ಕಾಣಿಕೆಯ ರೂಪದ ಕಪ್ಪುಹಣ
ಭಾರತ ದೇಶವು ಭ್ರಷ್ಟತೆಯ ಕರಾಳ ಸಂಸ್ಕೃತಿಯನ್ನು ತನ್ನ ಸಾಂಪ್ರದಾಯಿಕ ಸಂಸ್ಕೃತಿಯ ಭಾಗವಾಗಿಸಿಕೊಂಡೇ ಬೆಳೆದುದು ಅದರ ಪುರಾಣ ಮತ್ತು ಇತಿಹಾಸದುದ್ದಕ್ಕೂ ದಾಖಲಾಗಿದೆ. ದೇವರು ಮತ್ತು ಭಕ್ತರ ನಡುವಿನ ಪುರೋಹಿತ (ದಲ್ಲಾಳಿ, ಮಧ್ಯವರ್ತಿ) ವ್ಯವಸ್ಥೆ ಮತ್ತು ದೇವರಿಗೆ ಸಹಾಯ ಕೇಳಿ ಅದಕ್ಕೆ ಪ್ರತಿಯಾಗಿ ಆತನಿಗೆ ಪ್ರಾಣಿ ಬಲಿಯಿಂದ ಹಿಡಿದು ಬೆಲೆಬಾಳುವ ವಸ್ತುಗಳ ಕಾಣಿಕೆ ನೀಡುವ ಸಂಪ್ರದಾಯ, ಭ್ರಷ್ಟತೆಯು ನಮ್ಮ ಸಂಸ್ಕೃತಿಯ ಭಾಗವೆನ್ನುವುದನ್ನು ನಿರೂಪಿಸುತ್ತದೆ. ದೇಶದಾದ್ಯಂತ ಕಪ್ಪು ಹಣದ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ ಭ್ರಷ್ಟಾಚಾರ ಮತ್ತು ಕಪ್ಪು ಹಣದ ಕುರಿತು ಭಾರತದ ಸನಾತನ ಪರಂಪರೆ ಏನನ್ನು ಹೇಳುತ್ತದೆˌ ಆ ಕುರಿತು ಪಶ್ಚಿಮ ಮತ್ತು ತೃತೀಯ ದೇಶದ ಜನಗಳ ಅಭಿಪ್ರಾಯವೇನು ಹಾಗೂ ಶರಣರು ಈ ಕಪ್ಪು ಹಣ ಮತ್ತು ಭ್ರಷ್ಟತೆಯ ಬಗ್ಗೆ ಏನು ಹೇಳಿದ್ದಾರೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳುವ ಅಗತ್ಯವಿದೆ ಎಂದುಕೊಳ್ಳುತ್ತೇನೆ.
ನ್ಯೂಜಿಲ್ಯಾಂಡನ ನಾಗರಿಕನೊಬ್ಬ ಭಾರತೀಯರ ಭ್ರಷ್ಟ ಪರಂಪರೆಗೆ ಕಾರಣಗಳನ್ನು ಹೇಗೆ ನೋಡಿದ್ದಾನೆ ಎನ್ನಲಾದ ಒಂದು ಅಭಿಪ್ರಾಯವು ಇತ್ತೀಚೆಗೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಹಳ ಮೊನಚಾದ ಅನಿಸಿಕೆಗಳು ಇಲ್ಲಿದ್ದರೂ ಇವು ಅಪ್ಪಟ ಕಹಿ ಸತ್ಯ. ಇಂಗ್ಲಿಷನಲ್ಲಿದ್ದ ಆ ಲೇಖನವನ್ನು ಕನ್ನಡಕ್ಕೆ ಈ ಕೆಳಗಿನಂತೆ ಭಾಷಾಂತರಿಸಿದ್ದೇನೆ.
ಐತಿಹಾಸಿಕ ಹಿನ್ನೆಲೆ:
ಭಾರತದಲ್ಲಿನ ಭ್ರಷ್ಟಾಚಾರಕ್ಕೆ ಕಾರಣಗಳು: ಭಾರತೀಯರು ಸ್ವಾರ್ಥ ಸಂಸ್ಕೃತಿಯುಳ್ಳವರು (Hobbesian=culture of self interest). ಭ್ರಷ್ಟಾಚಾರವು ಭಾರತದಲ್ಲಿ ಸಂಸ್ಕೃತಿಯ ಭಾಗವಾಗಿ ಪರಿಗಣಿತವಾಗಿರುವುದರಿಂದ ಅದು ಸರ್ವವ್ಯಾಪಿಯಾಗಿದ್ದು ಯಾರಿಗೂ ವಿಚಿತ್ರವಾಗಿ ಕಾಣುವುದಿಲ್ಲ.
ಭಾರತೀಯರು ವ್ಯಕ್ತಿಗತವಾಗಿ ಭ್ರಷ್ಟರನ್ನು ಸಹಿಸುತ್ತಾರೆಯೇ ಹೊರತು ಅವರನ್ನು ಸರಿಪಡಿಸಲು ಪ್ರಯತ್ನಿಸುವುದಿಲ್ಲ. ಯಾವುದೇ ಜನಾಂಗ ಜನ್ಮಜಾತವಾಗಿ ಭ್ರಷ್ಟವಾಗಿರುವುದಿಲ್ಲ. ಆದರೆ ಒಂದು ಜನಾಂಗವು ತನ್ನ ಸಂಸ್ಕೃತಿಯಿಂದ ಭ್ರಷ್ಟವಾಗಬಹುದೆ?
ಭಾರತೀಯರ ಭ್ರಷ್ಟಗುಣಗಳಿಗೆ ಕಾರಣಗಳನ್ನು ತಿಳಿಯಲು ಈ ಕೆಳಗಿನ ಮಾದರಿಗಳು ಮತ್ತು ಆಚರಣೆಗಳನ್ನು ಅವಲೋಕಿಸಬಹುದು:
ಭಾರತದಲ್ಲಿ ಧರ್ಮದ ಪರಿಕಲ್ಪನೆಯು ವ್ಯಾವಹಾರಿಕವಾದದ್ದು. ಭಾರತೀಯರು ದೇವರಿಗೆ ಹಣವನ್ನು ಕೊಡುತ್ತಾರೆ ಮತ್ತು ಅದಕ್ಕೆ ಪ್ರತಿಯಾಗಿ ಆತನಿಂದ ಸಹಾಯವನ್ನು ನಿರೀಕ್ಷಿಸುತ್ತಾರೆ. ಈ ತರಹದ ಮನವಿಗಳು ಅಪಾತ್ರರಿಗೆ ಸಹಾಯ ಮಾಡಬಹುದು ಎನ್ನುವುದನ್ನು ಖಚಿತಪಡಿಸುತ್ತವೆ ಮತ್ತು ಈ ವ್ಯವಹಾರಗಳು ದೇವಸ್ಥಾನಗಳ ಹೊರಗೆ ಲಂಚದ ವ್ಯವಹಾರಗಳೆಂದು ಪರಿಗಣಿಸಲ್ಪಡುತ್ತವೆ.
ಭಾರತದ ಆಗರ್ಭ ಶ್ರೀಮಂತರು ದೇವರಿಗೆ ನೋಟುಗಳ ಬದಲಿಗೆ ವಜ್ರಖಚಿತ ಆಭರಣಗಳು ಮತ್ತು ಕಿರೀಟಗಳನ್ನು ಅರ್ಪಿಸುತ್ತಾರೆ. ಅವರ ಈ ಹರಕೆಯ ಕಾಣಿಕೆಗಳು ದೇವಸ್ಥಾನಗಳಲ್ಲಿ ನಿರುಪಯುಕ್ತವಾಗಿ ಕೊಳೆಯುತ್ತ ಬೀಳುತ್ತವೆಯೇ ಹೊರತು ಅನ್ನವಿಲ್ಲದ ಬಡವನ ಉಪಯೋಗಕ್ಕೆ ಬರಲಾರವು.
ಜೂನ್ 2009 ರ ದಿ ಹಿಂದೂ ಪತ್ರಿಕೆ ವರದಿ ಮಾಡಿರುತ್ತದೆ, ಕರ್ನಾಟಕದ ಮಂತ್ರಿ ಜಿ. ಜನಾರ್ಧನ ರೆಡ್ಡಿ 45 ಕೋಟಿ ಮೌಲ್ಯದ ವಜ್ರ ಖಚಿತ ಚಿನ್ನದ ಕಿರೀಟವನ್ನು ತಿರುಪತಿಯ ದೇವರಿಗೆ ಅರ್ಪಿಸಿದ ಬಗ್ಗೆ.
ಭಾರತದ ದೇವಸ್ಥಾನಗಳು ಈ ತರಹದ ಕೋಟ್ಯಾಂತರ ಹಣ ಮತ್ತು ಆಭರಣಗಳನ್ನು ಸಂಗ್ರಹಿಸಿ ಅಪಮೌಲ್ಯಗೊಳಿಸುತ್ತಲೇ ಇವೆ. ತಮಾಷೆಯ ವಿಷಯವೆಂದರೆ, ಯುರೋಪಿಯನ್ನರು ಭಾರತವನ್ನಾಳುವಾಗ ಅಲ್ಲಿ ಶಾಲೆಗಳನ್ನು ಸ್ಥಾಪಿಸಿದರೆ, ಭಾರತೀಯರು ಯುರೋಪ್ ಮತ್ತು ಅಮೆರಿಕಾಗಳಲ್ಲಿ ಉದ್ಯೋಗ ಅರಸಿ ನೆಲೆಸಿ ದೊಡ್ಡ ದೊಡ್ಡ ದೇವಸ್ಥಾನಗಳನ್ನು ಕಟ್ಟಿಸುತ್ತಿದ್ದಾರೆ.
ಭಕ್ತರ ಕೆಲಸ ಮಾಡಲು ದೇವರು ಕಾಣಿಕೆಯನ್ನು ಪಡೆಯುವುದು ಸರಿಯಾದ ಕ್ರಮವೆಂದಾದಲ್ಲಿ ಜನರು ಪರಸ್ಪರ ಕೆಲಸ ಮಾಡಿಕೊಡಲು ಲಂಚಪಡೆಯುವುದರಲ್ಲಿ ತಪ್ಪಿಲ್ಲವೆಂದೇ ಭಾರತೀಯರು ನಂಬುತ್ತಾರೆ.
ಭಾರತೀಯ ಸಂಸ್ಕೃತಿ ಇಂಥ ವ್ಯಾವಹಾರಿಕ ಲಂಚಗುಳಿತನವನ್ನು ಅಳವಡಿಸಿಕೊಳ್ಳಲು ಈ ಕೆಳಗಿನ ಕಾರಣಗಳಿವೆ:
ಮೊದಲನೆಯದು: ಪಶ್ಚಿಮದ ದೇಶಗಳಲ್ಲಿ ಅತ್ಯಂತ ಕಡು ಭ್ರಷ್ಟ ರಾಜಕಾರಣಿಯೊಬ್ಬ ಅಧಿಕಾರದ ಗದ್ದುಗೆ ಏರುವುದು ಅತ್ಯಂತ ವಿರಳ. ಭ್ರಷ್ಟಾಚಾರದ ಬಗೆಗಿನ ಭಾರತದ ನೈತಿಕ ದ್ವಂದ್ವಗಳು ಅದರ ಇತಿಹಾಸದುದ್ದಕ್ಕೂ ಕಾಣಸಿಗುತ್ತವೆ. ಭಾರತದ ನಗರಗಳು ಮತ್ತು ಸಾಮ್ರಾಜ್ಯಗಳನ್ನು ವಶಪಡಿಸಿಕೊಳ್ಳಲು ಶತ್ರುಪಡೆ ಅಲ್ಲಿನ ರಕ್ಷಣಾದಳದವನನ್ನು ಮತ್ತು ಸೈನ್ಯದ ಸೇನಾಧಿಪತಿಗಳನ್ನು ಲಂಚದ ಮೂಲಕ ಸರಿಪಡಿಸಿಕೊಂಡಿರುವ ಘಟನೆಗಳು ಭಾರತದ ಇತಿಹಾಸದಲ್ಲಿ ಸಾಕಷ್ಟು ಸಿಗುತ್ತವೆ. ಈ ಪದ್ಧತಿ ಇಲ್ಲಿ ತೀರಾ ಸಾಮಾನ್ಯ. ಭಾರತೀಯರ ಈ ಲಂಚಗುಳಿತನ ಉಪಖಂಡದಲ್ಲಿ ಯುದ್ಧದ ಪಾವಿತ್ರ್ಯವನ್ನೇ ಕುಗ್ಗಿಸಿದೆ.
ಪುರಾತನ ಗ್ರೀಕ್ ಮತ್ತು ಆಧುನಿಕ ಯುರೋಪಿನ ಯುದ್ಧಗಳನ್ನು ಹೋಲಿಕೆ ಮಾಡಿದರೆ ಭಾರತೀಯ ಬೆರಳೆಣೆಕೆಯ ಶೂರ ಹೋರಾಟಗಾರರಿಗೆ ಈ ಭ್ರಷ್ಟತನ ಬಹುದೊಡ್ಡ ಪೆಟ್ಟನ್ನು ಕೊಟ್ಟಿದೆ. ನಾದಿರ್ ಷಾನ ತುರ್ಕರೊಂದಿಗಿನ ಯುದ್ಧವು ಸಂಪೂರ್ಣ ಅನೈತಿಕತೆಯಿಂದಲೇ ಕೂಡಿತ್ತು. ಭಾರತದಲ್ಲಿ ಹೋರಾಡಿ ಗೆಲ್ಲುವುದಕ್ಕಿಂತ ಸೈನ್ಯವನ್ನು ಲಂಚದ ಆಮಿಷಗಳಿಂದ ನಿಷ್ಕ್ರಿಯೆಗೊಳಿಸುವುದೇ ಪ್ರಮುಖವಾಗಿತ್ತು.
ಭಾರತದ ಎಷ್ಟೇ ಬಲಶಾಲಿ ಸಾಮ್ರಾಜ್ಯವನ್ನು ಸೋಲಿಸಲು ಹೊರಗಿನ ಆಕ್ರಮಣಕಾರರಿಗೆ ಭಾರತೀಯರ ಭ್ರಷ್ಟತನವು ಒಂದು ವರವಾಗಿ ಪರಿಣಮಿಸಿತ್ತು. ಆದರೆ ಅಪವಾದಕ್ಕೆಂಬಂತೆ ಭಾರತೀಯರು ಪ್ಲಾಸಿ ಕದನದಂತಹ ಕೆಲವು ಯುದ್ಧಗಳಲ್ಲಿ ಕನಿಷ್ಠ ಪ್ರತಿರೋಧ ತೋರಿದ ಉದಾಹರಣೆಗಳೂ ಇವೆ. ಮೀರ್ ಜಾಫರನನ್ನು ಖರೀದಿಸುವ ಮೂಲಕ ಕ್ಲೈವ್ ಇಡೀ ಬಂಗಾಳವನ್ನೇ ವಶಪಡಿಸಿಕೊಂಡದ್ದಿದೆ. ಭಾರತದ ಕೋಟೆಗಳನ್ನು ವಶಪಡಿಸಿಕೊಳ್ಳಲು ಹಣದ ವಿನಿಮಯ ಸಾಮಾನ್ಯ ಸಂಗತಿಯಾಗಿತ್ತು. 1687 ನೇ ವರ್ಷದಲ್ಲಿ ಗೋಲ್ಕಂಡ ಕೋಟೆಯನ್ನು ಹಿಂಬದಿಯ ಗುಪ್ತ ಮಾರ್ಗವೊಂದನ್ನು ತೆರೆದಿಡುವ ಮೂಲಕ ವಶಪಡಿಸಿಕೊಳ್ಳಲಾಗಿತ್ತು. ಮೊಘಲರು ಮರಾಠಾ ಮತ್ತು ರಜಪೂತರನ್ನು ಸೋಲಿಸಿದ್ದು ಲಂಚದ ಮುಖಾಂತರವೆ. ದಾರಾಶಿಖೋನನ ಮಗ ಸುಲೇಮಾನನನ್ನು ಶ್ರೀನಗರದ ದೊರೆ ಔರಂಗಜೇಬನಿಗೆ ಹಿಡಿದುಕೊಟ್ಟಿದ್ದು ಲಂಚಪಡೆಯುವ ಮೂಲಕವೆ. ಕಿತ್ತೂರ ಸಂಸ್ಥಾನವನ್ನುˌ ಸಂಗೊಳ್ಳಿ ರಾಯಣ್ಣನನ್ನು ಮತ್ತು ಟಿಪ್ಪು ಸುಲ್ತಾನನನ್ನು ಆಂಗ್ಲರು ಆಮಿಷಗಳ ಮೂಲಕವೇ ಸೋಲಿಸಿದ್ದು. ಭಾರತೀಯರು ಲಂಚದ ಆಮಿಷಕ್ಕೆ ಬಲಿಯಾಗಿ ಇಂಥ ದೇಶದ್ರೋಹದ ಕೃತ್ಯಗಳಲ್ಲಿ ಭಾಗಿಯಾದ ಅನೇಕ ದೃಷ್ಟಾಂತಗಳು ಇತಿಹಾಸದಲ್ಲಿ ಸಿಗುತ್ತವೆ.
ಎರಡನೆಯದು: ಭಾರತೀಯರು ನೈತಿಕವಾಗಿ ಬದುಕಿದರೆ ಬೆಳೆಯಬಹುದು ಎನ್ನುವ ಸಿದ್ಧಾಂತವನ್ನು ನಂಬುವುದಿಲ್ಲ. ಏಕೆಂದರೆ ಆ ಸಂದೇಶದಲ್ಲಿ ಅವರಿಗೆ ವಿಶ್ವಾಸವಿಲ್ಲ. ಶ್ರೇಣಿಕೃತ ಜಾತಿ ವ್ಯವಸ್ಥೆ ಭಾರತೀಯರನ್ನು ಪ್ರತ್ಯೇಕಿಸಿದೆ. ಅವರು ಸಮಾನತೆಯನ್ನು ನಂಬುವುದಿಲ್ಲ. ಹಾಗಾಗಿ ಅಲ್ಲಿನ ಶೋಷಿತರು ಬೇರೆ ಧರ್ಮಗಳಿಗೆ ವಲಸೆ ಹೋದದ್ದಿದೆ. ಅಲ್ಲಿನ ಶೋಷಿತ ಸಮುದಾಯಗಳು ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ ಬೌದ್ಧˌ ಜೈನˌ ಲಿಂಗಾಯತ ಮತ್ತು ಸಿಖ್ ಧರ್ಮಗಳ ಸ್ಥಾಪನೆಯನ್ನೂ ಮಾಡಿದ್ದಲ್ಲದೆ ಹಲವರು ಇಸ್ಲಾಂ ಮತ್ತು ಕ್ರೈಸ್ತ ���ರ್ಮಕ್ಕೂ ಧರ್ಮಾಂತರಗೊಂಡಿದ್ದಾರೆ. ಇದರ ಫಲಿತಾಂಶವಿಷ್ಟೇˌ ಭಾರತೀಯರು ಒಬ್ಬರನ್ನೊಬ್ಬರು ನಂಬುವುದಿಲ್ಲ. ಭಾರತದಲ್ಲಿ ಈಗ ಭಾರತೀಯರು ಯಾರೂ ಇಲ್ಲ. ಅಲ್ಲಿರುವುದು ಹಿಂದೂˌ ಮುಸ್ಲಿಂˌ ಕ್ರೈಸ್ತˌ ಬೌದ್ಧˌ ಜೈನ ಇತ್ಯಾದಿಗಳು. ಭಾರತೀಯರು ಹದಿನಾಲ್ಕು ನೂರು ವರ್ಷಗಳ ಹಿಂದೆ ತಾವೆಲ್ಲ ಒಂದೇ ನಂಬಿಕೆ ಹೊಂದಿದ್ದನ್ನು ಮರೆತುಬಿಟ್ಟಿದ್ದಾರೆ. ಈ ಜಾತಿಯಾಧಾರಿತ ಜನಾಂಗ ವಿಭಜನೆಯು ಅನಾರೋಗ್ಯಕರ ಸಂಸ್ಕೃತಿಯೊಂದರ ಉದಯಕ್ಕೆ ಕಾರಣವಾಗಿದೆ. ಈ ಅಸಮಾನತೆಯು ಒಂದು ಭ್ರಷ್ಟ ವ್ಯವಸ್ಥೆಯನ್ನು ಹುಟ್ಟುಹಾಕಿದೆ. ಆದ್ದರಿಂದ ಈಗ ಭಾರತೀಯರು ದೇವರನ್ನು ಬಿಟ್ಟು ಒಬ್ಬರಿಗೊಬ್ಬರು ವೈರಿಗಳು, ಅದೂ ದೇವರಿಗೆ ಲಂಚದ ಆಮಿಶವೊಡ್ಡುತ್ತ. ಭಾರತೀಯರು ಆಂಗ್ಲರ ಅವಧಿಯಿಂದಲೂ ಬಕ್ಷೀಸ್ˌ ಚಾಯ್ ಪಾನˌ ನಾಷ್ಟಾ ಪಾನಿ ವಿಷಯದಲ್ಲೂ ಸುಪ್ರಸಿದ್ಧರು. ಇವೆಲ್ಲ ಭ್ರಷ್ಟತೆಯ ವಿವಿಧ ಮುಖಗಳು.
ಹೌದು ಮೇಲ್ನೋಟಕ್ಕೆ ಆ ನ್ಯೂಜಿಲ್ಯಾಂಡ್ ಪ್ರಜೆಯ ಅನಿಸಿಕೆ ನಿಜವಾದದ್ದೇ. ಭಾರತವನ್ನು ಸುದೀರ್ಘ ಅವಧಿಯವರೆಗೆ ಕಪಿಮುಷ್ಠಿಯಲ್ಲಿಟ್ಟುಕೊಂಡಿರುವ ಕರ್ಮಠ ವೈದಿಕರು ಈ ತರಹದ ಭ್ರಷ್ಟ ವ್ಯವಸ್ಥೆಗೆ ನಮ್ಮ ಮುಗ್ಧ ಜನರನ್ನು ದೂಡಿದ್ದರಲ್ಲಿ ಯಾವುದೇ ಅನುಮಾನಗಳಿಲ್ಲ. ಹಾಗಂತ ಭಾರತದಲ್ಲಿ ದಕ್ಷತೆ ಇರುವ, ಶುದ್ಧಹಸ್ತದ ಜನ ಇರಲೇ ಇಲ್ಲ ಎಂದಲ್ಲ. ಇಲ್ಲಿ ಭ್ರಷ್ಟಾಚಾರದ ವಿರುದ್ಧ ಕ್ರಾಂತಿಗಳೇ ನಡೆದಿಲ್ಲ ಅನ್ನಲಾಗುವುದಿಲ್ಲ. ವೈದಿಕರ ಈ ಭ್ರಷ್ಟಾಚಾರಕ್ಕೆ ಕಾರಣವಾಗಬಲ್ಲ ಸಂಸ್ಕೃತಿಗಳನ್ನು ವಿರೋಧಿಸಿಯೇ ನಮ್ಮ ನೆಲದಲ್ಲಿ ಜೈನˌ ಬೌದ್ಧ, ಸಿಖ್ ಮತ್ತು ಲಿಂಗಾಯತ ಧರ್ಮಗಳ ಉದಯವಾಗಿದ್ದನ್ನು ಅಲ್ಲಗಳೆಯಲಾಗದು. ಆದರೆ ತದನಂತರದಲ್ಲಿ ಈ ಅವೈದಿಕ ಧರ್ಮಗಳು ಎಷ್ಟರ ಮಟ್ಟಿಗೆ ವೈದಿಕ ಅನಿಷ್ಠಗಳ ಪ್ರಭಾವದಿಂದ ಹೊರಬಂದವು ಎನ್ನುವುದೂ ಅಷ್ಟೇ ಗಂಭೀರವಾಗಿ ಚಿಂತಿಸುವ ವಿಷಯವಾಗಿದೆ. ಏಕೆಂದರೆ ಯಾವ ಪುರೋಹಿತಶಾಹಿ ವ್ಯವಸ್ಥೆಯನ್ನು ಬಸವಣ್ಣನವರು ಅಲ್ಲಗಳೆದರೋ ಅದೇ ಅವರ ಅನುಯಾಯಿಗಳೆಂದು ಹೇಳಿಕೊಳ್ಳುವ ಜನ ಬಸವಣ್ಣನವರ ತತ್ವಗಳನ್ನು ಗಾಳಿಗೆ ತೂರಿ ಐಕ್ಯಮಂಟಪದಲ್ಲಿಯೇ ದಕ್ಷಿಣೆ ಪಡೆಯುವುದನ್ನು, ಕಾಣಿಕೆ ಎತ್ತುವುದನ್ನು ನಾವು ನೋಡುತ್ತಿದ್ದೇವೆ.
ಶರಣರ ನಿಲುವು: ಕಪ್ಪು ಹಣ ಮತ್ತು ಭ್ರಷ್ಟಾಚಾರದ ಬಗ್ಗೆ ಶರಣರ ನಿಲುವು ಸ್ಪಷ್ಟವಾಗಿಯೇ ಇತ್ತು. ಅವರೆಂದೂ ಅಗತ್ಯಕ್ಕಿಂತ ಹೆಚ್ಚಿನ ಸಂಪತ್ತು ಸಂಗ್ರಹಿಸುವುದನ್ನು ಸಹಿಸಿಕೊಳ್ಳಲಿಲ್ಲ. ರಾಜಬೊಕ್ಕಸಕ್ಕೆ ತೆರಿಗೆ ವಂಚಿಸುವುದನ್ನು ಪ್ರೋತ್ಸಾಹಿಸಲಿಲ್ಲ. ಶರಣರ ಅನೇಕ ವಚನಗಳಲ್ಲಿ ಇದು ಧ್ವನಿಸಿದೆ.
ಶರಣರ ಚಳವಳಿ ಒಂದು ಸರ್ವಾಂಗೀಣ ಕ್ರಾಂತಿ. ಭಕ್ತಿˌ ಸಾಮಾಜಿಕ ಸುಧಾರಣೆˌ ವೈಚಾರಿಕ ಪ್ರಜ್ಞೆ ಮತ್ತು ಆರ್ಥಿಕ ಅಚ್ಚುಕಟ್ಟುತನ ವಚನ ಚಳವಳಿಯ ಬಹುಮುಖ್ಯವಾದ ವಿಷಯಗಳು.
ಶರಣರು ಕಾಯಕ ಮತ್ತು ದಾಸೋಹ ಎನ್ನುವ ಎರಡು ಹೊಸ ಜೀವನ ಕ್ರಮಗಳನ್ನು ಮಾನವ ಕುಲಕ್ಕೆ ನೀಡಿದರು. ಕಾಯಕವು ಶ್ರಮ ಅಥವಾ ದುಡಿಮೆಯನ್ನು ಪ್ರತಿನಿಧಿಸಿದರೆ ದಾಸೋಹ ಅಗತ್ಯಕ್ಕಿಂತ ಹೆಚ್ಚಿನ ಸಂಪಾದನೆ ಮಾಡಿದಲ್ಲಿ ಅದನ್ನು ಸಾಮಾಜಿಕ ಕೆಲಸಗಳಿಗೆ ಸದ್ವಿನಿಯೋಗ ಮಾಡಬೇಕು ಎಂದು ಹೇಳುತ್ತದೆ. ಅಂದರೆ ಶರಣರು ಶ್ರಮದ ದುಡಿಮೆಯನ್ನು ಪ್ರೋತ್ಸಾಹಿಸಿದ್ದಾರೆ ಮತ್ತು ಅಗತ್ಯಕ್ಕಿಂತ ಹೆಚ್ಚಿನ ಹಣ ತಮ್ಮಲ್ಲಿರಿಸಿಕೊಳ್ಳುವುದನ್ನು ವಿರೋಧಿಸಿದ್ದಾರೆ. ಆ ಮೂಲಕ ಶರಣರು ಭ್ರಷ್ಟಾಚಾರ ಮತ್ತು ಕಪ್ಪುಹಣ ಸಂಗ್ರಹದ ಕಡು ವೈರಿಗಳಾಗಿದ್ದುದು ಜನಜನಿತ.
ದೇವರಿಗೆ ಹರಕೆ ಮಾಡಿಕೊಳ್ಳುವ, ದೇವರಿಗೆ ಕಪ್ಪು ಕಾಣಿಕೆ ನೀಡಿ ಪ್ರತಿಯಾಗಿ ಆತನಿಂದ ಸಹಾಯ ನಿರೀಕ್ಷಿಸುವ ವೈದಿಕರ ಕರ್ಮಠ ಪದ್ಧತಿಗಳನ್ನು ಶರಣರು ಖಂಡತುಂಡವಾಗಿ ಖಂಡಿಸಿದ್ದಾರೆ. “ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯ…” ಎನ್ನುವ ಮೂಲಕ ದೇಗುಲ ಸಂಸ್ಕೃತಿˌ ಮೂರ್ತಿಪೂಜೆ ಮತ್ತು ಪುರೋಹಿತ ಮಧ್ಯವರ್ತಿತ್ವದ ಅಮಾನುಷ ಮೌಢ್ಯಗಳನ್ನು ಪ್ರಬಲವಾಗಿ ವಿರೋಧಿಸಿದ್ದಾರೆ. ಬಸವಣ್ಣನವರು ಪವಾಡಗಳ ಮೂಲಕ ಬಿಜ್ಜಳನ ಭಂಡಾರವನ್ನು ತುಂಬಿಸಿದರೆಂಬ ಕಥೆಯ ಮೂಲ ಸಾರವೇ ಕಾಯಕ ಮತ್ತು ದಾಸೋಹ ಪರಿಕಲ್ಪನೆಗಳ ಮೌಲ್ಯಯುಕ್ತ ಅನುಷ್ಠಾನ. ಕಾಯಕ ನಿಷ್ಠೆಯ ಮೂಲಕ ರಾಜ್ಯವೊಂದರ ಖಜಾನೆಯನ್ನು ನಿರಾಯಾಸವಾಗಿ ತುಂಬಿಸಬಹುದು ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.
ತೆರಿಗೆ ವಂಚನೆ ಸಲ್ಲದು:
ಭಂಡವ ತುಂಬಿದ ಬಳಿಕ
ಸುಂಕವ ತೆತ್ತಲ್ಲದೆ ಹೋಗಬಾರದು
ಕಳ್ಳ ನಾಣ್ಯ ಸುಲಿಗೆಗೆ ಸಲ್ಲದು
ಕಳ್ಳನಾಣ್ಯವ ಸಲಲಿಯರಯ್ಯˌ
ಭಕ್ತಿಯೆಂಬ ಭಂಡಕ್ಕೆ ಜಂಗಮವೆ ಸುಂಕಿಗ ಕೂಡಲಸಂಗಮದೇವ.
ಬಸವಣ್ಣನವರ ಮೇಲಿನ ವಚನದಲ್ಲಿ ತೆರಿಗೆ ವಂಚನೆ ಸಲ್ಲದೆನ್ನುವ ಸಂದೇಶ ಬಹು ಸ್ಪಷ್ಟವಾಗಿ ಮೂಡಿಬಂದಿದೆ. ಒಮ್ಮೆ ಗಾಡಿ ಹೇರಿದ ಸರಕು ಮಾರುಕಟ್ಟೆಯ ಸಾಗಣೆಯಲ್ಲಿ ಸುಂಕ ಕಟ್ಟಿಯೇ ಮುಂದೆ ಸಾಗಬೇಕು. ತೆರಿಗೆ ವಂಚನೆ ದೇಶ ದ್ರೋಹ ಎಂಬುದನ್ನು ಅಂದೇ ತಿಳಿಸಿದ್ದಾರೆ. ಅದೇ ರೀತಿ ಕಳ್ಳ ಹಣದ ಸಂಗ್ರಹ ಯೋಗ್ಯವಾದದ್ದಲ್ಲ ಎನ್ನುವ ಸಂದೇಶವನ್ನು ಆಧ್ಯಾತ್ಮ ಸಾಧನೆಯೊಡನೆ ಹೋಲಿಕೆ ಮಾಡುವ ರೀತಿ ಕೂಡ ಬಹು ಮಾರ್ಮಿಕವಾಗಿದೆ.
ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ,
ಇರುಳೆಲ್ಲ ನಡೆದನಾ ಸುಂಕಕಂಜಿˌ
ಕಳವೆಯಲ್ಲ ಹೋಗಿ ಬರಿ ಗೋಣಿ ಉಳಿಯಿತ್ತುˌ
ಅಳಿಮನದವನ ಭಕ್ತಿ ಇಂತಾಯಿತು ರಾಮನಾಥ.
ದಾಸಿಮಯ್ಯನವರ ಮೇಲಿನ ವಚನ ತೆರಿಗೆ ವಂಚಕನ ಮನಸ್ಥಿತಿ ಮತ್ತು ಆತನಿಗೆ ಕೊನೆಗೆ ಆಗಬಹುದಾದ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಗೋಣಿಚೀಲದಲ್ಲಿ ಸರಕನ್ನು ತುಂಬಿ ರಾತ್ರಿಯಿಡೀ ತೆರಿಗೆ ವಂಚಿಸಿ ಸಂತೆಗೆ ಸಾಗಿಸುವ ಯೋಚನೆಯಲ್ಲಿರುವ ಭ್ರಷ್ಟನೊಬ್ಬನ ಮನಸ್ಥಿತಿˌ ಕೊನೆಗೆ ತೆರಿಗೆ ನಿರೀಕ್ಷಕರ ಕೈಯಲ್ಲಿ ಸಿಕ್ಕಿಹಾಕಿಕೊಂಡಾಗ ಉಳಿಯುವ ಬರಿದಾದ ಗೋಣಿಚೀಲದ ಪರಿಯನ್ನು ಆಶೆಬುರಕ ವ್ಯಕ್ತಿಯ ಕೊನೆಗಾಲದ ಪರಿಸ್ಥಿತಿಯಾಗಿ ಶರಣರು ಚಿತ್ರಿಸಿದ್ದಾರೆ.
ಆಶೆಯೆಂಬುದು ಅರಸಿಂಗಲ್ಲದೆ
ಶಿವಭಕ್ತರಿಗುಂಟೆ ಅಯ್ಯ?
ರೋಷವೆಂಬುದು ಯಮಧೂತರಿಗಲ್ಲದೆ
ಅಜಾತರಿಗುಂಟೆ ಅಯ್ಯ?
ಈಸಕ್ಕಿಯಾಸೆ ನಿಮಗೇಕೆ ಈಶ್ವರನೊಪ್ಪ
ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ
ದೂರ ಮಾರಯ್ಯ.
ಮೇಲಿನ ವಚನದಲ್ಲಿ ಆಯ್ದಕ್ಕಿ ಮಾರಯ್ಯನವರ ಪತ್ನಿ ಲಕ್ಕಮ್ಮ ಅತಿಯಾಸೆಯನ್ನು ಸೊಗಸಾಗಿ ಧಿಕ್ಕರಿಸಿದ್ದಾಳೆ. ಆಶೆಯೆಂಬುದು ರಾಜಕಾರಣಿಗಳಿಗಲ್ಲದೆ ಸುಸಂಸ್ಕೃತರಾದ ಶಿವಭಕ್ತರಿಗೆ ಇರಬಾರದು ಎಂದು ಸ್ಪಷ್ಟವಾಗಿ ನುಡಿಯುತ್ತಾಳೆ. ಆಸೆಯೇ ಕಪ್ಪುಹಣದ ಸಂಗ್ರಹಕ್ಕೆ ಮೂಲ ಪ್ರೇರಣೆ ಎಂಬುದು ಶರಣರ ಖಚಿತ ನಿಲುವಾಗಿದೆ. ದೇವನ ಭಕ್ತಿಯಲಿ ನಿರತವಾದ ಶರಣ ಸಂಕುಲಕ್ಕೆ ಹಣದ ಆಸೆಯೆಂಬುದು ನಗಣ್ಯವೆನ್ನುತ್ತಾರೆ ಶಿವಶರಣರು.
ಉಪಸಂಹಾರ:
ಶರಣರು ಕಾಯಕಕ್ಕೆ ಮೀರಿದ ಹಣಸಂಗ್ರಹ ಮತ್ತು ವಿನಿಯೋಗವನ್ನು ತಮ್ಮ ವಚನಗಳ ಮೂಲಕ ಬಹು ಹರಿತವಾಗಿ ಟೀಕಿಸಿದ್ದಾರೆ. ಆಶೆಬುರುಕುತನˌ ತೆರಿಗೆ ವಂಚನೆ, ಅಕ್ರಮ ಸಂಪತ್ತು ಮತ್ತು ಸಂಗ್ರಹಣೆಗಳನ್ನು ಸಮಾಜ ಘಾತುಕತನವೆಂದು ಪ್ರತಿಪಾದಿಸುತ್ತಾರೆ.
ವೈದಿಕರ ಸ್ವಾರ್ಥಪರ ಕರ್ಮಠ ಪದ್ದತಿಗಳು ಭ್ರಷ್ಟ ವ್ಯವಸ್ಥೆವೊಂದರ ಹುಟ್ಟಿಗೆ ಕಾರಣವಾದ ಸಂಕೀರ್ಣ ಕಾಲಘಟ್ಟದಲ್ಲಿ ಶರಣರ ವಚನ ಚಳುವಳಿ ಅಂತಹ ಅನಿಷ್ಠ ವ್ಯವಸ್ಥೆಯ ವಿರುದ್ಧ ಸಮರ ಸಾರಿ ಆರ್ಥಿಕ ಸಮಾನತೆಯ ಮೂಲಕವೇ ಸಾಮಾಜಿಕ ಸಮಾನತೆಯನ್ನು ತರಲು ಪ್ರಯತ್ನಿಸಿರುವುದು ಬಹುಶಃ ಭಾರತದ ಇತಿಹಾಸದಲ್ಲಿ ಅಪೂರ್ವವಾದ ಕೆಲಸ. ಶರಣರ ಈ ಆರ್ಥಿಕ ಚಳವಳಿಗೆ ಸರಿಗಟ್ಟುವ ಮತ್ತೊಂದು ಆಂದೋಲನ ಈ ಮಣ್ಣಲ್ಲಿ ಘಟಿಸಿದ ಉದಾಹರಣೆಯಿಲ್ಲ. ಹಾಗಾಗಿ ಕಲ್ಯಾಣದ ಕ್ರಾಂತಿ ಈ ದೇಶದ ಮೊದಲ ಸರ್ವಾಂಗೀಣ ಆರ್ಥಿಕ ಕ್ರಾಂತಿ ಎಂಬ ಸತ್ಯವನ್ನು ಅಲ್ಲಗಳೆಯಲಾಗದು.