Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನು ಯಾರು? ಎಂಬ ಆಳ ನಿರಾಳ-3
Share:
Articles May 6, 2020 ಕೆ.ಆರ್ ಮಂಗಳಾ

ನಾನು ಯಾರು? ಎಂಬ ಆಳ ನಿರಾಳ-3

ಈ ಸಣ್ಣ ಪ್ರಯಾಣದ ಚರ್ಚೆಯಲ್ಲಿ ನಿಮ್ಮಲ್ಲಿ ಮೊದಲೇ ನಿವೇದಿಸಿಕೊಂಡಂತೆ- ಈ ಬಾರಿಯ ನಮ್ಮ ಪ್ರಶ್ನೆ, “ಪರಾಚೈತನ್ಯವಾಗಿರುವ ಬ್ರಹ್ಮವಸ್ತುವು ನಾನೆ?”

ಈ ಹಿಂದಿನ ಸಂಚಿಕೆಯಲ್ಲಿ ಹೇಳಿಕೊಂಡಿರುವಂತೆ, ಈ ಪ್ರಶ್ನೆಗೆ ನಾನು ಯಾವುದೇ ವೈಯಕ್ತಿಕ ಅಭಿಪ್ರಾಯವನ್ನಾಗಲಿ, ಪಕ್ಷಪಾತದಿಂದ ಕೂಡಿದ ತರ್ಕವನ್ನಾಗಲಿ ನಿಮ್ಮ ಮುಂದಿಡಲು ಇಚ್ಛಿಸುವುದಿಲ್ಲ. ಬದಲಾಗಿ ಈ ಚರ್ಚೆಯನ್ನು ನಮ್ಮ ನೆಲದಲ್ಲಿ ಆಗಿ ಹೋದ ಲೋಕಾಯತರು, ಸಾಂಖ್ಯರು, ವೈಶೇಷಿಕರು, ಕಣಾದರು, ಶೈವತಾಂತ್ರಿಕರು, ಕಾಳಾಮುಖಾಚಾರ್ಯರು, ಶರಣರು, ತತ್ವಪದಕಾರರು ಹೇಗೆ ನಿಭಾಯಿಸಿಕೊಂಡರು? ಇವರು ಚರ್ಚಿಸಿದ ವಿಧಾನದ ಹಿಂದಿನ ಕಾರಣ ಏನಿತ್ತು? ಸಾಂಸ್ಕೃತಿಕ ರಾಜಕಾರಣದ ಭಾಗವಾಗಿ ಈ ಪ್ರಶ್ನೆಯ ಅಗತ್ಯವೇನು? ಅಥವಾ ನಮ್ಮ ಭಾರತದ ಸಾಮಾಜಿಕ ಸ್ಥಿತ್ಯಂತರಗಳನ್ನು ನಿರ್ಧರಿಸುವಲ್ಲಿ ಬ್ರಹ್ಮದ ಪಾತ್ರವೇನು? ಮತ್ತು ಭಾರತೀಯ ಮನಸ್ತತ್ವವನ್ನು ರೂಪಿಸುವಲ್ಲಿ ಬ್ರಹ್ಮವಸ್ತುವಿನ ಪ್ರಭಾವವೇನು? ಎಂಬುದನ್ನು ಗ್ರಹಿಸುವುದು ಇಲ್ಲಿ ಮುಖ್ಯವಾಗುತ್ತದೆ. ಏಕೆಂದರೆ ಯಾವುದೇ ಒಂದು ಜನಾಂಗೀಯ ಸಂಸ್ಕೃತಿಯು ಆ ಜನಾಂಗದಾಳದ psychologyಯೊಂದಿಗೆ ಬೆಸೆದುಕೊಂಡ ಸಂಬಂಧವಾಗಿರುತ್ತದೆ. ಹೀಗೆ ನೋಡಿದಾಗ ಸಂಸ್ಕೃತಿಯಿಂದ ಮನೋಧೋರಣೆಗಳು ಹುಟ್ಟಿಕೊಂಡಂತೆಯೇ… ಮನೋಧೋರಣೆಗಳಿಂದಾಗಿ ಸಂಸ್ಕೃತಿಗಳೂ ಸಂವರ್ಧಿಸುತ್ತಾ ಹೋಗುತ್ತವೆ. ಇವೆರಡರ ಸಂಬಂಧಗಳಲ್ಲಿ ‘ಸಾಮಾಜಿಕತೆ’ ರೂಪುಗೊಂಡಿರುತ್ತದೆ. ಎಲ್ಲಾ ಸಮಾಜಗಳ ಆತ್ಮದಂತೆ ಸಂಸ್ಕೃತಿ ವರ್ತಿಸುತ್ತಿರುತ್ತದೆ. ಆದ್ದರಿಂದ ಸಂಸ್ಕೃತಿಯನ್ನು ಪರಾಮರ್ಶಿಸದೇ ಆಧ್ಯಾತ್ಮವನ್ನು ನಂಬುವುದು ಕೇವಲ ಹತಾಶೆಯ ತತ್ವಜ್ಞಾನವಾಗಿ ಬಿಡುತ್ತದೆ.

ಇಡೀ ವಿಶ್ವದಲ್ಲಿ ಭಾರತದ ‘ಆಧ್ಯಾತ್ಮಿಕ ಸತ್ಯ’ ಶ್ರೇಷ್ಠವಾದುದು ಎಂಬುದನ್ನು ನಾವೆಲ್ಲಾ ಒಪ್ಪಿಕೊಳ್ಳುತ್ತೇವೆ. ತಿಳಿದವರೋ ತಿಳಿಯದವರೋ ಯಾರೇ ಆಗಿರಲಿ ‘ಆಧ್ಯಾತ್ಮ ಜೀವನದ’ ಕುರಿತಾಗಿ ಬಿಡಿಸಲಾಗದಷ್ಟು ಗೌರವಾದರಣೆಗಳು ನಮ್ಮಲ್ಲಿ ಮನೆ ಮಾಡಿಕೊಂಡಿವೆ. ಇದರೊಟ್ಟಿಗೆ ಆಧ್ಯಾತ್ಮಿಕ ಗೊಂದಲವು ಕೂಡ ಭಾರತೀಯರಾದ ನಮ್ಮನ್ನು ಕಾಡದೇ ಬಿಡುವುದಿಲ್ಲ. ನಾವಿಂದು ಯಾವುದನ್ನು ಆಧ್ಯಾತ್ಮಿಕ ಎಂದು ನಂಬುತ್ತಿದ್ದೇವೆಯೋ ಅಲ್ಲಿ ಅಸ್ಪಷ್ಟವಾದ ಸಿದ್ಧಾಂತಗಳಿವೆ. ಒಂದಕ್ಕೊಂದು ಸಮರ್ಪಕವಲ್ಲದಾ ವಿರೋಧಾಭಾಸಗಳಿವೆ. ಜೀವನಾನುಭವಗಳಿಗೆ ದಕ್ಕದಾ ಊಹಾಪೋಹಗಳು ಮತ್ತು ಭ್ರಮೆಗಳಿವೆ. ಹೀಗಾಗಲು ಕಾರಣ ಏನು?

ಆಧ್ಯಾತ್ಮವು ಮನುಷ್ಯನ ಮೂಲಭೂತ ಸಮಸ್ಯೆಗಳೊಂದಿಗೆ ಸಂಪೂರ್ಣ ಸಂಬಂಧ ಕಳೆದುಕೊಂಡಾಗ ಅದು ಕೇವಲ ತೋರಿಕೆಯದ್ದು ಮಾತ್ರವಾಗಿರುತ್ತದೆ. ನಮ್ಮೊಳಗಿನ ಅಹಂಕಾರ, ನಯವಂಚಕತನ, ಡಂಭಾಚಾರ, ಪರದ್ರೋಹಗಳು, ನಮ್ಮಲ್ಲಿ ಸಹಜ ಸಮೃದ್ಧಿಯಾಗಿರುವ ಆಧ್ಯಾತ್ಮಿಕ ಶಕ್ತಿಯನ್ನು ನಿಷ್ಕ್ರಿಯಗೊಳಿಸಿರುತ್ತವೆ ಎಂಬುದನ್ನು ವಿವೇಚಿಸುವುದು ಇಲ್ಲಿ ಮುಖ್ಯವಾಗಿದೆ. ಮನುಷ್ಯನು ಸಾಮಾಜಿಕ ಜೀವಿಯಾಗಿ ಅನೇಕ ಪ್ರಭಾವಳಿಗೊಳಗಾಗಿ ತನ್ನ ಸ್ವಭಾವವನ್ನು ರೂಪಿಸಿಕೊಂಡಿರುವುದರಿಂದ, ತನ್ನ ಸ್ವಭಾವಗಳನ್ನು ಲೋಕೋಪಯುಕ್ತಗೊಳಿಸಿಕೊಳ್ಳಲು ಈ ನೆಲದ ಸಮಕಾಲೀನ (contemporary) ಆಚಾರ ಮತ್ತು ವಿಚಾರಗಳ ಸಂಬಂಧದಲ್ಲಿ ಆಧ್ಯಾತ್ಮಿಕತೆ ರೂಪುಗೊಳ್ಳಬೇಕೇ ವಿನಃ ಅದು ಸ್ಥಿರ ಸಿದ್ಧ ಮಾದರಿಯದ್ದಲ್ಲ. ಯಾರೋ ಹೇಳಿದ್ದನ್ನು ನಂಬಿ ಅನುಕರಿಸುವ ಮಾರ್ಗವೂ ಅಲ್ಲ. ಯಾರೋ ಹೇಳಿದ್ದು ನಮ್ಮ ಅನುಭವಕ್ಕೂ ಸಾಧ್ಯವಾದಾಗ ಮಾತ್ರ ಅದು ಸತ್ಯವಾಗಿರುತ್ತದೆ. ಆಧ್ಯಾತ್ಮಿಕತೆ ಸರ್ವ ಮಾನವರಲ್ಲೂ ಇರಬಹುದಾದ ಸ್ವಾಭಾವಿಕ ಚೇತನ. ಅದು ಹೃದಯಾಂತರಾಳದಿಂದ ಅನಂತತೆಯೊಂದಿಗೆ ಅವಿನಾಭಾವ ಸಾಮರಸ್ಯವನ್ನು ಹೊಂದಿರುತ್ತದೆ. ಇದನ್ನು ತಿಳಿಯಲು ಕೃತಕ ಜ್ಞಾನಗಳೇ ಅಡ್ಡಿಯಾಗುತ್ತಿರುತ್ತವೆ.

ಹೀಗೆ… ಸ್ವಕಪೋಲ ಕಲ್ಪಿತವಲ್ಲದಾ ಸರ್ವಜನಾಂಗಗಳಿಗೂ ಅನುಸರಿಸಿ ನಡೆಯಲು ಯೋಗ್ಯವಾದ “ಆಧ್ಯಾತ್ಮಿಕ ಪಥ ಯಾವುದಿದೆ?” ಎಂದು ಕೇಳಿಕೊಂಡಾಗ….. ಲೆಕ್ಕಕ್ಕೂ ಸಿಗದಷ್ಟು ಸಂಖ್ಯೆಯ ಪಂಥೀಯ ಆಚರಣೆಗಳೂ, ಸಿದ್ಧಾಂತಗಳೂ, ನಿತ್ಯ ನೈಮಿತ್ತಿಕ ಕ್ರಿಯೆಗಳೂ, ಯೋಗಗಳೂ ನಮ್ಮ ಮುಂದೆ ಎದ್ದು ನಿಲ್ಲುತ್ತವೆ. ಬಹು ಪ್ರಮುಖವಾಗಿ ನಮ್ಮ ಸಾಂಸ್ಕೃತಿಕ ಚರಿತ್ರೆಗಳಲ್ಲಿ ದಾಖಲಾಗಿರುವಂತೆ… ಸೇಶ್ವರ, ಸಾಂಖ್ಯ, ಪಾಣಿನಿ, ಗಾಣಪತ್ಯ, ವಿಮೋಚನಾ, ಹಿರಣ್ಯಗರ್ಭ, ನಿಂಬಾರ್ಕ, ರಾಧಾವಲ್ಲಭ, ಹರಿದಾಸ, ಉದಾಸೇನ, ವಕಾಲದ್ದಾಸ, ಆನಂದ, ಮೀರಾಬಾಯಿ, ಕಬೀರ, ವೀರಶೈವ, ಪಾಶುಪತ, ಮಿಶ್ರಮ, ಮೀಮಾಂಸೆ, ವೈಶೇಷಿಕ, ಅಕ್ಷಪಾದ, ಬಾಟ್ಟ, ಪ್ರಭಾಕರ, ಶೈವ, ಶಿವಾದ್ವೈತ, ಸಮ್ಮಿಳಿತ ಶಿವ, ಮಹಾವ್ರತಿ, ಶಿವಸಮಾಧಿ, ಊರ್ಧ್ವ ಶಿವ, ಅನಾದಿ ಶೈವ, ಆದಿ ಶೈವ, ಮಹಾಶೈವ, ಆರ್ಯ, ಲೋಕೈಕ, ಶಾಕ್ತೇಯ, ಮಾಧ್ಯಮಿಕ, ಯೋಗಾಚಾರ, ಸೌತಾಂತ್ರಿಕ, ವೈಭಾಷಿಕ, ಜೈನ, ಆರ್ದತ, ಭಾಗವತ, ಅದ್ವೈತ, ವಿಶಿಷ್ಟಾದ್ವೈತ, ಮಹಾದ್ವೈತ, ಶಕ್ತಿ ಅದ್ವೈತ, ಶಂಕರಾದ್ವೈತ, ದ್ವೈತ, ರಟ್ಟ ಮತ, ಸೂಟಿ ಮತ, ಮುದ್ರಾ ಸೋಹಂ ಭಾವ, ಬಯಲು, ಬಟ್ಟ ಬಯಲು, ಪಾತ್ರ ಪ್ರಸಾದ ದೇವಿ, ಕೃಷ್ಣಮತ, ಭೂಷಣ, ನವಮತ, ನೂತ್ನ ಮತ, ದ್ವಾದಶಾದಿತ್ಯ ಸಂಪ್ರದಾಯ, ಗುಣಶೈವ, ಯೋಗಿ, ಅಭಿನವ ಗುಪ್ತಾಚಾರ್ಯ, ಚೈತನ್ಯ, ವಲ್ಲಭ, ಮಹಾನುಭಾವ, ಇತ್ಯಾದಿ ಆಧ್ಯಾತ್ಮಿಕ ಪಥಗಳು ನಮ್ಮಲ್ಲಿ ಆಗಿಹೋಗಿವೆ.

ನಮ್ಮ ವಿಶಾಲವಾದ ಭರತಖಂಡದ ಸಾಂಸ್ಕೃತಿಕ ಚರಿತ್ರೆಯಲ್ಲಿ ಈ ಎಲ್ಲಾ ಆಧ್ಯಾತ್ಮಿಕ ಪಥಗಳೂ ತಮ್ಮತಮ್ಮ ಮಾರ್ಗಗಳ ಧರ್ಮ, ಕರ್ಮ, ಸತ್ಯ, ಜ್ಞಾನ, ಮಂತ್ರ, ಮಹಿಮ, ಯಂತ್ರ, ತಂತ್ರ, ಯೋಗಗಳ ವಿಶಿಷ್ಠತೆಗಳನ್ನು ದಾಖಲಿಸಿಕೊಂಡಿವೆ.

ನಮ್ಮ ದೇಶದಲ್ಲಿ ಎಷ್ಟೇ ಆಧ್ಯಾತ್ಮಿಕ ಪಥಗಳಿದ್ದರೂ ಸಹ ಅಧ್ಯಯನದ ದೃಷ್ಟಿಯಿಂದ ಇವೆಲ್ಲವುಗಳನ್ನು ವೈದಿಕ ಮತ್ತು ಅವೈದಿಕ ಎಂಬೆರಡು ಭಾಗಗಳಾಗಿ ಗ್ರಹಿಸುವುದು ಸುಲಭೋಪಾಯವಾಗಿದೆ. ನಮ್ಮ ಮಣ್ಣಿನ ನಿಜವಾದ ಚರಿತ್ರೆ ರಾಜಮಹಾರಾಜರ ಹಾಗೂ ಚಕ್ರವರ್ತಿಗಳ ಜೀವನ ಚರಿತ್ರೆಗಳಲ್ಲಿ ಮತ್ತು ದಶಾವತಾರಗಳಿಂದ ಪ್ರಣೀತವಾದ ಪೌರಾಣಿಕ ಗ್ರಂಥಗಳಲ್ಲಿದೆ ಎಂದು ನಂಬಿಸಿದ್ದು ಸಾಂಸ್ಕೃತಿಕ ರಾಜಕಾರಣದ ದೊಡ್ಡ ಕುಚೋದ್ಯವೇ ಸರಿ! ನಿಜವಾಗಿಯೂ ನಮ್ಮ ಮಣ್ಣಿನ ಸಾಮಾನ್ಯರ ಹೃದಯಸ್ಪರ್ಶಿಯಾದ ಚರಿತ್ರೆಯು ಕಪಿಲ ಸಾಂಖ್ಯರ ಕಾಲದಿಂದ ಪ್ರಾರಂಭಗೊಳ್ಳುತ್ತದೆ. ಇಲ್ಲಿಂದ ಮೊದಲ್ಗೊಂಡು ಬೌದ್ಧ ಮಹಾಯಾನಿಗಳು, ಜೈನರು, ಲೋಕಾಯತರು, ಕಾಳಾಮುಖಾಚಾರ್ಯರು, ಹನ್ನೆರಡನೆಯ ಶತಮಾನದ ಬಸವಾದಿ ಶರಣರು, ಹದಿನಾಲ್ಕು- ಹದಿನಾರನೇ ಶತಮಾನದ ಸಂತ ಮಹಾಂತರುಗಳು, ಅವಧೂತರು, ತತ್ವಪದಕಾರರು, ಮುಂತಾದವರು ವೈದಿಕರ ಕರ್ಮಕಾಂಡ ಮತ್ತು ಜ್ಞಾನಕಾಂಡದ ಸಿದ್ಧಾಂತಗಳೊಂದಿಗೆ ಒಡ್ಡಿದ ಬಂಡಾಯದ ಚಳುವಳಿಗಳ ಸಂಕಥನಗಳಲ್ಲಿ ನಮ್ಮ ನಿಜವಾದ ಚರಿತ್ರೆ ತುಂಬಿದೆ ಎಂಬುದು ಒಂದು ಮಹಾ ಅದ್ಭುತ!

ವೈದಿಕ- ಅವೈದಿಕರ ಮಧ್ಯೆ ನಡೆದಿರುವ ವೈಚಾರಿಕ ಚಳುವಳಿಗಳ ಅತ್ಯಂತ ಮುಖ್ಯ ಕಾರಣಗಳೇನಿದ್ದವು? ಅಂದರೆ- ವೈದಿಕಶಾಹಿಯದು ಜನಸಾಮಾನ್ಯರನ್ನು ತಮ್ಮ ಧರ್ಮಾಧಿಕಾರದ ಹಿತಗಳಿಗೆ ಕಟ್ಟಿ ಹಾಕುವ ಪ್ರಯತ್ನ ಎಲ್ಲಾ ಕಾಲದಲ್ಲೂ ನಡೆದಿತ್ತು. ಧರ್ಮಾಧಿಕಾರ ಮತ್ತು ದೈವಾಧಿಕಾರದ ಮೂಲಕ ಬಹುಜನರ ಉತ್ಪಾದಕ ಸಂಪನ್ಮೂಲಗಳನ್ನು (ದವಸಧಾನ್ಯ, ಹಣ್ಣುಹಂಪಲು, ಚಿನ್ನ ವಜ್ರದಂತಹ ಲೋಹಗಳು, ವಸ್ತ್ರಗಳು, ನಿತ್ಯೋಪಯುಕ್ತ ವಸ್ತುಗಳು, ಸುಗಂಧ ದ್ರವ್ಯಗಳು, ಹಸುವಿನ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ ಇತ್ಯಾದಿ ಕಾಯಕಜೀವಿಗಳ ಉತ್ಪನ್ನಗಳು) ಯಾವುದೇ ಶ್ರಮವಿಲ್ಲದೇ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ವೈದಿಕ ಕರ್ಮಕಾಂಡ ಮತ್ತು ಜ್ಞಾನಕಾಂಡಗಳನ್ನು ಬಳಸಿಕೊಳ್ಳಲಾಯಿತು. ಇವುಗಳ ಉದ್ದೇಶವೇನೆಂದರೆ, ದೇವರ ಕುರಿತಾಗಿ ಗೊಂದಲಗಳನ್ನು ಸೃಷ್ಟಿಸುವುದರ ಮೂಲಕ ನೈಜ ದೇವರು ಸಾಮಾನ್ಯರಿಗೆ ಎಟುಕದಂತೆ ಮಾಡುವುದು. ಇಲ್ಲಿ ದೈವದ ಜ್ಞಾನಕ್ಕೆ ಬದಲಾಗಿ ಸ್ಥಾವರ ಪೂಜೆ, ಪುನಸ್ಕಾರ, ವ್ರತ, ನೇಮ, ನಿಯಮಗಳ ಮೂಲಕ ಮೂಢತ್ವವನ್ನೇ ಜ್ಞಾನವೆಂದು ನಂಬಿಸಲಾಯಿತು.

ನಾರಾಯಣನೆಂಬವನ ಕಾಣೆ, ಗೀರಾಯಣನೆಂಬವನ ಕಾಣೆ
ಬೊಮ್ಮನೆಂಬವನ ಕಾಣೆ, ಗಿಮ್ಮನೆಂಬವನ ಕಾಣೆ.
ವಿಷವಟ್ಟಿ ಸುಡುವಲ್ಲಿ, ವೀರಭದ್ರ ಬಡಿವಲ್ಲಿ
ಕೂಡಲಸಂಗಯ್ಯಂಗೆ ಶರಣೆಂದು ಮೊರೆಯಿಟ್ಟರೆಲ್ಲರು.

ವಿಷ್ಣು ಬಲ್ಲಿದನೆಂಬೆನೆ
ದಶಾವತಾರದಲ್ಲಿ ಭಂಗಬಟ್ಟುದಕ್ಕೆ ಕಡೆಯಿಲ್ಲ.
ಬ್ರಹ್ಮ ಬಲ್ಲಿದನೆಂಬೆನೆ
ಶಿರ ಹೋಗಿ ನಾನಾ ವಿಧಿಯಾದ.
ವೇದ ಬಲ್ಲಿತ್ತೆಂಬೆನೆ
ನಾನಾಮುಖದಲ್ಲಿ ಸ್ತುತಿಯಿಸಿತ್ತಲ್ಲದೆ
ಲಿಂಗದ ನಿಲುಕಡೆಯ ಕಾಣದು.
ಶಾಸ್ತ್ರ ಬಲ್ಲಿತ್ತೆಂಬೆನೆ ಶಬ್ದಕ್ರೀ.
ಪುರಾಣ ಬಲ್ಲಿತ್ತೆಂಬೆನೆ ಪೂರ್ವಕ್ರೀ.
ಆಗಮ ಬಲ್ಲಿತ್ತೆಂಬೆನೆ ವಾಯ ಹೊಂದಿತ್ತು.
ಇದು ಕಾರಣ ಕೂಡಲಸಂಗಯ್ಯನೆ ನಿತ್ಯ,
ಉಳಿದ ದೈವವೆಲ್ಲ ಅನಿತ್ಯ ಕಾಣೆ ಭೋ.

ಜನರು ದೈವಿಕ ವಿಕಲ್ಪಗಳಲ್ಲಿ ಎಂದೆಂದಿಗೂ ಹೂತು ಹೋಗುವಂತೆ ಮಾಡಲಾಯಿತು. ಇಂದಿಗೂ ವೈದಿಕರು ಗರ್ಭಗುಡಿಯಲ್ಲಿರುವ ದೇವರ ವಿಗ್ರಹವನ್ನು ಸಾಮಾನ್ಯರು ಮುಟ್ಟಲು ಬಿಡುವುದಿಲ್ಲ. ವೇದಧ್ಯಯನ ಮತ್ತು ಋಗ್ವೇದದಂತಹ ವೇದದ ನಿರ್ದಿಷ್ಟ ಅಧ್ಯಾಯಗಳ ಪಠಣವನ್ನು ನಿರ್ದಿಷ್ಟಪಡಿಸಿದ ಶ್ರೇಷ್ಠ ಬ್ರಾಹ್ಮಣರೇ ಪಠಿಸಬೇಕೆಂಬ ನಿಯಮಗಳು ದೇವರ ಮೇಲಿನ ವೈದಿಕಶಾಹಿಯ ಏಕಸ್ವಾಮ್ಯವನ್ನು ಪ್ರತಿನಿಧಿಸುತ್ತವೆ. “ದೇವರು ಮಂತ್ರಕ್ಕೆ ಅಧೀನ, ಮಂತ್ರ ಬ್ರಾಹ್ಮಣಾಧೀನ, ಅಷ್ಟೇಕೆ ಬ್ರಾಹ್ಮಣನು ಬ್ರಹ್ಮ ಸ್ವರೂಪಿಯಾಗಿದ್ದಾನೆ” (ದೈವಾಧೀನಂ ಜಗತ್ ಸರ್ವಂ, ಮಂತ್ರಾಧೀನಾಶ್ಚ ದೇವದಾಃ/ ತೇ ಮಂತ್ರ ಬ್ರಾಹ್ಮಣಾಧೀನ ತ್ತಸ್ಮಾದ್ ಬ್ರಾಹ್ಮಣ ದೈವತಂ//) ಎಂಬಂತಹ ಮಾತುಗಳನ್ನು ವೈದಿಕ ಸಾಹಿತ್ಯದ ಮೂಲಕ ಜನರಿಗೆ ಫರ್ಮಾನು ಹೊರಡಿಸುತ್ತದೆ.

ವೈದಿಕರ ಈ ಸರ್ವಾಧಿಕಾರದ ವೈಚಾರಿಕ ಶೋಷಣೆಯನ್ನು ಅವೈದಿಕ ಶ್ರಮಣ (ಕಾಯಕ)ಧಾರೆಗಳು ಪೂರ್ತಿಯಾಗಿ ತಿರಸ್ಕರಿಸಿ ಪೊಳ್ಳಿನ ಕಂತೆಯೆಂದು ತಿಳಿದು ಅವುಗಳ ಮೇಲೆ ತೀವ್ರವಾದ ಚಳುವಳಿಯನ್ನು ಸಾರಿದವು. ಶ್ರಮಣರು ಸಾಧಿಸಿದ ಮುಖ್ಯ ತತ್ವಗಳೆಂದರೆ-

  • ದೈವದ ಮೇಲೆ ಎಲ್ಲಾ ಮಾನವರಿಗೆ ಸಮಾನ ಹಕ್ಕುಗಳಿವೆ.
  • ಶೀಲ ಮತ್ತು ಸದಾಚಾರಗಳು ಜ್ಞಾನಕ್ಕಿಂತಲೂ ಹಿರಿದು.
  • ಮನುಷ್ಯನ ಅರ್ಹತೆಯನ್ನು ಶೀಲ ಮತ್ತು ಸದಾಚಾರದಿಂದ ಅಳೆಯಬೇಕು, ಅವನ(ಳ) ಹುಟ್ಟಿದ ಕುಲದಿಂದಲ್ಲ.
  • ಯಾರೂ ಈ ಜಗತ್ತಿನಲ್ಲಿ ಶ್ರೇಷ್ಠರಲ್ಲ.
  • ಶ್ರೇಷ್ಠನಿಗೂ ಕನಿಷ್ಠನಿಗೂ ಬಿಡುಗಡೆ (ಮೋಕ್ಷ) ಅನಿವಾರ್ಯ.
  • ನೈತಿಕತೆಯೇ ಜೀವನದ ಶ್ರೇಷ್ಠ ದ್ರವ್ಯ.
  • ವ್ಯಕ್ತಿಪೂಜೆ ಧರ್ಮವಿರೋಧಿ. ಮಾನವ ಪ್ರೀತಿಯೇ ಧರ್ಮದ ಮೂಲ, ಅದು ದಯೆಯಾಗಿದೆ.
  • ಪ್ರಯತ್ನಪೂರ್ವಕವಾಗಿ ಎಲ್ಲರೂ ದೇವರಲ್ಲಿಗೆ ಹೋಗಬಹುದು. ದೇವರಲ್ಲಿಗೆ ಹೋಗಲು ಶಾಸ್ತ್ರವು ಹೇತುವಲ್ಲ.
  • ದೇವರು ಮತ್ತು ಧರ್ಮ ಮನುಷ್ಯನ ಜೀವನ ವಿಧಾನದಲ್ಲಿದೆಯೇ ಹೊರತು ಅದು ಭಿನ್ನವಲ್ಲ.
  • ಪೂರ್ವಾಶ್ರಿತವಾದ ಕೃತಕೃತ್ಯಗಳನ್ನು ನಿರಾಕರಿಸದೇ ಸಮಾಜಕ್ಕೆ ಹಾಗೂ ವ್ಯಕ್ತಿಗೆ ಅನಿವಾರ್ಯವಾದ ಹೊಸದೊಂದು ಜರೂರನ್ನು ಪುನರ್ರೂಪಿಸಲಾಗದು.

ಅವೈದಿಕರ ಹೊಸ ವೈಚಾರಿಕತೆಯು ಜನತಂತ್ರಾಧಾರಿತ ಧರ್ಮದ ಸತ್ಯವನ್ನು ಜನರೇ ರೂಪಿಸಿಕೊಳ್ಳಬೇಕೆಂದು ಎಚ್ಚರಿಸುತ್ತದೆ. ಇವರ ಪ್ರಕಾರ ಕ್ರಾಂತಿಯೇ ಜನತಂತ್ರದ ಅನ್ವೇಷಕ ಶಕ್ತಿ. ಸಿದ್ಧ ಮಾದರಿಯ ಜ್ಞಾನಗಳಿಂದ ಮನುಷ್ಯ ಬದಲಾಗದೆ ಹೋದರೆ ದೇವರು ಮತ್ತು ಧರ್ಮ ಸಾಧ್ಯವಿಲ್ಲವೆನ್ನುತ್ತದೆ. ಮನುಷ್ಯನು ಈ ಪ್ರಕೃತಿಯ ಸಣ್ಣ ತುಣುಕಾಗಿರುವುದರಿಂದ ಅವನು ಸಮಾಜದಿಂದಾಗಲಿ ನಿಸರ್ಗದಿಂದಾಗಲಿ ಪ್ರತ್ಯೇಕಿಸಿಕೊಳ್ಳುವುದು ಧರ್ಮವಿರೋಧಿಯಾಗುತ್ತದೆ. ಸಮಾಜ ಮತ್ತು ನಿಸರ್ಗ ಎರಡರಲ್ಲೂ ಅವನು ಒಳಗೊಂಡು ಪ್ರೀತಿಸುವ ಸೌಹಾರ್ದ ಬೆಳೆಸಿಕೊಳ್ಳುವುದು ಧರ್ಮವಾಗುತ್ತದೆಯೇ ವಿನಃ ಸಮಾಜವನ್ನು ತನ್ನ ಪೂರ್ವಾಶ್ರಿತ ಕಠಿಣ ಸ್ವಭಾವಗಳೊಂದಿಗೆ ಗ್ರಹಿಸುವುದು ಪ್ರತ್ಯೇಕತೆಯಾಗುತ್ತದೆ. ಹಾಗಾದರೆ ಧರ್ಮ ಎಂದರೇನು? ನಿಸರ್ಗವು ತನ್ನದೇ ಆದ ನೀತಿ ನಿಯಮಗಳ ಮೇಲೆ ನಡೆಯುತ್ತಿರುತ್ತದೆ. ಅದನ್ನು ಪ್ರಜ್ಞೆಯಿಂದ ತಿಳಿಯಬಹುದೇ ವಿನಃ ಸಿದ್ಧಜ್ಞಾನಗಳಿಂದಾಗಲಿ, ಶಾಸ್ತ್ರಜ್ಞಾನಗಳಿಂದಾಗಲಿ ಅಲ್ಲ… ಏಕೆಂದರೆ ಶಾಸ್ತ್ರ ಜ್ಞಾನಗಳು ಕೆಲವೇ ಜನಾಂಗಗಳ ಉದ್ಧಾರವನ್ನಷ್ಟೆ ಬಯಸುತ್ತವೆ. ಅವು ಸಮಷ್ಠಿಯ ನ್ಯಾಯೋಚಿತಕ್ಕೆ ಬದ್ಧವಾಗಿರುವುದಿಲ್ಲ.

ಈಗ ನಾವು ಚರ್ಚಿಸಬೇಕಾದ ಮುಖ್ಯ ಪ್ರಶ್ನೆಗೆ ಬರೋಣ. ವೈದಿಕ- ಅವೈದಿಕ ಸಂಸ್ಕೃತಿಗಳ ಮಧ್ಯೆ ನಡೆದಿರುವ ವೈಚಾರಿಕ ಸಂಘರ್ಷ ಮತ್ತು ಚಳುವಳಿಗಳಲ್ಲಿ ಅವೈದಿಕರು ವೈದಿಕರ ಕರ್ಮಕಾಂಡ ಭಾಗಗಳ ಮೇಲೆ ಬಂಡಾಯ ಹೂಡಿದ್ದರೂ ಸಹ ಜ್ಞಾನಕಾಂಡ ಭಾಗಗಳಾಗಿರುವ ಉಪನಿಷತ್ತುಗಳ ‘ಬ್ರಹ್ಮಸತ್ಯವನ್ನೇ’ ಅಂತಿಮಸತ್ಯವನ್ನಾಗಿ ಸ್ವೀಕರಿಸಿದವು ಎಂಬ ಮನೋಧೋರಣೆ ಬಹಳಷ್ಟು ಜನರಲ್ಲಿದೆ. ಹಾಗಾಗಿ ಅವೈದಿಕ ಧಾರೆಗಳ “ಬಯಲು” ಎಂಬ ಉತ್ಕೃಷ್ಟವಾದ ಸಾಧನಾ ಚಹರೆಯನ್ನು ವೈದಿಕರ “ಪರಬ್ರಹ್ಮ” ತತ್ವವನ್ನಾಗಿ ಗ್ರಹಿಸುವುದು ರೂಢಿಯಾಗಿದೆ. ಇದು ನ್ಯಾಯೋಚಿತವೇ? ಅವೈದಿಕ ಪರಂಪರೆಗಳು ಸಹ “ಪರಬ್ರಹ್ಮ” ಚೈತನ್ಯದ ಸುತ್ತಲೇ ತಮ್ಮ ಸಿದ್ಧಾಂತಗಳನ್ನು ಮಂಡಿಸುತ್ತವೆ ಎಂದು ಬಹುಶಃ ಜನರು ನಂಬುತ್ತಾರೆ.

ಪ್ರತಿ ಕಾಲದಲ್ಲಿಯೂ ಅಂದಿನಿಂದ ಇಂದಿನ ತನಕವೂ ಸಂಸ್ಕೃತ ಭೂಯಿಷ್ಠ ಧೋರಣೆಗಳು ಅವೈದಿಕ-ವೈದಿಕ ಸಿದ್ಧಾಂತಗಳಲ್ಲಿರುವ ಭಿನ್ನತೆಗಳನ್ನು ಧರ್ಮಸಂಕರಕ್ಕೀಡಾಗಿಸು (ಮಿಶ್ರಣ ಮಾಡುವ ಪದ್ಧತಿ)ತ್ತಲೇ ಬರುತ್ತಿವೆ. ಅಂದರೆ ಇವೆರಡೂ ಸಿದ್ಧಾಂತಗಳಿಗಿರುವ ವೈಶಿಷ್ಠ್ಯ ವಿಶೇಷತೆಗಳ ಭಿನ್ನತೆಯನ್ನು ಭಾಷೆಯ ಝಲಕಿನಲ್ಲಿ ಸಾರೂಪ್ಯ –ಸಾಮೀಪ್ಯಗೊಳಿಸಿ ಇವೆರಡರಲ್ಲಿ ಯಾವುದೇ ಭಿನ್ನತೆಯಿಲ್ಲ ಎಂದು ನಂಬಿಸಲಾಗುತ್ತಿದೆ. ಹೀಗೆ ಸೈದ್ಧಾಂತಿಕ ವಿರೂಪದ ಸಾಂಸ್ಕೃತಿಕ ರಾಜಕಾರಣದ ತಂತ್ರವನ್ನು ಭೇದಿಸುವ ಪ್ರಜ್ಞೆಯಿಲ್ಲದಿದ್ದಾಗ ನಾವು ಶ್ರಮಣರ ಆಧ್ಯಾತ್ಮಿಕ ಪಥವನ್ನು ಗ್ರಹಿಸುವಲ್ಲಿ ವಿಫಲರಾಗುತ್ತೇವೆ. ಹಾಗಾದರೆ ಬ್ರಹ್ಮವಸ್ತುವಿನ ಕುರಿತಾಗಿ ಶ್ರಮಣಧಾರೆಗಳು ಯಾವ ಅಭಿಪ್ರಾಯವನ್ನೂ ಮಂಡಿಸಲಿಲ್ಲವೇ? ಶ್ರಮಣರು ಬ್ರಹ್ಮವಸ್ತುವನ್ನು ನಂಬಿದರೆ? ಬಯಲಿಗೂ ಬ್ರಹ್ಮವಸ್ತುವಿಗೂ ಇರುವ ಅಂತಃಸಂಬಂಧವೇನು? ಈ ಪ್ರಶ್ನೆಗಳನ್ನು ನಾವು ಸ್ಪಷ್ಟಗೊಳಿಸಿಕೊಳ್ಳಲೇ ಬೇಕು. ಈ ಸ್ಪಷ್ಟತೆಗೆ ನಾವೊಂದಿಷ್ಟು ಉಪನಿಷತ್ತುಗಳ ವಿಷಯವನ್ನು ನೋಡೋಣ… ಇದು ಅನಿವಾರ್ಯವು ಕೂಡ ಆಗಿದೆ.

ಉಪನಿಷತ್ತುಗಳನ್ನು ವೇದಗಳ ಅಂತಿಮ ಭಾಗಗಳು ಎಂದು ತಿಳಿಯಲಾಗುತ್ತದೆ. ಆದ್ದರಿಂದ ಉಪನಿಷತ್ತುಗಳು ವೇದಾಂತಗಳೆನಿಸಿಕೊಂಡಿವೆ. ಉಪನಿಷತ್ತುಗಳು ಮಾನವ ನಿರ್ಮಿತವಲ್ಲ, ಅವು ದೈವವಾಣಿ. ಆದ್ದರಿಂದ ಅವು ಶಾಶ್ವತ ಸತ್ಯವಾಗಿವೆ. ಹಾಗೆ ನೋಡಿದರೆ ವೈದಿಕ ಪ್ರಮುಖ ನಿಲುವುಗಳನ್ನು ಪ್ರತಿಪಾದಿಸುವ ಜೈಮಿನಿ ಪೂರ್ವ ಮೀಮಾಂಸೆ ಹಾಗೂ ಬಾದರಾಯಣ ಬ್ರಹ್ಮಸೂತ್ರಗಳಿಗೆ ವೇದಾಂತವು ಪೂರಕವಾಗಿದೆ ಎಂದು ಆದಿಶಂಕರಾಚಾರ್ಯರು ತಮ್ಮ ಭಾಷ್ಯಗಳಲ್ಲಿ ದೃಢೀಕರಿಸಿದ್ದಾರೆ. ಆದಾಗ್ಯೂ ಆಗಮಗಳಲ್ಲಿ ಕರ್ಮಕಾಂಡಗಳಿಗಿಂತಲೂ ಜ್ಞಾನಕಾಂಡಗಳೇ ಶ್ರೇಷ್ಠವೆಂದು ಉಪನಿಷತ್ತುಗಳು ಪ್ರಸ್ತಾಪಿಸುತ್ತವೆ. ಮೂಲ ಉಪನಿಷತ್ತುಗಳು ಸಂಖ್ಯೆಯಲ್ಲಿ ಸಾವಿರಾರು ಇದ್ದಂತೆ ತೋರಿದರೂ ಅತ್ಯಂತ ಸನಾತನ ಉಪನಿಷತ್ತುಗಳ ಸಂಖ್ಯೆ 108 ಎಂದು ಬಹಳ ಜನ ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ಇವೆಲ್ಲವುಗಳನ್ನೂ ಓದಿ ಅರ್ಥೈಸಿಕೊಳ್ಳುವುದು ಕಷ್ಟವೆಂದು ತಿಳಿದ ಶಂಕರಾಚಾರ್ಯರು 108 ಉಪನಿಷತ್ತುಗಳ ಸಾರವನ್ನು ಹನ್ನೊಂದಕ್ಕೆ ಇಳಿಸಿದರೆಂದು ಹೇಳಲಾಗುತ್ತದೆ. ಅವು ಯಾವುವೆಂದರೆ- 1. ಈಶಾವಾಸ್ಯ 2. ಕೇನ 3. ಕಠವಲ್ಲಿ 4. ಪ್ರಶ್ನ 5. ಮಂಡೂಕ 6. ಮಾಂಡೂಕ್ಯ 7. ತೈತೇರಿಯಾ 8. ಐತರೇಯ 9. ಛಾಂದೋಗ್ಯ 10. ಬೃಹದಾರಣ್ಯಕ 11. ನೃಸಿಂಹತಾಪನಿ.

ಈ ಎಲ್ಲಾ ಉಪನಿಷತ್ತುಗಳನ್ನು ನಾಲ್ಕು ಭಾಗಗಳಾಗಿ ವರ್ಗೀಕರಿಸಿ ಓದುವ ಶಾಸ್ತ್ರೀಯ ಪದ್ಧತಿ ಇದೆ. 1. ಋಗ್ವೇದ 2. ಶುಕ್ಲ ಯಜುರ್ವೇದ ಮತ್ತು ಕೃಷ್ಣಯಜುರ್ವೇದ 3. ಸಾಮವೇದ 4. ಅಥರ್ವ ವೇದ.

ಇವುಗಳಲ್ಲಿ ಋಗ್ವೇದ ಪಾಠಾಂತರಗಳು ಅತ್ಯಂತ ಸನಾತನವೆಂದು ಹೇಳಲಾಗುತ್ತದೆ. ಉಪನಿಷತ್ತುಗಳ ಸಾರವನ್ನು ಸರಳವಾಗಿ ಹೇಳುವುದಾದರೆ- ದೃಶ್ಯ- ಅದೃಶ್ಯಗಳಿಗೆ ವ್ಯಕ್ತವಾಗುತ್ತಿರುವ ಪ್ರಪಂಚದಲ್ಲಿ ಪ್ರತಿಯೊಂದಕ್ಕೂ ಉತ್ಪತ್ತಿ ನಾಶಗಳನ್ನು ನಾವು ನೋಡುತ್ತಲೇ ಇದ್ದೇವೆ. ಪಂಚತನ್ಮಾತ್ರೆಗಳ ಅನ್ಯೋನ್ಯ ಮಿಶ್ರಣದಿಂದ ಏರ್ಪಟ್ಟ ಪಂಚಭೂತಗಳಿಂದ ಪ್ರಪಂಚ ಉಂಟಾಯಿತೆಂಬುದು ಸಾಮಾನ್ಯ ಅಭಿಪ್ರಾಯ. ಹಾಗಾದರೆ ಪಂಚಭೂತಗಳು ಹೇಗೆ ಉಂಟಾದವು? ಆತ್ಮವೇ ಪಂಚಭೂತಗಳಾಗಿ ಪರಿಣಾಮ ಹೊಂದಿತು… ಆತ್ಮದಿಂದ ಆಕಾಶ, ಆಕಾಶದೊಳಗೆ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯೊಳು ಜಲ, ಜಲದಿಂದ ಪೃಥ್ವಿ, ಪೃಥ್ವಿಯಲ್ಲಿ ಔಷಧಗಳು, ಔಷಧಗಳಿಂದ ಅನ್ನ, ಅನ್ನದಿಂದಾಗಿ ಮನುಷ್ಯರಾದಿಯಾಗಿ ಸಕಲ ಜಂತು ಜಾಲ ಜೀವ ವೈವಿಧ್ಯಗಳಾಯಿತು… ಈ ರೀತಿಯಾಗಿ ಪಿಂಡ ಬ್ರಹ್ಮಾಂಡಗಳು ಪರಮಾತ್ಮನ ಮಾಯೆಯಿಂದಾದವು.

ಈ ವಿಶ್ವಕ್ಕೆ ಸೇರಿದ ಸರ್ವಜೀವ, ಸರ್ವ ಪದಾರ್ಥಗಳ ಸೃಷ್ಟಿ ಸ್ಥಿತಿ ಲಯಗಳಿಗೆ ಮೂಲಕಾರಣವಾಗಿರುವ ಚೈತನ್ಯ ಅಥವಾ ಶಕ್ತಿ ಅಥವಾ ವಸ್ತು ಅಥವಾ ತತ್ವ ಯಾವುದಿದೆಯೋ ಅದು ‘ಬ್ರಹ್ಮ’ವೆಂದು ಹೇಳಲ್ಪಟ್ಟಿದೆ. ಬ್ರಹ್ಮ ಎಂಬ ಶಬ್ದವು ‘ಬೃಹಿ’ ‘ವೃದ್’ ಎಂಬ ತತ್ಸಂಬಂಧದ ಗ್ರಹಿಕೆಯಿಂದಾಗಿ ‘ಶ್ರೇಷ್ಠವಾದುದು’- ‘ಅತ್ಯಂತ ಮೂಲದ್ದು’- ‘ಅನಂತವಾದದ್ದು’- ‘ಉತ್ಕೃಷ್ಟವಾದದ್ದು’ ಇದಕ್ಕಿಂತ ಉತ್ಕೃಷ್ಟವಾದದ್ದು ಮತ್ತೊಂದು ಇಲ್ಲವಾಗಿದೆ. ಆತ್ಯಂತಿಕ ಸತ್ಯವಾಗಿರುವ ಆ ಬ್ರಹ್ಮದ ಜ್ಞಾನವನ್ನು ಕುರಿತ ಸಂಪೂರ್ಣ ತಿಳುವಳಿಕೆಯನ್ನು ಸಂಪೂರ್ಣವಾಗಿ ವಿಶದಪಡಿಸುವ ಗ್ರಂಥಗಳೇ ಉಪನಿಷತ್ತುಗಳು.

ಉಪನಿಷತ್ತುಗಳು ಮೂಲತಃ ಬ್ರಹ್ಮವಿದ್ಯೆಯನ್ನು ಪ್ರಭೋಧಿಸುತ್ತವೆ. ತೈತೇರಿಯಾ ಉಪನಿಷತ್ತಿನಲ್ಲಿ- “ಯತೋವಾಯಿಮಾನಿ ಭೂತಾನಿ, ಜಾಯಂತಿ, ಯೇನ ಜಾತಾನಿ ಜೀವಂತಿ ಯತ್ಪ್ರಯಂ, ತ್ಯಭಿ ಸಂ ವಿಶಂತಿ ತತ್ವ ಜಿಜ್ಞಾಸ ಸ್ವಾತದ್ ಬ್ರಹ್ಮೇತಿ” ಅಂದರೆ ಯಾವುದರಿಂದ ಈ ಪಂಚಭೂತಗಳು, ಜೀವಿಗಳು, ಜೀವೋತ್ಪತ್ತಿ ಮೊದಲಾದ ಸರ್ವ ಸೃಷ್ಟಿಯ ಕಾರ್ಯಗಳು ಹುಟ್ಟುತ್ತಿವೆಯೋ, ಹೀಗೆ ಹುಟ್ಟುವವೆಲ್ಲವೂ ಜೀವಿಸುತ್ತಿರುವವೋ, ಜೀವಿಸುತ್ತಿರುವವೆಲ್ಲವೂ ಸಾಯುವಾಗ ಯಾವುದರಲ್ಲಿ ಲೀನವಾಗುತ್ತಿರುವವೋ ಅದು ಬ್ರಹ್ಮ. ಇಂದ್ರಿಯಗೋಚರ ಈ ಜಗತ್ತಿನಲ್ಲಿ ಏನೇನು ನಡೆಯುತ್ತದೆಯೋ ಅದೆಲ್ಲವೂ ಬ್ರಹ್ಮದ ಲೀಲೆ, “ಲೀಲಾ ದೇವತು ಕೈವಲ್ಯಂ” ಎಂಬಂತೆ ಎಲ್ಲಕ್ಕೂ ಅದೇ ಕಾರಣವಾಗಿದ್ದರೂ ತನಗೆ ಮಾತ್ರ ಕಾರಣವಿಲ್ಲ. ಅದು ಆದಿ ಮಧ್ಯಂತ ರಹಿತ, ಆ ಪರಬ್ರಹ್ಮ ಪರಮಾತ್ಮನು ಶಾಶ್ವತನು, ಆಕಾರರಹಿತನು, ಉಪದ್ರವಗಳಿಲ್ಲದವನು. ಸಕಲ ಕರ್ಮಗಳೂ ಅವನದೇ ಆಗಿದ್ದರೂ ಅವನು ಕರ್ಮರಹಿತನು, ಸರ್ವಸಂಗಪರಿತ್ಯಾಗಿ, ಇಂದ್ರಿಯಗಳಿಲ್ಲದಿದ್ದರೂ ಸರ್ವವನ್ನು ಬಲ್ಲವನು… ಇತ್ಯಾದಿಯಾಗಿ ವರ್ಣಿಸಲಾಗಿದೆ.

ಅವನನ್ನು ತಿಳಿದುಕೊಳ್ಳಲು ಅವನ ಮಾಯಾವಿಲಾಸವನ್ನು ಅರಿತುಕೊಳ್ಳುವ ಜ್ಞಾನವು ‘ಬ್ರಹ್ಮವಿದ್ಯೆ’ ಎನಿಸಿಕೊಂಡಿದೆ. ಬ್ರಹ್ಮವಿದ್ಯೆಯನ್ನು ಸಾಂಪ್ರದಾಯಿಕ ಉಪಾಸನಾ ಪದ್ಧತಿಗಳಿಂದ, ಯೋಗಗಳಿಂದ ಮತ್ತು ಜ್ಞಾನಾರ್ಜನೆಯಿಂದ ತಿಳಿದುಕೊಳ್ಳಲು 32 ಬ್ರಹ್ಮವಿದ್ಯೆಗಳನ್ನು ಉಪನಿಷತ್ತುಗಳಲ್ಲಿ ಹೇಳಲಾಗಿದೆ. ಇವುಗಳ ಹೊರತಾಗಿ ಯಾವ ಯಾವ ವಿದ್ಯೆಗಳಿವೆಯೋ ಅವೆಲ್ಲವೂ ಅವಿದ್ಯೆ ಎನಿಸಿಕೊಳ್ಳುತ್ತವೆ. ಬ್ರಹ್ಮವಿದ್ಯೆಗಳಲ್ಲಿ ಮುಖ್ಯವಾದವುವೆಂದರೆ- 1. ಈಶಾವಾಸ್ಯ 2. ನಚಿಕೇತ 3. ಅಂಗುಷ್ಠ ಪ್ರಮಿತ 4. ಸತ್ಯಕಾಮ 5. ಅಕ್ಷರಪದ 6. ಆನಂದಮಯ 7. ಪುರುಷ 8. ಸದ್ವಿದ್ಯ 9. ಅಂತರಾದಿತ್ಯ ವಿದ್ಯೆ 10. ಆಕಾಶ ವಿದ್ಯೆ 11. ಪ್ರಾಣವಿದ್ಯೆ 12. ಪರಂಜ್ಯೋತಿ 13. ಕಾಂಪರಂಜ್ಯೋತಿ ದ್ವಿದಲ್ಯ 14. ಉಪಕೋಸಲ 15. ವೈಶ್ವಾನರ 16. ಭೂಮ 17. ದಹರ 18. ಮಧು 19. ಸಂವರ್ಗ 20. ಪಂಚಾಗ್ನಿ 21. ಉದ್ಧಾಲ ಕಾಂತರ್ಯಾಮಿ 22. ಗಾರ್ಗ್ಯಕ್ಷರ 23. ಜೋತಿಷಾಂಜ್ಯೋತಿ 24. ಮೈತ್ರೇಯ 25. ಆದಿತ್ಯ ಮಂಡಲಸ್ಥ ಸತ್ಯಬ್ರಹ್ಮ 26. ಅಕ್ಷಿಸತ್ಯಬ್ರಹ್ಮವಿದ್ಯ 27. ಉಪಸ್ಥಿಕಹಳ 28. ಪ್ರತರ್ಧನ 29. ಚಾಲಾಕಿನಿ 30. ಅಜಾ 31. ರುದ್ರ 32. ಚತುರ್ಮುಖ.

ಈ ಎಲ್ಲಾ ವಿದ್ಯೆಗಳೂ ಜೀವ ಮತ್ತು ಪರಮಬ್ರಹ್ಮಗಳ ವ್ಯಾಪ್ಯ- ವ್ಯಾಪಕತೆಗಳಿಗಿರುವ ಸಂಬಂಧಗಳನ್ನು ಸ್ಪಷ್ಟೀಕರಿಸಿ, ಜೀವ ಮತ್ತು ಬ್ರಹ್ಮದ ನಡುವಿನ ಸಂಯೋಗ ಸಾಧ್ಯತೆಗಳನ್ನು ವಿವರಿಸುತ್ತವೆ. ಈ ಸಂಯೋಗ ಲಕ್ಷ್ಯದ ಭಾಗವಾಗಿ ಉಪನಿಷತ್ತುಗಳು ನಾಲ್ಕು ಮಹಾವಾಕ್ಯಗಳನ್ನು ಸಾರಿ ಹೇಳುತ್ತವೆ. ಅವು ಯಾವುವೆಂದರೆ-

  1. ಪ್ರಜ್ಞಾನಂ ಬ್ರಹ್ಮ (ಐತರೇಯ: 5.3)
  2. ಅಹಂಬ್ರಹ್ಮಾಸ್ಮಿ (ಬೃಹದಾರಣ್ಯಕ: 1.4.10)
  3. ತತ್ವಮಸಿ (-ಛಾಂದೋಗ್ಯ: 6.8.7)
  4. ಅಯಮಾತ್ಮ ಬ್ರಹ್ಮ (- ಮಾಂಡೂಕ್ಯ: 2(4))

ಇವುಗಳಿಗಿರುವ ಒಂದು ಪ್ರಾಥಮಿಕ ತಿಳುವಳಿಕೆಯೇನೆಂದರೆ, ಜೀವನಿಗೆ ಬ್ರಹ್ಮದ ಜ್ಞಾನವಿದೆ. ಆದ್ದರಿಂದ ಮುಕ್ತಿಯಲ್ಲಿ ಜೀವನು ಸಾಕ್ಷಾತ್ಸಂಬಂಧದಲ್ಲಿ ಇರುತ್ತಾನೆ, ಅಂದರೆ ಜೀವನು ಬ್ರಹ್ಮದ ಸಹಚಾರಿ. ಹೀಗೆಂದ ಮಾತ್ರಕ್ಕೆ ಜೀವ ಮತ್ತು ಬ್ರಹ್ಮರು ಒಂದೇ ಅಲ್ಲ. ಯಾವ ಜೀವನು ಪರಮೇಶ್ವರನ ಗುಣ- ಕರ್ಮ- ಸ್ವಭಾವಕ್ಕೆ ಪರವಾಗಿ ತನ್ನ ಗುಣ- ಕರ್ಮ- ಸ್ವಭಾವಗಳನ್ನು ರೂಪಿಸಿಕೊಂಡರೆ ಅವನು ಮಾತ್ರ ಸಾಧರ್ಮ್ಯದಿಂದ ಬ್ರಹ್ಮದೊಂದಿಗೆ ಏಕತ್ವವನ್ನು ಹೇಳಿಕೊಳ್ಳಬಲ್ಲವನಾಗಿರುತ್ತಾನೆ.

ಉಪನಿಷತ್ತುಗಳ ಅಂತಿಮ ನಿರ್ಣಯಗಳಾಗಿರುವ ಈ ನಾಲ್ಕು ಮಹಾವಾಕ್ಯಗಳ ಕುರಿತು ಹೀಗೆ ಉಲ್ಲೇಖಿಸಲಾಗಿದೆ-

ಯೇನೇಕ್ಷತೇ ಶೃಣೋತೀದಂ/ ಜಿಘ್ರುತಿ ವ್ಯಾಕರೋಚಿತ
ಸ್ವಾದ್ವಾಸ್ವಾದು ವಿಜಾನಾತಿ/ ತತ್ಪ್ರಜ್ಙಾಮುದೀರಿತಂ//
ಚತುರ್ಮುಖೇಂದ್ರ ದೇವೇಶು/ ಮನುಶ್ಯಾಶ್ವಗವಾದಿಷು
ಚೈತನ್ಯಮೇಕಂ ಬ್ರಂಹ್ಮತಃ ಪ್ರಜ್ಞಾನ ಬ್ರಂಹ್ಮಮಯ್ಯಪಿ
(ಯಜುರ್ವೇದ ಜ್ಞಾನಕಾಂಡ ಬೃಹದೋಪನಿಷತ್ತು)

ಪರಿಪೂರ್ಣ ಪರಾತ್ಮಾಸ್ಮಿನ್/ ದೇಹೇ ವಿದ್ಯಾದಿಕಾರಿಣಿ
ಬುದ್ಧೇ ಸಾಕ್ಷಿ ತಯಾ ಸ್ತಿತ್ವಾ/ ಸ್ಪುರಂನ್ನಹ ಮಿತೀರ್ಯತೇ//
ಏಕಮೇವಾದ್ವಿತೀಯಂ/ ನನ್ನಾಮ ರೂಪ ವಿವರ್ಜಿತಂ
ಸೃಷ್ಟೇ ಪುರಾದುನಾಪ್ಯಸ್ಯ/ ತಾದೃಕ್ತ್ವಂ ತದಿತೀರ್ಯತೇ//

ಶ್ರೋತುರ್ದೇಹೆಂದ್ರಿಯಾತೀತಂ/ ವಸ್ತ್ವತ್ರ ತ್ವಂ ಪದೇರಿತಂ
ಏಕತಾ ಗ್ರಹ್ಯೇತೇ ಸೀತಿ/ ತದೈಕ್ಯ ಮನ ಭೂಯತಾಂ

ಸ್ವಪ್ರಕಾಶ ಪರೋಕ್ಷತ್ವಂ/ ಅಯಮಿತ್ಯುಕ್ತಿತೋಮತಂ
ಅಹಂಕರಾದಿ ದೇಹಾಂತಃ/ ಪ್ರತ್ಯೇಗಾತ್ಮೇತಿ ಗೀಯ್ಯತೆ//
ದೃಶ್ಯ ಮಾನಸ್ಯ ಸರ್ವಸ್ಯ/ ಜಗಸ್ತತ್ವ ಮಿತ್ಯತೇ
ಬ್ರಹ್ಮ ಶಬ್ದೇನ ತದ್ಬ್ರಂಹ್ಮ/ ಸ್ವಪ್ರಕಾಶ ರೂಪಕಂ//

ನಾಲ್ಕು ಮಹಾಸತ್ಯಗಳ ಕುರಿತಾದ ಸ್ಪಷ್ಟೀಕರಿಸಲ್ಪಟ್ಟ ವಿವರಣೆಗಳಿವು. ನಾವೀಗ ಇವುಗಳ ಪಾಠಾಂತರವನ್ನು ಕನ್ನಡೀಕರಿಸಿ ನೋಡೋಣ. ಮುಖ್ಯವಾಗಿ 1. ಪ್ರಜ್ಞಾನ ಬ್ರಹ್ಮವೆಂದರೆ ಯಾವುದರಿಂದ ಜಗತ್ತನ್ನು ಅರಿಯಲು ಸಾಧ್ಯವಾಗಿದೆಯೋ ಅದು ಪ್ರಜ್ಞಾನ ಬ್ರಹ್ಮ. 2. ಅಹಂ ಬ್ರಹ್ಮಾಸ್ಮಿ- ನಾನು ಬ್ರಹ್ಮನೇ ಆಗಿದ್ದೇನೆ. 3. ತತ್ವಮಸಿ- ಜೀವನಾದ ನಾನು ಬ್ರಹ್ಮನಾದ ನೀನೇ ಆಗಿದ್ದೇನೆ. 4. ಅಯಮಾತ್ಮ ಬ್ರಹ್ಮ- ಆತ್ಮದಿಂದ ಯಾವುದನ್ನೂ ಪ್ರತ್ಯೇಕಿಸಲಾಗದು. ಸರ್ವಭೂತಗಳ ಒಳಹೊರಗೆಂಬ ಉಪಾಧಿ ಉಪಾದಾನವು ಬ್ರಹ್ಮವಾಗಿದೆ. ಇವು ಪ್ರತಿಯೊಬ್ಬರೂ ಆರ್ಜಿಸಬಹುದಾದ ಮಹಾಸತ್ಯಗಳು. ಯಾವನು ಇವುಗಳಲ್ಲಿ ಭೇದ ತೋರುವಂತೆ ನೋಡುವನೋ ಅಂತಹವನು ಮೃತ್ಯುವಿನಿಂದ ಮೃತ್ಯುವನ್ನು ಹೊಂದುತ್ತಾನೆ.(ಮೃತ್ಯುಃಸ ಮೃತ್ಯಂಗಚ್ಛತಿಯ ಇಹನಾನೇನಾ ಪಶ್ಯತಿ(ಕಠ-ವು, 4-0; ಬೃಹದಾರಣ್ಯಕ.ಉ. 4-4-12) ಎಂದು ಉಪನಿಷತ್ತುಗಳು ಅನುಶಾಸನವನ್ನು ಹೊರಡಿಸುತ್ತವೆ. ವೇದಗಳು ಅಪೌರುಷೇಯ, ಅವು ದೇವವಾಣಿಯಾಗಿರುವುದರಿಂದ ಯಾರೂ ಅವುಗಳನ್ನು ಪ್ರಶ್ನಿಸಬಾರದು ಮತ್ತು ತರ್ಕಕ್ಕೆ ಒಡ್ಡಬಾರದೆಂಬುದು ಇಲ್ಲಿಯೂ ಮಾರ್ದನಿಸುತ್ತದೆ.

ಹಾಗಾದರೆ ಹೀಗೊಂದು ಪ್ರಶ್ನೆ. ನಮ್ಮ ನೆಲಮೂಲದ ಆಧ್ಯಾತ್ಮಿಕ ಪರಂಪರೆಗಳು ಈ ಮಹಾಸತ್ಯಗಳನ್ನು ಒಪ್ಪಿಕೊಂಡಿವೆಯೇ? ಇವುಗಳನ್ನು ಇದಿರುಗೊಂಡು ತರ್ಕಿಸಲಿಲ್ಲವೇ? ವೇದಾಂತ ಸಿದ್ಧ ಆಧ್ಯಾತ್ಮಕ್ಕೂ ನೆಲಮೂಲ ಪರಂಪರೆಗಳ ಆಧ್ಯಾತ್ಮಿಕಕ್ಕೂ ಏನಾದರೂ ಭಿನ್ನತೆಗಳಿರಬಹುದೇ? ಇವುಗಳನ್ನು ಗ್ರಹಿಸಲು “ಮಹಾವಾಕ್ಯ ಪ್ರಸ್ಥಾನ”ದಲ್ಲಿ ದೇಸಿ ಆಧ್ಯಾತ್ಮ ಚಿಂತಕರು ಮಂಡಿಸಿರುವ ಚಿಂತನಾ ವಿಧಾನಗಳನ್ನು ಅನುಸಂಧಾನ ಮಾಡಬೇಕಾಗಿದೆ. ಈ ಚರ್ಚೆಯ ಮುಖ್ಯ ಉದ್ದೇಶವೂ ಇದೇ ಆಗಿದೆ.

1.ಪ್ರಜ್ಞಾನ ಬ್ರಹ್ಮ (ಬಾಹ್ಯಾಂತರಗಳನ್ನು ಗ್ರಹಿಸಲ್ಪಡುತ್ತಿರುವ ಅರಿವು ಯಾವುದಿದೆಯೋ ಅದು ಬ್ರಹ್ಮವೇ ಆಗಿದೆ)

ಶ್ರೋತದಿಂದ ಶಬ್ದವನ್ನು, ತ್ವಕ್ಕಿನಿಂದ ಸ್ಪರ್ಶವನ್ನೂ, ಚಕ್ಷುವಿನಿಂದ ರೂಪವನ್ನೂ, ಜಿಹ್ವೆಯಿಂದ ರಸ (ರುಚಿ)ವನ್ನು, ಘ್ರಾಣೇಂದ್ರಿಯದಿಂದ ವಾಸನೆಯನ್ನೂ ಯಾವುದು ಗ್ರಹಿಸುತ್ತಿದೆಯೋ ಅದು ಪ್ರಜ್ಞಾನ ಬ್ರಹ್ಮ. ವಾಕ್ಕಿನಿಂದ ಮಾತು, ಕೈಯಿಂದ ದಾನ, ಪಾದದಿಂದ ಗಮನ, ಗುಹ್ಯದಿಂದ ಆನಂದ, ಗುದದಿಂದ ವಿಸರ್ಜನ ವಿಷಯಾದಿಗಳು ಯಾವುದರಿಂದ ಕ್ರಿಯಾ ರೂಪವನ್ನು ಪಡೆಯುತ್ತವೆಯೋ ಅದುವೇ ಪ್ರಜ್ಞಾನ ಬ್ರಹ್ಮ. ಮನಸ್ಸಿನಿಂದ ನಿಶ್ಚಯ, ಬುದ್ಧಿಯಿಂದ ಚಿಂತನೆ, ಅಹಂಕಾರೇಂದ್ರಿಯದಿಂದ ಅಭಿಮಾನ, ಚಿತ್ತದಿಂದ ಚಲನಾದಿ ವಿಷಯಗಳನ್ನು ಯಾವ ಜ್ಞಾನದಿಂದ ಅರಿಯಲಾಗುತ್ತಿದೆಯೋ ಅದು ಪ್ರಜ್ಞಾನ ಬ್ರಹ್ಮವೆಂದು ಅನಿಸಿಕೊಳ್ಳುತ್ತದೆ. ಒಟ್ಟಿನಲ್ಲಿ ಇಂದ್ರಾದಿ ದೇವತೆಗಳಿಂದ ಮೊದಲ್ಗೊಂಡು ಮನುಷ್ಯ, ಅಶ್ವ, ಕ್ರಿಮಿಕೀಟಾದಿಗಳವರೆಗೂ ಇರುವ ‘ಅರಿವಿನ’ ಚೈತನ್ಯ ಏನಿದೆಯೋ ಅದು ಪ್ರಜ್ಞಾನ ಬ್ರಹ್ಮವೆಂದು ಐತರೇಯ ಉಪನಿಷತ್ತಿನಲ್ಲಿ ವಿವರಿಸಲ್ಪಟ್ಟಿದೆ.

ಪರಮಾತ್ಮನು ‘ಅರಿವಿನಿಂದ’ ಅರಿಯಲ್ಪಡಲು ಯೋಗ್ಯನಾಗಿದ್ದಾನೆ. ಯಾವ ಆತ್ಮನು ಜಗತ್ತಿಗೂ ಜೀವನಿಗೂ ಆತ್ಮನಾಗಿದ್ದಾನೋ ಅವನು ಅತ್ಯಂತ ಸೂಕ್ಷ್ಮನೂ ಸತ್ಯ ಸ್ವರೂಪನೂ ಆಗಿದ್ದಾನೆ, ತಾನು ತನ್ನಿಂದಲೇ ಆಗಿದ್ದಾನೆ. ಅವನು ಜ್ಞಾನಾಧೀನವೇ ಆಗಿದ್ದಾನೆ.

ಆತ್ಮವಸ್ತುವೆಂದಲ್ಲಿ ಅರಿವು ಮರವೆ ಉಂಟೆ?
ಹೇಮ ತನ್ಮಯವಾದಲ್ಲಿ ಪರುಷರಸವುಂಟೆ?
ನಾನು ನೀನಾದಲ್ಲಿ ಕರ್ತೃ ಭೃತ್ಯತ್ವವೆಂಬುದು ಎತ್ತಣ ಸುದ್ದಿ ಹೇಳಾ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನ?          (ಪ್ರಸಾದಿ ಭೋಗಣ್ಣ)

ಆತ್ಮ ವಸ್ತುವೆಂಬಲ್ಲಿ ಅರಿವು ಮರವೆ ಉಂಟೆ? ಅರಿವು ಆತ್ಮವಸ್ತುವೆಂದಾಗಿದ್ದ ಪಕ್ಷದಲ್ಲಿ ಆತ್ಮನು ಸ್ಥಿರ ಸ್ವರೂಪನೂ ಶಾಶ್ವತನೂ ಆಗಿರುವುದರಿಂದ ಅರಿವು ಸಹ ಸ್ಥಿರವಾಗಿರಬೇಕಿತ್ತಲ್ಲವೆ? ಆದರೆ ಅರಿವು ಸ್ಥಿರವಾಗಿ ನಿಲ್ಲದೇ ಮರವೆಗೊಳಗಾಗುತ್ತಲೇ ಇರುತ್ತದೆ ಎಂಬುದು ಈ ವಿಡಂಬನೆಯ ಸಾರವಾಗಿದೆ.

ಹೇಮ ತನ್ಮಯವಾದಲ್ಲಿ ಪರುಷರಸವುಂಟೆ?- ಚಿನ್ನವು ಗಟ್ಟಿಯಾದ ಮೇಲೆ ಅದರಲ್ಲಿ ಪಾದರಸ ನಿಲ್ಲುವುದೇ? ಎಂಬುದು ಇಲ್ಲಿನ ವಾಚ್ಯಾರ್ಥ. ಚಿನ್ನದ ಗಣಿಗಳಲ್ಲಿ ಚಿನ್ನದ ಸಣ್ಣಸಣ್ಣ ಕಣಗಳನ್ನು ಒಂದುಗೂಡಿಸಲು ಪಾದರಸವನ್ನು ಉಪಯೋಗಿಸುತ್ತಾರೆ. ಪಾದರಸ ಚಿನ್ನವೆರಡೂ ಮಿಶ್ರಣಗಳನ್ನು ಕಾಯಿಸಿದಾಗ ಪಾದರಸ ಶಾಖಕ್ಕೆ ಬೆಂದು ಹೋಗಿ ಚಿನ್ನವು ಗಟ್ಟಿ ರೂಪದಲ್ಲಿ ಉಳಿಯುತ್ತದೆ. ಆದ್ದರಿಂದ ಶುದ್ಧ ಚಿನ್ನದಲ್ಲಿ ಪರುಷ ರಸ (ಪಾದರಸ) ಬೆಂದು ಹೋಗಿ ಬೂದಿಯಾಗಿರುತ್ತದೆ.

ನಾನು ನೀನಾದಲ್ಲಿ ಕರ್ತೃ ಭೃತ್ಯತ್ವ ಎತ್ತಣ ಸುದ್ದಿ ಹೇಳಾ?- ನಾನೆಂಬ ಜೀವನು ನೀನೆಂಬ ಆತ್ಮ(ಬ್ರಹ್ಮ)ನಾಗುವಲ್ಲಿ ಎಲ್ಲಾ ಸತ್ಕ್ರಿಯೆ*ದುಷ್ಕ್ರಿಯೆ; ಸತ್ ಚಿಂತೆ*ದುಶ್ಚಿಂತೆಗಳನ್ನು ನೀನೇ ಮಾಡಿಸುತ್ತೀಯಾ ಎಂದಾಯಿತು. ಆದರೆ ಅವುಗಳ ಫಲ ಮಾತ್ರ ನಾನೆಂಬ ಜೀವನು ಅನುಭವಿಸುತ್ತಾನೆಂಬುದು ಎತ್ತಣ ಸುದ್ದಿ? ಎಂದು ವಿಡಂಬಿಸುವುದು ಈ ವಚನದ ಪ್ರಕ್ರಿಯೆಯಾಗಿದೆ. ಪರಮಾತ್ಮನನ್ನು ‘ಜ್ಞಾನ’ಕ್ಕೆ ಆರೋಪಿಸಿ, ಜೀವನನ್ನು ‘ಅಜ್ಞಾನ’ಕ್ಕೆ ಆರೋಪಿಸುವುದು ವೈರುಧ್ಯವಾಗುತ್ತದೆಯಲ್ಲವೇ? ಜ್ಞಾನ- ಅಜ್ಞಾನಗಳೆರಡೂ ಮನುಷ್ಯ ಸೃಷ್ಟಿಯೇ ಆಗಿವೆ ಎಂಬುದು ಪ್ರತ್ಯಕ್ಷಾನುಭವದಲ್ಲಿ ತೋರುತ್ತಿರುವಾಗ ಇದು ಎತ್ತಣದ ಸುದ್ದಿ?

ಜೀವಾತ್ಮ ಅಂತರಾತ್ಮನ ಸುದ್ದಿಯ ಬೆಸಗೊಂಬಡೆ ಹೇಳಿಹೆ ಕೇಳಿ ಭೋಃ
ಹುಸಿಯ ಸಂಕಲೆಯಾಗಿದ್ದಲ್ಲಿ ಕಾದುಕೊಂಡಿದ್ದನೊಬ್ಬ.
ಕಥೆ ಕನಸ ಮಾಡಿ ಹೇಳುತ್ತಿದ್ದನೊಬ್ಬ.
ಪರಾಪರಕ್ಕೆ ಹೋಗಿ ಪರಮನ ಸುದ್ದಿಯ ಕೊಂಡುಬರುತ್ತಿಪ್ಪ
ಅವರಿಬ್ಬರನೂ ಕೆಡೆಮೆಟ್ಟಿ ಹೋಹಾಗ,
ಲೋಕ ನಿರ್ಬುದ್ಧಿಗೊಂಡಿತ್ತು, ಕೂಡಲಸಂಗಮದೇವಾ. (ಬಸವಣ್ಣ)

ಅರಿವಿನೆಡೆಯನರಿದೆಹೆನೆಂದರೆ ಅರಿವು ಮರಹಿಂಗೊಳಗಾಯಿತ್ತಾಗಿ, ಆ ಅರಿವಿಂದ
ಅರಿದೆವೆಂಬ ಬರಿಜ್ಞಾನಿಯ ಮಾತ ಕೇಳಲಾಗದು.
ಭಾವದಿಂದ ಭಾವಿಸಿದರೆ ಭಾವ ಭ್ರಾಂತಿಗೊಳಗಾಯಿತ್ತಾಗಿ
ಭಾವದಿಂದ ಭಾವಿಸಿಹೆನೆಂಬ ಭ್ರಮಿತರ ಮಾತ ಕೇಳಲಾಗದು.
ಜ್ಞಾನದಿಂದ ಅರಿದೆನೆಂದರೆ ಜ್ಞಾನ ಅಜ್ಞಾನಕ್ಕೊಳಗಾಯಿತ್ತಾಗಿ
ಜ್ಞಾನದಿಂದ ಅರಿದೆನೆಂಬ ಅಜ್ಞಾನಿಯ ಮಾತ ಕೇಳಲಾಗದು,
ಸುಜ್ಞಾನಭರಿತ ಕೂಡಲಚೆನ್ನಸಂಗಾ ನಿಮ್ಮ ಶರಣ. (ಚನ್ನಬಸವಣ್ಣ)

  1. ಅಹಂಬ್ರಹ್ಮಾಸ್ಮಿ (-ನಾನು ಬ್ರಹ್ಮವಾಗಿದ್ದೇನೆ)

ಪರಿಪೂರ್ಣವಾದ ಪರಮಾತ್ಮ ಸತ್ಯದ ಬ್ರಹ್ಮವಿದ್ಯೆಗೆ ಯೋಗ್ಯವಾಗಿರುವ ಈ ಜೀವ ಶರೀರದೊಳಗೆ, ಬುದ್ಧಿ ಮತ್ತು ಸಾಕ್ಷಿಗೆ ಅಂತಃಸ್ಫುರಿಸುವುದು ಯಾವುದೋ ಅದು ‘ಅಹಂ’ ಪದಕ್ಕೆ ಅರ್ಥವಾಗಿದೆ. ಅಹವೇ ಬ್ರಹ್ಮ; ಬ್ರಹ್ಮವೇ ಅಹ ಎಂದು ತಿಳಿಯುವ ಪರಿ ‘ಅಸ್ಮಿ’ ಎಂಬ ಪದಕ್ಕೆ ಅರ್ಥವಾಗಿದೆ. ಇಲ್ಲಿ ಪಂಚಭೌತಿಕವಾದ ಜಗತ್ತೆಲ್ಲವೂ ಇಲ್ಲವಾಗಿದೆ ಅಥವಾ ಮಾಯೆಯಾಗಿದೆ. ಇಂದ್ರಿಯಗಳಿಗೆ ವೇದ್ಯವಾಗುತ್ತಿರುವ ಭೌತಿಕ ಜಗತ್ತು ಇಲ್ಲವೇ ಇಲ್ಲ. ಬ್ರಹ್ಮವೇ ಇಲ್ಲಿ ನಿತ್ಯವಸ್ತುವಾಗಿದೆ. ಸ್ಥಿರವಾಗಿದೆ. ಯಾವುದು ಸುಸ್ಥಿರವಾಗಿರುವ ಸತ್ಯವಾಗಿದೆಯೋ ಅಂತಹ ಬ್ರಹ್ಮವೇ ನಾನಾಗಿದ್ದೇನೆ.

ಬ್ರಹ್ಮನಿಗೆ ಮಾಯೆ, ಜೀವನಿಗೆ ಅಜ್ಞಾನ; ಇವೆರಡರಲ್ಲಿರುವ ಮಾಯೆ ಮತ್ತು ಅಜ್ಞಾನ ತೊಡೆದು ಹಾಕಿದಾಗ ಬ್ರಹ್ಮವೊಂದೇ ನಿತ್ಯ ಪದಾರ್ಥವಾಗಿದೆ. ಪ್ರಕೃತಿತಸ್ಥ ತತ್ವಗಳು ಮಾಯೆಯಾಗಿವೆ. ಮಾಯೆಯೆಂದರೆ ಇಲ್ಲವಾದದ್ದು ಎಂದರ್ಥ… ಇತ್ಯಾದಿಯಾಗಿ ‘ಅಹಂ ಬ್ರಹ್ಮಾಸ್ಮಿ’ಯನ್ನು ಉಪನಿಷತ್ ವಾಕ್ಯಗಳು ಉದ್ಘೋಷಿಸುತ್ತವೆ. (ಪ್ರಕೃತಿತಸ್ಥ ತತ್ವಗಳು- ಇಂದ್ರಿಯಾನುಭವಕ್ಕೆ ಗ್ರಹೀತವಾಗುತ್ತಿರುವ ವಸ್ತು ಮತ್ತು ಸಂಗತಿಗಳು, ಸಂಬಂಧಗಳು)

ತೆಲುಗು ವಚನಕಾರ ಪಂಡಿತಾರಾಧ್ಯ ಶಿವಾನಂದ ಪಂಡಿತರು ತಮ್ಮ ‘ಉಪನಿಷದ್ ವಾಕ್ಯ ನಿರಾಕರಣೆ’ ಗ್ರಂಥದಲ್ಲಿ ‘ಅಹಂ ಬ್ರಹ್ಮಾಸ್ಮಿ’ಗೆ ಸಂಬಂಧಪಟ್ಟಂತೆ ಹೀಗೆ ಹೇಳುತ್ತಾರೆ: ‘ನಾನು’ ಎಂಬುದು ಅರಿವಿನ ಚೇಷ್ಠೆ ತಾನೆ? ಅರಿವಿಲ್ಲದಿದ್ದರೆ ಹೇಗೆ ‘ನಾನು’ ಎನ್ನಲು ಸಾಧ್ಯ? ಭಾವವು ಭಾವಿಸಿತ್ತು, ಮಾತು ನುಡಿಸಿತ್ತು!!! ಮನಸ್ಸು ನಿಶ್ಚಯಿಸಿತ್ತು!!! ಹಾಗಾದರೆ ಇಲ್ಲಿ ಬ್ರಹ್ಮವಾದದ್ದು ಭಾವವೋ? ಮಾತೋ? ಮನಸ್ಸೋ? ಜೀವವೋ? ಇಲ್ಲ ದೇಹವೋ? ದೇಹದಲ್ಲಿ ಜೀವವಿಲ್ಲದಿದ್ದರೆ ಭಾವ, ಮಾತು, ಮನಸ್ಸು ಇರಲು ಸಾಧ್ಯವಿಲ್ಲ. ದೇಹವಿಲ್ಲದಿದ್ದರೆ ಜೀವ, ಭಾವ, ಮಾತು, ಮನಸ್ಸುಗಳಿರಲು ಸಾಧ್ಯವಿಲ್ಲ. ಇವುಗಳಲ್ಲಿ ಯಾವುದಾದರೂ ಒಂದು ಬ್ರಹ್ಮವಾಗಿದ್ದ ಪಕ್ಷದಲ್ಲಿ ಎಲ್ಲವೂ ಬ್ರಹ್ಮವಾಗಲೇ ಬೇಕಿತ್ತು. ಆದರೆ ಈ ರೀತಿ ಆಗುವುದಕ್ಕೆ ಪ್ರತ್ಯಕ್ಷಾನುಭವವೇನೂ ಇಲ್ಲ. ಅದ್ವೈತಿಗಳು ಈ ವಾಕ್ಯವನ್ನು ಬಳಸಿಕೊಂಡು ನಾವು ನಿಂತ ನೆಲ, ಕುಡಿಯುವ ನೀರು, ಸೇವಿಸುವ ಗಾಳಿ, ನಾವು ಜೀವಿಸಿರುವ ಸಂಬಂಧಗಳಾದ ಅಮ್ಮ-ಅಪ್ಪ, ಅಣ್ಣ-ತಂಗಿ, ಅಕ್ಕ-ತಮ್ಮ, ಗಂಡ-ಹೆಂಡತಿ, ಮಕ್ಕಳು-ಮರಿ, ಬಂಧುಮಿತ್ರರು, ಇತ್ಯಾದಿ ಪ್ರಾಕೃತಿಕ ಸಂಬಂಧಗಳನ್ನೆಲ್ಲಾ ಇಲ್ಲವೆಂದು ವಾದಿಸಿ “ಭಾವದಲ್ಲಿ ಭಾವಿಸಲ್ಪಡುತ್ತಿರುವುದೇ” ಆತ್ಯಂತಿಕ ಸತ್ಯವೆಂದು ನಂಬಿಸಲು ಪ್ರಯತ್ನಿಸಿರುವುದಂತೂ ಒಂದು ಕುಚೋದ್ಯದಂತೆ ಕಾಣಿಸುತ್ತದೆ. ಬದುಕಿನ ವಸ್ತುಸ್ಥಿತಿ ಮತ್ತು ಭ್ರಮೆಗಳ ಮಧ್ಯೆ ಅಸಮತೋಲನ ಸೃಷ್ಟಿಸಿ ಗೊಂದಲಗಳ ಪಾಲಾಗಿಸುವುದಲ್ಲದೇ ಇಲ್ಲಿ ಏನೂ ಸಿಗಲಾರದು (ಕಾತೇ ಕಾಂತಃ? ಕಾತೇ ಪುತ್ರಃ ಸಂಸಾರೋ ಅಯಮತೀವ ವಿಚಿತ್ರತಃ – ಎತ್ತಣ ಹೆಂಡತಿ, ಎತ್ತಣ ಮಕ್ಕಳು, ಸಂಸಾರವೆಂಬುದು ವಿಚಿತ್ರ ಸಂಗತಿ). ಆದ್ದರಿಂದ ಜೀವನ ಪ್ರೀತಿ ಮತ್ತದರ ಮೌಲ್ಯಗಳನ್ನು ಯಾವ ಸಿದ್ಧಾಂತಗಳು ಉಪೇಕ್ಷಿಸುತ್ತವೆಯೋ ಅವೆಲ್ಲವೂ ಭಾವಜನ್ಯ ಭ್ರಮಿತ ಪರ್ವಗಳಾಗಿವೆ. ಭ್ರಮೆ ಅಹಂಕಾರವನ್ನೇ ಮೆರೆಯುತ್ತದೆ. “ಭ್ರಮೇಣ ಹಂ ಭ್ರಮೇಣತ್ವಂ ಭ್ರಮೇಣೋಪಾಸಕೋ ಜನಃ – ಅಂದ ಹಾಗೆ ಅಹಂಕಾರವೂ ಭ್ರಮೆ, ನಾನೆಂಬುದೂ ಭ್ರಮೆ, ಜಗತ್ತಿನ ಸರ್ವರೂ ಭ್ರಮೆಗಳಲ್ಲೇ ಉಪಾಸನೆ ಮಾಡುತ್ತಿದ್ದಾರೆ ಎಂದು ಪಂಡಿತಾರಾಧ್ಯರು ಸ್ಪಷ್ಟಪಡಿಸುತ್ತಾರೆ.

ಶರಣ ಸಾಹಿತ್ಯದಲ್ಲಿಯೂ ಅದ್ವೈತ ತತ್ವದ ಅನುಸಂಧಾನಕ್ಕೆ ಸಂಬಂಧಿಸಿದ ವಚನಗಳಲ್ಲಿ “ಬ್ರಹ್ಮವ ನುಡಿದು ಭ್ರಮಿತನಾದೆನಯ್ಯಾ, ಅದ್ವೈತವ ನುಡಿದು ಅಹಂಕಾರಿಯಾದೆನಯ್ಯಾ” ಎಂಬ ಸಾಲುಗಳು ಬ್ರಹ್ಮ ನಿರಾಕರಣೆಯನ್ನು ಉದ್ಘೋಷಿಸಿವೆ.

ಭಾವಿಸಿ ನೋಡಿಹೆನೆಂಬುದೆಲ್ಲವು ಭ್ರಮೆ,
ಅದು ತಾ ಮುನ್ನಿನಂತೆ ಇದ್ದಿತ್ತು.
ಮುಂದೆ ಭಾವಿಸಬೇಡ ಕೂಡಬೇಡ,
ಕೂಡಿಹೆನೆಂಬ ಭಾವ ಮುನ್ನವೆ ಬೇಡ ಗುಹೇಶ್ವರಾ.

ಜನ್ಮ ಜನ್ಮಕ್ಕೆ ಹೊಗಲೀಯದೆ,
ಸೋsಹಂ ಎಂದೆನಿಸದೆ ದಾಸೋsಹಂ ಎಂದೆನಿಸಯ್ಯಾ.
ಲಿಂಗಜಂಗಮದ ಪ್ರಸಾದವ ತೋರಿ ಬದುಕಿಸಯ್ಯಾ
ಕೂಡಲಸಂಗಮದೇವಾ.

ಆದಿಯಲಾಗಲಿ, ವೇದದಲಾಗಲಿ, ಶಾಸ್ತ್ರದಲಾಗಲಿ, ಸಮಯದಲಾಗಲಿ.
ಎನ್ನವರೆನ್ನೆನು, ಎನ್ನವರೆನ್ನೆನು.
ಎನ್ನವರೆಂದಡೆ ಸಂಗಾ ನಿಮ್ಮಲ್ಲಿಗೆ ದೂರ.
ಎನ್ನವರೆಂದಡೆ ಜನ್ನಕ್ಕೆ ನಡೆವರೆ
ಎನ್ನವರಲ್ಲ, ಕೂಡಲಸಂಗಾ ನಿಮ್ಮಾಣೆ.

  1. ತತ್ವಮಸಿ: (ಅದು ನಾನಾದೆ)

ಛಾಂದೋಗ್ಯೋಪನಿಷತ್ತಿನ ಮಹಾವಾಕ್ಯವಿದು. ದ್ವೈತಿಗಳು ಈ ಮಹಾವಾಕ್ಯವನ್ನು ತಮ್ಮ ತತ್ವಾನುಸಂಧಾನಿಯೆಂದು ‘ತತ್ವಮಸಿ’ಯನ್ನು ಕೊಂಡಾಡುತ್ತಾರೆ. ಏಕೆಂದರೆ ಜೀವ ಮತ್ತು ಪರಮಾತ್ಮನ ಭಿನ್ನತೆಯನ್ನು ಹೇಳಿ ನಂತರ ಜೀವ ಮತ್ತು ಪರಮಾತ್ಮೈಕ್ಯವನ್ನು ಇಲ್ಲಿ ಹೇಳಲಾಗಿದೆ. ಆದ್ದರಿಂದ ಜೀವ ಮತ್ತು ಬ್ರಹ್ಮದ ಮಧ್ಯೆ ಇರುವ ಭೇದ ಇಲ್ಲಿ ನಿಚ್ಚಳವಾಗಿ ಕಂಡುಬರುತ್ತದೆ. ತತ್ವಮಸಿ – ಎಂಬ ನಿರ್ಣಯಕ್ಕೆ ‘ಅದು ನಾನಾದೆ’ ಎಂದು ಅರ್ಥ ಬರುತ್ತದೆ. ಸೃಷ್ಟಿಗೆ ಪೂರ್ವದಲ್ಲಿ ಅದ್ವಿತೀಯವಾಗಿದ್ದ ನಾಮರೂಪ ಕ್ರಿಯಾದಿಗಳೇನೂ ಇಲ್ಲದೇ ಯಾವುದಿದ್ದೀತೋ ಅದು ‘ತತ್’ ಪದದ ಲಕ್ಷಣವಾಗಿದೆ. ಆತ್ಮಾನಾತ್ಮ ವಿವೇಕದಿಂದಾಗಿಯೂ, ಸಾಧನ ಚತುಷ್ಟಯಗಳಿಂದಾಗಿಯೂ ‘ಬ್ರಹ್ಮತ್ವ’ವನ್ನು ಸಾಕ್ಷೀಕರಿಸಿಕೊಂಡ ಯೋಗ್ಯವಂತನಲ್ಲಿ ಅವನ ‘ಧೀ’ ಶಕ್ತಿ ಮತ್ತು ಚಿತ್ತಾದಿ ದೇಹೇಂದ್ರಿಯಗಳಿಗೆ ಅತೀತವಾಗಿ ಸಾಕ್ಷಿಯಾಗಿಹುದು, ಅಂತಃಸಾಕ್ಷಿಯೇ ಬ್ರಹ್ಮ; ಬ್ರಹ್ಮವೇ ಸಾಕ್ಷಿ.

ಹಾಗಾದರೆ… “ಸೃಷ್ಟಿಗೆ ಪೂರ್ವದಲ್ಲಿ ಅದ್ವಿತೀಯವಾಗಿತ್ತು ಎನಲಾಗುತ್ತಿರುವ ನಾಮರೂಪ ಕ್ರಿಯಾಧಿಗಳೇನೂ ಇಲ್ಲದ ವಸ್ತು”- ಎಂಬ ಪರಿಜ್ಞಾನ ಪೂರ್ವಾರ್ಜಿತದಿಂದ ಬಂದಿರುವ ಜ್ಞಾನದ ಜ್ಞೇಯ (ನೆನಪು) ಪದಾರ್ಥವೇ ಆಯಿತಲ್ಲ? ಶೃತಿಗಳೇ ಹೇಳುವಂತೆ… ಯತೋವಾಚೋ ನಿವರ್ತಂತೇ ಅಪ್ರಾಹ್ಯ ಮನಸಾ ಸಹ- ಎಂಬಂತೆ ಮಾತಿನಿಂದ ನುಡಿಯಲಾಗದ್ದು, ಮನಸ್ಸಿನಿಂದ ನಿರೂಪಿಸಲಾಗದ್ದು ಯಾವುದೋ ಅದು ಕೇವಲಾತ್ಮವೆಂದು ಹೇಳುತ್ತಿರುವಾಗ ‘ತತ್ವಮಸಿ’ ಎಂಬ ಧ್ವನಿ ಕೂಡಾ ಮಾತೇ ಆಯಿತಲ್ಲವೇ? ಮಾತಿನ ಮೂಲ ಅರಿವೇ ಅಲ್ಲವೇ?

ಅರಿವರಿತು ಬೆರಗು ಹತ್ತಿತೆಂಬ ಜ್ಞಾನವಿದೇನೊ?
`ನಾಹಂ’ ಎಂಬಲ್ಲಿ ತಾನಾರೊ?
`ಕೋಹಂ’ ಎಂಬಲ್ಲಿ ಮುನ್ನಾರೊ?
`ಪರಬ್ರಹ್ಮ ಸೋಹಂ’ ಎಂಬಲ್ಲಿ ಮುನ್ನ ತಾನೇನಾಗಿದ್ದನೊ?
‘ಚಿದೋಹಂ’ ಎಂಬ ಹಮ್ಮಿನ ಮಾಲೆ ಇದೇನು ಹೇಳಾ?
‘ನಿಃಶಬ್ದಂ ಬ್ರಹ್ಮ ಉಚ್ಯತೇ’ ಎಂಬ ಶಬ್ದವಿಡಿದು
ಬಳಲುವ ಕಾರಣವಿದೇನು ಹೇಳು ಗುಹೇಶ್ವರಾ?

`ಪರಬ್ರಹ್ಮ ಸೋಹಂ’ ಎಂಬಲ್ಲಿ ಮುನ್ನ ತಾನೇನಾಗಿದ್ದನೊ?- ಎಂಬ ಪ್ರಶ್ನೆಯ ಸಾಧ್ಯತೆ ಏನೆಂದರೆ ಅದು ನಾನಾಗಿದ್ದೆ ಎಂದು ತಿಳಿಯುವ ಮುನ್ನ ನೀನು ಏನಾಗಿದ್ದೆ? ಅಂದರೆ ಬ್ರಹ್ಮವಾಗಿರಲಿಕ್ಕಿಲ್ಲ ಜೀವನಾಗಿದ್ದೆ ಎಂದಾಯಿತಲ್ಲವೇ? ಒಂದು ಕಾಲದಲ್ಲಿ ಅದಿರದಿದ್ದದ್ದು- ಇನ್ನೊಂದು ಕಾಲದಲ್ಲಿ ಆಯಿತೆನ್ನುವುದಾದರೆ ಸರ್ವಕಾಲ ಸರ್ವಾವಸ್ಥೆಗಳಲ್ಲಿ ಶಾಶ್ವತ ಸತ್ಯವೆಂದು ಹೇಳಲಾಗುವ ಬ್ರಹ್ಮಕ್ಕೆ ಹೇಗೆ ಅನ್ವಯಿಸಬಲ್ಲದು? ಆದ್ದರಿಂದಾಗಿ….

ನಿತ್ಯ ನಿರಂಜನ ತಾನೆಂದರಿಯದೆ, `ತತ್ತ್ವ ಮಸಿ’ ಎಂದು
ಹೊರಗನೆ ಬಳಸಿ ಸತ್ತಿತ್ತಲ್ಲಾ ಜಗವೆಲ್ಲ ನಾಯ ಸಾವ!
ತಮ್ಮ ತಾವರಿಯದೆ,
ಸತ್ತವರ ಹೆಸರ ಪತ್ರವನೋದಿದಡೆ ಎತ್ತಣ ಮುಕ್ತಿ ಗುಹೇಶ್ವರಾ?

  1. ಅಯಮಾತ್ಮ ಬ್ರಹ್ಮ (ಈ ದೇಹದೊಳಗೆ ನಿವಾಸ ಮಾಡುತ್ತಿರುವ ಆತ್ಮವೇ ಬ್ರಹ್ಮ)

ಈ ದೇಹದಲ್ಲಿ ವಾಸಿಸುತ್ತಿದ್ದಾಗ್ಯೂ ದೇಹೇಂದ್ರಿಯಾತೀತನಾಗಿ, ಸ್ವಚ್ಛವಾಗಿ, ಶುದ್ಧವಾಗಿ, ಸ್ವಯಂಪ್ರಕಾಶಮಾನವಾಗಿ ಅಪರೋಕ್ಷವಾಗಿಯೂ ನಿತ್ಯ ಶುದ್ಧನಾಗಿ ಬದ್ಧ-ಸಿದ್ಧನಾಗಿರುವ ನಿರ್ಗುಣ ಬ್ರಹ್ಮವೇ ಅಯಮಾತ್ಮ ಬ್ರಹ್ಮವೆಂದಾಗುತ್ತದೆ.

ಅಯಮಾತ್ಮ ಬ್ರಹ್ಮವೆಂದರೆ- ಸಮಾಧಿ ಸ್ಥಿತಿಯಲ್ಲಿ ಯಾವಾಗ ಯೋಗಿಗೆ ಪರಮೇಶ್ವರನ ಪ್ರತ್ಯಕ್ಷ(ಜ್ಞಾನ)ವಾಗುತ್ತದೆಯೋ ಆಗ ಅವನು “ಯಾವುದು ನನ್ನಲ್ಲಿ ವ್ಯಾಪಿಸಿಕೊಂಡಿದೆಯೋ ಅದು ಬಹಿರ್ ಪ್ರಪಂಚದಲ್ಲಿಯೂ ವ್ಯಾಪಿಸಿಕೊಂಡಿದೆ…” ಎಂದು ಹೇಳಬಲ್ಲವನಾಗುತ್ತಾನೆ. “ಅನೇನಾತ್ಮ ನಾ ಜೀವೇನಾನು ಪ್ರವಿಶ್ಯ ನಾಮ ರೂಪೇ ವ್ಯಾಕರ ವಾಣಿ (1); (ಛಾಂದೋಗ್ಯ:-6.3.2); “ತತ್ಸ್ಯಷ್ಟ್ವಾ ತದೇವಾನು ಪ್ರಾವಿಶತ್(2) (-ತೈತೀರಿಯಾ: ಬ್ರಹ್ಮಾನಂದವಲ್ಲಿ ಅನುವಾಕ-6). ಪರಮೇಶ್ವರನು ಜಗತ್ತನ್ನೂ ಮತ್ತು ಶರೀರವನ್ನೂ ರಚಿಸಿ ಜಗತ್ತಿನಲ್ಲಿ ವ್ಯಾಪಕನೂ ಮತ್ತು ಜೀವರೂಪನೂ ಆಗಿ ಶರೀರದಲ್ಲಿ ಪ್ರವಿಷ್ಟನಾಗುತ್ತಾನೆ. ನಂತರ ನಾಮರೂಪಾದಿಗಳನ್ನು ನಾನೇ ವಿಸ್ತಾರ ಮಾಡುತ್ತೇನೆ- ಎನ್ನುತ್ತಾನೆ.

ಇದರಿಂದಾಗಿ ಇಲ್ಲಿ ಮನುಷ್ಯನ ಸಾಮಾನ್ಯ ತಿಳುವಳಿಕೆಗೆ ಸಿಗುವ ಬಹುಮುಖ್ಯ ಸಂಗತಿ ಏನಾಗಿದೆ? ಎಂದು ಕೇಳಿಕೊಂಡಾಗ ಕೇವಲ ಶರೀರದಲ್ಲಿ ಜೀವವಿದ್ದಾಗ ಆತ್ಮನ ಜ್ಞಾನ ಅರಿವಾಗುತ್ತದೆ. ಆದರೆ ಶರೀರಾದಿಗಳು ಇಲ್ಲದಾ ವಸ್ತು ಜಗತ್ತಿನಲ್ಲಾಗಲಿ, ಪ್ರಾಣಿಪಕ್ಷಿಗಳಲ್ಲಾಗಲಿ ಬ್ರಹ್ಮದ ಸ್ಮೃತಿ ಇಲ್ಲವಲ್ಲ? ಸಚರಾಚರವನ್ನೆಲ್ಲಾ ಬ್ರಹ್ಮ ವ್ಯಾಪಿಸಿರುವುದಾದಲ್ಲಿ ಹೊರಗಿನ ಜಗತ್ತಿಗೂ ಆ ಸತ್ಯದ ಸ್ಪೃಹೆ ಇರಬೇಕಿತ್ತಲ್ಲ? ಆದರೆ ಹೀಗಾಗಲು ಸಾಧ್ಯವಿಲ್ಲ. ದೇಹಾವರಣದಲ್ಲಿ ಮಾತ್ರ ಬ್ರಹ್ಮ ವಿಚಾರ ವ್ಯಕ್ತವಾಗುತ್ತಿದೆ. ಅಂದರೆ ಮನುಷ್ಯನಿದ್ದ ಕಡೆ ಇದೆ. ಅವನಿಲ್ಲದ ಕಡೆ ಅದರ ಪ್ರಸ್ತಾಪ ಪ್ರಮೇಯಗಳಿಲ್ಲ ಎಂದಾಯಿತು. ಅಂದರೆ ಇದು ಕೃತಕ ಜ್ಞಾನವೆಂದು ಸಿದ್ಧವಾಯಿತಲ್ಲವೇ?

ಮಥನದ ಲೀಲೆಯಲ್ಲಿ ಹುಟ್ಟುವುದೇ ಬ್ರಹ್ಮವು?
ಶ್ರುತಿ ಸ್ಮೃತಿಗಳಿಗೆ ಅಳವಡದು ನೋಡಾ!
ಪೃಥ್ವಿಯೊಳಗಿಲ್ಲದ ಅಚಲವಪ್ಪ ಘನವನು,
ಸಚರಾಚರದಲ್ಲಿ ಭರಿತವೆಂತೆಂಬೆ?
ಇಲ್ಲದ ಲಿಂಗವನಲ್ಲಲ್ಲಿಗೆ ಉಂಟುಮಾಡುವ
ಈ ಲೀಲೆಯ ವಾರ್ತೆ ಎಲ್ಲಿಯದೊ ಗುಹೇಶ್ವರಾ?

ಅಲ್ಲಮಪ್ರಭುದೇವರು ಇಲ್ಲಿ ದೈವವೆಂಬುದು ತರ್ಕ ಸಿದ್ಧ ವಸ್ತುವಲ್ಲ ಎಂದು ಜರಿಯುತ್ತಾರೆ. ಒಳಹೊರಗೆಂಬ ಭೇದಗಳನ್ನು ಅಲ್ಲಗಳೆದು ದೈವವೆಂಬುದು ಪೃಥ್ವಿಯೊಳಗಿಲ್ಲ ಎಂಬ ಸಂದೇಶ ಸಂಜ್ಞೆಯನ್ನು ಸೂಚಿಸುತ್ತಾರೆ. ಚನ್ನಬಸವಣ್ಣನವರು ತಾರ್ಕಿಕ ದೈವದ ಕುರಿತು ಏನು ಹೇಳುತ್ತಾರೋ ನೋಡಬಹುದು-

ಆನು, ನೀನು, ಅರಿದೆ ಮರೆದೆ, ಅಳಿದೆನುಳಿದೆನೆಂಬ ಸಂಶಯ ಭ್ರಮೆ,
ಅತತ್ವ ತತ್ವ ವಿವೇಕ ಭ್ರಮೆ, ಮೂಲ ಸ್ಥೂಲ ಸೂಕ್ಷ್ಮ ವಿಪರೀತ ಭ್ರಮೆ,
ಪುಣ್ಯಪಾಪ ಸ್ವರ್ಗ ನರಕ ಬಂಧಮೋಕ್ಷ ಪ್ರವರ್ತಕ ನಿವರ್ತಕ
ಆದಿಯಾದ ಸಪ್ತಕರ್ಮ ಬಂಧ ಭ್ರಮೆ,
ಹುಸಿಜೀವ ಪರಮನೈಕ್ಯಸಂಧಾನ ಭ್ರಮೆ,
ಯೋಗದಾಸೆ ಸಿಲುಕು ಭ್ರಮೆ, ಅಂತರ್ಮುಖ ಭ್ರಮೆ, ಬಹಿರ್ಮುಖ ಭ್ರಮೆ,
ಅನೃತ ಭ್ರಮೆ, ಸತ್ಯ ಭ್ರಮೆ, ನಿತ್ಯ ಭ್ರಮೆ,
ವಾಗದ್ವೈತ ಭ್ರಮೆ, ಅದ್ವೈತ ಭ್ರಮೆ,
ಮಂತ್ರ ಭ್ರಮೆ, ತಂತ್ರ ಭ್ರಮೆ, ನಾಹಂ ಭ್ರಮೆ,
ಕೋಹಂ ಭ್ರಮೆ, ಸೋಹಂ ಭ್ರಮೆ.
ತತ್ವ ಸಕರಣವೇಷ್ಟಿತ ಜಗತ್ರಯವೆಲ್ಲಾ ಮಾಯಾಮಯ.
ಕೂಡಲಚೆನ್ನಸಂಗಾ, ನಿಮ್ಮ ಶರಣಂಗಾವ ಭ್ರಮೆಯೂ ಇಲ್ಲ.

(ತತ್ವ ಸಕರಣವೇಷ್ಟಿತ ಜಗತ್ರಯವೆಲ್ಲಾ ಮಾಯಾಮಯ= ಸಿದ್ಧಾಂತಗಳ ಮೇಲೆ ಮತ್ತು ತತ್ವಗಳ ಆಧಾರದ ಮೇಲೆ ರೂಪಿಸಲ್ಪಟ್ಟಿರುವ ಎಲ್ಲಾ ಜ್ಞಾನಗಳೂ ಮಾಯೆ)

ಶರಣರ ವಚನಗಳನ್ನು ವಿವೇಚಿಸುವಾಗ… ಈಗಾಗಲೇ ಪರಂಪರಾನುಗತವಾಗಿ ನೆಚ್ಚಿಕೊಂಡಿರುವ ಸಂಸ್ಕೃತ ಭೂಯಿಷ್ಠ ರಚನೆಗಳನ್ನು, ವಚನಗಳು ನಿರಚನೆ (deconstruction) ಮಾಡುತ್ತವೆ ಎಂಬುದು ಮಹತ್ವದ ಅಂಶ. ಸೃಜನಶೀಲವಾದ ಪುನರ್ರಚನೆ (reconstruction) ಸಾಧ್ಯವಾಗಬೇಕೆಂದಾಗ ನಿರಚನೆ ಅನಿವಾರ್ಯವಾಗಿದೆ. ಚಲನಶೀಲವಾದ ಆಧ್ಯಾತ್ಮಿಕ ತತ್ವಗಳನ್ನು ರೂಪಿಸಬೇಕೆಂದಿದ್ದಾಗ ಹಿಂದಿನಿಂದ ನಚ್ಚಿಕೊಂಡು ಬಂದಿರುವ ಸಂಪ್ರದಾಯಿಕ ಸಂಗತಿಗಳನ್ನು ಪರಿಶೀಲಿಸಿ ನಿರಾಕರಿಸಬೇಕಾದುದು ಮುಖ್ಯವಾಗುತ್ತದೆ.

ಶರಣರ ಪುನರ್ರಚನಾ (reconstruction) ಆಧ್ಯಾತ್ಮಕ್ಕೆ ಇರುವ ಮಹತ್ವವಾದ ಅರ್ಹತೆ ಏನೆಂದರೆ, ದೇವರಲ್ಲಿಗೆ ಕರೆದೊಯ್ಯುವಲ್ಲಿ ಇರುವ ಆಧ್ಯಾತ್ಮಿಕ ಗೊಂದಲಗಳನ್ನು ನಿವಾರಿಸಿಕೊಳ್ಳದಿದ್ದ ಪಕ್ಷದಲ್ಲಿ ದೇವರಲ್ಲಿಗೆ ಕರೆದೊಯ್ಯುವ ನಿಜವಾದ ಆಧ್ಯಾತ್ಮಿಕ ಕ್ರಮವೊಂದು ತಿಳಿಯುವ ಸಾಧ್ಯತೆ ನಶಿಸಿ ಹೋಗಿರುತ್ತದೆ. ವಚನಗಳು ಆಧ್ಯಾತ್ಮಿಕ ಕ್ರಿಯಾವಿಧಾನವಾಗಿದ್ದಾಗ ಅವು ಸರ್ವಕಾಲಿಕವಾಗಿವೆ. ಇಲ್ಲದಿದ್ದರೆ ಅವುಗಳನ್ನು ನಮ್ಮ ತಿಕ್ಕಲುತನಕ್ಕಷ್ಟೇ ವಿನಿಯೋಗಿಸುವಂತಾಗುತ್ತದೆ.

ಆದಿಶೂನ್ಯಂ ಮಧ್ಯಶೂನ್ಯಂ ಅಂತ್ಯಶೂನ್ಯಂ ನಿರಾಮಯಂ
ಸರ್ವಶೂನ್ಯಂ ನಿರಾಕಾರಂ ನಿಶ್ಶಬ್ದಂ ಬ್ರಹ್ಮ ಉಚ್ಯತೇ
ಆ ನಿರವಯ ಸ್ಥಲವು, ಉರಿಯುಂಡ ಕರ್ಪುರದಂತಿದ್ದಿತ್ತು;
ಇಂತಿದು ನಿರವಯ ಸ್ಥಲವಯ್ಯಾ, ಕೂಡಲಚೆನ್ನಸಂಗಮದೇವಾ.

ತಮ್ಮ ಆಧ್ಯಾತ್ಮಿಕ ಪಥದ ‘ನಿರವಯ’ ಸ್ಥಲವನ್ನು ಹೇಳುವಾಗ ಚನ್ನಬಸವಣ್ಣನವರು “ಆದಿ ಶೂನ್ಯಂ (ಆದಿಯಲ್ಲಿ ಇಲ್ಲದ್ದು) ಮಧ್ಯ ಶೂನ್ಯಂ (ಮಧ್ಯದಲ್ಲೂ ಇಲ್ಲದ್ದು), ಅಂತ ಶೂನ್ಯಂ (ಕೊನೆಯಲ್ಲಿ ಇಲ್ಲದ್ದು) ಎಂದು ರೂಪಿಸುವಾಗ ‘ನಿರವಯ ಸ್ಥಲ’ಕ್ಕೆ ಅದ್ಭುತವಾದ ಉಪಮಾನದ ಮೂಲಕ ವಿವರಿಸುತ್ತಿದ್ದಾರೆ… “ಆ ನಿರವಯ ಸ್ಥಲವು ಉರಿಯುಂಡ ಕರ್ಪೂರದಂತಿತ್ತು”- ಕರ್ಪೂರವೆಂಬ ಪರಬ್ರಹ್ಮವನ್ನು (ಅಥವಾ ಅದರ ಕುರಿತಾದ ನಂಬುಗೆಯನ್ನು) ‘ಉರಿ’ ಎಂಬ ನಿರವಯವ ಲಿಂಗವು (ನಿಜವಾದ ಅಂತಃಪ್ರಜ್ಞೆ) ದಹಿಸಿದಾಗ ಪರಬ್ರಹ್ಮವೆಂಬ ಕರ್ಪೂರವು ಉಳಿಯುವುದಿಲ್ಲ. ‘ಉರಿಯೆಂಬ’ ಲಿಂಗವೂ ಇಲ್ಲ. ಅದನ್ನೇ ಅವರು ‘ಸರ್ವ ಶೂನ್ಯಂ ನಿರಾಕಾರಂ ನಿಶಬ್ದಂ ಬ್ರಹ್ಮಉಚ್ಯತೇ’ ಎಂದದ್ದು. ವೈದಿಕರ ಪರಬ್ರಹ್ಮಕ್ಕೆ ಶರಣರು ‘ನಿರವಯ ಲಿಂಗ’ ವೆಂಬ ಪರ್ಯಾಯ ಆಧ್ಯಾತ್ಮಿಕ ಕ್ರಿಯಾಚಾರವನ್ನು ಕೊಟ್ಟರು.

ಬ್ರಹ್ಮದ ನಿಜವಾದ ಸ್ಥಾನ ಯಾವುದು? ಅದು ಮನುಷ್ಯನ ಪರಿಶೀಲಿಸಿಕೊಳ್ಳದ ನಂಬುಗೆಗಳಲ್ಲಿ, ಭಾವಗಳಲ್ಲಿ, ನೆನಪುಗಳಲ್ಲಿ ಮತ್ತು ಕಲ್ಪಿತ ಸ್ವಗತ ಭೇದಗಳಲ್ಲಿ ಭಾಷೆಯಾಗಿ ಮಾರ್ಪಾಡಾಗುತ್ತದೆ.

ವೇದ ಘನವೆಂಬೆನೆ, ವೇದ ನಾದದೊಳಗಡಗಿತ್ತು.
ನಾದ ಘನವೆಂಬೆನೆ, ನಾದ ಬಿಂದುವಿನೊಳಗಡಗಿತ್ತು.
ಬಿಂದು ಘನವೆಂಬೆನೆ, ಬಿಂದು ಅಂಗದೊಳಗಡಗಿತ್ತು.
ಅಂಗ ಘನವೆಂಬೆನೆ, ಅಂಗ ಲಿಂಗದೊಳಗಡಗಿತ್ತು.
ಲಿಂಗ ಘನವೆಂಬೆನೆ, ಲಿಂಗ ನಿಶ್ಚಿಂತದೊಳಗಡಗಿತ್ತು.
ನಿಶ್ಚಿಂತ ಘನವೆಂಬೆನೆ, ನಿಶ್ಚಿಂತ ನಿರಾಳದೊಳಗಡಗಿತ್ತು.
ನಿರಾಳ ಘನವೆಂಬೆನೆ, ನಿರಾಳ ನಿರೂಪದೊಳಗಡಗಿತ್ತು.
ನಿರೂಪ ನಿಃಕಳಂಕ ನಿಃಶೂನ್ಯ ನಿರಂಜನ ಪರಾಪರ ನೀನೇ
ಗುಹೇಶ್ವರಾ.

(ನಾದ- ಮಾತು, ಭಾಷೆ; ಬಿಂದು-ಮನ; ಅಂಗ- ಕಾಯಾವರಣ; ಲಿಂಗ- ಪ್ರಾಣಲಿಂಗ)

ಆದರೆ ನಮ್ಮ ಶರಣರ ನಿರವಯ ಲಿಂಗವನ್ನು ಬ್ರಹ್ಮದ ಎದುರು ತಂದಾಗ… ಆ ನಿರವಯ ಸ್ಥಲ ಕೇವಲ ಒಂದು ಪರಿಕಲ್ಪನೆಯಾಗಲಿ, ನಂಬುಗೆಯಾಗಲಿ, ಭಾವವಾಗಲಿ, ಭಾಷೆಯದಾಗಲಿ ಅಲ್ಲ. ಅದೊಂದು ಅಭೂತಪೂರ್ವವಾದ ಒಳ-ಹೊರಗುಗಳು ಏಕತ್ವಗೊಂಡ ಪ್ರಕ್ರಿಯಾಧೀನವಾಗಿದೆ. ಅದು ಅಂತರಂಗದಲ್ಲಿ ಕುಡಿಯೊಡೆದು ಬಹಿರಂಗದಲ್ಲಿ ಹೊಸ ಮಾನವ ಧರ್ಮವನ್ನು ಕಟ್ಟುವ ಪ್ರಕ್ರಿಯೆಯಾಗಿ ಪರಿಣಮಿಸುತ್ತದೆ. ಆ ಪ್ರಕ್ರಿಯೆ ಪ್ರಾರಂಭದಲ್ಲಿ ಅಂತರಂಗದಲ್ಲಿರುವ ಕೊಳೆ ಕೊಚ್ಚೆಯನ್ನು ಸುಟ್ಟು ಬೂದಿ ಮಾಡಿಬಿಡುತ್ತದೆ. ಅಂತರಂಗದಲ್ಲಿರುವ ಪೂರ್ವಸಂಚಿತ ವಿಷಯಗಳು, ಸಿದ್ಧಾಂತಗಳು, ಅಭಿಪ್ರಾಯಗಳು, ಅಪಾಯಕಾರಿ ಸ್ವಭಾವಗಳು, ಅಹಂಕಾರಗಳು, ಸ್ವಾರ್ಥಗಳು, ಸಂಕಟಗಳು ಬೂದಿಯಾದಾಗ ಅಲ್ಲೊಂದು ಲಿಂಗಕ್ರಿಯೆ ಸಾಧ್ಯವಾಯಿತೆಂದೇ ಅರ್ಥ. ಶೂನ್ಯವೆಂದರೆ ಏನೂ ಇಲ್ಲವೆಂತಲ್ಲ. ಚಾಂಚಲ್ಯ, ಗೊಂದಲ, ಅನುಮಾನ, ಅನಿಶ್ಚಿತತೆ, ಅಪೇಕ್ಷೆಗಳು ಶೂನ್ಯಗೊಂಡ ಮನಮಗ್ನತೆ. ಮನಮಗ್ನತೆ ಎಂಬುದು ಒಂದು ಸ್ಥಿತಪ್ರಜ್ಞತೆ ಅಲ್ಲ. ಅದೊಂದು ನಿರಂತರ ಪ್ರಜ್ಞೆ. ಚಂದ್ರನ ಪ್ರಶಾಂತವಾದ ಬೆಳಕನ್ನು ಅಡ್ಡಗಟ್ಟಿರುವ ಮೋಡಗಳು ಸರಿದು ಹೋದಾಗ ಚಂದ್ರನ ಪ್ರಶಾಂತ ಪ್ರಕಾಶ ಹೊರಮೊಮ್ಮುವಂತೆ… ಗಾಳಿಯ ರಭಸಕ್ಕೆ ಜರ್ಜರಿತವಾದ ಸಾಗರದ ಅಲೆಗಳು, ಗಾಳಿಯು ನಿಂತಾಗ ಪ್ರಶಾಂತ ಸಾಗರವಾದಂತೆ… ಬಿರುಗಾಳಿಯಿಲ್ಲದ ಸ್ಥಳದಲ್ಲಿರಿಸಿದ ಜ್ಯೋತಿಯ ಕುಡಿ ವಿಕಸಿಸುತ್ತಾ ನಿಃಶ್ಚಲವಾಗಿ ಪ್ರಕಾಶಿಸುವಂತೆ… ಸರ್ವ ತಾಪಗಳಿಂದ, ಸರ್ವ ವಿಷಯಗಳಿಂದ ಜರ್ಜರಿತವಾದ ಮನಸ್ಸು ಶಮೆಗೊಂಡು ನಿಶ್ಚಿಂತವಾಗಬೇಕು. ಎಂತಹದ್ದೇ ಕಷ್ಟಬಂದರೂ ನಿರಾತಂಕದಿಂದ ಎಲ್ಲವನ್ನೂ ‘ಶಿವಾರ್ಪಿತ’ವೆಂದು ಬಗೆದು ತಾಳ್ಮೆಯಿಂದಿರಬೇಕು. ನಶ್ವರವಾದ ಬದುಕಿನ ಸತ್ಯವನ್ನು ಪ್ರೀತಿಸುವಂತಾಗಿರಬೇಕು. ಮನಮಗ್ನತೆಯನ್ನು ಶರಣರು ಅನೇಕ ಭಿನ್ನ ಪದಗಳಲ್ಲಿ ವ್ಯಕ್ತಪಡಿಸಿದ್ದಾರೆ. ಬಯಲು, ಶೂನ್ಯ, ಅಚಲ, ಸಹಜಾಮನಸ್ಕ, ನಿಶ್ಚಿಂತೆ, ಆಳನಿರಾಳ, ಸಹಜಸುಖ, ಸಾವಯವ ಲಿಂಗ, ನಿರವಯ ಲಿಂಗ, ನಿರಾಲಂಬ, ಮಹಾಘನ, ಇತ್ಯಾದಿ.

ಹಾಗೆ ನೋಡಿದರೆ ‘ನಿರವಯ ಲಿಂಗ’ ಸ್ಥಲ ಎಲ್ಲೋ ಒಂದು ಕಡೆ ಧ್ಯಾನ ಸಮಾಧಿಯಲ್ಲಿ ಕೂತು ಆನಂದವನ್ನು ಅನುಭವಿಸುವ ಒಂದು ನಿಷ್ಕ್ರಿಯ ಯೋಗವಲ್ಲ. ಅಥವಾ ಪ್ರಜ್ಞಾಹೀನ ಸ್ಥಿತಿಯೂ ಅಲ್ಲ. ಮನ ಕಲ್ಪನಾರಹಿತವಾಗಿದ್ದಾಗ ಅದು ಸರ್ವ ಜೀವಿಗಳಲ್ಲಿ ದಯೆಯಾಗಿ ಪರಿಣಮಿಸುವಂತಹದ್ದು. ದಯೆಯೇ ಶರಣ ಧರ್ಮದ ನಿಜವಾದ ಮಾರ್ಗದಾತ. ದಯೆ ಎಂಬ ಕಾರಣ, ಧರ್ಮ ಎಂಬ ಕಾರ್ಯದಲ್ಲಿ ತೊಡಗುತ್ತದೆ. ಭಕ್ತನು ಸದಾ ಲಿಂಗಾಂಗ ಸಾಮರಸ್ಯದಲ್ಲಿರುವಂತೆ ಮಾಡುತ್ತದೆ. ಲಿಂಗಾಂಗ ಸಾಮರಸ್ಯ ಪರಿಶುದ್ಧ ಕಾಯಕಕ್ಕೆ ಅಂತಃಪ್ರೇರಣೆಯನ್ನುಂಟು ಮಾಡುತ್ತದೆ. ಕಾಯಕವು ತಾನು ಮಾಡಿದ ಕಾಯಕದ ಫಲವನ್ನು ಯಾವುದೇ ಭೇದವಿಲ್ಲದೇ ಸಮನಾಗಿ ಹಂಚಿ ತಿನ್ನುವಂತೆ ಮಾಡುತ್ತದೆ. ಇದು ಲಿಂಗಾಯತ ಧರ್ಮಕ್ಕಿರುವ ‘ಧೀ’ ಶಕ್ತಿ. ಈ ಅನಂತ ವಿಶ್ವದ ಸಚರಾಚರವೂ ತನ್ನ ತಾಯ್ಮಡಿಲೆಂದು ಭಾವಿಸಿ, ಎಲ್ಲಾ ಮನುಷ್ಯರು ತನ್ನ ಸಹಜೀವಿಗಳೆಂದು ತಿಳಿಯುವ ‘ಅನುಭಾವ’ವದು. ಯಾವುದೇ ಕೃತಕ ಸಿದ್ಧಾಂತಕ್ಕಾಗಲಿ, ತತ್ತ್ವಕ್ಕಾಗಲಿ, ಆಕರ್ಷಣೆಗಳಿಗಾಗಲಿ, ಮೋಹಕ್ಕಾಗಲಿ, ನಿರ್ಮೋಹಕ್ಕಾಗಲಿ ಒಳಗಾಗದೇ ತನ್ನಲ್ಲಿರುವ ರಕ್ತದ ಪ್ರತಿ ಕಣ ಹಿಂಗಿ ಹೋಗುವ ತನಕ ಎಚ್ಚರವನ್ನು ಕಾಯ್ದುಕೊಳ್ಳುವ ‘ಅನುಭಾವವು’ ಭಕ್ತನನ್ನು ಜಂಗಮವಾಗಿಸುತ್ತದೆ.

ಈ ಮೇಲ್ಕಂಡ ಸಾಲುಗಳಲ್ಲಿರುವ ‘ಧರ್ಮ’ದ ಪ್ರಕ್ರಿಯಾ ವಿಲಾಸವನ್ನು ಸರಿಯಾಗಿ ನೋಡಬೇಕು. ಶರಣರಲ್ಲಿ ‘ಧರ್ಮ’ ಸ್ಥಿರ ಸಿದ್ಧ ವಸ್ತುವಲ್ಲ. ಅಥವಾ ಬೊಗಳೆ ಬಿಡುವಂತಹದ್ದೂ ಅಲ್ಲ. ಒಂದು ಅರ್ಹತೆ ಬಂದಾಗ ಆ ಅರ್ಹತೆಯೇ ಇನ್ನೊಂದನ್ನು ಉಂಟು ಮಾಡುತ್ತದೆ. ಹೀಗೆ ಪ್ರತಿಯೊಂದೂ ಸಂಬಂಧದಲ್ಲೇ ಉಂಟಾಗುವಂತಹದ್ದು. ಮನ ನಿರವಯವಾದರೆ ಅದು ದಯೆಯಾಗಿ ಮಾರ್ಪಾಡಾಗುತ್ತದೆ. ದಯೆ ನಿಸರ್ಗದತ್ತವಾದ ಧರ್ಮವಾಗುತ್ತದೆ. ಧರ್ಮ ಭಕ್ತನನ್ನು ಸೃಜಿಸುತ್ತದೆ. ಭಕ್ತ ಸಮರಸದಲ್ಲಿರುತ್ತಾನೆ. ಸಮರಸ ಶುದ್ಧ ಕಾಯಕವನ್ನು ಪ್ರೇರೇಪಿಸುತ್ತದೆ. ಶುದ್ಧ ಕಾಯಕ ಸಹೋದರತೆ, ಸಮಾನತೆಯ ಜ್ಯೋತಿಯನ್ನು ಬೆಳಗಿಸುತ್ತದೆ. ಆ ಬೆಳಗು ಅನುಭಾವವಾಗಿ ಹೊಮ್ಮುತ್ತದೆ. ಅನುಭಾವ ಜಂಗಮದಲ್ಲಿ ವಿಶ್ವಪ್ರಜ್ಞೆಯಾಗಿ ಅನಂತಲಾಸ್ಯದಲ್ಲಿ ತಾನು ತಾನಾಗುತ್ತದೆ!!! ನಡೆಯೇ ಧರ್ಮದ ಮೂಲ ತಾಯಿ!!! ಈ ಧರ್ಮ ಸಂಬಂಧವೇ ಶಿವನ ತಾಣ!!! ಆ ಶಿವನೂ ಸಿದ್ಧವಸ್ತುವಲ್ಲ, ಆ ಶಿವ ಸತ್ಯವನ್ನು ನಾವು ನಿಜಗೊಳಿಸಿದಾಗ ಮಾತ್ರ ಅದು ನಿಜವಾಗುತ್ತದೆ!!!

ಅಬ್ಬಾ…!!! ಧರ್ಮವು ಸಂಬಂಧವಲ್ಲದೇ ಕೇವಲ ವಾಚಕವೇ? ಶರಣರು ನಡೆದಾಡಿದ ಮಣ್ಣಿನಲ್ಲಿ ಜೀವಂತವಾಗಿರುವ ನಾವೇ ಧನ್ಯರು!!!… ಧನ್ಯರು!!!

ಕಲ್ಪಿತವೆಂಬ ಭಕ್ತ ಮಾಡಿದ ಸಯಧಾನವ ನೋಡಾ!
ಅನಂತಕೋಟಿ ಅಜಾಂಡಗಳೆ ಸಯಧಾನವಾಗಿ
ಸವಿಕಲ್ಪ ವಿಷಯಂಗಳೆ ಶಾಕವಾಗಿ
ಸರ್ವವಾಸನೆ ಎಂಬುದೆ ಅಭಿಘಾರವಾಗಿ_
ಇವೆಲ್ಲವನೂ ಜ್ಞಾನವೆಂಬ ಭಾಜನದಲ್ಲಿ ಎಡೆಮಾಡುತ್ತಿರಲು
ಉಣ ಬಂದ ಹಿರಿಯರು ಉಣುತ್ತಿದ್ದುದ ನೋಡಿರೆ!
ನಿರ್ವಿಕಲ್ಪಿತವೆಂಬ ಮಹಂತ ಬರಲು,
ಸಯಧಾನವಡಗಿತ್ತು, ಭಾಜನ ಉಳಿಯಿತ್ತು.
ಆ ಭಾಜನವನುತ್ತಮಾಂಗದಲ್ಲಿ ಅಳವಡಿಸಿಕೊಳಲು
ನಿಶ್ಚಿಂತವಾಯಿತ್ತು ಗುಹೇಶ್ವರಾ.

(ನಿರ್ವಿಕಲ್ಪವೆಂಬ ಮಹಂತರು ಬಂದಾಗ ಹಿಂದಿನ ಕಲ್ಪಿತಜ್ಞಾನಗಳೆಲ್ಲಾ ಬಿದ್ದುಹೋದವು. ಉತ್ತಮಾಂಗ ಅಂದರೆ ಕಾಯ ಶರೀರದಲ್ಲೂ, ಸಮುದಾಯದ ಶರೀರದಲ್ಲೂ ಮತ್ತು ನಿಸರ್ಗ ಶರೀರದಲ್ಲೂ ಅಳವಡಿಸಿಕೊಳ್ಳಲು ನಿಶ್ಚಿಂತವಾಗಿತ್ತು. ನಿಶ್ಚಿಂತವಾದ ವ್ಯಕ್ತಿಯನ್ನು, ನಿಶ್ಚಿಂತವಾದ ಸಮಾಜವನ್ನು, ನಿಶ್ಚಿಂತವಾದ ನಿಸರ್ಗವನ್ನು ಸೃಷ್ಟಿಸುವುದು ಅವರ ಆಧ್ಯಾತ್ಮದ ಅಂತಿಮ ಗುರಿಯಾಗಿತ್ತು)

… ಆದ್ದರಿಂದ ಪರಾಚೈತನ್ಯವಾದ ಬ್ರಹ್ಮವಸ್ತು ನಾನಲ್ಲ!!! ಏಕೆಂದರೆ ಜೀವ ದೇಹಗಳ ಸಂಯೋಗದಿಂದ ವ್ಯಕ್ತವಾಗುತ್ತಿರುವ ನನ್ನ ಅಂತಃಪ್ರಜ್ಞೆಗೂ ಕಲ್ಪಿತವಾದ ಪರಬ್ರಹ್ಮಕ್ಕೂ ಇರುವ ಯಾವುದೇ ಸಂಬಂಧವು ನನ್ನ ಪ್ರತ್ಯಕ್ಷಾನುಭವಕ್ಕೆ ಸಿಗುತ್ತಿಲ್ಲ. ಆದ್ದರಿಂದ ನಾನು ಜೀವ- ದೇಹಗಳ ಸಂಬಂಧದಲ್ಲಿರುವ ಮಾನವ ಜೀವಿಯೇ ಹೊರತು ಪರಬ್ರಹ್ಮನಲ್ಲ.

ಓದುಗ ಬಂಧುಗಳೇ ಶರಣು… ಗುರು ಆಣತಿಯಂತೆ ನಮ್ಮ ಮುಂದಿನ ಸಂಚಿಕೆಯಲ್ಲಿನ ಪ್ರಶ್ನೆ: ನನ್ನ ಮನಸ್ಸು ನಾನೇ? ಅಗಾಧವಾಗಿರುವ ಈ ಮನಸ್ಸನ್ನು, ಅದರ ಲೀಲೆಯನ್ನು ಗ್ರಹಿಸುವುದಾದರೂ ಹೇಗೆ? ಅದರ ಕತೃ ಯಾರು? ನನ್ನ ಸಮಸ್ತ ಚಲನವಲನಗಳನ್ನೂ ನಿರ್ದೇಶಿಸುತ್ತಿರುವ ಆ ಮನಸ್ಸನ್ನು ನಾನೆಂದುಕೊಳ್ಳಲೇ? ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ… ಈಗ ವಿರಾಮವಿರಲಿ… ಶರಣಾರ್ಥಿ.
(ಮುಂದುವರೆಯುವುದು)

 

 

Previous post ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
Next post ಮನವೇ ಮನವೇ…
ಮನವೇ ಮನವೇ…

Related Posts

ಗಣಾಚಾರ
Share:
Articles

ಗಣಾಚಾರ

August 8, 2021 ಡಾ. ಪಂಚಾಕ್ಷರಿ ಹಳೇಬೀಡು
ಬಸವಾದಿ ಶರಣರು ಆಚರಿಸಿ, ಬೋಧಿಸಿದ ಆಚಾರಗಳಲ್ಲಿ ಒಂದಾದುದು ಗಣಾಚಾರವೆಂಬ ಆಚಾರ. ಆಚಾರವೆಂದರೆ ಸಮಾಜದೊಂದಿಗೆ ನಾವು ನಡೆದುಕೊಳ್ಳುವ ರೀತಿ ನೀತಿ. ಗಣ ಎಂದರೆ ಸಮೂಹ ಅಥವಾ ಸಮಾಜ...
ಹೊತ್ತು ಹೋಗದ ಮುನ್ನ…
Share:
Articles

ಹೊತ್ತು ಹೋಗದ ಮುನ್ನ…

April 29, 2018 ಕೆ.ಆರ್ ಮಂಗಳಾ
ಕಾಲವನ್ನು ಹೇಗೆ ಗ್ರಹಿಸುತ್ತೀರಿ? ಕಳೆದು ಹೋದ ನಿನ್ನೆಗಳಲ್ಲೋ? ಕಾಣದ ನಾಳೆಗಳಲ್ಲೋ? ಈಗ ನಮ್ಮೆದುರೇ ಸರಿಯುತ್ತಿರುವ ಈ ಕ್ಷಣಗಳಲ್ಲೋ… ಇಲ್ಲವೇ ಗೋಡೆಯ ಗಡಿಯಾರದಲ್ಲೋ… ವಿಶ್ವಕ್ಕೆ...

Comments 23

  1. Jyothilingappa
    May 7, 2020 Reply

    ಮೊದಲಿಗೆ ನಿಮ್ಮ ಅಧ್ಯಯನಕ್ಕೆ ನನ್ನ ನಮನಗಳು..
    ಎಷ್ಟೋ ಆಧ್ಯಾತ್ಮಿಕ ಪಥಗಳ ಹೆಸರೇ ಕೇಳಿರಲಿಲ್ಲ ನಾನು..
    ಇನ್ನೊಮ್ಮೆ ಓದಬೇಕು ಅಷ್ಟು ಅಧ್ಯಯನ, ಮನನ ಆಗಲು… ಮುಕ್ತಾಯದ ವಾಕ್ಯ.. ನಾನು ಜೀವ ದೇಹಗಳ
    ಸಂಬಂಧಿ… ಬಹಳ ಇಷ್ಟವಾಯಿತು.

  2. ಜಿ.ಬಿ.ಪಾಟೀಲ
    May 8, 2020 Reply

    ಅತ್ಯಂತ ಶ್ರೇಷ್ಠ ಲೇಖನ, ಹಿಂದು ಧರ್ಮದ ಮೂಲ ಧರ್ಮ ಗ್ರಂಥಗಳಾದ ವೇದ,ಉಪನಿಷದ್ ಗಳಿಗೆ ವಚನಗಳ ಮೂಲಕ ಉತ್ತರ ಕೊಟ್ಟು,ವಚನಗಳು ಸರ್ವ ಕಾಲಿಕ ಸತ್ಯ,ಮತ್ತು ಶ್ರೇಷ್ಠ ಎಂದು ಸಾಬಿತು ಪಡಿಸಿದ ಅಮೂಲ್ಯ ಲೇಖನ. ಹಿಂದು- ಲಿಂಗಾಯತ ಎರಡು ವಿಭಿನ್ನ ಧರ್ಮಗಳು ಎಂದು ಸಾಬಿತು ಪಡಿಸುವ ಸಮಯದಲ್ಲಿ ಗಣನೆಗೆ ತಗೆದುಕೊಳ್ಳಬೇಕಾದ ಗಂಭಿರ ಲೇಖನ. ಲಿಂಗಾಯತ ಮಹಾಸಭಾ ಇಂತ ಶ್ರೇಷ್ಠ ಚಿಂತಕಿ,ಲೇಖಕಿ ತನ್ನೊಂದಿಗೆ ಇದ್ದಾಳೆ ಎಂದು ಹೆಮ್ಮೆ ಪಡುಬೇಕು.ಇವರ ಅಭಿಪ್ರಾಯ ಸಕಾರಾತ್ಮಕವಾಗಿ ಬಳಸಿಕೊಳ್ಳದಿದ್ದಲ್ಲಿ ನಾವು ಬಾವಿಯ ಕಪ್ಪೆ ಯಾಗುವದು ಖಂಡಿತ.

  3. ಜಿ.ಬಿ.ಪಾಟೀಲ
    May 8, 2020 Reply

    ಸಮಾಜ ಮತ್ತು ನಿಸರ್ಗ ಎರಡರಲ್ಲೂ ಅವನು ಒಳಗೊಂಡು ಪ್ರಿತಿಸುವ ಸೌಹಾರ್ದ ಬೆಳಸಿಕೊಳ್ಳುವದು ಧರ್ಮವಾಗುತ್ತದೆಯೇ ವಿನಃ, ಸಮಾಜವನ್ನು ತನ್ನ ಪೂರ್ವಾಶ್ರಿತ ಕಠಿಣ ಸ್ವಭಾವಗಳೊಂದಿಗೆ ಗ್ರಹಿಸುವದು ಪ್ರತ್ಯೇಕತೆಯಾಗುತ್ತದೆ-
    ಮಂಗಳಾ ಕೆ.ಆರ್.
    ಧರ್ಮ ಒಡೆದವರು ಎಂಬುವವರಿಗೆ ಉತ್ತರ.

  4. Panchakshari H V
    May 8, 2020 Reply

    ಭಾರತದ ಈ ಮಣ್ಣಿನಲ್ಲಿ ಯಾವೆಲ್ಲಾ ಸಿದ್ದಾಂತಗಳು ಆಗಿಹೋಗಿವೆ ಎಂದು ಇಂದು ಪ್ರಥಮ ಸ್ಪುರಣವಾಯಿತು.
    ಮನುಷ್ಯ ತನ್ನ ಬಹುಪಾಲು ಜೀವನದ ಸಮಯವನ್ನು ಭ್ರಮೆಯಲ್ಲೇ ಕಳೆಯುತ್ತಾನೆ. ನಿಜವಾದ ಸತ್ಯ ಎಲ್ಲಾ ಭ್ರಮೆಗಳಿಂದ ಅನಂತ ದೂರದಲ್ಲಿರುವುದು.
    ಧರ್ಮ, ಭಕ್ತಿ, ಮೋಕ್ಷಗಳ ಕುರಿತ ಒಂದು ಉತ್ತಮ ಲೇಖನ.
    ಆನು, ನೀನು, ಅರಿದೆ ಮರೆದೆ, ಅಳಿದೆನುಳಿದೆನೆಂಬ ಸಂಶಯ ಭ್ರಮೆ,
    ಅತತ್ವ ತತ್ವ ವಿವೇಕ ಭ್ರಮೆ, ಮೂಲ ಸ್ಥೂಲ. ಸೂಕ್ಷ್ಮ ವಿಪರೀತ ಭ್ರಮೆ,
    ಪುಣ್ಯಪಾಪ ಸ್ವರ್ಗ ನರಕ ಬಂಧಮೋಕ್ಷ ಪ್ರವರ್ತಕ ನಿವರ್ತಕ
    ಆದಿಯಾದ ಸಪ್ತಕರ್ಮ ಬಂಧ ಭ್ರಮೆ,
    ಹುಸಿಜೀವ ಪರಮನೈಕ್ಯಸಂಧಾನ ಭ್ರಮೆ,
    ಯೋಗದಾಸೆ ಸಿಲುಕು ಭ್ರಮೆ, ಅಂತರ್ಮುಖ ಭ್ರಮೆ, ಬಹಿರ್ಮುಖ ಭ್ರಮೆ,
    ಅನೃತ ಭ್ರಮೆ, ಸತ್ಯ ಭ್ರಮೆ, ನಿತ್ಯ ಭ್ರಮೆ,
    ವಾಗದ್ವೈತ ಭ್ರಮೆ, ಅದ್ವೈತ ಭ್ರಮೆ,
    ಮಂತ್ರ ಭ್ರಮೆ, ತಂತ್ರ ಭ್ರಮೆ, ನಾಹಂ ಭ್ರಮೆ,
    ಕೋಹಂ ಭ್ರಮೆ, ಸೋಹಂ ಭ್ರಮೆ.
    ತತ್ವ ಸಕರಣವೇಷ್ಟಿತ ಜಗತ್ರಯವೆಲ್ಲಾ ಮಾಯಾಮಯ.
    ಕೂಡಲಚೆನ್ನಸಂಗಾ, ನಿಮ್ಮ ಶರಣಂಗಾವ ಭ್ರಮೆಯೂ ಇಲ್ಲ
    ಅದ್ಭುತ ವಚನ.
    ಶರಣುಶರಣಾರ್ಥಿ.

  5. ಶಿವಾನಂದ ಗುರೂಜಿ
    May 8, 2020 Reply

    ಶರಣರು ಹಾಗೂ ವೈದಿಕ ಪರಂಪರೆಯ ನಡುವೆ ಇರುವ ಅಂತರವನ್ನು ಬಹು ಮಾರ್ಮಿಕವಾಗಿ ಪ್ರಸ್ತಾಪಿಸಿರುವುದು ನಿಮ್ಮ ಸಾಹಿತ್ಯದ ಶಕ್ತಿಯನ್ನು ನಿರೂಪಿಸುತ್ತಿದೆ. ಪೂಜ್ಯ ಅಪ್ಪಾಜಿಯವರು ಇದ್ದಿದ್ದರೆ ಬಹಳ ಸಂತೋಷಪಡುತ್ತಿದ್ದರು. ಧನ್ಯವಾದಗಳು.

  6. CA. Ramesha gowda m. Y.
    May 8, 2020 Reply

    ಶರಣು
    ಇಷ್ಟೊಂದು ಮಾಹಿತಿಗಳು ನಿಮ್ಮಲೇಖನದಲ್ಲಿ ಬರಲು, ನೀವು ಎಷ್ಟೊಂದು ಅಧ್ಯಯನ ಮಾಡೀದ್ದೀರಿ ಎಂಬುವುದನ್ನು ಊಹಿಸಿಕೊಳ್ಳಲೂ ಅಸಾಧ್ಯ!
    ಜಗತ್ತಿನ ಉದಯ ಕಾಲದಿಂದ ಈವರೆಗಿನ ದೈವ- ಮಾನವ ಮೂಲ ಮತ್ತು ಸಂಬಂಧಗಳ ಬಗ್ಯೆ ಇರುವ ಕಲ್ಪನೆ, ನಂಬಿಕೆ, ಆಚರಣೆಗಳ ಬಗ್ಯೆ ಇರುವ ಜಿಜ್ಞಾಸೆಗಳಿಗೆ ಅಮೂಲಾಗ್ರವಾಗಿ ಉತ್ತರ ಹುಡುಕುವ ನಿಮ್ಮ ಪ್ರಯ್ತ್ನದಲ್ಲಿ ಯಶಸ್ವಿ ಯಾಗಿದ್ದೀರೆಂದು ಹೇಳಲು ಹರ್ಷಿಸುತ್ತೆನೆ. ನಿಮ್ಮ ಈ ಲೇಖನಕ್ಕೆ ತುಂಬು ಹೃದಯದ ಅಭಿವಂದನೆಗಳು

  7. Amar
    May 9, 2020 Reply

    Wonderful

  8. Dr. J S Patil
    May 11, 2020 Reply

    ತಮ್ಮ ಲೇಖನದಲ್ಲಿ ಈ ಮಣ್ಣಿನಲ್ಲಿ ಆಗಿಹೋದ ವೈವಿಧ್ಯಮಯ ಸಾಧನಾ ಮಾರ್ಗಗಳು ಮತ್ತವುಗಳ ಸಾಧಕ ಭಾದಕಗಳನ್ನು ಕೂಲಂಕುಶವಾಗಿ ವಿವರಿಸಿದ್ದಿರಿ. ತಮ್ಮ ಸುದೀರ್ಘ ಲೇಖನ ಅಧ್ಯಾತ್ಮ ಲೋಕದ ಅನೇಕ ಮಜಲುಗಳನ್ನು ತೆರೆದಿಟ್ಟಿದೆ. ಅಧ್ಯಾತ್ಮ ಮತ್ತು ಭಕ್ತಿಗಳು ಅನುಭಾವದ ನೆಲೆಗಟ್ಟಿಲ್ಲದೆ ಅರ್ಥವಿಲ್ಲದಾಗುತ್ತವೆ ಎನ್ನುವುದು ಶರಣರ ನಿಲುವು. ಅನುಭಾವವಿಲ್ಲದ ಭಕ್ತಿ ˌ ಲಿಂಗ ˌ ಪ್ರಸಾದಗಳಿಗೆ ಅರ್ಥವೆ ಇಲ್ಲ ಎನ್ನುತ್ತಾರೆ ಗುರು ಬಸವಣ್ಣನವರು :
    ” ಅನುಭಾವಿಲ್ಲದ ಭಕ್ತಿ ಅನುವಿಂಗೆ ಬಾರದು, ಅನುಭಾವವಿಲ್ಲದ ಲಿಂಗ ಸಮರಸಸುಖಕ್ಕೆ ನಿಲುಕದು, ಅನುಭಾವವಿಲ್ಲದ ಪ್ರಸಾದ ಪರಿಣಾಮವ ಕೊಡದು, ಅನುಭಾವವಿಲ್ಲದ ಏನನೂ ಅರಿಯಬಾರದು. ತನ್ನಲ್ಲಿ ತಾ ಸನ್ನಿಹಿತವುಳ್ಳಡೆ ಶಿವಶರಣರ ಸಂಗವೇತಕ್ಕೆನಲುಂಟೆ ಕೂಡಲಸಂಗಮದೇವಯ್ಯಾ, ನಿಮ್ಮ ಅನುಭಾವ ಮಾತಿನ ಮಥನವೆಂದು ನುಡಿಯಬಹುದೆ ಪ್ರಭುವೆ.”
    ಇಂದ್ರಿಯಗಳಿಂದ ಅನುಭವ ದೊರೆದರೆ ಅತೀಂದ್ರಿಯ ಶಕ್ತಿಯಿಂದ ಮಾತ್ರ ಅನುಭಾವ ಕೈವಶವಾಗುತ್ತದೆ. ಆ ಅನುಭಾವ ಸಾಧನೆ ಆಗಬೇಕಾದರೆ ನಾನು ಯಾರೆಂದು ಮೊದಲು ಅರಿಯುವ ಅಗತ್ಯವಿದೆ. ಇರಲಿ ತಮ್ಮ ಜ್ಞಾನಸುಧೆ ಹೀಗೆಯೆ ಹರಿಯುತ್ತಿರಲಿ. ನಮ್ಮೆಲ್ಲರ ಜ್ಞಾನದ ದಾಹವನ್ನು ತಣಿಸಲಿ ಎಂದು ಆಶಿಸುತ್ತೇನೆ.

  9. ಪೆರೂರು ಜಾರು, ಉಡುಪಿ
    May 11, 2020 Reply

    ಅಹಂಬ್ರಹ್ಮಾಸ್ಮಿ ಎನ್ನುವುದೇ ಅಹಂಕಾರವನ್ನು ವೃದ್ಧಿಸುವುದು. ಅದಕ್ಕೆ ಬಸವಣ್ಣನವರು, “ಬೊಮ್ಮನೆಂಬವನ ಕಾಣೆ, ಗಿಮ್ಮನೆಂಬವನ ಕಾಣೆ” ಅಂತ ಹೇಳಬೇಕಾಯಿತು. ಸಂತ ನಾರಾಯಣಗುರುಗಳು ಅಹಂಬ್ರಹ್ಮಾಸ್ಮಿಗೆ “ನಿನ್ನ ನೀ ತಿಳಿ” ಎಂದೇ ವ್ಯಾಖ್ಯಾನಿಸುತ್ತಿದ್ದರು. ಅದೇ ಕಾರಣಕ್ಕೆ ಅವರು ಕಟ್ಟಿಸಿದ ದೇವಾಲಯಗಳ ಗರ್ಭಗುಡಿಯಲ್ಲಿ ಕನ್ನಡಿಯನ್ನು ಇಡಿಸಿದ್ದರು. ವಿವೇಚನೆಗೆ ಹಚ್ಚುವ ನಿಮ್ಮ ಬರವಣಿಗೆ ಹೀಗೇ ಸಾಗಲಿ.

  10. Allamaprabhu Swamiji, Bengaluru
    May 11, 2020 Reply

    ಉಪನಿಷತ್ತುಗಳ ಹಿನ್ನೆಲೆಯಲ್ಲಿ ವಚನಗಳನ್ನು ಮಹತ್ವವನ್ನು ಪರಿಣಾಮಕಾರಿಯಾಗಿ ತೋರಿಸುವ ಲೇಖನ. ಬಹಳ ಹಿಡಿಸಿತು.

  11. Mahanthesh B.G
    May 16, 2020 Reply

    ಇದು ಬರಿ ಲೇಖನವಲ್ಲ, ಅಪಾರವಾದ ಮಹತ್ತರ ವಿಷಯಗಳನ್ನು ತಿಳಿತಿಳಿಯಾಗಿ ಉಣಬಡಿಸಿದ ಅದ್ಭುತ ಪ್ರಸಾದ. ಶರಣರು ದ್ವೈತವನ್ನಾಗಲಿ, ಅದ್ವೈತವನ್ನಾಗಲಿ ಹೇಳಿದವರಲ್ಲ ಎಂದು ನನಗೆ ಬಹಳ ಸಾರಿ ಅನ್ನಿಸಿತ್ತು. ನಿಮ್ಮ ಲೇಖನ ಅದನ್ನು ಎಷ್ಟು ಕರಾರುವಕ್ಕಾಗಿ, ತರ್ಕಬದ್ಧವಾಗಿ ತೋರಿಸಿಕೊಟ್ಟಿದೆ ಎಂದರೆ ನಾನಂತೂ ಕಣ್ಣಿಗೊತ್ತಿಕೊಂಡು ಓದಿದೆ, ಓದುತ್ತಾ ಮೂಕನಾಗಿಬಿಟ್ಟೆ. ನಾವು ಹೋಗಿ ಡಿಕ್ಕಿ ಹೊಡೆಯುತ್ತಿರುವ ದಾರಿ ಶರಣ ಮಾರ್ಗವಲ್ಲ ಎಂಬುದನ್ನು ಶಾಂತವಾಗಿ, ಗಂಬೀರವಾಗಿ ತೋರಿಸಿಕೊಟ್ಟ ಲೇಖಕರಿಗೆ ಅನಂತಾನಂತ ವಂದನೆಗಳು.

  12. Vijaykumar Kammar
    May 19, 2020 Reply

    ನಿಮ್ಮ ಆಳವಾದ ಅಭ್ಯಾಸಕ್ಕೆ ಮೊದಲು ಒಂದು ದೊಡ್ಡ hats off. ಇಂಥ ಒಂದು ವಿಮರ್ಶಾತ್ಮಕ ಲೇಖನ ಬರೆಯಲು ಎದೆಗಾರಿಕೆ ಬೇಕು ಕಣ್ರೀ. 10,000 ಸಾವಿರ ವರ್ಷಗಳ ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ 370/372 ದಾರ್ಶನಿಕ ಪರಂಪರೆಗಳು ನಿರೂಪಣೆಯಾಗಿವೆ. ಜ್ಯೋತಿಷ್ಯ, ಆಗಮಿಕ, ವಚನ, ಹರಿಕಥೆ, ದಾಸ ಸಾಹಿತ್ಯ ಮುಂತಾದ ಶಾಸ್ತ್ರಗಳ ಬಗ್ಗೆ ಪರ ವಿರೋಧ ಏನೇ ಇದ್ದರೂ ಆ ಎಲ್ಲ ಶಾಸ್ತ್ರಗಳೂ ಹಿಂದೂ ಸಂಸ್ಕೃತಿಯನ್ನು ಉಳಿಸಿ ಬೆಳೆಸವಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸಿದ್ದಂತೂ ನಿಜ. ಸೂರ್ಯ ಚಂದ್ರರಷ್ಟೇ ಸತ್ಯ.
    ನಿಮ್ಮ ಲೇಖನದಲ್ಲಿ ಕೆಲ ಸಹಜವಾದ ವಿರೋಧಗಳಿವೆ ಅಂತ ನನಗನ್ನಿಸಿದರೂ ಒಟ್ಟಾರೆ ಅದ್ಭುತ ಲೇಖನ. ಅಂಗೈ ಮೇಲೆ 6 ಬರೆದರೆ ನಿಮಗೆ ಕಾಣೋದು 9 ನನಗೆ ಕಾಣೋದು 6. ನಮ್ಮ ನಿಮ್ಮ ಜಾಗಗಳು ಸರಿ ಇವೆ. ನೋಡೋ ದಿಕ್ಕು ಬೇರೆ ಬೇರೆ. ವೈಚಾರಿಕ ವಿರೋಧ ಆರೋಗ್ಯಕರವಾದರೆ ಆ ವಿಷಯಕ್ಕೆ ಮೌಲ್ಯ ಬರುತ್ತದೆ ಅಂತ ನನ್ನ ಭಾವನೆ.
    An excellant artical, which I have read after long time. Somewhere in 2002, I read artical by Sri Kapil Tiwari who is scholar & research personality in Folk & Folk Arts, on this issues. He is the person who studied Kabir in an aggressive way. ಅವರು ನನ್ನ ಮಾರ್ಗದರ್ಶಕ ಗುರುಗಳು. ಈ ಲೇಖನ ಓದುವಾಗ ಅವರ style ನ ಛಾಯೆ ಕಂಡು ಬಂತು.
    Thank you very much for considering me to share such an valuable artical🙏🙏🙏🙏🙏

  13. Praveen Javagal
    May 23, 2020 Reply

    ನಾನು ಓದಿದ ವಿಭಿನ್ನ ಲೇಖನವಿದು. ನೀವು ಏನೋ ಹೊಸದನ್ನು ಹೇಳಲು ಪ್ರಯತ್ನಿಸುತ್ತಿದ್ದೀರಿ. ಆದರೆ ನನಗೆ ಈಗ ಒಂದು ಓದಿನಲ್ಲಿ ಗೊತ್ತಾದದ್ದು ಇಷ್ಟು ಮಾತ್ರ. ನಾವು ಹಿಂದೂಗಳಲ್ಲವೇ ಅಲ್ಲ. ಅವರ ಯಾವ ತತ್ವಗಳಿಗೂ ನಾವು ಗುಲಾಮರಾಗಬೇಕಿಲ್ಲ. ಮತ್ತೆ ಮತ್ತೆ ಓದಿಸಿಕೊಂಡು ಎತ್ತಿಟ್ಟುಕೊಳ್ಳಬೇಕಾದ ಬರಹ. ಥ್ಯಾಂಕ್ಯೂ ಅಕ್ಕಾ.

  14. ಬಸವರಾಜ ಹಂಡಿ
    May 24, 2020 Reply

    ಇಂತ ಅದ್ಬುತ ಲೇಖನ ನಾನು ನನ್ನ ಜೀವನದಲ್ಲಿ ಇಲ್ಲಿಯತನಕ ಓದಿಲ್ಲ.
    ಸಂಸ್ಕೃತಿ, ಧಾರ್ಮಿಕ, ಭಾಷಾ ಹಾಗು ಅಧ್ಯಾತ್ಮಿಕ ರಾಜಕಾರಣ ಮುಖಾಂತರ ನಮ್ಮನ್ನು ಯಾವ ರೀತಿ ಮೋಸಗೊಳಿಸಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ಸಾಕ್ಷಿ ಸಮೇತ ಸಾಬೀತುಪಡಿಸಿದ್ದಾರೆ.
    ಈ ಕೆಳಗಿನದನ್ನು ಒತ್ತು ಕೊಟ್ಟು ಹೇಳುತ್ತಿದ್ದೇನೆ/ಬರೆಯುತ್ತಿದ್ದೇನೆ –
    “ನಮ್ಮನ್ನು ಇಲ್ಲಿಯ ತನಕ ಪ್ರತಿಯೊಬ್ಬ ಮನುಷ್ಯ ಬ್ರಹ್ಮ ವಸ್ತು/ಆತ್ಮ ಅಂತ ನಂಬಿಸಿಬಿಟ್ಟಿದ್ದಾರೆ. ಕರ್ಮಕಾಂಡ ಮುಖಾಂತರ ಬ್ರಹ್ಮವಸ್ತು/ಆತ್ಮ ಬ್ರಹ್ಮನಾಗಿ ಮನುಷ್ಯನ ರೂಪ ಪಡೆಯುತ್ತಾನೆ. ಬ್ರಹ್ಮನ ತಲೆಯಿಂದ ಬ್ರಾಹ್ಮಣ ಹುಟ್ಟಿ, ಶ್ರೇಷ್ಟ ಎಸಿಕೊಂಡು ಎಲ್ಲ ಸಂಪತನ್ನು ಹಾಗು ಅಧಿಕಾರವನ್ನು ಯಾವುದೇ ಕೆಲ್ಸ/ಶ್ರಮವಿಲ್ಲದ ಅನುಭವಿಸುತ್ತಾನೆ.ಶೂದ್ರನು ಬ್ರಹ್ಮನ ಪಾದದಿಂದ ಹುಟ್ಟಿ ಸಮಾಜದಲ್ಲಿ ಅತಿ ಕೀಳ ಆನಿಸಿಕೊಂಡು ಜೀವನ ಪರ್ಯಂತ ತನ್ನ ಶ್ರಮದ ಮುಖಾಂತರ ಬ್ರಾಹ್ಮಣನ ಸೇವೆ ಮಾಡುತ್ತಾನೆ”
    ಉಪನಿಷತ್, ವೇದ, ಪುರಾಣ ಹಾಗು ಶಾಸ್ತ್ರಗಳು ಇಷ್ಟೆ ಮಾಡಿ ಬಿಟ್ಟಿವೆ ಇದರ ಕೆಟ್ಟ ಪರಿಣಾಮ ನಾವು ಇಂದಿಗೂ ಹಾಗು ಮುಂದುವು ಸಹ ಅನುಭವಿಸುತ್ತೇವೆ.
    ಈ ಲೇಖನದಲ್ಲಿ ಮಂಗಳಾ ಶರಣೆ ಬಹಳ ಅಧ್ಯಯನ ಮಾಡಿ ಉಪನಿಷತ್ ಗಳ ಬುಡಕ್ಕೆ ಕೈಹಾಕಿ ಅವಗಳ ಮೋಸವನ್ನು ಅನಾವರಣಗೊಳಿಸಿದ್ದಾರೆ.
    12ನೆಯ ಶತಮಾನದಲ್ಲಿ ಬಸವಣ್ಣ ಹಾಗು ಬಸವಾದಿ ಶರಣರ ಉಪನಿಷತ್ ಗಳ ಮಾಡಿದ ಮೋಸವನ್ನು ಬಯಲುಗೊಳಿಸಲು ವಚನಗಳನ್ನು ಬರೆದರು. ಈ ಲೇಖನ ಸಹ ಆದೆ ಪ್ರಯತ್ನದ ಭಾಗವಾಗಿ ಭಾಸವಾಗುತ್ತದೆ.
    ಈ ಲೇಖನ ಬರೆಯಲು ಲೇಖಕಿ ಮಂಗಳಾ ಶರಣೆ ಎಷ್ಟು ಆಳವಾಗಿ ಉಪನಿಷತ್ ಗಳನ್ನು ಅಧ್ಯಯನ ಮಾಡಿ ಹಾಗು ವಚನಗಳ ಜೊತೆ ಹೋಲಿಕೆ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ.
    ಈ ಲೇಖನದಲ್ಲಿ ಉಲ್ಲೇಖಿಸಿದ ಕೆಲವು ವಚನಗಳ ಕೆಲವು ಸಾಲುಗಳನ್ನು ಇಲ್ಲಿ ಬರೆಯುತ್ತಿದ್ದೇನೆ.
    “ನಾರಾಯಣನೆಂಬವನ ಕಾಣೆ, ಗೀರಾಯಣನೆಂಬವನ ಕಾಣೆ”
    “ಬ್ರಹ್ಮ ಬಲ್ಲಿದನೆಂಬೆನೆ, ಶಿರ ಹೋಗಿ ನಾನಾ ವಿಧಿಯಾದ.” “ಆತ್ಮ ವಸ್ತುವೆಂಬಲ್ಲಿ ಅರಿವು ಮರವೆ ಉಂಟೆ” “ಹುಸಿಯ ಸಂಕಲೆಯಾಗಿದ್ದಲ್ಲಿ ಕಾದುಕೊಂಡಿದ್ದನೊಬ್ಬ, ಕಥೆ ಕನಸ ಮಾಡಿ ಹೇಳುತ್ತಿದ್ದನೊಬ್ಬ” “ಭಾವದಿಂದ ಭಾವಿಸಿದರೆ ಭಾವ ಭ್ರಾಂತಿಗೊಳಗಾಯಿತ್ತಾಗಿ
    ಭಾವದಿಂದ ಭಾವಿಸಿಹೆನೆಂಬ ಭ್ರಮಿತರ ಮಾತ ಕೇಳಲಾಗದು”,”ಬ್ರಹ್ಮವ ನುಡಿದು ಭ್ರಮಿತನಾದೆನಯ್ಯಾ, ಅದ್ವೈತವ ನುಡಿದು” “ಭಾವಿಸಿ ನೋಡಿಹೆನೆಂಬುದೆಲ್ಲವು ಭ್ರಮೆ”, “ಹುಸಿಜೀವ ಪರಮನೈಕ್ಯಸಂಧಾನ ಭ್ರಮೆ, ವಾಗದ್ವೈತ ಭ್ರಮೆ, ಅದ್ವೈತ ಭ್ರಮೆ,ಮಂತ್ರ ಭ್ರಮೆ, ತಂತ್ರ ಭ್ರಮೆ, ನಾಹಂ ಭ್ರಮೆ”
    “ಆದಿಶೂನ್ಯಂ ಮಧ್ಯಶೂನ್ಯಂ ಅಂತ್ಯಶೂನ್ಯಂ ನಿರಾಮಯಂ, ಇಂತಿದು ನಿರವಯ ಸ್ಥಲವಯ್ಯಾ, ಕೂಡಲಚೆನ್ನಸಂಗಮದೇವಾ”
    ಈ ಮೇಲಿನ ವಚನಗಳ ಮುಖಾಂತರ ವಚನಗಳ ಹಾಗು ಉಪನಿಷತ್ ಗಳ ನಡುವೆ ನಡೆದ ಸಮರದಲ್ಲಿ ಹೇಗೆ ವಚನಗಳು ಜಯಗಳಿಸುವೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.ಮಂಗಳಾ ಶರಣೆ ವಿನಂತಿಸಿದ ಹಾಗೆ ನಾನು ಸಹ ವಿನಂತಿಸಿಕೊಳ್ಳತ್ತೇನೆ- ತೆರೆದ ಮನಸ್ಸಿನಿಂದ ಈ ಲೇಖನವನ್ನು ಸುಮಾರಾಗಿ 2-3 ಸಲ ಓದಿದ ನಂತರ ಈ ಲೇಖನದ ಬೆಲೆ ಗೊತ್ತಾಗುತ್ತದೆ. ಈ ಲೇಖನ ಇತಿಹಾಸ ಪುಟಗಳಲ್ಲಿ ದಾಖಲೆಗೊಳ್ಳಬೇಕು. ವಿಶ್ವವಿದ್ಯಾಲಯದಲ್ಲಿ ಈ ಲೇಖನವನ್ನು ಉಲ್ಲೇಕ ಮಾಡಬೇಕು. ನಾನು ಯಾರು ಎಂಬ ಪುಸ್ತಕವನ್ನು ಸಹ ಪ್ರಕಟಿಸಬೇಕು.
    ಈ ಅದ್ಬುತವಾದ ಹಾಗು ವಿರಳವಾದ ಜ್ಞಾನ ದಾಸೋಹಕ್ಕೆ ಬಯಲು ತಂಡಕ್ಕೆ ಶರಣು ಶರಣಾರ್ಥಿ.

  15. ಮಹಾದೇವ ಹಡಪದ
    May 24, 2020 Reply

    ಇಷ್ಟು ವಿಸ್ತಾರವಾದ ಭಿತ್ತಿಯಲ್ಲಿ ಸಹಜವಾಗಿ ಒಡಮೂಡುವ ನಾನಾರೆಂಬ ಅರಿವಿನ ಪಯಣವು ನಮ್ಮನ್ನು ದಿನೇದಿನೇ ಮುಟ್ಟಿನೋಡುಕೊಖ್ಳುವ ಹಾಗೆ ಎಚ್ಚರಿಸುತ್ತಿದ್ದೀರಿ. ನಿಮ್ಮ ಅನುಭವ ಅನುಭಾವಗಳ ದೃಷ್ಟಿಕೋನವೇ ನನಗಿಷ್ಟ… ಇದರೊಳಗೆ ಹೊಕ್ಕಂತೆಲ್ಲ ಹೊಸತೊಂದು ಅನುಭವ ನನಗಾಗುತ್ತಿದೆ. ನಿಮ್ಮ ಕ್ರಿಯಾಶಕ್ತಿಗೊಂದು ಶರಣು… ಮುಂದಿನ ಸಂಚಿಕೆಗಾಗಿ ಕಾಯುವೆ. ಆದಷ್ಟು ಬೇಗ ಇದನ್ನು ಪುಸ್ತಕ ರೂಪದಲ್ಲಿ ತನ್ನಿರಿ…

  16. ಬಸವರಾಜ. ಸೂಳಿಭಾವಿ .
    May 24, 2020 Reply

    ಈ ಲೇಖನವನ್ನು ಓದಿದಾಗ, ಇಡೀ ವಿಶ್ವದ ಆಧ್ಯಾತ್ಮಿಕ ಪ್ರವಾಸ ಮಾಡಿದ ಹಾಗಾಯಿತು. ಸಾವಿರಾರು ಆಧ್ಯಾತ್ಮಿಕ ಹೊತ್ತಿಗೆಗಳನ್ನು ಓದಿದರೂ, ಇಷ್ಟು ಸ್ಪಷ್ಟತೆ ಹಾಗೂ ನಿಖರತೆ ಸಿಗುವುದಿಲ್ಲ. ಬಸವಾದಿಶರಣರ ವಚನಗಳು, ಜನಸಾಮಾನ್ಯರ ಬದುಕಿನ ಜೋತೆ ಹತ್ತಿರದಿಂದ ಬೆಸೆದುಕೊಂಡಿವೆ ಎಂದು ಪುನಃ ತಾವು ಸಾಬಿತುಪಡಿಸಿದ್ದಾರೆ. ಜನಸಾಮಾನ್ಯರ ಪ್ರತಿ ಸಮಸ್ಯೆಗಳಿಗೂ, ವಚನಸಾಹಿತ್ಯದಲ್ಲಿ ಪರಿಪೂರ್ಣ ಪರಿಹಾರಗಳಿವೆ ಎಂದು ಮನದಟ್ಟು ಮಾಡಿದ್ದಾರೆ. ಎಷ್ಟೋ ವಚನ ಸಾಹಿತ್ಯದ ಪಂಡಿತರಿಗೂ, ಇಷ್ಟು ಸ್ಪಷ್ಟತೆ ಹಾಗೂ ತುಲನಾತ್ಮಕವಾಗಿ ಲೇಖನಗಳನ್ನು ಬರೆಯಲು ಆಗುವುದಿಲ್ಲ. ವಚನಸಾಹಿತ್ಯವನ್ನು ಬೇರೆ ಸಾಹಿತ್ಯದ ಜೊತೆ ತುಲನಾತ್ಮಕವಾಗಿ ಹೋಲಿಸಿ ಹೇಳಿದಾಗ ಅಥವಾ ಬರೆದಾಗ, ವಚನಸಾಹಿತ್ಯಕ್ಕೆ ಹೆಚ್ಚಿನ ಮೆರಗು ಬರುತ್ತದೆ.
    ಲೇಖನ ಅದ್ಭುತವಾಗಿದೆ, ಪರಿಪೂರ್ಣವಾಗಿದೆ. ಸ್ವಂತ ಅನುಭವಿಸಿ, ಪ್ರತಿಯೊಂದು ವಿಷಯವನ್ನು ಒರೆಗಲ್ಲಿಗೆ ಹಚ್ಚಿ, ಬರೆದಿರುವ ಮಹಾನ್ ಲೇಖನ ಇದಾಗಿದೆ. ಅತೀ ಭಯಂಕರವಾದ, ಭಾರವಾದ ಹಾಗೂ ಅತೀ ಕ್ಲಿಷ್ಟಕರವಾದ ವಿಷಯವನ್ನು, ಅತೀ ಸರಳವಾಗಿ, ಜನಸಾಮಾನ್ಯರಿಗೂ ತಿಳಿಯುವ ಹಾಗೆ ಬರೆದಿದ್ದಾರೆ. ಮಂಗಳಾ ತಾಯಿಗೆ ಶರಣು ಶರಣರ್ಥಿಗಳು.

  17. ಅಮೃತ ಚಿಮಕೋಡೆ ಬೀದರ
    May 27, 2020 Reply

    ಅದ್ಭುತ ಲೆಖನ . ಸಾಕಷ್ಟು ವಚನ ಸಾಹಿತ್ಯ ,ಬೇರೆ ಬೇರೆ ಸಾಹಿತ್ಯ ಓದಿದ್ದೆ .ಆದರೆ ಈ ಲೇಖನ ಓದಿದ ನಂತರ ಇಷ್ಟು ದಿವಸ ನಾನು ಓದಿದ ಎಲ್ಲ ಲೇಖನಗಳಿಗಿಂತ ಇದು ಅತ್ಯ್ತುತ್ತಮ ಹಾಗು ಪರಿಪೂರ್ಣ ಲೇಖನ. ಲೇಖಕರಿಗೆ ಅನಂತಕೋಟಿ ಶರಣುಶರಣಾರ್ಥಿಗಳು.

  18. Chandrashekhar, Vijaypur
    May 27, 2020 Reply

    ಅರ್ಥವಾಗಲು ಸಮಯ ಬೇಕಾಗುತ್ತದೆ. ಬಹುಶಃ ನಮ್ಮ ಇದುವರೆಗಿನ ಗ್ರಹಿಕೆಗಳನ್ನು ತಲೆಕೆಳಗು ಮಾಡುವುದರಿಂದ ಸುಲಭವಾಗಿ ಒಂದೇ ಓದಿಗೆ ಇದನ್ನು ಗ್ರಹಿಸಲಾಗುವುದಿಲ್ಲ. ಉಪನಿಷತ್ತುಗಳ ಬಗೆಗಿನ ನಿಮ್ಮ ತಿಳಿವಳಿಕೆ ಕಂಡು ಅಗಾಧವೆನಿಸಿತು. ದಯವಿಟ್ಟು ಇದನ್ನು ಪುಸ್ತಕ ರೂಪದಲ್ಲಿ ಪ್ರಕಟ ಮಾಡಿ.

  19. ಮನೋಹರ್ ಆಚಾರ್
    May 29, 2020 Reply

    ನೀವು ಸಂಗ್ರಹಿಸಿದ ಮಾಹಿತಿ, ಅದರ ಹುಡುಕಾಟ, ಹೇಳಲು ಬಯಸುವ ಪರಿ ಎಲ್ಲವೂ ಮೆಚ್ಚುಗೆಗೆ ಯೋಗ್ಯ. ಲೇಖನದ ಮೂಲದ್ರವ್ಯ ಚಿತ್ರ ಬಿಡಿಸಿದಷ್ಟು ಅರಳುವ ಹೂವು…

  20. ಮಧುಕರ್ ಹುಬ್ಬಳ್ಳಿ
    Jun 5, 2020 Reply

    ಶರಣರ ವಿಚಾರಗಳಿಗೆ ಸಂಬಂಧಿಸಿದ ಅನೇಕ ಗೊಂದಲಗಳನ್ನು ನಿವಾರಿಸಿದ ಉತ್ತಮ ಲೇಖನ. ಪ್ರತಿಯೊಬ್ಬ ಲಿಂಗಾಯತನೂ ಓದಲೇ ಬೇಕು ಇದನ್ನು. ವಿಷಯ ಸ್ಪಷ್ಟತೆಯನ್ನು ನಮ್ಮ ಹೃದಯಕ್ಕೆ ಮನಗಾಣಿಸಲು ಲೇಖನ ಯಶಸ್ವಿಯಾಗಿದೆ. ಜೊತೆಗೆ ನನ್ನಲ್ಲಿ ಇನ್ನಷ್ಟು ಹೊಸ ಪ್ರಶ್ನೆಗಳು ಹುಟ್ಟಿಕೊಂಡವು. ಶರಣರು ಏಕದೇವೋಪಾಸಕರೆ? ಶರಣರು ಕಂಡ ದೈವ ಯಾವುದು?

  21. ಡಾ ರಾ ಮ ಹೊಸಮನಿ
    Jun 6, 2020 Reply

    ಮತ್ತೆ ಮತ್ತೆ ಓದಿನೊಂದಿಗೆ ಸಷ್ಟತೆಯ ಪ್ರಖರತೆ ನಿರೀಕ್ಷೆಗೂ ಮೀರಿ ವಿಸ್ತರಿಸಿ ಆನಂದದ ಅನುಭವ ಅರಿವು ಕೊಡುವ ಚಿಂತನಾಶ್ರಮಭರಿತ ವಿಶಿಷ್ಟ ಜೊಡನಾತ್ಮಕ ಹರವುಳ್ಳ ಬರಹಕ್ಕೆ ಧನ್ಯವಾದಗಳು.

  22. ಚನ್ನಬಸಪ್ಪ, ಮುದ್ದೇಬಿಹಾಳ
    Jun 9, 2020 Reply

    ತಾಯಿ, ನಾನು ಯಾರು ಎಂಬ ಆಳ-ನಿರಾಳದ ಎಲ್ಲಾ ಲೇಖನಗಳನ್ನು ಕನಿಷ್ಟ ನಾಲ್ಕೈದು ಸಾರಿ ಓದಿದ್ದೇನೆ. ಬೇರೆಯವರಿಗೆ ಇವುಗಳ ಮಹತ್ವ ಎಷ್ಟಾಗಿದೆಯೋ ಗೊತ್ತಿಲ್ಲ. ನನಗಂತೂ ಅಮೃತ ಕುಡಿದಂತೆನಿಸುತ್ತದೆ. ನನಗೀಗ ಎಂಬತ್ತು ವರ್ಷ. ಹುಡುಕಬೇಕಾದ ದಾರಿಯನ್ನು ಮರೆತು ಇಷ್ಟು ವಯಸ್ಸು ಕಳೆದುಬಿಟ್ಟೆ. ನಿನ್ನ ಲೇಖನದಲ್ಲಿ ಶರಣರ ದಾರಿ ತೋರಿಸುತ್ತಿರುವಂತೆ ನನಗೆ ಭಾಸವಾಗುತ್ತಿದೆ. ಧನ್ಯವಾದಗಳು ತಾಯಿ. ಕೊನೆಗಾಲದಲ್ಲಿ ತಿಳಿದುಕೊಳ್ಳಲೇ ಬೇಕಾದ ವಿಷಯಗಳನ್ನು ಈಗ ನಿನ್ನ ಅಕ್ಷರಗಳ ಮೂಲಕ ತಿಳಿಸುತ್ತಿದ್ದೀಯಾ. ನಿನ್ನ ಪ್ರಯಾಣದ ಜೊತೆಗೆ ನಾನೂ ಇದ್ದೇನೆ ತಾಯಿ. ಇದೆಲ್ಲಾ ಸೇರಿಸಿ ಪುಸ್ತಕ ಮಾಡಮ್ಮಾ, ದಯವಿಟ್ಟು ಮಾಡಲೇ ಬೇಕು.
    -ಚನ್ನಬಸಪ್ಪ, ಮುದ್ದೇಬಿಹಾಳ

  23. Megharaj
    Dec 13, 2022 Reply

    ಪರಬ್ರಹ್ಮವು ಅನಂತ ಸಾಗರವಾದರೆ ಉಳಿದೆಲ್ಲವು ಆ ಅನಂತ ಸಾಗರದ ನೀರ ಹನಿಗಳಂತೆ ತಿಳಿಯರಣ್ಣಾ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬೆಳಕ ಬೆಂಬತ್ತಿ…
ಬೆಳಕ ಬೆಂಬತ್ತಿ…
November 9, 2021
ಭಕ್ತನೆಂತಪ್ಪೆ?
ಭಕ್ತನೆಂತಪ್ಪೆ?
April 29, 2018
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ಅಚಲ ಕಥಾಲೋಕ
ಅಚಲ ಕಥಾಲೋಕ
February 10, 2023
ಬಿಟ್ಟು ಹೋದ ಬಸವಣ್ಣ
ಬಿಟ್ಟು ಹೋದ ಬಸವಣ್ಣ
April 29, 2018
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
ನಾನು… ನನ್ನದು
ನಾನು… ನನ್ನದು
July 4, 2021
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
April 9, 2021
Copyright © 2023 Bayalu