ಅಗ್ನಿಯ ಸುಡುವಲ್ಲಿ…
ವಚನಗಳನ್ನು ಓದುತ್ತಿದ್ದರೆ ಅನುಭಾವದ ಅಸಂಖ್ಯ ಧ್ವನಿಗಳು ನಮ್ಮನ್ನು ಮುಟ್ಟಿದ ಹಾಗೆ, ತಟ್ಟಿದ ಹಾಗೆ, ಎಚ್ಚರಿಸಿದ ಹಾಗೆ. ಅದೊಂದು ಮೆಲ್ಲನೆ ಅಂತರಾತ್ಮ ಅರಳಿಸುವ ಪ್ರಕ್ರಿಯೆ. ನಮ್ಮನ್ನು ನಮಗೇ ಪರಿಚಯಿಸಬಲ್ಲ ಕೈಗನ್ನಡಿ. ಕಾಲಾತೀತವಾಗಿ ನಿಂತು ದಾರಿ ತೋರಬಲ್ಲ ದಿಕ್ಸೂಚಿ. ಆಧುನಿಕ ಮನಸ್ಸುಗಳಿಗೂ ಸರಿಯೆನಿಸುವ ವೈಚಾರಿಕ ಪ್ರಜ್ಞೆ. ಏಕಕಾಲಕ್ಕೆ ಅತ್ಯಂತ ಸರಳವಾಗಿಯೂ, ಅಷ್ಟೇ ಗಹನವಾಗಿಯೂ ತನ್ನ ಪದರುಗಳನ್ನು ಬಿಚ್ಚಿಕೊಳ್ಳುತ್ತಾ ಹೋಗುವ ವಚನಗಳ ಪರಿಯೇ ಅನನ್ಯ.
ಯೋಗದ ಹೊಲಬ ನೀನೆತ್ತ ಬಲ್ಲೆ? ಎಂದು ಪ್ರಶ್ನಿಸುವ ಅಲ್ಲಮಪ್ರಭುದೇವರ ವಚನ ನನ್ನ ಮನಸ್ಸನ್ನು ತೀವ್ರವಾಗಿ ಆಕರ್ಷಿಸಿದ ವಚನಗಳಲ್ಲೊಂದು. ಈ ವಚನದ ಗಾಯನವನ್ನು ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.
ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ
ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ
ಯೋಗದ ಹೊಲಬ ನೀನೆತ್ತ ಬಲ್ಲೆ?
ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು,
ಮದ ಮತ್ಸರ ಬೇಡ. ಹೊದಕುಳಿಗೊಳಬೇಡ.
ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ.
ಯೋಗದ ಅರ್ಥ ಅತ್ಯಂತ ವಿಶಾಲವಾದುದು. ಆದರೆ ನಾವಿಂದು ಯೋಗ ಎನ್ನುವ ಪದವನ್ನು ಕೆಲವು ನಿರ್ದಿಷ್ಟ ಆಸನಗಳು ಮತ್ತು ಪ್ರಾಣಾಯಾಮ ಎನ್ನುವ ಮಟ್ಟಕ್ಕೆ ಇಳಿಸಿ ಬಿಟ್ಟಿದ್ದೇವೆ. ಉಸಿರು ನಿಯಂತ್ರಣದ ಇಂತಹ ಯೋಗಾಸನಗಳಲ್ಲಿ ದೇಹಕ್ಕೆ ಲಾಭವಿದೆ, ಮನಸ್ಸಿಗೆ ಉಲ್ಲಾಸವೂ ಸಿಗುತ್ತದೆ. ಆದರೆ ಅದೇ ಯೋಗದ ಉದ್ದೇಶವಲ್ಲ. ಪಕ್ಕದ ರಸ್ತೆಯಲ್ಲಿರುವ ಶೆಟ್ಟರ ಅಂಗಡಿಗೆ ಹೋಗಲು ವಿಮಾನ ಇಟ್ಟುಕೊಳ್ಳಬೇಕು ಎನ್ನುವಷ್ಟೇ ಆಭಾಸ. ಯೋಗ ಸಾಧನೆ ಎನ್ನುವುದು ಮೂಗಿನ ತುದಿಯಲ್ಲಿ ಆರಂಭವಾಗುವುದಿಲ್ಲ. ಉಸಿರಾಟದ ಗತಿ ಅದರ ಒಂದು ಪ್ರಾಥಮಿಕ ತಿಳಿವಳಿಕೆ ಮಾತ್ರ. ಯೋಗ ಎಂದರೆ ನಮ್ಮೊಳಗೇ ಜರುಗಬೇಕಾದ ತಾದಾತ್ಮ್ಯ. ಮನದಲ್ಲಿ ನಡೆಯುವ ನಿರಂತರ ಪ್ರಯೋಗ. ಅಭ್ಯಾಸದಿಂದ ಇದು ನಡೆಯುವಂಥದಲ್ಲ. ಆಸನಗಳನ್ನು ದಿನ ನಿತ್ಯ ಅಭ್ಯಾಸ ಮಾಡಿ ಕರಗತ ಮಾಡಿಕೊಳ್ಳಬಹುದು. ಆದರೆ ಯೋಗವನ್ನಲ್ಲ. ಇದು ಆಂತರ್ಯದಲ್ಲಿ ಸಹಜವಾಗಿ ಸಾಧ್ಯವಾಗಬೇಕಾದ ಬದಲಾವಣೆ. ಆದ್ದರಿಂದ ಯೋಗಾಭ್ಯಾಸ ಮಾಡುತ್ತಿದ್ದೇವೆ ಎನ್ನುವವರನ್ನು ಕಂಡು-
ಯೋಗಾಭ್ಯಾಸ ಯೋಗಭ್ಯಾಸವೆಂದೆಂಬಿರಿ
ಯೋಗವು ಅಭ್ಯಾಸವೆ? ಅಭ್ಯಾಸವು ಯೋಗವೆ ಅಯ್ಯಾ?
ಯೋಗವ ನುಡಿವರೆ ಅಯ್ಯಾ?… ಎಂದು ಸಿಡಿದು ಹೇಳುತ್ತಾರೆ ಉರಿಲಿಂಗಪೆದ್ದಿ ಶರಣರು.
ಮನಸ್ಸಿನ ಸಂಕೀರ್ಣತೆಯನ್ನು, ವ್ಯಾಪ್ತಿಯನ್ನು, ಅಗಾಧ ಶಕ್ತಿಯನ್ನು ಅರಿಯಲು ನಡೆಸಿದ ಪ್ರಯೋಗಗಳೇ ಯೋಗ ಮಾರ್ಗಗಳು. ಕರ್ಮಯೋಗ, ರಾಜಯೋಗ, ಭಕ್ತಿಯೋಗ, ಜ್ಞಾನ ಯೋಗ, ಹಠಯೋಗ, ಲಯ ಯೋಗ, ಕುಂಡಲಿನೀ ಯೋಗ, ಜಪ ಯೋಗ… ಹೀಗೆ ಯೋಗಗಳಲ್ಲಿ ಹಲವಾರು ದಾರಿಗಳಿವೆ. ಶರೀರದ ನಾಡಿ, ಚಕ್ರಗಳನ್ನು ಆಧರಿಸಿ ಯೋಗ ಸಾಧನೆಯ ಕ್ರಮಗಳು ಹುಟ್ಟಿಕೊಂಡಿವೆ. ಕೆಲವನ್ನು ಸಂಸಾರಸ್ಥರು ಮಾಡಕೂಡದು, ಕೆಲವು ಸಾಧನೆಗಳು ಮಹಿಳೆಯರಿಗೆ ನಿಷಿದ್ಧ, ಗುರುವಿನ ಮಾರ್ಗದರ್ಶನವಿಲ್ಲದೆ ಕೆಲವನ್ನು ಮಾಡಿದರೆ ಅಪಾಯ, ಇನ್ನೂ ಕೆಲವು ವಿಶಿಷ್ಟ ಸಿದ್ಧಿಗಳಿಗಾಗಿ ಕಠಿಣ ಹಾದಿ ತುಳಿಸುವಂಥವು … ಹೀಗೆ ಯೋಗಗಳ ಸುತ್ತ ನಿಗೂಢತೆಯ ಹುತ್ತಗಳೂ ಬೆಳೆದು ಬಂದಿವೆ. ಯೋಗದಿಂದ ಲಭಿಸಬಹುದಾದ ಅಣಿಮಾದಿ ಅಷ್ಟಸಿದ್ಧಿಗಳನ್ನು, ತಾಂತ್ರಿಕ ಶಕ್ತಿಗಳನ್ನು ಶರಣರು ತೃಣವಾಗಿ ಕಂಡರು. ಇದು ಯೋಗದ ದುರುಪಯೋಗ, ಇಂಥ ಕ್ಷುಲ್ಲಕ ವಿಷಯಗಳಿಗೆ ಮನಸೋತು ಅಡ್ಡ ಹಾದಿ ಹಿಡಿವವರಿಗೆ ಬಯಲ ಆಹ್ಲಾದ ದೊರಕಲಾರದು ಎಂಬುದು ಅವರ ಅಭಿಮತ. ಆದ್ದರಿಂದ ಶರಣರು ಕಂಡುಕೊಂಡ ಯೋಗ ಇವೆಲ್ಲಕ್ಕಿಂತಲೂ ಭಿನ್ನವಾದದ್ದು. ಅದು ಅನುಭಾವದ ಷಟಸ್ಥಲ ಯೋಗ ಮಾರ್ಗ. ಇದನ್ನು ಶಿವಯೋಗ ಎಂದೂ ಕರೆಯುತ್ತಾರೆ. ಅಲ್ಲಮಪ್ರಭುದೇವರು ಮೇಲಿನ ವಚನದಲ್ಲಿ ಹೇಳುತ್ತಿರುವುದು ಆ ಮಹಾಮಾರ್ಗದ ಕುರಿತು.
ಆಧ್ಯಾತ್ಮಿಕ ಪರಂಪರೆಗೆ ಶರಣರ ವಿಶಿಷ್ಟ ಕೊಡುಗೆ ಈ ಷಟಸ್ಥಲ ಯೋಗ ಮಾರ್ಗ. ಇದು ನಿರ್ಮಲವಾದ, ಸುಂದರ ಭಾವ ಪ್ರಯಾಣ. ದೇವರನ್ನು ದೇಹದಲ್ಲೇ ಅನುಭವಿಸುವ ಅಪೂರ್ವ ಸಾಧನಾ ಕ್ರಮ. ಜೀವವು ಅನಂತತೆಯೊಂದಿಗಿನ ತನ್ನ ನಿಜವಾದ ಅಸ್ತಿತ್ವವನ್ನು ಅನುಭವಿಸಲು ಸಾಧ್ಯವಾಗುವ ಸಿದ್ಧಿಯ ನೆಲೆ. ಉದಾತ್ತವಾಗಿ ಬದುಕುವ ಕಲೆ. ಉನ್ನತ ಮೌಲ್ಯಗಳ ಸೆಲೆ. ಬಗೆಬಗೆಯ ಕಾಯಕದಲ್ಲಿರುವವರು, ವಿಭಿನ್ನ ಮನೋಧರ್ಮದವರು, ಎಲ್ಲಾ ವಯೋಮಾನದವರು, ಬಹುಪಾಲು ಸಂಸಾರಸ್ಥರು, ಅಕ್ಷರಸ್ಥರು- ಅನಕ್ಷರಸ್ಥರು… ಹೀಗೆ ಯಾವ ಬೇಧ ಭಾವವಿಲ್ಲದೆ ಎಲ್ಲರಿಗೂ ಅನುವಾಗುವಂತೆ ವಿವಿಧ ಹಂತಗಳಲ್ಲಿ ಈ ಯೋಗವನ್ನು ರೂಪಿಸಲಾಗಿದೆ. ಸ್ತ್ರೀ- ಪುರುಷರಿಬ್ಬರೂ ಯಾವುದೇ ತಾರತಮ್ಯವಿಲ್ಲದೆ ಈ ಪಥದಲ್ಲಿ ಸಾಗಲು ಮುಕ್ತ ಅವಕಾಶವಿದೆ. ಅನೇಕರು ಈ ಮಾರ್ಗವನ್ನು ಹಿಡಿದು ಯೋಗದ ಔನ್ನತ್ಯಕ್ಕೇರಿದರು. ಮಹಾನ್ ಶರಣರಾದರು. ಸಿದ್ಧರಾಮೇಶ್ವರರು ಇದನ್ನು ಹೀಗೆ ಸ್ಪಷ್ಟವಾಗಿ ವಿಶದ ಪಡಿಸಿದ್ದಾರೆ:
ಅರಿವೆಯುಳ್ಳುದೇ ಆಧಾರ, ಅನಾಹತ ಕೂಡಿಪ್ಪುದೇ ಸ್ವಾದಿಷ್ಟಾನ, ಮಣಿಯ ಬೆಳಗಿನಲ್ಲಿಪ್ಪುದೇ ಮಣಿಪೂರಕ, ಆಶೆ ಇಲ್ಲದುದೇ ಅನಾಹತ, ಅಲ್ಲಅಹುದು ಎಂಬುದನತಿಗಳೆದಿಪ್ಪುದೆ ವಿಶುದ್ಧಿ, ಸರ್ವಜೀವಂಗಳಲ್ಲಿ ದಯೆಯುಳ್ಳುದೇ ಆಜ್ಞೆ. ಇಂತಿಪ್ಪುದೀಗ ಶಿವಯೋಗ…
ಇದು ದೈಹಿಕ ದಂಡನೆಯ ಯೋಗ ಸಾಧನೆಯಲ್ಲ. ಕಂದಮೂಲ ಆಹಾರ ಸೇವನೆಯಿಂದ ಕೃಶಗೊಂಡ ಋಷಿಮುನಿಗಳ ಕಠಿಣ ಕಟ್ಟುಪಾಡುಗಳು ಇಲ್ಲಿಲ್ಲ. ಇಂದ್ರಿಯ ಆಕರ್ಷಣೆಗಳಿಗೆ ಹೆದರಿ, ಗಿರಿ ಗುಹೆಗಳನ್ನು ಸೇರಿದ ಸಾಧು ಸಂತರ ನಿರ್ಬಂಧಿತ ನಿಯಮಗಳೂ ಬೇಕಾಗಿಲ್ಲ. ಕರ್ಮಠವೆನಿಸುವ ಶಾಸ್ತ್ರ- ಸಂಪ್ರದಾಯಗಳಾಗಲಿ, ಆಡಂಬರದ ಪೂಜಾವಿಧಿಗಳಾಗಲಿ, ಭಕ್ತಿಯ ಭಾವುಕ ಪ್ರದರ್ಶನಕ್ಕಾಗಲಿ ಅವಕಾಶವೇ ಇಲ್ಲ. ಒಟ್ಟಾರೆ ಜೀವ ವಿರೋಧಿ ಮತ್ತು ಜೀವನ ವಿರೋಧಿ ಧೋರಣೆಗಳಿಗೆ ಇಲ್ಲಿ ಮನ್ನಣೆಯೇ ಇಲ್ಲ. ಅಂತರಂಗ ಶುದ್ಧಿಗೆ ಮತ್ತು ಅನುಭಾವದ ಅನುಸಂಧಾನಕ್ಕೆ ಮಾತ್ರವೇ ಇಲ್ಲಿ ಅವಕಾಶ. ಆದ್ದರಿಂದಲೇ ಅನೇಕ ಸಾಮಾನ್ಯ ಜನರು ಇತ್ತ ಆಕರ್ಷಿತರಾದರು. ತಮ್ಮ ನಿತ್ಯ ಕಾಯಕದೊಂದಿಗೆ ಷಟಸ್ಥಲ ಯೋಗವನ್ನು ಸಹಜವಾಗಿ ರೂಢಿಸಿಕೊಂಡರು. ಜೀವನದ ಅವಿಭಾಜ್ಯ ಅಂಗದಂತೆ ಶಿವಯೋಗ ಅವರಲ್ಲಿ ಬೆರೆತು ಹೋಯಿತು.
ತನ್ನ ನೆರಳ ಮೇಲೇ ನಿಂತುಕೊಂಡು ಯಾಕಿಷ್ಟು ಕತ್ತಲಿದೆ ಎಂದು ಮನುಷ್ಯ ಅಚ್ಚರಿಪಡುತ್ತಾನೆ ಎಂಬ ಝೆನ್ ಮಾತಿನಂತೆ ಮನುಷ್ಯ ತನ್ನೊಳಗೇ ಪರಮ ಶಾಂತಿಯನ್ನು ಇಟ್ಟುಕೊಂಡು ಅಶಾಂತಿಯಿಂದ ಹೊಯ್ದಾಡುತ್ತಿರುತ್ತಾನೆ. ಎಲ್ಲೋ ಹೊರಗೆ ಹುಡುಕುವುದಲ್ಲ, ತನ್ನಲ್ಲೇ ಅಡಗಿದ ರಹಸ್ಯವನ್ನು ಬೇಧಿಸುವುದು. ಅಂದರೆ ಜೀವವು ತಾನು ದೇವರಿಗಿಂತ ಭಿನ್ನ ಎಂಬ ಭಾವವನ್ನು ಬಿಟ್ಟು ತಾನೇ ದೇವಸ್ವರೂಪಿ ಎಂಬುದನ್ನು ಅರಿಯುವ ಅಂತರಂಗದ ಪಯಣ ಇದು. ಅಂದರೆ ಶೂನ್ಯದತ್ತ ನಡೆಯುವ ದಿವ್ಯ ಪಥ. ಪ್ರಸ್ತುತ ವಚನದಲ್ಲಿ ಅಲ್ಲಮಪ್ರಭುದೇವರು ಅದನ್ನು ಮಾರ್ಮಿಕವಾಗಿ ತಿಳಿಸಿದ್ದಾರೆ. ನಾನಾ ಸಿದ್ಧಿಗಳ ಪ್ರಲೋಭನೆಯಿಂದ ಯೋಗದ ಬೆನ್ನು ಹತ್ತಿ ದಾರಿ ತಪ್ಪಿದವರನ್ನು ಕಂಡು ಮಾರ್ಗದರ್ಶನ ಮಾಡುತ್ತಿದ್ದಾರೆ. ಮಹಾನ್ ಯೋಗಿಗಳಾದ ಅಲ್ಲಮರಲ್ಲಿ ಕಿರಿಯ ಸಾಧಕರ ಬಗ್ಗೆ ಕಾಳಜಿ ಇದೆ, ಅವರನ್ನು ಸರಿದಾರಿಗೆ ತರುವ ಕಳಕಳಿ ಇದೆ. ತನಗೇಕೆ ಇವರ ಉಸಾಬರಿ ಎಂಬ ಧಾಷ್ಟ್ಯವಿಲ್ಲ.
ಅಗ್ನಿಯ ಸುಡುವಲ್ಲಿ, ಉದಕವ ತೊಳೆವಲ್ಲಿ…
ಸೃಷ್ಟಿಯಲ್ಲಿನ ಸಂಚಲನವನ್ನು ಅರಿಯಬೇಕೆಂದರೆ ಪೃಥ್ವಿ, ನೀರು, ಅಗ್ನಿ, ವಾಯು, ಆಕಾಶ… ಈ ಐದು ಘಟಕಗಳು ಒಂದರ ಸಮ್ಮುಖದಲ್ಲಿ ಮತ್ತೊಂದು ಹೇಗೆ ಇರುತ್ತವೆ, ಹೇಗೆ ಸಂವಹಿಸುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ನಮ್ಮಂತೆ ಸಂವಾದ ನಡೆಸಲಾರವು ಎಂಬ ಕಾರಣಕ್ಕೆ ನಾವು ಪಂಚಭೂತಗಳನ್ನು ಜಡ ವಸ್ತುಗಳೆಂದು ತಿಳಿಯಬೇಕಿಲ್ಲ. ಮಾತನಾಡದೆಯೇ ಅಗಣಿತ ಪ್ರಯೋಗಗಳಿಗೆ, ಯೋಚನೆಗಳಿಗೆ, ಕಾವ್ಯಗಳಿಗೆ, ಸ್ವರಗಳಿಗೆ, ಭಾವಗಳಿಗೆ ಸ್ಫೂರ್ತಿಯಾಗಿರುವ ಈ ಐದು ತತ್ವಗಳ ಅದ್ಭುತ ಮಿಲನವೇ ಜೀವ ಸೃಷ್ಟಿ. ನಮ್ಮ ನಡುವೆ ಇದ್ದೂ ಇಲ್ಲದಂತಿರುವ, ಆದರೆ ನಮ್ಮ ಗಮನಕ್ಕೆ ಬಾರದಂತೆ, ನಮ್ಮ ದೈಹಿಕ ಮತ್ತು ಮಾನಸಿಕ ಅಸ್ತಿತ್ವಕ್ಕೆ ಕಾರಣವಾಗಿರುವ ಇವೇ ವಿಶ್ವದ ಅಗೋಚರ ಶಕ್ತಿ ಕೇಂದ್ರಗಳು.
ಈ ದೇಹ, ನಾವು ವಾಸಿಸುವ ಜಗತ್ತು, ಅಷ್ಟೇ ಏಕೆ ಅನಂತ ಬ್ರಹ್ಮಾಂಡ ಎಲ್ಲವೂ ಪಂಚಭೂತಗಳ ಸಂಯೋಗವೇ. ಪಂಚಭೂತಗಳು ಹೊರಗೂ ಇವೆ. ಒಳಗೂ ಇವೆ. ಮನುಷ್ಯನ ಸ್ವಾರ್ಥಕ್ಕೆ ಭೂಮಿ, ನೀರು, ಗಾಳಿ… ಕಲುಷಿತವಾಗುತ್ತಿರುವಂತೆ ಅಂತರಂಗದಲ್ಲೂ ಇವು ನಿರಂತರವಾಗಿ ಕಲುಷಿತಗೊಳ್ಳುತ್ತವೆ. ಅಂತರಂಗದ ಈ ಪಂಚತತ್ವಗಳನ್ನು ಶುದ್ಧಗೊಳಿಸಿಕೊಳ್ಳದೆ ಮನಸ್ಸಿನ ನಿಜವಾದ ರೂಪು ಕಾಣ ಸಿಗದು. ಅಲ್ಲಮಪ್ರಭುಗಳು ಇಲ್ಲಿ ಅಂತರಂಗದ ಪಂಚ ತತ್ವಗಳ ಬಗ್ಗೆ ಹೇಳುತ್ತಿದ್ದಾರೆ. ಅಂತರಂಗದಲ್ಲಿ, ಅಗ್ನಿಯು ಕ್ರೋಧ, ಕಾಮ, ಕಾಮನೆಗಳ ಸಂಕೇತ. ಉದಕ ಅಂದರೆ ನೀರು- ಮನಸ್ಸಿನ ಒಳಪದರುಗಳಲ್ಲಿ ಹರಿಯುತ್ತಿರುವ ನಾನು, ನನ್ನದೆಂಬ ವ್ಯಾಮೋಹದ ಸಂಕೇತ. ವಾಯು ವಿಷಯ ವಾಸನೆಗಳ ಸಂಕೇತ.
ಮನಸ್ಸು ನಿರಂತರವಾಗಿ ಮಲಿನಗೊಳ್ಳುತ್ತಿರುವುದು ಕಾಮ, ಕ್ರೋಧ, ಮೋಹ, ವಿಷಯಾದಿ ವಾಸನೆಗಳಿಂದ. ಈ ಒಂದೊಂದು ಭಾವನೆಗಳೂ ಮನಸ್ಸಿಗೆ ಮಿತಿ ಹಾಕುವಂಥವು. ಅಗಾಧ ಶಕ್ತಿಯ ಪುಂಜವಾದ ಮನಸ್ಸು ಇವುಗಳ ಕಟ್ಟಿನಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿರುತ್ತದೆ. ಜೀವದ ತಾಪತ್ರಯಗಳಿಗೆ, ಜಂಜಾಟಗಳಿಗೆ ಇವೇ ಮೂಲ ಹೇತು. ಇವುಗಳನ್ನು ಮೆಟ್ಟಿ ನಿಲ್ಲಬೇಕೇ ಹೊರತು ನಿಗ್ರಹಿಸಬಾರದು. ಆಗ ಮನಸ್ಸು ಸಂಕುಚಿತ ಭಾವಗಳಿಂದ ಬಿಡಿಸಿಕೊಂಡು ಹೊರಬರುತ್ತದೆ.
ಕಾಮ, ಕಾಮನೆಗಳನ್ನು ಸುಟ್ಟಾಗ ಒಳಗಣ ಅಗ್ನಿಗೆ ಪರಿಶುದ್ಧತೆಯ ಪ್ರಕಾಶ ಪ್ರಾಪ್ತವಾಗುತ್ತದೆ. ಅದೇ ರೀತಿ ನಾನು, ನನ್ನದು, ನನ್ನವರು ಎನ್ನುತ್ತಾ ಸ್ವಾರ್ಥದ ಭಾವಗಳಲ್ಲೇ ಹರಿಯುತ್ತಿರುವ ವ್ಯಾಮೋಹದ ಜಲವನ್ನು ತೊಳೆದರೆ ನಮ್ಮೊಳಗೆ ಕಾಣಿಸುವುದೇ ಇಡೀ ವಿಶ್ವದ ಪ್ರತಿಬಿಂಬ. ಇನ್ನು ವಿಷಯ ವಾಸನೆಗಳ ವಿಷಕಾರಿ ಗಾಳಿಯನ್ನು ಹೊರಗೆ ನೂಕಿದಾಗ ಮನಸ್ಸು ಗಾಳಿಗಿಂತ ಹಗುರವಾಗುತ್ತದೆ. ಅನಂತತೆಯ ಆಕಾಶವು ಭೂಮಿಯ ಮೇಲಿಂದಲೇ ಕೈಗೆಟುಕುತ್ತದೆ. ಷಟಸ್ಥಲ ಯೋಗದಿಂದ ಇದೆಲ್ಲವೂ ಸಾಧ್ಯ. ಇದೇ ನಿಜವಾದ ಯೋಗದ ಹೊಲಬು (ಮಾರ್ಗ) ಎನ್ನುತ್ತಾರೆ ಅಲ್ಲಮರು.
ಹಾಗಾದರೆ ಆ ಯೋಗದ ಮಾರ್ಗ ತುಳಿಯುವುದು ಹೇಗೆ?
ಸ್ಥೂಲವಾಗಿ ಆರು ಹಂತಗಳ ಷಟಸ್ಥಲದ ಬಗ್ಗೆ ತಿಳಿದುಕೊಂಡರೆ ಈ ವಚನವನ್ನು ಮತ್ತಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಂತರಂಗದ ಚಿತ್ಕಳೆಯ ಸಂಕೇತವಾದ ಇಷ್ಟಲಿಂಗ ಇಲ್ಲಿ ಉಪಾಸ್ಯ ವಸ್ತು. ಷಟಸ್ಥಲದ ಪರಮ ಆಧಾರವೇ ಶ್ರದ್ಧೆ. ನಮ್ಮ ಆಂತರಿಕ ಶಕ್ತಿಯನ್ನು ಅನಾವರಣ ಮಾಡಿಕೊಳ್ಳಲು ಹೊರಟ ಹಾದಿಯ ಮೇಲೆ ಮೊದಲು ನಮಗೆ ಶ್ರದ್ಧೆ ಇರಬೇಕು. ಏಕೆಂದರೆ ಸಂಪೂರ್ಣ ನಂಬಿಕೆಯ ಅಡಿಪಾಯದಿಂದಲೇ ಈ ಯಾತ್ರೆ ಆರಂಭವಾಗುವುದು. ಆದರೆ ಇದು ಮೂಢನಂಬಿಕೆಯಲ್ಲ. ವೈಚಾರಿಕ ನೆಲೆಗಟ್ಟಿನ ಮೇಲೆ ನಿಂತ ನಂಬಿಕೆ. ಇದೇ ಭಕ್ತಸ್ಥಲ. ಶ್ರದ್ಧಾ ಭಕ್ತಿಯು ಮನಸ್ಸನ್ನು ಏಕಾಗ್ರತೆಯತ್ತ ತಂದು ನಿಲ್ಲಿಸುತ್ತದೆ. ಮುಂದೆ ಈ ಶ್ರದ್ಧೆಯೇ ನಿಷ್ಠೆಯಾಗುತ್ತದೆ. ಆಗ ಮನಸ್ಸು ಬಾಹ್ಯ ಆಕರ್ಷಣೆಗಳ ಸೆಳೆತಕ್ಕೆ ಸೋಲದೆ ಗಟ್ಟಿಗೊಳ್ಳುವುದು, ಅದೇ ಮಾಹೇಶ್ವರ ಸ್ಥಲ. ನಾನು, ನನ್ನದು ಎನ್ನುವ ಅಹಂ ಮತ್ತು ಮಮಕಾರಗಳು ಮಾಯವಾಗಿ ಎಲ್ಲವೂ ದೇವರ ಪ್ರಸಾದ ಎಂಬ ಭಾವ ಅಳವಡುವುದೇ ಪ್ರಸಾದ ಸ್ಥಲ. ಇಲ್ಲಿ ಮನಸ್ಸು ಪ್ರಸನ್ನತೆಯನ್ನು ಅನುಭವಿಸುತ್ತದೆ. ಪವಿತ್ರ ಭಾವವೊಂದು ಅಂತರಂಗದಲ್ಲಿ ಜಾಗೃತವಾಗುತ್ತದೆ. ಈ ಹಂತದಲ್ಲಿ ನಾನು ಸೃಷ್ಟಿಯ ಪ್ರತಿರೂಪ, ‘ನಾನು ಬೇರೆಯಲ್ಲ, ದೇವ ಬೇರೆಯಲ್ಲ’ ಎನ್ನುವ ಭಾವ ಚಿಗುರೊಡೆಯುತ್ತದೆ. ಆ ಶೂನ್ಯವೇ ನಾನು ಎಂದು ಮನಸ್ಸು ಶೂನ್ಯಾನುಸಂಧಾನಕ್ಕೆ ತೊಡಗುತ್ತದೆ. ಅದೇ ಪ್ರಾಣಲಿಂಗ ಸ್ಥಲ. ನಾನು ದೇವನ ರೂಪವಾದರೆ ಈ ಜಗತ್ತೂ ದೇವನ ರೂಪವೇ. ಜಗತ್ತೇ ಲಿಂಗದ ರೂಪ, ದೇವನ ವಿಸ್ತಾರ ಎಂದು ಎಲ್ಲೆಡೆ ಸರ್ವದರ್ಶನ ಆರಂಭವಾದರೆ ಅದು ಶರಣ ಸ್ಥಲ. ಇನ್ನು ಕೊನೆಯದಾಗಿ ಐಕ್ಯಸ್ಥಲದಲ್ಲಿ ನಾನು ಎಂಬುದು ಸಂಪೂರ್ಣ ಮರೆಯಾಗಿ ಎಲ್ಲೆಡೆಯೂ ಸರ್ವನ ರೂಹೇ ತುಂಬಿಕೊಳ್ಳುತ್ತದೆ. ಅದು ಸಮರಸ ಭಕ್ತಿ. ಹೀಗೆ ಲಿಂಗವನ್ನು ಹಿಡಿದು ಲಿಂಗವೇ ತಾನಾಗುವ, ಮಾನವ ಶರಣನಾಗುವ ಅಪೂರ್ವ ಪರಿವರ್ತನೆಯೇ ಶಿವಯೋಗ.
ಈ ಒಂದೊಂದು ಹಂತಗಳು ಮನಸ್ಸನ್ನು ಸಹಜ ರೀತಿಯಲ್ಲಿ ಹದಗೊಳಿಸುತ್ತಾ ಹೋಗಬೇಕು. ಅವಸರಿಸಿದರೆ ಸಾಧ್ಯವಿಲ್ಲ. ಅದಕ್ಕೆ ಅಕ್ಕಮಹಾದೇವಿಯ ಅನುಭವವನ್ನು ಕೇಳಿ:
ಆತುರದ ಧ್ಯಾನದಿಂದ ಧಾವತಿಗೊಂಡೆ
ಜ್ಯೋತಿರ್ಲಿಂಗವ ಕಾಣಿಸಬಾರದು…
ಮಾತಿನ ಮಾಲೆಗೆ ಸಿಲುಕುವನಲ್ಲ…
ಕಷ್ಟಪಟ್ಟು ಅಭ್ಯಾಸ ಮಾಡುವುದರಿಂದಲೂ ಪ್ರಯೋಜನವಿಲ್ಲ. ಮೊಗ್ಗು ಬಿರಿದು, ಹೂವಾಗಿ, ಕಾಯಾಗಿ, ಹಣ್ಣಾಗುವ ಸಹಜ ನೈಸರ್ಗಿಕ ಸ್ಥಿತ್ಯಂತರಗಳಂತೆ ಮನಸ್ಸು ಹೊಯ್ದಾಟಗಳಿಂದ ಮುಕ್ತವಾಗಿ ಸಮಸ್ಥಿತಿ ಪಡೆಯುತ್ತಾ ತಂತಾನೇ ಪಕ್ವಗೊಳ್ಳಬೇಕು. ಆಗ ಕಾಮ, ಕ್ರೋಧ, ವಿಷಯಾದಿಗಳಲ್ಲಿ ಬಂಧಿತವಾದ ಮನಸ್ಸು ತನ್ನ ಪರಿಮಿತಿಗಳನ್ನು ಅಳಿಸುತ್ತಾ ವಿಕಾಸವಾಗುತ್ತದೆ. ಕೊನೆಗೆ ವ್ಯಷ್ಟಿ ಮತ್ತು ಸಮಷ್ಟಿಗಳ ಸಮನ್ವಯ ಸಾಧ್ಯವಾಗುತ್ತದೆ.
“ಅವಗುಣಗಳನ್ನು ಬೆನ್ನಿಗೆ ಕಟ್ಟಿಕೊಂಡು ಷಟಸ್ಥಲವನೋದಿದರೆ ಏನೂ ಫಲವಿಲ್ಲ” ಎನ್ನುತ್ತಾರೆ ಬಸವಣ್ಣನವರು. ಆಸೆ, ಮೋಹ, ದ್ವೇಷಗಳು ವ್ಯಕ್ತಿಯನ್ನು ಕುಬ್ಜಗೊಳಿಸುತ್ತವೆ. ಈ ಮಿತಿಗಳನ್ನು ನಾಶಗೊಳಿಸುವುದರಿಂದ ಮನಸ್ಸಿನ ಸಂಪೂರ್ಣ ಶಕ್ತಿ ಪ್ರಕಟವಾಗುತ್ತದೆ. ನಾನು, ನನ್ನದೆಂಬ ಅಹಂಕಾರವನ್ನು ಶೂನ್ಯಗೊಳಿಸುವುದು ಮಹಾಶೂನ್ಯದತ್ತ ಇಡುವ ಒಂದು ಮಹತ್ತರ ಹೆಜ್ಜೆ.
ಕದಳಿಯ ಬನವ ನಿನ್ನಲ್ಲಿ ನೀನೇ…
ಅಲ್ಲಮಪ್ರಭುದೇವರು ಈ ದೇಹವನ್ನು ಕದಳಿಯ ಬನಕ್ಕೆ ಹೋಲಿಸಿದ್ದಾರೆ. ದೇಹದ ಎಲ್ಲ ಕಾಮನೆಗಳ ಸೂತ್ರ ಮನಸ್ಸಿನಲ್ಲಿದೆ ನಿಜ. ಆದರೆ ದೇಹಕ್ಕೆ ತನ್ನದೇ ಆದ ಸೆಳೆತಗಳೂ ಇವೆ. ಆದ್ದರಿಂದಲೇ ಮೃಗೀಯ ಭಾವಗಳ ಶರೀರವೆಂಬ ಈ ಕದಳಿ ನಿಗೂಢವೂ ಹೌದು. ನಮ್ಮ ಪ್ರಜ್ಞೆಯ ಮಿತಿಗೆ ದಾಟಿದ ಗಾಢ ಅನುಭವದ ಲೋಕ ಇದರೊಳಗೇ ಇದೆ. ಸರಳವಾಗಿ ಹೇಳುವುದಾದರೆ ಕದಳಿಯು ಜೀವದ ಸುತ್ತ ಸುತ್ತಿಕೊಂಡ ಸಂಸಾರ. ಮೋಹ, ಮಾಯೆಗಳಿಂದ ಕೂಡಿದ ಬಾಳೆಯ ವನ. ಅಷ್ಟಮದಗಳೆಂಬ ಆನೆಗಳ ಕಾಟ ಇದಕ್ಕೆ ತಪ್ಪಿದ್ದಲ್ಲ. ಪಂಚೇಂದ್ರಿಯಗಳೆಂಬ ವಿಷಯದ ಮಳೆಯ ಹೊಡೆತವೂ ಬೆಂಬಿಡುವುದಿಲ್ಲ.
ಮದ ಮತ್ಸರಗಳಲ್ಲಿ, ದ್ವಂದ್ವ ಭಾವಗಳಲ್ಲಿ ಸಿಲುಕಿಕೊಂಡ ಜೀವ ಸದಾ ಸಂಕಟದಿಂದ ಒದ್ದಾಡುತ್ತಿರುತ್ತದೆ. ಈ ಜಂಜಾಟದಲ್ಲಿ ಮನಸ್ಸು ತಳಮಳಿಸುತ್ತಲೇ ಇರುತ್ತದೆ. ಇವೆಲ್ಲ ತೊಳಲಾಟಗಳಿಂದ ಒಂದೊಂದಾಗಿ ಬಿಡಿಸಿಕೊಂಡು ಬರಬೇಕು, ಬಾಳೆಯಂತೆ. ಪದರುಗಳನ್ನು ಬಿಚ್ಚುತ್ತಾ ಹೋದರೆ ಬಾಳೆಯ ಗಿಡದಲ್ಲಿ ಕೊನೆಗೇನು ಉಳಿಯುತ್ತದೆ? ಏನೂ ಇಲ್ಲ. ಹಾಗೆಯೇ ದುರಿತ ದುರ್ಗುಣಗಳ ಆವರಣಗಳನ್ನು ಒಂದೊಂದಾಗಿ ಬಿಡಿಸಿದಂತೆ ಬದುಕು ಹಗುರವಾಗುತ್ತದೆ. ಕೊನೆಗೆ ಉಳಿದುಕೊಳ್ಳುವುದು ಅದೇ ಶೂನ್ಯ ರೂಪ. ಅದೇ ಸ್ವಯಂಪ್ರಭೆಯ ದರ್ಶನ. ಅದು ಅನುಭವಕ್ಕೆ ಮಾತ್ರವೇ ದಕ್ಕುವ ನಿರಾಳ ಭಾವ. ಗುಹೇಶ್ವರ ಲಿಂಗವು ಮನುಷ್ಯನ ಕಪೋಲ ಕಲ್ಪನೆಯಲ್ಲ, ಜಗತ್ತಿನಂತೆ ನಶ್ವರವಾದದ್ದೂ ಅಲ್ಲ. ಅದು ನಮ್ಮೊಳಗಿನ ಶಾಶ್ವತ ಸತ್ಯ. ಆ ಅನುಭವ ಸಾಧ್ಯವಾಗಬೇಕಾದರೆ ಆಮೂಲಾಗ್ರವಾದ ಬದಲಾವಣೆ ನಮ್ಮಲ್ಲಿ ಪಲ್ಲವಿಸಬೇಕು ಎನ್ನುತ್ತಾರೆ ಅಲ್ಲಮಪ್ರಭುದೇವರು.
ಯೋಗದಾಗೆಂಬುದನಾರು ಬಲ್ಲರೊ?
ಅದು ಮೂಗ ಕಂಡ ಕನಸು ! …
ಯೋಗದಾಗು ಎಂದರೆ ಯೋಗದಿಂದಾದ ಪರಿವರ್ತನೆ, ಷಟಸ್ಥಲ ಸಾಧನೆಯಿಂದ ಸಿಗುವ ಆನಂದ. ಅಂತರಂಗದ ಪಕ್ವತೆಯನ್ನು, ಅಲ್ಲಿಯ ಆನಂದವನ್ನು ತೆಗೆದು ತೋರಿಸಲಾಗದು. ಶಬ್ದಗಳು ಹಿಡಿದಿಡಲಾಗದ ಆ ಮನೋವಿಕಾಸವನ್ನು ವರ್ಣಿಸಲು ಹೊರಡುವುದು ಮೂಗ ಕಂಡ ಕನಸಿನಂತೆ, ವಿವರಿಸುವುದು ಅಸಾಧ್ಯ. ಅನುಭಾವದ ಹಾದಿಯನ್ನು ಅನುಭವಿಸಿಯೇ ಅರಿಯಬೇಕು. ಅಂತಹ ಸ್ಥಿತಿಯನ್ನು “ದಾಟುವವರೆಗೆ ಅಕ್ಷರವ ಬಳಸು, ದಾಟಿದ ಮೇಲೆ ನಿರಕ್ಷರಿಯಾಗು” ಎನ್ನುತ್ತಾನೆ ಬುದ್ಧನ ದಾರಿಯಲ್ಲಿ ನಡೆದ ಮಹಾನ್ ಸಂತ ಸರಹಪಾದ. ಯೋಗದ ಅನುಭಾವವನ್ನು ಬಣ್ಣಿಸಲು ಹೊರಡುವವರನ್ನು ಕಂಡು ಅಲ್ಲಮಪ್ರಭುಗಳು ಅಚ್ಚರಿಪಡುತ್ತಾರೆ. “ನಾನು ನೀನೆಂಬ ಉಭಯವಳಿದು ಕೂಡುವ ಯೋಗದ ಹೊಲಬನರಿಯದೆ !
ಬರಿಯ ಮರವೆಯ ಪ್ರೌಢಿಕೆಯಲ್ಲಿ ಕೆಟ್ಟರಯ್ಯ ಗುಹೇಶ್ವರ’’ ಎ��ದು ಮರುಗುತ್ತಾರೆ.
ಇಲ್ಲೊಂದು ಮುಖ್ಯ ಅಂಶವನ್ನು ಗಮನಿಸಬೇಕು. ಆತ್ಮವು ದೇಹ ಬಿಟ್ಟು ಪರಮಾತ್ಮನಲ್ಲಿ ಲೀನವಾಗುವ ಮೋಕ್ಷದ ಕಲ್ಪನೆಗಿಂತ ಭಿನ್ನವಾಗಿ ಷಟಸ್ಥಲದಲ್ಲಿ ದೇಹವು ಪ್ರಸಾದ ಕಾಯವಾಗಿ, ಲಿಂಗಮಯವಾಗಿ ಪರಿವರ್ತಿತವಾಗುತ್ತದೆ. ಶರಣ ಆದಯ್ಯನವರು ಹೇಳುತ್ತಾರೆ: “… ಷಡುಸ್ಥಲಬ್ರಹ್ಮ ಲಿಂಗಾಂಗದಿಂ ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗ (ಅಂ)ಗವನೊಳಕೊಂಡಿತ್ತಾಗಿ ಅಂಗವೇ ಲಿಂಗವಾಯಿತ್ತು ನೋಡಾ” ಎಂದು. ಆಂತರಿಕ ಬದಲಾವಣೆಯಿಂದ ದೇಹವು ಪ್ರಸಾದಕಾಯವಾಗುತ್ತದೆ. ಲಿಂಗಾಂಗ ಸಾಮರಸ್ಯದ ಈ ಯೋಗದಲ್ಲಿ ಅಂಗದ ಕ್ರಿಯೆಗಳು ಲಿಂಗದ ಕ್ರಿಯೆಗಳಾಗುತ್ತವೆ. ನಿಜವಾದ ಅರ್ಥದಲ್ಲಿ ದೇಹ ದೇವಾಲಯವಾಗುತ್ತದೆ.
ಜಗತ್ತಿನ ರಂಗುಗಳಲ್ಲಿ ಕಳೆದು ಹೋಗದೆ ಜೀವವು ಎಚ್ಚೆತ್ತು ತನ್ನ ಸಂಪೂರ್ಣ ವಿಕಾಸವನ್ನು ಸಾಧಿಸುವುದರ ಜೊತೆ ಲೋಕದ ಹಿತಕ್ಕಾಗಿ ಬಾಳು ಸವೆಸುವುದು ಷಟಸ್ಥಲ ಯೋಗ ಮಾರ್ಗದ ತಿರುಳು. ಓದಿ, ಅರ್ಥ ಮಾಡಿಕೊಂಡಾಕ್ಷಣ ಇದು ಸಿದ್ಧಿಸುವುದಿಲ್ಲ. ನಮ್ಮ ಪ್ರತಿ ಹೆಜ್ಜೆಯಲ್ಲಿ, ನಡೆ- ನುಡಿಗಳಲ್ಲಿ ಅದು ಸಹಜವಾಗಿ, ಅಪ್ರಯತ್ನಪೂರ್ವಕವಾಗಿ ವ್ಯಕ್ತವಾಗಬೇಕು. ಶರಣರು ಕಂಡುಕೊಂಡ ಶಿವಯೋಗದ ದಾರಿಯಲ್ಲಿ ನಡೆಯಲು ಸಜ್ಜಾಗುವುದೆಂದರೆ ಬದುಕನ್ನೇ ಪ್ರಯೋಗಕ್ಕೆ ಒಡ್ಡಿಕೊಳ್ಳಲು ತಯಾರಾದಂತೆ. ಭೂಮಿ ತನ್ನನ್ನು ಸುತ್ತಿಕೊಳ್ಳುತ್ತಾ ಸೂರ್ಯನನ್ನು ಸುತ್ತುವಂತೆ. ವಿಸ್ತಾರದ ನೋಟದಲ್ಲಿ ಇಡೀ ವಿಶ್ವವನ್ನೇ ಬಾಚಿ ತಬ್ಬಿದಂತೆ.