
ಅದ್ವಿತೀಯ ಶರಣರು
ಮನುಮುನಿ ಗುಮ್ಮಟದೇವ
ದೊರೆತ ಒಟ್ಟು ವಚನಗಳು -99
ಅಂಕಿತ: ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗ
ಕಾಯಕ: ಮೀಮಾಂಸಕ
ಮೂಲತಃ ಜೈನ ಧರ್ಮೀಯನಾಗಿದ್ದ ಈತ ಅನಂತರ ಶರಣಧರ್ಮ ಸ್ವೀಕರಿಸಿದಂತೆ ತಿಳಿದುಬರುತ್ತದೆ.
ಕಾಲ: ಹನ್ನೆರಡನೆಯ ಶತಮಾನ
ಜನ್ಮಸ್ಥಳ -ವಿವರ ಲಭ್ಯವಾಗಿಲ್ಲ
ಐಕ್ಯಸ್ಥಳ: ಬೆಳಗಾವಿ ಜಿಲ್ಲೆ- ರಾಮದುರ್ಗ ತಾಲ್ಲೂಕಿನ ಮುನೇನಕೊಪ್ಪ
ಕಲ್ಯಾಣ ಕ್ರಾಂತಿಯ ಕೊನೆಯ ಹೆಜ್ಜೆ ಗುರುತುಗಳು ಎಂಬ ಸಂಶೋಧನಾ ಲೇಖನ ಸಿದ್ಧಪಡಿಸುವಲ್ಲಿ ಮತ್ತು ಕ್ಷೇತ್ರ ಕಾರ್ಯ ಮಾಡುವಲ್ಲಿ ಹಲವಾರು ಶರಣರ ಸಮಾಧಿ ಕುರುಹುಗಳನ್ನು ಗುರುತಿಸಲು ನನಗೆ ಸಹಾಯಕವಾದದ್ದು ಜನರ ನಂಬಿಕೆ, ಜನಪದಿಗರ ಹೇಳಿಕೆಗಳು. ಬಸವಣ್ಣನವರು ಕಲ್ಯಾಣವನ್ನು ತೊರೆದ ಮೇಲೆ ಸೋಮಿದೇವನು ಶರಣರ ಹತ್ಯೆಗೆ ಆದೇಶಿಸುತ್ತಾನೆ. ಬಸವಣ್ಣನವರ ಗಡಿಪಾರಿನ ನಂತರ ಕಲ್ಯಾಣ ಕ್ರಾಂತಿಯ ರಕ್ತ ಸಿಕ್ತ ಹೋರಾಟದಲ್ಲಿ ಚೆನ್ನಬಸವಣ್ಣನವರ ನೇತೃತ್ವದಲ್ಲಿ ಮಡಿವಾಳ ಮಾಚಿದೇವರು ಶರಣರ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ರಕ್ಷಿಸುತ್ತಾ, ಶರಣ ಸೇನೆಯನ್ನು ಮುನ್ನಡೆಸುತ್ತಾರೆ. ಮಾದನ ಹಿಪ್ಪರಗಿ, ಬೆಳಗಾವಿ, ಕಾದ್ರೊಳ್ಳಿ, ಹುಣಶೀಕಟ್ಟಿ, ಮೂಗಬಸವ, ಮುರಗೋಡ, ತಲ್ಲೂರು, ಕಾರಿಮನಿ, ಕಟಕೋಳ, ಚಂದರಗಿ, ಗೊಡಚಿಗೆ ಬಂದು ಮಾಚಿದೇವರು ಐಕ್ಯರಾಗುತ್ತಾರೆ. ಮುದಿ ವೀರಣ್ಣನ ಗುಡಿ ಶರಣ ಮಡಿವಾಳ ಮಾಚಿದೇವರ ಐಕ್ಯಸ್ಥಳ. ಮುದಿ ವೀರಣ್ಣನ ಕೈಯಲ್ಲಿ ಖಡ್ಗ ಮತ್ತು ಎದೆಯ ಮೇಲೆ ಇಷ್ಟಲಿಂಗದ ಕರಡಗಿ ಇದೆ. ಮಡಿವಾಳ ಮಾಚಿದೇವರನ್ನು ಪುರಾಣಗಳಲ್ಲಿ ವೀರಭದ್ರನ ಅವತಾರವೆಂದು ಬಿಂಬಿಸುತ್ತಾರೆ. ಗೊಡಚಿ ಇದು ರಾಮದುರ್ಗದಿಂದ 15 ಕಿಮಿ ಅಂತರದಲ್ಲಿದೆ. ಜಾನಪದ ಸಾಹಿತಿಗಳು, ಸಂಶೋಧಕರು ಮತ್ತು ಇತಿಹಾಸ ತಜ್ಞರು ಮಡಿವಾಳ ಮಾಚಿದೇವರ ಐಕ್ಯಸ್ಥಳವನ್ನು ಗೊಡಚಿಯ ಮುದಿ ವೀರಣ್ಣನ ಗುಡಿಯೆಂದು ಅಭಿಮತಕ್ಕೆ ಬರುತ್ತಾರೆ.
‘ಕಲ್ಯಾಣ ಕ್ರಾಂತಿ’ಯ ಸಂದರ್ಭದಲ್ಲಿ ಶರಣರ ದೊಡ್ಡ ಜವಾಬ್ದಾರಿ ವಚನ ಸಾಹಿತ್ಯ ಸಂರಕ್ಷಣೆ. ಚನ್ನಬಸವಣ್ಣ, ಅಕ್ಕನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮನುಮುನಿ ಗುಮ್ಮಟದೇವ ಶರಣ ಸಮೂಹದ ‘ಭೀಮ ರಕ್ಷೆಯಾಗಿ’ ನಿಂತರು. ಒಂದು ತಂಡ ತೋರಗಲ್ಲ, ಮುನವಳ್ಳಿ, ಸವದತ್ತಿ, ಧಾರವಾಡ ಮಾರ್ಗವಾಗಿ ಉಳವಿಗೆ ಹೋಯಿತು. ಇನ್ನೊಂದು ತಂಡ ಉಣಕಲ್, ಹುಬ್ಬಳ್ಳಿ, ಎಣ್ಣೆಹೊಳೆ, ನುಲೇನೂರು… ಮುಂತಾದ ಪ್ರದೇಶಕ್ಕೆ ಚದುರಿದರು. ಕಲಚೂರ್ಯ ರಾಯ ಮುರಾರಿಯನ್ನು ಎದುರಿಸಿ, ಭೀಮಾ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ, ತಡಕೋಡ, ಮೂಗಬಸವ, ಕಾದರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ನಡೆಸಿದರು. ತಮ್ಮ ಧೈರ್ಯ, ಸಾಹಸಗಳಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಣೆ ಮಾಡಿದರು.
ಐದು ವರುಷಗಳ ಹಿಂದೆ ರಾಮದುರ್ಗ ತಾಲೂಕಿನ ಕಲ್ಲೂರಿಗೆ ಹೋದಾಗ ಅಲ್ಲಿ ಕಲ್ಲಿನ ಬಂಡೆಯ ಸಂಧಿಯಲ್ಲಿ ಬರುವ ಜಲ ಅಲ್ಲಿರುವ ಕಲ್ಯಾಣ ಬಸವೇಶ್ವರ ದೇವಸ್ಥಾನ,ಜನರ ನಂಬಿಕೆ ಹೇಳಿಕೆ ಕಲ್ಯಾಣ ಕ್ರಾಂತಿಯ ನಂತರ ಶರಣರು ಕಲ್ಲೂರಿನಲ್ಲಿ ಇದ್ದು ಹೋಗಿದ್ದಾರೆಂದು ತಿಳಿದುಬಂದಿತು. ಕಲ್ಲೂರು ಶರಣರ ಸ್ಮಾರಕಗಳು ಚಾಲುಕ್ಯ ಶೈಲಿಯಲ್ಲಿದ್ದು, ಅಲ್ಲಿ ಮಂದಿರವೊಂದಿದೆ. ಈ ಐತಿಹಾಸಿಕ ಮಂದಿರವು ಮುನೇನಕೊಪ್ಪದಿಂದ ಕೇವಲ ಎರಡು ಕಿ.ಮೀ ಅಂತರದಲ್ಲಿದೆ. ಮುಳ್ಳೂರಿನಲ್ಲಿ ನಮ್ಮ ಜಮೀನು, ಹೊಲ ಇದ್ದು ಬಾಲ್ಯದಿಂದಲೂ ಮೇಲಿಂದ ಮೇಲೆ ಹೊಲಕ್ಕೆ ಹೋಗಿ- ಬರುವಾಗ, ಮುನೇನಕೊಪ್ಪ(ಮುದೇನಕೊಪ್ಪ) ಎಂಬ ಪುಟ್ಟ ಗ್ರಾಮದಲ್ಲಿ ಒಂದು ಬಸವೇಶ್ವರ ದೇವಸ್ಥಾನ, ಒಳಗೆ ಗದ್ದುಗೆ, ಗುಡಿಯ ಆವರಣದಲ್ಲಿಯೇ ಒಂದು ಬಾವಿ ಇರುವುದನ್ನು ಗಮನಿಸುತ್ತಿದ್ದೆ. ಇಲ್ಲೊಬ್ಬ ಶರಣರು ಐಕ್ಯ ಆಗಿರಬಹುದೆಂದು ಶೋಧ ಆರಂಭಿಸಿ, ಆ ಊರಿನ ಗ್ರಾಮಸ್ಥರಲ್ಲಿ ವಿಚಾರಿಸಿದಾಗ, ಒಂದೆರಡು ಕುಲಕರ್ಣಿ ಮನೆತನ ಬಿಟ್ಟರೆ ಊರು ತುಂಬೆಲ್ಲ ಕುರುಬರು ಮತ್ತು ದಲಿತ ಸಮುದಾಯದವರಿರುವುದು ತಿಳಿದು ಬಂದಿತು. ಅತ್ಯಂತ ಹಿರಿಯ ವಯಸ್ಸಿನ ಅಂದಾಜು 89 ವರುಷದ ವಯೋವೃದ್ಧರೊಬ್ಬರು, ಈ ಗುಡಿ ಮತ್ತು ಮುನಿಯನಕೊಪ್ಪ ನಾಮ ವಿಶೇಷಣದ ಬಗ್ಗೆ ಕೆಲವು ಕುತೂಹಲದ ಸಂಗತಿಗಳನ್ನು ಹೇಳಿದರು. ಬಹು ಹಿಂದೆ ಮುನಿ ಅಂದರೆ ಒಬ್ಬ ಜೈನ ಸನ್ಯಾಸಿ ಈ ಊರಲ್ಲಿ ಇದ್ದ ಕಾರಣ ಇದನ್ನು ಮುನೇನಕೊಪ್ಪ ಅಥವಾ ಮುನಿಯನ ಕೊಪ್ಪ ಎಂದು ಕರೆಯುತ್ತಿದ್ದರೆಂದು ನೆನಪಿಸಿಕೊಂಡರು. ಗುಡಿಯೊಳಗಿದ್ದ ಆಳವಾದ ಬಾವಿಯ ಬಗ್ಗೆ ವಿಚಾರಿಸಿದಾಗ, ಅವರು, ಅಲ್ಲಿದ್ದ ಜೈನ ಮುನಿಯು ದಾಹವಾಗಿದ್ದವರಿಗೆ ನೀರನ್ನು ಕೊಡುತ್ತಿದ್ದ ಎಂದು ತಿಳಿಸಿದರು. ಆಗ ನನಗೆ ಮನುಮುನಿ ಗೊಮ್ಮಟದೇವ ಅರವಟ್ಟಿಗೆ ಸೇವೆ ಮಾಡುತ್ತಿರಬಹುದು ಎಂದೆನಿಸಿತು, ಇತ್ತೀಚಿಗೆ ಹೋದಾಗ ಗುಡಿಯ ಒಳಗೆ ಗದ್ದುಗೆ ಇದ್ದ ಕಾರಣ ಆವರಣದೊಳಗಿನ ಬಾವಿಯನ್ನು ಮುಚ್ಚಿದ್ದಾರೆ.
ಮುದೇನಕೊಪ್ಪದ ಸುತ್ತಲೂ 25 ಕಿಮಿ ಅಂತರದಲ್ಲಿ ಇದುವರೆಗೆ ಸುಮಾರು ನಾಲ್ಕು ಶರಣರ ಸಮಾಧಿ ಸ್ಮಾರಕಗಳು ದೊರೆತಿವೆ. ರಾಮದುರ್ಗ ತಾಲೂಕ ಗೊಡಚಿಯಲ್ಲಿರುವ ಮಡಿವಾಳ ಮಾಚಿದೇವರ ಸಮಾಧಿ ಮುನೇನಕೊಪ್ಪದಿಂದ 25 ಕಿ.ಮೀಟರ್ ದೂರದಲ್ಲಿದೆ. ನರಗುಂದ ತಾಲೂಕಿನ ಕೊನೆಯ ಹಳ್ಳಿ ಬೆಳ್ಳೇರಿಯಲ್ಲಿ ಕಂಡು ಹಿಡಿದ ಬಳ್ಳೇಶ ಮಲ್ಲಯ್ಯನ ಸಮಾಧಿಯು (ಜೈನ ಶರಣ) ಮುನೇನಕೊಪ್ಪದಿಂದ 10 ಕಿ.ಮೀ ಅಂತರದಲ್ಲಿದೆ. ಅದೇ ರೀತಿ ರಾಮದುರ್ಗ ತಾಲೂಕ ಕಲಹಾಳದಲ್ಲಿ ಸಮಯಾಚಾರದ ಆಪ್ತಚರ ಮಲ್ಲಿಕಾರ್ಜುನ ಶರಣರ ಸಮಾಧಿ ಇದ್ದು ಇದು ಮುನೇನಕೊಪ್ಪದಿಂದ 9 ಕಿಮೀ ಅಂತರದಲ್ಲಿದೆ. ಈ ಎಲ್ಲ ಕಾರಣಗಳಿಂದ ಇದು ಮನುಮುನಿ ಗೊಮ್ಮಟ ಶರಣರ ಸಮಾಧಿ ಇರಬಹುದೆಂದು ನಿರ್ಧರಿಸಿದೆನು.
(ಆಕರಗಳು: ಸಂಕೀರ್ಣ ವಚನ ಸಂಪುಟ 3, ಕಣಜ, ಕ್ಷೇತ್ರಕಾರ್ಯ)
ಸೂಜಿ ಕಾಯಕದ ರಾಮಿತಂದೆ
ಅಂಕಿತನಾಮ: ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗ
ಕಾಲ: ಹನ್ನೆರಡನೆಯ ಶತಮಾನ
ದೊರಕಿರುವ ವಚನಗಳು: 10
ತಂದೆ-ತಾಯಿ ಮತ್ತು ಜನ್ಮಸ್ಥಳದ ವಿವರಗಳು ಲಭ್ಯವಾಗಿಲ್ಲ.
ಸಿಂಪಿಗ ವೃತ್ತಿಯು ಸ್ವತಂತ್ರ ಕಾಯಕವಾಗಿರುವಂತೆ, ಕೌಶಲ್ಯದ ಕಾಯಕವೂ ಹೌದು. ಸಿಂಪಿಗನನ್ನ ಚಿಪ್ಪಿಗ, ದರ್ಜಿ ಎಂದು ಕರೆಯುವ ವಾಡಿಕೆಯಿದೆ. ಶರಣರ ಕಾಲದಲ್ಲಿ ಇವರನ್ನು 1139ರಲ್ಲಿ ಸಿಕ್ಕ ಶಾಸನವೊಂದರಲ್ಲಿ ಚಿಪ್ಪಿಗರೆಂದು ಪ್ರಸ್ತಾಪಿಸಲಾಗಿದೆ. ಆ ಕಾಲದಲ್ಲಿ ಬಟ್ಟೆ ಹೊಲೆಯುವ ಯಂತ್ರಗಳು ಇರಲಿಲ್ಲವಾದ್ದರಿಂದ ಸೂಜಿ ದಾರದ ಮೂಲಕ ಅಂಗಿ, ನಿಲುವಂಗಿ, ಕುಬುಸ ಹೊಲೆದು ಕೊಡುತ್ತಿದ್ದರು. ಮಕ್ಕಳ ಕುಲಾಯಿ, ಟೋಪಿ, ಹೆಣ್ಣುಮಕ್ಕಳ ಸೀರೆಗಳಿಗೆ ಜರಿ ಹಚ್ಚಿಕೊಡುವುದು, ಸೀರೆಗೆ ಕಸೂತಿ ಹಾಕಿಕೊಡುವುದು- ಇಲ್ಲೆಲ್ಲಾ ತಮ್ಮ ಕೌಶಲ್ಯ ತೋರಿಸುತ್ತಿದ್ದ ಕಾಯಕ ಸಿಂಪಿಗರದು. ಸೂಜಿ ಕಾಯಕದ ಮಾರಿತಂದೆ, ಶಿವದಾಸಿಮಯ್ಯ ಮೊದಲಾದ ಶರಣರು ಸಿಂಪಿಗ ಕಾಯಕ ಮಾಡುತ್ತಿದ್ದರೆಂದು ತಿಳಿದು ಬರುತ್ತದೆ. ಇದು ಕುಲದ ಮೂಲವಲ್ಲ. ಬ್ರಾಹ್ಮಣರಾಗಿದ್ದ ಶಿವ ದಾಸಿಮಯ್ಯ ಬಟ್ಟೆ ಹೊಲೆಯುತ್ತಿದ್ದರು. ಹೀಗಾಗಿ ಅವರಿಗೆ ಶಿವ ಸಿಂಪಿಗರೆಂದರು. ಅವರ ಅಣ್ಣ ಶಂಕರ ದಾಸಿಮಯ್ಯ ಬಟ್ಟೆಗೆ ಬಣ್ಣ ಹಾಕುತ್ತಿದ್ದು, ಅವರನ್ನು ಬಣಗಾರ ಎನ್ನುತ್ತಾರೆ, ಕಾಯಕಾಧಾರಿತವಾಗಿದ್ದ ಇವೆಲ್ಲ ಕುಶಲಕಲೆಗಳು ಇಂದು ಲಿಂಗಾಯತ ಧರ್ಮದಲ್ಲಿ ಬರುವ ಒಳಪಂಗಡಗಳು.
“ಸೂಜಿಯ ಹಿನ್ನಿಯಲ್ಲಿ ಮುಗಿಲ ತೋರದ ದಾರ ಹಿಡಿಯಿತ್ತು
ಸೂಜಿಯ ಮೊನೆ ಹಳೆಯ ಅರಿವೆಯ ಚುಚ್ಚಲಾರದು…”
-ಸುಂಕದ ಬಂಕಣ್ಣ (ಸ.ವ.ಸಂ.9, ವ-695)
“ಸೂಜಿಯ ಪೋಣಿಸಿ ದಾರವ ಮರೆದಡೆ
ಹೊಲಿಗೆ ಬಿಚ್ಚಿತ್ತು ಗುಹೇಶ್ವರಾ”
-ಅಲ್ಲಮಪ್ರಭು (ಸ.ವ.ಸಂ.2, ವ-1374)
ಶರಣರ ಈ ಎರಡು ವಚನಗಳಲ್ಲಿ ಸೂಜಿಕಾಯಕದ ಪ್ರಸ್ತಾಪವಿದ್ದು, ಅನುಭಾವದ ಪರಿಭಾಷೆಯಲ್ಲಿ ವಿಸ್ತಾರ ಪಡೆಯುತ್ತವೆ. 12ನೇ ಶತಮಾನಕ್ಕೆ ಸೂಜಿಕಾಯಕ ದೊಡ್ಡದಾಗಿ ಬೆಳೆದಿತ್ತೆಂದು ಭಾವಿಸಬಹುದು. “ಕಾಲ ಕುಪ್ಪಸವ ಮೇಲಾಗಿ ಹೊಲಿದೆ, ಅಂಗದ ಕುಪ್ಪಸವ ಮಂಡೆಗೆ ಹೊಲಿದೆ (ವ-721)” ಎಂದು ಹೇಳಿರುವ ಸೂಜಿಕಾಯಕದ ರಾಮಿತಂದೆಯು “ತಲೆಗೆ ಮೂರು ಚಿಪ್ಪು, ಅಂಗಕ್ಕೆ ಆರು ಚಿಪ್ಪು, ಮಿಕ್ಕಾದ ಸರ್ವಾಂಗಕ್ಕೆಲ್ಲಕ್ಕೂ ಒಂದೆ ಚಿಪ್ಪಿನ ಕುಪ್ಪಸ (ವ-722)” ಎಂದು ಕುಪ್ಪಸದ ರೂಪಕದ ಮೂಲಕ ತಮ್ಮ ಅನುಭಾವಿಕ ನೆಲೆಯನ್ನು ಸೂಚಿಸಿದ್ದಾರೆ.
ಮೊನೆಮೂರು, ಹಿನ್ನೆ ಒಂದು
ಆ ಸೂಜಿಯಲ್ಲಿ ಹೊಲಿದಿಹೆನೆಂದಡೆ
ಕುಪ್ಪಸಕ್ಕೆ ಚಿಪ್ಪು ಒಡಗೂಡವು ನೋಡಾ.
ಮೊನೆಯೊಂದು ಹಿನ್ನೆ ಮೂರಾಗಿ ಹೊಲಿದಡೆ
ಹಿನ್ನೆಯ ಮೂರುದಾರ ಮೊನೆಯನಾಳದಲ್ಲಿ ಅಡಗಿದವು ನೋಡಾ…
-ಸೂಜಿಕಾಯಕದ ರಾಮಿತಂದೆ (ಸ.ವ.ಸಂ.9, ವ-725)
ಸೂಜಿ ಕಾಯಕದ ಮಾರಿತಂದೆ ತಮ್ಮ ಜೀವನಾನುಭವವನ್ನು, ಕಾಯಕದ ಸಾಮಗ್ರಿಗಳನ್ನು, ಕೌಶಲ್ಯವನ್ನು ಪಾರಿಭಾಷಿಕ ಪದಗಳಲ್ಲಿ ಬಳಸಿ ಅನುಪಮವಾದ ವಚನಗಳನ್ನು ರಚಿಸಿದ್ದಾರೆ. ಅವರ ವಚನಾಂಕಿತ ನೋಡಿದರೆ ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವ ಒಡಗೂಡಬೇಕು ಎಂಬ ಅಂಶವು ಇವರು ಮೂಲದಲ್ಲಿ ಸೊನ್ನಲಿಗೆ ಸಿದ್ಧರಾಮರ ಶಿಷ್ಯ ವರ್ಗದವರು ಇರಬಹುದೆಂದು ಹೇಳಲಾಗುತ್ತದೆ. ಈಗಲೂ ಸೊಲ್ಲಾಪುರದಲ್ಲಿ ಸೂಜಿಕಾಯಕದವರನ್ನು ಶಿವ ಸಿಂಪಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡುತ್ತೇವೆ. ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮ ಕಾಯಕದ ಸೊಬಗನ್ನು ಪರಿಚಯಿಸಿದ ಸರಳ ಬದುಕಿನ ಕಾಯಕಯೋಗಿ ಶರಣ ಸೂಜಿ ಕಾಯಕದ ರಾಮಿತಂದೆ.
(ಆಕರಗಳು: ಶರಣರ ಕೌಶಲ್ಯಮೂಲ ಕಾಯಕಗಳು- ಬುಕ್ ಬ್ರಹ್ಮ-ಡಾ ಬಸವರಾಜ ಸಬರದ, ಕಣಜ, ವಚನ ಸಂಪುಟ)
ಶಿವಯೋಗ ಸಾಧಕ ಹಡಪದ ರೇಚಣ್ಣ
ಕಾಲ -ಹನ್ನೆರಡನೆಯ ಬಸವ ಸಮಕಾಲೀನ ಶರಣರು
ಒಟ್ಟು -ವಚನ – 9
ಅಂಕಿತ -ನಿಃಕಳಂಕ ಕೂಡಲ ಚೆನ್ನ ಸಂಗಮದೇವ
ಕಾಯಕ: ಹಡಪದ (ಸಂಚಿ) ಕಾಯಕ (ತಾಂಬೂಲಕರಂಡ)
ಇವನ ಕುಟುಂಬ ಊರು- ವಿವರ ಲಭ್ಯವಾಗಿಲ್ಲ
ಲಿಂಗೈಕ್ಯ -ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಂಕಲಗಿ
ಮಹಾಮನೆಯಲ್ಲಿ ಪ್ರಸಾದವನ್ನು ಹಂಚುವುದು, ಪ್ರಸಾದವಾದ ಮೇಲೆ ಎಲೆ ಅಡಿಕೆ ತಾಂಬೂಲವನ್ನು ಹಂಚುವುದು ಹಡಪದ ರೇಚಣ್ಣನವರ ಕಾಯಕವಾಗಿತ್ತು.
ಎನ್ನಾಧಾರಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಬಸವಣ್ಣನು.
ಎನ್ನ ಸ್ವಾದಿಷ್ಠಾನಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಚೆನ್ನಬಸವಣ್ಣನು.
ಎನ್ನ ಮಣಿಪೂರಕಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ
ಘಟ್ಟಿವಾಳ ಮದ್ದಯ್ಯನು.
ಎನ್ನ ಅನಾಹತಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಸಿದ್ಧರಾಮಯ್ಯನು.
ಎನ್ನ ವಿಶುದ್ಧಿಚಕ್ರಸ್ಥಾನದಲ್ಲಿಸ ಮೂರ್ತಿಗೊಂಡನಯ್ಯಾ ಮರುಳಶಂಕರದೇವರು.
ಎನ್ನ ಆಜ್ಞಾಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಪ್ರಭುದೇವರು.
ಆಧಾರಕ್ಕಾಚಾರಲಿಂಗವಾದಾತ ಬಸವಣ್ಣ.
ಸ್ವಾಧಿಷ್ಠಾನಕ್ಕೆ ಗುರುಲಿಂಗವಾದಾತ ಚೆನ್ನಬಸವಣ್ಣ.
ಮಣಿಪೂರಕಕ್ಕೆ ಶಿವಲಿಂಗವಾದಾತ ಘಟ್ಟಿವಾಳ ಮದ್ದಯ್ಯ.
ಅನಾಹತಕ್ಕೆ ಜಂಗಮಲಿಂಗವಾದಾತ ಸಿದ್ಧರಾಮಯ್ಯ.
ವಿಶುದ್ಧಿಗೆ ಪ್ರಸಾದಲಿಂಗವಾದಾತ ಮರುಳಶಂಕರದೇವರು.
ಆಜ್ಞೆಗೆ ಮಹಾಲಿಂಗವಾದಾತ ಪ್ರಭುದೇವರು.
ನಿಃಕಳಂಕ ಕೂಡಲ [ಚೆನ್ನ]ಸಂಗಮದೇವಾ,
ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
ಹಡಪದ ರೇಚಣ್ಣನ ಹೆಸರಿನ ಮುಂದೆ ಇರುವ ಹಡಪದ – ಅಡಪ -ಸಂಚಿ- ಎಲೆ ಅಡಿಕೆ ತಾಂಬೂಲ ಸಂಗ್ರಹಿಸಿಡುವ ಸಾಧನ ಕಟ್ಟಿಗೆಯ ಡಬ್ಬಿ. ಇವರೊಬ್ಬ ಅನುಭವಿ ಸಾಧಕ, ಇವರ ವಚನಾಂಕಿತವನ್ನು ಅವಲೋಕಿಸಿದಾಗ, ಚೆನ್ನಬಸವಣ್ಣನವರಿಂದ ಲಿಂಗ ದೀಕ್ಷೆ ಪಡೆದು ಪ್ರಭುದೇವ ಬಸವಣ್ಣ ಘಟ್ಟಿವಾಳಯ್ಯ ಮರುಳಶಂಕರ ದೇವರ ಜೊತೆಗೆ ಲಿಂಗಾಂಗ ಸಮನ್ವಯದ ಸಾಧನೆಯಲ್ಲಿ ಚರ್ಚೆಗಳನ್ನು ನಡೆಸಿರುವುದು ಇವರ ವಚನಗಳಿಂದ ಗೊತ್ತಾಗುತ್ತದೆ. ಯೋಗ ಸಾಧನೆಯಲ್ಲಿ ಶಕ್ತಿ ಕೇಂದ್ರಗಳೆಂದು ಗುರುತಿಸಿ, ಚಕ್ರಗಳ ಬಗ್ಗೆ ಮಾತನಾಡುವ ಮಹರ್ಷಿಗಳ, ಯೋಗಿಗಳ ಚಕ್ರಗಳ ವ್ಯಾಖ್ಯಾನಕ್ಕೆ ಪ್ರತಿಯಾಗಿ ಶರಣ ಸಮ್ಮತವಾದ ಚಕ್ರಸ್ಥಾನಗಳನ್ನು ರೇಚಣ್ಣನವರು ಈ ವಚನದಲ್ಲಿ ದಾಖಲಿಸಿದ್ದಾರೆ.
ಇಡೀ ಶರೀರಕ್ಕೆ ಮೂಲಾಧಾರವಾದ ಚಕ್ರದಲ್ಲಿ ನೆಲೆಗೊಂಡವರು ಬಸವಣ್ಣನವರು. ಆಧಾರಕ್ಕಾಚಾರಲಿಂಗವಾದಾತ ಬಸವಣ್ಣ. ಸ್ವಾಧಿಷ್ಠಾನಕ್ಕೆ ಗುರುಲಿಂಗವಾದಾತ ಚೆನ್ನಬಸವಣ್ಣ. ಅಂದರೆ ಸ್ವಾಧಿಷ್ಠಾನವು ಅರಿವಿನ ಸಂಕೇತ. ಅಂತಹ ಅರಿವಿನ ಗುರುತು ಚೆನ್ನಬಸವಣ್ಣ. ಮಣಿಪೂರವನ್ನು ಶಿವಯೋಗ ಸಾಧನೆಯ ಕೇಂದ್ರ ಎನ್ನುವುದಾದರೆ ಅದನ್ನು ಶಿವಲಿಂಗವೆಂದಾತ ಘಟ್ಟಿವಾಳ ಮದ್ದಯ್ಯ. ಮರುಳಶಂಕರದೇವರು, ಇಡೀ ಶರೀರ ಮನಸ್ಸು ಪ್ರಾಣವನ್ನು ಎಲ್ಲ ಹಂತದಲ್ಲೂ ಶುದ್ಧೀಕರಿಸುವ ವಿಶುದ್ಧಿ ಚಕ್ರದಲ್ಲಿ ನೆಲೆಗೊಂಡು ಪ್ರಸಾದಲಿಂಗವಾದವರು ಮರುಳ ಶಂಕರ ದೇವರು. ಜಂಗಮಲಿಂಗವಾದಾತ ಸಿದ್ಧರಾಮಯ್ಯ, ಅನಾಹತ ಚಕ್ರದಿಂದ ಉದ್ಭವಿಸುವ ಮತ್ತೊಂದು ಶಕ್ತಿ ಸಂಕಲ್ಪ ಶಕ್ತಿ, ಬಯಕೆಗಳನ್ನು ಪೂರೈಸುವ ಶಕ್ತಿ ಅದನ್ನು ಸಮಷ್ಟಿಗೆ ಉಣಬಡಿಸುವ ಕಾರ್ಯವನ್ನು ಮಾಡಿದವರು ಸಿದ್ಧರಾಮ, ವ್ಯಕ್ತಿ ಸಮಷ್ಟಿಯ ಸಂಬಂಧವನ್ನು ಸಬಲಗೊಳಿಸಿದ ಸಿದ್ಧರು. ಆಜ್ಞಾಚಕ್ರದಲ್ಲಿ ಪ್ರತಿಷ್ಠಗೊಂಡ ಮಹಾಗುರು ಅಲ್ಲಮಪ್ರಭುಗಳು. ಶರಣರ ಅರಿವಿನ ಹೆಜ್ಜೆಗಳಲ್ಲಿ ತಮ್ಮ ಬದುಕನ್ನು ನಡೆಸಿದವರು ಹಡಪದ ರೇಚಣ್ಣ. ಕಲ್ಯಾಣ ಕ್ರಾಂತಿಯ ನಂತರದಲ್ಲಿ ಹಡಪದ ರೇಚಣ್ಣನವರು ಶರಣರ ತಂಡದಲ್ಲಿ ವಚನಗಳ ಕಟ್ಟನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸೋವಿದೇವನ ಸೈನಿಕರ ಜೊತೆಗೆ ಸೆಣಸಾಡಿ, ಬೆಳಗಾವಿ ಜಿಲ್ಲೆಯ ಅಂಕಲಗಿಯಲ್ಲಿ ಐಕ್ಯರಾದರು.
(ಆಕರಗಳು: ಕಣಜ, ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಕ್ರಗಳು (ಯೋಗದಲ್ಲಿ), ವಚನ ಸಂಪುಟ)
Comments 8
Vishwanath Patil
Feb 7, 2025ಆದ್ವಿತಿಯ ಶರಣರು ಅತ್ಯುತ್ತಮ ಲೇಖನ
ಜಯದೇವಪ್ಪ ದಳವಾಯಿ
Feb 17, 2025ಶರಣರನ್ನು ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇರಬೇಕು. ಅಂತಹ ಅಪರೂಪದ ಕೆಲಸ ಮಾಡುತ್ತಿರುವ ಡಾ.ಶಶಿಕಾಂತ ಪಟ್ಟಣ ಅವರಿಗೆ ಶರಣು🙏🏽
ಸರಸ್ವತಿ ಮಾವೂರು
Feb 22, 2025ಶರಣರ ಕುರುಹುಗಳನ್ನು ಹೆಕ್ಕಿ ತೆಗೆಯುವ ಕಾರ್ಯ, ಕರ್ನಾಟಕ ಮಾತ್ರವಲ್ಲ, ನೆರೆಯ ರಾಜ್ಯಗಳಲ್ಲಿ ನಡೆದರೆ ಅವರ ನಿಸ್ವಾರ್ಥ ಜೀವನಕ್ಕೆ ಶರಣು ಸಲ್ಲಿಸಿದಂತಾಗುತ್ತದೆ.
ಮಹಾದೇವ ದೇವರಗುಡ್ಡ
Feb 23, 2025ತಮ್ಮ ವೈಯಕ್ತಿಕ ಬದುಕನ್ನು ಎಲ್ಲಿಯೂ ದಾಖಲಿಸದ ಶರಣರು ನಿಜಕ್ಕೂ ಇತಿಹಾಸದಲ್ಲಿ ಅಪರೂಪದಲ್ಲೇ ಅಪರೂಪದ ಮಹಾಪುರುಷರು. ಅವರು ನಡೆದ, ಬಾಳಿ ಬದುಕಿದ ನಮ್ಮ ಕನ್ನಡ ನಾಡೇ ನಮಗೆ ಪುಣ್ಯ ಭೂಮಿ.
ಪ್ರಭು ಬಾಣಾವರ
Feb 26, 2025ಶರಣರ ಪರಿಚಯ ಬಹಳ ಕುತೂಹಲಕಾರಿಯಾಗಿದೆ. ಹೀಗೆ ಅನ್ವೇಷಕ ಗುಣದಿಂದ ಹೊರಟರೆ, ಪ್ರತಿ ತಾಲ್ಲೂಕು, ಜಿಲ್ಲೆಗಳಲ್ಲಿ ಶರಣರ ಕುರುಹುಗಳನ್ನು ದಕ್ಕಿಸಿಕೊಳ್ಳಬಹುದು.
ಶರತ್ ಬಾಗಲಾಡಿ
Mar 3, 2025ಮನುಮುನಿ ಗೊಮ್ಮಟ ಶರಣರ ಸಮಾಧಿಯನ್ನು ನೀವು ಪತ್ತೆ ಹಚ್ಚಿದ ಕತೆ ಕುತೂಹಲಕಾರಿಯಾಗಿದೆ.
ಜೆ.ಸಿ. ಚಂದ್ರಯ್ಯ
Mar 3, 2025ಹಡಪದ ಅಪ್ಪಣ್ಣನವರ ಬಗ್ಗೆ ಕೇಳಿದ್ದೆ, ಓದಿದ್ದೆ. ಆದರೆ ಹಡಪದ ರೇಚಣ್ಣನವರ ಹೆಸರು ಇದೇ ಮೊದಲ ಸಲ ಕೇಳಿದ್ದು. ಒಂದೊಂದು ಚಕ್ರಗಳಲ್ಲಿ ಒಬ್ಬೊಬ್ಬ ಶರಣರನ್ನು ಇಂಬಿಟ್ಟುಕೊಂಡ ಅವರ ವಚನ ಬಹಳ ಅರ್ಥಗರ್ಭಿತವಾಗಿದೆ.
ಗುರುಸಿದ್ದ ತಾತಪ್ಪ
Mar 4, 2025ಕಾಯಕ ಜೀವಿಗಳಾದ ಶರಣರು ತಮ್ಮ ವಚನಗಳಲ್ಲಿ ಅವರವರ ಕಾಯಕದ ಸಾಮಗ್ರಿಗಳನ್ನು ಬಳಸಿರುವುದು ಅವರ ಕಾಯಕ ನಿಷ್ಠೆಯನ್ನು ತೋರಿಸುತ್ತದೆ. ಅವರ ಅನುಭಾವಕ್ಕೆ ಬೇರೆ ಗ್ರಂಥಗಳ ಶಬ್ದ ಸಾಮಗ್ರಿಗಳೇ ಬೇಕಿಲ್ಲ ಎನ್ನುವುದು ಎಂತಹ ಅಚ್ಚರಿ!