ಐನಸ್ಟೈನ್ ಮತ್ತು ದೇವರು
ಆಲ್ಬರ್ಟ್ ಐನಸ್ಟೈನ್ (1879-1955) ಇಪ್ಪತ್ತನೇ ಶತಮಾನ ಕಂಡಂತಹ ಮಹಾವಿಜ್ಞಾನಿ. ಈ ವಾಕ್ಯದಲ್ಲಿನ ಪದಗಳು ಆತನ ವಿದ್ವತ್ತು ಎಂತಹ ಮಟ್ಟದ್ದು ಎನ್ನುವುದನ್ನು ಸ್ಪಷ್ಟವಾಗಿ ನಿರೂಪಿಸಲಾಗದೆ ಸೋಲುತ್ತವೆ ಎನಿಸುತ್ತದೆ. ಇದಕ್ಕೆ ಕಾರಣ ಅವರು ಪ್ರಚುರಪಡಿಸಿದ ಸಿದ್ಧಾಂತಗಳು ಸಮಕಾಲೀನ ವೈಜ್ಞಾನಿಕ ಪ್ರಪಂಚದ ಅದ್ವಿತೀಯರು ಕೂಡ ಊಹಿಸಲೂ ಸಾಧ್ಯವಾಗದಂತಹ ಮೂಲ ಪರಿಕಲ್ಪನೆಗಳನ್ನು ಒಳಗೊಂಡಿದ್ದವು. ಆತನ ಅಸಾಧಾರಣ ಸಂಶೋಧನೆಯ ಮೂಸೆಯಿಂದ ನವ್ಯಾತಿನವ್ಯ ಪರಿಕಲ್ಪನೆಗಳನ್ನು ಗರ್ಭದಲ್ಲಿಟ್ಟುಕೊಂಡು ಹೊರಬಂದ ಸಿದ್ಧಾಂತಗಳು ಭೌತವಿಜ್ಞಾನ ಅದುವರೆಗೆ ತಳೆದಿದ್ದ ವಿಶ್ವದ ಬಗೆಗಿನ ನಿಲುವುಗಳನ್ನು ಆಮೂಲಾಗ್ರವಾಗಿ ಬದಲಾಯಿಸಿದವು. ಆತನ ವಿಶಿಷ್ಟ ಸಾಪೇಕ್ಷತಾ ಸಿದ್ಧಾಂತವನ್ನು ಒಪ್ಪಿಕೊಳ್ಳುವುದಿರಲಿ, ಅರ್ಥಮಾಡಿಕೊಳ್ಳುವುದಕ್ಕೆ ಇಡೀ ಜಗತ್ತಿಗೆ ಸಾಕಷ್ಟು ಸಮಯ ಹಿಡಿಯಿತು. ಈ ಅದ್ಭುತ ಸಿದ್ಧಾಂತದ ನಿರ್ಣಯಗಳು ಎಷ್ಟು ಮಹತ್ವವಾಗಿದ್ದವೆಂದರೆ, ಮೂರು ಶತಮಾನಗಳಷ್ಟು ಕಾಲ ಸರಿ ಎನಿಸಿಕೊಂಡಿದ್ದ, ನ್ಯೂಟನ್ ಚಿಂತನೆಗಳನ್ನು ಆಧರಿಸಿ ಕಟ್ಟಿದ್ದ ಅಭಿಜಾತ ಅಥವಾ ಕ್ಲಾಸಿಕಲ್ ಸಿದ್ಧಾಂತ ಎಲ್ಲ ಕಡೆ ಸಲ್ಲುವುದಿಲ್ಲ, ಅದರ ವ್ಯಾಪ್ತಿ ಕಿರಿದಾದದ್ದು ಎಂದು ತೋರಿಸಿದವು. ನ್ಯೂಟನ್ ಪರಿಕಲ್ಪನೆಗಳನ್ನು ಆಧರಿಸಿದ ಸಿದ್ಧಾಂತಗಳು ವಿವರಿಸಲಾಗದ ಅನೇಕ ತಾತ್ವಿಕ ಸಮಸ್ಯೆಗಳಿಗೆ ಸಮರ್ಥ ರೀತಿಯಲ್ಲಿ ಉತ್ತರಕೊಟ್ಟ ಈ ವಿಶಿಷ್ಟ ಸಾಪೇಕ್ಷತಾ ಸಿದ್ಧಾಂತ, ಕಾಲ, ದೇಶ ಮತ್ತು ದ್ರವ್ಯರಾಶಿಗಳೆಂಬ ಮೂಲ ಪರಿಮಾಣಗಳ ಬಗೆಗೆ ಅದುವರೆಗೆ ತಿಳಿದು ರೂಢಿಸಿಕೊಂಡಿದ್ದ ಅರ್ಥಗಳನ್ನೇ ಬದಲಾಯಿಸಿತು. ಈ ಸಿದ್ಧಾಂತದ ವ್ಯಾಪ್ತಿಯನ್ನೂ ಮೀರಿದ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತವೆಂಬ ಎರಡನೆಯ ಅದ್ಭುತ ಸಿದ್ಧಾಂತವನ್ನು ಏಕಾಂಗಿಯಾಗಿಯೇ ಕೊಟ್ಟ ಐನಸ್ಟೈನ್ ಆ ಸಿದ್ಧಾಂತದ ಮೂಲಕ ಕಾಲ ಮತ್ತು ದೇಶಗಳು ಒಂದುಗೂಡಿ ನಾಲ್ಕು ಆಯಾಮದ ವ್ಯವಸ್ಥೆ ಹೊಂದಿರುವುದಲ್ಲದೆ ದ್ರವ್ಯರಾಶಿಗನುಗುಣವಾಗಿ ವಕ್ರರೂಪ ತಳೆದಿರುವ ಹೊಸ ಮಾದರಿಯೊಂದನ್ನು ಕೊಟ್ಟರು. ಈ ಸಿದ್ಧಾಂತದ ಮೂಲಕ ವಿಶ್ವದಲ್ಲಿನ ಗುರುತ್ವಾಕರ್ಷಣೆಗೆ ಒಂದು ಹೊಸ ಭಾಷ್ಯವನ್ನೇ ಬರೆದರು. ಐನಸ್ಟೈನ್ ಏನಾದರೂ ಹುಟ್ಟದಿದ್ದಲ್ಲಿ ಅವರ ಈ ಎರಡನೆಯ ಸಿದ್ಧಾಂತವನ್ನು ಬೇರೆ ಯಾರೂ ಕಂಡುಹಿಡಿಯುವ ಸಾಧ್ಯತೆಯೇ ಇರಲಿಲ್ಲವೆಂಬ ಹೇಳಿಕೆ ಗಮನಿಸಿದರೆ, ಈ ಸಿದ್ಧಾಂತವನ್ನು ಮನಸ್ಸಿನಲ್ಲಿ ರೂಪಿಸಿಕೊಂಡದ್ದರ ಹಿಂದೆ ಎಂತಹ ಅದ್ಭುತ ಬುದ್ಧಿವಂತಿಕೆ, ವಿಶಾಲ ದೃಷ್ಟಿಕೋನ ಮತ್ತು ಅದೆಷ್ಟು ಸೂಕ್ಷ್ಮ ಒಳನೋಟ ಕೆಲಸ ಮಾಡಿದೆ ಎಂಬುದನ್ನು ಊಹಿಸಬಹುದೇನೋ! ಬೆಳಕಿನ ಬಗ್ಗೆಯೂ ವಿಚಕ್ಷಣ ಸಂಶೋಧಕ ದೃಷ್ಟಿ ಬೀರಿ ಅದರ ಕ್ವಾಂಟಂ ಗುಣಗಳನ್ನು ಬೆಂಬಲಿಸುತ್ತ ದ್ಯುತಿವಿದ್ಯುತ್ ಪರಿಣಾಮ ನಡೆಯುವಲ್ಲಿ ಬೆಳಕು ಕಣದಂತೆ ವರ್ತಿಸುತ್ತದೆ ಎನ್ನುವ ಪರಿಕಲ್ಪನೆಯೊಡನೆ ಆ ಪರಿಣಾಮದ ಎಲ್ಲ ಪ್ರಾಯೋಗಿಕ ಫಲಿತಾಂಶಗಳನ್ನೂ ಅತ್ಯಂತ ತಾರ್ಕಿಕವಾಗಿ ನಿರೂಪಿಸಿದರು. ನಿರ್ದಿಷ್ಟ ಶಕ್ತಿಯ ಬೆಳಕು ಲೋಹದ ತಟ್ಟೆಯ ಮೇಲೆ ಸಂಪಾತವಾದ ಕೂಡಲೆ ಎಲೆಕ್ಟ್ರಾನುಗಳು ಹೊರಬರುತ್ತಿದ್ದ ಕ್ರಿಯೆ ಅವರನ್ನು ಬಹುಕಾಲ ಕಾಡಿತ್ತು. ಅದನ್ನು ಕೊನೆಗೂ ಯಶಸ್ವಿಯಾಗಿ ಅರ್ಥೈಸುವಲ್ಲಿ ಸಾಧ್ಯವಾದುದಕ್ಕೆ ಐನಸ್ಟೈನ್ ನೊಬೆಲ್ ಪ್ರಶಸ್ತಿಗೆ ಭಾಜನರಾದರು. (ಅವರ ಸಾಪೇಕ್ಷತಾ ಸಿದ್ಧಾಂತಗಳನ್ನು ಪ್ರಶಸ್ತಿಗೆ ಪ್ರಮುಖವಾಗಿ ಪರಿಗಣಿಸದಿದ್ದುದಕ್ಕೆ ಕಾರಣ ಅವು ನೊಬೆಲ್ ಸಮಿತಿಯವರಿಗೆ ಅರ್ಥವಾಗಿರಲಿಲ್ಲವೆಂತಲೂ, ಅಥವಾ ಆ ಸಿದ್ಧಾಂತಗಳು ಪ್ರಾಯೋಗಿಕವಾಗಿ ಸಂಪೂರ್ಣವಾಗಿ ಸಿಂಧುತ್ವ ಪಡೆದಿರಲಿಲ್ಲವೆಂಬ ಅನುಮಾನಗಳು ಇದ್ದವೆಂತಲೂ ಕೆಲವು ಆಕರಗಳಲ್ಲಿ ನಮೂದಿಸಲಾಗಿದೆ.) ಬೆಳಕಿನ ಈ ಕ್ರಿಯೆಗಷ್ಟೇ ಸೀಮಿತವಾಗದೆ ಮುಂದುವರಿದ ಅವರು ತಮ್ಮ ಸಂಶೋಧನೆಯನ್ನು ವಸ್ತುಗಳು ಬೆಳಕನ್ನು ಹೀರಿಕೊಳ್ಳುವ, ಹೊರಸೂಸುವ ಕ್ರಮಗಳಿಗೂ ವಿಸ್ತರಿಸಿ ಪ್ರಚುರಪಡಿಸಿದ ನವ್ಯಾತಿನವ್ಯ ಪರಿಕಲ್ಪನೆಗಳು ಮುಂದೆ ಲೇಸರ್ ಮುಂತಾದ ಬೆಳಕಿನ ಆಕರಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದವು. ಹಾಗೆಯೇ ವಿಶ್ವ ರಚನೆಯ ರಹಸ್ಯವನ್ನರಿಯಲು ಹೊರಟ ಐನಸ್ಟೈನ್ ಸಾಧಿಸಿದ್ದು ಅಪಾರ. ಅವರ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ ಇಡೀ ವಿಶ್ವದ ರಚನೆ ಮತ್ತು ಅದರ ಭೂತ ಭವಿಷ್ಯಗಳ ಬಗೆಗೂ ಉತ್ತರಗಳನ್ನು ಕೊಡುವಲ್ಲಿ ಅತ್ಯಂತ ಯಶಸ್ವಿಯಾಯಿತು. ವಿಶ್ವರಚನೆಯನ್ನು ತಿಳಿಯುವುದಕ್ಕೆ ತಮ್ಮ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ಸಮೀಕರಣಗಳನ್ನು ಬಿಡಿಸತೊಡಗಿದಾಗ ವಿಶ್ವ ಹಿಗ್ಗುತಿದೆ ಎಂದು ಐನಸ್ಟೈನರ ಸಮೀಕರಣಗಳು ಸ್ಪಷ್ಟವಾಗಿ ಗುರುತಿಸಿದವು. ಆದರೆ ವಿಶ್ವ ಹಿಗ್ಗುವುದೂ ಇಲ್ಲ ಕುಗ್ಗುವುದೂ ಇಲ್ಲ ಇದ್ದ ಹಾಗೆ ಇರುತ್ತದೆಂಬುದು ಅವರ ಮನದಿಂಗಿತವಾಗಿತ್ತು. ಹೀಗಾಗಿ ತಮ್ಮ ಸಮೀಕರಣಗಳಿಗೆ ಹೊಸತೊಂದನ್ನು ಸೇರಿಸಿ ನವೀಕರಿಸಿದ ಸಮೀಕರಣಗಳನ್ನು ಬಿಡಿಸಿದಾಗ ವಿಶ್ವ ತಟಸ್ಥವಾಗಿದೆಯೆಂಬ ಉತ್ತರ ಸಿಕ್ಕು ಐನಸ್ಟೈನ್ ಸಂತಸಪಟ್ಟರು. ಆದರೆ ಈ ಸಂತಸ ಬಹು ಕಾಲ ಉಳಿಯಲಿಲ್ಲ. ಸ್ವಲ್ಪಕಾಲದಲ್ಲಿಯೇ ಪ್ರಯೋಗದ ಮೂಲಕ ವಿಶ್ವ ಹಿಗ್ಗುತ್ತಿದೆ ಎಂಬ ಸತ್ಯ ಗೊತ್ತಾದಾಗ ತಮ್ಮ ಮೊದಲಿನ ಸಮೀಕರಣಗಳೇ ಸರಿಯುತ್ತರ ಕೊಟ್ಟರೂ ಬದಲಾಯಿಸಿ ಎಂತಹ ಪ್ರಮಾದವೆಸಗಿದೆ ಎಂದು ಅವರು ಮರುಗಿದ್ದೂ ಉಂಟು. ಇತ್ತೀಚಿನ ಸಂಶೋಧನೆಗಳ ಪ್ರಕಾರ ವಿಶ್ವದ ಆಗುಹೋಗುಗಳನ್ನು ನಿರ್ಧರಿಸುವಲ್ಲಿ ನಮಗೆ ಗೋಚರವಾಗಿರುವ ಶಕ್ತಿಮೂಲಗಳಿಗಿಂತಲೂ ವಿಶ್ವದೊಳಗೆ ಗೋಚರವಾಗದಂತೆ ಹರಡಿರುವ ಕಪ್ಪು ದ್ರವ್ಯ ಮತ್ತು ಕಪ್ಪು ಶಕ್ತಿಗಳೆಂಬ ಹೊಸ ಆಕರಗಳು ಕಾರಣ ಎನ್ನಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ ಈ ಹೊಸ ಆಕರಗಳ ಬಗ್ಗೆ ಐನಸ್ಟೈನರು, ಯಾವ ಬದಲಾವಣೆಯನ್ನು ಮಾಡಿ ತಪ್ಪೆಸಗಿದೆನೆಂದು ಮರುಗಿದರೋ, ಆ ಬದಲಾವಣೆಗೊಂಡ ಸಮೀಕರಣಗಳೇ ಈಗ ತಾತ್ವಿಕ ಹಾಗೂ ತಾರ್ಕಿಕ ಆಧಾರ ನೀಡುತ್ತಿವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ!!
ಐನಸ್ಟೈನ್ ಕೊಟ್ಟ ಅತ್ಯಂತ ಮಹತ್ವದ ಸಮೀಕರಣ E=mc2 ಇದು ವಸ್ತುಗಳಲ್ಲಿ ಅಗಾಧ ಶಕ್ತಿ ಅಡಗಿದೆ ಎನ್ನುವುದನ್ನು ತಿಳಿಸಿಕೊಟ್ಟ ಅವರ ಸಾಪೇಕ್ಷ ಸಿದ್ಧಾಂತದ ಮುಖ್ಯ ತೀರ್ಮಾನಗಳಲ್ಲಿ ಒಂದು. ಮುಂದೆ ವಿಶ್ವ ಮಹಾಸಂಗ್ರಾಮದಲ್ಲಿ ಈ ಸೂತ್ರ ಬಳಸಿ ವಿನಾಶಕಾರಿ ಬಾಂಬುಗಳನ್ನು ಪ್ರಯೋಗಿಸಿ ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡಿದ್ದಕ್ಕೆ ಐನಸ್ಟೈನ್ ಮಮ್ಮಲ ಮರುಗಿದರು. ಈ ಘಟನೆಯಿಂದ ಘಾಸಿಗೊಂಡಿದ್ದ ಅವರು ಎಲ್ಲಾ ವಿಜ್ಞಾನಿಗಳಿಗೂ ಕರೆಕೊಟ್ಟು ಅಣುವಿಜ್ಞಾನವನ್ನು ಜಾಗತಿಕ ಶಾಂತಿ ಹಾಗೂ ಮಾನವನ ಒಳಿತಿಗಾಗಿಯೇ ಉಪಯೋಗಿಸಲು ಕಂಕಣಬದ್ಧರಾಗಿ ಹೋರಾಡಬೇಕೆಂದು ಬಿನ್ನವಿಸಿಕೊಂಡರು. ವಿಜ್ಞಾನಿಗಳನ್ನು ಒಟ್ಟುಗೂಡಿಸಿ ವಿಧ್ವಂಸಕಾರಿ ಕೃತ್ಯಗಳನ್ನು ನಿಲ್ಲಿಸಬೇಕೆಂದು ಸರ್ಕಾರಗಳಿಗೆ ಆಗ್ರಹಪೂರ್ವಕವಾಗಿ ಮನವಿ ಸಲ್ಲಿಸಿದರು. ಐನಸ್ಟೈನ್ ಅಸಾಧಾರಣ ವಿಜ್ಞಾನಿಯಷ್ಟೇ ಆಗಿರದೆ ಅತ್ಯಂತ ಮೇರುಮಟ್ಟದ ಮಾನವತಾವಾದಿಯಾಗಿದ್ದರು. ಮಾನವ ಜನಾಂಗದ ಬರ್ಬರ ವರ್ತನೆಗಳನ್ನು ಗಮನಿಸಿದ ಐನ್ಸ್ಟೈನ್ “ಮನುಷ್ಯನ ದುರ್ನಡತೆಗೆ, ಮೂರ್ಖತನಕ್ಕೆ ಕೊನೆಯೇ ಇಲ್ಲವೆನಿಸುತ್ತದೆ” ಎಂದು ನೊಂದು ನುಡಿದಿದ್ದಾರೆ.
ಅತ್ಯಂತ ಶ್ರೇಷ್ಠ ವಿಜ್ಞಾನಿಯೆಂದು ಇಡೀ ಪ್ರಪಂಚದಿಂದ ಗುರುತಿಸಲ್ಪಟ್ಟ ಐನಸ್ಟೈನ್ ದೈವಕಲ್ಪನೆಯ ಬಗ್ಗೆ ಎಂತಹ ನಿಲುವು ತಳೆದಿದ್ದರೆನ್ನುವುದು ನಿಜಕ್ಕೂ ಕುತೂಹಲದ ವಿಷಯವೇ. ಹಾಗೆ ಗಮನಿಸಿದರೆ ಅವರ ನಿಲುವುಗಳು ವಿಶೇಷವಾಗಿಯೇ ಇವೆ. ದೇವರ ಬಗೆಗಿನ ಅವರ ಹೇಳಿಕೆ, ಅನಿಸಿಕೆಗಳನ್ನು ಓದಿದ ಕೇಳಿದ ಯಾರೇ ಆಗಲಿ ಆಲೋಚಿಸತೊಡಗುತ್ತಾರೆ. ಅದಕ್ಕೆ ಐನಸ್ಟೈನ್ ತಮ್ಮ ನಿಲುವುಗಳನ್ನು ಸಕಾರಣವಾಗಿ ತಾರ್ಕಿಕವಾಗಿ ವ್ಯಕ್ತಪಡಿಸಿರುವುದು ಒಂದು ಮುಖ್ಯ ಕಾರಣವಾದರೆ ಅಂತಹ ನಿಲುವುಗಳನ್ನು ನಮ್ಮ ಬದುಕಿನಲ್ಲಿ ತಳೆದು ಅವು ತೋರಬಹುದಾದ ದಾರಿಯಲ್ಲಿ ಸಾಗಲು ಹಿಂದುಮುಂದು ನೋಡಲೆತ್ನಿಸುವ ನಮ್ಮ ಮನಸ್ಸುಗಳ ಜಾಯಮಾನ ಮತ್ತೊಂದು ಕಾರಣ. ಬನ್ನಿ, ಐನಸ್ಟೈನ್ ದೇವರ ಬಗ್ಗೆ ತಳೆದಿದ್ದ ನಿಲುವುಗಳೇನು? ಆ ನಿಲುವುಗಳನ್ನು ತಾಳಲು ಕಾರಣಗಳೇನು? ಅವರು ಬೆಳೆಯತೊಡಗಿದಂತೆ ಅವೂ ಬದಲಾವಣೆ ಹೊಂದಿದವೇ ಇಲ್ಲವೇ ಎಂಬುದನ್ನು ಅವರ ಮಾತುಗಳಿಂದ, ಹಲವರ ಪ್ರಶ್ನೆಗಳಿಗೆ ಕೊಟ್ಟ ಉತ್ತರಗಳಿಂದ, ಅವರ ಬರವಣಿಗೆಗಳಿಂದ ತಿಳಿಯೋಣ.
ಯಹೂದಿ ಧರ್ಮಕ್ಕೆ ಸೇರಿದ ಕುಟುಂಬದಲ್ಲಿ ಜನಿಸಿದ ಐನಸ್ಟೈನ್ ಬಾಲ್ಯದಲ್ಲೇನೂ ತಮ್ಮ ಧರ್ಮದ ಆಚರಣೆ ರೂಢಿಸಿಕೊಂಡಿರಲಿಲ್ಲ. ಹನ್ನೊಂದನೆಯ ವಯಸ್ಸಿನವರಾಗಿದ್ದಾಗ ತಮ್ಮಸಂಬಂಧಿಯೊಬ್ಬರಿಂದ ಯಹೂದಿ ಧಾರ್ಮಿಕ ನಂಬಿಕೆಗಳನ್ನು ಕಲಿಯುತ್ತಿದ್ದ ಅವರಿಗೆ ಮುಂದಿನ ವರ್ಷದಲ್ಲಿ ವಿಜ್ಞಾನ ಕಲಿಯತೊಡಗಿದಾಗ ಧರ್ಮದ ಬಗ್ಗೆ ಕೇಳಿದ್ದ ವೃತ್ತಾಂತಗಳು ಕೇವಲ ಕತೆಗಳಷ್ಟೇ ಎನಿಸತೊಡಗಿತು. ಹೀಗೆ ಎಳೆವೆಯಲ್ಲೇ ವಿಜ್ಞಾನ ಅವರಿಗೆ ಮಾರ್ಗದರ್ಶಿಯಾಗಿ ಸಮಾಜದೊಳಗೆ ಸಮಾಜದವರಿಂದಲೇ ಸ್ಥಾಪಿತಗೊಂಡಿರುವ ಧರ್ಮಗಳನ್ನು ಒಪ್ಪಲೇ ಇಲ್ಲ. ಅವೇನಿದ್ದರೂ ಎಲ್ಲದಕ್ಕೂ ಭಯಭೀತರಾಗುವವರು ಮೊರೆಹೋಗುವ, ನಿಷ್ಕಪಟ ಅಮಾಯಕರನ್ನು ಸೆಳೆಯುವ ದಾರಿಗಳೆಂದು ತೀರ್ಮಾನಿಸಿದ ಅವರು ಅವುಗಳನ್ನು ಅನುಸರಿಸುವುದಿರಲಿ, ಖಡಾಖಂಡಿತವಾಗಿ ವಿರೋಧಿಸಿದರು. ಮನುಷ್ಯರ ನಡತೆಗಳ ಮೇಲೆ ನೇರ ಪ್ರಭಾವ ಬೀರುವ ದೈವವಿರುವುದು ಸತ್ಯವೆಂದು ಜನತೆಗೆ ಉಪದೇಶಿಸುತ್ತಿದ್ದ ಮತಗಳ ಹೇಳಿಕೆಯನ್ನು ಸಾರಾಸಗಟಾಗಿ ವಿರೋಧಿಸಿದ ಐನಸ್ಟೈನ್, “ಅಂತಹ ದೇವರಿದ್ದಾನೆ ಎಂದು ನಾನಂತೂ ನಂಬಲಾರೆ. ತಾನು ಸೃಷ್ಟಿಸಿದ ಜೀವಿಗಳನ್ನೇ ಶಿಕ್ಷಿಸುವ, ಪುರಸ್ಕರಿಸುವಂತಹ ದೈವವೊಂದಿದೆ. ನಮ್ಮ ಕೃತ್ಯಗಳೇ ಆ ದೈವದ ಉದ್ದೇಶಗಳನ್ನು ರೂಪಿಸುತ್ತವೆ. ಒಟ್ಟಾರೆ ನಮ್ಮ ದೌರ್ಬಲ್ಯಗಳ ಪ್ರತೀಕವಾಗಿ ದೈವವಿದೆ ಎನ್ನುವಂತಹ ವಿಚಾರಗಳನ್ನು ಕಲ್ಪಿಸಿಕೊಳ್ಳಲಾರೆ” ಎನ್ನುತ್ತಾರೆ. ವ್ಯಕ್ತಿಗತವಾದ ದೇವರಿದ್ದಾನೆ ಎನ್ನುವ ವಿಚಾರವೇ ಅತ್ಯಂತ ಅಸಮಂಜಸ, ಅಸಂಬದ್ಧ ಹಾಗೂ ಅತಾರ್ಕಿಕವಾದದ್ದು ಎಂದಿದ್ದಾರೆ. ಸಂಕಟಗಳನ್ನು ತಗ್ಗಿಸುವ, ನೋವುಗಳನ್ನು ನಿವಾರಿಸುವ ಶಕ್ತಿಯಿದ್ದೂ, ಅದನ್ನು ಮಾಡದ ದೈವದ ಬಗ್ಗೆ ನಂಬಿಕೆ ಉಳಿಸಿಕೊಳ್ಳಲು, ತನ್ನ ಹಿಂದಿನ ಎಷ್ಟೋ ಜನರಂತೆ, ಐನಸ್ಟೈನ್ ಅವರಿಗೂ, ಜಗತ್ತು ಪ್ರತಿಕೂಲ ಅಂಗಣವಾಗಿಯೇ ಕಂಡಿತು ಎನ್ನುವುದನ್ನು ಗಮನಿಸಿದರೆ ದೈವವನ್ನು ಕುರಿತಾದ ಸ್ವತಂತ್ರ ಚಿಂತನೆಗಳನ್ನು ವಿಭಿನ್ನ ನಿಲುವುಗಳನ್ನು ವ್ಯಕ್ತಪಡಿಸಲು ಅವರ ಸಮಕಾಲೀನ ಸಾಮಾಜಿಕ ವ್ಯವಸ್ಥೆಯಲ್ಲಿ ಮುಕ್ತವಾತಾವರಣವಿರಲಿಲ್ಲ ಎನ್ನುವುದು ಗೋಚರವಾಗುತ್ತದೆ.
ಐನಸ್ಟೈನ್ ಅವರಿಗೆ ದೇವರ ಅಸ್ತಿತ್ವದ ಬಗ್ಗೆ ನಿಜವಾಗಿಯೂ ನಂಬಿಕೆ ಇತ್ತೇ ಅಥವಾ ಇರಲಿಲ್ಲವೇ ಎನ್ನುವ ವಿಚಾರ ಬಹಳಷ್ಟು ಜನರನ್ನು ಕಾಡಿತ್ತು. ತಮ್ಮ ಕಾಲದಲ್ಲಿದ್ದ ನಂಬಿಕೆಯನ್ನು ಅವರು ಪ್ರಖ್ಯಾತರಾದ ಮೇಲೆಯೂ ಹಾಗೆಯೇ ಮುಂದುವರೆಸಿಕೊಂಡು ಸಾಗುತ್ತಿದ್ದಾರೋ ಹೇಗೋ ಎಂಬ ಕುತೂಹಲ ಹಲವರದ್ದು. “ನಾಸ್ತಿಕನೊಬ್ಬ ದೇವರ ಬಗ್ಗೆ ಏನು ನಿಲುವನ್ನು ಹೊಂದಿದ್ದಾನೋ ನನ್ನದೂ ಅದೇ” ಎನ್ನುತ್ತಿದ್ದ ಐನಸ್ಟೈನ್ ಮುಂದೊಮ್ಮೆ “ನಾನೊಬ್ಬ ಅತ್ಯಂತ ಧಾರ್ಮಿಕನಾದ ನಾಸ್ತಿಕ” ಎಂಬ ಮೇಲ್ನೋಟಕ್ಕೆ ಅಸಂಗತವೆನ್ನಿಸುವಂತಹ ಹೇಳಿಕೆ ಕೊಟ್ಟದ್ದೂ ಅಲ್ಲದೆ ಅನೇಕ ಬಾರಿ ತಮ್ಮ ಬರವಣಿಗೆಗಳಲ್ಲಿ ತಮ್ಮ ನಿಲುವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವ ಸಲುವಾಗಿ ಆಸ್ತಿಕರಾದವರು ಬಳಸುವಂತಹ ರೀತಿಯಲ್ಲೇ ತಾವೂ ದೈವವನ್ನು ಉಲ್ಲೇಖಿಸಿದ್ದಾರೆ. ಹೀಗೆ ದೇವರ ಪ್ರಸ್ತಾಪವನ್ನು ಪದೇ ಪದೇ ಮಾಡುತ್ತಿದ್ದುದನ್ನು ಗಮನಿಸಿದ ಫೆಡ್ರಿಕ್ ದುರ್ರೆಂಮತ್ (1921–1990) ಎಂಬ ಸ್ವಿಸ್ ನಾಟಕಕಾರ “ಐನಸ್ಟೈನ್ ಮಾರುವೇಷದಲ್ಲಿರುವ ಧರ್ಮಶಾಸ್ತ್ರಜ್ಞನಂತೆ ಕಾಣಿಸುತ್ತಾರೆ” ಎಂದಿದ್ದಾನೆ.
ಈ ಜಗತ್ತಿನಲ್ಲಿ ಜರುಗುವ ಘಟನೆಗಳೆಲ್ಲವೂ ನಿರ್ಣಾಯಕವಾದವು ಎಂಬ ನಿಲುವನ್ನು ಹೊಂದಿರುವ ಕ್ಲಾಸಿಕಲ್ ಸಿದ್ಧಾಂತ ಸೂಕ್ಷ್ಮ ಪ್ರಪಂಚದ ವರ್ತನೆಗಳ ಬಗ್ಗೆ ನಡೆದ ಪ್ರಯೋಗಗಳನ್ನು ವಿವರಿಸುವಲ್ಲಿ ಸೋತಾಗ ಐನಸ್ಟೈನರೂ ಸೇರಿದಂತೆ ಹಲವು ವಿಜ್ಞಾನಿಗಳು ಸಾಕಷ್ಟು ಚಿಂತನೆ ಆಲೋಚನೆಗಳ ಮೂಲಕ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಕಟ್ಟಿದ್ದು ಕ್ವಾಂಟಂ ಸಿದ್ಧಾಂತ. ಆ ಎಲ್ಲ ಪ್ರಯೋಗಗಳನ್ನು ಸರಿಯಾಗಿ ವಿವರಿಸುವಲ್ಲಿ ಈ ಹೊಸ ಸಿದ್ಧಾಂತ ಯಶಸ್ಸಿನ ಮೇಲೆ ಯಶಸ್ಸು ಸಾಧಿಸತೊಡಗಿತ್ತು. ಮೂಲತಃ ಭೌತಿಕ ಘಟನೆಗಳು ನಿರ್ಣಾಯಕವಾಗಿರದೆ ಸಂಭವನೀಯತೆಯ ನಿಯಮಗಳನ್ನು ಅನುಸರಿಸುತ್ತವೆ ಎಂಬ ಪ್ರತಿಪಾದನೆಯನ್ನು ಆಂತರ್ಯದೊಳಗಿಟ್ಟುಕೊಂಡು ಕ್ಲಾಸಿಕಲ್ ಸಿದ್ಧಾಂತವನ್ನು ಹಿಂದಿಕ್ಕಿದ ಕ್ವಾಂಟಂ ಸಿದ್ಧಾಂತದ ಈ ನಿಲುವು ಐನಸ್ಟೈನರಿಗೆ ಒಪ್ಪಿಗೆಯಾಗಿರಲಿಲ್ಲ. ಪ್ರಕೃತಿಯಲ್ಲಿನ ಘಟನೆಗಳು ಕಾರ್ಯಕಾರಣ ಸಂಬಂಧಕ್ಕೆ ಒಳಪಟ್ಟು ನಿರ್ಣಾಯಕವಾಗಿಯೇ ಜರುಗುತ್ತವೆ. ನಮಗೆ ಆ ನಿರ್ಣಾಯಕತೆ ಗೋಚರಿಸದಿದ್ದರೆ ಅದು ಆ ಘಟನೆಗಳಿಗೆ ಕಾರಣವಾದ ಎಲ್ಲ ಅಂಶಗಳೂ ನಮಗೆ ಗೊತ್ತಿಲ್ಲವೆನ್ನುವುದು ಕಾರಣ. ಇಂತಹ ಕೆಲವು ಅಜ್ಞಾತವಾಗಿರುವ ಅಂಶಗಳು ನಾವು ಗಮನಿಸದಿರುವ ಅಥವಾ ಅವು ನಮಗೆ ಕಾಣದಿರುವ ಸಾಧ್ಯತೆಯಿಂದಾಗಿ ಘಟನೆ ಹೀಗೇ ನಡೆಯುತ್ತದೆ ಎಂದು ನಿರ್ಣಾಯಕವಾಗಿ ಹೇಳಲು ಆಗದಿರಬಹುದೇ ಹೊರತು ಮೂಲತಃ ಘಟನೆಯ ಆಗುವಿಕೆಯೇ ಸಂಭಾವ್ಯತೆಯಿಂದ ಕೂಡಿದೆ ಎನ್ನುವುದು ಸರಿಯಲ್ಲ ಎನ್ನುವುದು ಅವರ ನಿಲುವು. ಹೀಗೆ ತಾತ್ವಿಕವಾಗಿಯೂ ತಾರ್ಕಿಕವಾಗಿಯೂ ಕ್ವಾಂಟಂ ಸಿದ್ಧಾಂತದಲ್ಲಿನ ಈ ಸಂಭಾವ್ಯತೆಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಐನಸ್ಟೈನ್ ಒಮ್ಮೆ, “ದೇವರು ದಾಳಗಳನ್ನು ಬೀಸಿ ಪಗಡೆಯಾಡುತ್ತಿಲ್ಲ”ವೆಂದು ಸಂಭವನೀಯತೆಯನ್ನು ಪ್ರತಿಪಾದಿಸುತ್ತಿದ್ದವರ ಎದುರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದು ಉಂಟು. ಐನಸ್ಟೈನ್ ಇಲ್ಲಿ ಸಾಂದರ್ಭಿಕವಾಗಿ ದೇವರನ್ನು ಉಲ್ಲೇಖಿಸಿದ್ದಾರೆ. ಬಹುಶಃ ತಮ್ಮ ನಿಲುವನ್ನು ಅರ್ಥ ಮಾಡಿಸಲು ಇದೇ ಹೆಚ್ಚು ಪರಿಣಾಮಕಾರಿಯಾದ ಉತ್ತಮ ವಾಕ್ಯರಚನೆಯೆಂದು ಅವರಿಗೆ ಅನ್ನಿಸಿರಬೇಕು. ಈ ಅಂಶ ಜನರಿಗೆ ಗೊತ್ತಿದ್ದರೂ ಅವರ ಕುತೂಹಲ ತಣಿದಿರಲಿಲ್ಲವೆನಿಸುತ್ತದೆ. ಮೇರು ವಿಜ್ಞಾನಿ ಐನ್ಸ್ಟೈನ್ ತಾವು ನಾಸ್ತಿಕರೆನ್ನುತ್ತಲೇ ಆಗಾಗ್ಗೆ ದೈವವನ್ನು ತಮ್ಮ ಹೇಳಿಕೆಗಳಲ್ಲಿ, ಪತ್ರಗಳಲ್ಲಿ ಬಳಸುವುದು ಅವರಿಗೆ ವಿಚಿತ್ರವಾಗಿ ಕಂಡಿರಬೇಕು. ದೇವರ ಬಗ್ಗೆ ಐನಸ್ಟೈನರ ನಿಜ ನಿಲುವೇನು ಎಂದು ಅಗಾಗ್ಗೆ ಅನೇಕರಿಗೆ ಅನಿಸಿರಲೇಬೇಕು. ಅವರು ಹೆಚ್ಚುಹೆಚ್ಚು ಪ್ರಸಿದ್ಧರಾಗುತ್ತಿದ್ದಂತೆ ಈ ಪ್ರಶ್ನೆಯೂ ಅಷ್ಟೇ ಜನಪ್ರಿಯವಾಗತೊಡಗಿತ್ತು. ನ್ಯೂಯಾರ್ಕ್ ನಗರದ ಪಾದ್ರಿಯೊಬ್ಬರು ತಡೆಯಲಾರದೆ ಐನಸ್ಟೈನರಿಗೆ ತಂತಿಯೊಂದನ್ನು ಕಳುಹಿಸಿದರಂತೆ: “ನೀವು ದೇವರನ್ನು ನಂಬುತ್ತೀರಾ? ಸ್ಟಾಪ್. ಐವತ್ತು ಪದಗಳೊಳಗೆ ಪ್ರತ್ಯುತ್ತರ ನೀಡಲು ಮುಂಗಡವಾಗಿ ಹಣ ಸಂದಾಯ ಮಾಡಲಾಗಿದೆ” ಈ ಪ್ರಶ್ನೆಗೆ ಐನಸ್ಟೈನ್ ಕಡಿಮೆ ಪದಗಳಲ್ಲೇ ಕೊಟ್ಟ ಪ್ರತ್ಯುತ್ತರ ಹೀಗಿತ್ತು- “ಯಾವುದು ಅಸ್ಥಿತ್ವದಲ್ಲಿದೆಯೋ ಅದರ ಕ್ರಮಬದ್ಧವಾದ ಸಾಮರಸ್ಯದಲ್ಲಿಯೇ ಸ್ಪಿನೋಝ ಹೇಳುವ ದೇವರು ತನ್ನನ್ನು ಪ್ರಕಟಿಸಿಕೊಳ್ಳುತ್ತಾನೆ. ಆ ದೈವವನ್ನು ನಂಬುತ್ತೇನೆಯೇ ಹೊರತು ಜನರ ಕಷ್ಟ ಕಾರ್ಪಣ್ಯಗಳಿಗೆ ಎಡತಾಕುವ ದೇವರನ್ನಲ್ಲ” ಹೀಗೆ ಸೃಷ್ಟಿರಚನೆಯಲ್ಲೇ ದೈವವನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಬೇಕೆಂದ ಸ್ಪಿನೋಝ ಯಾರು? ಐನಸ್ಟೈನರಿಗಿಂತಲೂ ಮೂರು ಶತಮಾನಗಳಷ್ಟು ಹಿಂದೆ ಅಂದರೆ ನ್ಯೂಟನ್ ಕಾಲದಲ್ಲಿದ್ದ ಸ್ಪಿನೋಝ ತಳೆದಿದ್ದ ತಾತ್ವಿಕ ನಿಲುವೇನು?
ಹಾಲೆಂಡ್ ದೇಶದ ಯಹೂದಿ ಬೆನೆಡಿಕ್ಟ್ ಡಿ ಸ್ಪಿನೋಝ (1632-77) ಒಬ್ಬ ವಿಚಾರವಾದಿ, ಐನಸ್ಟೈನರನ್ನು ಬಹುವಾಗಿ ಪ್ರಭಾವಿಸಿದ ವಿಶಿಷ್ಟ ತತ್ವಜ್ಞಾನಿ. ಜ್ಞಾನಾರ್ಜನೆಯಲ್ಲಿ ನಮ್ಮ ಇಂದ್ರಿಯಗಳಿಗಿಂತ ಶುದ್ಧ ತರ್ಕವೇ ಪ್ರಮುಖ ಪಾತ್ರವಹಿಸುತ್ತದೆಂದು ನಂಬಿದ್ದ ಸ್ಪಿನೋಝ ಜ್ಯಾಮಿತಿಯನ್ನು ತತ್ವಜ್ಞಾನದ ಮಾದರಿಯಾಗಿ ಪ್ರತಿಪಾದಿಸಿದ್ದರು. ಹಾಗೆಯೇ, ಹಿಂದಿನಿಂದಲೂ ತತ್ವಜ್ಞಾನಿಗಳು ನಂಬಿಕೊಂಡಿದ್ದ ಮತ್ತು ಜನಮಾನಸದಲ್ಲಿ ಬಿತ್ತಿದ್ದ ಮೂರು ವಿಚಾರಗಳನ್ನು ಸ್ಪಿನೋಝ ತಿರಸ್ಕರಿಸಿದ್ದರು. ಮೊದಲಿಗೆ ದೇವರು ಮತ್ತು ಮನುಷ್ಯನ ನಡುವಿರುವ ಸಂಬಂಧವನ್ನು ನಾವು ಪರೀಕ್ಷಿಸಬಹುದೆನ್ನುವುದನ್ನು ಅವರು ಒಪ್ಪಲಿಲ್ಲ. ಹಿಂದಿನ ತತ್ವಜ್ಞಾನಿಗಳು ದೇವರು ಮತ್ತು ಮನುಷ್ಯರ ನಡುವೆ ಕಲ್ಪಿಸಿದ್ದ ಯಾವ ಸಂಬಂಧವೂ ಇಲ್ಲವೆನ್ನುವುದನ್ನು ಆಧರಿಸಿ ಕಟ್ಟಿದ್ದ ಹೊಸತಾದ ವಿಶ್ವಧರ್ಮವೊಂದನ್ನು ತಮ್ಮ ‘ಎಥಿಕ್ಸ್’ ಎನ್ನುವ ಗ್ರಂಥದಲ್ಲಿ ಪ್ರಕಟಪಡಿಸಿದ ಸ್ಪಿನೋಝ, ತಮ್ಮ ಸಮಕಾಲೀನರು ಪ್ರಕೃತಿಯನ್ನು ದೇವರ ಅತ್ಯುತ್ತಮ ಕೃತ್ಯವೆಂದು ಕಂಡರೆ, ತಮ್ಮ ಮಟ್ಟಿಗೆ ದೇವರೆಂದರೆ ಪ್ರಕೃತಿಯೇ ಹೊರತು ಅದು ಬೇರೆಯಲ್ಲವೆಂದಿದ್ದಾರೆ. ಅಂದ ಮೇಲೆ ಪ್ರಕೃತಿಯ ಹೊರತಾಗಿ ದೇವರಿದ್ದಾನೆ, ಆತನಿಗೂ ಮನುಷ್ಯರಿಗೂ ನಡುವೆ ನಿರ್ದಿಷ್ಟ ಸಂಬಂಧಗಳಿವೆ ಎಂದು ಹಿಂದಿನಿಂದಲೂ ಪ್ರಚಲಿತವಾಗಿದ್ದ ನಂಬಿಕೆಗಳಿಗೆ ಸ್ಪಿನೋಝ ತೆರೆ ಎಳೆದಿದ್ದರು. ಎರಡನೆಯದಾಗಿ ದೇಹ ಮತ್ತು ಆತ್ಮಗಳು ನಿಜಕ್ಕೂ ಬೇರೆ ಬೇರೆಯೆಂಬ ನಂಬಿಕೆಯೂ ಜನರಲ್ಲಿ ರಕ್ತಗತವಾಗಿತ್ತು. ಈ ನಂಬಿಕೆ ನಿಜವೆಂದು 21ನೆಯ ಶತಮಾನದಲ್ಲೂ ಅನೇಕ ಧರ್ಮಗಳು ಸಾರುತ್ತಿಲ್ಲವೇ, ಅದೇ ರೀತಿ ನಾನೂರು ವರ್ಷಗಳ ಹಿಂದೆಯೂ ಜನ ಹಾಗೆಂದೇ ನಂಬಿದ್ದರು. ಅದನ್ನೂ ಸ್ಪಿನೋಝ ತಿರಸ್ಕರಿಸಿದ್ದರು. ದೇವರ ಮತ್ತು ಮನುಷ್ಯರ ವರ್ತನೆಗಳು ಅವರಿಗಿರುವ ಸ್ವಪ್ರೇರಣೆಯನ್ನು ಅನುಸರಿಸುತ್ತವೆ ಎನ್ನುವ ತಾತ್ವಿಕ ನಿಲುವನ್ನೂ ಸ್ಪಿನೋಝ ಅಲ್ಲಗಳೆದಿದ್ದರು. ಕಾಣದ ಜಾಗದಲ್ಲೆಲ್ಲೋ ಕುಳಿತು ಮನುಷ್ಯರ ವರ್ತನೆಗಳನ್ನು ಗಮನಿಸುತ್ತಾನೆ. ಅವನ ಉದ್ದೇಶಗಳಲ್ಲಿ ಇದೂ ಒಂದು ಎನ್ನುವುದಂತೂ ಅತ್ಯಂತ ಅಸಮಂಜಸ ವಿಚಾರವೆಂದು ಸ್ಪಿನೋಝ ಪರಿಗಣಿಸಿದ್ದರು. ಜನಮಾನಸದೊಳಗೆ ಬೇರುಬಿಟ್ಟಿದ್ದ ಈ ಎಲ್ಲ ವಿಚಾರಗಳನ್ನು ನಿರಾಕರಿಸುತ್ತ ಭಿನ್ನವೆನಿಸಿದರೂ ಉದಾತ್ತವಾದ ತಾತ್ವಿಕ ನಿಲುವುಗಳನ್ನು ಆಧರಿಸಿ ಸ್ಪಿನೋಝ ತಮ್ಮದೇ ಆದ ಸರ್ವಧರ್ಮವೊಂದನ್ನು ಕಟ್ಟಿದ್ದರು. ತನ್ನ ವಿಶಿಷ್ಟ ತತ್ವಗಳಿಂದಾಗಿ ಇವರ ಸರ್ವ ಧರ್ಮ ಐನಸ್ಟೈನರನ್ನು ಬಹಳವಾಗಿ ಸೆಳೆದಿತ್ತು.
ಐನಸ್ಟೈನ್ ಎಳೆಯರಾಗಿದ್ದಾಗಲೇ ಧರ್ಮಕ್ಕೆ ದೇವರಿಗೆ ಸಂಬಂಧಿಸಿದ ಸಾಕಷ್ಟು ಪಾಠ ಕೇಳಿದ್ದಲ್ಲದೆ ಬೈಬಲ್ಲನ್ನು ಓದುತ್ತ, ಪ್ರಾರ್ಥನೆ ಗೀತೆಗಳನ್ನು ಹಾಡುತ್ತ ಯಹೂದಿ ಮತ್ತು ಕ್ರಿಸ್ಚಿಯನ್ ಎರಡೂ ಒಂದೇ ಎಂದೆಲ್ಲ ಧಾರ್ಮಿಕ ನಿಷ್ಠೆ ಬೆಳೆಸಿಕೊಂಡಿದ್ದರು. ಆದರೆ 12ನೆಯ ವಯಸ್ಸಿನಿಂದಾಚೆಗೆ ವಿಜ್ಞಾನದ ಹಾದಿ ಆರಿಸಿಕೊಂಡ ಮೇಲೆ ಅವರ ಭಾವನೆ ಬದಲಾಗತೊಡಗಿದವು. ಬಾಲ್ಯದಿಂದ ತತ್ವಜ್ಞಾನದಲ್ಲಿ ಆಸಕ್ತಿಯಿದ್ದ ಅವರು ಯುವಕನಾಗಿದ್ದಾಗ ವಿಶ್ವಾತ್ಮಕವಾದ ವಿಶಾಲ ದೃಷ್ಟಿಯನ್ನೊಳಗೊಂಡ ಅದರಲ್ಲೂ ತತ್ವಜ್ಞಾನದ ಪುಸ್ತಕಗಳನ್ನು ಓದುತ್ತಿದ್ದರು. ಪ್ರಕೃತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ತತ್ವಜ್ಞಾನ ಮತ್ತು ವಿಜ್ಞಾನಗಳ ಮೂಲಕ ಪ್ರಯತ್ನಪಡಬೇಕೇ ಹೊರತು ಅನ್ಯಮಾರ್ಗಗಳಿಂದಲ್ಲ ಎನ್ನುತ್ತಿದ್ದ ಅವರು, ಪ್ರಕೃತಿಯ ಸ್ವರೂಪ ಮತ್ತು ವರ್ತನೆಗಳೆಡೆಗೆ ಮಾರುಹೋಗಿದ್ದರು. ಪ್ರಕೃತಿಯನ್ನೇ ದೇವರೆಂದ ಸ್ಪಿನೋಝರ ತಾತ್ವಿಕ ಚಿಂತನೆಗಳು ಅವರಿಗೆ ಪ್ರಿಯವಾದವು. ಸ್ಪಿನೋಝರಂತೆ ಐನ್ಸ್ಟೈನ್ ಕೂಡ ಒಬ್ಬ ಕಟ್ಟಾ ನಿರ್ಣಾಯಕರೆ. ಮನುಷ್ಯರ ವರ್ತನೆಗಳು ಕಟ್ಟುನಿಟ್ಟಾಗಿ ಕಾರ್ಯ ಕಾರಣ ಸಂಬಂಧಿತ ನಿಯಮಗಳನ್ನು ಅನುಸರಿಸುತ್ತವೆಯೇ ಹೊರತು ಆಕಸ್ಮಿಕವಾಗಿಯೋ ಸ್ವಯಿಚ್ಛೆಯಿಂದಲೋ ಉಂಟಾಗುವುದಿಲ್ಲವೆಂದು ಐನಸ್ಟೈನ್ ನಂಬಿದ್ದರು. ಸ್ಪಿನೋಝರ ದೇಹ ಮತ್ತು ಆತ್ಮಗಳು ಬೇರೆ ಬೇರೆಯಲ್ಲ ಎನ್ನುವ ಇನ್ನಿತರ ನಿಲುವುಗಳನ್ನು ಐನಸ್ಟೈನ್ ಸಂಪೂರ್ಣ ಒಪ್ಪಿದ್ದರಾದರೂ ಪ್ರಕೃತಿಯೇ ದೇವರೆಂಬ ಸ್ಪಿನೋಝರ ನಿಲುವಿನ ಬದಲು ಇಡೀ ವಿಶ್ವವನ್ನು ನಿಯಂತ್ರಿಸುವ ಪರಿಪೂರ್ಣ ಮತ್ತು ಅನಿವಾರ್ಯ ನಿಯಮಗಳ ಸಾಕಾರವೇ ದೇವರೆನ್ನುವ ನಿಲುವನ್ನು ಹೊಂದಿದ್ದರು. ಪ್ರಕೃತಿಯೆಂಬುದು ಆ ನಿಯಮಗಳ ಕಾರಣದಿಂದ ಉಂಟಾದ ವ್ಯವಸ್ಥೆಯೆಂದು ಭಾವಿಸುವ ಮೂಲಕ ಸ್ಪಿನೋಝರ ನಿಲುವಿಗಿಂತ ತುಸು ಬೇರೆಯಾಗಿದ್ದರು. ಸ್ಪಿನೋಝ ನೈತಿಕತೆಯನ್ನಾಧರಿಸಿ ತಮ್ಮ ತಾತ್ವಿಕ ನಿಲುವುಗಳನ್ನು ರೂಪಿಸಿದ್ದರೆ ಐನಸ್ಟೈನ್ ಆ ನೈತಿಕತೆಯೊಡನೆ ವೈಜ್ಞಾನಿಕ ಅಂಶಗಳನ್ನೂ ಪರಿಗಣಿಸಿರ ಬಹುದಾದ್ದರಿಂದ ಸ್ವಲ್ಪಮಟ್ಟಿನ ಭಿನ್ನತೆಯುಂಟಾಗಲು ಕಾರಣವೆನ್ನಬಹುದೇನೋ? ವಿಶ್ವಸೃಷ್ಟಿಯ ಹಿಂದೆ ದೇವರಿದ್ದಾನೆ ಎನ್ನುವಾಗ ಐನಸ್ಟೈನ್ ನೈಸರ್ಗಿಕ ವೈಜ್ಞಾನಿಕ ನಿಯಮಗಳನ್ನೇ ದೇವರೆಂದು ಕರೆದರೇ ಹೊರತು ಪಾರಂಪರಿಕವಾಗಿ ಜನಮಾನಸದಲ್ಲಿ ಬೇರೂರಿರುವ ದೇವರನ್ನಲ್ಲ.
ದೇವರ ಇರುವಿಕೆಯ ಬಗ್ಗೆ ಅನನ್ಯ ನಂಬಿಕೆಯಿಟ್ಟಿದ್ದ ಜನರಲ್ಲಿ ಅಷ್ಟೇ ಮಟ್ಟಿಗೆ ಬೇರೂರಿದ್ದ ಇನ್ನೊಂದು ನಂಬಿಕೆಯೆಂದರೆ, ಶರೀರ ಹೇಗಿದೆಯೋ ಹಾಗೆ ಕಾಣದ ಆತ್ಮವೆಂಬುದೂ ಇದೆ. ಇವೆರಡೂ ಬೇರೆ ಬೇರೆ. ದೇಹ ನಶ್ವರ, ಆತ್ಮ ಅಮರ… ಹೀಗೆಲ್ಲ ಇಂದು ಜನಮಾನಸದಲ್ಲಿ ನಂಬಿಕೆಗಳು ಹೇಗೆ ಮನೆಮಾಡಿವೆಯೋ ಅಂದೂ ಅದೇ ಸತ್ಯವೆಂದು ಬಹುತೇಕರು ನಂಬಿದ್ದರು. ಇದನ್ನು ಒಪ್ಪದ ಸ್ಪಿನೋಝ ದೇಹ ಮತ್ತು ಆತ್ಮಗಳು ಬೇರೆ ಬೇರೆಯಲ್ಲ ಒಂದೇ ಎಂದಿದ್ದರು. ಇದನ್ನು ಐನಸ್ಟೈನ್ ಸಂಪೂರ್ಣ ಒಪ್ಪಿದ್ದರು. “ಮನುಷ್ಯನ ಒಂದು ಭಾಗ ಸಾವಿನಿಂದ ಪಾರಾಗಿರಲು ಸಾಧ್ಯವಿಲ್ಲ. ದೇಹವಿಲ್ಲದ ಆತ್ಮವೆನ್ನುವುದು ಶೂನ್ಯ, ಅರ್ಥವಿಲ್ಲದ್ದು. ಈ ವಿಶ್ವದೊಳಗೆ ವ್ಯಕ್ತಿಯೊಬ್ಬನ ಅಸ್ತಿತ್ವ ಕೇವಲ ಅತ್ಯಲ್ಪಕಾಲದ್ದು ಎನ್ನುವುದನೊಪ್ಪದ ನಮ್ಮೊಳಗಿನ ಅಹಂಕಾರ, ನಾವು ಮರ್ತ್ಯರೆಂಬುದನ್ನು ಒಪ್ಪದ ಹೇಡಿತನ ಇಂತಹ ನಂಬಿಕೆಯನ್ನು ಹುಟ್ಟುಹಾಕಿವೆ. ಮನುಷ್ಯ ಅಮರನೆಂಬುದರಲ್ಲಿ ನನಗೆ ಎಳ್ಳಷ್ಟೂ ನಂಬಿಕೆಯಿಲ್ಲ, ಭೌತಿಕ ಸಾವನ್ನು ಮೀರಿಯೂ ವ್ಯಕ್ತಿ ಉಳಿಯಲು ಸಾಧ್ಯವೆನ್ನುವುದು ಕಲ್ಪನೆಗೂ ಮೀರಿದ್ದು, ಕೇವಲ ದುರ್ಬಲ ಹೃದಯಿಗಳು, ಅರ್ಥಹೀನ ಭಾವುಕರುಗಳಷ್ಟೇ ಅದು ಸಾಧ್ಯವೆಂದು ಭ್ರಮಿಸಬಹುದು” ಎಂದಿರುವ ಐನಸ್ಟೈನ್ ಅವರ ನಿಲುವುಗಳು ನೈತಿಕ ಮೌಲ್ಯಗಳನ್ನಷ್ಟೇ ಆಧರಿಸದೆ ವಿಜ್ಞಾನದ ಅಂಶಗಳ ಬೆಳಕಿನಲ್ಲಿಯೂ ರೂಪುಗೊಂಡಿರುವುದನ್ನು ಗುರುತಿಸಬಹುದೆನ್ನಿಸುತ್ತದೆ.
ವಿಜ್ಞಾನದ ಹಾದಿ ನಂಬಿ ಅನುಸರಿಸುತ್ತ ತನ್ನ ಬದುಕನ್ನೇ ವಿಜ್ಞಾನಕ್ಕೆ ಮುಡಿಪಾಗಿಟ್ಟಿದ್ದ ಐನಸ್ಟೈನರಿಗೆ ಸ್ಪಿನೋಝರ ನಿಲುವುಗಳು ಅತ್ಯಂತ ವೈಜ್ಞಾನಿಕ ಸತ್ಯಗಳೆಂದು ಕಂಡಿರಬೇಕು. ದೇವರ ಬಗ್ಗೆ ಸಾಕಷ್ಟು ಚಿಂತನೆ ನಡೆಸಿದ್ದ ಐನಸ್ಟೈನರನ್ನು “ನೀವು ಸ್ಪಿನೋಝ ಗುರುತಿಸುವಂತಹ ಸರ್ವಧರ್ಮೀಯರೇ?” ಎಂದು ಕೇಳಿದ ಪ್ರಶ್ನೆಗೆ ಕೊಟ್ಟ ವಿವರಣೆ ಅವರ ಚಿಂತನೆಯ ಸಾರವನ್ನು, ಅದನ್ನು ನಿರೂಪಿಸಲು ಬಳಸುವ ಯೋಗ್ಯ ಹೋಲಿಕೆಗಳನ್ನು ಸಮರ್ಥವಾಗಿ ಪ್ರತಿಬಿಂಬಿಸುತ್ತದೆ- “ಈ ಪ್ರಪಂಚದಲ್ಲಿನ ಅತ್ಯಂತ ಕಠಿಣ ಪ್ರಶ್ನೆಯಿದು. ಹೌದು ಅಥವಾ ಇಲ್ಲವೆಂದು ಸರಳವಾಗಿ ಉತ್ತರಿಸುವಂತಹದ್ದಲ್ಲ. ನಾನು ನಾಸ್ತಿಕನಲ್ಲ. ಸ್ಪಿನೋಝರು ಹೇಳುವ ಸರ್ವಧರ್ಮೀಯನೋ ಏನೋ ನನಗೆ ಗೊತ್ತಿಲ್ಲ, ಈ ನಿಮ್ಮ ಪ್ರಶ್ನೆ ನಮ್ಮ ಸೀಮಿತ ಬುದ್ಧಿಯ ವ್ಯಾಪ್ತಿ ಮೀರಿದ್ದು. ಅದೆಷ್ಟೇ ಪಳಗಿದರೂ ನಮ್ಮ ಬುದ್ಧಿಮತ್ತೆಗೆ ಈ ವಿಶ್ವವನ್ನು ಗ್ರಹಿಸಲು ಸಾಧ್ಯವಿಲ್ಲ. ನಾವು ಬೃಹತ್ ಗ್ರಂಥಾಲಯವೊಂದನ್ನು ಪ್ರವೇಶಿಸಿದ ಒಂದು ಎಳೆಯ ಮಗುವಿನಂತೆ. ಎಲ್ಲ ಗೋಡೆಗಳ ಪಕ್ಕ ಮೇಲ್ಛಾವಣಿಯವರೆಗೂ ಭಿನ್ನ ಭಿನ್ನ ಭಾಷೆಗಳ ಬಹಳಷ್ಟು ಪುಸ್ತಕಗಳನ್ನು ಜೋಡಿಸಿರುವುದನ್ನು ನೋಡುವ ಮಗು ಅವನ್ನು ಯಾರೋ ಬರೆದಿರಬೇಕೆಂದು ಅಂದುಕೊಳ್ಳುತ್ತದೆ, ನಿರ್ದಿಷ್ಟವಾಗಿ ಯಾರು ಹೇಗೆ ಬರೆದರೆಂಬುದು ಅದಕ್ಕೆ ತಿಳಿಯದು. ಅವುಗಳಲ್ಲಿನ ಭಾಷೆಯೂ ತಿಳಿಯದು. ಆದರೂ ಪುಸ್ತಕಗಳನ್ನು ಒಂದು ಕ್ರಮದಲ್ಲಿ ಜೋಡಿಸಿರುವುದನ್ನು ಮಗು ಗಮನಿಸಬಹುದು. ಸ್ವಲ್ಪ ಮಟ್ಟಿಗೆ ಪ್ರಶ್ನಾರ್ಥಕವಾಗಿ ಕಂಡರೂ ಅಲ್ಲಿನ ಕ್ರಮ ಎಳೆಯ ಮಗುವಿಗೆ ತಾನು ಗ್ರಹಿಸಲಾಗದ ನಿಗೂಢವೆಂದು ಅನಿಸುವಂತೆ ನಮ್ಮ ಪಾಡೂ ಕೂಡ. ದೇವರ ಬಗ್ಗೆ ನಮ್ಮ ಪ್ರಬುದ್ಧ ಬುದ್ಧಿಮತ್ತೆಗೆ ಉಂಟಾಗುವ ಸ್ಥಿತಿಯೂ ಹೀಗೆಯೇ. ಅತ್ಯಂತ ಸೋಜಿಗದ ರಚನೆಯುಳ್ಳ ಈ ವಿಶ್ವ ನಿರ್ದಿಷ್ಟ ನಿಯಮಗಳನ್ನು ಪಾಲಿಸುತ್ತಿದೆ. ಆ ನಿಯಮಗಳ ಬಗ್ಗೆ ನಮಗೆ ತಿಳಿದಿರುವುದು ಅಷ್ಟಕ್ಕಷ್ಟೆ ಹೊರತು ಸಂಪೂರ್ಣ ಅರಿವಿಲ್ಲ. ನಕ್ಷತ್ರಮಂಡಲಗಳನ್ನು ಹಿಡಿದಿಟ್ಟಿರುವ ನಿಗೂಢ ಬಲದ ನಿಜಸ್ವರೂಪವನ್ನು ನಮ್ಮ ಬುದ್ಧಿ ಗ್ರಹಿಸಲಾರದು.” ಅದ್ಭುತ ಸೃಷ್ಟಿಯ ಅಗಾಧ ವೈಶಾಲ್ಯಕ್ಕೆ ಅವರು ಮಾರುಹೋಗಿರಬೇಕು. ವಿಸ್ಮಯಗೊಂಡಿರಬೇಕು. ಆ ಅದ್ಭುತಕ್ಕೆ ಮಣಿದಿರಬೇಕು. “ಅಂತೆಯೇ ನಾನು ಸ್ಪಿನೋಝರ ಸರ್ವಧರ್ಮದೆಡೆಗೆ ಆಕರ್ಷಿತನಾಗಿದ್ದೇನೆ” ಎಂದಿದ್ದಾರೆ.
ಇಡೀ ಸೃಷ್ಟಿ ತಮ್ಮನ್ನು ವಿಸ್ಮಯಗೊಳಿಸಿದ್ದನ್ನು ಐನಸ್ಟೈನ್ ಹೀಗೆ ಹಲವು ಸಾರಿ ನಿವೇದಿಸಿಕೊಂಡಿದ್ದಾರೆ. ಸೃಷ್ಟಿಯ ಅದ್ಭುತ ವೈಶಾಲ್ಯದ ಬಗ್ಗೆ ಪೂರ್ಣ ತಿಳಿಯಲು ನಮ್ಮ ಬುದ್ಧಿಗೆ ಶಕ್ಯವಿಲ್ಲವೆಂದು ತಿಳಿದಿದ್ದರೂ ಮೂಲತಃ ಭೌತವಿಜ್ಞಾನಿಯಾಗಿದ್ದ ಅವರಲ್ಲಿ ವೈಜ್ಞಾನಿಕ ವಿಚಾರಣೆಯ ಮೂಲಕ ಎಷ್ಟೆಷ್ಟು ಸಾಧ್ಯವೋ ಅಷ್ಟಷ್ಟನ್ನು ಗ್ರಹಿಸುವ ಪ್ರಯತ್ನವನ್ನು ನಾವು ಮಾಡುತ್ತಲೇ ಇರಬೇಕೆಂಬ ಒತ್ತಾಸೆಯಿತ್ತು. ದ.ರಾ. ಬೇಂದ್ರೆಯವರು “ಈ ತುಂಬಿ ಬಾಳು ತುಂಬಿರುವತನಕ ತುಂತುಂಬಿ ಕುಡಿಯಬೇಕು” ಎಂದು ಬದುಕಿನ ಸಾರವನ್ನು ಆದಷ್ಟು ಹೀರಬೇಕೆಂದು ಹೇಳಿಲ್ಲವೇ ಹಾಗೆ. ವೈಜ್ಞಾನಿಕ ಅಧ್ಯಯನದ ಮೂಲಕ ಇಂಚಿಂಚು ಗ್ರಹಿಸುತ್ತ ಪ್ರಪಂಚದ ರಚನೆಯ ಸೊಗಸಾದ ವೈಚಾರಿಕತೆಯ ಬಗ್ಗೆ ಒಳನೋಟವನ್ನು ಪಡೆಯಬಹುದೆಂಬುದು ಐನಸ್ಟೈನ್ ಒತ್ತಾಸೆಯ ಹಿಂದಿನ ನಂಬಿಕೆಯಾಗಿತ್ತು. ಈ ವಿಶಿಷ್ಟ ಅನುಭವಸಾರವನ್ನೇ ‘ವಿಶ್ವಧರ್ಮ’ ಎಂದು ಕರೆದಿದ್ದಾರೆ. ತಾವು ಗುರುತಿಸಿರುವ ವಿಶ್ವಧರ್ಮ ಕೇವಲ ವಿಚಾರವಲ್ಲ ಅದೊಂದು ಅನುಭವ. ಮನುಷ್ಯಕಲ್ಪಿತ ದೇವರು ಅಲ್ಲಿಲ್ಲ. ಇಲ್ಲಿ ವ್ಯಕ್ತಿ ಲೌಕಿಕ ಆಸೆ ಆಮಿಷಗಳು ಕೇವಲ ಒಣಹೆಮ್ಮೆಯೆಂಬುದನ್ನು ಗಮನಿಸುತ್ತ, ಭೌತಿಕ ಪ್ರಕೃತಿಯಲ್ಲೂ ಭಾವನಾತ್ಮಕ ಪ್ರಪಂಚದಲ್ಲೂ ವ್ಯಕ್ತಗೊಳ್ಳುವ ಅದ್ಭುತ ಓರಣವನ್ನೂ ಅದರ ಉದಾತ್ತತೆಯನ್ನೂ ಅನುಭವಿಸುತ್ತಾನೆ. ಇಂತಹ ಅನುಭವಗಳಿಂದ ನಾವೂ ವಿಶ್ವದೊಡನೆ ಸಾಮರಸ್ಯದಿಂದ ಅನುರಣಿಸಲು ಅನುವಾಗುತ್ತದೆ ಎನ್ನುವುದು ಐನಸ್ಟೈನರ ನಂಬಿಕೆಯಾಗಿತ್ತು. ವಿಶ್ವಧರ್ಮದ ಬಗ್ಗೆ ವಿಸ್ತರಿಸುತ್ತ, “ನೈಸರ್ಗಿಕ ನಿಯಮಗಳ ಸಾಮರಸ್ಯದಿಂದಾಗಿ ಪ್ರಕಟಗೊಂಡಿರುವ ಅಸಾಧಾರಣ ಪ್ರತಿಭೆ ನಮ್ಮಲ್ಲಿ ಉಕ್ಕುಕ್ಕುವಂತಹ ಉತ್ಸಾಹಪೂರಿತ ಅಚ್ಚರಿಯನ್ನು ಹುಟ್ಟಿಸುತ್ತದೆ. ಆ ಮಹದಾಶ್ಚರ್ಯವನ್ನೇ ವಿಶ್ವಧಾರ್ಮಿಕಭಾವವೆನ್ನುತ್ತೇನೆ” ಎಂದಿದ್ದಾರೆ. ಇಂತಹ ಧಾರ್ಮಿಕ ಭಾವನೆಯನ್ನು ಮಾನವ ಜನಾಂಗ ವಿಕಾಸದ ಆರಂಭದಲ್ಲಿ ಕಾಣಬಹುದು. ಪ್ರವಾದಿಗಳ ಉಪದೇಶಗಳಲ್ಲಿ, ಸಂತರ ಕೀರ್ತನೆಗಳಲ್ಲಿ ಇದು ಕಾಣಿಸಿಕೊಂಡಿದೆ. ಬೌದ್ಧಧರ್ಮದಲ್ಲಂತೂ ಇದು ಸತ್ವಪೂರ್ಣವಾಗಿ ಪ್ರಕಟಗೊಂಡಿದೆ ಎಂದು ವಿಶೇಷವಾಗಿ ಉಲ್ಲೇಖಿಸಿದ್ದಾರೆ. ತಾವು ನಂಬಿದ ವಿಶ್ವಧಾರ್ಮಿಕಭಾವವನ್ನೇ ಅಳವಡಿಸಿಕೊಂಡು ಅರ್ಥಪೂರ್ಣವಾಗಿ ಬದುಕು ಸಾಗಿಸಿದವರು ಪ್ರತಿ ಸಮಾಜದಲ್ಲೂ ಹಲವರಿದ್ದರು, ಆದರೆ ಆಯಾ ಸಮಕಾಲೀನ ಸಮಾಜಗಳು ಮಾತ್ರ ಅವರನ್ನು ನಾಸ್ತಿಕರೆಂದು ಗುರುತಿಸಿವೆ ಎನ್ನುವಾಗ ಯಾವ ಸಂದರ್ಭವೇ ಆಗಲಿ ಎಲ್ಲ ಕಾಲದಲ್ಲಿಯೂ ಮಂದಿ ಅನಾಗರಿಕರಾಗಿಯೇ ವರ್ತಿಸುತ್ತಾರೆಂಬ ಮಾತನ್ನು ಐನಸ್ಟೈನ್ ಅವರೂ ಪುನರುಚ್ಛರಿಸಿದ್ದಾರೆ.
ದೈವದ ಬಗ್ಗೆ ತಮ್ಮದೇ ಆದ ಸ್ಪಷ್ಟ ನಿಲುವು ಹೊಂದಿದ್ದರೂ ಒಂದು ಗುಂಪಿನ ಜನರ ದೈವನಂಬಿಕೆಯ ಬಗ್ಗೆ ಐನಸ್ಟೈನ್ ಸಹಾನುಭೂತಿಯುಳ್ಳವರಾಗಿದ್ದರು. ದಿನನಿತ್ಯದ ಬದುಕಲ್ಲಿ ದೈವದೊಡನೆ ವೈಯಕ್ತಿಕವಾಗಿ ಅನೇಕರು ಅವಿನಾಭಾವ ಸಂಬಂಧ ಹೊಂದಿರುತ್ತಾರೆ. ಇವರಲ್ಲಿ ಸಾತ್ವಿಕರ ಗುಂಪೊಂದಿದೆ. ಇವರು ತಮಗೇನೇ ಕಷ್ಟ ಬರಲಿ ಸಮಾಜಕ್ಕೆ ಸದಾ ಸಹಾಯಹಸ್ತ ನೀಡುತ್ತ ಸಾಮಾಜಿಕ ಬದುಕಿನ ಸ್ವಾಸ್ಥ್ಯಕ್ಕೆ ನೆರವಾಗುತ್ತಿರುತ್ತಾರೆ. ಜೀವನದ ಬಗ್ಗೆ ನೈತಿಕ ದೃಷ್ಟಿಕೋನ ತಳೆಯಲು ದೈವದೊಡನೆ ಅವಿನಾಭಾವ ಸಂಬಂಧಹೊಂದಿರುವುದೇ ಇವರಿಗೆ ಏಕೈಕ ಮಾರ್ಗವೂ ಹೌದು. ಇವರ ನಂಬಿಕೆಯನ್ನು ಒಪ್ಪದಿದ್ದರೂ ಸದುದ್ದೇಶದ ಬದುಕಿನಿಂದಾಗಿ ಇಂತಹವರು ನಾಸ್ತಿಕರಿಗಿಂತ ಉತ್ತಮರೆನಿಸುತ್ತಾರೆ ಎಂದು ಐನಸ್ಟೈನ್ ಅಭಿಪ್ರಾಯಪಡುವುದನ್ನು ಗಮನಿಸಿದರೆ ದೇವರಿಗಿಂತ ನೈತಿಕತೆಯೇ ಹೆಚ್ಚು ಮುಖ್ಯವೆಂದು ಅವರು ತಿಳಿದಿದ್ದರು. “ತನ್ನ ಮಕ್ಕಳ ಹೆಡ್ಡತನಕ್ಕೆ ದೇವರು ಶಿಕ್ಷಿಸುತ್ತಾನೆಂಬುದನ್ನು ಕೇಳಿದರೆ ನನಗೆ ವಿಷಾದವುಂಟಾಗುತ್ತದೆ. ಮಕ್ಕಳ ಕೃತ್ಯಗಳಿಗೆ ಅವನೇ ಹೊಣೆಗಾರನಲ್ಲವೆ? ಅಸ್ತಿತ್ವದಲ್ಲಿಲ್ಲವೆನ್ನುವುದೊಂದೇ ಅಂತಹ ದೇವರಿಗೆ ಬಿಡುಗಡೆ, ಕ್ಷಮೆ” ಎಂಬ ಅವರ ಹೇಳಿಕೆಯನ್ನು ಗಮನಿಸಿದರೆ ಮನುಷ್ಯಕಲ್ಪಿತ ದುಷ್ಟ ಶಿಕ್ಷಕ ಶಿಷ್ಟ ರಕ್ಷಕ, ಕರುಣಾಮಯಿ ಇವೇ ಮುಂತಾದ ಗುಣಗಳುಳ್ಳ ದೇವರಲ್ಲಿ ಐನಸ್ಟೈನರಿಗೆ ಎಳ್ಳಷ್ಟೂ ನಂಬಿಕೆಯಿರಲಿಲ್ಲವೆಂಬುದು ಮನವರಿಕೆಯಾಗುತ್ತದೆ.
ದೇವರು ಅಗೋಚರನಾಗಿದ್ದಾನೆಂಬ ಊಹೆ ಇಂದ್ರಿಯಗೋಚರವಾದ ಪ್ರಪಂಚದಲ್ಲಿನ ಕ್ರಮಬದ್ಧತೆಯನ್ನು ಅರಿಯುವಲ್ಲಿ ಯಾವ ಪ್ರಯೋಜನಕ್ಕೂ ಬರುವುದಿಲ್ಲವೆನ್ನುತ್ತ ಅಂತಹ ದೈವದ ಇರುವಿಕೆಯನ್ನೇ ನಿರಾಕರಿಸುವ ಐನಸ್ಟೈನ್ ಬಾಹ್ಯ ಪ್ರಪಂಚವೆಂಬುದು ನಮ್ಮನ್ನು ಹೊರತಾಗಿಸಿಯೂ, ನಮ್ಮಿಂದ ಸ್ವತಂತ್ರವಾಗಿಯೂ ಅಸ್ತಿತ್ವದಲ್ಲಿದೆ ಎಂಬುದನ್ನು ಅತ್ಯಂತ ಗಂಭೀರವಾಗಿ ಪುರಸ್ಕರಿಸಿದ್ದಾರೆ. ಈ ವಿಶ್ವದೊಳಗಿದ್ದುಕೊಂಡು ನಾವು ವೀಕ್ಷಿಸುತ್ತಿರುವ ಅನುಭವಿಸುತ್ತಿರುವ ಸಂಗತಿಯನ್ನು ಮುಂದಿಟ್ಟುಕೊಂಡು ಅದರಿಂದಾಗಿಯೇ ಹೊರ ಪ್ರಪಂಚಕ್ಕೆ ಅಸ್ತಿತ್ವವಿದೆ, ಈ ಪ್ರಪಂಚದ ಅಸ್ತಿತ್ವಕ್ಕೆ ನಮ್ಮ ವಿವೇಕವೇ ಆಧಾರ ಎನ್ನುವುದು ಕೆಲವು ತಾತ್ವಿಕರ ಚಿಂತನೆ. ಈ ವಿಚಾರವನ್ನು ವಿಜ್ಞಾನಿಯಾಗಿ ಒಪ್ಪದ ಐನಸ್ಟೈನ್ ಈ ಬಾಹ್ಯಪ್ರಪಂಚ ಸ್ವತಂತ್ರವಾಗಿ ಅಸ್ತಿತ್ವದಲ್ಲಿದೆ ಎನ್ನುವ ನಂಬಿಕೆಯೇ ನಮ್ಮ ಇಡೀ ವಿಜ್ಞಾನದ ಮೂಲ ಆಧಾರವೆಂದಿದ್ದಾರೆ. ಭೌತಿಕ ವಸ್ತುಗಳಲ್ಲದ ವಿಚಾರಗಳ ಬಗೆಗೂ ಮನುಷ್ಯನ ವಿವೇಕದೊಡನೆ ಅವುಗಳಿಗಿರುವ ಸಂಬಂಧಗಳ ಬಗೆಗೂ ಆಲೋಚಿಸಿದ್ದಾರೆ. ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ (1861-1941) ಅವರೊಡನೆ ಸಂವಾದದಲ್ಲಿ ತೊಡಗಿದ್ದಾಗ ಸೌಂದರ್ಯವೆಂಬುದು ನಮ್ಮ ದೃಷ್ಟಿಕೋನದಿಂದ ರೂಪಿತಗೊಂಡದ್ದು ಎಂದು ಇಬ್ಬರೂ ಒಪ್ಪಿಕೊಂಡರೂ ಸತ್ಯವೆನ್ನುವುದು ಮನುಷ್ಯ ವಿವೇಕಕ್ಕೆ ಸಾಪೇಕ್ಷವಾಗಿದೆ ಎಂದು ಟ್ಯಾಗೋರ್ ಅಭಿಪ್ರಾಯಪಟ್ಟರೆ ಐನಸ್ಟೈನ್, ಸತ್ಯ ನಮ್ಮ ವಿವೇಕಕ್ಕೆ ನಿರಪೇಕ್ಷವಾಗಿಯೂ ಇರಲು ಸಾಧ್ಯವೆಂಬುದು ತಮ್ಮ ಗ್ರಹಿಕೆ ಎಂದಿದ್ದಾರೆ. ನಮ್ಮ ವಿವೇಕಕ್ಕೆ ಹೊರತಾಗಿರುವ ಸತ್ಯವನ್ನು ಅವರು ವಸ್ತುನಿಷ್ಟ ವಾಸ್ತವವೆಂದೂ ಹೆಸರಿಸಿದ್ದಾರೆ.
“ದೇವರ ಬಗ್ಗೆ ಕಲ್ಪಿಸಿಕೊಳ್ಳಲು ನಾನು ಪ್ರಯತ್ನಿಸುವುದಿಲ್ಲ. ಅಗಾಧವಾದ ಈ ವಿಶ್ವ ತನ್ನ ರಚನೆಯ ಬಗ್ಗೆ ನಮ್ಮ ಇಂದ್ರಿಯಗಳು ಮೆಚ್ಚುವಂತಾಗಿಸುತ್ತ ಅಚ್ಚರಿಗೊಂಡು ನಿಲ್ಲುವಂತೆ ಮಾಡಿದರೆ ಸಾಕು” ಎಂದು ಮೊದಮೊದಲು ಆ ಅದ್ಭುತ ವಿಸ್ಮಯದ ಅನುಭವದಲ್ಲೇ ಸಂತಸಪಡುತ್ತಿದ್ದ ಐನಸ್ಟೈನ್ರಲ್ಲಿ ವಿಶ್ವದ ಹಿಂದೆ ಅರಿಯಲಾಗದ, ಸವಿನ್ಯಾಸಭರಿತ ಪ್ರಜ್ಞೆಯೊಂದಿದೆ ಎನ್ನುವ ಭಾವನೆ ಅವರು ಬೆಳೆಯುತ್ತ ಪ್ರಬುದ್ಧರಾಗತೊಡಗಿದಂತೆ ಹೆಚ್ಚು ಹೆಚ್ಚು ಆಪ್ತವಾಗತೊಡಗಿತು. ಗುರುತ್ವವನ್ನು ಕಾಲ-ದೇಶಗಳ ನಾಲ್ಕು ಆಯಾಮಗಳ ವ್ಯವಸ್ಥೆಯ ವಕ್ರಜ್ಯಾಮಿತಿಯ ಮೂಲಕ ಕಾಣುತ್ತ ಮುಂದುವರಿಸಿದ ತಮ್ಮ ಸಂಶೋಧನೆಯ ಮೂಲಕ ವಿಶ್ವದ ವಿರಾಟ್ ದರ್ಶನವನ್ನು ಕಾಣತೊಡಗಿದರು. ಈ ದರ್ಶನ ಅವರಲ್ಲಿ ಬೃಹತ್ ಬ್ರಹ್ಮಾಂಡದ ವೈಶಾಲ್ಯವನ್ನೂ, ಆ ಅದ್ಭುತವನ್ನು ನಿಲುಕಿಸಿಕೊಳ್ಳಲಾಗದ ಮನುಷ್ಯನ ಮಿತಿಯನ್ನೂ ಅರಿವಾಗಿಸತೊಡಗಿತು. ಆ ಸ್ಥಿತಿಯ ಅನುಭವ ತಮ್ಮಲ್ಲಿ ಯಾವ ಭಾವನೆಯನ್ನು ಉಂಟುಮಾಡುತ್ತಿತ್ತೆನ್ನುವುದನ್ನು ಐನಸ್ಟೈನ್, “ನನಗೊಂದು ವಿನ್ಯಾಸ ಕಾಣುತ್ತಿದೆ. ಆದರೆ ಅದನ್ನು ರಚಿಸಿದವನನ್ನು ಚಿತ್ರಿಸಲಾರೆ. ಒಂದು ಗಡಿಯಾರವನ್ನೂ ಕಾಣುತ್ತಿದ್ದೇನೆ. ಆದರೆ ಆ ಗಡಿಯಾರ ಮಾಡಿದವನು ಹೇಗಿದ್ದಾನೆಂದು ತೋರುತ್ತಿಲ್ಲ. ನಾಲ್ಕು ಆಯಾಮಗಳನ್ನೇ ಕಲ್ಪಿಸಿಕೊಳ್ಳಲು ಅಶಕ್ಯವಾಗಿರುವ ಮಾನವ ಪ್ರಜ್ಞೆಗೆ ಸಾವಿರ ವರ್ಷಗಳೂ ಸಾವಿರ ಆಯಾಮಗಳೂ ಯಾರ ಎದುರು ಒಂದೇ ಆಗಿದೆಯೋ ಆ ದೇವರನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ?” ಎನ್ನುವ ಹೇಳಿಕೆಗಳ ಮೂಲಕ ಸರಳವಾಗಿ ನಿರೂಪಿಸಿದ್ದಾರೆ. ಐನಸ್ಟೈನ್ ವಿಶ್ವದ ಬಗ್ಗೆ ಹೆಚ್ಚೆಚ್ಚು ಅಧ್ಯಯನ ಮಾಡತೊಡಗಿದಂತೆಲ್ಲ ಅವರಿಗೆ ದೇವರಲ್ಲಿನ ನಂಬಿಕೆಯೂ ಹೆಚ್ಚಾಯಿತು ಎಂದು ಯಾರೋ ಹೇಳಿರುವಲ್ಲಿ ಮೇಲಿನ ನುಡಿಗಳನ್ನು ಗಮನಿಸಿರಬಹುದೇನೋ ಎನ್ನಿಸುತ್ತದೆ.
ದೈವದ ಬಗ್ಗೆ ಐನಸ್ಟೈನ್ ಹೇಳಿರುವುದನ್ನು ದಾಖಲಿಸುವುದೆಂದರೆ ಆದಕ್ಕೆ ಕೊನೆಯೇ ಇಲ್ಲವೇನೋ. ಅಷ್ಟು ವಿಸ್ತಾರವಾಗಿ ಅವರ ಬದುಕಿನುದ್ದಕ್ಕೂ ಅದು ಆವರಿಸಿಕೊಂಡಿದೆ. ಭೌತವಿಜ್ಞಾನದಲ್ಲಿನ ಸಂಶೋಧನೆಗೆ ತಮ್ಮನ್ನೇ ಮುಡಿಪಾಗಿಸಿಕೊಂಡಿದ್ದ ಐನಸ್ಟೈನ್ ಅಲ್ಲಿನ ವಿನಮ್ರ ತಪಸ್ಸಿನ ಮೂಲಕ ದೊರೆತ ಅನುಭವಗಳ ಬೆಳಕಿನಲ್ಲೇ ಆಧ್ಯಾತ್ಮದೆಡೆಗೆ ಒಳನೋಟವನ್ನು ಬೀರಿದ್ದಾರೆ. ಅದಕ್ಕಾಗೇ ಅವರು ದೈನಂದಿನ ಕೆಲಸಗಳಿಗೆ, ಪ್ರತಿನಿತ್ಯವೂ ಬದುಕಿನಲ್ಲಿ ಅನುಸರಿಸಬೇಕಾಗಿದ್ದ ಲೌಕಿಕ ನಡೆಗಳೆಡೆಗೆ ಮಹತ್ವವನ್ನೇನೂ ಕೊಟ್ಟಿರಲಿಲ್ಲ. ಪಿಟೀಲು ನುಡಿಸುತ್ತಲೇ ಸಂಗೀತದಲ್ಲಿ ಆನಂದಪಡುವ, ಕಿರು ಹಾಯಿದೋಣಿಯೇರಿ ನದಿಗಳಲ್ಲಿ ತೇಲಾಡಿ ಮನರಂಜನೆ ಪಡುವ ಹವ್ಯಾಸಗಳಿದ್ದ ಐನಸ್ಟೈನ್ ಅನವಶ್ಯಕವಾಗಿ ಇನ್ನಿತರ ಪ್ರಾಪಂಚಿಕ ವಿಷಯಗಳ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ಲೌಕಿಕ ವಿಷಯಗಳ ಬಗ್ಗೆ ವೃಥಾ ಹೆಚ್ಚು ಗಮನಕೊಡದಿದ್ದರಿಂದಲೇ ಅವರು ತಮ್ಮೆಲ್ಲ ಸಮಯವನ್ನು ವೈಜ್ಞಾನಿಕ ಸಂಶೋಧನೆಗೆ ಮತ್ತು ಪ್ರವೃತ್ತಿಯಾಗಿದ್ದ ಅಧ್ಯಾತ್ಮಿಕತೆಯೆಡೆಗೆ ಕೊಡಲು ಸಾಧ್ಯವಾಯಿತೆನ್ನಿಸುತ್ತದೆ. ಇದನ್ನು ಒಳಗೊಂಡಿರುವಂತೆ ಕಾಣುವ ಅವರದೇ ಹೇಳಿಕೆಯೊಂದನ್ನು ಗಮನಿಸಬಹುದು. ಐನಸ್ಟೈನ್ ಹಾದಿಯಲ್ಲೇ ತಾವೂ ನಡೆಯಬೇಕು ಎಂದುಕೊಳುತ್ತಿದ್ದ ಕೆಲವರು ಯಶಸ್ಸಿಗೆ ಸೂತ್ರಗಳೇನಾದರೂ ಇವೆಯೇ ಎಂದು ಅವರ ಬಳಿ ಕೇಳುತ್ತಿದ್ದರು. ಅದಕ್ಕೆ ಐನಸ್ಟೈನ್ ನೀಡುತ್ತಿದ್ದ ಸೂತ್ರ ಹೀಗಿತ್ತು-A=X+Y+Z ಐನಸ್ಟೈನ್ ಇಲ್ಲಿ A ಅಂದರೆ ಯಶಸ್ಸು, ಅದಕ್ಕೆ ಬೇಕಾದದ್ದು X- ಅಂದರೆ ಕೆಲಸ, Y- ಅಂದರೆ ಆಟ ಮತ್ತು Z- ಅಂದರೆ ಬಾಯಿ ಮುಚ್ಚಿಕೊಂಡಿರುವುದು ಎನ್ನುತ್ತಿದ್ದರು. ವಿನೋದಕ್ಕಾಗಿ ಹೀಗೆ ಹೇಳಿದ್ದರೂ ಇದರ ಹಿಂದೆ ಲೌಕಿಕ ಬದುಕಿನಲ್ಲಿನ ಲಾಭ-ನಷ್ಟಗಳ ಬಗೆಗೆ, ಯಶಸ್ಸು ಕೀರ್ತಿಗಳೆಡೆಗೆ ಅವರು ಅಷ್ಟಾಗಿ ಗಮನಕೊಡುತ್ತಿರಲಿಲ್ಲವೆಂಬ ಛಾಯೆಯಿರುವುದನ್ನು ಕಾಣಬಹುದು.
ವೈಜ್ಞಾನಿಕ ಮಾರ್ಗದಲ್ಲಿ ತಪಗೈಯುತ್ತ ಸಾಗಿದ ಐನಸ್ಟೈನ್ ವಿಜ್ಞಾನದ ಬೆಳಕಿನಲ್ಲಿ ಕಂಡುಕೊಂಡ ತಾತ್ವಿಕ ನಿಲುವುಗಳು ಅವರಲ್ಲಿ ವಿಶಿಷ್ಟವಾದ ಧಾರ್ಮಿಕತೆಯನ್ನು ರೂಪಿಸಿರುವುದನ್ನು ಇಲ್ಲಿ ಪ್ರಸ್ತಾಪಿಸಿದೆ. ಸ್ಪಿನೋಝರ ನೈತಿಕತೆಯನ್ನು ಆಧಾರವಾಗಿಟ್ಟುಕೊಂಡು ರೂಪಿಸಿದ ಧಾರ್ಮಿಕತೆಗೆ ಇದು ಸಮೀಪವಾಗಿದೆ. “ದೇವರೆಂದರೆ ಅರ್ಥಕ್ಕೆ ಸಿಗದ ವಿಶ್ವದ ಮೂಲಕ ಪ್ರಕಟಗೊಳ್ಳುತ್ತಿರುವ ಉನ್ನತ ತಾರ್ಕಿಕ ಶಕ್ತಿ ಎಂಬುದು ನನ್ನ ಬಲವಾದ ಭಾವನಾತ್ಮಕ ನಂಬಿಕೆ. ಸೀಮಿತವಾದ ನನ್ನ ಗ್ರಹಿಕೆಯಲ್ಲಿ ಪ್ರಕಟಗೊಳ್ಳುವ ಅನಂತ ವ್ಯಾಪ್ತಿಯ ಶ್ರೇಷ್ಠ ಚೇತನವನ್ನು ವಿನಮ್ರನಾಗಿ ಮೆಚ್ಚುವುದೇ ನನ್ನ ಧಾರ್ಮಿಕತೆ. ಇನ್ನೊಬ್ಬರಿಗೆ ತಿಳಿಸುವಾಗ ದೈವ ಹಾಗೂ ಧಾರ್ಮಿಕತೆಯನ್ನು ನಿರ್ದಿಷ್ಟವಾಗಿ ಸಂವಹಿಸಲಾಗದಿದ್ದರೆ ಏನೂ ಪ್ರಯೋಜನವಿಲ್ಲ. ಭಾವನೆಗಳನ್ನು ಸರಿಯಾಗಿ ಗ್ರಹಿಸುವವರಲ್ಲಿ ದೈವ ಹಾಗೂ ಧಾರ್ಮಿಕತೆ ಬಗ್ಗೆ ಜಾಗೃತಿ ಮೂಡಿಸಿ ತನ್ಮೂಲಕ ಆ ಪ್ರಜ್ಞೆಯನ್ನು ಜೀವಂತವಾಗಿರಿಸುವುದೇ ವಿಜ್ಞಾನ ಮತ್ತು ಕಲೆಗಳ ಮುಖ್ಯ ಕರ್ತವ್ಯ”ಎಂದು ತಮ್ಮ ಸದಾಶಯವನ್ನು ಮುಂದಿಟ್ಟು ನಮ್ಮೆಲ್ಲರ ಹೊಣೆಗಾರಿಕೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ತಮ್ಮ ಅದ್ವಿತೀಯ ಸಾಧನೆಗಳಿಂದ ಇಡೀ ಪ್ರಪಂಚಕ್ಕೇ ಪರಿಚಿತರಾಗಿರುವ ಆಲ್ಬರ್ಟ್ ಐನಸ್ಟೈನರ ಆಧ್ಯಾತ್ಮಿಕ ನಿಲುವು ಹೇಗಿದ್ದಿರಬಹುದು ಎಂಬುದನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರ ಹೇಳಿಕೆಗಳಿಂದಲೇ ಅದರ ಪರಿಚಯ ನೀಡಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ. ಒಂದು ಕ್ಷೇತ್ರದಲ್ಲಿ ಅನನ್ಯ ಸಾಧನೆಗೈದು ಅಲ್ಲಿನ ವಿಚಾರಗಳ ಆಳ ಎತ್ತರ ವಿಸ್ತಾರಗಳ ಬಗ್ಗೆ ಅಪಾರ ಜ್ಞಾನ ಗಳಿಸಿರುವ ಮಹನೀಯರು ತಮಗೆ ಆಪ್ತವಾಗಿರುವ ಇನ್ನಿತರ ಕ್ಷೇತ್ರಗಳ ಸ್ವರೂಪಗಳ ಬಗ್ಗೆಯೂ ಸಶಕ್ತರಾಗಿ ಅಭಿವ್ಯಕ್ತಗೊಳಿಸಬಲ್ಲರು ಎನ್ನುವುದಕ್ಕೆ ಸೈದ್ಧಾಂತಿಕ ಭೌತವಿಜ್ಞಾನಿ ಐನಸ್ಟೈನರವರನ್ನೇ ಉದಾಹರಿಸಬಹುದು. ಅವರ ಆಧ್ಯಾತ್ಮಿಕ ನಿಲುವುಗಳು ಅವರ ಸಮಕಾಲೀನ ಸಮಾಜದಲ್ಲಿದ್ದ ಸ್ಥಾಪಿತ ಧರ್ಮಗಳಿಗೆ ಭಿನ್ನವಾಗಿದ್ದವೆನ್ನುವುದು ಸುಸ್ಪಷ್ಟ. ಪಾರಂಪರಿಕ ನಂಬಿಕೆಗಳನ್ನು ಆಶ್ರಯಿಸದೆ ವೈಜ್ಞಾನಿಕ ದೃಷ್ಟಿಕೋನವನ್ನೂ ನೈತಿಕತೆಯನ್ನೂ ಆಧರಿಸಿ ತಮ್ಮ ದೈವ ನಿಲುವುಗಳನ್ನು ಕಟ್ಟಿರುವುದೇ ಆ ಭಿನ್ನತೆಗೆ ಕಾರಣ. ಈ ವೈಶಿಷ್ಟ್ಯದಿಂದಾಗಿಯೇ ಅವು ಸಾರ್ವಕಾಲಿಕವಾಗಿವೆ. ವರ್ತಮಾನದಲ್ಲಿಯೂ ವಿಜ್ಞಾನ ಮತ್ತು ನೈತಿಕ ಮೌಲ್ಯಗಳ ಆಸರೆಯಲ್ಲಿ ಸರಿ ದಾರಿ ತೋರುತ್ತ ಅವು ವ್ಯಷ್ಟಿ ಮತ್ತು ಸಮಷ್ಟಿಯ ಬದುಕನ್ನು ಇನ್ನಷ್ಟು ಹಸನಾಗಿಸಬಲ್ಲವು, ಅರ್ಥಪೂರ್ಣವಾಗಿಸಬಲ್ಲವು.
ಈ ಲೇಖನ ಓದುತ್ತಿರುವ ಹಿರಿಯ ಮತ್ತು ಸನ್ಮಿತ್ರ ಓದುಗರಲ್ಲಿ ಒಂದು ವಿನಂತಿ. ಮಹಾವಿಜ್ಞಾನಿಯೊಬ್ಬರ ಬದುಕೇ ಆಶ್ಚರ್ಯಕರ. ಅತ್ಯಂತ ಸಾಮಾನ್ಯ ಲೇಖಕನಾದ ನನಗೆ ಅಂತಹ ಮಹಾತ್ಮರ ಬದುಕೇ ಒಂದು ವಿಸ್ಮಯ. ಹಲವು ಆಕರಗಳಲ್ಲಿ ಅವರ ಬದುಕಿನ ಬಗ್ಗೆ ಓದುತ್ತ ಆ ವಿಸ್ಮಯವನ್ನು ಮನಸ್ಸಿನೊಳಗೆ ಕಟ್ಟಿಕೊಂಡು ಬೆರಗುಗೊಳ್ಳುತ್ತಿದ್ದಂತೆ ಹೃದಯದೊಳಗೆ ಭಾವನೆಗಳು ಉಕ್ಕತೊಡಗಿದ್ದು ಸತ್ಯ. ಅವುಗಳನ್ನು ಹಂಚಿಕೊಳ್ಳುವ ಮಹದಾಸೆಯಿಂದ ಬರೆದಿರುವ ಈ ಲೇಖನದಲ್ಲಿ ನನ್ನ ಇತಿಮಿತಿಗಳಿಂದಾಗಿ ಐನಸ್ಟೈನರ ದೈವ ನಿಲುವನ್ನು ಓದುಗರಿಗೆ ಸಂಶಯಕ್ಕೆಡೆಯಿಲ್ಲದಂತೆ ಸ್ಪಷ್ಟವಾಗಿ ನಿರೂಪಿಸಲು ಸಾಧ್ಯವಾಗಿಲ್ಲದಿರಬಹುದು. ಓದುಗರಿಗೆ ಅವರ ವಿಚಾರದ ಕಿರುದರ್ಶನವಾದರೂ ದೊರೆತರೆ ಆ ಶ್ರೇಯಸ್ಸು ಆ ಮಹಾವಿಜ್ಞಾನಿಗೆ ಸಲ್ಲಬೇಕು. ಹಾಗಾಗದಿದ್ದಲ್ಲಿ ಆ ದೋಷಕ್ಕೆ ಲೇಖಕನೇ ಸಂಪೂರ್ಣ ಹೊಣೆಯೆಂದು ತಿಳಿಸುತ್ತ ಈ ಬರವಣಿಗೆಯ ಕಾರ್ಯದಿಂದ ವಿನಮ್ರನಾಗಿ ವಿರಮಿಸುತ್ತೇನೆ.
Comments 18
ಪ್ರಸಾದ್ ನವಿಲೆ, ಪಿರಿಯಾಪಟ್ಟಣ
Oct 6, 2021ನಮ್ಮ ಹಿಂದಿನ ತಲೆಮಾರಿನ ಮಹಾನ್ ವಿಜ್ಞಾನಿ ಐನ್ ಸ್ಟೈನ್ ಅವರನ್ನು ದೈವದ ಕಲ್ಪನೆ ನಿಜಕ್ಕೂ ಎಷ್ಟೆಲ್ಲಾ ಯೋಚನೆಗಳಿಗೆ ಹಚ್ಚಿದ್ದು, ಅವರು ತಮ್ಮದೇ ಆದ ನಿಲುವೊಂದು ಕಂಡುಕೊಂಡಿದ್ದು… ಕುತೂಹಲಕರವಾಗಿದೆ. ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ.
ravikumar Pavate
Oct 7, 2021ಸ್ಪಿನೋಝ ವಿಚಾರಗಳನ್ನು ಹಿಂದೊಮ್ಮೆ ಓದಿಕೊಂಡಿದ್ದೆ. ದೇಹ ಮತ್ತು ಆತ್ಮಗಳು ಬೇರೆ ಬೇರೆ ಎಂದು ನಂಬದ ಆತನ ಚಿಂತನೆಗಳು ನಿಜಕ್ಕೂ ಸರಿ ಎನಿಸುತ್ತವೆ. ಐನಸ್ಟಿನ್ ಅವರ ದೇವರ ನಿಲುವುಗಳು ಅದೇ ದಾರಿಯಲ್ಲಿವೆ, ಅವರ ಒಟ್ಟು ವಿಚಾರಗಳನ್ನು ಲೇಖನ ರೂಪದಲ್ಲಿ ನೀಡಿದ್ದಕ್ಕೆ ಥ್ಯಾಂಕ್ಯೂ ಸರ್.
Ramesh Siriguppa
Oct 7, 2021ಸಾಂಪ್ರದಾಯಿಕ ದೇವರ ಕಲ್ಪನೆ ಜಗತ್ತಿನಾದ್ಯಂತ ಒಂದೇ ತೆರನಾಗಿದೆ. ಅದರಲ್ಲಿ ಹುರುಳಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಆ ತಿಳಿವಳಿಕೆ ಮನುಷ್ಯನನ್ನು ಬದಲಾಯಿಸುತ್ತದೆ ಎಂದು ಅನಿಸೋದಿಲ್ಲ. ಅದಕ್ಕಾಗಿಯೇ ಐನಸ್ಟಿನ್ ಅವರಂತಹ ವಿಚಾರವಾದಿಗಳ ಚಿಂತನೆಗಳು ಹೆಚ್ಚು ಸತ್ಯಕ್ಕೆ ಹತ್ತಿರವಾಗಿ ತೋರುತ್ತವೆ.
ಸಂತೋಷ ಎಲ್
Oct 7, 2021ಬೆಳಕಿನ ಲಕ್ಷಣಗಳನ್ನು ಸೂತ್ರದ ರೂಪದಲ್ಲಿ ಹೇಳಿದ ಮಹಾ ವಿಜ್ಞಾನಿಯ ಮನಸ್ಸು ಎಷ್ಟೊಂದು ಪರಿಪಕ್ವವಾಗಿತ್ತು!!!
ಸೋಮಶೇಖರ, ಹಾಸನ
Oct 10, 2021“ನಾಸ್ತಿಕನೊಬ್ಬ ದೇವರ ಬಗ್ಗೆ ಏನು ನಿಲುವನ್ನು ಹೊಂದಿದ್ದಾನೋ ನನ್ನದೂ ಅದೇ. ನಾನೊಬ್ಬ ಅತ್ಯಂತ ಧಾರ್ಮಿಕನಾದ ನಾಸ್ತಿಕ” ಎನ್ನುವ ಐನಸ್ಟಿನ್ ಅವರ ಮಾತುಗಳು ಯೋಚಿಸಲು ಹಚ್ಚುತ್ತವೆ.
ಜ್ಞಾನೇಶ್ ಕಮತಗಿ
Oct 11, 2021ನಾಲ್ಕು ಆಯಾಮಗಳನ್ನೇ ಕಲ್ಪಿಸಿಕೊಳ್ಳಲು ಅಶಕ್ಯವಾಗಿರುವ ಮಾನವ ಪ್ರಜ್ಞೆಗೆ ಸಾವಿರ ವರ್ಷಗಳೂ ಸಾವಿರ ಆಯಾಮಗಳೂ ಯಾರ ಎದುರು ಒಂದೇ ಆಗಿದೆಯೋ ಆ ದೇವರನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ?- ಐನಸ್ಟಿನ್ ಅವರ ಈ ಮಾತುಗಳು ವಿಶ್ವದ ಅಗಾಧತೆಯನ್ನು ತೋರಿಸುವುದಲ್ಲದೆ ನಮ್ಮ ದೇವರ ಕಲ್ಪನೆಯ ಸಂಕುಚಿತತೆಯನ್ನು ಎದುರಿಗೆ ಹಿಡಿಯುತ್ತದೆ.
Jayaraj Chamarajpet
Oct 12, 2021ಮನುಷ್ಯರ ನಡತೆಗಳ ಮೇಲೆ ನೇರ ಪ್ರಭಾವ ಬೀರುವ ದೈವವನ್ನು ಐನಸ್ಟಿನರು ಸಾರಾಸಗಟಾಗಿ ನಿರಾಕರಿಸಿದರು- ನಮ್ಮ ಎಲ್ಲಾ ದೇವಾನುದೇವತೆಗಳು ಇದೇ ಕೆಟಗರಿಗೆ ಬರುತ್ತಾರೆ. ಬಹುಶ ಇದೇ ಕಾರಣಕ್ಕೆ ಅವರು ವೇದ- ಉಪನಿಷತ್ತುಗಳ ಬಗ್ಗೆ ಮಾತೇ ಆಡಿಲ್ಲ!! ನಮ್ಮ ನಂಬಿಕೆಗಳು ಅವರಿಗೆ ತೀರಾ primitive ಎನಿಸಿರಬೇಕು!!
ಕಮಲಾ ಚನ್ನಪ್ಪ
Oct 16, 2021ಐನಸ್ಟಿನ್ ಅವರು ಸೂಕ್ಷ್ಮ ಮನಸ್ಸಿನ, ಹೃದಯವಂತ ವಿಜ್ಞಾನಿ ಎಂದು ಗೊತ್ತಿತ್ತು… ವಿಶ್ವ ಸತ್ಯವನ್ನು ಹೀಗೆ ನಿರ್ಭೀಡೆಯಿಂದ ವೈಜ್ಞಾನಿಕವಾಗಿ ನೋಡಿದ್ದಾರೆಂಬುದು ಈ ಲೇಖನ ಓದಿದ ನಂತರ ತಿಳಿಯಿತು.
Nagendra v.p
Oct 17, 2021ವಿನಾಶಕಾರಿ, ಸ್ವಾರ್ಥ ಸಂಶೋಧಕರಾಗುತ್ತಿರುವ ಇವತ್ತಿನ ಕಾಲದ ವಿಜ್ಞಾನಿಗಳು ಮನುಕುಲಕ್ಕೆ ಶಾಪವಾಗಿದ್ದಾರೆ. ಐನಸ್ಟಿನ್ ಮಹಾ ವಿಜ್ಞಾನಿಯ ಮನಸ್ಸು ಸತ್ಯ ಶೋಧಕನ ಮನಸ್ಸು. ನಿಜವಾದ ಯೋಗಿಗೂ, ನಿಜವಾದ ವಿಜ್ಞಾನಿಗೂ ಅಂತರವೇ ಇರುವುದಿಲ್ಲವೆನಿಸುತ್ತದೆ!!!!
Gurusiddappa Hospet
Oct 21, 2021ಇವತ್ತು ತಂತ್ರಜ್ಞಾನ ಕಲ್ಪನೆಗೂ ಮೀರಿ ಮುಂದುವರಿಯುತ್ತಿದೆ. ಆದರೆ ಶ್ರೇಷ್ಟ ವಿಜ್ಞಾನಿಗಳು ಮಾತ್ರ ಕಾಣುತ್ತಿಲ್ಲ. ಸಮಗ್ರವಾಗಿ ಬದುಕನ್ನು ಕಾಣಬಲ್ಲ ಐನಸ್ಟಿನ್ ಅವರಂತಹ ವಿವೇಕವಂತ ವಿಜ್ಞಾನಿಗಳು ಈಗ ಯಾಕಿಲ್ಲ? ವಿಜ್ಞಾನಕ್ಷೇತ್ರದಲ್ಲಿ ದೊಡ ನಿರ್ವಾತವೇ ಕಾಣಿಸುತ್ತಿದೆ ನನಗೆ. ಬದ್ಧತೆ ಇಲ್ಲದ ಜನ ಎಲ್ಲ ಕಡೆ ತುಂಬಿಕೊಳ್ಳುತ್ತಿರುವುದು ತೀವ್ರ ವಿಷಾದದ ಸಂಗತಿಯಾಗಿದೆ.
Indrani T.P
Oct 21, 2021ಇಂತಹ ವಿಜ್ಞಾನಿಗಳ ಅಮೂಲ್ಯ ನೋಟಗಳ ಕುರಿತು ಈ ಬಗೆಯ ಲೇಖನಗಳನ್ನು ಪ್ರಕಟಿಸಿದರೆ ಬಹಳ ಚೆನ್ನಾಗಿರುತ್ತದೆ. ಉತ್ತಮ ಲೇಖನ.
ಪುಷ್ಪಲತಾ ಪಾಟೀಲ್
Oct 27, 2021ಐನಸ್ಟಿನರು ಬುದ್ಧ ಧರ್ಮವನ್ನು ಮೆಚ್ಚಿಕೊಂಡಿದ್ದರು ಎಂದು ಓದಿದ ನೆನಪು. ಬುದ್ಧನ ಯಾವ ವಿಚಾರಗಳನ್ನು ಅವರು ಅನುಮೋದಿಸಿದರು ಎನ್ನುವುದನ್ನು ಲೇಖನದಲ್ಲಿ ಹೇಳಿದ್ದರೆ ಚನ್ನಾಗಿತ್ತು. ಬೈಬಲ್ ಬಗ್ಗೆ ಏನಾದರೂ ಹೇಳಿದ್ದಾರೆಯೇ?
Shekhar, Talikote
Nov 1, 2021ಪ್ರೊಫೆಸರ್ ಮಲ್ಲೇಶ್ ಅವರಿಗೆ ಶರಣು. ಬಹಳ ಚೆನ್ನಾಗಿ ಬರೆದಿದ್ದೀರಿ. ಮುಕ್ತವಾಗಿ ಯೋಚಿಸುವ ಇಂತಹ ವಿಜ್ಞಾನಿಗಳು ತತ್ವಜ್ಞಾನಿಗಳೂ ಆಗಿರುತ್ತಾರೆ. ಅವರ ಬದುಕನ್ನು ಓದುವುದು ನಿಜಕ್ಕೂ ಸ್ಫೂರ್ತಿದಾಯಕವಾಗಿರತ್ತದೆ. ಇಂತಹ ವಿಜ್ಞಾನಿಗಳ ಕುರಿತಾಗಿ ನಿಮ್ಮಿಂದ ಮತ್ತಷ್ಟು ಲೇಖನಗಳು ಬರಲಿ.
Shivanand gogaon
Nov 12, 2021ಅದ್ಭುತ ಮೂಡಿಬಂದಿದೆ ಲೇಖನ
Bharath Jodettu
Nov 12, 2021ವಿಜ್ಞಾನಿಗಳು ಸತ್ಯವನ್ನು ವಸ್ತುನಿಷ್ಟರಾಗಿ ನೋಡುತ್ತಾರೆ. ಅವರು ಮೌಢ್ಯವನ್ನು ಒಪ್ಪಲಾರರು. ತಮ್ಮ ಮತಿಗೆ ನಿಲುಕಿದ್ದನ್ನು ಮಾತನಾಡುವ ಐನಸ್ಟಿನರ supernatural power ಕುರಿತಾದ ಆಲೋಚನೆ ಎಲ್ಲರೂ ಯೋಚಿಸುವಂತಿದೆ. ಬುದ್ದ ತತ್ವ ಅವರಿಗೆ ಪ್ರಿಯವಾಗಿತ್ತು ಎಂದು ಓದಿದ್ದೇನೆ. ಬುದ್ಧ ಕೂಡ ಯಾವುದೇ ದೇವಾನುದೇವತೆಗಳನ್ನು ಒಪ್ಪದೇ ನೇರವಾಗಿ ಕಂಡುದನ್ನು ಮಾತಾಡಿದವನು.
ದೇವರಾಜ್ ಜೋಡೆತ್ತಿನಮಠ
Nov 14, 2021ಶ್ರೇಷ್ಠ ವಿಜ್ಞಾನಿ ಐನಸ್ಟಿನ್ ಅವರ ವಿಚಾರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. “Idea of God is infancy of humankind”- ಎನ್ನುತ್ತಾರೆ ಅವರು. ವಿಜ್ಞಾನಿಯೊಬ್ಬನ ಕಣ್ಣೋಟ ನಮ್ಮ ದೃಷ್ಟಿಯನ್ನು ವಿಶಾಲಗೊಳಿಸಲಿ.
Aravind J
Nov 18, 2021ನಾನೂ ಐನಸ್ಟಿನರಂತೆ ಅತ್ಯಂತ ಧಾರ್ಮಿಕನಾದ ನಾಸ್ತಿಕ.
Bhuvaneshwara
Nov 25, 2021ನಾನು ಅನೇಕ ಸಲ ಯೋಚಿಸುತ್ತೇನೆ- ಯಾಕೆ ಐನಸ್ಟಿನ್ ತರಹದ ಸೂಕ್ಷ್ಮ ಒಳನೋಟಗಳುಳ್ಳ ವಿಜ್ಞಾನಿಗಳು ಇವತ್ತು ಯಾಕೆ ಕಾಣುತ್ತಿಲ್ಲಾ? ಅವರಿಗೆ ಸಮಾಜದ ಬಗ್ಗೆ ಎಷ್ಟೊಂದು ಕಾಳಜಿ ಇತ್ತು, ಜನರನ್ನು ಎಲ್ಲಿಯೂ ಮೂಢತನಕ್ಕೆ ದೂಡದಂತಿವೆ ಅವರ ಮಾತುಗಳು, ವಿಚಾರಗಳು!!