
ಗಾಳಿ ಬುರುಡೆ
ನಂಬಿ ಕೆಡಬ್ಯಾಡೋ/ ಈ ಗಾಳಿ ಬುರುಡೆಯ
ನೆಚ್ಚಿ ಕೆಡಬ್ಯಾಡೋ/ ನೆಚ್ಚಿ ಸೋತ್ಹೋಗಬೇಡಾ
ಅರಗಿಣಿಯ ಮಾತ ಕೇಳಿ/ ತರಗೆಲೆಯಂತೆ ನೀನು
ಗಾಳಿಗೆ ತೂರ್ಹೋಗಬೇಡಾ //ನಂಬಿ//
ಚಿತ್ರಾ ವಿಚಿತ್ರದಿಂದಲಿ ಆಟವಾಡುತ ನಲಿಯುತಿಹುದು
ಒಂದರೊಳು ಹನ್ನೊಂದು ತೂರಿಸಿ ಬಣ್ಣದೋಕುಳಿ ಬಳಿಯುತಿಹುದು //ನಂಬಿ//
ಅನುಕ್ಷಣವೂ ನಿನ್ನ ಜತೆಯಲಿ/ನೆರಳಿನಂತೆ ನಲಿಯುತಿಹುದು
ಇಲ್ಲಸಲ್ಲದ ಕನಸ ತೋರಿಸಿ/ ಮಾಯಾಜಾಲವ ಹೆಣೆಯುತಿಹುದು //ನಂಬಿ//
ನಾದದೊಳಗೆ ಬಿಂದು ಮೋಹಿಸಿ/ ಹಾದರವೊಂದಾಗುತಿಹುದು
ಸಂತೆ ಕೂಟದ ಮನೆಯೊಳಗದು/ ಸಮರಸವನು ಕೊಲ್ಲುತಿಹುದು //ನಂಬಿ//
ಚಂಚಲಾಂಗಿಯು ನಾನೇ ಎನುತಿದೆ/ ಧರ್ಮಕರ್ಮ ನನ್ನದೆನುತಿದೆ
ಅಡವಿ ಸೇರಿ ಅವಿತು ಕುಳಿತರೂ/ ನಿನ್ನನೂ ಬಿಡಲಾರೆ ಎನುತಿದೆ //ನಂಬಿ//
ಸುತ್ತಮುತ್ತಾ ಮೇಲೆ ಕೆಳಗೆ/ ಆಕಾರರಹಿತ ನಾನು ಎನುತಿದೆ
ಸ್ವರ್ಗ-ನರಕ ನನ್ನದೆನುತಾ/ ಕೇಕೆ ಹಾಕಿ ನಗುತಲಿಹುದು //ನಂಬಿ//
ಹೆಸರೇ ಇಲ್ಲದಾ ಊರಿನೊಳಗೆ/ ಹುಲ್ಲುಗುಡಿಸಲ
ಕದವ ತಟ್ಟಿ/ ನಿರ್ಭಯದಿ ಬದುಕು ಸಾಗಿಸಿ
ಆಳದಾ ನಿರಾಳವಾಗು //ನಂಬಿ//
Comments 3
ಬಸವಲಿಂಗಪ್ಪ ಕಡೂರು
Jun 19, 2020ಗಾಳಿ ಬುರುಡೆಯು ನಮ್ಮನ್ನು ತೂರಿ ರೂರಿ ಕೇಕೇ ಹಾಕುತ್ತಿದೆ. ಬದುಕಿನ ಚಿತ್ರಣ ನೀಡುತ್ತದೆ. ರಾಗ ಹಾಕಿದರೆ ಸೊಗಸಾಗಿ ಹಾಡಬಹುದು.
Jayaraj Bidar
Jun 24, 2020ದೇಹ ಗಾಳಿ ಬುರುಡೆ, ಮನಸ್ಸು ಗಾಳಿ ಬುರುಡೆ, ನಮ್ಮ ಬದುಕೇ ಗಾಳಿ ಬುರುಡೆ ಎನ್ನಿಸಿತು. ವಿಚಾರಕ್ಕೊಡ್ಡುವ ಕವನ, ಪದ್ಮಾಲಯ ನಾಗರಾಜ್ ಶರಣರ ಕವನ ಸಂಕಲನಗಳೇನಾದರೂ ಇದ್ದರೆ ದಯವಿಟ್ಟು ತಿಳಿಸಿ.
ಮಧುಸೂದನ್
Jun 25, 2020ಮಾಯಾಜಾಲವ ಹೆಣೆವ ಗಾಳಿಬುರುಡೆ ಮನದ ಮುಂದಣ ಮಾಯೆ, ಆಸೆಗಳ ಜಾಲ. ಸರಳ, ಅರ್ಥಗರ್ಭಿತ ಹಾಡು.