
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
ಇಲ್ಲಿಯವರೆಗೆ: ಇತ್ತ ನಾಟ್ಯದವಳ ಮೋಹಿಗೆ ಬಿದ್ದ ಮಗ ವಸೂದೀಪ್ಯನ ಬಗೆಗೆ ಅವ್ವ ಮಹಾಲೇಖೆಗೆ ಚಿಂತೆ ಕಾಡತೊಡಗಿತು. ಮಾವ ಮತ್ತು ಅಬ್ಬೆಗೆ ತನ್ನ ಪ್ರೇಮದ ವಿಷಯ ಗೊತ್ತಾದುದಕೆ ವಸೂದೀಪ್ಯ ಮುಜುಗರಪಟ್ಟುಕೊಂಡು ಮನೆಗೆ ನಡೆದ. ಅತ್ತ ತನ್ನ ಮಗು ಮತ್ತು ಪತ್ನಿಯನ್ನು ನೆನೆಯುತ್ತಾ ಮನೆಗೆ ದೌಡಾಯಿಸುವ ಹಾದಿಯಲ್ಲಿ ತ್ರೈಲೋಕ್ಯನು ಬಾಲಕ ಬಸವರಸನ ಅಪ್ರತಿಮ ರೂಪು ಮತ್ತು ಯೋಚನೆಗಳನ್ನು ಕಂಡು ರೋಮಾಂಚಿತನಾದ.
ಎಳೆಕುದುರೆಗಳನ್ನು ಪಳಗಿಸುವುದೆಂದರೆ ಜೀವದ ಹಂಗುಬಿಟ್ಟು ಕುದುರೆಯ ಹತ್ತಬೇಕು. ನಿಂತಲ್ಲೆ ನಿಲ್ಲದೆ ಟಕಮಕ ನೆಗೆದಾಡುವ ಹುರುಪನ್ನು ಹದಮಾಡಿ, ಮೂಗುದಾಣದ ದಾರದಲ್ಲಿ ನಡೆಯವ ದಾರಿಯನ್ನು, ಓಡುವ ಸನ್ನೆಯನ್ನು, ನಿಲ್ಲುವ ಸೂಚನೆಯನ್ನು ಕಲಿಸಬೇಕು ಮೊದಲು. ಬೆನ್ನಮೇಲೆ ವಸ್ತ್ರಹಾಕುವುದೆಂದರೆ ಅದೊಂದು ಕಷ್ಟದ ಕೆಲಸವೇ ಸರಿ. ದಿನವಿಡೀ ಅವುಗಳ ಕಣ್ಣಿಗೆ ಪಟ್ಟಿ ಕಟ್ಟಿ ನಡೆಸುವುದು, ಓಡಿಸುವುದು, ಕೆನೆಯುವುದನ್ನು ಆ ಮೂಗುದಾರದ ಹಿಡಿತದಲ್ಲೇ ರೂಢಿಸಬೇಕಿತ್ತು. ಹೊತ್ತಾರೆ ಎದ್ದು ಅಖಾಡದಲ್ಲಿ ದಂಡಿನ ಹುಡುಗರೊಡಗೂಡಿ ಓಡಾಡಿ ಒಂದು ಕುದುರೆಯನ್ನು ಆಯ್ದುಕೊಳ್ಳಬೇಕು. ಆಯ್ದುಕೊಂಡ ಕುದುರೆಯ ಮೊಂಡಾಟವನ್ನು ತಗ್ಗಿಸಬೇಕು. ವಸೂದೀಪ್ಯ ಎಳೆಗುದುರೆಗಳ ಹಿಂಡಿನಲ್ಲಿ ನುಗ್ಗಿ ಹಂಡಬಂಡ ಬಣ್ಣದ ಜೂಲು ಕುದುರೆಯ ಕೊರಳೊಂದನ್ನು ಹಿಡಿದು ಅದರ ಕೊರಳಿಗೆ ದಾರಕಟ್ಟಿ ಮೂಗುದಾಣದ ದಬ್ಬಣ ಚುಚ್ಚಿಸಿದ. ಹೊಳೆಗೆ ಹೋಗಿ ಮಿಂದು ಕುದುರೆಯನ್ನು ಮನೆಯಂಗಳದಲ್ಲಿ ತಂದು ಕಟ್ಟಿ, ಕಾಳಿನ ಗುಗ್ಗರಿಯನ್ನು ಚಿಟಿಕೆ ಉಪ್ಪನ್ನು ಹದಮಾಡಿ ತಿನಿಸಿ, ಹಸಿಹುಲ್ಲು ತಂದು ಹಾಕುವುದರೊಳಗೆ ಮೊದಲ ದಿನಕಳೆದು ದಣಿದಿದ್ದ. ಚಂದ್ರಿಯ ನೆನಪಾಗಿ ಗುಡಿಯ ಕಡೆ ಹೊರಡಬೇಕು ಎನ್ನುವಷ್ಟರಲ್ಲಿ ಹೆತ್ತಬ್ಬೆ ಅಂಗಳದಲ್ಲಿ ಕಟ್ಟಿದ್ದ ಎಳೆಗುದುರೆಯನ್ನು ಬಿಚ್ಚಿಬಿಡಲಾಗಿ ಆ ಕುದುರೆ ನೆಗೆಯುತ್ತಾ ತಪ್ಪಿಸಿಕೊಂಡು ಮಹಾಕೂಟದ ಗುಡ್ಡದ ಕಡೆಗೆ ಓಡತೊಡಗಿತ್ತು.
ಚಂದ್ರಿಯ ನೆನಪಂತಿರಲಿ, ಕುದುರೆಯ ಹಿಡಿದುಕಟ್ಟುವ ಧಾವಂತದಲ್ಲಿ ವಸೂದೀಪ್ಯನೂ ಹಿಡಿದು ತರಲು ಓಡತೊಡಗಿದ. ದಂಡಿನ ಹುಡುಗರಿಬ್ಬರು ದೊಂದಿಬೆಳಕಲ್ಲಿ ಬಂದು ಜೊತೆಗೂಡಿ ಹಂಡಬೆರಕಿ ಕುದುರೆಯನ್ನು ಹಿಡಿದುಕೊಟ್ಟಾಗ ಬೆಳಕನ್ನು ನುಂಗಿದ್ದ ಕತ್ತಲು ಗವ್ವೆನ್ನುತ್ತಿತ್ತು. ಆ ರಾತ್ರಿಯೆಂಬುದನ್ನು ಗುಡ್ಡದಲ್ಲೇ ಅನುಷ್ಠಾನಕ್ಕೆ ಕುಳಿತಿದ್ದ ಸಿದ್ಧಸಾಧುವಿನ ಗುಹೆಯ ಬಳಿಯಲ್ಲೆ ಕಳೆದು ಬೆಳಗಾಗೆ ಮನೆಗೆ ಬಂದಾಗ ಮೂಡಣದಲ್ಲಿ ಮೂಡಿದ್ದ ಸೂರ್ಯ ಮುಂಗೈ ಗಾತ್ರಕ್ಕೆ ಬಂದಿದ್ದ. ಕುದುರೆ ಮೂತಿಗೆ ಕಟ್ಟಿದ್ದ ಚರ್ಮದ ಬಾರ (ಚರ್ಮದ ಹಗ್ಗ) ತುದಿ ತಿವಿದಾಡಿ ಮುಖದಲ್ಲಿ, ಕೊರಳಲ್ಲಿ ಹಸಿಗಾಯವಾಗಿ ರಕ್ತ ವಸರುತ್ತಿತ್ತು. ಮಾವ ಮಾಲಿಂಗನ ಜೊತೆಮಾಡಿಕೊಂಡು ತಂಗಡಗಿ ಸೊಪ್ಪು ತರಲು ಮತ್ತೆ ಗುಡ್ಡಕ್ಕೆ ಹೋದ. ವಿಚಿತ್ರವೆಂದರೆ ನೆನ್ನೆ ರಾತ್ರಿಯಲ್ಲಾ ಮಾತಿಲ್ಲದೆ ತಪಕ್ಕೆ ಕುಳಿತಿದ್ದ ಸಿದ್ಧಸಾಧು ಮನೆಗೆ ಹೋಗಿಬರುವುದರೊಳಗೆ ತಮ್ಮ ಲ್ಯಾವಿಗಂಟು, ಪೂಜಾ ಸಾಮಗ್ರಿ, ಕರಿಕಂಬಳಿ ಸಮೇತ ಗುಹೆಯಿಂದ ಮಾಯವಾಗಿದ್ದರು. ಅಚ್ಚರಿಯಿಂದ ಸುತ್ತಲೂ ಕಣ್ಣಾಡಿಸಿ ಅಯ್ಯಾ ಗುರುವೇ ಎಂದು ನಾಲ್ಕಾರು ಬಾರಿ ಕೂಗು ಹಾಕಿ ಹುಡುಕಿದರೂ ಅಲ್ಲೆಲ್ಲೂ ಕಾಣಲಿಲ್ಲ. ಗುರುಗಳ ತಪಶ್ಯಕ್ತಿ ದೊಡ್ಡದು ಕಾಯ ಸಮೇತ ಕೈಲಾಸ ಕಂಡಿರಬೇಕೆಂದು ಮನದಲ್ಲೇ ಅವರ ಹಾರೈಕೆಯನ್ನು ಬೇಡಿಕೊಂಡು, ಮಾವ ತಂದ ತಂಗಡಿ ಸೊಪ್ಪನ್ನು ಹಿಡಿದುಕೊಂಡು ಮನೆಗೆ ಬರುವಾಗ ಎರಡನೇ ದಿನವೆಂಬುದು ಕಳೆದು ಪಡುವಣದ ಒಡಲಲ್ಲಿ ಕೆಂಪಡರತೊಡಗಿತ್ತು. ಮಾವನಿಗೆ ಪಶುವಿನ ಆರೈಕೆ ಮಾಡಲು ಹೇಳಿ ಮತ್ತೊಂದು ದಿನದ ಬೆಳಕನ್ನು ನುಂಗುವ ಕತ್ತಲು ಬರುವುದರೊಳಗೆ ಚಂದ್ರಲಾಳನ್ನು ಕಾಣುವ ಆತುರದಲ್ಲಿ ಚಂದ್ರಮೌಳಿಯ ಗುಡಿಗೆ ಬಂದ.
ಅಂದು ಅಮವಾಸ್ಯೆ.
ಚಂದ್ರಿಯು ಗಿರಿಜೆಯ ವೇಷತೊಟ್ಟು, ಕಾಲಿಗೆ ಗೆಜ್ಜೆ ಕಟ್ಟಿ, ಕಣ್ಣಂಚಿಗೆ ಕಾಡಿಗೆ ತೀಡಿ, ಹೂವಿನ ದಂಡೆ ಕಟ್ಟಿಕೊಂಡು ಶಿವನನೊಲಿಸಲು ಸಿದ್ಧಳಾಗಿದ್ದಳು. ತ್ರಿಕರಣಪೂರ್ವಕವಾಗಿ ತನ್ನಿಡೀ ದೇಹ, ದೇಹದ ಲಾಲಿತ್ಯ, ಸೊಗಸು, ಭಾವಾವೇಶವನ್ನು ಶಿವನಿಗರ್ಪಿಸಿ ಒಲಿಸಿಕೊಳ್ಳುವ ಮತ್ತೊಂದು ಆಟ ನೋಡುವ ಆಸೆಯಾಗಿ ಅಲ್ಲೇ ಗುಡಿಯ ಕಂಬಕ್ಕೊರಗಿ ಕುಳಿತ. ಶಿವನ ಲೀಲಾವಿನೋದಗಳ ಸ್ತುತಿಸುವ ಪೂರ್ವರಂಗದ ಹಾಡಿನ ಸ್ವರ ಎತ್ತಿಕೊಳ್ಳುತ್ತಿದ್ದಂತೆ ದಿನದ ದಣಿವು ಎಂಬುದು ವಸೂದೀಪ್ಯನ ಕಣ್ಣಂಚಿಗೆ ಬಂದು ತುಳುಕಲಾರಂಭಿಸಿತು. ನಡೆವ ನಾಟ್ಯದ ಹೆಜ್ಜೆಗಳು, ಭಾವಭಂಗಿಗಳು, ಗೆಜ್ಜೆಯ ನಾದ, ಢೋಲಿನ ಪೆಟ್ಟುಗಳ ನಡುವೆ ಸುಶ್ರಾವ್ಯವಾಗಿ ತೂರಿಬರುವ ಇಂಪಾದ ದನಿ ಅವನನ್ನು ನಿದ್ದೆಯೆಂಬ ಮಾಯಕ ಲೋಕಕ್ಕೆ ಒಯ್ಯತೊಡಗಿತ್ತು. ಮಾವ ಮಾಲಿಂಗ ಬಂದು ವಸೂದೀಪ್ಯನ ರಟ್ಟೆ ಹಿಡಿದು ಎಬ್ಬಿಸಿಕೊಂಡು ನಡೆದಾಗ ನವಿಲ ನಾಟ್ಯವಾಡುತ್ತಿದ್ದ ಚಂದ್ರಿ ಏನನ್ನೋ ಹೇಳಬೇಕಿರುವ ಭಾವಸೂಚನೆಯ ಸನ್ನೆಯನ್ನು ಮಾಡಿದಳು. ಅದು ಏನೆಂದು ಅರ್ಥವಾಗದೆ, ಅದೂ ನಾಟ್ಯದ ಮಟ್ಟೋ ಅಥವಾ ತನಗೆ ಏನೋ ಹೇಳಬೇಕಿರುವ ಸೂಚನೆಯೋ ತಿಳಿಯದ ಗೊಂದಲದಲ್ಲಿ, ಗುಡಿಯ ಆವರಣ ದಾಟಿ ಹೊರಬಂದಾಗ ಅಲ್ಲಿ ಅಬ್ಬೆ ದೊಂದಿ ಬೆಳಕನ್ನು ಕೈಯಲ್ಲಿ ಹಿಡಿದು ಮುದಿಸೂಳೆಯ ಜೊತೆ ಮಾತಾಡುತ್ತ ನಿಂತಿರುವುದು ಕಾಣಿಸಿತು.
“ಬಾರೋ ನನ್ನಪ್ಪಾ, ನೆನ್ನೆ ರಾತ್ರಿಯಿಂದ ಗುಡ್ಡದೊಳಗೆ ಓಡಾಡಿ ದಣಿದಿದ್ದಿಯಾ. ಉಂಡು ಮಲಗು ಬಾ”
ಮಾವ ಮುಂದಾಗಿ ತಾಯಿ ಹಿಂದಾಗಿ ನಡುವೆ ವಸೂದಿಪ್ಯನ ಇಟ್ಟುಕೊಂಡು ಮನೆಗೆ ಬರುವುದರೊಳಗೆ ಆಯಾಸವೆಂಬುದು ದೇಹಕ್ಕಲ್ಲದೆ ಮನಸ್ಸಿಗೂ ಬಂದುದರಿಂದ ಉಂಡು ಮಲಗಿದ. ಗುರುವಿನ ಕಣ್ಣಲ್ಲೇ ಅಡಗಿದಂತಾ ಆ ಮಿಣುಕು ಬೆಳಕಿನ ಪುಂಜಗಳು ದೂರದಲ್ಲೆಲ್ಲೋ ಕೇಳುತ್ತಿದ್ದ ಹಾಡಿಗೆ ಮೇಳೈಸಿದವು. ಆ ಕಿರಣಗಳ ನಡುವಿನಿಂದ ನಗುವಿನ ತೇರು ಕಟ್ಟಿಕೊಂಡು ಹೂಬಾಣ ಹಿಡಿದು ಬಂದ ಮನ್ಮಥನ ಹಿಂದೆ ಹೂಮಾಲೆ ಹಿಡಿದು ನಿಂತಾಕೆ ಕಿಸಕ್ಕನೆ ನಕ್ಕಳು. ಎಚ್ಚರಾದಾಗ ಬೆಳಗಾಗಿತ್ತು. ಅರೆಬರೆ ನಿದ್ದೆಯ ಒದ್ದಾಟದಲ್ಲಿ ಕನಸಲ್ಲಿ ಕಂಡ ಮುಖ ಅವಳದ್ದಾಗಿರಲಿಲ್ಲ. ಅವಳ ನಗುವಿನಲ್ಲಿ, ಕಣ್ಣಸೆಳೆತದಲ್ಲಿ ಯಾವ ಮೋಹದ ಛಾಯೆಯು ಇದ್ದಿರಲಿಲ್ಲ. ಆ ಪರಮ ಸುಂದರಿ ಯಾರಾಕೆ..? ಮೂಡಿಮಸಳುವ ಆ ಚಿತ್ರವನ್ನು ಎದೆಯೊಳಗೆ ಚಿತ್ರಿಸಿಕೊಳ್ಳಲು ಅದೆಷ್ಟು ಪ್ರಯತ್ನಪಟ್ಟರೂ ಒಡಮೂಡಲಿಲ್ಲ. ದಣಿವಿನ ಮೈಯೊಳಗೆ ಮನಸಿನ ತುಂಬ ತುಂಬಿದ್ದ ಆ ಮುಖವನ್ನು ಹೊತ್ತುಕೊಂಡೆದ್ದಾಗ ರಾತ್ರಿ ಹಾಡುಗಾರಿಕೆ ಮಾಡಿದ್ದ ಮೇಳದ ಮಂದಿ ವಾತಾಪಿಯ ಕಾಲುದಾರಿಯಲ್ಲಿ ಗೆಜ್ಜೆ ಕೋಲನ್ನೂರುತ್ತಾ ಮೇಣೆಯೊಂದನ್ನು ಹೊತ್ತುಕೊಂಡು ಹೊರಟಿದ್ದರು. ಬಾಯಿಮುಕ್ಕಳಿಸಿ ಮುಖಕ್ಕೆ ನೀರು ಹಾಕಿಕೊಂಡು ಆ ಹೊರಟ ಯಾತ್ರಿಕರ ದಾರಿಯ ಕಡೆ ನೋಡಿದಾಗ ಏನನ್ನೋ ಕಳೆದುಕೊಳ್ಳುತ್ತಿರುವ ಕಳವಳ ಅವನನ್ನಾವರಿಸಿತ್ತು. ಮಾತಿಗೆ ತಪ್ಪದಂತೆ ಮುದಿಸೂಳೆಯು ಅಮವಾಸೆ ಸೇವೆಯ ಮುಗಿಸಿ ಮರುದಿನದ ಬೈಗಿನಲ್ಲಿ ಮೇಳದವರೊಟ್ಟಿಗೆ ಚಂದ್ರಿಯನ್ನು ಗೆಜ್ಜೆಕೋಲಿನ ಸರದಾರರಿಬ್ಬರ ಮೇಣೆಯಲ್ಲಿ ಕೂರಿಸಿ ಬನವಸೆಗೆ ಕಳಿಸಿಕೊಟ್ಟಿದ್ದಳು.
*****
ಅಮವಾಸ್ಯೆಯ ಕಾಳರಾತ್ರಿಯನ್ನು ಅಗ್ನಿ ಹೊತ್ತಿಸಿ ಕಳೆದಿದ್ದ ಉತ್ತರದ ಸಾಧಕರು ಬೆಳಗಾಗೆ ಬಿಸಿಬಿಸಿ ಅಂಬಲಿಯ ಬೇಯಿಸುತ್ತಿದ್ದರು. ಅದರ ಘಮ ಮೂಗಿಗಡರಿದಾಗ ತಾನೆಲ್ಲಿದ್ದೇನೆಂಬ ಎಚ್ಚರವೂ ತ್ರೈಲೋಕ್ಯನೊಂದಿಗೆ ಎದ್ದಿತು. ಅಯ್ಯಾವೊಳೆಯ ಕೊಂಟಿಗುಡಿಯ ಮುಖ ಮಂಟಪದಲ್ಲಿ ಮಲಗಿದ್ದ. “ಅರೇ ಹೋ ರಾಜಾ ಎಚ್ಚರಾಯ್ತು… ಬಾ ಬಾ. ಬಾಯಿಮುಕ್ಕಳಿಸಿ ಅಂಬಲಿ ಗುಟುಕು ಗಂಟಲಕಿಳಿಸು ಬಾ” ದೊಡ್ಡಗಂಟಲಿನ ಸಾಧಕಳೊಬ್ಬಳು ಮುಂಗೈ ಮೇಲೆತ್ತಿ ಅಂಗಳದಲ್ಲಿ ಹೂಡಿದ್ದ ಒಲೆಯ ಕಡೆಗೆ ಕರೆದಳು. ನೂರಾರು ಜನ ಬತ್ತಲಾಗಿರುವ ಹೆಂಗಸರು ಮೈಯೆಲ್ಲ ಬೂದಿಬಡಿದುಕೊಂಡ ಸಾಧುಣಿಯರ ಬಿಡಾರವೇ ತನ್ನ ಸುತ್ತಲಿರುವುದು ಕಂಡು ಚಣ ಹೆದರಿಕೆಯಿಂದೆದ್ದು ಹೊಂಡದಲ್ಲಿ ಮಿಂದು ಬಂದು ಕೊಂಟೆಪ್ಪನಾದ ಈಶ್ವರನಿಗೆ ಕೈ ಮುಗಿದ.
ಹೆದರಬೇಡೆಲವೋ ಮಗನೇ.. ಹಿಡೀ ಕುಡಿ ಇದನ್ನ, ನೆನ್ನೆ ಆ ಚಿತ್ತಾರದ ಗುಡ್ಡದ ಕಡುದಾರಿಯಲ್ಲಿ ಕಲ್ಲುಮುಳ್ಳೆನ್ನದೆ ಬಿರಿಬಿರಿ ಓಡುತ್ತಾ ಜಾರಿಬಿದ್ದಿದ್ದಿ. ನಮ್ಮ ತಾಯಿ ಹಿಂಗುಳವ್ವ ನಿನ್ನ ತಂದು ನಮ್ಮ ಸೆರಗಿಗೆ ಹಾಕಿದಳು.
ನೀರಿಗಿಳಿದಾಗ ಚುರುಚುರು ಎನ್ನುತ್ತಿದ್ದ ತನ್ನ ಮೈ ಕಡೆಗೆ ತಾನೇ ನೋಡಿಕೊಂಡಾಗ ಪರಚಿಕೊಂಡ ಗೀರುಗೆರೆಗಳು ಕಾಣಿಸಿದವು. ತನ್ನ ವಸ್ತ್ರಗಳೆಲ್ಲವೂ ಇಲ್ಲವಾಗಿ ಕೌಪೀನ ತೊಟ್ಟಿರುವುದನ್ನು ಕಂಡು ಚಕಿತನಾದ. ಅರಸಿಬೀದಿಯ ಅಂಬಿಗನಿಗೆ ಕೈಮುಗಿದು ಚಿತ್ತಾರಕಲ್ಲಿನ ಗುಡ್ಡವನ್ನೇರಿ ಓಡಲು ಶುರುಮಾಡಿದವನಿಗೆ ರಾತ್ರಿ ಕಳೆದು ಹಗಲೆಂಬುದು ಬಂದರೂ ದಣಿವಾಗಿರಲಿಲ್ಲ. ಹೆಂಡತಿ ಮಗುವಿನ ಕಾಣುವ ಹಂಬಲದಲ್ಲಿ ಗುಡ್ಡದ ಇಳಿಜಾರಿನಲ್ಲಿ ಧೊಪ್ಪನೆ ಬಿದ್ದದ್ದು ನೆನಪಾಯ್ತು. ಆಭಾರಿಯಾದ ಭಾವಭಕುತಿಯಲ್ಲಿ ಎದುರಿಗಿದ್ದ ತಾಯಿಗೆ ಕಣ್ಣಲ್ಲೇ ಕೈ ಮುಗಿದು ಅಂಬಲಿಯ ಪರ್ಯಾಣ ತೆಗೆದುಕೊಂಡು ಈಟೀಟೆ ಗುಟುಕರಿಸಿದ. ಕರುಳಿಗಿಳಿದ ರಸದ್ರವ್ಯ ಮನಸ್ಸನ್ನು ಹಗುರಗೊಳಿಸಿತು.
ಯಾವೂರಾತೋ ಮುಕ್ಕಣ್ಣಾ…?
ಇದೇ ಸೀಮೆಯವನು ತಾಯಿ. ಇಲ್ಲಿಂದ ಯೋಜನ ದೂರದಲ್ಲಿ ನನ್ನ ಮನೆ.
ಮನೆಯಲ್ಲಿ ಯಾರೆಲ್ಲ ಇದ್ದಾರೆ.
ಹೆಂಡತಿ-ಮಗು
ಮಗು ಹೆಣ್ಣೋ… ಗಂಡೋ…
ತಿಳಿಯದು ತಾಯಿ, ಕೂಸು ಹುಟ್ಟುವ ಮೊದಲೇ ಶಿಕ್ಷೆಯಾಗಿ ಊರುಬಿಟ್ಟ ನತದೃಷ್ಟ ಪಾಪಿ ನಾನು..
ನೊಂದಕೊಳ್ಳಬೇಡೆಲವೋ ನರನೇ.. ನಾವೆಲ್ಲ ನಿನ್ನ ಮನೆಗೆ ಬಂದರೆ ಹಿಟ್ಟು ಕೊಡುವೆಯಾ..?
ಅಗತ್ಯ ಬನ್ನಿ ತಾಯಿ.
ಬರುವುದಾದರೆ ಬಂದೇವು ನಿನ್ನ ಹಿಂದೆಯೇ.. ಆ ಹಿಂಗುಳಮಾತಾ ಒಳ್ಳೆದ ಮಾಡತಾಳೆ…
ಹೆಣ್ಣೆಂಬ ರೂಪಿನ ಮಾಯೆಯನ್ನೂ, ಮಮಕಾರದ ಮಡಿಲನ್ನೂ ತೊರೆದು ನಾಥಪಥದ ಹಿಂಗುಳಾದೇವಿಯ ಆರಾಧಕರಾದ ನಾಗಿಣಿಯಕ್ಕ ಮತ್ತವರ ಬಳಗದ ಸಾಧಕರು ಬಡಗಣಕ್ಕೆ ಹೊರಟು ವರ್ಷಗಳೆಷ್ಟೋ ಕಳೆದಿದ್ದವು. ತಮ್ಮಿಡೀ ಶರೀರ ವಜ್ರದೇಹಿ ಆಗಬೇಕೆಂಬ ಹಂಬಲ ಹೊತ್ತು ನಾಗಾರ್ಜುನಕೊಂಡದತ್ತ ಬಂದಿದ್ದ ಆ ಸಾಧುತಾಯಿಯರು ಈಗ ಬನವಸೆಯತ್ತ ಹೊರಟು ದಾರಿಮದ್ಯದ ಅಯ್ಯಹೊಳೆಯ ದುರ್ಗಿಗುಡಿ, ಕೊಂಟೆಪ್ಪನ ಗುಡಿಯಲ್ಲಿ ಕೆಲಕಾಲ ತಂಗಿದ್ದರೆಂಬುದನ್ನು ಕೇಳಿ ತಿಳಿದ ತ್ರೈಲೋಕ್ಯನು ತನ್ನ ಬಾಳ ವೃತ್ತಾಂತವನ್ನು ವಿಸ್ತಾರವಾಗಿ ಹೇಳಿ ಕಂಬಕ್ಕೊರಗಿ ಕುಳಿತ. ನವಗ್ರಹ ಮಂಟಪದಲ್ಲಿ ಪದ್ಮಾಸನ ಹಾಕಿ ಕುಳಿತಿದ್ದ ನಾಗಿಣಿಯಕ್ಕ ಬಾಗಿ ಅವನ ತಲೆಯ ಮೇಲೆ ಕೈಯಿಟ್ಟು ಕ್ಷಣಕಾಲ ಕಣ್ಮುಚ್ಚಿ, ಮಣಮಣ ಮಂತ್ರವನ್ನು ತನಗೆ ತಾನೇ ಹೇಳಿಕೊಂಡು ತನ್ನ ಬಲಗೈ ರಟ್ಟೆಗೆ ಕಟ್ಟಿದ್ದ ಕರಿದಾರವನ್ನು ಬಿಚ್ಚಿ ತ್ರೈಲೋಕ್ಯನಿಗೆ ಕೊಟ್ಟಳು.
“ಇದು ನನ್ನ ಗುರುತಿನ ದಾರ, ನಿನಗೆ ಹುಟ್ಟಿರುವ ಕೂಸಿನ ತೋಳಿಗೆ ಬಿಗಿಮಾಡಿ ಕಟ್ಟು. ಆ ಕೂಸನ್ನು ಆ ದೇವಿಯೇ ಹರಸುವಳು. ಹೂಂ ಹೊರಡಿನ್ನು.”
ದಾರದ ಪ್ರಸಾದವನ್ನು ಕಣ್ಣಿಗೊತ್ತಿ ಪಡೆದ ತ್ರೈಲೋಕ್ಯ, ತಲೆಯೆತ್ತ ಆಕೆಯ ಕಣ್ಣಗಳನ್ನು ಕಂಡ. ಆ ನಾಗಿಣಿಯಕ್ಕನ ಕಣ್ಣೊಳಗೆ ರೌದ್ರರಸದ ಅಗಾಧತೆ ತುಂಬಿದ್ದು ಕಂಡು ಮನಸ್ಸು ಮುದುಡಿ ಸಣ್ಣದಾಗಿ ಬಾಗಿ ಆಕೆಯ ಕಾಲಿಗೆ ನಮಸ್ಕರಿಸಿ, ತನ್ನ ಹರಿದ ಅರವಿ ಅಂಚಡಿಯನ್ನು ತೊಟ್ಟುಕೊಂಡು ಮಲಪ್ರಹರಿ ನದಿಗುಂಟ ನಡೆಯತೊಡಗಿದ…
*****
ಇತ್ತ ಇಲ್ಲಿ-
ಪಳಗಿಸಲು ತಂದಿದ್ದ ಕುದುರೆಯ ದಾರವನ್ನು ಸೊಂಟಕ್ಕೆ ಕಟ್ಟಿಕೊಂಡ ವಸೂದೀಪ್ಯನೆಂಬ ಮದಕ್ಕೆ ಬಂದಿದ್ದ ಹೋರಿಯು ತನಗಾಗಿಯೇ ಸೃಷ್ಟಿಸಿದ ಚೆಲುವೊಂದನ್ನು ಹುಡುಕುತ್ತಾ ಚಂದ್ರಮೌಳೇಶನ ಪೌಳಿಯ ಸುತ್ತಲೇ ತಿರುಗುತ್ತಿತ್ತು. ಯಾರನ್ನ ಕೇಳಿದರೂ ಚಂದ್ರಲಾ ಎಲ್ಲಿಹಳೆಂದು ಸುಳುಹು ಬಿಡದ ಪಾತ್ರದವರ ಬೆನ್ನುಬಿದ್ದು, ಅವರು ಹೊಳೆಗೆ ಹೋದರೆ ಹೊಳೆಯತ್ತಲೂ, ಕಾಡಿಗೆ ಹೋದರೆ ಕಾಡಿನತ್ತಲೂ, ರೈತರ ಕಣಗಳಿಗೆ ಹೋದರೆ ರಾಶಿಗಳ ಕಣದತ್ತಲೂ ಅಲೆಯುತ್ತ ಆ ಮುದಿಸೂಳೆಯರ ಬೆನ್ನುಬಿದ್ದು ಕಾಡುತ್ತಿದ್ದ. ಆ ಹೆಂಗಸರೋ ಕಾಮಣ್ಣನ ಹೂಬಾಣ ಎದೆಗೆ ಚುಚ್ಚಿಕೊಂಡು ಹುಚ್ಚನಂತಾಡುತ್ತಿರುವ, ಚಂದ್ರಿಯ ನೆನೆದು ಬಿಕ್ಕಳಿಸುವ ವಸೂದೀಪ್ಯನ ಕಂಡು ಮಮ್ಮಲ ಮರಗುತ್ತಿದ್ದರು. ಕೆಲವೊಮ್ಮೆ ಬೆನ್ನುಬಿದ್ದಿರುವ ವಸೂದೀಪ್ಯನ ಪರಿಕಂಡು ಬೈದು ಹಂಗಿಸತೊಡಗಿದ್ದರು.
ನೆನ್ನೆಯ ಅವಳ ನೃತ್ಯ ಸೇವೆಯನ್ನು ನೋಡದೆ ಹೋಗಬಾರದಿತ್ತು…
ಹಿಡಗೈಗಾತ್ರದ ಕಲ್ಲನ್ನು ಕಲ್ಲಿನ ಮೇಲಿಟ್ಟು ಕುಟ್ಟತೊಡಗಿದಾಗ ಅದು ಹಿಟ್ಟಾಗಿ ಉದುರುವ ಮರಳಾಯ್ತು. ತನ್ನೆಲ್ಲ ಶಕ್ತಿಯನ್ನು ಬಿಗಿಮಾಡಿ ಕಲ್ಲಿನ ಮೇಲೆ ಕಲ್ಲಿಟ್ಟು ಜಜ್ಜುವಾಗ ಅದರ ಹೊಡೆತಕ್ಕೆ ಬಲಗೈ ಕಿರುಬೆರಳಿಗೆ ಗಾಯವಾಗಿ ನೆತ್ತರು ಸುರಿಯತೊಡಗಿತು. ಚಂದ್ರಲಾಳ ಸರಿವಯಸ್ಸಿನ ಹುಡುಗಿಗೆ ಇವನ ಈ ಹುಚ್ಚಾಟ ಕಂಡು ಸಂಕಟವಾಗಿ ಓಡಿಬಂದು ಕೈಯೊಳಗಿನ ಕಲ್ಲು ಬಿಡಿಸಿ ಎಸೆದು, ನೀರು ಕುಡಿಸಿ, ಬಟ್ಟೆಯ ತುಂಡೊಂದನ್ನು ಆ ಕಿರಿಬೆರಳಿಗೆ ಕಟ್ಟುವಾಗ ಆಕೆ ಅವನ ಕಣ್ಣೊಳಗಿನ ಬಿಳಿಗುಡ್ಡೆಯನ್ನು ಗಮನಿಸಿದಳು. ಆ ಕಣ್ಣಗೊಂಬೆಯಲ್ಲಿ ಕಾವಿಗೆ ಹಂಬಲಿಸುವ ಬಿಸುಪಿತ್ತು.
ಸರಿದೊರೆಯೇ.. ನಿನ್ನ ಹುಚ್ಚಾಟಗಳ ನಿಲ್ಲಿಸು. ನಾವು ಪಾತ್ರದ ಹೆಂಗಸರು. ನಮ್ಮಗಳ ಅದಮ್ಯ ಸೇವೆ ಎನ್ನುವುದು ಆ ಶಿವನಿಗೆ ಮೀಸಲು. ನಡಿಗೆ, ನಿಲುವು, ನಿಲುವಿನ ಭಂಗಿ, ಆಕರ್ಷಕ ಕಣ್ಣೋಟ, ಏರಿಳಿತದ ಮೈಮಾಟದ ಸೊಗಸೆಲ್ಲವೂ ಶಿವಮಯ. ಈ ನಿನ್ನ ಆಸೆ ಆಕಾಂಕ್ಷೆಗಳ ಹಂಬಲ ತೊರೆದುಬಿಡು.
ನೀನು ಹೇಳುವ ನುಡಿಗಳನ್ನು ನನ್ನ ಅರಸಿ ಚಂದ್ರಲಾ ಹೇಳಿದರೆ ಸಾಕೆನಗೆ…
ಸರಿದೊರೆಯೇ.. ನೀನು ಇನ್ನೆಂದೂ ಆಕೆಯನ್ನು ನೋಡಲಾರೆ.
ಏನಾದುದು ಅವಳಿಗೆ..? ನನ್ನ ಜೀವದ ಜೀವ ಆಕೆ. ಆಕೆಗೇನಾಯ್ತು ಚಲುವೆ..?
ಅವಳ ಮನಸ್ಸು ನಿನ್ನಷ್ಟೆ ಮೃದು ಸರಿದೊರೆಯೇ..! ನಿನ್ನುಸಿರಿನ ಪರಿಮಳದಲ್ಲೇ ಕಾಲ ಕಳೆಯುವ ಹಂಬಲದ ಕನಸುಗಾರಳು ಆಕೆ. ಆಕೆಗೂ ಮನವಿಲ್ಲವಾಗಿ, ಮಧುಕೇಶ್ವರನ ಸೇವೆಗೆ ಬನವಸೆಯತ್ತ ಕಳುಹಿಸಿದಳು ದೊಡ್ಡಬ್ಬೆ.
ಬನವಸೆ… ಬನವಸೆ…
ಕಟ್ಟಿದ್ದ ಕುದುರೆ ಸೊಂಟಕ್ಕೆ ಕಟ್ಟಿಕೊಂಡು ಹುಚ್ಚನಂತಾಗಿ ಬನವಸೆಯ ಕಾಲುದಾರಿ ಹಿಡಿದು ಓಡತೊಡಗಿದ… ಆ ದಿನದ ಬೆಳಕು ಅಡಗುವವರೆಗೂ ಓಡೋಡಿ ದಣಿದ ವಸೂದೀಪ್ಯನನ್ನ ಆ ಎಳೆಗುದುರೆ ತಡೆದು ನಿಲ್ಲಿಸಿತು. ಮುಂದೇನು…? ಎತ್ತ..? ಎಂಬ ಅಡಕತ್ತರಿಯ ನಡುವೆ ಸಿಲುಕಿ ಮನೆಗೆ ಹೋಗಬಾರದೆಂದು ಆ ಕತ್ತಲಲ್ಲೇ ಕುದುರೆಯ ಮುಂದೆ ದಿಂಗ್ಮೂಢನಾಗಿ ಕುಳಿತ. ಆ ಕ್ಷಣ ಅಬ್ಬೆಯ ಮುಖ ಕಣ್ಣೊಳಗೆ ಮೂಡಿದ್ದೆ, ಮೈಕೊಡವಿಕೊಂಡು ಕತ್ತಲಗುಹೆಯೊಳಗೆ ಹೂತುಹೋಗಿದ್ದ ಊರಕಡೆ ನೋಡಿದ. ಅಬ್ಬೆ ಯಾವ ಸುಖಕ್ಕಾಗಿ ಜೀವ ಹಿಡಿದಿದ್ದಾಳೆ. ಉತ್ತರದಿಕ್ಕಿನಿಂದ ಗಂಡ ಬಂದು ಮತ್ತೆ ಮುತ್ತೈದೆತನ ಹೊತ್ತು ತರತಾನೆ ಎನ್ನುವ ಅಬ್ಬೆಯ ಆಸೆಗಣ್ಣುಗಳು ತುಸುತುಸುವೇ ಬಾಡುತ್ತಾ ಆಕೆಯ ಕಣ್ಣಸುತ್ತಲೂ ಕಂದುಬಣ್ಣದ ವರ್ತುಲ ಮೂಡಿತ್ತು. ಕಣ್ಣೊಳಗಿನ ಕತ್ತಲಗುಹೆಯಲ್ಲಿ ಇನ್ನೇನು ಅಬ್ಬೆಯ ಕಣ್ಣುಗಳು ಹುದುಗಿ ಹೋಗಲಿವೆ. ಸಿದ್ಧಸಾದುವೆಂಬ ಗುರುವಿನ ಕಣ್ಣಲ್ಲೇ ಅಡಗಿದಂತಾ ಆ ಕಿರಣಗಳ ಮಿಣುಕು ಬೆಳಕಿನ ಕ್ಷಣ ನೆನಪಾಯ್ತು.
ಯಾವುದನ್ನು ಯಾವುದು ನುಂಗುವ ಮಾಯೆ ಇದು..? ಕತ್ತಲನ್ನು ಬೆಳಕು ನುಂಗಿಕೊಂಡು, ಬೆಳಕನ್ನು ಕತ್ತಲು ನುಂಗಿಕೊಳ್ಳುವ ಈ ಎರಡರ ಅಂಚಿನಲ್ಲಿ ಏನಾದರೂ ಸುಖವಿದೆಯೇ..! ಈಗ ತೋರುತ್ತಿರುವ ಕತ್ತಲ ಗರ್ಭದಲ್ಲಿ ಬೆಳಕಿದೆಯಲ್ಲವೇ..! ಅಂದು ಗುರುವಿನ ಕಣ್ಣೊಳಗೆ ಕಂಡ ಸೋಜಿಗ ಇದೆ ಅಲ್ಲವೇ… ಯಾವ ಸುಖ ನಿಜವಾದ ಸುಖ…! ತನ್ನ ಮೈಮಾಟ ಕಣ್ಣಸನ್ನೆಗಳಲ್ಲೇ ಬರಸೆಳೆಯುವ ಆ ನೃತ್ಯಗಾತಿ ಚಂದ್ರಲಾಳ ಒಡನಾಟದಲ್ಲೇನಾದರೂ ಬದುಕಿನ ಉತ್ತರವಿದೆಯೇ,,? ಇಲ್ಲ, ಮತ್ತದೇ ಅಪ್ಪ-ಅಬ್ಬೆಯ ಆಟ-ಹುಡುಗಾಟದ ಸಂಸಾರದ ಸುಖವೇ ಅಂತಿಮವೇ..? ಇದೆಲ್ಲದನ್ನೂ ಮೀರಿದ ಸತ್ಯವನ್ನು ಗುರು ನನಗೆ ಪವಾಡದ ಹಾಗೆ ಕಾಣಿಸಿದರು. ಈ ನನ್ನ ಮಬ್ಬುತಲೆಗೆ ಹೊಳೆಯಲಿಲ್ಲವಲ್ಲಾ…
ಮಾವ ಮಾಲಿಂಗ ದಂಡಿನ ಹುಡುಗರಿಬ್ಬರನ್ನು ಜೊತೆ ಮಾಡಿಕೊಂಡು ದೊಂದಿಬೆಳಕಿನಲ್ಲಿ ಹುಡುಕುತ್ತಾ ಬಂದು ಎದುರು ನಿಂತಾಗ ವಸೂದೀಪ್ಯನ ಮನಸ್ಸಿನೊಟ್ಟಿಗೆ ದೇಹವೂ ದಣಿದು ನೆಲಕ್ಕೊರಗಿತು.
(ಮುಂದುವರಿಯುವುದು)
Comments 6
ಚಂದ್ರೇಗೌಡ, ವಿಜಯಪುರ
Feb 17, 2025ಅನೂಹ್ಯ ಲೋಕದೊಳಗೆ ಹೊಕ್ಕ ಅನುಭವ ಈ ಕತೆಯ ಆವರಣ. ವಯಸ್ಸಿಗೆ ಸಹಜವಾದ ತಲ್ಲಣಗಳಲ್ಲಿರುವ ಪಾತ್ರಗಳು ಬಹಳ ಆಳವಾಗಿ ಸೆಳೆಯುತ್ತವೆ.
ಶಶಿಧರ ಪಿ
Feb 23, 2025ಇತ್ತ ಸರಿಯಾದ ಬಾಲ್ಯವೂ ದಕ್ಕದ, ಯೌವನದಲ್ಲಿ ಪ್ರೀತಿಯೂ ಸಿಗದ ದುರಂತ ಬದುಕು ತ್ರೈಲೋಕ್ಯನದು. ಯಾಕೋ ತುಂಬಾ ನೋವಾಯ್ತು.
ಜಯಂತ್ ಎಲ್
Feb 23, 2025ಸುಖ ಎಲ್ಲಿದೆ… ಎನ್ನುವ ಜಿಜ್ಞಾಸೆ ಬಹಳ ಅರ್ಥಪೂರ್ಣವಾಗಿದೆ. ಕತ್ತಲು, ಬೆಳಕು ಎನ್ನುವ ಎರಡು ಅಂಚುಗಳಾದರೂ ಎಲ್ಲಿವೆ? ಪೂರ್ಣ ಸುಖದ, ನಿಜವಾದ ಸುಖ ಎಂಬುದೆಲ್ಲವೂ ನಮ್ಮ ಭ್ರಮೆಗಳೇ.
ಚಂದ್ರಣ್ಣ ತುರುವೆಕೆರೆ
Feb 26, 2025ನಾಥಪಂಥದ ಸಾಧುತಾಯಿಯರ ಬಗೆಗಿನ ಮಾಹಿತಿ ಓದಿ ಅಚ್ಚರಿಯಾಯಿತು. ಮಹಾಕುಂಭದಲ್ಲಿ ಕಾಣುತ್ತಿರುವ ಸಾಧುಗಳ ಆವಾಂತರವನ್ನು ದಿನಕ್ಕೊಂದರಂತೆ ನೋಡುತ್ತಿರುವಾಗ ಅಂದಿನ ನಾಥ ಸಿದ್ಧಿಗಳ ಹುಡುಕಾಟ genuine ಆಗಿತ್ತು. ಈಗ ತೋರಿಕೆಯ ಆಟಾಟೋಪವಾಗಿಬಿಟ್ಟಿದೆ.
ನಂದೀಶ್ ಕೊಟ್ಟೂರು
Feb 26, 2025ಸಂಬಂಧಗಳ ಬಾಂಧವ್ಯ ಮನಸ್ಸಿನ ಮೇಲೆ ಮರೆಯಲಾಗದಂತೆ ಉಳಿಯುತ್ತದೆ ಅಣ್ಣಾ.
ವಿರೂಪಾಕ್ಷಪ್ಪ ಚನ್ನಗಿರಿ
Mar 1, 2025ಆಕಸ್ಮಿಕವಾಗಿ ಬಾಲ ಬಸವಣ್ಣನವರನ್ನು ತ್ರೈಲೋಕ್ಯ ಬೇಟಿಯಾಗುವುದು, ಅಲ್ಲಿನ ಗುರುಕುಲದ ವಾತಾವರಣ, ನಾಥಪಂತದ ಸಾಧಕರೊಂದಿಗಿನ ಮಾತುಕತೆ, ಅವರ ಮನಸ್ಥಿತಿ …. ಓದುಗರಲ್ಲಿ ವಿಶಿಷ್ಟ ಅನುಭೂತಿ ನೀಡುತ್ತವೆ. ವಸೂದೀಪ್ಯ ಅನಿಮಿಷನಾಗುವ ಭೂಮಿಕೆ ಸಿದ್ದವಾಗುತ್ತಿದೆ.