೆಂಬ ಗಂಡನು ತನ್ನನ್ನು ಕುಟ್ಟಿಹ, ಶಿಕ್ಷಿಸುವ ಎಂದು ತನ್ನನ್ನು ತಾನೇ ಎಚ್ಚರಿಸಿಕೊಳ್ಳುತ್ತಾಳೆ. ಹೀಗೆ ತನ್ನ ಸಾಂಸಾರಿಕ ಬದುಕಿನಲ್ಲಿ ಪಾರಮಾರ್ಥಿಕ ಚಿಂತನೆ ಮಾಡುತ್ತಾ ಜೀವನ ಸಾಗಿಸಿದ ದಿಟ್ಟ ಶರಣೆ ಕದಿರ ರೆಮ್ಮವ್ವೆ.
ಕದಿರು ರೆಮ್ಮವ್ವೆಯ ಇನ್ನೆರಡು ವಚನಗಳು ಪ್ರಾಪಂಚಿಕ ಬದುಕಿನ ಕುರಿತಾಗಿ ಮೇಲು ನೋಟಕ್ಕೆ ಕಂಡರೂ ಅವುಗಳ ಹಿಂದೆ ಆಧ್ಯಾತ್ಮಿಕ ಬೆಡಗಿದೆ. ನಿರಾಕಾರ ಚೈತನ್ಯವೇ ತನ್ನ ಗಂಡವೆಂದ ಅಕ್ಕ ಮಹಾದೇವಿಯ ನಿಲುವನ್ನು ಇಲ್ಲಿಯೂ ಕಾಣಬಹುದು.
ಎಲ್ಲರ ಹೆಂಡಿರು ತೊಳಸಿಕ್ಕುವರು;
ಎನ್ನ ಗಂಡಂಗೆ ತೊಳಸುವುದಿಲ್ಲ.
ಎಲ್ಲರ ಗಂಡಂದಿರಿಗೆ ಬಸಿವರು;
ಎನ್ನ ಗಂಡಂಗೆ ಬಸಿವುದಿಲ್ಲ.
ಎಲ್ಲರ ಗಂಡಂದಿರಿಗೆ ಬೀಜವುಂಟು;
ಎನ್ನ ಗಂಡಂಗೆ ಅಂಡದ ಬೀಜವಿಲ್ಲ.
ಎಲ್ಲರ ಗಂಡಂದಿರು ಮೇಲೆ;
ಎನ್ನ ಗಂಡ ಕೆಳಗೆ, ನಾ ಮೇಲೆ.
ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
ಆಗಿನ ಕಾಲದಲ್ಲಿ ಪ್ರತಿಯೊಬ್ಬ ಹೆಂಡತಿ ತಾನು ಪತಿಯ ದಾಸಿ ಎಂದು ಭಾವಿಸುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಕದಿರ ರೆಮ್ಮವ್ವೆ ತಾನು ದಾಸಿಯಾಗುವದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾಳೆ. ಎಲ್ಲ ಗಂಡಂದಿರರಿಂದ ಹೆಂಡತಿ ಬಸಿರಾಗುವಳು.ಆದರೆ ತಾನು ತನ್ನ ಗಂಡನಿಗೆ ಕೇವಲ ಬಸಿರಾಗುವುದಕ್ಕೆ ಬದುಕಿಲ್ಲ ಎಂದಿದ್ದಾಳೆ. ತನ್ನ ಗಂಡ ಕೇವಲ ವಿಷಯಾದಿಗಳ ಹುಟ್ಟು ಸಾವಿಗೆ ಕಾರಣವಾಗುವ ವ್ಯಕ್ತಿಯಲ್ಲ ಎಂದು ನಿರೂಪಿಸಿದ್ದಾಳೆ. ಎಲ್ಲ ಗಂಡರಿಗೆ ಉತ್ಪತ್ತಿಯ ಬೀಜವಿದೆ, ಆದರೆ ತನ್ನ ಗಂಡನಿಗೆ ಅಂಡದ ಅಂದರೆ ಕೇವಲ ಉತ್ಪತ್ತಿಗೆ ಬೇಕಾದ ಬೀಜ (fertile ) ಇಲ್ಲವೆನ್ನುತ್ತಾಳೆ. ಎಲ್ಲರ ಗಂಡ ಮೇಲೆ ಎಂದು ಸಾರುವ ಭಾರತೀಯ ಮಹಿಳೆಯರಿಗೆ ಕದಿರ ರೆಮ್ಮವ್ವೆ ಸವಾಲಾಗುತ್ತಾಳೆ. ತನ್ನ ಗಂಡ ಕೆಳಗೆ ತಾನು ಮೇಲೆ ಎಂದು ಹೆಮ್ಮೆಯಿಂದ ಹೇಳುವ ಮೂಲಕ ತಾನು ಲಿಂಗ ಭೇದ ನಿರಾಕರಿಸಿ ನಿರಾಕಾರ ಸ್ವರೂಪದ ಸಾಕಾರದ ಲಿಂಗವನ್ನೇ ತನ್ನ ಗಂಡನನ್ನಾಗಿಸಿಕೊಂಡವಳು ಎಂದು ಹೇಳಿಕೊಳ್ಳುತ್ತಾಳೆ.
ಎಲ್ಲರ ಗಂಡಂದಿರು ಪರದಳವಿಭಾಡರು;
ಎನ್ನ ಗಂಡ ಮನದಳವಿಭಾಡ.
ಎಲ್ಲರ ಗಂಡಂದಿರು ಗಜವೇಂಟೆಕಾರರು;
ಎನ್ನ ಗಂಡ ಮನವೇಂಟೆಕಾರ.
ಎಲ್ಲರ ಗಂಡಂದಿರು ತಂದಿಕ್ಕಿಸಿಕೊಂಬರು;
ಎನ್ನ ಗಂಡ ತಾರದೆ ಇಕ್ಕಿಸಿಕೊಂಬ.
ಎಲ್ಲರ ಗಂಡಂದಿರಿಗೆ ಮೂರು,
ಎನ್ನ ಗಂಡಂಗೆ ಅದೊಂದೆ;
ಅದೊಂದೂ ಸಂದೇಹ, ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
ಕದಿರ ರೆಮ್ಮವ್ವೆ ತನ್ನ ಮತ್ತು ಇತರ ಭವಿಗಳ ಗಂಡಂದಿರ ಗುಣ ಸ್ವಭಾವಗಳನ್ನು ವಿವರಿಸುತ್ತಾ, ತನ್ನ ಗಂಡನಿಗೂ ಮತ್ತು ಇತರ ಮಹಿಳೆಯರ ಗಂಡಂದಿರರಿಗೂ ಇರುವ ವ್ಯತ್ಯಾಸವನ್ನು ಮತ್ತೆ ಮತ್ತೆ ಕೆಣಕಿದ್ದಾಳೆ. ಎಲ್ಲರ ಗಂಡಂದಿರು ಪರರ ಅಳಲನ್ನು ವಿನಾಶ ಮಾಡಿದರೆ, ತನ್ನ ಗಂಡ ತನ್ನ ಮನದ ಅಳಲನ್ನು ನಾಶ ಮಾಡುತ್ತಾನೆ. ಎಲ್ಲರ ಗಂಡರು ಆನೆಯನ್ನು ಬೇಟೆಯಾಡಿದರೆ, ತನ್ನ ಗಂಡ ವಿಷಯಾದಿಗಳನ್ನು ತುಂಬಿದ ಮನದ ಬೇಟೆಯಾಡುವವನು. ಉಳಿದ ಗಂಡಂದಿರು ತಂದದ್ದನ್ನು ತಿನ್ನುವವರು. ತನ್ನ ಗಂಡ ತಾರದೆ ತಿನ್ನುವವನು. ಎಲ್ಲರ ಗಂಡಂದಿರು ಸೃಷ್ಟಿ ಸ್ಥಿತಿ ಲಯ -ಸ್ಥೂಲ ಸೂಕ್ಷ್ಮ ಹಾಗೂ ಕಾರಣ ಶರೀರಕ್ಕೆ ಅಂಟಿಕೊಂಡವರು. ತನ್ನ ಗಂಡ ಮಾತ್ರ ಕಾರಣ ಶರೀರಕ್ಕೆ ನಿಂತ ಚೈತನ್ಯ ಚೇತನವೆನ್ನುತ್ತಾಳೆ. ತುಂಬಾ ಗಹನವಾದ ವಿಷಯವನ್ನು ಸಲೀಸಾಗಿ ಹೇಳುವ ರೆಮ್ಮವ್ವೆ ಶರಣೆಯ ವಚನವು ಅಕ್ಕಮಹಾದೇವಿಯ ಚೆನ್ನ ಮಲ್ಲಿಕಾರ್ಜುನನ್ನು ನೆನೆಯುವ ಧ್ವನಿಯನ್ನು ನೆನಪಿಸುತ್ತದೆ. ತಾನು ಪ್ರಾಪಂಚಿಕ ಬದುಕಿಗೆ ಮಾತ್ರ ಸೀಮಿತವಲ್ಲ, ಆಧ್ಯಾತ್ಮಿಕ ಪಾರಮಾರ್ಥಿಕ ಸುಖವನ್ನು ಉಣ್ಣಲು ಬಂದವಳು ಎಂಬ ಭಾವವನ್ನು ಆಕೆಯ ವಚನಗಳಲ್ಲಿ ಗುರುತಿಸಬಹುದು. ಹೀಗೆ ಲಿಂಗ ಭೇದವಳಿದು ತಾನೇ ಲಿಂಗವಾದ ಬಗೆಯನ್ನು ಅರ್ಥಪೂರ್ಣವಾಗಿ ವಿವರಿಸಿದ ಜ್ಞಾನಿ ಕದಿರ ರೆಮ್ಮವ್ವೆ .
ರೆಮ್ಮವ್ವೆಯ ಸಮಾಧಿಯ ಜಾಡು ಹಿಡಿದು…
ರೆಮ್ಮವ್ವೆ ಅಲ್ಲಮ ಪ್ರಭುವಿನ ಗರಡಿಯಲ್ಲಿ ಬೆಳೆದವಳು. ಕದಿರ ರೆಮ್ಮವ್ವೆಯ ವಚನಾಂಕಿತ ಗುಮ್ಮೆಶ್ವರ- ಇದು ಗುಹೇಶ್ವರ ಅಂಕಿತದ ಸಾಮ್ಯತೆ ಇದ್ದು, ಪಾಠಾಂತರದ ಸಮಯದಲ್ಲಿ ಗುಮ್ಮೆಶ್ವರ ಆದ ಎಲ್ಲಾ ಸಾಧ್ಯತೆಗಳಿವೆ. ತನ್ನ ಒಂದು ವಚನದಲ್ಲಿ ತಾನು ಗುರು ಅಲ್ಲಮರ ಕಾರುಣ್ಯವೆಂದು ಹೇಳಿಕೊಂಡಿದ್ದಾಳೆ.
— ಎನ್ನ ಕಾರಣ ತನುವೆ ಪ್ರಭುದೇವರಯ್ಯಾ
ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ .
ಕದಿರ ರೆಮ್ಮಿಯೊಡೆಯ ಗುಮ್ಮೆಶ್ವರಾ ಎಂದು ಹೇಳಿ ತನ್ನ ಗುರುವಿನ ಮೇಲಿನ ಅಭಿಮಾನ ಗೌರವ ಮತ್ತು ಭಕ್ತಿಯನ್ನು ವ್ಯಕ್ತ ಪಡಿಸಿರಬಹುದು. ಈ ಕಾರಣದಿಂದ ಅವಳು ಅಲ್ಲಮ ಪ್ರಭುಗಳ ಆಪ್ತ ವಲಯದ ಸಹಾಯಕಿ, ಶಿಷ್ಯೆ ಎಂದು ಪರಿಗಣಿಸಬಹುದು.
ನನ್ನ ಈ ತರ್ಕಕ್ಕೆ, ಗ್ರಹಿಕೆಗೆ ಕೆಲವು ಕಾರಣಗಳಿವೆ.
ಕಲ್ಯಾಣ ಕ್ರಾಂತಿಯ ಮೊದಲು ಮತ್ತು ನಂತರ ಕೆಲ ಶರಣರು ಕಲ್ಯಾಣವನ್ನು ತೊರೆದರು ಎಂದು ನಮಗೆ ತಿಳಿದು ಬರುತ್ತದೆ. ಹೀಗೆ ಕ್ರಾಂತಿಯ ಮೊದಲೆ ಕಲ್ಯಾಣ ತೊರೆದವರಲ್ಲಿ ಅಕ್ಕ ಮಹಾದೇವಿ ಮತ್ತು ಅಲ್ಲಮರು ಪ್ರಮುಖರು. ಇತಿಹಾಸದಲ್ಲಿ ಲಭ್ಯವಿರುವ ಘಟನಗಳನ್ನಾಧರಿಸಿ ಶರಣರ ಮಾರ್ಗದ ಸಂಭಾವ್ಯತೆಯನ್ನು ನಿರ್ಧರಿಸಲಾಯಿತು. ಕಳೆದ ಮೂವತ್ತು ವರ್ಷಗಳಿಂದ ನಾನು ಶರಣರ ಸಮಾಧಿಗಳನ್ನು ಅತ್ಯಂತ ಕೂತಹಲದಿಂದ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಅಲ್ಲಮ ಪ್ರಭುಗಳು ತೇರದಾಳದಲ್ಲಿ ಐಕ್ಯರಾಗಿದ್ದಾರೆ ಅಲ್ಲಿ ಪ್ರಭುದೇವರ ಗದ್ದುಗೆ ಇದೆಯೆಂದು ಚಿಕ್ಕ ಬಾಲಕನಿಂದಲೂ ಕೇಳಿಸಿಕೊಂಡು ಬಂದಿದ್ದೆ. ಆದರೆ ತೇರದಾಳದಲ್ಲಿ ಅಲ್ಲಮರು ಕಲ್ಯಾಣ ತೊರೆದ ನಂತರ ಕೆಲಕಾಲ ತಂಗಿದ್ದರು ಎಂದೂ, ಮುಂದೆ ಶ್ರೀಶೈಲಕ್ಕೆ ಹೋಗುತ್ತಾರೆ ಎಂದೂ ತಿಳಿಯಿತು. ಅಲ್ಲಮ ಪ್ರಭುಗಳು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ತತ್ವಗಳ ಪ್ರಚಾರದಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ಗೋರಖನಾಥ, ನಾಥ ಮತ್ತು ಸಿದ್ಧ ಪರಂಪರೆಯವರಿಗೆ ಶರಣ ಧರ್ಮ ಪರಿಚಯಿಸಿದ್ದು ಅಲ್ಲಮ ಪ್ರಭುಗಳು. ದಕ್ಷಿಣ ಕರ್ನಾಟಕದಲ್ಲಿರುವ ಕನಕಪುರದ ದೇಗುಲಮಠ ಇವು ಅಲ್ಲಮರ ಶಿಷ್ಯರಿಂದ ಸ್ಥಾಪಿಸಲ್ಲಪಟ್ಟಿವೆ. ಕಲ್ಯಾಣ ತೊರೆದು ಶ್ರೀಶೈಲದ ಕಡೆಗೆ ಹೋಗುವ ಮಾರ್ಗದಲ್ಲಿ ಅಲ್ಲಮರು ತೇರದಾಳದಲ್ಲಿ ತಂಗಿದರು. ಇವರ ಆಪ್ತ ವಲಯದ ಶಿಷ್ಯರಲ್ಲಿ ಒಬ್ಬರಾಗಿದ್ದ ರೆಮ್ಮವ್ವೆ, ಅಲ್ಲಮರ ಜೊತೆಗೆ ಹೊರಟು ನಿಂತು ಅವರ ಆದೇಶದಂತೆ ತೇರದಾಳ ಪಕ್ಕದಲ್ಲಿರುವ ರಬಕವಿ ( ರೆಬ್ಬೆವ್ವನ ಗವಿ)ಗೆ ಬರುತ್ತಾಳೆ. ಅಲ್ಲಿ ನಿಂತು ಜನರಿಗೆ ಶರಣ ತತ್ವ ಸಂದೇಶ ಸಾರುತ್ತ ತನ್ನ ಕಾಯಕದೊಂದಿಗೆ ಸೇವೆಗೈದು ಕೊನೆಗೆ ಅಲ್ಲಿಯೇ ಐಕ್ಯಳಾಗುತ್ತಾಳೆ. ಕದಿರ ರೆಮ್ಮವ್ವೆ (ರೆಬ್ಬವ್ವೆ) ಸಮಾಧಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ರಬಕವಿಯಲ್ಲಿ ಕಂಡು ಬಂದಿದೆ.
ರೆಮ್ಮವ್ವೆಯ ಇನ್ನೊಂದು ಹೆಸರು ರೆಬ್ಬವ್ವೆ. ಹೀಗಾಗಿ ರೆಬ್ಬೆವ್ವನ ಗವಿಯು ಕಾಲಕ್ರಮೇಣ ರಬಕವಿಯಂತಾಗಿದೆ. ರೆಬ್ಬವ್ವೆಯ ಕದಿರು ತೆಗೆಯುವ ಕಾಯಕದ ಪ್ರಭಾವದಿಂದ ಇಂದಿಗೂ ರಬಕವಿ ಬನಹಟ್ಟಿಯಲ್ಲಿ ಪ್ರತಿಶತ ಐವತ್ತರಷ್ಟು ಜನ ನೇಯ್ಗೆ ಕದಿರು ಕಾಯಕವನ್ನು ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಕದಿರ ರೆಮ್ಮವ್ವೆ ಇಲ್ಲಿಯೇ ಐಕ್ಯರಾಗಿರಲು ಎಲ್ಲ ಸಾಧ್ಯತೆಗಳಿವೆ.
ರೆಬ್ಬೆವ್ವನ ಗವಿ ಮುಂದೆ ರಬಕವಿಯಾಗಿದೆಯೆಂದು ಜನರ ಬಾಯಿಂದ ಕೇಳಿ ತಿಳಿದುಕೊಂಡಿದ್ದೆ. ಯಾರು ಈ ರೆಬ್ಬವ್ವೆ ಎಂದು ನೋಡಲಾಗಿ ಅವಳು ಕದಿರ ರೆಮ್ಮವ್ವೆ . ಕದಿರ ರೆಮ್ಮವ್ವೆಯ ಗವಿಯು ಒಂದು ಸಣ್ಣ ಗುಡಿಯ ರೂಪದಲ್ಲಿದ್ದು ಅದನ್ನು ಗುರುತಿಸಿ ಖಚಿತಪಡಿಸಿ ಜೀರ್ಣೋದ್ಧಾರ ಮಾಡಬೇಕಾದ ಕರ್ತವ್ಯ ನಮ್ಮೆಲ್ಲರ ಮೇಲಿದೆ.