ಅಲ್ಲಮಪ್ರಭುವಿನ ಶೂನ್ಯವಚನಗಳು
ವಸ್ತು ಅಥವಾ ವಿಷಯ (=subject) ಇಲ್ಲದ ಸಾಹಿತ್ಯವೇ ಜಗತ್ತಿನಲ್ಲಿಲ್ಲ! ಈ ದೃಷ್ಟಿಯಿಂದ ಕವಿಗಳಲ್ಲಿ ‘ವಿಷಯ’ ವಾಸನೆ ಸಮೃದ್ಧವಾಗಿದೆ. ಶೂನ್ಯಸಿಂಹಾಸನಾಧೀಶ್ವರನೆಂದೇ ಹೆಸರಾದ ಅಲ್ಲಮಪ್ರಭುವಿನ ವಚನಗಳು ವಿಷಯರಹಿತ. ಇವು ಜನಪದರ ಗಾದೆಗಳಂತೆ ಒಗಟುಗಳಂತೆ ನುಡಿಗಟ್ಟುಗಳಂತೆ ಯಾವೊಂದೂ ಸಂದರ್ಭಕ್ಕೆ ಕಟ್ಟುಬೀಳದ ಅಥವಾ ಎಲ್ಲಾ ಸಂದರ್ಭದಲ್ಲೂ ಉಲ್ಲೇಖಿಸಬಹುದಾದ ವಚನಗಳು. ಇದನ್ನು ‘ನಿರ್ಲೇಪ’ ತತ್ವದ (=ಲೇಪವಿಲ್ಲದ, ಯಾವುದಕ್ಕೂ ಅಂಟಿಕೊಳ್ಳದ) ವಚನಗಳು ಎಂದೂ ಕರೆಯಬಹುದು. ವಿಷಯರಾಹಿತ್ಯವನ್ನೇ ಕಾವ್ಯ ಮಾಡಿದ ದಾರ್ಶನಿಕ ಕವಿಸಂತ ಅಲ್ಲಮಪ್ರಭು! ಪದ್ಮಪತ್ರದ ಜಲಬಿಂದು ರೀತಿಯಲ್ಲಿ ನಿರ್ಲೇಪದಿಂದ ಕೂಡಿ, ಸೂರ್ಯರಶ್ಮಿಯ ಸಪ್ತವರ್ಣಗಳನ್ನು ಬಿಂಬಿಸಬಲ್ಲ ಸಾಮರ್ಥ್ಯವಿರುವ ಅಲ್ಲಮರ ‘ಶೂನ್ಯ’ ವಚನಗಳನ್ನು ಪರಿಭಾವಿಸುವುದೇ ಒಂದು ಆನಂದದ ಸೌಂದರ್ಯಾನುಭವ!
(1) ಹಿಡಿವ ಕೈಯ ಮೇಲೆ ಕತ್ತಲೆಯಯ್ಯ!
ನೋಡುವ ಕಂಗಳ ಮೇಲೆ ಕತ್ತಲೆಯಯ್ಯ!
ನೆನೆವ ಮನದ ಮೇಲೆ ಕತ್ತಲೆಯಯ್ಯ!
ಕತ್ತಲೆಯೆಂಬುದು ಇತ್ತಲೆಯಯ್ಯ!
ಗುಹೇಶ್ವರನೆಂಬುದು ಅತ್ತಲೆಯಯ್ಯ! (LB:130)
ಮೇಲ್ಕಂಡ ವಚನದಲ್ಲಿ ಒಳಗಣ ಕತ್ತಲೆ ಮತ್ತು ಹೊರಗಣ ಕತ್ತಲೆ ಎಂಬ ಭೇದವಿಲ್ಲದೆ, ಕತ್ತಲೆಯ ವಿರಾಟ್ ಸ್ವರೂಪದ ದರ್ಶನವಿದೆ. ಕೈಯ ಮೇಲೆ ಇರುವ ವಸ್ತು ಯಾವುದು? ಕಂಗಳ ಮೇಲೆ ಇರುವ ವಸ್ತು ಯಾವುದು! ನೆನೆವ ಮನದ ಮೇಲೆ ಇರುವ ವಸ್ತು ಯಾವುದು? ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರವೇ ಇಲ್ಲ! ಜ್ಞಾತೃ + ಜ್ಞೇಯ + ಜ್ಞಾನ ಸರಣಿಯಲ್ಲಿ, ಜ್ಞಾತೃ + ಜ್ಞೇಯವನ್ನು ‘ಶೂನ್ಯ’ ಮಾಡಿ ಜ್ಞಾನವನ್ನು ಬಿಂಬಿಸುವ ಈ ಕಲೆಯನ್ನು ನಿಃಶಬ್ದವೆಂದೂ ಕರೆಯಬಹುದು. “ಶಬ್ದದೊಳಗಣ ನಿಃಶಬ್ದದಂತೆ” ಎಂಬ ನುಡಿಗೆ ಇದೇ ಅರ್ಥವೆಂದು (=ಶೂನ್ಯ) ತೋರುತ್ತದೆ. ‘ಹಿಡಿವ ಕೈಯಮೇಲೆ’ ಎಂದರೆ, ಕೈಯಲ್ಲಿ ಹಿಡಿದ ಯಾವುದೇ ವಸ್ತು ಆಗಬಹುದು: ಸಿಗರೇಟು, ಪಠ್ಯಪುಸ್ತಕ, ಮೊಬೈಲು, ಈಸಿ ಮೌಸ್, ಇಷ್ಟಲಿಂಗ ಏನು ಬೇಕಾದರೂ ಸರಿ! ಅವರವರ ಭಾವಕ್ಕೆ ಅವರವರ ದರ್ಶನಕ್ಕೆ ತಕ್ಕಂತೆ ಅರ್ಥೈಸಿ ಕೊಳ್ಳಬಹುದು. ಇದೇ ರೀತಿ ‘ನೋಡುವ ಕಂಗಳ ಮೇಲೆ’ ಮತ್ತು ‘ನೆನೆವ ಮನದ ಮೇಲೆ’ ಎಂಬ ಮಾತುಗಳಿಗೂ ಅನ್ವಯವಾಗುವುದು. ಮಾತೆಂಬುದು ಜ್ಯೋತಿರ್ಲಿಂಗ ಎಂದರೆ ಇದೇ ಏನೋ ? ಕತ್ತಲೆಯ ವಿರಾಟ್ ಸ್ವರೂಪದಿಂದಾಗಿ ನಮ್ಮ ಬದುಕು ಸತ್ಯದರ್ಶನದಿಂದ ದೂರಸಿಡಿದ ಬಗೆಯನ್ನು ಅಲ್ಲಮಪ್ರಭು ಇಲ್ಲಿ ಹೇಳಿದ್ದಾರೆ. ಈ ಶೂನ್ಯ ವಚನವನ್ನು ನಮ್ಮ ಬದುಕಿನ ಯಾವುದೇ ಸಂದರ್ಭಕ್ಕೆ ಬೇಕಾದರೂ ಅನ್ವಯಿಸಿಕೊಳ್ಳಬಹುದು.
(2) ತಲೆಯಲಟ್ಟುಂಬುದ ಒಲೆಯಲಟ್ಟುಂಬರು!
ಒಲೆಯಲುಳ್ಳುದ ಹೊಟ್ಟೆಯಲುಂಬನ್ನಕ್ಕರ
ಹೊಗೆ ಘನವಾಯಿತ್ತು!
ಇದ ಕಂಡು ಹೇಸಿ ಬಿಟ್ಟೆನು ಗುಹೇಶ್ವರ!
ತಲೆಯಲ್ಲಿ ಅಟ್ಟು ಉಣ್ಣಬೇಕಾದ್ದನ್ನು ಬಿಟ್ಟು ಒಲೆಯಲ್ಲಿ ಅಟ್ಟು ಉಣ್ಣುತ್ತಾ ಹೊಗೆ ಕಾರುವ ಮನಃಸ್ಥಿತಿಯನ್ನು ಬಿಂಬಿಸುತ್ತಿರುವ ಈ ಶೂನ್ಯ ವಚನವು ಮತಧರ್ಮಗಳ ರಭಸಮತಿಯಲ್ಲಿ ನಿಸರ್ಗವಿವೇಕಕ್ಕೆ ಎರವಾದ ಬಗೆಯನ್ನು ಬಹು ಚೆನ್ನಾಗಿ ವಿಡಂಬನೆ ಮಾಡುತ್ತಿದೆ. ಪಾಕದ ಸವಿಗೆ ಬದಲು, ಕಾರುವ ಹೊಗೆಯೇ ಘನವಾದಾಗ ತ್ಯಾಜ್ಯವಸ್ತುವಿನಂತೆ ಬಿಟ್ಟು ಬಿಡುವುದೇ ಸರಿ!
(3) ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದರಲ್ಲಾ ?
ಅಂಗಸಂಗಿಗಳೆಲ್ಲಾ ಮಹಾಘನವನರಿಯದೆ ನಿಂದರೊ ?
ಹುಸಿಯನೆ ಕೊಯ್ದು, ಹುಸಿಯನೆ ಪೂಜಿಸಿ,
ಗಸಣಿಗೊಳಗಾದರು ಗುಹೇಶ್ವರ! (LB:125)
‘ಪಾಷಾಣ’ ಎಂದರೆ ಶಿಲೆ ಮತ್ತು ವಿಷ ಎಂಬ ಎರಡು ಅರ್ಥಗಳಿವೆ. ಒಡಲು ಅತ್ಯಂತ ವಿಶಿಷ್ಟವಾದುದು! ಒಡಲ ಕಂಪನಗಳು ವಿಶ್ವಾತ್ಮಕ ಚೈತನ್ಯದ ಕಂಪನಗಳ ಜೊತೆ ಅನುಸಂಧಾನ ನಡೆಸಬೇಕು. ಹಾಗೆ ಮಾಡದೆ ಕಲ್ಲು ನಂಬಿ ಅಥವಾ ವಿಷಸೇವನೆ ಮಾಡಿ, ಅಂಗದ ‘ಸಂಗಿಗಳೆಲ್ಲಾ’ ಮಹಾಘನವನ್ನು ಅರಿಯದೆ ದೂರಸಿಡಿದು ನಿಂತಿದ್ದಾರೆ. ಸುಳ್ಳು ಸೃಷ್ಟಿಗಳ ಕೊಯ್ಲು ಮಾಡುತ್ತಾ ಸುಳ್ಳುಸೃಷ್ಟಿಗಳನ್ನೇ ಆರಾಧಿಸುತ್ತಾ ಆತ್ಮವಂಚನೆ ಮಾಡಿಕೊಂಡು ತಮಗೆ ತಾವೇ ಮೋಸಮಾಡಿಕೊಳ್ಳುತ್ತಿದ್ದಾರೆ.
(4) ಸಂಸಾರವೆಂಬ ಹೆಣ ಬಿದ್ದಿರೆ
ತಿನಬಂದ ನಾಯ ಜಗಳವ ನೋಡಿರೇ!
ನಾಯ ಜಗಳವ ನೋಡಿ
ಹೆಣನೆದ್ದು ನಗುತ್ತಿದೆ !!
ಗುಹೇಶ್ವರನೆಂಬ ಲಿಂಗ ಅಲ್ಲಿಲ್ಲ ಕಾಣಿರೇ! (LB:28)
‘ಸಂಸಾರ’ ಶಬ್ದಕ್ಕೆ ಪ್ರತಿಯಾಗಿ ಕಲೆ, ಸಾಹಿತ್ಯ, ಶಿಕ್ಷಣ, ರಂಗಭೂಮಿ, ಸಿನೆಮಾ, ಧರ್ಮ, ವಿಜ್ಞಾನ, ತಂತ್ರಜ್ಞಾನ… ಹೀಗೆ ಯಾವುದೇ ಶಬ್ದವನ್ನು ಬೇಕಾದರೂ ಇಡಬಹುದು. ನಮ್ಮ ಬದುಕಿನ ಮೃತಪ್ರಾಯ ಅವಸ್ಥೆಯನ್ನು ಮತ್ತು ಸತ್ಯವಿದೂರ ನೆಲೆಯನ್ನು ಹೇಳುತ್ತಿರುವ ಈ ಶೂನ್ಯವಚನದ ಪಠ್ಯವು ( text ) ತುಟಿ ಹೊಲಿದುಕೊಂಡು ನಿಃಶಬ್ದವಾಗಿದೆ. ಅಷ್ಟರ ಮಟ್ಟಿಗೆ ಅರ್ಥಸಂಪನ್ನತೆಯಿಂದ ಕೂಡಿದ್ದು ತಾನು ಮಾತ್ರ ನಿರ್ಲೇಪವಾಗಿದೆ. ಅಲ್ಲಮರ ಎಷ್ಟೋ ವಚನಗಳು ಜನಪದರ ಒಗಟುಗಳ ರೀತಿಯಿದ್ದು ಬಹುಳಾರ್ಥ ಗರ್ಭಿತವಾಗಿವೆ:
(5) ಮಾನದ ತೋರಿಹ ಆವಿಂಗೆ
ಕೊಳಗದ ತೋರಿಹ ಕೆಚ್ಚಲು!
ತಾಳಮರದುದ್ದವೆರಡು ಕೋಡು ನೋಡಾ!
ಅದನರಸಹೋಗಿ ಆರು ದಿನ!
ಅದು ಕೆಟ್ಟು ಮೂರು ದಿನ!
ಅಘಟಿತಘಟಿತ ಗುಹೇಶ್ವರ,
ಅರಸುವ ಬಾರೈ ತಲೆಹೊಲದಲ್ಲಿ! (LB:30)
‘ಮಾನ’ ಎಂದರೆ ಅಳತೆಯ ಚಿಕ್ಕ ಸಾಧನ. ‘ಕೊಳಗ’ ಎಂದರೆ ಬೃಹತ್ತಾದ ಪಾಕಪಾತ್ರೆ! ಮಾನದಷ್ಟು ಚಿಕ್ಕದಾದ ಹಸುವಿಗೆ ಕೊಳಗ ಗಾತ್ರದ ಕೆಚ್ಚಲು! ಇದರ ಕೊಂಬುಗಳು ತಾಳೆಮರದಷ್ಟು ಉದ್ದವಾದವು! ಆಧುನಿಕ ನಾಗರಿಕತೆಯ ಬೃಹತ್ತಾದ ಕೈಗಾರಿಕೆಗಳು ಜಾಗತಿಕ ಉದ್ಯಮಗಳಾಗಿ ಮಾರ್ಪಟ್ಟು ಅಹಂಕಾರ + ಮಮಕಾರಗಳೆಂಬ ಅತ್ಯಂತ ಉದ್ದವಾದ ಕೊಂಬುಗಳನ್ನು ಬೆಳೆಸಿಕೊಂಡಿವೆ. ಬೃಹತ್ತಾಗಿ ಊದಿಕೊಂಡು ಕೆಚ್ಚಲುಭಾರದಿಂದ ನಡೆಯಲಾಗದೆ, ಪ್ರಯಾಸಪಡುವ ಜೆರ್ಸಿ ಹಸುಗಳು ಆಧುನಿಕ ಮಾನವನ ದುರಾಸೆಯ ರೂಪಕಗಳೇ ಸರಿ! ಇಂದು ಮತಧರ್ಮಗಳ ಬೋಧನೆ ಮತ್ತು ಪ್ರಚಾರಕಾರ್ಯಗಳು ಹೇಗೆ ಬದುಕಿಗೆ ಮಾರಕವಾಗಿವೆ ಎಂಬುದನ್ನು ಗಮನಿಸಿದರೆ, ಇದು ಕೂಡಾ ಒಂದು ಬೃಹತ್ತಾದ ಕೈಗಾರಿಕೆಯಾಗಿದ್ದು ಜಾಗತಿಕ ಉದ್ಯಮವಾಗಿ ಮಾರ್ಪಟ್ಟಿದೆ. ಇದರ ನಿರ್ವಹಣೆಯಲ್ಲೇ ಇಡೀ ಜೀವಮಾನ ಕಳೆದುಹೋಗಿ ಸತ್ಯದಿಂದ ದೂರಾಗುವುದಕ್ಕೆ ಬದಲು ‘ಅರಸುವ ಬಾರೈ ತಲೆಹೊಲದಲ್ಲಿ’ ಎಂಬ ನಿಸರ್ಗವಿವೇಕಕ್ಕೆ ಮನಸ್ಸು ಕೊಡಬೇಕು.
(6) ಕಂಡುದ ಹಿಡಿಯಲೊಲ್ಲದೆ
ಕಾಣದುದನರಸಿ ಹಿಡಿದಹೆನೆಂದರೆ
ಸಿಕ್ಕದೆಂಬ ಬಳಲಿಕೆ ನೋಡಾ!
ಕಂಡುದನೆ ಕಂಡು, ಗುರುಪಾದವ ಹಿಡಿದಲ್ಲಿ
ಕಾಣದುದ ಕಾಣಬಹುದು ಗುಹೇಶ್ವರ! (LB:32)
ಪ್ರತ್ಯಕ್ಷಜ್ಞಾನದ ನಿರಾಕರಣೆ ಮಾಡಿ, ಅಪ್ರತ್ಯಕ್ಷದ ಬೆನ್ನಟ್ಟಿ ಆಯಾಸದಿಂದ ಬಳಲುವವರ ಕಥನದ ರೂಪಕವಿದು! ‘ಗುರುಪಾದ’ವನ್ನು ‘ಅಂತರತಮಗುರು’ ಎಂಬ ನೆಲೆಯಲ್ಲೇ ಸ್ವೀಕರಿಸಿ, ಸ್ವಯಂ ಸಾಕ್ಷಾತ್ಕಾರ ಪಡೆಯಬೇಕಾದ ಬಗೆ ಇಲ್ಲಿದೆ. ಇಂಡಿಯಾದ ಯುನಿವರ್ಸಿಟಿಗಳಲ್ಲಿ ನಡೆಯುತ್ತಿರುವ ಸಂಶೋಧನಾತ್ಮಕ ಅಧ್ಯಯನಗಳ ಕಪಟ ನಾಟಕದತ್ತ ಕಣ್ಣು ಹಾಯಿಸಿದರೆ ಸಾಕು, ಕಾಣದ ಎಷ್ಟೋ ಸತ್ಯಗಳ ದರ್ಶನವಾಗುತ್ತದೆ.
(7) ನಿರ್ಣಯವನರಿಯದ ಮನವೇ !
ದುಗುಡವನು ಆಹಾರಗೊಂಡೆಯಲ್ಲಾ?
ಮಾಯಾಸೂತ್ರವಿದೇನೋ?
ಕಂಗಳೊಳಗಣ ಕತ್ತಲೆ ತಿಳಿಯದಲ್ಲಾ?
ಬೆಳಗಿನೊಳಗಣ ಶೃಂಗಾರ ಬಳಲುತ್ತಿದೆ ಗುಹೇಶ್ವರ! (LB:27)
ಗೊಂದಲಬಡಕ ಸಾಮಾಜಿಕ ವ್ಯವಸ್ಥೆಯಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಯೂ ಕಂಡುಕೊಳ್ಳಬೇಕಾದ ಸತ್ಯದರ್ಶನವಿದು! ನಿರ್ಣಯಜ್ಞಾನವಿಲ್ಲದಿದ್ದರೆ, ದುಗುಡವನ್ನೇ ತಿಂದು, ಹಾಸಿ, ಹೊದ್ದು ಮಲಗಬೇಕಾಗುತ್ತದೆ. ಈ ಮಾಯಾಮಲಿನದಿಂದ ಬಿಡುಗಡೆ ಪಡೆದರೆ ಮಾತ್ರ ಕಣ್ಣುಗಳಿಗೆ ಕವಿದ ಕತ್ತಲೆ ತಿಳಿಯಾಗುತ್ತದೆ. ಇಲ್ಲದಿದ್ದರೆ ಇಲ್ಲ! ಈ ಶೂನ್ಯ ವಚನವನ್ನು ನಮ್ಮ ಬದುಕಿನ ಯಾವುದೇ ಸಂದರ್ಭಕ್ಕೂ ಅನ್ವಯಿಸಿಕೊಳ್ಳಬಹುದು.
(8) ಎತ್ತಣ ಮಾಮರ? ಎತ್ತಣ ಕೋಗಿಲೆ?
ಎತ್ತಣಿಂದೆತ್ತಣ ಸಂಬಂಧವಯ್ಯ!?
ಬೆಟ್ಟದ ನೆಲ್ಲಿಕಾಯಿ,
ಸಮುದ್ರದೊಳಗಣ ಉಪ್ಪು –
ಎತ್ತಣಿಂದೆತ್ತಣ ಸಂಬಂಧವಯ್ಯ!?
ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ
ಎತ್ತಣಿಂದೆತ್ತ ಸಂಬಂಧವಯ್ಯ!? (LB:39)
ಈ ಸಚರಾಚರ ಜಗತ್ತಿನಲ್ಲಿ ಪ್ರತ್ಯೇಕವೆಂಬುದೇ ಇಲ್ಲ! ದಾರ್ಶನಿಕ ವಿಜ್ಞಾನಿ ಐನ್ ಸ್ಪೈನ್ ಪ್ರಕಾರ ಮಾನವ ಜೀವನದ ಮಹಾದುರಂತ ಏನೆಂದರೆ ತನ್ನನ್ನು ತಾನು ಪ್ರತ್ಯೇಕಿಸಿಕೊಳ್ಳುವುದು! ಇದಕ್ಕೆ ಅಹಂಕಾರ ಮತ್ತು ಮಮಕಾರಗಳೇ ಕಾರಣ! ಈ ವಿಶ್ವಾತ್ಮಕ ಜಗತ್ತಿನಲ್ಲಿ ಪ್ರತಿಯೊಂದೂ ಮತ್ತೊಂದರ ಜೊತೆಗೆ ಬೇರ್ಪಡಿಸಲಾಗದ ಅವಿಭಾಜ್ಯ ಸಂಬಂಧವನ್ನು ಹೊಂದಿದೆ. ಎಲ್ಲಿ ಏನೇ ಕಂಪನಗಳು ಸಂಭವಿಸಲಿ ! ಈ ಕಂಪನಗಳಿಗೆ ವಿಶ್ವಾತ್ಮಕ ಕಂಪನಗಳ ಎಲೆಕ್ಟ್ರಾನುಗಳು ಸ್ಪಂದಿಸುತ್ತವೆ. ಈ ಸಂಬಂಧಮಯತೆಯನ್ನೇ (=Connectivity) ಮೇಲ್ಕಂಡ ಶೂನ್ಯವಚನ ನಿರ್ದೇಶಿಸುತ್ತಿದೆ.
(9) ಅಕ್ಷರವ ಬಲ್ಲೆವೆಂದು
ಅಹಂಕಾರವೆಡೆಗೊಂಡು ಲೆಕ್ಕಗೊಳ್ಳರಯ್ಯ!
ಗುರುಹಿರಿಯರು ತೋರಿದ ಉಪದೇಶದಿಂದ
ವಾಗದ್ವೈತವ ಕಲಿತು ವಾದಿಪರಲ್ಲದೆ
ಆಗು – ಹೋಗು ಎಂಬುದನರಿಯರು!
ಭಕ್ತಿಯನರಿಯರು, ಯುಕ್ತಿಯನರಿಯರು, ಮುಕ್ತಿಯನರಿಯರು!
ಮತ್ತೂ ವಾದಿಗೆಳಸುವರು! ಹೋದರು, ಗುಹೇಶ್ವರ! ಸಲೆ ಕೊಂಡ ಮಾರಿಂಗೆ!! (LB:47)
ಅಕ್ಷರದ ಅಹಂಕಾರವನ್ನು ಹೇಳುತ್ತಿರುವ ಅಲ್ಲಮಪ್ರಭುವಿನ ಈ ಶೂನ್ಯವಚನವು ಅಪೂರ್ವ ಕಾಣ್ಕೆಯಿಂದ ಕೂಡಿದೆ. ಅಹಂಕಾರವನ್ನು ನಾಶಪಡಿಸುವುದೇ ನಿಜವಾದ ವಿದ್ಯೆ! ಅಹಂಕಾರ ವರ್ಧನೆಯನ್ನು ಮಾಡುವ ವಿದ್ಯೆಯೇ ಅವಿದ್ಯೆ! ಕ್ರಿಯಾರಹಿತ ವಾಗದ್ವೈತದ ತೀವ್ರ ವಿಡಂಬನೆ ಇಲ್ಲಿದೆ. ನುಡಿಯಲ್ಲಿ ಅದ್ವೈತಸುಧೆಯನ್ನೇ ಹರಿಸುತ್ತಾ ನಡೆಯಲ್ಲಿ ಜಾತಿಪದ್ಧತಿ ಮತ್ತು ಅಸ್ಪೃಶ್ಯತೆ ಪಾಲಿಸುವ ಸ್ಥಿರಚಿಂತನೆಯನ್ನೇ ಇಲ್ಲಿ ‘ವಾಗದ್ವೈತ’ ಎಂದು ಕರೆಯಲಾಗಿದೆ. ಅಲ್ಲಮರ ಪ್ರಕಾರ ಮಾನವಕುಲದಲ್ಲಿ ಎರಡು ವಿಧವಾದ ಜನರಿದ್ದಾರೆ: (1) ಆಗುವ ಯೋಗ (2) ಹೋಗುವ ಯೋಗ. ಇದೇ ಮಾನವ ಕುಲಕ್ಕೆ ಒಡ್ಡಿದ ಸವಾಲ್! ಇಲ್ಲೇ ಇದ್ದು ಆಗುವುದು ಬಹುಮುಖ್ಯ! ಇಲ್ಲಿದ್ದೂ ಏನೂ ಆಗದೆ ಬರಿದೆ ಸತ್ತುಹೋಗುವುದಕ್ಕೆ ಇಲ್ಲಿ ಹುಟ್ಟಬೇಕಾಗಿಲ್ಲ! ಇದೇ ನಿಜ ಭಕ್ತಿ ನಿಜಯುಕ್ತಿ ನಿಜಮುಕ್ತಿ!
(10) ಅಷ್ಟಾಂಗಯೋಗದಲ್ಲಿ
ಯಮ ನಿಯಮಾಸನ ಪ್ರಾಣಾಯಾಮ
ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿಯೆಂದು
ಎರಡು ಯೋಗ ಉಂಟು ಅಲ್ಲಿ:
ಅಳಿದು ಕೂಡುವುದೊಂದು ಯೋಗ!
ಅಳಿಯದೆ ಕೂಡುವುದೊಂದು ಯೋಗ!
ಈ ಎರಡು ಯೋಗದೊಳಗೆ ಅಳಿಯದೇ
ಕೂಡುವ ಯೋಗವರಿದು ಕಾಣಾ ಗುಹೇಶ್ವರ! (LB:141)
ಯೋಗಶಾಸ್ತ್ರದ ಪರಿಭಾಷೆಗಳ ಪಟ್ಟಿ ಕೊಡುತ್ತಾ ಕಡೆಗೆ ಎರಡು ಯೋಗದ ಪ್ರಸ್ತಾಪ ಮಾಡಿ, (1) ಆಗುವ ಯೋಗ (2) ಹೋಗುವ ಯೋಗ ಹೇಳುತ್ತಿರುವ ಈ ವಚನ ಮೇಲ್ಕಂಡ ವಚನಕ್ಕೆ ಪೂರಕವಾಗಿದೆ. ಬದುಕಿದ್ದಂತೆಯೇ
ಅಳಿಯದೇ ಕೂಡುವ ‘ಆಗುವ’ ಯೋಗವೇ ಮಿಗಿಲಾದುದು!
(11) ಆಕಾರ ನಿರಾಕಾರವೆಂಬವೆರಡೂ
ಸ್ವರೂಪಂಗಳು!
ಒಂದು ಆಹ್ವಾನ ; ಒಂದು ವಿಸರ್ಜನ!
ಒಂದು ವ್ಯಾಕುಳ ; ಒಂದು ನಿರಾಕುಳ!
ಉಭಯ ಕುಳರಹಿತ, ಗುಹೇಶ್ವರ!
ನಿಮ್ಮ ಶರಣನು ನಿಶ್ಚಿಂತನು! (LB:184)
‘ರೂಪಾದ ಜಗಕ್ಕೆ ಪ್ರಳಯವಾಯಿತ್ತು’… ‘ರೂಪಿಂಗೆ ಕೇಡುಂಟು; ನಿರೂಪಿಂಗೆ ಕೇಡಿಲ್ಲ’… ಎಂಬ ಅಲ್ಲಮರ ವಚನಗಳಿಂದಾಯ್ದ ನುಡಿಗಳಿಲ್ಲಿ ಮನನೀಯ! ರೂಪುಗೊಂಡಿದ್ದು ನಾಶವಾಗಲೇಬೇಕು! ರೂಪಿಗೆ ಇರುವಷ್ಟು ಚಿಂತೆ ನಿರೂಪಿಗಿಲ್ಲ! ಯಾರು ತನ್ನನ್ನು ವಿಶ್ವಾತ್ಮಕ ಚೈತನ್ಯದ ಮಹಾಪ್ರವಾಹದಲ್ಲಿ ಗುರುತಿಸಿಕೊಳ್ಳುತ್ತಾರೋ ಅವರಿಗೆ ಯಾವ ಭಯವೂ ಇಲ್ಲ! ಇದನ್ನರಿತ ಶರಣನ ಮನಸ್ಸು ನಿಶ್ಚಿಂತವಾದುದು!
(12) ಶಬ್ದಸಂಭ್ರಮದಲ್ಲಿ
ಹಿಂದುಗಾಣರು! ಮುಂದುಗಾಣರು!
ತಮ್ಮ ತಾವರಿಯರು! ಇದು ಕಾರಣ
ಮೂರು ಲೋಕವೆಲ್ಲವೂ ಬರುಸೂರೆವೋಯಿತ್ತು ಗುಹೇಶ್ವರ! (LB:299)
ಧಾರವಾಡ ಸಂಭ್ರಮ, ಬೆಂಗಳೂರು ಸಂಭ್ರಮ ಎಂಬ ಜಿಲ್ಲಾವಾರು ಸಂಭ್ರಮಗಳಲ್ಲಿ ಮುಳುಗಿಹೋದವರಿಗೆ ಇದು ಸೂಕ್ತವಾದ ವಚನ. ಶಬ್ದಮಾಲಿನ್ಯದ ಆಧುನಿಕ ಯುಗಕ್ಕೊಡ್ಡಿದ ಮಹಾನ್ ರೂಪಕವಿದು. ನಾನಾ ವಿಧವಾದ ಶಬ್ದಸಂಭ್ರಮದಲ್ಲಿ ಮುಳುಗಿಹೋದ ಆಧುನಿಕ ಮಾನವಕುಲಕ್ಕೆ ಬಿಡುವೆಂಬುದಿಲ್ಲ! ಶಬ್ದಸಾಧಕರೆಲ್ಲರಿಗೆ ಮುಟ್ಟಿ ನೋಡುಕೊಳ್ಳುವಂತೆ ಚುರುಕ್ಕೆಂದು ಚಾಟಿ ಬೀಸಿದೆ ಈ ವಚನ. ‘ಶಬ್ದವೇದಿಗಳೆಂದು ನುಡಿದು ನಡೆವರು ನೋಡಾ! ನಿಃಶಬ್ದ ವೇದಿಸದಿದ್ದರೆ ಗುಹೇಶ್ವರ ನೋಡಿ ನೋಡಿ ನಗುತ್ತಿಪ್ಪ ನೋಡಾ!’ (LB:242) ಎಂಬ ಅಲ್ಲಮರ ಮತ್ತೊಂದು ವಚನವನ್ನಿಲ್ಲಿ ಸ್ಮರಿಸಬೇಕು. ಶಬ್ದಕಲ್ಪಧ್ರುಮರೆಂದು ಹೆಸರಾದವರೆಲ್ಲಾ ಬೆಚ್ಚಿ ಬೀಳುವಂತೆ ಅಲ್ಲಮಪ್ರಭು ನಿಃಶಬ್ದದ ನಿಧಾನವನ್ನು ನಮಗೆ ಮನಗಾಣಿಸಿದ್ದಾರೆ.
ಅಲ್ಲಮಪ್ರಭುವಿನ ಶೂನ್ಯವಚನಗಳನ್ನು ತಂತಮ್ಮ ಮನಸ್ಸಿಗೆ ಹೊಳೆದಂತೆ ಯಾರು ಬೇಕಾದರೂ, ಯಾವ ಸಂದರ್ಭಕ್ಕಾದರೂ, ಅನ್ವಯಿಸಿಕೊಳ್ಳಬಹುದು. ಝೆನ್ ಕಥಾ ಪ್ರಸಂಗಗಳು ಅಷ್ಟೇ! ಯಾವುದೇ ಝೆನ್ ಕತೆಯನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಮಾತುಕತೆ ಮಧ್ಯೆ ದೃಷ್ಟಾಂತವಾಗಿ ಉದಾಹರಿಸಬಹುದು. ಇದೇ ರೀತಿಯಲ್ಲೇ ಅಲ್ಲಮಪ್ರಭುವಿನ ವಚನಗಳನ್ನು ಕೂಡಾ ದೃಷ್ಟಾಂತವಾಗಿ ಬಳಸಬಹುದು. ಇದನ್ನೇ ವಸ್ತು ಗತಿಶೀಲತೆಯ ತತ್ವ ಎನ್ನುವುದು. ಹನ್ನೆರಡನೇ ಶತಮಾನದ ಶರಣರ ವಚನಗಳು ಈ ಹೊತ್ತಿನ ವ್ಯಕ್ತಮಧ್ಯಕ್ಕೆ ಸಲ್ಲುತ್ತವೆ ಎಂಬುದೇ ನಿಜೋದಯ! ಈ ದೃಷ್ಟಿಯಿಂದ ಹೀಗೆ ಸಲ್ಲುವ ಎಲ್ಲಾ ಶರಣರ ವಚನಗಳನ್ನು ಝೆನ್ ವಚನಗಳು ಎಂದು ಕರೆದರೂ ಸರಿ!
~~~~~~~~~~~~~~~~~~~~
ಮೇಲ್ಕಂಡ ವಿಮರ್ಶಾ ಲೇಖನದಲ್ಲಿ ನಾನು ಕೊಟ್ಟಿರುವ ಅಲ್ಲಮರ ವಚನಗಳ ಸಂಶ್ಲೇಷಣೆ (synthesis) ಫೈನಲ್ ಅಲ್ಲ! ಇವೇ ವಚನಗಳನ್ನು ಇತರರು ತಮಗೆ ತೋಚಿದಂತೆ ನಿರೂಪಣೆ ಮಾಡಬಹುದು. ಇದು ಮಾಯಾಬಜಾರ್ ಸಿನೆಮಾದಲ್ಲಿನ ‘ಪ್ರಿಯದರ್ಶಿನಿ’ಯಂತಿರುವ ಅಲ್ಲಮಪ್ರಭು ವಚನಗಳಲ್ಲಿ ನನ್ನ ಇಣುಕುನೋಟ ಅಷ್ಟೇ !
‘ಬೆಳಕಿನ ಹುಳು’ ಇತರ ಬೆಳಕಿಗೆ ಹಾಯವುದಿಲ್ಲ! ಅಂತೆಯೇ ಅಲ್ಲಮರ ವಚನಗಳಿಗೆ ಇತರ ಯಾವೊಬ್ಬ ದಾರ್ಶನಿಕ ಅಥವಾ ಕವಿಯ ಸಮರ್ಥನೆಯನ್ನು ಕೊಡುವ ಗೋಜಲಿಗೆ ನಾನು ಹೋಗಿಲ್ಲ!
Comments 13
ಜಯದೇವ ತಾವರೆಕೊಪ್ಪ
Oct 16, 2022ಕಾವ್ಯಗಳು ವಿಷಯಗಳಿಂದ ಕೂಡಿದ್ದು, ವಚನಗಳು ವಿಷಯಗಳಿಂದ ನಮ್ಮನ್ನ ದೂರ ತರಲು ಪ್ರಯತ್ನಿಸುತ್ತವೆ. ಕವಿಗಳಿಗೂ, ಶರಣರಿಗೂ ಅಜಗಜಾಂತರ ವ್ಯತ್ಯಾಸವಿದೆ… ಅಲ್ಲಮಪ್ರಭುವಿನ ಶೂನ್ಯ ವಚನಗಳು ಭವದಿಂದ ಪಾರಾಗುವ ಅವಕಾಶವನ್ನು ಸೃಷ್ಟಿಸುತ್ತವೆ….
Mahalinga N
Oct 18, 2022ಲೇಖನ ಬಹಳ ವೈಜ್ಞಾನಿಕವಾಗಿಯೂ, ಆಧುನಿಕವಾಗಿಯೂ ಕೂಡಿದ ವಿಚಾರಗಳಿಂದ ಅಲ್ಲಮಪ್ರಭುವಿನ ವಚನಗಳನ್ನು ವಿಶ್ಲೇಷಿಸಿದ ಬಗೆ ವಿನೂತನವಾಗಿದೆ, ಹಿಡಿವ ಕೈಯ ಮೇಲೆ ಕತ್ತಲೆ ಯಾವುದು? ನೋಡುವ ಕಂಗಳ ಮೇಲಿನ ಕತ್ತಲೆಯಾವುದು?
ನೆನೆವ ಮನದ ಮೇಲಿನ ಕತ್ತಲೆಯಾವುದು?… ಎನ್ನುವುದನ್ನು ವಿವರಿಸಿದ ಬಗೆ ಮನೋಜ್ಞವಾಗಿದೆ ಸರ್, ಶರಣು ಶರಣು.
ಗೌರೀಶ್ ಹಳೆಪೇಟೆ
Oct 18, 2022ಜಗತ್ತು ಸಂಬಂಧದಲ್ಲಿಯೇ ನಿರ್ಮಾಣವಾಗಿದೆ, ಏಕಜೀವಕೋಶದಿಂದ ಹಿಡಿದು ಏನೆಲ್ಲಾ ಸಮಕೀರ್ಣ ಜೀವಗಳನ್ನು ಸೃಷ್ಟಿಸಿರುವ ಜಗತ್ತಿನ ತನ್ನ ಮೂಲಸ್ವರೂಪವನ್ನೇ ಮರೆತು ಪ್ರತ್ಯೇಕತೆಯ ರೋಗದಲ್ಲಿ ಬಳಲುತ್ತಿದೆ. ಸಂಬಂಧದ ಅನ್ಯೋನ್ಯತೆಯನ್ನು ಶೂನ್ಯ ವಚನಗಳು ಕೊನೆಗೆ ಉಳಿಯುವುದು ಶೂನ್ಯವೇ ಎನ್ನುವ ಮಹಾ ದರ್ಶನದಲ್ಲಿ ಮಾರ್ದನಿಸುತ್ತವೆ. ಶರಣರಾದ ಚಂದ್ರಶೇಖರ ನಂಗಲಿ ಅವರ ಬರಹಗಳು ಉತ್ಕೃಷ್ಟವಾಗಿವೆ.
Girish Mysuru
Oct 20, 2022ದಾರ್ಶನಿಕ ಕವಿಸಂತ ಅಲ್ಲಮಪ್ರಭುವಿನ ವಚನಗಳನ್ನು ಪೂಜ್ಯ ಸಿದ್ದೇಶ್ವರ ಸ್ವಾಮಿಗಳು ವಚನ ನಿರ್ವಚನದಲ್ಲಿ ನೀಡಿದ ವ್ಯಾಖ್ಯಾನಗಳಿಗಿಂತ ಸಂಪೂರ್ಣ ಭಿನ್ನವಾಗಿ ಇಲ್ಲಿನ ವಿಶ್ಲೇಷಣೆ ಇದೆ… ಹೀಗೂ ಪ್ರಭುಗಳನ್ನು ನೋಡಬಹುದೆನ್ನುವುದೇ ಒಂದು ರೋಮಾಂಚನ ಅನುಭವ! ಶರಣ ನಂಗಲಿಯವರಿಗೆ ಧನ್ಯವಾದಗಳು.
ವಿಶ್ವನಾಥ ಗುರುಮಠ
Oct 20, 2022ರೂಪ, ನಿರೂಪಗಳನ್ನು, ಆಕಾರ-ನಿರಾಕಾರಗಳನ್ನು ವೈಜ್ಞಾನಿಕ, ತೀಕ್ಷ್ಣ ದೃಷ್ಟಿಯಿಂದ ಕಂಡ ಶೂನ್ಯ ವಚನಗಳು ಬಯಲ ಸ್ವರೂಪಗಳೆಂದೇ ನನ್ನ ಅನಿಸಿಕೆ. ವಚನಗಳ ಒಡಲೊಳಗೆ ಹೊಕ್ಕರೆ ಅಲ್ಲಿನ ಲೋಕ ಅನಿರ್ವಚನೀಯ! ಬಯಲು ಅಂತಹ ನಿರಾಳಕ್ಕೆ ನಮ್ಮನ್ನು ಒಯ್ಯಬಲ್ಲ ಬರಹಗಳನ್ನು ನೀಡುತ್ತಿದೆ. ಬಯಲ ಬಳಗಕ್ಕೆ ಶರಣುಗಳು.
Prabhu Nelamane
Oct 20, 2022ಅಹಂಕಾರವನ್ನು ನಾಶಪಡಿಸುವುದೇ ನಿಜವಾದ ವಿದ್ಯೆ! ಆದರೆ ಅಕ್ಷರಾಭ್ಯಾಸವೇ ಅಹಂಕಾರವನ್ನು ವೃದ್ಧಿಮಾಡತೊಡಗಿದರೆ… ಇಂಥದೊಂದು ಪರಿಸ್ಥಿತಿಯನ್ನು ನಾವೀಗ ಎದುರಿಸುತ್ತಿದ್ದೇವೆ. ಉಪದೇಶಗಳು, ವಾದ-ವಿವಾದಗಳು, ತರ್ಕಗಳು ನಮ್ಮ ಪಂಡಿತ ವಲಯನ್ನು ಭುತದಂತೆ ಆಡಿಸುತ್ತಿವೆ… ಇವುಗಳಿಂದ ಬಿಡುಗಡೆ ಹೊಂದದೆ ಮುಕ್ತಿ ಸಾಧ್ಯವಿಲ್ಲಾ- ಸುಂದರ ನಿರೂಪಣೆ!
Chandrashekhara
Oct 21, 2022ನಾವೇ ಬೆಳಕು, ನಾವೇ ಕತ್ತಲೆ! ಕಂಗಳಲ್ಲಿನ ಕತ್ತಲೆ ಕಳೆದಾಗ ಬೆಳಕಿನ ಸ್ವರೂಪ ನಾವೆಂದು ಕಾಣಿಸುತ್ತದೆಯೇ? ಅಥವಾ ಬೆಳಕು, ಕತ್ತಲಗಳೆರಡೂ ಮನಸ್ಸಿನ ಆಟಗಳೇ?
ಶಿವಪ್ರಕಾಶ್ ಗುಡಿಗಾರ್
Oct 27, 2022ಕಂಡುದ ಹಿಡಿಯಲೊಲ್ಲದೆ, ಕಾಣದುದನರಸಿ ಹಿಡಿದಹೆನೆಂದರೆ… ಅಲ್ಲಮಪ್ರಭುವಿನ ಈ ವಚನ ಬಹಳ ಸೊಗಸಾಗಿದೆ. ಪ್ರತ್ಯಕ್ಷಜ್ಞಾನದ ನಿರಾಕರಣೆ ಮಾಡಿ, ಅಪ್ರತ್ಯಕ್ಷದ ಬೆನ್ನಟ್ಟಿ ಆಯಾಸದಿಂದ ಬಳಲುವವರ ಕಥನದ ರೂಪಕವಿದು ಎಂದು ಲೇಖಕರು ಹೇಳುವುದು ಸರಿಯಾದ ಮಾತು!! ಇರುವ ಲೋಕ ಬಿಟ್ಟು ಇಲ್ಲದ ಲೋಕದ ಬಗ್ಗೆ ತಲೆಕೆಡಿಕೊಳ್ಳುವ ಮನುಷ್ಯರಿಗೆ ಮಾತ್ರವಲ್ಲ, ಗುರುಪಾದದ ಮಹತ್ವ ತಿಳಿಯದವರಿಗೂ ಬದುಕಿನ ಸತ್ಯ ತಿಳಿಯಲಾರದು. ಅಂತರತಮಗುರು- ಎನ್ನುವ ಪದದ ಅರ್ಥ ನನಗೆ ತಿಳಿಯಲಿಲ್ಲ. ಏನು ಹಾಗೆಂದರೆ? ಅಂತರಂಗವೆಂದು ಅರ್ಥವೇ?
ಅಶೋಕ್ ಪಾಟೀಲ್
Oct 27, 2022ವ್ಯೋಮಕಾಯ ಅಲ್ಲಮಪ್ರಭುಗಳ ಎಲ್ಲಾ ವಚನಗಳೂ ಶೂನ್ಯ ವಚನಗಳೇ? ಶೂನ್ಯ ಎಂದರೆ ಏನು? ನಿರಾಶಾವಾದವೇ? ಎಲ್ಲವೂ ಶೂನ್ಯ ಯಾವುದೂ ಸತ್ಯವಲ್ಲಾ ಎನ್ನುವ ತಥ್ಯವೇ?
Halappa Beluru
Oct 27, 2022ಇಲ್ಲಿ ಅಲ್ಲಮರು ಹೇಳುತ್ತಿರುವ ಯೋಗ ಯಾವುದು? ಆಗುವ ಯೋಗ, ಹೋಗುವ ಯೋಗ- ಈ ಯೋಗಗಳು ಯಾವುವು? ಇವುಗಳ ಮರ್ಮ ಅಥವಾ ದಾರಿ ಎಂಥದ್ದು? ಶಿವಯೋಗಕ್ಕೂ ಅಷ್ಟಾಂಗ ಯೋಗ ಮಾರ್ಗಕ್ಕೂ ಸಂಬಂಧ, ಸಾಮ್ಯತೆಗಳು ಏನಾದರೂ ಇವೆಯೇ?
ಕಾರ್ತಿಕಸ್ವಾಮಿ, ಜಗಳೂರು
Oct 29, 2022ಸಾಮಾನ್ಯವಾಗಿ ಅಲ್ಲಮಪ್ರಭುಗಳು ಮಾತನಾಡುವುದು ಬೆಡಗಿನ ವಚನಗಳಲ್ಲಿ ಎನ್ನುವುದು ಲೋಕರೂಢಿಯ ನಂಬಿಕೆ. ಈ ಬೆಡಗಿಗೆ ನಾನಾ ಅರ್ಥಗಳಿರುತ್ತವೆ ಎನಿಸುತ್ತದೆ. ಹಾಗೆ ವಚನಗಳನ್ನು ಕೈಯಲ್ಲಿ ಹಿಡಿದು ಅವುಗಳ ಒಳಗೆ ಪ್ರವೇಶ ಪಡೆಯಲು ನಮಗೂ ಅರ್ಹತೆ ಬೇಕೇ ಬೇಕಾಗುತ್ತದೆ. ಜೊತೆಗೆ ಹಾಗೆ ಒಳಗೆ ಹೋಗಿ ಹೊಳಹುಗಳನ್ನು ಹೆಕ್ಕಿ ತರುವುದು, ಅವು ನಮಗೂ ಗೊತ್ತಾಗುವುದು ಇವೆಲ್ಲಾ ಪೂರ್ವಜನ್ಮದ ಸುಕೃತವೇ ಎನ್ನುವುದು ನನ್ನ ಅನಿಸಿಕೆ. ನಿಮ್ಮ ಹೊಳಹುಗಳಿಂದ ನಮ್ಮ ಅರಿವು ಹಿಗ್ಗಿತು ಎಂದು ಹೇಳಲು ಸಂತೋಷಪಡುತ್ತೇನೆ.
Divya H
Oct 29, 2022ಭಾಷಣಗಳಲ್ಲಿ, ಪುಂಖಾನುಪುಂಖವಾಗಿ ಮಾತುಗಳಲ್ಲಿ ಉದುರಿಸುವ ಪ್ರವಚನಗಳಲ್ಲಿ ಮುಳುಗಿ ಹೋದವರು ಸಂಭ್ರಮಗಳಲ್ಲಿ ತೇಲಿಹೋಗುತ್ತಾರೆ, ಮುಳುಗಿ ಹೋಗುತ್ತಾರೆ… ನಮ್ಮ ಸುತ್ತಲಿನ ಸ್ವಾಮಿಗಳೆಲ್ಲಾ ಇದೇ ಥರ ಮುಳುಗಿ ಸತ್ತು ಹೋದವರು. ಅಲ್ಲಮಪ್ರಭುಗಳು ಇವರನ್ನು ಕಂಡು ಮರುಕಪಡುತ್ತಾರೆ, ಎಂತಹ ಅದ್ಭುತ ವಚನ ಸರ್!!!
ಗಜಾನನ ಹಾದಿಮನಿ
Nov 5, 2022ಸರ್, ನಿಜಕ್ಕೂ ಶೂನ್ಯ ಎಂದರೇನು? ಇಲ್ಲದ್ದನ್ನು ಸಂಪಾದಿಸುವುದು ಹೇಗೆ? ಇಲ್ಲದ್ದಕ್ಕಾಗಿ ಜೀವನ ನಡೆಸುವುದಾದರೂ ಯಾತಕ್ಕೆ? ಶೂನ್ಯವನ್ನು, ಬಯಲನ್ನು ನಮಗೆ ಅರ್ಥವಾಗುವಂತೆ ವಿವರಿಸುವಿರಾ?