ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
“ಬಹಳ ಜನರ ದೃಷ್ಟಿಯಲ್ಲಿ ನಾನು ಏನಾಗಿದ್ದೇನೆ- ನಗಣ್ಯ, ವಿಲಕ್ಷಣ ಅಥವಾ ಬೇಡದ ಮನುಷ್ಯ – ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲದ ಮತ್ತು ಎಂದಿಗೂ ಅದನ್ನು ಹೊಂದಿರದ ವ್ಯಕ್ತಿ; ಸಂಕ್ಷಿಪ್ತವಾಗಿ ಹೇಳುವುದಾದರೆ ನಿಕೃಷ್ಟರಲ್ಲಿ ನಿಕೃಷ್ಟ. ಸರಿ, ಹಾಗಾದರೆ- ಇದು ಸಂಪೂರ್ಣವಾಗಿ ನಿಜವಾಗಿದ್ದರೂ, ಅಂತಹ ವಿಲಕ್ಷಣ, ಅಂತಹ ಬೇಡದ ವ್ಯಕ್ತಿಯ ಹೃದಯದಲ್ಲಿ ಏನಿತ್ತು ಎನ್ನುವುದನ್ನು ನಾನು ನನ್ನ ಕೆಲಸದ ಮೂಲಕ ಒಂದು ದಿನ ತೋರಿಸ ಬಯಸುತ್ತೇನೆ. ಇದು ಅಸಮಾಧಾನಕ್ಕಿಂತ ಪ್ರೀತಿಯನ್ನು, ಉತ್ಸಾಹಕ್ಕಿಂತ ಪ್ರಶಾಂತತೆಯನ್ನು ಆಧರಿಸಿ ನಿಂತ ನನ್ನ ಮಹತ್ವಾಕಾಂಕ್ಷೆಯಾಗಿದೆ. ನಾನು ಪದೇಪದೇ ಹತಾಶೆಯ ಆಳಕ್ಕೆ ಜಾರುತ್ತಿದ್ದರೂ ನನ್ನೊಳಗೆ ಇನ್ನೂ ಶಾಂತತೆ, ಶುದ್ಧ ಸಾಮರಸ್ಯ ಮತ್ತು ಸಂಗೀತವಿದೆ… ಅತ್ಯಂತ ಬಡ ಗುಡಿಸಲುಗಳಲ್ಲಿ, ಅತ್ಯಂತ ಕೊಳಕು ಮೂಲೆಗಳಲ್ಲಿ ನನಗೆ ವರ್ಣಚಿತ್ರಗಳು ಅಥವಾ ರೇಖಾಚಿತ್ರಗಳು ಕಾಣುತ್ತವೆ ಮತ್ತು ನನ್ನ ಮನಸ್ಸು ಹತ್ತಿಕ್ಕಲಾಗದ ಆವೇಗದೊಂದಿಗೆ ಈ ವಿಷಯಗಳತ್ತ ಧಾವಿಸುತ್ತದೆ.”
-ವಿನ್ಸೆಂಟ್ ವ್ಯಾನ್ ಗೊ (1853-1890)
ಅದು ಸುಂದರವಾದ ತುಂತುರು ಮಳೆಯ ಮುಂಜಾನೆ. ವಾರದ ಬಿಸಿಯನ್ನು ಹಿಂದಿನ ರಾತ್ರಿಯ ಜೋರು ಮಳೆ ಮಾಯಮಾಡಿತ್ತು. ಅವತ್ತು ಬೆಂಗಳೂರಿನಲ್ಲಿ ತಿಂಗಳ ಕಾಲ ನಡೆದ ವಿನ್ಸೆಂಟ್ ವ್ಯಾನ್ ಗೊ 360o ಲೈವ್ ಚಿತ್ರಕಲಾ ಪ್ರದರ್ಶನದ ಕೊನೆಯ ದಿನ. (ಈತನ Vincent Van Gogh ಹೆಸರಿನ ಉಚ್ಚಾರಣೆಯಲ್ಲಿ ಭಿನ್ನತೆಯಿದ್ದು- ಡಚ್ ಉಚ್ಚಾರಣೆಯಲ್ಲಿ ವಿನ್ಸೆಂಟ್ ವ್ಯಾನ್ ಹಾಹ್, ಬ್ರಿಟನ್ ಉಚ್ಚಾರಣೆಯಲ್ಲಿ ವ್ಯಾನ್ ಗಾಫ್ ಮತ್ತು ಅಮೆರಿಕನ್ ಉಚ್ಚಾರಣೆಯಲ್ಲಿ ವಿನ್ಸೆಂಟ್ ವ್ಯಾನ್ ಗೊ ಎಂದಿರುತ್ತದೆ). ಅದು ಕಲೆ ಮತ್ತು ತಂತ್ರಜ್ಞಾನದ ಅದ್ಭುತ ಸಮ್ಮಿಳನ, ಮುಂಬೈ ಮತ್ತು ದೆಹಲಿ ಮೆಟ್ರೋಪಾಲಿಟನ್ ನಗರಗಳಲ್ಲಿ ಕಂಡುಬಂದ ಪ್ರಚಂಡ ಪ್ರತಿಕ್ರಿಯೆಯ ನಂತರ ಪ್ರದರ್ಶನವು ಬೆಂಗಳೂರಿಗೆ ಬಂದಿತ್ತು. ಇಲ್ಲಿಗೆ ಬರುವುದಕ್ಕಿಂತ ಮೊದಲೇ ಅದರ ಬಗ್ಗೆ ಕಾತರರಾಗಿದ್ದ ನಮಗೆ ಕೊನೆಯ ದಿನದ ತನಕ ಒಂದಲ್ಲಾ ಒಂದು ಕಾರಣದಿಂದ ಹೋಗಲು ಸಾಧ್ಯವಾಗಿರಲಿಲ್ಲ. ಮನೆಯಿಂದ ಪ್ರದರ್ಶನವಿದ್ದ ಭಾರತೀಯಾ ಮಾಲ್ ತಲುಪುವ ಮೂವತ್ತು ನಿಮಿಷಗಳ ಪ್ರಯಾಣದ ಉದ್ದಕ್ಕೂ ಮಗಳು ಚಿತ್ಕಳೆ ವರ್ಣಚಿತ್ರಕಾರ ವಿನ್ಸೆಂಟ್ ವ್ಯಾನ್ ಗೊ ಕುರಿತು ತನ್ನ ತಂಗಿ ತರಂಗಿಣಿಗೆ ಹಾಗೂ ನನ್ನ ಅಮ್ಮಳಿಗೆ ಒಂದೇ ಸಮನೆ ಕಕ್ಕುಲಾತಿಯಿಂದ ಹೇಳುತ್ತಲೇ ಇದ್ದಳು. ತನ್ನ ಜೀವಿತಾವಧಿಯಲ್ಲಿ ಕೆಲವೇ ಕೆಲವು ಜನರಿಗೆ ಮಾತ್ರ ಪರಿಚಿತವಿದ್ದ ಚಿತ್ರಕಾರ ವಿನ್ಸೆಂಟ್ ಇವತ್ತು ಪ್ರಪಂಚದಲ್ಲಿ ಅತ್ಯಂತ ಜನಪ್ರಿಯ ಚಿತ್ರಕಾರ. ಅವನು ಬದುಕಿದ್ದಾಗ ಮಾರಾಟವಾದದ್ದು ಒಂದೇ ಒಂದು ಚಿತ್ರ, ಅದೂ 400 ಫ್ರಾಂಕ್ ಗಳಿಗೆ, ಅಂದರೆ ಈಗ ಅದರ ಬೆಲೆ ಬರಿ 328ರೂ! ಇವತ್ತಿನ ದಿನ ಆತನ ವರ್ಣಚಿತ್ರಗಳಿಗೆ ಮಿಲಿಯಗಟ್ಟಲೇ ಡಾಲರ್! ಬಡತನವನ್ನೇ ಹಾಸಿಕೊಂಡು, ಹೊದ್ದುಕೊಂಡು ಆ ಕೊರಗಿನಲ್ಲೇ ಗತಿಸಿಹೋದ ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿದ್ದ 19ನೇ ಶತಮಾನದ ಈ ಡಚ್ ಪೋಸ್ಟ್-ಇಂಪ್ರೆಷನಿಸ್ಟ್ ಚಿತ್ರಕಾರ ವಿನ್ಸೆಂಟ್, ಇವತ್ತು ಎಲ್ಲಾ ದೇಶಗಳ, ಎಲ್ಲಾ ವಯೋಮಾನದವರ ಪ್ರೀತಿ-ಆದರಕ್ಕೆ ಪಾತ್ರನಾದದ್ದಾದರೂ ಯಾಕೆ ಎಂದು ಯೋಚಿಸತೊಡಗಿದೆ.
ಪ್ರದರ್ಶನದ ಗೋಡೆಯ ಉದ್ದಗಲಕ್ಕೂ ಹಾಸಿಕೊಂಡ ಅವನ ವರ್ಣಚಿತ್ರಗಳು, ಅವುಗಳ ಹಿನ್ನೆಲೆಯಲ್ಲಿನ ಆತನ ಬದುಕಿನ ಸಂದರ್ಭಗಳನ್ನು ಓದಿಕೊಳ್ಳುತ್ತಿದ್ದ ಮಕ್ಕಳ ಕಣ್ಣುಗಳು ತೇವಗೊಳ್ಳುತ್ತಿದ್ದವು. ಇದೇ ಮೊದಲ ಬಾರಿಗೆ ಅವನ ಹೆಸರು ಕೇಳಿದ ಅಮ್ಮ ಮೌನಕ್ಕೆ ಜಾರಿದ್ದಳು. ಜಗತ್ತಿನಲ್ಲಿ ಎಂತೆಂಥ ಚಿತ್ರಕಾರರು ಇದ್ದಾರೆ, ಆಗಿ ಹೋಗಿದ್ದಾರೆ. ಅವರ ಕಲಾ ನೈಪುಣ್ಯತೆಯನ್ನು ಜನ ಕೊಂಡಾಡಿದ್ದಾರೆ, ಆರಾಧಿಸಿದ್ದಾರೆ. ಆದರೆ ವಿನ್ಸೆಂಟ್ ಮಕ್ಕಳಾದಿಯಾಗಿ, ಎಲ್ಲಾ ವಯೋಮಾನದವರ (ಪ್ರದರ್ಶನಕ್ಕೆ ವಯೋವೃದ್ಧರೂ ಇದ್ದರು) ವಿಶೇಷ ಗಮನಕ್ಕೆ ಪಾತ್ರನಾಗಿದ್ದಾನೆ. ಆತನ ಅನುಭಾವಿಕ ಮಾತು, ಪ್ರಕೃತಿ ಮೇಲಿನ ಅಗಾಧ ಪ್ರೀತಿ, ಮಾನವೀಯ ಗುಣ, ಕೆಲಸದ ಉತ್ಸಾಹ, ಮಾನಸಿಕ ಖಿನ್ನತೆ, ಇವುಗಳನ್ನು ವ್ಯಕ್ತಪಡಿಸುವ ವರ್ಣಚಿತ್ರಗಳು… ಎಲ್ಲ ಜನರ ಆಂತರ್ಯದೊಂದಿಗೆ ಅನುರಣನಗೊಳ್ಳುತ್ತವೆ. ಡಿಜಿಟಲೀಕರಣದ ನಂತರ ಇವತ್ತು ಕಲೆಯು ಹಿಂದೆಂದಿಗಿಂತಲು ಹೆಚ್ಚು ಜನಸಾಮಾನ್ಯರಿಗೆ ಲಭ್ಯವಾಗಿದೆ. ವಿನ್ಸೆಂಟನ ಚಿತ್ರಗಳು ಬಣ್ಣಗಳ ವಿಶಿಷ್ಟ ಬಳಕೆ ಮತ್ತು ರೂಪದ ವಿಶಿಷ್ಟ ವಿಧಾನದಿಂದಾಗಿ ಡಿಜಿಟಲೀಕರಣಕ್ಕೆ ಹೇಳಿಮಾಡಿಸಿದಂತಿವೆ. ನೋಡುಗರನ್ನು ಬೆರಗುಗೊಳಿಸುವ ಈ ವಿನೂತನ ಪ್ರದರ್ಶನದಲ್ಲಿ ನಾವು ನಿಂತುಕೊಂಡ ನೆಲ ಮತ್ತು ಕೊಠಡಿಯ ಸುತ್ತಲಿನ ನಾಲ್ಕೂ ಗೋಡೆಗಳ ಮೇಲೆ ವಿನ್ಸೆಂಟನ ಮೇರುಕೃತಿಗಳನ್ನು ವಿಸ್ಮಯಕಾರಿಯಾಗಿ ಬಂದು ಹೋಗುವಂತೆ ಯೋಜಿಸಲಾಗಿತ್ತು. ಅವುಗಳ ವಿಶಿಷ್ಟ ಬಣ್ಣಗಳು, ರೇಖೆಗಳು, ಆವರಣಗಳು ನಮ್ಮ ಸುತ್ತಮುತ್ತ, ಕಾಲಡಿ, ಮೈಮೇಲೆ ಮೆಲ್ಲಮೆಲ್ಲನೆ ಚಲಿಸಿದಂತೆ ಆತನ ಪ್ರಖ್ಯಾತ ಕಲೆ, ಪ್ರಬುದ್ಧ ಬರಹ, ಪ್ರಕ್ಷುಬ್ಧ ಬದುಕು ಒಟ್ಟೊಟ್ಟಾಗಿ ನಮ್ಮನ್ನು ಆಕ್ರಮಿಸಿಕೊಳ್ಳತೊಡಗಿದವು.
ಇವತ್ತು ರೋಗ ನಿವಾರಣಾ ಥೆರಪಿ ಮತ್ತು ಔಷಧಿಗಳಿಂದ ಗುಣಪಡಿಸಲು ಸಾಧ್ಯವಾಗುವ ಬೈಪೋಲಾರ್ ಡಿಸಾರ್ಡರ್ ಎನ್ನುವ ದೀರ್ಘಕಾಲದ ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿದ್ದ ವಿನ್ಸೆಂಟ್ ಕೇವಲ ವರ್ಣಚಿತ್ರಕಾರನಾಗಿರಲಿಲ್ಲ. ಅದಕ್ಕಿಂತ ಮಿಗಿಲಾಗಿ ಆತ ಜಗತ್ತನ್ನು ವಿಭಿನ್ನವಾಗಿ ಕಾಣಬಲ್ಲ ತತ್ವಜ್ಞಾನಿ ಹಾಗೂ ದಾರ್ಶನಿಕ. ಅವನೊಳಗೊಬ್ಬ ಹೃದಯಸ್ಪರ್ಶಿ ಬರಹಗಾರನೂ ಇದ್ದ. ತನ್ನ ಕುಟುಂಬ, ಅದರಲ್ಲೂ ತಮ್ಮ ಥಿಯೋನಿಗೆ ಮತ್ತು ಸ್ನೇಹಿತರಿಗೆ ಬರೆದ ಪತ್ರಗಳಲ್ಲಿ ಅವನ ಅಂತರಂಗವನ್ನು ಓದಬಹುದು. ಅವನ ಪತ್ರಗಳು ವರ್ಣಚಿತ್ರಗಳಂತೆಯೇ ಪ್ರಸಿದ್ಧವಾಗಿವೆ. ಚಿತ್ತಕ್ಷೋಭೆಗೆ ಸಿಲುಕಿದ್ದ ಮಹಾನ್ ಪ್ರತಿಭೆಯೊಂದರ ಮನಸ್ಸಿನ ಪರಿಶುದ್ಧ ಒಳನೋಟವನ್ನವು ತೋರಿಸುತ್ತವೆ. “ನಾನು ಈ ಶಾಪಗ್ರಸ್ತ ರೋಗವಿಲ್ಲದೆ ಕೆಲಸ ಮಾಡಬಹುದಾದರೆ, ಏನೇನೆಲ್ಲಾ ಮಾಡಬಹುದಿತ್ತು” ಎಂದು ತನ್ನ ಕೊನೆಯ ಪತ್ರವೊಂದರಲ್ಲಿ ವಿನ್ಸೆಂಟ್ ಹೇಳಿಕೊಂಡಿದ್ದಾನೆ. ಖಿನ್ನತೆಯ ದಾಳಿಗೆ ಒಳಗಾಗುತ್ತಿದ್ದರೂ ಬಹುತೇಕ ಸಂದರ್ಭಗಳಲ್ಲಿ ಆತನಲ್ಲಿ ಸ್ಪಷ್ಟತೆಯಿತ್ತು, ತರ್ಕಬದ್ಧ ತಿಳುವಳಿಕೆಯಿಂದ ಜಾಗೃತನಾಗಿರುತ್ತಿದ್ದ. ಚೆನ್ನಾಗಿ ಓದಿಕೊಂಡಿದ್ದ ಆತ ವಿವೇಕಿಯೂ, ಬುದ್ಧಿವಂತನೂ ಆಗಿದ್ದ. ಕಲೆ ಮತ್ತು ಕಲೆಗಾರರ ಬಗ್ಗೆ ಅಪರಿಮಿತ ಜ್ಞಾನವಿತ್ತು. ಮಾತನಾಡುತ್ತಿದ್ದುದು ತೀರಾ ಕಡಿಮೆಯಾದರೂ ನಾಲ್ಕು ಭಾಷೆಗಳನ್ನು ಬಲ್ಲ ಆತ ಜಾಣ ಮಾತುಗಾರನೂ ಆಗಿದ್ದ. ಆಗಾಗ ಅವನನ್ನು ಸಂಪರ್ಕಿಸಿ, ಪತ್ರ ವ್ಯವಹಾರ ಇಟ್ಟುಕೊಂಡಿದ್ದ ಸ್ನೇಹಿತರೂ ಇದ್ದರು. ಆದರೂ ಈ ಜಗತ್ತಿನಲ್ಲಿ ತನ್ನ ಸ್ಥಾನವೇನು ಎನ್ನುವುದನ್ನು ಅರ್ಥಮಾಡಿಕೊಳ್ಳಲು ಆತ ಚಡಪಡಿಸುತ್ತಿದ್ದ. ಕಲೆಯಿಂದ ತನ್ನ ಅನ್ನ ತಾನು ಸಂಪಾದಿಸಲಾಗುತ್ತಿಲ್ಲವೆನ್ನುವ ಅಸಹಾಯಕತೆ, ತುರ್ತಾಗಿ ತಾನೇನೋ ಹೇಳಲಿಕ್ಕಿದೆ ಎನ್ನುವ ಬಯಕೆ, ವಿನ್ಸೆಂಟ್ ಹಗಲು-ರಾತ್ರಿ ಎನ್ನದೆ ಚಿತ್ರಗಳನ್ನು ಬಿಡಿಸುವಂತೆ ಮಾಡಿದವು, ಅವು ಅಂತಿಂಥ ಚಿತ್ರಗಳಲ್ಲ, ಪ್ರತಿಯೊಂದರಲ್ಲೂ ಅಗಾಧವಾದ ತಲ್ಲೀನತೆ. ಈ ಉತ್ತೇಜಕ ಗುಣವೇ ಅವನ ವರ್ಣಚಿತ್ರಗಳು ವೀಕ್ಷಕರ ಗಮನವನ್ನು ತೀವ್ರವಾಗಿ ಸೆಳೆಯಲು ಕಾರಣವಾದದ್ದು!
ವಿನ್ಸೆಂಟನದು ಸ್ವಪ್ರಯತ್ನದಿಂದ ಕಲಿತ ಕಲೆಯಾಗಿತ್ತು. ಆರಂಭದ ಜೀವನೋಪಾಯದ ಪ್ರಯತ್ನಗಳೆಲ್ಲಾ ಸೋತಾಗ ಕೊನೆಗೆ ಆತ ಹಿಡಿದದ್ದು ಬಣ್ಣ ಮತ್ತು ಬ್ರಷ್. ಅದೂ 27ನೆಯ ವಯಸ್ಸಿನಲ್ಲಿ. ಮುಂದೆ ಆತ ಬದುಕಿದ್ದು ಹತ್ತೇ ವರ್ಷ! ತನ್ನದೇ ಶೈಲಿಯನ್ನು ಕಂಡುಕೊಂಡದ್ದು ಕೊನೆಯ ನಾಲ್ಕು ವರ್ಷ. ಅವನು ಪ್ಯಾರಿಸಿನಲ್ಲಿ ಕಳೆದ ಕೊನೆಯ ಎರಡು ವರ್ಷಗಳಂತೂ ಚಿತ್ರಕಲೆಯ ದೃಷ್ಟಿಯಲ್ಲಿ ವಿಸ್ಮಯ ಹುಟ್ಟಿಸುವಂತಿವೆ. ದಶಕಕ್ಕೂ ಕಡಿಮೆ ಅವಧಿಯಲ್ಲಿ ಆತ ಬಿಡಿಸಿದ ಚಿತ್ರಗಳ ಸಂಖ್ಯೆ 2100, ಅದರಲ್ಲಿ ತೈಲವರ್ಣದ ಚಿತ್ರಗಳು 860. “ಯಾವುದನ್ನು ನನಗೆ ಇನ್ನೂ ಮಾಡಲು ಸಾಧ್ಯವಾಗಿಲ್ಲವೋ, ಅದನ್ನು ಹೇಗೆ ಮಾಡಬೇಕೆಂದು ಕಲಿಯಲು ಅಂತಹುದನ್ನೇ ನಾನು ಸದಾ ಕೈಗೆತ್ತಿಕೊಳ್ಳುತ್ತೇನೆ” ಎನ್ನುವ ಛಲ. ವಿನ್ಸೆಂಟನಷ್ಟು ಕಠಿಣ ಪರಿಶ್ರಮದ ಕಲಾವಿದನೇ ಇಲ್ಲ ಎನ್ನುತ್ತಾರೆ. ಆತನ ಬಡತನದ ಒದ್ದಾಟಗಳು, ಚಿತ್ತ ವಿಕಲ್ಪಗಳು ಗಾಢ ನಿರಾಶೆಯ ಕೃತಿಗಳನ್ನು ಹುಟ್ಟಿಸದೇ ಅವು ಪ್ರಕೃತಿಯ ತಣ್ಣನೆಯ ಗಾಳಿಯಲ್ಲಿ ಲೀನವಾಗಿ, ಅದರ ಸೌಂದರ್ಯವನ್ನು ಕಾಣುವ ನೋಟವನ್ನು ನಮ್ಮೆದೆಗೆ ಧಾರೆ ಎರೆಯುತ್ತವೆ. ವರ್ಣಚಿತ್ರಕಾರನಾಗಿ ವಿನ್ಸೆಂಟನ ವೃತ್ತಿಜೀವನ ಚಿಕ್ಕದಾಗಿದ್ದರೂ ಅವನ ವರ್ಣಚಿತ್ರಗಳು ಕಲಾತ್ಮಕ ಅಭ್ಯಾಸ ಮತ್ತು ಶೈಲಿಗಳನ್ನು ಕ್ರಾಂತಿಗೊಳಿಸಿದವು. ವಿಷಯದ ಬಾಹ್ಯ ನೋಟಕ್ಕಿಂತ ಹೆಚ್ಚಿನದನ್ನು ತಿಳಿಸುವ ಅವನ ದೃಷ್ಟಿಯ ತೀವ್ರತೆ, ಅದ್ಭುತ ಬಣ್ಣದ ಸಂಯೋಜನೆ ಮತ್ತು ಅಸಾಧಾರಣ ತಂತ್ರಗಾರಿಕೆ ಇಪ್ಪತ್ತನೇ ಶತಮಾನದ ಕಲೆಯ ಮೇಲೆ ಆಳವಾದ ಪ್ರಭಾವವನ್ನು ಬೀರುವ ಮೇರುಕೃತಿಗಳನ್ನು ಸೃಷ್ಟಿಸಿದವು.
ಹೊರಳಿದ ಹಾದಿ
ಪ್ರಾಟೆಸ್ಟಂಟ್ ಪಾದ್ರಿಯ ಆರು ಮಕ್ಕಳಲ್ಲಿ ವಿನ್ಸೆಂಟ್ ಹಿರಿಯವ, ಹುಟ್ಟಿ ಬೆಳೆದದ್ದು ದಕ್ಷಿಣ ನೆದರ್‌ಲ್ಯಾಂಡ್ಸ್‌ನ ಬ್ರಬಂಟ್ ಪ್ರದೇಶದ ಸಣ್ಣ ಹಳ್ಳಿಯಲ್ಲಿ. ಸ್ವಭಾವತಃ ಗಂಭೀರ, ಶಾಂತ ಹಾಗೂ ಸಮಾಧಾನಚಿತ್ತನಾಗಿದ್ದ ಅವನಿಗೆ ಪ್ರಕೃತಿಯ ಮಧ್ಯೆ ಇರುವುದೆಂದರೆ ಪ್ರಾಣ, ಆದ್ದರಿಂದ ಊರ ಹೊರವಲಯದಲ್ಲಿ ಸುತ್ತುವ ಅಭ್ಯಾಸವಿತ್ತು. ಮುಂದೆ ಕಲಾ ವಿತರಕ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದರೂ ಆ ಉದ್ಯೋಗ ಕೈಹಿಡಿಯಲಿಲ್ಲ. ಪ್ರೀತಿಸಿದ ಹುಡುಗಿಯಿಂದಲೂ ನಿರಾಕರಣೆಗೆ ಒಳಗಾದ. ಜೀವನದ ಜಟಿಲತೆಯನ್ನು ಬಿಡಿಸಿಕೊಳ್ಳಲು ಧರ್ಮಶಾಸ್ತ್ರ ಅಧ್ಯಯನ ಮಾಡಿ ಸಹಾಯಕ ಧರ್ಮಬೋಧಕನಾದ. ಸಾಮಾನ್ಯವಾಗಿ ಆ ಸಂಸ್ಥೆಯು ಬೋಧಕರಿಗೆ ಶಿಕ್ಷೆ ವಿಧಿಸಲು ಕಲ್ಲಿದ್ದಲು ಗಣಿ ಪ್ರದೇಶಕ್ಕೆ ಕಳಿಸುತ್ತಿತ್ತು. ಆದರೆ ವಿನ್ಸೆಂಟ್ ತಾನೇ ಸ್ವಯಂಪ್ರೇರಿತನಾಗಿ ಹೋಗಿ, ಅಲ್ಲಿನ ರೋಗಿಗಳಿಗೆ ಧರ್ಮ ಬೋಧನೆ ನೀಡುತ್ತಾ, ಬಡ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸತೊಡಗಿದ. ಕೇವಲ ಬಾಯುಪದೇಶ ಅವನದಾಗಿರದೆ ತನಗೆ ಬರುತ್ತಿದ್ದ ಹಣವನ್ನೆಲ್ಲಾ ಅಲ್ಲಿನ ಬಡವರಿಗೆ ಹಂಚಿ ಬಿಡುತ್ತಿದ್ದ. ಬಿಡುವಿನ ವೇಳೆಯಲ್ಲಿ ಕಾರ್ಮಿಕರ ಶ್ರಮಜೀವನದ ರೇಖಾಚಿತ್ರಗಳನ್ನು ಬಿಡಿಸುತ್ತಿದ್ದ. ತಮ್ಮೊಂದಿಗೆ ಆಸರೆಯಾಗಿ ನಿಂತ ಅವನನ್ನು ಅಲ್ಲಿಯ ಜನ ಪ್ರೀತಿಯಿಂದ, ‘ಕಲ್ಲಿದ್ದಲ ಗಣಿಯ ಕ್ರೈಸ್ತ’ ಎಂದು ಕರೆಯುತ್ತಿದ್ದರು. ಬರಿಗೈಯ ಮಿಷನರಿಯಾಗಿದ್ದ ವಿನ್ಸೆಂಟನ ಮಾನವೀಯ ಸೇವೆಯ ಉತ್ಸಾಹ ಕಂಡು ಬೆಚ್ಚಿ ಬಿದ್ದ ಚರ್ಚ್ ಅವನನ್ನು ಕೆಲಸದಿಂದ ತೆಗೆದುಹಾಕಿತು. ಬದುಕುವ ದಾರಿ ತೋರದೆ ವಿನ್ಸೆಂಟ್ ಕಂಗಾಲಾದ, ಆಗ ಆತನ ನೆರವಿಗೆ ನಿಂತವನು ಆಪ್ತಗೆಳೆಯನಂತಿದ್ದ ತಮ್ಮ ಥಿಯೋ. ತನಗೆ ಬರೆಯುತ್ತಿದ್ದ ಪತ್ರದಲ್ಲಿ ಅಣ್ಣ ಬಿಡಿಸುತ್ತಿದ್ದ ಸ್ಕೆಚ್ಚುಗಳನ್ನು ಬಹುವಾಗಿ ಇಷ್ಟಪಡುತ್ತಿದ್ದ ಆತ, ಅಣ್ಣನಿಗೆ ಕಲೆಯಲ್ಲಿ ಮುಂದುವರೆಯುವ ಸಲಹೆ ನೀಡಿದ. ಕಲೆ ಜೀವನಕ್ಕೆ ಭದ್ರತೆ ಕೊಡುವುದಿಲ್ಲವೆನ್ನುವ ಕಾರಣಕ್ಕೆ ಮಗನ ಆಯ್ಕೆಯಿಂದ ತಾಯಿ-ತಂದೆ ಅಸಮಧಾನಗೊಂಡರೂ, ಯಾವ ತರಬೇತಿಯೂ ಇಲ್ಲದ, ತನ್ನಲ್ಲಿ ನಿಜವಾದ ಪ್ರತಿಭೆ ಇದೆಯೋ ಇಲ್ಲವೋ ಎನ್ನುವ ಖಾತ್ರಿಯೂ ಇಲ್ಲದ ವಿನ್ಸೆಂಟ್, ತಮ್ಮನ ಮಾತನ್ನು ನಂಬಿ, ಒಪ್ಪಿಕೊಂಡ. ಬೇರೆಯವರ ಚಿತ್ರಗಳನ್ನು ಗಮನಿಸುತ್ತಾ ಚಿತ್ರಕಲೆಯ ಮೂಲಭೂತ ಸೂತ್ರಗಳನ್ನು ಕಲಿತ. ಫ್ರೆಂಚನ ಹೆಸರಾಂತ ಚಿತ್ರಕಾರ ಮಿಲೆಟ್ ಹಾಗೂ ಆತನ ಸಮಕಾಲೀನರ ವಾಸ್ತವಿಕ ವರ್ಣಚಿತ್ರಗಳು ಮತ್ತು ಜಪಾನೀಯರ ವುಡ್ ಬ್ಲಾಕ್ ಮುದ್ರಣಗಳ ಮಾದರಿಗಳು ಆತನನ್ನು ಪ್ರಭಾವಿಸಿದವು.
ಮೊದಲು ಧರ್ಮದೊಂದಿಗೆ, ನಂತರದಲ್ಲಿ ಬಡವರ ದಾರಿದ್ರ್ಯದ ವಾಸ್ತವತೆಗೆ ವಿನ್ಸೆಂಟ್ ಎಷ್ಟು ತೀವ್ರವಾಗಿ ಸ್ಪಂದಿಸಿದನೋ ಅಷ್ಟೇ ತೀವ್ರವಾಗಿ ಹೊಸ ಬಣ್ಣದ ಸಂವೇದನೆಗಳಿಗೆ ತೆರೆದುಕೊಂಡ. ಕೇವಲ ಪ್ರಚಾರಕ್ಕೆ ಸೀಮಿತವಾದ ಧರ್ಮವು ತನ್ನ ಅಂತಃಸತ್ವವನ್ನು ಕಳೆದುಕೊಂಡಾಗ ಶಾಂತಿಗಾಗಿ, ನೆಮ್ಮದಿಗಾಗಿ ಮನುಷ್ಯ ಎಲ್ಲಿಯೂ ಹೋಗಬೇಕಿಲ್ಲ. ತನ್ನ ಸುತ್ತಣ ಪ್ರಕೃತಿಗೆ ಕಿವಿಗೊಟ್ಟರೆ, ಮನಗೊಟ್ಟರೆ ಸಾಕು. ಪ್ರಕೃತಿಗೆ ನಮ್ಮೊಳಗಿನ ಪ್ರಜ್ಞೆಯನ್ನು ಜಾಗೃತಗೊಳಿಸುವ ಶಕ್ತಿಯಿದೆ. ಅದು ಪ್ರಾಪಂಚಿಕತೆಯನ್ನು ಮೀರುವ ಪ್ರಜ್ಞೆ. ಮಾನವೀಯ ವಿಚಾರಗಳು ಯಾವುದೋ ಒಂದು ಕಾಲದ ಸೀಮಿತಕ್ಕೆ ನಿಲ್ಲುವುದಿಲ್ಲ, ಅವು ಕಾಲಾತೀತವಾಗಿ ಚಲಿಸುತ್ತವೆ. ವಿನ್ಸೆಂಟನ ಚಿತ್ರಗಳಲ್ಲಿ ಅವು ಮರುಹುಟ್ಟು ಪಡೆದ ಬಗೆ ವಿಸ್ಮಯಕಾರಿ. ಆತನ ವಿಶೇಷತೆ ಇರುವುದೇ ಆತನ ವಿಷಯ ಆಯ್ಕೆಯಲ್ಲಿ. ತಾನು ಹುಟ್ಟಿದ ನೆದರ್ಲ್ಯಾಂಡ್ಸ್ ಪ್ರದೇಶದಲ್ಲಿನ ನ್ಯೂನೆನ್ ಎಂಬ ಹಳ್ಳಿಯಲ್ಲಿ ರೈತರು, ಕೃಷಿ ಕಾರ್ಮಿಕರು, ನೇಕಾರರು ಸೇರಿದಂತೆ ಬಡ ಕೂಲಿಗಳ ನೂರಕ್ಕೂ ಹೆಚ್ಚು ಗ್ರಾಮೀಣ ಚಟುವಟಿಕೆಗಳನ್ನು ಚಿತ್ರಿಸುವ ಮೂಲಕ ವಿನ್ಸೆಂಟ್ ಚಿತ್ರಕಲೆಯನ್ನು ಆರಂಭಿಸಿದ. “ನನಗೆ ತಿಳಿದಿರುವಂತೆ ಉತ್ತುವವನು, ಬಿತ್ತುವವನು, ಬೆಂಕಿಯ ಮೇಲೆ ಮಡಿಕೆ ನೇತು ಹಾಕುವ ಮಹಿಳೆ, ಬಟ್ಟೆ ಹೊಲಿವ ಹೆಣ್ಣುಮಗಳು- ಇಂಥವರನ್ನು ಚಿತ್ರಿಸಲು ಕಲಿಸುವ ಒಂದೇ ಒಂದು ಅಕಾಡೆಮಿ ಇಲ್ಲ” ಎಂದು ತಮ್ಮನಿಗೆ ಬರೆದ ಪತ್ರದಲ್ಲಿ ಹೇಳಿದ್ದಾನೆ. ಆತ ಚಿತ್ರಿಸಿದ ರೈತ ಕುಟುಂಬವೊಂದು ರಾತ್ರಿ ಸಣ್ಣ ದೀಪದ ಬೆಳಕಿನಲ್ಲಿ ತಾವೇ ಭೂಮಿ ಉತ್ತಿ ಬೆಳೆದ ಆಲೂಗಡ್ಡೆಯನ್ನು ತಮ್ಮ ಕೈಗಳಿಂದಲೇ ಸ್ವತಃ ಬಡಿಸಿಕೊಳ್ಳುತ್ತಿರುವ ದೃಶ್ಯವಿರುವ ತೈಲ ವರ್ಣಚಿತ್ರ ಹಳ್ಳಿಯ ಬದುಕಿನ ಪರಿಶ್ರಮ ಮತ್ತು ಕಷ್ಟಗಳನ್ನು ಪರಿಣಾಮಕಾರಿಯಾಗಿ ನೋಡುಗನಿಗೆ ದಾಟಿಸುತ್ತದೆ. ಪ್ರಾಮಾಣಿಕವಾಗಿ ತಮ್ಮ ಊಟ ತಾವು ಸಂಪಾದಿಸಿದ ಶ್ರಮದ ದುಡಿಮೆಯ ಕುರಿತು ಈ ಚಿತ್ರ ನೋಡುಗನೊಂದಿಗೆ ಮಾತನಾಡಬೇಕೆನ್ನುವುದು ವಿನ್ಸೆಂಟನ ಅಭಿಮತವಾಗಿತ್ತು.
ಚಿತ್ರಕಲೆಯಲ್ಲಿ ಆಗುತ್ತಿದ್ದ ಹೊಸ ಬೆಳವಣಿಗೆಗಳ ಜೊತೆ ಹೆಜ್ಜೆ ಹಾಕುತ್ತಿದ್ದ ವಿನ್ಸೆಂಟ್ ತನ್ನ ಆರಂಭಿಕ ಸಾಂಪ್ರದಾಯಿಕ ವಿಧಾನವನ್ನು ಬದಲಿಸಿಕೊಂಡು ಬಣ್ಣ, ಬ್ರಷ್ ಸ್ಟ್ರೋಕ್, ರೇಖೆಗಳು, ಶೈಲಿಯೊಂದಿಗೆ ಹಲವಾರು ಪ್ರಯೋಗಗಳನ್ನು ನಡೆಸಿದ. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಆಂತರಿಕ ಚಲನೆಯನ್ನು ಸೂಚಿಸಲು ಶ್ರದ್ಧೆಯಿಂದ ಶ್ರಮಿಸಿದ. ಸ್ವಯಂಪ್ರೇರಿತ, ಸಹಜತೆಯಿಂದ ಕೂಡಿದ ಆತನ ಕಲಾತ್ಮಕ ಶೈಲಿಯು ಕ್ರಾಂತಿಕಾರಿಯಾಗಿತ್ತು. ವೇಗವಾಗಿ, ತೀವ್ರತೆಯಿಂದ ಕೆಲಸ ಮಾಡುತ್ತಿದ್ದ ಆತ, ಆ ಕ್ಷಣ ತನ್ನಲ್ಲಿ ಮೂಡಿದ ಉತ್ಕಟತೆಯನ್ನು ಹಾಗೆಯೇ ಹಿಡಿದಿಡಲು ಪ್ರಯತ್ನಿಸುತ್ತಿದ್ದ. “ಮುಂದಿನ ದಿನಗಳಲ್ಲಿ ನಾನು ಯಾವುದಕ್ಕಾದರೂ ಯೋಗ್ಯನೆನಿಸಿದರೆ, ಇಂದು ಕೊಂಚಾದರೂ ಯೋಗ್ಯನಾಗಿಯೇ ಇರುತ್ತೇನೆ. ಯಾಕೆಂದರೆ ಜನರು ಆರಂಭದಲ್ಲಿ ಅದನ್ನು ಹುಲ್ಲೆಂದು ಭಾವಿಸಿದರೂ ಗೋಧಿ ಗೋಧಿಯೇ” ಚಿತ್ರಕಲೆ ಅವನಿಗೆ ಉದ್ಯೋಗ ಅರಸುವ ಮಾರ್ಗವಷ್ಟೇ ಆಗದೆ ಜೀವನದ ಶ್ರದ್ಧಾಕೇಂದ್ರವೂ ಆಗಿತ್ತು. ಜನ ಗುರುತಿಸದಿದ್ದರೂ ತನ್ನ ಕೆಲಸದ ಗುಣಮಟ್ಟ ಆತನಿಗೆ ಮನವರಿಕೆಯಾಗಿತ್ತು. ಸಮರ್ಪಣಾ ಭಾವದಿಂದ ಅಭಿವ್ಯಕ್ತಿಗೊಂಡ ಆ ವರ್ಣಚಿತ್ರಗಳು ಕೇವಲ ಸುಂದರವಾದ ಚಿತ್ರಗಳಾಗಿರಲಿಲ್ಲ, ಶೈಲಿ ಮತ್ತು ವಿಷಯ ಸಮ್ಮಿಳಗೊಂಡು, ಲಯಬದ್ಧ ಮತ್ತು ಭಾವನಾತ್ಮಕ ಕ್ಯಾನ್ವಾಸ್‌ಗಳಿಗೆ ಜೀವ ನೀಡಿದ್ದರಿಂದಲೇ ಆತನ ವರ್ಣಚಿತ್ರಗಳು ಜೀವಂತಿಕೆಯಿಂದ ಹೊಳೆಯುತ್ತಿರುವಂತೆ ಭಾಸವಾಗುತ್ತದೆ.
ವಿನ್ಸೆಂಟ್ ಪಾಲಿಗೆ ಚಿತ್ರಕಲೆಯು ತನ್ನನ್ನು ತಾನು ಎದಿರುಗೊಳ್ಳುವ ವ್ಯಕ್ತಿ ಸ್ವಾತಂತ್ರ್ಯದ ಅನುಸಂಧಾನವಾಗಿತ್ತು. ಆದರೆ ಸಾಮಾಜಿಕವಾಗಿ ಏನನ್ನಾದರೂ ಸಾಧಿಸಲು ಏಕಾಂಗಿಯಾಗಿದ್ದರೆ ಸಾಲದೆಂದು, ಪ್ಯಾರಿಸಿನಲ್ಲಿ ಸಮಾನಮನಸ್ಕ ಕಲಾವಿದರೊಂದಿಗೆ ಸೇರಿ ‘ದ ಸ್ಟುಡಿಯೋ ಆಫ್ ದಿ ಸೌತ್’ ಹೆಸರಿನಲ್ಲಿ ಕಲಾ ಗೆಳೆಯರ ಬಳಗ ಕಟ್ಟುವ ಬಯಕೆ ಆತನಲ್ಲಿ ಉತ್ಕಟವಾಗಿತ್ತು. ಅವರೆಲ್ಲರ ಮನವೊಲಿಸುವ ಉದ್ದೇಶದಿಂದ ಅರ್ಲೆಸ್ ಎನ್ನುವ ಪಟ್ಟಣದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು, ಕಲೆಗೆ ಪೂರಕವಾಗಿ ಸಿಂಗರಿಸಿದ. ಎರಡು ತಿಂಗಳ ಕಾಲ ವಿನ್ಸೆಂಟ್ ಮತ್ತು ಗೆಳೆಯ ಚಿತ್ರಕಾರ ಗೌಗ್ವಿನ್ ಒಟ್ಟಿಗೆ ಕೆಲಸ ಮಾಡಿದರು. ಸ್ನೇಹಿತ ಕನಸು ಮತ್ತು ಕಲ್ಪನೆಗಳಿಂದ ಚಿತ್ರ ಬರೆಯಬೇಕೆಂದು ಪ್ರತಿಪಾದಿಸಿದರೆ, “ನಾನಿನ್ನೂ ನೈಜ ಪ್ರಪಂಚದಿಂದ ಬದುಕುತ್ತಿದ್ದೇನೆ” ಎನ್ನುತ್ತಿದ್ದ ವಿನ್ಸೆಂಟ್ ನೇರವಾಗಿ ಯಥಾವತ್ ಜೀವನವನ್ನು ಚಿತ್ರಿಸಲು ಬದ್ಧನಾಗಿದ್ದ. ಹೀಗಾಗಿ ಆಲೋಚನೆ, ಮನೋಧರ್ಮಗಳಲ್ಲಿ ಅವರಿಗೆ ಹೊಂದಿಕೆಯಾಗದೆ ದೂರವಾದರು. ಈ ಘಟನೆಯಿಂದ ದೈಹಿಕವಾಗಿ, ಭಾವನಾತ್ಮಕವಾಗಿ ಕುಸಿದುಹೋದ ವಿನ್ಸೆಂಟ್, ತನ್ನ ಬಲಗಿವಿಯ ಕೆಳಭಾಗವನ್ನೇ ಕತ್ತರಿಸಿಕೊಳ್ಳುವ ಮಟ್ಟಿಗೆ ಮತಿ ಭ್ರಮಣೆಗೆ ಒಳಗಾದ. ಶಾಂತ ಮತ್ತು ಹತಾಶೆಯ ಎರಡು ತುದಿಗಳ ನಡುವೆ ಅವನ ಮನಸ್ಸು ಓಲಾಡುತ್ತಿತ್ತು. ಮನೋವಿಕಲ್ಪತೆಗಳ ಹೊಡೆತಗಳು ತೀವ್ರಗೊಂಡಿದ್ದು ಆ ನಂತರದ ದಿನಗಳಲ್ಲೇ. ಮೂರ್ಛೆರೋಗ ಮತ್ತು ಬೈಪೋಲಾರ್ ಕಾಯಿಲೆಗಳಿಂದ ಬಳಲುತ್ತಿದ್ದ ಅವನನ್ನು ಚಿತ್ತ ಭ್ರಮೆಗಳು ಅಟ್ಟಾಡಿಸುತ್ತಿದ್ದವು. ತಾನೇ ಹೋಗಿ ದಕ್ಷಿಣ ಫ್ರಾನ್ಸಿನ ಪುಟ್ಟ ಹಳ್ಳಿ ಸೇಂಟ್ ರೆಮಿ (ಕಾಲಜ್ಞಾನಿ ಎನ್ನಲಾಗುವ ನಾಸ್ಟ್ರಡಾಮಸ್ ಹುಟ್ಟಿದೂರು)ಯಲ್ಲಿರುವ ಮಾನಸಿಕ ಆಸ್ಪತ್ರೆಗೆ ದಾಖಲಾದ.
ಹತ್ತೊಂಬತ್ತನೆಯ ಶತಮಾನದ ಹುಚ್ಚಾಸ್ಪತ್ರೆಗಳೆಂದರೆ ಭಯಾನಕ ದುಃಸ್ವಪ್ನ ಸ್ಥಳಗಳಾಗಿದ್ದವು. ಆದರೆ ವಿಕ್ಷಿಪ್ತ ಮನಸ್ಸುಗಳನ್ನು ಶಾಂತಗೊಳಿಸುವ ಶಕ್ತಿ ನಿಸರ್ಗಕ್ಕಿದೆ ಎಂದು ನಂಬಿದ್ದ ಈ ಆಸ್ಪತ್ರೆಯ ಸ್ಥಾಪಕ, ಚಿಕಿತ್ಸಾ ಕೇಂದ್ರದ ಆವರಣದಲ್ಲಿ ವಿಶಾಲವಾದ ತೋಟಗಳನ್ನು, ಗಿಡ-ಮರಗಳನ್ನು ಬೆಳೆಸಿದ್ದ. ಈ ಪರಿಸರ ವಿನ್ಸೆಂಟನಲ್ಲಿ ಜೀವಕಳೆ ತುಂಬಿತು. ದಯಾಳುಗಳಾಗಿದ್ದ ಅಲ್ಲಿನ ವೈದ್ಯರು ಅವನನ್ನು ಪ್ರೀತಿ ಮತ್ತು ಕರುಣೆಯಿಂದ ನೋಡಿಕೊಂಡರು. ಅಗತ್ಯವಾದ ಜಾಗ ಮತ್ತು ಬಣ್ಣಗಳನ್ನು ಕೊಟ್ಟಲ್ಲಿ ಅವನನ್ನು ಉಳಿಸಿಕೊಳ್ಳುವುದು ಸಾಧ್ಯವೆಂದು ಕಂಡುಕೊಂಡರು. ಕಲೆಗೆ ಮಾತ್ರ ಅವನನ್ನು ಜೀವಂತವಾಗಿಡಲು ಸಾಧ್ಯವಿತ್ತು.
ಆಸ್ಪತ್ರೆಯ ಉಳಿದ ರೋಗಿಗಳು ರಾತ್ರಿಯೆಲ್ಲ ಕಿರುಚಾಡುತ್ತಿದ್ದಾಗ, ನಿದ್ರಾಹೀನತೆಯಿಂದ ಬಳಲುತ್ತಿದ್ದ ವಿನ್ಸೆಂಟ್ ತನ್ನ ಮೇಲಂತಸ್ತಿನ ಕಿಟಕಿಯ ಸರಳುಗಳಿಂದ ನಕ್ಷತ್ರಗಳನ್ನು ದಿಟ್ಟಿಸುತ್ತಿದ್ದ. ಅವೇ ಅವನಿಗೆ ಸಾಂತ್ವನ ನೀಡುತ್ತಿದ್ದವು. ಅಲ್ಲಿಂದ ಕಾಣುವ ನಿಸರ್ಗದ ದೃಶ್ಯಗಳನ್ನು ಚಿತ್ರಿಸುತ್ತಿದ್ದ. ಸಹ ಮನೋರೋಗಿಗಳನ್ನೂ ಚಿತ್ರಿಸಿದ, ಅವರನ್ನು “ದುರಾದೃಷ್ಟ ಕಾಲದ ಜೊತೆಗಾರರು” ಎಂದು ಪ್ರೀತಿಯಿಂದ ಕರೆಯುತ್ತಿದ್ದ. “ನಾನು ಹುಡುಕುತ್ತಿದ್ದೇನೆ, ನಾನು ಶ್ರಮಿಸುತ್ತಿದ್ದೇನೆ. ನಾನು ಪೂರ್ಣ ಹೃದಯದಿಂದ ಅದರಲ್ಲಿ ಇದ್ದೇನೆ” ಎಂದು ಪತ್ರದಲ್ಲಿ ಬರೆದಿರುವ ವಿನ್ಸೆಂಟ್, ತನ್ನೆಲ್ಲಾ ಸಾಮರ್ಥ್ಯವನ್ನು ಕಲೆಗಾಗಿ ಸಂಪೂರ್ಣ ವಿನಿಯೋಗಿಸಿಕೊಂಡಿದ್ದ. ಸೂರ್ಯನ ಬೆಳಕಲ್ಲಿ ಹೊಳೆಯುವ ಗೋದಿ ಹೊಲಗಳು, ದೂರದ ಆಲ್ಪಲೈನ್ಸ್ ಪರ್ವತ ಶ್ರೇಣಿಯ ಇಳಿಜಾರಿನ ತಪ್ಪಲಿನಲ್ಲಿ ಕಾಣುವ ಆಲಿವ್ ತೋಪುಗಳು ಮತ್ತು ದ್ರಾಕ್ಷಿ ತೋಟಗಳು, ನೀಲಿಯ ಆಗಸ, ಮಿನುಗುವ ತಾರೆಗಳು, ಏಕಾಂಗಿಯಂತೆ ನಿಂತ ಚಂದ್ರ… ಎಲ್ಲವೂ ಕ್ಯಾನ್ವಾಸಿಗೆ ಇಳಿಯುತ್ತಿದ್ದವು. ಆರಂಭದಲ್ಲಿ ಕೋಣೆಯಲ್ಲೇ ಕುಳಿತು ಪೇಂಟ್ ಮಾಡುತ್ತಿದ್ದ ಆತನಿಗೆ ಆ ಸುಂದರ ಹಳ್ಳಿಗಾಡಿನಲ್ಲಿ ಏಕಾಂಗಿಯಾಗಿ ಅಲೆದಾಡಲು ವೈದ್ಯರು ಅನುಮತಿ ನೀಡಿದರು. ಅತಿ ಕಡಿಮೆಯ ಆ ದಿನಗಳಲ್ಲಿ ಆತ ಬಿಡಿಸಿದ ಚಿತ್ರಗಳು 150! ದಿನಬಿಟ್ಟು ದಿನವೊಂದಕ್ಕೆ ಒಂದೊಂದು ಚಿತ್ರಗಳು ರೆಡಿಯಾಗುತ್ತಿದ್ದವು. ಭೂಮಿಯನ್ನು ಜಡವಾದ ದ್ರವ್ಯರಾಶಿಯಂತೆ ನೋಡದೆ ಏರಿ ಬೀಳುವ ಅಲೆಗಳು ಮತ್ತು ಸುಂಟರಗಾಳಿಯಂತೆ ಚಿತ್ರಿಸಿ, ಭೂಮಿಯ ಚಲನೆಯನ್ನು ಪ್ರಸ್ತುತಪಡಿಸುತ್ತಾನೆ. ವಿನ್ಸೆಂಟನನ್ನು ಆಕರ್ಷಿಸಿದ್ದು ಭೂಮಿ ಮಾತ್ರವಲ್ಲ. ಸೂರ್ಯಾಸ್ತ ಮತ್ತು ಸೂರ್ಯೋದಯದ ನಡುವಿನ ಗಂಟೆಗಳಲ್ಲಿ ಆಕಾಶವನ್ನು ಚಿತ್ರಿಸುವ ಮೋಡಿಗೂ ಒಳಗಾಗಿದ್ದ. ಅವನ ಪ್ರಸಿದ್ಧ ಚಿತ್ರಗಳಲ್ಲೊಂದಾದ ‘ದಿ ಸ್ಟಾರಿ ನೈಟ್’ ತಯಾರಾದದ್ದು ಅಲ್ಲಿಯೇ… “ರಾತ್ರಿಯು ಹಗಲಿಗಿಂತಲೂ ಹೆಚ್ಚು ಶ್ರೀಮಂತವಾಗಿದೆ, ಅತ್ಯಂತ ತೀವ್ರವಾದ ನೇರಳೆ, ನೀಲಿ ಮತ್ತು ಹಸಿರು ಬಣ್ಣಗಳಲ್ಲಿರುವಂತೆ ನನಗೆ ಆಗಾಗ್ಗೆ ತೋರುತ್ತದೆ… ನೀವು ಎಚ್ಚರಿಕೆಯಿಂದ ನೋಡಿದರೆ, ಕೆಲವು ನಕ್ಷತ್ರಗಳು ನಿಂಬೆಹಣ್ಣಿನ ಬಣ್ಣ, ಇತರವು ಗುಲಾಬಿ, ಹಸಿರು, ನೀಲಿ ಹೊಳಪನ್ನು ಹೊಂದಿರುತ್ತವೆ… ನಕ್ಷತ್ರಗಳ ಆಕಾಶವನ್ನು ಚಿತ್ರಿಸಲು ನೀಲಿ-ಕಪ್ಪಿನ ಹಿನ್ನೆಲೆಯಲ್ಲಿ ಬಿಳಿ ಚುಕ್ಕೆಗಳನ್ನು ಹಾಕಿದರೆ ಸಾಕಾಗುವುದಿಲ್ಲ…” ಆ ಸಂದರ್ಭದಲ್ಲಿ ವಿನ್ಸೆಂಟ್ ಬರೆದ ಮಾತುಗಳಿವು.
ಕೊನೆಯ ತಿಂಗಳುಗಳು
“ನಾನಿರುವ ಹಾದಿಯಲ್ಲಿ ಹೀಗೆ ಮುಂದುವರಿಯಲೇ ಬೇಕು. ನಾನು ಏನನ್ನೂ ಮಾಡದಿದ್ದರೆ, ನಾನು ಅಧ್ಯಯನ ಮಾಡದಿದ್ದರೆ, ನಾನು ಪ್ರಯತ್ನಿಸುವುದನ್ನು ಮುಂದುವರಿಸದಿದ್ದರೆ, ಕಳೆದುಹೋಗಿ ಬಿಡುತ್ತೇನೆ, ಆನಂತರ ದುಃಖ, ಸಂಕಟ ತಪ್ಪಿದ್ದಲ್ಲ. ಆದ್ದರಿಂದ ನಾನು ಹೀಗೇ, ಹೀಗೆಯೇ ಮುನ್ನಡೆಯುತ್ತೇನೆ, ಇದೇ ಆಗಬೇಕಾದದ್ದು… ನನ್ನ ವರ್ಣಚಿತ್ರಗಳು ಮಾರಾಟವಾಗದಿದ್ದರೆ ಅದರ ಬಗ್ಗೆ ಏನೂ ಮಾಡಲಾಗುವುದಿಲ್ಲ. ಆದರೂ, ನಾವು ಬಳಸಿದ ಬಣ್ಣದ ವೆಚ್ಚ ಮತ್ತು ನನ್ನ ಜೀವನಾಧಾರದ ಬೆಲೆಗಿಂತ ಇವು ಹೆಚ್ಚು ಮೌಲ್ಯಯುತವಾಗಿವೆ ಎಂದು ಜನರು ನೋಡುವ ದಿನ ಬಂದೇ ಬರುತ್ತದೆ.”
ವಿನ್ಸೆಂಟ್ ಮನೋವೈದ್ಯಕೀಯ ಚಿಕಿತ್ಸಾಲಯದಿಂದ ಹೊರಬಂದು ಸ್ವತಂತ್ರವಾಗಿ ಬದುಕಬೇಕೆಂದುಕೊಂಡು ಪ್ಯಾರಿಸ್ ಹತ್ತಿರದ ಪುಟ್ಟಹಳ್ಳಿಯಲ್ಲಿ ನೆಲೆನಿಂತ. ಮತ್ತೊಮ್ಮೆ ಸಮೃದ್ಧವಾಗಿ ಚಿತ್ರಿಸಲು ಪ್ರಾರಂಭಿಸಿದ. ದುರಾದೃಷ್ಟವಶಾತ್ ಪ್ಯಾರಿಸಿನ ಕಲಾ ಮಾರುಕಟ್ಟೆಯಲ್ಲಿ ಆಗ ವಿನ್ಸೆಂಟನ ಚಿತ್ರಗಳು ವ್ಯಾಪಾರ ಕುದುರಿಸಿಕೊಳ್ಳಲಿಲ್ಲ. ತಮ್ಮ ಕಳಿಸುತ್ತಿದ್ದ ಹಣ ಊಟ-ವಸತಿಗೆ ಮತ್ತು ಉಳಿದಂತೆ ಬಣ್ಣಗಳನ್ನು ತೆಗೆದುಕೊಳ್ಳುವಲ್ಲಿ ಖಾಲಿಯಾಗಿ ಬಿಡುತ್ತಿತ್ತು. ಭವಿಷ್ಯದ ಬಗ್ಗೆ ಅನಿಶ್ಚಿತತೆಯ ಹೊರತಾಗಿಯೂ, ವಿನ್ಸೆಂಟ್ ಚಿತ್ರಕಲೆಗೆ ಮಾತ್ರ ತನ್ನನ್ನು ಗುಣಪಡಿಸುವ ಶಕ್ತಿ ಇದೆ ಎಂಬ ನಂಬಿಕೆಯನ್ನು ಮುಂದುವರೆಸಿದ. ಪ್ರತಿ ದಿನ ಒಂಟಿತನ ಮತ್ತು ಖಿನ್ನತೆಯನ್ನು ದೂರ ಮಾಡಲು ಹೆಣಗಾಡುತ್ತಿದ್ದ. ಆ ಅವಧಿಯಲ್ಲಿ, ಆತ ಸುಮಾರು 75 ವರ್ಣಚಿತ್ರಗಳು ಮತ್ತು ಹಳ್ಳಿಯ ಪ್ರಾಕೃತಿಕ ಪರಿಸರ, ಅದರ ಸುತ್ತಲಿನ ವಿಶಾಲವಾದ ಜೋಳದ ಹೊಲಗಳು ಮತ್ತು ಕಾಡುಗಳ ನೂರಕ್ಕೂ ಹೆಚ್ಚು ರೇಖಾಚಿತ್ರಗಳನ್ನು ರಚಿಸಿದ. ಆದರೆ ಆ ಉತ್ಸಾಹ ಹೆಚ್ಚು ಕಾಲ ನಿಲ್ಲಲಿಲ್ಲ. ಮುಂದೆ ಎರಡು ತಿಂಗಳ ನಂತರ ಗೋದಿ ಗದ್ದೆಗೆ ಹೋಗಿ ಅಲ್ಲಿ ಗುಂಡು ಹಾರಿಸಿಕೊಂಡ.
“ನಾನು ನನ್ನ ಕೆಲಸದಲ್ಲಿ ಹೃದಯ ಮತ್ತು ಆತ್ಮವನ್ನು ತೊಡಗಿಸಿಕೊಂಡಿದ್ದೇನೆ, ಈ ಪ್ರಕ್ರಿಯೆಯಲ್ಲಿ ನಾನು ನನ್ನ ಮನಸ್ಸನ್ನು ಕಳೆದುಕೊಂಡಿದ್ದೇನೆ” ವಿನ್ಸೆಂಟ್ ಯಾಕಾಗಿ ಕಿವಿ ಕತ್ತರಿಸಿಕೊಂಡ ಮತ್ತು ಯಾಕಾಗಿ ಪ್ರಾಣ ತೆಗೆದುಕೊಂಡ ಎನ್ನುವುದರ ನಿಖರ ಕಾರಣಗಳು ತಿಳಿದಿಲ್ಲ. ಹೆಚ್ಚುತ್ತಿರುವ ಒಂಟಿತನ, ಭವಿಷ್ಯದ ಬಗ್ಗೆ ಸಾಕಷ್ಟು ಅನಿಶ್ಚಿತತೆ ಮತ್ತು ತಮ್ಮನಿಗೆ ಹೊರೆಯಾಗುತ್ತಿದ್ದೇನೆಂಬ ಭಾವನೆ ಅವನ ಆತ್ಮಹತ್ಯೆಗೆ ಕಾರಣವಾಗಿರಬಹುದೆಂದು ಊಹಿಸುತ್ತಾರೆ. ಆರ್ಥಿಕವಾಗಿ, ಭಾವನಾತ್ಮಕವಾಗಿ ತಮ್ಮ ಥಿಯೋನ ಮೇಲೆ ವಿನ್ಸೆಂಟ್ ಸಂಪೂರ್ಣ ಅವಲಂಬಿತನಾಗಿದ್ದ. ತನ್ನ ಇರುವಿಕೆ ಬೇರೆಯವರಿಗೆ ಹೊರೆಯಾಗುತ್ತಿದೆ ಎನ್ನುವ ಭಾವನೆ ಬಲಿಯ ತೊಡಗಿದಂತೆ ಈ ಜೀವನ ಸಾಕೆನಿಸಿ ಪಿಸ್ತೂಲಿನಿಂದ ಆತ್ಮಹತ್ಯೆ ಮಾಡಿಕೊಂಡ ಎಂದು ಕೆಲವರು ಹೇಳುತ್ತಾರೆ. ಆದರೆ ಹಾಗೆ ಮಾಡುವುದಾದರೆ ಬರೆಯುವ ಅಭ್ಯಾಸವಿರುವ ಆತ ಮರಣಪತ್ರ ಬರೆದಿಡುತ್ತಿದ್ದ, ಅಲ್ಲಿ ನಡೆದದ್ದೇ ಬೇರೆ ಎನ್ನುವುದು ಮತ್ತೊಂದು ಗುಂಪಿನ ತರ್ಕ- ಮಾನಸಿಕ ಆಸ್ಪತ್ರೆಯಿಂದ ಮರಳಿ ಬಂದ ವಿನ್ಸೆಂಟನನ್ನು ಹುಚ್ಚನೆಂದೇ ಅಕ್ಕಪಕ್ಕದವರು ಭಾವಿಸಿದ್ದರು. ಹೇಗೆಂದರೆ ಹಾಗೆ ಇರುತ್ತಿದ್ದ ಆತನನ್ನು ಕಂಡರೆ ಮಕ್ಕಳು ಭಯಪಡುತ್ತಿದ್ದರು. ಆದರೆ ಅಲ್ಲಿದ್ದ ಐದು ವರ್ಷದ ಪೋರನೊಬ್ಬನಿಗೆ ವಿನ್ಸೆಂಟ್ ಕಂಡರೆ ಏನೋ ಆಕರ್ಷಣೆ. ಕಾಗದ, ಪೆನ್ಸಿಲ್ ಹಿಡಿದುಕೊಂಡು ಆತನನ್ನು ಸದಾ ಹಿಂಬಾಲಿಸುತ್ತಿದ್ದ. ತಮ್ಮನ ಈ ನಡವಳಿಕೆ ಸಹಿಸದ ಆತನ 12 ವರ್ಷದ ಅಣ್ಣ ತನ್ನ ತಂದೆಯ ಪಿಸ್ತೂಲ್ ತಂದು, ವಿನ್ಸೆಂಟ್ ಗೋದಿ ಹೊಲದಲ್ಲಿ ತಿರುಗಾಡುತ್ತಿದ್ದಾಗ ದೂರದಿಂದ ಗುಂಡು ಹಾರಿಸಿದ. ಆದ್ದರಿಂದಲೇ ಆಳಕ್ಕೆ ನಾಟದ ಆ ಗುಂಡಿನಿಂದ ವಿನ್ಸೆಂಟ್ ಪ್ರಾಣ ಹೋಗಲು ಎರಡು ದಿನ ಬೇಕಾಯಿತು. “ನಾನೇ ಗುಂಡು ಹಾರಿಸಿಕೊಂಡಿದ್ದೇನೆ, ಆದರೆ ನಾನಾಗಿಯೇ ಇದನ್ನು ಬಾಚಿ ತಬ್ಬಿಕೊಂಡದ್ದಲ್ಲ” ಎಂದು ವಿನ್ಸೆಂಟ್ ಥಿಯೋಗೆ ಹೇಳಿದ್ದು ದಾಖಲಾಗಿದೆ. ಗುಂಡು ಹಾರಿಸಿದ ಹುಡುಗನನ್ನು ಶಿಕ್ಷೆಯಿಂದ ತಪ್ಪಿಸಲು ಪೊಲೀಸರು ಕೇಳಿದ ಯಾವ ಪ್ರಶ್ನೆಗಳಿಗೂ ವಿನ್ಸೆಂಟ್ ಉತ್ತರಿಸಲಿಲ್ಲವೆನ್ನುತ್ತಾರೆ. ಏನೇ ಇರಲಿ, ವಿನ್ಸೆಂಟ್ ಶುದ್ಧ ಮಾನವೀಯ ಅಂತಃಕರಣವುಳ್ಳ ಚಿತ್ರಕಾರ. ಅವನು ಸತ್ತ ಎಂಬತ್ತು ವರ್ಷಗಳ ತರುವಾಯ ಅಮೆರಿಕದ ಕವಿ, ಗಾಯಕ ಡಾನ್ ಮ್ಯಾಕ್ಲಿನ್ ‘ಸ್ಟಾರಿ ಸ್ಟಾರಿ ನೈಟ್’ ಎನ್ನುವ ತನ್ನ ಪ್ರಸಿದ್ಧ ಕವನದಲ್ಲಿ ಬರೆಯುತ್ತಾನೆ-
“ಆ ನಕ್ಷತ್ರ, ನಕ್ಷತ್ರಗಳ ರಾತ್ರಿಯಲಿ
ಯಾವುದೇ ಭರವಸೆ ಸಿಗದೆ ಹೋದಾಗ,
ಪ್ರೇಮಿಗಳು ಆಗಾಗ್ಗೆ ಮಾಡುವಂತೆ ನೀವೂ ನಿಮ್ಮ ಪ್ರಾಣವನು ತೆಗೆದುಕೊಂಡಿರಿ…
ಆದರೂ ನಾ ನಿಮಗೆ ಹೇಳುವುದಿತ್ತು, ವಿನ್ಸೆಂಟ್
ಈ ಜಗತ್ತು ಎಂದಿಗೂ ಸೇರಿದ್ದಲ್ಲ
ನಿನ್ನಂಥ ಚಂದದ ಹೃದಯಕೆ…”
ತಮ್ಮ ಥಿಯೋನನ್ನ ವಿನ್ಸೆಂಟ್ ಬಹುವಾಗಿ ನೆಚ್ಚಿಕೊಂಡಿದ್ದ. ಅದೇ ರೀತಿ ಅಣ್ಣನ ಅಸಾಧಾರಣ ಸಾಮರ್ಥ್ಯ ಮತ್ತು ಮಾನಸಿಕ ಅಸ್ವಸ್ಥತೆಯ ಬಗೆಗೆ ಸಂಪೂರ್ಣ ತಿಳಿದು, ಕೊನೆಯತನಕ ಅವನಿಗೆ ಆರ್ಥಿಕವಾಗಿ- ಮಾನಸಿಕವಾಗಿ ಆಸರಾಗಿ ನಿಂತವನು ಥಿಯೋ. ಇವತ್ತು ನಮಗೆ ವಿನ್ಸೆಂಟ್ ಕುರಿತಾಗಿ ಏನೆಲ್ಲಾ ಮಾಹಿತಿ ಸಿಕ್ಕಿದೆಯೋ ಅವೆಲ್ಲಾ ಅವನು ಥಿಯೋನೊಂದಿಗೆ ಹಂಚಿಕೊಂಡ 600 ಕ್ಕೂ ಹೆಚ್ಚಿನ ಕಾಗದಗಳಿಂದ. ಥಿಯೋ ಇಲ್ಲದೆ ನಾವಿಂದು ತಿಳಿದಿರುವ ವಿನ್ಸೆಂಟ್ ಎಂದಿಗೂ ಇರಲಿಕ್ಕೆ ಸಾಧ್ಯವಿರಲಿಲ್ಲ. ಪ್ಯಾರಿಸಿನ ಗೌರವಾನ್ವಿತ ಕಲಾ ವ್ಯಾಪಾರಿಯಾಗಿದ್ದ ಥಿಯೋ, ತನ್ನ ಅಣ್ಣನ ಕಲಾಕೃತಿಗಳನ್ನು ಜಗತ್ತಿಗೆ ಪರಿಚಯಿಸುವಲ್ಲಿ ಬಹಳಷ್ಟು ಹೆಣಗಿದ. ಅಣ್ಣನೊಂದಿಗೆ ಭಾವನಾತ್ಮಕವಾಗಿ ಬೆಸೆದುಹೋಗಿದ್ದ ಥಿಯೋ ಆತ ಸತ್ತ ಆರೇ ತಿಂಗಳಿಗೆ ಕೊನೆಯುಸಿರೆಳೆದ. ಇಬ್ಬರ ಸಮಾಧಿಗಳೂ ಒಂದೇ ಕಡೆ ಇವೆ. ಮುಂದೆ ಥಿಯೋನ ಹೆಂಡತಿ ಜೋ ವ್ಯಾನ್ ಗಾಗ್-ಬೊಂಗರ್ ಪ್ರಯತ್ನಗಳ ಫಲವಾಗಿ ವಿನ್ಸೆಂಟ್ ವರ್ಣಚಿತ್ರಗಳು ಮತ್ತು ಬರಹಗಳು ಎಲ್ಲೆಡೆ ಹರಡಿದವು.
ಕಾಲಾತೀತ ಕಲೆ
ನೆನಪುಗಳನ್ನು ಹೆಕ್ಕಿ, ಕಲ್ಪಿಸಿಕೊಂಡು ವಿನ್ಸೆಂಟ್ ಪೇಂಟ್ ಮಾಡುತ್ತಿರಲಿಲ್ಲ. ನೆನಪುಗಳು ಗತಕ್ಕೆ ಸಂಬಂಧಿಸಿದವು, ಕಲ್ಪನೆಗಳು ವಾಸ್ತವದಲ್ಲಿ ಪ್ರಯೋಜನವಿಲ್ಲದವು ಎನ್ನುತ್ತಿದ್ದ. ಯಾವತ್ತಿಗೂ ಅವನ ಲಕ್ಚ್ಯ ಇರುತ್ತಿದ್ದುದು ಎದುರಿಗಿರುವ ಯಥಾವತ್ ಜಗತ್ತಿನತ್ತಲೇ. ನಿಸರ್ಗದ ಭೂದೃಶ್ಯಗಳು, ಜೋಳದ ಹೊಲಗಳು, ಗೋದಿ ಗದ್ದೆಗಳು, ನದಿ ಕಣಿವೆ, ರೈತರ ಗುಡಿಸಲುಗಳು, ಕಟ್ಟಡ ರಚನೆಗಳು, ಹೂವುಗಳು, ಪ್ರಾಣಿಗಳು, ದುಡಿಮೆಯ ಜೀವನ, ರಾತ್ರಿಯ ಬದುಕು ಮತ್ತು ನಿಶ್ಚಲ ಜೀವನ (still life)… ಹೀಗೆ ಕಣ್ಮುಂದೆ ಬಂದ ಪ್ರತಿ ವ್ಯಕ್ತಿ, ಪ್ರತಿ ದೃಶ್ಯಗಳು ಚಿತ್ರವಾದವು. ಆತನ ರೇಖೆಗಳಿಗೆ ಹೆಚ್ಚಿನ ಅಭಿವ್ಯಕ್ತಿ ಸಿದ್ಧಿಸಿತ್ತು, ಬಣ್ಣಗಳಿಗೆ ನಿಸರ್ಗದ ಭಾವ ಮೇಳೈಸಿ, ಚಿತ್ರಕೃತಿಗಳು ಕಾವ್ಯಗಳಂತೆ ಹೊಳೆಯತೊಡಗಿದವು. ಕಲಾವಿದನು ಪ್ರತಿ ದೃಶ್ಯವನ್ನು ಹೇಗೆ ನೋಡುತ್ತಾನೆ, ಅವನ ಕಣ್ಣು, ಮನಸ್ಸು ಮತ್ತು ಹೃದಯದ ಮೂಲಕ ಹೇಗೆ ಅರ್ಥೈಸಿಕೊಳ್ಳುತ್ತಾನೆ ಎಂಬುದನ್ನು ಆತನ ಕಲಾಕೃತಿಯು ಅವಲಂಬಿಸಿರುತ್ತದೆ. ನಮ್ಮ ಸುತ್ತಲಿನ ಪ್ರಪಂಚದ ಜೊತೆಗೆ ನಮಗಿರುವ ಅವಿನಾಭಾವ ಸಂಬಂಧವನ್ನು, ಸಾಮುದಾಯಿಕ ಸಹಬಾಳ್ವೆಯ ಘನತೆಯನ್ನು ತೋರಿಸುವ ವಿನ್ಸೆಂಟನ ಕೃತಿಗಳು ಸಾರ್ವಕಾಲಿಕ.
ಕೌಶಲ್ಯ ಮತ್ತು ತಂತ್ರಗಾರಿಕೆಯ ಅಭ್ಯಾಸಕ್ಕಾಗಿ ವಿಶೇಷವಾಗಿ ವ್ಯಕ್ತಿಚಿತ್ರಗಳನ್ನು ಬಿಡಿಸಲು ಇಷ್ಟಪಡುತ್ತಿದ್ದ ಆತ ತನ್ನ ವೃತ್ತಿಜೀವನದುದ್ದಕ್ಕೂ ಸಂಪರ್ಕಕ್ಕೆ ಬಂದ ಅನೇಕರನ್ನು ಚಿತ್ರಿಸಿದ್ದಾನೆ. ತನ್ನ ಭಾವಚಿತ್ರವನ್ನೇ ಬಿಡಿಸಿಕೊಂಡ 35 ಚಿತ್ರಗಳು ದೊರೆತಿವೆ. ಇಷ್ಟೊಂದು ಚಿತ್ರಗಳನ್ನು ಸ್ವರತಿಯಿಂದಾಗಲಿ, ಜಂಭದಿಂದಾಗಲಿ ಆತ ಚಿತ್ರಿಸಿಕೊಂಡದ್ದಲ್ಲ. ಚಿತ್ರಗಳನ್ನು ಬರೆದು ಅಭ್ಯಾಸ ಮಾಡಲಿಕ್ಕೆ ರೂಪದರ್ಶಿಗಳಿಗೆ ಕೊಡಲು ಆತನ ಬಳಿ ಹಣವಿರಲಿಲ್ಲವಾದ್ದರಿಂದ ತನ್ನ ಚಿತ್ರವನ್ನೇ ಬರೆದು ಅಭ್ಯಾಸ ನಡೆಸುತ್ತಿದ್ದ. ಅವೆಲ್ಲ ಒಂದಕ್ಕಿಂತ ಒಂದು ಭಿನ್ನವಾಗಿವೆ. ಚಿತ್ರಕಾರನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಇಷ್ಟವಿಲ್ಲದ, ಗಂಭೀರ, ತಣ್ಣನೆಯ, ಹಾಸ್ಯರಹಿತ ವ್ಯಕ್ತಿಯಾಗಿ ನಿರ್ಭೀತ ಮತ್ತು ಲಯಬದ್ಧ ಸ್ಟ್ರೋಕಗಳಲ್ಲಿ ವಿನ್ಸೆಂಟ್ ತನ್ನನ್ನು ತಾನು ಚಿತ್ರಿಸಿಕೊಂಡ ಪರಿ ಕುತೂಹಲಕರವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬಣ್ಣವೇ ಅವನ ದೃಶ್ಯ ಶಬ್ದಕೋಶ. ಬಣ್ಣದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ವಿನ್ಸೆಂಟ್, “ಆಧುನಿಕ ಭಾವಚಿತ್ರವನ್ನು ಬಣ್ಣದ ಮೂಲಕ ಹುಡುಕುತ್ತೇನೆ. ಭಾವಚಿತ್ರ ರಚಿಸಿದ ದಶಕಗಳ ನಂತರವೂ ಅದು ಆಧುನಿಕವಾಗಿ ಕಾಣಿಸಿಕೊಳ್ಳಲು ಬೇಕಾಗುವ ಗುಣವೇ- ಬಣ್ಣ” ಎನ್ನುತ್ತಿದ್ದ. ಸೂರ್ಯಕಾಂತಿ ಹೂವುಗಳ ವಿನ್ಯಾಸಕ್ಕಾಗಿ ವಿನ್ಸೆಂಟ್ ಹಳದಿ ಬಣ್ಣಗಳ ವಿಸ್ತಾರವಾದ ವರ್ಣಪಟಲವನ್ನು ಬಳಸಿದ, ಪ್ರಕಾಶಮಾನವಾದ ಹಳದಿ ಬಣ್ಣದಲ್ಲಿ ಸೂರ್ಯಕಾಂತಿ ಹೂವು ಪೂರ್ಣವಾಗಿ ಅರಳುವುದರಿಂದ ಹಿಡಿದು, ಬಾಡಿ, ಮುದುಡುವವರೆಗಿನ ಜೀವಿತಾವಧಿಯನ್ನಿಲ್ಲಿ ಚಿತ್ರಿಸಿದ್ದಾನೆ. ಬೇಸಿಗೆಯ ಸೂರ್ಯನ ಹೊಳಪು ಮತ್ತು ಕಲಾವಿದನ ಮನಸ್ಥಿತಿಯ ಜೊತೆಗೆ ಪ್ರತಿ ಸೂರ್ಯಕಾಂತಿಯು ಜೀವನದ ಕ್ಷಣಿಕತೆಗೆ, ಉಲ್ಲಾಸ- ವಿಶಾದಗಳ ಸಂಯೋಜನೆಗೆ ರೂಪಕವಾಗಿದೆ. ಹೂವು ಮತ್ತು ಬೆಳಕನ್ನು ಇಷ್ಟರ ಮಟ್ಟಿಗೆ ಪ್ರೀತಿಸುವ ಮತ್ತು ಅವುಗಳನ್ನು ಅಷ್ಟು ಸೊಗಸಾಗಿ ಚಿತ್ರಿಸುವ ವ್ಯಕ್ತಿ, ಅದ್ಹೇಗೆ ಹತಾಶನಾಗಲು ಸಾಧ್ಯ ಎನ್ನುವ ಪ್ರಶ್ನೆ ಏಳದೇ ಇರಲಾರದು.
“ರಾತ್ರಿಯು ಹಗಲಿಗಿಂತ ಹೆಚ್ಚು ಜೀವಂತವಾಗಿಯೂ, ಸಮೃದ್ಧ ಬಣ್ಣದಿಂದಲೂ ಕೂಡಿದೆ, ಹಳದಿ ಮತ್ತು ಕಿತ್ತಳೆಯಿಲ್ಲದೆ ನೀಲಿ ಬಣ್ಣ ಇಲ್ಲ.” ವಿನ್ಸೆಂಟ್ ತನ್ನ ಸುತ್ತಲಿನ ಜಗತ್ತನ್ನು ತೆರೆದ ಕಣ್ಣಿನಿಂದ ಆಪ್ತವಾಗಿ ನೋಡುತ್ತಿದ್ದ. ಸಾಮಾನ್ಯವಾಗಿ ಕಲಾವಿದರು ನಕ್ಷತ್ರವನ್ನು ಬೆಳ್ಳಿಯ ಚುಕ್ಕಿಯಂತೆ ಚಿತ್ರಿಸಿದರೆ ಅವನು ಚಂದ್ರನಿಗೇ ಪೈಪೋಟಿಯೊಡ್ಡುವ ಅತೀಂದ್ರಿಯ ಮಂಡಲಗಳಂತೆ ತಾರೆಗಳನ್ನು ಕಂಡಿದ್ದಾನೆ. ಹಾಗೆ ಮಾಡುವ ಮೂಲಕ ವಿಶ್ವದ ಅಗಾಧತೆಯನ್ನು ಕಾವ್ಯಮಯವಾಗಿ ತೋರಿಸಲು ಯತ್ನಿಸುತ್ತಾನೆ. ತನ್ನ 20ನೆಯ ವಯಸ್ಸಿನಲ್ಲೇ ಬೈಬಲ್ಲಿನ ಸುವಾರ್ತಾ ಬೋಧಕನಾಗಿದ್ದ ವಿನ್ಸೆಂಟ್ ಮುಂದಿನ ದಿನಗಳಲ್ಲಿ ಕ್ರಿಶ್ಚಿಯನ್ ಧರ್ಮವನ್ನು ನಿರಾಕರಿಸಿದ್ದ. ಕ್ರಿಶ್ಚಿಯನ್ ಧರ್ಮದ ಮೇಲೆ ನಂಬಿಕೆ ಕಳೆದುಕೊಂಡಿದ್ದ ಆತ ದೈವದ ಬಗೆಗಿನ ತನ್ನ ಆಲೋಚನೆಗಳನ್ನು ಕಲೆಗೆ ಬದಲಿಸಿಕೊಂಡು, ಕಠಿಣ ಪರಿಶ್ರಮ ಮತ್ತು ಪ್ರಕೃತಿಯನ್ನೇ ದೇವರ ಸನ್ನಿಧಿಯೆಂದು ನಂಬಿಕೊಂಡ. ನಿರಂತರವಾಗಿ ಬದಲಾಗುತ್ತಾ, ನವೀಕರಿಸಿಕೊಳ್ಳುವ ಋತುಗಳ ಸಾಮರ್ಥ್ಯಕ್ಕೆ ಆತನ ಕಲೆ ಸದಾ ತೆರೆದುಕೊಳ್ಳುತ್ತಾ ಹೋಯಿತು. ಕಲೆಯನ್ನು ಜನರಿಗೆ ಸಾಂತ್ವನ ನೀಡುವ ಹೊಸ ಮಾದರಿಯ ಧರ್ಮ ಎಂದು ಹೇಳಿದ. ಆತನಿಗೆ ಪ್ರಕೃತಿಯೇ ಅನಂತದ ಉಗಮ ಸ್ಥಾನವಾಗಿದ್ದು, ತಾರೆಗಳೇ ಆಳ ಆಧ್ಯಾತ್ಮಿಕ ಅನುಭೂತಿಯ ಸೆಲೆಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಅವನ ವರ್ಣಚಿತ್ರಗಳು ಗಾಳಿಯ ಮೇಲೆ ತೇಲುವ ಮೋಡದ ಯಾನದಂತೆ ಅನುಭವಕ್ಕೆ ಬರುತ್ತದೆ. ಕಾಲ (time) ಮತ್ತು ಜಾಗ (space)ವನ್ನು ತುಂಬಿ ನಿಲ್ಲುವ ತಾರೆಗಳು ಅವನ ಕಲಾ ಮಾಂತ್ರಿಕತೆಯನ್ನು ಸೂಚಿಸುತ್ತವೆ. ಆದರೆ ಆ ಮಾಂತ್ರಿಕತೆ ಅವನನ್ನು ಜಗತ್ತಿನಲ್ಲಿ ಹಿಡಿದಿಟ್ಟುಕೊಳ್ಳಲಾಗಲಿಲ್ಲವಲ್ಲಾ ಎನ್ನುವ ವಿಶಾದ ನೋಡುಗರಲ್ಲಿ ಬಂದು ಹೋಗುತ್ತದೆ.
ವಿನ್ಸೆಂಟನ ‘ನಕ್ಷತ್ರದ ರಾತ್ರಿ’ ಚಿತ್ರದಲ್ಲಿ ಸುಂಟರಗಾಳಿಯಂತೆ ತೋರುವ ಆಧುನಿಕ ಗೆಲಾಕ್ಸಿಯ ಗಮನಾರ್ಹ ಹೋಲಿಕೆಯನ್ನು ಗುರುತಿಸಬಹುದು. ಸುರುಳಿಯಾಕಾರದ ಗೆಲಾಕ್ಸಿಗಳ ಬಗೆಗೆ ವಿನ್ಸೆಂಟನಿಗೆ 1889ರಲ್ಲೇ ತಿಳಿದಿತ್ತೇ? ಗೊತ್ತಿಲ್ಲ. ಆದರೆ ಖಗೋಳಶಾಸ್ತ್ರದಲ್ಲಿ ಆತನಿಗೆ ತೀವ್ರ ಆಸಕ್ತಿ ಇತ್ತು. ಎಲ್ಲಾ ಅತ್ಯುತ್ತಮ ಕಲಾಕೃತಿಗಳಂತೆ ‘ಸ್ಟಾರಿ ನೈಟ್’ ಚಿತ್ರಕ್ಕೂ ಹಲವಾರು ವ್ಯಾಖ್ಯಾನಗಳನ್ನು ನೀಡಲಾಗುತ್ತಿದೆ. ಥಿಯೋಗೆ ಬರೆದ ಪತ್ರವೊಂದರಲ್ಲಿ ವಿನ್ಸಂಟ್ ಹೇಳಿದ ಮಾತುಗಳಿವು- “ನನಗೆ ಬಹುವಾಗಿ ಧರ್ಮದ ಅಗತ್ಯ ಬಿದ್ದಾಗ- ಹೊರಗೆ ಹೋಗಿ ನಕ್ಷತ್ರಗಳನ್ನು ಚಿತ್ರಿಸುತ್ತೇನೆ.” ಆದ್ದರಿಂದ ಸ್ಟಾರಿ ನೈಟ್ ಚಿತ್ರದಲ್ಲಿ ಅವನ ಧಾರ್ಮಿಕ ನಂಬಿಕೆಗಳನ್ನು ಕಾಣಬಹುದೆನ್ನುತ್ತಾರೆ ಚಿತ್ರ ವಿಮರ್ಶಕರು. ತನ್ನ ಹಳೆಯ ಚಿತ್ರಗಳನ್ನು ವಿಫಲ ಪ್ರಯತ್ನಗಳೆಂದು ಆತ ಮತ್ತೆ ಅದೇ ಥೀಮಿನ ಸುಧಾರಿತ ಚಿತ್ರಗಳನ್ನು ಚಿತ್ರಿಸುತ್ತಿದ್ದ. ಬಹುಶಃ ವಿನ್ಸೆಂಟ್ ಮತ್ತಷ್ಟು ಕಾಲ ಬದುಕಿದ್ದರೆ ಸ್ಟಾರಿ ನೈಟ್ ಚಿತ್ರವನ್ನೂ ಪುನರ್ ನಿರ್ಮಿಸುತ್ತಿದ್ದನೇನೋ!
“ನೀವು ನಿಜವಾಗಿಯೂ ಪ್ರಕೃತಿಯನ್ನು ಪ್ರೀತಿಸಿದರೆ, ಎಲ್ಲೆಡೆ ಸೌಂದರ್ಯವನ್ನು ಕಾಣುತ್ತೀರಿ”- ವಿಸ್ಮಯ ಮತ್ತು ಸ್ಫೂರ್ತಿಯ ನಿರಂತರ ಮೂಲವಾದ ಪ್ರಕೃತಿಯ ಕುರಿತು ವಿನ್ಸೆಂಟ್ ಇಂತಹ ಅನೇಕ ಮಾತುಗಳನ್ನಾಡಿದ್ದಾನೆ. ನಮ್ಮ ಸುತ್ತಲಿನ ಪ್ರಪಂಚವನ್ನು ಗಮನವಿಟ್ಟು ನೋಡಿದರೆ, ನಾವು ಅತ್ಯಂತ ಅಜ್ಞಾತ ಜಾಗಗಳಲ್ಲೂ ಸೌಂದರ್ಯವನ್ನು ಕಂಡುಕೊಳ್ಳಬಹುದೆಂಬ ವಿಶ್ವಾಸ ಅವನಿಗಿತ್ತು. “ಹೂಗಳು ಉಲ್ಲಾಸಕರ ಶಕ್ತಿಯೊಂದಿಗೆ ಅರಳುತ್ತವೆ, ಮರಗಳು ಜೀವನದೊಂದಿಗೆ ಮಿಡಿಯುತ್ತವೆ ಮತ್ತು ಪ್ರಪಂಚವು ನಿರಂತರವಾಗಿ ನವೀಕರಣಗೊಳ್ಳುವ ಸೃಜನಶೀಲ ಶಕ್ತಿಯೊಂದಿಗೆ ಜೀವಂತಿಕೆ ಪಡೆದುಕೊಳ್ಳುತ್ತದೆ. ವರ್ಣಚಿತ್ರಗಳಲ್ಲಿ ವಿನ್ಸೆಂಟನ ಇಂತಹ ಉಪಸ್ಥಿತಿಯು ವೀಕ್ಷಕರ ವೈಯಕ್ತಿಕ ಅನುಭವದೊಂದಿಗೆ ಬೇರ್ಪಡಿಸಲಾಗದಂತಹ ಸಂಬಂಧ ಏರ್ಪಡಿಸಿಕೊಳ್ಳುತ್ತದೆ” ಎನ್ನುವ ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ಕಲಾ ಇತಿಹಾಸದ ಪ್ರಾಧ್ಯಾಪಕ ಜೋಶುವಾ ಸಿ ಟೇಲರ್ ಅವರ ಮಾತುಗಳಲ್ಲಿ, ಯಾಕಾಗಿ ವಿನ್ಸೆಂಟ್ ಎಲ್ಲಾ ವಯೋಮಾನದವರ ಪ್ರೀತಿ-ಆದರಕ್ಕೆ ಪಾತ್ರನಾಗಿದ್ದಾನೆ ಎನ್ನುವ ನನ್ನ ಆರಂಭಿಕ ಪ್ರಶ್ನೆಗೆ ಸಮಂಜಸ ಉತ್ತರ ಸಿಕ್ಕಿತ್ತು. ವಿನ್ಸೆಂಟನ ಅಂತರಂಗ ವೀಕ್ಷಕರ ಮನಕ್ಕೂ ಚಾಚಿಕೊಳ್ಳುವ ಮಾಂತ್ರಿಕತೆಗೆ ನಾವೂ ಒಳಗಾಗಿದ್ದೆವು. ಯಾವುದನ್ನು ಮಾನವ ಕುಲ ಮರೆತಿದೆಯೋ, ಯಾವುದರ ಅರಿವಿಲ್ಲದೆ ಅದರೊಂದಿಗೆ ಬದುಕುತ್ತಿದೆಯೋ ಅದರ ಜೀವನಾಡಿಯನ್ನು ವಿನ್ಸೆಂಟನ ಚಿತ್ರಗಳು ಹಿಡಿದಿವೆ. ಮನುಷ್ಯ ಬದುಕಿನ ಏಳುಬೀಳುಗಳು, ಸಂಘರ್ಷಮಯ ಸಂಬಂಧಗಳು, ಕಷ್ಟಕೋಟಲೆಗಳು ಕಲೆಯ ಸೃಜನತೆಯ ಉದಾತ್ತತೆಯಲ್ಲಿ ಕರಗಿ ಹೋಗಿ ಹೊಸ ಒಳನೋಟಗಳನ್ನು ನೀಡುತ್ತವೆ. ಲೋಕಾನುಭೂತಿಯ ಈ ತಿಳಿವು ಕಾಲಾತೀತವಾಗಿ ವಿನ್ಸೆಂಟನನ್ನು ನಮ್ಮೊಂದಿಗೆ ಬೆಸೆಯುತ್ತದೆ.
Comments 10
ಬಸವರಾಜ ಹಂಡಿ
Oct 11, 2023ವಿನ್ಸೆಂಟ್ ವ್ಯಾನ್ ಗಾಗ್ ಬಗ್ಗೆ ಬರೆದ ಈ ಲೇಖನ ಬಹಳ ಅದ್ಬುತವಾಗಿ ಮೂಡಿ ಬಂದಿದೆ.
ವಿನ್ಸೆಂಟ್ ವ್ಯಾನ್ ಗಾಗ್ ಒಬ್ಬ ವಿಭಿನ್ನ ಕಲಾಕಾರನಾಗಿದ್ದ ಎಂಬುದನ್ನು ತಿಳಿದು ಬರುತ್ತದೆ. ಸಾಮಾನ್ಯ ಕಲಾಕಾರರು ತಮ್ಮ ಕಲ್ಪನೆಗಳ ಅನುಗುಣವಾಗಿ ಚಿತ್ರ ಬಿಡಿಸಿದ್ದರೆ, ವಿನ್ಸೆಂಟ್ ವ್ಯಾನ್ ಗಾಗ್ ಕಲ್ಪನೆಗಳು ವಸ್ತು ಸ್ಥಿತಿ ಅಲ್ಲ ಮತ್ತು ಜೀವನಕ್ಕೆ ಅಪ್ರಸ್ತುತ ಅನ್ನುವದನ್ನು ಬಹಳ ಸ್ಪಷ್ಟವಾಗಿ ಹೇಳಿದ್ದಾನೆ.
ಈ ಜ್ಞಾನಬರಿತ ಲೇಖನ ಕ್ಕೆ ಮಂಗಳಾ ಶರಣೆಗೆ ಮತ್ತು ಬಯಲು ತಂಡಕ್ಕೆ ಧನ್ಯವಾದಗಳು.
VIJAYAKUMAR KAMMAR, Tumkur
Oct 11, 2023“ವಿನ್ಸೆಂಟ್ ವ್ಯಾನಗಾಗ್” ಅದ್ಭುತ ಲೇಖನ. ಆ ಕಲಾವಿದನ ಬದುಕನ್ನು ಒಳಹೊಕ್ಕು ಶೋಧಿಸಿ ಬರೆದ ಲೇಖನ.
“ರಾತ್ರಿಯು ಹಗಲಿಗಿಂತ ಹೆಚ್ಚು ಜೀವಂತವಾಗಿಯೂ, ಸಮೃದ್ಧ ಬಣ್ಣದಿಂದಲೂ ಕೂಡಿದೆ, ಹಳದಿ ಮತ್ತು ಕಿತ್ತಳೆಯಿಲ್ಲದೆ ನೀಲಿ ಬಣ್ಣ ಇಲ್ಲ” ವಿನ್ಸೆಂಟ್ ತನ್ನ ಸುತ್ತಲಿನ ಜಗತ್ತನ್ನು ತೆರೆದ ಕಣ್ಣಿನಿಂದ ಆಪ್ತವಾಗಿ ನೋಡುತ್ತಿದ್ದ.
ಅದ್ಭುತ ಮನದಾಳದ ಮಾತು.
ಮತ್ತೆ ಮತ್ತೆ ಓದಬೇಕೆನ್ನುವ ಹಾಗೂ ಈ ಕಥಾನಕ ನನ್ನ ಬದುಕಿನ ಒಳನೋಟಕ್ಕೆ tally ಆಗುತ್ತಾ ಎನ್ನುವ ತವಕ ಹುಟ್ಟಿಸುವ Lovely article.
ಅಭಿನಂದನೆಗಳ ಜೊತೆಗೆ ಧನ್ಯವಾದಗಳು …..
🙏🙏🌹🙏🙏
ವಿದ್ಯಾ patil
Oct 13, 2023ಕಲಾವಿದನ ಜೀವನವನ್ನು ಚೆನ್ನಾಗಿ ಚಿತ್ರಿಸಿದ್ದಾರೆ ಅವರ ಜೀವನದ ಘಟನೆ ಗಳ ನ್ನು ಎಳೆ ಎಳೆ ಯಾಗಿ ಹೇಳಿ ಯಥಾವತ್ ಬದುಕಿನಲ್ಲಿ ನಾವು ಬದುಕಬೇಕು, ಬದುಕಿನ ಸುತ್ತಲಿನ ಜಗತ್ತಿಗೆ ಸ್ಪಂದನೆ ತೋರಿ ಲವಲವಿಕೆ ಯಿಂದ ಬದುಕಬೇಕು ಎಂದು ಹೇಳುವ ಅದ್ಭುತ ಲೇಖನ ಮಂಗಳ ಅಕ್ಕ ಅವರಿಂದ ಮೂಡಿ ಬಂದಿದೆ, ಅವರಿಗೆ ಧನ್ಯವಾದಗಳು
Panchakshari h v
Oct 24, 2023ಬಹುತೇಕರಿಗೆ (ನನಗೂ) ಗೊತ್ತಿರದ ಸಾಧಕನ ಪರಿಚಯವನ್ನು ಸಾಕಷ್ಟು ಆಳವಾಗಿ ಮಾಡಿಸಿದ್ದೀರಿ. ಅವರ ಕುರಿತ ನಿಮ್ಮ ಆಳ ಅಧ್ಯಯನ ನಿಜಕ್ಕೂ ಅಭಿನಂದನೀಯ.
ಧನ್ಯವಾದಗಳು
Manjunath Gurumarga
Oct 25, 2023ಅದ್ಭುತ ಲೇಖನ, ವಿನ್ಸೆಂಟ್ ಬಿಡಿಸಿದ ವರ್ಣಚಿತ್ರಗಳು ಇದ್ದರೆ ಕಳುಹಿಸಿ🙏
ಕೆ ಎಸ್ ಮಲ್ಲೇಶ್
Oct 27, 2023ವಿನ್ಸೆಂಟ್ ಗಾಗ್ ಲೇಖನವನ್ನು ಓದಿದಾಗ ಆ ಚಿತ್ರಕಾರನ ಬಗ್ಗೆ ಮೆಚ್ಚುಗೆ ಮತ್ತು ಅನುಕಂಪ ಎರಡೂ ಉಂಟಾದವು. ಆತನ ಬದುಕಿನ ಕಷ್ಟಗಳನ್ನು ಮರೆಯಲು ಪ್ರಕೃತಿಯ ವೈವಿಧ್ಯತೆಗಳನ್ನು ಹಾಗೂ ತನ್ನ ಸಮಕಾಲೀನ ದುಡಿಯುವ ವರ್ಗದ ಸಂಘರ್ಷಮಯ ವಾಸ್ತವ ಬದುಕನ್ನು ವರ್ಣಚಿತ್ರಗಳನ್ನು ಬಿಡಿಸುವುದಕ್ಕೆ ತೊಡಗಿದ್ದನ್ನು ಮನಮುಟ್ಟುವಂತೆ ಬರೆದ ರೀತಿ ಮನಸ್ಸನ್ನು ತಟ್ಟಿತು. ಇಂತಹ ಆದರ್ಶಗಳ ಕಡೆ ಮುಖಮಾಡದೆ, ಲೌಕಿಕ ವ್ಯಾವಹಾರಿಕ ಬದುಕಲ್ಲಿಯೇ ಸಾರ್ಥಕತೆಯ ಕನಸನ್ನು ಕಾಣುವ ನನ್ನ ಬಗೆಗೆ ನನಗೆ ನಾಚಿಕೆಯೂ ಉಂಟಾಯಿತು.
ನೈಜತೆಯ ಮಗ್ಗಲುಗಳ ಮೂಲಕ ತನ್ನೆಲ್ಲ ಸೌಂದರ್ಯವನ್ನು ಪ್ರಕಟಪಡಿಸಿ ಅದನ್ನು ಯಾರು ಯಥಾವತ್ತಾಗಿ ಉಪಾಸನೆಗೊಳ್ಳುತ್ತಾರೆಂದು ಪ್ರಕೃತಿ ಕಾಯುತ್ತದೆ. ಅಂತಹವರು ಸಿಗುವುದು ಅತಿ ವಿರಳ. ಪ್ರಕೃತಿಯೇ ಮೆಚ್ಚಿಕೊಂಡ ಅಪರೂಪದ ವ್ಯಕ್ತಿ ವಿನ್ಸೆಂಟ್ ಎನಿಸುತ್ತದೆ.
ನನಗೆ ಚಿತ್ರಕಲೆಯ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲ. ನಿಮ್ಮ ವರ್ಣನೆ, ಈ ಚಿಕ್ಕ ವಯಸ್ಸಿಗೆ ನಿಮ್ಮ ಮಕ್ಕಳಲ್ಲಿರುವ ಚಿತ್ರಕಲೆಯ ಬಗ್ಗೆ ಆಸಕ್ತಿ ಮೆಚ್ಚುಗೆಯಾದವು. ಇಲ್ಲಿರುವ ಎರಡು painting ಗಳು ವಿನ್ಸೆಂಟ್ ನವೇ ಇರಬಹುದೇನೋ ಎನ್ನಿಸಿತು. ಅವುಗಳ ಬಗ್ಗೆ ಹೆಚ್ಚು ವಿವರಣೆ ಇದ್ದರೆ ಒಂದು ವರ್ಣಚಿತ್ರವನ್ನು ಅವಲೋಕಿಸುವ ಬಗೆ ಹೇಗೆ ಎಂದು ತಿಳಿಯಬಹುದಿತ್ತು. ನಿಮ್ಮ ಬರವಣಿಗೆ ಸಶಕ್ತವಾಗಿ ಆತನ ಚಿತ್ರಗಳಲ್ಲಿನ ಸೊಬಗನ್ನು ಅವುಗಳೊಳಗೆ ಅಂತರ್ಗತವಾಗಿರುವ ಭಾವನೆಗಳನ್ನು ಅಕ್ಷರಗಳಲ್ಲಿ ಮೂಡಿಸಿದೆ. ಸೋಲಲ್ಲ, ಕೀಳು ಧ್ಯೇಯವೇ ಅಪರಾಧವೆಂದ ಕವಿಯೊಬ್ಬನ ಸಾಲುಗಳು ಆದರ್ಶವೊಂದಕ್ಕೆ ಅರ್ಪಿಸಿಕೊಂಡ ವಿನ್ಸೆಂಟ್ ಮಹಾನ್ ವ್ಯಕ್ತಿಗೆ ಅನ್ವಯಿಸುತ್ತವೆ. ವಿನ್ಸೆಂಟ್ ಸೋಲಲಿಲ್ಲ ಆದರೆ ಆತ ತನ್ನ ಗೆಲುವನ್ನು ಕಾಣಲು ಸಮಾಜ ಬಿಡಲಿಲ್ಲವೆನಿಸುತ್ತದೆ.
ಇನ್ನಷ್ಟು ಆತನ ಚಿತ್ರಗಳಿದ್ದರೆ ಲೇಖನ ಇನ್ನಷ್ಟು ಮೆಚ್ಚುಗೆಯಾಗುತ್ತಿತ್ತು ಎಂತಲೂ ಅನಿಸಿತು. ಮಂಗಳಾ ಹೀಗೇ ಬರೆಯುತ್ತಿರಿ. ಅದ್ಭುತದೆಡೆಗೆ ತುಡಿಯುವಂತೆ ಮಾಡುತ್ತಿರಿ. ವಂದನೆಗಳು ಅಭಿನಂದನೆಗಳು.
Naveeena h a
Oct 28, 2023ಬದುಕನ್ನ ಐಷಾರಾಮಿಯಾಗಿ ಬದುಕಬೇಕು ಎಂದು ಕಲ್ಪಿಸಿಕೊಂಡು ಇಲ್ಲ ಸಲ್ಲದ ಲೋಕ ವ್ಯವಹಾರಗಳಲ್ಲಿ ಮುಳುಗುವ ನಮಗೆ ಕನಸಿನ ಪ್ರಪಂಚಕ್ಕೆ ಮಿಗಿಲಾದ ನಮ್ಮ ಎದುರಿನ ವಾಸ್ತವಿಕ ಲೋಕದ ಸಮಸ್ಯೆಯನ್ನೇ ಯಥಾವತ್ತಾಗಿ ಅನುಭವಿಸುತ್ತಾ ಬದುಕಿನ ಸರಳ ಸತ್ಯವನ್ನು ಚಿತ್ರಿಸಿಕೊಟ್ಟ ವಿನ್ಸೆಂಟ್ ಎಲ್ಲ ಕಾಲಕ್ಕೂ ಮಾದರಿಯಾಗಬಲ್ಲ ಶ್ರೇಷ್ಠ ಕಲಾ ಆರಾಧಕ, ಧಾರ್ಮಿಕ ಪ್ರವಚನಗಳ ಹುದ್ದೆಯನ್ನು ದಾಟಿ ಪ್ರಕೃತಿಯನ್ನೇ ತನ್ನ ಕಲೆಯಲ್ಲಿ ಆರಾಧಿಸಿ ಕಣ್ಣ ಮುಂದಣ ಸಂಕಷ್ಟಗಳನ್ನೇ ಚಿತ್ರವಾಗಿಸಿ ಲೋಕ ದುಃಖಕ್ಕೆ ಪ್ರತಿ ಸ್ಪಂದಿಸಿದ ಆತನ ಚಿತ್ತಾರಕ್ಕೆ ನನ್ನದೊಂದು ಸೆಲ್ಯೂಟ್. ಈ ಸೆಲ್ಯೂಟ್ ವಿನ್ಸೆಂಟ್ನನ್ನು ಪರಿಚಯಿಸಿದ ಮಂಗಳ ಮೇಡಂ ರವರಿಗೂ.
H.A.nanjundaswamy
Nov 1, 2023ವಿನ್ಸೆಂಟ್ ವ್ಯಾನ್‌ಗಾಗ್ ಅದ್ಭುತ ಲೇಖನ;ಜೊತೆಗೆ ಮನಮಿಡಿಯುವನ ನಿರೂಪಣೆ!ನಿಮಗೆ ವಂದನೆಗಳು.
Suma K.R, London
Nov 2, 2023Really heart touching story I like it akka
Vidyadhara Sali, Vijayapur
Nov 3, 2023ಮನ ಕಲಕುವಂತಹ, ಕುತೂಹಲ ಕೆರಳಿಸುವ, ಹೃದಯ ಅರಳಿಸುವ, ಕಲಾಮಯ ಕಲಾಜಗತ್ತನ್ನು, ಕಲಾವಿದರ ಬದುಕನ್ನು ಹಿಂಜಿ ಬತ್ತಿ ಮಾಡಿ, ಕಲಾ ಜ್ಯೋತಿ ಬೆಳಗಿಸಿ ಸಹೃದಯರ ಕಣ್ಣು ತೆರೆಸಿದ್ದೀರಿ, ಧನ್ಯವಾದಗಳು ತಮಗೆ ತುಂಬು ಹೃದಯದ ಅಭಿನಂದನೆಗಳು 🙏🙏🙏