ಕಾದಿ ಗೆಲಿಸಯ್ಯ ಎನ್ನನು
“ಬಾಳಲೇ? ಬಾಳಿಗಂತ್ಯವ ತರಲೇ?”
ಹ್ಯಾಮ್ಲೆಟ್ ನಾಟಕದ ಒಂದು ಬಹು ಮುಖ್ಯ ಸ್ವಗತ. ರಾಜಕುಮಾರ ಹ್ಯಾಮ್ಲೆಟ್ ನ ಎದೆಯೊಳಗೆ ಇಂಥ ಪ್ರಶ್ನೆಯೊಂದು ಎದ್ದು ಕೊನೆಗೆ ಆತನ ಬಲಿ ತೆಗೆದುಕೊಳ್ಳುವ ವಿಷಾದವನ್ನು ಶೇಕ್ಸಪಿಯರ್ ಮನಮುಟ್ಟುವಂತೆ ಚಿತ್ರಿಸುತ್ತಾನೆ. ಬದುಕಿನ ಸಮಸ್ಯೆಯನ್ನು ನಿಭಾಯಿಸಲಾಗದ ಮನುಷ್ಯನ ದೌರ್ಬಲ್ಯವನ್ನೂ, ಅಸಹಾಯಕತೆಯನ್ನೂ ತೋರಿಸುವ ದುರಂತ ಕಥೆ.
ಸಮಸ್ಯೆಗಳು ಸರ್ವವ್ಯಾಪಿ. ಮನುಷ್ಯನ ಈ ಹೊಯ್ದಾಟ ಕಾಲಾತೀತವಾದದ್ದು. ಒಂದಲ್ಲಾ ಒಂದು ಸಂದರ್ಭದಲ್ಲಿ ಆತ ಇಂಥ ತೀವ್ರ ನಿರಾಶೆಯ ಘಟ್ಟಕ್ಕೆ ಬಂದು ನಿಲ್ಲುತ್ತಾನೆ. ಆಗ ಆಗುವ ತಳಮಳಗಳು, ಹೊಯ್ದಾಟಗಳು ಕ್ಷಣಕ್ಷಣಕ್ಕೂ ತಮ್ಮ ಭಾರ ಹೆಚ್ಚಿಸಿಕೊಳ್ಳುತ್ತಾ ಬದುಕು ಅಸಹನೀಯವಾಗಿ ಬಿಡುತ್ತದೆ. ಅವುಗಳಿಗೆ ಶೀಘ್ರ ಪರಿಹಾರಗಳನ್ನು ನಿರೀಕ್ಷಿಸಲಾಗದು. ಕೆಲವೊಮ್ಮೆ ದಿಢೀರನೇ ಇವುಗಳಿಂದ ಹೊರಬರುತ್ತೇವೆ, ಹಲವು ವೇಳೆ ಬಹಳ ಸಮಯ ಹಿಡಿಯುತ್ತದೆ. ಆಗೆಲ್ಲ ಆ ಅವಧಿಯ ಆತಂಕಗಳನ್ನು, ತಲ್ಲಣಗಳನ್ನು ಅನುಭವಿಸುವುದು ಅನಿವಾರ್ಯ. ಆದರೆ ಆಗುವುದನ್ನು ಅನೇಕ ವೇಳೆ ತಪ್ಪಿಸಲಾಗದು. ಬಂದುದನ್ನು ಧೈರ್ಯವಾಗಿ ಎದುರಿಸಲೇ ಬೇಕು. ಬಸವಣ್ಣನವರು ಹೇಳುತ್ತಾರೆ, “ಅಂಜಿದಡೆ ಮಾಣದು, ಅಳುಕಿದಡೆ ಮಾಣದು…ಧೃತಿಗೆಟ್ಟು, ಮನ ಧಾತುಗೆಟ್ಟಡೆ ಅಪ್ಪುದು ತಪ್ಪದು” ಎಂದು.
ಅಷ್ಟಕ್ಕೂ ಜೀವನ ಎಂದರೇನು?
ಜೀವನ ಒಂದು ಪಯಣ, ಜೀವನ ಒಂದು ಆಟ, ಜೀವನ ಒಂದು ನಾಟಕ, ಜೀವನ ಪುನರಾವರ್ತನೆ, ಜೀವನ ಕನಸು, ಜೀವನ ನೆನಪುಗಳ ಮೊತ್ತ, ಜೀವನ ಅನುಭವಗಳ ಗುಚ್ಛ… ಹೀಗೆ ಕವಿಗಳು, ಲೇಖಕರು, ದಾರ್ಶನಿಕರು, ತತ್ವಜ್ಞಾನಿಗಳು ಜೀವನಕ್ಕೆ ಹಲವಾರು ವ್ಯಾಖ್ಯೆಗಳನ್ನು ಕೊಟ್ಟಿದ್ದಾರೆ. ಅದೇನೇ ಇರಲಿ, ಜೀವನ ಹೋರಾಟ ಎಂಬುದು ಮಾತ್ರ ಈ ಎಲ್ಲ ಹೇಳಿಕೆಗಳಲ್ಲಿಯೂ ಅಂತರ್ಗತವಾಗಿರುವ ವಾಸ್ತವ. ಹೀಗಿರುವಾಗ ಜೀವನಕ್ಕೆ ಬೆನ್ನು ತೋರಿಸುವುದೇಕೆ? ಶರಣರು ತಮ್ಮ ಹಲವಾರು ವಚನಗಳಲ್ಲಿ ಜೀವನವನ್ನು ಹೊಸ ಹೊಸ ರೂಪಗಳಲ್ಲಿ ಪರಿಭಾವಿಸಿದ್ದಾರೆ. ಹೋರಾಟ ಅನಿವಾರ್ಯವಾದಾಗ ದಿಟ್ಟವಾಗಿ ಅವುಗಳನ್ನು ಎದುರಿಸುವ ಬಗೆಯನ್ನು ಹೇಳಿಕೊಂಡಿದ್ದಾರೆ.
ಬಸವಣ್ಣನವರ ಈ ವಚನ ಗಮನಿಸಿ:
ಅಟ್ಟಟ್ಟಿಕೆಯ ಮಾತನಾಡಲದೇಕೋ
ಮುಟ್ಟಿ ಬಂದುದಕ್ಕಂಜಲದೇಕೋ
ಕಾದಿದಲ್ಲದೆ ಮಾಣೆನು, ಓಡಿದಡೆ ಭಂಗ ಹಿಂಗದಾಗಿ,
ಕೂಡಲಸಂಗಮದೇವಾ, ಎನ್ನ ಭಂಗ ನಿಮ್ಮದಾಗಿ.
ಅಟ್ಟಟ್ಟಿಕೆ ಅಂದರೆ ನಮ್ಮ ಹೊರೆಗಳ ಬಗ್ಗೆ, ನಮ್ಮ ಬದುಕಿನ ಬವಣೆಗಳ ಬಗ್ಗೆ ಬೇರೊಬ್ಬರೆದುರು ವರದಿ ಒಪ್ಪಿಸುವಂತೆ ಹೇಳಿಕೊಳ್ಳುವುದು, ನನ್ನಂಥ ಪರಿಸ್ಥಿತಿ ಯಾರಿಗೂ ಬಂದಿಲ್ಲವೆಂದು ಹಲುಬುವುದು. ಸಾಮಾನ್ಯವಾಗಿ ಅನೇಕರಲ್ಲಿ ಇನ್ನೊಂದು ಕೆಟ್ಟ ಚಾಳಿ ಇರುತ್ತದೆ. ತಮ್ಮ ಸಮಸ್ಯೆಗಳಿಗೆ ಬೇರೆಯವರನ್ನು ಹೊಣೆಯಾಗಿಸುವುದು. ತಾನು ದೋಷಿಯಲ್ಲ ಎಂದು ಬಿಂಬಿಸಿಕೊಂಡು ಬೇರೆಯವರ ಮರುಕ ಗಿಟ್ಟಿಸುವುದು. ಬಸವಣ್ಣನವರು ಈ ವಚನದಲ್ಲಿ ನಾವು ಮಾಡಿದ್ದು ನಮಗೆ ದಕ್ಕುತ್ತದೆ ಎಂಬ ನಿಸರ್ಗದ ನಿಯಮವನ್ನು ನೆನಪಿಸಿದ್ದಾರೆ. ತಿಳಿದೋ ತಿಳಿಯದೆಯೋ ನಮ್ಮಿಂದ ಏನೇ ತಪ್ಪುಗಳೋ, ಅಚಾತುರ್ಯಗಳೋ ಸಂಭವಿಸಿದ್ದರೆ ಅವುಗಳ ಫಲಿತಾಂಶವನ್ನು ನಾವು ಉಣ್ಣಲೇ ಬೇಕು. ಅದಕ್ಕೆ ಅಂಜಿಕೆ ಯಾಕೆ? ಹೋರಾಡುತ್ತೇನೆ, ಮೈಯಲ್ಲಿ ಕಸುವಿರುವ ತನಕ… ಎದೆಯಲ್ಲಿ ಕೆಚ್ಚಿರುವ ತನಕ… ಅದು ಬಿಟ್ಟು ಹೇಡಿಯಂತೆ ಓಡಿ ಹೋಗಲಾರೆ. ಅಸಹಾಯಕತೆಯಿಂದ ತಲೆ ತಗ್ಗಿಸಲಾರೆ. ಹಾಗೆ ವರ್ತಿಸಿದರೆ ಅದು ದೇವರಿಗೆ ಮಾಡುವ ಅವಮಾನ, ಅಂದರೆ ಪ್ರಸಾದವಾಗಿ ಸಿಕ್ಕ ಈ ಬದುಕಿಗೇ ಬಗೆಯುವ ದ್ರೋಹ, ಅಪಮಾನ.
ಸವಾಲುಗಳು, ಅಡೆತಡೆಗಳು ಒಂದಲ್ಲಾ ಒಂದು ರೂಪದಲ್ಲಿ ಬದುಕನ್ನು ಬಾಧಿಸುವುದು ನಿಶ್ಚಿತ. ಕೆಲವೊಮ್ಮೆ ಬಿಡುವು ಕೊಟ್ಟರೂ ಕಷ್ಟಗಳ ಪರಂಪರೆ ನಿರಂತರ. ಅವುಗಳ ರೂಪಗಳೂ ವಿಭಿನ್ನ. ಯಾವ ಮೂಲೆಯಿಂದ, ಯಾವ ಸಮಯ ಇವು ಹರಿದು ಬರುತ್ತವೆಯೋ ಹೇಳಲಾಗದು. ಬಡತನ, ಆರೋಗ್ಯ, ನಿದ್ದೆ, ಕೆಲಸದ ಒತ್ತಡ, ಸಂಬಂಧ, ವ್ಯವಹಾರ, ವೃತ್ತಿ, ವಿರೋಧ, ವ್ಯಾಜ್ಯ, ಟೀಕೆ… ಹೀಗೆ ಬಾಹ್ಯ ಕೋಟಲೆಗಳು ಅಗಣಿತ. ಅದೇ ರೀತಿ ಪ್ರಲೋಭನೆ, ಅಲಕ್ಷ್ಯ, ಆಲಸ್ಯ, ಅನುಮಾನ, ಭಯ, ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ, ಕೀಳರಿಮೆ, ಆರೋಪ, ಆತಂಕ, ಅಭದ್ರತೆ… ಇತ್ಯಾದಿ ವಿಷಯಗಳಲ್ಲಿ ಎದೆಯೊಳಗೆ ನಡೆಯುವ ಹೋರಾಟಗಳಿಗೂ ಅನಂತ ರೂಪ. ಇಂಥ ಸಂದರ್ಭಗಳಲ್ಲಿ ಋಣಾತ್ಮಕ ಹಾಗೂ ಪಲಾಯನದಂತಹ ಆಲೋಚನೆಗಳು ಮನಸ್ಸಿನಲ್ಲಿ ತೂರಿಕೊಂಡು ಮೊಟ್ಟೆಯಿಡುತ್ತವೆ. ಮತ್ತಷ್ಟು ಕಂಗೆಡಿಸುತ್ತವೆ.
ಮಹತ್ವದ ಹೆಜ್ಜೆಗಳನ್ನಿಟ್ಟುಕೊಂಡು ಸಾಗುವಾಗಲಂತೂ ಸಮಸ್ಯೆಗಳು ಕಾಯ್ದು ಕುಳಿತಂತೆ ಒಕ್ಕರಿಸಿಕೊಳ್ಳುತ್ತವೆ. ದೃಢತೆಯಿಂದ ಮಾತ್ರವೇ ಇವುಗಳನ್ನು ಎದುರಿಸಲು ಸಾಧ್ಯ. ಎಲ್ಲ ಕಾಲಕ್ಕೂ, ಎಲ್ಲರಿಗೂ ದಾರಿ ತೋರುವ ಬಾಳ ಸೂತ್ರಗಳೆಂದರೆ- ಸ್ವಯಂ ಪ್ರೇರಣೆ, ಸ್ವಯಂ ಸುಧಾರಣೆ ಮತ್ತು ಸ್ವಯಂ ಮಾರ್ಗದರ್ಶನ. ಮಹಾದೇವಿ ಅಕ್ಕನ ಬದುಕು ಇದಕ್ಕೊಂದು ಉಜ್ವಲ ನಿದರ್ಶನ.
ಕಿಡಿಕಿಡಿ ಕೆದರಿದರೆ ಎನಗೆ ಹಸಿವು, ತೃಷೆ ಅಡಗಿತೆಂಬೆನು
ಮುಗಿಲು ಹರಿದು ಬಿದ್ದರೆ ಎನಗೆ ಮಜ್ಜನಕ್ಕೆರೆದರೆಂಬೆನು
ಗಿರಿ ಮೇಲೆ ಬಿದ್ದರೆ ಎನಗೆ ಪುಷ್ಪವೆಂಬೆನು
ಚೆನ್ನಮಲ್ಲಿಕಾರ್ಜುನಯ್ಯ ಶಿರ ಹರಿದು ಬಿದ್ದಡೆ
ಪ್ರಾಣ ನಿಮಗರ್ಪಿತವೆಂಬೆನು.
ಯಾವುದೇ ಬಗೆಯ ಸಂಚಕಾರ ಬಂದರೂ ತಾನು ಹೆದರುವವಳಲ್ಲ ಎಂಬ ಕೆಚ್ಚು ಅಕ್ಕನಲ್ಲಿತ್ತು. ತನ್ನ ಗುರಿಯೆಡೆ ಧಾವಿಸುವ ಹಾದಿಯಲ್ಲಿ ಆಕೆ ಎದುರಿಸಿದ ಸವಾಲುಗಳು ಒಂದೇ ಎರಡೇ. ಆಕೆಯ ದಿಟ್ಟತನದ ಎದಿರು ಸಮಸ್ಯೆಗಳು ಕರಗಿ, ಆ ಹಾದಿಯಲ್ಲೇ ಅಕ್ಕ ತನ್ನನ್ನು ಕಂಡುಕೊಂಡ ಸಾಧನೆ ಅತ್ಯದ್ಭುತ.
ಜೀವನವು ಪ್ರವಾಹದ ವಿರುದ್ಧ ನಡೆಯುವ ಹೋರಾಟ ಮಾತ್ರವಲ್ಲದೆ ಕೆಲವೊಮ್ಮೆ ಆಸರೆಗಾಗಿ ಆತುಕೊಂಡ ದೋಣಿಯಲ್ಲಿಯೂ ನಿಲ್ಲಲಾಗದಷ್ಟು ಅಲ್ಲೋಲಕಲ್ಲೋಲ ಆಗಬಹುದು. ಯಾವ ಸಮಯದಲ್ಲಾದರೂ ದೋಣಿ ಮುಗುಚಿ, ರಾಕ್ಷಸಾಕಾರದಲ್ಲಿ ಏರಿ ಬರುವ ಅಲೆಗಳಲ್ಲಿ ತರಗೆಲೆಯಂತೆ ತೂರಾಡುವ ಸಂದರ್ಭಗಳೂ ಎದುರಾಗಬಹುದು. ಆಗಲೂ ಕಾಲು ಬಡಿಯಬೇಕು, ಉಕ್ಕೇರಿ ಬರುವ ನೀರನ್ನು ಕೈಗಳು ದಬ್ಬಲೇ ಬೇಕು. ಹೇಗಾದರೂ ಸರಿ, ಮುಳುಗದಂತೆ ತಲೆ ಮೇಲೆತ್ತಬೇಕು… “ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು.” ಜೀವನ ಪರೀಕ್ಷೆ ಮಾಡುತ್ತದೆ, ತನುವನಲ್ಲಾಡಿಸಿ, ಮನವನಲ್ಲಾಡಿಸಿ, ವಿಧವಿಧವಾಗಿ ತಿಕ್ಕಿ ನೋಡುತ್ತದೆ. ಇರಿದು ನೋಡುತ್ತದೆ, ಒರೆದು ನೋಡುತ್ತದೆ… ಇವೆಲ್ಲಕ್ಕೂ ಅಂಜದಿದ್ದರೆ ಹೊಸ ಹಾದಿ ತೋರುತ್ತದೆ.
ಜೀವನ ಏನನ್ನೇ ಕೊಡಲಿ, ಬಿಡಲಿ ಧೃತಿಗೆಡಬಾರದು. ಹಾಗಿದ್ದರೆ, ಹೀಗಿದ್ದರೆ ಎಂಬ ‘ರೆ’ ಪ್ರಪಂಚದಲ್ಲಿ ಕೈಯಾಡಿಸುವುದು ವೀರತನದ ಲಕ್ಷಣವಲ್ಲ. ಸಮಯ, ಸಂದರ್ಭಗಳ ಬಲಿಪಶು ಎಂದು ಕೊರಗಿಕೊಂಡು, ಸ್ವಾನುಕಂಪಕ್ಕೆ ಜಾರುವುದೂ ದೌರ್ಬಲ್ಯವೇ. ಇದರಿಂದ ನೋವುಗಳು ಮತ್ತಷ್ಟು ಉಲ್ಬಣಿಸುತ್ತವೆ. ಸುಲಭವಾಗಿ ಹೆಗಲು ಕೊಡುವ ಈ ನೆಪಗಳಿಗೆ ಒರಗಿಕೊಳ್ಳದೆ ದಿಟ್ಟವಾಗಿ ಎದುರಿಸುವ ಎದೆಗಾರಿಕೆ ತೋರಿಸಬೇಕು ಎನ್ನುತ್ತಾರೆ ಬಸವಣ್ಣನವರು.
ಕಾಯದ ಕಳವಳಕ್ಕಂಜಿ ಕಾಯಯ್ಯ ಎನ್ನೆನು,
ಜೀವನೋಪಾಯಕ್ಕೆ ಈಯಯ್ಯಾ ಎನ್ನೆನು,
`ಯದ್ ಭಾವಂ ತದ್ ಭವತಿ’ ಉರಿ ಬರಲಿ, ಸಿರಿ ಬರಲಿ
ಬೇಕು ಬೇಡೆನ್ನೆನಯ್ಯಾ.
ಆ ನಿಮ್ಮ ಹಾರೆನು, ಮಾನವರ ಬೇಡೆನು.
ಆಣೆ ನಿಮ್ಮಾಣೆ, ಕೂಡಲಸಂಗಮದೇವಾ.
ಇದು ಸಂಪೂರ್ಣವಾಗಿ ನನ್ನದೇ ಹೋರಾಟ. ಇವೆಲ್ಲ ನನ್ನ ಹಾದಿಯ ಸವಾಲುಗಳು. ಕೇವಲ ಸುಖಕ್ಕಾಗಿ ದೇವರನ್ನು ಅವಲತ್ತುಕೊಳ್ಳುವುದು, ಕಷ್ಟ ಬಂದಾಗ ಸಹಾಯಕ್ಕಾಗಿ ಅಂಗಲಾಚುವುದು ಘನತೆಯಲ್ಲ. ನೋವು ನಿಷ್ಠುರಗಳಿಗೆ ಹಿಂಜರಿಯುವುದು ಹೇಡಿತನದ ಲಕ್ಷಣ. ಇಲ್ಲಿ ಮುಖ್ಯವಾದದ್ದು ‘ಆ ನಿಮ್ಮ ಹಾರೆನು’ ಎಂಬ ಮಾತು. ಹಾರೆನು ಅಂದರೆ ಅಗಲಲಾರೆನು. ವಿಶ್ವ ಚೈತನ್ಯದ ಪ್ರತಿರೂಪವೇ ಆಗಿರುವ ನಾನೇ ನನ್ನ ಸಂಗಾತಿ. ಆತ್ಮವಿಶ್ವಾಸದ ಸಾಂಗತ್ಯವೇ ಬದುಕಿನ ನಿಜವಾದ ಬಲ. ಹೀಗಿರುವಾಗ ಯಾರನ್ನಾದರೂ ಯಾವುದಕ್ಕೆ ಬೇಡುವುದು? ಅಕ್ಕ, ಆತ್ಮಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನನುಂಟು ಎನ್ನಲಿಲ್ಲವೇ? ಜೀವನದ ಎಲ್ಲ ಬದಲಾವಣೆಗಳ ಉದ್ದಕ್ಕೂ ಎದೆಯ ಬಡಿತವನ್ನು ತನ್ನೊಳಗೇ ಇದ್ದು ಆಲಿಸುವ ಆಪ್ತ ಹೃದಯವಾಗಿ, ಅಗಲದ ಪ್ರೀತಿಯಾಗಿ, ಸ್ನೇಹವಾಗಿ, ಜೊತೆಯಾಗಿ ಶರಣರು ದೇವರನ್ನು ಪರಿಭಾವಿಸಿದ ರೀತಿಯೇ ಅದಮ್ಯ. ಎಂಥ ಪ್ರಸಂಗದಲ್ಲೂ ಆತ್ಮಬಲ ತುಂಬುವ ಧೈರ್ಯ ಎಂದರೆ ಇದೇ. ಸಾಮಾನ್ಯವಾಗಿ ಮಾಹೇಶ್ವರ ಸ್ಥಲದಲ್ಲಿ ಈ ಬಗೆಯ ವಚನಗಳನ್ನು ನೋಡಬಹುದು. ಆ ಹಂತದಲ್ಲಿ ಮಾನಸಿಕ ಸ್ಥಿತಿ ಅಚಲವಾಗಿದ್ದು, ಸಾಹಸ, ಧೈರ್ಯ, ಛಲಗಳು ವ್ಯಕ್ತಿತ್ವದಲ್ಲಿ ಮೇಳೈಸುತ್ತವೆ.
ನಮ್ಮದೇ ದುಃಖದಲ್ಲಿ, ಕಷ್ಟಗಳ ಹೊರೆಯಲ್ಲಿ ಎಷ್ಟು ಮುಳುಗಿ ಹೋಗಿರುತ್ತೇವೆಂದರೆ ನಮ್ಮೊಳಗಿನ ಮಾತುಗಳೇ ನಮಗೆ ಕೇಳುವುದಿಲ್ಲ. ಸಮಸ್ಯೆಗಳನ್ನು ಬಿಡಿಸಿಕೊಂಡು ಅರೆಕ್ಷಣ ಕಣ್ಮುಚ್ಚಿ ಒಳಗೆ ನೋಡುವುದಿಲ್ಲ. ಸಹನೆಯೇ ಇಲ್ಲದ ಚಡಪಡಿಕೆಯಲ್ಲಿ ಮನಸ್ಸು ಮುಳುಗಿಹೋಗಿರುತ್ತದೆ, ಬೆಚ್ಚಿ ಬೀಳಿಸುವ ಸಾಗರದ ಆರ್ಭಟಗಳೆಲ್ಲ ಇರುವುದು ನೀರಿನ ಮೇಲ್ಮಟ್ಟದಲ್ಲೇ. ಅದರ ಆಳ ಪ್ರಶಾಂತವಾಗಿರುತ್ತದೆ. ಹಾಗೆ ಮನದಾಳದಲ್ಲೊಮ್ಮೆ ಇಳಿದು ನೋಡಬೇಕು, ದಾರಿ ಕಾಣುತ್ತದೆ, ಸಮಸ್ಯೆಗಳನ್ನು ಎದುರಿಸುವ ಹತ್ಯಾರಗಳು ಸಿಗುತ್ತವೆ. ಮತ್ತೆ ಏಳಬೇಕು. ಕುಸಿದ ಪಾತಾಳದಿಂದಲೇ ಎದ್ದು ನಿಲ್ಲಬೇಕು. ಆಸರೆಗೆ ಯಾರ ಕೈ ಎಟುಕದಿದ್ದಾಗ್ಯೂ ಎಲ್ಲ ಬಲ ಹಾಕಿ ನಾವೇ ಏಳಬೇಕು. ಅದು ಬದುಕಿನ ಮತ್ತೊಂದು ಮೌಲ್ಯಯುತ ಪಾಠ. ಮನಸ್ಸು, ಬುದ್ಧಿ ಮತ್ತು ಕ್ರಿಯೆಗಳು ಏಕತ್ರಗೊಂಡಾಗ ಮೂಲ ಶೃತಿ ಕೇಳುತ್ತದೆ. ಅದೇ ಹುಡುಕುತ್ತಿದ್ದ ಪರಿಹಾರ. ಗಾಡಾಂಧಕಾರದ ಮಿಣುಕು ದೀಪ. ಜೀವಕ್ಕೆ ಇನ್ನೊಂದು ಹುಟ್ಟು.
“ಹಂದೆಯಲ್ಲ ನಾನು, ಹರುಷದ ಧೈರ್ಯವುಳ್ಳ ಹೆಣ್ಣು ನಾನು” ಎನ್ನುವ ನೀಲಮ್ಮ ತಾಯಿಯವರ ದಿಟ್ಟತನ ನೋಡಿ. ಬದುಕಿನ ಎಂಥದೇ ಸಂಕೀರ್ಣ ಸನ್ನಿವೇಶಗಳನ್ನು ನಗುನಗುತ್ತಾ ಎದುರಿಸಿದ ದಿಟ್ಟ ಮಹಿಳೆ ನೀಲಮ್ಮ. ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರುಹೋಗಿ ಅವರ ಕೈ ಹಿಡಿದ ನೀಲಮ್ಮನವರು ಅಗಾಧವಾಗಿ ಬೆಳೆದು ನಿಂತ ಪರಿಗೆ ಅವರ ವಚನಗಳೇ ಸಾಕ್ಷಿ. ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ನೀಲಮ್ಮ ಏನೆಲ್ಲ ಸಂದರ್ಭಗಳನ್ನು ಎದುರಿಸಿರಬಹುದು! ಯಾವ ಸಂದರ್ಭದಲ್ಲಿ ಅವರು ಇಂಥ ಸುಂದರ ಮಾತು ಹೇಳಿದ್ದಾರೋ ತಿಳಿಯದು. ಜೀವನ ಎಂದರೆ ಕೇವಲ ಸಮಸ್ಯೆಗಳ ಮೊತ್ತವೇ ಅಲ್ಲ. ಅನುಭವಿಸಬೇಕಾದ ವಾಸ್ತವ ಎಂಬ ಜೀವ ಪ್ರೀತಿ ಧೋರಣೆ ಅವರ ಮಾತುಗಳಲ್ಲಿದೆ. ಗೃಹಿಣಿಯಾಗಿ ಗೃಹಕೃತ್ಯಗಳಲ್ಲಿಯೇ ಮುಳುಗಿ ಹೋಗದೆ; ಪ್ರಧಾನಿಯ ಪತ್ನಿಯಾಗಿ ಅಧಿಕಾರ, ಆಡಂಬರ, ಅಲಂಕಾರಗಳಲ್ಲಿಯೇ ಕಾಲ ವ್ಯಯಿಸದೆ ಕಲ್ಯಾಣ ಕ್ರಾಂತಿಯ ವೈಚಾರಿಕ ಹೆಜ್ಜೆಗಳಲ್ಲಿ ದಿಟ್ಟತನದಿಂದ ಮುನ್ನಡೆದ ವೀರ ವನಿತೆಯಾಗಿ, ಆಧ್ಯಾತ್ಮಿಕ ಸಾಧನೆಯಲ್ಲಿ ಯೋಗಿನಿಯಾಗಿ, ಬದುಕಿನ ವಿಪ್ಲವಗಳನ್ನು ಧೈರ್ಯವಾಗಿ ಮಾತ್ರವಲ್ಲ ಹುರುಷದಿಂದ ಎದುರಿಸುವ ಸಾಧ್ಯತೆಯನ್ನು ತೋರಿದ ಹಸನ್ಮುಖಿ ಹೆಣ್ಣಾಗಿ ಕಂಗೊಳಿಸುತ್ತಾರೆ ನೀಲಮ್ಮ.
ಆಂಗ್ಲ ಕವಿ ವಿಲಿಯಂ ಅರ್ನೆಸ್ಟ್ ಹೆನ್ಲಿಯ “ಇನ್ವಿಕ್ಟಸ್” (ಲ್ಯಾಟಿನ್ ಭಾಷೆಯಲ್ಲಿ ಅಜೇಯ) ಕವನದ ಬಗ್ಗೆ ಒಂದು ಮಾತು ಹೇಳಲೇ ಬೇಕು. ಆತ ಸ್ಫೂರ್ತಿದಾಯಕವಾದ ಈ ಕವನ ರಚಿಸಿದ್ದು ಆಸ್ಪತ್ರೆಯ ಹಾಸಿಗೆಯ ಮೇಲೆ. ಸಾವುನೋವಿನ ಹೋರಾಟದಲ್ಲಿದ್ದಾಗ. ಆತ ಹೇಳುತ್ತಾನೆ- “ನೀನು ಯಾರೇ ಆಗಿರು, ದೇವರನ್ನು ನಂಬು ಅಥವಾ ನಂಬದಿರು, ನೀನು ಧೈರ್ಯಶಾಲಿಯಾಗಿದ್ದು, ನಿನ್ನ ಸಾಮರ್ಥ್ಯದ ಮೇಲೆ ನಿನಗೆ ಅಪಾರ ಆತ್ಮವಿಶ್ವಾಸವಿದ್ದಲ್ಲಿ ಎಂಥದೇ ಕಾರ್ಗತ್ತಲಿನ ದಿನಗಳನ್ನೂ ದಾಟಿ ನಡೆಯಬಲ್ಲೆ” ಆತನ ಕವನದ ಕೊನೆಯ ಸಾಲುಗಳು “ನನ್ನ ವಿಧಿಯ ಒಡೆಯ ನಾನೇ; ನನ್ನ ಆತ್ಮದ ನಾಯಕ ನಾನೇ” ( I am the owner of my Soul, I am the captain of my Fate) ಸಾವನ್ನು ಜಯಿಸಿ ಬರುತ್ತಾನೆ ಕವಿ. ಕವನದಲ್ಲಿ ಮಾತ್ರವಲ್ಲ, ನಿಜಜೀವನದಲ್ಲೂ.
ಬದುಕು ಏರಿಳಿತದ ಸರಪಳಿ. ಹೋರಾಟಗಳಿಲ್ಲದೆ ವೈಯಕ್ತಿಕ ವಿಕಸನ ಸಾಧ್ಯವಿಲ್ಲ. ಕೆಲವೊಮ್ಮೆಯಂತೂ ಎಲ್ಲವೂ ಮುಗಿಯಿತು, ಯಾವ ದಾರಿಯೂ ಇಲ್ಲ ಎನ್ನುವ ಪರಿಸ್ಥಿತಿ ಎದುರಾಗುತ್ತದೆ. ಎಷ್ಟೇ ಧೈರ್ಯವನ್ನು ಒಟ್ಟು ಮಾಡಿಕೊಂಡು ನಡೆದರೂ ದಿಕ್ಕೇ ತೋಚದಾಗುತ್ತದೆ. ಮನಸ್ಸು, ಸಂದರ್ಭ ಭಿನ್ನ ದಿಕ್ಕುಗಳಲ್ಲಿದ್ದು ಬಾಳುವ ಆಸೆಗಳೆಲ್ಲಾ ಕಮರಿ ಹೋಗುತ್ತಿರುತ್ತವೆ. ಉತ್ತಮ ಯೋಜನೆಗಳು, ಅದ್ಭುತ ಆಲೋಚನೆಗಳು ತಲೆಯಲ್ಲಿದ್ದರೂ ಅವನ್ನೆಲ್ಲ ಜಾರಿಗೊಳಿಸಲಾಗದೇ ಕೈಚೆಲ್ಲ ಬೇಕಾಗುತ್ತದೆ- ಹಣದ ಅಡಚಣೆಗಳು, ಸಂಬಂಧಗಳಲ್ಲಿನ ಸಮಸ್ಯೆಗಳು, ಭಾವನೆಗಳ ತಾಕಲಾಟಗಳು ನಮ್ಮಲ್ಲಿದ್ದ ಶಕ್ತಿ ಮತ್ತು ಉತ್ಸಾಹವನ್ನು ಮಣ್ಣು ಮಾಡಿ ಬಿಡುತ್ತವೆ. ಇಲ್ಲಿ ದೂಷಿಸುವುದಾದರೂ ಯಾರನ್ನು? ಭೌತಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ ತೀವ್ರ ಯಾತನೆ ಪಡುವ ಸಂದರ್ಭಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆಗ ಒಂದಿಷ್ಟು ಕಾಲ ಮೌನವಾಗಿ ಬಿಡಬೇಕು. “ಶಾಂತಿಯಿಂದ ಸಹಿಸಿಕೊಳ್ಳಿ, ಮೌನವಾಗಿ ಬಳಲಿ, ತಾಳ್ಮೆಯಿಂದ ಕಾಯಿರಿ”- ಎಂದು ಕಿವಿಮಾತು ಹೇಳುತ್ತಾರೆ ಅಮೆರಿಕದ ಗಾಂಧಿ ಮಾರ್ಟಿನ್ ಲೂಥರ್ ಕಿಂಗ್. ಅಕ್ಕನ ಅನುಭವದ ಮಾತುಗಳಲ್ಲಿ ಇಂಥ ಪರಿಸ್ಥಿತಿಗೆ ಸೊಗಸಾದ ಉತ್ತರವಿದೆ.
ಉಣಲೆಂದು ಬಂದ ಸುಖ ಉಂಡಲ್ಲದೆ ಹರಿಯದು.
ಕಾಣಲೆಂದು ಬಂದ ದುಃಖ ಕಂಡಲ್ಲದೆ ಹರಿಯದು.
ತನುವಿಂಗೆ ಬಂದ ಕರ್ಮ ಹರಿವ ಕಾಲಕ್ಕೆ ಚೆನ್ನಮಲ್ಲಿಕಾರ್ಜುನದೇವರ
ಕಡೆಗಣ್ಣಿನಿಂದ ನೋಡಿದರು.
ಇಡೀ ಜಗತ್ತೇ ಇಷ್ಟು ಸಂಭ್ರಮದಿಂದ ಇರುವಾಗ ನನಗೇ ಏಕೆ ಇಷ್ಟು ನೋವು, ಬೇಗುದಿ ಎಂಬುದು ಪ್ರತಿಯೊಬ್ಬ ದುಃಖಿಯ ನಿಟ್ಟುಸಿರು. ಸಾವು, ನಿರಾಶೆ, ಮೋಸ, ದುರಂತ, ದ್ರೋಹ, ವಂಚನೆ, ಅನ್ಯಾಯ… ಹೀಗೆ ನಾನಾ ಕಾರಣಗಳಿಂದ ಮನಸ್ಸು ಧೃತಿಗೆಡುತ್ತದೆ. ಇವುಗಳಲ್ಲಿ ಕೆಲವು ಸ್ವಯಂಕೃತವಾಗಿದ್ದರೆ, ಹಲವು ನಮ್ಮ ಕೈಯಲ್ಲಿಲ್ಲದೆ ಸತಾಯಿಸಿ ಬಿಡುತ್ತವೆ. ಮನಸ್ಸು ಚಡಪಡಿಸುತ್ತದೆ. ಒದ್ದಾಡುತ್ತದೆ. ಕಂಗಾಲಾಗುತ್ತದೆ. ದಿಕ್ಕುಗಾಣದೆ ತತ್ತರಿಸುತ್ತದೆ. ವ್ಯಾಕುಲತೆ, ತಳಮಳ ಜೀವವನ್ನು ಹಿಂಡುತ್ತವೆ. … “ಸುಖವನನುಭವಿಸಿ, ಆನು ಸುಖದ ಹದನನು ಕಂಡೆ; ದುಃಖವನನುಭವಿಸಿ, ಆನು ದುಃಖದ ಹದನನು ಕಂಡೆ” ಎನ್ನುತ್ತಾರೆ ಸಕಳೇಶ ಮಾದರಸ ಶರಣರು. ಜೀವನ ನಮ್ಮನ್ನು ಪಕ್ವಗೊಳಿಸುವಾಗ ಅದನ್ನು ಅದರ ನೆಲೆಯಲ್ಲೇ ಅರ್ಥಮಾಡಿಕೊಳ್ಳಬೇಕು.
ಸವಾಲುಗಳು, ಹಿನ್ನಡೆಗಳು ಇಲ್ಲದ ಬದುಕು ಬೇಕೆಂದರೆ ಹೇಗೆ? ಬದುಕಿನ ಪ್ರತಿ ಘಟ್ಟದಲ್ಲೂ ಅದರದೇ ಆದ ಸಮಸ್ಯೆಗಳು, ಸವಾಲುಗಳು ಇದ್ದೇ ಇರುತ್ತವೆ. ಹೋರಾಟಗಳಿಲ್ಲದೆ ನಮ್ಮ ಸಾಮರ್ಥ್ಯ ನಮ್ಮ ಅರಿವಿಗೆ ಬರುವುದಾದರೂ ಹೇಗೆ? ನಮ್ಮಲ್ಲಿನ ಅದ್ಭುತ ನಮಗೆ ತಿಳಿಯುವುದು ಹೇಗೆ? ಅದುಮಿದಷ್ಟು ಮೇಲೆದ್ದು ಚಿಗುರಬಲ್ಲ, ರೆಂಬೆ, ಕೊಂಬೆಗಳ ಚಾಚಿ ಹಬ್ಬಬಲ್ಲ ಶಕ್ತಿ ನಮ್ಮೊಳಗೆ ಇದೆ. ನಮ್ಮ ಆನುವಂಶಿಕ ಸಂಕೇತಗಳಲ್ಲಿಯೇ ನಮ್ಮದೇ ಉತ್ತಮ ಪ್ರತಿ ನಾವಾಗಬಲ್ಲ ಗುಣ ಅಡಕವಾಗಿದೆ. ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳಲು ಇದಕ್ಕಿಂತ ಸುಸಮಯ ಇನ್ನೊಂದಿಲ್ಲ. ನಾನು ಮಾಡೇ ಮಾಡುತ್ತೇನೆ ಎಂದುಕೊಂಡರೆ ಅಸಂಭವವೂ ಸಂಭವಿಸುತ್ತದೆ, ನನ್ನಿಂದ ಅಸಾಧ್ಯ ಎಂದು ಭಾವಿಸಿದಲ್ಲಿ ಕಾಲುಗಳು ಅಲ್ಲಿಯೇ ಕುಸಿಯುತ್ತವೆ. ಸಮಸ್ಯೆಗಳ ಭಾರದಲ್ಲಿ ಕುಸಿದು, ಒಂಟಿಯಾಗುವುದು, ಕೋಣೆಯೊಳಗೆ ಬಂಧಿಯಾಗುವುದು, ನಮ್ಮ ಸುತ್ತ ಕೋಟೆಯನ್ನು ಎಬ್ಬಿಸಿಕೊಂಡು ಏಕಾಂಗಿಯಾಗುವುದು ಖಿನ್ನತೆಯಂತಹ ಮತ್ತೊಂದು ಪ್ರಪಾತಕ್ಕೆ ಎಳೆದೊಯ್ಯುತ್ತದೆ.
ಈ ಹಂತದಲ್ಲಿ ಉದ್ವೇಗದ ನಿರ್ಧಾರಗಳು ಅಪಾಯಕಾರಿ. ಇದೊಂದು ತಾತ್ಕಾಲಿಕ ಹಂತ, “ಇಫ್ ವಿಂಟರ್ ಕಮ್ಸ್, ಕ್ಯಾನ್ ಸಮ್ಮರ್ ಬಿ ಫಾರ್ ಬಿಹೈಂಡ್?” ಕೊರೆವ ಚಳಿ ಅಡಿಯಿಟ್ಟಾಕ್ಷಣ ವಸಂತ ಬಹಳ ದೂರವೇ? ಎಂದು ಪ್ರಶ್ನಿಸುತ್ತಾನೆ ಕವಿ ಪಿ.ಬಿ.ಶೆಲ್ಲಿ. ಕಷ್ಟದ ಗಳಿಗೆಗಳನ್ನು ದಿಟ್ಟತನದಿಂದ ಹೋರಾಡಿ, ಮತ್ತೆ ಎದ್ದು ಬರುವುದರಲ್ಲೇ ನಮ್ಮ ಶಕ್ತಿಯನ್ನು, ಯುಕ್ತಿಯನ್ನು ತೋರಬೇಕು. ಅದೇ ನಿಜವಾದ ಕಲಿತನ. ಬೆಲೆ ಕಟ್ಟಲಾಗದ ಜೀವದ್ರವ್ಯ ಈ ಅನುಭವ. ಬಸವಣ್ಣನವರ ಈ ವಚನ ನೋಡಿ:
ಅಂಕವೋಡಿದಡೆ ತೆತ್ತಿಗಂಗೆ ಭಂಗವಯ್ಯಾ,
ಕಾದಿ ಗೆಲಿಸಯ್ಯಾ ಎನ್ನನು.
ಕಾದಿ ಗೆಲಿಸಯ್ಯಾ ಕೂಡಲಸಂಗಮದೇವಯ್ಯಾ,
ಎನ್ನ ತನು ಮನ ಧನದಲ್ಲಿ ವಂಚನೆಯಿಲ್ಲದೆ.
ಇಲ್ಲೊಂದು ಯುದ್ಧಭೂಮಿಯ ಚಿತ್ರಣವಿದೆ. ಘೋರ ಯುದ್ಧ ನಡೆಯುತ್ತಿದೆ. ಶೂರ ಸೈನಿಕ ವೀರಾವೇಶದಿಂದ ಹೋರಾಡಿ ತನ್ನ ದೊರೆಯನ್ನು, ನಾಡನ್ನು ರಕ್ಷಿಸುವ ಸಮಯ. ತನ್ನ ಶೌರ್ಯವನ್ನು, ವೀರತ್ವವನ್ನು ನಿರೂಪಿಸುವ ಸಂದರ್ಭ. ಅಂಥ ವೇಳೆ ಆ ಸೈನಿಕ ಯುದ್ಧಕ್ಕೆ ಅಂಜಿ ಓಡತೊಡಗಿದರೆ… ಅದು ಒಡೆಯ ತಲೆ ತಗ್ಗಿಸುವ ಕೆಲಸ… ರಣರಂಗದಿಂದ ಓಡುವುದು ವೀರತನಕ್ಕೆ ಮಾಡುವ ದೊಡ್ಡ ಅಪಮಾನ. ಈ ಯುದ್ಧ ಗೆಲ್ಲಲೇ ಬೇಕು. ರಾಜ್ಯಕ್ಕಾಗಿ, ನಂಬಿದ ಒಡೆಯನಿಗಾಗಿ ಕಾದಾಡಲೇ ಬೇಕು. “ಕಾದಿ ಗೆಲಿಸಯ್ಯ” ಎಂಬುದು ಈ ವಚನದ ಮಹತ್ವದ ಸಂದೇಶ. ನೋವುಗಳನ್ನು ಕೊಡಬೇಡ ಎಂದು ದೇವರನ್ನು ಗೋಗರೆಯುವುದಲ್ಲ. ಸಂಕಷ್ಟಗಳನ್ನು ಪರಿಹರಿಸು ಎಂದು ಅಂಗಲಾಚುವುದೂ ಸರಿಯಲ್ಲ. ನನ್ನ ಕೃತ್ಯಗಳಿಗೇ ನಾನೇ ಹೊಣೆ, ಅವನ್ನೆಲ್ಲ ಎದುರಿಸುವ ಸಾಮರ್ಥ್ಯ ನೀಡು, ನಾನೇ ಹೊಡೆದಾಡುತ್ತೇನೆ. ಬದುಕಿನಿಂದ ಮಾತ್ರ ಹಿಮ್ಮೆಟ್ಟಲಾರೆ. ಅಂಥ ಅವಮಾನ ಅತ್ಯಂತ ಹೀನವಾದದ್ದು, ಅದಕ್ಕೆ ಅವಕಾಶ ನೀಡಲಾರೆ ಎಂಬ ಸ್ವಾಭಿಮಾನಿ ನಿಲುವು ಇಲ್ಲಿದೆ. ಕೊನೆಯಲ್ಲಿ ತನು, ಮನ, ಧನದಲ್ಲಿ ವಂಚನೆಯಿಲ್ಲದೆ- ಎನ್ನುತ್ತಾರೆ. ಅಂದರೆ ಮುಖ್ಯವಾಗಿ ಮನುಷ್ಯನಿಗೆ ಸಮಸ್ಯೆಗಳು ಎದುರಾಗುವುದು- ದೈಹಿಕವಾಗಿ, ಮಾನಸಿಕವಾಗಿ ಮತ್ತು ಹಣಕಾಸಿನ ವಿಷಯದಲ್ಲಿ. ಆಗ ಯಾವುದೇ ಅನ್ಯ ಅಥವಾ ಅಡ್ಡ ಮಾರ್ಗ ತುಳಿಯದೇ ಇವುಗಳ ಸುಳಿಯಿಂದ ಹೊರಬರುವುದು ನಿಜವಾದ ಗೆಲುವು.
ಜೀವನ ನಮ್ಮ ಮುಂದಿನ ನಡೆಗಾಗಿ ಕಾಯುತ್ತಿರುತ್ತದಂತೆ. ನಮ್ಮ ಯೋಚನೆಗಳಂತೆ ನಮ್ಮ ತೀರ್ಮಾನಗಳು, ತೀರ್ಮಾನಗಳಂತೆ ಬದುಕಿನ ದಾರಿ… ಈ ಜಗತ್ತು ಮಿಥ್ಯವಲ್ಲ. ಹೇಗೆ ಬೇಕೋ ಹಾಗೆ ಕಾಲ ದೂಡಿ ಸತ್ತು ಹೋಗುವ ನಿಕೃಷ್ಟತೆ ಇದಕಿಲ್ಲ. ಅದ್ಭುತವಾದ ಜಗತ್ತಿನಲ್ಲಿ ಸಿಕ್ಕ ಅದ್ಭುತ ಅವಕಾಶ ಈ ಜನ್ಮ. ದೇಹ ಅದರ ವಿಸ್ಮಯ. ಜೀವಕ್ಕೆ ಒದಗುವ ಕಷ್ಟ ಕೋಟಲೆಗಳನ್ನು ಎದುರಿಸಿ ಬದುಕಬೇಕು. “ಎದೆ ಭಂಗವಿಲ್ಲದೆ ನಿಲಬಲ್ಲಡೆ ಸದಮಲಸುಖವನೀವ”ಎನ್ನುವ ಶರಣರು ತಾವು ಬದುಕಿದ್ದ ಕೆಲವೇ ವರ್ಷಗಳಲ್ಲಿ ಇಡೀ ವ್ಯವಸ್ಥೆಯ ಬೇರುಗಳನ್ನೇ ಅಲ್ಲಾಡಿಸಿಬಿಟ್ಟರು. ಹೊಸ ಮನ್ವಂತರಕ್ಕೆ ನಾಂದಿ ಹಾಡಿದರು. “ಎಲು ದೋರಿದರೆ, ನರ ಹರಿದರೆ, ಕರುಳು ಕುಪ್ಪಳಿಸಿದರೆ ನಾ ಧೃತಿಗೆಡೆನಯ್ಯಾ”ಎನ್ನುವ ಶರಣರ ಜೀವನಿಷ್ಠೆ ಸರ್ವಕಾಲಕ್ಕೂ ಸ್ಫೂರ್ತಿ ಹಾಗೂ ಮಾರ್ಗದರ್ಶಕ.