Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಜಗವ ಸುತ್ತಿಪ್ಪುದು ನಿನ್ನ ಮಾಯೆ…
Share:
Articles April 29, 2018 ಕೆ.ಆರ್ ಮಂಗಳಾ

ಜಗವ ಸುತ್ತಿಪ್ಪುದು ನಿನ್ನ ಮಾಯೆ…

ಈ ಭೂಮಿಯ ಮೇಲೆ ನಿಂತು ನೋಡಿದರೆ ಚಂದ್ರ ಬೆಳ್ಳಿಯಂತೆ ಹೊಳೆಯುತ್ತಾನೆ, ತಾರೆಗಳು ಕಣ್ಣು ಮಿಟುಕಿಸುತ್ತವೆ, ಸೂರ್ಯ ಮುಂಜಾನೆ ಮತ್ತು ಮುಸ್ಸಂಜೆಗೆ ಕಿತ್ತಳೆಯ ಚೆಂಡಾಗುತ್ತಾನೆ. ಆದರೆ ಭೂವಲಯ ದಾಟಿ ಬಾಹ್ಯಾಕಾಶದಲ್ಲಿ ನಿಂತು ನೋಡಿದರೆ ಈ ಯಾವ ರಂಗುರಂಗಿನ ದೃಶ್ಯಾವಳಿಗಳೂ ಕಾಣುವುದಿಲ್ಲ. ಅಲ್ಲಿ ಎಲ್ಲ ಆಕಾಶಕಾಯಗಳೂ ಒಂದೇ…

ನಾವು ಬಾಳುತ್ತಿರುವ ಜಗತ್ತನ್ನು ಮಾಯಾಪ್ರಪಂಚ ಎನ್ನುತ್ತಾರೆ. ಇದು ನಿಜವೇ ಅಥವಾ ಸುಳ್ಳೇ ಎಂಬುದು ಮನುಷ್ಯನನ್ನು ಕಾಡುತ್ತಿರುವ ನಿರಂತರ ಪ್ರಶ್ನೆ. ಈ ಜಿಜ್ಞಾಸೆಯ ಪರಿಣಾಮವಾಗಿ ಮಾಯಾವಾದದ ಅನೇಕ ಸಿದ್ಧಾಂತಗಳು, ತರ್ಕಗಳು, ವಾದಗಳು ಜಗತ್ತಿನ ಎಲ್ಲಾ ಪರಂಪರೆಗಳಲ್ಲಿ ಹುಟ್ಟಿಕೊಂಡಿವೆ. ಈ ಜಗವನ್ನು ಅಲ್ಲಮರು ‘ಆಡಂಬರದೊಳಗಿನ ಆಡಂಬರ’ ಎಂದಿದ್ದಾರೆ. ಅಂದರೆ ಈ ಲೋಕವು ಮಾಯೆಯ ಒಡಲಿನಲ್ಲಿ ಜನಿಸಿದ ಕೂಸಂತೆ. ಜಗದ ಆಟಗಳಿಗೆಲ್ಲ ಅದೇ ಸೂತ್ರಧಾರಿ. ಮಳೆಬಿಲ್ಲು, ಮಿಂಚು, ನೀರಗುಳ್ಳೆ, ಮರೀಚಿಕೆ, ನೀರಲ್ಲಿ ಕಾಣುವ ಚಂದ್ರ ಬಿಂಬ, ಕನಸು… ಎಂದೆಲ್ಲಾ ಜೀವನದ ಮತ್ತು ಲೋಕದ ನಶ್ವರತೆಯನ್ನು ತತ್ವಜ್ಞಾನಿಗಳು ಬಣ್ಣಿಸುತ್ತಾರೆ. ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟಿನ್ ಕೂಡ, “ವಾಸ್ತವಿಕತೆ ಎನ್ನುವುದು ನಿರಂತರವಾಗಿ ತೋರುವ ಒಂದು ಭ್ರಮೆ ಮಾತ್ರ” (Reality is merely an illusion, albeit a very persistent one) ಎನ್ನುತ್ತಾರೆ. ಹಾಗಾದರೆ ವಿಜ್ಞಾನವೂ ನಾವು ಕಾಣುವುದೆಲ್ಲಾ ಕಲ್ಪನೆ ಎನ್ನುತ್ತದೆಯೇ? ವಿವಿಧ ರಂಗು ಹಾಗೂ ನಾದಗಳಲ್ಲಿ ತೋರುವ ಸುಂದರವಾದ ಈ ಜಗತ್ತು ಕೇವಲ ಭ್ರಮಾತ್ಮಕವೇ? ಮಾಯೆಯೇ?
ಮಾಯೆ ಎಂಬುದು ಒಂದು ಸಂಕೀರ್ಣ ಪರಿಕಲ್ಪನೆ. ಇದೂ ಸೃಷ್ಟಿಯಷ್ಟೇ ರಹಸ್ಯಮಯ. ಆದಿ- ಅಂತ್ಯಗಳು ತಿಳಿಯದ ಇದರ ವಿಸ್ತಾರ ಅನಂತ. ಆದರೆ ಮಾಯೆಯೂ ಸ್ವತಂತ್ರವಲ್ಲ. ಅದು ಸೃಷ್ಟಿಯ ಅಧೀನ. ಅಂದರೆ ಮಾಯೆಗೆ ಆಸರೆಯೇ ಈ ಸೃಷ್ಟಿ. ಅಂದರೆ ಹುಸಿಗೆ ಆಸರೆ ನೀಡಿದ್ದು ಪರಮ ಸತ್ಯ! ಪರಮಸತ್ಯದ ನೆಳಲು ಈ ಮಾಯೆ!

ಸೃಷ್ಟಿ ಬಯಲ ಸ್ವರೂಪಿ. ಸೃಷ್ಟಿಯ ಒಂದಂಶವಾದ ಮನುಷ್ಯನೂ ಬಯಲ ರೂಪಿಯೇ. ಆದರೆ ಜೀವಕ್ಕೆ ಆ ಆನಂದರೂಪದ ಪ್ರಜ್ಞೆಯೇ ಇಲ್ಲ. ಸೃಷ್ಟಿಯ ಅಂಶವೇ ಆದರೂ ಮನುಷ್ಯ ತನ್ನ ಅದ್ಭುತ ಶಕ್ತಿಯನ್ನು ಮರೆಯಲು, ಕಳೆದುಕೊಳ್ಳಲು, ಅರಿಯದಿರಲು ಕಾರಣವೇ ‘ಮಾಯೆ’ ಎನ��ನುತ್ತವೆ ದರ್ಶನಶಾಸ್ತ್ರಗಳು. ಸುಖ, ಸಂತೋಷ, ಆನಂದಗಳು ಕಾಲ ಬಂಧಿ. ಕಾಲ ಸರಿದಂತೆ ಇವು ಕೊಟ್ಟ ಅನುಭೂತಿಗಳು ಮರೆಯಾಗುತ್ತವೆ. ಆಗ ಸಹಜವಾಗಿಯೇ ನಮಗೆ ಜಗತ್ತು ಮಾಯೆಯಂತೆ, ಇಂದ್ರಜಾಲದಂತೆ ಭಾಸವಾಗುತ್ತದೆ. ಜೀವವು ಧರಿಸಿದ ದೇಹ ಕೂಡ ಸಮಯದ ಸೊತ್ತು. ಸಮಯಕ್ಕೆ ಸಿಕ್ಕ ಎಲ್ಲವೂ ಬದಲಾಗುತ್ತವೆ, ಬದಲಾಗಲೇ ಬೇಕು. ಅದು ಸಮಯದ ಗುಣ. ಈ ಸೃಷ್ಟಿಯ ನಿಯಮ. ದೇಹ ಮತ್ತು ಜಗತ್ತು ಎರಡೂ ಪಂಚಭೂತಗಳ ನಿರ್ಮಿತಿಗಳು. ಮಾಯೆಯ ಕಾರ್ಯಕ್ಷೇತ್ರಗಳು.

ನಿಜಕ್ಕೂ ಮಾಯೆ ಎಂದರೇನು?
ಸತ್ಯವನ್ನು ಮರೆಮಾಚುವ, ವಿಷಯಾದಿ ಸುಖಂಗಳನ್ನು ತೋರಿ ಮರುಳು ಮಾಡುವ, ಬದುಕಿನ ದಿಕ್ಕುತಪ್ಪಿಸುವ, ಯಾವುದೋ ಉನ್ಮಾದದಲ್ಲಿ ತೇಲಿಸುವ, ಅಡ್ಡ ಹಾದಿ ಹಿಡಿಸಿ ನಾಶ ಮಾಡುವ, ವಿಷಯಗಳನ್ನು, ವ್ಯಕ್ತಿಗಳನ್ನು, ಯೋಚನೆಗಳನ್ನು ‘ಮಾಯೆ’ ಎನ್ನುವುದು ಲೋಕ ರೂಢಿ. ಸನಾತನ ಧರ್ಮದ ಪ್ರಕಾರ ಹೊನ್ನು, ಮಣ್ಣು, ಹೆಣ್ಣು ಮಾಯೆಯ ಯಾದಿಯಲ್ಲಿ ಬರುವ ಅಗ್ರ ಹೆಸರುಗಳು. ಆದರೆ ಇವೆಲ್ಲ ಕೇವಲ ವಸ್ತು- ವಿಷಯಗಳು. ಇವು ಜೀವನದ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಮೌಲ್ಯಗಳು. ನಮ್ಮ ಮನಸ್ಸಿನಲ್ಲಿ ಆಸೆಯ ತರಂಗಗಳು ಏಳದೇ ಇವು ತಾವಾಗಿಯೇ ಯಾರನ್ನೂ ಆಕರ್ಷಿಸಲಾರವು. ಆದ್ದರಿಂದ ಮೊದಲ ಬಾರಿಗೆ ಶರಣರು ಇವುಗಳಿಗೆ ಅಂಟಿದ್ದ ಮಾಯದ ಕಳಂಕವನ್ನು ತೆಗೆದು, “ಮನದ ಮುಂದಣ ಆಸೆಯೇ ಮಾಯೆ” ಎಂದು, ಮಾಯೆಯ ಉಗಮ ಸ್ಥಾನ (origin)ವನ್ನು ಗುರುತಿಸಿದರು. ಮನಸ್ಸಿನೊಳಗಿನ ಆಯಾ ವಿಷಯಗಳ ಆಸೆಯೇ ಮಾಯೆ ಎಂದು ಸ್ಪಷ್ಟಪಡಿಸಿದರು.

ಈ ಮನಸ್ಸು ತಳವೇ ಕಾಣದ ಕಡಲು. ಇಲ್ಲಿನ ಪ್ರವಾಹಗಳು, ಮೊರೆತಗಳು ಕಲ್ಪನೆಗೂ ಮೀರಿದಷ್ಟು ರುದ್ರ. ಲೆಕ್ಕವಿಲ್ಲದಷ್ಟು ಬದುಕುಗಳು ಇದರ ಮೊರೆತದಲ್ಲಿ ಮರೆಯಾಗಿವೆ. ಮನಸ್ಸು ಮಾಯೆಯ ಕಾರ್ಯಾಗಾರ. ಮನದಲ್ಲಿ ಮಾಯೆ ತುಂಬಿಕೊಂಡರೆ ಬದುಕಿನ ಆದ್ಯತೆಗಳೇ ಬೇರೆಯಾಗುತ್ತವೆ. ಬಂಧನಕ್ಕೂ, ಬಿಡುಗಡೆಗೂ ಕಾರಣವಾದದ್ದು ಮನಸ್ಸು.
ಮಾಯೆ ಅಡಗದ ಎದೆಯ ಗೂಡುಗಳಿಲ್ಲ. ಅದರ ಚದುರಂಗದಾಟಕ್ಕೆ ಯಾವ ಮನೆಗಳಾದರೇನು, ಯಾವ ಮನಗಳಾದರೇನು?
ಮಾಯೆಯನ್ನು ತಮೋಶಕ್ತಿ ಎಂದೂ ಹೇಳುವರು. ಮಾಯೆಗೊಳಗಾದ ಜೀವಕ್ಕೆ ದುಃಖಗಳು, ಕೋಟಲೆಗಳು, ಸಾವು-ನೋವು, ಕೆಡುಕುಗಳು ಅಸಂಖ್ಯ. “ನಿನ್ನ ಮಾಯೆಗೆ ನಾನಂಜುವಳಲ್ಲ” ಎನ್ನುವ ಅಕ್ಕಮಹಾದೇವಿ, “ನೀನೊಡ್ಡುವ ಮಾಯೆಯನಾರೂ ಗೆಲಲಾಗದು” ಎಂದು ಮಾಯೆಯ ಅನಂತ ಶಕ್ತಿಯ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾಳೆ.
ಹರಿಯ ನುಂಗಿತ್ತು ಮಾಯೆ,
ಅಜನ ನುಂಗಿತ್ತು ಮಾಯೆ
ಇಂದ್ರನ ನುಂಗಿತ್ತು ಮಾಯೆ,
ಚಂದ್ರನ ನುಂಗಿತ್ತು ಮಾಯೆ
ಬಲ್ಲೆನೆಂಬ ಬಲುಗೈಯರ ನುಂಗಿತ್ತು ಮಾಯೆ,
ಅರಿಯೆನೆಂಬ ಅಜ್ಞಾನಿಗಳ ನುಂಗಿತ್ತು ಮಾಯೆ,
ಈರೇಳುಭುವನವನಾರಡಿಗೊಂಡಿತ್ತು ಮಾಯೆ,
ಚೆನ್ನಮಲ್ಲಿಕಾರ್ಜುನಯ್ಯಾ, ಎನ್ನ ಮಾಯವ ಮಾಣಿಸಾ ಕರುಣಿಸಾ.

ಮಾಯೆಯ ಮೋಹಕತೆಯ ಸುಳಿ ಎಂಥವರನ್ನೂ ತನ್ನೊಳಗೆ ಪಲ್ಟಿ ಹೊಡೆಸಿಕೊಳ್ಳುತ್ತದೆ. ಶೂರರು-ವೀರರು- ಜ್ಞಾನಿಗಳು, ಸಾಧು- ಸನ್ಯಾಸಿಗಳು… ಇದರ ಒಂದಲ್ಲಾ ಒಂದು ಪಾಶಕ್ಕೆ ಸಿಲುಕಿದ ಬಲಿಪಶುಗಳೇ. ನನ್ನೊಳಗೆ ನನಗೇ ಅರಿವಿಗೆ ಬರದಂತೆ ಮಾಯೆ ಯಾವ ರೂಪದಲ್ಲಿ ಅಡಗಿದೆಯೋ ಅದನ್ನು ನೀನೇ ಪರಿಹರಿಸು ಎಂದು ಅಕ್ಕ ಬೇಡಿಕೊಳ್ಳುತ್ತಾಳೆ. ಭವಬಂಧನಗಳಿಗೂ, ಕರ್ಮಬಂಧನಗಳಿಗೂ ಗಂಟು ಹಾಕುವ ಮಾಯೆ, ನಿಜದ ನಿಲುವನ್ನು ಸಂಪೂರ್ಣ ಮರೆಮಾಚಬಲ್ಲುದು. ದೇವನೊಲುಮೆ ಇಲ್ಲದೆ ಮಾಯೆಯನ್ನು ಗೆಲ್ಲಲಾಗದು ಎಂಬುದು ಅಕ್ಕನ ನಿಲುವು.
ಮಾಯೆಯ ಅಸಾಧಾರಣ ಸಾಮರ್ಥ್ಯದ ಬಗ್ಗೆ ಅಲ್ಲಮಪ್ರಭುಗಳಷ್ಟು ವಿಶದವಾಗಿ ವರ್ಣಿಸಿದವರು ಮತ್ತೊಬ್ಬರಿಲ್ಲ. ‘ತಾ ಘನವೆಂದಡೆ ತನ್ನ ನುಂಗಿತ್ತು ಮಾಯೆ’- ಎನ್ನುತ್ತಾರೆ ಒಂದು ಕಡೆ. ‘ನಾನು’ ಇದ್ದಲ್ಲಿ ಮಾಯೆ ಹಾಜರು. ನಾನು ಎಂಬುದು ಮಾತಿನಲ್ಲೇ ಆಗಲಿ, ಭಾವನೆಯಲ್ಲೇ ಆಗಲಿ ಸ್ವಲ್ಪ ಇಣುಕಿ ಹಾಕಿದರೂ ಅದು ಮಾಯೆಯ ರೂಪ. ಮಾಯೆ ಇದ್ದಲ್ಲಿ ಜೀವ- ಜಗತ್ತಿನ ಸ್ಪಷ್ಟತೆಯೇ ಮಾಯ. “ಆನುಳ್ಳನ್ನಕ್ಕ ನೀನುಂಟೆಲೆ ಮಾಯೆ… ಆನಿಲ್ಲದಿರ್ದಡೆ ನೀನಿಲ್ಲ.” ಎಂಬುದು ನಿಜಗುಣ ಶಿವಯೋಗಿಗಳ ಅನುಭವ.

ಮಾಯೆಯದು ಸೂಕ್ಷ್ಮಾತಿ ಸೂಕ್ಷ್ಮ ರೂಪ. ಒಬ್ಬ ಮನುಷ್ಯ ಹೆಮ್ಮೆಪಡಬಹುದಾದ ಸ್ಥಾನಮಾನ, ರೂಪು, ವಿದ್ಯೆ, ಅಧಿಕಾರ, ಶಕ್ತಿ, ಹಣ, ಐಶ್ವರ್ಯ ಮುಂತಾದ ಯಾವುದೇ ಕಾರಣಗಳಿರಬಹುದು. ಇವು ಆತನಲ್ಲಿ ಶ್ರೇಷ್ಠತೆಯ ಭಾವ ಮೂಡಿಸಿದರೆ ಅದೇ ಮಾಯೆ. ಅರಿವು ಮೂಡದೆ ಮಾತನಾಡುವ ಮಾತುಗಳೂ ಶಬ್ದಜಾಲದ ಮಾಯೆ ಎನ್ನುವ ಅಲ್ಲಮರು: “ತನ್ನ ತಾನರಿದಡೆ ನುಡಿಯೆಲ್ಲ ತತ್ವ ನೋಡಾ ! ತನ್ನ ತಾ ಮರೆದಡೆ ನುಡಿಯೆಲ್ಲ ಮಾಯೆ ನೋಡಾ!” ಎಂದು ಎಚ್ಚರಿಸುತ್ತಾರೆ. ಹೀಗೆ ಮಾಯೆಗೆ ಅಸಂಖ್ಯ ವೇಷಗಳು, ಅಗಣಿತ ರೂಪಗಳು. ಜಾಗ್ರ, ಸ್ವಪ್ನ, ಸುಷುಪ್ತಿಗಳಲ್ಲಿ ಓತಪ್ರೋತವಾಗಿ ಹರಡಿರುವ ಮಾಯೆಯು ಸ್ವಭಾವಗಳಲ್ಲಿ ಅಡಗಿದ ಬಗೆಯನ್ನು ಹೀಗೆ ಬಯಲಿಗೆಳೆಯುತ್ತಾರೆ ಸಿದ್ಧರಾಮೇಶ್ವರರು:
ಯೋಗಿಗೆ ಕೋಪವೆ ಮಾಯೆ;
ರೋಗಿಗೆ ಅಪಥ್ಯವೆ ಮಾಯೆ;
ಜ್ಞಾನಿಗೆ ಮಿಥ್ಯವೆ ಮಾಯೆ;
ಅರಿದೆನೆಂಬವಂಗೆ ನಾನು ನೀನೆಂಬುದೆ ಮಾಯೆ,
ಕಪಿಲಸಿದ್ಧಮಲ್ಲಿಕಾರ್ಜುನ.

ಆದರೆ ಆಸೆ- ಆಮಿಷಗಳನ್ನು ಮೀರುವುದೆಂದರೆ ಅಷ್ಟು ಸುಲಭವೇ? ದೇಹದ ಹಸಿವು- ತೃಷೆಗಳನ್ನು ಪೂರೈಸದೆ ಇರಲು ಆದೀತೆ? “ಒಡಲಿಚ್ಛೆಯ ಸಲಿಸದೆ ನಿಮಿಷವಿರಬಾರದು’’ ಎನ್ನುತ್ತಾರೆ ಅಲ್ಲಮರು. ದೇಹದ ಶಕ್ತಿ ಸಾಮರ್ಥ್ಯಗಳು ಜೀವಕ್ಕೆ ಅತಿ ಮುಖ್ಯ. ಒಡಲ ಇಚ್ಛೆಗಳು ಅಂದರೆ ದೇಹದ ಅಗತ್ಯಗಳು. ಹಸಿವು, ತೃಷೆ ಸೇರಿದಂತೆ ಒಡಲ ಇಚ್ಛೆಗಳು ನೂರಾರು. ಅವು ಕೇವಲ ಇಚ್ಛೆ ಅಥವಾ ಅಗತ್ಯಗಳಾಗಿ ಉಳಿಯದೇ ದಾಹದ ವೇಷ ಹಾಕಿದಾಗ ಮನುಷ್ಯ ಅವುಗಳ ದಾಸಾನುದಾಸನಾಗಿಬಿಡುತ್ತಾನೆ. ಕಾಮನೆಗಳು ಹಪಾಹಪಿಯ ರೂಪ ಪಡೆಯುತ್ತವೆ. ಇವುಗಳ ಈಡೇರಿಕೆಯಲ್ಲಿಯೇ ತಲ್ಲೀನವಾದರೆ ಅದು ಬಂಧನ, ಸಂಸಾರ. ಆಗ ಮನುಷ್ಯನಿಗೆ ಬಿಡುವಿಲ್ಲ. ವರುಷಗಳು ಮೋಡಗಳಂತೆ ಸರಿದು ಹೋಗುತ್ತಿದ್ದರೂ ಅದರ ಪರಿವೆಯೇ ಇರುವುದಿಲ್ಲ. ಹೀಗೆ ದೇಹದ ಆಶೋತ್ತರಗಳ ಪೂರೈಕೆಯಲ್ಲಿಯೇ ಲೋಕ ಮಗ್ನವಾಗಿದೆ. ಇದೇ ಮಾಯಾಜಾಲ!

ಮಾಯೆ ಇಲ್ಲದ ಠಾವಿಲ್ಲ. ಆ ಮೂಲಕ ಅದು ಸರ್ವವ್ಯಾಪಿ. ಅದು ಮಾಡದ ಕಾರ್ಯಗಳೇ ಇಲ್ಲ. ಆ ಮೂಲಕ ಅದು ಸರ್ವಶಕ್ತ. ಮಾಯೆಯೂ ದೇವರಂತೆಯೇ ಅನಂತ, ಅಗೋಚರ ಶಕ್ತಿ. ಮಾಯೆಯ ವಿಲಾಸವನ್ನೂ, ವೈಚಿತ್ರ್ಯವನ್ನೂ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ.
ಇಡೀ ಲೋಕದ ವ್ಯವಹಾರಗಳಿಗೆ ಕಾರಣವಾದ ಮಾಯೆಯ ವಿಲಾಸ ನಿಜಕ್ಕೂ ಅದ್ಭುತ. ಮಾಯೆಯ ಹೊದಿಕೆಯಿಲ್ಲದೆ ಸೃಷ್ಟಿಯನ್ನು ನಿಜಕ್ಕೂ ದಿಟ್ಟಿಸಲು ಸಾಧ್ಯವೇ? ಅಂಥದೊಂದು ಅಪರೂಪದ ಸಾಧ್ಯತೆಯನ್ನು ಬಸವಣ್ಣನವರ ಈ ವಚನದಲ್ಲಿ ಗಮನಿಸಬಹುದು. ಆಧ್ಯಾತ್ಮ ಲೋಕದ ಪಥಿಕರಾಗಿ ಮತ್ತು ಸಾರ್ವಜನಿಕ ರಾಜಕಾರಣದಲ್ಲಿ ಮಹಾಪ್ರಧಾನಿಯಾಗಿ ಬಸವಣ್ಣನವರು ಸಮನ್ವಯತೆ ಸಾಧಿಸಿದ್ದು ಹೇಗೆ? ಏಕಕಾಲದಲ್ಲಿ ಅರಿವಿನ ಮನೆ ಮತ್ತು ಅರಮನೆ ಎರಡರ ಕಡೆಗೂ ಅವರು ಉತ್ಸುಕದ ಹೆಜ್ಜೆಗಳನ್ನು ಹಾಕಿದ್ದು ಹೇಗೆ… ಎನ್ನುವ ಪ್ರಶ್ನೆಗಳಿಗೂ ಈ ವಚನದಲ್ಲಿ ಉತ್ತರವಡಗಿದೆ:

ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ
ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯಾ.
ನೀನು ಜಗಕ್ಕೆ ಬಲ್ಲಿದನು, ಆನು ನಿನಗೆ ಬಲ್ಲಿದನು, ಕಂಡಯ್ಯಾ.
ಕರಿಯು ಕನ್ನಡಿಯೊಳಗಡಗಿದಂತಯ್ಯಾ,
ಎನ್ನೊಳಗೆ ನೀನಡಗಿದೆ ಕೂಡಲಸಂಗಮದೇವಾ.

ಬಯಲು ರೂಪಿ ದೇವರನ್ನು ತನ್ನೊಳಗೆ ಆವಿರ್ಭವಿಸಿಕೊಳ್ಳುವ ರಹಸ್ಯವನ್ನು ತಮ್ಮ ಮೂಲಕ ಇಲ್ಲಿ ಬಿಚ್ಚಿಟ್ಟಿದ್ದಾರೆ ಬಸವಣ್ಣನವರು. ಮಾಯೆಯ ಛಾಯೆಯಲ್ಲಿರುವ ಜಗತ್ತು ದೇವರನ್ನು ನಾನಾ ರೂಪಗಳಲ್ಲಿ ಬೆನ್ನುಹತ್ತಿದೆ. ಆದರೆ ದೇವನ ನೆಲೆ-ಸೆಲೆಗಳು ಯಾರಿಗೂ ಸರಿಯಾಗಿ ದಕ್ಕುತ್ತಿಲ್ಲ. ಪರಮಸತ್ಯದ ನಿಜ ಸ್ವರೂಪ ತಿಳಿಯದೇ ಲೋಕವು ನಾನಾ ಭ್ರಮೆಗಳಲ್ಲಿ ಬಿದ್ದು ಬಳಲುತ್ತಿದೆ. ಮಾಯೆ ಕಳಚಿದ ಜೀವವನ್ನು ಮಾತ್ರ ದೇವರು ಗಮನಿಸುತ್ತಾನೆ. ಅಂತಹ ವಿಶೇಷವಾದ ಚೇತನವು ಮಾತ್ರವೇ ಸೃಷ್ಟಿಕರ್ತನಿಗೆ ಆಪ್ತವಾಗುತ್ತದೆ. ಏಕೆಂದರೆ ಇಡೀ ಸೃಷ್ಟಿಯ ಗಮನ ಸೆಳೆಯಬಲ್ಲ ವ್ಯಕ್ತಿತ್ವ ಅದಾಗಿರುತ್ತದೆ. ಬೃಹದಾಕಾರದ ಆನೆಯು ಪುಟ್ಟ ಕನ್ನಡಿಯಲ್ಲಿ ಹೇಗೆ ಅಡಕವಾಗಬಲ್ಲುದೋ ಹಾಗೆ ಬ್ರಹ್ಮಾಂಡ ಸ್ವರೂಪಿಯಾದ ದೇವರು ನಿರ್ಮಲ ಅಂತಃಕರಣದಲ್ಲಿ ಅಡಗಬಲ್ಲ. ವಿಷಯಾದಿಗಳ ಬಯಕೆ ಮೆತ್ತದ ಶುದ್ಧ ಮನಸ್ಸು ದೇವರನ್ನು ತನ್ನಲ್ಲಿ ಸೆರೆ ಹಿಡಿಯಬಲ್ಲುದು. ಅದು ಮಾಯೆಯ ಮೋಹ- ಅಹಂಕಾರಗಳ ಪರಿಧಿ ದಾಟಿದ ನಿರ್ಮಲ ಚೇತನ. ಮನಸ್ಸು ನಿರ್ವಿಕಾರ, ನಿರಾಳ ಸ್ಥಿತಿ ಮುಟ್ಟಿದರೆ ಮಾತ್ರ ಮಾಯೆಯ ಪರದೆಯನ್ನು ಬೇಧಿಸಿ ಬಯಲನ್ನು ನಿಟ್ಟಿಸಲು ಸಾಧ್ಯ. ಅಂತಹ ಮನಸ್ಸು ಮಾತ್ರ ಸೃಷ್ಟಿಯ ನಿಜಸ್ವರೂಪವನ್ನು ಅಭೇದ ಭಾವದಿಂದ ಸಂಧಿಸಲ್ಲುದು. ತಾನೇ ಆ ಸೃಷ್ಟಿ ಚೇತನ ಎಂಬ ಅನುಭೂತಿ ಹೊಂದಬಲ್ಲುದು.

ನಮ್ಮ ಮನಸ್ಸಿನ ಧೋರಣೆಯನ್ನು ಅವಲಂಬಿಸಿ ನಾವು ಕಾಣುವ ಜಗದ ಸ್ವರೂಪ ಬದಲಾಗುತ್ತದೆ. ದೇಹ ಮತ್ತು ಮನಸ್ಸುಗಳಿಗೆ ಮಾಯೆಯನ್ನು ಅಂಟಿಸಿಕೊಳ್ಳದಂತೆ ದೂರದಲ್ಲಿ ಸಾಕ್ಷಿಪ್ರಜ್ಞೆಯಾಗಿ ನಿಂತು ಸೃಷ್ಟಿಯನ್ನು ನೋಡುವಂತಿದೆ ಈ ವಚನ. ಮಾಯೆಯ ಆವರಣಗಳನ್ನು ಕಳಚಿಕೊಂಡ ಮನಸ್ಸು ಮಾತ್ರ ಸೃಷ್ಟಿಯನ್ನು ಸಹಜವಾಗಿ ಪರಿಭಾವಿಸಬಲ್ಲುದು. ಆ ಅನಂತ ಸ್ವರೂಪವನ್ನು ಬಸವಣ್ಣನವರ ನಿರಾಳ ಮನಸ್ಸು ಅಪ್ಪಿ ನಿಂತಿದೆ.
ಹಾಗಾದರೆ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ತಾಕಲಾಡುವ ಮಾಯೆ ಬಸವಣ್ಣನವರನ್ನು ಕಾಡಲೇ ಇಲ್ಲವೇ? ಮಾಯೆಯನ್ನು ಅವರು ಸರಿಸಿ ನಡೆದದ್ದು ಹೇಗೆ? ಮನಸ್ಸಿಗೆ ಅಂಕುಶ ಹಾಕಿ ಮಾಯೆಯನ್ನು ಗೆಲ್ಲಬಹುದೇ? ಊಹುಂ, ದೇಹಕ್ಕೆ ಅಸಹಜವಾದ ಮನೋನಿಗ್ರಹವನ್ನು ಬಸವಣ್ಣನವರು ಒಪ್ಪುವುದೇ ಇಲ್ಲ. “ಇಂದ್ರಿಯ ನಿಗ್ರಹವ ಮಾಡಿದರೆ ಹೊಂದುವವು ದೋಷಂಗಳು, ಮುಂದೆ ಬಂದು ಕಾಡುವವು ಪಂಚೇಂದ್ರಿಯಗಳು…” ಎನ್ನುತ್ತಾರೆ. ಅಂತಹ ಒತ್ತಾಯದ ಹೇರಿಕೆಯಿಂದಾಗಿ ವ್ಯಕ್ತಿತ್ವ ಪಲ್ಲಟವಾಗುತ್ತದೆ. ಮುಂದೆ ಅದುಮಿಟ್ಟ ಕಾಮನೆಗಳು ಬೃಹದಾಕಾರ ತಾಳಿ ಮನಸ್ಸು ಮತ್ತಷ್ಟು ವಿಕಾರವಾಗಿ ಬದುಕು ಹಾದಿ ತಪ್ಪುತ್ತದೆಂದು ಎಚ್ಚರಿಸುತ್ತಾರೆ. ಉಪವಾಸ, ವ್ರತ, ಜಪ-ತಪ, ಉರುಳುಸೇವೆ, ತಪಸ್ಸು, ನೇಮಗಳಂತಹ ದೇಹದಂಡನೆಯ ಆಚರಣೆಗಳನ್ನು ನೆಚ್ಚಿಕೊಂಡು, ಇಂದ್ರಿಯ ನಿಗ್ರಹ ಮಾಡಿದರೆ ದೇವರು ಒಲಿಯಲಾರ. “ತನ್ನಾಸೆ ರತಿ ಸುಖವ, ತಾನುಂಬ ಊಟವ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೇ?” ಎಂಬ ಬಸವಣ್ಣನವರ ಪ್ರಶ್ನೆಯಲ್ಲಿ ಅವರು ಬದುಕನ್ನು ಎಷ್ಟು ಸಹಜವಾಗಿ ಸ್ವೀಕರಿಸಿದ್ದರು ಎಂಬ ತಥ್ಯ ಅಡಕವಾಗಿದೆ. ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ (ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ… ) ಒಂದೊಂದು ಭಾವದಲ್ಲಿ ಜೀವನದ ಪ್ರತಿ ಹಂತದಲ್ಲಿಯೂ ಪ್ರಾಧಾನ್ಯತೆ ಪಡೆಯುವ ಹೆಣ್ಣಿನ ಸೆಳೆತವನ್ನು ತಳ್ಳಿ ಹಾಕಲಾಗದು ಎಂಬ ಸತ್ಯವನ್ನವರು ಬಲ್ಲರು. ಜೀವನೋತ್ಸಾಹಕ್ಕೆ ಕಾರಣವಾಗುವ ಈ ಒಂದೊಂದು ಆಕರ್ಷಣೆಗಳನ್ನೂ ಬದುಕಿಗೆ ಮಾರಕವಾಗದಂತೆ ನಿಭಾಯಿಸುವ ಕೌಶಲ್ಯ ಅವರಲ್ಲಿತ್ತು.

ಮನಸ್ಸಿಗೆ ಉಮೇದು ಬೇಕು. ಯಾವ ಕಾಮನೆಗಳೂ ಇಲ್ಲದೆ ಬದುಕುವುದು ಸಾಧ್ಯವೇ ಇಲ್ಲ. ಭಾವನೆಗಳನ್ನು ಶುಷ್ಕಗೊಳಿಸದಂತೆ ಉತ್ಸಾಹ, ಉಲ್ಲಾಸದಿಂದ ಬದುಕಬೇಕು. ಆದರೆ ದೈಹಿಕ ಪ್ರವೃತ್ತಿಗಳ ತೃಪ್ತಿಯ ಜೊತೆ ಮತ್ತೊಂದು ಮುಖ್ಯವಾದ ಪಾಠ ಇಲ್ಲಿದೆ. ಅದು ಸಂಯಮ. ವಿಷಯಲಂಪಟತನಕ್ಕೆ ಮನಸ್ಸು ಎಳಸದಂತೆ ಸಂಯಮದ ಕಟ್ಟಳೆ ಬೇಕು. ಶರಣರು ಏಕಪತ್ನೀ ವ್ರತಸ್ಥರನ್ನೇ ಬ್ರಹ್ಮಚಾರಿಗಳೆಂದು ಕರೆದಿದ್ದಾರೆ ಎಂಬುದನ್ನು ಗಮನಿಸಬೇಕು. “ನಿಮ್ಮ ಮುಟ್ಟಿ ಪರಸತಿ, ಪರಧನಕ್ಕೆಳೆಸಿದರೆ ನಿಮ್ಮ ಚರಣಕ್ಕೆ ದೂರ” ಎನ್ನುವ ಮೂಲಕ ಮಾಯೆಯ ಛಾಯೆಗಳು ಬದುಕನ್ನು ಮುಟ್ಟದ ಹಾಗೆ ಮನಸ್ಸಿಗೆ ತರಬೇತಿ ನೀಡುತ್ತಾರೆ ಬಸವಣ್ಣ.

ಕಾಮನೆಗಳಿಗೆ, ವಿಶೇಷವಾಗಿ ಹಣಕ್ಕೆ ಅಮಲಿನ ಗುಣವಿದೆ. ಗಳಿಸಿದಷ್ಟು ಇನ್ನಷ್ಟು ಮತ್ತಷ್ಟು ಸಂಗ್ರಹಿಸುವ ಆಸೆಗೆ ಮನಸ್ಸು ಜೋತುಬೀಳುತ್ತದೆ. ಚೆನ್ನಾಗಿ ದುಡಿಯಬೇಕು ಎನ್ನುವ ಬಸವಣ್ಣನವರು, ಹಾಗೆ ದುಡಿಯುವುದರಿಂದ ಸಿಗುವ ಹಣ ಶೇಖರಣೆಯಾಗಿ ಒಂದೆಡೆ ನಿಲ್ಲದಂತೆ ಸಮಾಜಮುಖಿಯಾಗಿ ಅದನ್ನು ಹರಿಸಲು ದಾಸೋಹದ ಚಾಲನೆ ಕೊಟ್ಟರು. ದಾನದ ಅಹಂ ಮಾಯೆಯಾಗಿ ಬೆನ್ನುಹತ್ತದಿರಲೆಂಬ ಎಚ್ಚರಿಕೆಯೂ ಅಲ್ಲಿದೆ. ‘ನಿಷ್ಕಾಮಕರ್ಮ’ ಎಂಬುದನ್ನು ಅವರು ಒಪ್ಪುವುದಿಲ್ಲ. ಬಯಕೆಗಳೇ ಇಲ್ಲದಿದ್ದರೆ ಕೆಲಸ ಮಾಡಲು ಪ್ರೇರಣೆಯೇ ಇಲ್ಲವಾಗುತ್ತದೆ. ಮನಸ್ಸು ಜಡವಾಗಿ, ಅಂಥ ಬಾಳು ನಿಸ್ಸತ್ವ ಎನಿಸುತ್ತದೆ. ಆದರೆ ನಮ್ಮ ಆಸೆ-ಆಕಾಂಕ್ಷೆಗಳಿಗೆ ಸಮಷ್ಟಿಯ ಸ್ಪರ್ಶ ಬೇಕು. ಬಸವಣ್ಣನವರು ಹೇಳುತ್ತಾರೆ: “ಹೊಲೆ ಹೊಲೆಯರ ಮನೆಯ ಹೊಕ್ಕು ಸಲ ಕೈಕೂಲಿ ಮಾಡಿಯಾದರೆಯೂ ನಿಮ್ಮ ನಿಲುವಿಂಗೆ ಕುದಿವೆನಲ್ಲದೆ ಎನ್ನೊಡಲವಸರಕ್ಕೆ ಕುದಿದೆನಾದರೆ ತಲೆದಂಡ ಕೂಡಲಸಂಗಮದೇವಾ.” ಎನ್ನೊಡಲ ಅವಸರಕ್ಕೆ, ಎನ್ನ ಮಡದಿ-ಮಕ್ಕಳಿಗೆ ಕುದಿಯದೇ ಇಡೀ ಜಗತ್ತು ತನ್ನದೆಂಬ ಉಮೇದಿನಿಂದ ಕಾಯಕ ಮಾಡುತ್ತೇನೆ, ಎಲ್ಲಿಯಾದರೂ ಸರಿ ಎನ್ನುವ ಕೆಚ್ಚಿನ ಹಿಂದಿನ ಆಶಯವನ್ನು ಗಮನಿಸಿ. ಜಗಕ್ಕಾಗಿ ದುಡಿಯುವ, ಜಗದ ಹಿತಕ್ಕಾಗಿ ಕುದಿಯುವ, ಜಗದ ಏಳ್ಗೆಗಾಗಿ ಹಗಲಿರುಳು ತುಡಿಯುವ ಈ ಭಾವವೇ “ಜಗವು ನಿನ್ನೊಳಗೆ ನೀನು ಎನ್ನೊಳಗೆ” ಎಂಬ ಮಾತುಗಳಲ್ಲಿ ಮಿಳಿತಗೊಂಡಿದೆ.

ಈ ವಚನದಲ್ಲಿ ಮತ್ತೊಂದು ಸೂಕ್ಷ್ಮವನ್ನು ಗುರುತಿಸಬಹುದು. ಜಗಕೆ ಬಲ್ಲಿದ ನೀನು… ಎನ್ನುವಲ್ಲಿ ಅದುವರೆಗೆ ಈ ಜಗದ ಕೇಂದ್ರಬಿಂದುವಾಗಿದ್ದುದು ‘ದೇವರು’. ಈ ಪರಿಕಲ್ಪನೆಯ ಸುತ್ತಲೇ ಮನುಷ್ಯನ ವಿಚಾರಗಳು, ತರ್ಕಗಳು ಗಿರಕಿ ಹೊಡೆಯುತ್ತಿದ್ದವು. ನಿನಗೆ ಬಲ್ಲಿದ ನಾನು… ಎನ್ನುವ ಮೂಲಕ ಬಸವಣ್ಣನವರು ಈ ಜಗದ ಕೇಂದ್ರಬಿಂದುವಾಗಿ ಮನುಷ್ಯನನ್ನು ಕಾಣುತ್ತಾರೆ. ದೇವರ ಜಾಗದಲ್ಲಿ ಮನುಷ್ಯನನ್ನು ಪ್ರತಿಷ್ಠಾಪಿಸುತ್ತಾರೆ. ಸಮಷ್ಟಿಯನ್ನು ಕಾಪಾಡುವ ಹೊಣೆಯನ್ನು ಅವನ ಹೆಗಲಿಗೇರಿಸುತ್ತಾರೆ. ಕರಿಯು ಕನ್ನಡಿಯಲಿ ಅಡಗಿದಂತೆ, ನೀ ಎನ್ನೊಳಡಗಿದೆ ಎಂದು ಹೇಳುವಲ್ಲಿ ಅಂಥ ಅಗಾಧ ಸಾಮರ್ಥ್ಯ ಮನುಷ್ಯನಲ್ಲಡಗಿದೆ ಎಂಬ ಆತ್ಮವಿಶ್ವಾಸ ತುಂಬುತ್ತಾರೆ.

ಮಾಯೆ ಎಂದರೆ ಬಂಧನವಲ್ಲ, ಭಾವತೀವ್ರತೆ. ಬದುಕಿನ ಸೆಳೆತಗಳನ್ನು ಪಾಶಗಳನ್ನಾಗಿಸಿಕೊಳ್ಳದೆ ಜೀವನೋತ್ಸಾಹದ ಬುಗ್ಗೆಯನ್ನಾಗಿ ಮಾಡಿಕೊಳ್ಳುವ ಕಲೆ ಹೇಗೆಂಬುದನ್ನು ಬಸವಣ್ಣನವರು ತೋರಿಸಿ ಕೊಟ್ಟಿದ್ದಾರೆ. ಒಡಲ ಇಚ್ಛೆಗೆ ಒರಗಿಕೊಂಡರೆ ಅದೇ ಬಂಧನ. ಅವುಗಳಿಗೆ ನ್ಯಾಯಸಮ್ಮತವಾಗಿ ಪ್ರತಿಕ್ರಿಯಿಸಿ ಮುನ್ನಡೆದರೆ ಅದು ಬಿಡುಗಡೆ. ಇದೇ ಶರಣರು ಅರಿತ ಗುಟ್ಟು. ಇದೇ ಬಸವಣ್ಣನವರು ಕಂಡುಕೊಂಡ ಮಾಯೆಯ ಸ್ಪರ್ಶವಿಲ್ಲದ ಜೀವನೋತ್ಸಾಹ.

Previous post ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
Next post ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ

Related Posts

ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
Share:
Articles

ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ

December 3, 2018 ಡಿ.ಪಿ. ಪ್ರಕಾಶ್
ಬೋಧನೆ ಮತ್ತು ಅದನ್ನು ಜಾರಿಗೆ ತರುವ ಕ್ರಿಯೆ ಇವೆರಡನ್ನೂ ನಡೆ- ನುಡಿಗಳ ಸಂಬಂಧದಲ್ಲಿ ಬೆಸೆದು ತಮ್ಮ ಜೀವನವನ್ನೇ ಮನುಕುಲೋದ್ಧಾರದ ಸಿದ್ಧಾಂತಗಳನ್ನಾಗಿ ಬದುಕಿ ತೋರಿಸಿದ ಭಾರತದ...
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
Share:
Articles

ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ

May 1, 2019 ಪದ್ಮಾಲಯ ನಾಗರಾಜ್
ಇಂದಿಗೂ ನಮ್ಮ ದೇಶದಲ್ಲಿ ಪ್ರಚಲಿತವಿರುವ ಸಾಮಾಜಿಕತೆ, ಆರ್ಥಿಕತೆ ಹಾಗೂ ರಾಜಕೀಯ ವಿದ್ಯಮಾನಗಳನ್ನು ಮತನಿಷ್ಠ (ಅಥವಾ ಧರ್ಮನಿಷ್ಠ) ಮೂಲಭೂತವಾದದ ಸಾಂಸ್ಕೃತಿಕ ಧೋರಣೆಗಳೇ...

Comments 1

  1. Prasanna Hosur
    Jul 20, 2020 Reply

    ನಿಮ್ಮ article ತುಂಬಾ ಅದ್ಭುತವಾಗಿ ಮೂಡಿಬಂದಿದೆ ತಮಗೆ ತುಂಬು ಹೃದಯದ ಶರಣು ಶರಣಾರ್ಥಿಗಳು💐💐💐

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಒಂದಷ್ಟು ಸರಳ ಸಲಹೆಗಳು…
ಒಂದಷ್ಟು ಸರಳ ಸಲಹೆಗಳು…
June 10, 2023
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
February 7, 2021
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
March 6, 2020
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
July 10, 2025
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
April 29, 2018
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
September 13, 2025
Copyright © 2025 Bayalu