
ಆಗು ಕನ್ನಡಿಯಂತೆ…
ಗ್ರಹಿಸು
ಸಂಗ್ರಹಿಸಬೇಡ
ಏನನ್ನೂ…
ಕಂಡದ್ದು ಕೇಳಿದ್ದು
ಮೂಸಿದ್ದು ಮುಟ್ಟಿದ್ದು
ಅನುಭವಿಸಿದ್ದು
ಓದಿದ್ದು ಕೂಡ…
ತೂರಿಹೋಗಲಿ
ಅವಿತ
ವಾಸನೆಗಳೆಲ್ಲಾ
ಮುಗಿಬಿದ್ದು
ಬರುವ
ಯೋಚನೆಗಳೆಲ್ಲಾ
ಹೊಂಚು
ಹಾಕುವ
ಸಂಚಯಗಳೆಲ್ಲಾ…
ಸಂಕಲ್ಪ
ವಿಕಲ್ಪಗಳ
ತೊಳಲಾಟಗಳೆಲ್ಲಾ…
ಮಾತು
ಬಲಿಯದ ಮುನ್ನ
ಮೌನ ತಾಳು
ಮೌನ
ಕರಗುವ ಮುನ್ನ
ಖಾಲಿಯಾಗು…
ಸಹನಳಾಗು
ಭೂಮಿಯಂತೆ
ಸ್ವತಂತ್ರವಾಗಿರು
ಗಾಳಿಯಂತೆ
ಹರಿಯುತಿರು
ನೀರಿನಂತೆ
ಶುದ್ಧವಾಗಿರು
ಬೆಂಕಿಯಂತೆ
ಮುಕ್ತವಾಗಿರು
ಆಗಸದಂತೆ…
ಗುರು-
ಎಲ್ಲ ಹೇಳಿಯೂ
ಹೇಳದ ಗುಟ್ಟು…
ತೋರುವ ಕನ್ನಡಿ
ಕೂಡಿಡದು ಏನನೂ…
ಕನ್ನಡಿಯಾದರಲ್ಲವೆ
ಮನವೆಂಬುದು
ಬೇರಲ್ಲಾ
ಮಹಾದೇವನ ಅರುಹು.