ಅನಾದಿ ಕಾಲದ ಗಂಟು…
ಹಗುರಾಗುತಿದೆ ಹೃದಯ
ಹೆಗಲ ಹೊರೆ ಇಳಿದು
ಭೂಮಿಗಿಂತಲೂ ವಜನ
ಹತ್ತಿಗಿಂತಲೂ ಹಗುರ
ಹೊರಲಾಗದ ಭಾರ ಹೊತ್ತಿದ್ದ
ಎದೆಗೆ, ಈಗ ಎಂಥದೋ ನಿರಾಳ…
ಕಣ್ಣುಬಿಟ್ಟಾಗಿನಿಂದ ಕಂಡದ್ದು
ಎಲ್ಲೆಲ್ಲೋ ಕೇಳಿದ್ದು
ಅವರಿವರು ಕಲಿಸಿದ್ದು
ಮೂಸಿದ್ದು ಹೊಸೆದದ್ದು
ಖಾಲಿಯಾಗದ ಗಂಟು
ಹೆಗಲೇರಿ ಕುಳಿತಿತ್ತು…
ಮುಟ್ಟಿದ್ದು ಮೂರಾಗಿ
ಇಟ್ಟಿದ್ದು ಆರಾಗಿ
ಬಗಲಚೀಲದಲಿದ್ದವು
ಚಿತ್ರವಿಭ್ರಮದ ಸರಕು
ಭವದ ಸಂತೆಯಲಿತ್ತು
ಅನಾದಿ ಕಾಲದ ಗಂಟು…
ಮಾಯೆಯೋ ಮರೆವೋ
ರೂಢಿಗೆ ಬಿದ್ದ ಚಾಳಿಯೋ
ಕಾರ್ಯ-ಕಾರಣದ ಚಕ್ರವೋ?
ಸ್ವಲಿಖಿತ ಹಣೆಬರಹವೋ
ಛಿದ್ರಚಿತ್ತದ ವ್ಯಾಧಿಯಲಿ
ನರಳುತಿದೆ ಲೋಕ…
ಬೆಳೆದಂತೆ ಭುಜವೇರುತ್ತಾ
ನರನಾಡಿಗಳ ಹಬ್ಬಿ
ನನ್ನ ನುಂಗಿ ಬಿಟ್ಟಿದ್ದು
ಈವರೆಗೂ ಅರಿವಾಗಲೇ ಇಲ್ಲ!!
ಗುರು ತೋರುವ ತನಕ
ಭಾರ ಹೊತ್ತುದೇ ತಿಳಿಯಲಿಲ್ಲ!!!