Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಪರಿಪೂರ್ಣತೆಯೆಡೆಗೆ ಪಯಣ
Share:
Articles April 29, 2018 ಡಾ. ಜೆ ಎಸ್ ಪಾಟೀಲ

ಪರಿಪೂರ್ಣತೆಯೆಡೆಗೆ ಪಯಣ

ಮನುಷ್ಯ ಜೀವನದ ಪಯಣ ಅರ್ಥಪೂರ್ಣವಾಗಬೇಕಾದರೆ ತಾನು ಬಯಸಿದನ್ನು ಪಡೆಯಲು ನಡೆಸುವ ಸಂಘರ್ಷ ಯಶಸ್ವಿಯಾಗಬೇಕು. ಆ ಯಶಸ್ಸನ್ನು ಸಾಧಿಸುವ ಮಾರ್ಗ ಎಷ್ಟೇ ದುರ್ಗಮವಾದರೂ ಸಾಧಿಸಬೇಕೆಂಬ ಹಂಬಲ ಅದೆಲ್ಲವನ್ನು ನಗಣ್ಯಗೊಳಿಸಿಬಿಡುತ್ತದೆ. ದೈನಂದಿನ ಜೀವನದಲ್ಲಿ ಸಾಮಾನ್ಯ ಮನುಷ್ಯ ಅನೇಕ ಕನಸುಗಳನ್ನು ಹೆಣೆದಿರುತ್ತಾನೆ. ಅವುಗಳ ಈಡೇರಿಕೆಗಾಗಿ ಎಂಥ ಸವಾಲುಗಳನ್ನಾದರು ಎದುರಿಸಿ ಹೋರಾಡುತ್ತಾನೆ. ಈ ಹೋರಾಟಕ್ಕೆ ಯಶಸ್ಸು ದಕ್ಕಬಹುದುˌ ದಕ್ಕದೆ ಇರಬಹುದು. ಜೀವನವೆ ಹಾಗೆ. ಇರುವುದೆಲ್ಲವ ಕಡೆಗಣಿಸಿ ಇಲ್ಲದುದರೆಡೆಗೆ ಸೆಳೆದು ನಮ್ಮನ್ನು ಹೋರಾಟದ ಹಾದಿಗೆ ನೂಕಿ ಬಿಡುತ್ತದೆ. ಇದು ಸಾಮಾನ್ಯನ ಜೀವನದ ��ತೆಯಾದರೆ ಅಸಾಮಾನ್ಯರದು ಮತ್ತೊಂದು ಪರಿ. ಪ್ರಾಪಂಚಿಕ ಚಿಂತನೆಗಳಿಂದ ವಿಮುಖವಾಗಿ ಪಾರಮಾರ್ಥದ ಕಡೆಗೆ ಹಂಬಲಿಸುವ ಸಂತರು, ಶರಣರು ನಮ್ಮ ನೆಲದಲ್ಲಿ ಆಗಿಹೋಗಿದ್ದಾರೆ. ಭವದ ಭೋಗಗಳನ್ನೆಲ್ಲ ಬಿಟ್ಟುˌ ಜೀವನವನ್ನು ದೇವನ ನೆಲೆಯಾಗಿಸಿಕೊಂಡು ಅನುಭಾವ ಸಾಧನೆಗೈದವರಲ್ಲಿ ಹನ್ನೆರಡನೇ ಶತಮಾನದ ಶರಣೆ ಅಕ್ಕ ಮಹಾದೇವಿ ಅಗ್ರಗಣ್ಯೆ. ಸಾಂಸಾರಿಕ ಜೀವನವು ನಶ್ವರವೆಂದು ಪಾರಮಾರ್ಥದ ಬೆನ್ನು ಹತ್ತಿದ ಅಕ್ಕ ದೇವನನ್ನು ಸಾಕ್ಷಾತ್ಕರಿಸಿಕೊಳ್ಳಲು ಅನೇಕ ಕಠಿಣ ಸವಾಲುಗಳನ್ನು ಎದುರಿಸಿದ ವೈರಾಗ್ಯನಿಧಿ. ಬಾಲ್ಯದಿಂದಲೆ ಇಹದ ವ್ಯವಹಾರಗಳಲ್ಲಿ ನಿರಾಸಕ್ತಿ ತಾಳುತ್ತ ಸಾಗುವ ಅಕ್ಕನ ನಿಲುವು ಆಧ್ಯಾತ್ಮ ಸಾಧನೆಯ ಒಂದು ಅಸಾಮಾನ್ಯ ಪಯಣ.

ಶಿವಮೊಗ್ಗೆ ಜಿಲ್ಲೆಯ ಉಡತಡಿ ಎಂಬ ಗ್ರಾಮದ ಸಂಪ್ರದಾಯಸ್ಥ ಮನೆತನದಲ್ಲಿ ಹುಟ್ಟಿದ ಅಕ್ಕ ಬಾಲ್ಯದಿಂದಲೂ ತಾನೇ ಬೇರೆ ಬಗೆಯವಳೆಂದು ತೋರುವ ನಡತೆಯನ್ನು ಹೊಂದಿರುತ್ತಾಳೆ. ಭಗವಂತನ ಬಗೆಗೆ ಆಕೆಗಿದ್ದ ಆಸಕ್ತಿˌ ಕುತೂಹಲಗಳು ನಂತರದಲ್ಲಿ ಹಂಬಲ ಮತ್ತು ಭಕ್ತಿಯಾಗಿ ಪರಿವರ್ತನೆ ಹೊಂದುತ್ತವೆ. ಸದಾ ದೇವರ ಧ್ಯಾನ ಮತ್ತು ಚಿಂತನೆಗಳಿಂದ ಆಕೆಯ ವ್ಯಕ್ತಿತ್ವ ಪ್ರಕೃತಿ ಸಹಜ ಗುಣಗಳನ್ನು ಕಳೆದುಕೊಳ್ಳುತ್ತ ವಿಶಿಷ್ಟ ವೈರಾಗ್ಯ ಮತ್ತು ಭಕ್ತಿಗಳಿಂದ ರೂಪುಗೊಳ್ಳುತ್ತ ಸಾಗುತ್ತದೆ. ಇದನ್ನೆಲ್ಲ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ ಹೆಣ್ಣು ಮಗುವೊಂದರ ಸಹಜ ನಡವಳಿಕೆ ಎಂದೇ ಆಕೆಯ ಪಾಲಕರು ಭಾವಿಸಿರುತ್ತಾರೆ. ತರುಣಿಯಾಗಿ ಬೆಳೆದು ನಿಂತ ಮಗಳ ಮದುವೆಯ ಪ್ರಸ್ತಾಪದ ತನಕವೂ ತಾಯಿ-ತಂದೆಗೆ ಆಕೆಯಲ್ಲಿ ಹೆಪ್ಪುಗಟ್ಟುತ್ತಿದ್ದ ವೈರಾಗ್ಯದ ಬಗ್ಗೆ ಗೊತ್ತಾಗುವುದೇ ಇಲ್ಲ. ತನ್ನ ಜೀವನದ ಮುಖ್ಯ ಗುರಿ ದೇವನ ಸಾಕ್ಷಾತ್ಕಾರವೆಂದು ನಂಬಿದ ಅಕ್ಕ, ಆ ದಿಕ್ಕಿನಲ್ಲಿ ದೂರ ಕ್ರಮಿಸಿರುತ್ತಾಳೆ. ಮದುವೆಯ ಪ್ರಸ್ತಾಪವಾದ ನಂತರದ ಬೆಳವಣಿಗೆಗಳು ಅಕ್ಕನನ್ನು ಪ್ರಖರ ವೈರಾಗ್ಯದ ಕಡೆಗೆ ಸೆಳೆದು ಬಿಡುತ್ತವೆ. ತನ್ನ ಜೀವನದ ತಲ್ಲಣˌ ಹೋರಾಟˌ ಹಂಬಲˌ ತುಡಿತಗಳನ್ನೆಲ್ಲ ಅಕ್ಕ ತನ್ನ ಅನನ್ಯ ವಚನˌ ಕವನ ಮತ್ತು ತ್ರಿವಿಧಿ ಎಂಬ ಕಾವ್ಯ ಪ್ರಕಾರಗಳ ಮೂಲಕ ಹಿಡಿದಿಟ್ಟಿದ್ದು, ಕನ್ನಡ ಸಾಹಿತ್ಯದ ದೃಷ್ಟಿಯಿಂದ ಆಕೆಯ ಬರಹ ಅಪರೂಪದ ಭಾವಗಳ ಗುಚ್ಛವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಮ್ಮ ನಿಮ್ಮೆಲ್ಲರಂತೆ ಮಹಾದೇವಿಯಕ್ಕ ಕೂಡ ಒತ್ತಾಯದ ಮದುವೆಯ ಸಂದರ್ಭವನ್ನು ಎದುರಿಸಬೇಕಾಗುತ್ತದೆ. ದೇವರನ್ನೇ ಗಂಡˌ ಗುರುವೆಂದು ನಂಬಿದ್ದ ಅಕ್ಕನ ಮನಸ್ಸು ಈ ಲೋಕದ ಗಂಡನನ್ನು ಸ್ವೀಕರಿಸಲು ನಿರಾಕರಿಸುತ್ತದೆ. ಭವದ ಗಂಡನನ್ನು ತಿರಸ್ಕರಿಸಿದ ಆಕೆ ತನ್ನ ಆರಾಧ್ಯ ದೇವನನ್ನೇ ಗುರು ಹಾಗೂ ಗಂಡನೆಂದು ಭಾವಿಸಿ ಹುಡುಕಲಾರಂಭಿಸುತ್ತಾಳೆ. ಭವದ ಗಂಡನನ್ನು ತಿರಸ್ಕರಿಸಿˌ ಕ್ಷಣಿಕವಾದ ಭವಬಂಧನವನ್ನು ಬಗೆದು ಬಂದ ಬಗೆಯನ್ನು ಹೀಗೆ ವಿವರಿಸುತ್ತಾಳೆ-

ಸಂಸಾರ ಸಂಗದಲ್ಲಿರ್ದೆ ನೋಡಾ ನಾನುˌ
ಸಂಸಾರ ನಿಸ್ಸಾರವೆಂದು ತೋರಿದನೆನಗೆ ಶ್ರೀಗುರುˌ ಅಂಗವಿಕಾರದ ಸಂಗವ ನಿಲಿಸಿˌ
ಲಿಂಗವನಂಗದ ಮೇಲೆ ಸ್ಥಾಪ್ಯವ ಮಾಡಿದನೆನ್ನ ಗುರುˌ ಹಿಂದಣ ಜನ್ಮವ ತೊಡೆದುˌ ಮುಂದಣ ಪಥವ ತೋರಿದನೆನ್ನ ತಂದೆˌ ಚೆನ್ನಮಲ್ಲಿಕಾರ್ಜುನನ ನಿಜವ ತೋರಿದೆನೆನ್ನ ಗುರು.

ಸಂಸಾರವೆಂಬುದು ನಿಸ್ಸಾರವೆಂದು ತಿಳಿಸಿˌ ಭೌತಿಕ ಗಂಡನೆಂಬ ಅಂಗವಿಕಾರದ ಸಂಗವನ್ನು ಕಳೆದುˌ ಅಂಗದ ಮೇಲೆ ಲಿಂಗವನ್ನು ನೆಲೆ ನಿಲ್ಲಿಸಿಕೊಂಡು ಕಾಯವನ್ನು ದೇವನ ನೆಲೆಯಾಗಿಸಿಕೊಂಡು ಆಧ್ಯಾತ್ಮದ ಮಾರ್ಗವನ್ನುˌದೇವನನ್ನು ಸಾಕ್ಷಾತ್ಕರಿಸಿಕೊಳ್ಳುವ ಅನುಭಾವವನ್ನು ತೋರಿದ ಗುರುವನ್ನು ಹೃದಯಪೂರ್ವಕ ನೆನೆಯುತ್ತಾಳೆ ಮಹಾದೇವಿ ಅಕ್ಕ. ಕ್ಷಣಿಕವಾದ ಸಂಸಾರ ಸುಖವನ್ನು ದಿಕ್ಕರಿಸುವ ಅಕ್ಕನ ವೈಯಕ್ತಿಕ ಅನುಭವವು ಲೋಕಾನುಭವದ ಸ್ವರೂಪ ಪಡೆದುಕೊಂಡು ಆಧ್ಯಾತ್ಮದ ಉತ್ಕಟ ಹಂಬಲವನ್ನು ವ್ಯಕ್ತಪಡಿಸುವ ಪರಿ ಶರಣ ಸಾಹಿತ್ಯದ ಮಹೋನ್ನತ ಪ್ರಸಂಗವೆಂದೇ ಬಿಂಬಿತವಾಗಿದೆ.

ಚನ್ನಮಲ್ಲಿಕಾರ್ಜುನನನ್ನು ಗಂಡನೆಂದು ಪರಿಭಾವಿಸಿದ ಅಕ್ಕ ತನ್ನ ಭಾವೋದ್ವೇಗˌ ತಲ್ಲಣˌ ನಿರೀಕ್ಷೆˌ ಹುಡುಕಾಟಗಳನ್ನು ವಚನದಲ್ಲಿ ಭಾವದೀಪ್ತಿಯಂತೆ ಹಿಡಿದಿಟ್ಟಿದ್ದಾಳೆ. ಸರ್ವಾಂತರ್ಯಾಮಿಯಾದ ದೇವನನ್ನು ಹುಡುಕುತ್ತ ಹೀಗೆ ಪ್ರಶ್ನಿಸುತ್ತಾಳೆ-

ವನವೆಲ್ಲ ನೀವೆˌ
ವನದೊಳಗಣ ದೇವತರುವೆಲ್ಲ ನೀವೆˌ
ತರುವಿನೊಳಗಾಡುವ ಖಗಮ್ರಗವೆಲ್ಲ ನೀವೆˌ
ಚನ್ನಮಲ್ಲಿಕಾರ್ಜುನˌಸರ್ವಭರಿತನಾಗಿ ಎನಗೇಕೆ ಮುಖದೋರೆ ?

ಕಾಡುಮೇಡುˌ ತರುಲತೆಗಳುˌ ಅಲ್ಲಿರುವ ಖಗಮೃಗಗಳೆಲ್ಲ ನೀನೇ ಆಗಿದ್ದುˌಎಲ್ಲದರಲ್ಲೂ ನೀನೆ ಇರುವೆಯಾದರೂ ನನಗೇಕೆ ಕಾಣುತ್ತಿಲ್ಲ ಎಂದು ದೇವನಿಗಾಗಿ ಅನವರತ ಹಂಬಲಿಸುವ ಅಕ್ಕ ಅದಕ್ಕಾಗಿ ಅರಸುವ ಪರಿ ಅನನ್ಯ. ಮೀರಾಬಾಯಿ ಕೃಷ್ಣನಿಗಾಗಿ ಹಂಬಲಿಸುವ ಕತೆ ಅಪೂರ್ವ ಪ್ರೇಮವನ್ನು ಪ್ರತಿನಿಧಿಸಿದರೆ, ಚೆನ್ನಮಲ್ಲಿಕಾರ್ಜುನನಿಗಾಗಿ ಹಂಬಲಿಸುವ ಅಕ್ಕನ ಪರಿ ಒಂದು ಅಪೂರ್ವ ಭಕ್ತಿಯ ಉತ್ಕಟತೆಯನ್ನು ತೋರಿಸುತ್ತದೆ. ದೇವನ ಹುಡುಕಾಟದ ಅಕ್ಕನ ವಚನಗಳು ಭಾವೋದ್ವೇಗವನ್ನಷ್ಟೇ ಹೊಂದಿರದೆ, ಗೇಯತೆˌ ಭಕ್ತಿ ಮತ್ತು ಉತ್ತಮ ಭಾವಗೀತೆಯ ಗುಣವನ್ನೂ ಪಡೆದುಕೊಂಡಿವೆ.

ಸದಾ ದೇವರ ಸ್ಮರಣೆಯಲ್ಲಿರುತ್ತಿದ್ದ ಅಕ್ಕ ಭವದ ಆಶೆˌ ಆಕಾಂಕ್ಷೆˌ ಬೇಕು-ಬೇಡಗಳನ್ನು ಉಪೇಕ್ಷಿಸುತ್ತˌ ಆಧ್ಯಾತ್ಮದ ಆಳ ಚಿಂತನೆಯಲ್ಲಿ ತೊಡಗಿರುತ್ತಾಳೆ. ಸಂಸಾರದ ಹಂಗನ್ನು ಮೀರಿ ನಿಂತ ಆಕೆ ದೇವನ ಅನ್ವೇಷಣೆಗಾಗಿ ಜೀವನವನ್ನು ಮುಡಿಪಿಡಲು ನಿರ್ಧರಿಸುತ್ತಾಳೆ. ಕೌಶಿಕನೆಂಬ ನಶ್ವರ ಲೋಕದ ಗಂಡನ ಅಂಗವಿಕಾರದ ಸಂಗವ ತೊರೆದು ಅಗಮ್ಯˌಅಗೋಚರನಾದ ದೇವನೇ ತನ್ನ ಗಂಡನೆಂದು ನಂಬಿದ ಅಕ್ಕ ಲೋಕದ ಗಂಡ ಮತ್ತು ಸೃಷ್ಟಿಕರ್ತ ದೇವನ ನಡುವಿನ ಕಂದಕವನ್ನು ವಚನವೊಂದರಲ್ಲಿ ಹೀಗೆ ವಿವರಿಸುತ್ತಾಳೆ-

ಸಾವಿಲ್ಲದ ಕೇಡಿಲ್ಲದ ಚೆಲುವಂಗಾನೊಲಿದೆನವ್ವ
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಚೆಲುವಂಗಾನೊಲಿದೆನವ್ವˌ
ಭವವಿಲ್ಲದ ಭಯವಿಲ್ಲದ ಚೆಲುವಂಗಾನೊಲಿದೆˌ
ಕುಲಸೀಮೆಯಿಲ್ಲದ ನಿಸ್ಸೀಮ ಚೆಲುವಂಗಾನೊಲಿದೆˌ
ಇದು ಕಾರಣ ಚನ್ನಮಲ್ಲಿಕಾರ್ಜುನ ಚೆಲುವ ಗಂಡನೆನಗೆˌ
ಈ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು ತಾಯೆ.

ನಶ್ವರವಾದ ಸಂಸಾರದಲ್ಲಿ ಸಾವು-ಕೇಡುˌಎಡೆ-ಕಡೆˌ ಭವ-ಭಯˌಮತ್ತು ಕುಲ ಸೀಮೆಯುಳ್ಳ ಭೌತಿಕ ಗಂಡನಿಗಿಂತ ಇದಾವೂ ಇಲ್ಲದ ದೇವನೇ ತನ್ನ ಗಂಡನೆಂದು ಅಕ್ಕ ನಂಬಿ ನಡೆಯುವ ಪರಿ ಅದ್ಭುತವಾದ ಭಕ್ತಿಪರಂಪರೆಯನ್ನು ಅನಾವಣಗೊಳಿಸುತ್ತದೆ. ಸಂಸಾರದ ಜಂಜಡಗಳಿಂದ ಮುಕ್ತಿ ಬಯಸಿದ ಅಕ್ಕ ದೇವನನ್ನೆ ಗಂಡನೆಂದು ಆತನೊಡನೆ ತನ್ನ ವಚನಗಳ ಮೂಲಕ ಸಂವಾದಿಸುವ ರೀತಿ ಬಹುಶಃ ಕನ್ನಡ ಭಕ್ತಿ ಸಾಹಿತ್ಯ ಲೋಕದಲ್ಲಿನ ವಿನೂತನ ಬಗೆಯೆಂದೆ ಗುರುತಿಸಿಕೊಂಡಿದೆ. “ಮನವೆಂಬ ಸಖಿಯಿಂದ ಅನುಭಾವ ಕಲಿತೆನು ದೇವನೊಡನೆ ” ಎನ್ನುತ್ತ ತನ್ನ ಮನಸ್ಸಿನ ಮೂಲಕ ದೇವನೊಡನೆ ಅನುಸಂಧಾನಗೈದು ಅನುಭಾವವನ್ನು ಕಲಿತೆ ಎಂದು ಅಕ್ಕ ಹೇಳಿಕೊಳ್ಳುತ್ತಾಳೆ. ಮನಸ್ಸನ್ನು ದೇವನ ಒಲಿಸಿಕೊಳ್ಳುವ ಪರಿಣಾಮಕಾರಿ ಮಾಧ್ಯಮವಾಗಿ ಪರಿಭಾವಿಸಿದ್ದಾಳೆ.

ತನಗೆ ಚನ್ನಮಲ್ಲಿಕಾರ್ಜುನ ಹೊರತು ಪಡಿಸಿ ಮಿಕ್ಕ ಪುರುಷರೆಲ್ಲ ಸಹೋದರರು ಎಂದು ಭಾವಿಸುವ ರೀತಿ ಅಕ್ಕ ದೇವನ ಮೇಲಿಟ್ಟ ಅಪಾರ ಭಕ್ತಿ ಮತ್ತು ವಿಶ್ವಾಸವನ್ನು ಎತ್ತಿ ಹೇಳುತ್ತದೆ. ಈ ಕ್ಷಣಿಕವಾದ ವಿಷಯಾಸಕ್ತಿˌ ಕಾಮಾತುರತೆˌ ಕಾಯದ ಆಕರ್ಷಣೆಗಳಿಂದ ಮತಿಗೆಡುವ ಮನುಷ್ಯನ ಬುದ್ಧಿಯನ್ನು ಅಕ್ಕ ಬಹಳ ಅನುಕಂಪದಿಂದಲುˌ ತೀಕ್ಷ್ಣವಾದ ನುಡಿಗಳಿಂದಲೂ ತನ್ನ ಅನೇಕ ವಚನಗಳಲ್ಲಿ ಆಕ್ಷೇಪಿಸುತ್ತಾಳೆ. ತನುˌಮನಗಳೆರಡೂ ದೇವನಿಗೆ ಅರ್ಪಿತವೆಂದು, ದೈವತ್ವದಲ್ಲಿ ಸಂಪೂರ್ಣ ತನ್ನನ್ನು ಹುದುಗಿಸಿಕೊಳ್ಳುತ್ತಾಳೆ. ಎಂಥ ಕಠಿಣ ಸಂದರ್ಭದಲ್ಲಿಯೂ ತನ್ನ ದೇವನನ್ನಲ್ಲದೆ ಕ್ಷಣಿಕ ವಿಷಯಗಳ ಕಡೆಗೆ ಕಣ್ಣೆತ್ತಿಯೂ ನೋಡದ ಅಕ್ಕ ಚನ್ನಮಲ್ಲಿಕಾರ್ಜುನನ ಧ್ಯಾನದಲ್ಲಿಯೆ ಮುಳುಗಿರುತ್ತಾಳೆ. ತಾನು ನಂಬಿದˌ ಹುಡುಕುತ್ತಿರುವ ದೇವನಲ್ಲದೆ ಬೇರೇನನ್ನೂ ಬೇಡವೆನ್ನುವ ಅಕ್ಕನ ದೃಢಚಿತ್ತ ಹೀಗಿದೆ:

ಗಿರಿಯಲಲ್ಲದೆ ಹುಲು ಮೊರಡಿಯಲಾಡುವುದೆ ನವಿಲು?
ಕೊಳಕ್ಕಲ್ಲದೆ ಕಿರಿವಳ್ಳಕೆಳಸುವುದೆ ಹಂಸೆ?
ಮಾಮರ ತಳಿತಲ್ಲದೆ ಸ್ವರಗೈವುದೆ ಕೋಗಿಲೆ?
ಪರಿಮಳವಿಲ್ಲದ ಪುಷ್ಪಕ್ಕೆಳೆಸುವುದೆ ಭ್ರಮರ?
ಎನ್ನ ದೇವ ಚೆನ್ನಮಲ್ಲಿ ಕಾರ್ಜುನಂಗಲ್ಲದೆ ಅನ್ಯಕ್ಕೆಳಸುವುದೆ ಎನ್ನ ಮನ? ಪೇಳಿರೆ, ಕೆಳದಿಯರಿರಾ.*

ದೇವನನ್ನು ಕಾಣದ ವಿರಹ ವೇದನೆಯಿಂದ ಅಕ್ಕನ ಅಂತರಂಗದ ಭಾವಗಳು ಕೆರಳಿˌ ತೀವ್ರತರ ಭಕ್ತಿಯ ಆವೇಶದಲ್ಲಿ ಬಳಲುವುದುˌ ಆ ದೇವನನ್ನು ತನಗೆ ತೋರೆಂದು ಕಂಡಕಂಡವರಿಗೆ ಭಿನ್ನೈಸುವುದನ್ನು ನೋಡಿದಾಗ ಆಕೆಯ ಮನಸ್ಸಿನ ಉದ್ವೇಗ ಅರ್ಥವಾಗುವುದು. ಚನ್ನಮಲ್ಲಿಕಾರ್ಜುನನಲ್ಲದೆ ಅನ್ಯ ವಿಷಯಕ್ಕೆಳಸದ ಆಕೆಯ ಮಾನಸಿಕ ದೃಢತೆಯನ್ನು ಇಲ್ಲಿ ಗುರುತಿಸಬಹುದು.

ಮಹಾದೇವಿಯಕ್ಕ ಬಾಹ್ಯ ಸೌಂದರ್ಯವನ್ನೆಂದಿಗೂ ನೆಚ್ಚಿದವಳಲ್ಲ. ಅಂತರಂಗ ಸೌಂದರ್ಯದ ಮುಂದೆ ಬಹಿರಂಗದ ಸೌಂದರ್ಯ ಏನೂ ಅಲ್ಲ ಎಂದೇ ಆಕೆಯ ಅಭಿಮತ. ದೇಹದ ಹಂಗು ತೊರೆದು ನಡೆದ ಆಕೆಯ ಸ್ಥಿತಿಯನ್ನು ನೋಡಿ ಲೋಕದ ಸಾಮಾನ್ಯ ಜನರು ಕೆಣಕುವಾಗ, ತನ್ನ ಅರ್ಥಪೂರ್ಣ ವಚನಗಳ ಮೂಲಕ ಅಂಥ ಅವಗಣನೆಗಳಿಗೆ ಉತ್ತರಿಸುತ್ತ ಹೋಗುತ್ತಾಳೆ. ಮಿರಮಿರನೆ ಮಿಂಚುವ ದೇಹದ ಅಂದಚಂದ ಶಾಶ್ವತವಾದ ಆತ್ಮಸಂಯಮದ ಮುಂದೆ ಕ್ಷಣಿಕವಾದದ್ದೆನ್ನುವ ಅಭಿಮತ ಅಕ್ಕನದು.

ಕೈ ಸಿರಿಯ ದಂಡವ ಕೊಳಬಹುದಲ್ಲದೆˌ ಮೈಸಿರಿಯ
ದಂಡವನ್ನು ಕೊಳಲುಂಟೆ?
ಉಟ್ಟಂತಹ ಉಡುಗೆ ತೊಡುಗೆಯನ್ನೆಲ್ಲ ಸೆಳೆದುಕೊಳಬಹುದಲ್ಲದೆ ಮುಚ್ಚಿರ್ದ ಮುಸುಕಿರ್ದ ನಿರ್ವಾಣವ ಸೆಳೆದುಕೊಳಬಹುದೆ?
ಚೆನ್ನಮಲ್ಲಿಕಾರ್ಜುನದೇವರ
ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ
ಉಡುಗೆ ತೊಡುಗೆಯ
ಹಂಗೇಕೊ ಮರುಳೆ?

ಕೈಯಲ್ಲಿರುವ ಸಿರಿ ಸಂಪತ್ತನ್ನು ಕಿತ್ತಿಕೊಳ್ಳಬಹುದಲ್ಲದೆ ಮೈಯ ಸಿರಿಯನ್ನು ಯಾರೂ ಅಪಹರಿಸರು. ದೇವನ ಅರಿವೆಂಬ ಬೆಳಗಿನ ಬಟ್ಟೆಯುಟ್ಟು ಎಲ್ಲ ಸಂಕೋಚವ ಕಳಚಿದವಳಿಗೆ ಭೌತಿಕದ ಉಡುಪುಗಳ ಹಂಗೇಕೆ ಎಂದು ಅಕ್ಕ ಮಾರ್ಮಿಕವಾಗಿ ಪ್ರಶ್ನಿಸುವ ಪರಿ ಅಜ್ಞಾನದ ಶೃಂಗಾರ ಉಡುಪುಗಳಿಗಿಂತ ಸುಜ್ಞಾನದ ಅರಿವಿನ ಉಡುಪು ಶ್ರೇಷ್ಠ ಎನ್ನುವ ಸಂದೇಶ ನೀಡುತ್ತದೆ.

ಕೌಶಿಕನೊಡನೆ ಒತ್ತಾಯದ ಮದುವೆಗೊಳಪಟ್ಟ ಅಕ್ಕ ಆತನ ಕಾಮಾತುರ ನಡವಳಕೆಯಿಂದ ರೋಸಿˌಹೇಸಿ ತಾನುಟ್ಟ ಸೀರೆಯನ್ನು ಕಳೆದೆಸೆದಾಗ ಹೀಗೆ ನುಡಿಯುತ್ತಾಳೆ-

ಉಟ್ಟ ಸೀರೆಯ ಸೀಳಿˌ
ತೊಟ್ಟ ತೊಡುಗೆಯ ಮುರಿದುˌ
ಬಿಟ್ಟಿಹೆನು ನಾನು ಬಿಡುಮುಡಿಯ ಎಲೆ ದೇವಾ
ಕೊಟ್ಟಿಹೆನು ಎನ್ನ ತನುಮನವ…

ಏರು ಜೌವ್ವನೆಯಾದ ಅಕ್ಕ ನಿರ್ಭಾವದಿಂದˌ ವೈರಾಗ್ಯದಿಂದ ದಿಟ್ಟ ದಿಗಂಬರೆಯಾಗಿ ನಿಂತ ಪರಿಯನ್ನು ಕಂಡು ಕೌಶಿಕ ದಿಗ್ಮೂಢನಾಗುತ್ತಾನೆ. ಅಲ್ಲಿಂದ ಕಲ್ಯಾಣದ ಅನುಭವ ಮಂಟಪಕ್ಕೆ ಬಂದು ಅಲ್ಲಮರ ಕಠೋರ ಪರೀಕ್ಷೆಯನ್ನು ಶಾಂತಚಿತ್ತದಿಂದ ಎದುರಿಸಿ ಗೆದ್ದು ಬಸವಾದಿ ಶರಣರ ಗೌರವಾದರಗಳಿಗೆ ಪಾತ್ರಳಾಗುತ್ತಾಳೆ. ದೃಢಸಂಕಲ್ಪಿಯಾಗಿದ್ದ ಅಕ್ಕನ ಕುಂಡಲಿನಿ ಜಾಗ್ರತಾವಸ್ಥೆಯಿಂದ ಆಜ್ಞಾ ಚಕ್ರವನ್ನು ಮುಟ್ಟಿದ್ದ ಕಾರಣದಿಂದಲೇ ಏಕಾಂಗಿಯಾಗಿ ದಟ್ಟ ಕಾನನವನ್ನು ದಾಟಿ ಶರಣರಿರುವ ಕಲ್ಯಾಣ ನಗರವನ್ನು ಬಂದು ಸೇರುತ್ತಾಳೆ. ಅನವರತ ದೇವನ ಅನ್ವೇಷಣೆಯಲ್ಲಿ ಹಸಿವುˌತೃಷೆˌನಿದ್ರೆˌಮನಸಿಜನ ಕಾಮನೆಗಳನ್ನು ತೊರೆದು ಊರ್ಧ್ವಮುಖಿಯಾಗಿ ಉದಾತ್ತೀಕರಣದ ಪರಮೋಚ್ಛ ಶಿಖರ ತಲುಪಿˌಪರಮಾನಂದದ ಅನುಭಾವವನ್ನು ಅನುಭವಿಸುತ್ತಾಳೆ.
“ಚೆನ್ನಮಲ್ಲಿಕಾರ್ಜುನನ ಕೈವಿಡಿದು ಲಜ್ಜೆಗೆಟ್ಟೆನು ಆನು” ಎಂಬಲ್ಲಿಗೆ ಅಕ್ಕ ಭಕ್ತನು ದೇವನಾದ ಮಧುರ ಪಕ್ವ ಭಾವವನ್ನು ಮುಟ್ಟಿ ನಿಲ್ಲುತ್ತಾಳೆ. ಹಗಲಿರುಳು ಲಿಂಗಾಂಗಯೋಗ ಸಾಧಿಸಿ ಚೆನ್ನಮಲ್ಲಿಕಾರ್ಜುನನ ಸತಿಯಾಗಿ ನಿರ್ಗುಣ ದೇವನ ಒಲುಮೆಯ ಪಡೆದುˌ ತೂರ್ಯಾವಸ್ಥೆಯ ಅನುಭವವನ್ನುಂಡುˌಸಹಸ್ರಾರ ಚಕ್ರದಲ್ಲಿ ಕೋಟಿ ರವಿಶಶಿಯ ಚಿದ್ಬೆಳಗು ಕಂಡು ಆನಂದ ಪುಳಕಿತಳಾಗುತ್ತಾಳೆ. ಜೀವನ ಸಾರ್ಥಕತೆಯ ದಿವ್ಯಾನುಭವ ಹೊಂದುತ್ತಾಳೆ. ಕಲ್ಯಾಣದಲ್ಲಿ ಶರಣರ ಸಾಂಗತ್ಯ ಅಕ್ಕನಿಗೆ ಅದಮ್ಯ ಚೈತನ್ಯ ನೀಡುತ್ತದೆ.
ಅಯ್ಯಾˌ ನಿಮ್ಮ ಸಜ್ಜನ ಸದ್ಭಕ್ತರ ಕಂಡೆನಾಗಿ
ಎನ್ನ ಕಂಗಳ ಪಟಲ ಹರಿಯಿತ್ತುˌ
ಅಯ್ಯಾ ˌನಿಮ್ಮ ಸಜ್ಜನ ಸದ್ಭಕ್ತರ ಶ್ರೀಚರಣಕ್ಕೆರಗಿದೆನಾಗಿ
ಎನ್ನ ಹಣೆಯ ಲಿಖಿತ ತೊಡೆಯಿತ್ತಿಂದುˌ
ಚನ್ನಮಲ್ಲಿಕಾರ್ಜುನಯ್ಯˌ
ನಿಮ್ಮ ಶರಣ ಸಂಗನ ಬಸವಣ್ಣನ ಪಾದವ ಕಂಡು
ಮಿಗೆ ಮಿಗೆ ನಮೋ ನಮೋ ಎನುತಿರ್ದೆನಯ್ಯ.

ಕಲ್ಯಾಣದಲ್ಲಿನ ಶರಣರ ಸರ್ವಾಂಗೀಣ ಚಟುವಟಿಕೆಗಳು ಅಕ್ಕನ ಅರಿವನ್ನು ವಿಸ್ತರಿಸಿಕೊಳ್ಳಲು ಸಹಾಯವಾಗುತ್ತವೆ. ತಾನು ಕಲ್ಯಾಣಕ್ಕೆ ಬಂದದ್ದು ಸಾರ್ಥಕ ಭಾವವೆಂದೊಪ್ಪಿಕೊಂಡ ಅಕ್ಕ ಬಸವಣ್ಣನವರನ್ನೇ ತನ್ನ ಗುರುವೆಂದು ನಿರ್ಧರಿಸಿದ್ದು ಈ ಕೆಳಗಿನ ವಚನದಿಂದ ಸ್ಪಷ್ಟವಾಗುತ್ತದೆ….

ನಿಮ್ಮ ಅಂಗದಾಚಾರವ ಕಂಡು
ಎನಗೆ ಲಿಂಗ ಸಂಗವಾಯಿತ್ತಯ್ಯˌ
ಬಸವಣ್ಣˌನಿಮ್ಮ ಮನದ ಸುಜ್ಞಾನವ ಕಂಡು
ಎನಗೆ ಜಂಗಮ ಸಂಬಂಧವಾಯಿತಯ್ಯˌ
ಬಸವಣ್ಣˌನಿಮ್ಮ ಸದ್ಭಕ್ತರ ತಿಳಿದು
ಎನಗೆ ನಿಜವು ಸಾಧ್ಯವಾಯಿತಯ್ಯˌ
ಚೆನ್ನಮಲ್ಲಿಕಾರ್ಜುನಯ್ಯನ ಹೆಸರಿಟ್ಟ ಗುರು
ನೀವಾದ ಕಾರಣ ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತ್ತಿದ್ದೆನು ಕಾಣಾ ಸಂಗನಬಸವಣ್ಣ.

ಆರಂಭದಿಂಲೂ ಇಹದ ಐಭೋಗಗಳನ್ನು ನಿರಾಕರಿಸುತ್ತ ಪಾರಮಾರ್ಥದಲ್ಲಿ ಆಸಕ್ತಳಾಗಿದ್ದ ಅಕ್ಕ ಸಂಸಾರದ ಬಗ್ಗೆ ವೈರಾಗ್ಯ ತಾಳಿ ದೇವನನ್ನು ಭೌತಿಕವಾಗಿ ದರ್ಶಿಸಲು ಹಂಬಲಿಸುತ್ತಿರುತ್ತಾಳೆ. ಕಲ್ಯಾಣಕ್ಕೆ ಬಂದು ಶರಣರ ಸಾಂಗತ್ಯದಲ್ಲಿ ದೇವರ ಬಗೆಗಿನ ಅಕ್ಕನ ಗ್ರಹಿಕೆಯಲ್ಲಿ ಬದಲಾವಣೆ ಕಾಣುತ್ತದೆ. ಬಹಿರಂಗದಲ್ಲಿ ದೇವನ ದರ್ಶನದ ತುಡಿತವು ಅಸಾಧ್ಯವೆನ್ನುವ ಅರಿವು ಶರಣರ ಅನುಭಾವದ ನಿಲುವುಗಳಿಂದ ಗೊತ್ತಾಗುತ್ತದೆ. ಅಂತರಂಗದಲ್ಲಲ್ಲದೆ ದೇವರನ್ನು ಬಹಿರಂಗದಲ್ಲಿ ಹುಡುಕಬಾರದೆಂಬ ಬಸವಾದಿ ಶರಣರ ನಿಲುವು ಅಕ್ಕನ ಮೇಲೆ ತೀರ್ವ ಪರಿಣಾಮ ಬೀರಿ ಅವಳಲ್ಲಿ ಗುಣಾತ್ಮಕ ಪರಿವರ್ತನೆಗೆ ಎಡೆಮಾಡಿಕೊಡುತ್ತದೆ. ಆಗಿನಿಂದ ಅಕ್ಕ ಅಂತರ್ಮುಖಿಯಾಗುತ್ತ ಅಂತರಂಗದಲ್ಲಿ ಭಗವಂತನ ಸಾಕ್ಷಾತ್ಕಾರಕ್ಕಾಗಿ ಅನುಭಾವದ ಕಠಿಣ ಆಚರಣೆಗಳಲ್ಲಿ ತೊಡಗಿಕೊಳ್ಳುತ್ತಾಳೆ. ಶರಣರ ಸಾಂಗತ್ಯದಲ್ಲಿದ್ದ ಅಕ್ಕ ಪ್ರತಿದಿನ ಅನುಭವ ಮಂಟಪದ ಜ್ಞಾನಸಂವಾದದಲ್ಲಿ ಭಾಗವಹಿಸಿ ಪರಿಪಕ್ವತೆಯನ್ನು ಪಡೆಯುತ್ತಾಳೆ.
ದೇವನ ಅಸ್ತಿತ್ವದ ಬಗೆಗಿರುವ ಆಕೆಯ ಗ್ರಹಿಕೆ ಶರಣರ ಸಾಂಗತ್ಯದಿಂದ ಮತ್ತಷ್ಟು ವಿಶಾಲತೆ ಪಡೆದುಕೊಳ್ಳುತ್ತದೆ. ಇಂದ್ರಿಯಗಳನ್ನು ಗೆಲಿದುˌ ಮನೋಪ್ರಕೃತಿಯನಳಿದುˌ ಆಧ್ಯಾತ್ಮದ ಅನುಭಾವವನ್ನು ಸಂಪೂರ್ಣ ಸಾಧಿಸುವ ಅಕ್ಕನ ನಡೆ ಮಹೋನ್ನತವೆನ್ನಿಸುತ್ತದೆ. ತಾನೊಬ್ಬ ಸ್ತ್ರೀಯಾಗಿˌ ಸ್ತ್ರೀಸಂವೇದನೆಗಳ ಬಗ್ಗೆ ಕಾಳಜಿಯನ್ನು ಹೊಂದಿದವಳಾಗಿˌ ಸ್ತ್ರೀಯ ಘನತೆಯನ್ನು ಅನುಭವ ಮಂಟಪದಲ್ಲಿ ಎತ್ತರಕ್ಕೆ ಎತ್ತಿಹಿಡಿದ ಪರಿಯನ್ನು ಕಂಡು ಸಮಸ್ತ ಪುರುಷ ಶರಣ ಸಂಕುಲ ಅಕ್ಕನಿಗೆ ಕೈಮುಗಿದು ನಮಿಸುತ್ತದೆ. ಆಧ್ಯಾತ್ಮದ ಪರಿಪಕ್ವತೆಯನ್ನು ಪಡೆಯುತ್ತ ಕಲ್ಯಾಣದಲ್ಲಿ ಮುಂದಾಗುವ ವಿಪ್ಲವದ ಮುನ್ಸೂಚನೆಯನ್ನು ಗ್ರಹಿಸಿ ಶ್ರೀಶೈಲದ ಕಡೆಗೆ ಪಯಣ ಬೆಳೆಸುತ್ತಾಳೆ:
ಕರ್ಮವೆಂದ ಕದಳಿ ಎನಗೆ
ಕಾಯವೆಂಬ ಕದಳಿ ನಿಮಗೆˌ
ಮಾಟವೆಂಬ ಕದಳಿ ಬಸವಣ್ಣಂಗೆ
ಭಾವವೆಂಬ ಕದಳಿ ಚೆನ್ನಬಸವಣ್ಣಂಗೆˌ
ಬಂದ ಬಂದಾ ಭಾವ ಸಲೆ ಸಂದಿತ್ತುˌ
ಎನ್ನಂಗದ ಅವಸಾನ ಹೇಳಾˌಚನ್ನಮಲ್ಲಿಕಾರ್ಜುನ.

ಹೀಗೆ ತನ್ನಂಗವನ್ನು ಚಿದ್ಘನಲಿಂಗದಲ್ಲಿ ನೆಲೆಗೊಳಿಸಿ ನಿಷ್ಪತ್ತಿಯಾಗಿಸಿˌಸುಜ್ಞಾನ ಪ್ರಕಾಶದಲ್ಲಿ ಅವಗ್ರಹಿಸಿˌ ನಶ್ವರವಾದ ಜೀವನವನ್ನು ದೇವನ ಸಾಕ್ಷಾತ್ಕಾರದಿಂದ ಅರ್ಥಪೂರ್ಣಗೊಳಿಸಿಕೊಂಡು ಅಪೂರ್ಣತೆಯಿಂದ ಪರಿಪೂರ್ಣತೆಯೆಡೆಗೆ ಪಯಣಿಸುತ್ತಾಳೆ. ಕನ್ನಡದ ಮಣ್ಣಿನ ಹೆಮ್ಮೆಯ ಮಗಳು ಅನಂತನಲ್ಲಿ ಲೀನವಾಗುತ್ತ ಪರಿಪೂರ್ಣತೆಯ ಮಾರ್ಗವನ್ನು ಜಗತ್ತಿಗೆ ತೋರಿಸಿದ ಪ್ರತಿಮೆಯಾಗುತ್ತಾಳೆ. ಸ್ತ್ರೀಕುಲದ ಹೆಮ್ಮೆಯ ಸಂಕೇತವಾಗುತ್ತಾಳೆ.

Previous post ಗುರುವೇ ತೆತ್ತಿಗನಾದ
ಗುರುವೇ ತೆತ್ತಿಗನಾದ
Next post ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ

Related Posts

ಗಣಾಚಾರ
Share:
Articles

ಗಣಾಚಾರ

August 8, 2021 ಡಾ. ಪಂಚಾಕ್ಷರಿ ಹಳೇಬೀಡು
ಬಸವಾದಿ ಶರಣರು ಆಚರಿಸಿ, ಬೋಧಿಸಿದ ಆಚಾರಗಳಲ್ಲಿ ಒಂದಾದುದು ಗಣಾಚಾರವೆಂಬ ಆಚಾರ. ಆಚಾರವೆಂದರೆ ಸಮಾಜದೊಂದಿಗೆ ನಾವು ನಡೆದುಕೊಳ್ಳುವ ರೀತಿ ನೀತಿ. ಗಣ ಎಂದರೆ ಸಮೂಹ ಅಥವಾ ಸಮಾಜ...
ಶರಣ- ಎಂದರೆ…
Share:
Articles

ಶರಣ- ಎಂದರೆ…

March 6, 2020 ಡಾ. ಪಂಚಾಕ್ಷರಿ ಹಳೇಬೀಡು
“ಶರಣ” ಎಂಬ ಶಬ್ದವು ಬಹಳ ಪ್ರಾಚೀನವಾದುದು. ಬೌದ್ಧರು “ಬುದ್ಧಂ ಶರಣಂ ಗಚ್ಛಾಮಿ”, “ದಮ್ಮಂ ಶರಣಂ ಗಚ್ಛಾಮಿ” ಮತ್ತು “ಸಂಘಂ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
January 4, 2020
ನಿನ್ನೆ-ಇಂದು
ನಿನ್ನೆ-ಇಂದು
May 10, 2022
ಹಳದಿ ಹೂವಿನ ಸುತ್ತಾ…
ಹಳದಿ ಹೂವಿನ ಸುತ್ತಾ…
November 9, 2021
ಸನಾತನ ಧರ್ಮ
ಸನಾತನ ಧರ್ಮ
October 10, 2023
ಧರ್ಮದ ನೆಲೆಯಲ್ಲಿ ಬದುಕು
ಧರ್ಮದ ನೆಲೆಯಲ್ಲಿ ಬದುಕು
September 5, 2019
ತುಮ್ಹಾರೆ ಸಿವಾ ಔರ್ ಕೋಯಿ ನಹಿ…
ತುಮ್ಹಾರೆ ಸಿವಾ ಔರ್ ಕೋಯಿ ನಹಿ…
July 10, 2023
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ಹುಲಿ ಸವಾರಿ…
ಹುಲಿ ಸವಾರಿ…
June 10, 2023
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
February 11, 2022
ಲಿಂಗಾಯತ ಮಠಗಳು ಮತ್ತು ಬಸವತತ್ವ
ಲಿಂಗಾಯತ ಮಠಗಳು ಮತ್ತು ಬಸವತತ್ವ
July 21, 2024
Copyright © 2025 Bayalu