ಅಮುಗೆ ರಾಯಮ್ಮ (ಭಾಗ-3)
ಜಾತ್ಯಾತೀತ ಮನೋಭಾವ
ಜಾತಿಯೆಂಬುದು ಈ ದೇಶಕ್ಕಂಟಿದ ದೊಡ್ಡ ರೋಗವಾಗಿದೆ. ಶರಣರು ಹೋರಾಟ ಪ್ರಾಂರಂಭಿಸಿದ್ದೇ ಜಾತಿಯ ಮೂಲಕ. ಜಾತ್ಯಾತೀತ ಮನೋಭಾವವುಳ್ಳ ಶರಣರು ಯಾವ ಜಾತಿಯನ್ನೂ ತಿರಸ್ಕರಿಸಲಿಲ್ಲ. ಪ್ರತಿಯೊಂದು ಜಾತಿಗೂ ಗೌರವ ಕೊಟ್ಟರು. ಎಲ್ಲ ಜಾತಿಗಳು ಸಮಾನವೆಂದು ಹೇಳಿದರು. ಜಾತಿ ವ್ಯವಸ್ಥೆಯು ಚಾತುರ್ವರ್ಣ ವ್ಯವಸ್ಥೆಯಿಂದ ಹುಟ್ಟಿಕೊಂಡಿದೆಯೆಂದು ಸ್ಪಷ್ಟಪಡಿಸಿದ ಅವರು, ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ನೇರ ಹೋರಾಟ ಪ್ರಾರಂಭಿಸಿದರು. ಪುರೋಹಿತಶಾಹಿ ಈ ಅಸಮಾನತೆ ಹುಟ್ಟು ಹಾಕಿರುವುದರಿಂದ ಪುರೋಹಿತಶಾಹಿ ವಿರುದ್ಧ ಬಂಡಾಯವೆದ್ದರು. ಪುರೋಹಿತಶಾಹಿಗೂ-ಜಾತಿವ್ಯವಸ್ಥೆಗೂ, ಸಮಾಜದ ಅಸಮಾನತೆಗೂ ಒಂದಕ್ಕೊಂದು ಸಂಬಂಧವಿರುವುದರಿಂದ ಅವರು ಮೂಲಕ್ಕೆ ಕೈ ಹಾಕಿದರು. ಹೀಗಾಗಿ ಪುರೋಹಿತಶಾಹಿ ವ್ಯವಸ್ಥೆ ಇವರ ಚಳವಳಿಯನ್ನು ಸಹಿಸಿಕೊಳ್ಳದೆ, ಅರಸೊತ್ತಿಗೆಯನ್ನು ತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಂಡು, ವಚನಕಾರರ ಹತ್ಯಾಕಾಂಡವನ್ನು ನಡೆಸಿತು. ವಚನಕಾರರಿಗೆ ಆ ಕಾಲಕ್ಕೆ ಸಾವಾಗಿರಬಹುದು, ಆದರೆ ಜಾತ್ಯಾತೀತ ಸಿದ್ಧಾಂತ ಸಾಯಲಿಲ್ಲ. ಅದು ಇಂದಿಗೂ ಜೀವಂತವಾಗಿದೆ. ಕೋಮುವಾದದ ವಿರುದ್ಧ ಇಂದಿಗೂ ಹೋರಾಟಗಳು ನಡೆದೇ ಇವೆ. ಅನೇಕ ಸುಧಾರಣಾವಾದಿಗಳು ಚಾತುರ್ವರ್ಣ ವ್ಯವಸ್ಥೆಯನ್ನು ವಿರೋಧಿಸದೆಯೇ ಸಮಾನತೆಯನ್ನು ಹೇಳುತ್ತಾರೆ. ಅನೇಕ ಧರ್ಮಗಳು ಸಮಾನತೆಯ ಮಾತನ್ನೇ ಹೇಳುವುದಿಲ್ಲ. ಕೆಲವು ಧರ್ಮಗಳು ದಲಿತರ ಬಗೆಗೆ, ದುಡಿವವರ ಬಗೆಗೆ ಅಸ್ಪೃಶ್ಯರ ಬಗೆಗೆ ಅನುಕಂಪ ತೋರಿಸಿದರೂ ಜಾತಿಬೇರನ್ನು ಕಿತ್ತುಹಾಕಲು ಪ್ರಯತ್ನಿಸುವುದಿಲ್ಲ, ಚಾತುರ್ವರ್ಣ ವ್ಯವಸ್ಥೆಯನ್ನು ವಿರೋಧಿಸುವುದಿಲ್ಲ. ಆದರೆ 12ನೇ ಶತಮಾನದ ಶರಣರು ಇಂತಹ ಕ್ರಾಂತಿಕಾರಕ ಹೆಜ್ಜೆಗಳನ್ನು ಇಟ್ಟರು. ಶಿವಶರಣರು ಜಾತ್ಯಾತೀತ ಮನೋಭಾವ ಹೊಂದಿದ್ದರು. ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ, ಕದಿರ ರೆಮ್ಮವ್ವೆ, ಬೊಂತಾದೇವಿ ಈ ಮೊದಲಾದ ಶರಣರ ವಚನಗಳಲ್ಲಿ ಜಾತ್ಯಾತೀತ ಮನೋಭಾವವು ಬೆಳೆದು ನಿಂತಿದೆ. ಅದೇ ರೀತಿ ಅಮುಗೆ ರಾಯಮ್ಮನವರ ವಚನಗಳಲ್ಲಿಯೂ ಜಾತ್ಯಾತೀತ ಮನೋಭಾವವನ್ನು ಕಾಣಬಹುದು. ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ದಲಿತ ಆಹಾರ ಪದ್ಧತಿಯ ಬಗೆಗೆ ಮಾತನಾಡಿದರೆ, ಕದಿರ ರೆಮ್ಮವ್ವೆ ತಾ ತಿರುಹುವ ರಾಟಿಯ ಪ್ರತಿಮೆಯ ಮೂಲಕವೇ ಕುಲ-ಜಾತಿಯ ವಿಷಯವನ್ನು ತಿಳಿಸಿದ್ದಾರೆ. ‘ಊರ ಒಳಗಣ ಬಯಲು, ಊರ ಹೊರಗಣ ಬಯಲೆಂಬುದುಂಟೆ?’ ಎಂದು ಪ್ರಶ್ನಿಸಿರುವ ಬೊಂತಾದೇವಿ, ಜಾತಿಬೇಧ ಮಾಡುವವರನ್ನು ನೇರವಾಗಿಯೇ ವಿರೋಧಿಸಿದ್ದಾರೆ. ಇದೇ ರೀತಿ ರಾಯಮ್ಮನವರ ವಚನಗಳೂ ಇವೆ.
ಅಂಗದ ಮೇಲೆ ಲಿಂಗವಿಲ್ಲದವರಲ್ಲಿ
ಲಿಂಗಾರ್ಪಿತವ ಬೇಡಲೇಕೆ?…
ಜಾತಿಗೋತ್ರವನೆತ್ತಿ ನುಡಿಯಬೇಕೆ?…
ಆವ ಕುಲವಾದಡೇನು, ಅಂಗದ ಮೇಲೆ ಲಿಂಗವುಳ್ಳವರೆಲ್ಲರೂ
ಆಚಾರವುಳ್ಳವರೆಂಬೆನಯ್ಯ ?…- (ಸ.ವ.ಸಂ.5, ವ-591)
ಜಾತಿಗೋತ್ರವನೆತ್ತಿ ನುಡಿಯಬಾರದೆಂದು, ಭಕ್ತರಲ್ಲಿ ಕುಲಭೇದ ಮಾಡಬಾರದೆಂದು ನಿಷ್ಠುರವಾದ ಮಾತುಗಳನ್ನಾಡಿದ್ದಾರೆ.
ಕುಲವನತಿಗಳೆದವಂಗೆ ಕುಲದ ಹಂಗೇಕಯ್ಯ?
ಬಲ್ಲೆನೆಂಬವಂಗೆ ಗೆಲ್ಲಸೋಲದ ಹಂಗೇಕಯ್ಯ?
ಅಮುಗೇಶ್ವರನೆಂಬ ಲಿಂಗವನರಿದ ಶರಣಂಗ
ಈ ಸಮಯದ ಹಂಗೇಕಯ್ಯ?- (ಸ.ವ.ಸಂ.5, ವ-636)
ಕುಲವನ್ನು ಬಿಟ್ಟ ಮೇಲೆ, ಅದನ್ನು ಅತಿಗಳೆದ ಮೇಲೆ, ಕುಲದ ಹಂಗು ಇರಬಾರದೆಂದು ತಿಳಿಸಿದ್ದಾರೆ. ಎಲ್ಲ ತಿಳಿದವಂಗೆ ಸೋಲು-ಗೆಲುವಿನ ಹಂಗಿರಬಾರದೆಂದು ಹೇಳಿದ್ದಾರೆ. ನಿಜವಾದ ಶರಣಂಗೆ ಕಾಲದ ಹಂಗೂ ಇರುವುದಿಲ್ಲವೆಂದು ವಿವರಿಸಿ ಹೇಳಿದ್ದಾರೆ.
ಅಮುಗೆ ರಾಯಮ್ಮ ನೇಕಾರ ಕುಲದಲ್ಲಿ ಹುಟ್ಟಿದ್ದರೂ, ಆಕೆಗೆ ಅಸ್ಪೃಶ್ಯರ ಬಗೆಗೆ ಅಪಾರ ಗೌರವವಿದೆ. ಕುಲವನ್ನೆತ್ತಿಕಟ್ಟಿ ಮೇಲು-ಕೀಳುಗಳನ್ನು ಸೃಷ್ಟಿಸಿರುವ ಸಮಾಜ ವ್ಯವಸ್ಥೆಯ ಬಗೆಗೂ ಆಕೆಗೆ ಸಿಟ್ಟಿದೆ. ಭಕ್ತರನ್ನು ಕಂಡಕೂಡಲೇ ಸ್ವಾಗತಿಸುವ ರಾಯಮ್ಮನವರಿಗೆ ಭವಿಗಳನ್ನು ಕಂಡರೆ ಸಿಡಿಮಿಡಿ. ಕುಲಮದ, ಛಲಮದ, ಸಿರಿಮದ, ಯೌವನಮದ ಇರಬಾರದೆಂದು ತನ್ನ ವಚನಗಳಲ್ಲಿ ವಿವರಿಸಿದ್ದಾರೆ. ಹುಟ್ಟನ್ನು ಹೇಳಲು ಎಲ್ಲರಿಗೂ ಒಂದು ಜಾತಿ ಇರುತ್ತದೆಯೇ ಹೊರತು, ಅದು ಅಸಮಾನತೆಗೆ, ಮೇಲು-ಕೀಳಿಗೆ ಕಾರಣವಾಗಬಾರದೆಂದು ಶರಣರು ತಮ್ಮ ವಚನಗಳಲ್ಲಿ ಸಾರಿಸಾರಿ ಹೇಳಿದ್ದಾರೆ. ಈ ವಿಷಯ ಕುರಿತಂತೆ ರಾಯಮ್ಮನವರೂ ತನ್ನ ವಚನಗಳಲ್ಲಿ ಅನೇಕ ಉದಾಹರಣೆಗಳನ್ನು ಕೊಟ್ಟು ತಿಳಿಸಿ ಹೇಳಿದ್ದಾರೆ.
ವೇಷಧಾರಿಗಳು, ನಾಮಧಾರಿಗಳು, ಡಾಂಭಿಕರನ್ನು ವಿಡಂಬಿಸಿರುವ ರಾಯಮ್ಮ, ಬೇಧ ಹುಟ್ಟು ಹಾಕಿರುವ ಚಾತುರ್ವರ್ಣ ವ್ಯವಸ್ಥೆಯನ್ನು ವಿರೋಧಿಸಿದ್ದಾರೆ. ಇದಕ್ಕೆ ಕಾರಣವಾಗಿರುವ ಪುರೋಹಿತಶಾಹಿಯನ್ನು ತಿರಸ್ಕರಿಸಿದ್ದಾರೆ. ರಾಯಮ್ಮನವರಿಗೆ ಇಲ್ಲಿ ಕಾವಿಧಾರಿ ವಿರಕ್ತರೆಲ್ಲ ಪುರೋಹಿತರಂತೆ ಕಂಡಿದ್ದಾರೆ. ವಿರಕ್ತರ ಬಗೆಗೆ ಅನೇಕ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ.
ಮನಕ್ಕೆ ಬಂದಂತೆ ಹಲವು ಪರಿಯ ವೇಷವತೊಟ್ಟು ಹರಿದಾಡುವ
ಜಾತಿಕಾರರ ಈಶ್ವರನು ಮೆಚ್ಚನು,
ಸದಾಶಿವನು ಸೈರಣೆಯ ಮಾಡನು.
ಅಮುಗೇಶ್ವರ ಲಿಂಗವನರಿಯದ ಅನಾಚಾರಿಗಳ ಕಂಡಡೆ
ಬಸವಾದಿ ಪ್ರಮಥರು ಬನ್ನಿ ಕುಳ್ಳಿರಿ ಎಂಬ ನುಡಿಯ ನುಡಿಯರು.- (ಸ.ವ.ಸಂ.5, ವ-675)
ಈ ಜಾತಿಕಾರರು, ಜಾತಿವಾದಿಗಳು ಹಲವು ಪರಿಯ ವೇಷವ ತೊಟ್ಟು ಮೋಸ ಮಾಡುತ್ತಿರುತ್ತಾರೆ. ಇಂತವರನ್ನು ಈಶ್ವರನು ಮೆಚ್ಚುವುದಿಲ್ಲ. ಶರಣ ಸಿದ್ಧಾಂತವನ್ನರಿಯದವರು ಅನಾಚಾರಿಗಳೆಂದು ವಿಡಂಬಿಸಿದ್ದಾರೆ. ಇಂತವರನ್ನು ಬಸವಾದಿ ಪ್ರಮಥರು ಬನ್ನಿ, ಕುಳ್ಳಿ ಎಂದು ಕರೆಯುವುದಿಲ್ಲವೆನ್ನುತ್ತಾರೆ.
ಪ್ರಾರಂಭದಲ್ಲಿ ಈ ಜಾತಿ-ಕುಲವೆಂಬುದು ಒಂದು ಅಸ್ಮಿತೆಯಾಗಿತ್ತು. ಕಾಲಾನಂತರದಲ್ಲಿ ಚಾತುರ್ವರ್ಣ ವ್ಯವಸ್ಥೆ ಈ ಅಸ್ಮಿತೆಯನ್ನು ದುರುಪಯೋಗಪಡಿಸಿಕೊಂಡು ಭೇದ ನೀತಿಯನ್ನು ಹುಟ್ಟುಹಾಕಿತು. ಪುರೋಹಿತಶಾಹಿ ಪಂಚಮರನ್ನು ಮನುಷ್ಯರೆಂದೇ ಪರಿಗಣಿಸಲಿಲ್ಲ. ಅಸ್ಪೃಶ್ಯರನ್ನು ಜೀವಿಗಳೆಂದೇ ಭಾವಿಸಲಿಲ್ಲ. ಇಂತಹ ಪುರೋಹಿತಶಾಹಿ ಮನಸ್ಸು ಬ್ರಾಹ್ಮಣರಲ್ಲಿ ಮಾತ್ರ ಇರದೆ, ಎಲ್ಲ ಜಾತಿ-ಜನಾಂಗಗಳಲ್ಲಿರುವ ಸ್ವಾರ್ಥಿಗಳಲ್ಲಿದೆ. ಅಂತೆಯೇ ರಾಯಮ್ಮ ವೇಷಧಾರಿ ವಿರಕ್ತರನ್ನು ಕಂಡು ಅನೇಕ ವಚನಗಳಲ್ಲಿ ಛೇಡಿಸಿದ್ದಾರೆ. ಇಂತಹ ವೇಷಧಾರಿ ವಿರಕ್ತರೇ ಶರಣಸಂಕುಲದಲ್ಲಿ ಪುರೋಹಿತರಾಗಿದ್ದಾರೆನ್ನುತ್ತಾರೆ. ಕಾಳವ್ವೆಯ ಹಾಗೆ ರಾಯಮ್ಮ ದಲಿತ ವರ್ಗದಿಂದ ಬರದಿದ್ದರೂ, ದಲಿತರ ನೋವು-ಯಾತನೆಗಳನ್ನು ಬಲ್ಲವರಾಗಿದ್ದರು.
ಸಾಮಾಜಿಕ ವಿಡಂಬನೆ
ಶರಣರು ಆತ್ಮಶೋಧನೆ ಮಾಡಿಕೊಂಡಂತೆ, ಸಮಾಜದ ಅಂಕುಡೊಂಕುಗಳನ್ನು ಕುರಿತು ಮಾತನಾಡಿದರು. ವ್ಯಕ್ತಿ ಸುಧಾರಣೆಯಾದರೆ ಸಮಾಜ ಸುಧಾರಣೆಯಾಗುತ್ತದೆ. ವ್ಯಕ್ತಿಗೂ-ಸಮಾಜಕ್ಕೂ ಕರುಳಬಳ್ಳಿಯ ಸಂಬಂಧವಿದೆ. “ಮೊದಲು ತಾನು ಬದಲಾಗಬೇಕು, ಜತೆಗೆ ಸಮಾಜವನ್ನು ಬದಲಿಸಬೇಕು” ಇದು ಶರಣರ ಸಿದ್ಧಾಂತವಾಗಿತ್ತು. ಶರಣರು ಈ ಸಿದ್ಧಾಂತಕ್ಕೆ ಬದ್ಧರಾಗಿದ್ದರಿಂದಲೇ, ಜನಸಮುದಾಯ ಅವರ ಮಾತನ್ನು ಕೇಳಲು ಸಾಧ್ಯವಾಯಿತು. ಆಧುನಿಕ ಸಂದರ್ಭದಲ್ಲಿ ಮಹಾತ್ಮಾಗಾಂಧಿ ಆ ಕೆಲಸವನ್ನು ಮಾಡಿದರು. ಶರಣರು ಹೇಳಿರುವ ದೈವ ಸಮಾಜವೇ ಆಗಿದೆ. ತನಗಿಂತ ದೈವ ದೊಡ್ಡದೆಂಬುದು ಶರಣರ ನಂಬಿಕೆಯಾಗಿರುವಂತೆ, ಜನಪದರ ನಂಬಿಕೆಯೂ ಆಗಿದೆ. ಸಮಾಜದ ಬಗೆಗೆ ಕಳಕಳಿ ಇರುವುದು ಸಾಮಾಜಿಕ ಪ್ರಜ್ಞೆಯಾಗಿದೆ.
ಒಡೆಯರ ಕಂಡಡೆ ಬಡಿವುದಯ್ಯಾ ಬಾಲವನು ಸುನಿ
ಕೊಡುವ ಕೊಂಬುವರ ಕಂಡು ಅವರಡಿಗೆರಗುವರಯ್ಯಾ
ಮೃಡನ ವೇಷವ ತೊಟ್ಟು ಕುರಿಗಳಂತೆ ತಿರುಗುವ
ಜಡಜೀವಿಗಳ ಕಂಡಡೆ, ಮೃಡನ ಶರಣರು
ಮೋರೆಯನೆತ್ತಿ ನೋಡರು ಕಾಣಾ ಅಮರೇಶ್ವರಾ- (ಸ.ವ.ಸಂ.5, ವ-617)
ಮೃಡನ ವೇಷ ಹಾಕಿಕೊಂಡು ಕುರಿಗಳಂತೆ ತಿರುಗುವವರನ್ನು ಜಡಜೀವಿಗಳೆಂದು ಜರಿಯುತ್ತಾರೆ. ಇಂತಹ ವೇಷಧಾರಿಗಳನ್ನು ಶಿವಶರಣರು ಮುಖವನೆತ್ತಿ ಕೂಡ ನೋಡಲಾರರೆಂದು ಹೇಳಿದ್ದಾರೆ. ಇಲ್ಲಿ ಬಂದಿರುವ ನಾಯಿಯ ಪ್ರತಿಮೆ ಅದ್ಭುತವಾಗಿ ಬೆಳೆಯುತ್ತಾ ಹೋಗುತ್ತದೆ. ನಾಯಿಯಲ್ಲಿ ಕನಿಷ್ಠ ನಿಷ್ಠೆಯಾದರೂ ಇದೆ, ಆದರೆ ಈ ವೇಷಧಾರಿ ಡಾಂಭಿಕರಿಗೆ ಅದೂ ಇಲ್ಲ. ಇಂತವರು ಅಂದೂ ಇದ್ದರು, ಇಂದೂ ಇದ್ದಾರೆ. ಹೀಗಾಗಿ ರಾಯಮ್ಮನವರ ಈ ವಚನಗಳು ಇಂದಿಗೂ ಪ್ರಸ್ತುತವಾಗುತ್ತವೆ.
ಕಣ್ಣಿಗೆ ಬಂದಂತೆ ಅನ್ಯದೇಶಕ್ಕೆ ಹೋಗುವ ಕುನ್ನಿಗಳಿಗೆ
ಬಣ್ಣದ ಮಾತೇಕೊ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳುಳ್ಳವಂಗೆ
ಮಹಾಜ್ಞಾನಿಗಳ ಮಾತೇಕೋ?… – (ಸ.ವ.ಸಂ.5, ವ-620)
ಕಳ್ಳೆಯ ಸಂಗವ ಮಾಡಿ, ಕಾಯ ವಿಕಾರವ ಮುಂದುಗೊಂಡು
ನಿಜವಲ್ಲಭನ ಅರಿದೆನೆಂಬ ಕರ್ಮಿಗಳ ನೋಡಾ!
ಘಟಹರಿದವನಂತೆ ಸಟೆ ದಿಟಮಾಡುವಿರಿ,
ಪಶುಪತಿಯ ಅರಿವೆನೆಂಬ ಪಾಷಂಡಿಗಳ ಮೆಚ್ಚುವನೆ ಅಮುಗೇಶ್ವರ?- (ಸ.ವ.ಸಂ.5, ವ-627)
ಪೊಡವಿಯನಾಳುವರ ದೊರೆಗಳೆಂಬೆನೆ?
ಮೃಡನ ವೇಷವಧರಿಸಿದವರ ಕಡುಗಲಿಗಳೆಂಬೆನೆ?
ಅರಿವು ಆಚಾರವನರಿಯದವರ ಲಿಂಗೈಕ್ಯರೆಂಬೆನೆ?- (ಸ.ವ.ಸಂ.5, ವ-665)
ಮಾಯಾ ಯೋನಿಯಲ್ಲಿ ಹುಟ್ಟುವ ಮರುಳರೆಲ್ಲರು
ಮಹಾಜ್ಞಾನಿಗಳಪ್ಪರೆ?
ಕಾಮವಿಕಾರಕ್ಕೆ ತಿರುಗುವ ಜೀವಗಳ್ಳರು
ಅನಾದಿವಸ್ತುವನರಿವರೆ?- (ಸ.ವ.ಸಂ.5, ವ-678)
ಈ ನಾಲ್ಕು ವಚನಗಳಲ್ಲಿ ಸಾಮಾಜಿಕ ವಿಡಂಬನೆಯ ವಿವಿಧ ಪ್ರಸಂಗಗಳನ್ನು ನೋಡಬಹುದು. ಕಾಮವಿಕಾರದಿಂದ ತಿರುಗುವವರನ್ನು ಜೀವಗಳ್ಳರೆಂದು ವಿಡಂಬಿಸಿದ್ದಾರೆ. ರಾಯಮ್ಮ ಕೇವಲ ಆಧ್ಯಾತ್ಮ ಸಾಧಕಿ ಮಾತ್ರವಾಗಿರದೆ, ಅಂದಿನ ಸಮಾಜ ವ್ಯವಸ್ಥೆಯನ್ನು¸ ಸಮಾಜದ ಜನರನ್ನು ಎಷ್ಟೊಂದು ಚೆನ್ನಾಗಿ ತಿಳಿದುಕೊಂಡಿದ್ದರೆಂಬುದು ಇದರಿಂದ ತಿಳಿದುಬರುತ್ತದೆ. ವಸ್ತುಸ್ಥಿತಿಯನ್ನು ನೇರವಾಗಿಯೇ ಟೀಕಿಸುತ್ತಾ, ಇಂತವರ ಜೀವನ ನಿರರ್ಥಕವಾದುದೆಂದು ಹೇಳಿದ್ದಾರೆ.
ಗಡ್ಡ ಮಂಡೆಯ ಬೋಳಿಸಿಕೊಂಡವರೆಲ್ಲ ಕಬ್ಬಲಿಗರಮಕ್ಕಳೆಂಬೆ,
ಬತ್ತಲೆ ಇಪ್ಪವರೆಲ್ಲ ಕುಂಚಿಗನ ಮಕ್ಕಳೆಂಬೆ,
ಪಟ್ಟಣಕ್ಕೆ ಹೋಗಿ ಹೆಸರ ಹೇಳುವ ಜಾತಿಕಾರನಂತೆ
ಅರ್ಥ ಅನುಭಾವವ ಬಲ್ಲೆನೆಂದು ಅಗಮ್ಯವ ಬೀರುವ
ಅಘೋರಿಗಳ ವಿರಕ್ತರೆನ್ನಬಹುದೆ? ಎನಲಾಗದು. – (ಸ.ವ.ಸಂ.5, ವ-639)
ದೇಶ ದೇಶವ ತಿರುಗಿ ಮಾತುಗಳ ಕಲಿತು,
ಗ್ರಾಸಕ್ಕೆ ತಿರುಗುವ ದಾಸಿವೇಶಿಯ ಮಕ್ಕಳ ವಿರಕ್ತರೆಂಬೆನೆ ?
ತನುವಿನಲ್ಲಿಪ್ಪ ತಾಮಸವ ಕಳೆಯದೆ
ಕಾಬವರ ಕಂಡು ವಿರಕ್ತರೆಂದಡೆ ನಾಯಕನರಕ ತಪ್ಪದು- (ಸ.ವ.ಸಂ.5, ವ-649)
ವಿರಕ್ತ ವಿರಕ್ತ ಎಂಬ ಹಾದಿಕಾರರ ವಿರಕ್ತನೆನ್ನಬಹುದೆ?
ಕಾವಿಯಹೊದ್ದು ತಿರುಗುವ ಜೀವಗಳ್ಳರು ವಿರಕ್ತರೆ?
ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ವಿರಕ್ತರೆಂದಡೆ
ಅಘೋರ ನರಕ ತಪ್ಪದು ಅಮರೇಶ್ವರ ಲಿಂಗವೆ. – (ಸ.ವ.ಸಂ.5, ವ-681)
ಹೊನ್ನ ಬಿಟ್ಟಡೇನು, ಹೆಣ್ಣ ಬಿಟ್ಟಡೇನು, ಮಣ್ಣ ಬಿಟ್ಟಡೇನು?
ವಿರಕ್ತನಾಗಬಲ್ಲನೆ?
ಆದ್ಯರ ವಚನಂಗಳ ಹತ್ತುಸಾವಿರವ ಲೆಕ್ಕವಿಲ್ಲದೆ ಓದಿದಡೇನು
ವಿರಕ್ತನಾಗಬಲ್ಲನೆ?- (ಸ.ವ.ಸಂ.5, ವ-704)
ಈ ನಾಲ್ಕು ವಚನಗಳಲ್ಲಿ ವಿರಕ್ತರ ವಿಡಂಬನೆಯಿದೆ. ಧರ್ಮದ ಹೆಸರಿನಲ್ಲಿ ಕಾವಿಧಾರಿಗಳಾಗಿ ತಾವು ವಿರಕ್ತರೆಂದು ಹೇಳಿಕೊಂಡು ಜನಸಾಮಾನ್ಯರ ಶೋಷಣೆಯನ್ನು ಅಂದು ಕೆಲವು ಸ್ವಾರ್ಥಿಗಳು ಮಾಡುತ್ತಿದ್ದರೆಂಬ ಸತ್ಯವು ಈ ವಚನಗಳಿಂದ ತಿಳಿದುಬರುತ್ತದೆ. ಕಪಟ ಸನ್ಯಾಸಿಗಳನ್ನು, ಸ್ವಾರ್ಥ ಕಾವಿಧಾರಿಗಳನ್ನು ಜರಿದಿದ್ದಾರೆ. ತಾವು ಏನೂ ತಿಳಿದುಕೊಳ್ಳದೆ, ಕೇವಲ ಕಾವಿ ಧರಿಸಿಕೊಂಡು ಅರ್ಥ- ಅನುಭಾವ ಬಲ್ಲೆವೆಂದು ತಿರುಗುವವರನ್ನು ರಾಯಮ್ಮನವರು ಅಘೋರಿಗಳೆಂದು ಕರೆದಿದ್ದಾರೆ. ಇಂತಹವರು ವಿರಕ್ತರಲ್ಲಾ, ತನುವಿನಲ್ಲಿರುವ ತಾಮಸವನ್ನು ಕಳೆದುಕೊಳ್ಳದವರು ಹೇಗೆ ವಿರಕ್ತರಾಗುತ್ತಾರೆ ಎಂದು ಪ್ರಶ್ನಿಸುತ್ತಾರೆ. ವಿರಕ್ತರೆಂದು ತಮ್ಮನ್ನು ತಾವೇ ಕರೆದುಕೊಳ್ಳುತ್ತಿದ್ದವರನ್ನು ಹಾದಿಹೋಕರು, ಗಾವಿಲರು ಎಂದು ಕರೆದಿದ್ದಾರೆ. ಇವರನ್ನು ವಿರಕ್ತರೆಂದು ಕರೆದರೆ ಅಘೋರನರಕ ತಪ್ಪದೆಂದು ಎಚ್ಚರಿಸಿದ್ದಾರೆ.
ಫ.ಗು. ಹಳಕಟ್ಟಿಯವರು ಹೇಳಿರುವಂತೆ, ರಾಯಮ್ಮ ಶರಣರ ಕ್ರಾಂತಿಯ ನಂತರ ಮೂವತ್ತು ವರ್ಷಗಳವರೆಗೆ ಬದುಕಿದ್ದಾರೆ. 12ನೇ ಶತಮಾನದಲ್ಲಿ ವಿರಕ್ತರು, ಸ್ವಾಮಿಗಳು ಇರಲಿಲ್ಲ. ಶರಣರು ಹೋದ ಕೂಡಲೇ ನೂರೊಂದು ವಿರಕ್ತರು ಹುಟ್ಟಿಕೊಂಡರು. ಈ ವಿರಕ್ತರು ಧಾರ್ಮಿಕವಾಗಿ ಅನೇಕ ಸಾಧನೆ ಮಾಡಿದರು. ಆದರೆ ಇವರ ಹೆಸರು ಹೇಳಿಕೊಂಡು ತಾವು ವಿರಕ್ತರೆಂದು ಕೆಲವು ನಕಲಿ ವಿರಕ್ತರು ಆಗ ಹುಟ್ಟಿಕೊಂಡಿರಬೇಕು. ಅಂತಹ ನಕಲಿ ವಿರಕ್ತರ ಬಗ್ಗೆ, ಕಾವಿಧಾರಿಗಳ ಬಗ್ಗೆ, ವೇಷಧಾರಿಗಳ ಬಗ್ಗೆ ರಾಯಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯಮ್ಮನವರ ವಿಡಂಬನೆಯಲ್ಲಿ ನೈಜತೆಯಿದೆ. ಕಳಕಳಿಯಿದೆ. ವಿರಕ್ತರ ಹೆಸರಿನಲ್ಲಿ ಜನಸಾಮಾನ್ಯರನ್ನು ಮೋಸಮಾಡುತ್ತಿದ್ದವರಿಗೆ ಸರಿಯಾಗಿಯೇ ಪಾಠ ಮಾಡಿದ್ದಾರೆ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಮಯೋಚಿತ ವಿಡಂಬನೆ ಬೇಕಾಗುತ್ತವೆ. ಅಂತಹ ಕೆಲಸವನ್ನು ಶರಣರು ಮಾಡುತ್ತಲೇ ಬಂದಿದ್ದಾರೆ.
ಸರ್ವಾಗಮ ಶ್ರುತಿ ಸ್ಮೃತಿ ಪುರಾಣ ಪಾಠಕನಾದಡೇನು?
ಸರ್ವಮಂತ್ರ ತಂತ್ರಸಿದ್ಧಿ ಮರ್ಮವರಿತಡೇನು?
ನಿತ್ಯ ಶಿವಾರ್ಚನೆ ತ್ರಿಕಾಲವಿಲ್ಲ.
ನಿತ್ಯ ಪಾದೋದಕ ಪ್ರಸಾದ ಸೇವನೆಯಿಲ್ಲ
ಇದೇತರ ವೀರಶೈವವ್ರತ, ಇದೇತರ ಜನ್ಮಸಾಫಲ್ಯ
ಅಮುಗೇಶ್ವರಲಿಂಗವೆ? – (ಸ.ವ.ಸಂ.5, ವ-696)
ಈ ವಚನದಲ್ಲಿನ ವಿಡಂಬನೆ ವೀರಶೈವರನ್ನು ಕುರಿತದ್ದಾಗಿದೆ. ಶರಣರ ಕ್ರಾಂತಿಯ ನಂತರ ಅಮುಗೆ ರಾಯಮ್ಮ ಮೂವತ್ತು ವರ್ಷಗಳ ಕಾಲ ಬದುಕಿದ್ದರಿಂದ, ಅಷ್ಟೊತ್ತಿಗಾಗಲೇ ವೀರಶೈವ ಮತ ಹುಟ್ಟಿಕೊಂಡಿರಬೇಕು. 12ನೇ ಶತಮಾನದಲ್ಲಿ ಜೀವಿಸಿದ್ದ ಬಸವಾದಿ ಶರಣರ ವಚನಗಳಲ್ಲಿ ವೀರಶೈವವೆಂಬ ಪದವು ಕಾಣಿಸುವುದಿಲ್ಲ. ಬಸವೋತ್ತರ ವಚನಕಾರರಲ್ಲಿ ಮತ್ತು ಕೆಲವು ವಚನಕಾರರ ಕೂಟವಚನಗಳಲ್ಲಿ ಮಾತ್ರ ವೀರಶೈವ ಪದ ಬಂದಿದೆ. 12ನೇ ಶತಮಾನದಲ್ಲಿ ಬಸವಣ್ಣ ಮೊದಲಾದ ಶರಣರಿಂದ ಹುಟ್ಟಿದ ಲಿಂಗಾಯತ ಧರ್ಮವು, ಶರಣರ ಹತ್ಯಾಕಾಂಡದ ನಂತರ ತೆರೆಯ ಮರೆಗೆ ಸರಿಯಿತು. ಇಷ್ಟಲಿಂಗ ಸ್ಥಾವರಲಿಂಗ ಎರಡನ್ನೂ ಪೂಜಿಸುವ ವೀರಶೈವ ಮತವು ಎಲ್ಲರನ್ನು ಆಕರ್ಷಿಸಿತು. ಅಮುಗೆ ರಾಯಮ್ಮ ಇದನ್ನು ಕಣ್ಣಾರೆ ಕಂಡಿರಬೇಕು. ಅಂತೆಯೇ ಆಕೆ ‘ಇದೇತರ ವೀರಶೈವವ್ರತ?’ ಎಂದು ಹದಿಮೂರನೇ ಶತಮಾನದಲ್ಲಿಯೇ ಪ್ರಶ್ನಿಸಿದ್ದಾರೆ. ಬಸವಣ್ಣನವರ ನಂತರ ಬದುಕಿದ್ದ ಕೆಲವು ವಚನಕಾರರಿಗೆ, ವೀರಶೈವ ಮತದ ಡಾಂಭಿಕತೆಗಳು ಕಾಣಿಸಿಕೊಂಡಿದ್ದರಿಂದ ಅವರು ವಿಡಂಬನೆ ಮಾಡಿದ್ದಾರೆ. ಹೀಗಾಗಿ ಲಿಂಗಾಯತ ಮತ್ತು ವೀರಶೈವದ ಹೆಸರಿನಲ್ಲಿ ನಡೆದಿರುವ ಚರ್ಚೆಗೆ ರಾಯಮ್ಮನವರ ಈ ವಚನ ಮಹತ್ವದ ದಾಖಲೆಯಾಗಿದೆ. ಶ್ರುತಿ, ಸ್ಮೃತಿ, ಪುರಾಣಗಳ ಪಾಠಕರಾಗಿದ್ದ ವೀರಶೈವರು, ಸರ್ವ ಮಂತ್ರ ತಂತ್ರ ಸಿದ್ಧಿಯನ್ನು ಹೊಂದಿದ್ದರೆಂದು ಈ ವಚನದಿಂದ ತಿಳಿದು ಬರುತ್ತದೆ.
ಶರಣರ ಸಿದ್ಧಾಂತಗಳು ಕಠಿಣವಾಗಿದ್ದವು. ನಿತ್ಯ ಕಾಯಕ ಮಾಡಬೇಕು, ಕಾಯಕದಿಂದ ಬಂದ ದ್ರವ್ಯವನ್ನು ದಾಸೋಹಕ್ಕೆ ಅರ್ಪಿಸಬೇಕು. ಯಾವುದೇ ಸಂಗ್ರಹ ಮಾಡಬಾರದು ಎಂಬಂತಹ ನಿಯಮಗಳು ಮುಂದೆ ಬಂದವರಿಗೆ ಹಿಡಿಸಲಿಲ್ಲ. ಅವರು ತಮಗೆ ಅನುಕೂಲಕರವಾದ, ವೀರಶೈವ ಮತವನ್ನು ಕಟ್ಟಿಕೊಂಡರು. ಆದರೆ ಶರಣರ ಹೋರಾಟವನ್ನು ಕಣ್ಣಾರೆ ಕಂಡಿದ್ದ ಅಮುಗೆ ರಾಯಮ್ಮನವರು ಬಸವಕ್ರಾಂತಿಯ ನಂತರವೂ ಬದುಕಿದ್ದರಿಂದ, ಇಂತಹದ್ದನ್ನೆಲ್ಲ ನೋಡುವ ಸ್ಥಿತಿ ಬಂತಲ್ಲಾ ಎಂದು ನೊಂದುಕೊಂಡರು. ವೀರಶೈವ ಮತದ ಡಾಂಭಿಕಾಚರಣೆಗಳನ್ನು ವಿಡಂಬಿಸಿದರು. ಇದಕ್ಕೆ ಸಾಕ್ಷಿಯಾಗಿ ಈ ವಚನವಿದ್ದು ಇದು ತುಂಬ ಚಾರಿತ್ರಿಕವಾದ ವಚನವಾಗಿದೆ.
ಕಾಯವಿಕಾರಕ್ಕೆ ತಿರುಗುವವರು ಕೋಟ್ಯಾನುಕೋಟಿ,
ಕಡುಗಲಿಗಳನಾರನೂ ಕಾಣೆನಯ್ಯಾ
ಅಂಗಶೃಂಗಾರಿಗಳಾಗಿ ತಿರುಗುವವರು ಕೋಟ್ಯಾನುಕೋಟಿ,
ಲಿಂಗಶೃಂಗಾರಿಗಳನಾರನೂ ಕಾಣೆನಯ್ಯಾ
ವಚನರಚನೆಯ ಅರ್ಥ ಅನುಭಾವವ-ಬಲ್ಲೆನೆಂದು
ಒಬ್ಬರನೊಬ್ಬರು ಜರಿದು ಸದ್ಯೋನ್ಮುಕ್ತರಾದೆವೆಂಬ
ಜಗಭಂಡರ ಮೆಚ್ಚುವನೆ ಅಮುಗೇಶ್ವರಲಿಂಗವು? – (ಸ.ವ.ಸಂ.5, ವ-630)
ಈ ವಚನದಲ್ಲಿ ಬಂದಿರುವ ‘ಆರನೂ ಕಾಣೆನಯ್ಯಾ, ಆರನೂ ಕಾಣೆನಯ್ಯಾ’ ಎಂಬ ನುಡಿಗಳನ್ನು ನೋಡಿದ ಮೇಲೆ, ಬಸವಕ್ರಾಂತಿಯ ನಂತರ ಎಷ್ಟೊಂದು ಬದಲಾವಣೆಗಳಾಗಿದ್ದವೆಂಬುದು ತಿಳಿದುಬರುತ್ತದೆ. ಕಾಯವಿಕಾರ, ಕಾಮವಿಕಾರ, ಅಂಗಶೃಂಗಾರ, ಅಹಂಭಾವ, ಅಸಹನೆ ಹೇಗೆ ಬೆಳೆದು ನಿಂತವೆಂಬುದನ್ನು ರಾಯಮ್ಮ ಇಲ್ಲಿ ಹೇಳಿದ್ದಾರೆ. ಶರಣರ ಸಿದ್ಧಾಂತವನ್ನನುಸರಿಸುವವರನ್ನು ರಾಯಮ್ಮ ಕಡುಗಲಿಗಳೆಂದು ಕರೆದಿದ್ದಾರೆ.
Comments 7
VIJAYAKUMAR KAMMAR
Nov 10, 2022ಆಮುಗೆ ರಾಯಮ್ಮನವರ ವಚನಗಳಲ್ಲಿ ಜಾತಿ ವಿಶ್ಲೇಷಣೆ ಅದ್ಭುತವಾಗಿದೆ.🙏🏽🙏🏽
ಸಾವಿತ್ರಿ ಶಿವಮೊಗ್ಗ
Nov 14, 2022ಜಾತಿ ಗೋತ್ರಗಳನ್ನು ಇನ್ನಿಲ್ಲದಂತೆ ಈಡಾಡಿದ ಮಹಾಶರಣೆ ಅಮುಗೆ ರಾಯಮ್ಮನವರ ವಚನಗಳು ಬಹಳ ಕ್ರಾಂತಿಕಾರಕವಾಗಿವೆ.
ಜಯದೇವ ಜಿಗಣಿ
Nov 17, 2022ವೀರಶೈವ ಎನ್ನುವ ಪದ ಬಳಕೆ ಬಸವಣ್ಣನವರ ತರುವಾಯ ಒಂದೇ ತಲೆಮಾರಿನಲ್ಲಿ ಲಿಂಗಾಯತ ಧರ್ಮದಲ್ಲಿ ತೂರಿಕೊಂಡದ್ದು ತಿಳಿದು ನನಗೆ ಆಶ್ಚರ್ಯವೆನಿಸಿತು. ಹರಿಹರನಿಂದ ಮೊದಲ್ಗೊಂಡು ಎಲ್ಲ ಕವಿಗಳೂ ಲಿಂಗಾಯತವನ್ನು ಶೈವೀಕರಿಸಲು ಪ್ರಯತ್ನಿಸಿದರೆಂದು ನಮ್ಮ ಕಾಲೇಜಿನ ಅಧ್ಯಾಪಕರೊಬ್ಬರು ಹೇಳುತ್ತಿದ್ದರು….
ನಂಜುಂಡಯ್ಯ ಜೆ
Nov 20, 2022ಬಸವಣ್ಣನವರ ನಿರ್ಗಮನದ ತರುವಾಯ, ಅಷ್ಟು ಕಡಿಮೆ ಅವಧಿಯಲ್ಲೇ ಕಲ್ಯಾಣ ಅಷ್ಟೊಂದು ಕುಲಗೆಟ್ಟು ಹೋಯಿತೇ? ಅಮುಗೆ ರಾಯಮ್ಮನವರು ವೀರಶೈವರನ್ನು ಕುರಿತಾಗಿ ವಿಡಂಬನೆ ಮಾಡಿದ್ದಾರೆನ್ನುವ ವಚನಗಳು ನಿಜಕ್ಕೂ ಯಾರನ್ನು ಸಂಬೋಧಿಸಿದ್ದು ಎನ್ನುವ ಪ್ರಶ್ನೆಯನ್ನು ಎತ್ತುವಂತೆ ಮಾಡಿದ್ದು ಈ ಲೇಖನದ ವಿಶೇಷತೆ.
ಸರಸ್ವತಿ ಜೆ
Nov 24, 2022ವಚನಕಾರರ ಹತ್ಯಾಕಾಂಡ ಇಡೀ ಕರ್ನಾಟಕದ ಇತಿಹಾಸದಲ್ಲೇ ಮೈನಡುಕ ಹುಟ್ಟಿಸುವ ಕರಾಳ ಘಟನೆ. ಇದರ ಹಿಂದಿನ ಶಕ್ತಿಗಳು ಇಂದಿಗೂ ಶರಣ ತತ್ವವನ್ನು ಕೊಲ್ಲುತ್ತಲೇ ಇವೆ. ಅವರನ್ನು ಎದುರಿಸುವ ಶಕ್ತಿ ಅಂದೂ ಇರಲಿಲ್ಲ, ಇಂದೂ ಇಲ್ಲ!! ಇದಕ್ಕಿಂತ ಹೃದಯವೇಧಕ ಸಂಗತಿ ಬೇರೊಂದಿಲ್ಲ!
Vasanth D
Nov 25, 2022ಅವತ್ತೇ ರಾಯಮ್ಮಾ ತಾಯಿ ತಮ್ಮ ವಚನಗಳುದ್ದಕ್ಕೂ ಕಪಟಿ ವೇಷಧಾರಿಗಳು ನಮ್ಮೊಡನಿದ್ದಾರೆಂದು ಎಚ್ಚರಿಕೆಗಯ ಗಂಟೆ ಬಾರಿಸಿದ್ದರು. ಆದರೆ ನಾವು ಇತಿಹಾಸದುದ್ದಕ್ಕೂ ಮಲಗೇ ಇದ್ದೆವೆಂದು ತೋರುತ್ತದೆ. ವೀರಶೈವರಿಂದ, ಕಪಟ ಸ್ವಾಮಿಸನ್ಯಾಸಿಗಳಿಂದ ಬಿಡಿಸಿಕೊಳ್ಳುವುದೇ ನಿಜಲಿಂಗಾಯತರಿಗೆ ಹರಸಾಹಸವಾಗಿ ಕುಳಿತಿದೆ…
Deveerappa Hosuru
Dec 10, 2022Sir, your article has made me to read Amuge Rayamma’s vachanas extensively, indeed she is an extraordinary thinker and mystic.