
ಒಂದು ತೊಟ್ಟು ಬೆಳಕು
ಈ
ಕತ್ತಲು
ಒಂದು ತೊಟ್ಟು ಬೆಳಕು
ಕುಡಿಯಿತು ಅಮಲೇರಿದೆ
ಗಾಳಿ ಪಾಲು
ಮುಂದಣ ಗೆರೆ ಹಿಂದಕೂ ತಾಗಿದೆ
ಪರಿಧಿಯ ಬಿಂದು ತನ್ನ
ಇಚ್ಛೆಯನರಿಯದು ಸುತ್ತುವುದು
ಬಯಲು ಎಂಬುದೇನು
ಬಯಲು
ಏನೂ ಇಲ್ಲ ಎಲ್ಲವೂ ಇದೆ
ಕತ್ತಲೂ ಬೆಳಕು
ಈ
ಸಂಜೆಯ ನಸು
ಬೆಳಕು ಕತ್ತಲಿಗೆ ಸರಿಯುವುದ
ಕಾಣಬೇಕು ನಾನು
ದೀಪ ಹಚ್ಚದಿರು ಬೆಳಕಿನ ಹೊದಿಕೆ
ಮರೆಯಲಿ ‘ಅದು’ ಇರುವುದು
ದೀಪದ ಬೆಳಕಲಿ ಕತ್ತಲು ಸಾವು
Comments 3
Jayadev Jawali
Feb 9, 2021ಒಂದು ತೊಟ್ಟು ಬೆಳಕು, ಒಂದು ತೊಟ್ಟು ಕತ್ತಲೆಗೆ ಸಮ ಎಂದು ಎಲ್ಲೋ ಓದಿದ ನೆನಪು. ಬೆಳಕು ಕತ್ತಲೆಯನ್ನು ನುಂಗಬಲ್ಲುದಾದರೆ, ಕತ್ತಲು ಬೆಳಕನ್ನೂ ನುಂಗಬಲ್ಲದು. ಕವನ ಹಲವಾರು ಭಾವಗಳನ್ನು ಮೀಂಟುತ್ತದೆ.
Shivananda G
Feb 10, 2021ಬೆಳಕಿನ ಹೊದಿಕೆಯ ಮರೆಯಲಿ ಇರುವ ‘ಅದು’ ಬಯಲೇ?!
Padmalaya
Feb 23, 2021ಅಲ್ಲಮನ ಬಯಲಾಟ…ಬಯಲು ಬಯಲನೆ ಬಿತ್ತಿ ಬಯಲನೆ ಬೆಳೆದ ಬೆಡಗು ಕತ್ತಲ ಬೆಳಕೆರಡನೂ ನುಂಗಬೇಕಿತ್ತಲ್ಲ…..? ಕತ್ತಲ ನುಂಗಿ ಬೆಳಕು ಜಾರಿ ಆಟದಲ್ಲೆ ಅಡಗಿತ್ತಲ್ಲಾ?